ಅಶೋಕನೂ ಗೆಳೆಯನ ಮಾತಿಗೆ ದನಿಗೂಡಿಸುತ್ತಾ, “ಹೌದು ಸಮುದ್ರ. ಅಪ್ಪ ಹೇಳಿದ ಹಾಗೆ, ಈ ಹಾವುಗಳ ತಯಾರಿ ಮರ ಹತ್ತೋದ್ರಿಂದ ಶುರು ಆಗತ್ತೆ. ಆವು ಯಾವುದೇ ರೆಕ್ಕೆ ಇಲ್ದೇ ಹಾರ್ಬೇಕು ಅಂದ್ರೆ ಖಂಡಿತಾ ಎತ್ತರವಾದ ಪ್ರದೇಶದಿಂದ ಮಾತ್ರ ಸಾಧ್ಯ ಅಲ್ವ. ಕೆಳಗಿಂದ ಮೇಲಕ್ಕೆ ಹಾರೋಕೆ ಬರಲ್ಲ ಇವಕ್ಕೆ. ಸೋ, ಒಂದು ಎತ್ತರದ ಮರ ಹತ್ತಿ, ಅಲ್ಲಿಂದ ತನ್ನ ಪಕ್ಕೆಲುಬುಗಳನ್ನ ಹರಡಿ, ಸಪಾಟು ಮಾಡಿ, ಒಳಗಿಂದ ಕಮಾನಿನ ಥರ ಹೊಟ್ಟೆಯನ್ನ ಒಳಗೆಳೆದುಕೊಂಡು, ತಮ್ಮನ್ನ ತಾವು ಗಾಳೀಲಿ ರಾಕೆಟ್ ಲಾಂಚ್ ಮಾಡೋ ಹಾಗೆ ಲಾಂಚ್ ಮಾಡಿಕೊಳ್ಳತ್ವೆ. ನೀರಿನ ಅಲೆಗಳಲ್ಲಿ ಸ್ವಿಮ್ ಮಾಡೋ ಹಾಗೇ, ಗಾಳಿಯಲ್ಲಿ ಅಲೆಅಲೆಯಾಗಿ ತೇಲಿ ಮುಂದೆ ಹೋಗತ್ವೆ. ತನ್ನ ಬಾಲದಿಂದ ಬ್ಯಾಲೆನ್ಸ್ ಮಾಡ್ತಾ, ಸುಂಯ್ ಅಂತ ತೇಲತ್ವೆ.” ಎಂದು ವಿವರಿಸಿದ.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಇಪ್ಪತ್ಮೂರನೆಯ ಕತೆ
ನಮ್ಮ ಭೂಮಿಗೆ ಈಗ 454 ಕೋಟಿ ವರ್ಷ ವಯಸ್ಸು. ಸಾವಿರಾರು ಕೋಟಿ ಸೂರ್ಯೋದಯ ಸೂರ್ಯಾಸ್ತಗಳನ್ನು ನೋಡಿರುವ ಈ ಭೂಮಿಯ ಮೇಲೆ, ಸೂರ್ಯೋದಯ ಸೂರ್ಯಾಸ್ತಗಳ ನಡುವೆ ಸಮಯ ಕಳೆಯುವುದೇ ತಿಳಿಯುವುದಿಲ್ಲ ಎನ್ನುತ್ತಾರೆ ಸದಾ ವ್ಯಸ್ತರಾಗಿರುವ ಜನ.
ಅಂದು ಸಂಜೆಯ ಸೂರ್ಯಾಸ್ತ ಕೂಡ ತುಂಬಾ ಆಹ್ಲಾದಕರವಾಗಿತ್ತು. ಕಾವ್ಯ ತನ್ನ ತಂಗಿಯರೊಂದಿಗೆ ಬೆಂಗಳೂರಿಗೆ ತೆರಳಿದ್ದು ಕಳೆದ ಸಂಚಿಕೆಯಲ್ಲಿ ಓದಿದ್ದೀರಿ. ಊರಿನಲ್ಲಿ ಉಳಿದ ಸಮುದ್ರ ಮತ್ತು ಪ್ರಕಾಶ್, ತಮ್ಮ ಶಾಲೆ ಮತ್ತು ಆಫೀಸ್ ಕೆಲಸದಲ್ಲಿ ವ್ಯಸ್ತರಾಗಿದ್ದು, ಸಂಜೆಯ ಸೂರ್ಯಾಸ್ತದ ಸಮಯಕ್ಕೆ ಕೆರೆ ದಂಡೆಯ ಮೇಲೆ ವಾಕ್ ಹೊರಟಿದ್ದರು. ಅಪ್ಪ ಮಗ ಇಬ್ಬರೇ ಜೊತೆಗಿದ್ದರೆ ಮಾತಾಡದ ವಿಷಯವೇ ಇಲ್ಲ. ಭೂಗೋಳದಿಂದ ಕೀಟಗಳವರೆಗೆ, ಭೌತವಿಜ್ಞಾನದಿಂದ ಬದುಕಿನ ಮೌಲ್ಯಗಳವರೆಗೆ ಮಾತು ಸಾಗುತ್ತಲೇ ಇರುತ್ತದೆ. ಹಾಗೇ ವಾಕ್ ಮಾಡುತ್ತಾ ಮಾತಾಡುತ್ತಾ ಇದ್ದಾಗ, ಪ್ರಕಾಶನ ಗೆಳೆಯ ಅಶೋಕ ಎದುರಾದ.
