ಕನ್ನಡವನ್ನು ಕಾಪಾಡಿದ ಮಹಿಳೆಯರ ಮಾತು ಬಂದಾಗ ಮರೆಯಬಾರದ ಮಹಿಳೆಯರ ಇನ್ನೊಂದು ಸಮುದಾಯವೆಂದರೆ ಈ ನಾಡಿನ ಉದ್ದಗಲದ ಕನ್ನಡ ಶಾಲೆಗಳಲ್ಲಿ ಲಕ್ಷಾಂತರ ಮಕ್ಕಳಿಗೆ ಕನ್ನಡದ ಓದು ಬರಹ ಕಲಿಸಿದ ಸಾವಿರಾರು ಅನಾಮಿಕ ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಮುದಾಯ. ಈ ಮಾತು, ವಿದ್ಯಾರ್ಥಿಗಳಿಗೆ ಸೊಗಸಾದ ಕನ್ನಡವನ್ನು ಉತ್ತಮ ರೀತಿಯಲ್ಲಿ ಕಲಿಸಿ ಕನ್ನಡದಲ್ಲಿ ಆಸಕ್ತಿ ಹುಟ್ಟಿಸಿದ ಪ್ರೌಢಶಾಲೆ ಹಾಗೂ ನಂತರದ ಹಂತದ ಅಧ್ಯಾಪಕಿಯರಿಗೂ ಅನ್ವಯವಾಗುತ್ತದೆ. ಶಾಲಾಶಿಕ್ಷಕರಲ್ಲಿ ಹೆಂಗಸರದೇ ಹೆಚ್ಚಿನ ಪ್ರಮಾಣವೆಂದು (65%) ಅಂಕಿಅಂಶಗಳು ಹೇಳುತ್ತವೆ. ಉತ್ತರ ಕರ್ನಾಟಕದಲ್ಲಿ ಕನ್ನಡ ಶಾಲಾಶಿಕ್ಷಕಿಯರನ್ನು ಅಕ್ಕೋರು ಎಂದು ಪ್ರೀತಿಯಿಂದ ಸಂಬೋಧಿಸುವುದನ್ನು ನಾವು ಗಮನಿಸಬೇಕು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತೈದನೆಯ ಬರಹ
ಇನ್ನೇನು ಕನ್ನಡ ರಾಜ್ಯೋದಯದ 2026ರ ವರ್ಷಾಚರಣೆಯ ಸಂಭ್ರಮ ಹತ್ತಿರವಾಗುತ್ತಿದೆ. ಈ ಹೊತ್ತಿನಲ್ಲಿ ಕನ್ನಡಕ್ಕಾಗಿ ಕೆಲಸ ಮಾಡಿದ ಮಹನೀಯರನ್ನು ನೆನೆಯುವಾಗ ಆಲೂರು ವೆಂಕಟರಾಯರು, ಬಿ.ಎಂ.ಶ್ರೀ, ಶಾಂತಕವಿಗಳು, ಅನಕೃ, ಜಿ.ಪಿ.ರಾಜರತ್ನಂ…….. ಮುಂತಾಗಿ ಅನೇಕ ಪುರುಷರ ಹೆಸರುಗಳು ನೆನಪಾಗುತ್ತವೆ. ಅದೇ ಹೊತ್ತಿನಲ್ಲಿ ಕನ್ನಡಕ್ಕಾಗಿ ಕೆಲಸ ಮಾಡಿದ ಮಹಿಳೆಯರು ಯಾರ್ಯಾರು ಎಂದು ಯೋಚಿಸುತ್ತಿದ್ದೆ. ಮೊದಲು ಅನ್ನಿಸಿದ ಸಂಗತಿ ಎಂದರೆ, ಈ ವಿಷಯದಲ್ಲಿ ಚರಿತ್ರೆಯ ದಾಖಲೆಗಳಲ್ಲಿ ಪುರುಷರಿಗೆ ಹೋಲಿಸಿದರೆ ಸಿಗುವ ಮಹಿಳೆಯರ ಹೆಸರುಗಳು ತುಂಬ ಕಡಿಮೆ. ಯಾಕೆ ಹೀಗೆ? ನಾಡುನುಡಿಯ ಉನ್ನತಿಕೆಗಾಗಿ ಮಹಿಳೆಯರು ಪುರುಷರ ಹಾಗೆ ದುಡಿಯಲು ಸಾಧ್ಯ ಆಗಲಿಲ್ಲವೋ ಅಥವಾ ದುಡಿದವರ ಹೆಸರುಗಳು ದಾಖಲಾಗಿಲ್ಲವೋ? ಈ ವಿಷಯದಲ್ಲಿ ಗಂಭೀರವಾದ ಮರುಚಿಂತನೆಯ ಅಗತ್ಯವಿದೆ ಅನ್ನಿಸಿತು.
