ಹೆಣ್ಣಾದವಳು ತೆಳ್ಳಗೆ ಬೆಳ್ಳಗೆ ಬಳುಕಬೇಕು ಎನ್ನುವುದು ಯಾರ ಕಣ್ಣಿನ ಹಿತಕ್ಕೋಸ್ಕರ? ಚರ್ಮದ ಬಣ್ಣದ ನೆಲೆಯಲ್ಲಿ ಅಂತೂ ಅದು ಇನ್ನಷ್ಟು ಘೋರ. ಕಪ್ಪು ಬಣ್ಣದವರಿಗೆ ಇನ್ನಿಲ್ಲದಂತ ಕೀಳರಿಮೆಯನ್ನು ಹುಟ್ಟಿಸಿದ್ದರ ಫಲವಾಗಿ ಫೇರ್ ಅಂಡ್ ಲವ್ಲಿ ಎಂಬ ಕಂಪೆನಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಾಪಾರಗಳಲ್ಲಿ ಒಂದಾಗಿ ಹೋಗಿದ್ದು ನಮ್ಮೆದುರಿನ ವಾಸ್ತವ. ಒಮ್ಮೆ ನನ್ನ ಸಹೋದ್ಯೋಗಿ ತಮ್ಮ ಮಗನಿಗೆ ಸಿಕ್ಕ ಹೆಣ್ಣಿನ ಬಗ್ಗೆ ಹೇಳುತ್ತಾ, ‘ಸ್ವಲ್ಪ ಕಪ್ಪಿದಾಳೆ, ಆದರೂ ಪರವಾಗಿಲ್ಲ, ಲಕ್ಷಣವಿದೆ,’ ಎಂದಾಗ ವಿದ್ಯಾವಂತ, ಪ್ರಜ್ಞಾವಂತ ಹೆಣ್ಮಕ್ಕಳೂ ಸಹ ಅದೇ ಹಳಸಲು ಮಂತ್ರವನ್ನ ಪಠಿಸುತ್ತಾರಲ್ಲ ಅಂತ ಆಶ್ಚರ್ಯವಾಗಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತಾರನೆಯ ಬರಹ
ಹೆಣ್ಣು ನೋಡಲು ಹೋಗುವ ಮಂದಿಯೆಲ್ಲ ಆಕೆಗೆ ಅಡಿಗೆ ಬರುತ್ತಾ ಎಂಬ ಪ್ರಶ್ನೆಯನ್ನು ಕೇಳದಿದ್ದರೂ ಸಹ ತಲೆಯಲ್ಲಿ ಹೊತ್ತಿರುತ್ತಾರೆ. ಮದುವೆ ಎಂಬ ಸಂಸ್ಥೆ ಬದುಕಿ ಉಳಿಯುವುದೇ ಅಡಿಗೆ ಎಂಬ ಕಲೆಯ ಮೇಲೆ. The best way to a man’s heart is through his stomach ಎಂದು ಸಹ ಬಿಡುಬೀಸಾಗಿ ಹೇಳಲಾಗುತ್ತೆ. Fay Weldon ಎಂಬ ಇಂಗ್ಲಿಷ್ ಬರಹಗಾರ್ತಿಯ The Fat Woman’s Joke ಎಂಬ ತುಂಬ ಆಸಕ್ತಿ ಹುಟ್ಟಿಸುವ ಕಾದಂಬರಿ ಹೆಣ್ತನ, ಅಡಿಗೆ, ಮದುವೆ ಸಂಬಂಧ ಇತ್ಯಾದಿಗಳ ಸುತ್ತ ಹೆಣೆದ ಕಾದಂಬರಿ. ಅಡಿಗೆಯೆನ್ನುವುದು ಮದುವೆಯನ್ನು ಗಟ್ಟಿಗೊಳಿಸುವಂತೆಯೇ ಹೊಡೆದು ಉರುಳಿಸಬಲ್ಲದು ಎನ್ನುವುದನ್ನು ಸಹ ಹೇಳುತ್ತದೆ.
