Advertisement
ಕಣ್ಣಾಮುಚ್ಚೇ.. ಕಾಡೇಗೂಡೇ… ಐಸ್ಪೈಸ್!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಕಣ್ಣಾಮುಚ್ಚೇ.. ಕಾಡೇಗೂಡೇ… ಐಸ್ಪೈಸ್!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಮಕ್ಕಳು ಬರೆದ ಕಥೆಯನ್ನು ಪ್ರಶಂಸಿಸುತ್ತಾ, ಅದಕ್ಕೆ ಮತ್ತಷ್ಟು ಬದಲಾವಣೆಗಳನ್ನು ಸೂಚಿಸಿದರು ಕಾವ್ಯ ಮತ್ತು ಪ್ರಕಾಶ್. ಆಗ ವಿಭಾ, “ಆದ್ರೂ ನಮ್ಮ ಪ್ರಕೃತಿ ಎಂಥಾ ಅದ್ಭುತ ಅಲ್ವಾ? ಅಷ್ಟೊಂದು ಡಲ್ ಆಗಿರೋ ಚಿಟ್ಟೆಹುಳು ಬಣ್ಣಬಣ್ಣದ ಚಿಟ್ಟೆಯಾಗಿ ಬದಲಾಗತ್ತೆ.” ಎಂದಳು. ಆಗ ಕಾವ್ಯ, “ನಿಜಾ ವಿಭಾ, ಜೊತೆಗೆ ಇದರ ವಿರುದ್ಧವಾಗಿ ಕೂಡ ಆಗತ್ತೆ, ಕೆಲವೊಮ್ಮೆ ಕ್ಯಾಟರ್ಪಿಲ್ಲರ್ ತುಂಬಾ ಬಣ್ಣಬಣ್ಣದ್ದಾಗಿರತ್ತೆ, ಆದ್ರೆ ಅದರಿಂದ ಹೊರಬರೋ ಚಿಟ್ಟೆ ಅಥ್ವಾ ಪತಂಗ ಡಲ್ ಆಗಿ, ಕಂದು ಬಣ್ಣದ್ದೋ, ಬೂದು ಬಣ್ಣದ್ದೋ ಆಗಿರತ್ತೆ.” ಎಂದಳು. ಆಗ ಸಮುದ್ರ, “ಅದ್ಯಾಕೆ ಹಾಗೆ?” ಎಂದ.
ಕ್ಷಮಾ
ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಇಪ್ಪತ್ತೊಂದನೆಯ ಕತೆ

ಹಕ್ಕಿಗಳ ಇಂಚರವು ಬೆಳಗಾಗಿದ್ದನ್ನು ಸಾರಿ ಸಾರಿ ಹೇಳುತ್ತಿತ್ತು. ಹಿನ್ನೆಲೆಗೆ ಸುಂದರ ಕೆಂಬಣ್ಣದ ಆಗಸ. ಕಾವ್ಯಳ ಕುಟುಂಬದವರು ಒಬ್ಬೊಬ್ಬರಾಗಿ ಎದ್ದು ಬೆಳಗಿನ ಕೆಲಸಗಳಿಗೆ ತೊಡಗಿಕೊಳ್ಳುತ್ತಿದ್ದರು. ಶಿರಸಿ, ಗೋಕರ್ಣ ಪ್ರವಾಸ ಮುಗಿಸಿ ಬಂದು, ಟ್ರಿಪ್ ನೆನಪುಗಳನ್ನು ಮೆಲುಕು ಹಾಕುತ್ತಾ ದಿನದ ಕೆಲಸಗಳನ್ನು ಮುಂದುವರೆಸುತ್ತಿದ್ದರು. ಜೊತೆಗೆ ಪತ್ತೇದಾರಿಕೆ ಮಾಡಿದ ಖುಷಿ ಬೇರೆ. ಕಳೆದ ಸಂಚಿಕೆಯಲ್ಲಿ ಕ್ಯಾಮೆರಾ ಕಣ್ಣಿಗೆ ಬೀಳದೇ ಕರಿಬೇವು ಕಳ್ಳತನ ಮಾಡಿದ ಕಳ್ಳನ ಬಗ್ಗೆ ಕಾವ್ಯಳ ತಾಯಿ-ತಂದೆ ಫೋನಿನಲ್ಲಿ ಹೇಳಿದ್ದರಲ್ಲ? ಆಗ ಅದಕ್ಕೆ ಕಾವ್ಯ ಮತ್ತು ಪ್ರಕಾಶ್ ಏನು ಉತ್ತರ ಕೊಟ್ಟಿರಬಹುದು, ಕಳ್ಳ ಯಾರಿರಬಹುದು ಎಂದು ನಿಮಗೆ ಪ್ರಶ್ನೆ ಕೇಳಿದ್ದೆವಲ್ಲ? ಉತ್ತರ ಸಿಕ್ಕಿತೇ?

