ಕಾವ್ಯ “ಅಷ್ಟು ಸರಳವೇ ನಮ್ಮ ದೇಹದ ಕೆಲ್ಸ? ಬಾಯಲ್ಲಿ ಫಿಸಿಕಲೀ ಆಹಾರ ನಜ್ಜುಗುಜ್ಜಾಗಿರತ್ತೆ. ಆದ್ರೆ ಕೆಮಿಕಲೀ ಅದ್ರಲ್ಲಿರೋ ಶಕ್ತಿಯನ್ನ ನಾವಿನ್ನೂ ಹೀರಿಕೊಂಡಿರಲ್ಲ. ನಮ್ಮ ಬಾಯಲ್ಲಿ ಭೌತಿಕವಾಗಿ ಅಂದ್ರೆ ಫಿಸಿಕಲಿ ಮುರಿದುಕೊಂಡ ಆಹಾರ, ಜೊಲ್ಲಿನಲ್ಲಿರೋ ‘ಎಂಝೈಮ್’ಗಳ ಸಹಾಯದಿಂದ ಕೊಂಚಕೊಂಚವಾಗಿ ರಾಸಾಯನಿಕವಾಗಿ ಡೈಜೆಸ್ಟ್ ಆಗೋಕೆ ಪ್ರಾರಂಭಿಸಿರತ್ತೆ. ಆಮೇಲೆ ಮೆಲ್ಲನೇ ನಮ್ಮ ಅನ್ನನಾಳದಲ್ಲಿ ‘ಸ್ಟಾಪ್, ಸ್ಟಾರ್ಟ್, ಸ್ಟಾಪ್, ಸ್ಟಾರ್ಟ್’ ಅಂತ ಆಟ ಆಡತ್ತೆ” ಎಂದಳು.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನೈದನೆಯ ಕತೆ
ನೆತ್ತಿ ಸುಡುತ್ತಿದ್ದ ಸೂರ್ಯ, ಮೆಲ್ಲನೆ ಮೋಡದ ಮರೆಯಲ್ಲಿ ಆಗೀಗ ಕಣ್ಣಾಮುಚ್ಚಾಲೆ ಆಡುತ್ತಿದ್ದ. ಚುರುಗುಟ್ಟುತ್ತಿದ್ದ ಹೊಟ್ಟೆಯ ಮಾತು ಕೇಳಿ ಹೋಟೆಲಿಗೆ ನುಗ್ಗಿದ್ದ ಕಾವ್ಯ ಮತ್ತು ಕುಟುಂಬಕ್ಕೆ ಬಗೆ ಬಗೆಯ ತಿನಿಸುಗಳ ಘಮ ಬಾಯಲ್ಲಿ ನೀರೂರಿಸಿತ್ತು. ಸೂಕ್ತ ಟೇಬಲ್ ಹುಡುಕಿ, ಮೆನು ನೋಡಿ, ಆರ್ಡರ್ ಮಾಡಿ ಊಟಕ್ಕಾಗಿ ಕಾಯುತ್ತಾ ಕುಳಿತಾಗ ಇವರ ಮಾತಿನ ಚೀಲ ಮತ್ತೊಮ್ಮೆ ಬಿಚ್ಚಿಕೊಂಡಿತು.
ವರ್ಣ, ಕಾವ್ಯಳೆಡೆಗೆ ತಿರುಗಿ, “ಅಲ್ಲ ಕಾವ್ಯಕ್ಕಾ, ನಮ್ಮ ದೇಹಕ್ಕೆ, ನಾವಿನ್ನೂ ಊಟ ಮಾಡಿಲ್ಲ, ಒಂದು ತುತ್ತನ್ನೂ ಬಾಯಲ್ಲಿಟ್ಟಿಲ್ಲ ಅಂತ ಗೊತ್ತು ತಾನೆ? ಬರೀ ಊಟದ ಘಮಕ್ಕೇ ಬಾಯಲ್ಲಿ ನೀರು ಬರ್ಸತ್ತಲ್ಲಾ? ಅದ್ಯಾಕೆ?” ಎಂದಳು. ಆಗ ಕಾವ್ಯ, “ಹೂಂ ವರ್ಣ, ಅದು ನಮ್ಮ ದೇಹದ ದಡ್ಡತನವಲ್ಲ, ಬುದ್ಧಿವಂತಿಕೆ. ಮುಂದಿನ ಕೆಲಸಕ್ಕೆ ಅಣಿಯಾಗುವ ರೀತಿ. ಆಹಾರದ ಪರಿಮಳ ಮೂಗಿಗೆ ಬಂದ ತಕ್ಷಣ ಏನಾಗತ್ತೆ ಗೊತ್ತಾ? ನಮ್ಮ ಮೂಗಿನಲ್ಲಿನ ‘ಸೆನ್ಸರ್’ಗಳಿಗೆ ರಾಸಾಯನಿಕವಾಗಿ ಈ ಪರಿಮಳದ ಕಣಗಳು ಅಂಟಿಕೊಂಡಾಗ, ಅವು ಅರೆಕ್ಷಣದಲ್ಲಿ ನಮ್ಮ ಮೆದುಳಿಗೆ ಎಲೆಕ್ಟ್ರಿಕ್ ಸಿಗ್ನಲ್ ಕಳ್ಸತ್ವೆ. ಆಗ ಮೆದುಳು ನಮ್ಮ ನೆನಪಿನ ಕೋಶದಲ್ಲಿ ಇಣುಕಿ ಹಾಕಿ, ‘ಓಹ್ ಇದು ಊಟದ ಪರಿಮಳ; ಹಾಗಾದ್ರೆ ಇನ್ನೇನು ಊಟ ಬಂತು, ಜೀರ್ಣಕ್ರಿಯೆಯನ್ನ ಶುರು ಮಾಡಿ” ಅಂತ ಆರ್ಡರ್ ಮಾಡತ್ತೆ. ಈ ಸಿಗ್ನಲ್ ಬಂದ ತಕ್ಷಣ ನಮ್ಮ ಬಾಯಲ್ಲಿ ‘ಸಲೈವರಿ ಗ್ಲ್ಯಾಂಡ್’ ಅಂತ ಇರತ್ತೆ. ಕನ್ನಡದಲ್ಲಿ ಅದನ್ನ ಲಾಲಾರಸ ಗ್ರಂಥಿ ಅಂತೀವಿ. ಅದರ ಕೆಲ್ಸ ‘ಸಲೈವಾ’ ಅಂದ್ರೆ ಜೊಲ್ಲನ್ನ ಉತ್ಪತ್ತಿ ಮಾಡೋದು. ಆ ಜೊಲ್ಲು, ಆಹಾರ ಬಾಯಿಗೆ ಬಂದ ತಕ್ಷಣ ತನ್ನ ಕೆಲಸ ಪ್ರಾರಂಭಿಸತ್ತೆ” ಎಂದು ವಿವರಿಸಿದಳು.
ಅಷ್ಟರಲ್ಲಿ ಇವರು ಆರ್ಡರ್ ಮಾಡಿದ್ದ ಒಂದಷ್ಟು ‘ಸ್ಟಾರ್ಟರ್’ಗಳನ್ನು ವೇಯ್ಟರ್ ತಂದಿರಿಸಿದ. ಆಗ ಸಮುದ್ರ, “ಆಹಾ! ಅಮ್ಮ ನೀವು ಎಕ್ಸ್ಪ್ಲೇನ್ ಮಾಡಿದ ಎಲ್ಲವೂ ನನ್ನಲ್ಲಿ ನಡೀತಾ ಇದೆ. ನೋಡಿ, ಈ ಪನೀರ್ ಬಾಯಲ್ಲಿನ್ನೂ ಇಟ್ಟಿಲ್ಲ, ಬಾಯೆಲ್ಲಾ ಒದ್ದೆಯಾಗಿ, ‘ಕಮಾನ್ ಪನೀರ್ ಕಮಾನ್, ನಿನ್ನ ಅಟ್ಯಾಕ್ ಮಾಡುವೆ’ ಅಂತ ರೆಡಿಯಾಗ್ಬಿಟ್ಟಿದೆ” ಎಂದು ಒಂದು ಪನೀರನ್ನು ಗಬಗಬನೆ ಗುಳುಂ ಮಾಡಿದ. ಎಲ್ಲರೂ ನಗಾಡುತ್ತಿರುವಾಗ ವಿಭಾ, “ಹೇ ಸಮುದ್ರ, ನಿಧಾನವಾಗಿ ತಿನ್ನೋ. ನಿನ್ನ ಹಲ್ಲುಗಳಿಗೂ ಕೆಲ್ಸ ಕೊಡಪ್ಪ; ನಿನ್ನ ಜೊಲ್ಲು ಕೆಲ್ಸ ಮಾಡೋಕಾದ್ರೂ ಬಿಡೋ.” ಎಂದಳು ನಗುತ್ತಾ!
