ಹೇಮಂತ್ ರಾವ್ ದರ್ಜಿಯಾಗಿ ಕಥೆಯನ್ನು ಅಂದವಾಗಿ ಹೊಲಿದಿದ್ದಾರೆ. ‘ಸಣ್ಣ ಜೈಲಿನಿಂದ ದೊಡ್ಡ ಜೈಲಿಗೆ ಹೋಗುತ್ತಿದ್ದೀಯ’ ಎಂಬಂತಹ ಹಲವು ಅರ್ಥಪೂರ್ಣ ಮಾತುಗಳು ಇಲ್ಲಿ ಮನ ಸೆಳೆಯುತ್ತದೆ. ಪುಟ್ಟಿ ಮತ್ತು ಮಗನಿಗೆ ಕಳೆದ ಸಂತಸವ ಮರಳಿ ನೀಡುವಂತೆ ಮಾಡುವ ರೋಲರ್ ಕೋಸ್ಟರ್ ಪಯಣ, ಮನುವಿನ ದೃಷ್ಟಿಗೆ ಬದುಕು ಅನುಭವಿಸುವ ಏಳು ಬೀಳಿನ ಸಂಕೇತದಂತೆ ಕಾಣುತ್ತದೆ. ‘ಮರಳಿ ಮಣ್ಣಿಗೆ’ ಎಂಬಂತೆಯೇ ಕಾಣುವ ಅಂತ್ಯ, ಕೆಂಪು-ನೀಲಿ ಹಿನ್ನೆಲೆಯ ಬದಲಾವಣೆಯಾಗುತ್ತಿದ್ದಂತೆ ಭಾವಗಳ ಮುಖವಾಡ ಭಿನ್ನವಾಗುವಿಕೆ, ಅಲ್ಲೆಲ್ಲೋ ಓಡುವ ರೈಲಿನ ಸದ್ದು ನಾವು ಪ್ರಯಾಣಿಕರು ಎಂಬ ಭ್ರಮೆಯನ್ನು ಸೃಷ್ಟಿಸುವಂತೆ…
ರಾಮ್ ಪ್ರಕಾಶ್ ರೈ ಕೆ. ಬರೆಯುವ”ಸಿನಿ ಪನೋರಮಾ” ಸರಣಿಯಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾದ ವಿಶ್ಲೇಷಣೆ

ನೀನಿಲ್ಲದೆ ಆ ಚಂದಿರ ಈ ಕಣ್ಣಲಿ ಕಸವಾಗಿದೆ

ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸುನೀಗಿದೆ
ನನಗೂ ನಿನಗೂ
ನೆನಪೊಂದೇ ಈಗ ಸೇತುವೆ

-ಜಯಂತ ಕಾಯ್ಕಿಣಿ

(ಹೇಮಂತ್ ರಾವ್)

‘ನನ್ನ ಸಮುದ್ರ ನೀನು’…. ‘ನಿನಗಾಗಿ ಕಾಯುವೆ ಕೊನೆವರೆಗೆ’… ಎನ್ನುತ್ತಾ ಹಾಡುತ್ತಿದ್ದ ಪುಟ್ಟಿ ಸಾಗರದ ಅನಿರೀಕ್ಷಿತ ಅಲೆಗೆ ತತ್ತರಿಸಿ ತೀರದ ತಿರುವಲ್ಲಿ ಕಳೆದು ಹೋಗಿದ್ದಾಳೆ. ಮನು ಮನದ ಮೂಲೆಯಲ್ಲಿ ಅವಿತಿದ್ದರೂ ಬದುಕು ನದಿಯಂತೆ ಕಾಯದೆ ಮುಂದಣ ಹೆಜ್ಜೆಯಿಟ್ಟಿದೆ. ಮನು ನೆನಪುಗಳ ಕಂಬಿಯೊಳಗೆ ತುಕ್ಕು ಹಿಡಿಸಿಕೊಂಡು, ಭಾರವಾಗಿದ್ದಾನೆ. ಮಾಸದ ಗಾಯಗಳು ಮುಖದಲ್ಲಿ ನಗುತ್ತಿವೆ. ಮೂಕ ವೇದನೆ ಕಣ್ಣಲ್ಲಿದೆ. ಆರದ ಬೆಂಕಿಯ ಬೇಗೆಯಲ್ಲಿ ಬೆಂದರೂ, ರಣ ಪ್ರವಾಹದ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋದರೂ, ಅವಳ ನೆನಪುಗಳ ಮಳೆಗಾಲವೇ ಅವನ ಉಸಿರು. ಹಲವು ಸಂವತ್ಸರಗಳ ದಾಟಿ, ಸಣ್ಣ ಜೈಲಿನಿಂದ ಜಗವೆಂಬ ದೊಡ್ಡ ಜೈಲಿಗೆ ಬರುವ ಮನು, ಗಂಡ ಮಗನೊಂದಿಗೆ ಬದುಕುತ್ತಿರುವ ಪ್ರಿಯಾ, ಇವರಿಬ್ಬರ ನಡುವಿನ ಪ್ರೀತಿಯ ಪುಟಗಳು ಹರಿದು ಹೋದ ನಂತರವೂ, ಇನ್ನೇನೋ ಬಾಕಿ ಉಳಿದಿದೆ ಓದಲು ಎಂಬಂತೆ ಪಯಣ ಮುಂದುವರೆಸುವ ಚಿತ್ರವೇ ಹೇಮಂತ್ ರಾವ್ ರವರ ‘ಸಪ್ತ ಸಾಗರದಾಚೆಯೆಲ್ಲೋ ಸೈಡ್ ಬಿ’.

ದೊಡ್ಡವರ ದುರಾಸೆಯ ಪಾಶಕ್ಕೆ ಸಿಲುಕಿ ಮನು ಮಾಡದ ತಪ್ಪಿಗೆ ತನ್ನ ಸಮುದ್ರದಿಂದ ದೂರವಾಗುತ್ತಾನೆ. ಬದುಕಿನ ಬಯಲಾಟಕ್ಕೆ ಸಿಲುಕಿ, ಪುಟ್ಟಿ ಮನುವನ್ನು ಬಿಟ್ಟು ಇನ್ನೊಬ್ಬನೊಂದಿಗೆ ಅರುಂಧತಿ ನಕ್ಷತ್ರವ ವೀಕ್ಷಿಸುತ್ತಾಳೆ. ಅದೆಷ್ಟೋ ಕಾಲಗಳು ಕಸವಾಗಿ, ಜೈಲಿನಿಂದ ಬಿಡುಗಡೆಗೊಂಡರೂ ಮನುವಿನ ಮನಸ್ಸು ಮತ್ತೆ ಮತ್ತೆ ತುಡಿಯುತ್ತಿದ್ದದ್ದು ಮತ್ತದೇ ‘ಕತ್ತೆ’ ಎನ್ನುತ್ತಾ ಮುದ್ದು ಮಾಡುತ್ತಿದ್ದ ಪುಟ್ಟಿಯ ದನಿಗಾಗಿ. ಅವಳ ಆಸೆ, ಕನಸುಗಳನ್ನು ಟೇಪ್ ರೆಕಾರ್ಡರ್ ಉಲಿಯುತ್ತಿದ್ದರೆ, ಮನು ಮಗುವಿನಂತಾಗಿ ಬಿಡುತ್ತಾನೆ. ಸಹ ಖೈದಿ, ಸಹವಾಸಿ ಪ್ರಕಾಶ ಮತ್ತೆ ಮತ್ತೆ ಅವಳ ಅಧ್ಯಾಯ ನಿನ್ನ ಬದುಕಲ್ಲಿ ಮುಗಿದಿದೆ ಅಂದರೂ ಮನು, ಸಂತೆಯ ಮಧ್ಯೆ ಆಟಿಕೆಗಳಿಗೆ ಸೋತು ನಿಂತ ಮಗುವಿನಂತೆ, ಅವಳೊಂದಿಗೆ ಕಳೆದ ಕ್ಷಣಗಳ ಇಂಪಿನಲ್ಲೇ ಕಳೆದು ಹೋಗುತ್ತಾನೆ. ಆದರೆ ವಾಸ್ತವತೆಯ ತೀರಕ್ಕೆ ಮರಳಿದಾಗಲೆಲ್ಲಾ ಅವಳಿಲ್ಲದ ಖಾಲಿತನ, ಒಂಟಿತನ ಕಟುವಾಗಿ ಕಾಡುತ್ತದೆ. ಆಗ ಮುರಿದ ಗಾಜಿನ ಚೂರುಗಳನ್ನು ಜೋಡಿಸುವ ಸಲುವಾಗಿ ಬರುವವಳೇ ಸುರಭಿ.

