ಅರೆ ಎಲ್ಲಿ ಹೋದನೀತ
ಲೋಕ ಕಾಯುತ್ತಿದೆ
ಎಂಥ ಗೈರು ಹಾಜರಿ!
ಕೆಲವೊಮ್ಮೆ ಬರುತ್ತಾನೆ
ದಂಡು ದಳವಾಯಿ ಸಮೇತ
ಆ ಆರ್ಭಟಕ್ಕೆ ಲೋಕ ದಿಗಿಲು
ಸಾಕು ಮಹರಾಯ ಹೊರಡು
ಎಷ್ಟು ಬಿನ್ನಹ ಪ್ರಾರ್ಥನೆ
ಊಹೂಂ ಬರೀ ಕಿವುಡು

ಸೂರ್ಯ ದೇವನ ನಗು
ಜೀವಸಂಕುಲ ತತ್ತರ
ಮಾರುತ ಕಳೆದು ಹೋಗಿದ್ದಾನೆ
ಬದಲಾಯಿತೆ ನೀರದ ನಕ್ಷೆ
ಬೇವು ಬೆಲ್ಲ ನಿಜವೇ
ಯುಗಾದಿ ಪುರುಷ
ನಿನ್ನೊಂದಿಗೆ ಕರೆದು ತಾ
ವರುಣನನ್ನೂ ಮಹಾರಾಯ

ಮಾಸ್ತರಿಕೆ ಮರೆತನೇ ಭಗವಂತ
ಲೋಕದ ನಂಬಿಕೆ ಹಾಗಂತ
ಹಾಜರಿ ಕರೆಯೋ ದೇವಾ
ಬಂದಾರು ಮೇಘ ಪವನರು
ಇಲ್ಲ ಅಭಿಷೇಕ ನಿನಗೂ ವರ್ಜ್ಯ