ಮಾರನೇ ದಿನ ಬೆಳಿಗ್ಗೆ ಬೆಳಿಗ್ಗೆಯೇ ನನಗೆ ನಾಯಕರಿಂದ ಬುಲಾವ್ ಬಂತು. ಅವರೇ ನೇರವಾಗಿ ಕರೆ ಮಾಡಿದ್ದರಿಂದ ನಾನು ಉದ್ವೇಗಕ್ಕೆ ಒಳಗಾದೆ. ನನ್ನ ಮೇಲೆ ಅವರಿಗೆ ನಂಬಿಕೆ ಬಂದಿದೆ. ಕೃಪೆ ಬಿದ್ದಿದೆ. ಅವರ ಪರವಾಗಿ, ಇವರ ಪರವಾಗಿ ದಲ್ಲಾಳಿ ಕೆಲಸ ಮಾಡುವ ಬದಲು ನನಗೆ ಯಾವುದಾದರೂ ಹುದ್ದೆ, ಜವಾಬ್ದಾರಿ ಕೊಡಿ ಎಂದು ನೇರವಾಗಿ ಕೇಳಬೇಕು. ಅವರ ಚೇಂಬರ್ನಲ್ಲಿ ಯಾರು ಇಲ್ಲದಿದ್ದರೆ, ಭಯ ಭಕ್ತಿಯಿಂದ ನಮಸ್ಕರಿಸಿ ವಿನೀತನಾಗಿ ನಡೆದುಕೊಳ್ಳಬೇಕು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಸರ್ಕಾರಿ ಅಧಿಕಾರದಿಂದ ನಿವೃತ್ತನಾದ ಮೇಲೆ ಮೂಡಿದ ಮಾನಸಿಕ ಅಭದ್ರತೆಯಿಂದಾಗಿ ದಿನವೆಲ್ಲ ಹಗಲುಗನಸಿನಲ್ಲೇ ಕಳೆಯುತ್ತಾ ರಾಜಕೀಯದ ಹುಚ್ಚು ಹಿಡಿದು ಅಧಿಕಾರ ಸ್ಥಾನಗಳನ್ನು ಪಡೆಯಲು ಎಲ್ಲ ಪಕ್ಷಗಳವರನ್ನು ನಾನು ಸಂಪರ್ಕಿಸುತ್ತಿದ್ದೆ. ಅಧಿಕಾರ ಸ್ಥಾನ ಪಡೆಯುವುದರಲ್ಲಿ ನಾನು ಯಶಸ್ವಿಯಾಗದೇ ಹೋದರೂ ನನಗೇ ಗೊತ್ತಿಲ್ಲದಂತೆ ನಾನು ಒಬ್ಬ ಪುಢಾರಿಯಾಗಿ, ದಲ್ಲಾಳಿಯಾಗಿ ಪರಿವರ್ತನೆ ಹೊಂದಿದ್ದೆ. ಸಭೆ ಸಮಾರಂಭಗಳಲ್ಲಿ, ಮದುವೆ ಮುಂಜಿಗಳಲ್ಲಿ ನಾಯಕರು ಸಿಕ್ಕಾಗ ನಕ್ಕು ಮಾತನಾಡಿಸುತ್ತಿದ್ದರು. ಬಿಡುವಿದ್ದಾಗ ಬೆನ್ನು ಸವರುತ್ತಿದ್ದರು. ಇನ್ನೂ ಬಿಡುವಿದ್ದಾಗ ಒಂದೆರಡು ನಿಮಿಷ ಲೋಕಾಭಿರಾಮವಾಗಿ ಮಾತನಾಡಿಸುತ್ತಿದ್ದರು. ಇದರಿಂದೆಲ್ಲ ನಾನು ಪುಳಕಿತನಾಗುತ್ತಿದ್ದೆ.
ಇದನ್ನು ತಿಳಿದ ಕೆಲವು ಸಹೋದ್ಯೋಗಿಗಳು ಇಷ್ಟು ಪ್ರಾಪ್ತಿಯಾದುದಕ್ಕೆ ಖುಷಿ ಪಟ್ಟರೂ, ಖುಷಿಯು ನಂತರ ಅಸೂಯೆಯಾಯಿತು. ಮುಂದಿನ ಚುನಾವಣೆಯಲ್ಲಿ ನಿನಗೆ ಯಾವುದಾದರೂ ಕ್ಷೇತ್ರದಿಂದ ಟಿಕೆಟ್ ಸಿಗಬಹುದು, ನಿನ್ನ ಮನೆಯ ವೆರಾಂಡ ದೊಡ್ಡದು ಮಾಡಿಸು, ಅಂಗಳದಲ್ಲಿ ಕಲ್ಲು ಬೆಂಚು ಹಾಕಿಸು ಎಂಬ ಸಲಹೆಗಳಿಗನುಗುಣವಾಗಿ ನಾನೂ ಕೂಡ ಇದನ್ನೆಲ್ಲ ಶ್ರದ್ಧೆಯಿಂದಲೇ ಮಾಡಿಸಿದೆ. ಎರಡು-ಮೂರು ಚುನಾವಣೆಗಳು ಬಂದು ಹೋದವು. ನನಗೆ ಟಿಕೆಟ್ ಸಿಗಲಿಲ್ಲ.
ನನ್ನ ಸಹೋದ್ಯೋಗಿಗಳು ಬಿಡಬೇಕಲ್ಲ. ಅವರನ್ನು ಪರಿಚಯ ಮಾಡಿಕೊಡು, ಇವರಿಗೆ ಒಂದು ಮಾತು ಹೇಳು, ಒಂದು ಸಲ ನೀನು ಪರಿಚಯ ಮಾಡಿಕೊಟ್ಟರೆ ಸಾಕು, ಮುಂದಿನದನ್ನೆಲ್ಲ ನಾವು ನೋಡಿಕೊಳ್ಳುತ್ತೇವೆ ಎಂದು ಪೀಡಿಸಲು ಪ್ರಾರಂಭಿಸಿದರು. ನಾನೂ ಕೂಡ ಒಬ್ಬ ಪ್ರಭಾವಿ ವ್ಯಕ್ತಿ ಎಂಬ ಭಾವನೆ ನನ್ನಲ್ಲಿ ಜಾಗೃತವಾಗುವಂತೆ ಮನೆಗೂ ನಾಲ್ಕಾರು ಜನ ಬಂದು ಹೋಗಲು, ಮತ್ತೆ ಮತ್ತೆ ದೂರವಾಣಿ ಕರೆ ಮಾಡಲು ಶುರು ಮಾಡಿದರು. ನನಗೂ ಸ್ವಲ್ಪ ಸ್ವಪ್ರಾಮುಖ್ಯತೆ ಬಂತು. ಪಕ್ಷಗಳಲ್ಲೂ ಸ್ವಲ್ಪ ಮರ್ಯಾದೆ ಬಂತು. ಹೀಗೇ ನಿವೃತ್ತರಾದ ಅಧಿಕಾರಿಗಳನ್ನು ಕರೆದುಕೊಂಡು ಬರ್ತಾ ಇರಿ, ಮುಂದೆ ಉಪಯೋಗಕ್ಕೆ ಬರಬಹುದು ಅಂತ ನನ್ನ ಬಗ್ಗೆ ಗೌರವ ತೋರಿಸಲು ಪ್ರಾರಂಭಿಸಿದರು.
