ನಮ್ಮ ದಲಿತ ಕವಿ ಸಿದ್ದಲಿಂಗಯ್ಯ ಅವರ ಆತ್ಮಕತೆ ಓದಬೇಕಾದರೆ ಈ ಎರಡೂ ಸ್ಥಳಗಳ ನೆನಪು ಮತ್ತೆ ಬರುವ ಹಾಗಾಯಿತು. ಸಿದ್ದಲಿಂಗಯ್ಯ ಓದಿದ್ದು ನಾನು ಓದಿದ ಶಾಲೆ ಮತ್ತು ಅವರು ಗೋಪಾಲಸ್ವಾಮಿ ಅಯ್ಯರ್ ಹಾಸ್ಟೆಲ್‌ನಲ್ಲಿ ಇದ್ದವರು! ಹಾಸ್ಯಬ್ರಹ್ಮ ಮತ್ತು ಕೊರವಂಜಿ ಅಪರಂಜಿ ಟ್ರಸ್ಟ್ ಎರಡೂ ಸೇರಿ ನಡೆಸುತ್ತಿದ್ದ ಹಾಸ್ಯೋತ್ಸವ ಸಮಾರಂಭಕ್ಕೆ ಶ್ರೀ ಸಿದ್ದಲಿಂಗಯ್ಯ ಬಂದಿದ್ದಾಗ ಅವರಿಗೆ ನಾನು ಈ ಶಾಲೆ ನೆನಪಿಸಿ ಅಲ್ಲೇ ನಾನೂ ಓದಿದ್ದು ಅಂತ ಹೇಳಿದೆ. ಅವರು ನನಗಿಂತ ಜ್ಯೂನಿಯರ್. ಅಯ್ಯೋ ಹೌದಾ ಸಾರ್ ನಮ್ಮ ಅಣ್ಣ ನೀವು ಅಂತ ಕೈಕುಲುಕಿ ತಬ್ಬಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ತೇಳನೆಯ ಕಂತು ನಿಮ್ಮ ಓದಿಗೆ

ರಾಜಾಜಿನಗರದ ಎಂಬತ್ತು ಅಡಿ ರಸ್ತೆಯಲ್ಲಿ ಉತ್ತರಕ್ಕೆ ಮುಖಮಾಡಿ ನಿಂತರೆ (ಅಂದರೆ ಯಶವಂತ ಪುರದ ಕಡೆ ಮುಖ)ಎಡಭಾಗದಲ್ಲಿ ಏನೇನು ಬರುತ್ತೆ ಅಂತ ಹಿಂದೆ ಹೇಳಿದ ನೆನಪು. ಈಗ ಅದೇ ಜಾಗದಲ್ಲಿ ನಿಂತು ಬಲಗಡೆ ಏನು ಬರುತ್ತೆ ಅಂತ ನೋಡಿದರೆ….

ಪ್ರಕಾಶ ನಗರಕ್ಕೆ ಅಂಟಿದ ಹಾಗೆ ಶ್ರೀರಾಮಪುರ. ಇವೆರಡರ ನಡುವೆ ಎರಪ್ಪ ಬ್ಲಾಕ್, ಲಕ್ಷ್ಮೀನಾರಾಯಣ ಪುರ. ಈಗ ಇವೆರೆಡೂ ಜನರ ನೆನಪಿನ ತೆರೆಗೆ ಸರಿದಿವೆ. ಲಕ್ಷ್ಮೀನಾರಾಯಣ ಪುರದ ಬಲ ಭಾಗಕ್ಕೆ ಒಂದು ಕಡಿಮೆ ಅಗಲದ ರಸ್ತೆ. ಇದು ನೇರ ರಾಮಚಂದ್ರಪುರ ಸೇರುವಂತೆ ಇತ್ತು. ಅದಕ್ಕೆ ಮೊದಲು ಒಂದು ಪುಟ್ಟ ಸರ್ಕಲ್ ಇತ್ತು, ಈಗಲೂ ಇದೆ. ಅದು ಬಂಡಿರೆಡ್ಡಿ ಸರ್ಕಲ್ ಅಂತ. ಬಂಡಿರೆಡ್ಡಿ ಯಾರು ಅಂತ ನಮಗೇ ಆಗ ಗೊತ್ತಿರಲಿಲ್ಲ. ಬಹುಶಃ ಈಗಿನ ಪೀಳಿಗೆಗೂ ಸಹ ಗೊತ್ತಿರಲಾರದು. ಬಂಡಿರೆಡ್ಡಿ ಸರ್ಕಲ್ ಆಗ ಅಷ್ಟು ಫೇಮಸ್ ಅಲ್ಲ. ಬಂಡಿರೆಡ್ಡಿ ಸರ್ಕಲ್ ವಿಷಯಕ್ಕೆ ಬರುವ ಮೊದಲು ಕೊಂಚ ಟೋಪೋಗ್ರಫಿ, ಈ ಏರಿಯಾದನ್ನು ಹೇಳಿಬಿಡುತ್ತೇನೆ. ಪ್ರಕಾಶ ನಗರದಿಂದ ಶ್ರಿರಾಮಪುರಕ್ಕೆ ಒಂದು ರಸ್ತೆ. ಈ ರಸ್ತೆಯ ಅರ್ಧಭಾಗದಲ್ಲಿ ಒಂದು ಐದಾರು ಅಡಿ ಅಗಲದ ಮೋರಿ, ಅದರಲ್ಲಿ ಗಲೀಜು ನೀರು ಹರಿಯುತ್ತಿತ್ತು. ಈ ನೀರು ಮರಿಯಪ್ಪನ ಪಾಳ್ಯದ ಕಡೆಯಿಂದ ಹರಿದು ಬಂದು ಇಲ್ಲಿಂದ ಮುಂದೆ ಶ್ರೀರಾಮಚಂದ್ರಪುರ ಹೀಗೆ ಅದರ ಪಯಣ. ಪ್ರಕಾಶ ನಗರದ ಈ ಕಾಲುವೆಗೆ ಸೈಜ್ ಕಲ್ಲು ಚಪ್ಪಡಿ ಜೋಡಿಸಿ ಮಧ್ಯೆ ಮಧ್ಯೆ ಇಟ್ಟಿದ್ದರು. ಅದರ ಮೇಲೆ ಹಾರಿಕೊಂಡು ಜಂಪ್ ಮಾಡಿಕೊಂಡು ನಾವು ಶಾಲೆಗೆ ಹೋಗುತ್ತಿದ್ದೆವು. ಪ್ರಕಾಶ ನಗರ ಆಗ ಇನ್ನೂ ಹುಟ್ಟಿತ್ತು ಮತ್ತು ಜನ ಸಾಂದ್ರತೆ ತುಂಬಾ ಕಮ್ಮಿ. ಗಂಡಸರು ಮಿಲ್ ಹಾಗೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹೆಂಗಸರು ರಾಜಾಜಿನಗರದ ಮನೆಗಳಿಗೆ ಮನೆ ಕೆಲಸಕ್ಕೆ ಬರೋರು. ಮಧ್ಯಾಹ್ನ ಒಂದೇ ಅಲ್ಲದೆ ಮಿಕ್ಕ ಸಮಯದಲ್ಲಿ ಸಹ ಮನೆ ಮುಂದೆ ಹೆಂಗಸರು ಇಳಿ ಜಾರಿನ ಮಣೆ ಇಟ್ಟುಕೊಂಡು ಊದಿನ ಕಡ್ಡಿ ಹೊಸೆಯುತ್ತಾ ಇದ್ದರು. ಅದು ಅವರಿಗೆ ಒಂದು ಇನ್ ಕಮ್ ಸಪ್ಲಿಮೆಂಟ್. ರಾಜಾಜಿನಗರದ ನಮ್ಮ ಹೆಂಗಸರಿಗೆ ಇನ್ ಕಮ್ ಸಪ್ಲಿಮೆಂಟ್ ಅನ್ನುವುದು ಅಷ್ಟಾಗಿ ತಿಳಿಯದು! ಅಲ್ಲದೆ ಊದು ಬತ್ತಿ ಹೊಸೆಯುವುದು ಸ್ಟೇಟಸ್‌ಗೆ ಕಡಿಮೆ ಎನ್ನುವ ಮನೋಭಾವ ಇತ್ತೇನೋ, ತಿಳಿಯದು. ಜತೆಗೆ ಸ್ವಲ್ಪ ಓದಿದವರು, ಸ್ಟೇಟಸ್ ಕಾಡುತ್ತಿತ್ತಾ ತಿಳಿಯದು. ಯಾರೂ ಈ ಊದು ಬತ್ತಿ ಹೊಸೆಯುವುದು ಮಾಡುತ್ತಿರಲಿಲ್ಲ. ಸ್ವಲ್ಪ ಚಳಿ ಬಿಟ್ಟವರು ಪುಟ್ಟ ಅಂಗಡಿ ಇಟ್ಟರೆ ಓದಿದ ಹುಡುಗಿಯರು ಮೇಡಂ ಕೆಲಸ ಮಾಡುತ್ತಿದ್ದರು.