ಆಗ ಪ್ರಕಾಶ್, “ಹೌದು ಸಮುದ್ರ, ವಿಭಾ ಚಿಕ್ಕಿ ಹೇಳಿದ್ದು ಸರಿ. ಮೊದಲು ನಿನ್ನ ಬಗೆಬಗೆಯ ಹಲ್ಲುಗಳು ಆಹಾರದ ಮೇಲೆ ತಮ್ಮ ಕೆಲ್ಸ ಮಾಡ್ಬೇಕು. ಆಮೇಲೆ ಜೊಲ್ಲಿನಲ್ಲಿರುವ ಕಿಣ್ವಗಳು ತಮ್ಮ ಕೆಲ್ಸ ಮಾಡ್ಬೇಕು. ಆಮೇಲೆ ತಾನೇ ಊಟ ಒಳಗೆ ಮುಂದಕ್ಕೆ ತನ್ನ ಪ್ರಯಾಣ ಮಾಡ್ಬೇಕು?” ಎಂದ. ಆಗ ವರ್ಣ ಮೆಲ್ಲಗೆ ಒಂದು ಪನೀರ್ ತುಂಡನ್ನು ನಿಧಾನವಾಗಿ ಆಸ್ವಾದಿಸುತ್ತಾ, “ನೋಡು ಸಮುದ್ರಾ, ಹೀಗೆ… ಹೀಗೆ ತಿನ್ಬೇಕು” ಎನ್ನುತ್ತಾ ಛೇಡಿಸಿದಳು. ಆಗ ಸಮುದ್ರಾ, “ಹೂಂ, ನಿಂಗೆ ಹೊಟ್ಟೆ ಉರಿ ಬೇಗ ಬೇಗ ತಿಂತೀನಿ ನಾನು ಅಂತ ಅಲ್ವಾ? ನಿಂಗೆ ಹೊಟ್ಟೇಲಿ ಆಸಿಡ್ ಜಾಸ್ತಿ ಇದೆ! ಅದಕ್ಕೇ!” ಎಂದ. ಆಗ ವರ್ಣ ಮತ್ತು ವಿಭಾ ಒಟ್ಟಿಗೆ, “ಹೊಟ್ಟೇಲಿ ಆಸಿಡ್ಡಾ?” ಅಂತ ಹೌಹಾರಿದರು.
ಇವರ ತರಲೆ ಮಾತುಗಳನ್ನು ಕೇಳುತ್ತಾ ನಗುತ್ತಿದ್ದ ಕಾವ್ಯ-ಪ್ರಕಾಶ್, ಇವರು ಹೌಹಾರಿದ್ದನ್ನು ನೋಡಿ ಮತ್ತೂ ನಕ್ಕರು. ಆಗ ಕಾವ್ಯ, “ಹೌದು ಮತ್ತೆ, ಸಮುದ್ರದ ಒಳಗಿನ ಬೆಂಕಿ ಗೊತ್ತಾ? ವಡಬಾನಲ! ಹಾಗೇ ನಮ್ಮ ಹೊಟ್ಟೆಯೊಳಗೂ ಬೆಂಕಿಯಂತಹ ಉರಿ ಉರಿ ಆಮ್ಲ ಅಂದ್ರೆ ಆಸಿಡ್ ಇರತ್ತೆ! ಅದೂ ಸಿಕ್ಕಾಪಟ್ಟೆ ಸ್ಟ್ರಾಂಗ್! ‘ಹೈಡ್ರೋಕ್ಲೋರಿಕ್ ಆಸಿಡ್’ ಅಂತ ಕೇಳಿದೀರಾ?” ಎಂದು ಪ್ರಶ್ನಿಸಿದಳು. ಅಷ್ಟರಲ್ಲಿ ಇವರು ಆರ್ಡರ್ ಮಾಡಿದ್ದ ರೋಟಿ, ಕರಿ, ಮೊಸರನ್ನ ಇತ್ಯಾದಿ ಬಂತು.