ಪತ್ತೇದಾರಿ ಕಥೆ ಓದುವ ಅಥವಾ ಪತ್ತೇದಾರಿ ಸಿನೆಮಾ ನೋಡುವವರಾಗಿದ್ದರೆ, ಅಥವಾ ಗಿಡಗಳ ಬಗ್ಗೆ, ಕೀಟಗಳ ಬಗ್ಗೆ ಕೊಂಚ ತಿಳಿದವರಾಗಿದ್ದರೆ ನಿಮಗೆ ಉತ್ತರ ಖಂಡಿತವಾಗಿಯೂ ಸಿಕ್ಕಿರುತ್ತದೆ.

ಕರಿಬೇವಿನ ಗಿಡದ ಎಲೆಗಳನ್ನು ಕದ್ದದ್ದು ಮನುಷ್ಯರಲ್ಲ, ಪುಟಾಣಿ ಕ್ಯಾಟರ್ಪಿಲ್ಲರ್, ಅಂದ್ರೆ ಚಿಟ್ಟೆಹುಳ ಅಥವಾ ಕಂಬಳಿಹುಳ. ಇಲ್ಲಿ ಕಂಬಳಿ ಹುಳವೆಂದು, ಹಳೆಯ ಕಾಲದ ನೇಯ್ದ ಕಂಬಳಿಯಂತೆ ಕಪ್ಪು-ಬಿಳಿ-ದಾರ ದಾರದಂತೆ, ಮುಳ್ಳುಮುಳ್ಳಾಗಿದ್ದ ಹುಳುಗಳನ್ನು ಮಾತ್ರ ಕರೆಯೋದುಂಟು. ಹಸಿರು, ಹಳದಿ ಇತ್ಯಾದಿ ಬಣ್ಣಗಳಿದ್ದರೆ ಚಿಟ್ಟೆಹುಳು ಎಂಬ ಹೆಸರಿನಿಂದ ಕರೆಯೋದೂ ಸಾಮಾನ್ಯ. ಇವು ಬಣ್ಣ ಬಣ್ಣದ ಚಿಟ್ಟೆಯಾಗುವ ಮುಂಚಿನ ಹಂತವೆಂದು ಶಾಲೆಯಲ್ಲಿ ಓದಿಯೋ, ಸುತ್ತಲಿನ ಪರಿಸರವನ್ನು ನೋಡಿಯೋ ಕಲಿತಿರುತ್ತೀರಿ. ಇಂತಹದ್ದೇ ‘ಕಾಮನ್ ಮೋರ್ಮೋನ್’ ಎಂಬ ಚಿಟ್ಟೆಯ ಕ್ಯಾಟರ್ಪಿಲ್ಲರ್ ತನ್ನ ಅಪಾರ ಹಸಿವನ್ನು ಹಿಂಗಿಸಿಕೊಳ್ಳಲು ಗುಳುಂ ಮಾಡಿದ್ದ ಕರಿಬೇವಿನ ಎಲೆಗಳು ಅಪಾರ್ಟ್ಮೆಂಟ್ ವಾಟ್ಸಾಪ್ ಗುಂಪಿನಲ್ಲಿ ಯುದ್ಧ ಮಾಡಿಸಿತ್ತು.

ಇದನ್ನೇ ಯೋಚಿಸುತ್ತಾ, ತಿಂಡಿಗೆ ಕರಿಬೇವು ಬಿಡಿಸುತ್ತಿದ್ದ ಕಾವ್ಯಳಿಗೆ ನಗು ಬಂತು. ಅದನ್ನು ಕಂಡು ಈರುಳ್ಳಿ ಹೆಚ್ಚುತ್ತಿದ್ದ ಪ್ರಕಾಶ್, “ಏನ್ ಜೋಕ್ ನೆನಪಾಯ್ತಪ್ಪ ಕಾವ್ಯಗೆ ಬೆಳಿಗ್ಗೆನೇ?” ಎಂದ. ಆಗ ಕಾವ್ಯ “ಏನಿಲ್ಲ, ಅದೇ ಕ್ಯಾಟರ್ಪಿಲ್ಲರ್ ಕಥೆ” ಎಂದಳು ನಗುತ್ತಾ. ಅಷ್ಟರಲ್ಲಿ, ಸಮುದ್ರ ಅಲ್ಲಿಗೆ ಬಂದ. “ಅಮ್ಮಾ, ರಜೆ ಮುಗೀತು, ನಾಳೆ ಶಾಲೆ ಶುರು. ಒಂದೇ ಒಂದು ಹಾಲಿಡೇ ಹೋಮ್ವರ್ಕ್ ಪೆಂಡಿಂಗ್ ಇತ್ತಲ್ಲ….” ಎಂದು ರಾಗ ಎಳೆದ.