*****
ಕನ್ನಡವನ್ನು ಕಾಪಾಡಿದ ಅದಕ್ಕಾಗಿ ದುಡಿದ ಮಹಿಳೆಯರು ಯಾರು ಎಂದು ನಾವು ಆಲೋಚಿಸುವಾಗ ಮೊಟ್ಟಮೊದಲು ನೆನಪು ಮಾಡಿಕೊಳ್ಳಬೇಕಾಗಿರುವುದು `ಗರತಿಯ ಹಾಡು’ಗಳನ್ನು, ಅಂದರೆ ತ್ರಿಪದಿಗಳಲ್ಲಿ ಹಾಡಿದ ನಮ್ಮ ಗ್ರಾಮೀಣ ಮಹಿಳೆಯರನ್ನು. `ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಎಳ್ಳುಜೀರಿಗೆ ಬೆಳೆಯೋಳ … ಎಳ್ಳುಜೀರಿಗೆ ಬೆಳೆಯೋಳ ಬೂಮ್ತಾಯ ಎದ್ದೊಂದು ಗಳಿಗೆ ನೆನೆದೇನು ..’ ಎಂದು ರಾಗಿ ಬೀಸುತ್ತಾ ಹಾಡಿದ ತಾಯಂದಿರನ್ನು ನೆನೆಯಬೇಕು. ಅವರು `ಕನ್ನಡ ಛಂದಸ್ಸಿನ ಗಾಯತ್ರಿ’ ಎಂದು ಕರೆಯಲಾಗುವ ತ್ರಿಪದಿಯನ್ನು ಜೀವಂತವಾಗಿಟ್ಟರು. ಜೊತೆಗೆ, ತಾವು ಅನಕ್ಷರಸ್ಥರಾದರೂ ಸಂಪ್ರದಾಯದ ಹಾಡುಗಳನ್ನು ದೇವರನಾಮಗಳನ್ನು ಕಟ್ಟಿ, ಕಿರಿಯರಿಗೆ ಕಲಿಸಿ, ಹಾಡುತ್ತಾ ಬಂದ ಅನಾಮಿಕ ಪ್ರತಿಭಾವಂತೆಯರೂ ಈ ಸಾಲಿಗೆ ಸೇರುತ್ತಾರೆ.
ತಮ್ಮ ಮಕ್ಕಳನ್ನು ಕನ್ನಡದಲ್ಲಿ ಮಾತಾಡಿಸಿ ಒಳ್ಳೆಯ ಕನ್ನಡ ಕಲಿಸಿದ ಅವರಿಗೆ ಕನ್ನಡದಲ್ಲಿ ಕಥೆ ಹೇಳಿದ ಅಸಂಖ್ಯಾತ ಅಜ್ಜಿಯರು ಹಾಗೂ ತಾಯಂದಿರನ್ನು ನಾವು ನೆನೆಯಬೇಕು.
ಕನ್ನಡವನ್ನು ಕಾಪಾಡಿದ ಮಹಿಳೆಯರ ಮಾತು ಬಂದಾಗ ಮರೆಯಬಾರದ ಮಹಿಳೆಯರ ಇನ್ನೊಂದು ಸಮುದಾಯವೆಂದರೆ ಈ ನಾಡಿನ ಉದ್ದಗಲದ ಕನ್ನಡ ಶಾಲೆಗಳಲ್ಲಿ ಲಕ್ಷಾಂತರ ಮಕ್ಕಳಿಗೆ ಕನ್ನಡದ ಓದು ಬರಹ ಕಲಿಸಿದ ಸಾವಿರಾರು ಅನಾಮಿಕ ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಮುದಾಯ. ಈ ಮಾತು, ವಿದ್ಯಾರ್ಥಿಗಳಿಗೆ ಸೊಗಸಾದ ಕನ್ನಡವನ್ನು ಉತ್ತಮ ರೀತಿಯಲ್ಲಿ ಕಲಿಸಿ ಕನ್ನಡದಲ್ಲಿ ಆಸಕ್ತಿ ಹುಟ್ಟಿಸಿದ ಪ್ರೌಢಶಾಲೆ ಹಾಗೂ ನಂತರದ ಹಂತದ ಅಧ್ಯಾಪಕಿಯರಿಗೂ ಅನ್ವಯವಾಗುತ್ತದೆ. ಶಾಲಾಶಿಕ್ಷಕರಲ್ಲಿ ಹೆಂಗಸರದೇ ಹೆಚ್ಚಿನ ಪ್ರಮಾಣವೆಂದು (65%) ಅಂಕಿಅಂಶಗಳು ಹೇಳುತ್ತವೆ. ಉತ್ತರ ಕರ್ನಾಟಕದಲ್ಲಿ ಕನ್ನಡ ಶಾಲಾಶಿಕ್ಷಕಿಯರನ್ನು ಅಕ್ಕೋರು ಎಂದು ಪ್ರೀತಿಯಿಂದ ಸಂಬೋಧಿಸುವುದನ್ನು ನಾವು ಗಮನಿಸಬೇಕು.
ಹೀಗೆ, ಅಕ್ಷರಸ್ಥರು, ಹಳ್ಳಿಯವರು, ನಗರದವರು, ಶ್ರೀಮಂತರು, ಬಡವರು ಎನ್ನದೆ ಕನ್ನಡ ಮಹಿಳೆಯರ ಒಂದು ದೊಡ್ಡ ಸಮುದಾಯವು ಕನ್ನಡ ಸಂವರ್ಧನೆಯಲ್ಲಿ ತನ್ನ ಪಾತ್ರ ವಹಿಸಿದೆ.