ಅಶೋಕ ಒಬ್ಬ ಉರಗತಜ್ಞ. ಜೀವವಿಜ್ಞಾನಿಯಾಗಿ ಸ್ಥಳೀಯ ಹಾವುಗಳ ಪ್ರಬೇಧಗಳ ಬಗ್ಗೆ ಅನೇಕ ಅಂತರರಾಷ್ಟ್ರೀಯ ‘ಜರ್ನಲ್’ಗಳಲ್ಲಿ ಅಶೋಕ್ ಬರೆದ ಸಂಶೋಧನಾ ಪ್ರಬಂಧಗಳು ಅಚ್ಚಾಗುತ್ತಲೇ ಇದ್ದವು. ಉಭಯ ಕುಶಲೋಪರಿಯ ನಂತರ, ಅಶೋಕ್ ಮಾಮಾಗೆ ಸಮುದ್ರ ನೆನ್ನೆಯಿಂದಾ ತನ್ನನ್ನು ಕಾಡುತ್ತಿದ್ದ ಪ್ರಶ್ನೆಯನ್ನು ಕೇಳಿದ. “ಅಶೋಕ್ ಮಾಮಾ, ನೆನ್ನೆ ನಾವೆಲ್ಲಾ ಮನೇಲಿ ಹಾರೋ ಹಾವುಗಳ ಬಗ್ಗೆ ಮಾತು ಶುರು ಮಾಡಿದ್ವಿ. ಹಾರೋ ಓತಿ, ಹಾರೋ ಅಳಿಲಿನ ಬಗ್ಗೆ ಮಾತಾಡಿದ್ವೇ ಹೊರತು, ಹಾರೋ ಹಾವುಗಳ ಬಗ್ಗೆ ಅಪ್ಪ ಹೇಳ್ಲೇ ಇಲ್ಲ ಇನ್ನೂ. ಅಷ್ಟ್ರಲ್ಲಿ ನೀವು ಸಿಕ್ಕಿದ್ರಿ.” ಎಂದ. ಆಗ ಪ್ರಕಾಶ್, “ಒಳ್ಳೇದೇ ಆಯ್ತಲ್ಲೋ ಸಮುದ್ರಾ, ಹಾವುಗಳ Expert ಹತ್ರಾನೇ ಅವುಗಳ ಬಗ್ಗೆ ತಿಳ್ಕೊಳೋಣ ಬಾ” ಎಂದ ನಗುತ್ತಾ.
ಆಗ ಅಶೋಕ್ “ಹೌದಾ ಸಮುದ್ರಾ, ನೋ ಪ್ರಾಬ್ಲೆಮ್, ಕೇಳಪ್ಪ, ನಂಗೇನ್ ಗೊತ್ತೋ ಹೇಳ್ತೀನಿ. ಏನ್ ಪ್ರಶ್ನೆ ನಿಂದು?” ಎಂದ, ಸಮುದ್ರನ ಹೆಗಲ ಮೇಲೆ ಕೈ ಹಾಕಿ ನಡೆಯುತ್ತಾ. ಆಗ ಸಮುದ್ರ, “ಅಲ್ಲ ಮಾಮಾ, ಅದ್ಯಾಕೆ ಕೆಲವು ಹಾವುಗಳಿಗೆ ಹಾರಬೇಕು ಅನ್ಸ್ತು?” ಎಂದ. ಆಗ ಅಶೋಕ್, “ಈ ಹಾರೋ ಹಾವುಗಳೂ ಕೂಡ ತೆವಳೋ ಹಾವುಗಳಿಂದ್ಲೇ ಬಂದಿರೋದು. ಅಂದ್ರೆ, ಇವುಗಳ ಪೂರ್ವಜರೂ ಸಾಮಾನ್ಯವಾಗಿ ತೆವಳುತಿದ್ವು. ಎತ್ತರೆತ್ತರದ ಮರಗಳ ಮೇಲೆ ತೆವಳ್ತಾ ಹತ್ತಿ ಹೋಗ್ತಾ ಇದ್ವು. ಅಲ್ಲಿ ಯಾವುದೋ ಬೇಟೆ ಮಾಡಲು ಬಂದ ಪ್ರಾಣಿ/ಪಕ್ಷಿಯಿಂದ ತಪ್ಪಿಸಿಕೊಳ್ಳೋಕೆ ಮತ್ತು ತನ್ನ ಎನರ್ಜಿ ಉಳಿಸಿಕೊಳ್ಳೋಕೆ ಅಚಾನಕ್ಕಾಗಿ ಹೊಸದಾಗಿ ಕಲಿತುಕೊಂಡದ್ದು ಈ ಹಾರೋದನ್ನ. ಮರದಿಂದ ಹಾರಿ ತಪ್ಪಿಸಿಕೊಂಡದ್ದು, ಬದುಕಲು ಮುಖ್ಯವಾಗಿ ಬೇಕಾದ ‘ಸ್ಕಿಲ್’ ಎಂದು ಅರ್ಥ ಆಗ್ತಾ, ‘ಜೀನ್’ಗಳ ಮೂಲಕ ಅದೇ ಮಾಹಿತಿ ಅದರ ಮುಂದಿನ ತಲೆಮಾರಿಗೂ ಹರೀತಾ ಹೋಯ್ತು. ಸಾವಿರಾರು ತಲೆಮಾರುಗಳ ನಂತರ ನಿಧಾನವಾಗಿ ಹೊಸ ಪ್ರಬೇಧವೇ ಸೃಷ್ಟಿಯಾಗಿ, ಹಾರೋಹಾವುಗಳು ನಮ್ಮ ನಡುವೆ ಹುಟ್ಟಿಕೊಂಡ್ವು.” ಎಂದ.
ಸಮುದ್ರ ಮತ್ತು ಪ್ರಕಾಶ್ ಆಸಕ್ತಿಯಿಂದ ಕೇಳ್ತಾ ಇರೋದನ್ನು ನೋಡಿ, ಅಶೋಕ್ ತನ್ನ ಮಾತನ್ನು ಮುಂದುವರೆಸಿದ. “ಎತ್ತರೆತ್ತರದ ಮರಗಳಿರೋ ಅಮೇಝಾನ್ ಕಾಡು, ನಮ್ಮ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಕಾಡು – ಇಂತಹ ದಟ್ಟ ಕಾಡುಗಳಲ್ಲಿ ಒಂದು ಮರವನ್ನ ಹತ್ತಿ, ಮೇಲೆ ಹೋಗಿ, ಅಲ್ಲಿನ ಬಾವಲಿಯನ್ನೋ, ಪಕ್ಷಿಯ ಮರಿಯನ್ನೋ ತಿಂದು, ಮತ್ತೆ ಕೆಳಗಿನವರೆಗೂ ಇಳಿದು ಬಂದು ಮತ್ತೆ ಮತ್ತೊಂದು ಮರ ಏರಿ ಹೋಗೋದು ಬಹಳ ಶ್ರಮ ಬೇಡೋ ಕೆಲ್ಸ ಅಲ್ವಾ ಸಮುದ್ರ? ಮತ್ತೆ Risky ಕೂಡ. ಹಾವಿಗೆ ಮರದ ಮೇಲೆ ಇರೋದಕ್ಕಿಂತಾ ಕೆಳಗೆ ಕಾಡಿನಲ್ಲಿ ಮತ್ತಷ್ಟು ಡೇಂಜರ್ ಇರತ್ತೆ. ಅದಕ್ಕೆ, ಅದು ಹಾರೋದನ್ನ ಕಲೀತು. ಒಂದು ಮರದ ಮೇಲಿಂದ ಮತ್ತೊಂದಕ್ಕೆ ಕ್ಷಣ ಮಾತ್ರದಲ್ಲೇ ಗಾಳೀಲಿ ತೇಲಿ ಹಾರೋದನ್ನ ನೋಡಿದ್ರೆ, ನನ್ನಂಥಾ ಹಾವುಪ್ರೇಮಿಗೂ ಮೊದಮೊದಲು ಆ ಸಡನ್ ಮೂವ್ಮೆಂಟ್ ನೋಡಿ ತಲೆ ಗಿರ್ ಅಂತಾ ಇತ್ತು!” ಎಂದು ನಕ್ಕ.