ಅದರ ಪ್ರಧಾನ ಪಾತ್ರ ಎಸ್ತರ್ ನಡುವಯಸ್ಕೆ. ಗಂಡನನ್ನು ತೊರೆದು ಒಂಟಿಯಾಗಿ ಬದುಕುತ್ತಿದ್ದಾಳೆ. ಈಗ ಕೇಕ್ ತಿನ್ನುತ್ತಾಳೆ; ಇನ್ನೈದು ನಿಮಿಷಕ್ಕೆ ಟಬ್ಬುಗಟ್ಟಲೆ ಐಸ್ ಕ್ರೀಮ್ ನುಂಗುತ್ತಾಳೆ. ಇದು ನನ್ನ ರಜಾಕಾಲ, ಮಜಾಕಾಲ ಎಂದು ತನ್ನನ್ನು ನೋಡಲು ಬಂದ ಕಿರಿಯ ಗೆಳತಿ ಫಿಲ್ಲಿಸ್ ಹತ್ತಿರ ಹೇಳಿ ಬೆಚ್ಚಿಬೀಳಿಸುತ್ತಾಳೆ. ಹೊರಬೇಕು, ಹೆರಬೇಕು, ಅಡಿಗೆ ಮಾಡಬೇಕು ಇತ್ಯಾದಿ ಇತ್ಯಾದಿಗಳ ನಡುವೆಯೇ ಗಂಡನಲ್ಲಿ ಬಯಕೆ ಹುಟ್ಟಿಸಬಲ್ಲ ಆಕರ್ಷಣೆಯನ್ನೂ ಉಳಿಸಿಕೊಳ್ಳಬೇಕು, ಎಂಥಾ ಕರ್ಮ ನೋಡು! ಎನ್ನುವ ಎಸ್ತರ್ ಈಗ ಎಲ್ಲಾ ಅಭದ್ರತೆಗಳನ್ನು ತೊರೆದು ಅನಿಕೇತನವಾಗಿರುವ ಹೆಣ್ಣು. ಏನನ್ನೂ ಕಳೆದುಕೊಳ್ಳುವ ಭಯವಿಲ್ಲದೆ ಹಾಯಾಗಿ ತಿನ್ನುವುದೇ ನಿರ್ವಾಣ ಎಂಬಂತಹ ಸ್ಥಿತಿಯನ್ನು ತಲುಪಿದವಳು. ಗಂಡ, ಮಕ್ಕಳಾ? ಅಯ್ಯಮ್ಮ! ನನ್ನ ಕೌಟುಂಬಿಕ ಬದುಕಿನ ನೆಲ ಕುಸಿಯುತ್ತಿದೆಯೇ? ಕಂಬ ಸಡಿಲಾಯಿತೆ? ಸೂರು ಸೋರುತ್ತಿದೆಯೇ? ಇತ್ಯಾದಿ ಅಭದ್ರತೆಗಳಲ್ಲಿ ನರಳಿ ನರಳಿ ಬೇಸತ್ತು ಹೋಗಿದ್ದೆ. ಮತ್ತೆ ಮರಳುವ ಧೈರ್ಯವಿಲ್ಲ. ಇದು ನನ್ನ ಬದುಕಿನ ನಿಜವಾದ ಹನಿಮೂನು!’ ಎಂದು ಎಸ್ತರ್ ಮೂಲಕ ಹೇಳಿಸುವ ವೆಲ್ಡನ್ ಸೌಂದರ್ಯ, ಲೈಂಗಿಕ ಆಕರ್ಷಣೆ, ಬದುಕಿನ ಸಂತೋಷ ಇವೆಲ್ಲವೂ ಪರಸ್ಪರ ತಳುಕು ಹಾಕಿಕೊಂಡಿರುತ್ತವೆ ಎಂಬ ಭ್ರಮೆಗಳನ್ನು ಹಲವು ಸ್ತರಗಳಲ್ಲಿ ಚಿಂದಿ ಚೂರು ಮಾಡುತ್ತಾಳೆ. ಹೆಣ್ಮಕ್ಕಳೆಲ್ಲರೂ ಓದಲೇಬೇಕಾದ ಕೃತಿ ಅದು.
