ಕೆಲವೊಮ್ಮೆ ಎನ್ಸೆನ್ಸ್‌ಬರ್ಗರ್ ಅವರ ಕವನಗಳಿಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಸಹಜ, ಏಕೆಂದರೆ ಅವರ ಕವನಗಳಲ್ಲಿ ಪ್ರಾಸವು ಅಪರೂಪವಾಗಿರುತ್ತೆ ಹಾಗೂ ರೂಪಕಗಳು ಮತ್ತು ಪದಗುಚ್ಛಗಳ ದಟ್ಟವಾದ ಕೊಲಾಜ್‌-ಗಳನ್ನು ರಚಿಸುವ ಏಕಾಗ್ರತೆಯಲ್ಲಿ ಲಯವು ದ್ವಿತೀಯ ಸ್ಥಾನಕ್ಕೆ ಹೋಗುತ್ತೆ. ಅವರು ವಿಷಯದ ವಿಸ್ತಾರವನ್ನು ಹೊಂದಿದ್ದಾರೆ, ವಿವಿಧ ಶೈಲಿಗಳನ್ನು ಬಳಸುತ್ತಾರೆ ಮತ್ತು ಆ ಅವಧಿಯ, ಮಹಾಯುದ್ಧದ ಕಾಲದಲ್ಲಿ ಪ್ರೌಢಾವಸ್ಥೆಗೆ ಬಂದ ಯಾವುದೇ ಕವಿಗಿಂತ ಉತ್ತಮವಾಗಿ ತಮ್ಮ ಚಿಂತನೆಗಳನ್ನು ಓದುಗರಿಗೆ ತಿಳಿಸುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಜರ್ಮನ್ ಕವಿ ಹನ್ಸ್ ಮಾಗ್ನುಸ್ ಎನ್ಸೆನ್ಸ್‌ಬರ್ಗರ್ (Hans Magnus Enzensberger) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಹನ್ಸ ಮಾಗ್ನುಸ್ ಎನ್ಸೆನ್ಸ್‌ಬರ್ಗರ್ (Hans Magnus Enzensberger 1929-2022) ಯುದ್ಧೋತರ ಜರ್ಮನಿಯ ಅಗ್ರಗಣ್ಯ ಕವಿ; ಜೊತೆಗೆ ಪ್ರಚೋದನಕಾರಿ ಸಾಂಸ್ಕೃತಿಕ ಪ್ರಬಂಧಕಾರ, ಪ್ರಭಾವಶಾಲಿ ಸಂಪಾದಕ, ಹಾಗೂ ಯುರೋಪಿನ ಪ್ರಮುಖ ರಾಜಕೀಯ ಚಿಂತಕರಲ್ಲಿ ಒಬ್ಬರಾಗಿದ್ದರು. ಎನ್ಸೆನ್ಸ್‌ಬರ್ಗರ್ ಅವರು ‘ತೃತೀಯ ಜರ್ಮನ್‍ ಸಾಮ್ರಾಜ್ಯ’ (Third Reich) ಅಂದರೆ, ನಾಜಿ ಕಾಲದ ಜರ್ಮನ್‍ ಆಡಳಿತದಲ್ಲಿ ಜೀವನವನ್ನು ಅನುಭವಿಸಿದ, ಆ ಅನುಭವದಿಂದ ತಮ್ಮ ಬರಹವನ್ನು ರೂಪಿಸಿಕೊಂಡ ಕೊನೆಯ ತಲೆಮಾರಿನ ಬುದ್ಧಿಜೀವಿಗಳಲ್ಲಿ ಒಬ್ಬರಾಗಿದ್ದರು. ಯುದ್ಧೋತರ ಜಗತ್ತಿನ ಬಗ್ಗೆ ಅವರ ಕಾವ್ಯದಲ್ಲಿ ಕಂಡುಬರುವ ಸಾಮಾಜಿಕ ಮತ್ತು ನೈತಿಕ ಟೀಕೆಯು ಅವರ ಮಾರ್ಕ್ಸ್‌ವಾದದಿಂದ ಬರುತ್ತದೆ, ಆದರೆ ಕಮ್ಯುನಿಸ್ಟ್ ಸರ್ಕಾರಗಳು ತಮ್ಮದೇ ದೇಶದ ನಾಗರಿಕರಿಗೆ ಆಗಾಗ್ಗೆ ನಿರಾಕರಿಸಿದ ಸ್ವಾತಂತ್ರ್ಯಗಳ ಬಗ್ಗೆ ಒತ್ತಿ ಹೇಳುತ್ತಿದ್ದರು.

ಎನ್ಸೆನ್ಸ್‌ಬರ್ಗರ್ ಅವರು 1929-ರಲ್ಲಿ ಬವೇರಿಯಾದ ಸಣ್ಣ ಪಟ್ಟಣವಾದ ಕೌಫ್‌ಬ್ಯೂರೆನ್‌ನಲ್ಲಿ (Kaufbeuren) ಜನಿಸಿದರು; ನಾಲ್ಕು ಹುಡುಗರಲ್ಲಿ ಹಿರಿಯರು ಅವರು. ತಮ್ಮ ಹರೆಯದಲ್ಲಿ ‘ಹಿಟ್ಲರ್ ಯೂತ್’ ಸಂಘಟನೆಯನ್ನು ಸೇರಿದ ಇವರನ್ನು ಶೀಘ್ರದಲ್ಲೇ ಅದರಿಂದ ಹೊರಹಾಕಲಾಯಿತು. “ಒಳ್ಳೆಯ ಕಾಮ್ರೇಡ್ ಆಗಿರಲು ನಾನು ಅಸಮರ್ಥ. ನನಗೆ ಸಾಲಿನಲ್ಲಿ ನಿಲ್ಲಲು, ಸಾಗಲು ಸಾಧ್ಯವಿಲ್ಲ. ಅದು ನನ್ನ ಜಾಯಮಾನದಲ್ಲಿಲ್ಲ. ಇದು ನನ್ನ ನ್ಯೂನತೆಯಾಗಿರಬಹುದು, ಆದರೆ ಏನೂ ಮಾಡಲಿಕ್ಕಾಗಲ್ಲ.”