ಆಗ ಕಾವ್ಯ, “ಹೌದಲ್ಲ ಕಂದ! ೧೦೦ ಪದಗಳ ಸಣ್ಣಕಥೆ ಬರೆಯೋದು ಪೆಂಡಿಂಗ್ ಇದೆ. ಏನ್ ಬರೀತೀಯಾ?” ಎಂದು ಅವನ ಪ್ರಶ್ನೆಯನ್ನು ಅವನ ಕಡೆಗೇ ತಿರುಗಿಸಿದಳು. ಮಕ್ಕಳ ಪ್ರಶ್ನೆಗಳಿಗೆಲ್ಲಾ ನಾವೇ ರೆಡಿಮೇಡ್ ಉತ್ತರ ನೀಡಿದರೆ, ಅವರು ಯೋಚಿಸಲು ಕಲಿಯೋದು ಹೇಗೆ ಎಂಬ ನಿಲುವಿನ ಕಾವ್ಯ ಮತ್ತು ಪ್ರಕಾಶ್, ಮಗನಿಗೇ ಯೋಚಿಸೋಕೆ ಅವಕಾಶ ನೀಡಿ ತಮ್ಮ ಕೆಲಸಕ್ಕೆ ಮರಳಿದರು. ರಜೆಯ ಕೊನೆಯ ದಿನ ಅಕ್ಕನ ಮನೆಯಿಂದ ಹೊರಡೋಕೆ ಬ್ಯಾಗ್ ಪ್ಯಾಕ್ ಮಾಡ್ತಾ ಇದ್ದ ವಿಭಾ ಮತ್ತು ವರ್ಣ, ಅಲ್ಲಿಯೇ ಕಟ್ಟೆಯ ಮೇಲೆ ಸಮುದ್ರ ಯೋಚನೆ ಮಾಡುತ್ತಾ ಕೂತ ಭಂಗಿ ನೋಡಿ ನಗುತ್ತಾ, ಜೊತೆಗೂಡಿದರು.

ಮಕ್ಕಳ ಪಾಡಿಗೆ ಮಕ್ಕಳನ್ನು ಬಿಟ್ಟು, ಅಡುಗೆ ಮನೆ ಕೆಲಸಗಳಲ್ಲಿ ತೊಡಗಿಕೊಂಡರು, ಕಾವ್ಯ ಮತ್ತು ಪ್ರಕಾಶ್. ಅರ್ಧಘಂಟೆಯ ನಂತರ, ಬಿಸಿ ಬಿಸಿ ಉಪ್ಪಿಟ್ಟು, ಕೇಸರಿ ಬಾತ್ ಮಾಡಿ ತಿಂಡಿಗೆ ಕರೆದಾಗ, ಮಕ್ಕಳೆಲ್ಲರೂ ಬಾರದಿದ್ದನ್ನು ನೋಡಿ, “ಅದೇನು ಮಾಡುತ್ತಿದ್ದಾರೆ ನೋಡುವಾ” ಎಂದು ಬಂದು ನೋಡಿದರೆ, ಅವರೆಲ್ಲಾ ಸೇರಿ ಕಥೆ ಬರೆದು ಮುಗಿಸಿ ಆಗಿತ್ತು. ಆಗ ವಿಭಾ, “ಕಾವ್ಯಕ್ಕಾ, ಬಾವಾ, ತಿಂಡಿ ತಿಂದ ಮೇಲೆ ನಿಮಗೆ ಒಂದು ಕಿರುನಾಟಕ ಪ್ರದರ್ಶನ ಇದೆ.” ಎಂದಳು ಸಂಭ್ರಮದಿಂದ. ಆಗ ಕಾವ್ಯ ಖುಷಿಯಿಂದ, “ಕಥೆ ಬರೆದದ್ದು ಆಯ್ತಾ? ನಾಟಕ ಬೇರೇ ಮಾಡ್ತೀರಾ? ನಡೀರಿ ಹಾಗಾದ್ರೆ ಬೇಗ ಬೇಗ ತಿಂಡಿ ತಿಂದು ಬರೋಣ” ಎಂದಳು.

ಬಿಸಿ ಬಿಸಿ ಉಪ್ಪಿಟ್ಟನ್ನು “ಉಪ್ಪಿಟ್ಟು ಮಾಡ್ದೆ, ಉಪ್ಪಿಟ್ ಮಾಡ್ದೆ” ಅಂತ ಯೂಟ್ಯೂಬಲ್ಲಿ ಫೇಮಸ್ ಆಗಿದ್ದ ಹಾಡು ಹಾಡ್ತಾ, ತಿಂದು ಮುಗಿಸಿದರು. ಆಗ ಶುರುವಾಯಿತು ನೋಡಿ ಕಿರುನಾಟಕ ಪ್ರದರ್ಶನ.

