ಇವತ್ತು ಇಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಬಿರುಬಿಸಿಲ ಹೊತ್ತು ಅವರು ಯಾರೂ ಇಲ್ಲಿ ಇಲ್ಲ. ಆದರೆ ಅವರ ಹಾಗಿರುವ ಹಲವು ಹಾಡುಗಾರರೂ ಇಲ್ಲೇ ಅಕ್ಕಪಕ್ಕ ತೋಟದಲ್ಲಿ ಕೆಲಸ ಮಾಡುತ್ತಿರಬಹುದು. ಅಥವಾ ಅವರ ಜಾಗವನ್ನು ಅಸ್ಸಾಮಿನಿಂದ ಬಂಗಾಳದಿಂದ ಬಂದ ಕೆಲಸಗಾರರು ವಹಿಸಿಕೊಂಡಿರಬಹುದು. ಅವರಲ್ಲೂ ಇಂತಹ ಕಥೆಗಾರರಿರಬಹುದು. ಸುಮಾರು ಐವತ್ತು ವರ್ಷಗಳ ಹಿಂದೆ ಅಸ್ಸಾಮಿನಿಂದ ಜೇನುಪೆಟ್ಟಿಗೆಗಳನ್ನು ಇಡಲು ದಾಸ್ ಎಂಬ ಯುವಕ ಬಂದಿದ್ದ. ಅವನೂ ಆಗ ಬಾಲಕನಾಗಿದ್ದ ನನಗೆ ಕಥೆಗಳನ್ನು ಹೇಳುತ್ತಿದ್ದ. ಈಗ ಬಹುಶಃ ಆತ ಎಲ್ಲಿರಬಹುದೋ ಗೊತ್ತಿಲ್ಲ. ಆದರೆ ಆತ ನನ್ನ ಕಥಾ ಪಾತ್ರವಾದ.
ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ನಡೆದ “ಕೊಡಗು ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ”ನ ಅಧ್ಯಕ್ಷರಾದ ಅಬ್ದುಲ್ ರಶೀದ್ ಭಾಷಣ ನಿಮ್ಮ ಓದಿಗೆ
ಎಲ್ಲರಿಗೂ ನಮಸ್ಕಾರ
ವೇದಿಕೆಯಲ್ಲಿರುವ ಹಿರಿಯರೇ, ಗಣ್ಯರೇ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೇ, ಮಾಧ್ಯಮ ಮಿತ್ರರೇ ಮತ್ತು ಸಭೆಯನ್ನು ಅಲಂಕರಿಸಿರುವ ಸರ್ವ ಸಭಾಸದರೇ,
ಕೊಡಗು ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ ನನ್ನ ಹುಟ್ಟೂರು ಸುಂಟಿಕೊಪ್ಪದಲ್ಲಿ ಅದರಲ್ಲೂ ನಾನು ಹುಟ್ಟಿ ಬೆಳೆದ ಕಾಫಿ ತೋಟದ ಸೆರಗಿನಲ್ಲಿರುವ ಗದ್ದೆಹಳ್ಳದ ಈ ಸಭಾಂಗಣದಲ್ಲಿ ನಡೆಯುತ್ತಿರುವುದು ನನ್ನಲ್ಲಿ ಒಂದು ರೀತಿಯ ಪುಳಕವನ್ನೂ ಮತ್ತು ಅದಕ್ಕಿಂತಲೂ ಹೆಚ್ಚಾದ ಹೆಮ್ಮೆ ಮತ್ತು ಅಚ್ಚರಿ ಮಿಶ್ರಿತವಾದ ವಿನಯವನ್ನೂ ಮೂಡಿಸುತ್ತಿದೆ. ಈ ಸಭಾಂಗಣದಲ್ಲಿ ಮಾತು ಶುರು ಮಾಡುವ ಮೊದಲು ಸುಮಾರು ಐವತ್ತು ವರ್ಷಗಳ ಹಿಂದೆ ಅಂದರೆ ನಾನು ಸುಂಟಿಕೊಪ್ಪದ ಸರಕಾರೀ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ಓದುತ್ತಿರುವಾಗ ಇಲ್ಲೇ ಪಕ್ಕದಲ್ಲಿರುವ ಸುಂಟಿಕೊಪ್ಪ ಮಡಿಕೇರಿ ಸಿದ್ದಾಪುರ ರಸ್ತೆಗಳು ಸೇರುವ ವೃತ್ತದ ಬಳಿಯ ಪುಟ್ಟ ವೇದಿಕೆಯಲ್ಲಿ ನಡುಗುತ್ತಾ ಮಾಡಿದ ಗಂಭೀರ ಮತಪ್ರಸಂಗದ ನೆನಪಾಗುತ್ತದೆ. ಆಗ ನನಗೆ ಹತ್ತು ವರ್ಷ ಇರಬಹುದು. ನನ್ನ ತಂದೆಯವರು ಇಲ್ಲೇ ಪಕ್ಕದ ಸ್ಯಾಂಡಲ್‌ವುಡ್ ಕಾಫೀ ತೋಟದಲ್ಲಿ ರೈಟರಾಗಿದ್ದರು ಮತ್ತು ಅವರು ಸುಂಟಿಕೊಪ್ಪ ಜಮಾತಿನ ಕಾರ್ಯದರ್ಶಿಯಾಗಿದ್ದರು. ತೋಟದ ಸಾಹುಕಾರರು ಜಮಾತಿನ ಅಧ್ಯಕ್ಷರಾಗಿದ್ದರು. ಸಾಹುಕಾರರ ಬಳಿ ಬಹುಶಃ ಯಾರೋ ಹೇಳಿರಬೇಕು. ನಿಮ್ಮ ರೈಟರ ಮಗನ ಕನ್ನಡ ಚೆನ್ನಾಗಿದೆ ಮತ್ತು ಅವನು ಮಾತನ್ನೂ ಚೆನ್ನಾಗಿ ಆಡುತ್ತಾನೆ ಅಂತ. ಅವರು ರೈಟರಿಗೆ ಮಗನನ್ನು ಭಾಷಣಕ್ಕೆ ರೆಡಿ ಮಾಡಿಸಲು ಹೇಳಿದರು.ರೈಟರು ಮಗನಿಗೆ ಭಾಷಣ ರೆಡಿ ಮಾಡಲು ಹೇಳಿದರು. ವಿಷಯ: ಕಗ್ಗತ್ತಲಲ್ಲೂ ಅಜ್ಞಾನದಲ್ಲೂ ಮುಳುಗಿದ್ದ ಅರಭಿ ಮರಳುಗಾಡನ್ನು ಅಂಧಶ್ರದ್ಧೆಯಿಂದ ಮೇಲೆತ್ತಿದ ಪ್ರವಾದಿವರ್ಯರ ಜನ್ಮ ವೃತ್ತಾಂತ. ಸುಮಾರು ಅರ್ಧ ಶತಮಾನದ ಹಿಂದೆ ನಾನು ನಡುಗುತ್ತಾ ಮಾಡಿದ ಕನ್ನಡದ ಆ ಗಂಭೀರ ಮತಪ್ರಸಂಗ ಹೇಗಿತ್ತು ಎಂಬುದು ಈಗ ನನಗೆ ನೆನಪಿಲ್ಲ. ಆದರೆ ಆ ನಡುಕ ಕಣ್ಮುಂದೆ ಬರುತ್ತಿದೆ. ಮತ್ತು ನನ್ನ ತಂದೆಯ ಕಣ್ಣಲ್ಲಿ ಕಂಡ ಖುಷಿಯ ಮಿಂಚು, ಸಾಹುಕಾರರ ಕಣ್ಣಲ್ಲಿ ಕಂಡ ಮೆಚ್ಚುಗೆಯೂ ನೆನಪಾಗುತ್ತಿವೆ. ಬಹುಶಃ ಅವರಿಬ್ಬರ ಖುಷಿ ಮತ್ತು ಮೆಚ್ಚುಗೆಗೆ ಕಾರಣವಾದ ಪುಟ್ಟ ಬಾಲಕನ ಆ ತೊದಲು ಮಾತುಗಳೇ ಈವತ್ತು ಆ ಬಾಲಕನನ್ನು ಈ ವೇದಿಕೆಗೆ ಕರೆತಂದಿತು ಎಂದು ನನಗೆ ಅನಿಸುತ್ತದೆ. ನಿನ್ನ ಮಗ ಎಲ್ಲಿಯ ತನಕ ಓದುತ್ತಾನೋ ಅಲ್ಲಿಯವರೆಗೆ ಓದಿಸುತ್ತೇನೆ ಎಂದು ಸಾಹುಕಾರರು ರೈಟರಿಗೆ ಮಾತು ಕೊಟ್ಟರು. ರೈಟರು ಎಲ್ಲಿಯವರೆಗೆ ಬೇಕಾದರೂ ನೀನು ಓದು ಎಂದು ಮಗನಿಗೆ ಧೈರ್ಯ ಕೊಟ್ಟರು. ನಾನು ಯಾವುದೇ ಸಂಕೋಚ ಮುಲಾಜು ಏನೂ ಇಲ್ಲದೆ ಎಲ್ಲಿಯವರೆಗೆ ಆಗುತ್ತದೋ ಅಲ್ಲಿಯವರೆಗೆ ಓದಿದೆ. ಈಗ ನಿಮ್ಮ ಮುಂದೆ ಏನೂ ಸಂಕೋಚ ಮುಲಾಜಿಲ್ಲದೆ ನಿಂತಿರುವೆ. ನಮ್ಮ ತಂದೆ ಸುಮಾರು ಮೂರು ದಶಕಗಳ ಹಿಂದೆ ತೀರಿಹೋದರು. ಅವರ ಮೆಲುವಾದ ಕೃಶವಾದ ಉದ್ದನೆಯ ದೇಹ ಇಲ್ಲೇ ಸುಮಾರು ಐನೂರು ಮೀಟರ್ ದೂರದಲ್ಲಿ ಬಲಿಷ್ಟ ನಾಗಪುಷ್ಪ ವೃಕ್ಷವೊಂದರ ಕೆಳಗೆ ತಣ್ಣನೆ ಮಲಗಿದೆ. ಬಹುಶಃ ಅವರ ಕಣ್ಣಿನ ಮಿಂಚು ಈಗಲೂ ಹಾಗೆಯೇ ಇರಬಹುದು ಮತ್ತು ಅವರು ತೀರಿಹೋದ ಹಲವು ವರ್ಷಗಳ ನಂತರ ಮರೆಯಾದ ಸಾಹುಕಾರರ ಮೆಚ್ಚುಗೆಯೂ ಈಗ ಇಮ್ಮಡಿಗೊಂಡಿರಬಹುದು.
