ಆ ದಾಯಗಳ ಮೇಲೆ ಕರಿ ಕಂಬಳಿಗಳು ಆಗಲೇ ಹಾಜರಿದ್ದವು. ಆದರೆ ಅಲ್ಲಿದ್ದ ಇಬ್ಬರು ಮಂದೆಯ ಚಳಿಗೆ ಬೆಂಕಿ ಹಾಕಿಕಂಡಿದ್ದರು. ಹಂಗೇನೇ ಸಣ್ಣಗೆ ಮಾತಿಗಿಳಿದಿದ್ದರು. ಉಳಿದಿಬ್ಬರು ಪಾಳಿಯ ಮೇಲೆ ಕಾಯುವ ಸಲುವಾಗಿ ಆಗಲೇ ಮಲಗಿದ್ದರು. ಅತ್ತ ಕಡೆಯಿಂದ ಸಣ್ಣಗೆ ಗೊರಕೆಗಳೇಳುತ್ತಿದ್ದವು. ಗುಬ್ಬದೊಳಗಿಂದ ಮರಿಗಳು ಆಗಾಗ ಏನನ್ನೋ ಮರೆತಿದ್ದನ್ನು ನೆನಪಿಸಿಕಂಡು ಅರುಚುತ್ತಿದ್ದವು. ಅವುಗಳ ಅವ್ವಂದಿರು ಇಗಾ ನಾವು ಇಲ್ಲೇ ಇದೀವಿ ಎಂಬಂತೆ ಓಗೊಡುತ್ತಿದ್ದವು. ಈ ಕೂಗುಗಳು ಚಳಿಯ ಸುಪರ್ಧಿನಲ್ಲಿದ್ದ ಇರುಳ ಕತ್ತಲ ಮೌನವನ್ನು ಕದಡುತ್ತಿದ್ದವು. ಅವರು ಹಾಕಿಕಂಡಿದ್ದ ಬೆಂಕಿ ಕೆಂಡಕ್ಕೆ ತಿರುಗಿತ್ತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ತೈದನೆಯ ಕಂತು
ಗೋಡ್ಗಲ್ಲು
ನನ್ನ ಹಳ್ಳಿಯಿಂದ ಪಡುವಣ ದಿಕ್ಕಿಗೆ ಒಂದೆರಡು ಕಿಲೋಮೀಟರ್ ದೂರದಲ್ಲಿ ಕುರುಚಲು ಗಿಡಗಳಿಂದ ಕೂಡಿದ ಒಂದು ಪುಟ್ಟ ಕಾಡಿದೆ. ಸುತ್ತ ಮುತ್ತಲ ಹಳ್ಳಯವರಿಗಿದು ದನ ಕುರಿಗಳನ್ನು ಮೇಯಿಸುವ, ಸಣ್ಣ ಪುಟ್ಟ ಪ್ರಾಣಿಗಳನ್ನು ಬೇಟೆಯಾಡುವ ಪ್ರಿಯವಾದ ತಾಣ. ಇಂಥ ಕಾಡಿನ ನಡುವೆ ಪಟ್ಟದ ದೇವರ ಕೆರೆ ಅಂತ ಕರೆಯಲ್ಪಡುವ ಒಂದು ಕೆರೆಯಿದೆ. ಇದನ್ನು ಸಿದ್ದಪ್ಪನ ಕೆರೆ ಅಂತಾನೂ ಕರೀತಾರೆ. ಒಂದು ಕಾಲದಲ್ಲಿ ಇದರಲ್ಲಿ ವರ್ಷವಿಡೀ ನೀರಿರುತ್ತಿತ್ತು. ಚಿಕ್ಕಂದಿನಲ್ಲಿ ಇದು ಬತ್ತಿರುವುದನ್ನೇ ನೋಡಿರಲಿಲ್ಲ. ಈಗಲೂ ಮಳೆಗಾಲದಲ್ಲಿ ತುಂಬುತ್ತದೆ. ಆಗಿದು ಇಲ್ಲಿಗೆ ಬರುವ ಪ್ರಾಣಿ ಪಕ್ಷಿಗಳಿಂದ ಹಿಡಿದು ಮನುಷ್ಯರವರೆಗೆ ದಣಿವಾರಿಸಿಕೊಳ್ಳಲು ಏಕೈಕ ಆಸರೆಯಾಗುತ್ತದೆ. ಸುತ್ತಮುತ್ತಲ ಹಳ್ಳಿಗಳ ದೇವರುಗಳು `ಪುಣ್ಯ’ ಮಾಡಿಸಿಕೊಳ್ಳಲು ಈ ಕೆರೆಯ ನೀರಿಗೆ ಬರುತ್ತವೆ. ಇದರ ತಡಿಯಲ್ಲೊಂದು ದೇವರ ಗುಡಿಯಿದೆ. ಸಿದ್ದಪ್ಪ ದೇವರು ಅಥವಾ ಕೆರೆ ಸಿದ್ದಪ್ಪ ಅಂತ ಕರೆಯಲ್ಪಡುವ ಇದರೊಳಗಿನ ದೇವರಿಗೆ ಸುತ್ತಲ ಹಳ್ಳಿಯಲ್ಲೆಲ್ಲಾ ಭಕ್ತರಿದ್ದಾರೆ. ಹಬ್ಬ ಹರಿದಿನಗಳಲ್ಲಿ ಅಮವಾಸ್ಯೆ ಪೂರ್ಣಿಮೆಗಳಲ್ಲಿ ಅಲ್ಲದೆ ದಿನವೂ ಒಬ್ಬರಲ್ಲ ಒಬ್ಬರು ಹರಕೆಯ ನೆಪದಲ್ಲೋ, ತಳಿಗೆಯ ನೆಪದಲ್ಲೋ ಪೂಜೆಗಾಗಿ ಬರುತ್ತಾರೆ. ಹಗಲಿನಲ್ಲಿ ದನಕುರಿಗಳನ್ನು ಮೇಸಲೆಂದು ಹೋದವರಿಗೆ ಬಾಳೇ ಹಣ್ಣಿನ ಚರ್ಪು ಇಲ್ಲವೇ ಗಟ್ಟಕ್ಕಿ ಪಾಯಸ ಸಿಕ್ಕೇ ಸಿಗುತ್ತದೆ. ತೀರಾ ಇತ್ತೀಚಿನವರೆಗೂ ಅಮವಾಸ್ಯೆ ಮತ್ತು ಹುಣ್ಣಿಮೆಗಳಲ್ಲಿ ಅದರಲ್ಲೂ ಶಿವರಾತ್ರಿ ಹಬ್ಬದಲ್ಲಿ ಇಡೀ ರಾತ್ರಿ ತತ್ವಪದಗಳ ಹಾಡುಗಾರಿಕೆ ಇರುತ್ತಿತ್ತು. ಮೊದಲು ಕಲ್ಲು ಚಪ್ಪಡಿಗಳ ಚಂದದ ಗುಡಿಯೊಳಗಿದ್ದ ಈ ಸಿದ್ದಪ್ಪ ದೇವರೀಗ ಕೆಲ ಭಕ್ತರ ಅಪೇಕ್ಷೆಯ ಮೇರೆಗೆ ಇತ್ತೀಚೆಗೆ ಹೊಸದೊಂದು ಕಾಂಕ್ರೀಟ್ ಕಟ್ಟಡದಲ್ಲಿ ಪವಡಿಸಿದ್ದಾನೆ.
ಹಿಂಗೆ ಕಾಡಿನ ನಡುವೆ ಕುಳಿತು ಸುತ್ತಲ ಹಳ್ಳಿಗರಿಗೆಲ್ಲಾ ಇಷ್ಟದ ದೇವರಾಗಿರುವ ಈ ಸಿದ್ದಪ್ಪ ದೇವರಿಗೊಂದು ಐತಿಹ್ಯವಿದೆ. ಅದೆಂದರೆ ಹನ್ನೆರಡನೆಯ ಶತಮಾನದ ವಚನಕಾರ ಸಿದ್ಧರಾಮ ಇಲ್ಲಿ ಕೆಲ ಕಾಲ ನೆಲಸಿದ್ದನೆಂದೂ ಆ ಕಾರಣಕ್ಕಾಗಿಯೇ ಈ ದೇವರಿಗೆ ಸಿದ್ದಪ್ಪ ಅಂತ ಹೆಸರು ಬಂತೆAದೂ ಹೇಳುತ್ತಾರೆ. ನಮ್ಮ ಸೀಮೆ ಸಿದ್ಧರ ಪರಂಪರೆಯ ಸೀಮೆ. ಹಂಗಾಗಿ ಯಾರೋ ಸಿದ್ಧರೂ ಅಲ್ಲಿ ನೆಲೆಸಿದ್ದಿರಬಹುದು. ಪಕ್ಕದಲ್ಲಿರುವ ಕೆರೆಯನ್ನು ಸಿದ್ದರಾಮನೇ ಕಟ್ಟಿಸಿದ್ದನೆಂದೂ ಹಿಂದೆ ಇಲ್ಲಿ ಹುಲಿ, ಚಿರತೆ ಮುಂತಾದ ಪ್ರಾಣಿಗಳಿದ್ದವೆಂದೂ ಹೇಳುತ್ತಾರೆ. ಆದರೀಗ ಕಾಡು ಹಂದಿ, ಜಿಂಕೆ, ಮೊಲ, ನವಿಲು ಮುಂತಾದ ಪ್ರಾಣಿಗಳಿವೆ. ಈ ಕೆರೆಯಿಂದ ನಮ್ಮ ಊರಿನ ಕಡೆಗಿರುವ ಭಾಗವನ್ನು ಈಚೆ ಬಾರೆ ಅಂತಲೂ ಈ ಕೆರೆಯಿಂದ ಆಚೆಗಿರುವ ಭಾಗವನ್ನು ಆಚೆ ಬಾರೆ ಅಂತಲೂ ಕರೆಯಲಾಗುತ್ತೆ. ಈಗ ಈಚೆ ಬಾರೆಗಿಂತ ಆಚೆ ಬಾರೆ ದಟ್ಟವಾದ ಗಿಡಮರಗಳಿಂದ ಕೂಡಿರುವುದರಿಂದ ಒಂದು ರೀತಿಯಲ್ಲಿ ನಿಜವಾದ ಕಾಡಿನಂತೆ ಕಾಣುತ್ತದೆ. ನಾವು ಚಿಕ್ಕಂದಿನಲ್ಲಿ ದನಗಳನ್ನು ಮೇಸಲೆಂದು ಹೋಗುತ್ತಿದ್ದಾಗ ಬಹುತೇಕ ಆಚೆ ಬಾರೆಯಲ್ಲಿ ಒಳ್ಳೆಯ ಮೇವಿರುತ್ತಿತ್ತು. ಹಂಗಾಗಿ ನಾವು ಮನೆಯವರು ಅತ್ತ ಹೋಗಕೂಡದೆಂದು ಹೇಳಿದ್ದರೂ ದನಗಳನ್ನು ಅದರೊಳಕ್ಕೆ ನುಗ್ಗಿಸುತ್ತಿದ್ದೆವು.
