Advertisement
 ಬಲುಘೋರವೋ ನಮ್ಮ ನಾಳೆ: ವಿನಾಯಕ ಅರಳಸುರಳಿ ಅಂಕಣ

 ಬಲುಘೋರವೋ ನಮ್ಮ ನಾಳೆ: ವಿನಾಯಕ ಅರಳಸುರಳಿ ಅಂಕಣ

ಎರೆಡು ದಶಕದಿಂದೀಚೆಗೆ ನಗರೀಕರಣದ ಹೆಸರಿನಲ್ಲಿ ತಾವು ಕಳೆದುಕೊಂಡಿರುವುದೇನೆನ್ನುವುದು ಇಲ್ಲಿ ಕನಿಷ್ಠ ಕೆಲ ಮಂದಿಗಾದರೂ ಅರ್ಥವಾಗಿದೆ. ‘ಕಳೆದುಕೊಳ್ಳುವಷ್ಟು ಹಸಿರೀಗ ನಮ್ಮ ಬಳಿ ಇಲ್ಲ’ ಎಂಬುದು ಅರಿವಾಗಿದೆ. ಆದರೆ ಸದಾ ಹಸಿರಿನ ನೆರಳಿನಲ್ಲೇ ಬದುಕುತ್ತಿರುವ, ಫಲಾಹಾರಗಳನ್ನು ನೇರ ಮರ-ಗಿಡಗಳಿಂದಲೇ ಕಿತ್ತು ತಿನ್ನುತ್ತಿರುವ ನಮ್ಮ ಹಳ್ಳಿಗರಲ್ಲೇಕೆ ಈ ಕನಿಷ್ಠ ಪ್ರಜ್ಞೆಯೂ ಇಲ್ಲ? ಹಸಿರಿನ ತಂಪು ತೊಟ್ಟಿಲುಗಳಂತಿದ್ದ ಹಳ್ಳಿಗಳೀಗ ಕಳೆದ ಕೆಲ ವರ್ಷಗಳಲ್ಲಿ ನಗರವಾಗುವ ಹುಚ್ಚು ಧಾವಂತಕ್ಕೆ ಬಿದ್ದಂತೆ ಬದಲಾಗುತ್ತಿದೆ. ಅಂದು ಆ ನರಿ-ಮೊಲಗಳನ್ನು ನೋಡಿದ ಕಾಡಿನಲ್ಲಿ ಎಷ್ಟೇ ಸುತ್ತು ಹೊಡೆದರೂ ಒಂದು ಓತಿಕೇತವೂ ಕಾಣುವುದಿಲ್ಲ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

