ಹಿಜಾಬ್ ಧಾರಣೆಯ ವಿರುದ್ಧ ಇರಾನಿ ಮಹಿಳೆಯರೆಲ್ಲರೂ ಬಂಡೆದ್ದಿರುವ ವಿಷಯ ಇಡಿಯ ಜಗತ್ತಿಗೆ ತಿಳಿದಿದೆ. ಮೊಹಮ್ಮದಿ ಈ ಹೋರಾಟದ ಮುಂಚೂಣಿಯಲ್ಲಿರುವವರು. ‘ಮಹಿಳೆ – ಜೀವನ – ಸ್ವಾತಂತ್ರ್ಯ’ ಎಂಬ ಮೂರು ವಿಷಯಗಳನ್ನು ಮುಂದಿಟ್ಟುಕೊಂಡು ತಮ್ಮ ಹೋರಾಟವನ್ನು ಸಂಘಟಿಸಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳು ನಿಲ್ಲಬೇಕು, ಮಹಿಳೆಯರು ಘನತೆಯ ಬದುಕನ್ನು ಬದುಕಬೇಕು, ಅವರು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಮಹಿಳೆಯರಿಗೆ ಬೇಕು ಎಂಬುದು ಅವರ ಹೋರಾಟದ ಆಶಯವಾಗಿದೆ. ಹಾಗೆಯೇ ಇರಾನಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮಾನವ ಹತ್ಯೆಗಳ ಬಗ್ಗೆಯೂ ಮಹಮ್ಮದಿ ದನಿಯೆತ್ತಿದ್ದಾರೆ. 2013ರಲ್ಲಿ ಜಾಮೀನಿನ ಮೇರೆಗೆ ಬಿಡುಗಡೆ ಹೊಂದಿದ ಅವರು ಮೇಲಿನ ಎಲ್ಲ ಹೋರಾಟಗಳ ಕಾರಣದಿಂದಾಗಿ 2015ರಲ್ಲಿ ಮತ್ತೆ ಕಾರಾಗ್ರಹಕ್ಕೆ ಮರಳಿದರು.
ಈ ಸಲದ ನೊಬೆಲ್‌ ಶಾಂತಿ ಪುರಸ್ಕೃತ ನರ್ಗೆಸ್‌ ಮೊಹಮ್ಮದಿ ಅವರ ಕುರಿತು ಸುಧಾ ಆಡುಕಳ ಬರಹ

2023ರ ನೊಬೆಲ್ ಪುರಸ್ಕಾರ ಇರಾನಿಯನ್ ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿಯವರಿಗೆ ದೊರೆತಿದೆ. ಇರಾನೀ ಮಹಿಳೆಯರು ಮತ್ತು ಮಾನವ ಹಕ್ಕುಗಳಿಗಾಗಿ ನಿರ್ಭಯವಾಗಿ ಅವರು ನಿರಂತರವಾಗಿ ನಡೆಸುತ್ತಿರುವ ಹೋರಾಟಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ನೊಬೆಲ್ ಆಯ್ಕೆ ಸಮಿತಿ ಹೇಳಿದೆ.

ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ಈ ವರ್ಷ ಸುಮಾರು 350 ನಾಮನಿರ್ದೇಶನಗಳು ಬಂದಿದ್ದವು. ಸಧ್ಯ ಇರಾನಿ ಜೈಲಿನಲ್ಲಿರುವ 51 ವರ್ಷದ ನರ್ಗೆಸ್ ಹೆಸರು ನೊಬೆಲ್ ಸಮಿತಿಯ ಸರ್ವಾನುಮತದ ಆಯ್ಕೆಯಾಗಿದೆ. ತನ್ನ ಗಂಡ ಮತ್ತು ಮಕ್ಕಳೊಂದಿಗೆ ಮಾತನಾಡುವ ವೈಯಕ್ತಿಕ ಹಕ್ಕನ್ನೂ ಕಳೆದುಕೊಂಡು ಜೈಲಿನಲ್ಲಿರುವ ನರ್ಗೆಸ್ ಅವರಿಗೆ ಏನನಿಸುತ್ತಿದೆ? ಎಂಬುದು ಲೋಕಕ್ಕೆ ಇನ್ನಷ್ಟೇ ತಿಳಿಯಬೇಕಾಗಿದೆ. “ಈ ಪ್ರಶಸ್ತಿಯು ನನ್ನನ್ನು ಇನ್ನಷ್ಟು ತೀವ್ರವಾಗಿ, ಪರಿಣಾಮಕಾರಿಯಾಗಿ, ಉತ್ಸುಕತೆ ಮತ್ತು ಆಶಾಭಾವದೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ” ಎಂಬ ಸಂದೇಶವೊಂದು ಅವರ X ಖಾತೆಯಲ್ಲಿದೆ. “ಈ ಪ್ರಶಸ್ತಿ ತನ್ನ ಸಹೋದರಿಗೆ ಮಾತ್ರ ಸೇರಿದ್ದಲ್ಲ, ಇರಾನಿನಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಎಲ್ಲರಿಗೂ ಸಂದಿದೆ,” ಎಂಬುದು ಅವರ ಸಹೋದರನ ಅಭಿಪ್ರಾಯವಾಗಿದೆ. ತನ್ನ ಹೋರಾಟಗಳಿಗಾಗಿ 13 ಸಲ ಬಂಧನಕ್ಕೊಳಗಾಗಿರುವ ನರ್ಗಿಸ್ 5 ಬಾರಿ ಶಿಕ್ಷೆಗೊಳಗಾಗಿದ್ದು 31 ವರ್ಷಗಳ ಸೆರೆವಾಸದ ಶಿಕ್ಷೆಯಲ್ಲಿದ್ದಾರೆ. ಜೈಲಿನಿಂದಲೇ ಇರಾನ್ ಸರಕಾರದ ಮಾನವಹತ್ಯೆ ವಿರೋಧಿ ಹೋರಾಟಕ್ಕೆ ಬೆಂಬಲ ನೀಡಿದ ಅಪರಾಧಕ್ಕೆಂದು ಅವರ ಕುಟುಂಬದವರೊಂದಿಗಿನ ಸಂಪರ್ಕವನ್ನೂ ನಿಷೇಧಿಸಲಾಗಿದೆ. ಈಗಿನ್ನೂ ಹದಿಹರೆಯಕ್ಕೆ ಕಾಲಿಟ್ಟಿರುವ ಅವಳಿ ಮಕ್ಕಳು ಕೈನಾ ರೆಹಮಾನಿ ಮತ್ತು ಅಲಿ ರೆಹಮಾನಿ ಅವರನ್ನು ಭೇಟಿಯಾಗದೇ ಎಂಟೂವರೆ ವರ್ಷಗಳಾಗಿವೆ. ಅವರ ಮಕ್ಕಳು, “ನನ್ನಮ್ಮನ ಬಗ್ಗೆ ನಮಗೆ ಬಹಳ ಹೆಮ್ಮೆಯೆನಿಸುತ್ತಿದೆ, ಹೌದು, ಅವರು ನಮ್ಮ ಬಾಲ್ಯದ ಬಹುಭಾಗ ನಮ್ಮಿಂದ ದೂರವೇ ಉಳಿದಿದ್ದಾರೆ. ಆದರೆ ಅವರ ಜತೆಗಿರುವ ಗಳಿಗೆಗಳಲ್ಲಿ ನಾವು ಅದ್ಭುತವಾದ ತಾಯ್ತನದ ವಾತ್ಸಲ್ಯವನ್ನು ಸವಿದಿದ್ದೇವೆ. ಅಮ್ಮ ಬಹುಬೇಗ ನಮ್ಮನ್ನು ಸೇರಿಕೊಳ್ಳುತ್ತಾರೆಂಬ ಭರವಸೆಯಿದೆ.” ಎಂದು ಹೇಳಿದ್ದಾರೆ. ನೊಬೆಲ್ ಸಮಿತಿಯೂ ಈ ಬಹುಮಾನವನ್ನು ಘೋಷಿಸುವುದರ ಮೂಲಕ ನಾವು ಇರಾನ್ ಸರಕಾರಕ್ಕೆ ಸ್ಪಷ್ಟ ಸಂದೇಶವನ್ನು ನೀಡಿದ್ದೇವೆ ಎಂದಿದೆ.

