ಸುಮಾರು ಹೊತ್ತಿನಲ್ಲಿ ಮೊದಲು ಮಾತನಾಡಿಸಿದ ಹೆಂಗಸೇ ಹೊರಬಂದು, “ಬನ್ನಿ ಒಳಗೆ. ನಿಮಗೆ ಬಿಸಿ, ಬಿಸಿ ಚಾ ಕೊಡುವೆ.” ಎಂದಳಾದರೂ ಮಾತು ಮುಗಿಸುವಾಗ ಕಣ್ಣು ಕೆಂಡದಂತೆ ಹೊಳೆಯುತ್ತಿತ್ತು. ನಡುಮನೆಯಲ್ಲಿರುವ ಎರಡು ಕತ್ತಲೆಯ ಕೋಣೆಯನ್ನು ದಾಟಿ ಅಡುಗೆಮನೆಗೆ ಕಾಲಿಟ್ಟಿದ್ದೇ ಸೋಮಣ್ಣ ಬೆಚ್ಚಿಬಿದ್ದ! ಕಟ್ಟಿಗೆಯ ಒಲೆಯಲ್ಲಿ ಸೌದೆಯ ಬದಲು ತನ್ನ ಕಾಲನ್ನೇ ಒಟ್ಟಿ ಅಲ್ಲವಳ ಸೊಸೆ ಹಾಲು ಕಾಯಿಸುತ್ತಿದ್ದಳು! ತಮ್ಮ ಸುತ್ತೆಲ್ಲ ಬಂದು ನಿಂತವರ ಕಾಲುಗಳನ್ನು ನೋಡಿದರೆ ಎಲ್ಲರ ಪಾದವೂ ತಿರುವುಮುರುವು! ಅಲ್ಲಿಗೆ ಇವರೆಲ್ಲರೂ ಮನುಷ್ಯರಲ್ಲ, ದೆವ್ವಗಳು ಎಂಬುದು ಶತಃಸಿದ್ಧವಾಯಿತು. ಮನೆಯ ಪರಿಚಿತರೆಲ್ಲ ಹೇಗೆ ದೆವ್ವಗಳಾದರೆಂದು ಯೋಚಿಸಲೂ ಸಮಯವಿರಲಿಲ್ಲ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಮೂರನೆಯ ಕಂತಿನಲ್ಲಿ ನೀಲಿ ಕೇಳಿದ ದೆವ್ವದ ಕತೆ ನಿಮ್ಮ ಓದಿಗೆ

ಊರೂರು ತಿರುಗುತ್ತ, ತಮ್ಮೂರ ದೇವರ ಪ್ರಸಾದವನ್ನು ಮನೆಮನೆಗಳಿಗೆ ತಲುಪಿಸುತ್ತ ತಿರುಗುವ ಸೋಮಣ್ಣನಿಗೆ ಬಾಯಿಯೇ ಬಂಡವಾಳ. ಸಮುದ್ರ ದಂಡೆಯ ಹೊಯಿಗೆ ಭೂಮಿಯ ಅವನೂರಿನಲ್ಲಿ ಶಿವನೆಂಬ ಕರುಣಾಮಯಿ ಕೈಲಾಸದಿಂದಿಳಿದು ಬಂದು ನೆಲೆಸದಿದ್ದರೆ ಬದುಕಿಗೊಂದು ನೆಲೆಯೇ ಇರಲಿಲ್ಲ. ಶಿವನ ವರಪ್ರಸಾದವನ್ನು ಹಿಡಿದು ಕರಾವಳಿ ಮತ್ತು ಮಲೆನಾಡಿನ ಕಾಡಿನಲ್ಲಿರುವ ಕುಳಗಳ ಮನೆಗಳಿಗೆ ತಲುಪಿಸಿ, ಅವರು ಕೊಡುವ ಅಡಿಕೆಯೋ, ಏಲಕ್ಕಿಯೋ, ಹುಣಸೇಹಣ್ಣೋ ಏನಾದರೊಂದು ದಿನಸಿಗೆ ಸೆರಗೊಡ್ಡಿ ಅದನ್ನೇ ಸಂಭಾವನೆಯೆಂದು ಪಡೆದು ಮನೆಯಲ್ಲಿರುವ ಹೆಂಡತಿ ಮತ್ತು ಮಕ್ಕಳನ್ನು ಸಲಹುವ ಸೋಮಣ್ಣನಿಗೆ ‘ಸಂಭಾವನೆ ಸೋಮಣ್ಣ’ ಎಂದೇ ಊರಮಂದಿಯೆಲ್ಲ ಕರೆಯುತ್ತಿದ್ದರು. ಕೈತುಂಬಾ ಕೆಲಸದಲ್ಲಿರುವ ಕೃಷಿಕುಟುಂಬದವರು ಸೋಮಣ್ಣನಂಥವರನ್ನು ಆರಯಿಸಬೇಕೆಂದರೆ ಮಾತು, ನಡೆಯಲ್ಲಿ ಚೂರು ಚಾಲಾಕಿತನ ಬೇಕೇಬೇಕು. ಇಲ್ಲವೆಂದರೆ ಇಂಥವರ ಬರೋಣವನ್ನು ಗಣಿಸದೇ ತಮ್ಮ ದೈನಂದಿನ ಕೆಲಸದಲ್ಲಿ ಮನೆಯವರೆಲ್ಲ ಮುಳುಗಿಬಿಡುವ ಸಾಧ್ಯತೆಗಳೇ ಹೆಚ್ಚು. ರಸಭರಿತ ಕಥೆಗಾರ ಸೋಮಣ್ಣ ಮನೆಗೆ ಬಂದನೆಂದರೆ ಹೆಂಗಸರು, ಮಕ್ಕಳ ದಿನದ ಗಮನವೆಲ್ಲಾ ಸಂಜೆ ತಾವು ಕೇಳಲಿರುವ ಕಥೆಗಳ ಬಗೆಗೆ ಇರುತ್ತಿತ್ತು. ಜಗದ ಎಲ್ಲವನ್ನೂ ಉದಾಸೀನದಿಂದ ಕಾಣುವ ಗಂಡುಜಾತಿಗಳು ಮಾತ್ರ ‘ಶುರುವಾಯ್ತು ಸೋಮಣ್ಣನ ಪೊಕ್ಳೆ’ ಎಂದು ಅಲ್ಲಿಂದ ಜಾಗ ಕೀಳುತ್ತಿದ್ದರು. ಇಂತಿಪ್ಪ ಸೋಮಣ್ಣ ಅದೊಂದು ರಾತ್ರಿ ಉರಿಯುವ ದೀಪದ ನೆರಳಲ್ಲಿ ಕುಳಿತು ತಮ್ಮ ಅನುಭವದ ಕಥೆಯೊಂದನ್ನು ಹೇಳಲು ಪ್ರಾರಂಭಿಸಿದ.

ಹೊಳೆಸಾಲಿನಲ್ಲಿ ಹೊಳೆಯ ದಂಡೆಯುದ್ದಕ್ಕೂ ಮನೆಗಳು ಹರಡಿಕೊಂಡಿದ್ದರೆ ಘಟ್ಟವೆಂದು ಕರೆಯುವ ಮಲೆನಾಡಿನಲ್ಲಿ ಒಂದು ಮನೆಯಿಂದ ಇನ್ನೊಂದು ಮನೆಗೆ ಹಲವು ಮೈಲಿಗಳಷ್ಟು ದೂರ. ಮಲೆನಾಡಿನ ಸಂಚಾರ ಕಷ್ಟಕರವಾದ್ದರಿಂದ ಸೋಮಣ್ಣ ಅಲ್ಲಿಯ ಮನೆಗಳಿಗೆ ಹೋಗುವುದು ವರ್ಷಕ್ಕೆ ಒಂದು ಬಾರಿ ಮಾತ್ರ. ಹಾಗೆಂದು ಅಲ್ಲಿಯವರ ಸತ್ಕಾರವೂ ಹಾಗೆ, ಮನೆಗೆ ಬಂದವರಿಗೆ ಎಮ್ಮೆ ಹಾಲಿನ ಚಹಾ, ಕೆನೆಮೊಸರಿನ ಜತೆ ಅವಲಕ್ಕಿ, ಹೆರೆಹೆರೆಯಾದ ತುಪ್ಪದೊಂದಿಗೆ ತೆಳ್ಳಾವು ಬಡಿಸಿ ಎರಡು ದಿನ ಉಳಿಸಿಕೊಳ್ಳದೇ ಕಳಿಸುವವರಲ್ಲ. ಹಾಗಾಗಿ ಹತ್ತು ವರ್ಷಗಳ ಹಿಂದೆ ಮಲೆನಾಡಿಗೆ ಸಂಭಾವನೆಗೆಂದು ಹೋಗುವಾಗ ಸೋಮಣ್ಣ ದಾರಿ ಸಾಗಿಸಲು ಜತೆಯಾಗಲೆಂದು ತನ್ನ ಎಂಟು ವರ್ಷದ ಮಗನನ್ನೂ ಜತೆಯಲ್ಲಿ ಕರೆದುಕೊಂಡು ಹೊರಟಿದ್ದ.

