ಮೊದಲಿಗೆ, ಉಕ್ಕಿ ಹರಿಯುವ ಪ್ರೀತಿಯನ್ನು ನಿಯಂತ್ರಿಸಲು ನಾವು ಕಲಿಯಬೇಕು. ನೀನೀಗ ಪ್ರೀತಿಯ ಬಲಿಪಶುವಾಗಿರುವೆ ಎನ್ನುವ ಆತಂಕ ನನ್ನದು. ನನ್ನಿಂದ ದೂರವಿರಲು ನಿನ್ನಿಂದ ಸಾಧ್ಯವಿಲ್ಲ ಅನ್ನುವುದನ್ನು ನಾನು ಬಲ್ಲೆನು. ನನಗೂ ನೀನು ನನ್ನ ಹತ್ತಿರ ಇರಬೇಕೆಂಬ ಆಸೆಯಿದೆ. ಆದರೆ ನೀನು ನನಗೆ ಒಂದಿಷ್ಟು ಸಮಯಾವಕಾಶ ನೀಡಬೇಕೆಂದು ಕೋರುವೆ. ನಿನ್ನ ತಾಳ್ಮೆಯನ್ನು ನಾನು ಖಂಡಿತ ಪರೀಕ್ಷಿಸುವುದಿಲ್ಲ ಎನ್ನುವುದಂತೂ ಖಾತ್ರಿ. ಹಾಗಾಗಿ ದಯವಿಟ್ಟು ಬೇಸರಪಟ್ಟುಕೊಳ್ಳಬೇಡ. ನಾವು ಮುಂದಿನ ದಿನಗಳಲ್ಲಿ ಸದಾ ಜೊತೆಯಲ್ಲಿರುವವರು.
ಡಾ. ಬಿ.ಆರ್. ಅಂಬೇಡ್ಕರ್‌ ತಮ್ಮ ಮದುವೆಗೂ ಮುನ್ನ ತಮ್ಮ ಪತ್ನಿಗೆ ಬರೆದಿದ್ದ ಪತ್ರವನ್ನು ಸದಾನಂದ ಆರ್. ಕನ್ನಡಕ್ಕೆ ಅನುವಾದಿಸಿದ್ದಾರೆ

(ಡಾ. ಶಾರದ ಕಬೀರ್‌ ಅವರನ್ನು ಅಂಬೇಡ್ಕರ್‌ ಅವರು ೧೯೪೮ರ ಏಪ್ರಿಲ್‌ ೧೫ರಂದು ಮದುವೆಯಾದರು (ಮದುವೆಯ ಇವರ ಹೆಸರನ್ನು ಸವಿತಾ ಎಂದು ಬದಲಿಸಲಾಯಿತು). ಮುಂಬೈನ ಪ್ರಸಿದ್ಧ ವೈದ್ಯರೂ, ಅಂಬೇಡ್ಕರ್‌ ಅವರ ಖಾಸಗಿ ವೈದ್ಯರೂ ಆಗಿದ್ದ ಡಾ. ಮಾಲವಂಕರ್‌ ಅವರ ಕ್ಲಿನಿಕ್‌ನಲ್ಲಿ ಅಂಬೇಡ್ಕರ್‌ ಅವರನ್ನು ಭೇಟಿಯಾಗುವ ಮೊದಲು, ಶಾರದ(ಸವಿತಾ) ತಮ್ಮ ಕುಟುಂಬದ ಸ್ನೇಹಿತರಾಗಿದ್ದ ಡಾ. ರಾವ್‌ ಅವರ ಮನೆಯಲ್ಲಿ ಮೊದಲ ಬಾರಿಗೆ ೧೯೪೭ರಲ್ಲಿ ಭೇಟಿಯಾಗುತ್ತಾರೆ. ಮುಂದೆ, ಶಾರದ ಮತ್ತು ಅಂಬೇಡ್ಕರ್‌ ಅವರ ನಡುವೆ ಆತ್ಮೀಯತೆ ಬೆಳೆದು, ಜನವರಿ, ೧೯೪೮ರ ಹೊತ್ತಿಗೆ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾರೆ. ೧೯೫೬ರಲ್ಲಿ ಅಂಬೇಡ್ಕರ್‌ ಇಹಲೋಕ ತ್ಯಜಿಸಿದ ಮೇಲೆ, ಡಾ. ಸವಿತಾ ಅಂಬೇಡ್ಕರ್‌ ಅನೇಕ ಕಾರಣಗಳಿಂದಾಗಿ ಸಾರ್ವಜನಿಕ ಜೀವನದಿಂದ ದೂರ ಉಳಿಯುತ್ತಾರೆ. ೨೦೦೩ರಲ್ಲಿ ತೀರಿಕೊಂಡ ಇವರು ೧೯೯೦ರಲ್ಲಿ ತಮ್ಮ ಆತ್ಮಕತೆ ಡಾ. ಅಂಬೇಡ್ಕರಂಚ ಸಹವಾಸತ್‌ ಅನ್ನು ಪ್ರಕಟಿಸುತ್ತಾರೆ. ೨೦೨೨ರಲ್ಲಿ ನದೀಮ್‌ ಖಾನ್‌ ಅವರು ಇದನ್ನು ಬಾಬಸಾಹೇಬ್‌: ಮೈ ಲೈಫ್‌ ವಿತ್‌ ಡಾ. ಅಂಬೇಡ್ಕರ್‌ ಎಂದು ಇಂಗ್ಲಿಷ್‌ಗೆ ಅನುವಾದಿಸುತ್ತಾರೆ. ಈ ಪುಸ್ತಕದಲ್ಲಿ ಪ್ರಕಟವಾಗಿರುವ ಅವರಿಬ್ಬರ ನಡುವಿನ ಪತ್ರಗಳಲ್ಲಿ ಒಂದರ ಅನುವಾದವಿದು:

(೧೬ ಫೆಬ್ರವರಿ, ೧೯೪೮)

ಪ್ರೀತಿಯ ಶಾರು,
ನಿನ್ನ ಪತ್ರ ಇಂದು ಮಧ್ಯಾಹ್ನ ನನ್ನ ಕೈ ಸೇರಿತು. ನಿನ್ನ ಪತ್ರದ ಓದು ನನಗೆ ಎಣೆಯಿಲ್ಲದ ಸಂತೋಷ ನೀಡಿತು. ಈ ಪ್ರೇಮದ ನೋವಿಗೆ ಮೊದಲು ಒಳಗಾದವಳು ನೀನೆ. ಆದರೆ ನೀನು ಸರಿಯಾಗಿ ಗುರುತಿಸಿರುವಂತೆ, ನಾನು ಈ ಮೊದಲು ನನ್ನ ಭಾವನೆಗಳನ್ನು ವ್ಯಕ್ತಗೊಳಿಸಿರಲಿಲ್ಲ ಅಷ್ಟೆ. ಹಾಗಾಗಿ, ನಿನಗಿಂತಲೂ ಮೊದಲು ನೋವಿಗೆ ಒಳಗಾದವನು ನಾನು. ಹೀಗೆ ಮೊದಲ ನೋಟದಲ್ಲೇ ಇಬ್ಬರೂ ಪ್ರೀತಿಗೆ ಒಳಗಾದ ಮತ್ತೊಂದು ಉದಾಹರಣೆ ಇಲ್ಲವೆಂದೇ ನನ್ನ ಗ್ರಹಿಕೆ. ನಾವಿಬ್ಬರೂ ಎರಡು ಶರೀರ ಒಂದು ಆತ್ಮ ಎಂದಾಗುವುದಂತು ಖಚಿತ. ನಮ್ಮನ್ನು ಸಾವು ಮಾತ್ರವೇ ಅಗಲಿಸಲು ಸಾಧ್ಯ. ನನ್ನ ಪತ್ರ ನಿನಗೆ ಕಣ್ಣೀರು