Advertisement
ನೆಲದ ಕಾವು ಮುಗಿಲ ತಾಕಿ: ಸತೀಶ ಕುಲಕರ್ಣಿ ಕವನ ಸಂಕಲನಕ್ಕೆ ಸತೀಶ ಕುಲಕರ್ಣಿ ಮುನ್ನುಡಿ

ನೆಲದ ಕಾವು ಮುಗಿಲ ತಾಕಿ: ಸತೀಶ ಕುಲಕರ್ಣಿ ಕವನ ಸಂಕಲನಕ್ಕೆ ಸತೀಶ ಕುಲಕರ್ಣಿ ಮುನ್ನುಡಿ

ಈ ಕವಿತೆಗಳನ್ನು ಓದಿದಾಗ ಕೆ.ಎಸ್.ಎನ್ ರ ದಾಂಪತ್ಯ ಪ್ರೀತಿ, ಬೇಂದ್ರೆ ಅವರ ಭಾಷಾ ಗತ್ತು, ಕಂಬಾರರ ಜನಪದಿಯ ಕಥಾನಕಗಳು ನೆನಪಾಗದೇ ಇರುವುದಿಲ್ಲ. ಆದರೆ ಇವರನ್ನೆಲ್ಲ ಅದುಮಿ, ತಮ್ಮತನದ ಈಜುಗಾರಿಕೆಯನ್ನು ಮಡಿವಾಳರ ಕಲಿತಿದ್ದಾರೆ. ಕಾವ್ಯ ಪರಂಪರೆ ಪ್ರತಿ ಕವಿಯನ್ನು ಬೆನ್ನಟ್ಟುತ್ತದೆ. ದತ್ತಿ ದೇಣಿಗೆಯನ್ನು ನೀಡುತ್ತಲೇ ಇರುತ್ತದೆ. ಕೊನೆಗೂ ನಮ್ಮ ಹೆಜ್ಜೆ ಗುರುತುಗಳು ಬೇರೆಯವೇ ಆಗಿರಬೇಕು. ಈ ಮಾತಿನಂತೆ ರಾಜಕುಮಾರ ಗೆದ್ದಿದ್ದಾರೆ. ತುಸು ತೆಳು ಛಾಯೆ ಬಿಟ್ಟರೆ ಯಾರ ಹಂಗಿನ ನೆರಳಲ್ಲಿಲ್ಲ. ಬಾನ ಸ್ವತಂತ್ರ ಹಕ್ಕಿಯಂತೆ ಈ ನೆಲದ ಗಾಳಿ ಬೆಳಕು ಸಂವೇದನೆಗಳಲ್ಲಿ ಈಜು ಹೊಡೆದಿದ್ದಾರೆ.
ರಾಜಕುಮಾರ ಮಡಿವಾಳರ “ನೆಲದ ಕಾವು ಮುಗಿಲ ತಾಕಿ” ಕವನ ಸಂಕಲನಕ್ಕೆ ಸತೀಶ ಕುಲಕರ್ಣಿ ಬರೆದ ಮುನ್ನುಡಿ

ಪ್ರತಿ ಕವಿ, ಪ್ರತಿ ವ್ಯಕ್ತಿಯಂತೆ ಭಿನ್ನ ಮತ್ತು ವಿಶಿಷ್ಟ. ಕೆಲವರಿಗೆ ಲಯ ಪ್ರಾಪ್ತಿಯಾದರೆ, ಇನ್ನು ಕೆಲವರಿಗೆ ಧ್ವನಿ, ವಸ್ತು, ಅದರ ವಿನ್ಯಾಸ, ರೂಪಕ ಪ್ರತಿಮೆಗಳ ಕಟ್ಟುವ ಕಲೆ ಪ್ರಾಪ್ತಿಯಾಗಿರುತ್ತದೆ. ಹೀಗೆಲ್ಲ ಹೊಳೆದದ್ದು ಕವಿ ರಾಜಕುಮಾರ ಮಡಿವಾಳರವರ ಕವನ ಸಂಕಲನ ಓದಿದಾಗ.

ಇಲ್ಲಿಯ ಕವಿತೆಗಳಿಗೆ ಹೊಸ ರುಚಿಯೊಂದಿದೆ, ಸಾಲದೇ ಸತ್ವ ಕೂಡ. ಲಯದ ಎಳೆಯಲ್ಲಿ ತನ್ನ ಕಾವ್ಯದ ತೇರು ಎಳೆದಿರುವ ರಾಜಕುಮಾರ ಇಷ್ಟ ಆಗುವುದು ತಮ್ಮದೇಯಾದ ಸಣ್ಣ, ಸರಳ, ಸಹಜ, ತೆಳು ಅನುಭವಗಳನ್ನು ಕಾವ್ಯ ಕಸೂತಿಯಾಗಿಸುವ ಕಾರಣಕ್ಕಾಗಿ.

ಈ ಕವಿತೆಗಳನ್ನು ಓದಿದಾಗ ಕೆ.ಎಸ್.ಎನ್ ರ ದಾಂಪತ್ಯ ಪ್ರೀತಿ, ಬೇಂದ್ರೆ ಅವರ ಭಾಷಾ ಗತ್ತು, ಕಂಬಾರರ ಜನಪದಿಯ ಕಥಾನಕಗಳು ನೆನಪಾಗದೇ ಇರುವುದಿಲ್ಲ. ಆದರೆ ಇವರನ್ನೆಲ್ಲ ಅದುಮಿ, ತಮ್ಮತನದ ಈಜುಗಾರಿಕೆಯನ್ನು ಮಡಿವಾಳರ ಕಲಿತಿದ್ದಾರೆ. ಕಾವ್ಯ ಪರಂಪರೆ ಪ್ರತಿ ಕವಿಯನ್ನು ಬೆನ್ನಟ್ಟುತ್ತದೆ. ದತ್ತಿ ದೇಣಿಗೆಯನ್ನು ನೀಡುತ್ತಲೇ ಇರುತ್ತದೆ. ಕೊನೆಗೂ ನಮ್ಮ ಹೆಜ್ಜೆ ಗುರುತುಗಳು ಬೇರೆಯವೇ ಆಗಿರಬೇಕು. ಈ ಮಾತಿನಂತೆ ರಾಜಕುಮಾರ ಗೆದ್ದಿದ್ದಾರೆ. ತುಸು ತೆಳು ಛಾಯೆ ಬಿಟ್ಟರೆ ಯಾರ ಹಂಗಿನ ನೆರಳಲ್ಲಿಲ್ಲ. ಬಾನ ಸ್ವತಂತ್ರ ಹಕ್ಕಿಯಂತೆ ಈ ನೆಲದ ಗಾಳಿ ಬೆಳಕು ಸಂವೇದನೆಗಳಲ್ಲಿ ಈಜು ಹೊಡೆದಿದ್ದಾರೆ.

(ರಾಜಕುಮಾರ ಮಡಿವಾಳರ)

ಇಲ್ಲಿ ಕವಿ ಅಗೋಚರ, ಕಾವ್ಯ ಮಾತ್ರ ಗೋಚರಿಸುತ್ತದೆ. ಪಿಸುಮಾತು, ಅಂತರಾಳದ ತವಕಗಳು ತೆರೆ ತೆರೆಯಾಗಿ ಮನಕ್ಕೆ ತಾಗುತ್ತವೆ. ಈ ಬಗೆಯ ಕಾವ್ಯ ಹಿಂದೆ ಎಲ್ಲಾದರೂ ಬಂದಿರಬಹುದೇ? ಎಂದು ಯೋಚಿಸಿದೆ, ನವಿರು ಬಂಧದ ಅಪ್ಪಟ ಉತ್ತರ ಕರ್ನಾಟಕದ ಪ್ರಾದೇಶಿಕ ಸೊಗಡನ್ನು ಹುಡುಕಾಟ ಮಾಡುವಾಗ ಥಟ್ಟನೇ ನೆನಪಾದವರು ಡಾ. ಸೋಮಶೇಖರ ಇಮ್ರಾಪೂರರ ‘ಗಂಡಾ ಹೆಂಡಿರ ಜಗಳ…’ ಸಿದ್ಧಲಿಂಗ ದೇಸಾಯಿ ಅವರ ‘ಚಿಗಳಿ’, ಬಿ.ಆರ್. ಪೊಲೀಸ ಪಾಟೀಲ, ಶ್ರೀರಾಮ ಇಟ್ಟಣ್ಣನವರ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಮುಂತಾದವರ ಕಾವ್ಯ ಲಹರಿ ನೆನಪಾದವು.