ಗೋಣಿಚೀಲವೊಂದನ್ನು ಧರಿಸಿ ಬಂದ ಸಮುದ್ರ, ಒಂದು ಮೂಲೆಯಲ್ಲಿ ಕೂತಿದ್ದ. ಅವನ ಮುಂದೆಯೇ ಬಣ್ಣ ಬಣ್ಣದ ಹಕ್ಕಿಗಳಂತೆ ವೇಷ ಧರಿಸಿ, ವರ್ಣ ಮತ್ತು ವಿಭಾ, ಹಾರಾಡುವ ಹಾಗೆ ನಟಿಸುತ್ತಿದ್ದರು. ಹಾರಾಡಿ ಹಾರಾಡಿ ದಣಿವಾರಿಸಿಕೊಳ್ಳೋಕೆ ಬಂದ ಈ ಹಕ್ಕಿಗಳು, ತಿನ್ನೋಕೇನಾದರೂ ಸಿಗುತ್ತದೆಯೇನೋ ಎಂದು ನೋಡಲು ಕುಳಿತರು. ಕೊಳೆಕೊಳೆಯಾದ ಗೋಣಿಚೀಲದ ಹತ್ತಿರ ಬಂದು ನೋಡಿದರು. “ಅಯ್ಯೋ ಇದೇನು, ಮತ್ಯಾವುದೋ ಹಕ್ಕಿ ಹಿಕ್ಕೆ ಹಾಕಿದೆ. ಶೀ… ಗಲೀಜು” ಎಂದು ಮತ್ತೆ ದೂರ ಹಾರಲು ಹೊರಟರು. ಇದನ್ನು ಕೇಳಿಸಿಕೊಂಡ ಗೋಣಿಚೀಲದಲ್ಲಿ ಅಡಗಿದ್ದ ಸಮುದ್ರ, ಅಂದ್ರೆ ಮರಿಹುಳು, ನಗುತ್ತಾ, ಹೊಟ್ಟೆ ತುಂಬಾ ಎಲೆಗಳನ್ನು ತಿನ್ನೋಕೆ ಪ್ರಾರಂಭಿಸಿತು. ಎಲೆಗಳನ್ನು ತಿನ್ನುತ್ತಾ, ತಿನ್ನುತ್ತಾ, ಗೋಣಿಚೀಲವು ಟೈಟ್ ಆಗ್ತಾ ಹೋಯ್ತು, ಆ ಟೈಟ್ ಬಟ್ಟೆ ಹರಿದು, ಅದರೊಳಗಿನಿಂದ ಬಣ್ಣಬಣ್ಣದ ಬಟ್ಟೆ ತೊಟ್ಟ ಸಮುದ್ರ ಎದ್ದು ನಿಂತ. ಆಗ ಹಕ್ಕಿಗಳಿಗೆ ಆಶ್ಚರ್ಯ! ಅಟ್ಯಾಕ್ ಮಾಡೋಕೆ ಬಂದವು. ಆದರೆ, ಅಷ್ಟರಲ್ಲಿ ರೆಕ್ಕೆಯನ್ನು ಅಗಲಿಸಿದ ಮರಿಹುಳು, ಚಿಟ್ಟೆಯಾಗಿ ರೂಪಾಂತರವಾಗಿತ್ತಲ್ಲ! ಮೇಲೆ ಹಾರಿ, ತಿನ್ನಲು ಬಂದ ಹಕ್ಕಿಗಳಿಂದ ತಪ್ಪಿಸಿಕೊಂಡಿತು! ಪೆಚ್ಚು ಮುಖ ಹಾಕಿಕೊಂಡ ಒಂದು ಹಕ್ಕಿ ಇನ್ನೊಂದಕ್ಕೆ ಹೇಳಿತು “ಡೋಂಟ್ ಜಡ್ಜ್ ಅ ಬುಕ್ ಬೈ ಇಟ್ಸ್ ಕವರ್”. ಆಗ ಮತ್ತೊಂದು ಹಕ್ಕಿ “ಹಂಗಂದ್ರೆ?” ಎಂದು ಕೇಳಿತು. ಆಗ ಮೊದಲನೇ ಹಕ್ಕಿ ವಿಸ್ತಾರವಾಗಿ ಹೇಳಿತು – “ಯಾವುದೋ ಹಕ್ಕಿಯ ಕೊಳಕು ಹಿಕ್ಕೆಯಂತಿದ್ದ ಹುಳ, ಈಗ ಸುಂದರವಾದ ಚಿಟ್ಟೆಯಾಯಿತಲ್ಲವೇ? ಹಾಗೇ, ಉಡುಪನ್ನೋ, ಮೈಬಣ್ಣವನ್ನೋ ನೋಡಿ ಒಬ್ಬರ ಗುಣವನ್ನು ನಿರ್ಧರಿಸಬಾರದು. ಒಂದು ಪುಸ್ತಕದ ಹೊರಪುಟ ಆಕರ್ಷಕವಾಗಿದ್ದರೆ, ಒಳಗೆ ಪುಸ್ತಕದ ಹೂರಣ ಚೆನ್ನಾಗಿಯೇ ಇರುತ್ತದೆಂದು ಅರ್ಥವಲ್ಲ; ಹಾಗೇ, ಹೊರಪುಟ ಚೆನ್ನಾಗಿಲ್ಲದಿದ್ದರೆ, ಪುಸ್ತಕವೂ ಚೆನ್ನಾಗಿಲ್ಲ ಎಂದು ಅರ್ಥವಲ್ಲ. ಪುಸ್ತಕಕ್ಕೆ ಹೇಗೆ ಅದರ ವಸ್ತು, ವಿಷಯ ಮುಖ್ಯವೋ ಹಾಗೇ ಮನುಷ್ಯರಿಗೂ ಗುಣ ಮುಖ್ಯ.” ಎಂದು ವಿವರಿಸಿತು. ಆಗ ತಲೆಯಾಡಿಸುತ್ತಾ, ಎರಡೂ ಹಕ್ಕಿಗಳೂ “ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದೂ…” ಎಂದು ಹಳೆಯ ಕನ್ನಡ ಸಿನೆಮಾದ ಹಾಡನ್ನು ಹಾಡುತ್ತಾ ನಿರ್ಗಮಿಸಿದವು.