ನಾನು ಈ ಮಾತುಗಳನ್ನು ಆಡುತ್ತಿರುವುದು ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುವ ಅಹಂಕಾರದಿಂದ ಅಲ್ಲ. ಬದಲಾಗಿ ಅಕ್ಷರಗಳ ಮಾಂತ್ರಿಕ ಶಕ್ತಿಯನ್ನು ನಿಮಗೆ ವಿವರಿಸಲು. ಅಕ್ಷರಗಳು ಮಾಡುವ ಇಂದ್ರಜಾಲವನ್ನು ಬಹುಶಃ ಆ ಸಾಹುಕಾರರು ಅರಿತಿದ್ದರು. ರೈಟರೂ ಅರಿತಿದ್ದರು. ಹಾಗಾಗಿ ಅವರು ಎಲ್ಲೋ ಅಬ್ಬೇಪಾರಿಯಾಗಿ ಕಳೆದು ಹೋಗಬಹುದಾಗಿದ್ದ ನನ್ನೊಳಗೆ ಅಕ್ಷರದ ಮೋಹ ಮೂಡಿಸಿದರು. ಹಾಗಾಗಿ ನಾನು ಬಹಳ ವಿನಯದಿಂದ ಈ ಅಧ್ಯಕ್ಷ ಭಾಷಣವನ್ನು ಕೊಡಗಿನ ಕಾಫಿ ತೋಟಗಳ ಲೈನುಮನೆಗಳಲ್ಲಿ, ರಕ್ಷಿತ ಕಾಡಂಚಿನ ರಸ್ತೆಬದಿಗಳಲ್ಲಿರುವ ಹಾಡಿಗಳಲ್ಲಿ ಹುಟ್ಟಿ ಜೀವಮಾನವನ್ನೆಲ್ಲ ಅದರಲ್ಲೇ ತೇದು ಅನಾಮಿಕರಾಗಿ ಮರೆಯಾದ ಕೆಲಸದ ಆಳುಗಳನ್ನು ನೆನಪಿಸಿಕೊಂಡು ಮುಂದುವರಿಸುತ್ತೇನೆ. ನನ್ನ ತಂದೆಯ ಕಣ್ಣುಗಳಲ್ಲಿ ನಾನು ಕಂಡ ಖುಷಿಯ ಮಿಂಚು ಮತ್ತು ಸಾಹುಕಾರರ ಮುಖದಲ್ಲಿ ನಾನು ಕಂಡ ಮೆಚ್ಚುಗೆಯನ್ನು ಆ ಲೈನುಮನೆಗಳ ಹಾಡಿಗಳ ಕೆಲಸಗಾರರ ಮಕ್ಕಳು ಅವರವರ ಸಾಹುಕಾರರಲ್ಲಿ ಯಾಕೆ ಕಾಣಲಿಲ್ಲ? ಅವರು ಯಾರೂ ಯಾಕೆ ಆ ಮಕ್ಕಳ ಎದೆಯಲ್ಲಿ ಅಕ್ಷರದ ಬೀಜ ಬಿತ್ತಲಿಲ್ಲ? ಆ ಮಕ್ಕಳು ಯಾಕೆ ಅಕ್ಷರದ ಮಾಂತ್ರಿಕತೆಯ ಮೇಲೆ ಸವಾರಿ ಹೋಗಲಿಲ್ಲ. ಆ ಮಕ್ಕಳು ಯಾಕೆ ಯೌವನ ಮೂಡುವ ಮೊದಲೇ ನಲುಗಿ ಹೋದರು. ಈ ಪ್ರಶ್ನೆಗಳನ್ನು ನಾನು ಒಬ್ಬ ಹುಂಬ ಬಂಡಾಯಗಾರನಂತೆ ಎತ್ತುತ್ತಿಲ್ಲ. ಅಕ್ಷರಗಳ ಮರವನ್ನೇ ಎದೆಯ ತುಂಬ ತುಂಬಿಕೊಂಡಿರುವ ನಮ್ಮಂತಹ ಸಾಹಿತ್ಯಪ್ರಿಯರು, ಓದುಗರು, ಬರಹಗಾರರಿಂದ ತುಂಬಿ ಶೋಭಿಸುತ್ತಿರುವ ಈ ಸಮ್ಮೇಳನದ ಎದೆಯೊಳಗೆ ಇದೊಂದು ಪ್ರಶ್ನೆ ಕೇಳುತ್ತಿರುವೆ. ಯಾಕೆಂದರೆ ಓದು ಬರಹ ಸಾಹಿತ್ಯ ಸಂಸ್ಕೃತಿ ಎಲ್ಲವೂ ಹೇಳುವುದು ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು. ನಮ್ಮ ವೇದಗಳೂ ಉಪನಿಷತ್ತುಗಳೂ ಬೈಬಲ್ಲೂ ಖುರಾನೂ ವಚನಗಳೂ ಅಷ್ಟೇ ಯಾಕೆ ನಮ್ಮ ದೇಶದ ಸಂವಿಧಾನ ಕೂಡಾ ಹೇಳುವುದು ಸಮಾನತೆ ಮತ್ತು ಸಹಬಾಳ್ವೆ. ಆದರೆ ಅದು ಎಲ್ಲಿದೆ?ದೂರದಿಂದ ಮತ್ತು ಮೇಲೆ ಆಕಾಶದಿಂದ ನೋಡಿದರೆ ನಂದನವನದಂತೆ ಕಾಣುತ್ತಿರುವ ಕೊಡಗಿನ ಕಾಡುಗಳ ಒಳಹೊಕ್ಕರೆ ಏನು ಕಾಣುತ್ತದೆ? ಇಲ್ಲೇ ಪಕ್ಕದಲ್ಲಿರುವ ಹೇರೂರು ಹಾಡಿಯಲ್ಲಿ ಚಿಕ್ಲಿ ಹೊಳೆ ಕಾಡಿನ ಹಾಡಿಗಳಲ್ಲಿ ಬದುಕುತ್ತಿರುವ ಆದಿವಾಸಿಗಳ ಬದುಕು ಹೇಗಿದೆ. ಯಾಕೆ ಈ ಹಾಡಿಗಳಿಂದ ಒಬ್ಬ ಬರಹಗಾರ, ಒಬ್ಬ ಹಾಡುಗಾರ, ಒಬ್ಬ ಅಧಿಕಾರಿ, ಒಬ್ಬ ವಕೀಲ ಮೂಡಿ ಬರಲಿಲ್ಲ? ಯಾಕೆ ಈ ಮಕ್ಕಳು ಅಕ್ಷರದ ಇಂದ್ರಜಾಲದಿಂದ ವಂಚಿತರಾದರು? ಕೊಡಗಿನ ವನರಾಜಿಯೊಳಗೆ ಮುಸುಕು ಹೊದ್ದುಕೊಂಡು ನಿಟ್ಟುಸಿರು ಬಿಡುತ್ತಿರುವ ಗಿರಿಜನ ಹಾಡಿಗಳ ಒಳಗೆ ಯಾಕೆ ಸದ್ದಿಲ್ಲದೆ ಮತಾಂತರ ಕಾರ್ಯ ನಡೆಯುತ್ತಿದೆ. ಮದ್ಯವ್ಯಸನದಿಂದ ಬಿಡುಗಡೆ ಹೊಂದಲು ಮತಾಂತರಕ್ಕೆ ಮೊರೆ ಹೋಗುತ್ತಿರುವ ಕೊಡಗಿನ ಈ ಆದಿವಾಸಿ ಮೂಲನಿವಾಸಿಗಳು ತಮ್ಮದೇ ಹಾಡು ಆಚರಣೆ ದೇವರು ದೈವಗಳನ್ನು ಯಾಕೆ ಅಸಡ್ಡೆಯಿಂದ ನೋಡಲು ತೊಡಗಿದ್ದಾರೆ. ಜೀತ ಹಸಿವು ಅವಮಾನ ಮಧ್ಯಪಾನ ಮತ್ತು ಮತಾಂತರ ಹೀಗೆ ಒಂದಕ್ಕೆ ಒಂದು ಇವರ ಕೊರಳಿಗೆ ಸುತ್ತಿಕೊಳ್ಳುತ್ತಿರುವ ಈ ಭಯಾನಕ ಸರಪಣಿಯ ಕೊಂಡಿಗಳನ್ನು ಕತ್ತರಿಸುವುದು ಹೇಗೆ?