ಕಾಡಿನ ದಾರಿಯಲ್ಲಿ ನಡೆದು ಪರಿಚಿತರಾಗಿದ್ದ ಧನಿಕರೊಬ್ಬರ ಮನೆ ತಲುಪುವಾಗ ಮುಸ್ಸಂಜೆಯಾಗಿತ್ತು. ಮನೆಯೊಳಗೆ ಕಾಲಿಡುತ್ತಿದ್ದಂತೆ ಹೊರಬಂದ ಹಳೆಯ ಹೆಂಗಸೊಬ್ಬರು ಕಾಲು ತೊಳೆಯಲು ನೀರನ್ನು ತಂದಿಟ್ಟು, ಚಾ ಮಾಡುವೆನೆಂದು ಒಳಗೆ ಹೋದರು. ಒಳಮನೆಯಿಂದ ಒಬ್ಬೊಬ್ಬರೇ ಪರಿಚಿತರು ಬಾಗಿಲಲ್ಲಿ ಇಣುಕಿ ಸೋಮಣ್ಣನನ್ನು ನೋಡಿ ವಿಚಿತ್ರವಾಗಿ ನಕ್ಕರು. ಸೋಮಣ್ಣನಿಗೆ ಎಲ್ಲೋ, ಏನೋ ತಪ್ಪಾಗಿದೆ ಎಂದು ಅನಿಸಿದರೂ ಎಷ್ಟೋ ವರ್ಷಗಳಿಂದ ಪರಿಚಿತರಲ್ಲವೆ? ಎಂದು ತಮ್ಮನ್ನು ತಾವೇ ಸಮಾಧಾನಿಸಿಕೊಂಡರು. ಜತೆಯಲ್ಲಿ ಹಸಿದುಕೊಂಡಿರುವ ಮಗ ಬೇರೆ. ಸುಮಾರು ಹೊತ್ತಿನಲ್ಲಿ ಮೊದಲು ಮಾತನಾಡಿಸಿದ ಹೆಂಗಸೇ ಹೊರಬಂದು, “ಬನ್ನಿ ಒಳಗೆ. ನಿಮಗೆ ಬಿಸಿ, ಬಿಸಿ ಚಾ ಕೊಡುವೆ.” ಎಂದಳಾದರೂ ಮಾತು ಮುಗಿಸುವಾಗ ಕಣ್ಣು ಕೆಂಡದಂತೆ ಹೊಳೆಯುತ್ತಿತ್ತು. ನಡುಮನೆಯಲ್ಲಿರುವ ಎರಡು ಕತ್ತಲೆಯ ಕೋಣೆಯನ್ನು ದಾಟಿ ಅಡುಗೆಮನೆಗೆ ಕಾಲಿಟ್ಟಿದ್ದೇ ಸೋಮಣ್ಣ ಬೆಚ್ಚಿಬಿದ್ದ! ಕಟ್ಟಿಗೆಯ ಒಲೆಯಲ್ಲಿ ಸೌದೆಯ ಬದಲು ತನ್ನ ಕಾಲನ್ನೇ ಒಟ್ಟಿ ಅಲ್ಲವಳ ಸೊಸೆ ಹಾಲು ಕಾಯಿಸುತ್ತಿದ್ದಳು! ತಮ್ಮ ಸುತ್ತೆಲ್ಲ ಬಂದು ನಿಂತವರ ಕಾಲುಗಳನ್ನು ನೋಡಿದರೆ ಎಲ್ಲರ ಪಾದವೂ ತಿರುವುಮುರುವು! ಅಲ್ಲಿಗೆ ಇವರೆಲ್ಲರೂ ಮನುಷ್ಯರಲ್ಲ, ದೆವ್ವಗಳು ಎಂಬುದು ಶತಃಸಿದ್ಧವಾಯಿತು. ಮನೆಯ ಪರಿಚಿತರೆಲ್ಲ ಹೇಗೆ ದೆವ್ವಗಳಾದರೆಂದು ಯೋಚಿಸಲೂ ಸಮಯವಿರಲಿಲ್ಲ.