ಹೀಗೆ ನನ್ನನ್ನು ನಿರಂತರವಾಗಿ ಪೀಡಿಸುತ್ತಿದ್ದವರಲ್ಲಿ ಒಬ್ಬ ನಿವೃತ್ತ ಪೋಲೀಸ್ ಅಧಿಕಾರಿಯೊಬ್ಬನಿದ್ದ. ಉನ್ನತ ಶ್ರೇಣಿಯಲ್ಲಿ ಕೆಲಸ ಮಾಡಿ ನಿವೃತ್ತನಾಗಿದ್ದರಿಂದ ಪೋಲೀಸರ ದರ್ಪ, ಠೇಂಕಾರ, ಏನೆಲ್ಲ ಮೈಗೂಡಿಸಿಕೊಂಡಿದ್ದ. ಸಂಪನ್ಮೂಲವನ್ನು ಕೂಡ ಚೆನ್ನಾಗಿ ರೂಢಿಸಿಕೊಂಡಿದ್ದ. ಮಾಧ್ಯಮದಲ್ಲೂ ಅವನ ಬಗ್ಗೆ ಬರಹಗಳು ನಿರಂತರವಾಗಿ ಬಂದವು. ರಾಜಕೀಯ ಪ್ರವೇಶಿಸುವುದು ಮಾತ್ರವಲ್ಲ, ಕ್ರಮೇಣ ಮಂತ್ರಿಯಾಗುವ, ಅದರಲ್ಲೂ ಗೃಹಮಂತ್ರಿಯಾಗುವ ಕನಸು ಕಾಣ್ತಾಯಿದ್ದ. ನನಗೆ ಈಗಾಗಲೇ ಆಡಳಿತದ ಅನುಭವವಿದೆ, ಇಲಾಖೆಯನ್ನು ಸುಧಾರಿಸುತ್ತೇನೆ, ಬದಲಾವಣೆ ಮಾಡುತ್ತೇನೆ ಎಂದ. ಪಕ್ಷದ ನಾಯಕರನ್ನು ಭೇಟಿ ಮಾಡಿಸುತ್ತೇನೆ ಎಂದು ನಾನು ಒಪ್ಪಲೇ ಬೇಕಾಯಿತು. ಸ್ವವಿರಗಳ ಪುಸ್ತಕ, ಫೋಟೋ ಆಲ್ಬಂ, ಸಂಬಂಧಪಟ್ಟ ದಾಖಲೆಗಳನ್ನು spiral bind ಮಾಡಿದ ಪುಸ್ತಕ, ಎಲ್ಲ ರೆಡಿಯಾಯಿತು. ಅದನ್ನೆಲ್ಲ ಮನೆ ದೇವರ ಮುಂದೆ ಇಟ್ಟು ಪೂಜೆ ಕೂಡ ಮಾಡಿಯಾಯಿತು.
ಪಕ್ಷದ ಅಧ್ಯಕ್ಷರ ಮನೆಗೆ ಹೊರಟೆವು. ಅಧ್ಯಕ್ಷರ ಮನೆ ಅಂದರೆ ದೆಲ್ಲಿಯಿಂದ ಬೆಂಗಳೂರಿಗೆ ಬಂದಾಗ ಅವರು ಉಳಿದುಕೊಳ್ಳುವ ಗುಜರಾತಿ ಉದ್ಯಮಿಗಳ ಮನೆ. ಮನೆಯ ಹಿಂದಿನ ಮುಂದಿನ ರಸ್ತಗಳಲ್ಲಿ ನೂರಾರು ಕಾರುಗಳು. ವಿಪರೀತ ಸೆಕ್ಯುರಿಟಿ. ಪೋಲೀಸಿನವರಿಗೇ ನಾಗರಿಕರಿಗಿಂತ, ಅಧಿಕಾರಿಗಳು, ಪಕ್ಷದ ಕಾರ್ಯಕರ್ತರುಗಳಿಗಿಂತ ಹೆಚ್ಚಿನ ಗಡಿಬಿಡಿ. ಎಲ್ಲರೂ ವಾಕಿಟಾಕಿಯಲ್ಲಿ, ಮೊಬೈಲ್ನಲ್ಲಿ ಮಾತನಾಡುತ್ತಿದ್ದಾರೆ. ಅಧ್ಯಕ್ಷರ ಸೆಕ್ರೆಟೆರಿಯೇನೋ ಬನ್ನಿ ಎಂದು ಬರಹೇಳಿದರು. ಇಷ್ಟು ಜನರ ಮಧ್ಯೆ ಅಧ್ಯಕ್ಷರು ನಮ್ಮನ್ನು ನಿಜವಾಗಿ ನೋಡುತ್ತಾರಾ ಎಂದು ಭಯವಾಯಿತು.
ನನ್ನ ಪೋಲೀಸ್ ಅಧಿಕಾರಿ ಮಿತ್ರ ನಿವೃತ್ತರಾಗಿದ್ದರೂ ಉನ್ನತ ಅಧಿಕಾರಿಗಳು ಧರಿಸುವ ಪೋಲೀಸ್ ಯೂನಿಫಾರಂನಲ್ಲೇ ಇದ್ದರು. ಅವರ ಹಿಂದಿನ ಸಹೋದ್ಯೋಗಿಗಳು ಇವರ ಗುರುತು ಹಿಡಿದರು. ನನಗೂ ಸಾಕಷ್ಟು ಗೌರವ ತೋರಿದರು. ಆದರೂ ಏನೋ ಕಿರಿಕಿರಿ, ಧಾವಂತ. ಮಿತ್ರರು ಕೂಡ ಸಣ್ಣದಾಗಿ ಬೆವರುತ್ತಿರುವುದು, ನೀಲಿ ಬಣ್ಣದ ಕರವಸ್ತ್ರ ತೆಗೆದು ಮುಖ ಒರಸಿಕೊಳ್ಳುತ್ತಿರುವುದನ್ನು ನೋಡಿದೆ. ಸದ್ಯ ನಾನು ಬೆವರುತ್ತಿರಲಿಲ್ಲ.