ಆಗ ತಾನೇ ಬೆಂಗಳೂರಿನಲ್ಲಿ ಸಾರ್ವಜನಿಕ ಉದ್ದಿಮೆಗಳು ಶುರು ಆಗಿ ಹೇರಳವಾದ ಉದ್ಯೋಗ ಅವಕಾಶ ಇದ್ದರೂ ನಮ್ಮ ಮಹಿಳೆಯರಿಗೆ ಅದರ ಅರಿವು ಇರಲಿಲ್ಲ. ಮನೆಯಲ್ಲಿನ ಹಿರಿಯರು ಸಹ ಅಷ್ಟು ಗಮನ ಹರಿಸಿದ ಹಾಗೆ ಕಾಣೆ. ಸರ್ಕಾರ ಸಹ ಈ ಬಗ್ಗೆ ಅಂತಹ ಉತ್ತೇಜಕ ಹೆಜ್ಜೆ ಇಟ್ಟಿರಲಿಲ್ಲ. ಅಂದರೆ ಜಾಹೀರಾತು ನೀಡಿ ಸ್ಥಳೀಯ ಉದ್ಯೋಗ ಶಕ್ತಿಗೆ ಚಾಲನೆ ಕೊಟ್ಟಿರಲಿಲ್ಲ. ಅದರಿಂದಾಗಿ ನಮ್ಮ ಹೆಣ್ಣು ಮಕ್ಕಳಿಗೆ ಸಿಗಬೇಕಿದ್ದ ವಿಪುಲ ಅವಕಾಶಗಳು ನೆರೆ ರಾಜ್ಯದವರ ಪಾಲಾಯಿತು. ಪಾಲಾಯಿತು ಏನು ಕಸಿದುಕೊಂಡರು ಎಂದೇ ಹೇಳಬೇಕು. ಅಲ್ಲಿನ ಒಬ್ಬ ಇಲ್ಲಿ ಆಯಕಟ್ಟಿನ ಸ್ಥಳದಲ್ಲಿ ಇರುತ್ತಿದ್ದ. ಇಲ್ಲಿನವರ ಅವಕಾಶಗಳನ್ನು ಅಲ್ಲಿನವರಿಗೆ ಧಾರೆ ಎರೆಯುತ್ತಿದ್ದ ಮತ್ತು ಸಾಧ್ಯವಾದಷ್ಟು ಕಾಸೂ ಮಾಡುತ್ತಿದ್ದ. ಆಗಿನ್ನೂ ಸರೋಜಿನಿ ಮಹಿಷಿ ವರದಿ ಕಲ್ಪನೆಯೇ ಇರಲಿಲ್ಲ. ಇಡೀ ಭಾರತ ನಮ್ಮದು ಹೊರಗಿನವರು ಇಲ್ಲಿ ಉದ್ಯೋಗಕ್ಕೆ ಬರ್ತಾರಾ ಬರಲಿ ಎನ್ನುವ ಉದಾರ ಮನೋಭಾವ ನಮ್ಮಲ್ಲಿ ಆಳವಾಗಿ ಬೇರು ಬಿಟ್ಟಿತ್ತು. ಈ ಬೇರು ತಮಾಷೆ ಅಂದರೆ ನಮ್ಮ ಮೈಸೂರಿನವರಲ್ಲಿ ಮಾತ್ರ ಆಳವಾಗಿ ಇದ್ದದ್ದು! ಸ್ವಾತಂತ್ರ್ಯಾನಂತರ ಆರಂಭವಾದ ಸಾರ್ವಜನಿಕ ಉದ್ದಿಮೆಗಳನ್ನು ಗಮನಿಸಿ. ಮೊದಲ ಹತ್ತು ವರ್ಷ ಹೇರಳವಾಗಿ ಹೊರಗಿನವರು ಕೆಲಸ ಗಿಟ್ಟಿಸಿಕೊಂಡರು. ಸ್ಥಳೀಯರನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಯಿತು. ಸ್ಥಳೀಯ ಭಾಷೆ ಬರಬೇಕು ಎನ್ನುವ ಕನಿಷ್ಠ requirement ಸಹ ಇರಲಿಲ್ಲ. ಸ್ಥಳೀಯರಿಗೆ ತಮ್ಮ ಅವಕಾಶ ತಪ್ಪುತ್ತಿದೆ ಎನ್ನುವ ಬಗ್ಗೆ ಕೊಂಚವೂ ಸಂಶಯ ಬರದ ಹಾಗೆ ಈ ಕೆಲಸ ನಡೆಯಿತು. ಹೇರಳವಾಗಿ ಇಲ್ಲಿ ಮಾನವ ಸಂಪನ್ಮೂಲ, ಕೌಶಲ್ಯ ಇವೆಲ್ಲ ಇದ್ದರೂ ವಂಚಿತರಾದವರು ಸ್ಥಳೀಯರು. ಆಗ ಹೀಗೆ ಬಂದು ಇಲ್ಲಿ ಸೇರಿಕೊಂಡ ಸುಮಾರು ಜನ ಇಂದು ಒಳ್ಳೇ ಆಸ್ತಿ ಪಾಸ್ತಿ ಮಾಡಿಕೊಂಡು ನಗರದ ಹೃದಯ ಭಾಗದಲ್ಲಿ ತಂಪು ಜೀವನ ನಡೆಸುತ್ತಾ ಹಾಯಾಗಿದ್ದಾರೆ. ಅವಕಾಶ ವಂಚಿತ ಸ್ಥಳೀಯರಿಗೆ ತಮಗಾಗುತ್ತಿರುವ ಮೋಸದ ಅರಿವು ಮೂಡಿದ್ದು ತುಂಬಾ ನಿಧಾನವಾಗಿ. ಇದಕ್ಕಾಗಿ ದೊಡ್ಡ ಹೋರಾಟವೇ ಬೇಕಾಯಿತು. ಕನ್ನಡ ರಕ್ಷಣೆಗೆ ಕನ್ನಡಿಗರ ಹಿತ ಕಾಪಾಡಲು ಸಂಘ ಸಂಸ್ಥೆಗಳೂ ಕೈ ಜೋಡಿಸಿದವು. ಎಂಬತ್ತರ ದಶಕದ ಮಧ್ಯದಲ್ಲಿ ಒಂದು ದೊಡ್ಡ ಹೋರಾಟವೇ ನಡೆಯಿತು. ಕತೆ ಎಲ್ಲಿಂದ ಎಲ್ಲಿಗೋ ಹೋಗುತ್ತಿದೆ. ನಮಗಾದ ಮೋಸ ಅನ್ಯಾಯ ನೆನೆದಾಗ ರೋಷ ಉಕ್ಕುತ್ತದೆ. ಈ ಬಗ್ಗೆ ಮುಂದೆ ಯಾವಾಗಲಾದರೂ ಹೇಳುತ್ತೇನೆ, ಇದು ಹಾಗಿರಲಿ.

ಪ್ರಕಾಶ ನಗರದ ಕೊಚ್ಚೆ ಕಾಲುವೆ ಹಾರಿ ಬಂದರೆ ಶ್ರೀರಾಮ ಪುರದ ಅಂಚು. ಹಾಗೇ ಅದೇ ರಸ್ತೆಯಲ್ಲಿ ಮುಂದುವರೆದರೆ ಮೊದಲಿಗೆ ಶ್ರೀರಾಮ ಪುರದ ಪೋಲೀಸ್ ಸ್ಟೇಶನ್. ಅದರ ಪಕ್ಕ ಸರ್ಕಾರೀ ಬಾಲಕಿಯರ ಶಾಲೆ. ಇದರ ಮುಂದೆ ಒಂದು ಸಣ್ಣ ಮೈದಾನ. ಮೈದಾನಕ್ಕೆ ಮುಖ ಮಾಡಿದ ಹಾಗೆ ಶ್ರೀ ಗೋಪಾಲಸ್ವಾಮಿ ಅಯ್ಯರ್ ಹಾಸ್ಟೆಲ್. ಈ ಹಾಸ್ಟೆಲ್ ಪರಿಶಿಷ್ಟ ಜನಾಂಗದವರಿಗೆ ಅಂತ ಗೋಪಾಲಸ್ವಾಮಿ ಅಯ್ಯರ್ ಎನ್ನುವ ಸಮಾಜ ಸೇವಕರು ಆರಂಭಿಸಿದ್ದು ಅಂತ ಎಷ್ಟೋ ವರ್ಷದ ನಂತರ ಎಲ್ಲೋ ಓದಿದ್ದೆ. ಈಚೆಗೆ ಅಲ್ಲಿ ಹಾಸ್ಟೆಲ್ ಇದೆಯೋ ಇಲ್ಲವೋ ತಿಳಿಯದು. ಈ ಹಾಸ್ಟೆಲ್ ಹಿಂಭಾಗದಲ್ಲಿ ಪೂರ್ವದ ರಸ್ತೆಗೆ ಮುಖಮಾಡಿ ಶ್ರೀರಾಮ ಪುರದ ಸರ್ಕಾರೀ ಬಾಲಕರ ಮಾಧ್ಯಮಿಕ ಶಾಲೆ! ರಾಜಾಜಿನಗರದಲ್ಲಿ ಸರ್ಕಾರೀ ಮಾಧ್ಯಮಿಕ ಶಾಲೆ ಆಗ ಇರಲಿಲ್ಲ, ಅದರಿಂದ ನಾನು ನಮ್ಮ ಮೂರನೇ ಅಣ್ಣ ಶಾಮು ಇಲ್ಲಿಯೇ ಓದಿದ್ದು. ಈ ಸ್ಕೂಲಿನ ಎದುರು ಒಂದು ದೊಡ್ಡ ತಗ್ಗು ಪ್ರದೇಶ. ಈ ತಗ್ಗಿನ ಪ್ರದೇಶದ ತುಂಬಾ ಪುಟ್ಟ ಪುಟ್ಟ ಜೋಪಡಿಗಳು. ತೆಂಗಿನ ಗರಿ ಅಥವಾ ಜಿಂಕ್ ಶೀಟ್ ಹೊದಿಸಿದ ಮಣ್ಣಿನ ಗೋಡೆಯ ಪುಟ್ಟ ಪುಟ್ಟ ಅಸಂಖ್ಯಾತ ಮನೆಗಳು ಅಥವಾ ಗೂಡುಗಳು. ಇದರ ಅಂದರೆ ಈ ದೊಡ್ಡ ಹಳ್ಳದ ಹೆಸರು ಸ್ವತಂತ್ರ ಪಾಳ್ಯ.

ಹೆಚ್ಚಾಗಿ ತಮಿಳರ ವಾಸ ಇಲ್ಲಿ. ಮನೆಗಳ ಮೇಲೆ ಆಗಿನ ಚೆನ್ನೈನ ರಾಜಕೀಯ ಪಕ್ಷಗಳ ಬಾವುಟಗಳು, ದೊಡ್ಡವು, ಚಿಕ್ಕವು. ಯಾವಾಗಲೂ ತಮಿಳು ಹಾಡುಗಳು ಸ್ಪೀಕರ್ ಮೂಲಕ ರಸ್ತೆಗೆ ರಾಚುತ್ತಿತ್ತು. ತಮಿಳರ ತಾಣ ಆದ್ದರಿಂದ ಪ್ರತಿದಿನ ಗಟ್ಟಿಯಾದ ಜೋರು ಮಾತುಗಳು ಮತ್ತು ಕೆಲವು ಸಲ ನಮ್ಮೆದುರು ಹೊಡೆದಾಟ ಸಹ ಆಗುತ್ತಿತ್ತು. ಎಷ್ಟೋ ವರ್ಷಗಳ ನಂತರ ಇದು ಬೆಂಗಳೂರಿನ ಒಂದು ದೊಡ್ಡ ಸ್ಲಂ ಮತ್ತು ಇಲ್ಲಿ ಕಳ್ಳಭಟ್ಟಿ ತಯಾರಿಸುತ್ತಾರೆ ಎಂದು ಕೇಳಿದ್ದೆ. ಪೇಪರಿನಲ್ಲಿ ಸಹ ಈ ಬಗ್ಗೆ ಆಗಾಗ ಪುಟ್ಟ ಸುದ್ದಿ ಬರುತ್ತಿತ್ತು. ಆಗಿನ ರಾಜಾಜಿನಗರದ ಹೋಲಿಕೆ ಮಾಡಿದರೆ ಸ್ವತಂತ್ರಪಾಳ್ಯದಲ್ಲಿ ಅದು ಹೇಗೆ ಮನುಷ್ಯರು ವಾಸ ಮಾಡುತ್ತಾರೆ ಅನಿಸುತ್ತಿತ್ತು. ರಾಜಾಜಿನಗರ ವಿಶಾಲ ಅನಿಸುತ್ತಿತ್ತು ಮತ್ತು ರಾಜಾಜಿನಗರದ ಒಂದು ಸಣ್ಣ ಮನೆ ಸ್ವತಂತ್ರ ಪಾಳ್ಯದಲ್ಲಿ ಎಂಟೋ ಹತ್ತೋ ಮನೆಗಳು ಆಗುವ ಹಾಗಿತ್ತು. ಸ್ವತಂತ್ರಪಾಳ್ಯದಲ್ಲಿ ಒಬ್ಬರೇ ಒಬ್ಬರು ಓಡಾಡುವ ಹಾಗಿದ್ದ ತುಂಬಾ ಕಿರಿದಾದ ಓಣಿ. ಕೆಲವು ಓಣಿಯಲ್ಲಿ ಕಪ್ಪು ಬಣ್ಣದ ಹೆಪ್ಪು ಗಟ್ಟಿದ ಮಾನವ ಮಲ, ಅಸಹ್ಯ ವಾಸನೆ ಮತ್ತು ಉಸಿರು ಆಡಿದರೆ ಬಾಯಲ್ಲಿ ನೂರು ನೊಣ ಹೊಕ್ಕುವ ಭಯ! ಇದು ಒಂದೆರೆಡು ಬಾರಿ ನಾನು ಈ ಹಳ್ಳದಲ್ಲಿ ಒಬ್ಬ ಸ್ಕೂಲ್ ಗೆಳೆಯನ ಗೂಡಿಗೆ ಹೋದಾಗ ಅನುಭವಿಸಿದ್ದು. ನಂತರ ಎಷ್ಟೋ ವರ್ಷಗಳ ನಂತರ ಮಲ್ಲೇಶ್ವರ, ಸದಾಶಿವ ನಗರದ ಮನೆಗಳನ್ನು ನೋಡಿದಾಗ ರಾಜಾಜಿನಗರದ ಮನೆ ಪಿಚ್ ಅನಿಸಿತ್ತು! ಚಿಕ್ಕಂದಿನ ನೆನಪು, ಸುಮಾರು ಆರೂವರೆ ದಶಕದ ಹಿಂದಿನ ನೆನಪು, ಈಗಲೂ ಗಾಢ.