ಅಚಾನಕ್ಕಾಗಿ ಕಂಡ ಈ ದೃಶ್ಯದಿಂದ ಬೆಚ್ಚಿಬಿದ್ದ ಸೋಮಣ್ಣನ ಮಗ ಕಿಟಾರನೆ ಕಿರುಚಿದ. ತಕ್ಷಣ ಎಚ್ಚೆತ್ತ ದೆವ್ವಗಳು ಅವರಿಬ್ಬರನ್ನು ಸುತ್ತುವರೆದು ತಾವು ತಂದಿಟ್ಟ ತಿಂಡಿ ತಿನ್ನುವಂತೆ ಒತ್ತಾಯಿಸಿತೊಡಗಿದವು. ದೆವ್ವದ ಊಟ ತಿಂದರೆ ಮರಣವೇ ಗ್ಯಾರಂಟಿಯೆಂದು ತಂದೆಯಿಂದ ತಿಳಿದಿದ್ದ ಸೋಮಣ್ಣ ತಕ್ಷಣವೇ ತಂದೆ ಹೇಳಿಕೊಟ್ಟ ಛೂಮಂತ್ರವನ್ನು ಹೇಳತೊಡಗಿದ. ದೆವ್ವಗಳು ಚೂರು ಬದಿಗೆ ಸರಿದ ಕೂಡಲೇ ಪಕ್ಕದಲ್ಲಿರುವ ದೇವರ ಕೋಣೆಗೆ ನುಗ್ಗಿ ಹೆದರಿ ಕಂಗಾಲಾಗಿ ಹೋದ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಛೂ….ಮಂತ್ರಪಠಣ ಶುರುಮಾಡಿಯೇಬಿಟ್ಟ. ದೆವ್ವಗಳಿಗೆ ದೇವರ ಕೋಣೆ ನಿಷಿದ್ಧ. ಇವರನ್ನು ಹೊರತಂದು ಮುಕ್ಕಬೇಕೆಂದು ಬೆಳಗಿನವರೆಗೂ ಪ್ರಯತ್ನ ಮಾಡುತ್ತಲೇ ಇದ್ದವು. ಸೋಮಣ್ಣ ಮಾತ್ರ ಧೈರ್ಯಗೆಡದೇ ಛೂಮಂತ್ರ ಪಠಿಸುತ್ತಲೇ ಬೆಳಗು ಮಾಡಿದ. ಬೆಳಗಿನ ಕಿರಣಗಳು ಮನೆಯೊಳಗೆ ನುಗ್ಗಿದ ಕೂಡಲೇ ದೆವ್ವಗಳೆಲ್ಲ ಮಟಾಮಾಯವಾಗಿ ಮನೆಯಿಡೀ ನಿಶ್ಶಬ್ದವಾಯಿತು. ಮಡಿಲಲ್ಲಿ ಮಲಗಿರುವ ಮಗನನ್ನೆಬ್ಬಿಸಿಕೊಂಡು ಹೊರಟ ಸೋಮಣ್ಣನಿಗೆ ಅವರ ತೋಟದಲ್ಲೊಂದು ಮನೆ ಕಾಣಿಸಿತು. ಹೋದಾಗ ತಿಳಿದ ಅಂಶವೆಂದರೆ ವರ್ಷದ ಹಿಂದೆ ಬಂದ ಕರಿಮೈಲಿ ರೋಗ ಮನೆಮಂದಿಯನ್ನೆಲ್ಲ ಬಾಧಿಸಿ ಹೈರಾಣ ಮಾಡಿತ್ತು. ಸೋಂಕುರೋಗವಾದ್ದರಿಂದ ಶವ ವಿಲೇವಾರಿಗೂ ಜನ ಸಿಗದೇ ಮನೆಯೊಳಗೆ ಎಲ್ಲರನ್ನೂ ಗುಂಡಿತೆಗೆದು ಹುಗಿಯಲಾಗಿತ್ತು. ಆ ಮನೆಯಲ್ಲಿ ಇರಲು ಅಸಾಧ್ಯವಾಗಿ ಬದುಕುಳಿದವರೆಲ್ಲ ತೋಟದಲ್ಲಿ ಸಣ್ಣ ಮನೆಯೊಂದನ್ನು ಕಟ್ಟಿಕೊಂಡು ಉಳಿದಿದ್ದರು. ಸೋಮಣ್ಣನ ರಾತ್ರಿಯ ಅನುಭವವನ್ನು ಕೇಳಿದ ಅವರು ಬೇಸರಗೊಂಡು ತಂದೆ ಮಗನನ್ನು ಮನೆಗೆ ಕರೆದು ನಾಲ್ಕಾರು ದಿನ ಉಳಿಸಿಕೊಂಡು ಕಳಿಸಿದರು.