*****
ಈಗ್ಗೆ ಒಂದೆರಡು ವರ್ಷಗಳ ಹಿಂದೆ ಹಳೆಯ ಸ್ನೇಹಿತನೊಬ್ಬನನ್ನು ಭೇಟಿಯಾಗಿದ್ದೆ. ಮಕ್ಕಳ ಸಾಹಿತ್ಯದ ಮೇಲೆ ವಿಚಾರ ಸಂಕಿರಣವನ್ನು ಏರ್ಪಡಿಸುವ ಇರಾದೆಯಿತ್ತು. ಪ್ರೊಫೆಸರ್ ಆಗಿದ್ದ ಆತನಿಗೆ ಸ್ಥಳೀಯರ ಜೊತೆ ಸಂಪರ್ಕವಿತ್ತು ಎಂಬ ಒಂದೇ ಕಾರಣಕ್ಕೆ ಫೋನಾಯಿಸಿದ್ದೆ. ಬೆಳಗಿನ ಉಪಹಾರಕ್ಕೆ ಒಂದು ಕಡೆ ಭೇಟಿಯಾಗುವ ಉದ್ದೇಶವಿತ್ತು. ಆತ ಥ್ರೀ ಪೀಸ್ ಸೂಟಿನಲ್ಲಿ, ಗಾಗಲ್ಸ್ ಏರಿಸಿಕೊಂಡು ಬಂದಿಳಿದಾಗ ಸಿಕ್ಕಾಪಟ್ಟೆ ಆಶ್ಚರ್ಯವಾಗಿತ್ತು. ಹೊರಗೊಮ್ಮೆ ಕಣ್ಣು ಹಾಯಿಸಿದೆ. ಮೋಡ ಕವಿದ ವಾತಾವರಣವಿತ್ತು. ಬೇರೆ ಎಲ್ಲಾದರೂ ಹೋಗುತ್ತಿದ್ದೀಯಾ ಮಾರಾಯ ಅಂತ ಸಹ ಕೇಳಿದೆ. ಇಲ್ಲವಂತೆ. ಹಳೆಯ ಸ್ನೇಹಿತೆಯನ್ನು ನೋಡಲು ಸಾರ್ಕ್ ಮೀಟಿಂಗಿಗೆ ಹೋಗುವಂತೆ ಕಾಣಿಸಿಕೊಳ್ಳಬೇಕೆ ಅಂತ ಒಳಗೊಳಗೆ ಅಚ್ಚರಿಪಟ್ಟಿದ್ದೆ.

