ರಜಾ ದಿನಗಳಲ್ಲಿ ಊಟ ಮಾಡುತ್ತಿದ್ದುದೆ ಕಡಿಮೆ. ಒಮ್ಮೊಮ್ಮೆ ಇದೇ ಕಾರಣಕ್ಕೆ ಏಟುಗಳು ಬೀಳುತ್ತಿದ್ದವು. ನಾನು ಅದರಲ್ಲಿ ಸೈಕಲ್ ಚಕ್ರವನ್ನು ದಾನ ಮಾಡುತ್ತಿದ್ದೆ. ಇದಕ್ಕೆ ಕಾರಣವು ಇತ್ತು. ಪಕ್ಕದ ಬರಗೂರು ನಮ್ಮಮ್ಮನ ತವರು ಮನೆಯಾದ್ದರಿಂದ ನಮ್ಮ ಮಾವ ಬಳಸಿ ಬಿಸಾಡಿದ ಚಕ್ರಗಳನ್ನು ಸುಲಭವಾಗಿ ತಂದುಕೊಡುತ್ತಿದ್ದ. ಒಂದೊಂದ್ಸಾರಿ ನಮ್ಮ ಚಿಕ್ಕಪ್ಪನೂ ತಂದುಕೊಟ್ಟಿದ್ದು ಉಂಟು. ಅವು ಈಗಾಗಲೆ ಬಳಸಿ ಸವಕಲಾಗಿ ಕಡ್ಡಿಯಿಂದ ತಳ್ಳುವಾಗ ಬಳುಕುತ್ತಿದ್ದವು. ಅಂತಹ ಚಕ್ರಗಳನ್ನು ಓಡಿಸುವವನು ಅಪಹಾಸ್ಯಕ್ಕೀಡಾಗುತ್ತಿದ್ದುದೆ ಹೆಚ್ಚು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತೇಳನೆಯ ಕಂತು ನಿಮ್ಮ ಓದಿಗೆ

ಪ್ರತಿವರ್ಷವೂ ಓದುವುದಕ್ಕೆಂದೆ ಕನಿಷ್ಟ ಹತ್ತು ದಿನ ರಜೆ ಬಿಡುತ್ತಿದ್ದರು. ನಾವು ಓದುವುದಕ್ಕೆಂದೆ ಒಂದು ಸ್ಥಳವನ್ನು ಗುರ್ತುಮಾಡುತ್ತಿದ್ದೆವು. ಏಳನೆಯ ತರಗತಿ ವಾರ್ಷಿಕ ಪರೀಕ್ಷೆ ಇತ್ತು. ಆಗ ಗೆಳೆಯನ ಬಾವಿಯ ಹತ್ತಿರ ಓದುವುದೆಂದು ತೀರ್ಮಾನಿಸಿದ್ದೆವು. ಅವರ ಬಾವಿಯ ಕಟ್ಟೆಯ ಪಕ್ಕದಲ್ಲಿ ಒಂದು ಕೆಂಕೆಸ್ರು ಮರ ಇತ್ತು ಅದರಡಿಯಲ್ಲಿ ನಾಲ್ವರು ಗೆಳೆಯರು ಸೇರಿದೆವು. ಒಂದಷ್ಟೊತ್ತು ಓದುವುದು ನಂತರ ಮರಕೋತಿ ಆಟ ಆಡುವುದು. ಹೀಗೆಯೆ ಸಾಗುತ್ತಿತ್ತು. ಇನ್ನೊಂದಿನ ಇನ್ನೊಬ್ಬ ಸ್ನೇಹಿತನ ಕಣದಲ್ಲಿ ಸೇರುತ್ತಿದ್ದೆವು. ಅಲ್ಲಿಯೂ ಅಷ್ಟೆ ಆಟ ಪಾಠ ಎರಡು ಜೊತೆ ಜೊತೆಯಾಗಿಯೇ ಸಾಗುತ್ತಿದ್ದವು. ನನ್ನ ಗೆಳೆಯನ ತಂದೆ ಆಕಸ್ಮಿಕವಾಗಿ ಬಂದಾಗ ನಾವೆಲ್ಲ ಕ್ರಿಕೆಟ್ ಆಡುತ್ತಿದ್ದೆವು ಎಂದು ನೆನಪು. ನಮ್ಮನ್ನೆಲ್ಲ ಚೆನ್ನಾಗಿ ಬೈದು ಇನ್ಮೇಲೆ ಇಲ್ಲಿಗೆ ಬರಬಾರ್ದು, ನಿಮ್ಮ ಮನೆಗೆ ನೀವು ಓದ್ಕೊಳ್ಳಿ ಅಂದು ಕಳಿಸಿದ್ರು. ಆದರೆ ನಾವು ಸುಮ್ನಿರಬೇಕಲ್ಲ. ಇನ್ನೊಂದು ದಿನ ಊರಿನ ಹೊರಭಾಗದಲ್ಲಿರುವ ಒಂದು ಹುಣಸೇಮರವನ್ನು ಹತ್ತಿ ಅಲ್ಲಿ ಕುಳಿತು ಓದಿಕೊಳ್ತಿದ್ವಿ. ಇಷ್ಟೆಲ್ಲ ಸಾಹಸ ಯಾಕಂದ್ರೆ ನಾವು ಎಷ್ಟು ಓದಿದ್ವಿ ಅನ್ನೋದ್ಕಿಂತ ಇವ್ರು ಯಂಗೆಲ್ಲಾ ಓದ್ತಾ ಅವ್ರೆ ಅಂದ್ಕೊಳ್ಳಿ ಅನ್ನೊ ಆಸೆನೆ ಅವಾಗಿರ್ತಿತ್ತು. ಹಾಗಂತ ಪರೀಕ್ಷೆಯಲ್ಲಿ ಅಂಕ ಬರ್ತಿರ್ಲಿಲ್ವ ಅಂದ್ರೆ. ಇಲ್ಲ ಅಲ್ಲೂ ಜಾಸ್ತಿ ಅಂಕಗಳೆ ಬರ್ತಾಇದ್ವು. ಅದು ಬೇರೆಯವರಿಗೂ ಆಶ್ಚರ್ಯ ಉಂಟುಮಾಡ್ತಾ ಇತ್ತು. ಅವರು ಮತ್ತೆ ಮುಂದಿನ ವರ್ಷ ನಮ್ಮ ಜೊತೆಗೆ ಓದ್ಕೊಳ್ಳೋಕೆ ಬರ್ತಾ ಇದ್ರು. ಒಂದೊಂದ್ಸಾರಿ ರಾತ್ರಿಯೆಲ್ಲಾ ನಿದ್ದೆಕಟ್ಟಿ ಓದ್ತಾ ಇದ್ವು ಬೇರೆಯವರಿಗೂ ಆಶ್ಚರ್ಯ ಆಗ್ಬೇಕು ಹಾಗೆ ಓದ್ತಾ ಇದ್ವು. ನಮಗೆಲ್ಲ ಎಂತಹ ಸಮೃದ್ಧ ಬಾಲ್ಯ ಇತ್ತು ಅನಿಸುತ್ತೆ. ಇವಾಗಿನ ಮಕ್ಕಳು ಇಂತಹ ಸನ್ನಿವೇಶಗಳು ನೆನಪುಗಳು ಸಿಗೋದು ಕಷ್ಟ ಅನ್ಸುತ್ತೆ. ಪರೀಕ್ಷೆ ಮುಗಿದ್ರೆ ಸಾಕು ಬೇಸಿಗೆಯ ರಜಾದ ಮಜವೆ ಬೇರೆಯಾಗಿರುತ್ತಿತ್ತು.