ಇನ್ನೇನು ಊಟ ಪ್ರಾರಂಭಿಸಬೇಕು, ಆಗ ವಿಭಾ ಒಂದು ಲೋಟ ಪೂರ್ತಿ ನೀರನ್ನು ಕುಡಿದದ್ದು ನೋಡಿ, ಪ್ರಕಾಶ್ ಕಾವ್ಯಳ ಮಾತನ್ನು ಮುಂದುವರೆಸಿದ. “ಈಗ ನೋಡಿ, ವಿಭಾ ಊಟಕ್ಕೆ ಮುನ್ನ ನೀರು ಕುಡಿದಳಲ್ವಾ? ಅದು ನಮ್ಮ ಹೊಟ್ಟೆಯೊಳಗಿನ ಆಸಿಡ್ಡನ್ನ ಡೈಲ್ಯೂಟ್ ಮಾಡತ್ತೆ ಅಂತಾರೆ. ಕೊಂಚ ನೀರು ಕುಡಿದ್ರೆ ಸಮಸ್ಯೆಯೇನೂ ಇಲ್ಲ; ಜಾಸ್ತಿ ಕುಡಿದ್ರೆ ಊಟಕ್ಕೆ ಮುನ್ನವೇ ಹೊಟ್ಟೆ ತುಂಬಿಹೋಗತ್ತೆ. ಅಷ್ಟೇ ಹೊರತು ಕೆಲವರು ‘ನೀರು ಕುಡಿದ್ರೆ ಹೊಟ್ಟೆಯೊಳಗಿನ ಬೆಂಕಿ ಆರಿಹೋಗತ್ತೆ’ ಅಂತೆಲ್ಲ ಬಡಬಡಾಯಿಸ್ತಾರೆ. ಅದೆಲ್ಲಾ ವಿಜ್ಞಾನದ ಪ್ರಕಾರ ಸುಳ್ಳು. ಆಹಾರ ಸುಲಭವಾಗಿ ಒಳಗೆ ಹೋಗ್ಬೇಕಾದ್ರೆ, ನೀರು ಇರಲೇಬೇಕಲ್ಲ! ನಮ್ಮ ಜೊಲ್ಲು ಕೂಡ ೯೯% ನೀರೇ! ಜೊತೆಗೆ ಸ್ವಲ್ಪ ಮ್ಯೂಕಸ್ ಮತ್ತೆ ಕಿಣ್ವ ಇರತ್ತೆ ಅಷ್ಟೇ!” ಎಂದು ವಿವರಿಸಿದ.
ಪ್ರಕಾಶ್ ನೀಡಿದ ವಿವರಣೆಯನ್ನು ಕೇಳುತ್ತಾ, ಊಟ ಬಡಿಸಿಕೊಳ್ಳುತ್ತಾ, ಎಲ್ಲರೂ ತಮ್ಮ ಜ್ಞಾನದ ಹಸಿವನ್ನ ತೀರಿಸಿಕೊಳ್ಳುವುದರ ಜೊತೆಗೆ ಉದರದ ಹಸಿವಿನ ಕಡೆಗೂ ಗಮನ ಕೊಡುತ್ತಿದ್ದರು. ರೊಟ್ಟಿಯನ್ನು ಬಡಿಸಿಕೊಂಡು ಚೂರು ಮಾಡುತ್ತಿದ್ದ ವಿಭಾಳನ್ನು ನೋಡಿ, “ವಿಭಾ, ನೀನು ಈ ರೊಟ್ಟಿಯನ್ನ ಯಾಕೆ ಪೀಸ್ ಮಾಡಿದೆ?” ಎಂದಳು. ಆಗ ವಿಭಾ, “ಅದೇನು ಕಾವ್ಯಕ್ಕಾ? ಹಾಗೇ ಫುಲ್ ರೊಟ್ಟಿ ತಿನ್ನೋಕಾಗತ್ತಾ? ಅದನ್ನ ಚೂರು ಚೂರು ಮಾಡಿಯೇ ತಿನ್ಬೇಕಲ್ವಾ?” ಎಂದಳು. ಆಗ ಕಾವ್ಯ, “ಎಕ್ಸಾಕ್ಟ್ಲೀ! ಮೊದಲು ನಮ್ಮ ಕೈಯಿಂದ ಆಹಾರವನ್ನು ಸಣ್ಣ ತುಂಡು ಮಾಡ್ತೀವಿ; ನಂತರ ನಮ್ಮ ನಾಲ್ಕು ಬಗೆಯ ಹಲ್ಲುಗಳು ಅದನ್ನ ಮತ್ತಷ್ಟು ಚಿಕ್ಕ ತುಣುಕುಗಳನ್ನಾಗಿಸುತ್ವೆ! ನಮ್ಮ ಮುಂದಿನ ಹಲ್ಲುಗಳು, ಈ ಕಲ್ಲು ಬಂಡೆ ಕೆತ್ತನೆ ಕೆಲಸಗಳು ಮತ್ತು ವುಡ್ ವರ್ಕ್ ಮಾಡೋರು ಬಳಸೋ ‘ಉಳಿ’ಯ ಥರಾ ಇರತ್ತೆ. ‘ಚಿಸೆಲ್’ ಶೇಪ್ ಅಂತೀವಿ. ಅವುಗಳನ್ನ ‘ಇನ್ಸಿಸರ್ಸ್’ ಅಂತಾರೆ. ಈ ‘ಉಳಿ’ಹಲ್ಲುಗಳು, ಜೊತೆಗೆ ‘ಕೋರೆ ಹಲ್ಲುಗಳು’ ಆಹಾರವನ್ನ ಹರಿಯೋಕೆ, ಮುರಿಯೋಕೆ ಸಹಾಯ ಮಾಡತ್ವೆ. ಇನ್ನು ದವಡೆಹಲ್ಲುಗಳು ಅಂದ್ರೆ ‘ಪ್ರೀ ಮೋಲಾರ್’ ಮತ್ತೆ ‘ಮೋಲಾರ್’ಗಳು ಚೆನ್ನಾಗಿ ರುಬ್ಬೋ ಗುಂಡಿನ ಥರ ಆಹಾರವನ್ನ ಗ್ರೈಂಡ್ ಮಾಡತ್ವೆ.” ಎಂದು ವಿವರಿಸಿದಳು.
ಆಗ ವಿಭಾ, ವರ್ಣ ಮತ್ತು ಸಮುದ್ರರ ಕಡೆಗೆ ಕೈ ತೋರಿಸುತ್ತಾ, “ಅಲ್ಲಾ ಕಾವ್ಯಕ್ಕ! ಇವೆರಡಕ್ಕೆ ರುಬ್ಬೋ ಗುಂಡು ಎಲ್ಲಿಂದ ಗೊತ್ತಿರ್ಬೇಕು? ಮಿಕ್ಸಿ ಗ್ರೈಂಡರ್ ಅಂದ್ರೆ ಅರ್ಥ ಆಗ್ಬಹುದು ಇವಕ್ಕೆ” ಎಂದಳು ನಗುತ್ತಾ. ಆಗ ವರ್ಣ ಮತ್ತು ಸಮುದ್ರ, “ಓಹ್ ನಮ್ಗೂ ಹಳೇ ಕಾಲದ ಬಗ್ಗೆ ಗೊತ್ತು. ಫೋಟೋ ವಿಡಿಯೋದಲ್ಲಿ ನೋಡಿದೀವಿ ರುಬ್ಬೋ ಗುಂಡನ್ನ! ಹೇ! ಆಷ್ಟೇ ಅಲ್ಲ! ಅವತ್ತು ಹಂಪೆಗೆ ಹೋಗಿದ್ದಾಗ, ವಿಜಯ ವಿಠಲ ದೇವಸ್ಥಾನದ ಪಕ್ಕದಲ್ಲಿ ರಾಜರ ಕಾಲದ ಅಡುಗೆ ಮನೆಯಿತ್ತಲ್ವಾ? ಅಲ್ಲಿ ಸಾವಿರಾರು ಜನಕ್ಕೆ ಅಡುಗೆ ಮಾಡೋಕೆ ಬಳಸ್ತಾ ಇದ್ದ ಬೃಹತ್ ರುಬ್ಬೋ ಗುಂಡನ್ನ ನೋಡಿದ್ವಿ” ಎಂದು ಮೂಗುಮುರಿದರು. ಎಲ್ಲರೂ ನಗಾಡುತ್ತಾ ಮತ್ತೆ ತಮ್ಮ ‘ಪೇಟ್ ಪೂಜಾ’ ಮುಂದುವರೆಸಿದರು.

ಆಗ ವಿಭಾ, “ಎಲ್ಲಾ ಜೀರ್ಣಕ್ರಿಯೆ ನಮ್ಮ ಬಾಯಲ್ಲೇ ನಡೆದು ಹೋಯ್ತಲ್ವಾ? ಅಗೆಯೋದು, ರುಬ್ಬೋದು, ಜೊಲ್ಲಲ್ಲಿ ಮಿಕ್ಸ್ ಮಾಡೋದು; ಇನ್ನು ನೇರ ನೀನು ಹೇಳಿದ ಹೊಟ್ಟೆಯೊಳಗಿನ ಆಸಿಡ್ಗೆ ಊಟ ತಲುಪಿದರೆ ಮುಗೀತಲ್ಲಾ?” ಎಂದಳು. ಆಗ ಕಾವ್ಯ “ಅಷ್ಟು ಸರಳವೇ ನಮ್ಮ ದೇಹದ ಕೆಲ್ಸ? ಬಾಯಲ್ಲಿ ಫಿಸಿಕಲೀ ಆಹಾರ ನಜ್ಜುಗುಜ್ಜಾಗಿರತ್ತೆ. ಆದ್ರೆ ಕೆಮಿಕಲೀ ಅದ್ರಲ್ಲಿರೋ ಶಕ್ತಿಯನ್ನ ನಾವಿನ್ನೂ ಹೀರಿಕೊಂಡಿರಲ್ಲ. ನಮ್ಮ ಬಾಯಲ್ಲಿ ಭೌತಿಕವಾಗಿ ಅಂದ್ರೆ ಫಿಸಿಕಲಿ ಮುರಿದುಕೊಂಡ ಆಹಾರ, ಜೊಲ್ಲಿನಲ್ಲಿರೋ ‘ಎಂಝೈಮ್’ಗಳ ಸಹಾಯದಿಂದ ಕೊಂಚಕೊಂಚವಾಗಿ ರಾಸಾಯನಿಕವಾಗಿ ಡೈಜೆಸ್ಟ್ ಆಗೋಕೆ ಪ್ರಾರಂಭಿಸಿರತ್ತೆ. ಆಮೇಲೆ ಮೆಲ್ಲನೇ ನಮ್ಮ ಅನ್ನನಾಳದಲ್ಲಿ ‘ಸ್ಟಾಪ್, ಸ್ಟಾರ್ಟ್, ಸ್ಟಾಪ್, ಸ್ಟಾರ್ಟ್’ ಅಂತ ಆಟ ಆಡತ್ತೆ” ಎಂದಳು.
