Advertisement
ಚಿತ್ತೂರು ಸುಬ್ಬು ಹೇಳಿದ ಕತೆ: ಕೆ. ಸತ್ಯನಾರಾಯಣ ಕಥಾ ಸರಣಿ

ಚಿತ್ತೂರು ಸುಬ್ಬು ಹೇಳಿದ ಕತೆ: ಕೆ. ಸತ್ಯನಾರಾಯಣ ಕಥಾ ಸರಣಿ

ಚಿತ್ತೂರಿನಲ್ಲಿ ಎರಡು ಬೀದಿಯವರು ಮಾತ್ರ ಚಿತ್ತೂರು ಬಿಟ್ಟು ಇನ್ನೆಲ್ಲಿಗೂ ಹೋಗೋಲ್ಲ. ಇನ್ನು ನಾಲ್ಕು ಜನ್ಮವಾದರೂ ಕೂಡ ಅವರು ಅಲ್ಲೇ ಇರ‍್ತಾರೆ, ಯಾಕೆ ಗೊತ್ತಾ? ಚಿನ್ನ ಬೆಳ್ಳಿ ಕಳ್ಳರು, ಖದೀಮರು ಅವರು. ಮನೆ ತುಂಬಾ ಕಬ್ಬಿಣದ ಪೆಟ್ಟಿಗೆಗಳು, ನೆಲಮಾಳಿಗೆಗಳು. ಮೂಟೆಗಟ್ಟಲೆ ಚಿನ್ನ, ಬೆಳ್ಳಿ. ಕೃಷ್ಣದೇವರಾಯನ ಕಾಲದಲ್ಲಿ ಸಂಸ್ಥಾನ ಕುಸೀತಿದ್ದಾಗ, ಇನ್ನೇನು ಯುದ್ಧದಲ್ಲಿ ಸೋಲು, ಸಾವು ಗ್ಯಾರಂಟಿ ಅಂತ ಆದಾಗ, ಅರಮನೆಯಲ್ಲಿದ್ದವರು, ಅರಮನೆ ಸಂಪರ್ಕ ಇದ್ದ ಶ್ರೇಷ್ಠಿಗಳೆಲ್ಲ ಕೈಗೆ ಸಿಕ್ಕ, ಕಾಲಿಗೆ ಸಿಕ್ಕ ಚಿನ್ನ, ಬೆಳ್ಳಿ ಎಲ್ಲವನ್ನೂ ಗಾಡಿಮೇಲೆ, ಕುದುರೆ ಮೇಲೆ ಹೊರಿಸಿಕೊಂಡು ಬಂದು ಈ ಕಡೆ ವ್ಯಾಪಾರ, ಜಮೀನು, ಲೇವಾದೇವಿ ಎಲ್ಲವನ್ನೂ ಶುರು ಮಾಡಿಕೊಂಡರು.
ಕೆ.
ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”  

ಚಿತ್ತೂರು ಸುಬ್ಬು ನನಗೆ ಪರಿಚಯವಾದದ್ದು xerox ಸುಬ್ಬುವಾಗಿ. ನನ್ನ xerox ಕೆಲಸಗಳಲ್ಲಿ ವೈವಿಧ್ಯ ಮತ್ತು ಕುಸುಬಿಷ್ಠೆ ಎರಡೂ ಜಾಸ್ತಿ. DTP ಮಾಡುವವರು ಕಳಿಸಿಕೊಡುವ ಪುಟಗಳನ್ನು ಇಳಿಸಿ ಕಾಪಿ ಮಾಡುವುದು, ಪುಸ್ತಕಗಳಿಂದ ಕಾಪಿ ಮಾಡುವುದು, ಬೈಂಡಿಂಗ್‌ ಮಾಡುವುದು, font ಬದಲಾಯಿಸುವುದು, ಎಲ್ಲವೂ ಸೇರಿಕೊಳ್ಳುತ್ತಿತ್ತು. ಜೊತೆಗೆ ಹೀಗೇ ಮಾಡು, ಹಾಗೇ ಮಾಡು, ಬೇಗ ಮಾಡಿಕೊಡು ಅನ್ನುವ ನನ್ನ ವರಾತ ಅವನಿಗೆ ಇಷ್ಟವಾಗುತ್ತಿರಲಿಲ್ಲ. ಮೊದಲೇ ಸಣ್ಣ ಕಪ್ಪು ಮುಖ, ಕಿರಿದಾದ ಮೂಗು. ಮುಖ ಸಿಂಡರಿಸುವನು. ನನ್ನ ಸ್ವಭಾವ, ಬೇಡಿಕೆಗನುಗುಣವಾಗಿ ಕೆಲಸ ಮಾಡುವಂತೆ xerox ಮಾಡಿಕೊಡುವವರನ್ನು ಹುಡುಕಿ, ಹುಡುಕಿ ನಾನು ಸುಸ್ತಾಗಿದ್ದೆ. ಸದ್ಯ, ಯಾರೋ ಒಬ್ಬರು ಹೊಂದಿಕೊಂಡರು ಅಂದರೆ, ಮುಂದಿನ ಸಲ ಅಂಗಡಿ ಹತ್ತಿರ ಹೋದಾಗ, ಅಂಗಡಿಯೇ ಬಂದ್‌. ಬಾಡಿಗೆ ತುಂಬಾ ಜಾಸ್ತಿ, ಅಷ್ಟು ಆದಾಯ ಇಲ್ಲ ಅಂತ ಒಬ್ಬರಾದ ಮೇಲೆ ಒಬ್ಬರು ಮುಚ್ಚಿಕೊಂಡು ಹೋಗುವರು. xerox ನವರೆಲ್ಲ ಅಮೆಜಾನ್‌ನಲ್ಲಿ Delivery Executive ಆಗಿ ನಂತರ ಮನೆಗೆ ಬರುವರು. ಇದೆಲ್ಲ ಪರೀಕ್ಷೆಗಳಲ್ಲಿ ಪಾಸಾಗಿ ಹಾಗೂ ಹೀಗೂ ಉಳಿದುಕೊಂಡವನು ಸುಬ್ಬು. ರೆವಿನ್ಯೂ ದಾಖಲೆ ಕೆಲಸಗಳಿಗೆ ಬರುವವರು ನಿಮ್ಮಷ್ಟು ಪಿರಿಪಿರಿ ಮಾಡುವುದಿಲ್ಲ. ದುಡ್ಡು ಕೂಡ ಚೆನ್ನಾಗಿ ಕೊಡುತ್ತಾರೆ ಎಂದು ಸುಬ್ಬು ಕೂಡ ಗೊಣಗುತ್ತಿದ್ದ. ಒಂದೇ ಒಂದು ಸಲ ಕೂಡ ನನ್ನನ್ನು ನಗು ಮುಖದಿಂದ ಸ್ವಾಗತಿಸಿಲ್ಲ. ರೆವಿನ್ಯೂನವರಿಗೆ ಮೊದಲ ಆದ್ಯತೆ. ಅವನು ಹೇಳಿದ ಸಮಯಕ್ಕೆ ಸರಿಯಾಗಿ ಹೋದರೆ ಮಾತ್ರ ಕೆಲಸ ಮಾಡಿಕೊಡುತ್ತಿದ್ದ. ಇಲ್ಲದೆ ಹೋದರೆ ಯಾವ ಮುಲಾಜೂ ಇಲ್ಲದೆ ನಾಳೆ, ನಾಳಿದ್ದು ಬನ್ನಿ ಎಂದು ಸಾಗಿಹಾಕುತ್ತಿದ್ದ.

ಸುಬ್ಬು ಅಂಗಡಿ ಇರುವುದು ನೆಲಮಾಳಿಗೆಯಲ್ಲಿ. ಕತ್ತಲು ತುಂಬಿದ ಕಟ್ಟಡದಲ್ಲಿ. ಕಟ್ಟಡದ ಮುಂಭಾಗ ಚೆನ್ನಾಗಿದೆ. ಒಂದು ಓಣಿಯೊಳಗೆ ಹೋಗಬೇಕು. ಓಣಿಯೊಳಗೆ ಹೋಗ್ತಾ ಹೋಗ್ತಾ ಕತ್ತಲು ಹೆಚ್ಚಾಗುತ್ತದೆ. ಎಡಭಾಗದ ಕೊನೆಯ ಅಂಗಡಿ ಸುಬ್ಬುವಿನದು. ಒಂದೇ ಒಂದು tube light, ಅದೂ ಕೂಡ ಸರಿಯಾಗಿ ಉರಿಯುವುದಿಲ್ಲ. ಪಿಳಪಿಳ ಎಂದು ಆಗಾಗ್ಗೆ ಕಣ್ಣು ಬಿಡುತ್ತದೆ. ಸುಬ್ಬುಗೆ ಕೋಪ ಬಂದಾಗ ಸ್ಟೂಲ್‌ ಹತ್ತಿ ನಿಂತು ಟ್ಯೂಬ್‌ಗೆ ಪಟಪಟ ಹೊಡೆಯುತ್ತಾನೆ. ಹೊಡೆತ ತಾಳಲಾರದೆ ಒಂದು ಹದಿನೈದು ಇಪ್ಪತ್ತು ನಿಮಿಷ ಬೆಳಕು ಚೆನ್ನಾಗಿ ಬರುತ್ತದೆ. ನಂತರ ಮತ್ತೆ ಪಿಳಿಪಿಳಿ. ನಾನೂ ಸೇರಿದಂತೆ ಅಂಗಡಿಗೆ ಬರುವವರೆಲ್ಲ ಈ ಅವ್ಯವಸ್ಥೆಗೆ ಗೊಣಗುತ್ತೇವೆ. ಲಹರಿಯಲ್ಲಿದ್ದಾಗ ಸುಬ್ಬು ಕೂಡ ನಮ್ಮ ಜೊತೆ ಸೇರಿಕೊಳ್ಳುತ್ತಾನೆ. ಇಲ್ಲದೇ ಹೋದರೆ ನಮ್ಮನ್ನೇ ಗದರಿಸುತ್ತಾನೆ. ಆದರೆ ಸಾಕಷ್ಟು ಬಳಕೆಯಾಗಿರುವುದರಿಂದ ಅವನನ್ನು ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ.

ಅಂಗಡಿ ಮೇಲುಗಡೆ ಇರುವ ಅಂತಸ್ತಿನಲ್ಲಿ ಸುಬ್ಬುವಿನ ಒಂದು ಕೋಣೆಯ ಮನೆ. ಅಂಗಡಿಗೆ ಹೋದಾಗ ಅವನಿಲ್ಲದೆ ಹೋದರೆ ನಾನು ಅಲ್ಲಿಗೇ ಹೋಗುತ್ತೇನೆ. ಮನೆಯ ಮುಂದೆ ಒಂದು ಸ್ಟೂಲಿದೆ. ಸುಬ್ಬು ಅದರ ಮೇಲೆ ಚಿಂತಾಕ್ರಾಂತನಾಗಿ ಕುಳಿತಿರುತ್ತಾನೆ. ಆಗಾಗ್ಗೆ ಕೆಮ್ಮಿ ಕ್ಯಾಕರಿಸುತ್ತಾನೆ. ಉಗುಳು ನುಂಗುತ್ತಾನೆ. ೫ ನಿಮಿಷವಾದ ಮೇಲೆ ಮತ್ತೆ ಕೆಮ್ಮುವುದು, ಕ್ಯಾಕರಿಸುವುದು. ಒಂದು ಸ್ಟವ್‌, ಅಡುಗೆ ಪಾತ್ರೆ, ಸುತ್ತಿಟ್ಟಿರುವ ಒಂಟಿ ಹಾಸಿಗೆ ಕಾಣುತ್ತದೆ. ಬಚ್ಚಲು ಮನೆಯಲ್ಲಿರುವ ನಲ್ಲಿಯಿಂದ ನೀರು ಯಾವಾಗಲೂ ತೊಟ್ಟಿಕ್ಕುತ್ತಿರುತ್ತದೆ, ಒಂದು, ಎರಡು, ಮೂರು …