****
ಈಗ, ವೈಯಕ್ತಿಕ ನೆಲೆಯಲ್ಲಿ ಕನ್ನಡಕ್ಕಾಗಿ ಗಣನೀಯ ಸೇವೆ ಮಾಡಿದ ಮಹಿಳೆಯರು ಯಾರು ಎಂಬ ಪ್ರಶ್ನೆ ಕೇಳಿಕೊಂಡಾಗ ಈ ಕೆಳಗಿನ ಹೆಸರುಗಳು ಸಿಗುತ್ತವೆ.
ದಾನಚಿಂತಾಮಣಿ ಅತ್ತಿಮಬ್ಬೆ (950-1020) – ಪ್ರಾಚೀನ ಕರ್ನಾಟಕದ ಸ್ತ್ರೀಯರಲ್ಲಿ ಅಗ್ರಗಣ್ಯರಾದ ಅತ್ತಿಮಬ್ಬೆ ಹತ್ತನೆಯ ಶತಮಾನದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಪೂರ್ವಾರ್ಧ ಅಂದರೆ ಚಾಳುಕ್ಯ ಚಕ್ರವರ್ತಿ ಅಹವಮಲ್ಲ ತೈಲಪ ಹಾಗೂ ಆತನ ಮಗ ಇರಿವ ಬೆಡಂಗ ಸತ್ಯಾಶ್ರಯರ ಕಾಲದಲ್ಲಿದ್ದರು.
ಕನ್ನಡ ಸಾಹಿತ್ಯಕ್ಕೆ ಅತ್ತಿಮಬ್ಬೆಯ ಕೊಡುಗೆ ದೊಡ್ಡದು. ಮಣಿಖಚಿತವಾದ ಸಾವಿರಾರು ಚಿನ್ನದ ಜಿನಮೂರ್ತಿಗಳನ್ನು ಮಾಡಿಸಿ ಅವುಗಳನ್ನು ದಾನ ಕೊಡುವ ಸಂದರ್ಭದಲ್ಲಿ `ಶಾಂತಿಪುರಾಣ’ ಮುಂತಾದ ಜೈನಧರ್ಮಕ್ಕೆ ಸಂಬಂಧಿಸಿದ ಕೃತಿಗಳನ್ನು ಇವರು ಲಿಪಿಕಾರರಿಂದ ಓಲೆಗರಿ ಪ್ರತಿ ಮಾಡಿಸಿ ದಾನ ಮಾಡುತ್ತಿದ್ದರು. ಲಕ್ಕುಂಡಿಯಲ್ಲಿ ದೊಡ್ಡ ಬಸದಿಯನ್ನು ಕಟ್ಟಿಸಿದರು. ರನ್ನಕವಿಯಿಂದ ಅಜಿತ ಪುರಾಣವನ್ನು ಹೇಳಿಸಿದರು. “ಬಿಳಿಯರಳೆಯಂತೆ, ಗಂಗಾಜಳದಂತೆ ಎಸೆವ ಅಜಿತಸೇನಮುನಿಪತಿಯ ಗುಣಾವಳಿಯಂತೆ ನೆಗಳ್ದ ಕೊಪಣಾಚಲದಂತೆ ಪವಿತ್ರಮತ್ತಿಮಬ್ಬೆಯ ಚರಿತಂ” ಎನ್ನುತ್ತ, ರನ್ನಕವಿಯು ಅತ್ತಿಮಬ್ಬೆಯ ಪವಿತ್ರ ಚರಿತೆಯನ್ನು, ಗಂಗಾನದಿಗೆ, ಹತ್ತಿಯ ರಾಶಿಗೆ, ಅಜಿತ ಸೇನ ಮುನಿಗಳ ಗುಣಗಳಿಗೆ. ಜೈನಕಾಶಿ ಎಂದು ಪ್ರಸಿದ್ಧವಾದ ಕೊಪ್ಪಳದ ಬೆಟ್ಟಕ್ಕೆ (ಹಿಂದಿನ ಕೊಪಣಾಚಲ) ಹೋಲಿಸಿ ಕೊಂಡಾಡಿದ್ದಾನೆ. ಈಕೆಯನ್ನು ತನ್ನ ಸಮಕಾಲೀನರು `ಕವಿವರ ಕಾಮಧೇನು’ ಎಂದು ಅಭಿಮಾನದಿಂದ ಕರೆಯುತ್ತಿದ್ದರಂತೆ.