ಎನ್ಸೆನ್ಸ್‌ಬರ್ಗರ್-ರು ಎರ್ಲಾಂಗೆನ್, ಫ್ರೀಬರ್ಗ್ ಮತ್ತು ಹ್ಯಾಂಬರ್ಗ್ ವಿಶ್ವವಿದ್ಯಾಲಯಗಳಲ್ಲಿ ಮತ್ತು ಪ್ಯಾರಿಸ್‌ನ ಸೊರ್ಬೊನ್‌ನಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದರು. ಕ್ಲೆಮೆನ್ಸ್ ಬ್ರೆಂಟಾನೊ (Clemens Brentano) ಅವರ ಕಾವ್ಯದ ಕುರಿತು ಸಂಶೋಧನೆಗಾಗಿ 1955-ರಲ್ಲಿ ಡಾಕ್ಟರೇಟ್ ಪಡೆದರು. 1957-ರವರೆಗೆ ಅವರು ಸ್ಟಟ್‌ಗಾರ್ಟ್‌ನಲ್ಲಿ ರೇಡಿಯೊ ಸಂಪಾದಕರಾಗಿ ಕೆಲಸ ಮಾಡಿದರು. 1965 ಮತ್ತು 1975-ರ ಮಧ್ಯೆ ಎನ್ಸೆನ್ಸ್‌ಬರ್ಗರ್-ರು ಅಮೇರಿಕ ಮತ್ತು ಕ್ಯೂಬಾದಲ್ಲಿ ಸ್ವಲ್ಪ ಕಾಲ ವಾಸವಾಗಿದ್ದರು. 1985-ರಿಂದ ಅವರು ಫ್ರಾಂಕ್‌ಫರ್ಟ್‌ ನಗರದಿಂದ ಪ್ರಕಟವಾಗುತ್ತಿರುವ ‘Die Andere Bibliothek’ ಎಂಬ ಪ್ರತಿಷ್ಠಿತ ಪುಸ್ತಕ ಸರಣಿಯ ಸಂಪಾದಕರಾಗಿದ್ದರು; ಈ ಪುಸ್ತಕ ಸರಣಿಯಲ್ಲಿ ಈವರೆಗೆ ಸುಮಾರು 250 ಶೀರ್ಷಿಕೆಗಳು ಪ್ರಕಟವಾಗಿವೆ. ಇವರು ‘TransAtlantik’ ಎಂಬ ಮಾಸಿಕ ಪತ್ರಿಕೆಯ ಸಂಸ್ಥಾಪಕರೂ ಆಗಿದ್ದರು.

ಎನ್ಸೆನ್ಸ್‌ಬರ್ಗರ್ ಅವರನ್ನು ಪಶ್ಚಿಮ ಜರ್ಮನಿಯ ಸಾಹಿತ್ಯಿಕ ಸಂಸ್ಥಾಪಕ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ; ಅವರು 70-ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಮೂಲಭೂತವಾಗಿ ಕವಿ, ಕಾದಂಬರಿಕಾರ, ಹಾಗೂ ಪ್ರಬಂಧಕಾರರಾಗಿದ್ದರೂ, ಅವರು ರಂಗಭೂಮಿ, ಚಲನಚಿತ್ರ, ಓಪ್ರಾ, ರೇಡಿಯೋ ನಾಟಕ, ವರದಿಗಾರಿಕೆ, ಹಾಗೂ ಅನುವಾದ ಕ್ಷೇತ್ರಗಳಲ್ಲೂ ತಮ್ಮ ಪ್ರಾವೀಣ್ಯವನ್ನು ತೋರಿಸಿದ್ದಾರೆ. ಅವರು ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಷ್, ಇಟಾಲಿಯನ್, ಸ್ವೀಡಿಷ್ ಮತ್ತು ನಾರ್ವೇಜಿಯನ್ ಭಾಷೆಗಳಿಂದ ಕವನಗಳನ್ನು ಅನುವಾದಿಸಿದ್ದಾರೆ ಮತ್ತು ಅವರ ಕೃತಿಗಳನ್ನು ಸುಮಾರು 40 ಭಾಷೆಗಳಿಗೆ ಅನುವಾದಿಸಲಾಗಿದೆ. ಎನ್ಸೆನ್ಸ್‌ಬರ್ಗರ್-ರು ಸಂಸ್ಕೃತಿ ಮತ್ತು ರಾಜಕೀಯ ಕುರಿತು ಬರೆದ ಹಲವಾರು ಪುಸ್ತಕಗಳು ಇಂಗ್ಲಿಷ್‌-ಗೆ ಅನುವಾದಿಸಲಾಗಿದೆ, ಉದಾಹರಣೆಗೆ, ‘ಯುರೋಪ್, ಯುರೋಪ್’ (Europe, Europe 1989), ‘ಮೆಡಿಯೊಕ್ರಿಟಿ ಎಂಡ್ ಡೆಲ್ಯೂಷನ್’ (Mediocrity and Delusion 1992) ಮತ್ತು ‘ಸಿವಿಲ್ ವಾರ್’ (Civil War 1994). ಹಾಗೆಯೇ ಮಕ್ಕಳಿಗಾಗಿ ಎರಡು ಜನಪ್ರಿಯ ಪುಸ್ತಕಗಳನ್ನು ಬರೆದಿದ್ದಾರೆ – ಒಂದು ಮನೊರಂಜನಾತ್ಮಕ ಗಣಿತ ಪುಸ್ತಕ, ‘ದಿ ನಂಬರ್ ಡೆವಿಲ್’ (The Number Devil 1998), ಹಾಗೂ ಇತಿಹಾಸದ ಬಗ್ಗೆ, ‘ವೇರ್ ವರ್ ಯೂ, ರಾಬರ್ಟ್? (Where Were You, Robert? 2000). ಎನ್ಸೆನ್ಸ್‌ಬರ್ಗರ್-ರು ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಲ್ಲಿ ಬರೆಯುತ್ತಿದ್ದರು.