ಅವಳೂ ಮನುವಿನಂತೆಯೇ ಮುಗಿಯದ ನೋವಿನ ಮಹಲಲ್ಲಿ ನಡೆದವಳೇ. ದುಃಖ ಮರೆಸುವ ಹಾದಿಯೇ ಮನು ಸುರಭಿಯ ಭೇಟಿಗೆ ನಾಂದಿಯಾಗುತ್ತದೆ. ದೇಹದ ಬಯಕೆಗಳನ್ನು ಮೀರಿದ ಸಂಬಂಧವೊಂದು ಮೂಡುತ್ತದೆ. ಆದರೆ, ಜಗವೆಂದರೆ ಪುಟ್ಟಿ ಎಂದು ಮನದೊಳಗೆ ಅಳಿಸದಂತೆ ದಾಖಲು ಮಾಡಿಕೊಂಡಿರುವ ಮನುವಿಗೆ ಸುರಭಿಯಲ್ಲೂ ಪ್ರಿಯಾ ಕಾಣಿಸುತ್ತಾಳೆ. ಪ್ರಿಯಾಳ ಹಾಡು ಸುರಭಿಯಲ್ಲಿ ಕೇಳಬೇಕೆನಿಸುತ್ತದೆ. ಅದೆಷ್ಟೇ ಸುರಭಿ ಜೊತೆಯಾದರೂ, ಪುಟ್ಟಿ ಬಿಟ್ಟುಹೋದ ನಿರ್ವಾತದ ನಿವಾರಣೆ ಅವಳಿಂದ ಸಾಧ್ಯವಾಗುವುದಿಲ್ಲ. ಮುಂದೆ, ಮನು ಪುಟ್ಟಿಗಾಗಿ ಹುಡುಕುತ್ತಾನೆ. ಅವಳ ಮನೆಯ ಅಂಚಿನಲ್ಲಿರುವ ರೈಲ್ವೆ ಹಳಿಯಲ್ಲಿ ನಿಂತ ಗುಜರಿ ಬೋಗಿಯ ಒಳಗೆ ಕುಳಿತು ಅವಳ ಓಡಾಟ, ಹಾಡು ಮರೆಸಿದ ಬದುಕಿನ ಬವಣೆಗಳನ್ನು ದಿಟ್ಟಿಸುತ್ತಾನೆ. ಅವಳ ಭೇಟಿಗೆ, ‘ಕತ್ತೆ’ಯೆಂದು ಕರೆವ ಅವಳ ಭಾವ ಪೂರ್ಣ ದನಿಗೆ ಕಾತರಿಸುತ್ತಾನೆ. ದಿಕ್ಕು ತಪ್ಪಿದ ಪುಟ್ಟಿಯ ಗಂಡ, ಹಳಿ ತಪ್ಪಿದ ಆಕೆಯ ಬದುಕ ಕಂಡು ಸಿಡಿಲು ಬಡಿದಂತಹ ಅನುಭವ ಮನುವಿಗಾಗುತ್ತದೆ. ಈ ಪರಿಸ್ಥಿತಿಗೆ ನೂಕಿದ ಪುಟ್ಟಿಯ ಗಂಡ, ಶಂಕ್ರೇ ಗೌಡರ ಕುಟುಂಬ, ಜೈಲಿನಲ್ಲಿ ಕಾಡಿದ ಸೋಮ ಮತ್ತವನ ಬಳಗ ಇವರೆಲ್ಲರ ಮೇಲೂ ಆಕ್ರೋಶ ಇಮ್ಮಡಿಯಾಗುತ್ತದೆ. ವಿಶೇಷತಃ, ಪುಟ್ಟಿಯನ್ನು