ಸ್ವಲ್ಪ ಹೊತ್ತಿನಲ್ಲೇ ಅಧ್ಯಕ್ಷರ ಕಡೆಯಿಂದ ಬುಲಾವ್ ಬಂತು. ಬುಲಾವ್ ಬಂದ ತಕ್ಷಣವೇ ನಮ್ಮ ಅಕ್ಕಪಕ್ಕದಲ್ಲಿ ಕುಳಿತಿದ್ದವರೆಲ್ಲರ ಗಮನ ನಮ್ಮ ಕಡೆ ಹರಿಯಿತು. ಒಳಗಡೆ ಹೋದರೆ ಇನ್ನೊಂದು ಕೋಣೆ. ಅಲ್ಲಿ ಆಗಲೇ ಇನ್ನೂ ಎಂಟು ಹತ್ತು ಜನ ಕಾಯುತ್ತಿದ್ದರು. ನಮಗಿಂತಲೂ ಗಣ್ಯರಿರಬಹುದೇನೋ ಅನಿಸಿತು. ಇಷ್ಟರ ತನಕ ಪ್ರವೇಶ ಸಿಕ್ಕಿದ ಮೇಲೆ ಒಳಗಡೆಗೆ ಖಂಡಿತ ಕೂಗೇ ಕೂಗುತ್ತಾರಲ್ಲವೇ ಅಂದುಕೊಳ್ಳುವ ಹೊತ್ತಿಗೆ ಬೆಳ್ಳಿ ಲೋಟದಲ್ಲಿ ಕಾಫಿ ಬಂತು. ಕಾಫಿ ಚೆನ್ನಾಗಿತ್ತು. ನಮಗೇ ಕುಡಿಯುವ ವ್ಯವಧಾನವಿರಲಿಲ್ಲ.
ನಾಲ್ಕೈದು ಜನರು ಒಳಗೆ ಹೋಗಿ ಬಂದ ಮೇಲೆ ನಮ್ಮನ್ನು ಒಳಗೆ ಕರೆದರು. ಸದ್ಯ ಪ್ರವೇಶಿಸಿದ ತಕ್ಷಣವೇ ಅಧ್ಯಕ್ಷರು ನನ್ನ ಗುರುತು ಹಿಡಿದು ಮುಖದಲ್ಲಿ ನಗೆಯನ್ನು ಮಿಂಚಿಸಿದ್ದು ನನಗೆ ಎಷ್ಟೋ ನಿರಾಳವೆನಿಸಿತು. ಕೂರಿ ಅಂದ ತಕ್ಷಣ ನಾನೇನೋ ಕುಳಿತುಕೊಂಡುಬಿಟ್ಟೆ. ಪೋಲೀಸ್ ಮಿತ್ರರು ಸೆಲ್ಯೂಟ್ ಹೊಡೆದರು. ಅಧ್ಯಕ್ಷರು ಅಷ್ಟು ಗಮನಿಸಿದಂತೆ ಕಾಣಲಿಲ್ಲ. ಇವರು ಅವರ ಎದುರಿಗಿಟ್ಟ ಸ್ವವಿವರಗಳ ಫೈಲ್ ಕಡೆ ಗಮನ ಕೂಡ ಹರಿಸಲಿಲ್ಲ.
ನಿವೃತ್ತ ಅಧಿಕಾರಿಗಳು ಸಾರ್ವಜನಿಕ ಜೀವನದ ಬಗ್ಗೆ ಆಸಕ್ತಿ ವಹಿಸುವುದು ಸಂತೋಷ. ಸರ್ಕಾರದ ನೀತಿ ನಿರೂಪಣೆಯ ಬಗ್ಗೆ ನಿಮ್ಮ ವಲಯಗಳಲ್ಲಿ ಮಾತನಾಡುವುದೇ ಒಳ್ಳೆಯ ಸಂವಹನದ ರೀತಿ. ನಿಮಗೆ ಒಳ್ಳೆಯದಾಗಲಿ ಅಂದರು. ನನಗೆ ಮಾತು ಹೇಗೆ ಮುಂದುವರೆಯುತ್ತದೆ ಎಂದು ತಿಳಿಯಲಿಲ್ಲ. ಮಿತ್ರರಿಗೆ ಧೈರ್ಯ ಜಾಸ್ತಿ. ಮೊದಲೆರಡು ಮೂರು ವಾಕ್ಯಗಳಲ್ಲಿ ತಡಬಡಾಯಿಸಿ ನಂತರ ಸ್ಪಷ್ಟವಾಗಿಯೇ ತಮ್ಮ ಸ್ವವಿವರವನ್ನು ಹೇಳಿಕೊಳ್ಳಲು ಪ್ರಾರಂಭಿಸಿದರು. ಅಧ್ಯಕ್ಷರು ಮೌನವಾಗಿದ್ದರು. ಇವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೋ ಇಲ್ಲ ಬೇರೆ ಏನಾದರೂ ಗಹನವಾದ ಸಂಗತಿಗಳನ್ನು ಯೋಚಿಸುತ್ತಿದ್ದಾರೋ ತಿಳಿಯಲಿಲ್ಲ.
ನನ್ನ ಸೇವಾವಧಿಯ ಹೆಚ್ಚು ಭಾಗವನ್ನು ಕಾನೂನು, ಶಾಂತಿ ಪಾಲನೆ ವಿಭಾಗದಲ್ಲೇ ಕಳೆದಿರುವೆ. Traffic, Training, Police Housing ಇಂತಹ ಕೆಲಸಗಳನ್ನು ನಾನು ಮಾಡಿಲ್ಲ. ನಾನು ಜವಾಬ್ದಾರಿ ವಹಿಸಿಕೊಂಡ ವಲಯದಲ್ಲಿ custody death ಗಳು ಅಧಿಕ ಸಂಖ್ಯೆಯಲ್ಲಿದ್ದವು. ಅದರಿಂದ ಸಮಾಜದಲ್ಲಿ ಒಂದು ಭಯವಿತ್ತು. ಹೀಗೆ custodial death ಗೆ ಒಳಗಾದವರಲ್ಲಿ ಅಲ್ಪಸಂಖ್ಯಾತರೇ ಹೆಚ್ಚಾಗಿದ್ದರು. ಅವರೆಲ್ಲ ಯಾವ ರೀತಿಯಲ್ಲೂ ತಲೆ ಎತ್ತದ ಹಾಗೆ, ಸಮಸ್ಯೆಯಾಗದ ಹಾಗೆ ನೋಡಿಕೊಂಡೆ. ಎಲ್ಲೇ ಕೋಮುಗಲಭೆಯಾದರೂ ಅಲ್ಪಸಂಖ್ಯಾತರನ್ನು ನಿಯಂತ್ರಿಸಲು ಸರ್ಕಾರ ತಕ್ಷಣ ನನ್ನನ್ನೇ ನೇಮಿಸುತ್ತಿತ್ತು. ಅಷ್ಟು ಭಯ ನನ್ನ ಬಗ್ಗೆ ಅವರಿಗೆಲ್ಲ. ಸರ್ಕಾರಕ್ಕೂ ಒಳ್ಳೆಯ ಹೆಸರು ಬಂತು.
