Advertisement
ಒಡಲ ನಂಟಿಗೆ ಗಂಟು ಬಿದ್ದಾಗ: ರಾಮಲಿಂಗ ಮಾಡಗಿರಿ ಕೃತಿಯ ಕುರಿತು ಶಿವಕುಮಾರ ಕರನಂದಿ ಬರಹ

ಒಡಲ ನಂಟಿಗೆ ಗಂಟು ಬಿದ್ದಾಗ: ರಾಮಲಿಂಗ ಮಾಡಗಿರಿ ಕೃತಿಯ ಕುರಿತು ಶಿವಕುಮಾರ ಕರನಂದಿ ಬರಹ

ಕವಿತೆ ಅನುಕರಿಸಿದೆ, ನಕಲಿಸದೆ, ತನ್ನ ಸುತ್ತಮುತ್ತಲಿನ ಘಟನೆಗಳ ಮೇಲೆ ಕೇಂದ್ರಿಕರಿಸಿ, ತನ್ನೊಳಗಿನ ಭಾವನೆಗಳ ಮೂಲಕ ಕವಿತೆ ಕಟ್ಟಬೇಕಿದೆ. ರೂಪಕ, ಪ್ರತಿಮೆ, ಹೋಲಿಕೆಗಳೊಂದಿಗೆ ಕಾವ್ಯವನ್ನು ರಚಿಸಬೇಕಿದೆ. ಅಂದಾಗ ಮಾತ್ರ ಆ ಮನುಷ್ಯ ಚಿಂತನಾಶೀಲ ಕವಿಯಾಗಲು ಸಾಧ್ಯ. ಹೀಗೆ ಬರೆಯುತ್ತಾ ಸಾಗಿದಾಗ ನಾಳೆಯ ಚಿಂತಕನಾಗಲು ಸಾಧ್ಯ. ಈ ಒಂದು ದಿಸೆಯಲ್ಲಿ ಗೆಳೆಯ ರಾಮಲಿಂಗ ಮಾಡಗಿರಿ ತನ್ನ ಮೊದಲ ಸಂಕಲನದಿಂದ ಪ್ರವರ್ಧಮಾನಕ್ಕೆ ಕಾಲಿಡುತ್ತಿದ್ದಾರೆ. ಇವರು ಸ್ನಾತಕೋತ್ತರ ಪದವೀಧರರಾಗಿದ್ದು ಗಿಡಮರಗಳ ನಾಡಿಮಿಡಿತ ಅರಿತ ಇವರು ಕವಿತೆಯ ಸಾರವನ್ನು ಹೆಕ್ಕಲು ಬಂದಿದ್ದಾರೆ.
ರಾಮಲಿಂಗ ಮಾಡಗಿರಿ ಕವನ ಸಂಕಲನ “”ಒಡಲಿಗಂಟಿದ ನಂಟು” ಕುರಿತು ಶಿವಕುಮಾರ ಮೋಹನ ಕರನಂದಿ ಬರಹ

ಕಾವ್ಯ ಒಂದು ಸಾಫ್ಟ್ ಲೋಕ ಬರೆಯುವ, ಓದುವ ಭಾವನಾ ಲೋಕ. ಕಾವ್ಯವೆಂದರೆ ಬೃಹದಾಕಾರವಾಗಿ ಹರಡುವ ಬಳ್ಳಿ ಗಿಡ, ಅದು ಪಸರಿಸಿ ಹಬ್ಬುವ ಕನಸುಗಾರಿಕೆ. ಹೀಗಾಗಿಯೇ ಅನಾದಿಕಾಲದಿಂದಲೂ ಕಾವ್ಯದ ಪ್ರವೃತ್ತಿ ಕಾಲಕಾಲಕ್ಕೆ ತಕ್ಕಂತೆ ಬೆಳೆಯುತ್ತ ಬರೆಯುತ್ತಾ ಸಾಗಿದೆ. ಅದರಲ್ಲೂ ಕನ್ನಡದ ಕಟ್ಟುವಿಕೆಯಲ್ಲಿ ಕವಿ ಪ್ರಾಜ್ಞರು ಪ್ರಖರವಾಗಿ ಬೆಳೆದಿರುತ್ತಾರೆ.

ಹಳೆಗನ್ನಡ, ನಡುಗನ್ನಡ, ನವೋದಯ ಕಾಲದಿಂದ ಈಗಿನ ಕಾಲದವರೆಗೂ ಕಾವ್ಯದ ಲೇಖನಿ ಸಾಗುತ್ತಾ ಬಂದಿದೆ. ಅಂದಿನಿಂದ ಇಂದಿಗೂ ಕವಿಯ ಪರಿಕಲ್ಪನೆ ಕೋಮಲತೆಯಿಂದ ಕೂಡಿದೆ. ಅಲ್ಲಿಂದ ಇಲ್ಲಿನತನಕವು ಕವಿತೆಯಲ್ಲಿನ ಪದಗಳು ಪಲ್ಲಟಗೊಳ್ಳುತ್ತಾ ಒಬ್ಬರ ಕಿಸೆಯ ಪದವು ಮತ್ತೊಬ್ಬರ ಕಿಸೆಯಲ್ಲಿದೆ. ಪದಗಳು ಅವೇ ಆಗಿದ್ದರೂ ಭಾವಗಳು ಬದಲಾಗುತ್ತಾ ಸಾಗಿವೆ. ಈ ಪ್ರಸ್ತುತ ದಿನಮಾನಗಳಲ್ಲಿ ಅಂಗೈಯ ತಂತ್ರ ಬಿರುಸಾಗಿ ಬಲಿತಿರುವುದು ನಾವು ನೀವು ನೋಡಬಹುದು. ಆ ಮಾಯಾಜಾಲ ಸ್ಕ್ರಾಲ್ ಮಾಡಿದಂತೆ ಮನಮುಟ್ಟುವ ಕವಿತೆಗಳು, ತನ್ನ ವೈಸ್ ಮುಖಾಂತರ, ಚಿತ್ರಾಕಾರದ ಬರಹಗಳ ಮುಖಾಂತರ ಕಾವ್ಯಜಗತ್ತು ಕಾಣುತ್ತಿದೆ.

ಈಗ ಮನಮುಟ್ಟುವ ಕವಿತೆಗಳು ಪ್ರೇರಣಾರೂಪಕವಾಗಿ ನಾನು ಬರೆಯಬಲ್ಲೆ ಎನ್ನುವ ಮನಸ್ಸಿನವರು ಕಾವ್ಯ ಕಟ್ಟುವಿಕೆಯಲ್ಲಿ ಬೆರೆತು ಆತುರಾತುರವಾಗಿ ಇಳಿದುಬಿಡುತ್ತಾರೆ. ಕವಿತೆ ಬರೆದು, ನಾನು ಕವಿಯಾದೆ. ಸೋಶಿಯಲ್ ಮಿಡಿಯಾಗಳಲ್ಲಿ ಪ್ರಚುರ ಪಡಿಸಿ ಲೈಕ್, ಕಾಮೆಂಟ್‌ಗೆ ಹಾತೊರೆಯುತ್ತಿದ್ದಾರೆ. ಇದು ಆಘಾತಕಾರಿಯಾದ ಪ್ರಸ್ತುತ ದಿನಮಾನದ ದೃಶ್ಯಾವಳಿಗಳು.

(ರಾಮಲಿಂಗ ಮಾಡಗಿರಿ)

ಕವಿತೆ ಅನುಕರಿಸಿದೆ, ನಕಲಿಸದೆ, ತನ್ನ ಸುತ್ತಮುತ್ತಲಿನ ಘಟನೆಗಳ ಮೇಲೆ ಕೇಂದ್ರಿಕರಿಸಿ, ತನ್ನೊಳಗಿನ ಭಾವನೆಗಳ ಮೂಲಕ ಕವಿತೆ ಕಟ್ಟಬೇಕಿದೆ. ರೂಪಕ, ಪ್ರತಿಮೆ, ಹೋಲಿಕೆಗಳೊಂದಿಗೆ ಕಾವ್ಯವನ್ನು ರಚಿಸಬೇಕಿದೆ. ಅಂದಾಗ ಮಾತ್ರ ಆ ಮನುಷ್ಯ ಚಿಂತನಾಶೀಲ ಕವಿಯಾಗಲು ಸಾಧ್ಯ. ಹೀಗೆ ಬರೆಯುತ್ತಾ ಸಾಗಿದಾಗ ನಾಳೆಯ ಚಿಂತಕನಾಗಲು ಸಾಧ್ಯ. ಈ ಒಂದು ದಿಸೆಯಲ್ಲಿ ಗೆಳೆಯ ರಾಮಲಿಂಗ ಮಾಡಗಿರಿ ತನ್ನ ಮೊದಲ ಸಂಕಲನದಿಂದ ಪ್ರವರ್ಧಮಾನಕ್ಕೆ ಕಾಲಿಡುತ್ತಿದ್ದಾರೆ. ಇವರು ಸ್ನಾತಕೋತ್ತರ ಪದವೀಧರರಾಗಿದ್ದು ಗಿಡಮರಗಳ ನಾಡಿಮಿಡಿತ ಅರಿತ ಇವರು ಕವಿತೆಯ ಸಾರವನ್ನು ಹೆಕ್ಕಲು ಬಂದಿದ್ದಾರೆ. ಇವರ “ಒಡಲಿಗಂಟಿದ ನಂಟು” ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹಧನವನ್ನು ಪಡೆದುಕೊಂಡಿದೆ.