ನೀರು ತೊಟ್ಟಿಕ್ಕುವ ಶಬ್ದವನ್ನು ಸೇರಿಸಿಕೊಂಡೇ ಸುಬ್ಬು ರೇಗುತ್ತಾನೆ. ಇಲ್ಲಿಗೇಕೆ ಬಂದಿರಿ. ನಾನೇ ಬರುತ್ತಿದ್ದೆನಲ್ಲ ಎಂದು ಹೇಳಿದರೂ ಕುಳಿತಲ್ಲೇ ಕುಳಿತಿರುತ್ತಾನೆ. ಯಾರ ಮೇಲೋ ಸಿಟ್ಟು. ವ್ಯಗ್ರತೆ ಜಾಸ್ತಿಯಾಗುತ್ತದೆ. ತಥ್‌ ಎಂದು ಕ್ಯಾಕರಿಸಿ ಕೆಳಗೆ ಇಳಿದು ಬರುತ್ತಾನೆ.

ಒಂದೆರಡು ಸಲ ಹೀಗೇ ಮೇಲೆ ಹೋಗಿದ್ದಾಗ ಸುಬ್ಬುವಿನಷ್ಟೇ ವಯಸ್ಸಾದ ಹೆಂಗಸೊಬ್ಬಳು ಬಂದು ಗೋಗರೆಯುತ್ತಾ ಕೇಳಿಕೊಳ್ಳುತ್ತಿದ್ದಳು. ತಲೆಯೆಲ್ಲಾ ಕೆದರಿತ್ತು. ಕೆದರಿದ ಜಡೆಗೆ ಸಡಿಲವಾಗಿ ಟೇಪು ಕಟ್ಟಿಕೊಂಡಿದ್ದಳು. ರವಿಕೆಯ ತೋಳು ಒಂದು ಕಡೆ ಉದ್ದ ಇದ್ದರೆ, ಇನ್ನೊಂದು ಕಡೆ ಸ್ವಲ್ಪ ತುಂಡಾಗಿತ್ತು. ಗೋಗರೆಯುತ್ತಾ ಗೋಗರೆಯುತ್ತಾ ಮೂಗುತಿಯನ್ನು ಬಿಚ್ಚುವುದು ಮತ್ತೆ ಹಾಕಿಕೊಳ್ಳುವುದು. ಹಾಕಿಕೊಂಡ ಮೂಗುತಿಯನ್ನು ತಿರುಚುವುದು ತೆಗೆಯುವುದು ಮಾಡುತ್ತಿದ್ದಳು.

“ಆಯ್ತು ಒಂದು ಸಲ ತಪ್ಪಾಯಿತು. ಇನ್ನು ಯಾವತ್ತೂ ಹಾಗೆ ಮಾಡೋಲ್ಲ. ಇದೊಂದು ಸಲ ಮನೆ ಒಳಗೆ ಸೇರಿಸಿಕೋ. ಸೀತಾಮಾತೆ ತರ ನಿಯತ್ತಾಗಿ ‍ಇರ್ತೀನಿ. ಯಾವತ್ತೂ ನಿನಗೆ ಅನ್ಯಾಯ ಮಾಡೋಲ್ಲ.”

ಇವಳೇನು ಹೆಂಡ್ತೀನೋ, ಇಲ್ಲ ಇಟ್ಟುಕೊಂಡವಳೋ. ಮಾಡಿರಬಹುದಾದ ಅನ್ಯಾಯವಾದರೂ ಏನು.

ಅವಳು ಗೋಗರೆಯುತ್ತಿರುವಂತೆಯೇ ಸುಬ್ಬು ಸ್ಟೂಲ್‌ನಿಂದ ಮೇಲೆದ್ದು ಅವಳ ಮುಂದಲೆ ಹಿಡಿದು, ಬಗ್ಗಿಸಿ ಬೆನ್ನಿನ ಮೇಲೆ ರಪರಪ ಅಂತ ಗುದ್ದಿದ.

ನಮ್ಮಣ್ಣ, ನಮ್ಮಣ್ಣ ಅಂತ ಸುಳ್ಳು ಹೇಳ್ತಿದ್ದೀಯಲ್ಲ, ಆ ಕರಿ ದಢೂತಿ ನನ್ನ ಮಗನ್ನ. ಅವನ ಹತ್ತಿರವೇ ಹೋಗು. ಮಹಾರಾಣಿ ತರ ಸುಖವಾಗಿರು.