ಎರಡನೆಯ ಮಹಾಯುದ್ಧದ ನಂತರ ಜರ್ಮನಿಯ ಸಂಸ್ಕೃತಿಯನ್ನು ರೂಪಿಸಿದ ಸಾಹಿತಿಗಳ ಒಕ್ಕೂಟವಾದ ‘ಗ್ರೂಪ್ 47’-ರ (Group 47) ಪ್ರಮುಖ ಲೇಖಕರಲ್ಲಿ ಒಬ್ಬರಾಗಿದ್ದರು. 1947-ರಲ್ಲಿ ರೂಪುಗೊಂಡ ಈ ಒಕ್ಕೂಟದಲ್ಲಿ ಪಶ್ಚಿಮ ಜರ್ಮನಿಯ ಪ್ರಮುಖ ಬರಹಗಾರರಾದ ಗುಂಟರ್ ಗ್ರಾಸ್, ಹಾಯ್ನ್ರಿಷ್ ಬsಲ್, ಮುಂತಾದವರು ಸದಸ್ಯರಾಗಿದ್ದರು. ಜರ್ಮನ್ ಸಾಹಿತ್ಯಕ್ಕೆ ಭೌದ್ಧಿಕವಾಗಿ, ರಾಜಕೀಯವಾಗಿ ಒಂದು ಹೊಸ ಧ್ವನಿಯನ್ನು ನಿರೂಪಿಸಿದರು.

ಎನ್ಸೆನ್ಸ್‌ಬರ್ಗರ್-ರ ಅನೇಕ ಕವಿತೆಗಳಲ್ಲಿ ವ್ಯಂಗ್ಯದ, ವಿಡಂಬನೆಯ ಧ್ವನಿ ಇದೆ. ಅವರ ಅನೇಕ ಕವಿತೆಗಳು ಆರ್ಥಿಕ ಮತ್ತು ವರ್ಗ ಆಧಾರಿತ ಸಮಸ್ಯೆಗಳ ಮೇಲೆ ನಾಗರಿಕ ಅಶಾಂತಿಯ ವಿಷಯಗಳನ್ನು ಒಳಗೊಂಡಿವೆ. ಅವರ ಮೊದಲ ಸಾಹಿತ್ಯಿಕ ಪ್ರಕಟಣೆಯು 1957 ರಲ್ಲಿ ಪ್ರಕಟವಾದ ‘Verteidigung der Wölfe’ (Defense of the Wolves – ತೋಳಗಳ ಸಮರ್ಥನೆಯಲ್ಲಿ) ಎಂಬ ಕವನ ಸಂಗ್ರಹವಾಗಿತ್ತು. ಎರಡನೆಯ ಮಹಾಯುದ್ಧದ ನಂತರ ಸ್ಥಾಪನೆಯಾದ ಸರಕಾರವನ್ನು ಅವರು ನಾಜಿಗಳ ಅಪರಾಧಗಳಲ್ಲಿ ಭಾಗಿದಾರರಾಗಿ ಕಂಡರು ಹಾಗೂ ಕ್ಯಾಂಪ್‌ಗಳಲ್ಲಿ, ಯುದ್ಧಭೂಮಿಗಳಲ್ಲಿ, ಯಾತನೆ ಅನುಭವಿಸಿದ, ಹೋರಾಡಿ ಮಡಿದ ಜನರ ವಿರುದ್ಧವಾಗಿದ್ದ ಸರಕಾರವಾಗಿ ಕಂಡರು; ಅವರ ಮೇಲಿನ ಕೋಪವನ್ನು ಎನ್ಸೆನ್ಸ್‌ಬರ್ಗರ್‌ ಅವರು ತಮ್ಮ ಮೊದಲ ಕವನ ಸಂಕಲನದಲ್ಲಿ ತೋರಿಸಿದರು. ನಂತರ 1960 ರಲ್ಲಿ ‘Landessprache’ (Language of the Country – ದೇಶದ ಭಾಷೆ) ಎಂಬ ಕವನ ಸಂಕಲನ ಪ್ರಕಟವಾಯಿತು. ಎರಡೂ ಸಂಕಲನಗಳು ಮೂಲತಃ ಸಣ್ಣ ಅಕ್ಷರಗಳಲ್ಲಿ (lower case; small letters) ಬರೆದು ಅಚ್ಚುಹಾಕಲಾಗಿತ್ತು. ಇಲ್ಲಿರುವ ಕವನಗಳನ್ನು ‘ಉಗ್ರ, ನಯವಾದ, ಮತ್ತು ನಿಯಂತ್ರಿತ ಕ್ರೋಧ’ದಿಂದ ಕೂಡಿದ ಕವನಗಳೆಂದು ವರ್ಣಿಸಲಾಗಿದೆ. ಈ ಸಂಕಲನಗಳಲ್ಲಿ (ತಮ್ಮ ಮುಂದಿನ ಸಾಹಿತ್ಯಿಕ ಪಯಣದಲ್ಲಿಯೂ) ಅವರು ‘ಆ್ಯಂಗ್ರಿ ಯಂಗ್ ಮ್ಯಾನ್’-ನ (angry young man) ಪಾತ್ರವನ್ನು ನಿರ್ವಹಿಸಿದರು. Defense of the Wolves ಸಂಕಲನದಲ್ಲಿ “ಕುರಿಮರಿಗಳ ವಿರುದ್ಧ ತೋಳಗಳನ್ನು ರಕ್ಷಿಸುವುದು” ಎಂಬ ಶೀರ್ಷಿಕೆಯ ಕವಿತೆಯಲ್ಲಿ ತಮ್ಮ ಕೋಪವನ್ನು ಹೀಗೆ ಅಭಿವ್ಯಕ್ತಿಸಿದ್ದಾರೆ:

ರಣಹದ್ದುಗಳು ವಿಸ್ಮರ ಪುಷ್ಪಗಳನ್ನು ತಿನ್ನಬೇಕೇ?
ನರಿ ಏನು ಮಾಡಬೇಕೆಂದು ನೀವು ಬಯಸುತ್ತೀರಿ,
ಅದು ತನ್ನ ತೊಗಲಿನಿಂದ ತನ್ನನ್ನು ಕತ್ತರಿಸಿಕೊಳ್ಳಬೇಕೆ, ಮತ್ತೆ ತೋಳ?
ಅದು ತನ್ನ ಹಲ್ಲುಗಳನ್ನು ತಾನೇ ತನ್ನ ತಲೆಯಿಂದ ಕೀಳಬೇಕೇ?

1960-ರಲ್ಲಿ, ಅವರು ‘Museum der Modernen Poesie’ (ಆಧುನಿಕ ಕವಿತೆಯ ವಸ್ತುಸಂಗ್ರಹಾಲಯ) ಹೆಸರಿನ ಮಾರ್ಗದರ್ಶಕ ಸಂಕಲನವನ್ನು ಸಂಪಾದಿಸಿ, ಪ್ರಕಟಿಸಿದರು. ಇದು ಆ ಕಾಲದ ಅಪರೂಪವಾದ ಮೂಲ ಮತ್ತು ಅನುವಾದದ ಸಂಯೋಜನೆಯಲ್ಲಿ ಸಮಕಾಲೀನ ಕವಿಗಳ ಕವನಗಳ ಸಂಕಲನವಾಗಿದೆ. ಈ ಸಂಗ್ರಹದಲ್ಲಿ ಅವರು ಜರ್ಮನ್ ಓದುಗರನ್ನು ವಿಲಿಯಂ ಕಾರ್ಲೋಸ್ ವಿಲಿಯಮ್ಸ್, ಫರ್ನಾಂಡೋ ಪೆಸ್ಸೊವಾ ಮತ್ತು ಲಾರ್ಸ್ ಗುಸ್ಟಾಫ್ಸನ್‌-ರಂತಹ ಕವಿಗಳಿಗೆ ಪರಿಚಯಿಸಿದರು. 1965-ರಲ್ಲಿ ಅವರು ಆಮೂಲಾಗ್ರ ಪತ್ರಿಕೆ ‘Kursbuch’-ನ್ನು (ರೈಲ್ವೆ ವೇಳಾಪಟ್ಟಿ) ಸ್ಥಾಪಿಸಿದರು; ಈ ಪತ್ರಿಕೆಯು ಸಂಪರ್ಕ ಮಾಧ್ಯಮಗಳು ಮತ್ತು ಭಾಷೆಯ ಕುರಿತು ವಿಮರ್ಶಾತ್ಮಕ ಲೇಖನಗಳನ್ನು ಪ್ರಕಟಿಸಿತು ಮತ್ತು ವಿದ್ಯಾರ್ಥಿ ಚಳವಳಿಗೆ ವೇದಿಕೆಯಾಯಿತು.