ಅತ್ತಿಮಬ್ಬೆ ತಮ್ಮ ತಪಸ್ಸು, ನಿಷ್ಠೆ, ಔದಾರ್ಯ, ತ್ಯಾಗ, ಧರ್ಮಾನುರಾಗ, ಕಾವ್ಯಪ್ರೇಮ ಇತ್ಯಾದಿಗಳಿಂದ ತಮ್ಮ ಕಾಲದ ಜನರಲ್ಲಿ ಅದ್ಭುತ ವ್ಯಕ್ತಿಯಾದರು. ಅವರ ದಾನಗುಣ, ಔದಾರ್ಯ, ಉತ್ತಮ ಚರಿತೆಗಳನ್ನು ಕುರಿತು ಅನೇಕ ಶಾಸನಗಳು ರಚಿಸಲ್ಪಟ್ಟಿವೆ. ಕನ್ನಡದ ಅಭಿವೃದ್ಧಿಗಾಗಿ ಕೆಲಸ ಮಾಡಿದ ಮಹಿಳೆಯರನ್ನು ನೆನೆದಾಗ ಮೊತ್ತಮೊದಲು ಬರುವ ಹೆಸರೆಂದರೆ ಅದು ಅತ್ತಿಮಬ್ಬೆಯದು. ದಾನಚಿಂತಾಮಣಿ ಅತ್ತಿಮಬ್ಬೆಯೆಂದೇ ಆಕೆ ಪ್ರಖ್ಯಾತರಾಗಿದ್ದಾರೆ.
- ಕನ್ನಡನಾಡಿನ ನಾಟ್ಯಕಲೆಯ ಲಾಸ್ಯವೈಭವದ ಗರಿ ನಾಟ್ಯರಾಣಿ ಶಾಂತಲೆ(ಸು.1108-1152) – ಹನ್ನೆರಡನೇ ಶತಮಾನದ ಈ ಕನ್ನಡನಾಡಿನ ರಾಣಿಯು ಹೊಯ್ಸಳ ವಂಶದ ರಾಜ ಬಿಟ್ಟಿದೇವ(ವಿಷ್ಣುವರ್ಧನ)ನ ಪಟ್ಟದ ರಾಣಿಯಾಗಿದ್ದು ತನ್ನ ನಾಟ್ಯಕಲಾ ಪ್ರಾವೀಣ್ಯವನ್ನು ಬೇಲೂರಿನ ಚೆನ್ನಕೇಶವ ದೇವಸ್ಥಾನದಲ್ಲಿ ಶಿಲಾಬಾಲಿಕೆಯರ ಮೂಲಕ ಅಮರವಾಗಿಸಿದ್ದಾಳೆ. ಕನ್ನಡ ನಾಡು ಎಂದೂ ಮರೆಯಬಾರದ ಕಲಾಕೊಡುಗೆ ಕೊಟ್ಟ ಮಹಿಳೆ ಇವಳು.
- ಜಯದೇವತಾಯಿ ಲಿಗಾಡೆ(1912-1986)
ಇವರನ್ನು ಕನ್ನಡದ ಕೋಟೆ ಕಟ್ಟಿದ ಕನ್ನಡತಿ ಎನ್ನಲಾಗುತ್ತದೆ.
ಕನ್ನಡ ತಾಯಿ ನುಡಿ ಮನ್ನಿಸಿ ಮಾತನಾಡು
ಅನ್ನಕ್ಕೆ ಮರುಳಾಗದಿರು ಮರುಳೇ ನೀ
ಕನ್ನಡಿಗನೆಂಬುದು ಮರೀಬೇಡ
ಹೀಗೆಂದು ಕನ್ನಡಿಗರನ್ನು ಎಚ್ಚರಿಸಿದ ಜಯದೇವಿ ತಾಯಿ ಲಿಗಾಡೆ ಅವರಿಗೆ ಕನ್ನಡ ನಾಡು ನುಡಿಯ ಬಗ್ಗೆ ಅಪಾರವಾದ ಅಭಿಮಾನವಿತ್ತು. ಅವರ ಬದುಕನ್ನು ಕನ್ನಡದ ಯಶೋಗಾಥೆ ಎನ್ನಲಾಗುತ್ತದೆ.
ಸೊಲ್ಲಾಪುರದ ಪ್ರತಿಷ್ಠಿತ ಲಿಗಾಡೆ ಮನೆತನದ ಚನ್ನಬಸಪ್ಪ ಮತ್ತು ಸಂಗಮ್ಮನವರ ಮಗಳಾಗಿ ಜಯದೇವಿತಾಯಿ ಲಿಗಾಡೆ ಜನಿಸಿದರು. ಮನೆಮಾತು ಮರಾಠಿಯಾಗಿದ್ದರೂ ಬಾಲ್ಯದಲ್ಲಿಯೇ ಕನ್ನಡ, ಮರಾಠಿಯ ಉತ್ತಮ ಕೃತಿಗಳನ್ನು ಅಭ್ಯಾಸ ಮಾಡಿದರು. ಕನ್ನಡದ ಬಗೆಗೆ ತುಂಬು ಅಭಿಮಾನವನ್ನು ತಳೆದು ಬದುಕಿನುದ್ದಕ್ಕೂ ಕನ್ನಡವನ್ನೇ ತಾಯಿನುಡಿ ಎಂದು ಸ್ವೀಕರಿಸಿದ್ದರು. ಮರಾಠಿ ಕನ್ನಡ ಎರಡೂ ಭಾಷೆಗಳ ಮೇಲೆ ಅವರಿಗೆ ಸಮಾನ ಪ್ರಭುತ್ವ ಇತ್ತು. ಜಯದೇವಿತಾಯಿಯವರಲ್ಲಿದ್ದ ಕನ್ನಡ ಕಳಕಳಿ ಅಗಾಧವಾದುದಾಗಿತ್ತು. ಸೋಲಾಪುರ, ಜತ್ತ ಪ್ರದೇಶಗಳಲ್ಲಿ ಕನ್ನಡ ಶಾಲೆಗಳು ಪ್ರಾರಂಭವಾದಾಗ ಶಿಕ್ಷಕರ ಸಂಭಾವನೆಯ ಹೊರೆಯನ್ನು ತಾವೇ ಹೊತ್ತರು. ಕನ್ನಡ ನಾಡು ನುಡಿಗಳ ಏಳಿಗೆಗಾಗಿ ದುಡಿದವರಲ್ಲಿ ಇವರು ಪ್ರಾತಃಸ್ಮರಣೀಯರು.