ಸುಂಟಿಕೊಪ್ಪ ಸರಕಾರೀ ಪ್ರಾಥಮಿಕ ಶಾಲೆಯಲ್ಲಿ ನನ್ನ ಐದನೇ ತರಗತಿಯವರೆಗಿನ ಸಹಪಾಠಿ ಅಣ್ಣುವಿನ ನೆನಪಾಗುತ್ತಿದೆ. ಅಣ್ಣು ನಮಗೆಲ್ಲರಿಗಿಂತ ಜಾಣನಾಗಿದ್ದ. ನಮಗೆಲ್ಲರಿಗಿಂತ ಶಿಸ್ತುಗಾರನಾಗಿದ್ದ ಮತ್ತು ತರಗತಿಯ ಮಾನಿಟರ್ ಕೂಡಾ ಆಗಿದ್ದ. ನಾನು ಅಕ್ಷರದ ಮ್ಯಾಜಿಕ್ಕಿನಲ್ಲಿ ಮುಳುಗಿ ಕೊನೆ ತಲುಪಿ ವಾಪಾಸು ಬಂದಾಗ ಅಣ್ಣು ವಿಷಣ್ಣನಾಗಿದ್ದ. ನನ್ನ ಸ್ನೇಹದ ಹಸ್ತ ಚಾಚಲು ಹೋದರೆ ಮುಜುಗರಕ್ಕೆ ಒಳಗಾಗಿದ್ದ. ಈ ಸಮ್ಮೇಳನದ ಪ್ರಾಂಗಣದಲ್ಲಿ ನನ್ನ ಜೊತೆ ಅಣ್ಣುವೂ ಇದ್ದಿದ್ದರೆ! ಕನ್ನಡ ಸಾಹಿತ್ಯದ ಮಜಲುಗಳ ಕುರಿತು ನಾವಿಬ್ಬರೂ ಕಣ್ಣಿಗೆ ಕಣ್ಣು ಕೊಟ್ಟು ಸಂವಾದದಲ್ಲಿ ಪಾಲುಗೊಳ್ಳುವ ಹಾಗೆ ಆಗಿದ್ದರೆ ಎಂದು ನಾನು ಕನಸು ಕಾಣುತ್ತೇನೆ. ಬಹುಶಃ ಒಂದು ಸರ್ವೇ ಸಾಧಾರಣ ವಿಷಯವಾಗಬೇಕಿದ್ದ ಈ ಸಂಗತಿ ನನ್ನಲ್ಲಿ ಒಂದು ಕನಸಿನಂತೆ ಮುಗಿದು ಹೋಗುತ್ತಿರುವುದು ಏಕೆ ಎಂಬ ಒಂದು ಪ್ರಶ್ನೆ ನಿಮ್ಮ ಮುಂದಿಟ್ಟುತ್ತಿದ್ದೇನೆ.
ಇನ್ನೂ ಒಂದು ನೆನಪು. ಮಾದಾಪುರ ಶಾಲೆಯಲ್ಲಿ ಓದುತ್ತಿರುವಾಗ ಹರದೂರು ಹೊಳೆಯ ಸೆರಗಿನಿಂದ ಒಬ್ಬಳು ಪುಟ್ಟ ಯುವತಿ ನಮ್ಮ ಶಾಲೆಗೆ ನಡೆದುಕೊಂಡು ಬರುತ್ತಿದ್ದಳು. ಅವಳು ಯಾವಾಗಲೂ ದುಃಖದಿಂದ ತುಂಬಿಕೊಂಡಿರುತ್ತಿದ್ದಳು.ಅವಳ ಮನೆಯ ಬದುಕು ಅವಳಿಗೆ ಅಸಹನೀಯ ಅನಿಸಿತ್ತು. ಆಕೆ ನನಗಿಂತ ಚೆನ್ನಾಗಿ ಬರೆಯುತ್ತಿದ್ದಳು. ಆದರೆ ಮನೆಯ ಸಂಕಟ ತಡೆಯಲಾರದೆ ಆಕೆ ದಾದಿಯರ ತರಬೇತಿಗೆ ಸೇರಿಕೊಂಡಳು. ಈಗ ಆಕೆ ಇಂಗ್ಲೆಂಡಿನಲ್ಲಿ ರಾಜಮನೆತನದವರು ದಾಖಲಾಗುವ ಆಸ್ಪತ್ರೆಯಲ್ಲಿ ಹಿರಿಯ ದಾದಿಯಾಗಿದ್ದಾಳೆ.
ಕೊಡಗಿನ ಗೌರಮ್ಮ ಜೀವ ಕಳೆದುಕೊಂಡ ಹೊಳೆಯ ಬದಿಯಲ್ಲಿಯೇ ಈಕೆಯ ಮನೆಯೂ ಇತ್ತು. ಬಹುಶಃ ಮನೆಯ ಅಸಹನೀಯ ಕಷ್ಟಗಳು ಇಲ್ಲದಿದ್ದರೆ ಈಕೆಯೂ ಕನ್ನಡದ ಬಹಳ ಒಳ್ಳೆಯ ಲೇಖಕಿ ಆಗಿರುತ್ತಿದ್ದಳು.