ರಾಜಾಜಿನಗರದಲ್ಲಿ ಸರ್ಕಾರೀ ಮಿಡಲ್ ಸ್ಕೂಲ್ ಇರಲಿಲ್ಲ, ಶ್ರೀರಾಮ ಪುರದ ಸರ್ಕಾರೀ ಮಾಧ್ಯಮಿಕ ಶಾಲೆ ಆಗ ರಾಜಾಜಿನಗರದ ವಿದ್ಯಾರ್ಥಿಗಳಿಗೂ ಸೀಟು ಕೊಡಬೇಕಿತ್ತು. ಹಾಗಾಗಿ ನಾವು ಕೆಳ ಮಧ್ಯಮ ವರ್ಗದ ಹಾಗೂ ಖಾಸಗಿ ಶಾಲೆಯಲ್ಲಿ ಹಣ ತೆರಲು ಆಗದವರು ಇಲ್ಲಿನ ಶ್ರೀ ರಾಮಪುರ ಸರ್ಕಾರೀ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು. ರಾಜಾಜಿನಗರದಲ್ಲಿ ಆಗಲೇ ಎರಡೋ ಮೂರೋ ಖಾಸಗಿ ಶಾಲೆಗಳು ತೆರೆದಿದ್ದರು. ಅಲ್ಲಿನ ವಿದ್ಯಾರ್ಥಿಗಳು ಅಂದರೆ ಆರ್ಥಿಕವಾಗಿ ಕೊಂಚ ನಮಗಿನ್ನ ಉತ್ತಮ ಸ್ಥಿತಿಯ ಸರ್ಕಾರೀ ಉದ್ಯೋಗಿಗಳ ಮಕ್ಕಳು. ಆಗ ನಮಗೆ ಈ ಸೋಷಿಯಲ್ ಲೆವೆಲ್ ಗೊತ್ತಿರಲಿಲ್ಲ(ಹಾಗೆ ನೋಡಿದರೆ ನನಗೆ ಈಗಲೂ ಅದರ ಅರಿವು ಇಲ್ಲ. ನಮ್ಮಲ್ಲಿನ ಉನ್ನತ ಸ್ಥಾನದ ಅಧಿಕಾರಿಗಳ ಬಳಿ ಸರಿ ಸಮಾನವಾಗಿ ಮಾತು ಆಡಿದ್ದೇನೆ ಮತ್ತು ಕೆಲವರು ಮುಖ ಸಿಂಡರಿಸಿದ್ದೂ ಇದೆ! ಅವರ ಮುಖ ಇರೋದೇ ಹಾಗೆ, some manufacturing defect ಎಂದು ಮಿಕ್ಕವರ ಎದುರು ಹಾಸ್ಯ ಮಾಡಿದ್ದೇನೆ!) ಅದರಿಂದ ಎಲ್ಲರ ಜತೆ ನಮ್ಮ ಸೇರುವಿಕೆ ನಡೀತಾ ಇತ್ತು. ಬಡವರು ಮತ್ತು ಬಲ್ಲಿದರು ವ್ಯತ್ಯಾಸ ಗೊತ್ತೇ ಇರಲಿಲ್ಲ ಅನ್ನಬೇಕು. ಅಪ್ಪರ್ ಕ್ಲಾಸಿನ ಯಾರೂ ನಮಗೆ ಗೊತ್ತಿಲ್ಲದೇ ಇದ್ದದ್ದರಿಂದ ಈ ವ್ಯತ್ಯಾಸ ನನ್ನ ಅರಿವಿಗೆ ಬಂದಿರಲಾರದು ಎಂದು ನಾನು ಬೆಳೆದ ನಂತರ, ಕಾರ್ಲ್ ಮಾರ್ಕ್ಸ್ ನಮ್ಮ ಜೀವನದಲ್ಲಿ ಎಂಟ್ರಿ ಕೊಟ್ಟ ಮೇಲೆ ವರ್ಗ ಸಂಘರ್ಷಗಳ ಬಗ್ಗೆ ಅರಿವು ಮೂಡಿಸಿಕೊಳ್ಳ ಬೇಕಾದರೆ ಈ ಅನಿಸಿಕೆ ಮನಸಿಗೆ ಬಂದಿರಬಹುದು.

ಸ್ವತಂತ್ರ ಪಾಳ್ಯ ಮನಸಿನಲ್ಲಿ ಆಳವಾಗಿ ಇರಲು ಮತ್ತೊಂದು ಕಾರಣ ಅಂದರೆ ನಾವು ಪುಟ್ಟ ಹುಡುಗರು ಆಶ್ಚರ್ಯದಿಂದ ಅಲ್ಲಿನ ಆಗು ಹೋಗುಗಳನ್ನು ನೋಡುತ್ತಾ ನಿಂತಿರುತ್ತಿದ್ದುದು. ಸ್ಕೂಲಿನ ಮುಂಬಾಗಿಲು ದಾಟಿ ಆಚೆ ಬಂದರೆ ಎದುರೇ ಈ ಸ್ವತಂತ್ರಪಾಳ್ಯ ಎನ್ನುವ ನಿಗೂಢ ಲೋಕ. ಬೆಳಗಿನ ಹೊತ್ತು ಪ್ರತಿ ಗೂಡಿನಿಂದಲೂ ಏಳುತ್ತಿದ್ದ ಬಿಳೀ ಹೊಗೆ, ಕಂಬಳಿ ಹೊದ್ದು ಬೆಳಗಿನ ಬಿಸಿಲು ಕಾಯುತ್ತಾ ಗುಡಿಸಲ ಮುಂದೆ ಕೂತಿರುತ್ತಿದ್ದ ವಯಸ್ಸಾದ ಗಂಡಸರು ಮತ್ತು ಹೆಂಗಸರು. ಅವರ ನಡುವೆ ನಡೆಯುತ್ತಿದ್ದ ಏರು ದನಿಯ ತಮಿಳು ಮಾತುಗಳು.

ಅಲ್ಲಲ್ಲಿ ನಿಂತು ಬೀಡಿ ಸೇದುತ್ತಾ ಮಾತಿನಲ್ಲಿ ತೊಡಗಿದ್ದ ವಯಸ್ಕರು. ಗುಂಡಿ ಹೊತ್ತು ನೀರು ಒಯ್ಯುತ್ತಿರುವ ಹೆಂಗಸರು, ಕಂಕುಳಲ್ಲಿ ಮಗುವನ್ನು ಹೊತ್ತು ಸರಸರ ಸಾಗುತ್ತಿರುವ ತಾಯಂದಿರು…., ಕೈಯಲ್ಲಿ ಅಲ್ಯುಮಿನಿಯಂ ಚೆಂಬು ಹಿಡಿದು ಸಾರ್ವಜನಿಕ ಶೌಚಾಲಯದ ಮುಂದೆ ಕ್ಯೂ ನಿಂತ ಗಂಡಸರ ಗುಂಪು ಒಂದು ಕಡೆ, ಇದೇ ಕೆಲಸಕ್ಕೆ ಮತ್ತೊಂದು ಕಡೆ ಕ್ಯೂ ನಿಂತ ಹೆಂಗಸರು…. ಇದು ಬೆಳ್ಳಂ ಬೆಳಿಗ್ಗೆ ಸುಮಾರು ಸಲ ನಾವು ಕಾಣುತ್ತಿದ್ದ ನೋಟ. ಅದೇ ಸಮಯದಲ್ಲಿ ತಿಂಗಳಿಗೆ ಒಮ್ಮೆ ಅಥವಾ ಎರಡು ಸಲ ಪೋಲೀಸ್ ವ್ಯಾನ್ ಬಂದು ಸ್ಕೂಲಿನ ಮುಂದೆ ನಿಲ್ಲುತ್ತಿತ್ತು. ಅದರಿಂದ ಆಗಿನ ಪೋಲೀಸ್ ಯೂನಿಫಾರ್ಮ್ ತೊಟ್ಟ ಪೋಲೀಸರು ದಡದಡ ಇಳಿಯುತ್ತಿದ್ದರು. ಮೊಣಕಾಲಿಗೆ ಒಂದೆರೆಡು ಇಂಚು ಕೆಲವು ಸಲ ಗೇಣು ಮೇಲಿದ್ದ ದೊಗಲೆ ಚೆಡ್ಡಿ, ಅದಕ್ಕೆ ಬಿಗಿಯಾಗಿ ಸುತ್ತಿದ್ದ ಅಂಗೈ ಅಗಲದ ಬೆಲ್ಟ್ ಅಥವಾ ಬೆಲ್ಟ್ ಮಾದರಿಯ ಪಟ್ಟಿ, ಕಾಲಿಗೆ ಮೊಣಕಾಲಿನ ತನಕ ಸುತ್ತಿರುತ್ತಿದ್ದ ಹಸಿರು ಪಟ್ಟಿ, ಕಾಲಿಗೆ ಕರಿಯ ದಪ್ಪನೆ ಬೂಟು, ಚೆಡ್ಡಿಯ ಮೇಲೆ ತೊಟ್ಟಿರುತ್ತಿದ್ದ ಪೂರ್ತಿ ತೋಳಿನ ಮಧ್ಯೆ ಓಪನ್ ಇರುತ್ತಿದ್ದ ಹಿತ್ತಾಳೆ ಗುಂಡಿಗಳ ಜುಬ್ಬಾ ಮಾದರಿಯ ಶರ್ಟು, ತಲೆ ಮೇಲೆ ಟೋಪಿ, ಶರ್ಟ್‌ ಮೇಲೆ ಎರಡು ಜೇಬು, ಸೈಡಿಗೆ ಎರಡು ಜೇಬು, ಈ ಶರಟು ಮೇಲೆ ಬೆಲ್ಟು. ತಲೆ ಮೇಲೆ ಟೋಪಿ ಅದೂ ಸಹ ಪೋಲೀಸ್‌ಗೆ ವಿಶಿಷ್ಟ ಅನ್ನುವಂತಹುದು. ಶರ್ಟ್‌ನ ಎದೆಯ ಮೇಲಿನ ಜೇಬಿನಲ್ಲಿ ಒಂದು ಪೋಲೀಸ್ ವಿಷಲ್ ಇದಕ್ಕೆ ಕಟ್ಟಿದ್ದ ಜಡೆ ಮಾದರಿಯ ಹಗ್ಗ ಭುಜದ ಮೇಲಿನ ಫ್ಲಾಪ್‌ನಲ್ಲಿ ತೂರಿಸಿ ಇರುತ್ತಿತ್ತು. ಮುಖದ ತುಂಬಾ ದಪ್ಪನೆ ಮೀಸೆ. ಆಗ ಮೀಸೆ ಇಲ್ಲದ ಪೋಲೀಸರೇ ಇಲ್ಲ ಮತ್ತು ಗಡ್ಡ ಬಿಟ್ಟಿದ್ದ ಪೋಲೀಸರೂ ಇಲ್ಲ. ಒಬ್ಬೊಬ್ಬ ಪೋಲೀಸು ಮೂರು ನಾಲ್ಕು ಮಾಮೂಲಿ ಜನರಶ್ಟು ದಪ್ಪ. ಅದರಿಂದ ನೋಡಿದ ಕೂಡಲೇ ಹೆದರಿಕೆ ಹುಟ್ಟುವ ಹಾಗೆ ಅವರ ಆಕಾರ.

