ಅದು ಇದು ಮಾತಾಡುತ್ತ ತನ್ನ ಮಗ ಫಿಲಿಪ್ ಕೂಡ ತುಂಬಾ ಚೆನ್ನಾಗಿ ಸ್ನೂಕರ್ ಆಡುತ್ತಾನೆ ಇಲ್ಲಿದೆ ನೋಡಿ ಅಂತ ಒಂದು ವೀಡಿಯೊ ತೋರಿಸಿದ. ಅದರಲ್ಲಿ ಅವನ ಮಗ ಸ್ನೂಕರ್ ಹೊಡೆತಗಳನ್ನು ತುಂಬಾ ಚೆನ್ನಾಗಿಯೇ ಹೊಡೆಯುತ್ತಿದ್ದುದು ಗಮನಿಸಿದೆ. ಅದರ ಜೊತೆಗೆ ಇನ್ನೊಂದು ವಿಚಿತ್ರವನ್ನೂ ಆಲಿಸಿದೆ. ಆ ವೀಡಿಯೊದಲ್ಲಿ ಅವನ ಮಗ ನಿಚ್ಚಳವಾಗಿ ಮಾತಾಡುತ್ತಿದ್ದ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನಾಲ್ಕನೆಯ ಬರಹ

ಅಮೆರಿಕೆಯಲ್ಲಿ ಬೆಳೆಯುವ ಭಾರತೀಯ ಮಕ್ಕಳಿಗೆ ABCD ಅನ್ನುತ್ತಾರೆ. ಹಾಗಂದರೆ “American But Confused Desi” ಅಂತ! ಅಲ್ಲಿಯ ಸಂಸ್ಕೃತಿಗೆ ಪೂರ್ತಿಯಾಗಿ ಹೊಂದಿಕೊಳ್ಳಲು ಭಾರತೀಯ ಅಪ್ಪ ಅಮ್ಮ ಬಿಡುವುದಿಲ್ಲ. ಅದರ ಜೊತೆಗೆ ಕ್ರಮೇಣ ಭಾರತೀಯ ಸಂಸ್ಕೃತಿಯ ಪರಿಚಯ ಇಲ್ಲದಂತೆ ಅವು ಜೀವನದಲ್ಲಿ confused ಆಗಿ ಇರುತ್ತವೆ ಎಂಬುದು ಅದರ ಗೂಢಾರ್ಥ. ಇದು ಅಲ್ಲೇ ಹುಟ್ಟಿ ಬೆಳೆದ ಮಕ್ಕಳಿಗೆ ಹೆಚ್ಚು ಅನ್ವಯ ಆಗುತ್ತಾದರೂ, ಬಹಳಷ್ಟು ವರ್ಷಗಳು ಅಲ್ಲಿಯೇ ಬೆಳೆದ ಮಕ್ಕಳಿಗೂ ಆ ಸ್ಥಿತಿ ಉಂಟಾಗಬಹುದು. ಹಾಗೆ ಹೇಳುತ್ತಾರಾದರೂ ಮಕ್ಕಳು ಹೊಸ ಪರಿಸ್ಥಿತಿಗಳಿಗೆ ಬೇಗನೆ ಹೊಂದಿಕೊಳ್ಳುತ್ತಾರೆ. ದೊಡ್ಡವರೆ ಮಕ್ಕಳಿಗಿಂತ ಹೆಚ್ಚು confused ಆಗಿರುತ್ತಾರೆ!

ನನ್ನ ಮಗಳು ಅಲ್ಲಿನ ಶಾಲೆಯ ಮಕ್ಕಳ ಜೊತೆಗೆ ಬೇಗನೆ ಹೊಂದಿಕೊಂಡುಬಿಟ್ಟಳು. ಅವಳ ಶಾಲೆಯಲ್ಲಿ ಅಮೆರಿಕೆಯ ಸ್ಥಳೀಯರ ಮಕ್ಕಳು ಬಹಳ ಸಂಖ್ಯೆಯಲ್ಲಿ ಇದ್ದರು. ಜೊತೆಗೆ ಕೆಲವು ಭಾರತೀಯರ ಮಕ್ಕಳು ಕೂಡ ಇದ್ದರು. ಅಲ್ಲಿನ ಶಾಲೆ ಅವಳಿಗೆ ಇಷ್ಟವಾಗಲು ಬಹು ದೊಡ್ಡ ಕಾರಣ ಅಲ್ಲಿ uniform ಇರಲಿಲ್ಲ ಎಂಬುದು. ದಿನಾಲೂ ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಹೋಗಬಹುದು ಅಂತ ಅವಳಿಗೆ ಖುಷಿ. ಅವಳ ಟೀಚರ್ ಹೆಸರು ಗ್ರಾಡೋವಿಲ್ ಅಂತ ಇತ್ತು. ಅವರು ತುಂಬಾ ಒಳ್ಳೆಯವರಾಗಿದ್ದರು. ಅವರು ಅವಳಿಗೆ ಇಂಡಿಯನ್ ಪ್ರಿನ್ಸೆಸ್ ಅಂತಲೇ ಕರೆಯುತ್ತಿದ್ದರು. ಆದರೆ ಇವಳ principal ಮಾತ್ರ ಗೋಮುಖ ವ್ಯಾಘ್ರ ಆಗಿದ್ದಳು. ಮುಂದೆ ನಗುನಗುತ್ತಲೇ ಮಾತಾಡುತ್ತಾ ಹಿಂದಿನಿಂದ ಭಾರತೀಯ ಮಕ್ಕಳ ಜೊತೆಗೆ ವರ್ಣ ಬೇಧ / ತಾರತಮ್ಯ (color discrimination) ಮಾಡುತ್ತಿದ್ದಳು. ಸಮಾಜ ಅಂದಮೇಲೆ ಒಳ್ಳೆಯರು ಕೆಟ್ಟವರು ಎಲ್ಲರೂ ಇರುತ್ತಾರೆ ಅಲ್ಲವೇ?

ಶಾಲೆಯಲ್ಲಿ ದಿನಾಲೂ ಬೆಳಿಗ್ಗೆ ಉಪಹಾರ ಕೊಡುತ್ತಿದ್ದರು. ಅವು ಸ್ಯಾಂಡ್‌ವಿಚ್‌, bread, milk shake ತರಹದ ಪದಾರ್ಥಗಳು. ಅಲ್ಲೇನು ಇಡ್ಲಿ, ದೋಸೆ ನಿರೀಕ್ಷಿಸಲು ಸಾಧ್ಯವೇ? ಮಾಂಸಾಹಾರ ಕೊಟ್ಟುಬಿಟ್ಟರೆ ಏನು ಮಾಡೋದು ಅಂತ, ಶಾಲೆಯಲ್ಲಿ ಏನೇ ಕೊಟ್ಟರು ತಿನ್ನಬೇಡ ಅಂತ ಅವಳಿಗೆ ಹೇಳಿದ್ದೆವು. ಮನೆಯಿಂದಲೇ ಉಪಹಾರವನ್ನು ಕೊಟ್ಟುಕಳಿಸುತ್ತಿದ್ದೆವು.