ತರಿಸಿದ್ದಕ್ಕೆ ಕ್ಷಮೆಯಿರಲಿ. ಕಣ್ಣೀರು ಹರಿಯುವುದು ಒಳ್ಳೆಯದೆ. ಕಣ್ಣೀರು ಕಲ್ಮಶಗಳನ್ನು ನಿವಾರಿಸಿ, ಹೃದಯವನ್ನು ಸ್ವಚ್ಛಗೊಳಿಸುತ್ತದೆ. ನೀನು ಅತ್ತಿರುವುದು ಹೇಗೆ ಸತ್ಯವೋ ಹಾಗೇ ನಾನು ಸಹಾ ಕಣ್ಣೀರು ಹಾಕಿದ್ದೇನೆ ಎನ್ನುವುದು ಅಷ್ಟೇ ಸತ್ಯ –ಉತ್ತಮ ನಡತೆ ಮತ್ತು ಬೌದ್ಧಿಕತೆಯನ್ನು ಹೊಂದಿರುವ ಹೆಣ್ಣನ್ನು ನನ್ನ ಪತ್ನಿಯಾಗಿ ಪಡೆಯಬೇಕೆಂಬ ನನ್ನ ಕನಸು ನನಸಾಗಿರುವುದು ನನ್ನಲ್ಲಿ ಸಂತೋಷದ ಕಣ್ಣೀರು ತರಿಸಿತು. ನಾವಿಬ್ಬರು ಪರಸ್ಪರ ಒಬ್ಬರನೊಬ್ಬರು ಸಂತೋಷವಾಗಿರಿಸಿಕೊಳ್ಳಲು ಪಣ ತೊಡೋಣ. ನಮ್ಮ ಈ ನಿರ್ಧಾರವನ್ನು ಗುರೂಜಿ (ಡಾ. ಮಾಲವಂಕರ್‌) ಒಪ್ಪಿರುವುದು ಖುಷಿಯ ವಿಷಯವಾಗಿದೆ.
ಮೊದಲಿಗೆ, ಉಕ್ಕಿ ಹರಿಯುವ ಪ್ರೀತಿಯನ್ನು ನಿಯಂತ್ರಿಸಲು ನಾವು ಕಲಿಯಬೇಕು. ನೀನೀಗ ಪ್ರೀತಿಯ ಬಲಿಪಶುವಾಗಿರುವೆ ಎನ್ನುವ ಆತಂಕ ನನ್ನದು. ನನ್ನಿಂದ ದೂರವಿರಲು ನಿನ್ನಿಂದ ಸಾಧ್ಯವಿಲ್ಲ ಅನ್ನುವುದನ್ನು ನಾನು ಬಲ್ಲೆನು. ನನಗೂ ನೀನು ನನ್ನ ಹತ್ತಿರ ಇರಬೇಕೆಂಬ ಆಸೆಯಿದೆ. ಆದರೆ ನೀನು ನನಗೆ ಒಂದಿಷ್ಟು ಸಮಯಾವಕಾಶ ನೀಡಬೇಕೆಂದು ಕೋರುವೆ. ನಿನ್ನ ತಾಳ್ಮೆಯನ್ನು ನಾನು ಖಂಡಿತ ಪರೀಕ್ಷಿಸುವುದಿಲ್ಲ ಎನ್ನುವುದಂತೂ ಖಾತ್ರಿ. ಹಾಗಾಗಿ ದಯವಿಟ್ಟು ಬೇಸರಪಟ್ಟುಕೊಳ್ಳಬೇಡ. ನಾವು ಮುಂದಿನ ದಿನಗಳಲ್ಲಿ ಸದಾ ಜೊತೆಯಲ್ಲಿರುವವರು. ಆದುದರಿಂದ ಜೊತೆಯಾಗಲು ಕೆಲವು ದಿನ ಹೆಚ್ಚು ಬೇಕಾದರೆ, ಅದು ದುಃಖದ ವಿಚಾರವಾಗಬೇಕಿಲ್ಲ, ಅಲ್ವೇ?