ಆಫ್ರಿಕಾ ಖಂಡದಿಂದ ಜೀತದಾಳುಗಳಾಗಿ ಅಮೇರಿಕಾಕ್ಕೆ ತೆರಳಿದ ಆ ತಲೆಮಾರಿನ ಮಕ್ಕಳು ಮತ್ತು ಮೊಮ್ಮಕ್ಕಳು, ಯುರೋಪಿನಿಂದ ಬಹಿಷ್ಕೃತರಾಗಿ ಆಸ್ಟ್ರೇಲಿಯಾ ಖಂಡ ತಲುಪಿದ ಅತಂತ್ರ ತಲೆಮಾರಿನವರ ಮಕ್ಕಳು ಮತ್ತು ಮೊಮ್ಮಕ್ಕಳು, ಹರ್ಯಾಣ ಗುಜರಾತುಗಳಿಂದ ಕಬ್ಬು ಕಟಾವಿನ ಆಳುಗಳಾಗಿ ಕೆರಿಬಿಯನ್ ತಲುಪಿದ ಕಾರ್ಮಿಕರ ಮಕ್ಕಳು ಮತ್ತು ಮೊಮ್ಮಕ್ಕಳು ಈಗ ಅಲ್ಲಿನ ಸಾಹಿತ್ಯ ಕ್ರೀಡೆ ಸಿನೆಮಾ ಮಾಧ್ಯಮ ಹಾಗೂ ರಾಜಕೀಯದಲ್ಲಿ ಮಿಂಚುತ್ತಿದ್ದಾರೆ. ಜಗತ್ತೇ ನಿಬ್ಬೆರಗಾಗುವ ಆತ್ಮ ಚರಿತ್ರೆಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಹೊಟ್ಟೆಪಾಡಿಗಾಗಿ ಕೊಡಗಿನ ಕಾಡು ಹೊಕ್ಕವರ ಅಥವಾ ಕಾಡಿನಲ್ಲೇ ಇದ್ದು ಬೀದಿಗೆ ಬಿದ್ದ ಆದಿವಾಸಿಗಳ ಮಕ್ಕಳು ಮತ್ತು ಮೊಮ್ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ನಾನು ಕಳೆದ ಹಲವು ವರ್ಷಗಳ ಕಾಲ ಕೊಡಗಿನ ಹಾಡಿಗಳಲ್ಲಿ ರೇಡಿಯೋಗೆ ಬೇಕಾಗಿ ಹುಡುಕುತ್ತಾ ಅಲೆದಿದ್ದೇನೆ ಮತ್ತು ಈ ಅನುಭವದ ಆಧಾರದ ಮೇಲೆಯೇ ಬಹಳ ಕಠಿಣವಾದ ಈ ಸತ್ಯವನ್ನು ನಿಮ್ಮ ಮುಂದಿಡುತ್ತಿದ್ದೇನೆ. ವೇದಿಕೆಯಲ್ಲಿ ಸರಕಾರದ ನೀತಿ ನಿಯಮಗಳನ್ನು ರೂಪಿಸುವವರೂ, ಶೈಕ್ಷಣಿಕ ಸಾಂಸ್ಕೃತಿಕ ಸಾಹಿತ್ಯಿಕ ಕ್ಷೇತ್ರಗಳ ನೇತಾರರೂ ಇರುವುದರಿಂದ ನಾನು ಎತ್ತಿರುವ ಈ ಪ್ರಶ್ನೆಯನ್ನು ದಯವಿಟ್ಟು ಪರಿಶೀಲಿಸಬೇಕು ಎಂದು ವಿನಮ್ರವಾಗಿ ಬೇಡಿಕೊಳ್ಳುತ್ತೇನೆ.

ಕೊಡಗಿಗೆ ಬೇಕು ಬೇರೆಯದೇ ಸಾಂಸ್ಕೃತಿಕ ನೀತಿ
ಕೊಡಗು ಒಂದು ಬೇರೆಯೇ ಲೋಕ. ಇಲ್ಲಿನ ಬೆಟ್ಟಗುಡ್ಡಗಳು, ಹುಲ್ಲುಗಾವಲಿನ ಬಾಣೆಗಳು, ಇಳಿಜಾರಿನ ಕೊರಕಲುಗಳು, ಮನುಷ್ಯ ಮುಖಗಳು, ದೇವಾನುದೇವತೆಗಳು, ಮನುಷ್ಯ ಮುಖಗಳು ಭಾಷೆಗಳು ಆಚರಣೆಗಳು ಎಲ್ಲವೂ ವಿಶಿಷ್ಟ. ಇದು ಬರಿಯ ಭಾವುಕತೆಯ ಮಾತಲ್ಲ. ಸುಮಾರು 900 ಲಕ್ಷ ವರ್ಷಗಳ ಹಿಂದೆ ಭರತ ಖಂಡದ ಈ ಭೂಭಾಗ ಈಗ ಆಗ್ನೇಯ ಆಫ್ರಿಕಾದ ಕಡಲ ತೀರದಲ್ಲಿರುವ ಮಡಗಾಸ್ಕರ್ ಜೊತೆ ಅಂಟಿಕೊಂಡಿತ್ತು. ಹಲವು ಲಕ್ಷ ವರ್ಷಗಳ ಈ ಖಂಡಾಂತರ ಚಲನೆಯ ಕೊನೆಯಲ್ಲಿ ಬೇರೆಬೇರೆಯಾಯಿತು. ಮನುಷ್ಯ ಪ್ರಭೇದ ಮತ್ತು ಉಳಿದ ಸಸ್ತನಿಗಳ ಉಗಮದ ಮೊದಲೇ ಸಂಭವಿಸಿದ ಈ ಮಹಾಚಲನೆಯ ಚಹರೆಗಳು ಇಲ್ಲಿನ ಮರಗಿಡ ಪರ್ವತ ಹಾಗೂ ಮನುಷ್ಯ ಮುಖಗಳಲ್ಲಿ ನನಗೆ ಕಾಣಿಸುತ್ತದೆ. ಇದನ್ನು ನಾನು ಹೆಚ್ಚಿಗೆ ವಿವರಿಸಲು ಹೋಗದೆ ಒಂದು ಕಾಲದಲ್ಲಿ ಕೊಡಗು ಸಂಸ್ಥಾನವಾಗಿದ್ದ, ಆನಂತರ ಮದರಾಸು ಪ್ರಾಂತಕ್ಕೆ ಸೇರಿದ್ದ, ಅನಂತರ ಕೊಡಗು ರಾಜ್ಯವಾಗಿದ್ದ ಈಗ ಕರ್ನಾಟಕ ರಾಜ್ಯದ ಮೋಹಕ ಜಿಲ್ಲೆಯಾಗಿರುವ ಈ ಕೊಡಗು ನಾಡಿಗೆ ಬೇರೆಯದೇ ರೀತಿಯ ಸಾಂಸ್ಕೃತಿಕ ನೀತಿ ಮತ್ತು ಶೈಕ್ಷಣಿಕ ಭಾಷಾ ಸೂತ್ರ ಬೇಕಾಗಿದೆ. ಕೊಡವ, ಅರೆಭಾಷೆ, ಜೇನುಕುರುಬ, ಬೆಟ್ಟಕುರುಬ, ಎರವ, ಮೇದ, ಅಡಿಯ, ಪಣಿಯ, ದೇವಸೋಲಿಗ, ಜೇನುಮಲೆ ಕುಡಿಯ, ಪೂಮಲೆ ಕುಡಿಯ ಇತ್ಯಾದಿ ಭಾಷೆಗಳನ್ನು ಕೊಡಗಿನಲ್ಲಿ ಅಲ್ಲದೆ ಬೇರೆಲ್ಲೂ ಬಳಸಲು ಮತ್ತು ಉಳಿಸಲು ಸಾಧ್ಯವಿಲ್ಲ. ಕಲಿಕೆಯ ಮಾಧ್ಯಮವಾಗಿ ಈ ಭಾಷೆಗಳನ್ನು ಬಳಸುವುದು ಅಸಾಧ್ಯವಾದ ವಿಷಯ. ಆದರೆ ಈ ಭಾಷೆಗಳನ್ನು ಬಳಸುವ ಸಮುದಾಯದ ಮಕ್ಕಳಲ್ಲಿ ಈ ಭಾಷೆಗಳ ಕುರಿತ ಕುತೂಹಲ ಆಸಕ್ತಿ ಮತ್ತು ಹೆಮ್ಮೆಯನ್ನು ಮೂಡಿಸುವ ಕೆಲಸವಾಗಬೇಕು.