ಕಾಟನ್ ಕ್ಯಾಂಡಿ

ಪಿಂಕ್ ಬಣ್ಣ, ಚಿಕ್ಕ ಪ್ಲಾಸ್ಟಿಕ್‌ನಲ್ಲಿ ಹಾಕಿ,
ಕಟ್ಟಿಗೆಯ ತುದಿಯಲ್ಲಿ ಸಿಕ್ಕಿಸಿ
ದೂರದಿಂದ ಏಷ್ಟೊಂದು ಗಾಳಿಪಟಗಳು

ಮಕ್ಕಳ ಸಮ್ಮೋಹನಗೊಳಿಸುವ
ಬಾಯಲ್ಲಿಟ್ಟರೆ ಕರಗುವ ಸಿಹಿ
ಹತ್ತು ರೂ ಮಾತ್ರ

ತಂದೆ- ತಾಯಿ ಕಾಡಿ ಬೇಡಿ
ಖರೀದಿಸುವ ಹೂ ಮಕ್ಕಳು
ಇಷ್ಟಿಷ್ಟೇ ಮುರಿದು ತಿನ್ನುವಾಗ ಸ್ವರ್ಗವೇ!

ಈ ಕಾಟನ್ ಕ್ಯಾಂಡಿಯ ಮಹೋನ್ನತ
ಆಸೆಯಿಂದ ಊಟ ಮಾಡುವ, ಶಾಲೆ
ಬರುವ, ಹೋಂವರ್ಕ್ ಮಾಡುವ ಮಕ್ಕಳೆಷ್ಟೋ!

ರಕ್ತ ಸುಡುವ ಬಿಸಿಲು, ಊರುರು
ತಿರುಗಲು ಬಸ್ ಹತ್ತುವವನ
ಇಡೀ ಕುಟುಂಬ ಕಾಟನ್ ಕ್ಯಾಂಡಿ ಮೇಲೆ

ಬೆವರಲಿ ಜವಾಬ್ದಾರಿ ನಿರ್ವಹಣೆ
ಮಾರುವವ ಕೊಟ್ಟಿದ್ದಾನೆಯೇ
ತನ್ನದೇ ಮಕ್ಕಳಿಗೆ ಕ್ಯಾಂಡಿಗಳನ್ನ?

ಇತರ ಮಕ್ಕಳಂತೆ ಚಪ್ಪರಿಸಿದ್ದಾರೆಯೇ
ಈತನ ಮಕ್ಕಳು? ಸಿಹಿ ಹಂಚುವವನ
ಬಾಳು ಇರಲಿ ಸಿಹಿಯಾಗಿಯೇ!!