ಆಟದ ಹೆಸರು ಕೇಳಿದ ತಕ್ಷಣ ತನ್ನ ರೊಟ್ಟಿಯ ಮೇಲಿದ್ದ ಗಮನವನ್ನ, ಅಮ್ಮನ ಮಾತಿನ ಕಡೆ ತಿರುಗಿಸಿದ ಸಮುದ್ರ, “ಇದ್ಯಾವುದಮ್ಮಾ ಹೊಸಾ ಆಟ? ಸ್ಟಾಪ್ ಸ್ಟಾರ್ಟಾ?” ಎಂದ. ಆಗ ವಿಭಾ, “ಆಟ ಅಂದ ತಕ್ಷಣ ಬಾಯಿಗೆ ಬಿಡುವು ಕೊಟ್ಯಾ? ಇಲ್ದೇ ಇದ್ರೇ ಒಂದರ ನಂತರ ಒಂದು ತಿಂಡಿ ಪೋಣಿಸೋದೇ!” ಎಂದಳು ನಗುತ್ತಾ. ಆಗ ಸಮುದ್ರ, “ಹೌದು ಮತ್ತೆ! ಇಲ್ದಿದ್ರೆ ಅಪ್ಪ ದಾರೀಲಿ ನಿಲ್ಸೋದೇ ಇಲ್ಲ ಕಾರನ್ನ.. ಬೆಟ್ಟ ಎಷ್ಟು ಚೆಂದ, ಕಾಡು ಎಷ್ಟು ಚೆಂದ ಅಂತ ದಾರಿ ನೋಡ್ಕೋಂಡು ಕಾರ್ ಓಡಿಸ್ತಾನೇ ಇರ್ತಾರೆ! ಅಪ್ಪಂಗೇನೋ ಹಸಿವೇ ಆಗಲ್ಲ; ನಮ್ಗೆ ಹಂಗಲ್ಲಪ್ಪ! ನಂಗೆ ಮತ್ತೆ ಮಧ್ಯೆ ಹಸಿವಾಗ್ದೆ ಇರೋಥರಾ ಸರಿಯಾಗಿ ‘ಬ್ಯಾಟಿಂಗ್’ ಮಾಡ್ತಾ ಇದೀನಿ ಅದಕ್ಕೇ!” ಎಂದ ನಗುತ್ತಾ.
ಆಗ ಕಾವ್ಯ, “ಅದೂ ಕರೆಕ್ಟೇ ಕಂದ. ಸರಿ, ಈ ಸ್ಟಾಪ್ ಸ್ಟಾರ್ಟ್ ಅಂದ್ರೆ, ನಮ್ಮ ಬಾಯಿಂದ ಅನ್ನನಾಳದೊಳಗೆ ಇಳಿದ ಆಹಾರ ಫಾಸ್ಟಾಗಿ ಎಕ್ಸ್ಪ್ರೆಸ್ ರೈಲಿನ ಥರಾ ಮುಂದಿನ ಅಂಗಗಳಿಗೆ ದಾಟಿಕೊಂಡು ಹೋಗಿಬಿಡಲ್ಲ. ‘ಸ್ಪಿಂಕ್ಟರ್’ ಮಾಂಸಖಂಡ ಅಂತ ಇರತ್ತೆ. ಅದು ಅಲ್ಲಲ್ಲಿ ಆಹಾರವನ್ನ ತಡೆದು ನಿಲ್ಸತ್ತೆ. ನಮ್ಮನ್ನ ಹೈವೇಲಿ ‘ಟೋಲ್’ ಕಟ್ಟಿಸಿಕೊಳ್ಳಕ್ಕೆ ನಿಲ್ಲಿಸ್ತಾರಲ್ಲಾ? ಹಾಗೆ.” ಎಂದಳು.