ನಾವು ನಮ್ಮದೇ ವೈಯುಕ್ತಿಕ ಕಾರಣಗಳಿಗೆ ಸಾಮಾಜಿಕ ನೆಲೆಯಲ್ಲಿ ಹೇಗೆ ಕಾಣಿಸಿಕೊಳ್ಳಬೇಕೆಂದು ನಿರ್ಧರಿಸುತ್ತೇವೆ. ಕನಿಷ್ಠ ಪ್ರಮಾಣದ ಬಟ್ಟೆಯಲ್ಲಿ ಕಾಣಿಸಿಕೊಳ್ಳುವುದು ಗಾಂಧೀಜಿಯವರ ಮಟ್ಟಿಗೆ ಸರಳತೆಯ ಪರಿಕಲ್ಪನೆಯಂತೆ ತೋರಬಹುದು. ‘ಮೊಳ ಕಾಲ್ಮೇಲೆ ಪಂಚೆಯನುಟ್ಟು ವಾಕಿಂಗ್ ಹೋಗ್ತಿದ್ರು ಮಹಾತ್ಮ ಗಾಂಧಿ’ ಎಂದು ಲಾವಣಿ ಹಾಡುವ ಶೈಲಿಯಲ್ಲಿ ಬಾಲ್ಯದಲ್ಲಿ ಹಾಡಿದ್ದರ ನೆನಪಿದೆ. ಆದರೆ ಸರಳತೆ ಎನ್ನುವುದು ಸಹ ಒಂದು ಸಾಮಾಜಿಕ ಲಕ್ಷುರಿಯೇ ಎಂಬ ಎಚ್ಚರವಿದ್ದಾಗ ಬಾಪೂರಿಗೆ ಇದ್ದ ಜಾತಿ-ವರ್ಗಗಳ ಸವಲತ್ತನ್ನು ನಾವು ಕಡೆಗಣಿಸಬಾರದು. ಫ್ಯಾಬ್ ಇಂಡಿಯಾ ಎಂಬ ಅಂಗಡಿಗೆ ಹೋಗಿ ನೋಡಿ! ಸಾದಾ ಸರಳ ಅಂತನ್ನಿಸುವ ಕುರ್ತಾಗೆ ಸಾವಿರಾರು ರೂಪಾಯಿಗಳ ಬೆಲೆ! ಸದಾ ಸೂಟಿನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಬಾಬಾ ಅಂಬೇಡ್ಕರ್ ಅವರ ಅಭ್ಯಾಸವನ್ನು ಪಾಶ್ಚಿಮಾತ್ಯ ಮೋಹ ಎಂದು ಉಡಾಫೆಯಿಂದ ನೋಡದೆ ನಮ್ಮಲ್ಲಿರುವ ಜಾತಿಯೆಂಬ ಮಹಾರೋಗದ ಲಕ್ಷಣಗಳ ನೆಲೆಯಲ್ಲಿ ಅರ್ಥೈಸಿಕೊಳ್ಳುವ ಬೌದ್ಧಿಕ ಪ್ರಾಮಾಣಿಕತೆ ಬೇಕು.
ಹೀಗೆಲ್ಲಾ ಅಂದುಕೊಂಡು ನನ್ನ ಸೂಟುದಾರಿ ಸ್ನೇಹಿತನ ಜೊತೆ ಹರಟೆಗೆ ಇಳಿದೆ. ದಶಕಗಳ ನಂತರ ಆತನನ್ನು ಭೇಟಿಯಾಗಿದ್ದೆ. ಸೇತುವೆಯ ಮೇಲೆ ನಿಂತು ಮಾತಾಡುವಾಗ ಕಳೆದ ವರ್ಷಗಳಲ್ಲಿ ಕೆಳಗೆ ಹರಿದು ಹೋಗಿರುವ ನೀರಿನ ಪ್ರಮಾಣ ಎಷ್ಟು ಅಗಾಧ ಎಂದು ಅಳೆಯುವ ಹುಚ್ಚೂ ಇತ್ತು. ಜಾತಿಯ ಕಾರಣಕ್ಕೇ ತಪ್ಪಿ ಹೋದ ಹಲವಾರು ಅವಕಾಶಗಳ ಬಗ್ಗೆ ಆತ ಮಾತಾಡುವಾಗ ಹಿಂದಿದ್ದ ನೋವು ನನ್ನನ್ನು ಕಲಕಿತ್ತು. ಆತನೊಬ್ಬ ಬುದ್ಧಿವಂತ. ಚರ್ಚೆಗಳ ನಡುವೆ ತಟ್ಟನೆ ಏನೇನೋ ಒಳನೋಟಗಳನ್ನು ಹೊಳೆಯಿಸುವ ಶಕ್ತಿಯಿದ್ದವ. ಇಷ್ಟಾದರೂ ನಮ್ಮ ಯೋಗ್ಯತೆ ಬೆಳಕಿಗೆ ಬರಲು ಈ ಸಮಾಜದಲ್ಲಂತೂ ಜಾತಿಯ ಪೀಡೆ ಅಷ್ಟು ಸುಲಭವಾಗಿ ಬಿಡಬೇಕಲ್ಲ!
