ಹಿಂದಿನಂತೆಯೇ ಇಂದಿಗೂ ದಸರಾ ಬರುತ್ತದೆ. ಖುಷಿಯ ಹೊತ್ತು ತರುತ್ತದೆ. ಮನೆ ಮನೆಗಳಲ್ಲಿ ದೀಪಗಳು ಬೆಳಗುತ್ತವೆ. ಹೊಸ ಬಟ್ಟೆಗಳು ಬರುತ್ತವೆ. ಸಿಹಿತಿಂಡಿಗಳು ತಯಾರಾಗುತ್ತವೆ. ಬನ್ನಿ ವಿನಿಮಯವಾಗುತ್ತದೆ. ಆದರೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಆ ಹಳೆಯ ದಸರಾವನ್ನು ಹುಡುಕುವ ಪುಟ್ಟ ಮಗು ಇನ್ನೂ ಜೀವಂತವಾಗಿದೆ. ಆ ಮಗುವಿಗೆ ಮತ್ತೆ ಅದೇ ಅಂಗಳದಲ್ಲಿ ಓಡಾಡಬೇಕು. ಅಮ್ಮನ ಮಡಿಲಲ್ಲಿ ಕುಳಿತುಕೊಳ್ಳಬೇಕು. ಅಪ್ಪನ ಕೈ ಹಿಡಿದು ಜಾತ್ರೆಗೆ ಹೋಗಬೇಕು. ಯಾವ ಚಿಂತೆಯೂ ಇಲ್ಲದೆ ಗೆಳೆಯರೊಂದಿಗೆ ನಗಬೇಕು. ಕಾಲವನ್ನು ಅಲ್ಲಿಯೇ ನಿಲ್ಲಿಸಿ, ಆ ಮುಗ್ಧ ಕ್ಷಣಗಳಲ್ಲೇ ಶಾಶ್ವತವಾಗಿ ಉಳಿದುಬಿಡಬೇಕು ಎಂಬ ಆಸೆ.
ನಾಡಹಬ್ಬ ದಸರಾದ ಕುರಿತು ಆಶಾ ಜಗದೀಶ್ ಬರಹ
ದಸರಾ ಎಂದ ಕೂಡಲೇ ಮೊದಲು ನೆನಪಾಗುವುದೇ ಗೊಂಬೆಗಳು ಮತ್ತೆ ಆಯುಧ ಪೂಜೆ. ಚಂದ ಚಂದದ ಗೊಂಬೆಗಳನ್ನು ಅಂದವಾಗಿ ಜೋಡಿಸಿಟ್ಟು ಒಂದೊಂದು ಜೋಡಣೆ ಮತ್ತು ರಚನೆಯ ಹಿಂದೆ ಯಾವುದೋ ಕಥೆಗಳನ್ನು ಹೇಳಲು ಪ್ರಯತ್ನಿಸುತ್ತಿವೆ ಎನಿಸುವಂತಹ ದೃಶ್ಯಾವಳಿಗಳನ್ನು ಸೃಷ್ಟಿಸಿ ನಮ್ಮಲ್ಲಿ ಹಲವು ಭಾವನೆಗಳನ್ನು ಹುಟ್ಟಿಸುತ್ತಿದ್ದವು. ಚಿಕ್ಕಂದಿನಲ್ಲಿ ಯಾರಾದರೂ ಗೊಂಬೆಗಳನ್ನು ಇಟ್ಟಿದ್ದಾರೆ ಎಂದರೆ ಸಾಕು ಹೋಗಿ ಅಲ್ಲೊಮ್ಮೆ ಇಣುಕಿ ನೋಡಿ ಬರದಿದ್ದರೆ ಮನಸು ತಡೆಯುತ್ತಲೇ ಇರಲಿಲ್ಲ. ಎಷ್ಟೆಲ್ಲಾ ಪಾತ್ರಗಳು, ನಾಯಕರು, ದುರಂತ ನಾಯಕರು, ದುಷ್ಟರು, ರಾಕ್ಷಸರು, ಯುದ್ಧ, ಸಂಹಾರ… ಅದರ ಹಿಂದಿನ ಕತೆ ಉಪಕತೆಗಳ ನೆನಪುಗಳ ಪ್ರಭಾವಳಿ. ಸೀತಾ, ರಾಮ ಲಕ್ಷ್ಮಣರ ಜೊತೆಗೆ ಕೈಮುಗಿದು ಕುಳಿತಿರುವ ಹನುಮಂತ, ಒಂದು ಕಡೆಯಾದರೆ ಮತ್ತೊಂದೆಡೆ ಲಂಕೆಯ ಚಿತ್ರಣ. ಪಕ್ಕದಲ್ಲೇ ಮಹಾಭಾರತದ ಭೀಮ ಅರ್ಜುನ ದುರ್ಯೋಧನ ಕರ್ಣರೋಪಾದಿ ಎಲ್ಲಾ ಕೌರವರು ಮತ್ತು ಪಾಂಡವರು. ಗಣೇಶ ಲಕ್ಷ್ಮಿ ಸರಸ್ವತಿಯರ ಜೊತೆಗೆ ಬಂದು ಕುಳಿತ ಮುದ್ದು ಗೌರಿ. ಪೌರಾಣಿಕ ಪಾತ್ರಗಳೊಟ್ಟಿಗೆ ಸೆಳೆಯುವ ಮತ್ತೊಂದು ಗೊಂಬೆ ಸಮೂಹವೆಂದರೆ ಅದು ಮದುವೆಯ ಗೊಂಬೆಗಳು. ಮದುಮಗ, ಮದುಮಗಳು, ಹಿಂದೆ ಸಂಬಂಧಿಕರು, ಮುಂದೆ ಓಲಗದವರು. ನೋಡಲು ಅದೆಷ್ಟು ಮುದ. ದೊಡ್ಡವಳಾದ ಮೇಲೆ ನಾನೂ ಸಹ ಮದುಮಗಳಾಗಿ ಥೇಟ್ ಹೀಗೆ ಅಲಂಕರಿಸಿಕೊಂಡು ಕೂರುತ್ತೇನೆ, ನನ್ನ ಪಕ್ಕದಲ್ಲಿ ಕೂರುವ ಆ ಹುಡುಗ ಯಾರಿರಬಹುದು? ಹೇಗಿರಬಹುದು? ಎಂಬೆಲ್ಲ ಯೋಚನೆಗಳು ಬರುತ್ತಿದ್ದವು. ಆ ಬಟ್ಟೆ ವಡವೆ ಎಲ್ಲರ ಕೇಂದ್ರಬಿಂದುವಾಗಿ ಕಂಗೊಳಿಸುವ ಆ ದಿನದ ಬಗ್ಗೆ ವಿಚಿತ್ರ ಆಕರ್ಷಣೆ ಇರುತ್ತಿತ್ತು. ಹಾಗಾಗಿಯೇ ದಸರಾ ಅಂದರೆ ಬೇರೆಲ್ಲ ಹಬ್ಬಗಳಂತೆ ಬರೀ ಒಂದು ಹಬ್ಬವಷ್ಟೇ ಅಲ್ಲ ಅದೊಂದು ಸಂಭ್ರಮದ ಜಾತ್ರೆ, ಕನಸುಗಳ ಲೋಕ, ಮುಗ್ಧ ಮನಸ್ಸುಗಳ ನಲಿವು, ವರ್ಷವಿಡೀ ಕಾಯುತ್ತಿದ್ದ ಸಂತೋಷದ ಕ್ಷಣಗಳ ಗುಚ್ಛ ಅಂತಲೇ ಅನಿಸಿಬಿಡುತ್ತದೆ ನನಗೆ.
ದಸರಾ ಬರುತ್ತಿದೆ ಎಂದರೆ ಸಾಕು, ತಿಂಗಳ ಮುಂಚೆಯಿಂದಲೇ ತಯಾರಿ ಶುರು. ಕಿಟಕಿ ಬಾಗಿಲಿನಿಂದ ಹಿಡಿದು ಮನೆಯ ಮೂಲೆ ಮೂಲೆಯನ್ನೂ ಬಿಡದೆ ಒರೆಸಿ ಸ್ವಚ್ಛ ಮಾಡಬೇಕು. ಮನಸ್ಸಿನಲ್ಲಿ ಅದೇನೋ ಹೊಸ ಹುರುಪು. ಹೊಸ ಬಟ್ಟೆಯ ಕನಸು, ಹಬ್ಬದ ಅಡುಗೆಯ ಘಮಲು, ಅಂಗಳದಲ್ಲಿ ರಂಗೋಲಿ, ಮನೆಮಂದಿಯ ಓಡಾಟ… ಆ ಸಂಭ್ರಮದ ಅನುಭವಕ್ಕಾಗಿಯೇ ಎಷ್ಟೆಲ್ಲಾ ಕಾಯುತ್ತಿದ್ದೆವು. ಬೂದುಗುಂಬಳ ಕಾಯಿ ತಂದು ಅಂಗಳದಲ್ಲಿ ಅದರ ಬಲಿ ಕೊಟ್ಟು ಗೇಟಿನ ಇಕ್ಕೆಲಗಳಲ್ಲಿ ಇಟ್ಟು ಅದರ ಮೇಲೆ ರಕ್ತದಂತೆ ಕುಂಕುಮ ಸುರಿದು ಪೂಜೆ ಮಾಡುವಾಗ ದುಷ್ಟ ಸಂಹಾರ ಶಿಷ್ಟ ಝೇಂಕಾರವಾಗುತ್ತಿತ್ತು.
ಇನ್ನು ಆಯುಧ ಪೂಜೆಯ ದಿನವಂತೂ ಮತ್ತೊಂದೇ ಮಟ್ಟಿಗಿನ ಸಂಭ್ರಮ ಮನೆಯನ್ನು ತುಂಬಿರುತ್ತಿತ್ತು. ಮನೆಯಲ್ಲಿ ಬಳಸುತ್ತಿದ್ದ ಮೆಟ್ಟುಗತ್ತಿ, ಚಾಕು, ಹಾರೆಕೋಲು, ಕುಡುಗೋಲು, ಮಚ್ಚು, ಚಲಕೆಯಂಥ ಸಲಕರಣೆಗಳಿಗೆಲ್ಲ ಪೂಜೆ ಸಲ್ಲಿಸಿ ಅವುಗಳ ಪ್ರಾಮುಖ್ಯತೆಯನ್ನು ಸ್ಮರಿಸಿ ಗೌರವ ಸಲ್ಲಿಸಲಾಗುತ್ತಿತ್ತು. ಮನೆಯ ಎಲ್ಲ ಸಲಕರಣೆಗಳನ್ನು ಅಂದವಾಗಿ ಜೋಡಿಸುವಾಗ ನಾವು ನಮ್ಮ ಪೆನ್ನು, ಪೆನ್ಸಿಲ್ಲು, ಎರೆಸರ್ರು, ಶಾರ್ಪ್ನರ್ರುಗಳನ್ನೆಲ್ಲ ತಂದಿಟ್ಟು ಅವು ನಮ್ಮ ಪಾಲಿನ ಅತಿ ದೊಡ್ಡ ಸಲಕರಣೆಗಳು ಎಂದು ಹೇಳಿ ಪೂಜೆ ಮಾಡುತ್ತಿದ್ದೆವು.