ಇಂಥ ಆಚೆ ಬಾರೆಯಲ್ಲಿ ಕೆಲವೊಮ್ಮೆ ದನಕರುಗಳನ್ನು ಚಿರತೆಗಳು ಹಿಡಿದು ತಿಂದುಬಿಡುತ್ತಿದ್ದವು. ನಮಗಾಗ ಅಂಥ ಚಿರತೆಗಳ ಭಯ ಒಳಗೊಳಗೆ ಇದ್ದರೂ ಅಲ್ಲಿರುತ್ತಿದ್ದ ಮಾವಿನ ಹಣ್ಣುಗಳ ಕಾಲದಲ್ಲಿ ಮಾವಿನ ಹಣ್ಣುಗಳು, ನೇರಲೆ ಹಣ್ಣಿ ಕಾಲದಲ್ಲಿ ನೇರಳೆ ಹಣ್ಣುಗಳು ನಮ್ಮ ಆ ಭಯವನ್ನು ಹಂಗೇ ಅದುಮಿಡುತ್ತಿದ್ದವು. ಇನ್ನು ಕಾರೆ ಹಣ್ಣಿನ ಕಾಲದಲ್ಲಿ ಅಲ್ಲಿದ್ದ ಅಸಂಖ್ಯ ಕಾರೆ ಗುತ್ತಿಗಳಲ್ಲಿನ ಕಾರೆ ಕೆಂಗುಗಳು, ಬಿಕ್ಕೆ ಹಣ್ಣುಗಳು ಇನ್ನಿತರ ಆಕರ್ಷಣೆಗಳಾಗಿದ್ದವು.
ಇದರ ಜತೆಗೆ ಅಲ್ಲಿ ನಮ್ಮಂಥವರಿಗೆ ಮತ್ತೊಂದು ಸೆಳೆತವಿತ್ತು. ಅದೆಂದರೆ ಗೋಡ್ಗಲ್ಲು. ಇದನ್ನು ಕೋಡ್ಗಲ್ಲು ಅಥವಾ ಗ್ವಾಡ್ಗಲ್ಲು ಅಂತಲೂ ಕರೆಯುತ್ತಿದ್ದರು. ಸಾವಿರರು ವರ್ಷಗಳ ಹಿಂದೆ ಸ್ವಾಭಾವಿಕವಾಗಿ ನೆಲದ ಒಡಲಿಂದ ಒಡಮೂಡಿರುವ ಇದವೀಗಲೂ ಹಂಗೇ ಇದೆ. ಸುಮಾರು ಎರಡಾಳು ಎತ್ತರಕ್ಕಿರುವ ಇದು ದೂರದಿಂದ ನೋಡಿದರೆ ಕೊಂಬಿನAತೆಯೂ ಪಕ್ಕದಲ್ಲಿ ನಿಂತು ನೋಡಿದರೆ ದಪ್ಪದೊಂದು ಗೋಡೆಯಂತೆಯೂ ಕಾಣುತ್ತದೆ. ಅಂತೆಯೇ ಒಂದೆರಡು ಮಾರಿನಷ್ಟು ಹರವಾಗಿದ್ದು ನೆಲದತ್ತ ಅರೆ ಬಾಗಿದೆ. ನಾವು ಆಚೆ ಬಾರೆಗೆ ಹೋದಾಗಲೇಲ್ಲಾ ಈ ಕೋಡ್ಗಲ್ಲನ್ನು ಹತ್ತದೇ ಬರುತ್ತಿರಲಿಲ್ಲ. ಇದನ್ನು ಹತ್ತಿ ಸುತ್ತಲೂ ಕಣ್ಣಾಡಿಸಿದರೆ ಇಡೀ ಕಾಡು, ಆ ಕಾಡ ತಡಿಯಲ್ಲಿದ್ದ ಹಚ್ಚ ಹಸಿರಿನ ಪುಟ್ಟ ಗುಡ್ಡಗಳು ಮತ್ತು ಸಿದ್ದಪ್ಪನ ಕೆರೆ ಮತ್ತೊಂದು ತೆರನಾಗಿ ಕಾಣುತ್ತಿದ್ದವು. ಅಂತೆಯೇ ಅದರ ತುದಿಯಿಂದ ಅಕಸ್ಮಾತ್ ಏನಾದರೂ ಜಾರಿ ಬಿದ್ದರೆ ಯಾರೊಬ್ಬರೂ ಬಡಪಟ್ಟಿಗೆ ಬದುಕುಳಿಯಲು ಸಾಧ್ಯವೇ ಇಲ್ಲ. ಯಾಕೆಂದರೆ ಅಲ್ಲಿಂದ ಸೀದಾ ಬೀಳುವುದು ಅಸಾಧ್ಯ ಕಲ್ಲು ಮುಳ್ಳುಗಳಿಂದ ತುಂಬಿರುವ ಕೊರಕಲೊಳಕ್ಕೆ. ಹಂಗಾಗಿ ನಾವು ಆ ಗೋಡ್ಗಲ್ಲನ್ನು ಹತ್ತುತ್ತಿದ್ದ ವಿಚಾರ ಅಪ್ಪಿತಪ್ಪಿ ಮನೆಯವರಿಗೆ ಗೊತ್ತಾಗಿದ್ದೇ ಆದರೆ ಆಗ ನಮಗೆ ಸರಿಯಾಗಿ ಪೂಜೆಯಾಗುತ್ತಿತ್ತು. ಮಳೆಗಾಲದಲ್ಲಿ ಇದನ್ನು ಹತ್ತುವುದು ಒಂದು ಸಾಹಸದ ಮಾತಾಗಿತ್ತು. ಯಾಕೆಂದರೆ ಆಗ ಅದರ ಮೈ ತುಂಬಾ ಪಾಚಿ ಕಟ್ಟಿಕಂಡು ನುಣುಪಾಗಿಬಿಡುತ್ತಿತ್ತು. ಎಷ್ಟೇ ಹುಷಾರಾಗಿ ಹತ್ತಿದರೂ ಸರ್ರನೆ ಜಾರಿಬಿಡುತ್ತಿತ್ತು. ಇಂಥದ್ದನ್ನು ಒಂಚೂರೂ ತ್ರಾಸಿಲ್ಲದೆ ಹತ್ತುದ್ದಿದ್ದವರೆಂದರೆ ಆಗ ಕೆರೆಯ ಸಿದ್ದಪ್ಪನ ಗುಡಿಯ ಪೂಜಾರಿಯಾಗಿದ್ದ ಕರಿಸಿದ್ದಯ್ಯನವರು. ಅವರನ್ನು ನೋಡಿಯೇ ನಾವು ಮೊದಲು ಆ ಗೋಡ್ಗಲ್ಲನ್ನು ಹತ್ತುವ ಯತ್ನ ಮಾಡಿದ್ದು. ಬಾಲ್ಯದಲ್ಲಿ ಇದನ್ನು ಹತ್ತಲು ಮನಸ್ಸು ಮಾಡದ, ಹತ್ತಿ ಅದರಿಂದ ಜಾರಿ ಬೀಳದ ಯಾವನಾರಾ ಹುಡುಗ ಇದ್ದರೆ ಅವನಂಥ ಪೆಕರ ಮತ್ತೊಬ್ಬ ಇಲ್ಲ ಅಂಬೋದು ನನ್ನ ವಾರಿಗೆಯವರ ಅಂಬೋಣವಾಗಿತ್ತು.

ದನಗಳನ್ನು ಆಚೆ ಬಾರೆಗೆ ಹೊಡಕಂಡು ಹೋದ ಹೊತ್ತಲ್ಲಿ ಈ ಗೋಡ್ಗಲ್ಲಿನ ಬಳಿ ಹೋಗದೇ ಬರುತ್ತಿರಲಿಲ್ಲ. ಅತ್ತ ಹೋಗಿ ಒಂದೆರಡು ಸಾರ್ತಿ ಅದರ ಮೇಲತ್ತಿ ಮೆಲ್ಲಗೆ ಜಾರಿ ರವಷ್ಟೊತ್ತು ಅದರ ತಡಿಯಲ್ಲಿ ಕೂರುತ್ತಿದ್ದೆವು. ಅಷ್ಟೊತ್ತಿಗೆ ಸಾಮಾನ್ಯವಾಗಿ ಮಧ್ಯಾಹ್ನವಾಗಿಬಿಡುತ್ತಿತ್ತು. ಹಂಗಾಗಿ ವಲ್ಲಿಗಳಲ್ಲಿ ಕಟ್ಟಿಕಂಡು ಬಂದಿರುತ್ತಿದ್ದ ತಿಂಡಿಗಳನ್ನು ತಿನ್ನುತ್ತಿದ್ದೆವು. ಅಷ್ಟೊತ್ತಿಗೆ ದನಗಳು ಚೆನ್ನಾಗಿ ಮೇವಿಗೆ ಕಚ್ಚಿಕೊಂಡಿರುತ್ತಿದ್ದವು. ಯಾಕೆಂದರೆ ಆಚೆ ಬಾರೆಯಲ್ಲಿ ಯಾವಾಗಲೂ ಒಳ್ಳೆಯ ಮೇವಿರುತ್ತಿತ್ತು. ಆಮೇಲೆ ದನಗಳ ಪಾಡಿಗೆ ದನಗಳನ್ನು ಬಿಟ್ಟು ಅಲ್ಲಿಂದ ಎದ್ದವರೇ ಸೀದಾ ಸಿದ್ದಪ್ಪನ ಕೆರೆಗೆ ಈಜು ಬೀಳಲು ಹೋಗುತ್ತಿದ್ದೆವು.
ಈ ಗೋಡ್ಗಲ್ಲಿನಂತೆ ನನಗೆ ಮತ್ತೊಂದು ಇಷ್ಟದ ಜಾಗವಿದೆ. ಅದು ನಮ್ಮ ಬಾಳನಕಟ್ಟೆ ಹೊಲ ಅಂತ ಕರೆಯುತ್ತಿದ್ದ ಹೊಲದ ಹತ್ತಿರದಲ್ಲಿದೆ. ಇದನ್ನು ಕೂನ್ಗಲ್ಲಿನ ಮಲ್ಟಿ ಅಂತ ಕರೆಯಲಾಗುತ್ತೆ. ಬಾರೆಗೆ ಹೋಗಲಾಗದ ದಿನ ಅಥವಾ ಎಮ್ಮೆಗಳನ್ನು ಮೇಸಬೇಕಾಗಿ ಬಂದಂಥ ದಿನಗಳಲ್ಲಿ ಈ ಕೂನ್ಗಲ್ಲಿನ ಮಲ್ಟಿಗೆ ಹೋಗುತ್ತಿದ್ದೆವು. ಯಾಕೆಂದರೆ ಎಮ್ಮೆಗಳನ್ನು ಬಾರೆಯವರೆಗೂ ನಡೆಸಿಕಂಡು ಹೋಗಲು ಕಷ್ಟವಾಗುತ್ತಿತ್ತು. ಒಂಚೂರು ವಾರಾಸಿಗೆ ನಿಂತು ನೋಡಿದರೆ ಈ ಕೂನ್ಗಲ್ಲುಗಳು ಚಿತ್ರಕಾರನೊಬ್ಬ ಬಿಡಿಸಿದ ಹಲವು ಬಗೆಯ ಎತ್ತರದ ಚಿತ್ರಗಳಂತೆ ಕಾಣುತ್ತವೆ. ಇವುಗಳಲ್ಲಿ ಕೆಲವು ಆಳೆತ್ತರಕ್ಕಿವೆ. ಕೆಲವು ಸೊಂಟದೆತ್ತರಕ್ಕಿವೆ. ಮತ್ತೊಂದಷ್ಟು ಮಂಡಿ ಎತ್ತರಕ್ಕಿದ್ದು ಎಲ್ಲವೂ ತಡೆ ಗೋಡೆಗಳಂತೆ ಗುಪ್ಪಗೆ ಕೆಲವು ನೆಟ್ಟಗೆ ನಿಂತಿವೆ. ಬಹುತೇಕ ಕಲ್ಲುಗಳು ಅರೆ ಬಾಗಿವೆ. ಹಂಗಾಗಿ ಇವುಗಳಿಗೆ ಕೂನ್ಗಲ್ಲು ಅಂತ ಹೆಸರು ಬಂದಿದೆ. ಇವುಗಳ ನಡುವೆ ಜನ ಜಾನುವಾರುಗಳು ಓಡಾಡುವಷ್ಟು ಸಂಧಿಯಿದೆ. ಈ ಓಣಿಗಳಲ್ಲಿ ಓಡಾಡುತ್ತಾ ನಾವು ಥರಾವರಿ ಆಟ ಆಡುತ್ತಿದ್ದೆವು. ದಣಿವಾಗುತ್ತಲೇ ಆ ಮಲ್ಟಿಯಿಂದ ಕೆಳಗಿಳಿದು ಬಂದು `ತೊಟ್ಳು ಗುಂಡಿ’ಯಲ್ಲಿ ನೀರು ಕುಡಿಯುತ್ತಿದ್ದೆವು. ಅದೊಂದು ನೀರಿನ ದಾರಿಯಲ್ಲಿ ಪುಟ್ಟ ಬಂಡೆಯ ಹಾಸಿನಲ್ಲಿ ನೈಸರ್ಗಿಕವಾಗಿ ತೊಟ್ಟಿಲಿನ ಆಕಾರದಲ್ಲಿ ಆಗಿರುವ ಗುಂಡಿ. ಅಲ್ಲಿ ಆ ಗುಂಡಿಯಲ್ಲಿ ಆಗ ಸತೊಂಭತ್ತು ಕಾಲವೂ ನೀರಿರುತ್ತಿತ್ತು. ಆ ನೀರು ತಳ ಕಾಣುವಂತೆ ಸದಾ ತಿಳಿಯಾಗಿರುತ್ತಿತ್ತು. ಈ ಗೋಡ್ಗಲ್ಲು ಮತ್ತು ಈ ಕೂನ್ಗಲ್ಲುಗಲ್ಲುಗಳು ನನ್ನಂಥವರೊಳಗೆ ಅಸಂಖ್ಯ ನೆನಪುಗಳನ್ನು ಜೀವಂತವಾಗಿಸಿವೆ. ಎಷ್ಟು ಅಂದರೆ ಒಂದನ್ನು ಬಿಟ್ಟು ಒಂದು ನೆನಪಾಗದಷ್ಟು.
ಈಜಿನ ಆಟ
ಅವತ್ತು ನಾವು ನಾಲ್ವರು ಗೆಳೆಯರು ಎಂದಿಗಿಂತ ಒಂದು ಸ್ವಲ್ಪ ಮುಂಚೇನೇ ದನಗಳನ್ನು ಬಿಟ್ಟುಕಂಡು ಆಚೆ ಬಾರೆ ತಲುಪಿದ್ದೆವು. ಬೆಳಗಿನಿಂದಲೂ ಒಂಥರಾ ಗೂಡ್ರು ಕವುಕಂಡಿತ್ತು. ಆಚೆ ಬಾರೆ ತಲುಪಿದರೂ ಇನ್ನೂ ಬಿಸಿಲು ಹತ್ತುವುದರಲ್ಲಿತ್ತು. ಹಂಗಾಗಿ ನಮ್ಮ ನಿತ್ಯದ ಈಜಾಟವನ್ನು ಕೊಂಚ ಮುಂದಕ್ಕಾಕಿ ಬಿಕ್ಕೆ ಕಾಯಿಗಳನ್ನು ಹುಡುಕಿ ಕಿತ್ತು ತಂದು ತಿನ್ನುತ್ತಾ ಗೋಡ್ಗಲ್ಲಿನ ಬಳಿ ಕೂತೆವು. ದನಗಳು ತಮ್ಮಷ್ಟಕ್ಕೆ ತಾವು ಹಳ್ಳಕೊಳ್ಳಗಳಲ್ಲಿ, ಮರಗಿಡಗಳ ಬುಡಗಳಲ್ಲಿ ಬೆಳೆದಿದ್ದ ಎಳೆಯ ಹುಲ್ಲನ್ನು ಎಟಕಿಸಿಕಂಡು ಮೇಯತೊಡಗಿದ್ದವು. ಆ ವೇಳೆಗೆ ಆವರೆವಿಗೂ ಕೂಕಾಟ ಆಡುತ್ತಿದ್ದ ಸೂರ್ಯ ಮೆಲ್ಲಗೆ ಮುಖ ತೋರಿಸತೊಡಗಿದ್ದ. ಸೂರ್ಯನನ್ನು ಕಾಣುತ್ತಲೇ ನಮ್ಮ ಈಜುವ ಉಮೇದು ದೀಡಾಗತೊಡಗಿತು. ಮಧ್ಯಾಹ್ನವಾಗುತ್ತಾ ಬಂದಿತ್ತು. ಇನ್ನು ಈಜಿಗೆ ಬಿದ್ದರೆ ಮತ್ತೆ ಅದರಿಂದ ಆಚೆ ಬರುವುದು ಸಂಜೆಗೇ ಅಂತ ಗೊತ್ತಿದ್ದರಿಂದ ವಲ್ಲಿ ಗಂಟುಗಳಲ್ಲಿದ್ದ ರೊಟ್ಟಿಗಳನ್ನು ತಿಂದು ಈಜಿಗೆ ಬೀಳುವುದು ಅಂತ ತೀರ್ಮಾನಿಸಿ ಗಂಟು ಬಿಚ್ಚಿಕೊಂಡೆವು. ಇನ್ನೇನು ರೊಟ್ಟಿಗಳು ಮುಗಿಯುತ್ತಾ ಬಂದವು ಅನ್ನುವಷ್ಟರಲ್ಲಿ ಗೋಡ್ಗಲ್ಲಿನ ಹಿಂಬದಿಯಿAದ ಗುರುಗುಡುವ ಸದ್ದು ಕಿವಿಗೆ ಬೀಳತೊಡಗಿತು. ಚಣ ಕಳೆದಂತೆ ಈ ಗುರುಗುಡುವಿಕೆ ಗುಟುರಿಗೆ ತಿರುಗಿಕೊಂಡಿತು. ಆಗ ಇದು ಯಾವುದೋ ಪ್ರಾಣಿಯದೇ ಸದ್ದು ಅನ್ನುವುದು ನಮಗೆಲ್ಲಾ ಖಾತ್ರಿಯಾಯ್ತು. ಹಂಗಾಗಿ ತಿನ್ನುವುದನ್ನು ಅಷ್ಟಕ್ಕೇ ನಿಲ್ಲಿಸಿ ಮಿಕ್ಕ ರೊಟ್ಟಿಗಳನ್ನು ಮತ್ತೆ ಗಂಟಿಗೇ ಸೇರಿಸಿ ಏನಾದರೂ ಆಪತ್ತು ಬಂತು ಅಂದರೆ ಎದ್ದು ಓಟ ಕೀಳುವುದಕ್ಕಾಗಿ ತಯಾರಾದೆವು. ಆ ವೇಳೆಗೆ ಆ ಗುಟುರು ಸದ್ದು ಪೂರಾ ನಿಂತೇ ಹೋಯ್ತು. ಆದರೂ ತೇಲ ಅನ್ನುವ ನನ್ನ ಗೆಳೆಯನೊಬ್ಬ ಹೆಂಗಾದರೂ ಆಗಲೆ ಅಂತ ಎದ್ದವನೇ ಮೆಲ್ಲನೆಯ ಹೆಜ್ಜೆಗಳನ್ನಿಟ್ಟುಕಂಡು ಗೋಡ್ಗಲ್ಲಿನ ಹಿಂಬದಿಗೆ ಇಣುಕು ಹಾಕಿದ. ಹಂಗೇ ಇಣುಕು ಹಾಕುತ್ತಲೇ ಹೌಹಾರಿದವನೇ `ಎಲಾ ಎದ್ದಾಳ್ರುಲಾ ಕಲ್ಡಿ ನಿಂತೈತೆ ಹಿಂದ್ಗಡೇಲಿ’ ಅನ್ನುತ್ತಾ ನಮಗಾಗಿ ಕಾಯದೆ ಕಾಲ್ದಾರಿಯನ್ನಿಡಿದು ಕೆರೆಯತ್ತ ಓಡಿದ. ಮಿಕ್ಕ ನಾವುಗಳೂ ಬುದೂರನೆ ಎದ್ದು ಅಲ್ಲಿಗೆ ತಲುಪುವ ಹೊತ್ತಿಗೆ ಉಸಿರು ಕಟ್ಟಿದಂತಾಗಿ ಕೆರೆಯ ಅಂಗಳದ ಹುಲ್ಲು ಹಾಸಿನಲ್ಲಿ ಕೂತು ಗೋಡ್ಗಲ್ಲಿನತ್ತಲೇ ಕಣ್ಣು ನೆಟ್ಟು ಉಸಿರು ತಿರುಗಿಸಿಕೊಳ್ಳತೊಡಗಿದೆವು. ಅವತ್ತಿನಿಂದ ನಾವು ಗೊಡ್ಗಲ್ಲೆಡೆಗೆ ಪಾದ ಬೆಳಸಿದಾಗಲೆಲ್ಲಾ ಗೋಡ್ಗಲ್ಲಿನ ಹಿಂಭಾಗಕ್ಕೊಮ್ಮೆ ಕಣ್ಣಾಡಿಸದೇ ಕೂರುತ್ತಿರಲಿಲ್ಲ.