ಒಮ್ಮೆ ಶಾಲೆಯಿಂದ ಕರೆ ಬಂತು. ಫೋನ್‌ನಲ್ಲಿ ನನ್ನ ಮಗಳು ಮಾತಾಡುತ್ತಿದ್ದಳು. ಏನಾಯ್ತು ಅಂತ ಕೇಳಿದಾಗ, ಶಾಲೆಯಲ್ಲಿ ಅವತ್ತು donut ಕೊಡುತ್ತಿದ್ದಾರೆ, ತಿನ್ನಬಹುದೆ ಅಂತ ಕೇಳಿದಳು. ಅದೂ ಅತಿ ಸಿಹಿಯಾದ ಒಂದು ಶಾಖಾಹಾರಿ ಬನ್. ಪರವಾಗಿಲ್ಲ ತಿನ್ನು ಅಂತ ಹೇಳಿದ ಮೇಲೆಯೇ ತಿಂದಳು. ಅಲ್ಲಿ ನನ್ನ ಭಾರತೀಯ ಸಹೋದ್ಯೋಗಿ ಒಬ್ಬನ ಮಗನೂ ಕೂಡ ಇವಳ ಜೊತೆಯಲ್ಲಿಯೇ ಓದುತ್ತಿದ್ದ. ಜೈನ್ ಧರ್ಮ ಪಾಲಿಸುತ್ತಿದ್ದ ಅವರು ಹಾಲು ಕೂಡ ಕುಡಿಯುತ್ತಿರಲಿಲ್ಲ. ಅವನಿಗೆ ಅಲ್ಲಿ ತುಂಬಾ ಸಮಸ್ಯೆ ಆಗುತ್ತಿತ್ತು. ಅವನ ಅಮ್ಮ ಅವನಿಗೆ ಮನೆಯಿಂದಲೇ ತಿಂಡಿ ಕೊಟ್ಟು ಕಳಿಸುತ್ತಿದ್ದರಾದರೂ ಬೇರೆಯವರು ಏನೇನೋ ತಿನ್ನುವುದನ್ನು ನೋಡಿ, ಅದರ ವಾಸನೆ ಸಹಿಸಲಾರದೆ ಅವನು ಶಾಲೆಯಲ್ಲಿ ಏನೂ ತಿನ್ನುತ್ತಲೇ ಇರಲಿಲ್ಲ. ಅಲ್ಲಿನ ಮಕ್ಕಳು ತಿನ್ನುವ ಪದಾರ್ಥಗಳನ್ನು ತುಂಬಾ ಹಾಳು ಮಾಡುತ್ತಾರೆ, dustbin ಗೆ ಹಾಗೆಯೇ ಎಸೆದುಬಿಡುತ್ತಾರೆ ಅಂತ ಮಗಳು ತುಂಬಾ ಬೇಸರ ಮಾಡಿಕೊಂಡು ಹೇಳುತ್ತಿದ್ದಳು. ಪುಕ್ಕಟೆ ಸಿಕ್ಕರೆ ಹಾಗೆಯೇ ಅಲ್ಲವೇ! ಆದರೆ ತಮ್ಮ ಬಳಿ ತುಂಬಾ ಸಂಪನ್ಮೂಲಗಳಿವೆ ಎಂಬ ಸೊಕ್ಕು ಅಲ್ಲಿನ ದೊಡ್ಡವರಲ್ಲಿ ಕೂಡ ತುಂಬಾ ಇದೆ ಅಂತ ಕ್ರಮೇಣ ತಿಳಿಯಿತು. ಅದೇ ಕಾರಣಕ್ಕೆ ಮಕ್ಕಳೂ ಕೂಡ ಹಾಗೆ ಇರುತ್ತಾರೋ ಏನೋ.

ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕೂಡ ಕೆಲವು ಜನ ಪರಿಚಯ ಆದರು. ಬರಿ ಕನ್ನಡಿಗರೇ ಅಲ್ಲ ಒಂದಿಷ್ಟು ಆಂಧ್ರದವರು, ತಮಿಳಿಗರೂ ಇದ್ದರು. ಆಂಧ್ರದವರು ಅಮೆರಿಕೆಗೆ ಬರಲು ಬಿದ್ದು ಸಾಯುತ್ತಾರೆ. ಅಲ್ಲಿರುವಷ್ಟು ಆಂಧ್ರದವರು ಆಂಧ್ರಪ್ರದೇಶದಲ್ಲಿರುವ ಜನಸಂಖ್ಯೆಗಿಂತ ಜಾಸ್ತಿ ಅಂತ ತಮಾಷೆ ಮಾಡುತ್ತಿದ್ದೆ. ಗಜನಿ ಅದಕ್ಕೆ ನಕ್ಕು, “ಗುರಣ್ಣ, USA ಅಂದರೆ ಏನು ಅರ್ಥ ಗೊತ್ತಾ? ‘ಯುನೈಟೆಡ್ ಸ್ಟೇಟ್ಸ್ ಆಫ್ ಆಂಧ್ರಪ್ರದೇಶ’ ಅನ್ನುತ್ತಿದ್ದ! ನಮ್ಮ ಪಕ್ಕದ ಫ್ಲಾಟ್‌ನಲ್ಲೆ ಆಂಧ್ರ ಮೂಲದ ಒಂದು ಕುಟುಂಬ ವಾಸವಾಗಿತ್ತು. ಒಬ್ಬ ಮಹಿಳೆ ಹಾಗೂ ಅವಳ ಮಗ ಅಲ್ಲಿ ಇರುತ್ತಿದ್ದರು. ಅವಳ ಹೆಸರು ಸಿರಿ ಮಗನ ಹೆಸರು ಫಿಲಿಪ್ ಅಂತ ಇರಲಿ. ಹುಡುಗ ತುಂಬಾ ನಾಚಿಗೆ ಸ್ವಭಾವದವನು ಅನಿಸುತ್ತಿತ್ತು. ಅವನು ಮಾತಾಡಿದ್ದೆ ನೋಡಿರಲಿಲ್ಲ. ಎಂಟು ವರ್ಷದ ನನ್ನ ಮಗಳಿಗಿಂತ ವಾರಿಗೆಯಲ್ಲಿ ಚಿಕ್ಕವನಾಗಿದ್ದರೂ ಮಾತು ಬಾರದಷ್ಟು ಸಣ್ಣವ ಆಗಿರಲಿಲ್ಲ. ಕೆಲವು ಮಕ್ಕಳಿಗೆ ಮಾತು ತಡವಾಗಿ ಬರುತ್ತದಲ್ಲ ಅದಕ್ಕೆ ಇರಬೇಕು ಅಂದುಕೊಂಡಿದ್ದೆವು. ನನ್ನ ಮಗಳ ಜೊತೆ ಆಡಲು ಒಳ್ಳೆಯ ಕಂಪನಿ ಅಂತೂ ಸಿಕ್ಕಿತ್ತು. ಆದರೆ ಒಂದೇ ಒಂದು ಶಬ್ದ ಹೊರಡಿಸಲೂ ಅವನಿಗೆ ಬರುತ್ತಿರಲಿಲ್ಲ. ಅವನಿಗೆ ಕೋಪ ಬಂದಾಗ ಮಾತ್ರ ತನ್ನ ಅಮ್ಮನಿಗೆ ಜೋರಾಗಿ ಹೊಡೆಯುತ್ತಿದ್ದ. ಆಗ ಅವನ ಮುಖ ನೋಡಿದರೆ ನಾಗವಲ್ಲಿಯಾಗಿ ಬದಲಾಗುತ್ತಿದ್ದ ಆಪ್ತಮಿತ್ರ ಸಿನಿಮಾದ ಸೌಂದರ್ಯಳ ಮುಖ ಭಾವ ನೆನಪಾಗುತ್ತಿತ್ತು! ಅಷ್ಟು ಬದಲಾವಣೆ ಅವನ ಮುಖದಲ್ಲಿ ನಿಚ್ಚಳವಾಗಿ ಕಾಣುತ್ತಿತ್ತು. ತುಂಬಾ ಮುದ್ದಾಗಿ ಬೆಳೆಸಿದರೆ ಹೀಗೆ ಆಗೋದು ಅಂತ ನನಗೆ ಅನಿಸಿತ್ತು. ಫಿಲಿಪ್‌ನ ತಂದೆ ಇನ್ನೊಂದು ಯಾವುದೋ ಊರಿನಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದು ಆಗಾಗ ಬಂದು ಹೋಗಿ ಮಾಡುತ್ತಿದ್ದ. ಹಾಗೆ ಒಂದು ಸರ್ತಿ ಬಂದಾಗ ಅವನದೂ ಪರಿಚಯವಾಯ್ತು. ಅವಳೊಂದು ತೀರ, ಇವನೊಂದು ತೀರ, ಒಬ್ಬನೇ ಮಗ… ಒಟ್ಟಿಗೆ ಇರಲಾರದೆ ದುಡ್ಡಿನ ಹಿಂದೆ ಬಿದ್ದು ತಮ್ಮೆಲ್ಲ ಸಮಯವನ್ನು ಕೆಲಸಕ್ಕೆ ಮುಡಿಪಾಗಿಡುವ ಅವರದೂ ಒಂದು ಜೀವನವೇ ಅನಿಸಿತು.