ನಮ್ಮ ಬಾಲ್ಯದಲ್ಲಿ ಬೇಸಿಗೆ ಬಂತೆಂದರೆ ಸಾಕು, ಮನೆಯಲ್ಲಿ ಇವರಿಗ್ಯಾಕೆ ರಜೆ ಬಿಡ್ತಾರೋ ಸುಮ್ನೆ ಇಸ್ಕೂಲ್ ಇದ್ದರೆ ಚೆನ್ನಾಗಿರುತ್ತೆ ಅನ್ನೋವಷ್ಟು ಕಾಟ ಅವರಿಗೆ ಕೊಡ್ತಾಇದ್ದೆವು. ಅದರಲ್ಲಿಯೂ ಈಗಾಗಲೆ ಉಪಯೋಗಿಸಿದ ಸೈಕಲ್‌ನ ಟೈರ್‌ಗಳನ್ನು ಉರುಳಿಸಿಕೊಂಡು ಊರನ್ನೆಲ್ಲ ಸುತ್ತುವುದೆಂದರೆ ನಮಗೆ ಖುಷಿ. ಯಾವಾಗಲೂ ಖಾಯಂ ಆಗಿ ಮನೆಯಲ್ಲಿ ಸೈಕಲ್ ಚಕ್ರಗಳಿರುತ್ತಿದ್ದವು. ನಂದೆ ಮೊದಲು ಹೋಗ್ಬೇಕು ಅಂತ ಓಡಿಸಿಕೊಂಡು ಹೋಗಿ ಅವರ ಚಕ್ರಗಳನ್ನು ಬೀಳಿಸುತ್ತಿದ್ದುದೆ ಹೆಚ್ಚು. ಮನೆಯಲ್ಲಿ ಯಾವಾಗ್ಲೂ ಬೈತಾಯಿದ್ರು. ಯಾಕೊ ಅಂಗೆ ನಾಯ್ ತಿರುಗ್ದಂಗೆ ತಿರುಕ್ತೀಯಾ, ಕೂಳಾದ್ರು ತಿಂದ್ಹೋಗು ಅಂತ ಅಜ್ಜಿ ಹೇಳುತ್ತಿದ್ಲು. ಒಂದೊಂದ್ಸಾರಿ ಅಮ್ಮ ಹೇಳುತ್ತಿದ್ಲು. ಇವ್ಯಾವುದು ನಮಗೆ ಕಿವಿಗೆ ಬೀಳುತ್ತಿರಲಿಲ್ಲ. ನಮ್ಮದು ಓಡಬೇಕು ಅಷ್ಟೆ ಅನ್ನೊ ಮನೋಭಾವ.

ರಜಾ ದಿನಗಳಲ್ಲಿ ಊಟ ಮಾಡುತ್ತಿದ್ದುದೆ ಕಡಿಮೆ. ಒಮ್ಮೊಮ್ಮೆ ಇದೇ ಕಾರಣಕ್ಕೆ ಏಟುಗಳು ಬೀಳುತ್ತಿದ್ದವು. ನಾನು ಅದರಲ್ಲಿ ಸೈಕಲ್ ಚಕ್ರವನ್ನು ದಾನ ಮಾಡುತ್ತಿದ್ದೆ. ಇದಕ್ಕೆ ಕಾರಣವು ಇತ್ತು. ಪಕ್ಕದ ಬರಗೂರು ನಮ್ಮಮ್ಮನ ತವರು ಮನೆಯಾದ್ದರಿಂದ ನಮ್ಮ ಮಾವ ಬಳಸಿ ಬಿಸಾಡಿದ ಚಕ್ರಗಳನ್ನು ಸುಲಭವಾಗಿ ತಂದುಕೊಡುತ್ತಿದ್ದ. ಒಂದೊಂದ್ಸಾರಿ ನಮ್ಮ ಚಿಕ್ಕಪ್ಪನೂ ತಂದುಕೊಟ್ಟಿದ್ದು ಉಂಟು. ಅವು ಈಗಾಗಲೆ ಬಳಸಿ ಸವಕಲಾಗಿ ಕಡ್ಡಿಯಿಂದ ತಳ್ಳುವಾಗ ಬಳುಕುತ್ತಿದ್ದವು. ಅಂತಹ ಚಕ್ರಗಳನ್ನು ಓಡಿಸುವವನು ಅಪಹಾಸ್ಯಕ್ಕೀಡಾಗುತ್ತಿದ್ದುದೆ ಹೆಚ್ಚು. ನಾನಂತೂ ಸಣಕಲು ದೇಹದವನು. ಹಾಗಾಗಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅನ್ನೋ ಹಾಗೆ ನನ್ನ್ಮೇಲೆ ಜಗಳ ಜಾಸ್ತಿ ಮಾಡುತ್ತಿದ್ದುದೆ ಹೆಚ್ಚು. ಬಹುಶಃ ನನ್ನೊಳಗೊಂದು ಕೀಳರಿಮೆ ಬೆಳೆಯಲು ಅದು ಕಾರಣವಾಗಿತ್ತು ಅನಿಸುತ್ತದೆ. ಆದರೂ ನಾನು ಜಗಳ ಮಾಡುತ್ತಿದ್ದೆ. ಒಮ್ಮೆ ಜಗಳ ಬಿದ್ದು ಎದುರಾಳಿ ನನ್ನ್ಮೇಲೆ ಕುಳಿತಾಗ ತಪ್ಪಿಸಿಕೊಳ್ಳಲೆಂದು ಕೊಸರಾಡಿ ಕರ್ಕೆ ಹುಲ್ಲಿನ ದಂಟು ಕೊಯ್ಕಂಡು ಆದ ಗಾಯದ ಗುರುತು ಈಗಲೂ ಇದೆ. ಆದರೆ ಅವುಗಳನ್ನೆಲ್ಲ ಒಂದೆರಡು ದಿನಗಳಲ್ಲಿ ಮರೆತು ಬಿಡುತ್ತಿದ್ದೆ. ನಾನು ದೊಡ್ಡವನಾದಂತೆ ನನ್ನನ್ನು ಅದು ಒಂಟಿತನಕ್ಕೆ ದೂಡಿತು ಅನಿಸುತ್ತದೆ. ಆದರೆ ಓದುವ ಹುಚ್ಚನ್ನು ಹಿಡಿಸಿತು.