ವರ್ಣ ಅಕ್ಕನ ಕಡೆ ತಿರುಗಿ, “ಅದ್ಯಾಕೆ ಹಾಗೆ ಊಟವನ್ನ ಅಲ್ಲಲ್ಲಿ ಸ್ಟಾಪ್ ಮಾಡಿ ಮುಂದೆ ಕಳ್ಸತ್ತೆ? ಬೇಗ ಬೇಗ ನುಂಗಿರ್ತೀವಿ ಅಂತಾನಾ?” ಎಂದಳು. ಆಗ ಕಾವ್ಯ, “ಹಾಗಂತ ಅಲ್ಲಪ್ಪ. ನಮ್ಮ ಅನ್ನನಾಳದ ವಿವಿಧ ಭಾಗಗಳಲ್ಲಿ, ಹೊಟ್ಟೆಯಲ್ಲಿ, ಕರುಳಿನಲ್ಲಿ ಆಹಾರದ ಮೇಲೆ ಕೆಲ್ಸ ಮಾಡೊಕೆ, ಜೀರ್ಣಿಸೋಕೆ ಅಂತಲೇ ಬೇರೆ ಬೇರೆ ಎಂಝೈಮ್ ಅಂದ್ರೆ ಕಿಣ್ವಗಳು ಇರತ್ವೆ. ಜೊತೆಗೆ ಆಗ್ಲೇ ಹೇಳಿದ್ನಲ್ಲ, ಹೈಡ್ರೋಕ್ಲೋರಿಕ್ ಆಮ್ಲ, ಆ ಆಸಿಡ್ ಕೂಡ ಇರತ್ತೆ. ಜೊತೆಗೆ ನಮ್ಮ ಯಕೃತ್ತು ಅಂದ್ರೆ ಲಿವರ್, ಜೊತೆಗೆ ಮೇದೋಜೀರಕ ಗ್ರಂಥಿ ಅಂದ್ರೆ ಪ್ಯಾಂಕ್ರಿಯಾಸ್ ಇರತ್ತಲ್ಲ? ಅವು ಕೂಡ ಬೈಲ್ ಜ್ಯೂಸ್, ಪ್ಯಾಂಕ್ರಿಯಾಟಿಕ್ ರಸವನ್ನ ಜೊತೆಗೆ ಸೇರಿಸತ್ವೆ. ಇವೆಲ್ಲಾ ನಮ್ಮ ಆಹಾರದ ಕಣಗಳ ಮೇಲೆ ಕೆಲ್ಸ ಮಾಡಕ್ಕೆ ಟೈಮ್ ಬೇಕಲ್ಲ? ಅದಕ್ಕೇ ನಮ್ಮ ‘ಸ್ಪಿಂಕ್ಟರ್ ಮಾಂಸಖಂಡ’ ಅಲ್ಲಲ್ಲಿ ಆಹಾರವನ್ನ ಪೋಲೀಸ್ ತಡೆದ ಹಾಗೆ ತಡೆಯತ್ತೆ, ಕೆಲವು ನಿಮಿಷಗಳು ಅಥ್ವಾ ಕೆಲವು ಘಂಟೆಗಳು ಆಹಾರವನ್ನ ಅಲ್ಲೇ ಸ್ಟಾಪ್ ಮಾಡತ್ತೆ, ಮತ್ತೆ ಮುಂದಿನ ಹಂತದ ಜೀರ್ಣಕ್ರಿಯೆಗೆ ಮುಂದೆ ಕಳ್ಸತ್ತೆ. ಇದೇ ನಾನು ಹೇಳಿದ ಸ್ಟಾಪ್ ಸ್ಟಾರ್ಟ್ ಆಟ” ಎಂದು ವಿವರಿಸಿದಳು. ಆಗ ವಿಭಾ, “ಹಾಗಾದ್ರೆ ನಮ್ ಸಮುದ್ರ ಗಬಗಬ ನುಂಗ್ತಾ ಊಟವನ್ನ ಪೋಣಿಸಿದ್ರೆ ಸಮಸ್ಯೆ ಏನಿಲ್ಲ; ಒಳಗೆ ‘ಸ್ಪಿಂಕ್ಟರ್’ ಪೋಲಿಸ್ ಆಹಾರದ ಟ್ರಾಫಿಕ್ಕನ್ನ ‘ಸ್ಟಾಪ್-ಸ್ಟಾರ್ಟ್’ ಮಾಡ್ತಾ ಇರ್ತಾರೆ” ಎಂದಳು ನಗುತ್ತಾ.