ಆಗ ಸಮುದ್ರ, “ಹಾಗಿದ್ರೆ, Obviously ನೀವು ನೋಡಿದೀರಾ ಅಲ್ವಾ ಹಾರೋಹಾವುಗಳನ್ನ! ನಮ್ಮಲ್ಲಿ ಯಾವ ಕಲರ್ ಇರತ್ತೆ ಇಂಥಾ ಹಾವುಗಳು? ಅವು ನಮಗೆ ಕಚ್ಚತ್ವಾ?” ಎಂದ. ಆಗ ಪ್ರಕಾಶ ಸಮುದ್ರನ ಕಡೆಗೆ ತಿರುಗಿ “ಬಂತಲ್ಲ ನಿನ್ನ ಮಾಮೂಲಿ ಪ್ರಶ್ನೆ!” ಎಂದು ನಗಾಡಿ, ನಂತರ ಅಶೋಕನ ಕಡೆ ತಿರುಗಿ, “ಸಮುದ್ರಂದೂ, ಮತ್ತೆ ನನ್ನ ತಮ್ಮಂದೂ, ಯಾವಾಗ್ಲೂ ಇದೇ ಪ್ರಶ್ನೆ ನೋಡು. ಯಾವುದೇ ಪ್ರಾಣಿ, ಪಕ್ಷಿ, ಹುಳ – ಯಾವುದರ ಬಗ್ಗೆ ಮಾತಾಡಿದ್ರೂ, ಈ ಪ್ರಶ್ನೆ ಕೇಳ್ದೇ ಆ ಮಾತುಕತೆ ಮುಗ್ಯೋದೇ ಇಲ್ಲ! ಅದು ಕಚ್ಚುತ್ತಾ ಅಂತಾನೇ ಕೇಳೋದು ಫಸ್ಟು” ಎಂದ.
ಆಗ ಅಶೋಕ ನಗಾಡ್ತಾ, “ಅದು valid ಪ್ರಶ್ನೆ ಅಲ್ವಾ ಪ್ರಕಾಶ! ಕಚ್ಚತ್ತೋ ಇಲ್ವೋ ತಿಳ್ಕೋಬೇಕು ತಾನೆ? ಅಲ್ವೇನೋ ಸಮುದ್ರ! ನಾನು ಹೇಳ್ತೀನ್ ಬಾ. ನಮ್ಮಲ್ಲಿ ಸಾಮಾನ್ಯವಾಗಿ ಕಂಡುಬರೋ ಹಾರೋ ಹಾವು ‘ಆರ್ನೇಟ್ ಫ್ಲೈಯಿಂಗ್ ಸ್ನೇಕ್’ (Ornate Flying snake). ಅಯ್ಯೋ ಎಷ್ಟು ಬ್ಯೂಟಿಫುಲ್ ಇರತ್ತೆ ಗೊತ್ತಾ? ಲ್ಯಾಟಿನ್ ಭಾಷೇಲಿ Ornate ಅಂದ್ರೆ ಅಲಂಕಾರಿಕ ಅಂತ ಅರ್ಥ. Ornaments ಪದ ಅಲ್ಲಿಂದ್ಲೇ ಬಂದದ್ದು. ಈ ನಮ್ಮ ಆರ್ನೇಟ್ ಹಾರೋ ಹಾವಿದ್ಯಲ್ಲ? ಸಿಕ್ಕಾಪಟ್ಟೆ Handsome ಹಾವಿದು. ಕಪ್ಪು, ತೆಳು ಹಳದಿ, ಆರೆಂಜ್ ಬಣ್ಣಗಳ ಒಳ್ಳೆ ಡಿಸೈನ್ ಇರತ್ತೆ ಇದರ ಮೇಲೆ. ಈ ಬ್ಯೂಟಿಫುಲ್ ಹಾವು ಖಂಡಿತಾ ಕಚ್ಚತ್ತೆ. ಪಾಪ ಸುಮ್ಸುಮ್ನೆ ಕಚ್ಚಲ್ಲ. ನಾವೇನಾದ್ರೂ ಅದಕ್ಕೆ ತೊಂದರೆ ಮಾಡಿದ್ರೆ ತಪ್ಪಿಸಿಕೊಳ್ಳಕ್ಕೆ ಕಚ್ಚತ್ತೆ. ಆದ್ರೆ ಅದೇನು ಭಾಳಾ ವಿಷ ಇರಲ್ಲ. Mildly venomous. ಸ್ವಲ್ಪ ಸಣ್ಣ ಅಲರ್ಜಿ ಆಗ್ಬಹುದು. ಸಣ್ಣದಾಗಿ ಏನೋ ಚುಚ್ಚಿದ ಹಾಗೆ ಕಚ್ಚತ್ತೆ. ಪ್ರಾಣಕ್ಕಂತೂ ಅಪಾಯ ಇರಲ್ಲ. ತನ್ನ ಸೆಲ್ಫ್ ಡಿಫೆನ್ಸಿನ ಭಾಗವಾಗಿ ಕಚ್ಚಿ ಹೆದರಿಸಿ ತಪ್ಪಿಸಿಕೊಳ್ಳತ್ತೆ. ಅದೂ ತುಂಬಾ ಅಪರೂಪಾನೇ.” ಎಂದು ವಿವರಿಸಿದ.