ಒಂದಷ್ಟೊತ್ತು ಕಳೆದ ಮೇಲೆ ಮಿಕ್ಕ ರೊಟ್ಟಿಗಳನ್ನು ತಿಂದು ಈಜಾಡುವ ಸಲುವಾಗಿ ಕೆರೆಯ ಏರಿಯತ್ತ ಹೋದೆವು. ಬಿಸಿಲಿನ ಕಾವು ಏರತೊಡಗಿತ್ತು. ನಾವಲ್ಲಿ ಹೋಗುವ ಹೊತ್ತಿಗಾಗಲೇ ಬೇರೆ ಹಳ್ಳಿಯ ಹುಡುಗರು ಈಜು ಹೊಡೆಯುತ್ತಿದ್ದರು. ಈ ಸಿದ್ದಪ್ಪ ದೇವರ ಕೆರೆಯ ಏರಿಯ ಹಿಂಬದಿಗೊಂದು ದೊಡ್ಡದೊಂದು ಆಲದ ಮರವಿದೆ. ಈ ಮರದ ಒಂದು ಕೊಂಗೆ ಏರಿಯ ಮೇಲಾಸಿ ಅನಾಮತ್ತಾಗಿ ಕೆರೆಯೊಳಕ್ಕೆ ಬಾಗಿದೆ. ಚೆನ್ನಾಗಿ ಈಜು ಬರುವವರು ಅಥವಾ ಬರದಿದ್ದರೂ ಭಂಡ ಧೈರ್ಯವಿದ್ದವರು ಆ ಕೊಂಬೆಯ ಮೇಲಿಂದ ಕೂತುಕಂಡೋ ಇಲ್ಲಾ ತೆವಳಿಕಂಡೋ ಅದರ ತುದಿಗಂಟ ಹೋಗಿ ಅಲ್ಲಿಂದ ಕೆರೆಯೊಳಕ್ಕೆ ಧುಮುಕುತ್ತಿದ್ದರು. ನನ್ನ ಗುಂಪಿನಲ್ಲಿ ತೇಲನನ್ನು ಬಿಟ್ಟರೆ ಎಲ್ಲರಿಗೂ ತಕ್ಕ ಮಟ್ಟಿಗೆ ಈಜು ಬರುತ್ತಿತ್ತು. ಹಂಗಾಗಿ ನಾವು ಕೊಂಗೆಯ ಮೇಲಿಂದ ಕೆರೆಗೆ ಧುಮುಕುತ್ತಿದ್ದೆವು. ಕೆರೆಯ ದಡದಲ್ಲಿ ಯಾವಾಗಲೂ ನೀರು ಎರಡಾಳಿನಷ್ಟು ಆಳಕ್ಕಿರುತ್ತಿತ್ತು. ನೀರಿಗೆ ಬಿದ್ದವರೇ ಈಜಿಕಂಡು ಹೋಗಿ ಏರಿಯನ್ನು ಹತ್ತಿದವರೇ ಮತ್ಮತ್ತೆ ಈಜು ಬೀಳುತ್ತಿದ್ದೆವು. ಇದು ಒಮ್ಮೆ ಶುರುವಾಯ್ತು ಅಂದರೆ ಸಂಜೆಗಂಟ ನಡೆಯುತ್ತಿತ್ತು. ಆಗೆಲ್ಲಾ ನಾವು ಪೂರಾ ಬಟ್ಟೆಗಳನ್ನಷ್ಟೇ ಅಲ್ಲದೆ ಉಡುದಾರಗಳನ್ನೂ ಬಿಚ್ಚಿ ಬುಳ್ಳಗೆ ನೆಗೆಯುತ್ತಿದ್ದೆವು. ಆಗ ನಮಗೆಲ್ಲಾ ನಾಚಿಕೆ ಅನ್ನುವುದು ಊರಾಚೆ ಇತ್ತು. ಮೊದಮೊದಲು ಬಟ್ಟೆಗಳನ್ನು ಬಿಚ್ಚಿಟ್ಟು ಈಜಿಗಿಳಿಯುತ್ತಿದ್ದ ನಾವು ಮನೆಯವರು ಎಷ್ಟು ಕೇಳಿದರೂ ನಾವು ಈಜಾಡಲು ಹೋಗಿಲ್ಲ ಅಂತಾನೇ ಹೇಳುತ್ತಿದ್ದೆವು. ನಮ್ಮ ಉಡುದಾರಗಳು ನಮ್ಮ ಸುಳ್ಳುಗಳನ್ನು ಎತ್ತಿ ತೋರಿಸುತ್ತಿದ್ದವು. ಒಮ್ಮೆ ಒದ್ದೆಯಾದ ಉಡುದಾರ ಒಣಗಲು ಗಂಟೆಗಳೇ ಬೇಕಾಗುತ್ತಿತ್ತು. ಸಾಲದ್ದಕ್ಕೆ ನಮ್ಮ ಈಜು ಮುಗಿಯುತ್ತಿದ್ದದ್ದೇ ಸಂಜೆಯ ಹೊತ್ತಿಗೆ. ಹಂಗಾಗಿ ಅವು ಒಣಗುವ ಮಾತೇ ಇರಲಿಲ್ಲ. ಯಾವಾಗ ಒಂದೆರಡು ಸಾರ್ತಿ ಈ ಉಡುದಾರಗಳ ಮಹಿಮೆಯಿಂದ ಗೂಸಾ ಬಿದ್ದವೋ ಎಚ್ಚೆತ್ತುಕಂಡ ನಾವು ಅವುಗಳನ್ನು ಬಿಚ್ಚಿಡತೊಡಗಿದ್ದೆವು. ನಮ್ಮ ಈ ಪರಿಪಾಠವನ್ನು ಕಂಡ ಅಲ್ಲಿರುತ್ತಿದ್ದ ಇತರೆ ಹಳ್ಳಿಗಳ ಹಿರೀಕರು `ಹಂಗೆಲ್ಲಾ ಉಡ್ದಾರ್ಗಳ್ನ ಬಿಚಿಡ್ಬಾರ್ದು. ಸೊಂಟ್ದಾಗೆ ಉಡ್ದಾರ್ಗುಳು ಇಲ್ಲಾಂದ್ರೆ ಗೋದೊಳ್ಡುಗಳಾಗ್ತವೇ ತಿಳ್ಕಳ್ರಿ’ ಅಂತ ಹೆದರಿಸುತ್ತಿದ್ದರು. ಆ ಗೋದೊಳ್ಡು ಅಂದರೆ ಏನೂಂತ ನಮಗೆ ಗೊತ್ತಿರದ ಪ್ರಯುಕ್ತ ಅವರ ಮಾತುಗಳಿಗೆ ಕಿಮ್ಮತ್ತು ಕೊಡುತ್ತಿರಲಿಲ್ಲ. ಹಿಂಗೆ ಕೆರೆಯ ಮೇಲೆ ಬಾಗಿದ್ದ ಕೊಂಗೆಯಲ್ಲಿ ಕೈಗೆಟಕುವಂತೆ ಕೆಲವು ಬಿಳಲುಗಳು ಇಳಿಬಿದ್ದಿದ್ದವು. ಈಜು ಬರದವರು ಈ ಬಿಳಲುಗಳನ್ನು ನೆಟಕಿಸಿಕಂಡು ತೂಗುಯ್ಯಾಲೆ ಆಟ ಆಡುತ್ತಿದ್ದರು. ಒಬ್ಬ ಬಿಳಲನ್ನು ಬಿಗಿಯಾಗಿ ಹಿಡಿದು ನಿಂತರೆ ಮತ್ತೊಬ್ಬ ಅವನ ಸೊಂಟವನ್ನು ಹಿಡುಕಂಡು ಅವನನ್ನು ಕೊಂಚ ಹಿಂದಕ್ಕೆ ಎಳಕಂಡು ತೂಗಿ ಬಿಡುತ್ತಿದ್ದ. ಆಗ ಆ ಬಿಳಲು ಕೆರೆಯೊಳಕ್ಕೆ ಒಂದಷ್ಟು ದೂರ ಹೋಗಿ ತಿರುಗಿ ಬರುತ್ತಿತ್ತು. ಅದು ಸರತಿಯಂತೆ ಪುನರಾವರ್ತನೆಯಾಗುತ್ತಿತ್ತು. ಒಮ್ಮೆ ತೇಲ ಹಿಂಗೆ ಬಿಳಲನ್ನು ಹಿಡುಕಂಡು ತೂಗಬೇಕಾದರೆ ಕೆರೆಯೊಳಕ್ಕೆ ಹೋದ ಆ ಬಿಳಲು ಇನ್ನೇನು ತಿರುಗಿ ಬರಬೇಕು ಅನ್ನುವಷ್ಟರಲ್ಲಿ ಹರುಕಂಡು ತೇಲನ ಸಮೇತ ಕೆರೆಯೊಳಕ್ಕೆ ಬಿದ್ದುಬಿಟ್ಟಿತ್ತು. ಆಗ ಅಲ್ಲೇ ದಡದಲ್ಲಿ ಕುರಿಗಳನ್ನು ಬಿಟ್ಟುಕಂಡಿದ್ದ ಪಕ್ಕದ ಹಳ್ಳಿಯವರೊಬ್ಬರು ಬಂದು ಅವನನ್ನು ಮೇಲಕ್ಕೆ ಎಳಕಂಡು ನಮಗೆಲ್ಲಾ ಆಗುವಷ್ಟು ಮಂಗಳಾರತಿ ಮಾಡಿದ್ದರು. ಅವತ್ತಿನಿಂದ ತೇಲ ಮತ್ತೆ ಬಿಳಲುಗಳ ಸಾವಾಸಕ್ಕೆ ಹೋಗಲಿಲ್ಲ. ಆದರೆ ನಮ್ಮ ಈಜಿಗೆ ಯಾವ ಧಕ್ಕೆಯೂ ಬರಲಿಲ್ಲ.