ಈಗ ಚಕ್ರದ ಕತೆಗೆ ಬರೋಣ. ಅದೊಂದು ದಿನ ಟಿ ವಿ ಎಸ್ ಕಂಪನಿಯ ಎಕ್ಸ್ ಎಲ್ ಸ್ಕೂಟರಿನ ಹಳೆಯ ಚಕ್ರವನ್ನು ನಮ್ಮ ಮಾವ ಕೈಯಲ್ಲಿಡಿದು ಬಂದ. ನಮಗೆ ಎಲ್ಲಿಲ್ಲದ ಖುಷಿ. ಅದಕ್ಕಾಗಿ ನಾನು ತಮ್ಮ ಜಗಳವಾಡುತ್ತಿದ್ದುದೆ ಹೆಚ್ಚು. ಯಾಕೆಂದರೆ ಅದನ್ನು ಓಡಿಸುವಾಗ ಎಲ್ಲರೂ ವಿಶೇಷವಾಗಿ ನಮ್ಮನ್ನೆ ನೋಡುತ್ತಿದ್ದದ್ದು ಕಾರಣವಾಗಿತ್ತು. ಅದಕ್ಕೆ ಹಿಂದೆ ತಳ್ಳುವುದಕ್ಕೆ ‘ತಳ್ಳೊಕೋಲು’ ವಿಶೇಷವಾಗಿ ಮಾಡಿಕೊಳ್ಳುತ್ತಿದ್ದೆ. ಕೆಲವೊಮ್ಮೆ ಆ ಕೋಲಿಗೆ ಬಣ್ಣ ಬಳಿದದ್ದು ಇದೆ. ಇಡೀ ಊರೆ ಸುತ್ತುಹಾಕುತ್ತಿದ್ದೆವು. ರಜಾ ಬಂತೆಂದರೆ ಮೂಲೆಯಲ್ಲಿದ್ದ ಸೈಕಲ್ ಚಕ್ರಗಳು ಬೀದಿಗಿಳಿದು ನಾ ಮುಂದು ತಾ ಮುಂದು ಎನ್ನುವಂತೆ ರಸ್ತೆಗಳಲ್ಲಿ ಓಡುತ್ತಿದ್ದವು. ಟಿ ವಿ ಎಸ್ ಎಕ್ಸ್ ಎಲ್ ಸ್ಕೂಟ್ರಿನ ಚಕ್ರವಂತು ಬಹಳ ವರ್ಷಗಳು ನನ್ನಲ್ಲಿತ್ತು. ಇದರ ಜೊತೆಗೆ ಬೇರೆ ಇತರೆ ಆಟಗಳಂತೂ ಇದ್ದೆ ಇರುತ್ತಿದ್ದವು. ಬಹುಶಃ ಇದೆ ಸೈಕಲ್ ತುಳಿಯುವ ಕನಸಿಗೂ ದಾರಿಯಾಯಿತು ಅನಿಸುತ್ತದೆ.