ಮಾತಾಡ್ತಾ ಸೂರ್ಯಾಸ್ತದ ಸಮಯ ದಾಟಿ ಕತ್ತಲಾವರಿಸ್ತಾ, ಕೆರೆ ದಂಡೆಯ ಕುಳಿರ್ಗಾಳಿ ಮೆಲ್ಲ ಹೆಚ್ಚುತ್ತಿತ್ತು. ಆಗ ಪ್ರಕಾಶ್, “ನಡೀ ಅಶೋಕ, ಮನೆಗೆ ಬಂದು ತುಂಬಾ ದಿನಾ ಆಯ್ತು. ಹಾಗೇ ಮಾತಾಡ್ತಾ ಮನೆಗೆ ಹೋಗೋಣ. ನಮ್ ಮನೇಲೇ ಊಟ ಮಾಡಿ ಹೊರಡು” ಎಂದ.
ಗೆಳೆಯನ ಮಾತಿಗೆ ಖುಷಿಯಿಂದಲೇ ಒಪ್ಪಿಕೊಳ್ಳುತ್ತಾ, ಅಶೋಕ್ “ಹೂಂ ಪ್ರಕಾಶ, ಮಾತಾಡಿ ತುಂಬಾ ದಿನಗಳೇ ಆಯ್ತು. ನಿಮ್ ಮನೆಗೂ ಬಂದಿಲ್ಲ ಎಷ್ಟೋ ತಿಂಗಳುಗಳೇ ಆಗೋಯ್ತು. ಹೊಸ ಪ್ರಾಜೆಕ್ಟ್ ಕೆಲ್ಸ ಜಾಸ್ತಿ ಇದೆ. ಇವತ್ತು ಕೆಲ್ಸ ಮಾಡಿ ಮಾಡಿ ಸಾಕಾಯ್ತು ಅಂತ ಬ್ರೇಕ್ ತೊಗೊಂಡು ವಾಕ್ ಬಂದೆ, ನೀವು ಸಿಕ್ಕಿದ್ರಿ. ನಡೀ, ಮಾತಾಡ್ತಾ ನಿಮ್ ಮನೇಗೇ ಹೋಗಣ.” ಎಂದು ಅಪ್ಪ-ಮಗನ ಜೊತೆಗೆ ತಾನೂ ಹೆಜ್ಜೆ ಹಾಕಿದ.

ನಡಿಗೆಯ ಜೊತೆಗೆ ಮಾತೂ ಮುಂದುವರೆಸುತ್ತಾ, “ಸಮುದ್ರ ಈ ಹಾವುಗಳು ಹೇಗೆ ಹಾರತ್ವೆ ಗೊತ್ತಾ?” ಎಂದ ಅಶೋಕ. ಆಗ ಸಮುದ್ರ, “ಹಾರೋ ಓತಿ ಅಥ್ವಾ ಹಾರೋ ಅಳಿಲಿನ ಹಾಗೆ ರೆಕ್ಕೆ ಥರಾ ಪದರ ಇರತ್ತಾ ಇದಕ್ಕೂ?” ಎಂದು ಪ್ರಶ್ನೆಗೊಂದು ಪ್ರಶ್ನೆ ಹಾಕಿದ. ಆಗ ಅಶೋಕ, “ಇಲ್ಲ ಕಣೋ, ಇಲ್ಲಿ ಅಂತಹ ವಿಶೇಷ ಪದರ, ರೆಕ್ಕೆ ಏನೂ ಇರೋದಿಲ್ಲ. ಈ ಹಾವುಗಳು ತಮ್ಮ ದೇಹವನ್ನ ಫ್ಲ್ಯಾಟ್ ಮಾಡಿಕೊಂಡು, ಮುಂದಕ್ಕೆ ಬಾಗಿ, ಸಡನ್ ಆಗಿ ಲಾಂಚ್ ಮಾಡಿಕೊಳ್ಳತ್ವೆ. ಹ್ಮ್….ಹೇಗೆ ಗೊತ್ತಾ? ಹ್ಮ್…ಈಗ… ನಾವು ಯೋಗಾ ಮಾಡ್ಬೇಕಾದ್ರೆ, ನಮ್ಮ ಕೈಗಳನ್ನ ಪಾದಕ್ಕೆ ಮುಟ್ಟಿಸಿ ಹಣೆಯನ್ನ ಮೊಣಕಾಲಿಗೆ ತಾಗಿಸಬೇಕಾದ್ರೆ ಏನ್ ಮಾಡ್ತೀವಿ?” ಎಂದ.