ಆದರೆ ಕವಿ ರಾಜಕುಮಾರ ಮಡಿವಾಳರ ಕಾವ್ಯಕ್ಕೆ ತನ್ನದೇಯಾದ ಘಮಲು ಇದೆ. ಕಾಲ ಸಂವೇದನೆಗಳ ಜೀರ್ಣಭಾವ ಸಂಸ್ಕಾರ, ಪ್ರತ್ಯೇಕತೆಯ ತಾಕತ್ತೂ ಇದೆ.

ಇಲ್ಲಿತ್ತು ಈಗಿನ್ನ ಎಲ್ಲಿ ತೇಲಿ ಹೋಯ್ತೊ?
ಕರಿನೀರ ಹೊಳೆಯಲ್ಲಿ ತೇಲಿ
ಬಂದ ತೆಪ್ಪ-ಚಂದಪ್ಪ!

ಈ ನಾಲ್ಕು ಸಾಲುಗಳಲ್ಲಿ ಕಾವ್ಯದನೇಕ ಪಟ್ಟುಗಳಿವೆ. ಪ್ರತಿಮೆ, ರೂಪಕ, ಕಾವ್ಯದ ವಿಸ್ಮಯ ಹೀಗೆಲ್ಲ ಬಳಸುತ್ತ ಕರಿನೀರ ಹೊಳೆಯಲ್ಲಿ ಮತ್ತು ತೆಪ್ಪ ಚೆಂದಪ್ಪ ರೂಪಕಗಳೇ ಸಾಕು ಇಡೀ ಕವಿತೆಗೆ ಅನೇಕ ಆಯಾಮಗಳ ಕೊಡಲು. ಬೇಂದ್ರೆ ಅವರ ‘ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!’ ಎಂಬ ಸಾಲಿಗೆ ಮತ್ತೊಂದು ಭಿನ್ನ ಚಹರೆ ಚಿತ್ರಿಸಿದ ಈ ಎರಡು ಸಾಲುಗಳು.

ಈ ಬಗೆಯ ನಾನಾ ಛಾಯಾ ಚಿತ್ರಗಳನ್ನು ಕಟ್ಟುವ ಚಿತ್ರಕಶಕ್ತಿ ಮಡಿವಾಳರದ್ದು. ನಮ್ಮ ಕಾಲದ ಬಹುಮುಖ್ಯ ಕವಿಗಳ ಅತಿರಂಜಿತ- ಕಲ್ಪನಾತೀತ ರೂಪಕಗಳನ್ನು ಮರಳಿ ಮುರಿದು ಕಟ್ಟುವ ಕೆಲಸ ಮಾಡಿದ್ದಾರೆ. ಇದು ಸುಲಭದ್ದಲ್ಲ, ಸವಾಲಿನದು. ಅಂತಹ ಅಂತಃಸತ್ವ ಸೃಜನಶಕ್ತಿ ಕವಿಗಿದೆ.

ಧ್ವನಿ, ಕಾವ್ಯದ ಬಲು ದೊಡ್ಡ ಶಕ್ತಿ. ಜನನುಡಿಯಲ್ಲಿ ಅಡಗಿರುವ ಹಳತು ಶಬ್ದಗಳನ್ನು ಹೊಸ ಸಂವೇದನೆಗಳಿಗೆ ತಂದು, ಮರು ಸೃಷ್ಟಿಸಿರುವ ಪದಲಾಲಿತ್ಯ ಕವಿಗೆ ದಕ್ಕಿದೆ. ನಿಗಚಬ್ಯಾಡ, ಕಿಯ್ಞಾಂವ (ನವಿಲು ದನಿ), ಇಳಿಝಾಪಿನ್ಯಾಗ, ಹುಲ್ಡಿಲ್ಲಲೇ, ಜೋಡಗೈ ಇಂತಹ ಪದ ಪ್ರಾಪ್ತಿ ಓದಿನ ರುಚಿ ಭಿನ್ನವಾಗಿಸುತ್ತ ಕಾವ್ಯಕ್ಕೆ ನಾಟ್ಯೀಕರಣ ಸಿಗುವಂತೆ ಮಾಡಿದ್ದಾರೆ.