ಗಂಧದ ಮುಲ್ಟು
ನಾವು ದನ ಕಾಯಲು ಹೋದೆವೆಂದರೆ ನಮ್ಮೆಲ್ಲಾ ಆಟಗಳ ನಡುವೆ ಮನೆಗೆ ಬರುವಾಗ ತಲೆಯ ಮೇಲೊಂದು ಸೌದೆ ಹೊರೆ ಸಾಮಾನ್ಯವಾಗಿ ಇರುತ್ತಿತ್ತು. ಈ ಸೌದೆಗಳನ್ನು ನಾವು ಅಲ್ಲಿ ಇಲ್ಲಿ ಬಿದ್ದಿರುತ್ತಿದ್ದ ಪುಳ್ಳೆಗಳನ್ನು ಆಯ್ದು ಕಟ್ಟಿಕಂಡು ಬರುತ್ತಿರಲಿಲ್ಲ. ಬದಲಿಗೆ ಸುಲಭಕ್ಕೆ ಬರುತ್ತಿದ್ದ ಸಣ್ಣ ಪುಟ್ಟ ಗಿಡಗಳನ್ನು ಬೇರು ಸಮೇತ ಎಬ್ಬಿಕೊಳ್ಳುತ್ತಿದ್ದೆವು. ಇಲ್ಲಾ ಸತ್ತ ಮರಗಳ ಮರದ ಬಡಗಳ ಮುಲ್ಟುಗಳನ್ನು ಬಗೆ ಮಾಡಿ ಕಿತ್ತುಕೊಳ್ಳುತ್ತಿದ್ದವು. ಸಂಜೆಯ ಹೊತ್ತಿಗೆ ನಂನಮ್ಮ ಹೊರೆಗಳು ಸಿದ್ಧವಿರುತ್ತಿದ್ದವು. ಇವುಗಳ ಜತೆಗೆ ನಾವು ಖಾಯಸ್ಸಾಗಿ ಹುಡುಕುತ್ತಿದ್ದದ್ದು ಗಂಧದ ಮುಲ್ಟುಗಳನ್ನು. ಆ ಮುಲ್ಟುಗಳಿರುವ ಜಾಗ ಸಿಕ್ಕಿದರೆ ಸಾಕು ಯಾವುದೇ ಕಾರಣಕ್ಕೂ ಅದಕ್ಕೆ ಒಂದು ಗತಿ ಕಾಣಿಸದೇ ಬಿಡುತ್ತಿರಲಿಲ್ಲ. ಅವುಗಳಿಗಾಗಿಯೇ ಅದೆಷ್ಟೋ ಸಾರ್ತಿ ನಾವು ಆಚೆ ಬಾರೆಯಲ್ಲಿ ಸಿದುಕ ಬಾರದೆಡೆಯಲ್ಲೆಲ್ಲಾ ಸಿದುಕುತ್ತಿದ್ದೆವು. ಕೆಲವೊಮ್ಮೆ ಸಿಗುತ್ತಿದ್ದವು. ನಾವು ಚಿಕ್ಕವರಿದ್ದಾಗ ನನ್ನ ಹಳ್ಳಿಯ ಹಳೆಯ ತಲೆಮಾರಿನವರು ಹೇಳುತ್ತಿದ್ದರು-ಸಿದ್ದಪ್ಪ ದೇವರ ಕೆರೆಯ ಭಾಗದಲ್ಲಿ ಕಮರ, ತ್ಯಾಗ ಮುಂತಾದ ಮರಗಳ ಜತೆಗೆ ಒಂದಾಳು ಅವುಚಲು ಸಾಧ್ಯವಾಗದಂಥ ಅಪಾರ ಶ್ರೀಗಂಧದ ಮರಗಳಿದ್ದವಂತೆ. ನಾವು ಕಾಡು ಸುತ್ತುವಂತಾಗುವ ಕಾಲಕ್ಕೆ ಗಂಧದ ಮರಗಳು ಪೂರಾ ಕಣ್ಮರೆಯಾಗಿ ಹೋಗಿದ್ದವು. ಹೋಗಿದ್ದವು ಅನ್ನುವುದಕ್ಕಿಂತ ಕಾಡುಗಳ್ಳರು ಬಡಿದು ಬಾಯಿಗೆ ಹಾಕ್ಕಂಡಿದ್ದರು. ಇನ್ನು ಅಲ್ಲೊಂದು ಇಲ್ಲೊಂದು ಇದ್ದ ಕಮರ ಮತ್ತು ಕಾಡು ತ್ಯಾಗದ ಮರಗಳೂ ದಿನಪತ್ತಿನ ಮೇಲೆ ಮರೆಯಾಗಿ ಹೋಗಿದ್ದವು. ನಮ್ಮೂರಿನ ಕೆಲವು ಮನೆಗಳಲ್ಲಿ ಕದ್ದು ಕಡಿದು ತಂದು ಇಟ್ಟುಕಂಡಿದ್ದ ಗಂಧದ ತುಂಡುಗಳನ್ನು ನೋಡಿದ್ದೆ. ಪೂಜೆ ಮಾಡುವಾಗ ಗಂಧದ ತುಂಡುಗಳನ್ನು ತೇದು ಅವುಗಳ ಘಮಲಿನ ರಸವನ್ನು ವೀಭೂತಿಯಂತೆ ದೇವರ ಪಟಗಳಿಗೆ ಇಡುವುದು ಹಣೆಗಳಿಗೆ ಬೀಕೊಳ್ಳುವುದು ಈಗಲೂ ರೂಢಿಯಿದೆ. ಚಿಕ್ಕವನಿದ್ದಾಗ ಊರಿನಲ್ಲಿ ಕಾರಬ್ಬ, ಮಾರ್ನವಮಿ ಹಬ್ಬ ಮುಂತಾದ ಹಬ್ಬಗಳಲ್ಲಿ ಗಂಧದ ಮುಲ್ಟುಗಳಿಂದ ಅಡಿಗೆ ಮಾಡುತ್ತಿದ್ದರು. ಆಗ ಊರಿಗೇ ಊರೇ ಗಂಧದ ಘಮಲಿನಲ್ಲಿ ತೇಲಾಡುತ್ತಿತ್ತು. ಎಷ್ಟೋ ಸಾರ್ತಿ ನಾನು ಮತ್ತು ನಮ್ಮ ಮನೆಯಲ್ಲಿದ್ದ ಮೂರ್ತಿ ಅವರೆಕಾಯಿಯ ಹೊಲವನ್ನು ಕಾಯಲು ಹೋಗುವಾಗ ಈ ಗಂಧದ ಮುಲ್ಟುಗಳನ್ನು ತಗಂಡು ಹೋಗಿ ಅವುಗಳಿಂದ ಬೆಂಕಿ ಹಚ್ಚಿ ಚಳಿಗೆ ಬೆಂಕಿ ಕಾಯಿಸಿಕೊಳ್ಳುತ್ತಿದ್ದೆವು. ಇದನ್ನು ಬಹುತೇಕ ನನ್ನ ವಾರಿಗೆಯವರೂ ಮಾಡುತ್ತಿದ್ದರು. ಆಗ ಅವರೆಕಾಯಿಯ ಸೊಗಡಿನ ಘಮಲಿನ ಜತೆಗೆ ಗಂಧದ ಘಮಲು ಕೂಡಾಡಿ ಸುತ್ತಲ ಒಂದಷ್ಟು ಹೊಲಗಳನ್ನು ಆ ಘಮಲಿನಲ್ಲಿ ಮುಳುಗಿಸುತ್ತಿದ್ದವು.

ನಮಗೆ ಗಂಧದ ಮುಲ್ಟುಗಳು ಸಿಕ್ಕ ದಿನ ಖುಷಿಯೋ ಖುಷಿಯಾಗುತ್ತಿತ್ತು. ಕೆಲವು ಸಾರ್ತಿ ಬುಡಗಳು ದಪ್ಪಗಿದ್ದು ಕೈಯ್ಯಲ್ಲಿ ಕೀಳಲಾಗದಷ್ಟು ಸತಾಯಿಸುತ್ತಿದ್ದವು. ಆಗ ಆ ಬುಡವನ್ನು ಯಾರಿಗೂ ಕಾಣದಂತೆ ಸೊಪ್ಪುಸೆದೆಗಳಿಂದ ಮುಚ್ಚಿ ಬರುತ್ತಿದ್ದೆವು. ಮಾರನೆಯ ದಿನ ಆರೆ ಇಲ್ಲವೇ ಪಿಕಾಸಿಗಳನ್ನು ಮನೆಗಳಿಂದ ಕದ್ದು ತಗಂಡು ಹೋಗಿ ಅದನ್ನು ಬಗೆದು ಮುಲ್ಟುಗಳನ್ನು ಬಿಡಿಸಿಕೊಳ್ಳುತ್ತಿದ್ದೆವು. ಕೆಲವು ಸಾರ್ತಿ ಮುಲ್ಟು ದೊಡ್ಡಿದ್ದರೆ ಇಬ್ಬರು ಮೂವರೂ ಹಂಚಿಕೊಳ್ಳುತ್ತಿದ್ದೆವು. ಯಾಕೆಂದರೆ ಅದು ಒಬ್ಬರಿಂದ ಮಾಡುವ ಕೆಲಸವಾಗಿರಲಿಲ್ಲ. ಎಷ್ಟೋ ಸಾರ್ತಿ ಅದನ್ನು ಅಗೆಯುತ್ತಾ ಹೋದಂಗೆಲ್ಲಾ ಅದರ ಬೇರುಗಳು ಸೊಂಟದೆತ್ತರಕ್ಕಿಂತ ಆಳಕ್ಕೆ ಹೋಗಿರುತ್ತಿದ್ದವು. ಅವು ಇಡೀ ದಿನ ಸತಾಯಿಸುತ್ತಿದ್ದವು.
ಒಂದು ದಿನ ಅಂಥದ್ದೊAದು ಮುಲ್ಟಿನ ಸಾವಾಸಕ್ಕೆ ಬಿದ್ದು ಹೈರಾಣಾಗಿಹೋಗಿದ್ದೆವು. ಬೆಳಗಿನಿಂದ ಸಾಯಂಕಾಲದವರೆಗೂ ಬಗೆದರೂ ಅದು ಇನ್ನಿಲ್ಲದಂತೆ ಸತಾಯಿಸಿತ್ತು. ಅದು ಇದ್ದದ್ದು ಮುಳ್ವಟ್ಟೆಗಳಿಂದ ಕೂಡಿದ್ದ ಕೊರಕಲೊಂದರಲ್ಲಿ. ಅದೆಂಗೆ ಅದು ತೇಲನ ಕಣ್ಣಿಗೆ ಬಿದ್ದಿತ್ತೋ ಗೊತ್ತಿಲ್ಲ. ಆ ಮುಳ್ಳುಗಳನ್ನು ಲೆಕ್ಕಿಸದೆ ನಾವು ಮೂವರು ಗೆಳೆಯರು ಅಷ್ಟೇ ಹಠಕ್ಕೆ ಬಿದ್ದಿದ್ದೆವು. ಅದು ಚೆನ್ನಾಗಿ ಬಲಿತಿದ್ದ ಮರ ಅನಿಸುತ್ತೆ. ಅದರ ಬೇರು ಇಲ್ಲವೆ ಬುಡಕ್ಕೆ ಬೀಳುತ್ತಿದ್ದ ಏಟುಗಳಿಂದ ಏಳುತ್ತಿದ್ದ ಚಕ್ಕೆಗಳು ಮಾಮೇರಿ ಘಮಗುಡುತ್ತಿದ್ದವು. ಸಾಮಾನ್ಯವಾಗಿ ಆಗ ಗಂಧದ ಮರಗಳ ಬುಡಗಳು ಹೆಚ್ಚಾಗಿ ಸಿಕ್ಕುತ್ತಿದ್ದದ್ದೇ ಆಚೆ ಬಾರೆಯಲ್ಲಿ. ಹಂಗಾಗಿ ಬೆಳಗ್ಗೆ ಬಂದ ಬಂದವರೇ ದನಗಳ ಪಾಡಿಗೆ ದನಗಳನ್ನು ಬಿಟ್ಟು ಈ ಅಗೆಯುವ ಕೆಲಸಕ್ಕೆ ನಿಂತಿದ್ದೆವು. ಮಧ್ಯಾಹ್ನವಾದರೂ ನಾವು ಎಷ್ಟೇ ತಿಣುಕಿದರೂ ಆ ಮುಲ್ಟು ಮಾತ್ರ ಜಪ್ಪಯ್ಯ ಅನ್ನಲಿಲ್ಲ. ಅವತ್ತು ನಮಗೆ ದನಗಳ ಮೇಲಾಗಲಿ, ಈಜಿನ ಮೇಲಾಗಲಿ ಒಂಚೂರೂ ಗಮನವಿರಲಿಲ್ಲ. ಇಳಿ ಹೊತ್ತಾಯ್ತು ಅನ್ನುವಾಗ ಅಂತೂ ಆ ಬುಡಕ್ಕೊಂದು ಗತಿ ಕಾಣಿಸಿದೆವು. ಇನ್ನೇನು ಹೊರಡಬೇಕು. ಅಷ್ಟರಲ್ಲಿ ನಮ್ಮಿಂದ ಕೂಗಳತೆಯ ದೂರದಲ್ಲಿ ಜನರು ಮಾತನಾಡುವ ಮತ್ತು ಕಾಡಿನ ಒಗ್ಗಾಲುಗಳಲ್ಲಿ ಎತ್ತಿನ ಗಾಡಿಯೊಂದರ ಸದ್ದು ಕೇಳತೊಡಗಿತು. ಸಂಜೆಯನ್ನು ಮೈಗಾಕಿಕಂಡು ಮನೆಗಳ ಇಲ್ಲಾ ಕುರಿ ಗೂಡುಗಳ ಮಾಡಿಗೆ ಬೇಕಾದ ತೊಲೆಗಳಿಗಾಗಿ ಗುಂಪೊAದು ಗಾಡಿ ಕಟ್ಟಿಕಂಡು ಬಂದು ಕದ್ದು ಕಾಡು ಗಿಡಗಳನ್ನು ಕಡಿಯತೊಡಗಿತ್ತು. ಅವರುಗಳ ಮಾತಿನ ಸದ್ದು ಅಂತೆಯೇ ಕೊಡಲಿಗಳ ಸದ್ದು ಸಂಜೆಯ ನೀರವದಲ್ಲಿ ಸ್ಪಷ್ಟವಾಗಿ ಅನುರಣಿಸುತ್ತಿತ್ತು. ಜತೆಗೆ ನಾವು ಬಿಡಿಸುತ್ತಿದ್ದ ಆ ಜಾಗ ಯಾರೊಬ್ಬರಿಗೂ ಕಾಣುತ್ತಿರಲಿಲ್ಲ. ಹಂಗಾಗಿ ಬಿಡಿಸಿದ್ದ ಮುಲ್ಟುಗಳನ್ನು ಸಣ್ಣ ಸಣ್ಣ ಪಿಂಡಿಗಳಾಗಿ ಮಾಡಿಕಂಡು ತಂದು ಕೆರೆಯ ಏರಿಯ ಮೇಲಿಟ್ಟು ದನಗಳತ್ತ ಹೊರಟೆವು. ದಿನವೂ ಇಳಿ ಹೊತ್ತಿಗೆ ಸರಿಯಾಗಿ ಪಿಟ್ಟಾಗಿ ಮೇಯ್ದಿರುತ್ತಿದ್ದ ದನಗಳು ನೀರಿಗಾಗಿ ಕೆರೆಯ ಅಂಗಳಕ್ಕೆ ಬರುತ್ತಿದ್ದವು. ಆಗ ನಾವು ಅವುಗಳತ್ತ ಹೋಗಿ ಮನೆಯತ್ತ ಹೊಡಕಂಡು ಹೋಗುತ್ತಿದ್ದೆವು. ಇನ್ನೂ ಮೇಯುತ್ತಿರಬಹುದು ಅಂತ ಕೆರೆಯ ದಡದಲ್ಲಿ ಮತ್ತೆ ಒಂಚೂರು ಕಾಡಿನೊಳಕ್ಕೆ ಹೋಗಿ ಹುಡುಕಿದೆವು. ಒಂದೂ ಕಣ್ಣಿಗೆ ಬೀಳಲಿಲ್ಲ. ಹುಡುಕೇ ಹುಡುಕಿದೆವು. ಸಿಗಲಿಲ್ಲ. ಅಷ್ಟೊತ್ತಿಗಾಗಲೇ ಇಳಿ ಹೊತ್ತು ಸಂಜೆಗೆ ಹೊರಳುತ್ತಿತ್ತು.