ಅಧ್ಯಕ್ಷರು ಏನೂ ಪ್ರತಿಕ್ರಿಯೆ ತೋರದೇ ಹೋದರೂ ಕಣ್ಣಿನ ಅಂಚಿನಲ್ಲಿ ಕೊಂಚ ಹೊಯ್ದಾಟವಾದಂತೆನಿಸಿತು. ಬಲಗಾಲನ್ನು ಎತ್ತಿ ಎಡ ಮಂಡಿಯ ಮೇಲೆ ಹಾಕಿಕೊಂಡು ಸ್ವಲ್ಪ ಅಲ್ಲಾಡಿಸಿದರು.
ನನ್ನ ಮಿತ್ರರು ಹೇಳಿಕೊಂಡ ಪ್ರವರಕ್ಕೆ ಉತ್ತರವಾಗಿ ಅಧ್ಯಕ್ಷರು ನಿಮ್ಮ ಮಕ್ಕಳು ಈಗ ಏನು ಮಾಡುತ್ತಿದ್ದಾರೆ, ಮದುವೆ ಸಂಬಂಧ ಎಲ್ಲ ಎಲ್ಲಿ ಎಂದು ಕೇಳಿದರು. ಇವರು ಉತ್ತರ ಹೇಳುವಾಗ ಜುಬ್ಬದ ಎಡ ಜೇಬಿನಿಂದ ಒಂದು ಚೀಟಿ ತೆಗೆದು ಏನನ್ನೋ ಗಮನಿಸಿ ಮತ್ತೆ ಒಳಗೆ ಇಟ್ಟುಕೊಂಡರು. ನೀವು ಬಂದು ಭೇಟಿ ಮಾಡಿದ್ದು ಸಂತೋಷ ಎಂದು ಇಬ್ಬರ ಕೈ ಕುಲುಕಿದರು. ಕೈ ಕುಲಕಲು ಏಳುವಂತೆ ಕಂಡರು, ಏಳಲಿಲ್ಲ. ನನ್ನ ಕೈ ಕುಲುಕಿದ ಮೇಲೆ, ಬಲಗೈಯನ್ನು ನನ್ನ ಭುಜದ ಮೇಲಿಟ್ಟು ವಿಶೇಷ ಗಮನ ತೋರಿದರು. ನನಗೆ ಖುಷಿಯಾಯಿತು. ಒಳಗಡೆಯೇ ಬೀಗಿದೆ. ನಾವು ಅವರ ಕೋಣೆಯಿಂದ ಹೊರಬರುವ ಮುನ್ನವೇ ಮುಂದಿನ ದರ್ಶನಾರ್ಥಿಗಳು ಆಗಲೇ ಕೋಣೆಯ ಒಳಗೆ ಹೆಜ್ಜೆ ಇಟ್ಟಿದ್ದರು.
*****
ಪಕ್ಷದ ಅಧ್ಯಕ್ಷರು ಕೂಡ ಅರವತ್ತೈದು ದಾಟಿದವರು. ಆಗಾಗ್ಗೆ ರಾಜ್ಯ ಮಟ್ಟದಲ್ಲಿ ಮಂತ್ರಿಗಳಾಗಿದ್ದವರು. ಹಲವಾರು ಪ್ರಕರಣಗಳನ್ನು ಹಾದು ಬಂದಿದ್ದರು. ಮೂರು ನಾಲ್ಕು ಸಲವಾದರೂ ಜೈಲಿಗೆ ಹೋಗಿ ಬಂದಿದ್ದರು. ಒಂದು ವರ್ಷ ಸ್ವಂತ ರಾಜ್ಯವನ್ನು ಪ್ರವೇಶಿಸದ ಹಾಗೆ ಗಡೀಪಾರಾಗಿದ್ದವರು. ನಾವು ಭೇಟಿ ಮಾಡಿದಾಗಲೂ ಎರಡು ಪ್ರಕರಣಗಳಲ್ಲಿ ಜಾಮೀನಿನ ಆಧಾರದ ಮೇಲೆ ಹೊರಗಿದ್ದವರು. ಇದೆಲ್ಲ ಕ್ಷುಲ್ಲಕ ವಿವರಗಳೆನ್ನುವಂತೆ ದೇಶದ ಯವುದೇ ಭಾಗದಲ್ಲಿ ಯಾವಾಗ ಚುನಾವಣೆ ನಡೆದರೂ ಸಂಪನ್ಮೂಲ ಸಂಗ್ರಹಿಸುವ, ಕಾರ್ಯತಂತ್ರ ರೂಪಿಸುವ ಚಾಣಾಕ್ಷತೆಯಿಂದಾಗಿ, ಹೈ ಕಮಾಂಡ್ ಅವರಿಗೆ ಒಳ್ಳೆಯ ಹುದ್ದೆ ನೀಡಿತ್ತು, ಭವಿಷ್ಯ ಉಜ್ವಲವಾಗಿತ್ತು.
*****
ನಾನು ಹೇಳುವುದನ್ನು ಎಷ್ಟು ಏಕಾಗ್ರತೆಯಿಂದ ಕೇಳಿಸಿಕೊಂಡರು, ತದೇಕಚಿತ್ತವಾಗಿ ನನ್ನನ್ನೇ ಗಮನಿಸುತ್ತಿದ್ದರು. ನೀವು ಬಂದದ್ದರಿಂದ ಭೇಟಿ ಸುಲಭವಾಯಿತು. ತುಂಬಾ thanks. ನನ್ನನ್ನು ಗಮನಿಸಿದ್ದಾರೆ. ಏನಾದರೂ ಜವಾಬ್ದಾರಿ ನೀಡಬಹುದು. ನಾನು ಅಧಿಕಾರಕ್ಕೆ ಬಂದಾಗ ನಿಮ್ಮನ್ನು ಖಂಡಿತ ಮರೆಯುವುದಿಲ್ಲ ಎಂದು ಸ್ನೇಹಿತರು ನನಗೆ ಆಶ್ವಾಸನೆ ಕೊಟ್ಟರು. ಸಂತೃಪ್ತಿಯ ಲಹರಿಯಲ್ಲಿದ್ದರು.