ಅದೊಂದು ಮಳೆಗಾಲದ ಬೆಳಗು. ಎಂಟೂ ಹದಿನೈದಕ್ಕೇ ಶಾಲೆ ಪ್ರಾರಂಭವಾಗುವ ಶನಿವಾರದ ದಿನ. ಸುಮಾರು ನೂರಿನ್ನೂರು ಮರಗಳಿದ್ದ ಚಿಕ್ಕ ಕಾಡಿನ ನಡುವಿನ ಮಣ್ಣಿನ ದಾರಿಯಲ್ಲಿ ನಾನು ಹಾಗೂ ಅಕ್ಕ ಗಡಿಬಿಡಿಯಲ್ಲಿ ನಡೆಯುತ್ತಿದ್ದೆವು. ಭೋರಿಡುತ್ತಾ ಸುರಿಯುತ್ತಿದ್ದ ಮಳೆಯಲ್ಲಿ ಮರಗಳೆಲ್ಲ ಸಾಮೂಹಿಕ ಅಭ್ಯಂಜನ ಮಾಡುತ್ತಾ ತಲೆ ಕೆದರಿಕೊಂಡು ನಿಂತಿದ್ದವು. ಮಳೆನೀರು  ನಮ್ಮ ಎಡಭಾಗದ ಗುಡ್ಡದಿಂದ ಕೊಚ್ಚಿಬಂದು ಅಲ್ಲಲ್ಲಿ ಪುಟ್ಟ ಪುಟ್ಟ ಜಲಧಾರೆಗಳಾಗಿ ಗುಡ್ಡ ಹಾಗೂ ಮಣ್ಣುರಸ್ತೆಯ ನಡುವಿದ್ದ ತೋಡಿಗೆ ಧುಮುಕಿ ಝುಳುಝುಳಿಸುತ್ತಾ ತಗ್ಗಿನತ್ತ ಹರಿಯುತ್ತಿತ್ತು. ನಮ್ಮಿಬ್ಬರ ಕೈಯಲ್ಲೂ ಛತ್ರಿಯಿತ್ತಾದರೂ ಅವು ನಮ್ಮ ತಲೆಯೊಂದರ ಹೊರತಾಗಿ ಮತ್ತೇನನ್ನೂ ಒದ್ದೆಯಾಗದಂತೆ ತಡೆಯಲಾಗದಷ್ಟು ಅಸಹಾಯಕವಾಗಿದ್ದವು. ಹೀಗೆ ನಾವು ಮುಕ್ಕಾಲುಭಾಗ ಚಂಡಿಯಾಗಿ ನಡೆಯುತ್ತಿದ್ದಾಗಲೇ ಇದ್ದಕ್ಕಿದ್ದಂತೆ ನಮ್ಮ ಎಡ ಪಕ್ಕದಲ್ಲಿದ್ದ ಗುಡ್ಡದಿಂದ ಪುಟಾಣಿ ಪ್ರಾಣಿಯೊಂದು ಧೊಪ್ಪನೆ ರಸ್ತೆಗೆ ಧುಮುಕಿ ಮುಂದಕ್ಕೋಡತೊಡಗಿತು. ಅದೇನೆಂದು ನೋಡುವಷ್ಟರಲ್ಲೇ ಹೆಚ್ಚೂ ಕಡಿಮೆ ನಾಯಿಯಂತೆಯೇ ಕಾಣುವ ನಾಲ್ಕು ಕಾಲಿನ ಉದ್ದದ ಪ್ರಾಣಿಯೊಂದು ಅದೇ ಶೈಲಿಯಲ್ಲಿ ರಸ್ತೆಗೆ ನೆಗೆದು ಮೊದಲು ಜಿಗಿದ ಪ್ರಾಣಿಯನ್ನು ಬೆನ್ನಟ್ಟತೊಡಗಿತು. ಅಷ್ಟಾಗಿ ಚುರುಕು ದೃಷ್ಟಿಯಿಲ್ಲದ ನಾನು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿರುವಂತೆಯೇ ಕ್ಷಣಾರ್ಧದಲ್ಲಿ ಅವೆರೆಡೂ ಛಂಗಛಂಗನೆ ನೆಗೆಯುತ್ತಾ ರಸ್ತೆಯಾಚೆಗಿನ ಮಟ್ಟಿಗಳ ಮರೆಯಲ್ಲಿ ಮಾಯವಾದವು. ಅಚಾನಕ್ಕಾಗಿ ಹೀಗೆ ನೆಗೆದುಹೋದ ಆ ಎರೆಡು ಜೀವಿಗಳು ಯಾವುವೆಂದು ತಲೆಕೆಡಿಸಿಕೊಳ್ಳುತ್ತಿದ್ದ ನನಗೆ, ನನಗಿಂತ ಕೊಂಚ ಮುಂದೆ ನಡೆಯುತ್ತಿದ್ದ ಅಕ್ಕ ಮೊದಲು ಧುಮುಕಿದ್ದು ಮೊಲವೆಂದೂ, ಅದನ್ನು ಬೆನ್ನಟ್ಟಿ ಬಂದದ್ದು ನರಿಯೆಂದೂ ತಿಳಿಸಿದಳು. ಇಲ್ಲಿಯವರೆಗೆ ಕೇವಲ ಚಿತ್ರದಲ್ಲಷ್ಟೇ ಮೊಲ, ನರಿಗಳನ್ನು ನೋಡಿದ್ದ ನನಗಾಗ ಆ ಎರೆಡು ಪ್ರಾಣಿಗಳು ನೇರ ಕಥೆಪುಸ್ತಕದಿಂದಲೇ ಆಚೆಬಂದಂತೆನಿಸಿ ರೋಮಾಂಚನವಾಯಿತು.