ಅವರಿಗೆ ದೊರೆತ ವಿವಿಧ ಪ್ರಶಸ್ತಿಗಳು ಮತ್ತು ಗೌರವಗಳಲ್ಲಿ ಗಿಯೊಗ್ ಬೂಷ್ಣ ಪ್ರಶಸ್ತಿ (Georg Büchner Prize), ಅರ್ನ್ಸ್ಟ್ ರಾಬರ್ಟ್ ಕರ್ಟಿಯಸ್ ಪ್ರಶಸ್ತಿ (Ernst Robert Curtius Prize), ಫ್ರ್ಯಾಂಕ್ ಸ್ಕಿರ್ಮಾಕರ್ ಪ್ರಶಸ್ತಿ (Frank Schirrmacher Prize), ಹಾಯ್ನ್ರಿಷ್ ಹಾಯ್ನ್ ಪ್ರಶಸ್ತಿ (Heinrich Heine Prize) ಹಾಗೂ ಕಮ್ಯೂನಿಕೇಶನ್ಸ್ ಹಾಗೂ ಹ್ಯುಮ್ಯಾನಿಟೀಸ್-ಗಾಗಿ 2002 ರ ಪ್ರಿನ್ಸ್ ಆಫ್ ಆಸ್ಟೂರಿಯಾಸ್ (Prince of Asturias) ಪ್ರಶಸ್ತಿ ಸೇರಿವೆ. 2009 ರಲ್ಲಿ, ಎನ್ಸೆನ್ಸ್‌ಬರ್ಗರ್ ಅವರು Griffin Trust for Excellence in Poetry ನೀಡಿದ ವಿಶೇಷ ಜೀವಮಾನ ಪ್ರಶಸ್ತಿಯನ್ನು ಪಡೆದರು. ಕವಿ ಮತ್ತು ಗ್ರಿಫಿನ್ ಟ್ರಸ್ಟಿ, ಕ್ಯಾರೊಲಿನ್ ಫೋರ್ಶೆ ಎನ್ಸೆನ್ಸ್‌ಬರ್ಗರ್-ರ ಪದವಿನ್ಯಾಸ ಮತ್ತು ಶೈಲಿಯ ನಿಖರತೆಯನ್ನು “ಉತ್ಸಾಹಭರಿತ ಹಾಗೂ ಪುಷ್ಕಳ” ಎಂದು ವಿವರಿಸಿದರು.

ಓದುಗರು ಕೆಲವೊಮ್ಮೆ ಎನ್ಸೆನ್ಸ್‌ಬರ್ಗರ್ ಅವರ ಕವನಗಳಿಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಸಹಜ, ಏಕೆಂದರೆ ಅವರ ಕವನಗಳಲ್ಲಿ ಪ್ರಾಸವು ಅಪರೂಪವಾಗಿರುತ್ತೆ ಹಾಗೂ ರೂಪಕಗಳು ಮತ್ತು ಪದಗುಚ್ಛಗಳ ದಟ್ಟವಾದ ಕೊಲಾಜ್‌-ಗಳನ್ನು ರಚಿಸುವ ಏಕಾಗ್ರತೆಯಲ್ಲಿ ಲಯವು ದ್ವಿತೀಯ ಸ್ಥಾನಕ್ಕೆ ಹೋಗುತ್ತೆ. ಚಾರ್ಲ್ಸ್ ಸಿಮಿಕ್ ಅವರ ದೃಷ್ಟಿಯಲ್ಲಿ ಎನ್ಸೆನ್ಸ್‌ಬರ್ಗರ್-ರು, “ಎರಡನೆಯ ಮಹಾಯುದ್ಧದ ನಂತರದ ಅತ್ಯುತ್ತಮ ಜರ್ಮನ್ ಕವಿ. ಏಕೆಂದರೆ ಅವರು ವಿಷಯದ ವಿಸ್ತಾರವನ್ನು ಹೊಂದಿದ್ದಾರೆ, ವಿವಿಧ ಶೈಲಿಗಳನ್ನು ಬಳಸುತ್ತಾರೆ ಮತ್ತು ಆ ಅವಧಿಯ, ಮಹಾಯುದ್ಧದ ಕಾಲದಲ್ಲಿ ಪ್ರೌಢಾವಸ್ಥೆಗೆ ಬಂದ ಯಾವುದೇ ಕವಿಗಿಂತ ಉತ್ತಮವಾಗಿ ತಮ್ಮ ಚಿಂತನೆಗಳನ್ನು, ಅನುಭವಗಳನ್ನು, ಕಾಳಜಿಗಳನ್ನು ಓದುಗರಿಗೆ ತಿಳಿಸುತ್ತಾರೆ. ಅವರ ಪ್ರತಿಯೊಂದು ಕವಿತೆ, ಅದು ಭಾವಗೀತೆಯಾಗಿರಲಿ, ನಾಟಕೀಯ ಕವಿತೆಯಾಗಿರಲಿ ಅಥವಾ ಕಥನಕವಿತೆಯಾಗಿರಲಿ, ಒಂದು ಚರ್ಚಾತ್ಮಕ ಗುಣವನ್ನು ಹೊಂದಿದೆ. ಅಂದರೆ, ಅವರು ಕಾವ್ಯವನ್ನು ಅಥವಾ ಅವರು ಬರೆಯುವ ವಿಷಯವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ.”

ನಾನು ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ಎನ್ಸೆನ್ಸ್‌ಬರ್ಗರ್‌ರು ಏಳು ಕವನಗಳಲ್ಲಿ ಮೊದಲ ಎರಡು ಕವನಗಳನ್ನು ಸ್ವತಃ ಎನ್ಸೆನ್ಸ್‌ಬರ್ಗರ್-ರವರು ಜರ್ಮನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ; ನಂತರದ ಮೂರು ಕವನಗಳನ್ನು ಮೈಕೆಲ್ ಹ್ಯಾಂಬರ್ಗರ್, ಆರನೆಯ ಕವನವನ್ನು ಡೇವಿಡ್ ಕಾನ್ಸಟಂಟೀನ್, ಹಾಗೂ ಏಳನೆಯ ಕವನವನ್ನು ಎಸ್ತರ್ ಕಿನ್ಸ್‌ಕಿ-ಯವರು ಜರ್ಮನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