ಕೊಡಗಿನ ಶಾಲೆಗಳಲ್ಲಿ ಅದರಲ್ಲೂ ಈ ಅದಿವಾಸಿ ಮಕ್ಕಳು ಕಲಿಯುವ ಆಶ್ರಮ ಶಾಲೆಗಳಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ ಈ ಭಾಷೆಗಳ ಕುರಿತ ಮಾಹಿತಿ ಮತ್ತು ಕಲಿಕೆ ಕೊಡಿಸಬೇಕು.ಕನ್ನಡ ಭಾಷೆ ಇಷ್ಟು ಶ್ರೀಮಂತವಾಗಿ ಬೆಳೆಯಲು ಕಾರಣ ಕರ್ಣಾಟಕದ ತುಂಬ ತುಂಬಿಕೊಂಡಿರುವ ಇಂತಹ ಸಣ್ಣಪುಟ್ಟ ಭಾಷೆಗಳು. ಈ ಪುಟ್ಟ ತೊರೆಗಳಿಂದ ಹರಿದು ಬರುವ ಭಾಷಾ ಹರಹು ಕನ್ನಡವನ್ನು ದಷ್ಟಪುಷ್ಟವನ್ನಾಗಿ ಮಾಡಿದೆ.ಈ ಭಾಷೆಗಳು ಸೊರಗಿದರೆ ಕನ್ನಡವೂ ಬಡವಾಗುತ್ತದೆ.ಕೊಡಗಿನಲ್ಲಿ ಕನ್ನಡ ಉಳಿಸುವುದೆಂದರೆ ಇಲ್ಲಿನ ಈ ಸಣ್ಣಪುಟ್ಟ ಭಾಷೆಗಳನ್ನು ಉಳಿಸುವುದು. ಈ ಸಣ್ಣಪುಟ್ಟ ಭಾಷೆಗಳನ್ನು ಉಳಿಸುವುದೆಂದರೆ ಅಳಿವಿನ ಅಂಚಿನಲ್ಲಿರುವ ಈ ಭಾಷೆಗಳನ್ನಾಡುವ ಜನರ ಜೀವಗಳನ್ನು ಕಾಪಾಡುವುದು. ಸರಕಾರದ ಭಾಷಾ ನೀತಿ ಈ ಜನರ ಬದುಕನ್ನು ಬಿಟ್ಟಿರಲು ಆಗುವುದಿಲ್ಲ. ನಾವು ಪ್ರಪಂಚದ ಇತರ ದೇಶಗಳಲ್ಲಿ ಮುಖ್ಯವಾಗಿ ಆಸ್ಟ್ರೇಲಿಯಾ, ನ್ಯೂಜಿಲೇಂಡ್, ಕೆನಡಾ ಮತ್ತು ಅಮೇರಿಕಾಗಳಲ್ಲಿ ಇಂತಹ ನಿಲುವನ್ನು ಕಾಣಬಹುದು. ಹಸಿವು, ಕುಡಿತ ಮತ್ತು ಅನಾರೋಗ್ಯಗಳ ಸುಳಿಯಲ್ಲಿ ಸಿಲುಕಿ ಅಳಿವಿನತ್ತ ಸಾಗುತ್ತಿರುವ ಮೂಲನಿವಾಸಿಗಳ ಹಿತವನ್ನು ಈ ದೇಶಗಳು ತಮ್ಮ ಮೊದಲ ಆಧ್ಯತೆಯನ್ನಾಗಿ ಪರಿಗಣಿಸುತ್ತದೆ.ಇವರ ಆಡುನುಡಿಯ ಆರೈಕೆಗಾಗಿ ನೀತಿ ನಿಯಮಾವಳಿಗಳನ್ನು ರೂಪಿಸಿದೆ.ಕೊಡಗಿನ ಜನಪ್ರತಿನಿಧಿಗಳು ಮತ್ತು ಜವಾಬ್ದಾರಿಯ ಸ್ಥಾನದಲ್ಲಿರುವವರು ಈ ಕುರಿತು ಯೋಚಿಸಿ ಕೊಡಗು ಕೇಂದ್ರೀಕೃತವಾದ ಮಾದರಿ ಸೂತ್ರಗಳನ್ನು ನಿರೂಪಿಸಬೇಕೆಂದು ಕೇಳಿಕೊಳ್ಳುತ್ತೇನೆ. ಈ ಮೂಲಕ ಅಳಿವಿನತ್ತ ಸಾಗುತ್ತಿರುವ ಈ ಭಾಷಾ ವೈವಿಧ್ಯ ಪ್ರದೇಶದ ಮಾತು ಹಾಡು ಕುಣಿತ ಬಡಿತಗಳು ಈ ಜನಾಂಗಗಳ ಮಕ್ಕಳ ನಾಲಿಗೆಯಲ್ಲಿ ನಲಿಯುವಂತೆ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. ಆಧುನಿಕ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಈ ಅಪರೂಪದ ಕಲಾ ಮಾಧ್ಯಮಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಪ್ರಚುರಪಡಿಸುವ ಕೆಲಸ ಮಾಡಬಹುದಾಗಿದೆ.
ಈ ಸಂದರ್ಭದಲ್ಲಿ ನನಗೆ ಸುಂಟಿಕೊಪ್ಪ ಚಿಕ್ಲಿ ಹೊಳೆ ಗಿರಿಜನ ಹಾಡಿಯ ಬೆಟ್ಟ ಕುರುಬರ ಮುತ್ತಿ ನೆನಪಾಗುತ್ತಾಳೆ. ಈಕೆ ಅಪರೂಪದಲ್ಲೇ ಅಪರೂಪದ ಹಾಡುಗಾರ್ತಿ. ಬೆಟ್ಟ ಕುರುಬ ಜನಾಂಗದ ಕುಟ್ಟದ ಮಂಕಾಳಿ ದೇವತೆಯ ಹಾಡನ್ನು ಗಂಟೆಗಟ್ಟಲೆ ಹಾಡಬಲ್ಲವಳಾಗಿದ್ದಳು. ಈಕೆ ಮತ್ತು ಈಕೆಯ ಸಹ ಹಾಡುಗಾರ್ತಿ ಒಬ್ಬರ ಬೆನ್ನಿಗೊಬ್ಬರು ಬೆನ್ನು ಕೊಟ್ಟು ಸೂರ್ಯ ಮತ್ತು ಚಂದ್ರನಿಗೆ ಮುಖಮಾಡಿ ಹಾಡುತಿದ್ದರು. ಕೆಲವು ವರ್ಷಗಳ ಹಿಂದೆ ಇವರಿಬ್ಬರು ತೀರಿ ಹೋದರು. ಇವರಿಬ್ಬರನ್ನು ಬಿಟ್ಟರೆ ಈ ಜನಾಂಗದ ಬೇರೆ ಯಾರಿಗೂ ಈ ಹಾಡುಗಳು ಬರುತ್ತಿರಲಿಲ್ಲ ಕಡುಬಡತನ ಹಸಿವು ಮತ್ತು ಕುಡಿತಕ್ಕೆ ಬಲಿಯಾದ ಇವರಿಬ್ಬರು ತಮ್ಮ ಜನಾಂಗದ ಹಾಡಿನ ಭಂಡಾರವನ್ನೇ ತಮ್ಮೊಂದಿಗೆ ಕರೆದುಕೊಂಡು ಹೋದರು. ಇದು ಮುತ್ತಿಯೊಬ್ಬಳ ಕಥೆಯಲ್ಲ. ಕೊಡಗಿನ ಕೊಡವ, ಅರೆಭಾಷೆ, ಪಣಿ ಎರವ, ಪಂಜರಿ ಎರವ, ಪಣಿಯ, ಜೇನುಕುರುಬ, ಕುಡಿಯ ಜನಾಂಗಗಳ ಇಂತಹ ಹಾಡುಗಳು ತೀರಿ ಹೋಗುತ್ತಿರುವ ಹಿರಿಯರ ಜೊತೆಯಲ್ಲೇ ಮರೆಯಾಗುತ್ತಿವೆ.