ಈ ಕಿರುನಾಟಕ ನೋಡಿ, ಕಿರುನಗೆ ಬೀರುತ್ತಾ ಪ್ರಕಾಶ್ ಹಾಗೂ ಕಾವ್ಯ ಚಪ್ಪಾಳೆ ತಟ್ಟಿದರು. ಆಗ ಪ್ರಕಾಶ್, “ವೆರಿ ಗುಡ್ ಮಕ್ಳೇ, ಈ ಕಥೆಗೆ ಹೆಸರೇನು ಇಟ್ಟಿದೀರಾ? ಎಂದರು. ಆಗ ಸಮುದ್ರ, “ಇಂಗ್ಲೀಷ್ ಹೋಮ್ವರ್ಕ್ ಅಲ್ವಾ ಅಪ್ಪ, ಅದಕ್ಕೆ ‘Rags to Riches’ ಅಂತ ಹೆಸರಿಟ್ಟಿದೀನಿ” ಎಂದ. ಆಗ ವರ್ಣ, “ಅಲ್ಲಾ ಸಮುದ್ರಾ, ಕನ್ನಡದ ಕಥೆಯಾಗಿದ್ರೆ, ‘ರದ್ದಿ ರಾಜಕುಮಾರ’ ಅಂತ ಹೆಸರಿಡ್ತಾ ಇದ್ಯಾ? ಹೇಗೂ ಗೋಣಿಚೀಲದಲ್ಲಿ ಇದ್ನಲ್ಲ ರಾಜಕುಮಾರ ಮೊದ್ಲು?” ಎಂದಳು ನಗುತ್ತಾ.

ಮಕ್ಕಳು ಬರೆದ ಕಥೆಯನ್ನು ಪ್ರಶಂಸಿಸುತ್ತಾ, ಅದಕ್ಕೆ ಮತ್ತಷ್ಟು ಬದಲಾವಣೆಗಳನ್ನು ಸೂಚಿಸಿದರು ಕಾವ್ಯ ಮತ್ತು ಪ್ರಕಾಶ್. ಆಗ ವಿಭಾ, “ಆದ್ರೂ ನಮ್ಮ ಪ್ರಕೃತಿ ಎಂಥಾ ಅದ್ಭುತ ಅಲ್ವಾ? ಅಷ್ಟೊಂದು ಡಲ್ ಆಗಿರೋ ಚಿಟ್ಟೆಹುಳು ಬಣ್ಣಬಣ್ಣದ ಚಿಟ್ಟೆಯಾಗಿ ಬದಲಾಗತ್ತೆ.” ಎಂದಳು. ಆಗ ಕಾವ್ಯ, “ನಿಜಾ ವಿಭಾ, ಜೊತೆಗೆ ಇದರ ವಿರುದ್ಧವಾಗಿ ಕೂಡ ಆಗತ್ತೆ, ಕೆಲವೊಮ್ಮೆ ಕ್ಯಾಟರ್ಪಿಲ್ಲರ್ ತುಂಬಾ ಬಣ್ಣಬಣ್ಣದ್ದಾಗಿರತ್ತೆ, ಆದ್ರೆ ಅದರಿಂದ ಹೊರಬರೋ ಚಿಟ್ಟೆ ಅಥ್ವಾ ಪತಂಗ ಡಲ್ ಆಗಿ, ಕಂದು ಬಣ್ಣದ್ದೋ, ಬೂದು ಬಣ್ಣದ್ದೋ ಆಗಿರತ್ತೆ.” ಎಂದಳು. ಆಗ ಸಮುದ್ರ, “ಅದ್ಯಾಕೆ ಹಾಗೆ?” ಎಂದ.