ಆಗ ಸಮುದ್ರ, “ಕೈಗಳನ್ನ ಮೇಲಕ್ಕೆ ಎತ್ತಿ stretch ಮಾಡ್ತೀವಿ ಅಲ್ವಾ? ಜೊತೆಗೆ ಹೊಟ್ಟೆಯನ್ನ, ಉಸಿರನ್ನ ಒಳಗೆ ಎಳೆದುಕೊಂಡು ಬೆನ್ನು ಬಾಗಿಸ್ತೀವಿ. ನಮ್ ಸ್ಕೂಲಲ್ಲೂ ಹೀಗೇ ಯೋಗಾ ಮಾಡ್ಸೋದು” ಎಂದ. ಆಗ ಅಶೋಕ “ಪರ್ಫೆಕ್ಟ್! ಹಾಗೇನೇ ಈ ಹಾವುಗಳು ಕೂಡ ಉಸಿರೆಳೆದುಕೊಂಡು, ತಮ್ಮ ರಿಬ್ ಕೇಜ್ ಇರತ್ತಲ್ಲ, ಅದನ್ನ ಸಪಾಟು – ಫ್ಲಾಟಾಗಿ ಮಾಡಿಕೊಂಡು, ಒಂಥರಾ ‘ನಿಮ್ನ ಮಸೂರ’ ಅಂದ್ರೆ concave ಲೆನ್ಸ್ ಇರತ್ತೆ ನೋಡು, ಹಾಗೆ ಬಗ್ಗಿ, ತನ್ನ ತಲೆಯನ್ನ ಹಿಂದಕ್ಕೆಳೆದುಕೊಂಡು, ಮುಂದಕ್ಕೆ ಚೂಪು ಮಾಡಿಕೊಂಡು ಒಂದೇ ಗುರಿಯಿಂದ ಲಾಂಚ್ ಮಾಡಿಕೊಳ್ಳತ್ವೆ ನೋಡು, ಅಬ್ಬ! ಅದನ್ನ ನೋಡೋದೇ ಸಖತ್ತಾಗಿರತ್ತೆ!” ಎಂದ.
ಆಗ ಸಮುದ್ರ, “ನಾವು ಸ್ವಿಮ್ ಮಾಡೋಕೂ ಮುಂಚೆ, ಡೈವ್ ಮಾಡೋವಾಗ್ಲೂ ಹಾಗೇ ಮಾಡ್ತೀವಿ ಅಲ್ವಾ?” ಎಂದ. ಆಗ ಪ್ರಕಾಶ್ “ಕರೆಕ್ಟ್ ಕಂದ. ಅದಕ್ಕೇ ಮಾಡೋ ಕೆಲಸಕ್ಕಿಂತ, ಅದರ ಹಿಂದಿನ ತಯಾರಿ ತುಂಬಾ ಮುಖ್ಯ. ಒಂದು ಹಾಡು ಹಾಡೋಕೂ ಮುಂಚೆ ನೂರಾರು ಘಂಟೆಗಳ ಪ್ರ್ಯಾಕ್ಟೀಸ್ ಬೇಕು. ಒಮ್ಮೆ ನೀರಿಗೆ ಡೈವ್ ಮಾಡೋ ಮುನ್ನ, ಸರಿಯಾದ ರೀತಿಯ ತಾಲೀಮು ಬೇಕು. ನಿಮ್ ಫುಟ್ಬಾಲ್ ಕೂಡ ಹಾಗೇ ತಾನೆ? ದಿನಾ ಮಾಡೊ ಘಂಟೆಗಟ್ಟಲೆ ಪ್ರಾಕ್ಟೀಸ್, ಆ ೯೦ ನಿಮಿಷದ ಮ್ಯಾಚ್ ನ ಹಣೇಬರಹ ನಿರ್ಧರಿಸತ್ತೆ. ಜ್ಯಾವೆಲಿನ್ ಥ್ರೋ ಮಾಡುವಾಗ, Frisbee ಎಸೆಯುವಾಗ ಹಿಂದಕ್ಕೆಳೆದುಕೊಂಡು ಮುಂದೆ ಗುರಿಯಿಟ್ಟು ಎಸೀತಾರಲ್ಲಾ, ಹಾಗೇ ಈ ಹಾರೋ ಹಾವು ಕೂಡ ತನ್ನ ದೇಹವನ್ನ ನಿಖರವಾಗಿ ಫ್ಲ್ಯಾಟ್ ಮಾಡ್ಕೊಂಡು, ಗುರಿಯುಟ್ಟು ಒಂದು ಎತ್ತರದ ಮರದಿಂದ ಮತ್ತೊಂದಕ್ಕೆ ಹಾರತ್ತೆ.” ಎಂದ.