ಮಹಾನಗರಿಯ ಕಟ್ಟಡದ ಗೂಡಿನಲ್ಲಿ ಕುಳಿತು ಮಲೆನಾಡು, ಕಾಡು ಎಂದೆಲ್ಲ ಯೋಚಿಸುವಾಗ ಇಂತಹದೇ ಹಲವು ಚಿಕ್ಕಪುಟ್ಟ ಘಟನೆಗಳು ನೆನಪಾಗುತ್ತವೆ. ಮಲೆನಾಡಿನ ನಮ್ಮ ದೈನಂದಿನ ಬದುಕಿನಲ್ಲಿ ಹಗಲು-ರಾತ್ರಿಗಳಂತೆಯೇ ಸಾಮಾನ್ಯವಾಗಿದ್ದ ಇಂತಹಾ ಕಾಡು ಪ್ರಾಣಿಗಳ ಒಡನಾಟದ ನೆನಪುಗಳು, ಮನುಷ್ಯನ ಹೊರತಾಗಿ ಮತ್ಯಾವ ಪ್ರಾಣಿಗಳನ್ನೂ ನೋಡಲಿಕ್ಕಾಗದ ಈ ಶಹರದ ಬದುಕಿನಲ್ಲಿ ಕಳೆದುಕೊಂಡ ಅಮೂಲ್ಯ ಮುತ್ತುಗಳಂತೆ ಸ್ಮೃತಿಪಟಲದಲ್ಲಿ ಮೂಡುತ್ತವೆ. ಹುಟ್ಟುತ್ತಿದ್ದಂತೆಯೇ ನೇರವಾಗಿ ಹಸಿರಿನ ತೊಟ್ಟಿಲಿಗೇ ಬೀಳುವ ಮಲೆನಾಡಿಗರಾದ ನಮ್ಮನ್ನು ಈ ಪಟ್ಟಣಿಗರು ಪರಿಸರದ ಜೊತೆಜೊತೆಗೇ ಮುನ್ನಡೆಯುವ ವಿಶೇಷ ಜೀವಿಗಳೆಂದು ಪರಿಗಣಿಸುತ್ತಾರೆ. ‘ನಿಮ್ಮೂರಲ್ಲಿ ಬಿಡ್ರಿ, ಬೇಕಾದಷ್ಟು ಮರಗಿಡ ಇದಾವೆ. ನೀವದನ್ನ ಹಾಳುಮಾಡದೇ ಉಳಿಸಿಕೊಂಡಿದೀರ’ ಎಂದು ಮೆಚ್ಚುಗೆಯ ಮಾತಾಡುತ್ತಾರೆ. ಮೊದಮೊದಲಿಗೆ ಇಂತಹಾ ಹೊಗಳಿಕೆಗಳನ್ನು ಕೇಳಿದಾಗೆಲ್ಲ ನನಗೆ ನಮ್ಮೂರು, ಹಳ್ಳಿಗಳ ಬಗ್ಗೆ ಹೆಮ್ಮೆಯೆನಿಸುತ್ತಿತ್ತು. ‘ಬೆಂಗಳೂರಿಗರಂತೆ ರಾತ್ರೋರಾತ್ರಿ ಗುಡ್ಡವನ್ನು ಕಡಿದು ಕರೆಗೆ ತುಂಬಿ ಸೈಟು ಮಾಡುವವರಲ್ಲ ನಮ್ಮವರು’ ಎಂಬ ಗರ್ವವೊಂದು ಹೆಡೆಯಾಡುತ್ತಿತ್ತು. ಆದರೆ ನನ್ನದು ಎಂತಹಾ ಮೂರ್ಖ ಒಣಜಂಭವೆಂಬುದು ನನಗೆ ಮನವರಿಕೆಯಾಗಿದ್ದು ತೀರಾ ಇತ್ತೀಚೆಗೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಗಮನಿಸುತ್ತಿದ್ದೇನೆ, ಪ್ರತೀಬಾರಿ ಊರಿಗೆ ಹೋದಾಗಲೂ ಅಕ್ಕಪಕ್ಕದ ಕಾಡಿನಲ್ಲಿ ಹಿಂದಿನ ಬಾರಿ ಇದ್ದ ಎಷ್ಟೋ ಮರಗಳು ಈ ಸಲ ಇರುವುದಿಲ್ಲ! ಮಣ್ಣಿನ ದಿಣ್ಣೆ, ಏರಿಗಳು, ಮರ-ಮಟ್ಟಿಗಳು, ಪೊದೆ, ಗಿಡಗಂಟಿಗಳೆಲ್ಲ ತಾವು ಇದ್ದದ್ದೇ ಸುಳ್ಳೆಂಬಂತೆ ಮಾಯವಾಗುತ್ತಿವೆ. ಅವು ಏನಾಗಿಹೋದವೆಂದು ತಿರುಗಿನೋಡಿದರೆ ಅಲ್ಲೇ ಅಕ್ಕಪಕ್ಕದಲ್ಲಿರುವ ಮನೆಗಳಲ್ಲಿ ಸಾಲಾಗಿ ಪೇರಿಸಿರುವ ರಾಶಿ ರಾಶಿ ಕಟ್ಟಿಗೆಗಳು ಕಣ್ಣಿಗೆ ಬೀಳುತ್ತವೆ. ಆ ಬೇಸರವನ್ನು ಮನಸ್ಸಿನಲ್ಲಿಟ್ಟುಕೊಂಡೇ ಬಸ್ಸು ಹತ್ತಿ ಹೊರಟರೆ ಊರಿನಿಂದ ತಾಲೋಕು ಪಟ್ಟಣದ ತನಕ ಬರೀ ಇಂಥದೇ ದೃಶ್ಯಗಳು! ಎದೆಯನ್ನೇ ಸಿಗಿದಂತೆ ಬಗೆದು ಸಮತಟ್ಟಾಗಿಸಲ್ಪಟ್ಟಿರುವ ಗುಡ್ಡದ ಏರಿಗಳು, ವೃಕ್ಷಗಳ ಒಂದು ಹಿಂಡನ್ನೇ ನಿರ್ನಾಮಮಾಡಿ ನಿರ್ಮಿಸಿರುವ ಲೇಔಟ್ ಗಳು, ನಿನ್ನೆಯ ತನಕ ಇದ್ದದ್ದೇ ಸುಳ್ಳೆಂಬಂತೆ ಬುಡಕ್ಕೆ ಸಮನಾಗಿ ಕತ್ತರಿಸಲ್ಪಟ್ಟು ನಿರ್ಜೀವ ಕಟ್ಟಿಗೆಯ ರಾಶಿಯಾಗಿ ಪೇರಿಸಲ್ಪಟ್ಟಿರುವ ಹತಭಾಗ್ಯ ಮರಗಳು… ಇಂತಹಾ ದೃಶ್ಯಗಳು ಪ್ರತೀ ನಾಲ್ಕೈದು ಕಿಲೋಮೀಟರ್ ಗೊಂದರಂತೆ ಕಣ್ಣಿಗೆ ಬೀಳುತ್ತಿದ್ದರೆ ಬಸ್ಸಿನ ಕಿಟಕಿ ಪಕ್ಕ ಕುಳಿತಿರುವ ನನಗೆ ನಾನು ನಮ್ಮೂರಿನಲ್ಲಿದ್ದೀನೋ ಅಥವಾ ಬೆಂಗಳೂರಿನಲ್ಲಿದ್ದೀನೋ ಎನ್ನುವುದೇ ಅರ್ಥವಾಗಲಿಲ್ಲ. ಎದುರಿಗೆ ಕಾಣುತ್ತಿರುವುದೇ ಇಷ್ಟಾದರೆ ಇನ್ನು ಒಳಗೊಳಗೇ ಕಡಿದೆಸೆದಿರುವುದು ಎಷ್ಟಿರಬಹುದು? ತಮಾಷೆಯ ವಿಷಯವೆಂದರೆ ಅಷ್ಟು ಹೊತ್ತು ನೋಡಿದ ಹನನದಲ್ಲಿ ಕತ್ತರಿಸಲ್ಪಟ್ಟಿರುವುದು ಬರೀ ಕಾಡುಮರಗಳಾಗಿರುತ್ತವೇ ಹೊರತು ಅದರಲ್ಲಿ ಅಪ್ಪಿತಪ್ಪಿಯೂ ಒಂದೇ ಒಂದೂ ಅಕೇಶಿಯಾ ಅಥವಾ ನೀಲಗಿರಿ ಮರವಿರುವುದಿಲ್ಲ!

