ಜಿಜ್ಞಾಸುವಿನ ಸ್ವಗತ
ಈ ನಟ್ಟಿರುಳಿನಲ್ಲಿ
ಏನನ್ನು ಬರೆಯಲಿ?
ಸರಿದ ಮುಂಜಾವಿನ ತಂಪು
ನಡುಮಧ್ಯಾಹ್ನದ ತಾಪ
ಮುಸ್ಸಂಜೆಯ
ಮತ್ತದೇ ತಂಪು, ಕೆಂಪು?
ಈ ನಡುವಯಸ್ಸಿನಲ್ಲಿ
ಬರೆಯಲಿ ಏನನ್ನು?
ಎಳೆಹೆಜ್ಜೆಗಳಿಗೆ
ಮೆತ್ತಿಕೊಂಡ
ನನ್ನೂರ ಎರೆಮಣ್ಣು,
ಹದಿವಯಸು
ಕಚ್ಚಿ ತಿಂದ ಹುಳಿಮಾವು,
ಈಗ ಈಗಷ್ಟೇ
ಮಲಗುವ ಮುನ್ನ
ದಿಂಬಿನ ಪಕ್ಕವಿರಿಸಿದ
ಓದುಗಾಜು?
ಏನನ್ನು ದಾಖಲಿಸಲಿ
ಅಳಿಸಿ ಹೋಗುವ ಈ ಬದುಕಿನಲ್ಲಿ?
ಅರ್ಧ ಕರಗಿ
ಉಳಿದರ್ಧ ಉಳಿದ ಶಾಯಿಯಲ್ಲಿ,
ಅರ್ಧಕ್ಕರ್ಧ ಸವೆದು ಹೋದ
ಲೇಖನಿಯ ಮೊನೆಯಲ್ಲಿ
ಬರೆಯಲಿ ಯಾವ ಪುರುಷಾರ್ಥಕೆ?
ಹೇಳಿ ಏನನ್ನು ಬರೆಯಲಿ?
ಹಿಂದೆ ಗವ್ವೆನ್ನುವ ಕತ್ತಲು
ಮುಂದೆ ಮಾಸಲು ಮಾಸಲು ಮಂಜು
ನಡುಹಗಲಿನ
ಈ ಮಾಯದ ಬಿಂದುವಿನಲ್ಲಿ
ದ್ವಂದ್ವ, ಜಿಜ್ಞಾಸೆ
ಅತೃಪ್ತಿ, ಅಸಹನೆ
ತವಕ, ತಪನೆ
ಬರೆಯಲಿ ಏನನ್ನು
ಈ ಅಂತಂತ್ರ ಸಂದಿಗ್ಧದಲ್ಲಿ?
ಅರ್ಧ ಉರಿದ ಅರ್ಧ ಉಳಿದ
ಯಃಕಶ್ಚಿತ್
ಹೃದಯವ ನೆಚ್ಚಿಕೊಂಡು?
ಹೃದಯ ಶಿವ ಖ್ಯಾತ ಚಿತ್ರ ಸಾಹಿತಿ
ಹಲವು ಕನ್ನಡ ಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ
ಮೂಕ ಮೈಲಿಗಲ್ಲು, ಚರಕದ ಮುದುಕ, ಇವನು ಗೆಳೆಯನಲ್ಲ, ಹರಿವ ತೊರೆ, ಚಂದಿರನ ದೋಣಿ, ಕ್ಲ್ಯಾಪ್ ಬೋರ್ಡ್, ಜರಿಲಂಗದ ಹುಡುಗಿ, ಅನಾಥ ಚಿಹ್ನೆ, ಸೂಪರ್ ಗಾಡ್ ಸಣ್ಣಯ್ಯ ಮತ್ತು ‘ಅಲ್ಲಿಂದಿಲ್ಲಿಗೆ’ ಇವರ ಪ್ರಕಟಿತ ಕೃತಿಗಳು

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