- ನಿಂಗವ್ವಾ ಅಣ್ಣಾಬಸಪ್ಪ ಮುರಲಿಂಗಣ್ಣವರ ( ಜನನ 1912)
ಬೆಳಗಾಂವ ಜಿಲ್ಲೆಯ ಮಾರೀಹಾಳದಲ್ಲಿ ಜನಿಸಿದ ನಿಂಗವ್ವಾ ವಿವಾಹವಾದುದು ಗೋಕಾಕ ತಾಲ್ಲೂಕಿನ ಅಕ್ಕತಂಗೇರಹಾಳದ ಅಣ್ಣಾಬಸಪ್ಪ ಮರಿಲಿಂಗಣ್ಣನವರನ್ನು. ಚಿಕ್ಕವಯಸ್ಸಿಗೇ ಮದುವೆಯಾದರೂ ಗಂಡನ ಪ್ರಭಾವದಿಂದ 1930ರ ವೇಳೆಗೇ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರವೇಶಿಸಿದ ನಿಂಗವ್ವಾ ಮುಂದೆ ಎಂದೂ ಹೋರಾಟಗಳಿಂದ ದೂರ ಉಳಿಯಲಿಲ್ಲ. ಹಲವು ಬಾರಿ ಸೆರೆಮನೆ ವಾಸದ ಅನುಭವವೂ ನಿಂಗವ್ವ ಅವರಿಗಾಗಿದೆ. ವಾಲಿ ಚನ್ನಪ್ಪನವರ ಪ್ರಭಾವಕ್ಕೆ ಬಂದ ನಂತರ ಕರ್ನಾಟಕ ಏಕೀಕರಣ ಚಳುವಳಿಯಲ್ಲೂ ಇವರು ಪಾಲುಗೊಳ್ಳುತ್ತಿದ್ದರು.
- ಪದ್ಮವಿಭೂಷಣ ಕಮಲಾದೇವಿ ಚಟ್ಟೋಪಾಧ್ಯಾಯ(1903-1988)
ಭಾರತ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸುಧಾರಕಿ ಮತ್ತು ಕಲಾ ಪೋಷಕಿಯಾಗಿದ್ದ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಮಂಗಳೂರು ಮೂಲದವರು. ಕರ್ನಾಟಕದ ಸಾಂಪ್ರದಾಯಿಕ ಕಲೆಗಳನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿದವರು ಇವರು. ಯಕ್ಷಗಾನ, ಕಿನ್ಹಾಳ ಆಟಿಕೆಗಳು ಸೇರಿದಂತೆ ಗ್ರಾಮೀಣ ಕಲೆ ಹಾಗೂ ಕರಕುಶಲ ಉದ್ಯಮಕ್ಕೆ ಮರುಜೀವ ನೀಡಿದರು.
- ಡಾ.ಸರೋಜಿನಿ ಮಹಿಷಿ(1927-2015)
ಲೇಖಕಿ, ರಾಜಕಾರಣಿ. ಕಾನೂನು ತಜ್ಞೆ, ಕರ್ನಾಟಕದ ಮೊದಲ ಸಂಸದೆ ಹಾಗೂ ಕೇಂದ್ರ ಸರ್ಕಾರದ ಮಾಜಿ ಸಚಿವೆಯಾಗಿದ್ದ ಸರೋಜಿನಿ ಮಹಿಷಿಯವರು `ಸ್ಥಳೀಯರಿಗೆ ಉದ್ಯೋಗ’ ಎಂಬ ಮಣ್ಣಿನ ಮಗ ನೀತಿಯನ್ನು ಪ್ರತಿಪಾದಿಸಿ ರಾಜ್ಯದೆಲ್ಲೆಡೆ ಸಂಚಲನವನ್ನು ಮೂಡಿಸಿದ್ದರು. ರೇಲ್ವೆ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಬಗ್ಗೆ ಅವರು ಸಲ್ಲಿಸಿದ ವರದಿ `ಸರೋಜಿನಿ ಮಹಿಷಿ ವರದಿ’ ಎಂದೇ ಪ್ರಸಿದ್ಧವಾಗಿದೆ.