ಆಗ ಆರೇಳು ತರಗತಿಯಲ್ಲಿ ಓದುತ್ತಿದ್ದೆ ಅನಿಸುತ್ತದೆ. ಊರಿನಲ್ಲಿ ಬೆರಳೆಣಿಕೆಯ ಸೈಕಲ್ ಅಷ್ಟೆ ಇದ್ದವು. ಆಗ ಸೈಕಲ್ ಇದ್ದರೆ ಅವನೆ ಒಂದಿಷ್ಟು ಸ್ಥಿತಿವಂತ ಎಂಬಂತಿತ್ತು. ಬೇರೆ ಊರಿಗೆ ಹೋಗುವಾಗ ಸಿನಿಮಾಕ್ಕೆ ಹೋಗುವಾಗ ಸೈಕಲ್ ಕೇಳಿ ಇಸ್ಕೊಂಡು ಹೋಗುತ್ತಿದ್ದರು. ನಮ್ಮಪ್ಪನು ಅಂಗಡಿ ಇಟ್ಟಿದ್ದರಿಂದ ಸೈಕಲ್ ಖರೀದಿಸಬೇಕೆಂದು ಅದು ಲಗೇಜು ತರೋದಕ್ಕೆ ಸಹಾಯವಾಗುತ್ತೆ ಅಂದುಕೊಂಡು ಹೊಸ ಸೈಕಲ್ ಆಗಿನ ಕಾಲಕ್ಕೆ ದುಬಾರಿ ಅನ್ನೋ ಕಾರಣಕ್ಕೆ ಸೆಕೆಂಡ್ ಹ್ಯಾಂಡ್ ಸೈಕಲ್ ತಗೋಬೇಕೆಂದು ಹುಡುಕುತ್ತಿರುವಾಗಲೆ ಪಕ್ಕದ ಕರಿರಾಮನಹಳ್ಳಿ ಶಾಲೆಗೆ ಹೋಗುತ್ತಿದ್ದ ಶರಣಪ್ಪ ಮೇಷ್ಟ್ರು ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದವನು. ಆದರೆ ಬಹಳ ವಿಷಯಗಳನ್ನು ತಿಳಿದುಕೊಂಡಿದ್ದವನು. ಸಂಸ್ಕೃತದ ಶ್ಲೋಕಗಳನ್ನು ಹೇಳುತ್ತಿದ್ದ ಮಹಾಭಾರತದ ಪಾತ್ರಗಳ ಬಗ್ಗೆ ನಿರರ್ಗಳವಾಗಿ ಮಾತಾಡುತ್ತಿದ್ದ ಮೇಷ್ಟ್ರು. ಕುಡಿತದ ಚಟ ಅವನನ್ನು ಬಿಡದೆ ಕಾಡುತ್ತಿತ್ತು. ಆತ ಸೈಕಲ್ ಕೊಡುವುದನ್ನು ತಿಳಿದುಕೊಂಡ ಅಪ್ಪ ಅದನ್ನು ಕೊಂಡುಕೊಂಡ ಅದು ಕಬ್ಬಿಣದ ಕ್ಯಾರಿಯರ್ ಇದ್ದ ಸೈಕಲ್ ಅದನ್ನು ತುಳಿಯುವಾಗ ಲಡ ಲಡ ಎಂದು ಶಬ್ದ ಮಾಡುತ್ತಿತ್ತು. ಅದನ್ನು ನೋಡಿ ನನ್ನ ಸ್ನೇಹಿತರು ನಗುತ್ತಿದ್ದರು. ನನಗೆ ಅವಮಾನವಾದಂತಾಗುತ್ತಿತ್ತು. ಆದ್ದರಿಂದ ಕ್ಯಾರಿಯರ್ ನ ಸ್ಟ್ರಿಂಗ್ ನ್ನು ದಾರದಿಂದ ಬಿಗಿಯಾಗಿ ಕಟ್ಟಿ ತುಳಿಯಲು ಪ್ರಾರಂಭ ಮಾಡಿದ್ದೆ. ಅದರಲ್ಲಿ ಎಷ್ಟು ಬಾರಿ ಬಿದ್ದೆನೊ ಅಂತೂ ಸೈಕಲ್ ತುಳಿಯುವುದನ್ನು ಚೆನ್ನಾಗಿ ಕಲ್ತಿದ್ದೆ. ಆದರೆ ವಿಜಯ ದಶಮಿಯ ಜಂಬೂ ಸವಾರಿ ದಿನ ಶರಣಪ್ಪ ಮೇಷ್ಟ್ರು ಎಂದು ತಿಳಿದು ನಾಯಿಯೊಂದು ಅಟ್ಟಿಸಿಕೊಂಡು ಬಂದು ಬಿದ್ದು ಗಾಯ ಮಾಡಿಕೊಂಡಿದ್ದೆ. ನಂತರ ಒಂದೆರಡು ತಿಂಗಳಲ್ಲಿ ಸೈಕಲ್ ನ್ನು ಮಾರಿದರು. ಶರಣಪ್ಪ ಮೇಷ್ಟ್ರು ನಾಯಿ ಕೆಣಕಿದ್ದು ನಾಯಿಗೆ ಸೈಕಲ್ ಶಬ್ದ ಕೇಳಿಸಿ ನನ್ನನ್ನು ಅಟ್ಟಿಸಿಕೊಂಡು ಬರಲು ಕಾರಣವಾಗಿತ್ತು ಎಂಬುದು ನಂತರವಷ್ಟೇ ತಿಳಿಯಿತು. ಅಂತೂ ಸೈಕಲ್ ತುಳಿಯುವ ಕನಸು ನನಸಾಗಿತ್ತು.