1
ತವರದ ತಟ್ಟೆ
ಮೂಲ: The Tin Plate

ದಾರಿದ್ರ್ಯದ ಬಗ್ಗೆ ಹೇಳುವುದೆಲ್ಲವ ಹೇಳಿಯಾಗಿದೆ:
ಅದು ಜಗ್ಗದು, ಜಿಗುಟಿನದು, ಪಟ್ಟುಬಿಡದು ಎಂದು,
ಮತ್ತೆ ಯಾರಿಗೂ ಆಸಕ್ತಿ ಇಲ್ಲದಂತಹದ್ದು
ಬಡವರ ಹೊರತು. ಅದು ಬೋರ್ ಹೊಡೆಸುತ್ತೆ.
ಅದಕ್ಕೆ ಚಿಂತೆ ಮಾಡಲು ಬೇಕಾದಷ್ಟಿದೆ
ಬೋರ್ ಹೊಡೆಯುವುದರ ಬಗ್ಗೆ ದೂರಲು.
ಕೊಳೆ ಹೇಗೋ, ಹಾಗೆ ಅದೂ ಬಹಳ
ಆಳದಲ್ಲಿ ಕಂಡುಬರುತ್ತೆ. ಅದು ಅಂಟುರೋಗದಂತೆ,
ಅದು ನಾರುತ್ತೆ, ಅದೊಂದು ಪೀಡೆ.

ಅದರ ಸರ್ವವ್ಯಾಪಿತ್ವ ಕಣ್ಸೆಳೆಯುವಂತಹದ್ದು.
ಅದು ಅನಂತತೆಯಿಂದ ಪಾಲು ಪಡಕೊಂಡಂತೆ ಅನಿಸುತ್ತೆ.
ಅದರ ಗುಣಲಕ್ಷಣಗಳು ದಿವ್ಯ.
ಸೇವಕರು, ಸಂತರು ಅದನ್ನು ಕೋರುತ್ತಾರೆ.
ಸನ್ಯಾಸಿ ಸನ್ಯಾಸಿನಿಯರ ಲಗ್ನ ನಿಶ್ಚಯವಾಗಿದೆ ಅದರ ಜತೆ.
ಉಳಿದ ನಮ್ಮಂತವರನ್ನ ನೋಡಿದರೆ,
ನಮ್ಮೆಲ್ಲರ ಬದುಕುಗಳು ಓಡುತ್ತಿವೆ ತಪ್ಪಿಸಿಕೊಂಡು,
ಮುಂದಿನ ಬೀದಿ ತಿರುವಿನಲ್ಲಿ
ದಾರಿದ್ರ್ಯ ನಮ್ಮನ್ನ ಹಿಡಕೊಳ್ಳುತ್ತೆ.

ನಿರ್ಭಾವ, ಅಚಲ, ಭವ್ಯ,
ಹಿಡಕೊಂಡು ಕೈಯಲ್ಲಿ ತವರದ ತಟ್ಟೆ.

2
ಮಹಾ ದೇವಿ
ಮೂಲ: The Great Goddess

ಹಗಲು ರಾತ್ರಿ ಕೆಲಸಮಾಡುತ್ತಾಳವಳು
ತನ್ನ ನೂಲಿನುಂಡೆಯ ಮೇಲೆ ಬಾಗಿ,
ತುಟಿಗಳ ಮಧ್ಯೆ ನೂಲಿನ ತುದಿ,
ತರಹೇವಾರಿ ವಸ್ತುಗಳ ತೇಪೆಹಾಕುತ್ತಾ.
ಹೊಸ ಹೊಸ ತೂತುಗಳು, ಹೊಸ ಉದ್ದಹರಿವುಗಳು.

ಕೆಲವೊಮ್ಮೆ ಅವಳು ತೂಕಡಿಸುತ್ತಾಳೆ
ಮಾತ್ರ ಒಂದು ಕ್ಷಣಕ್ಕೆ
ಅಥವಾ ಒಂದು ಶತಮಾನದ ಕಾಲ. ಆಮೇಲೆ,
ಸುಧಾರಿಸಿಕೊಂಡು,
ಮತ್ತೆ ಕಸೂತಿಕೆಲಸ ಮುಂದುವರೆಸುವಳು.

ಎಷ್ಟು ಸಣ್ಣಗಾಗಿದ್ದಾಳೆ ಅವಳು, ಸಣ್ಣಗೆ,
ಸುಕ್ಕುಸುಕ್ಕಗೆ, ಕಣ್ಣೂ ಕಾಣಿಸದು!
ಅವಳ ಬೆರಳ್ಕಾಪಿನಿಂದ ಅವಳು ಜಗತ್ತಿನ
ತೂತುಗಳ ಹುಡುಕುತ್ತಾಳೆ ಮುಟ್ಟಿ ಮುಟ್ಟಿ,
ರಫುಹಾಕುತ್ತಾಳೆ ರಫುಹಾಕುತ್ತಳಿರುತ್ತಾಳೆ.

3
ಸಾಂದ್ರತೆ
ಮೂಲ: Consistency

ಯೋಚನೆಯ ಹಿಂದಿರುವ ಯೋಚನೆ.
ಒಂದು ಬೆಣಚುಕಲ್ಲು, ಸಾಧಾರಣ,
ಏಕರೂಪದ, ಗಟ್ಟಿಯಾದ,
ಮಾರಾಟಕ್ಕಲ್ಲದ.

ಕರಗುವುದಿಲ್ಲ,
ಪ್ರಶ್ನಿಸುವಂತಿಲ್ಲ,
ಅದು ಅದೇ,
ತೂಕ ಏರುವುದಿಲ್ಲ
ಇಳಿಯುವುದಿಲ್ಲ.