`ಕರ್ನಾಟಕ ಏಕೀಕರಣಕ್ಕೆ ದುಡಿದ ಮಹಿಳೆಯರು’ ಎಂಬ ಗ್ರಂಥವನ್ನು ಸಂಪಾದಿಸಿರುವ ಡಾ.ಎಚ್.ಎಸ್.ಗೋಪಾಲರಾವ್ ಅವರು ಆ ಗ್ರಂಥಕ್ಕೆ ಬರೆದಿರುವ ಪ್ರಸ್ತಾವನೆಯಲ್ಲಿ ಹೀಗೆ ಬರೆಯುತ್ತಾರೆ – “ಕೆಲವು ಸಂದರ್ಭಗಳಲ್ಲಿ ಯಾವುದೇ ರೀತಿಯ ದೊಡ್ಡಸ್ತಿಕೆ ಇಲ್ಲದ ಸಾಮಾನ್ಯ ಮಹಿಳೆ ಇದ್ದಕ್ಕಿದ್ದಂತೆ ಏನೋ ಒಳ್ಳೆಯ ಮಾತನಾಡಿ, ಒಳ್ಳೆಯ ಕೆಲಸ ಮಾಡಿ ಮಿಂಚಿನ ನೆನಪು ತರುತ್ತಾಳೆ. ಆಕೆ ಹೆಚ್ಚಿನ ಗೌರವಕ್ಕೆ ಪಾತ್ರಳಾಗುತ್ತಾಳೆ. ಅಂತಹ ಒಬ್ಬ ಮಹಿಳೆ ಕೋ.ಚೆನ್ನಬಸಪ್ಪ(ಕೋ.ಚೆ)ನವರ ನೆನಪಿನಲ್ಲುಳಿದಿದ್ದಳು. ಬಳ್ಳಾರಿ ಜಿಲ್ಲೆಯು ಆಂಧ್ರದ ಜೊತೆಗೆ ಸೇರುವ ಸೂಚನೆ ಇದೆ ಎಂದು ತಿಳಿದ ಲಿಂಗಮ್ಮವ್ವ ಎಂಬ ಮಹಿಳೆ ನೊಂದುಕೊಂಡದ್ದನ್ನು ಕೋ.ಚೆ. ನೆನಪು ಮಾಡಿಕೊಂಡಿದ್ದಾರೆ. ವೃದ್ಧಳಾಗಿದ್ದ ಆಕೆ `ಬಳ್ಳಾರಿ ಆಂಧ್ರಕ್ಕೆ ಸೇರಬಾರದು’ ಎಂದು ಬಹಳ ವ್ಯಾಕುಲಿಸಿ, ಕೋ.ಚೆ. ಅವರನ್ನು “ನೀವೇನೋ ಸತ್ಯಾಗ್ರಹ ಮಾಡ್ತೀರಂತೆ. ಅದಕ್ಕೆ ನಮ್ಮನ್ನು ಸೇರಿಸ್ಕೋಬಾರ್ದೆ?” ಎಂದು ಕೇಳಿದಳಂತೆ. ಆಕೆಯನ್ನು ಸಂತೈಸಿ ಕಳುಹಿಸುವುದೇ ಕಷ್ಟವಾಯಿತು ಎಂದು ಕೋ.ಚೆ. ಹೇಳಿದರಂತೆ. ಲಿಂಗಮ್ಮವ್ವ ಕೋ.ಚೆ. ಅವರ ನೆನಪಿನಲ್ಲಿ ಮಾತ್ರ ಉಳಿದಿದ್ದಾಳೆ; ಬರಹದ ದಾಖಲೆಯಲ್ಲಿ ಲಿಂಗಮ್ಮವ್ವ ಇಲ್ಲವೇ ಇಲ್ಲ. ಇಂತಹ ಎಷ್ಟೋ ಜನ ಸಾಮಾನ್ಯರು ಅನ್ನಿಸಿಕೊಂಡ ಅಸಾಮಾನ್ಯ ಮಹಿಳೆಯರನ್ನು ಅಕ್ಷರ ಲೋಕಕ್ಕೆ ಪರಿಚಯಿಸಬೇಕಾಗಿದೆ”.
ಇದೇ ಪುಸ್ತಕದ `ಕರ್ನಾಟಕ ಏಕೀಕರಣದಲ್ಲಿ ಮಹಿಳೆಯರು’ ಎಂಬ ಲೇಖನದಲ್ಲಿ ಮುಖ್ಯವಾಗಿ ಜಯದೇವಿ ತಾಯಿ ಲಿಗಾಡೆ, ಸ್ವಲ್ಪ ಮಟ್ಟಿಗೆ ಬಳ್ಳಾರಿ ಸಿದ್ದಮ್ಮ – ಇವರನ್ನು ಬಿಟ್ಟರೆ ಕರ್ನಾಟಕ ಏಕೀಕರಣಕ್ಕಾಗಿ ಸಕ್ರಿಯವಾಗಿ ದುಡಿದ ಮಹಿಳೆಯರ ದಾಖಲೆ ಅಷ್ಟಾಗಿ ಸಿಕ್ಕುವುದಿಲ್ಲ ಎಂಬ ಅನಿಸಿಕೆ ವ್ಯಕ್ತವಾಗಿದೆ.