ಪೋಲೀಸ್ ವ್ಯಾನ್ ಬಂದು ಸ್ಕೂಲಿನ ಮುಂದೆ ನಿಲ್ಲುತ್ತಿತ್ತು ಅಂದೆ. ವ್ಯಾನ್ ನಿಂತ ಕೂಡಲೇ ಅದರಿಂದ ದಬ ಡಬಾ ಎಂದು ಪೋಲೀಸರು ಇಳಿಯುತ್ತಿದ್ದರು. ಇಬ್ಬರು ದೊಣ್ಣೆ ಹಿಡಿದುಕೊಂಡು ವ್ಯಾನ್ ಬಳಿ ನಿಲ್ಲುತ್ತಿದ್ದರು. ಮಿಕ್ಕವರು ಸೀದಾ ಹಳ್ಳದಲ್ಲಿ ಇಳಿದು ಗಲ್ಲಿ ಗಲ್ಲಿ ನುಗ್ಗುತ್ತಿದ್ದರು. ಇವುಗಳ ನಡುವೆ ಪೋಲೀಸರ ವಿಶಿಷ್ಟವಾದ ಕಿವಿಗಡಚಿಕ್ಕುವ ವಿಷಲ್ ಶಬ್ದಗಳು. ಕೊಂಚ ಹೊತ್ತಿನಲ್ಲೇ ನಿಕ್ಕರು ಬರೀ ನಿಕ್ಕರು ತೊಟ್ಟ ಗಂಡಸರಿಗೆ ಲಾಠಿಯಿಂದ ಬಾರಿಸುತ್ತಾ ಎಳೆದು ತರುತ್ತಿದ್ದರು. ಅವರ ಹಿಂದೆ ಗೊಳೋ ಎಂದು ಓಡಿ ಬರುತ್ತಿದ್ದ ಹೆಂಗಸರು. ತಮಿಳಿನಲ್ಲಿ ಅವರೇನೂ ಮಾಡಿಲ್ಲ, ಬಿಟ್ಬಿಡಿ ಎಂದು ಗೋಗರೆಯುತ್ತಾ ಬರುತ್ತಿದ್ದ ಹೆಂಗಸರು… ಎಲ್ಲಾ ಒಂದು ಅರ್ಧ ಗಂಟೆಯಲ್ಲಿ ಮುಗಿಯುತಿತ್ತು. ಪೋಲೀಸ್ ವ್ಯಾನ್ ಕೆಲವರನ್ನು ಹತ್ತಿಸಿಕೊಂಡು ಹೋದ ನಂತರ ಅಲ್ಲೇ ಹೆಂಗಸರು ಗಂಡಸರು ಸೇರಿ ಚರ್ಚೆ ಮಾಡುತ್ತಿದ್ದರು. ಪೋಲೀಸರು ಹಿಡಿದುಕೊಂಡು ಹೋದವರನ್ನು ಬಿಡಿಸಿಕೊಂಡು ಬರಲು ಗುಂಪು ರೆಡಿ ಆಗುತ್ತಿತ್ತು.

ಆಗಾಗ್ಗೆ ಹೀಗೆ ಪೋಲೀಸರು ಬಂದು ದೊಡ್ಡ ದೊಡ್ಡ ಮಣ್ಣಿನ ಮಡಿಕೆ ಒಯ್ಯುತ್ತಿದ್ದರು. ಇದು ಕಳ್ಳಭಟ್ಟಿ ಎಂದು ನಮಗಿಂತ ಕೊಂಚ ದೊಡ್ಡವರು ಮಾತಾಡಿಕೊಳ್ಳುತ್ತಿದ್ದರು. ಇದರ ತಯಾರಿಕೆ ಬಗ್ಗೆ ಹುಡುಗರು ತಮಗೆ ಗೊತ್ತಿದ್ದ ವಿವರಗಳನ್ನೂ ಹೇಳುತ್ತಿದ್ದರು. ಅದನ್ನು ತಯಾರಿಸುವ ಬಗ್ಗೆ ಆಗಲೇ ನಮಗೆ ತಿಳುವಳಿಕೆ ಇತ್ತು! ಈ ಸ್ವತಂತ್ರ ಪಾಳ್ಯ ಮುಂದೆ ಆಗಾಗ ಹಲವು ಕಾರಣಗಳಿಗೆ ಫೇಮಸ್ ಆಗಿ ನ್ಯೂಸ್ ಪೇಪರುಗಳಲ್ಲಿ ಸಣ್ಣ ಪುಟ್ಟ ಸುದ್ದಿಯಾಗಿ ಬರುತ್ತಿತ್ತು. 1981ರಲ್ಲಿ ಅಂತ ಕಾಣುತ್ತೆ. ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ಕಳ್ಳಭಟ್ಟಿ ಸೇವಿಸಿ ಸುಮಾರು ಮುನ್ನೂರ ಐವತ್ತು ಜನ ಜೀವ ತೆತ್ತರು. ಆಗ ಸಹ ಈ ಪಾಳ್ಯದ ಹೆಸರು ಬಂದಿತ್ತು. ಬೆಂಗಳೂರಿನ ಅಂಡರ್ ವರ್ಲ್ಡ್ ಗೆ ರೌಡಿಗಳು ಮತ್ತು ಪುಡಿ ರೌಡಿಗಳು ಸರಬರಾಜು ಆಗುವುದು ಇಂತಹ ಸ್ಲಂ ಗಳಿಂದ ಎಂದು ನಮ್ಮ ಸಮಾಜ ಶಾಸ್ತ್ರಿಗಳು ಹೇಳುತ್ತಾ ಬಂದಿದ್ದಾರೆ. ಸ್ಲಂ ಗಳು ಸಾಮಾಜಿಕ ಪಿಡುಗು ಎಂದು ಸರ್ಕಾರವು ಸಹ ನಂಬಿದೆ. ಸ್ಲಂ ಕ್ಲಿಯರೆನ್ಸ್ ಬೋರ್ಡ್ ಅಂದರೆ ಕೊಳಚೆ ನಿರ್ಮೂಲನಾ ಮಂಡಳಿ ಅಂತ ಒಂದು ಸರ್ಕಾರೀ ಅಂಗ ಸಂಸ್ಥೆ ಇದೆ. ಅದರ ಕಾರ್ಯವ್ಯಾಪ್ತಿ ಏನಿದೆಯೋ, ಒಟ್ಟಿನಲ್ಲಿ ಅತೃಪ್ತ ರಾಜಕಾರಣಿಗಳನ್ನು ಪೋಷಿಸಲು ಈ ಮಂಡಳಿಯ ಸದುಪಯೋಗ ಆಗುತ್ತಿದೆ! ಶ್ರೀರಾಮ ಪುರದ ರೌಡಿಗಳ ಬಗ್ಗೆ ಒಂದು ಕನ್ನಡ ಸಿನಿಮಾದಲ್ಲಿ ಕೆಲವು ಶಾಟ್ಸ್ ಇತ್ತಂತೆ. ಅದರ ಬಗ್ಗೆ ಸ್ಥಳೀಯರು ಶ್ರೀರಾಮ ಪುರವನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ ಅಂತ ಪತ್ರಿಕಾ ಹೇಳಿಕೆ ನೀಡಿದ್ದರು. ಸದರಿ ಸಿನಿಮಾ ನಾನು ನೋಡಿಲ್ಲ.

ಸ್ಕೂಲ್ ಬಗ್ಗೆ ಹೇಳುತ್ತಿದ್ದೆ. ಸಮಾಜ ಹಾಳಾಗಲು ನಮ್ಮ ರಾಜಕಾರಣಿಗಳು ಸಹ ದೊಡ್ಡ ಕಾರಣ ಎಂದು ಯೋಚನೆ ಬಂದಾಗ ನನ್ನಂತಹವರಿಗೆ ರಕ್ತ ಕುದಿಯುತ್ತದೆ. ಅದರಿಂದ ವಿಷಯ ಡೈವರ್ಟ್ ಆಗುತ್ತೆ. ಸ್ಕೂಲಿನ ಎಡಭಾಗದ ಒಂದು ರಸ್ತೆಯಲ್ಲಿ ಮತ್ತೊಂದು ಹಾಸ್ಟೆಲ್ ಇತ್ತು. ಅದು ಏ.ಕೆ. ಹಾಸ್ಟೆಲ್ ಎಂದು ಸ್ನೇಹಿತರು ಹೇಳುತ್ತಿದ್ದರು. ಗೋಪಾಲಸ್ವಾಮಿ ಅಯ್ಯರ್ ಹಾಸ್ಟೆಲ್ ಒಳ್ಳೆಯ ಕಟ್ಟಡದಲ್ಲಿದ್ದರೆ ಇದು ಯಾವುದೋ ಒಂದು ಮುರುಕಲು ಕಟ್ಟಡದಲ್ಲಿತ್ತು. ಅಲ್ಲಿ ನನಗೆ ನನ್ನ ಕ್ಲಾಸಿನ ಕೆಲವು ಗೆಳೆಯರು, ಜನಾರ್ದನ್ ಮತ್ತು ಶ್ರೀಕಂಠ ಸ್ವಾಮಿ ಹೆಸರಿನ ನನ್ನ ಗೆಳೆಯರು ಅಲ್ಲಿ ವಾಸಿಗಳು. ಅವರ ಜತೆ ಅವರ ರೂಮಿಗೆ ಹೋಗುತ್ತಿದ್ದೆ. ಇದು ನಾನು ಮಿಡಲ್ ಮೂರಕ್ಕೆ ಬಂದ ನಂತರ. ಮಿಡಲ್ ಎರಡರವರೆಗೆ ನನ್ನ ಅಣ್ಣ ಶಾಮೂ ನನ್ನ ಜತೆಯೇ ಇರುತ್ತಿದ್ದ. ಮೊದಲ ಎರಡು ವರ್ಷ ಅಣ್ಣನ ಸಂಗಡ ಕಳೆದ ದಿನಗಳ ಬಗ್ಗೆ ಆಮೇಲೆ ಹೇಳುತ್ತೇನೆ.