ಯಾರೋ ಬಯಿಬಡುಕಿಯರ ಥರ ಮಾತಾಡ್ತಾರೆ ಅಂತ ಅವರ ನಾಲಿಗೆಗೆ ಪೂಜೆ ಮಾಡಿದ ವಿಡಿಯೋ ಒಂದನ್ನ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಯಾರೋ ಶೇರ್ ಮಾಡಿದ್ದನ್ನು ನೋಡಿ ಜನ ಎಷ್ಟು ಕ್ರಿಯೇಟಿವ್ ಆಗಿ ಯೋಚ್ನೆ ಮಾಡ್ತಾರಲ್ಲ ಅಂತ ನಕ್ಕಿದ್ದೇನೆ. ಆದರೆ ಅದನ್ನು ಯಾರನ್ನಾದರೂ ನೋಯಿಸುವ ಉದ್ದೇಶದಿಂದ ಮಾಡಿದ್ದರೆ ಅಥವಾ ನೋಯಿಸಿದ್ದರೆ ಮಾತ್ರ ಅದು ಅಕ್ಷಮ್ಯ. ಯಾವುದೇ ಹಾಸ್ಯವಾಗಿರಲಿ ಅಳತೆಯನ್ನು ಮೀರಿದರೆ ಅಪಹಾಸ್ಯವಾಗಿಬಿಡುತ್ತದೆ. ಮತ್ತೊಬ್ಬರನ್ನು ಹೀಯಾಳಿಸಿ ಹಾಸ್ಯವೆನ್ನುವುದಾದರೆ ನಮ್ಮ ಆಯ್ಕೆಯಲ್ಲೇ ತೊಂದರೆ ಇದೆ ಎಂದರ್ಥ. ಅದರ ಹೊರತಾಗಿ ಕೆಲವೊಮ್ಮೆ odd man out ರೀತಿಯಲ್ಲಿ ಯೋಚಿಸುವುದರಿಂದಲೇ ಹಾಸ್ಯ ಹುಟ್ಟುತ್ತದೆ ಎಂಬುದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಒಮ್ಮೆ ಹಬ್ಬಕ್ಕೆ ಬಂದಿದ್ದ ಚಿಕ್ಕಮ್ಮನ ಮಗ ಆಯುಧಪೂಜೆಯ ದಿನ ಜೋಡಿಸಿಟ್ಟ ಸಾಮಗ್ರಿಗಳನ್ನು ಜೊತೆಗೆ ತನ್ನ ಪುಟ್ಟ ಪುಟ್ಟ ಶೂ ಮತ್ತು ಚಪ್ಪಲಿಗಳನ್ನ, ಆಟದ ಕಾರು, JCB, ಬೈಸಿಕಲ್, ಸೈಕಲ್ಗಳನ್ನೂ ತಂದಿಟ್ಟು ಅವಕ್ಕೆಲ್ಲ ಸಿಂಗಾರ ಮಾಡಿ, ಶ್ರದ್ಧೆಯಿಂದ ಪೂಜೆ ಮಾಡಿ ನಕ್ಕು ನಕ್ಕು ಸುಸ್ತಾಗುವಂತೆ ಮಾಡಿದ್ದ. ನಂತರ ಅವನನ್ನು ಮುದ್ದು ಮಾಡಿ ಓಲೈಸಿ ಶೂ ಚಪ್ಪಲಿಗಳನ್ನು ತೆಗೆಸುವಲ್ಲಿಗೆ ಎಲ್ಲರಿಗೂ ಮತ್ತಷ್ಟು ಸುಸ್ತಾದದ್ದೂ ನಿಜ.
