Advertisement
‘ಶಿಲಾವಲ್ಕ’ ಕತೆ ನಮ್ಮದೂ ಹೌದು…: ಸಂಜೋತಾ ಕಾದಂಬರಿಗೆ ಪ್ರಕಾಶ ನಾಯಕ ಮುನ್ನುಡಿ

‘ಶಿಲಾವಲ್ಕ’ ಕತೆ ನಮ್ಮದೂ ಹೌದು…: ಸಂಜೋತಾ ಕಾದಂಬರಿಗೆ ಪ್ರಕಾಶ ನಾಯಕ ಮುನ್ನುಡಿ

ಅಂತಹ ಅದೃಷ್ಟವಿಲ್ಲದ ಭಾರತೀಯ ವಲಸಿಗರ ಸಂಖ್ಯೆ ಕಡಿಮೆಯೇನಿಲ್ಲ. ಇಲ್ಲಿನ ಕತೆಯಲ್ಲಿ ಆ ಲೋಕದ ಪರಿಚಯ ಚೆನ್ನಾಗಿಯೇ ಆಗುತ್ತದೆ. ಕ್ಯಾಲಿಫೋರ್ನಿಯಾದ ಸ್ಟಾಕ್ಟನ್ ನಗರದಲ್ಲಿ ಮನೆಮಾಡಿದ ಕೆಲವು ದಶಕಗಳ ನಂತರವೂ ಶಿವಿಯನ್ನು ದುಸ್ವಪ್ನಗಳು ಕಾಡುವುದು ನಿಲ್ಲುವುದಿಲ್ಲ. ಮರೆಯಬೇಕೆಂದರೂ ಮರೆಯಲಾಗದ ಅನುಭವಗಳು, ಬಿಟ್ಟು ಬಂದ ದೇಶದ, ಕುಟುಂಬದ ನೆನಪು, ನೆಲೆನಿಂತ ಹೊಸ ದೇಶದಲ್ಲಿ ಹೊಸ ಬದುಕು ಕಟ್ಟಿಕೊಳ್ಳುತ್ತಲೇ ಒಡೆದು ಹೋಳಾದ ಕುಟುಂಬವನ್ನು ಮತ್ತೆ ಒಗ್ಗೂಡಿಸುವ ಕನಸು – ಕತೆಯೊಂದು ಮನತಟ್ಟಲು ಬೇಕಾದ ಎಲ್ಲವೂ ಈ ಕಾದಂಬರಿಯಲ್ಲಿವೆ.
ಸಂಜೋತಾ ಪುರೋಹಿತ ಬರೆದ “ಶಿಲಾವಲ್ಕ” ಕಾದಂಬರಿಗೆ ಪ್ರಕಾಶ ನಾಯಕ ಬರೆದ ಮುನ್ನುಡಿ ನಿಮ್ಮ ಓದಿಗೆ

ಇತಿಹಾಸವು ಗತಕಾಲದ ದಾಖಲೆಯಾದರೆ ಇತಿಹಾಸವನ್ನು ಆಧರಿಸಿದ ಕತೆಕಾದಂಬರಿಗಳು ಅವುಗಳಿಗೆ ಜೀವತುಂಬಿ ನಮ್ಮ ಕಣ್ಮುಂದೆ ತರುವ ಕಲಾಕೃತಿಗಳು; ಎಲ್ಲೋ ಎಂದೋ ನಡೆದುಹೋದ ಘಟನೆಯ ವರದಿ ರದ್ದಿಯಾಗಿ ಮರೆಯಾಗದೆ ಮನದಲ್ಲಿ ಅಚ್ಚಳಿಯದೆ ನಿಂತು ಸದಾ ಸಕಾಲಿಕವಾಗುವಂತೆ ಮಾಡಬಲ್ಲ ಜೀವಸೆಲೆಗಳು. ಪ್ರವಾಸಕಥನಗಳು ಕಾಣದ ನಾಡಿನ ಭೌಗೋಲಿಕ ವಿವರಗಳೊಟ್ಟಿಗೆ ಅಲ್ಲಿನ ಜನಜೀವನದ ವಿಶೇಷತೆಯನ್ನು ಪರಿಚಯಮಾಡಿಸುವ ಕಿಟಕಿಗಳಾದರೆ ಇಂತಹ ನಾಡಿನ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಕಾದಂಬರಿಗಳು ನಾಡಿನೊಟ್ಟಿಗೆ ಅಲ್ಲಿನ ಜನರ ಆಚಾರವಿಚಾರಗಳನ್ನು, ನೋವುನಲಿವುಗಳನ್ನು, ಪರಿಚಯಿಸಿ ಅವರನ್ನು ನಮ್ಮವರನ್ನಾಗಿಸಿಬಿಡುವ ಸಂಬಂಧಸೇತುವೆಗಳು. ಭಾರತದ ನೆರೆದೇಶವಾಗಿದ್ದರೂ ನಮಗೆ ಹೆಚ್ಚಾಗಿ ತಿಳಿದಿರದ ಕಾಂಬೋಡಿಯಾ ಮತ್ತು ದೂರದಲ್ಲಿದ್ದರೂ ನಮಗೆ ಪರಿಚಯವಿದೆ ಎಂದು ನಾವಂದುಕೊಳ್ಳುವ ಅಮೇರಿಕಾಗಳಲ್ಲಿ ಕೆಲವು ದಶಕಗಳಲ್ಲಿ ನಡೆಯುವ ‘ಶಿಲಾವಲ್ಕ’ ಕಾದಂಬರಿಯ ಕಥನ ದೇಶ ಮತ್ತು ಕಾಲಗಳ ಯಾತ್ರೆಯನ್ನು ಒಟ್ಟಿಗೆ ಮಾಡಿಸುತ್ತದೆ. ಕಾದಂಬರಿ ಓದುತ್ತ ಹೋದಂತೆ ದೇಶಕಾಲಗಳ ವ್ಯತ್ಯಾಸ ಮರೆಯಾಗಿ ನಮ್ಮ ಇಂದಿನ ಇರವಿನ ಕುರಿತ ಅರಿವನ್ನು ಹೆಚ್ಚಿಸುವ ಸಾಹಸ ಮಾಡುತ್ತದೆ. ಇಲ್ಲಿ ನಡೆಯುವ ಘಟನೆಗಳು ಇಂದಿನ ಬದುಕನ್ನು ಎಚ್ಚರಿಕೆಯಿಂದ ನೋಡುವ ಅಗತ್ಯವನ್ನು ಸಾರುತ್ತವೆ. ನಾವು ಅನುಭವಿಸಿರದ ದೇಶ, ಕಾಲಗಳ ದೀರ್ಘ ಕಥನವನ್ನು ಕಟ್ಟುವುದು ಸುಲಭವಲ್ಲ. ತಮ್ಮ ಎರಡನೇ ಕಾದಂಬರಿಯಲ್ಲಿ ಇಂತಹ ಸಾಹಸಕ್ಕೆ ಕೈಹಾಕಿದ ಸಂಜೋತಾ ಅವರಿಗೆ ಅಭಿನಂದನೆಗಳು.

(ಸಂಜೋತಾ ಪುರೋಹಿತ)

1975ರಿಂದ 1979ರವರೆಗೆ ಕಾಂಬೋಡಿಯದಲ್ಲಿ ನಡೆದ ಆಂತರಿಕ ಯುದ್ಧ ಹೆಚ್ಚೂಕಡಿಮೆ ಇಪ್ಪತ್ತು ಲಕ್ಷ ಜನರನ್ನು (ಆ ಕಾಲದ ಕಾಂಬೋಡಿಯದ ಜನಸಂಖ್ಯೆಯ ಕಾಲುಭಾಗ!) ಬಲಿತೆಗೆದುಕೊಂಡಿತು. (ಭಾರತದಲ್ಲಿಯೂ ಎಮರ್ಜೆನ್ಸಿಯ ಕರಾಳ ಛಾಯೆ ಹೊತ್ತಿಕೊಂಡದ್ದು 1975ಲ್ಲಿ ಎನ್ನುವುದು ಕಾಕತಾಳೀಯವಾದರೂ ಇಲ್ಲಿ ನೆನಪಿಗೆ ಬರುತ್ತದೆ.) ಇನ್ನು ಅಲ್ಲಿಂದ ಗುಳೆಹೋದ ಜನರೆಷ್ಟೋ! ಆ ಅವಧಿಯಲ್ಲಿ ಕಾಂಬೋಡಿಯ ಜನಸಮುದಾಯದ ಮೇಲೆ ಎಸಗಲಾದ ಹಿಂಸಾಚಾರ, ಜನಾಂಗೀಯ ಹತ್ಯೆಗಳು ಮತ್ತು ಯುದ್ಧಕಾಲದ ಅಪಚಾರಗಳ ವಿಚಾರಣೆಗಾಗಿ 2003ರ ಅಂತರಾಷ್ಟ್ರೀಯ ಒಡಂಬಡಿಕೆಯಂತೆ ವಿಶೇಷ ನ್ಯಾಯಾಲಯಗಳು ರಚಿತವಾದವು. ಇಪ್ಪತ್ತೈದು ವರ್ಷಗಳ ಹಿಂದಿನ ಮಾನಸಿಕ ಗಾಯಗಳಿಗೆ ತಡವಾಗಿಯಾದರೂ ತಂಪೆರೆಯುವ ಈ ಪ್ರಯತ್ನ ಹಳೆಗಾಯಗಳನ್ನು ಮತ್ತೆ ಹಸಿಮಾಡದೇ ಇರಲಾರದು. ೨೦೦೯ರಲ್ಲಿ ನಡೆಯುವ ಅಂತಹ ಒಂದು ವಿಚಾರಣೆಯೊಂದಿಗೆ ಶುರುವಾಗುವ ಕಾದಂಬರಿ ತೆರೆದುಕೊಳ್ಳುತ್ತ ಹೋದಂತೆ ಕೆಲವು ಪಾತ್ರಗಳ ಮೂಲಕ ಯುದ್ಧಪೂರ್ವದ ಕಾಂಬೋಡಿಯದ ದೈನಂದಿನ ಬದುಕು, ಅಂತರ್ಯುದ್ಧದ ಕ್ರೌರ್ಯ ಮತ್ತು ಮುಗಿದು ದಶಕಗಳ ನಂತರವೂ ದುಃಸ್ವಪ್ನವಾಗಿ ಅದು ಕಾಡುವ ಕ್ಷಣಗಳನ್ನು ಕಟ್ಟಿಕೊಡಲು ಆರಂಭಿಸುತ್ತದೆ. ಆ ಮೃತ್ಯುಕೂಪದಿಂದ ತಪ್ಪಿಸಿಕೊಂಡು ಹೊರಬರಲು ಸಾಮಾನ್ಯ ಜನರು ನಡೆಸುವ ಸಾಹಸ, ಅಲ್ಲಿಂದ ತಪ್ಪಿಸಿಕೊಂಡು ಬಂದ ನಂತರ ಹೊಸ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ನಡೆಸುವ ಹೆಣಗಾಟ, ಹಾಗೆ ಬದುಕನ್ನು ಕಟ್ಟಿಕೊಳ್ಳಲು ನಮ್ಮಲ್ಲಿ ಇರುವ ಅದಮ್ಯ ಶಕ್ತಿಯನ್ನೂ ಈ ಕಾದಂಬರಿ ಪರಿಚಯಿಸುತ್ತದೆ. ಅದೇ ರೀತಿ ರಾಜಕೀಯ ಒಲವು-ನಿಲುವು, ನಮ್ಮ ಸೀಮಿತ ದೃಷ್ಟಿಗೆ ಸರಿ ಎಂದೇ ಕಾಣುವ ತತ್ವನಿಷ್ಟೆ, ದೇಶಭಕ್ತಿಯ ಆಶೋತ್ತರಗಳಿಂದ ಶುರುವಾಗುವ ಹೋರಾಟಗಳು ಹೇಗೆ ಜನರ ನೆಮ್ಮದಿಯ ಜೊತೆ ಸರಸವಾಡುತ್ತವೆ, ಘಾತಕವಾಗಿ ರೂಪಾಂತರಗೊಳ್ಳುತ್ತವೆ ಎನ್ನುವ ಎಚ್ಚರಿಕೆಯನ್ನೂ ಇಲ್ಲಿ ಗಮನಿಸಬಹುದು.