ಶಾಲೆಯಲ್ಲಿ ಫ್ರೀ ಶಿಪ್ ಅಂತ ಇತ್ತು. ಅದು ಯಾರಿಗೆ ಕೊಡಬೇಕು ಎಂದು ನಿರ್ಧರಿಸಲು ಎಂದು ತೋರುತ್ತದೆ, ಹೆಡ್ ಮೇಷ್ಟರು ಕ್ಲಾಸಿಗೆ ಬರೋರು. ಅವರು ಆಗಲೇ ತುಂಬಾ ವಯಸ್ಸು ಆಗಿದ್ದೋರು. ಪೇಟ ತೊಟ್ಟು ಫುಲ್ ಸೂಟ್‌ನಲ್ಲಿ ನಿಧಾನಕ್ಕೆ ಹೆಜ್ಜೆ ಇಟ್ಟು ಬರುತ್ತಿದ್ದರು. ಒಬ್ಬೊಬ್ಬರ ಹೆಸರು ಕೂಗಿ ಯಾವ ಜಾತಿ ಅಂತ ಕೇಳೋರು. ಹುಡುಗರು ನಿಂತು ಏ.ಕೆ ಸಾರ್, ಏ.ಕೆ ಸಾರ್, ಏ.ಕೆ ಸಾರ್ ಎಂದು ಕೂಗುವರು, ಮೇಷ್ಟರು ಅದನ್ನು ಬರೆದುಕೊಳ್ಳೋದು ….. ಹೀಗೆ ಎರಡು ದಿವಸ ನಡೆಯಿತು. ಈ ಏ.ಕೆ ಅಂದರೆ ಏನು ಅನ್ನುವ ಕುತೂಹಲ ಹುಟ್ಟಬೇಕೇ… ಜನಾರ್ದನ್ ಬಳಿ ಹೋದೆ. ಏನೋ ಏಕೆ ಅಂದರೇನು ಅಂದೆ.

ಅದು ನಮ್ಮ ಜಾಥಿ ಕನ್ಲಾ ಅಂದ. ಹಂಗಂದ್ರೆ… ಅಂದೆ. ಬಾಮಿಂಸ್, ಗೌಡ್ರು, ಸೆಟ್ರು ಇಲ್ಲವಾ ಹಾಗೆ ನಮ್ದೂ ಅಂದ. ಅಲ್ಲವೋ ಜಾತಿ ಅಂತ ಗೊತ್ತಾಯ್ತು. ಏಕೆ ಅಂದರೇನು ಅಂತ.. ಅಂತ ನನ್ನ ಅಜ್ಞಾನ ತೋರಿಸಿದೆ.

ಏಕೆ ಅಂದರೆ ಆದಿ ಕರ್ನಾಟಕ ಅಂತ ಅದು ನಮ್ಮ ಜಾತಿ… ಅಂತ ವಿವರಿಸಿದ. ಈ ತರಹದ ಒಂದು ಜಾತಿ ಇದೆ ಅಂತ ಅವತ್ತು ಗೊತ್ತಾಯಿತು. ಆಮೇಲೆ ಈ ಏಕೆ ಹೆಸರು ನಾನು ಕೇಳಿದ್ದು ಎಷ್ಟೋ ವರ್ಷಗಳ ನಂತರ. ಈಚೆಗೆ ಈ ಏ.ಕೆ. ಅನ್ನುವ ಹೆಸರನ್ನು ಕೇಳಿಲ್ಲ.

(ಕವಿ ಸಿದ್ದಲಿಂಗಯ್ಯ)

ಶ್ರೀರಾಮ ಪುರದ ಶಾಲೆ ಮತ್ತು ಗೋಪಾಲಸ್ವಾಮಿ ಅಯ್ಯರ್ ಹಾಸ್ಟೆಲ್ ಇವುಗಳನ್ನು ನಾನು ಸುಮಾರು ವರ್ಷ ಮರೆತೇ ಬಿಟ್ಟಿದ್ದೆ. ನಮ್ಮ ದಲಿತ ಕವಿ ಸಿದ್ದಲಿಂಗಯ್ಯ ಅವರ ಆತ್ಮಕತೆ ಓದಬೇಕಾದರೆ ಈ ಎರಡೂ ಸ್ಥಳಗಳ ನೆನಪು ಮತ್ತೆ ಬರುವ ಹಾಗಾಯಿತು. ಸಿದ್ದಲಿಂಗಯ್ಯ ಓದಿದ್ದು ನಾನು ಓದಿದ ಶಾಲೆ ಮತ್ತು ಅವರು ಗೋಪಾಲಸ್ವಾಮಿ ಅಯ್ಯರ್ ಹಾಸ್ಟೆಲ್‌ನಲ್ಲಿ ಇದ್ದವರು! ಹಾಸ್ಯಬ್ರಹ್ಮ ಮತ್ತು ಕೊರವಂಜಿ ಅಪರಂಜಿ ಟ್ರಸ್ಟ್ ಎರಡೂ ಸೇರಿ ನಡೆಸುತ್ತಿದ್ದ ಹಾಸ್ಯೋತ್ಸವ ಸಮಾರಂಭಕ್ಕೆ ಶ್ರೀ ಸಿದ್ದಲಿಂಗಯ್ಯ ಬಂದಿದ್ದಾಗ ಅವರಿಗೆ ನಾನು ಈ ಶಾಲೆ ನೆನಪಿಸಿ ಅಲ್ಲೇ ನಾನೂ ಓದಿದ್ದು ಅಂತ ಹೇಳಿದೆ. ಅವರು ನನಗಿಂತ ಜ್ಯೂನಿಯರ್. ಅಯ್ಯೋ ಹೌದಾ ಸಾರ್ ನಮ್ಮ ಅಣ್ಣ ನೀವು ಅಂತ ಕೈಕುಲುಕಿ ತಬ್ಬಿದ್ದರು.

ಹಾಗೇ ನನ್ನ ಗೆಳೆಯ ಎಂ ಎಸ್ ರಾಘವನ್ (RBI ಮಾಜಿ ಅಧಿಕಾರಿ) ನನ್ನ ಹಾಗೆ ಇದೇ ಸ್ಕೂಲು ಮತ್ತು ನನ್ನ ಕ್ಲಾಸು. ಅಲ್ಲದೇ ಖ್ಯಾತ ಹಾಸ್ಯ ಭಾಷಣಕಾರ ವೈ ವಿ ಗುಂಡೂರಾವ್ (ನಬಾರ್ಡ್ ನ ನಿವೃತ್ತ ಅಧಿಕಾರಿ) ಸಹ ನನ್ನ ಕ್ಲಾಸಿನವರು! ಅಂದರೆ ಸರ್ಕಾರೀ ಶಾಲೆ ಎಂತಹ ಪ್ರತಿಭೆಗಳಿಗೆ ನೀರು ಎರೆದಿದೆ ನೋಡಿ. ನನಗೆ ತಿಳಿಯದ ಇನ್ನೂ ಎಷ್ಟೋ ವಿಖ್ಯಾತರನ್ನು ಶಾಲೆ ತಯಾರಿಸಿರಬಹುದು!

ನಾವು ಕೆಳ ಮಧ್ಯಮ ವರ್ಗದ ಹಾಗೂ ಖಾಸಗಿ ಶಾಲೆಯಲ್ಲಿ ಹಣ ತೆರಲು ಆಗದವರು ಇಲ್ಲಿನ ಶ್ರೀ ರಾಮಪುರ ಸರ್ಕಾರೀ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು. ರಾಜಾಜಿನಗರದಲ್ಲಿ ಆಗಲೇ ಎರಡೋ ಮೂರೋ ಖಾಸಗಿ ಶಾಲೆಗಳು ತೆರೆದಿದ್ದರು. ಅಲ್ಲಿನ ವಿದ್ಯಾರ್ಥಿಗಳು ಅಂದರೆ ಆರ್ಥಿಕವಾಗಿ ಕೊಂಚ ನಮಗಿನ್ನ ಉತ್ತಮ ಸ್ಥಿತಿಯ ಸರ್ಕಾರೀ ಉದ್ಯೋಗಿಗಳ ಮಕ್ಕಳು. ಆಗ ನಮಗೆ ಈ ಸೋಷಿಯಲ್ ಲೆವೆಲ್ ಗೊತ್ತಿರಲಿಲ್ಲ