ಆಗ ಕಾಫಿ ಮಾಡಿಕೊಂಡು ಬಂದ ಪ್ರಕಾಶ್, ಇವರ ಜೊತೆಗೂಡಿ, “ಅದನ್ನೇ ನಾವು ಅಪೊಸೆಮಾಟಿಕ್ (Aposematic) ತಂತ್ರ ಅಂತೀವಿ. ಪಾಪ ತಮ್ಮ ಜೀವ ಉಳಿಸಿಕೊಳ್ಳೋಕೆ ಏನೇನೆಲ್ಲಾ ಮಾಡ್ತವೆ ನೋಡು ಕೀಟಗಳು. ಹಳೇದು ಒಂದು ಡಾ ರಾಜ್ ಸಿನಿಮಾದ ಹಾಡು ಕೇಳಿದೀರಾ ನೀವೆಲ್ಲಾ? ಆಡುತಿರುವಾ ಮೋಡಗಳೇ…. ಹಾರುತಿರುವಾ ಹಕ್ಕಿಗಳೇ… ಯಾರ ಭಯವೂ ನಿಮಗಿಲ್ಲಾ… ನಿಮ್ಮ ಭಾಗ್ಯ ನಮಗಿಲ್ಲಾ…” ಎಂದ. ಆಗ, ಸಮುದ್ರ, “ಹೂಂ, ಅಜ್ಜಾ ಹಾಡ್ತಾ ಇರ್ತಾರಲ್ಲಾ ಈ ಹಾಡು!” ಎಂದ. ಆಗ ಕಾವ್ಯ, “ಹೂಂ ಈ ಹಾಡಲ್ಲಾಗ್ಲೀ, ಅನೇಕ ಕವಿತೆಗಳಲ್ಲಾಗ್ಲೀ, ಕೀಟಗಳು, ಹಕ್ಕಿಗಳು, ಪ್ರಾಣಿಗಳು ಅರಾಮಾಗಿ ಇವೆ, ನಾವೇ ಮನುಷ್ಯರೇ ಕಷ್ಟ ಪಡ್ತಿರೋದು ಅನ್ನೋ ಅರ್ಥದಲ್ಲಿ ಬರ್ದಿದಾರೆ. ಪಾಪ ಅವ್ರಿಗೇನು ಗೊತ್ತು? ಪ್ರತಿ ಜೀವಿಯೂ ತನ್ನ ಜೀವ ಉಳಿಸಿಕೊಳ್ಳೋಕೆ ಹರ ಸಾಹಸ ಪಡ್ಲೇಬೇಕು. ಅಪೊಸೆಮಾಟಿಕ್ ತಂತ್ರ ಕೂಡ ಅದಕ್ಕೇ ಬಳಸತ್ವೆ ಅವು.” ಎಂದಳು.