*****
ಮಾರನೇ ದಿನ ಬೆಳಿಗ್ಗೆ ಬೆಳಿಗ್ಗೆಯೇ ನನಗೆ ನಾಯಕರಿಂದ ಬುಲಾವ್ ಬಂತು. ಅವರೇ ನೇರವಾಗಿ ಕರೆ ಮಾಡಿದ್ದರಿಂದ ನಾನು ಉದ್ವೇಗಕ್ಕೆ ಒಳಗಾದೆ. ನನ್ನ ಮೇಲೆ ಅವರಿಗೆ ನಂಬಿಕೆ ಬಂದಿದೆ. ಕೃಪೆ ಬಿದ್ದಿದೆ. ಅವರ ಪರವಾಗಿ, ಇವರ ಪರವಾಗಿ ದಲ್ಲಾಳಿ ಕೆಲಸ ಮಾಡುವ ಬದಲು ನನಗೆ ಯಾವುದಾದರೂ ಹುದ್ದೆ, ಜವಾಬ್ದಾರಿ ಕೊಡಿ ಎಂದು ನೇರವಾಗಿ ಕೇಳಬೇಕು. ಅವರ ಚೇಂಬರ್ನಲ್ಲಿ ಯಾರು ಇಲ್ಲದಿದ್ದರೆ, ಭಯ ಭಕ್ತಿಯಿಂದ ನಮಸ್ಕರಿಸಿ ವಿನೀತನಾಗಿ ನಡೆದುಕೊಳ್ಳಬೇಕು.
ನೇರವಾಗಿ ಅವರ ಕೋಣೆಗೆ ಪ್ರವೇಶ. ಸಾರ್ವಜನಿಕರು ಹೆಚ್ಚು ಇದ್ದಂತೆ ಕಾಣಲಿಲ್ಲ. ಆದರೆ ಅವರಿಗೆ ಒಂದಾದ ಮೇಲೊಂದು ದೂರವಾಣಿ ಕರೆ ಬರುತ್ತಲೇ ಇತ್ತು. ಅವರ ಎದುರಿಗೆ ನಾಲ್ಕಾರು ಮೊಬೈಲ್ಗಳಿದ್ದವು. ಎಲ್ಲ ಮೊಬೈಲ್ಗಳಿಗೂ ಕರೆ ಬಂದರೂ, ಕಣ್ಣಾಡಿಸುತ್ತಿದ್ದರೇ ವಿನಃ ತಮಗೆ ಬೇಕಾದ ಕರೆಯನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು. ಒಂದೊಂದು ಕರೆಗೂ ಬೇರೆ ರೀತಿಯ ಹಾವಭಾವ. ಕೆಲವು ಕರೆಗಳಿಗೆ ಎದ್ದು ನಿಂತುಕೊಂಡು ವಿನೀತರಾಗಿ ಉತ್ತರ ನೀಡುತ್ತಿದ್ದರು. ಹತ್ತಾರು ನಿಮಿಷವಾದರೂ ನನ್ನ ಕಡೆಗೆ ಗಮನವೇ ಇಲ್ಲ. ನಾನು ಎದುರಿಗೆ ಕೂತೇ ಇಲ್ಲವೇನೋ ಅನ್ನುವಂತೆ ಗಹಗಹಿಸಿ ನಗುತ್ತಿದ್ದರು. ಒಬ್ಬ ಎತ್ತರದ ಜುಬ್ಬಾಧಾರಿ ಒಳಗೆ ಬಂದರು. ಅವರನ್ನು ನೋಡಿದ ತಕ್ಷಣ ಅಧ್ಯಕ್ಷರ ಮುಖ ಅರಳಿತು. ಉದ್ದನೆಯ ಕೈಯನ್ನು ಇನ್ನೂ ಉದ್ದವಾಗಿ ಮುಂದೆ ಚಾಚಿ ಹಸ್ತ ಲಾಘವ ನೀಡಿದರು. ಅವರ ಕೈ ಹಿಡಿದು ಪಕ್ಕದಲ್ಲಿದ್ದ ಒಳಕೋಣೆಗೆ ಕರೆದುಕೊಂಡು ಹೋದರು. ಅಲ್ಲಿಯ ಮಾತುಗಳ ಸಲಿಗೆ, ಪಿಸುಮಾತು, ಕುಲುಕುಲು ಎಲ್ಲ ನನಗೆ ಕೇಳಿಸುತ್ತಿತ್ತು. ಒಳಕೋಣೆಗೆ ಕೇಕ್, ಹಣ್ಣು, ಕಾಫಿ ಎಲ್ಲವನ್ನೂ ಒಂದು ಟ್ರೇನಲ್ಲಿ ಬಿಳಿವಸ್ತ್ರ ಧರಿಸಿದ್ದ ಸ್ವಯಂ ಸೇವಕನೊಬ್ಬ ತೆಗೆದುಕೊಂಡು ಹೋದ. ನನಗೂ ಕಾಫಿಗೆ ಹೇಳಬಹುದಿತ್ತಲ್ಲವೇ ಅನಿಸಿತು. ನಾಲಿಗೆ ಒಣಗಲು ಪ್ರಾರಂಭಿಸಿತು. ಕಾಲು ಜೋಮು ಹಿಡಿಯುತ್ತಿತ್ತು. ಎದುರಿಗೆ ಯಾರೂ ಇಲ್ಲದಿದ್ದರೂ ನಾನು ತಲೆ ಬಗ್ಗಿಸಿಕೊಂಡು ಕುಳಿತೆ. ಈ ಕೋಣೆಯ ಗಡಿಯಾರದ ಟಿಕ್ಟಿಕ್ ಶಬ್ದ ಎಷ್ಟು ಕರ್ಕಶವಾದದ್ದು ಅನಿಸಿತು. ಕೋಣೆಯಲ್ಲಿದ್ದ ರಾಷ್ಟ್ರ ನಾಯಕರ ಫೋಟೋಗಳನ್ನು ಒಂದಲ್ಲ, ಎರಡಲ್ಲ ಅಂತ ಮತ್ತೆ ಮತ್ತೆ ಲೆಕ್ಕ ಹಾಕುತ್ತಿದ್ದೆ.