ಗುದ್ದುತ್ತಲೇ ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡು ಮೆಟ್ಟಿಲು ಇಳಿಸಿ ಕಟ್ಟಡದಿಂದ ಹೊರಗಡೆ ನೂಕಿ, ಅವಳು ತಿರುವಿನಲ್ಲಿ ಮರೆಯಾಗುವ ತನಕವೂ ಎರಡು, ಮೂರು ಮಾತಿಗೆ ಒಂದು ಸಲ ಉಗಿಯುತ್ತಿದ್ದ. ಈ ಬೀದಿ ಕಡೆ ಕೂಡ ಇನ್ನು ಬರಬೇಡ ಅಂತ ಕಿರಿಚುತ್ತಿದ್ದ.

ಇದು ಹೀಗೇ ನಡೆಯುತ್ತಲೇ ಇತ್ತು. ಇನ್ನೊಬ್ಬರೆದುರಿಗೆ ಹೀಗೆಲ್ಲ ನಡೆಯುತ್ತಿದೆ ಎನ್ನುವ ಸಂಕೋಚವೇನು ಸುಬ್ಬುಗೆ ಇರುತ್ತಿರಲಿಲ್ಲ. ಅವಳು ಹಾಗೆ ರಸ್ತೆ ತಿರುವಿನಲ್ಲಿ ಮರೆಯಾದ ಮೇಲೂ ಇನ್ನೂ ಉರಿಯುತ್ತಿದ್ದ ಸಿಟ್ಟು ಕಡಿಮೆ ಆಗುವ ತನಕ ಕಾದು ನಿಂತಿದ್ದ ಗಿರಾಕಿಗಳ ಮೇಲೆ ರೇಗುತ್ತಿದ್ದ, ಫ್ಯಾನ್‌ ಆರಿಸಿಬಿಡುತ್ತಿದ್ದ. ಕಂಪ್ಯೂಟರ್‌ಗೆ, xerox ಯಂತ್ರಕ್ಕೆ ಹೊಡೆಯುತ್ತಿದ್ದ. ಒಂದು ಸಲವಂತೂ ತೆಗೆದ ಪ್ರತಿಗಳನ್ನು ಪಿನ್‌ ಮಾಡುತ್ತಿದ್ದಾಗ stapler ನಲ್ಲಿ ಪಿನ್‌ ಮುಗಿದು ಹೋಯಿತು. ಕೋಪ ಬಂದು stapler ಎಸೆದ. ಅದು ಬೀದಿಯಲ್ಲಿ ಹೋಗುತ್ತಿದ್ದವರ ನೆತ್ತಿಯ ಮೇಲೆ ಬಿತ್ತು. ಅವರು ಕಟ್ಟಡದ ಒಳಗಡೆ ಬಂದು ಕೂಗಾಡಿದರು. ಸುಬ್ಬು ಅವರ ಜೊತೆ ಜಗಳ ಶುರು ಮಾಡಿದ. ಅವರಿಗೇ ಜಗಳ ಕಾದು ಸುಸ್ತಾದ ಮೇಲೂ ನಮ್ಮೆಲ್ಲರನ್ನೂ ಕೆಂಗಣ್ಣಿನಿಂದ ನೋಡುತ್ತಾ ಬುಸುಬುಸುಗುಟ್ಟುತ್ತಲೇ ಇದ್ದ.

ಇದೆಲ್ಲ ನನಗೆ ಬೇಸರ-ಸಿಟ್ಟು ತಂದರೂ, ಸುಬ್ಬುವನ್ನು ಏನೆಂದು ಕೇಳುವುದು, ಹೇಗೆಂದು ಕೇಳುವುದು. ಪ್ರತಿ ಸಲ ಅಂಗಡಿಗೆ ಬಂದಾಗಲೂ ಕಸಿವಿಸಿಯಾಗೋದು. ಆದರೆ ಕೆಲಸ ಮುಗಿಸಿಕೊಂಡು ವಾಪಸ್‌ ಮನೆಗೆ ಹೋದ ತಕ್ಷಣ ಮರೆತು ಕೂಡ ಹೋಗೋದು. ಇಂತಹ ಮನುಷ್ಯನ ಕೈಯಲ್ಲಿ ನನ್ನ ಸಾಹಿತ್ಯಿಕ ಬರವಣಿಗೆಯನ್ನು ಸಿದ್ಧಗೊಳಿಸಿಕೊಳ್ಳುತ್ತಿರುವೆನಲ್ಲ ಎಂದು ನನಗೇ ಬೇಸರವಾಗುತ್ತಿತ್ತು.

ರೆವಿನ್ಯೂ ದಾಖಲೆಗಳ ಕೆಲಸ ಹೆಚ್ಚಾದಾಗ ಅಂಗಡಿ ಬಾಗಿಲು ಮುಚ್ಚುವ ಹೊತ್ತಿಗೆ ಬನ್ನಿ ಎಂದು ಸುಬ್ಬುವೇ ಕರೆ ಮಾಡುತ್ತಾನೆ. ಸರಿ ಯಾರೂ ಇರಲ್ಲ ಬೇಗ ಬೇಗ ನನ್ನ ಕೆಲಸ ಮುಗಿಯುತ್ತದೆ ಅಂತ ನಾನು ಆರಾಮವಾಗಿ ಹೊರಟರೆ, ಕಟ್ಟಡದ ಹೊರಗಡೆ ತಂಗಾಳಿ ಬೀಸುತ್ತಿದ್ದರೂ ಸುಬ್ಬು ಮೊಬೈಲ್‌ನಲ್ಲಿ ಜಗಳ ಶುರು ಮಾಡಿರುತ್ತಾನೆ. ಫೋನನ್ನು speaker mode ಗೆ ಹಾಕಿದ್ದರೂ ಕಿರುಚಾಡುತ್ತಿರುತ್ತಾನೆ.