ಮಾತಾಡ್ತಾ ಊಟ ಕೂಡ ಮುಗಿದು, ಹಣ ಪಾವತಿಸಿ ಹೊರಟರು. ಹೊರಗಿನ ಉದ್ಯಾನದಲ್ಲಿ ಕೊಂಚ ಅಡ್ಡಾಡುತ್ತಾ ಬೀಸುವ ಗಾಳಿಗೆ ಮೈಯೊಡ್ಡಿದ್ದರು. ಸುಂದರ ಹೂವುಗಳನ್ನ ನೋಡುತ್ತಾ ಕಾವ್ಯ ಮತ್ತು ವಿಭಾ ಮಗ್ನರಾಗಿದ್ದಾಗ, ಪ್ರಕಾಶ್ ಇದ್ದುದರಲ್ಲೇ ಚಿಕ್ಕವರಾದ ವರ್ಣ ಮತ್ತು ಸಮುದ್ರರೆಡೆಗೆ ತಿರುಗಿ, “ಇನ್ನೊಂದು ೫-೧೦ ನಿಮಿಷಕ್ಕೆ ಹೊರಡೋಣ. ವಾಶ್ ರೂಂಗೆ ಹೋಗಿ ಬರೋದಿದ್ರೆ ನೋಡಿ” ಎಂದ. ಆಗ ಸಮುದ್ರ, “ಅಲ್ಲಪ್ಪ! ಇನ್ನೂ ಈಗ ತಿಂದಿದೀವಿ, ಇನ್ನೂ ಒಳಗೆ ಸ್ಟಾಪ್ ಸ್ಟಾರ್ಟ್ ಆಟ ಆಗಿ, ಬೇಡದ್ದು ಹೊರಗೆ ಬರೋಕೆ ಟೈಮ್ ಬೇಕಲ್ಲ” ಎಂದ ನಗುತ್ತಾ. ಆಗ ವರ್ಣ, “ಏ ತರ್ಲೆ ಸಮುದ್ರ, ಈಗ ತಿಂದದ್ದು ಒಳಗೇ ಆಟ ಆಡ್ಲಿ, ಬೆಳಗ್ಗೆ ತಿಂದದ್ದರಲ್ಲಿ ಬೇಕಾದ ಪೋಷಕಾಂಶ ಹೀರಿಕೊಂಡು, ಬೇಡದ್ದನ್ನ ಹೊರಹಾಕೋಕೆ ನಮ್ಮ ದೇಹ ಕಾಯ್ತಾ ಇರತ್ತೆ. ಅದನ್ನೇ ನಿಮ್ಮಪ್ಪ ಹೇಳಿದ್ದು. ಕೆಳಗೂ ‘ಸ್ಟಾಪ್’ ಹೇಳಿರುವ ‘ಸ್ಪಿಂಕ್ಟರ್ ಮಸಲ್’ ಮತ್ತೆ ದಾರೀಲಿ ಹೋಗುವಾಗ ‘ಸ್ಟಾರ್ಟ್’ ಅಂತ ಗ್ರೀನ್ ಸಿಗ್ನಲ್ ಕೊಟ್ಟುಬಿಟ್ರೆ, ದಾರೀಲಿ ಎಲ್ಲಪ್ಪ ವಾಶ್ ರೂಂ ಹುಡುಕೋದು?” ಎಂದು ಕೀಟಲೆ ಮಾಡಿ ಒಂದು ಬೆನ್ನಿಗೆ ಗುದ್ದಿ ಓಡಿದಳು. “ಮಾಡ್ತೀನಿರೂ ನಿಂಗೆ..” ಅಂತ ಅಕ್ಕನ ವಯಸ್ಸಿನ ಪುಟ್ಟ ಚಿಕ್ಕಿ ವರ್ಣಳ ಹಿಂದೆ ಓಡಿದ ಸಮುದ್ರ. ಇವರ ತರಲೆ ಆಟಕ್ಕೆ ನಗುತ್ತಾ, ಅವರ ಹಿಂದೆಯೇ ಕಾರಿನ ಕಡೆಗೆ ನಡೆದರು ವಿಭಾ, ಕಾವ್ಯ ಮತ್ತು ಪ್ರಕಾಶ್. ಮುಂದೆಲ್ಲಿ ಹೋದರು? ಮುಂದಿನ ಕಂತಿನಲ್ಲಿ ಓದೋಣ. ಏನಂತೀರಿ?
(ಹಿಂದಿನ ಕಂತು: ಇಂಧನಾಂತರಂಗ!)
ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.