ಜೋಡಗೈ ಮುಗದ ನಿಂತೇನಿ
ಆಳೆತ್ತರ ಬಿಳಿಜ್ವಾಳದಾಗ

***

ಹರಿದ ಸರ ಚೆಲ್ಲಿದಂಗ,
ಮಾರಿತುಂಬ ಮುತ್ತ

**

ತೆನೆ ಬಾಯಿ ಮುತ್ತು!
ಜಗದ ನಗೆ

***

ಗಾಳಿ ತುಟಿ ತುಂಬ ಉಲಿವ ಕೊಳಲು

***

ನದಿ ಎದಿಯಿಂದ ಮುಗಿಲ
ತುದಿ ತನಕ ಹಸಿರು ತೋರಣ

***

ನಡ, ಹೊಸೆವ ಮಣಿಯಿಂದಿಳಿವ ಶ್ಯಾವಿಗಿ

***

ಹೊಸ ಮಳೆಗೆ ಊರಾಚೆ ಹೆಸರಿಲ್ಲದ ಹೊಳಿ

***

ಚಿಕ್ಕಿ ಮರ‍್ಕೊಂಡ ರೆಕ್ಕಿ
ಉದುರಿ ಬಿದ್ದಾಂಗ ನೆಲ ತುಂಬ ಹೂವ್ವ

***

ಇಂತಹ ಅನೇಕ ಸಾಲುಗಳನ್ನು ಓದುತ್ತ ಹೋದಂತೆ ಒಂದು ಕಾವ್ಯ ಕುಣಿತ ಕಣ್ಣೆದುರು ನಿಲ್ಲುತ್ತದೆ. ಇಷ್ಟು ಸಾಕು ಈ ಹಿಂದೆ ಹೇಳಿದ ಮಾತುಗಳಿಗೆ ಸಾಕ್ಷಿಯಾಗಿ. ಮುದವಿದೆ, ಹದವಿದೆ, ಶಬ್ದ ಬಳಕೆಗೆ ಹೊಸ ಅರ್ಥ ಚಿಮ್ಮಿಸುವ, ಕಣ್ಮನಕೆ ಹಿತ ಕೊಟ್ಟು ಶಬ್ದಗಳ ಕರಗಿಸಿ ಹೊಸ ಶಬ್ದ ಸೃಷ್ಟಿಸುವ ಕಲೆ ಕವಿಗೆ ಸಹಜವಾಗಿ ಸಿಕ್ಕಿದೆ.

ಇಡೀ ಸಂಕಲನದ ಕವಿತೆಗಳೊಳಗೆ ಚಲನೆಯೊಂದಿದೆ. ಈ ಚಲನೆಯಲ್ಲಿ ಗಂಡು-ಹೆಣ್ಣಿನ ಮಿಲನ, ಬದುಕಿನ ಹಸಿತನ, ಜೀವ ಜಿಗುಟು, ಯಾವ ಅರಿವು ಮೀರಿದ ಏಕಾಂತ, ಪಿಸು ನುಡಿ, ಹಸಿಹಸಿ ಅನ್ನಬಹುದಾದ ದೇಹ ಮನಸುಗಳ ಆಟ ಕೂಟ ಸಂಕಲನವನ್ನು ಆವರಿಸಿವೆ.

ಇಷ್ಟಕ್ಕೆ ಸೀಮಿತಗೊಳ್ಳದ ಕೆಲವು ಕವಿತೆಗಳು ತಮ್ಮ ಸರಹದ್ದನ್ನು ಮೀರಿ ಹಾರಿದ್ದೂ ಉಂಟು.