*****

ಮೊನ್ನೆ ಮೊನ್ನೆ ಬಂಡೀಪುರದ ಅಭಯಾರಣ್ಯಕ್ಕೆ ಬೆಂಕಿ ಬಿತ್ತು. ನೋಡನೋಡುತ್ತಿದ್ದಂತೆಯೇ ನೂರಾರು ಎಕರೆ ಕಾಡು ಒಲೆಯೊಳಗೆ ಕೂಡಿದ ಪುರಲೆಯಂತೆ ಸುಟ್ಟು ಬೂದಿಯಾಯಿತು. ಪರಿಸರ ನಾಶವೆಂಬುದು ಹೀಗೆ ಭಾರೀ ಮಟ್ಟದಲ್ಲಿ ಆದಾಗೆಲ್ಲ ಅದು ಇಡೀ ಸಮಾಜದ ಕಣ್ಣಿಗೆ ಗೋಚರವಾಗುತ್ತದೆ. ದೊಡ್ಡ ಮಟ್ಟದಲ್ಲಿ ಅದರ ಬಗ್ಗೆ ಚರ್ಚೆಗಳೇಳುತ್ತವೆ. ಜನ ಸಾಮಾಜಿಕ ಜಾಲತಾಣದಲ್ಲಿ, ಪತ್ರಿಕೆಗಳಲ್ಲಿ, ನ್ಯೂಸ್ ಚಾನೆಲ್‌ಗಳಲ್ಲಿ ತಮ್ಮ ಅಭಿಪ್ರಾಯ, ವಿರೋಧ, ಅಸಮಾಧಾನಗಳನ್ನು ವ್ಯಕ್ತಪಡಿಸುತ್ತಾರೆ. ಆದರೆ ಯಾವ ಬೆಂಕಿಯೂ ಉರಿಯದೇ, ಯಾವ ಪತ್ರಿಕೆ, ಸೋಶಿಯಲ್ ಮೀಡಿಯಾ, ನ್ಯೂಸ್ ಚಾನೆಲ್‌ಗಳ ಕಣ್ಣಿಗೂ ಕಾಣದೇ ರಾತ್ರೆ ಬೆಳಗಾಗುವಷ್ಟರಲ್ಲಿ ಮಾಯವಾಗುತ್ತಿರುವ ಅಸಹಾಯಕ ಮರಗಳು ಎಷ್ಟಿವೆ ಗೊತ್ತಾ? ಊಹೂಂ, ನಾವ್ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ನಮ್ಮ ಲಾಭ-ನಷ್ಟಗಳ ಬ್ಯಾಲೆನ್ಸ್ ಶೀಟಿನಲ್ಲಿ ಆ ಲೆಕ್ಕ ಬರುವುದೇ ಇಲ್ಲ. ಅದೇನಿದ್ದರೂ ಸರ್ಕಾರದ ಕೆಲಸ. ನಮ್ಮ ಮನೆಯೆದಿರಿನ ಮರವನ್ನು ನಾವು ಕಡಿಯುತ್ತೇವೆ, ಕೇಳುವರ್ಯಾರು? ಎಂಬ ಧಿಮಾಕು ನಮ್ಮದು. ಮಳೆಗಾಲಕ್ಕೆ ಕಟ್ಟಿಗೆ ಬೇಕು. ಮನೆಗೊಂದು ದಿಡ್ಡಿಬಾಗಿಲು ಬೇಕು. ಹಾಲಿಗೊಂದು ಖುರ್ಚಿ ಬೇಕು. ರೂಮಿಗೊಂದು ಮಂಚ ಬೇಕು. ಕೊಡಲಿಗೆ ಕಾವು ಬೇಕು. ಕತ್ತಿಗೆ ಹಿಡಿ ಬೇಕು. ಲೇಔಟ್ ಕಟ್ಟಲಿಕ್ಕೆ ಖಾಲಿ ಜಾಗ ಬೇಕು. ಇವೆಲ್ಲವಕ್ಕೂ ಮರಗಿಡಗಳೇ ಬಲಿಯಾಗಬೇಕು!