ಕರಿ ಕುರಿ ಮಂದೆಯವರು
ದನಗಳಿಲ್ಲದೆ ಯಾವ ಕಾರಣಕ್ಕೂ ಮನೆಗೆ ಹೋಗುವಂತಿರಲಿಲ್ಲ. ಎದೆ ಢವಗುಡ ಹತ್ತಿತು. ಆಚೆ ಬಾರೆಯನ್ನು ಬಿಟ್ಟು ಈಚೆ ಬಾರೆ ಮತ್ತು ಸಿದ್ದಪ್ಪನ ಗುಡಿಯ ಸುತ್ತ ಹುಡುಕಿದೆವು. ಆ ವೇಳೆಗೆ ಆಚೆ ಬಾರೆಯಲ್ಲಿದ್ದ ಕದ್ದು ಮರ ಕಡಿಯುವವರನ್ನು ಬಿಟ್ಟರೇ ಇಡೀ ವಾತಾವರಣ ನಿರ್ಜನವಾಗಿತ್ತು. ಎಲ್ಲರವೂ ಸೇರಿ ಹನ್ನೊಂದು ರಾಸುಗಳಿದ್ದವು. ಅಷ್ಟೂ ರಾಸುಗಳು ಕಣ್ಮರೆಯಾಗಿದ್ದವು. ದಿಕ್ಕು ತೋಚದಾಗಿ ಮೂವರೂ ಸಿದ್ದಪ್ಪನ ಗುಡಿಯ ಎದುರಿಗಿದ್ದ ಭೂತಪ್ಪನ ಪಕ್ಕದಲ್ಲಿ ಕೂತೆವು. ಸಂಜೆ ಕತ್ತಲೆಗೆ ಹೊರಳಿತ್ತು. ಆ ಚಣ ದಿನವೂ ಅಲ್ಲೇ ಮಲಗುತ್ತಿದ್ದ ಸಿದ್ದಪ್ಪನ ಗುಡಿಯ ಪೂಜಾರಿ ಕರಿಸಿದ್ದಯ್ಯನವರು ಇರಲಿಲ್ಲ. ಇನ್ನು ನಾವು ಮೂವರೇ ಊರಿಗೆ ಹೋಗುವ ಧೈರ್ಯವಿರಲಿಲ್ಲ. ಕತ್ತಲೆಯ ಭಯಕ್ಕಿಂತ ದನಗಳು ಎಲ್ಲಿ ಎಂದು ಕೇಳಿದರೆ ಏನಂತ ಹೇಳುವುದು ಅನ್ನುವ ಮನೆಯವರ ಭಯವೇ ನಮ್ಮನ್ನು ದಿಕ್ಕೆಡಿಸಿತ್ತು. ಜತೆಗೆ ಕಾಡು ಪ್ರಾಣಿಗಳ ಭಯ. ಕರಿಸಿದ್ದಯ್ಯನವರು ಇದ್ದರೆ ಆನಾಡಿ ಪತರಗುಡಬೇಕಾಗುತ್ತಿರಲಿಲ್ಲ. ನಮ್ಮ ನಡುವೆ ಮಾತುಗಳು ಮೂಡದಾಗಿ ಮೂವರೂ ಸುಂಡ್ರಿಸಿಕAಡು ಆಕಾಶದ ಚಿಕ್ಕಿಗಳತ್ತ ಮುಖ ಮಾಡಿಕಂಡು ಕೂತೆವು. ಕತ್ತಲೆಗೆ ಮತ್ತು ಚಿಕ್ಕಿಗಳ ಬೆಳಕಿಗೆ ಕಣ್ಣುಗಳು ಹೊಂದಿಕಂಡವು.
ಸ್ವಲ್ಪ ಹೊತ್ತಾದ ಮೇಲೆ ದೂರದಲ್ಲಿ ಏನನ್ನೋ ಗುನುಗಿಕಂಡು ಯಾರೋ ಬರುತ್ತಿರುವ ಸದ್ದು ಕೇಳಿಸಿತು. ಆ ಸದ್ದು ಹತ್ತಿರವಾಗುತ್ತಿದ್ದಂತೆ ರವಷ್ಟು ಉಸುರುಯ್ದುಕೊಂಡೆವು. ನಮಗೆ ತುಂಬಾ ಪರಿಚಯ ಇದ್ದುದ್ದರಿಂದ ಹತ್ತಿರಕ್ಕೆ ಬರುತ್ತಲೇ `ಅಯ್ಯೋ ಇದ್ಯಾಕರ್ಲ ಅಪ್ಪಣ್ಣಿ ಈಟೊತ್ನಾಗ ಇಲ್ಲಿ ಹಿಂಗೆ ಕೂತಿದೀರ?’ ಅಂದರು ಕರಿಸಿದ್ದಯ್ಯ ತಲೆ ತುಂಬಾ ಕವುಚಿಕಂಡಿದ್ದ ಕರಿಯ ರಗ್ಗನ್ನು ವಾರಾಸಿಗೆ ಸರಿಸುತ್ತಾ. ಹಿಂಗಿಂಗೆ ಅಂತ ಎಲ್ಲ ಹೇಳಿದೆವು. ಅದು ಡಿಸೆಂಬರ್ ತಿಂಗಳು. ಸಂಜೆಗೇ ಚಳಿ ತನ್ನ ಕರಾಮತ್ತು ಶುರು ಮಾಡಿಕಂಡಿತ್ತು. ಕರಿಸಿದ್ದಯ್ಯ `ಏನಾದರೂ ತಿಂದಿದೀರ ಹೆಂಗೆ?’ ಅಂತ ಕೇಳಿದರು. ಮೂವರೂ ಒಬ್ಬರ ಮುಖ ಒಬ್ಬರು ನೋಡಿಕಂಡೆವು. `ಎದ್ದಾಳ್ರಿ ಹಂಗಾರೆ ಹೋಗುವಾ’ ಅಂತ ನಮ್ಮನ್ನು ಎಬ್ಬಿಸಿಕಂಡು ಹೊರಟರು. ಈ ಹೊತ್ನಾಗೆ ಎಲ್ಲಾದ್ರೂ ನಮ್ಮನ್ನು ಊರಿಗೆ ಕರಕಂಡು ಹೋದರೆ ಏನಪ್ಪಾ ಮಾಡಾದು ಅಂತ ನಮಗೆ ಭಯವಾಗತೊಡಗಿತು. ಹಂಗಾಗಿ ಕಾಲುಗಳಿಗೆ ಎಷ್ಟು ಬುದ್ಧಿ ಹೇಳಿದರೂ ಅವು ಜೋರಾಗಿ ನಡೆಯಲೊಪ್ಪುತ್ತಿರಲಿಲ್ಲ. ಯಾವಾಗ ಕರಿಸಿದ್ದಯ್ಯ ಎರೆನೆತ್ತಿಯ ಸಿದ್ದಪ್ಪನ ಕೆರೆಯ ಕಡೆಯ ಇಳುಕಲನ್ನು ವಾರಾಸಿಗೆ ಬಿಟ್ಟುಕಂಡು ಎಡಮಕ್ಕೆ ನಡೆಯತೊಡಗಿದರೋ ಆಗ ಜೀವ ರವಷ್ಟು ತಮಣೆಗೆ ಬಂತು. ಯಾಕೆಂದರೆ ನಮ್ಮ ಊರಿಗೆ ಹೋಗುವ ದಾರಿ ಅದಾಗಿರಲಿಲ್ಲ.