ಅಲ್ಲಿ ನನ್ನ ಭಾರತೀಯ ಸಹೋದ್ಯೋಗಿ ಒಬ್ಬನ ಮಗನೂ ಕೂಡ ಇವಳ ಜೊತೆಯಲ್ಲಿಯೇ ಓದುತ್ತಿದ್ದ. ಜೈನ್ ಧರ್ಮ ಪಾಲಿಸುತ್ತಿದ್ದ ಅವರು ಹಾಲು ಕೂಡ ಕುಡಿಯುತ್ತಿರಲಿಲ್ಲ. ಅವನಿಗೆ ಅಲ್ಲಿ ತುಂಬಾ ಸಮಸ್ಯೆ ಆಗುತ್ತಿತ್ತು. ಅವನ ಅಮ್ಮ ಅವನಿಗೆ ಮನೆಯಿಂದಲೇ ತಿಂಡಿ ಕೊಟ್ಟು ಕಳಿಸುತ್ತಿದ್ದರಾದರೂ ಬೇರೆಯವರು ಏನೇನೋ ತಿನ್ನುವುದನ್ನು ನೋಡಿ, ಅದರ ವಾಸನೆ ಸಹಿಸಲಾರದೆ ಅವನು ಶಾಲೆಯಲ್ಲಿ ಏನೂ ತಿನ್ನುತ್ತಲೇ ಇರಲಿಲ್ಲ.

ಅವನು ತಾನೊಬ್ಬ ಸ್ನೂಕರ್ ಆಟಗಾರ ಅಂತ ಹೇಳಿಕೊಂಡಿದ್ದ. ಅದು ಇದು ಮಾತಾಡುತ್ತ ತನ್ನ ಮಗ ಫಿಲಿಪ್ ಕೂಡ ತುಂಬಾ ಚೆನ್ನಾಗಿ ಸ್ನೂಕರ್ ಆಡುತ್ತಾನೆ ಇಲ್ಲಿದೆ ನೋಡಿ ಅಂತ ಒಂದು ವೀಡಿಯೊ ತೋರಿಸಿದ. ಅದರಲ್ಲಿ ಅವನ ಮಗ ಸ್ನೂಕರ್ ಹೊಡೆತಗಳನ್ನು ತುಂಬಾ ಚೆನ್ನಾಗಿಯೇ ಹೊಡೆಯುತ್ತಿದ್ದುದು ಗಮನಿಸಿದೆ. ಅದರ ಜೊತೆಗೆ ಇನ್ನೊಂದು ವಿಚಿತ್ರವನ್ನೂ ಆಲಿಸಿದೆ. ಆ ವೀಡಿಯೊದಲ್ಲಿ ಅವನ ಮಗ ನಿಚ್ಚಳವಾಗಿ ಮಾತಾಡುತ್ತಿದ್ದ! ನನ್ನ ಮುಖದಲ್ಲಿ ಆದ ಬದಲಾವಣೆಯನ್ನು ಗಮನಿಸಿದ ಅವನು, ತನ್ನ ಮಗ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರನ್ನು ಬಿಟ್ಟು ಬೇರೆ ಯಾರ ಜೊತೆಗೂ ಮಾತಾಡಲಾರ ಹಾಗೂ ಅವನ ಆ ಸ್ಥಿತಿಯನ್ನು selective mutism ಅಂತಾರಂತೆ ಎಂದು ಹೇಳಿದ. ಅದು ಕ್ರಮೇಣ ಸುಧಾರಿಸುವ ಸ್ಥಿತಿ ಅಂತೆ. ಈ ತರಹದ ಒಂದು ಪರಿಸ್ಥಿತಿ ಮಕ್ಕಳಿಗೆ ಬರುವುದೆಂಬ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಪಾಪ ಅನಿಸಿತು. ಮಾತನಾಡಲು ಸಾಧ್ಯವಾಗದ ತನ್ನ ಹತಾಶೆಯನ್ನು ತನ್ನ ಅಮ್ಮನನ್ನು ಹೊಡೆಯುವ ಮೂಲಕ ಹೊರ ಹಾಕುತ್ತಿದ್ದ ಅಂತ ನನಗೆ ಅರ್ಥವಾಯ್ತು. ಕ್ರಮೇಣ ನನ್ನ ಮಗಳ ಜೊತೆಗೆ ಮಾತಾಡಲು ಶುರು ಮಾಡುತ್ತಾನೆ ಅಂತ ಅವನಪ್ಪ ಹೇಳಿದ್ದ. ನಾನೂ ಕೂಡ ಅವನಿಗೆ ಬೇಗನೆ ಮಾತು ಬರಲು ಸಹಾಯ ಮಾಡೋಣ ಅಂತ ನನ್ನ ಕೈಲಾದ ಪ್ರಯತ್ನ ಶುರು ಮಾಡಿದೆ.