ಅಶೋಕನೂ ಗೆಳೆಯನ ಮಾತಿಗೆ ದನಿಗೂಡಿಸುತ್ತಾ, “ಹೌದು ಸಮುದ್ರ. ಅಪ್ಪ ಹೇಳಿದ ಹಾಗೆ, ಈ ಹಾವುಗಳ ತಯಾರಿ ಮರ ಹತ್ತೋದ್ರಿಂದ ಶುರು ಆಗತ್ತೆ. ಆವು ಯಾವುದೇ ರೆಕ್ಕೆ ಇಲ್ದೇ ಹಾರ್ಬೇಕು ಅಂದ್ರೆ ಖಂಡಿತಾ ಎತ್ತರವಾದ ಪ್ರದೇಶದಿಂದ ಮಾತ್ರ ಸಾಧ್ಯ ಅಲ್ವ. ಕೆಳಗಿಂದ ಮೇಲಕ್ಕೆ ಹಾರೋಕೆ ಬರಲ್ಲ ಇವಕ್ಕೆ. ಸೋ, ಒಂದು ಎತ್ತರದ ಮರ ಹತ್ತಿ, ಅಲ್ಲಿಂದ ತನ್ನ ಪಕ್ಕೆಲುಬುಗಳನ್ನ ಹರಡಿ, ಸಪಾಟು ಮಾಡಿ, ಒಳಗಿಂದ ಕಮಾನಿನ ಥರ ಹೊಟ್ಟೆಯನ್ನ ಒಳಗೆಳೆದುಕೊಂಡು, ತಮ್ಮನ್ನ ತಾವು ಗಾಳೀಲಿ ರಾಕೆಟ್ ಲಾಂಚ್ ಮಾಡೋ ಹಾಗೆ ಲಾಂಚ್ ಮಾಡಿಕೊಳ್ಳತ್ವೆ. ನೀರಿನ ಅಲೆಗಳಲ್ಲಿ ಸ್ವಿಮ್ ಮಾಡೋ ಹಾಗೇ, ಗಾಳಿಯಲ್ಲಿ ಅಲೆಅಲೆಯಾಗಿ ತೇಲಿ ಮುಂದೆ ಹೋಗತ್ವೆ. ತನ್ನ ಬಾಲದಿಂದ ಬ್ಯಾಲೆನ್ಸ್ ಮಾಡ್ತಾ, ಸುಂಯ್ ಅಂತ ತೇಲತ್ವೆ.” ಎಂದು ವಿವರಿಸಿದ.
ಆಗ ಸಮುದ್ರ, “ಹಾಗಾದ್ರೆ ಇವು ಹಾರಲ್ಲ ತೇಲತ್ತೆ ಅಲ್ವಾ? ಮತ್ತೆ ಅದು ‘ಫ್ಲೈಯಿಂಗ್’ ಅಲ್ಲ ‘ಗ್ಲೈಡಿಂಗ್’ ಸ್ನೇಕ್ ಅಲ್ವಾ?” ಎಂದ. ಆಗ ಅಶೋಕ, “ಹೌದು ಕಣೋ, ಹಳೇ ಹೆಸರೇ ಉಳಿದುಬಿಟ್ಟಿದೆ ಅಷ್ಟೇ. ಇವು ಕೆಳಗಿಂದ ಮೇಲೆ ರೆಕ್ಕೆ ಉಪಯೋಗಿಸಿ ಹಾರಿದ್ರೆ, Flying ಪದ ಸರಿಯಾಗ್ತಿತ್ತು. ಈ Flying ಅಲ್ಲಲ್ಲ Gliding ಸ್ನೇಕ್ ಇದ್ಯಲ್ಲ? ಇದು ಯಾಕೆ ತನ್ನ ದೇಹವನ್ನ Flat ಮಾಡಿಕೊಳ್ಳತ್ತೆ ಹೇಳು?” ಎಂದ.
ಆಗ ಸಮುದ್ರ, “ಹೂಂ ನಂಗೊತ್ತು. ಅದು ನಾವು ಪೇಪರ್ ಉಪಯೋಗಿಸಿ, ಏರೋಪ್ಲೇನ್, ರಾಕೆಟ್ ಮಾಡ್ತೀವಲ್ಲ? ಆಗ ಪೇಪರನ್ನ ಸಪಾಟಾಗಿ ಮಡಚಿ, ಚೂಪಾದ ಮೂತಿ ಮಾಡಿ, ಗರಿಗರಿಯಾಗಿಸಿ ಹಾರಿಸ್ತೀವಿ. ಅವಾಗ್ಲೇ ಅದು ಗಾಳೀನ ಸರಿಯಾಗಿ ಬಳಸಿಕೊಂಡು ದೂರ ಹಾರೋಕೆ ಸಾಧ್ಯ. ಇಲ್ಲೂ ಅದೇ! ಏರೋ-ಡೈನಾಮಿಕ್ಸ್ ಅನ್ಸತ್ತೆ!” ಎಂದ.