ಇನ್ನು ಯಾವತ್ತೂ ಈ ಕಡೆ ಬರಬೇಡ. ಇನ್ನೊಂದು ಸಲ ಬಂದರೆ ನಿನ್ನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇನೆ. ಅರ್ಧ ಟಿನ್‌ ಸೀಮೆಎಣ್ಣೆ ತಂದು ನಿನಗಾಗಿ ಇಟ್ಟಿದ್ದೇನೆ.

ಅಳು, ಅಳು, ನೀನು ಅಳುವಾಗ ನಿನ್ನ ಧ್ವನಿ ತುಂಬಾ ಚೆನ್ನಾಗಿರುತ್ತದೆ. ಇದೇ ನನ್ನ ಪಾಲಿನ film song. ಪಿ. ಸುಶೀಲನ ಗಂಟಲಿಗಿಂತ ನಿನ್ನದು ಚೆನ್ನಾಗಿದೆ. ನೀನು ಹಾಡ್ತಾ ಇರು ನಾನು ಇಲ್ಲಿ ಸ್ಟೂಲ್‌ ಮೇಲೆ ಚಕ್ಕಳ ಬಕ್ಕಳ ಹಾಕಿ ಕುಳಿತುಕೊಂಡು ತಾಳ ಹಾಕುತ್ತೇನೆ.

ಜಗಳ ಮುಂದುವರಿಸುತ್ತಲೇ ಮೊಬೈಲನ್ನು xerox ಮೆಷಿನ್‌ ಮೇಲಿಟ್ಟು ನನ್ನ ಕೆಲಸ ಶುರು ಮಾಡುತ್ತಾನೆ. ಮೊಬೈಲ್‌ನ ಜಗಳ ಕೂಡ xerox ಸದ್ದು ಮತ್ತು ನನ್ನ ಬರವಣಿಗೆಯ ಜೊತೆಗೆ ಸೇರಿಕೊಳ್ಳುತ್ತದೆ.

ಮುಸ್ಸಂಜೆ ಹೊತ್ತಿನಲ್ಲಿ ಇನ್ನೇನು ಊಟ ಮಾಡಿ ಹಾಯಾಗಿ ಮಲಗಬೇಕೆನ್ನುವಾಗ ಇದೊಳ್ಳೆ ರಾಮಾಯಣವಾಯಿತಲ್ಲ ಅಂತ ರಗಳೆಯಾಗುತ್ತದೆ.

ಇದನ್ನೆಲ್ಲ ನೋಡಿ ನೋಡಿ ಅಭ್ಯಾಸವಾಗಿರುವ ನಾನು ಕೂಡ ಇದಕ್ಕೆ ಹೊಂದಿಕೊಂಡುಬಿಟ್ಟಿರಬಹುದು. ಹೊಸಬರನ್ನು ಹುಡುಕಲು ಸೋಮಾರಿತನವೂ ಇರಬಹುದು.

*****

God that Failed ಪುಸ್ತಕವನ್ನು xerox ಮಾಡಿಸಿಕೊಳ್ಳಬೇಕು, ಪುಸ್ತಕದ ಪ್ರತಿ ಹಳೆಯದಾದ್ದರಿಂದ ಎದುರಿಗೆ ನಿಂತುಕೊಂಡೇ ಪ್ರತಿ ಮಾಡಿಸಬೇಕು ಅಂತ ಎಷ್ಟು ಸಲ ಕರೆ ಮಾಡಿದರೂ ಸುಬ್ಬು ಫೋನ್‌ ತೆಗೆದುಕೊಳ್ಳುತ್ತಿರಲಿಲ್ಲ. ಎರಡು ದಿನವಾಯಿತು, ಮೂರು ದಿನವಾಯಿತು. ಸುಬ್ಬು ಎಲ್ಲಿಗೆ ಹೋದ. ಆಕೆಯ ಜೊತೆ ರಾಜಿಯಾಯಿತೇ? ಸುಖ ಸಂಸಾರದ ಜೀವನ ಶುರುವಾಯಿತೇ?

ನಾಲ್ಕು ದಿನವಾದ ಮೇಲೆ ಸುಬ್ಬು ಸಿಕ್ಕಿದ.

ಚಿತ್ತೂರಿನಲ್ಲಿ ಕೆಲಸ ಇತ್ತು ಸಾರ್‌. ವಠಾರದಲ್ಲಿ ಬಾಡಿಗೆ ಕೊಟ್ಟಿದ್ದ ಒಂದು ಮನೆಯವನು ಹದಿನೈದು ವರ್ಷದಿಂದ ತಳ ಊರಿದ್ದ. ಬಾಡಿಗೇನು ಸರಿಯಾಗಿ ಕೊಡುತ್ತಿರಲಿಲ್ಲ. ಮನೇನು ಖಾಲಿ ಮಾಡುತ್ತಿರಲಿಲ್ಲ. ಮನೆ ಬಿಡಬೇಕಾದರೆ ನಾನೇ ಅವನ ಮುಂದಿನ ಮನೆಗೆ advance ಕೊಡಬೇಕು, ಹಾಗಾದರೆ ಮಾತ್ರ ಖಾಲಿ ಮಾಡುವುದು ಅಂತ ಗೂಟ ಹೊಡೆದುಕೊಂಡು ಕೂತಿದ್ದ. ಗೂಂಡಾಗಳನ್ನು ಇಡಿಸಿ, ಪಂಚಾಯತಿ ಮಾಡಿದರೂ ಜಗ್ಗುತ್ತಿರಲಿಲ್ಲ. ನಾನೇ ಹೋಗಿ, ನೀರು ಕರೆಂಟ್‌ ಬಂದ್‌ ಮಾಡಿ, ಹೊರಗಡೆಯಿಂದ ಬಾಗಿಲಿಗೆ ಬೀಗ ಹಾಕಿ, ನಾನಾ ತರದ ತೊಂದರೆ ಕೊಟ್ಟು, ಖಾಲಿ ಮಾಡಿಸಿ ಹೊಸ ಬಾಡಿಗೆದಾರರನ್ನು ಹಿಡಿದು ಹನ್ನೊಂದೇ ತಿಂಗಳಿಗೆ ಅಗ್ರೀಮೆಂಟ್‌ ಮಾಡಿಸಿ ಬಂದೆ. ಹಾಗಾಗಿ ತಡವಾಯಿತು.