ಅವಳ ಮಾತನ್ನು ಮುಂದುವರೆಸುತ್ತಾ, ಪ್ರಕಾಶ್ “ನಿಜಾ, ತಮ್ಮನ್ನು ತಿನ್ನಲು ಬರೋ ದೊಡ್ಡ ಕೀಟಗಳನ್ನ, ಅಥ್ವಾ ಹಕ್ಕಿಗಳನ್ನ ಹೆದರಿಸೋಕೆ ಕೆಲವು ಚಿಟ್ಟೆಹುಳುಗಳು ಅತ್ಯಂತ ಬ್ರೈಟ್ ಆಗಿರೋ ಬಣ್ಣಗಳಲ್ಲಿ ಇರತ್ವೆ. ‘ಇದ್ಯಾವ್ದೋ ಭಯಂಕರ ವಿಷ ಇರೋ ಜೀವಿ, ಇದರ ಹತ್ತಿರ ಹೋಗ್ಬಾರ್ದು’ ಅನ್ನೋ ಹಾಗೆ ಇತರ ಜೀವಿಗಳನ್ನ ಹೆದರಿಸಿ ತಮ್ಮ ಜೀವ ಉಳಿಸ್ಕೊಳತ್ವೆ. ಅದನ್ನೇ ‘ಅಪೊಸೆಮಾಟಿಕ್’ ತಂತ್ರ ಅನ್ನೋದು. ಆದ್ರೆ, ಆ ಚಿಟ್ಟೆಹುಳು ಮುಂದಿನ ಹಂತಕ್ಕೆ ಅಂದ್ರೆ ‘ಪ್ಯೂಪಾ’ ಹಂತಕ್ಕೆ ಹೋಗಿ, ನಂತರ, ಅಲ್ಲಿಂದ ಚಿಟ್ಟೆಯಾಗಿ ಹೊರಬರುವಾಗ, ಇದೇ ಭಯಂಕರ ಬ್ರೈಟ್ ಬಣ್ಣದ ಕ್ಯಾಟರ್ಪಿಲ್ಲರ್ ಇಂದ ಹೊರಬಂದ ಚಿಟ್ಟೆಯಾ? ಎಂದು ಆಶ್ಚರ್ಯ ಪಡ್ಬೇಕು ಅಷ್ಟು ಡಲ್ ಆಗಿ, ಡ್ರೆಸ್ ಚೇಂಜ್ ಮಾಡ್ಕೊಂಡು ಬಂದಿರತ್ತೆ. ಇದು ಕ್ಯಾಮಫ್ಲಾಜ್ (camouflage) ತಂತ್ರ. ಅಂದ್ರೆ ತನ್ನ ಪರಿಸರದಲ್ಲಿ ಒಂದಾಗಿ, ಮರೆಯಾಗಿ, ತನ್ನನ್ನ ಬೇಟೆಯಾಡಬಲ್ಲ ಜೀವಿಯಿಂದ ಬಚ್ಚಿಟ್ಟುಕೊಳ್ಳೊದಿಕ್ಕೆ ಮಾಡೋ ತಂತ್ರ. ನೀವೆಲ್ಲಾ ಅದೆಷ್ಟೋ ಇಂಥಾ ಜೀವಿಗಳನ್ನ ನೋಡಿರ್ತೀರ. ಎಲೆಗಳ ಮಧ್ಯೆ ಎಲೆಯೇನೋ ಅನ್ನೋ ಹಾಗೆ ಕೂತಿರೋ ಎಲೆಹುಳ, ಗಿಡಮರಗಳ ಕಡ್ಡಿಗಳ ಹಾಗೆ ಮರೆಯಾಗಿ ಕೂತಿರೋ ಕಡ್ಡಿಹುಳ, ಮರದ ತೊಗಟೆ ಮೇಲೆ ಕೂತಿರೋ ಅನೇಕ ಬಗೆಯ ಕೀಟಗಳು, ಬಂಡೆ ಮೇಲೆ ಬಂಡೆಯ ಬಣ್ಣದಲ್ಲೇ ಕೂತಿರೋ ಓತಿಗಳು, ರೋಡ್ ಮೇಲೆ ಕಾರಿಗೆ ಅಡ್ಡ ಸಿಕ್ರೆ ಗೊತ್ತೇ ಆಗಲ್ಲ – ಅಂಥಾ ‘ನೈಟ್ ಜಾರ್’ ಅಂದ್ರೆ ಕುರುಡುಗಪ್ಪಟ ಪಕ್ಷಿ, ಕೆರೆಗಳ ಹತ್ತಿರ ಕೆರೆಯಂಚಿನ ಮಣ್ಣಿನ ಬಣ್ಣದಲ್ಲೇ, ಕಾಣಿಸದ ಹಾಗೆ ಕೂತಿರೋ ಪಾಂಡ್ ಹೆರಾನ್ ಅಂದ್ರೆ ಕೊಳದ ಬಕ/ ಗದ್ದೆ ಕೊಕ್ರೆ ಪಕ್ಷಿಗಳು – ಇವೆಲ್ಲಾ ನೋಡೇ ಇರ್ತೀರಾ ನೀವೆಲ್ಲ.” ಎಂದು ವಿವರಿಸಿದ.

ಆಗ ವಿಭಾ, “ಹೌದು ಬಾವಾ, ಹುಲ್ಲಿನ ಹಿಂದೆ ಅಡಗಿಕೊಂಡಿರೋ ಹುಲಿಯಾಗ್ಲೀ, ಚಿರತೆಯಾಗ್ಲೀ, ಜಿಂಕೆಯಾಗ್ಲೀ ಅಷ್ಟು ಸುಲಭವಾಗಿ ಕಾಣಿಸಲ್ಲ ಅಲ್ವಾ? ಹಾಗೇ, ಕಮೀಲಿಯನ್, ಅಂದ್ರೆ ಊಸರವಳ್ಳಿ ಕೂಡ ಅದಕ್ಕೇ ತಾನೇ ಫೇಮಸ್? ತಾನಿರೋ ಕಡೆ ಕ್ಯಾಮಫ್ಲಾಜ್ ಆಗೋಕೆ ಬಣ್ಣ ಬೇರೆ ಬದಲಾಯಿಸಿಕೊಳ್ಳತ್ತೆ ಅಲ್ವಾ?” ಎಂದಳು.