ನಮ್ಮ ಮನೆಗೆ ಫಿಲಿಪ್ ಬಂದಾಗಲೆಲ್ಲ ಕ್ವಿಜ್ ತರಹ ಮಾಡಿ ಅವನಿಗೆ ಪ್ರಶ್ನೆ ಕೇಳೋದು, ಕತೆ ಹೇಳುತ್ತಾ ಸಡನ್ ಆಗಿ ಅವನತ್ತ ಒಂದು ಪ್ರಶ್ನೆ ಎಸೆಯೋದು ಹೀಗೆಲ್ಲ ಮಾಡಲು ಶುರು ಮಾಡಿದೆ. ಅವನು ಹೇಗಾದರೂ ನನ್ನ ಜೊತೆಗೆ ಮಾತಾಡಲು ಶುರು ಮಾಡಬಹುದು ಎಂಬುದು ನನ್ನ ಸದುದ್ದೇಶ ಆಗಿತ್ತು. ಏನೇ ತಿಪ್ಪರಲಾಗ ಹಾಕಿದರೂ ಆಸಾಮಿ ತುಟಿ ಪಿಟಕ್ ಅನ್ನುತ್ತಿರಲಿಲ್ಲ. ನಾನು ಹಾಗೆಲ್ಲ ಮಾಡಿದ್ದು ದೊಡ್ಡ ತಪ್ಪು ಆಗಿತ್ತು ಅನ್ನೋದು ನನಗೆ ಆಮೇಲೆ ಅರಿವಾಯ್ತು. selective mutism ಇರುವ ಮಕ್ಕಳಿಗೆ ಹಾಗೆ ಬಲವಂತವಾಗಿ ಮಾತಾಡಿಸಲು ಪ್ರಯತ್ನಿಸಬಾರದಂತೆ. ಹಾಗೆ ಮಾಡಿದರೆ ಅವರಿಗೆ ಇನ್ನೂ anxiety ಜಾಸ್ತಿಯಾಗುತ್ತಂತೆ. ಅವನು ತನ್ನ ಅಮ್ಮನೆದುರು ನಾನು ಹಾಗೆ ಬಲಬಂತವಾಗಿ ಮಾತನಾಡಿಸುತ್ತೇನೆ ಅಂತ ಚಾಡಿ ಹೇಳಿದ್ದ. ಅವತ್ತಿನಿಂದ ಹಾಗೆ ಮಾಡುವುದ ಬಿಟ್ಟೆ. ಗೂಗಲ್ಲವ್ವನನ್ನು ಕೇಳಿ ಅವನ ಸ್ಥಿತಿಯ ಬಗ್ಗೆ ಓದಿದೆ. ಆಗ ಅವನು ಮಾಡುತ್ತಿದ್ದ ಎಲ್ಲ ವಿಚಿತ್ರಗಳು ಸಹಜ ಅನಿಸಲು ಶುರುವಾದವು. ಕ್ರಮೇಣ ಅವನು ನನ್ನ ಮಗಳ ಜೊತೆ ಪಿಸುಗುಡಲು ಶುರು ಮಾಡಿದ್ದ. ನನ್ನನ್ನು ನೋಡಿದಾಕ್ಷಣ ಮಾತು ನಿಲ್ಲಿಸುತ್ತಿದ್ದ. ನನ್ನ ಮೇಲೆ ಇನ್ನೂ ಕೋಪ ತಣಿದಿರಲಿಲ್ಲ ಅನಿಸುತ್ತೆ. ಆಮೇಲಾಮೇಲೆ ಮಗಳ ಜೊತೆಗೂ ಜೋರಾಗಿಯೇ ಮತಾಡಲು ಶುರು ಮಾಡಿದ, ನಾನಿದ್ದಾಗ ಕೂಡ. ನಿಮ್ಮ ಮಗಳು ಇದ್ದುದಕ್ಕೆ ಅವನು ಇಷ್ಟೊಂದು ಮಾತಾಡಲು ಕಲಿತ ಅಂತ ಹೇಳಿ ಫಿಲಿಪ್‌ನ ಅಪ್ಪ ಖುಷಿ ಪಟ್ಟಿದ್ದ.