ಅದೊಂದು ಕಾಡುಗಲ್ಲಿನ ಕಾಲು ದಾರಿ. ಅದರ ತುಂಬಾ ಎಡವುಗಲ್ಲುಗಳು ಮತ್ತು ನುಜ್ಜುಗಲ್ಲುಗಳು. ಚಳಿಯ ಹೊಡೆತಕ್ಕೆ ಹಲ್ಲುಗಳು ಪದ ಹೇಳುತ್ತಿದ್ದವು. ಹಿಂಗೆ ಒಂದೆರಡು ಫರ್ಲಾಂಗು ದೂರ ನಡೆದು ಸಣ್ಣದೊಂದು ದಿಬ್ಬವನ್ನು ಹತ್ತಿದಾಗ ಕೊಂಚ ದೂರದಲ್ಲಿ ಒಂದೆರಡು ಲಾಟೀನಿನ ಬೆಳಕು ಕಾಣ ಹತ್ತಿತು. ಅತ್ತ ಕಡೆಯಿಂದ ಬೀಸುತ್ತಿದ್ದ ಗಾಳಿಯಲ್ಲಿ ಸಣ್ಣದಾಗಿ ಅಸ್ಪಷ್ಟವಾಗಿ ಜನರ ಮಾತುಗಳು ಕೆಳತೊಡಗಿದವು. ಆ ದಿಬ್ಬದ ಇಳುಕಲನ್ನು ಇಳಿಯುವಾಗ ಒಂದೆಡೆ ಕಾಲ್ದಾರಿಯ ಕೊರಕಲಿನ ಪಕ್ಕದ ಗುತ್ತಿಯಿಂದ ಚಂಗನೆ ಒಂದೆರಡು ಮೊಲಗಳು ನೆಗೆದು ಓಡಿದವು. ಮುಂದೆ ನಡೆಯುತ್ತಿದ್ದ ಕರಿಸಿದ್ದಯ್ಯ ನಮ್ಮತ್ತ `ಇಲ್ಲಿ ಮಾತ್ರಾವಾ ಯಾವಾಗ್ಲೂ ಮೊಲಗಳು ಇದ್ದೇ ಇರ್ತಾವೆ ನೋಡ್ರ’ ಅಂದರು. ಆದರೆ ನಮ್ಮ ಕಷ್ಟವೇ ನಮಗಾಗಿದ್ದಾಗ ಅವರ ಮಾತುಗಳಿಗೆ ನಾವ್ಯಾರೂ ತುಟಿಕ್ ಪಿಟಿಕ್ ಅನ್ನಲಿಲ್ಲ. ಅಷ್ಟೊತ್ತಿಗೆ ಬರಿಗಾಲುಗಳಿಗೆ ಸಣ್ಣಪುಟ್ಟ ಮುಳ್ಳು ಕಲ್ಲುಗಳು ಒತ್ತಿದ್ದರಿಂದ ಕಾಲುಗಳಿಗೆ ಸೋಲು ಬಂದು ಕುಂತರೆ ಸಾಕಪ್ಪ ಅನ್ನುವಂತಾಗಿತ್ತು. `ಅಗಾ ನೋಡ್ರ ಅಲ್ಲಿ ಕಾಣುತ್ತಲ್ಲಾ ಅಲ್ಲಿ ಕರಿ ಕುರೇರು ಮಂದೆ ನಿಲ್ಲಿಸ್ಕಂಡಾವ್ರೆ’ ಅನ್ನುತ್ತಾ ಕರಿಸಿದ್ದಯ್ಯ ಬರಬರನೆ ಮುನ್ನುಗ್ಗುತ್ತಿದ್ದರು. ನಮ್ಮನ್ನು ಕಾಣುತ್ತಲೇ ಕುರಿ ನಾಯಿಗಳು ದೂರಿಂದಲೇ ಜೋರಾಗಿ ಬೊಗುಳ ಹತ್ತಿದವು. `ಅವೇನು ಮಾಡಲ್ಲ ಬನ್ರ’ ಅಂದರು ಕರಿಸಿದ್ದಯ್ಯನವರು.
ನಮಗಾಗ ಅರಿವಾಯ್ತು ಕರಿಸಿದ್ದಯ್ಯ ನಮ್ಮನ್ನು ಆ ಕರಿ ಕುರಿ ಮಂದೆವಯವರ ಹತ್ತಿರ ಕರಕಂಡು ಹೋಗ್ತಿದಾರೆ ಅಂತ. ಆದರೆ ಯಾಕೆ ಅನ್ನುವ ಅನುಮಾನವಿತ್ತು. ಹತ್ತಿರವಾಗುತ್ತಿದ್ದಂತೆ ಅಲ್ಲಿದ್ದ ಮೂರ್ನಾಲ್ಕು ನಾಯಿಗಳು ಕರಿಸಿದ್ದಯ್ಯನವರ ಸುತ್ತ ಬಂದು ಬಾಲ ಅಳ್ಳಾಡಿಸತೊಡಗಿದವು. ಹಂಗಾಗಿ ಈ ನಾಯಿಗಳಿಗೆ ಕರಿಸಿದ್ದಯ್ಯ ಮುಂಚೇನೇ ಪರಿಚಯ ಅನ್ನಾದು ಗೊತ್ತಾಯ್ತು. ಅದೊಂದು ಬಟಾ ಬಯಲಿನ ಹೊಲ. ಅದರಲ್ಲಿ ಅಲ್ಲಲ್ಲಿ ನೆಪ ಮಾತ್ರಕ್ಕೆ ಅನ್ನುವಂತೆ ತೆಂಗಿನ ಸಸಿಗಳಿದ್ದವು. ಆವಾಗಿನ್ನೂ ಕುರಿಗಳನ್ನು ತೋಳ ಮತ್ತು ಚಿರತೆಗಳಿಂದ ಕಾಪಾಡಿಕೊಳ್ಳಲು ಕುರಿಗಳ ಸುತ್ತಾ ಒಡ್ಡಲು ಬಲೆಗಳು ಬಂದಿರಲಿಲ್ಲ. ಹಂಗಾಗಿ ನಾಲ್ಕು ದಿಕ್ಕಿನಲ್ಲೂ ಒಬ್ಬೊಬ್ಬರು ಮಲಗಲು ದಾಯ ಮಾಡಿಕಂಡಿದ್ದರು. ಆ ದಾಯಗಳ ಮೇಲೆ ಕರಿ ಕಂಬಳಿಗಳು ಆಗಲೇ ಹಾಜರಿದ್ದವು. ಆದರೆ ಅಲ್ಲಿದ್ದ ಇಬ್ಬರು ಮಂದೆಯ ಚಳಿಗೆ ಬೆಂಕಿ ಹಾಕಿಕಂಡಿದ್ದರು. ಹಂಗೇನೇ ಸಣ್ಣಗೆ ಮಾತಿಗಿಳಿದಿದ್ದರು. ಉಳಿದಿಬ್ಬರು ಪಾಳಿಯ ಮೇಲೆ ಕಾಯುವ ಸಲುವಾಗಿ ಆಗಲೇ ಮಲಗಿದ್ದರು. ಅತ್ತ ಕಡೆಯಿಂದ ಸಣ್ಣಗೆ ಗೊರಕೆಗಳೇಳುತ್ತಿದ್ದವು. ಗುಬ್ಬದೊಳಗಿಂದ ಮರಿಗಳು ಆಗಾಗ ಏನನ್ನೋ ಮರೆತಿದ್ದನ್ನು ನೆನಪಿಸಿಕಂಡು ಅರುಚುತ್ತಿದ್ದವು. ಅವುಗಳ ಅವ್ವಂದಿರು ಇಗಾ ನಾವು ಇಲ್ಲೇ ಇದೀವಿ ಎಂಬಂತೆ ಓಗೊಡುತ್ತಿದ್ದವು. ಈ ಕೂಗುಗಳು ಚಳಿಯ ಸುಪರ್ಧಿನಲ್ಲಿದ್ದ ಇರುಳ ಕತ್ತಲ ಮೌನವನ್ನು ಕದಡುತ್ತಿದ್ದವು. ಅವರು ಹಾಕಿಕಂಡಿದ್ದ ಬೆಂಕಿ ಕೆಂಡಕ್ಕೆ ತಿರುಗಿತ್ತು. ಆ ಕೆಂಡದ ವಾರಾಸಿಗೆ ಮೂರು ಕಲ್ಲುಗಳನ್ನು ಹೂಡಿ ಮಾಡಿದ್ದ ಒಲೆ ಕಾಣುತ್ತಿತ್ತು. ಅದರೊಳಗಿನ ಬೆಂಕಿ ಪೂರಾ ಆರಿ ಹೋಗಿತ್ತು. ಆ ಹೂಡುಗಲ್ಲುಗಳ ಒಲೆಯ ಮೇಲೆ ಗುಡಾಣದಂಥ ಮಡಕೆ ಇತ್ತು. ಅದರ ಪಕ್ಕದಲ್ಲಿ ಇತರೆ ಅಡಿಗೆ ಪಾತ್ರೆಗಳಿದ್ದವು. ಊಟದ ಹೊತ್ತಾಗಲೇ ಮೀರಿತ್ತು. ಕಪ್ಪಟ್ಟೆ ಕತ್ತಲಲ್ಲಿ ಹಚ್ಚಿದ್ದ ಲಾಟೀನುಗಳ ಗಾಜಿನ ಮೇಲೆ ಚಳಿಯ ಹಿಮ ಸಣ್ಣಗೆ ಕೂತಿತ್ತು. ಹಂಗಾಗಿ ಅವುಗಳ ಬೆಳಕು ಮಂದಾತಿ ಮಂದವಾಗಿ ಆ ಲಾಟೀನುಗಳು ಆಗಲೋ ಈಗಲೋ ಗೊಣೆಸೆಯೆಯುತ್ತವೆ ಅನ್ನುವುದಕ್ಕೆ ಪುರಾವೆಯಂತಿತ್ತು.