ಪಶ್ಚಿಮದ ಪ್ರಭಾವ, ಅದರಲ್ಲಿಯೂ ಅಮೇರಿಕದವರು ನಡೆಸುತ್ತಿದ್ದ ರಕ್ತಪಾತದಿಂದ ದೇಶವನ್ನು ಮುಕ್ತಗೊಳಿಸಿ ಕೃಷಿ ಆಧರಿಸಿದ ಆದರ್ಶ ರಾಜ್ಯದ ಭರವಸೆ ಕೊಡುವ ಖಮೇರು ರೂಷ್ ಸಂಘ(Khmer Rouge)ವಾಗಲಿ, ರಾಜ ಸಿಹನೌಕ್ (Norodom Sihanouk)ನಾಗಲಿ ಆ ಕಾಲಘಟ್ಟದಲ್ಲಿ ನಮಗೆ ಅತ್ಯವಶ್ಯವಾದ ಸಂಘಟನೆಗಳಾಗಿ, ಮಹಾನ್ ನಾಯಕರಾಗಿಯೇ ಕಾಣುತ್ತಾರೆ. ಅಮೇರಿಕದ ಬಾಂಬುಗಳಿಗೆ ತಮ್ಮ ಸಂಬಂಧಿಕರು ಬಲಿಯಾಗುತ್ತಿರುವಾಗ, ‘ದೇಶವನ್ನು ಸ್ವತಂತ್ರಗೊಳಿಸುವುದಕ್ಕಿಂತ ಶ್ರೇಷ್ಟವಾದ ಕಾರ್ಯ ಬೇರೇನಿದೆ?” ಎಂದು ಖಮೇರು ರೂಷ್ ಸಂಘಟನೆಗೆ ಸೇರಿಕೊಂಡವರನ್ನು ದೋಷಿಯೆನ್ನಲಾಗುವುದೇ? ಕಾಂಬೋಡಿಯಾ 1975ರಲ್ಲಿ ಬಿಡುಡೆಯಾಯಿತು. ಆಗ ‘ಖಮೇರು ರೂಷ್’ ಸಂಘ ದೇವರ ಸೈನ್ಯದಂತೆಯೇ ಕಂಡಿರಬೇಕು. ನಂತರ ಆದರ್ಶದ ಹೆಸರಿನಲ್ಲಿ ಕಾಂಬೋಡಿಯದ ಜನರಿಲ್ಲಿಯೇ ಭೇದಭಾವ ಹುಟ್ಟಿಸುವಂತೆ ಮಾಡಿದ್ದೂ ಅದೇ ಖಮೇರು ರೂಷ್ ಸಂಘವೇ! ಆ ರೂಪಾಂತರವನ್ನು ಎಚ್ಚರಿಕೆಯಿಂದ ಗಮನಿಸಿದರೆ ಅದರ ವಿಶ್ವರೂಪವನ್ನೂ ಗಮನಿಸಬಹುದು. ಅದೇ ಕಾರಣಕ್ಕೆ ಈ ಕಾದಂಬರಿಯ ಕಥಾವಸ್ತು ಸಕಾಲಿಕವಾಗುತ್ತದೆ. ಅವರ ಅನುಭವಗಳು ನಮ್ಮನ್ನು ಎಚ್ಚರಿಸುತ್ತವೆ. ಇತರರ ಅನುಭವದಿಂದ ಕಲಿಯಬಹುದಾದ ಪಾಠಕ್ಕಿಂತ ಸುಲಭವೂ ಸುರಕ್ಷಿತವೂ ಆದ ಪಾಠ ಬೇರೇನಿದೆ? ಅಂತಹ ಅನುಭವವೊಂದನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.