ಆಗ ಕಾವ್ಯ, “ಹೌದು ವಿಭಾ, ಇಂತಹ ಅನೇಕ ಜೀವಿಗಳಿವೆ. ಅಷ್ಟೇ ಯಾಕೆ, ನಮ್ಮ ಬೆಂಗಳೂರಿನ ಅಪಾರ್ಟ್ಮೆಂಟಿನಲ್ಲಿ ಬಂದಿದ್ದ ‘ಕರಿಬೇವು ಕಳ್ಳ’ ಕ್ಯಾಟರ್ಪಿಲ್ಲರ್ ಇದ್ಯಲ್ಲ? ಕಾಮನ್ ಮೋರ್ಮೋನ್? ಅದು ಬರೀ ತನ್ನ ಬ್ರೈಟ್ ಬಣ್ಣದಿಂದ, ಬೇಟೆಯಾಡೋಕೆ ಬಂದ ಜೀವಿಯನ್ನ ಹೆದರಿಸೋದು ಮಾತ್ರ ಅಲ್ಲ, ಹಾವಿನ ಹಾಗೆ ಕೂಡ ಆಡತ್ತೆ ಗೊತ್ತಾ? ಹಸಿರು ಹಾವಿನ ಮರಿಯೇನೋ ಅನ್ನೋ ಹಾಗೆ ಆಡಿ, ಇನ್ನೂ ಮುಂದುವರಿದು, ಯಾರಾದ್ರೂ ಅಟ್ಯಾಕ್ ಮಾಡೋಕೆ ಬಂದ್ರು ಅನ್ಸಿದ್ರೆ, ತಕ್ಷಣ ತನ್ನ ತಲೆಯ ಮೇಲಿಂದ ಹಾವಿನ ನಾಲಗೆ ಥರಾ ಕೆಂಪಗಿರೋ ‘ಒಸ್ಮೆಟೇರಿಯಮ್’ ಹೊರಗೆ ಬಿಡತ್ತೆ. ಅದಕ್ಕೂ ಹೆದರದೇ ಇದ್ರೆ, ಒಂದು ಕೆಟ್ಟ ವಾಸನೆ ಹೊರಹಾಕತ್ತೆ ನೋಡೂ… ಯಾರೇ ಆದ್ರೂ ಆ ವಾಸನೆಗೆ ಹೆದರಿ ಓಡ್ಬೇಕು.” ಎಂದಳು ನಗುತ್ತಾ.

ಇದನ್ನೆಲ್ಲಾ ಕೇಳುತ್ತಾ ವಿಭಾ ಮತ್ತು ವರ್ಣ ಆಶ್ಚರ್ಯ ಪಡುತ್ತಾ, ಅಕ್ಕ ಹೇಳಿದ ರೀತಿಗೆ ನಗುತ್ತಾ ನಿಂತಿರುವಾಗ, ಸಮುದ್ರ ಒಳಗಿನಿಂದ “ಹಾವು…ಹಾವು” ಎಂದು ಓಡಿಬಂದ. ಎಲ್ಲರೂ ಅವನ ಕಡೆಗೆ, ಅವನು ಬೆರಳು ತೋರಿಸಿದ ಕಡೆಗೆ ಯಾವ ಹಾವು, ಏನು ಕಥೆ ನೋಡೋಣ ಎಂದು ಓಡಿದರು. ಅಲ್ಲಿ ಮುಂದೆ ಏನಾಯ್ತೆಂದು ಮುಂದಿನ ಸಂಚಿಕೆಯಲ್ಲಿ ಓದೋಣ. ಅಲ್ಲಿಯವರೆಗೂ ನಿಮ್ಮ ಸುತ್ತಲೂ ಕಂಡೂ ಕಾಣದಂತೆ ಇರುವ ಜೀವಿಗಳಿವೆಯೇ? ಗಮನಿಸಿ, ಮತ್ತಷ್ಟು ಪತ್ತೇದಾರಿಕೆ ಮಾಡಿ. ಹೊಸ ಒಗಟುಗಳು ಸಿಕ್ಕಾವು.

(ಹಿಂದಿನ ಕಂತು: ಕಳ್ಳನಿದ್ರೆ ಮತ್ತು ಕ್ಯಾಮೆರಾಗೂ ಕಾಣದ ಕಳ್ಳ)

About The Author

ಕ್ಷಮಾ ವಿ. ಭಾನುಪ್ರಕಾಶ್

ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಕ್ಷಮಾ ಭಾನುಪ್ರಕಾಶ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.  i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಎಂಟು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಇವರ 'ಜೀವಿಜ್ಞಾನ' ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ೨೦೨೫-೨೬ನೆ ಸಾಲಿನ 'ಶ್ರೇಷ್ಠ ಪುಸ್ತಕ' ಪ್ರಶಸ್ತಿ ಲಭಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