*****
ಹಿಂದಿನ ಮಹಿಳೆಯರ ಕನ್ನಡಕಾರ್ಯವನ್ನು ಗಮನಿಸಿದ ಮೇಲೆ ಬರುವ ಪ್ರಶ್ನೆಗಳು ಅಂದರೆ ಇಂದಿನ ಮಹಿಳೆ ಕನ್ನಡ ಕಟ್ಟುವ ಕಾಯಕದಲ್ಲಿ ತೊಡಗಿದ್ದಾಳೆಯೇ? ತೊಡಗಿದ್ದರೆ ಹೇಗೆ ತೊಡಗಿದ್ದಾಳೆ? ತೊಡಗದಿದ್ದರೆ ಅದಕ್ಕೆ ಕಾರಣಗಳೇನು?
`ಕನ್ನಡ ನಾಡು-ನುಡಿ-ನೆಲ-ಜಲ-ಗಡಿ’ – ಇವುಗಳ ಕುರಿತಾಗಿ ಕೆಲಸ ಮಾಡುವುದನ್ನು ಮಾತ್ರ ಕನ್ನಡೋನ್ನತಿ ಎಂದು ವ್ಯಾಖ್ಯಾನಿಸಿಕೊಂಡರೆ `ಕನ್ನಡ’ಕ್ಕಾಗಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ನಮಗೆ ಸಿಗದಿರಬಹುದು. ಆದರೆ ಸಂಪ್ರದಾಯದ ಹಾಡುಗಳನ್ನು ಶ್ರೀಮಂತವಾಗಿಟ್ಟ ಶ್ರೀಮತಿ ವಾಗೀಶ್ವರಿ ಶಾಸ್ತ್ರಿಯಂಥವರು, ಅಪಾರ ಕನ್ನಡಾಭಿಮಾನದಿಂದ ತಮ್ಮ ಭೌತಶಾಸ್ತ್ರದ ಪಿ.ಎಚ್.ಡಿ. ಸಂಶೋಧನಾ ಪ್ರಬಂಧವನ್ನು ಕನ್ನಡದಲ್ಲಿ ಬರೆದು ಸಲ್ಲಿಸಿದ ಡಾ.ವೈ.ಸಿ.ಕಮಲ ಅಂಥವರು, ಕನ್ನಡ ವಚನಗಳಿಗೆ ಭರತನಾಟ್ಯ ಮಾಡಿ ಪ್ರಸಿದ್ಧರಾದ ಶ್ರೀಮತಿ ಜಯ ಅವರಂತಹ ಮಹಿಳೆಯರು ನೆನಪಾಗುತ್ತಾರೆ.
ಅತ್ಯಾಸಕ್ತಿಯಿಂದ, ಅಪಾರ ಕನ್ನಡಾಭಿಮಾನದಿಂದ ವೈಯಕ್ತಿಕ ನೆಲೆಯಲ್ಲಿ ಕೆಲಸ ಮಾಡುವ ಮಹಿಳೆಯರು ಈಗ ಇಲ್ಲವೆಂದಲ್ಲ. ಸಾಂಘಿಕವಾಗಿ ಸಮುದಾಯವಾಗಿ ಒಂದು ಅಭಿಯಾನದ ರೂಪದಲ್ಲಿ ಮಹಿಳೆಯರು ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂದು ಕೇಳಿದರೆ ಈ ವಿಷಯದಲ್ಲಿ ಇನ್ನಷ್ಟು ಅಧ್ಯಯನ, ಸಂಶೋಧನೆಗಳ ಅಗತ್ಯ ಇದೆ. 1999ರಲ್ಲಿ ಪ್ರಾರಂಭಗೊಂಡು “ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು” ಎಂಬ ಧ್ಯೇಯದಿಂದ ಇಡೀ ರಾಜ್ಯದಲ್ಲಿ ತನ್ನ ಅಸ್ತಿತ್ವದ ಛಾಪು ಮೂಡಿಸಿರುವ ಕನ್ನಡ ಪರ ಸಂಘಟನೆಯಾದ `ಕರ್ನಾಟಕ ರಕ್ಷಣಾ ವೇದಿಕೆ’ ನೆನಪಾಗುವಂತೆ ಒಂದು ಮಹಿಳಾ ವೇದಿಕೆ ನೆನಪಾಗುವ ಸನ್ನಿವೇಶ ಬರಬೇಕು.