ಆದರೆ ಮಗ ಮಾತು ಕಲಿಯುವುದರೊಳಗೆ ಫಿಲಿಪ್‌ನ ಅಪ್ಪ ಅಮ್ಮ ಮಾತು ಬಿಟ್ಟಿದ್ದರು! ಅವತ್ತೊಂದು ದಿನ ಅವನ ಅಪ್ಪ ಬಂದು ತಾನು ಸಿರಿಗೆ divorce ಮಾಡುತ್ತಿದ್ದೇನೆ. ಅವಳು ತುಂಬಾ ಹಟಮಾರಿ ಹಾಗೆ ಹೀಗೆ ಅಂತ ಹೇಳಿದ. ಅವಳೂ ಕೂಡ ಅವನು ಸರಿ ಇಲ್ಲ ಅಂತ ನನ್ನ ಹೆಂಡತಿ ಎದುರು ಹೇಳಿದ್ದಳು. ಒಟ್ಟಿನಲ್ಲಿ ಅವರಿಬ್ಬರಿಗೂ ಹೊಂದಲಿಲ್ಲ ಅಂತಾಯ್ತು. ಈಗಾಗಲೇ ಒಂದಿಬ್ಬರು ಗಂಡ ಹೆಂಡಿರ ಜಗಳ ಬಿಡಿಸಲು ಹೋಗಿ ಅದೊಂದು ಮೂರ್ಖತನ ಎಂದು ಅರಿತಿದ್ದ ನಾನು, ಅವರಿಬ್ಬರ ಮಧ್ಯ ರಾಜಿ ಮಾಡಿಸುವ ಅಧಿಕಪ್ರಸಂಗ ಮಾಡದೆ ಮೂಕ ಪ್ರೇಕ್ಷಕನಾಗಿ ಉಳಿದೆ.

ಆದರೂ ಎಷ್ಟೋ ವರ್ಷಗಳ ಸಂಸಾರ ಮಾಡಿದ ಮೇಲೆ ಅದು ಹೇಗೆ ಒಮ್ಮೆಲೇ ಹೊಂದಿಕೆ ಕಷ್ಟ ಅನಿಸುತ್ತೆ ಎಂದು ಆಗ ಹನ್ನೆರಡು ವರ್ಷಗಳಿಂದ ಒಂದೇ ಹೆಂಡತಿಯ ಜೊತೆ ಸಂಸಾರ ಮಾಡುತ್ತಿದ್ದ ನನಗೆ ಅಚ್ಚರಿ ಆಗಿದ್ದು ಹೌದು. ಮದುವೆ ಅನ್ನೋದೇ ಇಬ್ಬರ ಅವಗುಣಗಳನ್ನು ಅರಿತು ಒಪ್ಪಿಕೊಂಡು ಅಪ್ಪಿಕೊಳ್ಳೋದು ಅಲ್ಲವೇ? ಮೊದಲಿನ ಕಾಲದಲ್ಲೂ ಗಂಡ ಹೆಂಡತಿ ಜಗಳ ಆಡುತ್ತಿದ್ದರು. ಉಂಡು ಮಲಗಿದ ಮೇಲೆ ಒಂದಾಗುತ್ತಿದ್ದರು! ಇಂದಿನ ಜಗಳಗಳು ವಿಚ್ಛೇದನ ಆಗುವ ತನಕ ಎಂಬಂತಾಗಿದೆ. ಇವೆಲ್ಲಕ್ಕೆ ಸ್ವಪ್ರತಿಷ್ಠೆಯೇ ಕಾರಣವೇ? ಹೆಣ್ಣು