ಮಲೆನಾಡಿನ ಸಂಚಾರ ಕಷ್ಟಕರವಾದ್ದರಿಂದ ಸೋಮಣ್ಣ ಅಲ್ಲಿಯ ಮನೆಗಳಿಗೆ ಹೋಗುವುದು ವರ್ಷಕ್ಕೆ ಒಂದು ಬಾರಿ ಮಾತ್ರ. ಹಾಗೆಂದು ಅಲ್ಲಿಯವರ ಸತ್ಕಾರವೂ ಹಾಗೆ, ಮನೆಗೆ ಬಂದವರಿಗೆ ಎಮ್ಮೆ ಹಾಲಿನ ಚಹಾ, ಕೆನೆಮೊಸರಿನ ಜತೆ ಅವಲಕ್ಕಿ, ಹೆರೆಹೆರೆಯಾದ ತುಪ್ಪದೊಂದಿಗೆ ತೆಳ್ಳಾವು ಬಡಿಸಿ ಎರಡು ದಿನ ಉಳಿಸಿಕೊಳ್ಳದೇ ಕಳಿಸುವವರಲ್ಲ. ಹಾಗಾಗಿ ಹತ್ತು ವರ್ಷಗಳ ಹಿಂದೆ ಮಲೆನಾಡಿಗೆ ಸಂಭಾವನೆಗೆಂದು ಹೋಗುವಾಗ ಸೋಮಣ್ಣ ದಾರಿ ಸಾಗಿಸಲು ಜತೆಯಾಗಲೆಂದು ತನ್ನ ಎಂಟು ವರ್ಷದ ಮಗನನ್ನೂ ಜತೆಯಲ್ಲಿ ಕರೆದುಕೊಂಡು ಹೊರಟಿದ್ದ.

ಹೀಗೆ ಸೋಮಣ್ಣ ಕತೆಯನ್ನು ಮುಗಿಸಿದಾಗ ನೀಲಿ ಭಯದಿಂದ ಮರಗಟ್ಟಿ ಹೋಗಿದ್ದಳು. ಕುಳಿತಲ್ಲಿಂದ ಮೇಲೇಳಲಾಗದಂತೆ ಅಮ್ಮನಿಗೆ ಅಂಟಿಕೊಂಡಿದ್ದಳು. ಅಮ್ಮ ಮಾತ್ರ, “ಸೋಮಣ್ಣನ ಕತೆ ಕೇಳ್ತಾ ಕೂತ್ರೆ ರಾತ್ರಿ ಬೆಳಗಾಗ್ತು. ಏಳಿ, ಊಟ ಮಾಡುವ” ಎಂದು ನೀಲಿಯನ್ನು ಬದಿಗೆ ಸರಿಸಿ ಬಾಳೆಲೆ ಹಾಕಲು ಒಳಗೆ ನಡೆದಳು. ರಾತ್ರಿ ಮಲಗಿದಾಗಲೂ ನೀಲಿ ಅಮ್ಮನಿಗೆ ಅಂಟಿಕೊಂಡು ಕೇಳಿದಳು, “ಅಮ್ಮಾ, ಸೋಮಣ್ಣ ಹೇಳಿದ ದೆವ್ವದ ಕತೆ ಹೌದಾ?” ಅಮ್ಮ ಅವಳ ತಲೆಯಲ್ಲಿ ಕೈಯ್ಯಾಡಿಸುತ್ತ, “ಅಯ್ಯಾ, ಅವನೊಬ್ಬ ಪೊಕ್ಳೆರಾಯ. ಈಗೀಗ ಮನುಷ್ಯರಿಗೆ ಭೂಮಿಯಲ್ಲಿರಲು ಜಾಗವಿಲ್ಲ. ಇನ್ನು ದೆವ್ವವಂತೆ. ಸುಮ್ನೆ ಹೆಂಗಸರು, ಮಕ್ಳನ್ನ ಹೆದರಿಸೋಕೆ ಕತೆ ಕಟ್ಟಿ ಹೇಳೂದು.” ಎಂದವಳೆ ಕೆಲಸದ ಆಯಾಸದಲ್ಲಿ ನಿದ್ದೆಗೆ ಜಾರಿದ್ದಳು. ರಾತ್ರಿ ನೀಲಿಯ ಕನಸಿನಲ್ಲಿಯೂ ದೆವ್ವಗಳೇ ಕಣ್ಣೆದುರು ಬಂದು ಕುಣಿಯುತ್ತಿದ್ದವು!