ಆದರೂ, ನೀನು ಮೂರು ದಿನಗಳಿಂದ ಆಹಾರ ಸೇವಿಸಿಲ್ಲವೆಂದು ತಿಳಿದು ನನಗೆ ತುಂಬಾ ದುಃಖವಾಯಿತು. ನೀನದನ್ನು ಮಾಡುವ ಅಗತ್ಯವೇನಿತ್ತು? ನಾನೋ ಶಾರು ವಿವೇಚನೆಯಿರುವ ಹುಡುಗಿ ಎಂದು ತಿಳಿದಿದ್ದೆ. ನೀನು ಮತ್ತೆ ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲವೆಂದು ನಂಬಿದ್ದೇನೆ. ನೀನೇ ನನ್ನ ಆಸ್ತಿ. ನೀನು ದೈಹಿಕವಾಗಿ ಇಲ್ಲವೇ ಮಾನಸಿಕವಾಗಿ ನೋಯುವುದು ನನಗೆ ಸಹ್ಯವಾಗುವುದಿಲ್ಲ, ನೆನಪಿರಲಿ.

ವಿಧಿಯ ನಡೆ ಎಷ್ಟು ವಿಚಿತ್ರ ಅಲ್ಲವೇ! ನಾನು ನೀನು ಸತಿ-ಪತಿಗಳಾಗುವೆವು ಎಂದು ಯಾರು ತಾನೆ ಕಲ್ಪಿಸಿಕೊಳ್ಳಲು ಸಾಧ್ಯವಿತ್ತು! ನಾವು ಹುಟ್ಟಿದ್ದು ಭಿನ್ನವಾದ ಸ್ಥರಗಳಲ್ಲಿ, ಬದುಕಿದ್ದು ವಿಭಿನ್ನವಾದ ವಲಯಗಳಲ್ಲಿ, ಸೆವೆಸಿದ್ದು ಬೇರೆ ಬೇರೆ ದಾರಿಗಳನ್ನು. ನಮ್ಮ ಭೇಟಿಯಾಗಿದ್ದು ನರ್ಸ್‌(ಸವಿತಾ ಅಂಬೇಡ್ಕರ್‌ ವೈದ್ಯರಾಗಿದ್ದರು) ಮತ್ತು ರೋಗಿಯಾಗಿ. ಇಲ್ಲಿಂದ ಹೊರಟ ನಮ್ಮ ಸಂಬಂಧ ಈಗ ಮದುವೆ ಮಂಟಪಕ್ಕೆ ಬಂದು ತಲುಪಿದೆ. ನಿನ್ನೊಂದಿಗೆ ನನ್ನ ಸಂಬಂಧವನ್ನು ನಿರ್ಮಿಸಿ, ವಿಧಿ ನನ್ನನ್ನು ಕರುಣೆಯಿಂದ ಜೋಪಾನಿಸಿದೆ.

ನೀನು ನನಗೆ ನೀಡಿರುವ ಅಡ್ಡ ಹೆಸರು (ರಾಜ) ಇನ್ನೊಂದು ಸೋಜಿಗದ ವಿಷಯ! ಎಲಿಫಿನ್‌ಸ್ಟೋನ್‌ ಶಾಲೆಯಲ್ಲಿ ನಾನು ಓದುವಾಗ ನನ್ನ ಜೊತೆಯವರು ನನಗೆ ಇಟ್ಟಿದ್ದ ಅಡ್ಡ ಹೆಸರದು. ನಿನಗೆ ಈ ಹೆಸರು ಹೊಳೆದದ್ದು ಹೇಗೆ ಎಂದು ನನಗೆ ಅಚ್ಚರಿಯಾಗಿದೆ. ಇರಲಿ, ಅದನ್ನು ನೀನು ಬಳಸುವುದು ನನಗೆ ಇಷ್ಟ.

ನಿನ್ನನ್ನು ಅತೀವಾಗಿ ಪ್ರೀತಿಸುವ ಮತ್ತು ಮುದ್ದಿಸುವವ,
ನಿನ್ನ-ರಾಜ.