ಏನಾಗಿದೆ ನಮ್ಮ ಜನಗಳಿಗೆ? ಯಾರ ಅಂತ್ಯ ಸಂಸ್ಕಾರಕ್ಕೆಂದು ಈ ಪರಿ ಮರ ಕಡಿದು ಕಟ್ಟಿಗೆಯ ರಾಶಿ ಜೋಡಿಸುತ್ತಿದ್ದಾರೆ? ಯಾರ ಸಮಾಧಿಯ ಕಟ್ಟಲಿಕ್ಕೆಂದು ಇಷ್ಟೊಂದು ಲೇಔಟ್‌ಗಳ ನಿರ್ಮಿಸುತ್ತಿದ್ದಾರೆ? ಅಷ್ಟೆಲ್ಲ ಗುಡ್ಡವನ್ನು ಬಗೆದು ಬಯಲಾಗಿಸಿ ಅದ್ಯಾವ ಸ್ಮಶಾನದ ನಿರ್ಮಾಣಕ್ಕಾಗಿ ಕಾದಿರಿಸಿದ್ದಾರೆ? ಹೀಗೆ ಮರಮೇಧ ನಡೆಸೀ ನಡೆಸೀ ಈ ಭೂಮಿಯ ಮೇಲಿನ ಕಟ್ಟಕಡೆಯ ಮರವೂ ನಿರ್ನಾಮವಾದ ದಿನ ಇವರೇನನ್ನು ಉಸಿರಾಡುತ್ತಾರೆ?

ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣಕ್ಕೆಂದು ಜಯನಗರದ ಕೆಲ ಭಾಗಗಳಲ್ಲಿ ಮರಗಳ ಬುಡಕ್ಕೆ ಹಾಗೂ ಉದ್ಯಾನವನಗಳ ಕತ್ತಿಗೆ ಕೊಡಲಿಯಿಟ್ಟಾಗ ಅಲ್ಲಿನ ನಿವಾಸಿಗಳೆಲ್ಲ ಪುಟಿದೆದ್ದು ಕುಳಿತಿದ್ದರು. ‘ಅಭಿವೃದ್ಧಿ ಬೇಕು, ಆದರೆ ಅದು ಮರಗಿಡಗಳ ಉಳಿವಿನೊಂದಿಗೇ ಜರುಗಬೇಕು’ ಎಂದು ಸಾರಿದ್ದರು. ಮೆಟ್ರೋ ಮಾತ್ರವಲ್ಲ, ಇಂಥದೇ ಎಷ್ಟೋ ಅಭಿವೃದ್ಧಿ ಕಾರ್ಯಗಳು ಜರುಗಿದಾಗಲೂ, ನಗರಕ್ಕವು ಅವಶ್ಯಕವಾದವೇ ಆಗಿದ್ದಾಗಲೂ ಜನ ಅವುಗಳಿಂದಾಗುವ ಪರಿಸರ ನಾಶದ ವಿರುದ್ಧ ಸೆಟೆದುನಿಂತಿದ್ದಾರೆ. ಎರೆಡು ದಶಕದಿಂದೀಚೆಗೆ ನಗರೀಕರಣದ ಹೆಸರಿನಲ್ಲಿ ತಾವು ಕಳೆದುಕೊಂಡಿರುವುದೇನೆನ್ನುವುದು ಇಲ್ಲಿ ಕನಿಷ್ಠ ಕೆಲ ಮಂದಿಗಾದರೂ ಅರ್ಥವಾಗಿದೆ. ‘ಕಳೆದುಕೊಳ್ಳುವಷ್ಟು ಹಸಿರೀಗ ನಮ್ಮ ಬಳಿ ಇಲ್ಲ’ ಎಂಬುದು ಅರಿವಾಗಿದೆ. ಆದರೆ ಸದಾ ಹಸಿರಿನ ನೆರಳಿನಲ್ಲೇ ಬದುಕುತ್ತಿರುವ, ಫಲಾಹಾರಗಳನ್ನು ನೇರ ಮರ-ಗಿಡಗಳಿಂದಲೇ ಕಿತ್ತು ತಿನ್ನುತ್ತಿರುವ ನಮ್ಮ ಹಳ್ಳಿಗರಲ್ಲೇಕೆ ಈ ಕನಿಷ್ಠ ಪ್ರಜ್ಞೆಯೂ ಇಲ್ಲ? ಹಸಿರಿನ ತಂಪು ತೊಟ್ಟಿಲುಗಳಂತಿದ್ದ ಹಳ್ಳಿಗಳೀಗ ಕಳೆದ ಕೆಲ ವರ್ಷಗಳಲ್ಲಿ ನಗರವಾಗುವ ಹುಚ್ಚು ಧಾವಂತಕ್ಕೆ ಬಿದ್ದಂತೆ ಬದಲಾಗುತ್ತಿದೆ. ಅಂದು ಆ ನರಿ-ಮೊಲಗಳನ್ನು ನೋಡಿದ ಕಾಡಿನಲ್ಲಿ ಎಷ್ಟೇ ಸುತ್ತು ಹೊಡೆದರೂ ಒಂದು ಓತಿಕೇತವೂ ಕಾಣುವುದಿಲ್ಲ.