ಹತ್ತಿರ ಹೋದವರೇ ಕರಿಸಿದ್ದಯ್ಯ `ಅಲ್ರಾ ನೀವಿನ್ನೂ ಮಲಗಿಲ್ಲ?’ ಅನ್ನುವ ದೇಶಾವರಿ ಮಾತುಗಳನ್ನಾಡುತ್ತಾ ಅವರ ಪಕ್ಕ ಕೂತು ಬೆಂಕಿಗೆ ಮೈಯ್ಯೊಡ್ಡಿದರು. ಅವರನ್ನು ಕಾಣುತ್ತಲೇ ಅವರೊಳಗೊಬ್ಬರು `ಓಹ್ ಅಯ್ನಾರೆ ಈಗಾಟೇ ಹೋದೋರು ಇದೇನ್ ಹಿಂಗೆ ತರ್ಗಿ ಬಂದ್ಬುಟ್ರಿ? ’ ಅಂದರು. `ಹೂನ್ರ. ಇಲ್ಲಿಂದ ಹೋದ್ನ ಹೋಗಿ ನೋಡಿದ್ರೆ ಈ ಹುಡುಗ್ರು ಇದಾರಲ್ಲ ಇವ್ರು ನಮ್ಮರ್ನವ್ರು ಗುಡಿತಾವ ಕೂತುಬುಟ್ಟುದ್ರು… ಪಾಪ…’ ಅನ್ನುತ್ತಾ ರಾಗ ಹಾಡುತ್ತಾ ನಮ್ಮತ್ತ ತೋರಿಸಿದರು. ಆಗ ನಮಗೆ ಅರ್ಥ ಆಯ್ತು- ಕರಿಸಿದ್ದಯ್ಯನವರು ಸ್ವಲ್ಪ ಹೊತ್ತಿನ ಹಿಂದೆ ಗುಡಿತಾಕೆ ಬಂದದ್ದು ಇಲ್ಲಿಂದಲೇ, ಹಂಗೇ ಬರುವಾಗ ಊಟಾನೂ ಮಾಡ್ಕಂಡು ಬಂದವ್ರೆ ಅಂತಾವ. ಅವರ ಉದ್ದೇಶ ಇದ್ದದ್ದು ಆ ಹೊತ್ನಾಗೆ ನಮಗೆ ಹೊಟ್ಟೆಗೆ ಏನಾರಾ ಒಂಚೂರು ಗತಿ ಕಾಣಿಸಬೇಕು ಅನ್ನೋದು. ಅವರಿಗೆ ಅರ್ಥ ಆಯ್ತು. `ಈಗಿನ್ನಾವ ಎಲ್ಲಾ ಪತ್ರೇನೂ ತೊಳ್ದು ಇಟ್ವಿ. ತೋಳ್ದಿಟ್ರೆ ಏನಂತೆ ಕಣ್ಮುಚ್ಚಿ ಬಿಡಾದ್ರೊಳ್ಗೆ ಅನ್ನ ಮಾಡಿ, ಈರುಳ್ಳಿ ಹೆಚ್ಚಿ ಹಸಿ ಬಜ್ಜಿ ಮಾಡಿದ್ರಾಯ್ತು’ ಅಂತ ಅಂದ ಆ ವ್ಯಕ್ತಿ ತಕ್ಷಣವೇ ಮೇಲೆದ್ದು ನಾವು ಮೂವರನ್ನೂ ಬೆಂಕಿ ಕಾಯಿಸಿಕೊಳ್ಳಲು ಹೇಳಿ ಚೀಲವೊಂದರಿAದ ಒಂದಷ್ಟು ಅಕ್ಕಿಯನ್ನು ತಗಂಡು ಪಾತ್ರೆಯೊಂದಕ್ಕೆ ಸುರಿದು ಒಲೆಯ ಮೇಲಿದ್ದ ಮಡಕೆಯಿಂದ ನೀರಿನಿಂದ ತೊಳೆದು ಆ ಮಡಕೆಯನ್ನು ಕೆಳಗಿಳಿಸಿ ಅದರ ಮೇಲೆ ಆ ಪಾತ್ರೆಯನ್ನಿಟ್ಟು ಒಲೆ ಹಚ್ಚಿಸಿದರು. ಒಲೆ ಗೊಣ ಗೊಣ ಗೊಣಗಿಕೊಂಡು ಹತ್ತಿಕೊಳ್ಳಲಾರಂಭಿಸಿತು.

ಅವತ್ತು ಅವರು ಮಾಡಿಟ್ಟ ಆ ಅನ್ನ, ಆ ಹಸಿ ಬಜ್ಜಿ ಹಸಿವಿನಿಂದ ಹೈರಾಣಾಗಿದ್ದ ನಮಗೆ ಆ ಚಣಕ್ಕೆ ಅದರ ಆ ರುಚಿ ಎಂದೂ ಮರೆಯಲಾಗದಂಥ ರುಚಿಯಾಗಿ ನಮ್ಮೊಳಗೆ ಉಳುಕಂಡುಬಿಡ್ತು. ಅಂತೆಯೇ ಅವತ್ತು ಅಲ್ಲಿ ಕಳೆದ ಆ ಇರುಳು. ನಮ್ಮ ಊಟವಾಗುತ್ತಲೇ ಕರಿಸಿದ್ದಯ್ಯನವರು ಸಿದ್ದಪ್ಪನ ಗುಡಿಯತ್ತ ಹೋಗಲು ಹೊರಟು ನಿಂತರು. ಅವರ ಹಿಂದೆ ನಾವೂ ಹೋಗಲು ತಯಾರಾಗಿ ನಿಂತೆವು. `ಅಲ್ರ ಅಪ್ಪಣ್ಣಿ ನಾನು ಈಗ ಹೊದ್ಕಂಡುದೀನಲ್ಲ ಇದೊಂದು ರಗ್ನ ಬುಟ್ರೆ ಒಂದು ಹರುಕ್ಲು ಚಾಪೆ ಐತೆ. ಈ ಸರ್ಯಾ ಕ್ವಾರೇಲಿ ಹಂಗೇ ಮಲ್ಕಣಾಕೆ ಆದಾತ?’ ಅಂದರು ಕರಿಸಿದ್ದಯ್ಯ. ಆಗ ಕರಿ ಕುರಿಯವರೊಬ್ಬರು `ಅಯ್ಯೋ ಅಂತಾ ಪಡಿಪಾಟ್ಳು ಯಾಕೆ ಬೇಕೇಳ್ರಿ? ನಮ್ತಾವ ಇನ್ನೂ ಒಂದು ದಿಪ್ಪಾಗಿರಾ ಕರಿ ಕಂಬ್ಳಿ ಐತೆ. ಒಂದರ್ಡು ಹಳೆ ಚಾಪೆಗಳ್ನ ಅಡೀಕೆ ಹಾಕ್ಕೆಂಡು ಮಕಂಡ್ರೆ ಆತು’ಅಂದರು. ಅವರ ಆ ಮಾತುಗಳಿಂದ ನನಗಂತೂ ತುಂಬಾ ಖುಷಿಯಾಗಿತ್ತು. ಯಾಕೆಂದರೆ ಮತ್ತೆ ಆ ಎಡವುಗಲ್ಲಿನ ಕಾಲಾದಿಯಲ್ಲಿ ನಡೆಯುವುದನ್ನು ಕಲ್ಪಸಿಕಂಡರೆ ಹೆದರಿಕೆಯಾಗುತ್ತಿತ್ತು. ಯಾವಾಗ ಕರಿ ಕುರಿಯವರು ಹಂಗಂದರೋ ಕರಿಸಿದ್ದಯ್ಯ ಬರಬರನೆ ನಡೆದು ಕತ್ತಲಲ್ಲಿ ಮರೆಯಾದರು. ಅವರು ಕೊಟ್ಟ ಹಲ್ಟೆ ಚಾಪೆಗಳ ಮೇಲೆ ಒಂದು ಚೋಡಿ ಕರಿ ಕಂಬಳಿಯನ್ನು ಹಾಸಿಕಂಡು ಮತ್ತೊಂದು ಚೋಡಿಯನ್ನು ಹೊದ್ದಕಂಡು ಮಲಗಿದ್ದಷ್ಟೇ ಗೊತ್ತು ಮತ್ತೆ ಎಚ್ಚರ ಆಗುವತ್ತಿಗೆ ಚೆನ್ನಾಗಿ ಬೆಳಕರಿದಿತ್ತು. ಹೊದ್ದ ಕಂಬಳಿ ಕ್ವರೆಯ ಹೊಡೆತಕ್ಕೆ ತಣ್ಣಗಾಗಿತ್ತು. ಬೆಳಕು ಬೆಳೆಯುತ್ತಿತ್ತು. ಆ ಬೆಳಕಿನ ಜತೆಗೆ ಮಲಗಿದ್ದಾಗ ಒಂಚೂರು ಮರೆವಿಗೆ ಸರಿದಿದ್ದ ನಮ್ಮೊಳಗಿನ ಆತಂಕ ದೀಡಾಗತೊಡಗಿತ್ತು. ಕೆಟ್ಟ ಮಕಾ ಹಾಕ್ಕೆಂಡು ಅಪಾರ ಭಯವನ್ನು ತುಂಬ್ಕಂಡು ತಿಂಡಿಯ ಹೊತ್ತಿಗೆ ನಾನು ಮನೆಯತ್ತ ಹೋಗುವ ಹೊತ್ತಿಗೆ ತಿಂಡಿಯ ಹೊತ್ತು ಮೀರಿತ್ತು. ಶೆಟ್ಟೀಕೆರೆಯ ಪೋಂಡಿನ ಮನೆಯಿಂದ ಒಂದೊಂದಕ್ಕೂ ಎಂಟೆಂಟಾಣೆ ತೆತ್ತು ಆಗಷ್ಟೇ ಬಿಡಿಸಿಕಂಡು ಬಂದಿದ್ದ ದನಗಳು ಮನೆಯ ವಾರಾಸಿಗೆ ನೆಟ್ಟಿದ್ದ ಗೂಟಗಳ ಪಕ್ಕದಲ್ಲಿ ಮಲಗಿ ಮೆಲುಕು ಹಾಕುತ್ತಿದ್ದವು.
*****
ಮುಲ್ಟು: ಸತ್ತ ಮರದ ಬುಡ ಮತ್ತದರ ಬೇರು.
ಗೋಡ್ಗಲ್ಲು: ಕೋಡುಗಲ್ಲು, ಗೋಡೆಯಂತೆ ಗೋಡಿಯಾಗಿರುವ ಕಲ್ಲು.
ಮಂದೆ ಹಾಕು: ಗೊಬ್ಬರದ ಸಲುವಾಗಿ ಕುರಿ ಮತ್ತು ಮೇಕೆಗಳನ್ನು ತೋಟ ಅಥವಾ ಹೊಲಗಳಲ್ಲಿ ಇರುಳಿನಲ್ಲಿ ತಡಾಕಿಕೊಳ್ಳುವುದು.
ಗೋಮಾಳ: ಮೇವಿಗೆಂದು ಮೀಸಲಿರುವ ಸಾರ್ವಜನಿಕ ಹುಲ್ಲುಗಾವಲು.
ಬಾರೆ: ದನಕರುಗಳನ್ನು ಮೇಸುವ ಕುರುಚಲು ಗಿಡಗಳಿರುವ ಬಯಲು ಸೀಮೆಯ ಹುಲ್ಲುಗಾವಲು.
ಕೆಂಗು: ದ್ವಾರಗಾಯಿ.
ಪೂಜೆ: ಶಿಕ್ಷೆ.
ಕಚ್ಚಿಕೊ: ಮೇಯುವುದರಲ್ಲಿ ಮಗ್ನವಾಗುವುದು.
ಗೂಡ್ರು: ಮೋಡ ಮುಸುಕುವುದು.
ವಲ್ಲಿ: ಟವೆಲ್ಲು.
ಕಲ್ಡಿ: ಕರಡಿ.
ಮಂಗಳಾರತಿ: ಬೈಗುಳ.
ಮುಳ್ವಟ್ಟೆ: ಮುಳ್ಳುಗಳಿಂದ ಕೂಡಿದ ಹಾದಿ.
ಹಲ್ಟೆ ಚಾಪೆ: ಹರಟೆ ಚಾಪೆ. ಕೂತು ಹರಟುವ ಸಲುವಾಗಿ ಹಸಿ ತೆಂಗಿನ ಗರಿಗಳಿಂದ ಹೆಣೆಯುವ ಚಾಪೆ.
ಕ್ವರೆ: ಕಾವಳ.
ಪೋಂಡಿನ ಮನೆ: ಪೌಂಡಿನ ಮನೆ. ಬೀಡಾಡಿ ದನಗಳನ್ನು ಕೂಡಿ ಹಾಕುತ್ತಿದ್ದ ಜಾಗ.
(ಹಿಂದಿನ ಕಂತು: ಹರಿದೋದ ಉಡುದಾರ, ಕಳೆದೋದ ಪ್ಯಾಂಟ್ಪೀಸ್ ಮತ್ತು ಶರ್ಟ್)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