ಶಾಲೆಯಿಂದ ಬರಲು ಮತ್ತು ಹೋಗಲು ನಮಗೆ ಪರ್ಯಾಯ ದಾರಿ ಅಂದರೆ ಶ್ರೀರಾಮ ಪುರದ ರಸ್ತೆ ಮತ್ತು ಕೆಲವು ಸಲ ನಾಗಪ್ಪ ಬ್ಲಾಕ್ ಕಡೆಯಿಂದ. ಇದು ಸ್ವಲ್ಪ ಸುತ್ತು ರಸ್ತೆ ಆದರೂ ಆಕಡೆ ಬರ್ತಾ ಇದ್ದೆವು. ಮಳೆ ಬಂದಾಗ ಪ್ರಕಾಶ ನಗರದ ರಸ್ತೆಯ ಕೊಚ್ಚೆ ಗುಂಡಿ ಹಾರುವುದು ಕಷ್ಟ. ಕೊಚ್ಚೆ ತುಂಬಿ ಹರಿಯುತ್ತಿತ್ತು. ಈಗ ಮೆಟ್ರೋ ರೈಲು ಬಂದು ನವರಂಗ್, ಮಹಾಕವಿ ಪುಟ್ಟಪ್ಪ ರಸ್ತೆ ಹಾಗೂ ಶ್ರೀ ರಾಮಪುರದ ರಸ್ತೆಯ ರೂಪ ಸಂಪೂರ್ಣ, ನಗರದ ಇತರ ಮೆಟ್ರೋ ಹಾದು ಹೋಗುವ ರಸ್ತೆಗಳಂತೆ ಬದಲಾಗಿದೆ. ನವರಂಗ್ ಸರ್ಕಲ್‌ನ ಬಲ ತುದಿಗೆ ಅಂಬಾಭವಾನಿ ದೇವಸ್ಥಾನ. ನವರಂಗ್ ಸರ್ಕಲ್‌ನಿಂದ ಬಲಕ್ಕೆ ತಿರುಗಿದರೆ ಮರಿಯಪ್ಪನ ಪಾಳ್ಯದ ರಸ್ತೆ. ಆ ಮರಿಯಪ್ಪ ಯಾರೋ ಯಾರಿಗೂ ಆಗಲೂ ತಿಳಿಯದು, ಈಗಲೂ ತಿಳಿಯದು. ಮರಿಯಪ್ಪನ ಪಾಳ್ಯ ಈಗ ಒಂದು ಪಾರ್ಕ್ ಹೆಸರಿಗೆ ಮಾತ್ರ ಸೀಮಿತ. ಮರಿಯಪ್ಪನ ಪಾಳ್ಯದ ಎದುರು ಭಾಗ ರಾಜಾಜಿನಗರ ಎರಡನೇ ಸ್ಟೇಜ್, ಗಾಯತ್ರಿ ನಗರ. ಅದರ ಮುಂದಕ್ಕೆ ಮಿಲ್ಕ್ ಕಾಲನಿ, ಅದರ ಪಕ್ಕ ಆಗ ಕಿರ್ಲೋಸ್ಕರ್ ಕಾರ್ಖಾನೆ, ಈಗ ಅಲ್ಲಿ ಮೆಟ್ರೋ ಅಂಗಡಿ..ಹೀಗೆ. ಮರಿಯಪ್ಪನ ಪಾಳ್ಯ ದಾಟಿದರೆ ಎಡಕ್ಕೆ ಹರಿಶ್ಚಂದ್ರ ಘಾಟ್ ಸ್ಮಶಾನ. ಅದು ಸ್ವಲ್ಪ ತಗ್ಗು. ತಗ್ಗು ಏರಿ ಮುಂದೆ ಬಂದರೆ ಆ ರಸ್ತೆ ನೇರವಾಗಿ ಮಲ್ಲೇಶ್ವರಕ್ಕೆ. ಅದಕ್ಕೆ ಮೊದಲು ಒಂದು ಓವರ್ ಬ್ರಿಡ್ಜ್.. ಇದು ಶ್ರೀರಾಮ ಪುರದ ಓವರ್ ಬ್ರಿಡ್ಜ್. ಬಹುಶಃ ನನಗೆ ತಿಳಿದ ಹಾಗೆ ಬೆಂಗಳೂರಿನ ಮೊದಲ ಮೊದಲ ಓವರ್ ಬ್ರಿಡ್ಜ್‌ಗಳಲ್ಲಿ ಇದೂ ಸಹ ಒಂದು. ರಸ್ತೆ ತಳಭಾಗದಲ್ಲಿ ರೈಲು ಹೋಗುತ್ತಿತ್ತು. ಸುಮಾರು ಸಲ ಆಶ್ಚರ್ಯದಿಂದ ನಿಂತು ರಸ್ತೆ ಅದು ಹೇಗೆ ಮೇಲೆ ಮಾಡಿರಬಹುದು ಎಂದು ಚಕಿತನಾಗಿದ್ದೆ. ಒಮ್ಮೆ ಅಲ್ಲಿ ಯಾರೋ ರೈಲಿಗೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದರು. ಬೆತ್ತಲೆ ಹೆಣವನ್ನು ಬೋರಲಾಗಿ ಮಲಗಿಸಿ ಯಾರೋ ಪೋಲೀಸು ಕಾವಲು ನಿಂತಿದ್ದರು. ಬ್ರಿಡ್ಜ್ ಮೇಲೆ ಜನ ಗುಂಪು ಗುಂಪು ನಿಂತು ಈ ದೃಶ್ಯ ನೋಡುತ್ತಿತ್ತು. ಹೆಣದ ಮೇಲೆ ಒಂದು ಬಟ್ಟೆ ಹೊದಿಸಬಾರದೇ ಅನಿಸಿತ್ತು. ನನ್ನ ಗೆಳೆಯರೊಬ್ಬರ ಬಳಿ ಇದನ್ನು ಹೇಳಿದೆ. ನಿಯಮ ಹಾಗಿದೆ ಅಂದರು. ಯಾಕೋ ಅಂತಹ ನಿಯಮ ತರ್ಕರಹಿತ ಅನಿಸಿತು. ಹೋಗಲಿ, ಸತ್ತವರಿಗಾದರೂ ಮರ್ಯಾದೆ ಬೇಡವೇ? ಬದುಕಿದ್ದಾಗಲಂತೂ ಮರ್ಯಾದೆ ಇಲ್ಲದೆ ಜೀವ ಸವೆಸಿದ್ದು.

ಈ ಬ್ರಿಡ್ಜ್ ಶುರುವಿನ ಎಡಭಾಗದಲ್ಲಿ ಸರ್ವೋದಯ ಸ್ಕೂಲ್. ಇದನ್ನು ಅಂದಿನ ಗಾಂಧಿವಾದಿ ದೇವಯ್ಯ ಅನ್ನುವವರು ಕಟ್ಟಿಸಿದ್ದು ಅಂತ ಕೇಳಿದ್ದೆ. ದೇವಯ್ಯ ಅವರು ಬೆಳಿಗ್ಗೆ ಬೆಳಿಗ್ಗೆ ಶ್ರೀ ರಾಮ ಪುರದ ಪ್ರತಿ ರಸ್ತೆಯಲ್ಲಿಯೇ ವಾಕಿಂಗ್ ಹೋಗುವರು. ಚರಂಡಿ ಸರಿ ಇದೆಯೇ, ನಲ್ಲಿಯಲ್ಲಿ ನೀರು ಬರುತ್ತಿದೆಯೇ ಮೊದಲಾದ ದಿನ ನಿತ್ಯದ ಸಮಸ್ಯೆಗಳನ್ನು ನೋಡಿ ಪರಿಹಾರ ಒದಗಿಸುತ್ತಿದ್ದರು. ಬಿಳೀ ಖಾದಿ ದಟ್ಟಿ, ಅದರ ಮೇಲೆ ಖಾದಿ ಜುಬ್ಬಾ, ತಲೆಗೊಂದು ಗಾಂಧಿ ಟೋಪಿ ಅವರ ವೇಷ. ಅತ್ಯಂತ ಜನಾನುರಾಗಿ. ಎಂ ಎಲ್ ಏ ಆಗಿದ್ದರು. ನಾವು ಪುಟ್ಟ ಮಕ್ಕಳು ಎದುರು ಹಾದರೂ ಎರಡೂ ಕೈ ಎತ್ತಿ ನಮಸ್ಕಾರ ದೇವರೂ ಅನ್ನುವರು. ಅವರು ನಮ್ಮಂತಹ ಪುಟ್ಟವರಿಗೂ ನಮಸ್ಕಾರ ಮಾಡುತ್ತಾರೆ ಎಂದು ನಮಗೆ ಖುಷಿ. ಎರಡು ಮೂರು ಸಲ ಅವರ ಎದುರು ಹಾದು ನಮಸ್ಕಾರ ಪಡೆಯುತ್ತಿದ್ದವು. ಮನೆಗೆ ಬಂದು ಹೆಮ್ಮೆಯಿಂದ ಇವತ್ತು ದೇವಯ್ಯನವರು ನಮಗೆ ನಮಸ್ಕಾರ ದೇವರೂ ಅಂತ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡಿದರು ಎಂದು ಕೊಚ್ಚಿಕೊಳ್ಳುತ್ತಿದ್ದೆವು..!

ಶ್ರೀರಾಮ ಪುರದಲ್ಲಿ ಒಂದು ಪಾರ್ಕ್ ದೇವಯ್ಯ ಅವರ ಹೆಸರು ಹೊತ್ತಿದೆ. ಈ ಪಾರ್ಕ್‌ಗೆ ಸಂಬಂಧ ಪಟ್ಟ ಹಾಗೆ ಒಂದು ಪ್ರಸಂಗ ನೆನಪಾಯಿತು. ಪಾರ್ಕ್ ಸುತ್ತಲಿನ ರಸ್ತೆ ವಿಸ್ತರಣೆಗೆ ಸರ್ಕಾರ ಯೋಜನೆ ರೂಪಿಸಿತ್ತು. ಅಲ್ಲಿನ ಕೆಲವು ಪ್ರಭಾವಿಗಳಿಗೆ ಈ ರಸ್ತೆ ಬೇಡವಾಗಿತ್ತು. ರಸ್ತೆ ವಿರೋಧಿ ಗುಂಪು ಒಂದು ಪ್ಲಾನ್ ರೂಪಿಸಿದರು. ರಾತ್ರೋರಾತ್ರಿ ಅಲ್ಲೊಂದು ಗಣೇಶನ ಮೂರ್ತಿ ಉದ್ಭವ ಆಯಿತು. ಸುತ್ತಲಿನ ಆಸ್ತಿಕ ಬಂಧುಗಳೂ ಸೇರಿದರು. ಅದಕ್ಕೊಂದು ಪುಟ್ಟ ಚಾವಣಿ, ನಾಲ್ಕು ಗೋಡೆ ರೆಡಿ ಆಯಿತು. ರಸ್ತೆ ಕೆಲಸ ನಿಂತಿತು!

ಈ ಪ್ರಸಂಗ ಆಧರಿಸಿ ಪ್ರಜಾವಾಣಿ ಬಳಗದಲ್ಲಿ ಸಂಪಾದಕೀಯ ವಿಭಾಗದಲ್ಲಿದ್ದ ಶ್ರೀ ಬಿ.ವಿ. ವೈಕುಂಠ ರಾಜು ಅವರು ಒಂದು ಪುಟ್ಟ ಕಾದಂಬರಿ ಉದ್ಭವ ಅನ್ನುವ ಹೆಸರಲ್ಲಿ ಬರೆದರು. ನಂತರ ಅದು ಚಲನಚಿತ್ರವೂ ಆಯಿತು. ಶ್ರೀ ಬಿ.ವಿ. ವೈಕುಂಠ ರಾಜು ಅವರು ಅಲ್ಲೇ ದೇವಯ್ಯ ಪಾರ್ಕ್ ಮುಂದಿನ ಎರಡನೇ ರಸ್ತೆಯಲ್ಲಿದ್ದರು. ಅವರನ್ನು ನಮ್ಮ ಹಾಸ್ಯೋತ್ಸವ ಕಾರ್ಯಕ್ರಮಕ್ಕೆ ಭಾಷಣ ಕೊಡಲು ಆಹ್ವಾನಿಸಲು ಗೆಳೆಯ ಕೃಷ್ಣನ ಸಂಗಡ ಹೋಗಿದ್ದೆ. ಆ ವೇಳೆಗೆ ಅವರು ಪ್ರಜಾವಾಣಿ ಬಿಟ್ಟು ಸ್ವತಂತ್ರವಾಗಿ ವಾರ ಪತ್ರಿಕೆ ಶುರು ಮಾಡಿದ್ದರು. ಸಾಂಸ್ಕೃತಿಕ ವಲಯದಲ್ಲಿ ಒಳ್ಳೆಯ ಹೆಸರು ಮಾಡಿದ್ದರು. ಕಾರ್ಯಕ್ರಮಕ್ಕೆ ಬಂದು ಒಳ್ಳೇ ಭಾಷಣ ಮಾಡಿದರು.