ಉಪಹಾರದ ನೆಪದಲ್ಲಿ ಏನು ತಿನ್ನುತ್ತೀಯ ಎಂದು ಲೋಕಾಭಿರಾಮ ಕೇಳಿದೆ. ಏನೂ ಬೇಡವಂತೆ, ಕಾಫಿ ಸಾಕಂತೆ. ನನಗೆ ಮಾತ್ರ ರವಗುಡುವ ಹಸಿವು. ಒಂದು ಜಂಬೋ ಉಪಹಾರ ತರಲು ಹೇಳಿ ಗಬಗಬನೆ ತಿನ್ನಹತ್ತಿದ್ದೆ. ಆತ, ‘ನೀನ್ಯಾಕೆ ಹೀಗೆ ಕಡುಬಿನ ತಪ್ಪಲೆ ತರ ಆಗಿದ್ದೀಯ ಅಂತ ಗೊತ್ತಾಯ್ತು ಬಿಡು,’ ಎಂದಾಗ ಬೆಚ್ಚಿಬಿದ್ದು ಅವನ ಕಡೆ ನೋಡಿದೆ. ‘ಅಲ್ಲಮ್ಮ, ತೊಂಬತ್ತರ ದಶಕದಲ್ಲಿ ನಾವು ಒಟ್ಟಿಗೆ ಕೋರ್ಸ್ ಮಾಡುತ್ತಿದ್ದಾಗ ನೀನು ನೋಡಲು ಎಷ್ಟು ಸ್ಮಾರ್ಟ್ ಇದ್ದೀ! ಈಗ ಏನು ಹೀಗೆ ಧಡೂತಿಯಾಗಿಬಿಟ್ಟೆ?’ ಎಂದಾಗ ಕಕ್ಕಾಬಿಕ್ಕಿಯಾಗಿ ಒಂದೆರಡು ಗಳಿಗೆ ಮಾತೆ ಹೊರಡಲಿಲ್ಲ.
ಇದನ್ನು body shaming ಅಂತ ಕರೆಯುತ್ತಾರೆ. ಇದಕ್ಕೆ ಪಕ್ಕಾಗುವವರು ಹೆಚ್ಚಾಗಿ ಹೆಂಗಸರೇ. ಗಂಡಸರನ್ನು ಇದು ಬಾಧಿಸುವುದಿಲ್ಲ ಅಂತೇನೂ ಇಲ್ಲ. ಕರಿಯ, ಕುಂಟ, ಲಂಬೂ, ದಡಿಯ, ಗೂನ, ಚಾರ್ ಐಸ್, ಇತ್ಯಾದಿ ಇತ್ಯಾದಿ ದೇಹದ ನೆಲೆಯಲ್ಲಿ ವ್ಯಕ್ತಿಯನ್ನು ಗುರುತಿಸಿ ಲೇವಡಿಸುವ ಅಭ್ಯಾಸ ಸಹಜವೇನೋ ಅಂತನ್ನಿಸುವಷ್ಟು ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಕಬಳಿಸಿ ನಿಂತಿದೆ. ಆದರೆ ಹೆಣ್ಣನ್ನು ಯಾವ ರೀತಿಯಲ್ಲೂ ಒಬ್ಬ ವ್ಯಕ್ತಿಯೆಂದು ಗುರುತಿಸದೆ ಕೇವಲ ದೇಹಕ್ಕೆ ಇಳಿಸುವ ಸಮಾಜದಲ್ಲಿ ಅದು ಇನ್ನಷ್ಟು ಘೋರ. ‘ಕರಮಿ, ಡುಮ್ಮಿ, ನೀನ್ಯಾರು ಮದುವೆ ಮಾಡ್ಕೋತಾರೆ?’ ಅಂತ ನನ್ನ ಹತ್ತಿರದ ಬಂಧುವಿನ ಹತ್ತು ವರ್ಷದ ಮಗ ಅವನ ಅಕ್ಕನಿಗೆ ಬೈದಾಗ ಒಂದು ಬಿಗಿದು, ‘ನಿಮ್ಮಪ್ಪಾಮ್ಮ ಹೇಳಿರಬಹುದಾದ ಮಾತನ್ನ ನೀನು ಬಾಯಿಪಾಠ ಮಾಡಿದಂತೆ ಒಪ್ಪಿಸಿದ್ದಕ್ಕೆ ಒಬ್ಬ ಟೀಚರಿನಿ ಕೊಟ್ಟ ಗೂಸಾ ಇದು ಅಂತ ಹೋಗಿ ದೂರು ಹೇಳು ಬೇಕಿದ್ದರೆ,’ ಎಂದು ಅಟ್ಟಿದ್ದೆ.