ಹಳ್ಳಿಗಳಲ್ಲಿ ವಿಜಯದಶಮಿಯನ್ನ ಬನ್ನಿ ಮುಡಿ ಹಬ್ಬ ಎಂತಲೂ ಕರೆಯುವ ವಾಡಿಕೆ ಇದೆ. ಹಿಂದೆ ಪಾಂಡವರು ಅಜ್ಞಾತವಾಸಕ್ಕೆ ತೆರಳುವಾಗ ತಮ್ಮ ಶಸ್ತ್ರಾಸ್ತ್ರಗಳನ್ನು ಶಮಿ ಪತ್ರೆ ಎಂದು ವ್ಯಾಪಾಕವಾಗಿ ಕರೆಯಲ್ಪಡುವ ಬನ್ನಿ ಮರದಲ್ಲಿ ಅಡಗಿಸಿಟ್ಟು ತಲೆ ಮರೆಸಿಕೊಂಡಿದ್ದರಂತೆ. ತಮ್ಮ ಅಜ್ಞಾತವಾಸ ಮುಗಿಸಿ ಕುರುಕ್ಷೇತ್ರಕ್ಕೆ ಅಣಿಯಾಗುವಾಗ ಬಂದು ಬನ್ನಿ ಮರಕ್ಕೆ ಮತ್ತು ತಮ್ಮ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿ ನಂತರ ಯುದ್ಧ ಮಾಡಿ ವಿಜಯಿಗಳಾದರಂತೆ ಎಂಬುದು ಜನ ನಂಬುವ ಒಂದು ಬಗೆಯ ಕಥೆ. ಹಾಗಾಗಿಯೇ ಇಂದಿಗೂ ಸಾಂಕೇತಿಕವಾಗಿ ಮನೆಯಲ್ಲಿ ಮನೆಬಳಕೆಯ, ಸಲಕರಣೆಗಳು, ಯಂತ್ರೋಪಕರಣಗಳು ಹಾಗೂ ಹಳ್ಳಿ ಮನೆಗಳಲ್ಲಾದರೆ ಕೃಷಿ ಸಂಬಂಧಿತ ಸಲಕರಣೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ನಂತರ ಮಕ್ಕಳು ಆಟದ ಬಿಲ್ಲು ಬಾಣಗಳನ್ನು ತೆಗೆದುಕೊಂಡು ಹೋಗಿ ಬನ್ನಿ ಮರಕ್ಕೆ ಬಾಣ ಬಿಡುವ ಸಂಪ್ರದಾಯವನ್ನೂ ಕೆಲವು ಹಳ್ಳಿಗಳಲ್ಲಿ ಪಾಲಿಸುತ್ತಾರೆ. ತದ ನಂತರ ಪೂಜೆ ಮಾಡಿ ತಂಡ ಬನ್ನಿ ಪತ್ರೆಯನ್ನು ಗುರು ಹಿರಿಯರಿಗೆ ನೀಡಿ ‘ಬನ್ನಿ ಬಂಗಾರವಾಗಲಿ’, ‘ಬನ್ನಿ ತಗೊಂಡು ಬಂಗಾರದಂಗೆ ಇರೋಣ’ ಎಂದು ಬಾಯ್ತುಂಬಾ ಹರಸಿಕೊಳ್ಳುತ್ತಾರೆ. ಒಬ್ಬರನ್ನೊಬ್ಬರ ಮುಖ ನೋಡಿಕೊಳ್ಳುವ ಸಂದರ್ಭಗಳೇ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಇಷ್ಟು ಮುದ್ದಾಗಿ ಒಬ್ಬರಿನ್ನೊಬ್ಬರಿಗೆ ಹಾರೈಸುವುದು ಎಷ್ಟು ಚಂದ. ನಮ್ಮ ಸಂಪ್ರದಾಯಗಳ ಬೇರು ಅಪ್ಪಟ ಮಾನವೀಯತೆಯ ಮಣ್ಣಿನಲ್ಲಿ ಅವಿನಾಭಾವವಾಗಿ ಹಾರಾಡಿಕೊಂಡು ತಬ್ಬಿಕೊಂಡಿದೆ ಎಂದರೂ ತಪ್ಪಾಗುವುದಿಲ್ಲ.

ವಿಜಯದಶಮಿಯ ಹಿಂದೆ ಮತ್ತೊಂದು ಕಥೆಯೂ ಕೇಳಿಬರುತ್ತದೆ. ಅದೆಂದರೆ, ರಾಮ ರಾವಣರ ನಡುವಿನ ಯುದ್ಧದಲ್ಲಿ ರಾಮ ಜಯ ಪಡೆದು ರಾವಣನನ್ನು ದಹಿಸಿ ಕೊಂದನಂತೆ. ಅದರ ಸಂಕೇತವಾಗಿ ಈಗಲೂ ರಾವಣ ದಹನವನ್ನು ಕೆಲವು ಪ್ರದೇಶಗಳಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ನನ್ನ ತಮ್ಮನ ಮಗ ಮೊನ್ನೆ ಅಮೇರಿಕೆಯಿಂದ ರಜೆಗೆಂದು ಊರಿಗೆ ಬಂದವನು ನಿಜಕ್ಕೂ ರಾವಣ ಇಷ್ಟು ಕ್ಯೂಟ್ ಆಗಿ ಇದ್ದನಾ ಎನಿಸುವಂತೆ ಮಾಡಿಬಿಟ್ಟ. ವಿಷಯ ಇಷ್ಟೇ, ರಾಮಾಯಣದ ಅನಿಮೇಟೆಡ್ ಮೂವಿ ನೋಡಿ ಅವನಿಗೆ ರಾವಣ ಅದೆಷ್ಟು ಇಷ್ಟವಾಗಿಬಿಟ್ಟಿದ್ದ ಎಂದರೆ ಅವನ ಹತ್ತು ತಲೆ, ಕ್ರಿಯೇಟಿವ್ ಪ್ಲಾನ್ಸ್, ಗಹಗಹಿಸುವ ನಗು ಎಲ್ಲವೂ ಅವನಿಗೆ ಇಷ್ಟ. ಮಾತು ಮಾತಿಗೆ ಹ್ಹ ಹ್ಹ ಹ್ಹ ಎಂದು ಮಾಕ್ ಮಾಡಿ ನಗುತ್ತಾ I’m a demon, I’m Ravan ha ha ha.. ಎನ್ನುತ್ತಾ ಆಟದ ಖಡ್ಗ ಹಿಡಿದು ಎಲ್ಲರನ್ನೂ ಹೆದರಿಸಿದ್ದೇ ಹೆದರಿಸಿದ್ದು. ಇವನಿಗ್ಯಾಕೆ ರಾಮ ಇಷ್ಟವಾಗಲಿಲ್ಲ. ರಾವಣ ಯಾಕೆ ಇಷ್ಟ ಆದ ಅಂತ ಅರ್ಥವಾಗದೆ ನಾವೆಲ್ಲ ಪೆಚ್ಚು. ನಮ್ಮ ಪ್ರಶ್ನೆಗಳು ಮಗುವಿಗೆ ಅರ್ಥವಾಗುತ್ತಿಲ್ಲ. ನಮ್ಮ ಗೊಂದಲ ಅವನಿಗೆ ಗೊತ್ತಿಲ್ಲ. ಅವ ತನ್ನ ಆಟದಲ್ಲಿಯೇ ಸಂಪೂರ್ಣ ಮುಳುಗಿದ್ದಾನೆ. ರಾವಣನ ಹಾವ, ಭಾವ, ಉಡುಪು, ಖಡ್ಗ ಅಥವಾ ಅವನ ಹತ್ತು ತಲೆ ಯಾವುದೋ ಒಂದು ವಿಷಯ ಅವನನ್ನು ಸೆಳೆದಿರಬಹುದು. ಅವನಲ್ಲಿ ಭವಿಷ್ಯದ ಒಂದೊಳ್ಳೆ ನಟನಂತೂ ಕಾಣಿಸುತ್ತಿದ್ದಾನೆ. ಸಧ್ಯಕ್ಕೆ ಅವನ ಇಷ್ಟವನ್ನ ನಮಗೆ ಅರ್ಥಮಾಡಿಸಲು ಅವನಿಗೆ ಬರುವುದಿಲ್ಲ, ಮತ್ತೆ ನಮ ನಮಗೇ ಅರ್ಥವಾಗುವ ಸಾಧ್ಯತೆಯೂ ಇಲ್ಲ. ಈಗಿನ ಮಟ್ಟಿಗೆ ಅವ I’m Ravan ಎಂದಾಗ ತಮಾಷೆ ಎಂದು ಭಾವಿಸಿ ನಾವು ನಗುತ್ತಿದ್ದೇವೆ. ಆದರೆ ರಾವಣ ಸೀತೆಯನ್ನು ಹೊತ್ತೊಯ್ದ ಎನ್ನುವ ಒಂದೇ ಕಾರಣಕ್ಕೆ ಅವನ ದೈವ ಭಕ್ತಿ, ತಪಹ್ ಶಕ್ತಿ, ಜ್ಞಾನ, ಬುದ್ಧಿ ಎಲ್ಲವೂ ಗೌಣವಾಗಿ ಹೋದದ್ದು ಮಾತ್ರ ದುರಂತ.
ರಾವಣನ ಹತ್ತು ತಲೆಗಳನ್ನು ಹೀಗೂ ಅರ್ಥೈಸಲಾಗುತ್ತದೆ. ರಾವಣನಿಗೆ ಹೇಗೆ ಹತ್ತು ತಲೆಗಳಿದ್ದವೋ ಹಾಗೇ ಮನುಷ್ಯನಾದವನಲ್ಲಿ ಹತ್ತು ಬಗೆಯ ಅವಗುಣಗಳಿರುತ್ತವೆ. ಅವೆಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ, ಸ್ವಾರ್ಥ, ಅನ್ಯಾಯ, ಅಮಾನವೀಯತೆ ಮತ್ತು ಅಹಂಭಾವ. ಇವುಗಳ ಮೇಲೆ ಹಿಡಿತ ಸಾಧಿಸಿ ಬದುಕುವುದೇ ಮನುಷ್ಯನ ಪಾಲಿಗೆ ನಿಜವಾದ ವಿಜಯದಶಮಿ ಎಂದು ಅಧ್ಯಾತ್ಮಿಕವಾಗಿ ಸಮರ್ಥಿಸಲಾಗುತ್ತದೆ. ಅದೂ ಒಂದು ರೀತಿಯಲ್ಲಿ ಸರಿಯೇ. ಮನುಷ್ಯ ತನ್ನ ಅವಗುಣಗಳನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ. ನಾವು ಜಗತ್ತನ್ನು ಬೇಕಾದರೆ ಸುಲಭವಾಗಿ ಗೆದ್ದುಬಿಡಬಹುದೇನೋ. ಆದರೆ ನಮ್ಮನ್ನು ನಾವು ಗೆಲ್ಲುವುದು ಅಷ್ಟು ಸುಲಭವಲ್ಲ.