ಸುಬ್ಬು ದಿಗ್ವಿಜಯದ ಮೂಡ್‌ನಲ್ಲಿದ್ದ. ಮಾತಾಡುವ ಲಹರಿಯಲ್ಲಿದ್ದ.

“ಅಲ್ಲ ಸುಬ್ಬು ಚಿತ್ತೂರಿನಲ್ಲಿ ಮನೆ ಬಾಡಿಗೆ ಕೊಡುವಷ್ಟು ಆಸ್ತಿ ಇರುವಾಗ ಈ xerox ಕೆಲಸ ಮಾಡೋಕೆ ಇಲ್ಲಿಗೆ ಯಾಕೆ ಬಂದೆ? ಅಲ್ಲೇ ಏನಾದರೂ ವ್ಯಾಪಾರ, ವ್ಯವಹಾರ ಮಾಡಬಹುದಿತ್ತಲ್ಲವಾ? ಚಿತ್ತೂರು ಅಂದರೆ ಆಂಧ್ರ ಸೀಮೆಯ ವೈಶ್ಯರ ರಾಜಧಾನಿ, ಶ್ರೀಮಂತರಿರುವ ಊರು.”

ನಕ್ಕ. ಸುಬ್ಬು ಗಹಗಹಿಸಿ ನಕ್ಕ. ಇಷ್ಟು ದಿನಗಳ ಒಡನಾಟದಲ್ಲಿ ಸುಬ್ಬು ನಕ್ಕದ್ದು, ಅದೂ ಗಹಗಹಿಸಿ ನಕ್ಕದ್ದು ಇದೇ ಮೊದಲ ಸಲ. ಮುಖ ಕೂಡ ಹಗುರ ಭಾವ, ಲವಲವಿಕೆಯಿಂದ ಕೂಡಿತ್ತು. ಚಿತ್ತೂರಿನಿಂದಲೇ ಹೇರ್‌ ಕಟ್‌ ಮಾಡಿಸಿಕೊಂಡು ಬಂದಿರುವಂತೆ ಕಂಡಿತು. ಯಾವಾಗಲೂ ಮಾಸಲು ಬಣ್ಣದ ಷರಟು ಹಾಕಿಕೊಳ್ಳುತ್ತಿದ್ದವನು, ಈವತ್ತು ನೇವಿ ಬ್ಲೂ ಬಣ್ಣದ ಬುಷ್‌ ಷರಟು ಹಾಕಿಕೊಂಡಿದ್ದ. God that Failed ಮುನ್ನೂರು ಪುಟಗಳ ಪುಸ್ತಕ. ಅಷ್ಟು ಪುಟಗಳ ಪ್ರತಿ ತೆಗೆಯುವ ತನಕವೂ ಗಳಗಳ ಮಾತನಾಡುತ್ತಲೇ ಇದ್ದ. ಆವತ್ತು ಮತ್ತು ಮುಂದಿನ ದಿನಗಳಲ್ಲಿ ಸುಬ್ಬು ಹೇಳಿದ, ಹೇಳಿಕೊಂಡ ಕತೆ ಹೀಗಿತ್ತು.

*****

ನಾನೊಬ್ಬನೇ ಅಲ್ಲ ಹಾಗೆ ಚಿತ್ತೂರು ಬಿಟ್ಟು ಬಂದಿರೋದು. ಚಿತ್ತೂರಿನ ಎಲ್ಲ ಬೀದಿಗಳ, ಎಲ್ಲ ಮನೆಗಳಿಂದಲೂ ಮನೆಗೊಬ್ಬರಾದರೂ ಬಂದು ಈಗ ಬೆಂಗಳೂರು ಸೇರಿಕೊಂಡಿದ್ದಾರೆ, ಪ್ರತಿ ದಿನವೂ ಸೇರಿಕೊಳ್ಳುತ್ತಲೇ ಇದ್ದಾರೆ. ಎಲ್ಲರಿಗೂ ಈಗ ಬೆಂಗಳೂರಿನಲ್ಲಿ ಸೈಟಿದೆ. ಮನೆಗಳನ್ನು ಭೋಗ್ಯಕ್ಕೆ ಹಾಕಿಕೊಂಡಿದ್ದಾರೆ. ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡದವರೇ ಇಲ್ಲ. ಎಲ್ಲರಿಗೂ ಈಗ ಬೆಂಗಳೂರಿನ ಮದುವೆ ಸಂಬಂಧಗಳೇ ಬೇಕು. ಹುಡುಗೀರು ಕೂಡ ಈಗ ತಿರುಪತಿ, ನೆಲ್ಲೂರು, ಚಿರಾಲ ಕಡೆ ಸಂಬಂಧ ಬೇಡ ಅಂತಾರೆ. ಒಂದೊಂದು ಸಲ ನನಗೂ ಇಲ್ಲಿ ಮೂರು-ನಾಲ್ಕು ದಿನ ಏನೂ ವ್ಯಾಪಾರ ಆಗೋಲ್ಲ. ಆವಾಗೆಲ್ಲ ಚಿತ್ತೂರಿಗೆ ವಾಪಸ್‌ ಹೋಗಿಬಿಡೋಣ ಅನಿಸುತ್ತದೆ. ಆದರೆ ಅಲ್ಲಿಗೆ ಹೋದರೆ ಇಷ್ಟೂ ಇರಲ್ಲವಲ್ಲ. ಅಲ್ಲಿರುವವರೆಲ್ಲ ಇಲ್ಲಿಗೇ ಬಂದು ಸೇರಿಕೊಂಡ ಮೇಲೆ ಅಲ್ಲೇನು ವ್ಯಾಪಾರವಾಗುತ್ತೆ ಹೇಳಿ. ಅಲ್ಲದೆ ಇಲ್ಲೇ ಇದ್ದರೆ, ಈ ಹರಾಮಿ ಮುಂಡೆಗೆ ಒಂದು ಪಾಠವನ್ನಾದರೂ ಕಲಿಸಬಹುದು. ಆಗಾಗ್ಗೆ ಹಳೆ ಎಕ್ಕಡದಲ್ಲಿ ನಾಕು ಏಟು ಹಾಕಬಹುದು.