ಕವಿತೆ ಪ್ರೀತಿಸುವುದಲ್ಲ, ಪ್ರತಿಭಟಿಸುವುದು ಎಂದು ಸಾಬೀತು ಪಡಿಸಿದ ಈ ಕೃತಿ ಮೇಲ್ನೋಟಕ್ಕೆ ಎದ್ದು ಕಾಣಿಸುತ್ತದೆ. ಸಾಮಾನ್ಯರಲ್ಲಿ ಅಸಾಮಾನ್ಯ ಕವಿತೆಗಳು ಎದ್ದುಗಾಣಿಸುತ್ತವೆ. ಕವಿ ಇಲ್ಲಿ ಪ್ರೀತಿಯಿಂದ ಪ್ರತಿಭಟಿಸಿದ್ದಾನೆ. ಕೆಲವೊಂದು ಕಡೆ ಆಕ್ರೋಶಗೊಂಡಿದ್ದಾನೆ. ಇನ್ನೂ ಕೆಲವು ಕಡೆ ಮಮ್ಮಲ ಮರಗಿದ್ದಾನೆ. ಮತ್ತೊಂದು ಕಡೆ ಮೋಹಕ ನಗೆ ಬೀರಿ ನಕ್ಕು ಹಗುರಾಗಿದ್ದಾನೆ. ಕವಿ ಹೀಗೆ ಮಾತಾಗಬೇಕು ಪ್ರತಿಭಟಿಸುತ್ತಾ ಪ್ರೀತಿಸಬೇಕು. ಕವಿ ಪ್ರೀತಿಯಿಂದ ಜಗತ್ತನ್ನು ಗೆಲ್ಲಬೇಕೆಂಬ ಆಶಯ ಹೊತ್ತವನು. ಹಳ್ಳ-ಕೊಳ್ಳ, ನದಿ-ಜಲ, ಸಾಗರ-ಸಮುದ್ರ ಸೇರಲು ಬಯಸಿದವನು. ಈ ಕವಿಯ ಆಶಯವೂ ಕೂಡಾ ಆಗಿದೆ.

ಯಾವುದೇ ಕವಿ ಮೊದಮೊದಲು ತನ್ನ ತಾಯಿ ಕುರಿತು ಬರೆಯುತ್ತಾ ಪ್ರೌಢಿಮೆಯಲ್ಲಿ ಪ್ರೇಯಸಿಯ ಪ್ರೀತಿಗೆ ಬಲಿಯಾಗುತ್ತಾನೆ. ಹಾಗೆಯೇ ನಿವೇದನೆಗಳನ್ನು ದಾಖಲಿಸಿದ್ದಾನೆ. ನೆನಪುಗಳ ನಿವೇದನೆ ಆಲಂಗಿಸುತ್ತಾನೆ. ಅದಕ್ಕೆ ಈ ಕವಿಯು ಹೊರತಲ್ಲ. ಜೊತೆಗೆ ತಾನು ಕಂಡುಂಡ ಸಮಾಜದ ನೋವು, ಸಂಕಟವನ್ನು ಬರೆಯಲು ಬಯಸುತ್ತಾನೆ.

ಈ ಸಂಕಲನದ ಕವಿತೆಗಳ ಚರಣಗಳು ಇವರ ಕವಿತಾ ಶಕ್ತಿಗೆ ಕಳಸ ಇಟ್ಟಂತಿವೆ. ರಾಮಲಿಂಗ ಅವರು ಹೀಗೆ ಬರೆಯುತ್ತಾರೆ

ಪ್ರೀತಿಯಿಲ್ಲದ ಜಗದೊಳು ಬಾಳಲೊಲ್ಲೆ
ಸಮತೆಯಿಲ್ಲದ ಸಮಾಜದೊಳು ನಡೆಯಲೊಲ್ಲೆ

ಈ ಕವಿಗೆ ಭಾವಸತ್ವವಿದೆ, ಪ್ರೀತಿಯೆಂಬ ಸಾಮಗ್ರಿಯಿದೆ, ಈ ಆಡುವ ನುಡಿಯಲ್ಲಿ ರೂಕ್ಷ ಸೊಗಡಿದೆ.

ಮುಂದುವರೆದು,

ಮಾತು ಬರಲ್ರಪ್ಪೋ..! ನನಗ
ಮೌನವಾಗಿ ಆಮ್ಲಜನಕ ನೀಡುವ ಮೂಕಿ ನಾನು…..

ಪದದ ನಾದಪ್ರವಾಹ ಪದ್ಯಕ್ಕೊಂದು ಅಪೂರ್ವತೆ ಪ್ರಾಪ್ತವಾಗುವ ಸಾಲಿದು. ಮತ್ತೆ ಬದುಕ ಮಮತೆಗೊಂದು ಸ್ಫೂರ್ತಿಯ ಹಾಡು ಹಾಡಿದ್ದಾರೆ ಕೂಡ.