ಅಸಹಜ,
ಹೊಳೆವ ಬಣ್ಣವಿಲ್ಲ, ನರಗಳಿಲ್ಲ.
ಹೊಸತಲ್ಲ, ಹಳತಲ್ಲ.
ಸಮರ್ಥನೆಯ ಅಗತ್ಯವಿಲ್ಲ,
ನಂಬಬೇಕೆಂದು ಒತ್ತಾಯಿಸುವುದಿಲ್ಲ.
ಎಲ್ಲಿಂದ ಬಂತು,
ಎಲ್ಲಿಗೆ ಹೋಗುತ್ತೆ,
ಯಾವ ಉದ್ದೇಶವನ್ನು ಪೂರೈಸುತ್ತದೆ
ನಿನಗೆ ಗೊತ್ತಿಲ್ಲ.
ಅದಿಲ್ಲದಿದ್ದರೆ ನೀನು ಅಷ್ಟಕ್ಕಷ್ಟೇ.

4
ನೆರಳಿನ ರಾಜ್ಯ
ಮೂಲ: Shadow Realm

1
ಇಲ್ಲಿ ಈಗಲೂ ನನಗೆ ಕಾಣುತ್ತೆ ತಾಣವೊಂದು,
ಒಂದು ಮುಕ್ತವಾದ ತಾಣ,
ಇಲ್ಲಿ ನೆರಳಿನಲ್ಲಿ.
2
ಈ ನೆರಳು ಮಾರಾಟಕ್ಕಿಲ್ಲ.
3
ಬಹುಶಃ ಕಡಲು ಸಹ ನೆರಳ ಬೀರುತ್ತೆ,
ಹಾಗೆಯೇ
ಕಾಲವೂ ಸಹ.
4
ನೆರಳುಗಳ ಸಮರಗಳು
ಆಟಗಳಷ್ಟೇ:
ಯಾವ ನೆರಳೂ
ಮತ್ತೊಂದು ನೆರಳ ಬೆಳಕಿಗೆ ಅಡ್ಡ ಬರುವುದಿಲ್ಲ.
5
ನೆರಳಿನಲ್ಲಿ ಬದುಕುವವರನ್ನು
ಕೊಲ್ಲುವುದು ಕಷ್ಟ.
6
ಕೆಲ ಹೊತ್ತಿನ ಮಟ್ಟಿಗೆ
ನಾನು ನನ್ನ ನೆರಳಿನಿಂದ ಹೊರಹೆಜ್ಜೆ ಇಡುವೆ,
ಕೆಲ ಹೊತ್ತಿನ ಮಟ್ಟಿಗೆ.
7
ಬೆಳಕನ್ನು ಅದರ ಹಾಗೇ
ನೋಡ ಬಯಸುವವರು
ನೆರಳಿನೊಳಗೆ
ತೆರಳಬೇಕು.
8
ನೆರಳು,
ಸೂರ್ಯನಿಗಿಂತ ಉಜ್ವಲ:
ವಿಮುಕ್ತಿಯ ತಂಪು ನೆರಳು
9
ನೆರಳಿನಲ್ಲಿ ಸಂಪೂರ್ಣವಾಗಿ
ನನ್ನ ನೆರಳು ಅದೃಶ್ಯವಾಗುತ್ತೆ.
10
ನೆರಳಿನಲಿ
ಈಗಲೂ ಜಾಗವಿದೆ.

5
ರಾಂಡೋ*
ಮೂಲ: Rondeau

ಮಾತನಾಡುವುದು ಸುಲಭ.

ಆದರೆ ಪದಗಳನ್ನು ತಿನ್ನಲಿಕ್ಕಾಗದು.
ಆದ್ದರಿಂದ ಬ್ರೆಡ್ಡನ್ನು ಮಾಡು.
ಬ್ರೆಡ್ ಮಾಡುವುದು ಕಷ್ಟ.
ಆದ್ದರಿಂದ ಬೇಕರಿಯವನಾಗು.

ಆದರೆ ಬ್ರೆಡ್ಡಿನೊಳಗೆ ಬದುಕಲಾಗದು.
ಆದ್ದರಿಂದ ಮನೆಗಳ ಕಟ್ಟು.
ಮನೆಗಳ ಕಟ್ಟುವುದು ಕಷ್ಟ.
ಅದ್ದರಿಂದ ಇಟ್ಟಿಗೆಯವನಾಗು.

ಆದರೆ ಬೆಟ್ಟದ ಮೇಲೆ ಮನೆಯ ಕಟ್ಟಲಾಗದು.
ಆದ್ದರಿಂದ ಬೆಟ್ಟವ ಸರಿಸು.
ಬೆಟ್ಟಗಳ ಸರಿಸುವುದು ಕಷ್ಟ.
ಆದ್ದರಿಂದ ಪ್ರವಾದಿಯಾಗು.

ಆದರೆ ವಿಚಾರಗಳು ಕೇಳಲಿಕ್ಕಾಗದು.
ಆದ್ದರಿಂದ ಮಾತನಾಡು.
ಮಾತನಾಡುವುದು ಕಷ್ಟ.
ಆದ್ದರಿಂದ ನೀನಾರೋ ಅದೇ ನೀನಾಗು

ಮತ್ತೆ ನಿನಗೆ ನೀನೇ ಗೊಣಗುಟ್ಟುತ್ತಿರು,
ಕೆಲಸಕ್ಕೆಬಾರದ ಜಂತುವೆ.