ಅಂತೂ ಇಂತೂ ಕೊನೆಗೊಮ್ಮೆ ನಾಯಕರು ಒಳಕೋಣೆಯಿಂದ ಸಂಗಾತಿಗಳೊಡನೆ ಹೊರ ಬಂದರು. ಎಲ್ಲರೂ ತುಂಬಾ ಸಂತೋಷವಾಗಿರುವಂತೆ ಕಂಡರು. ಒಂದೆರಡು ಕ್ಷಣ ನನ್ನನ್ನು ತುದಿಗಣ್ಣಿನಲ್ಲಿ ನೋಡಿದರು. ಬಾಗಿಲ ಬಳಿ ಹೋಗಿ ಮತ್ತೆ ಕೈ ಕುಲುಕಿ ಅತಿಥಿಗಳನ್ನು ಬೀಳ್ಕೊಟ್ಟರು. ಇನ್ನೊಂದು ದೂರವಾಣಿ ಕರೆ ಬಂತು.
ಕೊನೆಗೂ ನನ್ನ ಕಡೆ ನೋಡಿದರು. ಮುಖದ ತುಂಬಾ ತಾತ್ಸಾರ ಭಾವ. ಕಣ್ಣುಗಳಲ್ಲಿ ಉದಾಸೀನ. ವೇಸ್ಟ್ ಕೋಟ್ ಬಿಚ್ಚಿ ಕುರ್ಚಿಗೆ ನೇತು ಹಾಕಿ ನನ್ನ ಕಡೆಗೆ ಬಾಗುತ್ತಾ ನಿಧಾನವಾಗಿ, ಸ್ಪಷ್ಟವಾಗಿ ಮಾತು ಪ್ರಾರಂಭಿಸಿದರು.
ಯಾರ್ರೀ ಅದು, ನಿಮ್ಮ ಸಹೋದ್ಯೋಗಿ, ರಾಜಕೀಯ ಪಕ್ಷದ ನಾಯಕರನ್ನು ಭೇಟಿ ಮಾಡುವಾಗ ಅದೂ ಅಧಿಕಾರ, ಅವಕಾಶ ಕೇಳಿಕೊಂಡು ಬಂದಿರುವಾಗ ನನ್ನ ಸರ್ವೀಸಿನಲ್ಲಿ ಇಷ್ಟು custodial death ಮಾಡಿಸಿದೆ, ಅವರಲ್ಲಿ ಇಷ್ಟು ಜನ ಅಲ್ಪಸಂಖ್ಯಾತರು ಅಂತ ಹೆಗ್ಗಳಿಕೆ ಹೇಳಿಕೊಂಡು ಬಂದಿದ್ದಾರಲ್ಲ. ಹೌದು, ನಾವು ರಾಜಕೀಯದಲ್ಲಿರೋರು ಅನಿವಾರ್ಯವಾಗಿ, ರಾಜಕೀಯ ಕಾರಣಗಳಿಗಾಗಿ lock up death ಮಾಡಿಸ್ತೀವಿ. ಮಾಡಿಸದೇ ಹೋದರೂ ಕಂಡರೂ ಕಾಣದ ಹಾಗೆ ಇದ್ದು ಬಿಡ್ತೀವಿ. ಒಂದೊಂದು ಸಲ ನಿರ್ದಿಷ್ಟ ಜಾತಿಯ, ಕೋಮಿನ ಅಪರಾಧಿಗಳನ್ನು ಕೊಲ್ಲಿಸಿ, ಕೊಂದು encounter ನಲ್ಲಿ ತೀರಿಹೋದರು ಅಂತ ಜನರನ್ನು ನಂಬಿಸ್ತೀವಿ. ಇದಕ್ಕೆಲ್ಲ ನೆರವಾದ ಅಧಿಕಾರಿಗಳಿಗೆ ಬಡ್ತಿ ಕೊಡ್ತೀವಿ.
ಇದೆಲ್ಲ ತಪ್ಪು ಅನ್ಯಾಯ ಅಂತ ಗೊತ್ತಿದ್ದರೂ ಮಾಡ್ತೀವಿ. ಅದು ನಮ್ಮ ವೃತ್ತಿಯ ಅನಿವಾರ್ಯತೆ. ಆದರೆ ಅದು ಸರಿ ಅಂತ ಯಾವತ್ತೂ ನಾವು ನಂಬೋಲ್ಲ. ಮೊದಮೊದಲು ರಾಜಕೀಯ, ಅಧಿಕಾರ ಪ್ರವೇಶಿಸಿದ ದಿನಗಳಲ್ಲಿ ನಮಗೂ ಇದರ ಬಗ್ಗೆಯೆಲ್ಲ ನಾಚಿಕೆ, ಸಂಕೋಚ, ಭಯ, ಹಿಂಜರಿಕೆ ಎಲ್ಲ ಇರುತ್ತೆ. ಅದರೆ ದಿನಾ ಕಳೀತಾ ಕಳೀತಾ, ಉನ್ನತ ಸ್ಥಾನಗಳನ್ನು ಪಡೀತಾ ಪಡೀತಾ, ಸೂಕ್ಷ್ಮ ಕಳೆದುಕೊಂಡು ಜಡ್ಡಾಗ್ತಿದೀವಿ, ಪಾಪ ಮಾಡ್ತಿದೀವಿ ಅಂತ ಒಳಗಡೆ ಭಯ ಇದ್ದೇ ಇರುತ್ತೆ.
ಆದರೆ ಅದನ್ನೇ ಹೆಗ್ಗಳಿಕೆ ಮಾಡಿಕೊಂಡು ನನಗೆ ರಾಜಕೀಯ ಅಧಿಕಾರ, ಅವಕಾಶ ಕೊಡಿ ಅಂತ ನಿಮ್ಮ ಗೆಳೆಯರ ಹಾಗೆ ಯಾವತ್ತೂ ನಿರ್ಲಜ್ಜವಾಗಿ ಕೇಳೋಲ್ಲ.
ನಾವು ನಿಮ್ಮನ್ನು, ನಿಮ್ಮಂತಹವರನ್ನು ಯಾಕೆ ಭೇಟಿ ಮಾಡೋಕೆ ಆಸೆ ಪಡ್ತೀವಿ ಅಂದರೆ, ನಮ್ಮ ಅಧಿಕಾರವನ್ನು ಗೌರವಿಸದವರು, ನಮ್ಮನ್ನು ಒಪ್ಪದವರು ಕೂಡ ಇರ್ತಾರೆ. ಅಂತಹವರನ್ನು ಆಗಾಗ್ಗೆ ಭೇಟಿ ಮಾಡುವುದರಿಂದ ನಾವು ಮರೆತೇ ಬಿಟ್ಟಿರುವ ಒಳ್ಳೆಯತನವನ್ನು ಮತ್ತೆ ಚೂರು ಪಾರು ನೆನಪಿಸಿಕೊಳ್ಳಬಹುದು ಅಂತ.