ನೂರು ಮಹಲು
ಮುತ್ತಿನ ತೇರು
ಅದಕಾರು ಕಾಲು
ಎಂಟಾನಿ ಕಟ್ಟಿ . . . . . ಕೊನೆಗೆ

***

ಏಳು ಕನ್ಯಾರು ಹುಟ್ಟಿ
ಅವರಿಗ್ಹದಿನಾರು ತುಂಬಿ

ಕತ್ತರಿಸಿ ಬಿದ್ದ ಹಗ್ಗ, ಬಾಲೆಯರು
ಕೈಯ್ಯಾರೆ ಕಟ್ಟಿ ತಾ ಮೊದಲು

ಎಳೆಯುವ ಮುನ್ನ
ತೇರಿನ್ನ ಕದಲುವುದಿಲ್ಲ . . . . ಲೇ
ಪರಾಕ್

ಏನೆಲ್ಲ ಲುಪ್ತವಾಗಿದ್ದರೂ ಕಾವ್ಯದ ತೊಡಕುಗಳನ್ನು ಲಿಂಗಾನುಪಾತಕ್ಕೆ ಹೊಸ ಅರ್ಥ ಕೊಡುವ ರೂಪದಲ್ಲಿವೆ. ಹೊರಾವರಣಕ್ಕೆ ಸಿಗದ ಅರ್ಥ ವ್ಯಾಪ್ತಿ, ಒಳಾವಣರದಲ್ಲಿವೆ.

ಯಾವ ಬಸರಿಗೆ ಎಲ್ಲೋ ಉಂಟು ಉಸಿರು
ಈ ಲೀಲೆಯೊಳಗೆ ನಾ
ಅಂತಃಕರಣದ ಆಟದೊಳಗೆ ನೀನೂ

ಜೀವಚಕ್ರ ನಿರ್ಬಂಧಿತ ಸೂತ್ರವನ್ನು ಕತ್ತರಿಸಿ, ಅಂತಃಕರಣದ ಆಟದೊಳಗೆ ತಾನು, ನೀನೂ ಎನ್ನುವುದು ಕಾವ್ಯಕ್ಕೆ ನಿಸ್ಸೀಮ ವಿಸ್ತಾರ ಕೊಡುತ್ತದೆ. ಎಲ್ಲ ಪಾರದರ್ಶಕ, ಎಳೆಯ ಬಿಸಿಲಿನಷ್ಟು ಸ್ಪರ್ಶ ಸ್ವಚ್ಛ, ಎನ್ನುವ ಕಾವ್ಯದಲ್ಲಿ ಅದರಾಚೆ ಕಾಣದ ನಿಗೂಢತೆಗಳನ್ನು ಬಿಚ್ಚಿಕೊಳ್ಳುವುದೂ ಇದೆ.

1

ಸ್ವರ್ಗದಿಂದ ಇಳಿಬಿಟ್ಟ ಹಗ್ಗ ತಾನಾಗಿ
ಅಂಗಳದ ನೆಲವ ತೊಟ್ಟಿಲ ಮಾಡಿ
ಮಲಗಿಸುವ ನಿನ ಕೂಸಂತೆ ರಮಸ್ಯಾವ

2

ರಾಜ್ಯವಲ್ಲ – ರಾಜನಲ್ಲ – ರಾಜ್ಯ ವೈಭೋಗವಲ್ಲ
ಅಂಕವಕವನಿಷ್ಟಪಟ್ಟವಳು ಪಟ್ಟದ ರಾಣಿ
ಹುಲ್ಡಿಲ್ಲಲೇ

ಏಕಾರ್ಥ ಮುಗುಚಿ ಚರಿತ್ರೆಯ ಸೂಚ್ಯತೆಗಳನ್ನು ಅನೇಕಾರ್ಥಗಳಲ್ಲಿ ರಾಜಕುಮಾರ ಕಟ್ಟಿ ಕೊಡುತ್ತಾರೆ. ತನ್ನ ಸೀಮಿತತೆಗೆ ಅತೀತರಾಗುತ್ತಾರೆ.

(ಸತೀಶ ಕುಲಕರ್ಣಿ)

ಇಲ್ಲಿ ಜನಪದರ ಶೈಲಿಯಲ್ಲಿ ಬರುವ ಅನೇಕ ಕೊಂಡಿ ಸಾಲುಗಳು ಮುದ ಕೊಡುವುದರ ಜೊತೆಗೆ ಹೊಸ ಬಗೆಯ ರುಚಿ ಕೊಡುವುವು. ಈ ‘ಲಿಂಕ್ ಲೈನ್’ ಗಳು ಕವಿತೆಯನ್ನು ತೂಗಿ ತೂಗಿ ನಿಲ್ಲಿಸಿಗೊಡುವುದಿಲ್ಲ. ಜೀವ ಚಡಪಡಿಕೆಯ ಸಾಲುಗಳು ಕವಿತೆಯ ಕುದಿಯನ್ನು ಆರಗೊಡುವುದಿಲ್ಲ.

ಮಳಿಯಂಬೋದು ಬಡವರ ಮನೆಯ ಹೊರಗಿಲ್ಲ

***

ಹುಲ್ಡಿಲ್ಲಲೆ ತಮ್ಮ ಸೋತವರ ಬಲದಾಗ

***

ಬಂದಿ ನೀ ಇದೆಂಥ ದಿನದಾಗ

***

ಬಡವರ ಬಾಳೇವು ಹೂಡಿದಲ್ಲೆ ಒಲೆಯು

***

ಇಂತಹ ಸಾಲುಗಳು ಜಾನಪದದ ಕಟ್ಟು ಕುಣಿಕೆಗಳಾಗಿದ್ದವು. ಹೊಸ ತಲೆಮಾರಿನ ಬಳಕೆಯಲ್ಲಿ ಜಾರಿ ಹೋದ ಈ ಬಗೆಯ ಸಾಲು ಸಂಪತ್ತುಗಳನ್ನು ರಾಜಕುಮಾರ ಮಡಿವಾಳರ ತಮ್ಮ ಜೀವನಾನುಭವಗಳ ಜೊತೆಗೆ ಮರುಸೃಷ್ಟಿ ಮಾಡಿದ್ದಾರೆ.

ಮುನ್ನುಡಿಗೊಂದು ಮಿತಿ ಇದೆ. ಅದು ವಿಮರ್ಶೆಯಾಗಬಾರದು. ಕವಿ, ಕವನ ಸಂಕಲನಕ್ಕೆ ಅಂದಗಾಣಿಸುವ, ತಿದ್ದಿ ಹೇಳುವ ನುಡಿ ತೋರಣವಾಗಿರಬೇಕು. ಈ ಅರಿವಿನೊಂದಿಗೆ ಕವಿ ರಾಜಕುಮಾರ ಮಡಿವಾಳರ ಕಾವ್ಯದ ಒಟ್ಟು ಇತಿಮಿತಿ ಗುರುತಿಸುವುದಾದರೆ, ಬೇಂದ್ರೆ, ಕಂಬಾರ, ಕುವೆಂಪು ಹಾಗೂ ಕೆ.ಎಸ್.ಎನ್ ತುಳಿದ ಹಾದಿಯಿಂದ ಸ್ವಂತದ ಕಿರು ದಾರಿಯನ್ನು ಮಡಿವಾಳರ ಕಂಡುಕೊಡಿದ್ದಾರೆ. ಅಲ್ಲಿನ ಛಾಯೆಗಳನ್ನು ಕರಗಿಸಿ-ಹೊಸ ಛಾಯಾ ರೂಪಿಸಿದ್ದಾರೆ. ಇದರರ್ಥ ಅನುಕರಣೆಯಲ್ಲ, ಪರಂಪರೆಯ ದತ್ತಿಯನ್ನು ಅರಗಿಸಿಕೊಂಡಿದ್ದಾರೆ. ಇವರ ಕವಿತೆಗಳನ್ನು ಓದಿಸಲು ಕಾರಣರಾದ ಕವಯತ್ರಿ ಶ್ರೀಮತಿ ದೀಪಾ ಗೋನಾಳರಿಗೆ ಥ್ಯಾಂಕ್ಸ್ ಹೇಳಲೆ? ಶುಭವಾಗಲಿ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