ಚಿತ್ತೂರಿನಲ್ಲಿ ಎರಡು ಬೀದಿಯವರು ಮಾತ್ರ ಚಿತ್ತೂರು ಬಿಟ್ಟು ಇನ್ನೆಲ್ಲಿಗೂ ಹೋಗೋಲ್ಲ. ಇನ್ನು ನಾಲ್ಕು ಜನ್ಮವಾದರೂ ಕೂಡ ಅವರು ಅಲ್ಲೇ ಇರ‍್ತಾರೆ, ಯಾಕೆ ಗೊತ್ತಾ? ಚಿನ್ನ ಬೆಳ್ಳಿ ಕಳ್ಳರು, ಖದೀಮರು ಅವರು. ಮನೆ ತುಂಬಾ ಕಬ್ಬಿಣದ ಪೆಟ್ಟಿಗೆಗಳು, ನೆಲಮಾಳಿಗೆಗಳು. ಮೂಟೆಗಟ್ಟಲೆ ಚಿನ್ನ, ಬೆಳ್ಳಿ. ಕೃಷ್ಣದೇವರಾಯನ ಕಾಲದಲ್ಲಿ ಸಂಸ್ಥಾನ ಕುಸೀತಿದ್ದಾಗ, ಇನ್ನೇನು ಯುದ್ಧದಲ್ಲಿ ಸೋಲು, ಸಾವು ಗ್ಯಾರಂಟಿ ಅಂತ ಆದಾಗ, ಅರಮನೆಯಲ್ಲಿದ್ದವರು, ಅರಮನೆ ಸಂಪರ್ಕ ಇದ್ದ ಶ್ರೇಷ್ಠಿಗಳೆಲ್ಲ ಕೈಗೆ ಸಿಕ್ಕ, ಕಾಲಿಗೆ ಸಿಕ್ಕ ಚಿನ್ನ, ಬೆಳ್ಳಿ ಎಲ್ಲವನ್ನೂ ಗಾಡಿಮೇಲೆ, ಕುದುರೆ ಮೇಲೆ ಹೊರಿಸಿಕೊಂಡು ಬಂದು ಈ ಕಡೆ ವ್ಯಾಪಾರ, ಜಮೀನು, ಲೇವಾದೇವಿ ಎಲ್ಲವನ್ನೂ ಶುರು ಮಾಡಿಕೊಂಡರು. ಇನ್ನೂ ಕರಗಿಸದ ಚಿನ್ನ ಬೆಳ್ಳಿಯ ಗಟ್ಟಿಗಳು ಅವರ ಮನೆಗಳಲ್ಲಿವೆಯಂತೆ. ಇವರಿಗೆಲ್ಲ ಯಾರ ಮೇಲೂ ನಂಬಿಕೆಯಿಲ್ಲ. ರಾತ್ರಿ ಹೊತ್ತು ನಿದ್ದೆ ಮಾಡದೆ, ಇವರೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯ್ತಾರೆ. ತಿರುಪತಿ, ಮದ್ರಾಸು, ತೆನಾಲಿ, ಎಲ್ಲಿಗೆ ಹೋದರೂ ಸಂಜೆ ಹೊತ್ತಿಗೆ ಮನೆಗೆ ಬಂದು ಬಿಡ್ತಾರೆ. ರಾತ್ರಿ ಹೊತ್ತು ಹೆಂಡತಿ ಹತ್ತಿರ ಕೂಡ ಹೋಗುವುದಿಲ್ಲ ಎಂದು ಎಲ್ಲರೂ ಆಡಿಕೊಂಡು ನಗ್ತಾರೆ. ಬೇರೆಯವರಿರಲಿ, ಸ್ವಂತ ಅಳಿಯಂದಿರೇ ಬಂದರೂ ಊಟ, ಉಡುಗೊರೆ, ಮರ್ಯಾದೆ ಎಲ್ಲ ಮುಸ್ಸಂಜೆ ಹೊತ್ತಿಗೆ ಮುಗಿಸಿ, ವಾಪಸ್‌ ಕಳಿಸಿಬಿಡ್ತಾರೆ. ರಾತ್ರಿಗೆ ಉಳಿಸಿಕೊಳ್ಳುವುದಿಲ್ಲ.