ಅಮ್ಮ ನೀಡಿದ ಸಂಭಾವನೆಯನ್ನು ಪಡೆದು ಸೋಮಣ್ಣ ಮನೆಗೆ ಹೋದರೂ ನೀಲಿಯ ಜಗತ್ತಿನಲ್ಲಿ ದೆವ್ವಗಳು ಓಡಾಡುತ್ತಲೇ ಇದ್ದವು. ನೂರಾರು ಪ್ರಶ್ನೆಗಳು ಮನಸ್ಸಿನಲ್ಲಿ ಕಾಡುತ್ತಲೇ ಇದ್ದವು. ತಮ್ಮೂರಿನಲ್ಲಿ ದೆವ್ವಗಳಿಗೆ ಮಂತ್ರ ಹಾಕುವ ವಜ್ರನಾರಾಯಣ ಮನೆಯ ಕಡೆಗೇನಾದರೂ ಬಂದರೆ ಅವನಲ್ಲಿ ಈ ವಿಷಯವನ್ನು ಕೇಳಬೇಕೆಂದು ಸಮಯ ಕಾಯುತ್ತಿದ್ದಳು. ವಜ್ರನಾರಾಯಣನೆಂದರೆ ಕಪ್ಪು ಕಲ್ಲಿನಲ್ಲಿ ಕೆತ್ತಿದ ಬಾಹುಬಲಿಯಂಥಹ ರೂಪದವ. ಆರಡಿ ಎತ್ತರದ ದೇಹವನ್ನು ನೇರವಾಗಿ ನಿಲ್ಲಿಸಲು ಹೆಣಗಾಡುತ್ತ, ಅತ್ತಿಂದಿತ್ತ ವಾಲುತ್ತಿರುವ ದೇಹವನ್ನು ಸಂಭಾಳಿಸಲು ದೊಣ್ಣೆ ಊರಿಕೊಂಡು ತಿರುಗುತ್ತಿದ್ದ. ತುಸು ಹೊರಚಾಚಿದ ಹಲ್ಲುಗಳು, ವೀಳ್ಯ ತಿಂದು ಕೆಂಪಾದ ಬಾಯಿ, ಕಿರಿದಾಗಿ ತೆರೆದುಕೊಂಡಿರುವ ಕಣ್ಣುಗಳು ಅವನನ್ನು ಊರಿನ ಇತರರಿಗಿಂತ ಬೇರೆಯಾಗಿಸಿದ್ದವು. ವೀಳ್ಯದೆಲೆ ಮುಗಿದಾಗಲೆಲ್ಲ ನೀಲಿಯ ಮನೆಯನ್ನು ಹುಡುಕಿಕೊಂಡು ಬರುವ ವಜ್ರನಾರಾಯಣ ಸೋಮಣ್ಣ ಹೋದ ಮೂರು ದಿನಕ್ಕೆಲ್ಲ ಮನೆಯಂಗಳದಲ್ಲಿ ಪ್ರತ್ಯಕ್ಷನಾಗಿದ್ದ.

ನೀಲಿ ಸಮಯ ಕಾದು ಅವನಲ್ಲಿ ದೆವ್ವಗಳ ಬಗ್ಗೆ ಕೇಳಿದಳು. ಸಿಕ್ಕಿದ್ದೇ ಅವಕಾಶವೆಂದುಕೊAಡ ಅಜ್ಜ ತನ್ನ ಹಳೆಯ ಕಾಲದ ಕತೆಗಳನ್ನೆಲ್ಲ ನೀಲಿಗೆ ಹೇಳತೊಡಗಿದ. ಪ್ರಾಯದ ಕಾಲದಲ್ಲಿ ದೂರದೂರಿಗೆಲ್ಲ ದೆವ್ವ ಬಿಡಿಸಲು ಹೋಗುತ್ತಿದ್ದುದು, ರಾತ್ರಿ ಕಾಲ್ನಡಿಗೆಯಲ್ಲಿ ಮರಳುವಾಗ ಸಿಗುವ ನಿರ್ಜನ ಪ್ರದೇಶದಲ್ಲಿ ದೆವ್ವಗಳು ಅವನನ್ನು ಹಿಂಬಾಲಿಸಿಕೊಂಡು ಬರುವುದು, ತಿರುಗಿ ನೋಡಿದರೆ ರಕ್ತಕಾರಿ ಸಾಯುವ ಅಪಾಯವಿರುವುದರಿಂದ ಅದೆಷ್ಟೇ ಚೇಷ್ಟೆ ಮಾಡಿದರೂ ಹಿಂದಿರುಗಿ ನೋಡದೇ ಮನೆಸೇರುತ್ತಿದ್ದುದು, ಅಪರೂಪದ ಆಳಾದ ಅವನ ದೇಹದಾರ್ಢ್ಯಕ್ಕೆ ಮನಸೋತು ಹೆಣ್ಣು ದೆವ್ವಗಳೆಲ್ಲ ಮೋಹಿನಿಯಾಗಿ ಅವನ ಮುಂದೆ ಸುಳಿಯುತ್ತಿದ್ದುದು, ಅವನು ಮಾತ್ರ ಅವುಗಳ ಪಾದವನ್ನು ನೋಡಿಯೇ ದೆವ್ವವೆಂದು ಗುರುತಿಸಿ ಅವುಗಳ ಕಣ್ಣೋಟಕ್ಕೆ ಸೋಲದೇ ಮರಳಿದ್ದು ಹೀಗೆ ಹೇಳುತ್ತಾ, ಹೇಳುತ್ತಾ ದೆವ್ವಗಳ ಲೋಕಕ್ಕೇ ಅವಳನ್ನು ಕರೆದುಕೊಂಡು ಹೋಗಿದ್ದ. ನೀಲಿ ಇನ್ನಷ್ಟು ಕುತೂಹಲದಿಂದ ಕೇಳಿದಳು, “ಅಜ್ಜಾ, ನೀನು ದೆವ್ವ ನೋಡಿದ್ದೀಯಾ?” ವಜ್ರನಾರಾಯಣ ಇನ್ನೊಂದು ಎಲೆ ಅಡಿಕೆಯನ್ನು ಅವಳಿಂದ ಕೇಳಿ ಪಡೆದು ಬಾಯಿಗಿಟ್ಟು ಕಟಂ ಎಂದು ಕಡಿಯುತ್ತಾ ಹೇಳಿದ. “ಯಾರತ್ರನೂ ಹೇಳಬೇಡ ಕೂಸೆ. ಒಂದ್ಸಲ ದೆವ್ವಾನ ನೋಡ್ದೆ. ಅದೇ ನಿರ್ಜನ ದಾರಿಯಲ್ಲಿ ನಡೆದು ಬರೋವಾಗ ದೆವ್ವ ಚೇಷ್ಟೆ ಮಾಡ್ತಾ ನನ್ನ ಹಿಂದೆನೇ ಬರ್ತಿತ್ತು. ಏನಾದರಾಗಲಿ ಅಂತ ತಿರುಗಿ ನೋಡೇಬಿಟ್ಟೆ. ಏನ್ ಹೇಳ್ತೆ ನೀನು? ಕಪ್ಪು ಮಂಡೆ ಹರಡ್ಕಂಡು, ಕೆಂಪು ಕಣ್ಣು ಬಿಟ್ಕೊಂಡು, ಕೋರೆ ಹಲ್ಲು ತೋರಿಸಿ ದೆವ್ವ ಹ್ಹ…ಹ್ಹ… ಹ್ಹ… ಅಂತಾ ನಕ್ಕುಬಿಡ್ತು. ಇವತ್ತು ಇವ ನಂಗೆ ಸಿಕ್ದಾ ಅಂತ ಗಿರಾಯಿಸಿ ಹಿಡಿಯಲು ಬಂತು. ಇದೇ, ಇದೇ ದೊಣ್ಣೆಯಲ್ಲಿ ಬಿಟ್ಟೆ ನೋಡು, ಕೊಂಯ್ಯ, ಕುಸ್ಕ… ಅಂದ್ಕಂಡು ಓಡಿಹೋಯ್ತು. ನನ್ನತ್ರ ದೆವ್ವದ ಆಟ ನಡೀತದ್ಯಾ?” ಎಂದು ಎಲೆಯಡಿಕೆಯನ್ನು ಮತ್ತೊಮ್ಮೆ ಅಗಿದು ನುಣ್ಣಗಾಗಿಸಿದ. ನೀಲಿ ಕಣ್ಣರಳಿಸಿ ಕೇಳಿದಳು, “ಮತ್ತೆ? ತಿರುಗಿ ನೋಡಿದ್ರೆ ರಕ್ತಕಾರಿ ಸಾಯ್ತಾರೆ ಅಂದೆ?” ವಜ್ರನಾರಾಯಣ ಗಹಗಹಿಸಿ ನಕ್ಕ. ನೀಲಿಗೆ ಅದು ದೆವ್ವದ ನಗುವಂತೆ ಕೇಳಿಸಿತು, “ನನ್ನ ಕೊಲ್ಲೋ ದೆವ್ವ ಎಲ್ಲಿ ಹುಟ್ಟದೆ ಕೂಸೆ? ಇದೇನು ನನ್ನ ಊರುಗೋಲು ಅಂದ್ಕಂಡ್ಯಾ? ನಾಗರಬೆತ್ತ. ನನ್ನಪ್ಪ ಮಂತ್ರಮಾಡಿ ನನ್ನ ಕೈಗಿಟ್ಟು ಹೋದ ಬೆತ್ತ. ಇದರ ರುಚಿ ನೋಡಿದ್ರೆ ದೆವ್ವಗಳೇ ರಕ್ತಕಾರಿ ಸಾಯ್ತವೆ.” ನೀಲಿಗೀಗ ಅರ್ಜಂಟಾಗಿ ನಾಗರಬೆತ್ತವೊಂದು ಬೇಕು ಅನಿಸಿತು. “ಅಜ್ಜಾ, ನಂಗೊಂದು ಬೆತ್ತ ಸಿಗಬಹುದಾ?” ಎಂದು ಕೇಳಿದಳು. “ಎಲಾ ಕೂಸೆ, ನನ್ನ ಮಕ್ಕಳು ಮರಿದೀರೆ ದೆವ್ವ ಬಿಡಿಸೋ ಇದ್ಯೆ ಸಾಕಂತ ಬೆತ್ತ ಮುಟ್ಟೂದಿಲ್ಲ. ನೀ ನೋಡಿದ್ರೆ ಬೆತ್ತ ಬೇಕು ಅಂತ್ಯಲ್ಲೆ. ಬಾ ಇಲ್ಲಿ, ನಿನ್ನನ್ನ ಯಾವ ದೆವ್ವವೂ ಮುಟ್ಟದ ಹಾಗೆ ಛೂ ಮಂತ್ರ ಹಾಕಿ ಹೋಗ್ತೆ. ದೆವ್ವ ನಿನ್ನ ನೋಡಿದ್ರೆ ರಕ್ತ ಕಾರಿ ಸಾಯ್ತವೆ.” ಎನ್ನುತ್ತಾ ತನ್ನ ದೊಣ್ಣೆಯನ್ನು ಅವಳ ತಲೆಯ ಸುತ್ತಲೂ ತಿರುಗಿಸತೊಡಗಿದ.

ನೀಲಿ ತೋಟದಲ್ಲಿದ್ದ ಅಪ್ಪನಲ್ಲಿಗೆ ಹೋಗಿ, “ಅಪ್ಪಾ, ನಮ್ಮೂರಿಗೆ ಬರೋ ದಾರಿಯಲ್ಲಿ ದೆವ್ವಗಳೇನಾದರೂ ಇವೆಯಾ?” ಎಂದು ಕೇಳಿದಳು. ಅಡಿಕೆ ಗಿಡದ ಬುಡ ಮಾಡುವುದರಲ್ಲಿ ಮುಳುಗಿದ್ದ ಅಪ್ಪ, “ಮೊದಲೆಲ್ಲಾ ಅಲ್ಲಿ ಒಂದೂ ಮನೆಗಳಿರಲಿಲ್ಲ. ಹಾಗಾಗಿ ದೆವ್ವಗಳು ಓಡಾಡೋ ಜಾಗ ಅಂತಿದ್ರು. ಪುಂಡು ಪೋಕರಿ ಮಕ್ಕಳೆಲ್ಲ ತಮ್ಮ ರಾತ್ರಿಯ ಕಾರುಬಾರು ನಡಿಸಲಿಕ್ಕೆ ಒಂದೊಂದು ಕತೆ ಕಟ್ತಾ ಹೋಗ್ತಾರೆ. ಈಗ ಸರಕಾರದ ಹುಡ್ಕೋ ಮನೆಗಳ ಸಾಲು, ಸಾಲು ಬಂದು ದೆವ್ವಗಳೆಲ್ಲಾ ಊರುಬಿಟ್ಟಿವೆ.” ಎಂದು ನಕ್ಕರು. ಅಪ್ಪ ಹೇಳಿದ ವಿಷಯ ನೀಲಿಗೆ ಅರ್ಥವಾಗಲಿಲ್ಲವಾದರೂ ನಿರ್ಜನ ದಾರಿ ತುಂಬೆಲ್ಲಾ ಮನೆಗಳಾಗಲಿ ದೇವ್ರೆ, ಹಾಗಾದರೂ ದೆವ್ವಗಳ ವಾಸಸ್ಥಾನ ಇಲ್ಲವಾಗಲಿ ಎಂದು ಮನಸ್ಸಿನಲ್ಲಿಯೇ ಹಾರೈಸಿದಳು. ಹೇಗೂ ತನ್ನ ಸುತ್ತಲೂ ವಜ್ರನಾರಾಯಣ ಹಾಕಿದ ವಜ್ರದ ಕವಚವಿದೆ, ಯಾವ ದೆವ್ವವೂ ತನ್ನ ಹತ್ತಿರ ಬಾರದು ಎಂದು ತುಸು ಧೈರ್ಯಗೊಂಡಳು. ಶಾಲೆಯಲ್ಲಿ ತನ್ನ ಯಾವ ಸಹಪಾಠಿಗಳಿಗೆಲ್ಲ ಈ ಕವಚ ಬೇಕಾಗಬಹುದು ಎಂಬ ಯೋಚನೆಯಲ್ಲಿ ನಿದ್ದೆಹೋದಳು.