ಆಗ ಅಶೋಕ “ಜಾಣ ಸಮುದ್ರ ಕರೆಕ್ಟಾಗಿ ಹೇಳ್ದೆ. ತನ್ನ ದೇಹವನ್ನ ಸಪಾಟಾಗಿಸಿಕೊಂಡ ಹಾವಿಗೆ ಹೆಚ್ಚಿನ Surface Area ಅಂದ್ರೆ ಮೇಲ್ಮೈ ವಿಸ್ತೀರ್ಣ ಸಿಗತ್ತೆ. ಗುಂಡಾದ ‘ಪೇಪರ್ ಬಾಲ್’ಗಿಂತಾ ಸಪಾಟಾದ ಪೇಪರ್ ವಿಮಾನಕ್ಕೆ ಹೆಚ್ಚಿನ Surface Area ಸಿಗೋ ಹಾಗೆ. ಜೊತೆಗೆ ಹೊಟ್ಟೆಯನ್ನ ಕಮಾನಿನ ಹಾಗೆ, ಗುಹೆಯ ಹಾಗೆ ಮಾಡಿಕೊಳ್ಳತ್ತಲ್ಲಾ? ಅದರ ಕೆಳಗೆ ಗಾಳಿಯ ಸುಳಿಗಳು ಬಂದು ಈ ಹಾವನ್ನ ಪುಶ್ ಮಾಡಿ ದೂರಕ್ಕೆ ಚಲಿಸೋ ಹಾಗೆ ಮಾಡತ್ತೆ. ಗಾಳಿಯ ಮಧ್ಯೆ ತೇಲ್ತಾ, ತಮ್ಮ ದಿಕ್ಕನ್ನೂ ಬದಲಾಯಿಸಿ ತೇಲೋದು ಕೂಡ ಬರತ್ತೆ ಈ ಹಾವುಗಳಿಗೆ” ಎಂದು ವಿವರಿಸಿದ. ಅಷ್ಟರಲ್ಲಿ ಇವರೆಲ್ಲರೂ ಮನೆ ತಲುಪಿದರು.

ಆಗ ಬೀಗ ಹಾಕಿದ್ದ ಬಾಗಿಲು ನೋಡಿದ ಅಶೋಕ, “ಹೇ ಕಾವ್ಯಕ್ಕ ಮನೇಲಿಲ್ವಾ? ನೀನು ಮಾಡಿದ ಅಡುಗೆ ತಿನ್ಬೇಕಾ ಪ್ರಕಾಶ? ನಾನು ಹೊರಟೆ ವಾಪಸ್!” ಎಂದು ಹೊರಡುವ ಹಾಗೆ ನಾಟಕ ಮಾಡಿದ. ಅದಕ್ಕೆ ಪ್ರಕಾಶ, “ಭಯ ಪಡ್ಬೇಡ ಅಶೋಕ, ಇವತ್ತು ನನ್ ಅಡುಗೆ ತಿನ್ನೋ ಪುಣ್ಯ ಮಾಡಿಲ್ಲಾ ನೀನು. ಮೊನ್ನೆ ಗದಗದಿಂದ ಋತುಪರ್ಣ ಖಡಕ್ ರೊಟ್ಟಿ ತಂದುಕೊಟ್ಟಿದ್ರು. ಮೊಸರು, ಚಟ್ನಿಪುಡಿ ಹಾಕೊಂಡು ತಿನ್ನೋಣ ಬಾ ಮಾರಾಯ” ಎಂದು ಗೆಳೆಯನನ್ನು ಮನೆಯೊಳಗೆ ಕರೆದುಕೊಂಡು ಹೋದ. ಮುಂದೆ ಅವರ ಚರ್ಚೆ ಎತ್ತ ಸಾಗಿತು? ಕಾವ್ಯ ಮತ್ತು ಅವಳ ತಂಗಿಯರು ಬೆಂಗಳೂರಿನಲ್ಲಿ ಏನು ಮಾಡಿದರು? ಮುಂದಿನ ಸಂಚಿಕೆಯಲ್ಲಿ ನೋಡೋಣ. ನೀವೇನಾದರೂ ಹಾರುವ ಹಾವನ್ನು ನೋಡಿದ್ದೀರಾ? ಇಲ್ಲದಿದ್ದರೆ ಈಗಲೇ ಅಂತರ್ಜಾಲವನ್ನು ಜಾಲಾಡಿ, ಅವುಗಳ ದೇಹದ ಚೆಂದದ ವಿನ್ಯಾಸ, ಹಾರುವ ಮೋದ ನೋಡಿ ಆನಂದಿಸಿ.
(ಹಿಂದಿನ ಕಂತು:ಹಾರುತಾ ದೂರಾ ದೂರಾ…)
ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಕ್ಷಮಾ ಭಾನುಪ್ರಕಾಶ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಎಂಟು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಇವರ ‘ಜೀವಿಜ್ಞಾನ’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ೨೦೨೫-೨೬ನೆ ಸಾಲಿನ ‘ಶ್ರೇಷ್ಠ ಪುಸ್ತಕ’ ಪ್ರಶಸ್ತಿ ಲಭಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.