ಹೀಗೆ ಮನುಷ್ಯ ಹಾಗೂ ಮನುಷ್ಯನ ಕ್ರೌರ್ಯ ಮಾತ್ರವೇ ಕಾಣುವ ನಿರ್ಜಿವ ಕಾಡುಗಳಲ್ಲಿ ಅಲೆಯುವಾಗ, ಏಳು ವರ್ಷಗಳ ಕೆಳಗೆ ನಡುರಾತ್ರಿಯಲ್ಲಿ ನಾನು ಬೆಂಗಳೂರಿನ ಬಸ್ಸು ಹತ್ತಿ ಇತ್ತ ಹೊರಡುತ್ತಿದ್ದಂತೆಯೇ ಅತ್ತಕಡೆ ನನ್ನ ಊರು ಸಹಾ ಯಾವುದೋ ಬಸ್ಸು ಹತ್ತಿ ಮತ್ತೆಲ್ಲಿಗೋ ಹೊರಟುಹೋಯಿತೇನೋ ಅನ್ನಿಸುವಷ್ಟು ಎಲ್ಲವೂ ಬದಲಾಗಿದೆ. ಪರಿಸರದ ವಿನಾಶವೆಂಬುದು ಉರಿಯುವ ಕಾಡ್ಗಿಚ್ಚಿನಂತೆ ರಾತ್ರೋರಾತ್ರಿ ಹೊತ್ತಿಕೊಂಡು ನಮ್ಮ ಸುತ್ತಮುತ್ತಲನ್ನು ಬದಲಾಯಿಸುತ್ತಿಲ್ಲ. ಒಂದೊಂದೇ ಮರ, ಇಷ್ಟಿಷ್ಟೇ ಗುಡ್ಡ, ಒಂದೊಂದೇ ಪ್ರಾಣಿ… ಹೀಗೆ ನಿಯಮಿತವಾಗಿ ಅವು ಮನುಷ್ಯನ ಕೊಡಲಿಗೆ ತಲೆಕೊಡುತ್ತಿವೆ. ನಮ್ನಮ್ಮ ಮನೆಯ ಪಕ್ಕದಲ್ಲಿರುವ ಮರಗಳನ್ನು ಮಾತ್ರ ನಾವು ಕಡಿಯುತ್ತೇವೆ. ಅದ್ಯಾವ ದೊಡ್ಡ ತಪ್ಪು? ಹೀಗಂತ ಯೋಚಿಸಿಯೇ ಎಲ್ಲರೂ ಕೊಡಲಿ ಹಿಡಿದು ಹೊರಡುತ್ತೇವೆ. ಆದರೆ ತಿಂಗಳಿಗೊಂದೇ, ಮನೆಗೊಂದೇ ಎಂದು ಚಿಕ್ಕದಾಗಿ ಕಾಣುವ ಈ ಲೆಕ್ಕ ಹತ್ತಾರು ವರ್ಷಗಳಾಚೆಗೆ ಸಾಗುವಷ್ಟರಲ್ಲಿ ಸಾವಿರಾರು ಮರಗಿಡಗಳ ಮರಣಗಾಥೆಯಾಗಿ ಬದಲಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