ಮಾತು ಮುಗಿಸುವ ಹೊತ್ತಿಗೆ ಅವರೇ ಸಮಾಧಾನಗೊಂಡರು. ಈ ಸಮೀಕರಣದಲ್ಲಿ ಅವರ ಎದುರಿಗೆ ಕುಳಿತಿರಲು ನನಗೇ ಕಷ್ಟವಾಯಿತು. ಗೆಳೆಯನ ರೀತಿ ನಾನು custodial death ಗೆ ಕಾರಣವಾಗದಿರಬಹುದು. ಆದರೆ ಅಂತಹವನು ಕೂಡ ನನ್ನ ಗೆಳೆಯನಾಗಿದ್ದಾನೆ, ಅದನ್ನೇ ಹೆಗ್ಗಳಿಕೆ ಮಾಡಿಕೊಂಡು ನಾಯಕರಿಗೆ ಹೇಳುವಾಗ ನಾನು ಜೊತೆಯಲ್ಲಿದ್ದರೂ ಪರವಾಗಿಲ್ಲ ಅಂತ ಗೆಳೆಯನಿಗೆ ಅನಿಸಿದರೆ, ನಾನು ಕೂಡ ಅವನಂತೆಯೇ ಅಲ್ಲವೇ ಅನಿಸಿತು.
ಭೇಟಿ ಹೇಗೆ ಮುಗಿಸಬೇಕೋ ತಿಳಿಯದೆ ಕುಳಿತಿದ್ದೆ. ನಾಯಕರು ಯಾವುದೋ ಕಾಗದ ಪತ್ರಗಳಲ್ಲಿ ನಾಲ್ಕಾರು ನಿಮಿಷ ತಲ್ಲೀನರಾದರು.
Sorry ನಿಮ್ಮನ್ನು ಬೆಳಿಗ್ಗೆ ಬೆಳಿಗ್ಗೆಯೇ ಕರೆಸಿದೆ. ಏನೇನೋ ಮಾತನಾಡಿದೆ. ಒಂದು ಕಪ್ ಕಾಫಿ ಕುಡಿಯೋಣವೇ ಎಂದು ಕೇಳಿ ಉತ್ತರಕ್ಕೂ ಕಾಯದೆ, ಸಹಾಯಕರಿಗೆ ಸೂಚಿಸಿದರು.
ನಿಮಗೆ ನಾಲ್ಕು ನಿಮಿಷ ಬಿಡುವಿದ್ದರೆ, ಒಂದೆರಡು ಮಾತು. ನಿಮ್ಮ ಇದೇ ಬೆಂಗಳೂರಿಗೆ ಆರು ತಿಂಗಳ ಹಿಂದೆ ನಾನು ಒಂದು ಮಠದ ಆಹ್ವಾನದ ಮೇಲೆ ದಕ್ಷಿಣಾಮೂರ್ತಿ ಸ್ತೋತ್ರದ ಬಗ್ಗೆ ಕನ್ನಡ ವಿದ್ವಾಂಸರೊಬ್ಬರು ಬರೆದಿರುವ ಇಂಗ್ಲಿಷ್ ಅನುವಾದದ ಪುಸ್ತಕದ ಬಿಡುಗಡೆಗೆ ಬಂದಿದ್ದೆ. ಇಂತಹ ಪುಸ್ತಕಗಳ ಬಿಡುಗಡೆಗೆ ಮಠಮಾನ್ಯಗಳು ಯಾಕೆ ನಮ್ಮನ್ನು ಕೂಗುತ್ತವೆ ನಮಗೂ ಗೊತ್ತಿಲ್ಲ. ಇರಲಿ, ಮಠದ ಧರ್ಮದರ್ಶಿಗಳು ನಮ್ಮ ಪಕ್ಷದ ಕಾನೂನು ಸಲಹೆಗಾರರು. ಹಾಗಾಗಿ ಕೂಗಿರಬಹುದು. ಸಮಾರಂಭಕ್ಕೆ ಬಂದು ಪುಸ್ತಕ ಬಿಡುಗಡೆ ಮಾಡಿದೆ. ಅವರೇ ಬರೆಸಿಕೊಟ್ಟಿದ್ದ ಭಾಷಣ ಓದಿದೆ. ಇನ್ನೇನು ಸಮಾರಂಭ ಮುಗಿಯಬೇಕೆನ್ನುವಾಗ ಏನೋ ಕೊರೆ ಇದೆ ಅನಿಸಿತು. ಅರೆ, ಈ ಪುಸ್ತಕದ ಲೇಖಕರು, ಅನುವಾದಕರು ಎಲ್ಲಿ ಎಂದು ಗಡಿಬಿಡಿಯಲ್ಲಿ ಕೇಳಿದೆ.
ವಕೀಲರು ವಿವರಿಸಿದರು, ಸರ್ ಇದು ಮೂಲವಲ್ಲ ಶಂಕರರ ಕೃತಿ. ಕನ್ನಡದಲ್ಲಿ ವ್ಯಾಖ್ಯಾನ ಬರೆದಿರುವವರು ತೀರಿಹೋಗಿದ್ದಾರೆ. ಈಗ ನಮ್ಮ ನಡುವೆ ಇರುವುದು ಅದರ ಇಂಗ್ಲಿಷ್ ಅನುವಾದಕರು ಮಾತ್ರ.
ಸರಿ ಅವರನ್ನೇ ಕೂಗಿ ಸನ್ಮಾನ ಮಾಡ್ತೀನಿ, ಮಾಡಬೇಕು. ಅವರು ಬಂದಿಲ್ಲವೇ, ನಾನು ಬರ್ತೀನಿ ಅಂತ ಅವರಿಗೆ ಗೊತ್ತಿಲ್ಲವೇ, ತಿಳಿಸಿಲ್ಲವೇ?
ನಮ್ಮನ್ನು ನೋಡಲು ಎಲ್ಲರೂ ಯಾವಾಗಲೂ ಹಾತೊರೆಯುತ್ತಿರುತ್ತಾರೆ ಎಂಬ ಭಾವನೆ ನಮಗೆ ಯಾವಾಗಲೂ ಅಂತರ್ಗತವಾಗಿರುತ್ತದೆ. ಹಾಗಾಗಿ ನನ್ನ ಬಾಯಲ್ಲಿ ಸಹಜವಾಗಿ ಈ ಮಾತು ಬಂತು.
