1

ಎಂದೂ ಸಿಗದ ಗೆಳೆಯನಿರಬೇಕು,
ಯಾವತ್ತೂ ಅರಿಯದ ಗೆಳತಿ ಇರಬೇಕು
ಸದಾ ಸಣ್ಣ ನೆನಪಿನ ನೋವೊಂದಿರಬೇಕು,
ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳಲು..

***

2

ನನ್ನೆದೆಯ ಒಲವಿನ ಸ೦ಗತಿಯನ್ನೆಲ್ಲಾ ಕೇಳಿ ಕದ್ದು ಮೆದ್ದು
ಜಾಣ ಪೆದ್ದನ೦ತೆ ತನ್ನದೇನನ್ನು ಹೇಳದೆ ಸುಮ್ಮನಿರುವುದಕ್ಕೆ ಹೆಸರೇನು…
ಹುಸಿ ಮುನಿಸು ಮಾಡಿ ಬೇಕಾದನೆಲ್ಲಾ ಕೇಳುವವಳಾಗಿದ್ದರೆ ನಾ,
ನಿನ್ನ ಒಲವಿನ ಜರಡಿಯಲ್ಲಿಟ್ಟು ನನಗಾಗಿ ಹೆಪ್ಪುಗಟ್ಟಿಸಿದ ಮಾತೊ೦ದನ್ನಾದರು ಮೆಲ್ಲುತ್ತಿದ್ದೆ,
ದಿನವೂ ನೆನೆದು ಚೂರಾಗುತ್ತಿದ್ದೆ … ಮತ್ತೆ ಜೀವ೦ತವಾಗುತ್ತಿದ್ದೆ, ಅದ ಮತ್ತೆ ಕೇಳಿ ಮುಕ್ತಳಾಗಲು..
ಈ ಜೀವಕ್ಕೆ ಅದೊ೦ದನ್ನಾದರು ನಿನ್ನದೆನ್ನುವ೦ತೆ ಉಳಿಸಿಕೊಡು…
ನೀ ಹೊರಟು ಹೋಗುವ ಮುನ್ನ…

***

3

ನೀನಿಲ್ಲೆ ಹತ್ತಿರವಿದ್ದರೂ , ನಾ ಬಿಕ್ಕುವಾಗ ನನ್ನ ಎದೆಗವುಚಿಕೊಳ್ಳದ ನಿನ್ನ ತೋಳುಗಳು ಅದೆಷ್ಟು ಬೇಗ ನಾ ನಿನ್ನವಳಲ್ಲ ಎ೦ದು ದೂರ ಮಾಡಿಬಿಟ್ಟವು,
ನಾನೊಬ್ಬಳೆ ಅ೦ದು , ನಿನ್ನ ನೆನಪಾಗಿ ನೀನಿರಬೇಕಿತ್ತು ಎ೦ದು ಅನಿಸಿತ್ತು,
ನೀ ಏನು ಹೇಳದಿದ್ದರೂ ನಿನ್ನವಳಾಗಿದ್ದೆ,
ನನ್ನ ಅನಾಮದೇಯ ನೋವು ಮಾಸುವವರೆಗೂ, ನನ್ನ ಕಲ್ಪನೆಯಲ್ಲಿ ನೀನಿದ್ದೆ…

***

4

ಅದು ನೀನಿಲ್ಲದ ವೇಳೆ ಒಬ್ಬ೦ಟಿ ಅನ್ನಿಸಿದ್ದು ನನ್ನ ತಪ್ಪೇನಿಲ್ಲ..
ನೀ ಹೀಗೆ ಮನಸ್ಸಿಗೆ ಗಾಳ ಹಾಕಿ ,
ಅದನ್ನು ಮರೆತು ಅಲ್ಲೇ ಬಿಟ್ಟು ಹೋದ ಕಾರಣ ಹೇಳಿ ಹೋಗು ಒಮ್ಮೆ,
ನಾ ಅಲ್ಲಿಯೇ ಸಿಕ್ಕಿಕೊಂಡಿರುವೆ.. ನೀ ಬಾರದೆ ಬಿಡುಗಡೆ ಇಲ್ಲದ ನಾನು ,ನಿನ್ನವಳೆ?

***

5

ಜರ್ಮನಿಯ ವಸ೦ತಕ್ಕೆ ಅರಳಿದ ಹೂ ಒ೦ದನ್ನು ನಿನಗಾಗಿ ಹೆಕ್ಕಿ ತ೦ದಿದ್ದೆ,
ಅದನ್ನ ಕೊಡಲು ಬಯಸುವ ಭಾವನೆಗೆ ಹೆಸರಿಲ್ಲ ಎ೦ದು,
ಸುಖಾಸುಮ್ಮನೆ ಪುಸ್ತಕದ ಹಾಳೆಗೆ ಟೇಪ್ನಿಂದ ಅ೦ಟಿಸಿ ಬಾಡದಂತೆ ಮಾಡಿದ್ದೇನೆ,,
ನೀ ಎಂದೋ ಪುಸ್ತಕ ತೆರೆದಾಗ, ಹಾಳೆಯೊಳಗೆ ಅದ ಕಂಡು
ಮುಗುಳ್ನಗಬಹುದೇನೋ,
ನನ್ನ ನೆನಪಿಗಾದರಷ್ಟು ನಿನ್ನ ಮನಸ್ಸಿನಲ್ಲಿ ಜಾಗವಿರಬಹುದೆಂದು..
ಆ ಒಂದು ಕ್ಷಣಕ್ಕಾದರು ನಾ ನಿನ್ನವಳು…

***

6

ನಾನು ಇಲ್ಲಿ ಅಳುತ್ತಿದ್ದೆ , ನೀ ಅಲ್ಲಿ ಬರೆಯುತ್ತಿದ್ದೆ
ನಮ್ಮಿಬ್ಬರ ಮಧ್ಯೆ ಗೊತ್ತಿಲ್ಲದೆ ಪ್ರೀತಿ ಹುಟ್ಟಿದ್ದಕ್ಕಾಗಿ,
ನಾನೂ ಅತ್ತು ತಣ್ಣಗಾದೆ ,ನೀನೂ ಬರೆದು ಖಾಲಿಯಾದೆ,
ಯಾರಿಗೂ ತಿಳಿಯದ ಅರಿಯದ ಪ್ರೀತಿಯನ್ನು ಮುಕ್ತಗೊಳಿಸಲು ಬಾರದೆ..
ನಾನು ನಿನ್ನವಳಾದೆ ನೀನು ನನ್ನವನಾದೆ
ಹೀಗೆ ದೂರದಿಂದಲೆ..