ವಿಜಯದಶಮಿಯ ಹಿಂದೆ ಇನ್ನೂ ಒಂದು ಕತೆ ಇದೆ. ಹಿಂದೆ ಮಹಿಷಾಸುರನೆಂಬ ರಾಕ್ಷಸ ತನಗೆ ಒಬ್ಬ ಹೆಣ್ಣಿನಿಂದ ಸಾವು ಬರಬೇಕೆಂದು ಕೋರಿಕೊಂಡಿದ್ದನಂತೆ. ಹಾಗಾಗಿ ಅವನಿಗೆ ಸಾವೇ ಇಲ್ಲದಂತಾಗಿ ಹೀಗಿತ್ತಂತೆ. ಹೆಣ್ಣು ಅಬಲೆ, ನಿಶ್ಯಕ್ತಳು ಅವಳಿಂದ ತನಗೆಂತ ಸಾವು ಬಂದೀತು ಎನ್ನುವ ಅಸಡ್ಡೆ ಉಡಾಫೆ ಮಹಿಷಾಸುರನಿಗಿತ್ತು. ಆಗಲೇ ನೋಡಿ ದುರ್ಗಾದೇವಿಯ ಜನನವಾದದ್ದು. ತ್ರಿಮೂರ್ತಿಗಳು ತಮ್ಮ ಶಕ್ತಿಯನ್ನು ಧಾರೆಯೆರೆದು ಆಶೀರ್ವದಿಸಿದರು. ನಂತರ ದುರ್ಗೆಯನ್ನು ಸೋಲಿಸಲಾಗದೆ ಅವಳ ತ್ರಿಶೂಲಕ್ಕೆ ಸಿಕ್ಕಿ ಮಹಿಷಾಸುರ ಸತ್ತನಂತೆ. ಹೆಣ್ಣನ್ನು ತುಚ್ಚವಾಗಿ, ಕೇವಲವಾಗಿ, ಅಬಲೆಯಾಗಿ ಕಂಡ ಮಹಿಷಾಸುರ ಅವಳಿಂದಲೇ ಅಳಿದುಹೋದದ್ದು ಹೆಣ್ಣಿನ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ ಎಂತಲೇ ಹೇಳಬಹುದು.
ದಸರಾ ಹಬ್ಬ ನಾಡ ಹಬ್ಬವಾಗಿ ರೂಪುಗೊಳ್ಳುವಲ್ಲಿ ಐತಿಹಾಸಿಕ ಹಿನ್ನಲೆಯೂ ಇದೆ. 15ನೇ ಶತಮಾನದಲ್ಲಿ ವಿಜಯನಗರದಲ್ಲಿ ಆರಂಭವಾದ ಮಹಾನವಮಿ ಉತ್ಸವವನ್ನು, 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರ್ ಆರಂಭಿಸಿದರು. ನಂತರ 1799ರಲ್ಲಿ ಇದು ಮೈಸೂರು ಅರಮನೆಗೆ ಸ್ಥಳಾಂತರಗೊಂಡಿತು. ಅಂದಿನಿಂದಲೂ ಪ್ರತಿವರ್ಷ ಹತ್ತು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ದಸರೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜಂಬುಸವಾರಿ ಮತ್ತು ಸ್ಥಬ್ದ ಚಿತ್ರಗಳು ಮೈಸೂರು ದಸರೆಯ ಪ್ರಮುಖ ಆಕರ್ಷಣೆಯಾಗಿರುತ್ತವೆ. ಅಲ್ಲದೆ ನಾನಾ ಬಗೆಯ ಕಲಾ ಪ್ರಕಾರಗಳು ಮತ್ತು ಕಲಾವಿದರನ್ನೂ ಕರೆಸಿ ಕಲಾ ಪ್ರದರ್ಶನ ನಡೆಸಿ ಸನ್ಮಾನಿಸುವುದೂ ಸಹ ಮೈಸೂರು ದಸರೆಯ ಮತ್ತೊಂದು ವಿಶೇಷತೆಯಾಗಿದೆ. ಇದು ಸಾರ್ವಜನಿಕವಾಗಿ ಆಚರಿಸುವ ಆಚರಣೆಯಾದರೆ, ಮನೆಯ ಮಟ್ಟಿಗೆ ಇದೊಂದು ಭಾವಗಳ ಬೆಸೆಯುವ ಹಬ್ಬವಾಗಿದೆ. ಕೆಲಸ ಮತ್ತು ಓದಿನ ನಿಮಿತ್ತ ಎಲ್ಲೆಲ್ಲೋ ನೆಲೆಸಿರುವ ಮನೆ ಮಂದಿ ಹಬ್ಬಕ್ಕಾಗಿಯಾದರೂ ಊರಿಗೆ ಬರುತ್ತಾರೆ. ಹಲವು ದಿನಗಳಿಂದ ಒಬ್ಬರ ಮುಖ ಒಬ್ಬರು ನೋಡದೆ, ಮಾನಸಿಕವಾಗಿ ಮತ್ತು ದೈಹಿಕವಾಗಿ ದೂರವಿದ್ದವರು ಹಬ್ಬದ ನೆಪದಲ್ಲಿ ಒಂದಾಗುತ್ತಾರೆ. ಅದೊಂದು ರೀತಿಯ ಖುಷಿಯಲ್ಲದೆ ಮತ್ತೇನು.