ಹೌದು ಸಾರ್, ನೀವು ಬರ್ತೀರಿ, ನೀವೇ ಮುಖ್ಯ ಅತಿಥಿ ಅಂತ ಹೇಳಿದ್ದೆವು. ಬಹಳ ಸಂತೋಷಪಟ್ಟರು. ವಂದನೆ ತಿಳಿಸಿದರು. ಸಮಾರಂಭಕ್ಕೆ ಬರುವ ಆಸಕ್ತಿ ತೋರಲಿಲ್ಲ. ಅಲ್ಲದೆ ಅವರಿಗೆ ವಯಸ್ಸಾಗಿದೆ ೮೫ ದಾಟಿದೆ.
ವಕೀಲರಿಗೆ ಇಷ್ಟು ಹೇಳಲು ಕೂಡ ಹಿಂಜರಿಕೆ. ಅಧಿಕಾರಸ್ಥರ ಯಾವ ಭಾವನೆಗಳಿಗೂ ಧಕ್ಕೆ ತರಬಾರದೆಂಬ ಒಂದು ವಿಚಾರ ಎಲ್ಲರಲ್ಲಿರುವಂತೆಯೇ ಈ ವಕೀಲರಲ್ಲೂ ಇತ್ತು.
ನನಗೆ ನಗು ಬಂತು. ಆದರೆ ಒಳಗಡೆ ನನಗೆ ನಾನು ಸಣ್ಣವನೆನಿಸಿತು. ಅದನ್ನು ತೋರಿಸಿಕೊಳ್ಳದೆ, ಸರಿ, ಮುಂದಿನ ಭೇಟಿಯ ಸಮಯದಲ್ಲಿ ನಾನೇ ಆ ಹಿರಿಯರನ್ನು ಭೇಟಿ ಮಾಡ್ತೀನಿ ಅಂತ ಗೌರವ ಸೂಚಿಸಿ, ಸಮಾಧಾನ ಹೇಳಿದೆ
ಮುಂದಿನ ಭೇಟಿಯ ಹೊತ್ತಿಗೆ ಅನುವಾದಕರು ತೀರಿಹೋಗಿದ್ದರು. ನಾನೇ ಮತ್ತೆ ವಕೀಲರಿಗೆ ನೆನಪಿಸಿ ಕೇಳಿದೆ. ವಕೀಲರಲ್ಲವೇ! ಹೌದು ಸಾರ್, ಅವರ ಹತ್ತಿರ ಪ್ರಸ್ತಾಪಿಸಿದೆ ಬರಲಿ, ಸಂತೋಷ ಎಂದು ಹೇಳಿದ್ದರು ಎಂದು ಉತ್ತರಿಸಿದ್ದರು.
ವಕೀಲರು ಹೇಳಿದ ಉತ್ತರ ಪ್ರಾಮಾಣಿಕವಾದದ್ದಲ್ಲ ಅಂತ ನನಗೆ ಅನಿಸಿತು. ನನಗೆ ಸಂತೋಷವಾಗಲೆಂದು ಹಾಗೆ ಹೇಳಿದ್ದಾರೆ, ಅಷ್ಟೇ. ಅನುವಾದಕರ ಹತ್ತಿರ ಪ್ರಸ್ತಾಪಿಸಿರಬೇಕು. ಅವರು ನನ್ನನ್ನು ಭೇಟಿ ಮಾಡಲು ನಿರಾಕರಿಸಿರಬೇಕು. ಹಾಗೆ ನಿರಾಕರಿಸಿ ನನ್ನ ಬಗ್ಗೆ ಗೌರವ ಸೂಚಿಸಿರಬೇಕು. ನನ್ನನ್ನು ದೂರವಿಡಲು ಮನಸ್ಸು ಮಾಡಿರಬೇಕು.
ಇಷ್ಟು ಹೊತ್ತಿಗೆ ಕಾಫಿ ಬಂತು. ನಾಯಕರು ಕಾಫಿಯನ್ನು ಸಂತೋಷವಾಗಿ ಕುಡಿದರು, ಚಪ್ಪರಿಸುತ್ತಾ.
ನೀವು ಏನೇ ಹೇಳಿ filter coffee ವಿಷಯದಲ್ಲಿ ದಕ್ಷಿಣ ಭಾರತೀಯರನ್ನು ಮೀರಿಸುವವರು ಬೇರೆ ಯಾರೂ ಇಲ್ಲ ಎಂದು ನಕ್ಕರು.
ಅವರು ಹಗುರವಾದದ್ದನ್ನು ಕಂಡು ನನಗೂ ಸಂತೋಷವಾಯಿತು. ಇಷ್ಟೊಂದು ಪ್ರಭಾವಿ ನಾಯಕರು ಆತ್ಮೀಯ ಸ್ತರದಲ್ಲಿ ಮಾತನಾಡಿಸಿದ್ದಕ್ಕೆ, ಮನಸ್ಸು ತೆರೆದದ್ದಕ್ಕೆ ನನಗೂ ಖುಷಿಯಾಯಿತು.
ಭೇಟಿ ಮುಗಿಸುತ್ತಾ ನಾಯಕರು ಹೇಳಿದರು:
ಅನುವಾದಕರಂತಹ ಹಿರಿಯನ್ನು ಮುಂದಾದರೂ ಭೇಟಿ ಮಾಡುವ, ಗೌರವ ಸೂಚಿಸುವ ಅವಕಾಶ ನನಗೆ ಸಿಗುತ್ತದೆ ಎಂಬ ಆಸೆಯಿದೆ ಎಂದು ನಿರಾಳವಾಗಿ ಎದ್ದು ಕೃತಜ್ಞತೆ ಸೂಚಿಸುವಂತೆ ಕೈ ಮುಗಿದು ನನ್ನನ್ನು ಬೀಳ್ಕೊಟ್ಟರು.

(ನನ್ನ ಸಹೋದ್ಯೋಗಿ ಅದೇ bio-data ಹಿಡಿದು ಮತ್ತೆ ಯಾರನ್ನೋ ಹಿಡಿದು ರಾಜಕೀಯ ಸಾಮಾಜಿಕ ಅಧಿಕಾರಗಳನ್ನು ಪಡೆದರು, ವಿಜೃಂಭಿಸಿದರು ಅನ್ನುವುದು ಕೂಡ ಕತೆಗೇ ಸಂಬಂಧಪಟ್ಟ ವಿವರವಾದರೂ, ಅದೇಕೋ ಅಂತಹ ವಿವರಗಳಿಂದ ಕತೆ ಮಲಿನವಾಗಬಹುದು ಎಂದು ಆವರಣದಲ್ಲಿ ಬರೆದಿರುವೆ.)

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