ಒಂದು ವರ್ಷಕಳೆಯಿತು ನಾನಾಗ ಏಳನೆಯ ತರಗತಿಯಲ್ಲಿ ಓದುತ್ತಿದ್ದೆ. ನಮ್ಮಪ್ಪನಿಗೆ ಒಂದಿಷ್ಟು ವ್ಯಾಪಾರದಲ್ಲಿ ಲಾಭವಾಗುತ್ತ ಹೋದಂತೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡ ಇಟ್ಟಿಗೆ ಹಾಕಿಸಿ ಮಾರುವುದಕ್ಕೆ ಪ್ರಾರಂಭ ಮಾಡಿದರು. ಅಂಗಡಿ ವ್ಯಾಪಾರ ಓಡಾಟ ಜಾಸ್ತಿಯಾಯಿತು ಒಂದು ಎನ್ ಜಿ ಒ ದಲ್ಲಿ ಸಂಚಾಲಕರಾಗಿ ಸೇರಿಕೊಂಡರು. ಹಾಗಾಗಿ ಓಡಾಡುವುದಕ್ಕೆ ಹೊಸದಾಗಿ ಮಾರ್ಕೆಟ್‌ಗೆ ಬಂದಿದ್ದ ಟಿ ವಿ ಎಸ್ ಚಾಂಪ್ ಸ್ಕೂಟರ್ ಅನ್ನು ತರುವುದೆಂದು ತೀರ್ಮಾನಿಸಿ ತಂದರು. ಅದು ನಮ್ಮೂರಿಗೆ ತಂದಿದ್ದ ಹೊಸ ಬ್ರಾಂಡ್ ವಾಹನವಾಗಿತ್ತು. ಅಪ್ಪ ಅದರಲ್ಲಿ ಜಬರದಸ್ತಾಗಿಯೆ ಓಡಾಡುತ್ತಿದ್ದ ನನಗೂ ಅದನ್ನು ಓಡಿಸಬೇಕೆಂಬ ಆಸೆ ಬಹಳವಿತ್ತು. ಆದರೆ ಅದನ್ನು ಓಡಿಸುವ ಶಕ್ತಿ ನಿನಗಿಲ್ಲ ಅನ್ನುತ್ತಿದ್ದರು. ಅದನ್ನು ನೋಡಿದಾಗಲೆಲ್ಲಾ ನಾನೆಂದು ಇದನ್ನು ಓಡಿಸುವೆ ಅಂದುಕೊಳ್ಳುತ್ತಿದ್ದೆ. ಆದರೆ ನನ್ನ ಕೈಗೆ ಅದನ್ನು ಕೊಡುತ್ತಿರಲಿಲ್ಲ. ನನ್ನ ಬಲವಂತಕ್ಕೆ ಒಂದೆರಡು ಬಾರಿ ನಮ್ಮಪ್ಪ ಜೊತೆಯಲ್ಲಿಯೆ ಕರೆದುಕೊಂಡು ಹೋಗಿ ನಿಧಾನಕ್ಕೆ ಅದನ್ನು ಓಡಿಸುವುದನ್ನು ಕಲಿಸಿದ. ಅದರಲ್ಲಿಯೆ ಇಟ್ಟಿಗೆ ಹಾಕುವವರಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದೆ. ನಂತರ ಅದರಲ್ಲಿ ಪ್ರಾವಿಣ್ಯತೆ ಪಡೆದೆ. ಓರಗೆಯವರೊಂದಿಗೆ ಓಡಿಸಿ ಬೀಗುತ್ತಿದ್ದೆ. ಕಲಿಕೆ ಎಂಥವರ ಎದೆಯಲ್ಲೂ ಆತ್ಮವಿಶ್ವಾಸ ಮೂಡಿಸುತ್ತದೆ. ಕೀಳರಿಮೆಯ ಜಾಗದಲ್ಲಿ ಆತ್ಮವಿಶ್ವಾಸ ಜಮೆಯಾಗಿತ್ತು.

(ಮುಂದುವರಿಯುವುದು)