ಚಿಕ್ಕವರಿದ್ದಾಗ ದಸರಾ ಹಬ್ಬಕ್ಕೆಂದು ಎಲ್ಲರೂ ಊರಿಗೆ ಹೋಗುತ್ತಿದ್ದೆವು. ಅಜ್ಜಯ್ಯನೇ ಮನೆ ಮಂದಿಗೆಲ್ಲ ಬಟ್ಟೆ ತರುತ್ತಿದ್ದರು. ಮನೆ ತುಂಬಾ ಜನ. ಅರೇಳು ಮಕ್ಕಳು. ಮಕ್ಕಳಿಗೆ ಕೆಲಸವೇ ಇರುತ್ತಿರಲಿಲ್ಲ. ತಿನ್ನುವುದು ಆಡುವುದು ಬಿಟ್ಟರೆ ಮತ್ತೇನು ಘನಂಧಾರಿ ಕೆಲಸವಿರುತ್ತಿರಲಿಲ್ಲ. ಮನೆಯ ಸಂಭ್ರಮ ನಮ್ಮ ಮನಸ್ಸನ್ನು ತುಂಬಿಸುತ್ತಿತ್ತು. ಅದೆಷ್ಟೋ ದಿನದ ಮಾತುಗಳು ನದಿಯಾಗಿ ಹರಿಯುತ್ತಿದ್ದವು, ಕಲಕಲ ನಗು ತುಳುಕುತ್ತಲೇ ಇರುತ್ತಿತ್ತು. ಯಾವುದೋ ಮಾಯದಲ್ಲಿ ದೊಡ್ಡ ಪರಾತದ ತುಂಬ ಹೂರಣದ ಕಡುಬುಗಳು, ಉಣ್ಣಲು ನಾನಾ ಬಗೆಯ ಭಕ್ಷ್ಯಗಳು. ಅಡುಗೆ ತಯಾರಾದರೆ ಸಾಕು ಎಡೆ ತೆಗೆದುಕೊಂಡು ಬನ್ನಿ ಮರಕ್ಕೆ ಹೋಗಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿಕೊಂಡು ಬಂದ ಮೇಲೆಯೇ ನಮ್ಮ ಊಟ. ನಾವೆಲ್ಲ ಬಾಲಂಗೋಚಿಗಳಂತೆ ಎಡೆ ಒಯ್ಯುವವರ ಹಿಂದೆ ಹೋರಾಡುತ್ತಿದ್ದೆವು. ಊರ ಹೊರಗಿನ ಆಂಜನೇಯ ಸ್ವಾಮಿ ದೇವಸ್ಥಾನದ ಮಗ್ಗುಲಿಗೇನೇ ಇದ್ದದ್ದು ಆ ನೂರಾರು ವರ್ಷದಷ್ಟು ಹಳೆಯದಾದ ಆ ಬನ್ನಿ ಮರ. ಆ ಹಳೆಯ ಭಾವ ಅದೆಷ್ಟು ಚಂದ. ಈಗಲೂ ಆ ಮರ ಹಾಗೇ ಇದೆ. ಆದರೆ ಅದರ ಸುತ್ತಮುತ್ತಲ ಚಿತ್ರಣ ಸಂಪೂರ್ಣ ಬದಲಾಗಿದೆ. ಈಗಿನ ಹಬ್ಬಗಳಲ್ಲಿ ಹಿಂದಿನ ಆ ಖುಷಿ ಇಲ್ಲದಾಗಿದೆ. ಹಬ್ಬಕ್ಕೆ ಯಾರೂ ಊರಿಗೆ ಹೋಗುವುದಿಲ್ಲ. ಕುಟುಂಬಗಳು ನ್ಯೂಕ್ಲಿಯರ್ ಆಗುತ್ತಾ ಆಗುತ್ತಾ ಹಬ್ಬಗಳು ತಮ್ಮ ನಲಿವನ್ನು ಕಳೆದುಕೊಂಡು ಬರದಾಗುತ್ತಿವೆ. ಹಬ್ಬದ ಕಳೆ ಮಾಸಿ ಹೋಗಿದೆ. ಬಾಲ್ಯ ಕಳೆದು ಹೋಗಿದೆ. ಜವಾಬ್ದಾರಿಗಳು ಹೆಗಲೇರಿವೆ. ಅಂದು ಅಮ್ಮನ ಕೈರುಚಿ ಸವಿಯುತ್ತಾ ಹಬ್ಬದ ಸಡಗರದಲ್ಲಿ ತೇಲುತ್ತಿದ್ದ ನಾವು, ಇಂದು ನಾವೇ ಹಬ್ಬದ ಅಡುಗೆ ಮಾಡಿ ಎಲ್ಲರಿಗೂ ಬಡಿಸುವವರಾಗಿದ್ದೇವೆ. ಅಂದು ಅಪ್ಪನ ಕೈ ಹಿಡಿದು ಹೋಗುತ್ತಿದ್ದ ನಾವು, ಇಂದು ಮಕ್ಕಳ ಕೈ ಹಿಡಿದು ದೇವಸ್ಥಾನಕ್ಕೆ ಕರೆದೊಯ್ಯುವವರಾಗಿದ್ದೇವೆ. ಅಂದು ಹಬ್ಬವೆಂದರೆ ನಮಗಾಗಿ ಕಾಯುತ್ತಿದ್ದ ಸಂಭ್ರಮ. ಇಂದು ಹಬ್ಬವೆಂದರೆ ಎಲ್ಲರ ಸಂತೋಷದಲ್ಲೂ ನಮ್ಮ ಸಂತೋಷವನ್ನು ಹುಡುಕುವ ಹೊಣೆಗಾರಿಕೆ.