ಟೆಹ್ರಾನಿನ ಝಂಜಾನ್ ಪ್ರದೇಶದಲ್ಲಿ 1972ರಲ್ಲಿ ಹುಟ್ಟಿದ ಮೊಹಮ್ಮದಿ ಶಾಲಾಶಿಕ್ಷಣವನ್ನು ಅಲ್ಲಿಯೇ ಮುಗಿಸಿ, ಇಮಾಮ್ ಖೊಮೆನಿ ಇಂಟರ್‌ನ್ಯಾಶನಲ್ ಯುನಿವರ್ಸಿಟಿಯಲ್ಲಿ ಭೌತವಿಜ್ಞಾನದಲ್ಲಿ ಪದವಿಯನ್ನು ಪಡೆದುಕೊಂಡರು. ಕೆಲಕಾಲ ಎಂಜನೀಯರ್ ಆಗಿ ವೃತ್ತಿಯನ್ನು ನಿರ್ವಹಿಸಿದರು. ವಿದ್ಯಾರ್ಥಿಯಾಗಿರುವಾಗಲೇ ಟೆಹರಾನಿನ ಮಾನವ ಹಕ್ಕುಗಳ ಹೋರಾಟ ಸಂಘಟನೆಯ ಸದಸ್ಯರಾದರು. ಮಹಿಳಾ ಪರ ವಕೀಲೆಯಾಗಿ ರೂಪುಗೊಂಡರು. ಅನೇಕ ಪ್ರಗತಿಪರ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯತೊಡಗಿದರು. ಇದರಿಂದಾಗಿಯೇ 2009ರಲ್ಲಿ ಕೆಲಸವನ್ನು ಕಳೆದುಕೊಂಡರು. 1999ರಲ್ಲಿ ಸಾಮಾಜಿಕ ಹೋರಾಟಗಾರ ರೆಹಮಾನಿಯವರನ್ನು ಮದುವೆಯಾದರು. ತಮ್ಮ ಹೋರಾಟಗಳಿಗಾಗಿ 14 ವರ್ಷ ಜೈಲುವಾಸವನ್ನು ಅನುಭವಿಸಿದ್ದ ರೆಹಮಾನಿ ಇದೀಗ ಮಕ್ಕಳೊಂದಿಗೆ ಪ್ಯಾರಿಸ್ ನಗರದಲ್ಲಿ ನೆಲೆಸಿದ್ದಾರೆ. “ನಮ್ಮ ಖಾಲಿತನವನ್ನು ಯಾವ ಪ್ರಶಸ್ತಿಯೂ ತುಂಬಿಕೊಡಲಾಗದಿದ್ದರೂ, ನೊಬೆಲ್ ಬಹುಮಾನ ನಮ್ಮ ಕುಟುಂಬಕ್ಕೆ ನಿಜವಾದ ಸಾಂತ್ವನವಾಗಿದೆ.” ಎಂದು ಅವರು ಹೇಳಿದರು.

2011ರಲ್ಲಿ ಮೊಹಮ್ಮದಿಯವರು ಮೊದಲ ಬಾರಿಗೆ ಜೈಲುವಾಸವನ್ನು ಅನುಭವಿಸಿದರು. ಈಗಿನ ಇರಾನ್ ಸರಕಾರ 1979ರಲ್ಲಿ ಇರಾನಿನಲ್ಲಿ ಮಹಿಳೆಯರಿಗೆ ವಸ್ತ್ರಸಂಹಿತೆಯನ್ನು ಕಡ್ಡಾಯಗೊಳಿಸಿದೆ. ಹಿಜಾಬ್ ಧಾರಣೆಯ ವಿರುದ್ಧ ಇರಾನಿ ಮಹಿಳೆಯರೆಲ್ಲರೂ ಬಂಡೆದ್ದಿರುವ ವಿಷಯ ಇಡಿಯ ಜಗತ್ತಿಗೆ ತಿಳಿದಿದೆ. ಮೊಹಮ್ಮದಿ ಈ ಹೋರಾಟದ ಮುಂಚೂಣಿಯಲ್ಲಿರುವವರು. ‘ಮಹಿಳೆ – ಜೀವನ – ಸ್ವಾತಂತ್ರ್ಯ’ ಎಂಬ ಮೂರು ವಿಷಯಗಳನ್ನು ಮುಂದಿಟ್ಟುಕೊಂಡು ತಮ್ಮ ಹೋರಾಟವನ್ನು ಸಂಘಟಿಸಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳು ನಿಲ್ಲಬೇಕು, ಮಹಿಳೆಯರು ಘನತೆಯ ಬದುಕನ್ನು ಬದುಕಬೇಕು, ಅವರು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಮಹಿಳೆಯರಿಗೆ ಬೇಕು ಎಂಬುದು ಅವರ ಹೋರಾಟದ ಆಶಯವಾಗಿದೆ. ಹಾಗೆಯೇ ಇರಾನಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮಾನವ ಹತ್ಯೆಗಳ ಬಗ್ಗೆಯೂ ಮಹಮ್ಮದಿ ದನಿಯೆತ್ತಿದ್ದಾರೆ. 