ಒಂದು ವೇಳೆ ಕೊಡಗಿನ ಭಾಷಾ ಅಕಾಡೆಮಿಗಳು, ಸಾಹಿತ್ಯ ಪರಿಷತ್ತು, ಮಾಧ್ಯಮಗಳು ಮತ್ತು ಶಿಕ್ಷಣ ಇಲಾಖೆ ಆಧುನಿಕ ಅಕ್ಷರ ಸಾಹಿತ್ಯವನ್ನು ಕೇಂದ್ರೀಕರಿಸುವ ಜೊತೆಯಲ್ಲೇ ಕಾಡಿನ ಮಕ್ಕಳ ಈ ಸಾಹಿತ್ಯ ಸಿರಿಯನ್ನು ಗೌರವಿಸುವ ಕೆಲಸ ಮಾಡಿದ್ದರ ಬೆಟ್ಟಕುರುಬರ ಮುತ್ತಿಯಂತಹ ಕೊಡಗಿನ ನೂರಾರು ತಾಯಂದಿರ ಹಾಡುಗಳು ಈಗ ನಮ್ಮ ಬಳಿ ಇರುತ್ತಿದ್ದವು. ಸುಂಟಿಕೊಪ್ಪದಲ್ಲಿ ಲಿಗೋರಿ ಎಂಬ ಜಾನಪದ ಕಥೆಗಾರರಿದ್ದರು. ಖಾಸಗಿ ಕ್ಲಿನಿಕ್ ಒಂದರಲ್ಲಿ ಇವರು ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಬಹಳ ಮನೋಹರವಾದ ಜಾನಪದ ಕಥೆಗಳು ಇವರ ತಲೆಯೊಳಗಿದ್ದವು. ಕೆಲವು ಕಥೆಗಳನ್ನು ನಾನು ಕೇಳಿ ಬರೆದಿಟ್ಟುಕೊಂಡಿದ್ದೆ. ಆಮೇಲೆ ಮರೆತೇ ಬಿಟ್ಟಿದ್ದೆ. ನಾನು ಹುಟ್ಟಿ ಬೆಳೆದ ಇಲ್ಲೇ ಪಕ್ಕದ ಕಾಫೀ ತೋಟದ ಲೈನುಮನೆಯಲ್ಲಿ ಬದುಕಿದ್ದ ಪಾತಿಂಞ, ಆಮಿತಾತ, ಮರೀಂಞ, ದನ ಮೇಯಿಸುತ್ತಿದ್ದ ಮುದಾರ, ಸಣ್ಣ ಇವರೆಲ್ಲರೂ ದೊಡ್ಡ ದೊಡ್ಡ ಕಥೆಗಾರರಾಗಿದ್ದರು. ಇವರೆಲ್ಲರು ಹೇಳಿದ ಕಥೆಗಳು ಅವರ ನಿಟ್ಟುಸಿರಿನಂತೆ ನನಗೆ ಕೇಳಿಸುತ್ತಿದ್ದವು. ಇವರು ಹೇಳುತ್ತಿದ್ದ ಕಥೆಗಳಿಂದ ನಾನು ಕಥೆಗಾರನಾದೆ. ಇವತ್ತು ಇಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಬಿರುಬಿಸಿಲ ಹೊತ್ತು ಅವರು ಯಾರೂ ಇಲ್ಲಿ ಇಲ್ಲ. ಆದರೆ ಅವರ ಹಾಗಿರುವ ಹಲವು ಹಾಡುಗಾರರೂ ಇಲ್ಲೇ ಅಕ್ಕಪಕ್ಕ ತೋಟದಲ್ಲಿ ಕೆಲಸ ಮಾಡುತ್ತಿರಬಹುದು. ಅಥವಾ ಅವರ ಜಾಗವನ್ನು ಅಸ್ಸಾಮಿನಿಂದ ಬಂಗಾಳದಿಂದ ಬಂದ ಕೆಲಸಗಾರರು ವಹಿಸಿಕೊಂಡಿರಬಹುದು. ಅವರಲ್ಲೂ ಇಂತಹ ಕಥೆಗಾರರಿರಬಹುದು. ಸುಮಾರು ಐವತ್ತು ವರ್ಷಗಳ ಹಿಂದೆ ಅಸ್ಸಾಮಿನಿಂದ ಜೇನುಪೆಟ್ಟಿಗೆಗಳನ್ನು ಇಡಲು ದಾಸ್ ಎಂಬ ಯುವಕ ಬಂದಿದ್ದ. ಅವನೂ ಆಗ ಬಾಲಕನಾಗಿದ್ದ ನನಗೆ ಕಥೆಗಳನ್ನು ಹೇಳುತ್ತಿದ್ದ. ಈಗ ಬಹುಶಃ ಆತ ಎಲ್ಲಿರಬಹುದೋ ಗೊತ್ತಿಲ್ಲ. ಆದರೆ ಆತ ನನ್ನ ಕಥಾ ಪಾತ್ರವಾದ. ಹಾಗೆ ನೋಡಿದರೆ ನಾವೆಲ್ಲರೂ ಯಾವಯಾವುದೋ ಕಡೆಯಿಂದ ಹೊಟ್ಟೆಪಾಡಿಗೆ ಬೇಕಾಗಿ ಕೊಡಗಿನ ಕಾಡು ಹೊಕ್ಕ ತಲೆಮಾರೊಂದರ ವಾರಸುದಾರರು. ನಾವೆಲ್ಲರೂ ಸುಮಾರು 900 ಲಕ್ಷ ವರ್ಷಗಳ ಹಿಂದೆ ನಮ್ಮಿಂದ ಬೇರ್ಪಟ್ಟು ಆಗ್ನೇಯ ಆಫ್ರಿಕಾ ಜೊತೆ ಅಂಟಿಕೊಂಡ ಭೂಖಂಡವೊಂದರ ಉಳಿದ ತುಂಡಿನಲ್ಲಿ ವಾಸಿಸುತ್ತಿದ್ದೇವೆ. ಭೂಖಂಡದ ಶತ ಮಿಲಿಯನ್ ಇತಿಹಾಸದಲ್ಲಿ ಮನುಷ್ಯ ಕುಲದ ಇದುವರೆಗಿನ ಆಯಸ್ಸು ಬಹಳ ಅಲ್ಪ. ಅದರಲ್ಲೂ ನಾವು ಬದುಕುವುದು ಈ ಬೃಹತ್ ಇತಿಹಾಸಕ್ಕೆ ಹೋಲಿಸಿದರೆ ಕೆಲವು ಮಿಲಿ ಸೆಕೆಂಡ್‌ಗಳು ಮಾತ್ರ. ಸಾಹುಕಾರರಾದರೂ ರೈಟರುಗಳಾದರೂ ಸಾಹಿತಿಗಳಾದರೂ ಮಂತ್ರಿಯಾದರೂ ಇಷ್ಟೇ. ಆದರೂ ಈ ಸಣ್ಣ ಮಿಲಿ ಸೆಕೆಂಡಿನಲ್ಲಿ ನಾವು ಜಾತಿಯ ಹೆಸರಿನಲ್ಲಿ ಭಾಷೆಯ ಹೆಸರಿನಲ್ಲಿ ಬಡವ ಶ್ರೀಮಂತ ಸಾಹುಕಾರರು ಕೂಲಿಯಾಳುಗಳು ಎಂಬ ಹೆಸರಿನಲ್ಲಿ ಇನ್ನೊಬ್ಬರನ್ನು ಹೊಸಕಿ ಹಾಕಲು ನೋಡುತ್ತೇವೆ. ಇನ್ನೊಬ್ಬರ ನಾಗರಿಕತೆಯನ್ನೇ ಹೊಸಕಿ ಬಿಡುತ್ತೇವೆ ಎಂದು ಹೂಂಕರಿಸುತ್ತೇವೆ. ಆದರೆ ಸಾಹಿತ್ಯದ ಕೆಲಸ ಹೊಸಕುವುದಲ್ಲ. ಅರಳಿಸುವುದು. ತೃಣದಲ್ಲೂ ಗಹನವಾದುದನ್ನು ಕಾಣುವುದು. ಮತ್ತು ಅದನ್ನು ಉಳಿದವರಿಗೆ ಕಾಣಿಸುವುದು. ಸಾಹಿತ್ಯ ಸಮ್ಮೇಳನದ ಉದ್ದೇಶವೂ ಅಷ್ಟೇ.
“ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ
ಯಾವುದೂ ಯ:ಕಶ್ಚಿತವಲ್ಲ!
ಇಲ್ಲಿ
ಯಾವುದಕ್ಕೂ ಮೊದಲಿಲ್ಲ
ಯಾವುದಕ್ಕೂ ತುದಿಯಿಲ್ಲ
ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ
ಕೊನೆ ಮುಟ್ಟುವುದು ಇಲ್ಲ
ಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ!
ಇಲ್ಲಿ ಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲವೂ ತೀರ್ಥ!”
ಹೀಗೆ ಬರೆದವರು ಕುವೆಂಪು. ಅವರು ಬರೆದ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಮೊದಲಿಗೆ ಬರುವ ಸಾಲುಗಳು ಇವು. ಆ ಕಾದಂಬರಿಯನ್ನು ನಾನು ಹತ್ತಾರು ಬಾರಿ ಓದಿದ್ದೆ. ಕೊಡಗಿನ ಕೊಯನಾಡಿನ ಸರಕಾರೀ ಶಾಲೆಯಲ್ಲಿ ಈ ಕಾದಂಬರಿ ನನಗೆ ಸಿಕ್ಕಿತ್ತು. ಅಲ್ಲಿ ಬರುವ ಐತ, ಪೀಂಚ್ಲು ನಾಯಿ ಗುತ್ತಿ ತಿಮ್ಮಿ ಇವರೆಲ್ಲರೂ ಈಗಲೂ ನನಗೆ ಮಹಾ ಮನುಷ್ಯರು. ಜೊತೆಗೆ ಗುತ್ತಿಯ ನಾಯಿ ಹುಲಿಯ ಕೂಡಾ ಈಗಲೂ ನನಗೆ ಬಹಳ ದೊಡ್ಡ ಟೈಗರು.