ಕಾಂಬೋಡಿಯಾದ ಅಂತರ್ಯುದ್ಧದಲ್ಲಿ ಪಾರಾಗಿ ಬಂದ ಕುಟುಂಬದ ಒಂದು ಚೂರು ಅವರನ್ನು ಕಾಡಿದ ಅದೇ ಅಮೇರಿಕಕ್ಕೆ ವಲಸೆ ಬರುವುದು ಮತ್ತು ಕಂಡುಕೊಂಡ ಹೊಸೆ ನೆಲೆಯಲ್ಲಿ ಬೇರುಬಿಡಲು ಪರದಾಡುವುದು ಈ ಕತೆಯ ಇನ್ನೊಂದು ಘಟ್ಟ. ಗಂಡ ಇಮ್, ಮಗ ಮತ್ತು ಸಂಬಂಧಿಕರು ಎಲ್ಲಿರುವರೆಂದು ತಿಳಿಯದೇ ಉಳಿದ ಮೂರು ಮಕ್ಕಳನ್ನು ಕರೆದುಕೊಂಡು ಅಪರಿಚಿತ ನುಡಿನಡೆಗಳ ನಾಡಿನಲ್ಲಿ ಬದುಕು ಸವೆಸುವ ಕಾದಂಬರಿಯ ಕಥಾನಾಯಕಿ ಶಿವಿ, ಜಗತ್ತಿನ ಬೇರೆಬೇರೆ ದೇಶಗಳಿಂದ ಬಂದ ವಲಸಿಗರ ರೂಪಕವಾಗುತ್ತಾಳೆ. ಅಮೇರಿಕೆಗೆ ಬಂದ ಇಂಜಿನಿಯರ್ ಮತ್ತು ವೈದ್ಯರುಗಳ ಕಥಾನಕ ಕನ್ನಡ ಸಾಹಿತ್ಯಕ್ಕೆ ಪರಿಚಿತವೇ. ಅಂತಹ ಅದೃಷ್ಟವಿಲ್ಲದ ಭಾರತೀಯ ವಲಸಿಗರ ಸಂಖ್ಯೆ ಕಡಿಮೆಯೇನಿಲ್ಲ. ಇಲ್ಲಿನ ಕತೆಯಲ್ಲಿ ಆ ಲೋಕದ ಪರಿಚಯ ಚೆನ್ನಾಗಿಯೇ ಆಗುತ್ತದೆ. ಕ್ಯಾಲಿಫೋರ್ನಿಯಾದ ಸ್ಟಾಕ್ಟನ್ ನಗರದಲ್ಲಿ ಮನೆಮಾಡಿದ ಕೆಲವು ದಶಕಗಳ ನಂತರವೂ ಶಿವಿಯನ್ನು ದುಸ್ವಪ್ನಗಳು ಕಾಡುವುದು ನಿಲ್ಲುವುದಿಲ್ಲ. ಮರೆಯಬೇಕೆಂದರೂ ಮರೆಯಲಾಗದ ಅನುಭವಗಳು, ಬಿಟ್ಟು ಬಂದ ದೇಶದ, ಕುಟುಂಬದ ನೆನಪು, ನೆಲೆನಿಂತ ಹೊಸ ದೇಶದಲ್ಲಿ ಹೊಸ ಬದುಕು ಕಟ್ಟಿಕೊಳ್ಳುತ್ತಲೇ ಒಡೆದು ಹೋಳಾದ ಕುಟುಂಬವನ್ನು ಮತ್ತೆ ಒಗ್ಗೂಡಿಸುವ ಕನಸು – ಕತೆಯೊಂದು ಮನತಟ್ಟಲು ಬೇಕಾದ ಎಲ್ಲವೂ ಈ ಕಾದಂಬರಿಯಲ್ಲಿವೆ.

ಕನ್ನಡ ಜನತೆ ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಹರಡಿಕೊಳ್ಳುತ್ತಿರುವ ಈ ಕಾಲದಲ್ಲಿ ಅನಿವಾಸಿಗಳ ಕಥನಗಳು ಇನ್ನೂ ಬಹಳಷ್ಟು ಬೇಕು. ಹೊಸಹೊಸ ಅನಿವಾಸಿ ಲೇಖಕರು ಬಂದಷ್ಟೂ ಜಗತ್ತಿನ ವೈವಿಧ್ಯತೆಯನ್ನು ಕನ್ನಡದ ಮನಸ್ಸುಗಳ ಮೂಲಕ ಕಾಣುವ ಅದೃಷ್ಟ ಓದುಗರಿಗೆ ಲಭಿಸುತ್ತದೆ. ಸಾಹಿತ್ಯಿಕವಾಗಿ ಅನಿವಾರ್ಯವೆನಿಸುವ ಈ ಅಗತ್ಯವನ್ನು ತುಂಬಿಕೊಡಲು ಹುಮಸ್ಸಿನಿಂದ ತಮ್ಮ ಕತೆಗಳ ಮೂಲಕ ಈಗಾಗಲೇ ಯಶಸ್ವಿಯಾಗಿರುವ ಸಂಜೋತಾರಿಗೆ ಈ ಕಾದಂಬರಿ ಯಶಸ್ಸು ತರಲಿ, ಮತ್ತು ಕನ್ನಡದ ಓದುಗರಿಗೆ ಅವರ ಇನ್ನಷ್ಟು ಕತೆಕಾದಂಬರಿಗಳು ಸಿಗುವಂತಾಗಲಿ, ಅವು ಕನ್ನಡ ಕಥನ ಜಗತ್ತನ್ನು ಶ್ರೀಮಂತಗೊಳಿಸಲಿ ಎಂದು ಹಾರೈಸುವೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