ನಮ್ಮ ಸಮಾಜದಲ್ಲಿ ಮಹಿಳೆಯರಿಗಿರುವ ಸಾಂಪ್ರದಾಯಿಕ ಗೃಹವಾಳ್ತೆಯ ಪಾತ್ರಗಳು ಮತ್ತು ನಿರೀಕ್ಷೆಗಳಿಂದಾಗಿ ಯಾವುದೇ ಕ್ಷೇತ್ರದಲ್ಲಾದರೂ ಅವರು ಸಂಜೆ ಹಾಗೂ ರಾತ್ರಿಗಳಲ್ಲಿ ಒಂದು ಸಮುದಾಯವಾಗಿ, ಸಾಂಘಿಕವಾಗಿ ದುಡಿಯುವುದು ಈಗಲೂ ಒಂದು ಸವಾಲೇ ಆಗಿದೆ. ಆದರೆ ಇಂದಿನ ತಂತ್ರಜ್ಞಾನದ ಯುಗದಲ್ಲಿ ಕನ್ನಡದ ಡಿಜಿಟಲ್ ಕ್ಷೇತ್ರದಲ್ಲಿ ಅಂದರೆ ಕನ್ನಡ ತಂತ್ರಾಂಶಗಳು, ಎಐ ಆಧಾರಿತ ಅಳವಡಿಕೆಗಳು ಹಾಗೂ ಈ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕನ್ನಡ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಹೆಚ್ಚಿನ ಅವಕಾಶ ಇದೆ. ಈ ವಿಷಯದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಶ್ರೀಮತಿ ಸುಧಾ ಮೂರ್ತಿಯವರ ಕನ್ನಡಾಭಿಮಾನವನ್ನು ನಾವು ನೆನೆಯಬೇಕು. ಕನ್ನಡನಾಡಿನ ಹಳ್ಳಿಮೂಲೆಯ ಶಾಲೆಗಳನ್ನು ಗಣಕಯಂತ್ರಗಳ ಕೊಡುಗೆಗಳಿಂದ ಸಬಲೀಕರಿಸುವುದೇ ಅಲ್ಲದೆ, ತಾವು ಸ್ವತಃ ಒಬ್ಬ ಲೇಖಕಿಯಾಗಿದ್ದು ಕನ್ನಡದಲ್ಲಿ ಬರೆಯುತ್ತಿರುವ ಅವರು ನಮ್ಮ ಮುಂದಿನ ಪೀಳಿಗೆಯ ಸ್ತ್ರೀಸಮುದಾಯಕ್ಕೆ ಮಾದರಿಯಾಗಬಲ್ಲರು.
ಇದೇ ನೆಲೆಯಲ್ಲಿ ನಾವು ಗಮನಿಸಬೇಕಾದ ಇನ್ನೊಬ್ಬ ಮಹಿಳೆ ಅಂದರೆ ಕದಿಕೆ ಟ್ರಸ್ಟ್ ಎಂಬ ಸಂಸ್ಥೆಯನ್ನು 2018ರಲ್ಲಿ ಸ್ಥಾಪಿಸಿ ಅಳಿವಿನಂಚಿನಲ್ಲಿದ್ದ ಕನ್ನಡನಾಡಿನ ಕಲೆಯಾದ ಉಡುಪಿ ಸೀರೆಗಳ ಕೈಮಗ್ಗದ ನೇಯ್ಗೆಗೆ ಮರುಜೀವನ ಕೊಟ್ಟ ಮಮತ ರೈ ಅವರು. ಇವರು ಕಣ್ಮರೆಯಾಗಿ ಹೋಗಬಹುದಾಗಿದ್ದ ಕನ್ನಡ ನಾಡಿನ ಕಲೆಯೊಂದಕ್ಕೆ ಮರುಜನ್ಮ ಕೊಟ್ಟದ್ದು ಮಾತ್ರವಲ್ಲ, ತರಬೇತಿ ಹಾಗೂ ಮಾರಾಟ ಬೆಂಬಲದ ಮೂಲಕ ನೂರಾರು ಬಡಕುಟುಂಬಗಳು ತಮ್ಮ ಜೀವನೋಪಾಯ ಕಂಡುಕೊಳ್ಳಲು ಕಾರಣರಾಗಿದ್ದಾರೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾಯಕದಷ್ಟೇ ಮುಖ್ಯವಾದ ಕೆಲಸ ಅಂದರೆ ಈ ರೀತಿಯಲ್ಲಿ ಕನ್ನಡನಾಡಿನ ಕಲೆ- ಕೌಶಲ್ಯಗಳನ್ನು ಉಳಿಸಿ ಬೆಳೆಸುವುದು.

ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಂದು ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗಿದೆ ಹಾಗೂ ಕೇವಲ ಭೌತಿಕ ಪ್ರಪಂಚವಲ್ಲದೆ ಅಂತರ್ಜಾಲ ಪ್ರಪಂಚದಲ್ಲೂ ಮಹಿಳೆಯರು ಕನ್ನಡದ ಕೆಲಸ ಮಾಡುವ ಸಂದರ್ಭಾನುಕೂಲ ಹೆಚ್ಚಿದೆ. ಸರಿಯಾದ ಶಿಕ್ಷಣ, ತರಬೇತಿ ಹಾಗೂ ಪ್ರೇರಣೆಗಳನ್ನು ನೀಡಿದರೆ ಕನ್ನಡ ನಾಡಿನ ಬಹಳಷ್ಟು ಹೆಣ್ಣುಮಕ್ಕಳು ನಾಡು-ನುಡಿ-ನೆಲ-ಜಲ-ಸಂಸ್ಕೃತಿಗಾಗಿ ಸಮಥರ್ಧವಾಗಿ ದುಡಿಯಲು ಈಗ ನೆಲವು ಫಲವತ್ತಾಗಿದೆ. ಈ ದಿಕ್ಕಿನಲ್ಲಿ ನಮ್ಮ ಹಿಂದಿನ ಮಹಿಳೆಯರು ಇಟ್ಟ ಹೆಜ್ಜೆಗಳು ನಮ್ಮ ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಸ್ಫೂರ್ತಿದಾಯಕ ಪ್ರೇರಣೆಯಾಗಲಿ ಎಂದು ಹಾರೈಸೋಣ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