2013ರಲ್ಲಿ ಜಾಮೀನಿನ ಮೇರೆಗೆ ಬಿಡುಗಡೆ ಹೊಂದಿದ ಅವರು ಮೇಲಿನ ಎಲ್ಲ ಹೋರಾಟಗಳ ಕಾರಣದಿಂದಾಗಿ 2015ರಲ್ಲಿ ಮತ್ತೆ ಕಾರಾಗ್ರಹಕ್ಕೆ ಮರಳಿದರು. ಜೈಲಿನ ಒಳಗೂ ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಶಿಕ್ಷೆಗೊಳಗಾದ 12 ಮಹಿಳಾ ಖೈದಿಗಳನ್ನು ಸಂದರ್ಶಿಸಿ, ಅವರ ಅನುಭವಗಳೊಂದಿಗೆ ಕ್ರೋಡೀಕರಿಸಿ ‘ವೈಟ್ ಟಾರ್ಚರ್, ಎನ್ನುವ ಪುಸ್ತಕವನ್ನು ಬರೆದರು. ಇದರಲ್ಲಿ ರಾಜಕೀಯ ಖೈದಿಗಳು ಅನುಭವಿಸಬೇಕಾದ ಲೈಂಗಿಕ ಮತ್ತು ಮಾನಸಿಕ ದೌರ್ಜನ್ಯಗಳ ಬಗ್ಗೆ ಮುಕ್ತವಾಗಿ ಬರೆದಿದ್ದಾರೆ.

2022ರಿಂದೀಚೆಗೆ ಇರಾನಿನಲ್ಲಿ 260ಕ್ಕಿತ ಹೆಚ್ಚು ಜನರಿಗೆ ಮರಣ ದಂಡನೆಯನ್ನು ವಿಧಿಸಲಾಗಿದೆ. 2022ರ ಸೆಪ್ಟೆಂಬರ್ ನಲ್ಲಿ ಹಿಜಾಬ್ ವಿರೋಧಿಸಿ ಜೈಲು ಸೇರಿದ್ದ 22 ವರ್ಷದ ಯುವತಿ ಅಮಿನಿ ಜೈಲಿನಲ್ಲಿಯೇ ವಿವಾದಾಸ್ಪದವಾಗಿ ಕೊಲೆಯಾಗಿದ್ದಾಳೆ. ಇದು ಇರಾನಿನ ಮಾನವ ಹಕ್ಕುಗಳ ಹೋರಾಟಗಾರರನ್ನು ರೊಚ್ಚಿಗೆಬ್ಬಿಸಿದೆ. ಜೈಲಿನೊಳಗಿಂದಲೇ ಈ ಹೋರಾಟವನ್ನು ಬೆಂಬಲಿಸಿದ್ದಕ್ಕಾಗಿ ಮಹಮ್ಮದಿಯವರ ವೈಯಕ್ತಿಕ ಹಕ್ಕುಗಳನ್ನೂ ಮೊಟಕುಗೊಳಿಸಲಾಗಿದೆ. ಆದರೇನು? ಮಾನವ ಹಕ್ಕುಗಳ ಉಲ್ಲಂಘನೆ ನಿಲ್ಲುವವರೆಗೂ ಈ ಹೋರಾಟ ಸಾಗಲೇಬೇಕು ಎನ್ನುವುದು ಮಹಮ್ಮದಿಯಂತಹ ಸಾವಿರಾರು ಹೋರಾಟಗಾರರ ಹಂಬಲವಾಗಿದೆ.

ನೊಬೆಲ್ ಪಾರಿತೋಷಕ ಇರಾನಿನ ಈಗಿನ ಸ್ಥಿತಿಯನ್ನು ಕೊಂಚವಾದರೂ ಸಡಿಲಿಸೀತೆ? ನರ್ಗೆಸ್ ಮೊಹಮ್ಮದಿಯವರು ಬಂಧನ ಮುಕ್ತರಾಗಿ ನೊಬೆಲ್ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಹಾಜರಾಗುತ್ತಾರೆಯೆ? ಎಂಬುದನ್ನು ಇಡಿಯ ಜಗತ್ತು ಕಾಯುತ್ತಿದೆ.