ಇಲ್ಲಿಗೂ ಒಂದು ಸಲ ಬರ‍್ತಾರೆ, ಏಕೆ ಗೊತ್ತಾ? ಹಿಂದಿನ ಬೀದಿಯಲ್ಲಿರುವ ರಾಮಕೃಷ್ಣಶಾಸ್ತ್ರಿಗಳ ಹತ್ತಿರ ಶ್ರೀ ಚಕ್ರದ ತಾಯಿತ ಮಾಡಿಸಿಕೊಂಡು ಹೋಗೋಕೆ. ಪ್ರತಿ ವಿಜಯದಶಮಿಯ ದಿವ ಬದಲಾಯಿಸಬೇಕಂತೆ. ಆವಾಗೆಲ್ಲ ದೊಡ್ಡ ಹೋಮ, ಹವನ. ಶಾಸ್ತ್ರಿಗಳೇ ಇಲ್ಲಿಂದ ಇನ್ನೂ ನಾಲ್ಕಾರು ಋತ್ವಿಕರನ್ನು ಕರೆದುಕೊಂಡು ಹೋಗಿ ಚಿತ್ತೂರಿನಲ್ಲಿ ಇರುತ್ತಾರೆ. ಶ್ರೇಷ್ಠಿಗಳು ಇಲ್ಲಿಗೆ ಬಂದಾಗ ನಿಮಗೂ ತೋರಿಸುತ್ತೇನೆ. ಎಂತೆಂತಹ ದೊಡ್ಡ ಕಾರು ಗೊತ್ತಾ? ಒಂದು ಕಾರು ಬಂದರೆ, ಅದನ್ನು ನಿಲ್ಲಿಸೋಕೇ ಅರ್ಧ ಬೀದಿ ಬೇಕಾಗುತ್ತೆ.

*****

ಮುಂದಿನ ದಿನಗಳಲ್ಲಿ ಅಂಗಡಿ ಕಡೆ ಹೋದಾಗ, ಚಿತ್ತೂರಿನಿಂದ ಬಂದಿದ್ದ ಯಾರನ್ನಾದರೂ ತೋರಿಸಿ, ಇವರೇ ಅವರು, ಅವರೇ ಇವರು ಅಂತ ಪರಿಚಯ ಮಾಡಿಕೊಡುತ್ತಿದ್ದ. ಅವರಿಗೆ ನನ್ನನ್ನು ನೋಡುವುದಿರಲಿ, ನನ್ನ ಹೆಸರನ್ನು ಕೇಳಿಸಿಕೊಳ್ಳುವಷ್ಟು ವ್ಯವಧಾನವೂ ಇರುತ್ತಿರಲಿಲ್ಲ. ಅವರು ಊರಿಗೆ ಹೊರಟ ಮೇಲೆ, ಅವರುಗಳ ಮನೆಯ ಇತಿಹಾಸವನ್ನು ಹೇಳಿ, ಅವರ ಮನೆಯಲ್ಲಿರುವ, ಇರಬಹುದಾದ ಚಿನ್ನ ಬೆಳ್ಳಿಯ ಸಂಪತ್ತನ್ನು ಕನವರಿಸಿಕೊಂಡು ಬಾಯಿ ಚಪ್ಪರಿಸುತ್ತಿದ್ದ. ಹಾಗೆಲ್ಲ ಹೇಳುವಾಗ ತುಂಬಾ ಪ್ರಸನ್ನವಾಗಿರುತ್ತಿದ್ದ ಮತ್ತು ಯಾರ ಮೇಲೂ ರೇಗುತ್ತಿರಲಿಲ್ಲ.

ಕತೆ ಮುಂದುವರೆಯಿತು, ಮುಂದುವರೆಯುತ್ತಿದೆ ಅನ್ನುವಾಗಲೇ ಆಕೆ ಪ್ರತ್ಯಕ್ಷವಾಗಿಬಿಡುತ್ತಿದ್ದಳು. ಒಂದೊಂದುಸಲ ತುಂಬಾ ಚೆನ್ನಾಗಿ ಶೃಂಗಾರ ಕೂಡ ಮಾಡಿಕೊಂಡು ಬಂದಿರುತ್ತಿದ್ದಳು. ಕಣ್ಣುಗಳಲ್ಲಿ ಮಿಂಚು ಕೂಡ ಇರುತ್ತಿತ್ತು.

ಆದರೇನು, ಅವಳ ಬಂದ ಒಂದೆರಡು ನಿಮಿಷಗಳ ಒಳಗೇ, ಇಬ್ಬರಿಗೂ ಮಾರಾಮಾರಿ ಶುರುವಾಗೋದು. ಜಗಳ ಆಡ್ತಾ ಆಡ್ತಾ ಇಬ್ಬರೂ ಬೀದಿಗೆ ಬಂದುಬಿಡುವರು.

ಇದೊಂದು ಸಲ ಮನೆ ಒಳಗೆ ಕರ‍್ಕೋ. ಖಂಡಿತವಾಗಿ ನಿನಗೇ ನಿಯತ್ತಾಗಿ ಇರುತ್ತೇನೆ.

ಆಕೆ ಅಂಗಲಾಚುವ ಧ್ವನಿಯಲ್ಲಿ ಕೇಳಿಕೊಳ್ಳುತ್ತಿದ್ದಳು.

ಸುಬ್ಬು ಮುಖಕ್ಕೆ ಹೊಡೆದ ಹಾಗೆ ಅಬ್ಬರಿಸುವನು.

ನಿಯತ್ತಂತೆ ನಿಯತ್ತು. ನಿನ್ನ ಮುಖ ನೋಡಿಕೋ. ಮನೆಗೆ ಹೋಗಿ ಕನ್ನಡಿಯಲ್ಲಿ ಚೆನ್ನಾಗಿ ನೋಡಿಕೋ. ನಿನಗೂ ನಿಯತ್ತಿಗೂ ಕೂಡಿ ಬರುತ್ತಾ?

About The Author

ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