ಇದನ್ನೆಲ್ಲ ನೋಡುವಾಗ ಪೂರ್ಣಚಂದ್ರ ತೇಜಸ್ವಿಯವರ ಸಾಲೊಂದು ನೆನಪಿಗೆ ಬರುತ್ತದೆ. “ಆಹಾರಕ್ಕಾಗಿ ಪ್ರಾಣಿಗಳೂ, ಮನುಷ್ಯರೂ ಮಾಡುತ್ತಿದ್ದ ಬೇಟೆಯಿಂದ ಪ್ರಾಣಿವರ್ಗಕ್ಕೆ ವಿನಾಶದ ಅಂಚಿಗೆ ಹೋಗುವಷ್ಟು ಹಾನಿಯಾದ ಉದಾಹರಣೆಗಳು ಕಡಿಮೆ. ಆದರೆ ಔದ್ಯಮಿಕ ಶೋಷಣೆ ಪ್ರಾರಂಭವಾದರೆ ಸಾಕು, ಆ ಪ್ರಾಣಿ ವಿನಾಶದ ಅಂಚಿಗೆ ಸರಿದಿದ್ದನ್ನು ನೋಡಬಹುದು” ಎಂಬ ಅವರ ಮಾತು ಅರಣ್ಯನಾಶಕ್ಕೂ ಅನ್ವಯವಾಗುತ್ತದೆ. ತೀರಾ ಅಗತ್ಯವಾದ ಕೆಲ ಕಾರಣಗಳನ್ನು ಒಪ್ಪೋಣ, ಆದರೆ ಕಟ್ಟಿಗೆ, ಪೀಠೋಪಕರಣಗಳ ತಯಾರಿಸಿ ಮಾರಲಿಕ್ಕೆ, ಅನಗತ್ಯ ಸೈಟು, ಲೇಔಟ್ ಗಳ ನಿರ್ಮಿಸಿ ಜೇಬು ತುಂಬಿಕೊಳ್ಳಲಿಕ್ಕೆ, ಒಲೆಗೆ ಒಟ್ಟಿ ಬೆಂಕಿ ಕಾಸಲಿಕ್ಕೆ, ಪರ್ಯಾಯ ಮಾರ್ಗವಿರುವ ಮತ್ತೆಂತದೋ ಉದ್ದೇಶಕ್ಕೆ ಕಾನನದ ಹನನವಾಗುವುದು ಎಷ್ಟು ಸರಿ? ಕಳೆದುಕೊಳ್ಳುವಷ್ಟು ಕಾಡು ನಮ್ಮ ಬಳಿಯೆಲ್ಲಿದೆ? ಒಂದು ಮರ ಕಡಿದರೆ ಎರೆಡು ಗಿಡ ನೆಡಿ ಎನ್ನುತ್ತದೆ ಸರ್ಕಾರ. ಆದರೆ ಇಲ್ಲಿ ಬರೀ ಕಡಿದ ಮರದ ಬೊಡ್ಡೆಗಳೇ ಕಾಣುತ್ತಿವೆಯಲ್ಲದೆ ನೆಟ್ಟ ಸಸಿಗಳೆಲ್ಲಿವೆ? ಯಾರಪ್ಪನ ಮನೆಯ ಸೊತ್ತೂ ಅಲ್ಲದ, ‘ಕಡಿಯಬೇಡಿ’ ಎಂದು ಯಾರೂ ಬಂದು ಅಪ್ಪಿಕೊಳ್ಳದ ಈ ಹಸಿರು ದೇಗುಲಗಳನ್ನು ಕೆಡವಿದ ಈ ವಿಧ್ವಂಸಕರ ಬಳಿ ಮಾತನಾಡಲು ಹೋದರೆ ತೋಳು ಮಡಿಚಿಕೊಂಡೇ ಬರುವಾಗ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಮ್ಮ ನಾಯಕರುಗಳೇ ಇವರನ್ನು ಬೆಂಬಲಿಸುವಾಗ ಇದನ್ನೆಲ್ಲ ತಡೆಯುವುದಾದರೂ ಹೇಗೆ?

ನಮ್ಮೆಲ್ಲರಿಗೂ ಗೊತ್ತಿಲ್ಲದ, ಬಹುಷಃ ಸತ್ಯವೂ ಆಗಿರಬಹುದಾದ ಸಂಗತಿಯೊಂದಿದೆ. ಭೂಮಿಯ ಅಕ್ಕಪಕ್ಕದ ಗ್ರಹಗಳಾದ ಶುಕ್ರ ಹಾಗೂ ಮಂಗಳಗಳನ್ನು ಮನುಷ್ಯ ಅಥವಾ ಯಾವುದೇ ತೃಣಸಮಾನ ಜೀವಿಯೂ ಬದುಕಲಾಗದ ‘ಮೃತಗ್ರಹ’ಗಳೆಂದು ಕರೆಯುತ್ತಾರೆ. ಆದರೆ ಈ ಗ್ರಹಗಳತ್ತ ಸಂಶೋಧನಾ ನೌಕೆಗಳನ್ನು ಹಾರಿಬಿಟ್ಟಿರುವ ವಿಜ್ಞಾನಿಗಳಿಗೆ ಮಂಗಳದಲ್ಲಿ ಹಿಂದೆಂದೋ ನೀರಿತ್ತೆಂಬ ಅಂಶವೂ, ಶುಕ್ರದಲ್ಲಿ ಬಹಳ ಹಿಂದೆ ವಾತಾವರಣವಿದ್ದ ಲಕ್ಷಣಗಳೂ ಗೋಚರಿಸಿವೆ. ಅಂದರೆ ಒಂದು ಕಾಲದಲ್ಲಿ ಈ ಗ್ರಹಗಳಲ್ಲೂ ಜೀವ ಸಂತತಿಯಿದ್ದಿರಬಹುದು, ಯಾವುದೋ ಅನಾಹುತಕಾರಿ ಪ್ರಕ್ರಿಯೆಯಿಂದ ಅದು ಕಾಲಕ್ರಮೇಣ ನಶಿಸಿ ಅವು ಇಂದಿರುವ ಈ ‘ಮೃತ’ ಸ್ಥಿತಿಯನ್ನು ತಲುಪಿರಬಹುದು ಎಂಬ, ಸತ್ಯವೂ ಆಗಿರಬಹುದಾದ ಕಲ್ಪನೆಯೊಂದನ್ನು ಹುಟ್ಟಿಕೊಂಡಿದೆ. ಬಹುಷಃ ನಮ್ಮೀ ಭೂಮಿಯನ್ನು ಮನುಷ್ಯ ನಡೆಸಿಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಮುಂದೊಂದು ದಿನ ಭೂಮಿಯೂ ಶುಕ್ರ, ಮಂಗಳಗಳಂತೆ ಮೃತವಾಗುವುದರಲ್ಲಿ ಅನುಮಾನವೇ ಇಲ್ಲವೆನಿಸುತ್ತದೆ. ಕೇವಲ ನಮ್ಮ ಲಾಭ, ಸ್ವಾರ್ಥಗಳನ್ನು ತಲೆಯತುಂಬಾ ತುಂಬಿಕೊಂಡು ಗರಗಸ, ಕೊಡಲಿ, ಬುಲ್ಡೋಜರ್‌ಗಳನ್ನು ಹಿಡಿದ ನಾವು ಇಷ್ಟು ಬಿರುಸಾಗಿ ನಡೆಯುತ್ತಿರುವುದು ಭವಿಷ್ಯದ ‘ಮೃತಭೂಗ್ರಹ’ದತ್ತಲೇ.