ಈ ಮಹಾ ಕಾದಂಬರಿ ಕೊಯನಾಡು ಎಂಬ ಕೊಡಗಿನ ಮೂಲೆಯ ಸಣ್ಣದೊಂದು ಶಾಲೆಯ ಕಪಾಟಿನಲ್ಲಿ ಓದಲು ಸಿಗದಿದ್ದರೆ ನನಗೆ ಓದಿನ ರುಚಿಯೇ ಹತ್ತುತ್ತಿರಲಿಲ್ಲವೇನೋ. ಹಾಗೆ ಹತ್ತಲು ಕಾರಣವಾದವರು ಅಲ್ಲಿನ ಯಾರೋ ಒಬ್ಬರು ಅನಾಮಿಕ ಮೇಷ್ಟರು. ನನ್ನಿಂದ ಕವಿತೆ ಬರೆಸಿದವರು ಸಂಪಾಜೆ ಶಾಲೆಯ ಟಿ ಕೆ ಗೋಪಾಲಕೃಷ್ಣ ಮೇಷ್ಟ್ರು. ಬರೆಯಲು ಶುರು ಮಾಡಿದ್ದ ನನ್ನನ್ನು ತಿದ್ದಿ ತೀಡಿ ಒಳ್ಳೆಯ ಪುಸ್ತಕಗಳನ್ನು ಓದಿಸಿ ಸಾಹಿತ್ಯ ಕ್ಲಾಸಿನಲ್ಲಿ ಕೂರಿಸಿ ಬರೆಸಿ ಆಶೀರ್ವದಿಸಿದವರು ಮಾದಾಪುರ ಡಿ ಚೆನ್ನಮ್ಮ ಶಾಲೆಯ ಯು. ಎಸ್ ಶ್ರೀಧರ ಆರಾಧ್ಯ ಮೇಷ್ಟರು. ಈ ವಿವರಗಳನ್ನು ನಾನು ಹೇಳುತ್ತಿರುವುದು ನನ್ನ ಆತ್ಮ ಚರಿತ್ರೆಯನ್ನು ನಿಮ್ಮ ಮುಂದೆ ಬಿಚ್ಚಿಡಲು ಅಲ್ಲ. ಬದಲಿಗೆ ಸರಕಾರದ ಶಿಕ್ಷಣ ನೀತಿಯಲ್ಲಿ ಶಾಲಾ ಗ್ರಂಥಾಲಯಗಳು ಎಷ್ಟು ದೊಡ್ಡ ಪಾತ್ರ ವಹಿಸಬೇಕು ಎಂಬುದು. ಪುಸ್ತಕಗಳನ್ನು ಕಪಾಟಿನಲ್ಲಿ ಭದ್ರವಾಗಿ ಬಚ್ಚಿಡಲು ನೋಡುವುದಕ್ಕಿಂತ ಪುಸ್ತಕ ಕಳವಾದರೂ ಸರಿಯೇ ಮಕ್ಕಳ ತಲೆಯೊಳಗೆ ಒಳ್ಳೆಯ ಓದಿನ ಭೂತ ಹೊಕ್ಕುಬಿಡಲಿ ಎಂಬ ದೂರಾಲೋಚನೆ ಇರಬೇಕು. ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ಕೊಡುವುದರ ಜೊತೆಗೆ ಒಳ್ಳೆಯ ಸಾಹಿತ್ಯ ಕೃತಿಗಳನ್ನು ನೀಡುವಂತಾಗಬೇಕು. ಶಾಲೆಯಲ್ಲಿ ಅದ್ಯಾಪಕರಿಗೆ ಮಕ್ಕಳನ್ನು ಓದಿಸುವುದರ ಜೊತೆಯಲ್ಲೇ ಮಕ್ಕಳಿಂದ ಕನ್ನಡದಲ್ಲಿ ಬರೆಸುವ ಕೆಲಸವನ್ನೂ ಯಾಕೆ ಒದಗಿಸಬಾರದು? ಎಲ್ಲ ಶಾಲೆಗಳಲ್ಲೂ ಎಲ್ಲ ಕಾಲದಲ್ಲೂ ಎಲ್ಲ ಮಕ್ಕಳಿಗೂ ಯಾಕೆ ನನಗೆ ಸಿಕ್ಕಿದ ಮೇಷ್ಟರುಗಳು ಸಿಗಬಾರದು? ಸಮೀಕ್ಷೆ, ಸರ್ವೆ, ಜನಗಣತಿ ಡಾಟಾ ಫಾರಂಗಳನ್ನು ತುಂಬಿಸುವಷ್ಟೇ ದೊಡ್ಡ ಕೆಲಸ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಓದುವ ಅಭಿರುಚಿ ಬೆಳೆಸುವುದು. ಒಳ್ಳೆಯ ಓದಿನ ರುಚಿ ಹತ್ತಿಸಿಕೊಂಡ ಮಕ್ಕಳು ಬೆಳೆದಾಗ ಒಳ್ಳೆಯ ಮನುಷ್ಯರಾಗುತ್ತಾರೆ. ಬೇರೆ ಏನನ್ನೂ ಓದದೇ ಬರೆಯ ಪಠ್ಯ ಗೈಡ್ ಟ್ಯೂಷನ್ ಗಳಲ್ಲಿ ಮುಳುಗಿದ ಮಕ್ಕಳು ಸಂಕುಚಿತರಾಗಿರುತ್ತಾರೆ. ಇಂತಹ ಮಕ್ಕಳನ್ನು ಮತಾಂಧರೂ ಕೋಮುವಾದಿಗಳೂ ಜೆಹಾದಿಷ್ಟರೂ ಭಾಷಾಂಧರೂ ಯಾಮಾರಿಸಿ, ಅವರ ಮಿದುಳನ್ನು ಅಪಹರಿಸಿ ಮನುಷ್ಯ ಧ್ವೇಷಿಗಳನ್ನಾಗಿ ಮಾಡುತ್ತಾರೆ. ಕೋಮುವಾದದ ವಿರುದ್ಧ, ಮತಾಂದತೆಯ ವಿರುದ್ಧ, ರಾಷ್ಟ್ರದ್ರೋಹಿಗಳ ವಿರುದ್ಧ, ಮಾದಕವ್ಯಸನದ ವಿರುದ್ಧ ಜೆಹಾದಿಷ್ಟರ ವಿರುದ್ಧದ ಕಾರ್ಯಾಚರಣೆಗೆ ಬಳಸುವ ಕೋಟ್ಯಾಂತರ ಬಜೆಟ್ಟಿನ ಒಂದು ಸಣ್ಣ ಮೊತ್ತವನ್ನು ಸರಕಾರೀ ಶಾಲೆಗಳಲ್ಲಿ ಓದುವ ಬರೆಯುವ ಚಟುವಟಿಕೆಗಳಿಗೆ ಬಳಸಿದರೆ ಎಷ್ಟೊಂದು ಪರಿಣಾಮಕಾರಿ ಮತ್ತು ಎಷ್ಟೊಂದು ಪ್ರಭಾವಶಾಲಿ ಮತ್ತು ಎಷ್ಟೊಂದು ಮನೋಹರವಾಗಿರುತ್ತದೆ.