ಅಲ್ಲಿಂದ ಅರ್ಧ ಕಿಮೀ ದೂರದಲ್ಲಿ ಒಂದು ಅಂಡರ್ ಬ್ರಿಡ್ಜ್. ಇಲ್ಲಿ ರೈಲು ಮೇಲೆ ಹೋದರೆ ರಸ್ತೆ ಕೆಳಗಡೆ. ಇದೂ ಸಹ ನಗರದ ಮೊದಮೊದಲಿನ ಅಂಡರ್ ಬ್ರಿಡ್ಜ್‌ಗಳಲ್ಲಿ ಒಂದು. ರೈಲು ಮೇಲೆ ಹೋದಾಗ ಕೆಳಗಡೆ ನಡೆದು ಹೋಗುವವರ ಮತ್ತು ವಾಹನದಲ್ಲಿ ಹೋಗುವವರ ಮೇಲೆ ಮಾನವ ಮಲಮೂತ್ರ ಸಿಂಪಡನೆ ಆಗುತ್ತಿತ್ತು! ಈ ಸುಖ ಸುಮಾರು ಸಲ ಜನ ಅನುಭವಿಸಿದ್ದರು. ಅದರಿಂದ ರೈಲು ಹೋಗಬೇಕಾದರೆ ಜನ ರಸ್ತೆಯ ಆ ಪಕ್ಕ ಈ ಪಕ್ಕ ಕಾದು ನಿಂತಿದ್ದು ರೈಲು ಪೂರ್ಣ ಹೋದ ನಂತರ ರಸ್ತೆ ದಾಟುತ್ತಿದ್ದರು. ಆಗ ಇದು ಎಲ್ಲಾ ಬ್ರಿಡ್ಜ್ ತಳಗಿನ ಸಮಸ್ಯೆ ಆಗಿತ್ತು. ಇದು ಸುಮಾರು ವರ್ಷ ನಡೆಯಿತು. ವಾಚಕರ ವಾಣಿಯಲ್ಲಿ ಬ್ರಿಡ್ಜ್ ಕೆಳಗಿನ ಇಂತಹ ಅವ್ಯವಸ್ಥೆ ಕುರಿತು ಸಾವಿರಾರು ಪತ್ರಗಳು ಬಂದವು. ರೈಲ್ವೆ ಇಲಾಖೆ ಕಿವಿಗೆ ಕೊನೆಗೂ ಈ ಸುದ್ದಿ ಮುಟ್ಟಿ ಕೊನೆಗೂ ಕಣ್ಣು ತೆರೆಯಿತು. ಈಗ ಇಂತಹ ಬ್ರಿಡ್ಜ್ ತಳದಲ್ಲಿ ದೋಣಿ ಆಕಾರದ ಲೋಹದ ಒಂದು ತಗಡು ಇರಿಸಿ ಮಾನವ ಮಲಮೂತ್ರದ ಅಭಿಷೇಕ ನಿಯಂತ್ರಿಸಿದ್ದಾರೆ!

ಈ ಬ್ರಿಡ್ಜ್ ಹತ್ತಿರ ಒಂದು ಆಂಜನೇಯನ ದೇವಸ್ಥಾನ. ಈ ದೇವಸ್ಥಾನ ನೋಡಿದಾಗಲೆಲ್ಲ ಈಗಲೂ ಒಂದು ಅಂದಿನ ನೆನಪು ಒದ್ದುಕೊಂಡು ಬರುತ್ತೆ. ಅದಕ್ಕೊಂದು ಪೂರಕ ಅನಿಸಬಹುದಾದ ಒಂದು ಪ್ರಸಂಗ. ನಾನು ಕೆಲಸಕ್ಕೆ ಸೇರಿ ಹತ್ತೋ ಇಪ್ಪತ್ತೋ ವರ್ಷಕ್ಕೆ ಒಂದು ಜಪಾನಿನ ನೂತನ ಯೋಜನೆ ಜಾರಿ ಆಯಿತು. ಅದರ ಹೆಸರು ಜಿಟ್ ಯೋಜನೆ ಅಂತ. JIT ಅಂದರೆ just in time ಅಂತ ವಿವರಣೆ. ಇದರ ಸ್ಥೂಲ ಕಲ್ಪನೆ ಅಂದರೆ ಅವತ್ತಿಗೆ ಏನು ಬೇಕೋ ಅಷ್ಟನ್ನೇ ಕೊಳ್ಳಿ. ಹೆಚ್ಚು ಕೊಂಡು ನಿಮ್ಮ ಖರ್ಚು ಹೆಚ್ಚಿಸಿಕೊಳ್ಳಬಾರದು. ಹೆಚ್ಚು ಸ್ಟಾಕ್ ಮಾಡಿದರೆ ಅದರ ಹೊರೆ ನೀವೇ ಹೊರಬೇಕು ಇದು ಮೂಲ ಯೋಚನೆ. ಈ jit ಸ್ಕೀಮ್ ತುಂಬಾ ಹೆಸರು ಮಾಡಿತು. ಈ ಸ್ಕೀಮ್ ನಾವು ಇನ್ನೂ ಶಾಲೆಯಲ್ಲಿ ಓದಬೇಕಾದರೆ ನಮ್ಮ ಮನೆಯಲ್ಲಿ ಜಾರಿಯಲ್ಲಿತ್ತು. ಅಂದರೆ ಜಪಾನ್ ಅವರಿಗಿಂತ ಸುಮಾರು ವರ್ಷ ಮೊದಲೇ ನಮ್ಮಲ್ಲಿ jit ಸ್ಕೀಮ್ ಅಳವಡಿಸಿಕೊಂಡಿದ್ದೆವು.

ಒಂದು ರೂಪಾಯಿ ಒಂದು ಆಣೆ, ಮೂರು ಕಾಸಿಗೆ ಒಂದೂ ಕಾಲು ಸೇರು ಅಕ್ಕಳ್ಳು ಅಕ್ಕಿ ಆಗ ಮನೆ ಹತ್ತಿರ ಸಿಗುತ್ತಿತ್ತು. ಆಗ ಆಕ್ಕಿಯಲ್ಲೂ ಬೇಕಾದಷ್ಟು ವೆರೈಟಿ. ಅಕ್ಕುಳ್ಳು, ಬಂಗಾರ ಸಣ್ಣ, ಬಂಗಾರ ತಿಣಿ, ಡಬ್ಬನ್ ಸಾಲಾ…. ಅಂತ ಹಲವು ವೆರೈಟಿ. ಆಗಿನ ಯಾವ ಬ್ರಾಂಡುಗಳೂ ಈಗಿಲ್ಲ. ಕೋಡಗನ ಕೋಳಿ ನುಂಗಿದ ಹಾಗೆ ಅವೆಲ್ಲವನ್ನೂ ಈಗಿನ ಬ್ರಾಂಡ್ ನುಂಗಿ ನೀರು ಕುಡಿದಿವೆ.. ನಮ್ಮಮ್ಮ ಪ್ರತಿ ದಿವಸ ನಮಗೆ ಒಂದೂ ಕಾಲು ಸೇರು ಅಕ್ಕಿ ತರಲು ಕಾಸು ಕೊಡೋಳು. ಒಂದು ರೂಪಾಯಿ ಒಂದು ಆಣೆ, ಮೂರು ಕಾಸನ್ನು ಎಣಿಸಿ ಕೈಗೆ ಇಡೋಳು. ನಮ್ಮ ಅಣ್ಣ ನಾನು ಹೋಗಿ ಮನೆ ಹತ್ತಿರದ ಅಂಗಡಿಯಿಂದ ಅಕ್ಕಿ ತರೋದು, ಅದನ್ನ ಆರಿಸಿ ಕಲ್ಲು ಮಣ್ಣು ಹೆಂಟೆ ಬೇರೆ ಮಾಡಿ ಕೊಡೋದು ಇದು ಡೈಲಿ ರೊಟೀನ್ ಕೆಲಸ. ಹೀಗಿರಬೇಕಾದರೆ ಸ್ಕೂಲಿನ ಹತ್ತಿರ ಅದೇ ಅಕ್ಕಿ ಒಂದು ರೂಪಾಯಿ ಒಂದು ಆಣೆಗೆ ಸಿಗುತ್ತೆ ಅನ್ನೋದನ್ನ ಅಣ್ಣ ಕಂಡು ಹಿಡಿದ.

ಮಾರನೇ ದಿವಸ ಅಣ್ಣ ತಮ್ಮ ಇಬ್ಬರೂ ಆ ಅಂಗಡಿಗೆ ಹೋಗಿ ಅಕ್ಕಿ ತಂದೆವು. ಮೂರು ಕಾಸು ಮುಗಿಸಿದ ಖುಷಿಯನ್ನು ಅಮ್ಮನಿಗೆ ಹೇಳಿ ಹಂಚಿಕೊಂಡೆವು. ಅಮ್ಮ ಅಯ್ಯೋ ಮುಂಡೇವಾ ಅದೇನು ಬುದ್ಧಿನೋ ನಿಮಗೆ ಅಂತ ಹೊಗಳಿದಳು. ಆ ಮಿಗಿಸಿದ ಮೂರು ಕಾಸು ನಮಗೇ ಕೊಟ್ಟಳು. ಮಧ್ಯಾಹ್ನ ಏನಾದರೂ ತಿಂದುಕೊಳ್ಳಿ ಅಂತ. ಸ್ಕೂಲ್ ಹತ್ತಿರ ಕಳ್ಳೆಪುರಿ ಅಂಗಡಿ ದೊಡ್ಡ ದೊಡ್ಡ ಬಾಂಡಲಿಯಲ್ಲಿ ಕಡ್ಲೇಪುರಿ, ಹುರಿಗಡಲೆ, ಕಡಲೆ ಬೀಜ, ಉಪ್ಪು ಕಡಲೆ… ಇವನ್ನೆಲ್ಲಾ ಇಟ್ಟು ಮಾರ್ತಾ ಇದ್ದರು. ಮಧ್ಯಾಹ್ನ ಮೇಲೆ ಹೇಳಿದ ಅಂಡರ್ ಬ್ರಿಡ್ಜ್ ಬಳಿಯ ಆಂಜನೇಯನ ಗುಡಿ ಹತ್ತಿರ ಹೋಗಿ ಮುಚ್ಚಿರೋ ಬಾಗಿಲ ಸಂದಿಯಿಂದ ದೇವರನ್ನು ನೋಡೋದು. ಬರ್ತಾ ಮೂರು ಕಾಸಿಗೆ ಪುರಿ ಅಂಗಡೀಲಿ ಸಿಗೋದನ್ನು ಕೊಂಡು ಸ್ನೇಹಿತರಿಗೂ ಹಂಚಿ ತಿನ್ನೋದು.. ಇದು ಸುಮಾರು ದಿವಸ ನಡೆಯಿತು. ಮಧ್ಯಾಹ್ನ ಸ್ನೇಹಿತರ ಗುಂಪು ನಮ್ಮ ಸುತ್ತವೇ ಇರ್ತಿತ್ತು. ಅಣ್ಣ ಒಂದು ಹೊಸ ಪ್ಲಾನ್ ಮಾಡಿದ. ಅದರಂತೆ ಆರು ದಿವಸ, ಒಂದು ವಾರ ಆಂಜನೇಯನ ಗುಡಿ ಮುಗಿಸಿಕೊಂಡು ಸೀದಾ ಸ್ಕೂಲಿಗೆ ಬಂದೆವು. ಒಂದು ವಾರದಲ್ಲಿ ಮಧ್ಯಾಹ್ನದ ಸ್ನೇಹಿತರು ಕಡಿಮೆ ಆದರು. ಒಂದು ವಾರದಲ್ಲಿ ಒಂದೂವರೆ ಆಣೆ ಶೇಖರಿಸಿದ್ದೆವು. ಒಂದೂವರೆ ಆಣೆ ಅಕ್ಕಿ ತರ್ತಾ ಇದ್ದ ಅಂಗಡಿ ಶೆಟ್ಟರಿಗೆ ಕೊಟ್ಟು ದ್ರಾಕ್ಷಿ ಗೋಡಂಬಿ ಕೊಡಿ ಅಂತ ಅಣ್ಣ ಕೇಳಿದ.

ಶೆಟ್ಟರು ಪಟ್ಟಣ ಕಟ್ಟಲು ಪೇಪರ್ ತಗೊಂಡರು. ಕೈಗೇ ಕೊಡಿ ಅಂದ ಅಣ್ಣ. ಹೋ ಇಲ್ಲೇ ತಿನ್ನಕ್ಕಾ.. ಅಂತ ಕೇಳಿದರು ಶೆಟ್ಟರು. ಹೂಂ ಅಂತ ತಲೆ ಆಡಿಸಿದೆವು. ಇಬ್ಬರನ್ನೂ ಹತ್ತಿರ ಕರೆದು ಬೊಗಸೆ ತುಂಬಾ ದ್ರಾಕ್ಷಿ ಗೋಡಂಬಿ ತುಂಬಿದರು. ಜೇಬಲ್ಲಿ ಹಾಕ್ಕೊಳ್ಳಿ ಅಂತ ಜೇಬಿಗೆ ತುಂಬಲು ನೆರವಾದರು!
ಮತ್ತೆ ಸ್ಕೂಲಿಗೆ ಬಂದವಾ? ಜೇಬಿನಿಂದ ಒಂದೊಂದೇ ದ್ರಾಕ್ಷಿ ಗೋಡಂಬಿ ತೆಗೆದು ಸ್ನೇಹಿತರಿಗೆ ಹಂಚಿ ನಾವೂ ತಿಂದೆವು…

ಈಗಲೂ ಈ ಪ್ರಸಂಗ ನಡೆದು ಆರೂವರೆ ದಶಕಗಳ ನಂತರ ಆ ಆಂಜನೇಯನ ದೇವಸ್ಥಾನದ ಹತ್ತಿರ ಹೋದರೆ ಈ ನೆನಪುಗಳು ಒದ್ದುಕೊಂಡು ಬರುತ್ತೆ. ಆಂಜನೇಯನ ಗುಡಿ ಇನ್ನೂ ಇದೆ, ದ್ರಾಕ್ಷಿ ಗೋಡಂಬಿ ಕೊಟ್ಟ ಶೆಟ್ಟರ ಅಂಗಡಿ ಇಲ್ಲ ಮತ್ತು ನಮ್ಮ ಅಣ್ಣ ಸಹ ಇಲ್ಲ. ಆದರೆ ಅವತ್ತು ತಿಂದ ದ್ರಾಕ್ಷಿ ಗೋಡಂಬಿ ರುಚಿ ಇನ್ನೂ ಈಗ ತಿಂದ ಹಾಗಿದೆ!

ಬಂಡಿ ರೆಡ್ಡಿ ಸರ್ಕಲ್ ವಿಷಯಕ್ಕೆ ಬಂದಿದ್ದೆ. ನೆನಪುಗಳು ಒಂದು ರೀತಿ ಹುಚ್ಚು ಕುದುರೆ ಏರಿದ ಹಾಗೆ ಅನ್ನುತ್ತಾರೆ. ಹುಚ್ಚು ಕುದುರೆ ಒಂದು ಗುರಿ ಇಲ್ಲದೆ ಎಲ್ಲೆಂದರೆ ಅಲ್ಲಿ ಓಡುತ್ತದೆ ಎಂದು ರೇಸ್ ಪಂಡಿತರು ಹೇಳುತ್ತಾರೆ. ಅದೇ ಅನುಭವ ನನಗೂ ಆಗುತ್ತಿರುವುದು!

ಬಂಡಿ ರೆಡ್ಡಿ ಸರ್ಕಲ್‌ಗೆ ಮತ್ತೆ ಕುದುರೆ ಎಳೆದು ತರೋಣ. ಆಗ ಅಲ್ಲಿ ಒಂದು ಅಗಲ ಕಿರಿದಾದ ರಸ್ತೆ ಇತ್ತು. ನಂತರ ಒಂದು ಹತ್ತು ವರ್ಷದಲ್ಲಿ ಇಡೀ ಬಂಡಿ ರೆಡ್ಡಿ ಸರ್ಕಲ್ ಸುತ್ತ ಮುತ್ತ ಹೇರಳವಾಗಿ ಬಟ್ಟೆ ಅಂಗಡಿಗಳು ಹುಟ್ಟಿಕೊಂಡವು. ಅದೂ ಎಂತಹ ಬಟ್ಟೆ ಅಂತೀರಿ? ಮಿಲ್‌ಗಳಿಂದ ಥಾನುಥಾನುಗಟ್ಟಲೆ ಬಟ್ಟೆಗಳು ಇಲ್ಲಿ ಬರುತ್ತಿತ್ತು. ಅಂಗಡಿ ಒಳಗೆ ಹೊರಗೆ ಹೆಜ್ಜೆ ಇಡಲು ಆಗದ ಹಾಗೆ ಸುರುಳಿ ಸುತ್ತಿದ ದೊಡ್ಡ ದೊಡ್ಡ ಬಟ್ಟೆ ಗಂಟು ಇರುಕಿಕೊಂಡಿರುತ್ತಿತ್ತು. ಅದನ್ನು ಕೊಳ್ಳಲು ಬರುವ ಹೆಂಗಸರು ಗುಂಪು ಗುಂಪಾಗಿ ಅಂಗಡಿ ಮುಂದೆ ವ್ಯಾಪಾರ ನಡೆಸುತ್ತಿದ್ದರು. ಅದೇ ರೀತಿಯ ದೃಶ್ಯಗಳು ನೀವು ಈಗ ಅವೆನ್ಯೂ ರಸ್ತೆಗೆ ಹೋದರೂ ಕಾಣುತ್ತೀರಿ. ಸಗಟು ದರದಲ್ಲಿ ರೆಡಿಮೇಡ್ ಬಟ್ಟೆ ತಯಾರಕರಿಗೆ ಅದು ಹೋಗುತ್ತಿತ್ತು. ಉಳಿಕೆ ತುಂಡು ಬಟ್ಟೆ ಒಂದು ಮೀಟರು, ಎರಡು ಮೀಟರು ಈ ರೀತಿಯವು ಸಹಾ ಮಾರಾಟಕ್ಕೆ ಸಣ್ಣ ಪುಟ್ಟ ಅಂಗಡಿ ಅವರು ಇಟ್ಟಿರುತ್ತಿದ್ದರು. ಪುಟ್ಟ ಮಕ್ಕಳಿಗೆ ಬಟ್ಟೆ ಹೊಲಿಯುವವರು ಹಾಗೂ ಮನೆಯಲ್ಲಿ ಬಟ್ಟೆ ಹೊಲಿಯುವ ಮೆಷಿನ್ ಇಟ್ಟುಕೊಂಡು ಪುಟ್ಟ ವ್ಯವಹಾರ ಮಾಡುವವರು ಇಲ್ಲಿಗೆ ಬಟ್ಟೆ ಕೊಳ್ಳಲು ಬರುವರು. ಬಟ್ಟೆಗಳು ತುಂಡು ಲೆಕ್ಕದಲ್ಲಿ ಮಾರಾಟ ಆಗುತ್ತಿತ್ತು. ಛಿಂದಿ ಬಟ್ಟೆ ರಸ್ತೆ ಅಂತ ಬೆಂಗಳೂರಿನ ಹೊರಭಾಗದಲ್ಲಿ ಬಂಡಿ ರೆಡ್ಡಿ ಸರ್ಕಲ್ ಹೆಸರು ಮಾಡಿತು. ಇದು ಒಂದು ಹಂತ. ನಂತರ ಬಟ್ಟೆ ತೂಕದಲ್ಲಿ ಮಾರಾಟ ನಡೆಸಿದರು. ಮಾರ್ಕೆಟ್ ದರಕ್ಕೆ ಹೋಲಿಸಿದರೆ ಶೇಖಡಾ ಎಪ್ಪತ್ತು ಎಂಬತ್ತರ ಷ್ಟು ಕಡಿಮೆ. ಇಡೀ ಬಂಡಿ ರೆಡ್ಡಿ ಸರ್ಕಲ್ ಫೇಮಸ್ ಅಂದರೆ ಫೇಮಸ್ ಆಗಿ ಹೋಯಿತು. ಟೈಲರಿಂಗ್ ಹೊಸದಾಗಿ ಶುರು ಮಾಡಿದವರಿಗೆ ಈ ಏರಿಯಾ ಭಾರೀ ಅಚ್ಚು ಮೆಚ್ಚು ಆಯಿತು. ಬೆಂಗಳೂರಿನ ಒಂದು ಭಾಗದ ಕೆಳ ಮಧ್ಯಮ ವರ್ಗದ ಜನರ ಬಟ್ಟೆ ಅವಶ್ಯಕತೆಗಳನ್ನು ಈ ಸ್ಥಳ ಪೂರೈಸಿತು. ನಂತರ ಬಟ್ಟೆ ತೂಕದಲ್ಲಿ ಮಾರುವ ಬದಲು ಮೀಟರ್ ಲೆಕ್ಕದಲ್ಲಿ ಬದಲಾಯಿತು. ಆದರೂ ಮಾರುಕಟ್ಟೆ ಬೆಲೆಗಿಂತ ತುಂಬಾ ಕಡಿಮೆ ಇರುವ ಕಾರಣ ಈಗಲೂ ಬಂಡಿ ರೆಡ್ಡಿ ಸರ್ಕಲ್‌ನ ಸುತ್ತ ಮುತ್ತಲಿನ ಬಟ್ಟೆ ಅಂಗಡಿಗಳು ತಮ್ಮ ಆಕರ್ಷಣೆ ಉಳಿಸಿಕೊಂಡಿವೆ. ಹೊಸಾ ಪೀಳಿಗೆ ಅವೆನ್ಯೂ ರೋಡು ಮತ್ತು ಕಂಟರ್‌ಮೆಂಟ್ ಕಡೆ ವಾಲಿದ್ದರೆ ಹಳೇ ಪೀಳಿಗೆ ಇನ್ನೂ ಬಂಡಿ ರೆಡ್ಡಿ ಸರ್ಕಲ್ ಸೆಳೆತ ಉಳಿಸಿಕೊಂಡಿದೆ.