ವಿಚಿತ್ರವೆಂದರೆ, ಅಂದು ಹಬ್ಬದ ಸಡಗರದಲ್ಲಿ ಕಳೆದುಹೋದ ನಮಗೆ ಆ ಕ್ಷಣಗಳ ಮೌಲ್ಯ ತಿಳಿದಿರಲಿಲ್ಲ. ಇಂದು ಅವೇ ಕ್ಷಣಗಳನ್ನು ನೆನಪಿಸಿಕೊಳ್ಳಲು ಮನಸ್ಸು ಹಾತೊರೆಯುತ್ತದೆ. ಅಂದು ನಮ್ಮೊಂದಿಗೆ ನಕ್ಕು, ನಮ್ಮ ಸಂತೋಷಕ್ಕೆ ಕಾರಣವಾಗಿದ್ದ ಕೆಲವರು ಇಂದು ನಮ್ಮೊಂದಿಗಿಲ್ಲ. ಕಾಲನ ಚಕ್ರಕ್ಕೆ ಸಿಕ್ಕಿ ಕಣ್ಮರೆಯಾಗಿದ್ದಾರೆ. ಕೆಲವರು ದೂರದ ಊರುಗಳಲ್ಲಿ ಬದುಕುತ್ತಿದ್ದಾರೆ. ಮತ್ತೆ ಕೆಲವರು ನೆನಪುಗಳಲ್ಲಷ್ಟೇ ಉಳಿದಿದ್ದಾರೆ.
ಹಿಂದಿನಂತೆಯೇ ಇಂದಿಗೂ ದಸರಾ ಬರುತ್ತದೆ. ಖುಷಿಯ ಹೊತ್ತು ತರುತ್ತದೆ. ಮನೆ ಮನೆಗಳಲ್ಲಿ ದೀಪಗಳು ಬೆಳಗುತ್ತವೆ. ಹೊಸ ಬಟ್ಟೆಗಳು ಬರುತ್ತವೆ. ಸಿಹಿತಿಂಡಿಗಳು ತಯಾರಾಗುತ್ತವೆ. ಬನ್ನಿ ವಿನಿಮಯವಾಗುತ್ತದೆ. ಆದರೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಆ ಹಳೆಯ ದಸರಾವನ್ನು ಹುಡುಕುವ ಪುಟ್ಟ ಮಗು ಇನ್ನೂ ಜೀವಂತವಾಗಿದೆ. ಆ ಮಗುವಿಗೆ ಮತ್ತೆ ಅದೇ ಅಂಗಳದಲ್ಲಿ ಓಡಾಡಬೇಕು. ಅಮ್ಮನ ಮಡಿಲಲ್ಲಿ ಕುಳಿತುಕೊಳ್ಳಬೇಕು. ಅಪ್ಪನ ಕೈ ಹಿಡಿದು ಜಾತ್ರೆಗೆ ಹೋಗಬೇಕು. ಯಾವ ಚಿಂತೆಯೂ ಇಲ್ಲದೆ ಗೆಳೆಯರೊಂದಿಗೆ ನಗಬೇಕು. ಕಾಲವನ್ನು ಅಲ್ಲಿಯೇ ನಿಲ್ಲಿಸಿ, ಆ ಮುಗ್ಧ ಕ್ಷಣಗಳಲ್ಲೇ ಶಾಶ್ವತವಾಗಿ ಉಳಿದುಬಿಡಬೇಕು ಎಂಬ ಆಸೆ.
ನೆನಪುಗಳಿಗಿರುವ ಸೌಂದರ್ಯವೇ ಅಂಥದ್ದು. ಅವು ನಮ್ಮನ್ನು ಮತ್ತೆ ಬಾಲ್ಯಕ್ಕೆ ಕರೆದೊಯ್ಯುತ್ತವೆ; ಆದರೆ ಅಲ್ಲಿಯೇ ಉಳಿಯಲು ಬಿಡುವುದಿಲ್ಲ. ಈಗಲೂ ದಸರಾ ಬಂದಾಗ ಮನಸ್ಸು ಸಂಭ್ರಮಿಸುತ್ತದೆ. ಆದರೆ ಆ ಸಂಭ್ರಮದ ಹಿಂದೆಯೇ ಒಂದು ಸಣ್ಣ ನೋವು ಮೌನವಾಗಿ ಕುಳಿತಿರುತ್ತದೆ. ಅದು ಬಾಲ್ಯವನ್ನು ಕಳೆದುಕೊಂಡೆವು ಎನ್ನುವ ನೋವಷ್ಟೇ ಅಲ್ಲ, ಆ ಬಾಲ್ಯದಲ್ಲಿ ನಾವು ಅರಿಯದೆಯೇ ಅನುಭವಿಸಿದ ಅಪಾರ ಸಂತೋಷವನ್ನು ಮತ್ತೆಂದೂ ಅದೇ ರೀತಿಯಲ್ಲಿ ಅನುಭವಿಸಲು ಸಾಧ್ಯವಿಲ್ಲವಲ್ಲ ಎಂಬ ಅರಿವಿನ ನೋವು ಆಷ್ಟೇ.

ಹಾಗಂತ ಇಂದು ಈಗ ಇಷ್ಟಾದರೂ ಸಿಕ್ಕ ಸಂತೋಷವನ್ನು ಕಳೆದುಕೊಳ್ಳಲು ಸಾಧ್ಯವೇ.. ಅದನ್ನು ತಂದುಕೊಟ್ಟ ದಸರೆಗೆ ಋಣಿಯಾಗದೆ ಇರುವುದು ಹೇಗೆ… ಬನ್ನಿ ಮುಡಿದ ಎಲ್ಲರ ಬಾಳೂ ಬಂಗಾರವಾಗಲಿ
ಬನ್ನಿ ಬಂಗಾರವಾಗಲಿ
ಬಾಳು ಸಿಹಿಯಾಗಿರಲಿ
ಪ್ರೀತಿ ಪವಿತ್ರವಾಗಿರಲಿ
ಸ್ನೇಹ ಚಿರಕಾಲವಿರಲಿ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”