ಕೊಡಗನ್ನು ಕರ್ನಾಟಕದ ಕಾಶ್ಮೀರ ಎಂದು ಹೇಳುತ್ತಾರೆ. ಆದರೆ ಈ ಹೋಲಿಕೆ ನನಗೆ ಯಾಕೋ ಸರಿ ಬರುವುದಿಲ್ಲ. ಕಾಶ್ಮೀರದ ಕಷ್ಟಕಾರ್ಪಣ್ಯಗಳ ಅರಿವು ಇರುವವರು ಮತ್ತು ಕೊಡಗಿನ ಚೆಲುವನ್ನು ಚೆನ್ನಾಗಿ ಬಲ್ಲವರು ಯಾರೂ ಈ ಹೋಲಿಕೆ ಸರಿಯಲ್ಲ ಎಂದೇ ಹೇಳುತ್ತಾರೆ. ಆದರೆ ಈ ಹಿಂದೆ ಹಲವು ದಾಳಿಗಳನ್ನು ಎದುರಿಸಿದ ಕೊಡಗು ಇದೀಗ ವಿಲಾಸೀ ಪ್ರವಾಸಿಗರ ಅಸಹ್ಯ ದಾಳಿಯನ್ನು ಎದುರಿಸಲಾಗದೆ ತತ್ತರಿಸುತ್ತಿದೆ. ಈ ನೆಲದ ಮಣ್ಣು, ಈ ನೆಲದ ಗಾಳಿ, ಇಲ್ಲಿರುವ ಗುಡಿಗಳು ಭಗವತಿ, ಈಶ್ವರ, ಅಯ್ಯಪ್ಪ, ಕೊರತಿ ಚಾಮುಂಡಿ ದೇವರ ಕಲ್ಲುಗಳು, ದೇವರ ಕಾಡುಗಳು ಈ ಯಾವುದರ ಅರಿವೂ ಇಲ್ಲದ ಪ್ರವಾಸೀ ವಿಲಾಸಿಗಳ ತಂಡ ಕೊಡಗಿನ ಮೌನ ಹಸಿರು ಮತ್ತು ಘನತೆಗಳಿಗೆ ಕ್ಯಾರೇ ಅನ್ನದೆ ದಾಂಧಲೆ ಎಬ್ಬಿಸುತ್ತಿದೆ. ಪ್ರವಾಸೋದ್ಯಮ ಮತ್ತು ಆದಾಯದ ನೆಪದಲ್ಲಿ ಕೊಡಗಿನ ನೆಮ್ಮದಿ ಹಾಳಾಗುತ್ತಿದೆ. ರೆಸಾರ್ಟುಗಳು, ರಿಯಲ್ ಎಸ್ಟೇಟ್ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ. ಪ್ರವಾಸೋದ್ಯಮದ ಈ ಅನಾಹುತಕಾರಿ ಉಪ ಉತ್ಪನ್ನಗಳು ಇಲ್ಲಿನ ನಂಬಿಕೆ ಹಾಡು ಸಂಪ್ರದಾಯಗಳನ್ನು ನಗಣ್ಯ ಮಾಡುತ್ತಿವೆ. ವಿಲಾಸೀ ಪ್ರವಾಸಿಗಳ ನಿಯಂತ್ರಣಕ್ಕೆ ಸರಕಾರ ನೀತಿ ರೂಪಿಸಬೇಕಾಗಿದೆ.
ಕೊಡಗಿನಲ್ಲಿ ಬದುಕಿ ಬರೆದ ಕನ್ನಡದ ಒಳ್ಳೆಯ ಲೇಖಕರ ದೊಡ್ಡ ಪಟ್ಟಿಯೇ ಇದೆ. ಶ್ರೀಯುತ ಪಂಜೆ ಮಂಗೇಶರಾಯರು ಕೊಡಗಿನಲ್ಲಿ ಶಾಲಾ ಇನ್ಸ್‌ಪೆಕ್ಟರ್ ಆಗಿದ್ದರು. ಕೊಡಗಿನ ಗೌರಮ್ಮನವರು ಇಲ್ಲೇ ಹರದೂರಿನ ಗುಂಡುಕುಟ್ಟಿ ತೋಟದ ಮ್ಯಾನೇಜರರ ಮಡದಿಯಾಗಿದ್ದರು. ಭಾರತೀಸುತರು ಮಡಿಕೇರಿಯಲ್ಲಿ ಪ್ರೌಡಶಾಲಾ ಮೇಷ್ಟರಾಗಿದ್ದರು. ಜಿ.ಟಿ.ನಾರಾಯಣರಾಯರು ಗಣಿತದ ಮೇಷ್ಟರಾಗಿದ್ದರು. ಶ್ರೀಯುತರಾದ ಕಾಕೆಮಾನಿ, ಬಿ ಡಿ ಗಣಪತಿ, ಐ ಮಾ ಮುತ್ತಣ್ಣ ಕನ್ನಡದಲ್ಲಿ ಬಹಳಷ್ಟು ಬರೆದರು. ಶಿವರಾಮ ಕಾರಂತರು ಗುಂಡುಗುಟ್ಟಿಯ ಮಂಜುನಾಥಯ್ಯನವರ ತೋಟದ ಮನೆಗೆ ಬಂದು ಬರೆಯುತ್ತಿದ್ದರು. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬೇಂದ್ರೆಯವರು ಕೊಡಗಿಗೆ ಬಂದು ಹೋಗುತ್ತಿದ್ದರು. ಕುವೆಂಪು ಅವರ ಕವಿತೆಯ ಪೂವಮ್ಮ ಕೊಡಗಿನವರು. ಕೊಡಗಿನ ಈ ಎಲ್ಲ ಘಟಾನುಘಟಿಗಳ ಪುಸ್ತಕಗಳ ಮರು ಮುದ್ರಣ, ಅವರ ಬದುಕು ಬರಹಗಳ ಕುರಿತಾದ ಒಂದು ಮ್ಯೂಸಿಯಂ. ಕೊಡಗಿನ ಆದಿವಾಸಿಗಳ ಸಂಗೀತದ ಒಂದು ಆಡಿಯೋ ಲೈಬ್ರೆರಿ, ಜಾಲತಾಣಗಳು, ಸಾಮಾಜಿಕ ಮಾಧ್ಯಮಗಳ ಡಿಜಿಟಲ್ ಚಾನೆಲ್ಲುಗಳು ಇವೆಲ್ಲವೂ ಇದ್ದರೆ ಎಷ್ಟು ಚೆನ್ನಾಗಿರುತ್ತದೆ.
ಮತ್ತು ಈವತ್ತಿನ ನನ್ನ ಈ ಅಧ್ಯಕ್ಷೀಯ ಭಾಷಣ ಈ ಎಲ್ಲ ಅಂಶಗಳಲ್ಲಿ ಕೆಲವೊಂದರ ಕುರಿತಾಗಿಯಾದರೂ ನಿಮ್ಮಲ್ಲಿ ಯೋಚನೆಗಳನ್ನು ಹುಟ್ಟುಹಾಕಿದರೆ ಎಷ್ಟು ಚೆನ್ನಾಗಿರುತ್ತದೆ!
ಕೊಡಗಿನ ಕಾವೇರಿ ಮಾತೆಗೆ ನಮನ. ಇಗ್ಗುತಪ್ಪ ದೇವರಿಗೆ ನಮನ. ಮಲೆತಂಬ್ರ್ ದೈವಕ್ಕೆ ನಮನ. ಪನ್ನಂಗಾಲತಮ್ಮೆಗೆ, ಮಾದೂರಪ್ಪ ದೇವರಿಗೆ, ಮಲೆತಮ್ಮಚ್ಚ ದೇವರು ಭಗವತಿ ಈಶ್ವರ ದೈವಗಳಿಗೆ ನಮನ. ಕುಟ್ಟದ ಮಾಂಕಾಳಿ, ಜೇನುಕುರುಬರ ಅಮ್ಮಾಲೆ ದೇವರು, ಪಂಜರಿ ಎರವರ ಅಚ್ಚೆರ ದೈವ. ಪಣಿ ಎರವರ ಮುತ್ತಚ್ಚಿ ದೇವತೆ. ಬೆಟ್ಟಕುರುಬರ ಭದ್ರಕಾಳಿ ಎಲ್ಲರಿಗೂ ನಮನ. ಇವರೆಲ್ಲರೂ ಕೊಡಗಿನ ಆದಿವಾಸಿಗಳ ದೈವಗಳು.
ಇವರ ಜೊತೆಗೆ ಪ್ರಪಂಚದ ಎಲ್ಲ ಧರ್ಮಗಳ, ಎಲ್ಲ ಜಾತಿಗಳ ಎಲ್ಲ ದೇವರುಗಳಿಗೂ ನಮನ
ಅಬ್ದುಲ್ ರಶೀದ್
ಆದಿವಾಸಿ ತೋಟ
ಬನ್ನಿಕುಪ್ಪೆ ಅಂಚೆ
ಹುಣಸೂರು 571105
ದೂರವಾಣಿ : 9980766933

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