ಆದರೆ ಇದು ಪರಿಹಾರವಿಲ್ಲದ ಸಮಸ್ಯೆಯೇನೂ ಅಲ್ಲ. ನೈಸರ್ಗಿಕ ಪರಿಸರವನ್ನು ನಿರ್ನಾಮದಂಚಿಗೆ ಒಯ್ಯುತ್ತಿರುವ ನಮಗೆ ಅದನ್ನು ಉಳಿಸಿಕೊಳ್ಳುವ ತಾಕತ್ತೂ ಇದೆ. ಉದಾಹರಣೆಗೆ ಕೆಲ ವರ್ಷಗಳ ಕೆಳಗೆ ಹುಲಿಗಳ ಸಂತತಿ ಅಪಾಯದಲ್ಲಿದೆ ಎಂದು ಘೋಷಿಸಿದ ಸರ್ಕಾರ ಅವುಗಳ ರಕ್ಷಣೆಗೆ ಕಠಿಣ ಕ್ರಮಗಳನ್ನು ಕೈಗೊಂಡಿತು. ಪರಿಣಾಮವಾಗಿ 2006ರಲ್ಲಿ ಕೇವಲ 1411ರಷ್ಟಿದ್ದ ಹುಲಿಗಳ ಸಂಖ್ಯೆ 2014ರ ಹೊತ್ತಿಗೆ 2226ಕ್ಕೆ ಏರಿಕೆಯಾಗಿದೆ. ಆದರೆ ನಿಸರ್ಗ ದಯಪಾಲಿಸಿರುವ ಪ್ರತಿಯೊಂದು ಸಂಗತಿಯನ್ನೂ ನೂರು, ಸಾವಿರಕ್ಕೆ ಇಳಿದ ಮೇಲೆಯೇ ರಕ್ಷಿಸುತ್ತೇವೆಂದರೆ ಅದು ಸಾಧ್ಯವಾಗದ ಮಾತು. ನಾಶವಾದ ನಿಸರ್ಗ ಸುಮ್ಮನೆ ಹೋಗಿರುವುದಿಲ್ಲ, ಇಷ್ಟುದಿನ ತನ್ನ ಸುತ್ತಲ ವಾತಾವಾರಣಕ್ಕೆ ತಾನು ನಿಶ್ಯಬ್ದವಾಗಿ ಒದಗಿಸುತ್ತಿದ್ದ ಅಸಂಖ್ಯ ಅನುಕೂಲಗಳನ್ನೂ ಜೊತೆಗೆ ತೆಗೆದುಕೊಂಡೇ ಹೋಗಿರುತ್ತದೆ. ಈ ಸೂಕ್ಷ್ಮ ಸಂಗತಿಯನ್ನು ನಾವಾಗಿಯೇ ನಾವು ಅರ್ಥಮಾಡಿಕೊಳ್ಳುವ ತನಕ ಸರ್ಕಾರದ ಯಾವ ನಿಯಮ, ಶಾಸನಗಳೂ ಯಶಸ್ವಿಯಾಗುವುದಿಲ್ಲ

About The Author

ವಿನಾಯಕ ಅರಳಸುರಳಿ

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ' ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ 'ಮರ ಹತ್ತದ ಮೀನು' ಕಥಾ ಸಂಕಲನಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