* ರಾಂಡೋ (ಗೀತೆ); ಪಲ್ಲವಿ; ಮೊದಲಿನಿಂದ ಕೊನೆಯವರೆಗೆ ಎರಡೇ ಪ್ರಾಸ ಮೇಲಿಂದ ಮೇಲೆ ಬರುವ, ಮೊದಲ ಸಾಲಿನ ಮೊದಲ ಮಾತುಗಳು ನಡುವೆಯೊಮ್ಮೆ ಕಡೆಗೊಮ್ಮೆ ಪಲ್ಲವಿಯಾಗಿ ಬರುವ, ಸಾಮಾನ್ಯವಾಗಿ ಹತ್ತು ಯಾ ಹದಿಮೂರು ಸಾಲಿನ, ಭಾವಗೀತೆ. (ಮೈಸೂರು ವಿ.ವಿ. ಪ್ರಕಟಿಸಿದ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿರುವ ವಿವರಣೆ)

6
ಒಂದು ವೇಳೆ ಅವಕಾಶ ದೊರೆತರೆ
ಮೂಲ: Should the Occasion Arise

ನಿಮಗೆ ಕೊಟ್ಟಿರುವ ತಪ್ಪುಗಳಲ್ಲಿ ಆಯ್ದುಕೊಳ್ಳಿ,
ಆದರೆ ಸರಿಯಾಗಿ ಆಯ್ದುಕೊಳ್ಳಿ.
ತಪ್ಪು ಸಮಯಕ್ಕೆ ಸರಿಯಾದ ಕೆಲಸ
ಮಾಡುವುದು ತಪ್ಪಾಗಿರಬಹುದೋ
ಅಥವಾ
ಸರಿ ಸಮಯಕ್ಕೆ ತಪ್ಪು ಕೆಲಸ
ಮಾಡುವುದು ಸರಿಯಾಗಿರಬಹುದೋ?
ಒಂದು ತಪ್ಪು ಹೆಜ್ಜೆ
ಮತ್ತೆ ಎಂದೂ ಸರಿಪಡಿಸಲಾಗದು.
ಸರಿಯಾದ ತಪ್ಪನ್ನು
ನೀವು ತಪ್ಪಿದರೆ
ಮತ್ತೆಂದೂ ಮರಳಿ ಬರಲಾರದು.

7
ಭೂಮಿ-ಬಣ್ಣದ ಗೀತ
ಮೂಲ: An Earth-Coloured Ditty

ಮೃತ್ಯು ಬಗ್ಗೆ ಇನ್ನೊಂದು ಕವನ, ಇತ್ಯಾದಿ ಇತ್ಯಾದಿ –
ಅಗತ್ಯವಾಗಿ, ಆದರೆ ಆ ಆಲೂಗಡ್ಡೆಯ ಬಗ್ಗೆ ಏನನ್ನುತ್ತೀರಿ?
ತಿಳಿದಿರುವ ಕಾರಣಗಳಿಗಾಗಿ ಹೊರೆಸ್ ಆಗಲಿ
ಹೋಮರ್ ಆಗಲಿ ಅದನ್ನು ಉಲ್ಲೇಖಿಸಲಿಲ್ಲ, ಆ ಆಲೂಗಡ್ಡೆಯನ್ನು.
ಆದರೆ ರಿಲ್ಕ ಅಥವಾ ಮಲಾರ್ಮೆ-ಗೆ ಏನಾಯಿತು?
ಅದು ಅವರನ್ನು ತಟ್ಟಲಿಲ್ಲವೇ, ಆ ಆಲೂಗಡ್ಡೆ?
ಅದು ಕೆಲವೇ ಪದಗಳ ಜತೆ ಪ್ರಾಸವಾಡಬಲ್ಲುದೆಂಬ
ಕಾರಣವೇ, ಆ ಭೂಮಿ-ಬಣ್ಣದ ಆಲೂಗಡ್ಡೆ?
ಅದು ಸ್ವರ್ಗದ ಬಗ್ಗೆ ಹೆಚ್ಚೇನೂ ಮಂಡೆಬಿಸಿ ಮಾಡಿಕೊಳ್ಳಲ್ಲ.
ಅದು ತಾಳ್ಮೆಯಿಂದ ಕಾದಿರುತ್ತೆ, ಆ ಆಲೂಗಡ್ಡೆ,
ನಾವದನ್ನು ಬೆಳಕಿನೆಡೆಗೆ ಎಳೆದು ತಂದು
ಬೆಂಕಿಯಲ್ಲಿ ಎಸೆಯುವವರೆಗೂ. ಆ ಆಲೂಗಡ್ಡೆ
ತಲೆಕೆಡಿಸಿಕೊಳ್ಳಲ್ಲ, ಆದರೆ ಅದರ ತಾಪ
ಹೆಚ್ಚಾಯಿತೇನೋ ಕವಿಗಳಿಗೆ, ಆ ಆಲೂಗಡ್ಡೆಯ ತಾಪ?
ಇರಲಿ, ಸ್ವಲ್ಪ ಹೊತ್ತು ಕಾಯುವ ನಾವು
ಅದನ್ನು ತಿನ್ನುವವರೆಗೂ, ಆ ಆಲೂಗಡ್ಡೆಯನ್ನು,
ಹಾಡೋಣ ಅದರ ಬಗ್ಗೆ, ಆಮೇಲೆ ಮರೆತು ಬಿಡೋಣ.