ಸ್ವತಂತ್ರವಾಗಿರುವುದನ್ನು ಸಹಿಸಲು ಗಂಡಸಿಗೆ ಸಾಧ್ಯ ಆಗುತ್ತಿಲ್ಲವೇ? ಅಥವಾ ಹೆಣ್ಣು ಕೂಡ ಗಂಡಸಿಗೆ ಕಿರಿ ಕಿರಿ ಆಗಲಿ ಎಂದು ಹಾಗೆ ಮಾಡುತ್ತಿದ್ದಾಳೆಯೇ? ಏನೇ ಆದರೂ ಚಪ್ಪಾಳೆ ಸಾಧ್ಯವಾಗೋದು ಎರಡೂ ಕೈಯಿಂದಲೇ! ಆಮೇಲೆ ಅವನನ್ನು ಮತ್ತೆ ನೋಡಲಿಲ್ಲ. ಅವಳು ಇನ್ನೂ ಅಲ್ಲೇ ಇದಾಳೆ. salary ಕೂಡ ಅಷ್ಟೊಂದು ಇಲ್ಲ. ಆದರೂ ಭಾರತಕ್ಕೆ ವಾಪಸ್ಸು ಹೋಗಲು ಪ್ರತಿಷ್ಠೆ ಅಡ್ಡವಾಗುತ್ತೆ. ಹೋಗಲು ಟಿಕೆಟ್‌ಗೆ ದುಡ್ಡು ಕೂಡ ಇಲ್ಲ ಅಂತಲೂ ಒಮ್ಮೆ ಹೇಳಿದ್ದಳು. ಹೀಗೆ ಎಷ್ಟೋ ಜನ ಅಲ್ಲಿ ಇರದೇ ಇಲ್ಲಿಗೆ ಬರದೆ ಒದ್ದಾಡಿಕೊಂಡು ಇದ್ದಾರೆ. ಆದರೂ ಅವಳಿಗೆ ಅಮೆರಿಕೆಯ ಬಗ್ಗೆ ತುಂಬಾ ಅಭಿಮಾನ ಇತ್ತು. ಅಲ್ಲಿನ ಜನರು ತುಂಬಾ blessed ಅಂತ ಒಮ್ಮೆ ಹೇಳಿದ್ದಳು. ಯಾಕೆ ಅಂದರೆ ಅಲ್ಲಿನ ಎಲ್ಲಾ ಸೀಸನ್‌ಗಳು ಸರಿಯಾದ ಸಮಯಕ್ಕೆ ಆಗುತ್ತಂತೆ. ಇರಬಹುದು… ಆದರೆ ಎಷ್ಟೋ ತಿಂಗಳ ಚಳಿಗೆ ಮರುಗಟ್ಟಿ ಹೋಗಿದ್ದ ನನಗೆ, ಅದ್ಹೇಗೆ ಇದು ಬ್ಲೆಸ್ಸಿಂಗ್ ಆಗುತ್ತೆ ಅನ್ನುವ ಪ್ರಶ್ನೆ ಮನದಲ್ಲಿ ಮೂಡಿದರೂ, ಅವಳ ಅಂಧಾಭಿಮಾನಕ್ಕೆ ಏನು ಹೇಳಬೇಕೆಂದು ತಿಳಿಯದೆ ಮೂಕ ವಿಸ್ಮಿತನಾಗಿದ್ದೆ!

(ಮುಂದುವರೆಯುವುದು..)
(ಹಿಂದಿನ ಕಂತು: ಮಾಮರವೆಲ್ಲೋ.. ಕೋಗಿಲೆಯೆಲ್ಲೋ.. )