ನೋವು ನಲಿವು ಸಹಿಸಿಕೊಂಡು
ಬಾಳಿನ ತಕ್ಕಡಿ ತೂಗೋಣ….

ಶಾಂತಿಗಾಗಿ ಎದೆಯಂಗಳ ಬಿಚ್ಚಿದ್ದೇನೆ
ಶ್ವೇತವರ್ಣದ ಪುಷ್ಪಚೆಲ್ಲಿ ಮುಕ್ತವಾಗಿ ಆಹ್ವಾನಿಸುತ್ತೇನೆ……

ಮೌನದ ಸ್ಮಶಾನದಲ್ಲಿ
ನನ್ನ ಎಷ್ಟೋ ನೆನಪುಗಳು
ಜೀವಂತ ಸಮಾಧಿಯಾಗುತ್ತಿರುವಾಗ
ನಿನಗೇಗೆ ಅರ್ಥವಾದೀತು…..

ಬೆತ್ತಲೆ ಜಗತ್ತಲ್ಲಿ ಕತ್ತಲೆ ತುಂಬಿದೆ
ಮನವೋ ಮೌನವೋ ಮೈಮಾಟವೋ…..

ಈ ಮೇಲಿನ ಮೂರು ಪದ್ಯಗಳ ಸಾಲುಗಳು ಸತ್ವಹಿತ ಭಾಷಾಪ್ರಯೋಗ. ಹಳತನವನ್ನು ಹೊಸತನವನ್ನಾಗಿ ಹೇಳುವ ಪರಿ ಅನನ್ಯವಾದದ್ದು. ಕವಿ ಮಾಡಗಿರಿ ಅವರು ಹೊಸ ರೀತಿಯ ಅಭಿವ್ಯಕ್ತಿಗೆ ಹಳೆಯ ಮಾಧ್ಯಮದಲ್ಲೇ ಬದಲಾವಣೆಗಳನ್ನು ಮಾಡಿಕೊಂಡು ಹೊಸ ವಿಷಯಗಳಿಗೆ ತಕ್ಕಂತೆ ಹೊಸ ಮಟ್ಟುಗಳ ಮೂಲಕ ಹೊಸ ಶೈಲಿಯಲ್ಲಿ ಕವಿತೆ ಕಟ್ಟಿದ್ದಾರೆ. ವಿನೂತನಕ್ಕೆ ಹಂಬಲಿಸಿ ಭಾವ ಕಲ್ಪನೆಗಳ ಸೃಷ್ಟಿಸುವ ಮೂಲಕ ಕನ್ನಡ ಕಾವ್ಯಕ್ಕೆ ಕೃತಿ ನೀಡುವಲ್ಲಿ ಸಫಲರಾಗಿದ್ದಾರೆ. ಸುತ್ತಲಿನ ವಾತಾವರಣಕ್ಕೆ ಪ್ರತಿಸ್ಪಂದಿಯಾಗಿ ಸ್ವಚ್ಛಂದವಾಗಿ ಹಾಡಬೇಕೆಂಬ ಮನಸ್ಸಿಂದ ಕಲಿಯುತ್ತಿದ್ದಾರೆ. ಇವರ ಆಶಯ ಈಡೇರಲಿ ನನ್ನ ಆಶಯವೂ ಇದಾಗಿದೆ.

(ಕೃತಿ: ಒಡಲಿಗಂಟಿದ ನಂಟು (ಕವನ ಸಂಕಲನ), ಲೇಖಕರು: ರಾಮಲಿಂಗ ಮಾಡಗಿರಿ, ಪ್ರಕಾಶನ : ಕಿರಂ ಪ್ರಕಾಶನ (ದೂರವಾಣಿ ಸಂಖ್ಯೆ : 91102 01711), ಬೆಲೆ : 130/-)

 

About The Author

ಶಿವಕುಮಾರ ಮೋಹನ ಕರನಂದಿ

ಶಿವಕುಮಾರ ಮೋಹನ ಕರನಂದಿ ಅವರ ಕೃತಿ “ಮೌನ ಮಾತಾದಾಗ”(ಕವನಸಂಕಲನ) ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರರ ಯೋಜನೆಯಲ್ಲಿ ಪ್ರಕಟಿತಗೊಂಡಿದೆ. ನೆರಳಿಗಂಟಿದ ನೆನಪು-ಗಜಲ್ ಸಂಕಲನ, ಗಾಲಿಬ್ ನಿನಗೊಂದು ಸಲಾಂ-ಗಜಲ್ ಇವರ ಸಂಪಾದಿತ ಕೃತಿಗಳು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