ಗಂಡನಿಂದ ಬೇರ್ಪಡಿಸಿ, ಅವಳು ಮತ್ತೆ ಚಂದಿರನಂತೆ ಅರಳಿ ಹಾಡುವಂತಾಗಬೇಕು ಎಂಬ ಭಾವ ಮೂಡುತ್ತದೆ. ಇವೆಲ್ಲಾ ಯೋಚನೆಗಳ ಸುತ್ತ ಸುತ್ತುವ, ತನ್ನ ಹೃದಯ ಒಡೆದು ಚೂರಾದರೂ ತನ್ನ ಪ್ರೀತಿಸಿದ ಆತ್ಮ ಸುಖವಾಗಿರಬೇಕು ಎಂದು ಬಯಸುವ ಸುಂದರ ಪರಿಕಲ್ಪನೆಯ ಚಿತ್ರವೇ ‘ಸಪ್ತ ಸಾಗರದಾಚೆಯೆಲ್ಲೋ ಸೈಡ್ ಬಿ ‘

ಕ್ಯಾಸೆಟ್ ತಿರುವಿ ಹಾಕಿದಾಗ ಹಾಡುಗಳು ಬದಲಾಗುವಂತೆ, ಇಲ್ಲಿ ತೀರ ಬದಲಾಗುತ್ತಿದ್ದಂತೆಯೇ ಭಾವಗಳು ಬದಲಾಗುತ್ತವೆ. ಮೊದಲ ಭಾಗದಲ್ಲಿ ನೀಲಮಯ ಆಗಸದಂತೆ ಶಾಂತತೆಯಿದ್ದರೆ, ದ್ವಿತೀಯ ಭಾಗದಲ್ಲಿ ಬಿರುಗಾಳಿಗೆ ಬಸವಳಿದ ಬದುಕಿನ ಆಕ್ರೋಶ ಕೆಂಪು ರಂಗಿನ ಮೂಲಕ ಪ್ರತ್ಯಕ್ಷವಾಗಿದೆ. ಇಲ್ಲಿ ದೋಣಿಯಿಂದ ಇಳಿದ ಮೇಲೂ ನದಿಯ ನೆನಪಿನಲ್ಲೇ ಮುಳುಗುವಂತೆ ಮನುವಿನ ಪ್ರೇಮ. ಒಂದಲ್ಲದಿದ್ದರೆ ಇನ್ನೊಂದು ಬಸ್ಸು, ಊರು ಸೇರಿದರಾಯಿತು ಎನ್ನುವ ಈ ಜಮಾನದಲ್ಲಿಯೂ, ಅವಳೊಬ್ಬಳು ಅವನಿಗೆ ಬೇರೆ ಹುಡುಗಿಯರ ಇರುವಿಕೆಯನ್ನು ಮರೆಸಿದ್ದಳು. ಅವಳೊಂದಿಗೆ ಇಟ್ಟ ಹೆಜ್ಜೆಯ ಭೋರ್ಗರೆವ ಮಳೆಗಾಲ ಕಸಿದುಕೊಂಡರೂ, ಮತ್ತೆ ಮತ್ತೆ ಅವನು ಮಳೆಯಲ್ಲಿ ನೆನೆಯುತ್ತಾನೆ ಅವಳದೇ ನೆಪದಲ್ಲಿ ನೆನಪಲ್ಲಿ. ಉಪೇಂದ್ರರ ಹಾಡಿನ ಸಾಲೊಂದಿದೆ ‘ಮೌನವೇನೇ ಧ್ಯಾನವೇನೇ ಪ್ರೇಮ’ ಎಂದು.
ಅದಕ್ಕೆ ಅನ್ವರ್ಥದಂತೆ ಎರಡನೇ ಭಾಗದ ಮನು ಕಾಣುತ್ತಾನೆ.

ಮನು ನೆನಪುಗಳ ಕಂಬಿಯೊಳಗೆ ತುಕ್ಕು ಹಿಡಿಸಿಕೊಂಡು, ಭಾರವಾಗಿದ್ದಾನೆ. ಮಾಸದ ಗಾಯಗಳು ಮುಖದಲ್ಲಿ ನಗುತ್ತಿವೆ. ಮೂಕ ವೇದನೆ ಕಣ್ಣಲ್ಲಿದೆ. ಆರದ ಬೆಂಕಿಯ ಬೇಗೆಯಲ್ಲಿ ಬೆಂದರೂ, ರಣ ಪ್ರವಾಹದ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋದರೂ, ಅವಳ ನೆನಪುಗಳ ಮಳೆಗಾಲವೇ ಅವನ ಉಸಿರು.

ಕಥೆಯೊಂದು ಮುಗಿದೇ ಹೋಯಿತು ಅನ್ನುವಾಗಲೇ ಹೇಳಲು ಇನ್ನೇನೋ ಉಳಿದಿದೆ ಎಂದು ಬರುವ ಸೈಡ್ ಬಿ ರೂಪಕಗಳ ಆಗರ. ಅವಳ ಬದುಕನ್ನು ಗಾಜಿನ ಕಿಟಕಿ ಒಡೆದು ಮನು ನೋಡುತ್ತಿರಬೇಕಾದರೆ ಕೆಳಗೆ ಬಿದ್ದಿರುವ ಅಸಂಖ್ಯ ಸಿಗರೇಟ್‌ಗಳ ಅರೆ ಬೆಂದ ಶವ ಮನುವಿನ ಮನದ ತಲ್ಲಣದ ಸೂಚಕದಂತೆ ಕಾಣುತ್ತದೆ. ಈರ್ವರ ಮಧ್ಯೆ ತಡೆಯಂತೆ ಇದ್ದ ಬ್ಯಾನರ್ ಹರಿದಾಗ ಪುಟ್ಟಿಯ ಕತ್ತಲು ಮೆತ್ತಿದ್ದ ಗೂಡಿನೊಳಗೆ ಬೆಳಕು ನಗುವ ಪರಿ, ಮನು ಅವಳ ಆನಂದಕ್ಕಾಗಿ ಮೀಸಲಿಟ್ಟ ತನ್ನ ಬದುಕಿನ ಪ್ರಭೆಯಂತೆ ಭಾಸವಾಗುತ್ತದೆ.

ಮೊದಲ ಭಾಗದಲ್ಲಿ ಮನು ಮತ್ತು ಪುಟ್ಟಿಯ ಮಧ್ಯೆ ಕಂಬಿಯ ತಡೆಯಿದ್ದರೂ, ಪ್ರೀತಿಯ ವಿನಿಮಯಕ್ಕೆ ಪರವಾನಗಿಯ ಅವಶ್ಯಕತೆ ಇರಲಿಲ್ಲ. ಆದರೆ ಈಗ ಎಲ್ಲವೂ ತೆರವಾಗಿದ್ದರೂ, ನಡುವೆ ನಿಲುಕಲಾರದಷ್ಟು ದೊಡ್ಡ ಅಂತರವಿದೆ. ಜೈಲಿಗೂ ಮೀರಿದ ಕಂಬಿಯ ಅಡಚಣೆಯಿದೆ. ‘ನನ್ನ ಸಮುದ್ರ ನೀನು’ ಎನ್ನುವ ಪುಟ್ಟಿಯ ಮಾತು ಕಥಾನಕದ ಕೊನೆಯಲ್ಲಿ ಭಾವನೆಗಳೆ ನಲುಗುವಂತೆ ನಡೆದು ಹೋಗುತ್ತದೆ. ಅಲೆಗಳ ಅಬ್ಬರ ಉಳಿಸಿ ಹೋಗುವ ಮೌನದಂತೆ, ಉಸಿರು ನಿಲ್ಲುವ ಮುನ್ನ ಬದುಕುವ ಆಸೆ ಹೇಳುವ ಕಣ್ಣುಗಳಂತೆ ಕಾಡುತ್ತದೆ. ಹೀಗೆ, ಪ್ರೇಮವೊಂದರ ಪರಿಧಿ ಅದೆಷ್ಟು ಅನಂತ, ಅನೂಹ್ಯ ಥೇಟು ಸಾಗರದ ತೆರನಾದ ವಿಸ್ತಾರ ಎಂದು ಮನು-ಪ್ರಿಯಾರೆಂಬ ಪಾತ್ರಗಳ ಮೂಲಕ ಪ್ರತ್ಯಕ್ಷೀಕರಿಸುತ್ತದೆ ‘ಸಪ್ತ ಸಾಗರದಾಚೆಯೆಲ್ಲೋ ಸೈಡ್ ಬಿ’.

ಹೇಮಂತ್ ರಾವ್ ದರ್ಜಿಯಾಗಿ ಕಥೆಯನ್ನು ಅಂದವಾಗಿ ಹೊಲಿದಿದ್ದಾರೆ. ‘ಸಣ್ಣ ಜೈಲಿನಿಂದ ದೊಡ್ಡ ಜೈಲಿಗೆ ಹೋಗುತ್ತಿದ್ದೀಯ’ ಎಂಬಂತಹ ಹಲವು ಅರ್ಥಪೂರ್ಣ ಮಾತುಗಳು ಇಲ್ಲಿ ಮನ ಸೆಳೆಯುತ್ತದೆ. ಪುಟ್ಟಿ ಮತ್ತು ಮಗನಿಗೆ ಕಳೆದ ಸಂತಸವ ಮರಳಿ ನೀಡುವಂತೆ ಮಾಡುವ ರೋಲರ್ ಕೋಸ್ಟರ್ ಪಯಣ, ಮನುವಿನ ದೃಷ್ಟಿಗೆ ಬದುಕು ಅನುಭವಿಸುವ ಏಳು ಬೀಳಿನ ಸಂಕೇತದಂತೆ ಕಾಣುತ್ತದೆ. ‘ಮರಳಿ ಮಣ್ಣಿಗೆ’ ಎಂಬಂತೆಯೇ ಕಾಣುವ ಅಂತ್ಯ, ಕೆಂಪು-ನೀಲಿ ಹಿನ್ನೆಲೆಯ ಬದಲಾವಣೆಯಾಗುತ್ತಿದ್ದಂತೆ ಭಾವಗಳ ಮುಖವಾಡ ಭಿನ್ನವಾಗುವಿಕೆ, ಅಲ್ಲೆಲ್ಲೋ ಓಡುವ ರೈಲಿನ ಸದ್ದು ನಾವು ಪ್ರಯಾಣಿಕರು ಎಂಬ ಭ್ರಮೆಯನ್ನು ಸೃಷ್ಟಿಸುವಂತೆ, ಮನು ಪುಟ್ಟಿಯ ಮಾತುಗಳಲ್ಲಿ ಮುಳುಗಿ ಖಾಲಿತನವ ನಿವಾರಿಸಿಕೊಳ್ಳುವ ಪರಿ ಎಲ್ಲವೂ ಮನ ಸೂರೆಗೊಳ್ಳುವ ಸಂಗತಿ. ಗೋಪಾಲಕೃಷ್ಣ ದೇಶಪಾಂಡೆಯವರ ಪ್ರಕಾಶನ ಪಾತ್ರದ ಹಾಸ್ಯ ಪ್ರಜ್ಞೆಯು ಈ ಅತಿ ಭಾವುಕ ಪಯಣದಲ್ಲೊಂದು ವಿರಾಮದ ತೆರನಾದ ಅನುಭವವ ನೀಡುತ್ತದೆ.ಹೋಟೆಲಿನಲ್ಲಿ ಮೀನು ಕರ್ರಿ ತಿನ್ನುತ್ತಾ ‘ಈ ಮೀನು ಸತ್ತು ಹಲವು ತಿಂಗಳುಗಳೇ ಆಯಿತು’ ಎನ್ನುವ ಮಾತು ಅದಕ್ಕೊಂದು ಉದಾಹರಣೆ. ಸೋಮನಾಗಿ ರಮೇಶ್ ಇಂದಿರಾರದ್ದು ಅಕ್ಷರಶಃ ದಿಗ್ವಿಜಯ. ಮುಖಭಾವದಿಂದ ತೊಡಗಿ, ಹಾವಭಾವದವರೆಗೆ ಚಳಿಗಾಲದಲ್ಲಿ ಓಟ ಕೀಳುವ ಪಂಕದಂತೆ ಕಾಡುತ್ತಾರೆ.

ಸಾವಿನ ಯಾತ್ರೆಯಲ್ಲಿ ಮಾಡುವ ನೃತ್ಯ, ಐ ಲವ್ ಯು ಮನು ಎನ್ನುತ್ತಾ ವ್ಯಂಗ್ಯ ಭಾವದ ಪ್ರದರ್ಶನ ಹೀಗೆ ಖಳನೊಬ್ಬನ ಆತ್ಯಂತಿಕ ಅಭಿವ್ಯಕ್ತಿ ಅವರದ್ದು. ಕೆಂಡಸಂಪಿಗೆ, ಕಡಲ ಮೌನ, ಬೆಳಕ ಭಾವವೆಲ್ಲವೂ ಅದ್ವೈತರ ಕಣ್ಣುಗಳಲ್ಲಿ ಬಣ್ಣ ಬಳಿದು ಚಿಟ್ಟೆಯಂತೆ ಹಾರಾಡುತ್ತದೆ. ವಸತಿ ಗೃಹದ ಕೆಂಪು ಗೋಡೆಗಳು, ಮೇಲುಸೇತುವೆಯಲ್ಲಿ ತೂಗು ಬಿದ್ದ ದೇಹದ ಚಿತ್ರಣವ ಕ್ಯಾಮರಾ ನಿಖರ ಬೇಟೆಯಂತೆ ಸೆರೆ ಹಿಡಿದಿದೆ. ‘ಗಾಜು ಕೂಡಿದೆ’ ‘ಧರೆ ನೀ ನೀಡಿದಾಸರೆ’ ‘ಒಲವೇ ಒಲವೇ’ ಮುಂತಾದ ಹಾಡುಗಳು ಭಾವ ಬಾನಿನಲ್ಲಿ ತೇಲಿಸುತ್ತದೆ. ಚರಣರ ಚಮತ್ಕಾರದಂತೆ ಕಾಣುವ ‘ನದಿಯೇ ನದಿಯೇ’ ಹಾಡಿನ ‘ರಾಕ್’ ಷಸ ರೂಪ ಹಳೆಯ ಅಶೋಕ್ ಲೇಲ್ಯಾಂಡ್ ಇಂಜಿನ್‌ನಂತೆ ಅಬ್ಬರಿಸುತ್ತದೆ. ಅದೆಲ್ಲದರೊಂದಿಗೆ, ರಕ್ಷಿತ್, ರುಕ್ಮಿಣಿ, ಚೈತ್ರಾ ಆಚಾರ್ ಎಂಬ ತ್ರಿವಳಿ ಸಹಜ ಅಭಿವ್ಯಕ್ತಿಯ ಸಂಗಮ, ಕಥಾನಕದ ನೈಜತೆಯು ಪ್ರತಿ ಸಂಜೆ ಅಲಂಕರಿಸಿಕೊಳ್ಳುವ ಶರಧಿಯಂತೆ ಶೋಭಿಸಲು ಕಾರಣಕರ್ತವಾಗಿದೆ. ಹೀಗೆ ಅವಳ ದನಿಯೇ ಅವನ ಉಸಿರಿಗೆ ಊದುಗೊಳವೆ, ಅವಳ ಸುಖವೇ ಅವನ ಸಂತಸದ ಇಂಧನವೆಂದು ತೋರಿಸುವ ಸಪ್ತ ಸಾಗರದ ಇನ್ನೊಂದು ತೀರ ಸಿಹಿನೀರು ಉಪ್ಪಾಗುತ್ತಿರುವ ಈ ಪ್ರಸ್ತುತ ಕಾಲಘಟ್ಟದಲ್ಲಿ ಜನಿಸಿದ ಹೊಳೆವ ಹೊಳೆ.

ಮುಗಿಸುವ ಮುನ್ನ:
ಬದುಕು ಅಚ್ಚರಿಯ ಆಗರ, ತಿರುವುಗಳ ಸಾಗರ. ಎದೆಯ ಮೇಲೆ ಹರಡಿದ್ದ ಮುಂಗುರುಳು ಬಿಟ್ಟು ಹೋದ ಹೆಜ್ಜೆ ಗುರುತು,
ಉಸಿರ ಭಾರಕ್ಕೆ ಕಂಪಿಸುತ್ತಿದ್ದ ಹೃದಯ ಇವೆಲ್ಲವೂ ತಿರುವಿದ ಪುಟಗಳಲ್ಲಿ ಕಳೆದು ಹೋದರೂ ಪುಟ್ಟಿಯೆಂಬ ಪುಸ್ತಕ ಮನುವಿನ ಮಸ್ತಕವ ಆವರಿಸಿದೆ ಮರೆವು ಅಳಿಸುವಂತೆ. ಇಲ್ಲಿ ಪ್ರೀತಿಯೆಂದರೆ ಸಾವಿರ ನಕ್ಷತ್ರಗಳು ಅಂಟಿದ ಬಾನಿನಲ್ಲೂ, ಚಂದಿರನ ನಗುವಿಗೆ ಕಾಯುವುದು. ಕಿಟಕಿ ತೆರೆದು ನಗುವನೋ, ಬಾಗಿಲು ಹಾಕಿ ನಾಪತ್ತೆಯಾಗುವನೋ ಅದೇ ನಗು, ಅದೇ ನೆನಪು, ಅದೇ ಜಗತ್ತು ಎಂದು ಬದುಕುವುದು.
ಗಜಲ್ ನ ಸಾಲೊಂದಿದೆ,
“ಅವಳು ಹಿಂತಿರುಗಿ ಬರುವುದಿಲ್ಲ
ಎನ್ನುತ್ತಾರೆ ಎಲ್ಲರೂ
ಆದರೆ ಅವಳು ಎಂದು ತೊರೆದು
ಹೋದಳು? ನನ್ನ
ಪ್ರತಿ ಮೌನದಲ್ಲೂ ಕೇಳಿಸುತ್ತಿದ್ದದ್ದು ಅವಳ
ಮಾತೊಂದೇ”