ಈಗ ಒಬ್ಬ ಪ್ರೊಫೆಸರ್ ನನ್ನನ್ನು ಡುಮ್ಮಿಯೆಂದು ಬಿಡುಬೀಸಾಗಿ ಕರೆಯುವ ಸಾಹಸ ಮಾಡಿದ್ದ! ಜಾತಿಯ ನೆಪದಲ್ಲಿ ಆಗಿರುವ ಅನ್ಯಾಯ ಇವನ ಪ್ರಜ್ಞೆಗೆ ದಕ್ಕಬಲ್ಲದು. ಜೆಂಡರ್ ನೆಲೆಯಲ್ಲಿ ನನ್ನನ್ನು ಕೇವಲ ದೇಹಕ್ಕೆ ಇಳಿಸುವಾಗ ಇವನಿಗೆ ಏನೂ ಅನ್ನಿಸುವುದಿಲ್ಲ! ಆ ದಿನ ನನಗೆ ಆದ ಆಘಾತದಲ್ಲಿ ಹೆಚ್ಚಿಗೆ ಹೇಳಲಾಗಿರಲಿಲ್ಲ. ನಂತರ ಉತ್ತರದ ಯಾವುದೋ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿದ್ದೇನೆ ಎಂದು ಫೋನ್ ಮಾಡಿದಾಗ ಅಭಿನಂದಿಸುತ್ತಲೇ ನನ್ನನ್ನು ಕಡುಬಿನ ತಪ್ಪಲೆ ಎಂದ ಥ್ರೀಪೀಸ್ ಸೂಟಿನ ಜೋಕರ್ ಅಲ್ಲವಾ ನೀನು ಎಂದು ಹೇಳಿ ಸೇಡು ತೀರಿಸಿಕೊಂಡಿದ್ದೆ.
ವರ್ಷಗಳ ಹಿಂದೆ ಒಬ್ಬ ಕಿರಿಯ ಸ್ನೇಹಿತನನ್ನ ವಾರಕ್ಕೊಂದು ಬಾರಿ ಬೆಳಗಿನ ಉಪಹಾರದ ನೆಪದಲ್ಲಿ ಭೇಟಿ ಮಾಡುತ್ತಿದ್ದೆ. ಒಮ್ಮೆ ಆತ, ‘ನೀವು ಸಾಮಾನ್ಯವಾಗಿ ತಟ್ಟೆಯಲ್ಲಿ ಏನನ್ನೂ ಉಳಿಸುವುದಿಲ್ಲ ತಾನೇ?’ ಎಂದು ಕೇಳಿದಾಗ ಯಾಕೆ ಈ ಪ್ರಶ್ನೆ ಎಂದು ಹುಬ್ಬೇರಿಸಿದ್ದೆ. ‘ಅಲ್ಲಾ, ಸಾಮಾನ್ಯವಾಗಿ ಹೆಂಗಸರು ಸೂಕ್ಷ್ಮವಾಗಿ ತಿನ್ನುತ್ತಾರೆ. ತಟ್ಟೆಯಲ್ಲಿ ಸ್ವಲ್ಪ ಉಳಿಸಲು ಹಿಂಜರಿಯುವುದಿಲ್ಲ, ನೀವು ಬಿಡಿ!’ ಅಂತ ಉಡಾಫೆಯಿಂದ ನಕ್ಕಾಗ ಕೋಪ ನೆತ್ತಿಗೇರಿತ್ತು. ದಪ್ಪವಿದ್ದವರು ತಟ್ಟೆಯಲ್ಲಿ ಏನೂ ಬಿಡದೆ ಎಲ್ಲವನ್ನೂ ತಿನ್ನುತ್ತಾರೆ, ಅಥವಾ ಹಾಗೆ ತಿನ್ನುವುದರಿಂದಲೇ ದಪ್ಪಗಿರುತ್ತಾರೆ ಎಂಬ ಕುಹಕವಿದ್ದಂತೆ ಅನ್ನಿಸಿತು. ಅನ್ನವನ್ನು ವ್ಯರ್ಥ ಮಾಡಬಾರದು ಎಂಬ ಶಿಸ್ತಿನಂತೆ ಅದು ಆತನಿಗೆ ಕಾಣಿಸುವುದಿಲ್ಲ. ‘ಯೋ, ಇಷ್ಟು ಸಲ ತಿಂದಿದೀಯ, ಎಷ್ಟು ಸಲ ಬಿಲ್ಲು ಕೊಟ್ಟಿದೀಯ, ಲೆಕ್ಕ ಹಾಕು ನೋಡೋಣ? ಹೆಚ್ಚಿನಂಶ ನಾನು ಕೊಡುವ ಬಿಲ್ಲಿನಲ್ಲಿ ತಿನ್ನುವ ನೀನು, ತಟ್ಟೆಯಲ್ಲಿ ನಾನೇನೂ ಉಳಿಸುವುದಿಲ್ಲ ಎಂದು ಲೇವಡಿಸುವ ಧೈರ್ಯನಾ ನಿಂಗೆ?’ ಎಂದು ಮುಖದ ನೀರಿಳಿಸಿದ್ದೆ. ಹಸಿವಾಗಿದ್ದರೂ ಸಹ ಹೆಣ್ಣು ಗಬಗಬನೆ ತಿನ್ನಬಾರದು, ಡೆಲಿಕೇಟ್ ಡಾರ್ಲಿಂಗ್ ತರಹ ಸ್ಟೈಲಾಗಿ ತಿನ್ನಬೇಕು, ಅರ್ಧಂಬರ್ಧ ತಟ್ಟೆಯಲ್ಲೇ ಉಳಿಸಬೇಕು… ಇವೆಲ್ಲ ಮಧ್ಯಮವರ್ಗೀಯ ಹೆಣ್ತನದ ಮೌಲ್ಯಗಳಾ?
ಹೆಣ್ಣಾದವಳು ತೆಳ್ಳಗೆ ಬೆಳ್ಳಗೆ ಬಳುಕಬೇಕು ಎನ್ನುವುದು ಯಾರ ಕಣ್ಣಿನ ಹಿತಕ್ಕೋಸ್ಕರ? ಚರ್ಮದ ಬಣ್ಣದ ನೆಲೆಯಲ್ಲಿ ಅಂತೂ ಅದು ಇನ್ನಷ್ಟು ಘೋರ. ಕಪ್ಪು ಬಣ್ಣದವರಿಗೆ ಇನ್ನಿಲ್ಲದಂತ ಕೀಳರಿಮೆಯನ್ನು ಹುಟ್ಟಿಸಿದ್ದರ ಫಲವಾಗಿ ಫೇರ್ ಅಂಡ್ ಲವ್ಲಿ ಎಂಬ ಕಂಪೆನಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಾಪಾರಗಳಲ್ಲಿ ಒಂದಾಗಿ ಹೋಗಿದ್ದು ನಮ್ಮೆದುರಿನ ವಾಸ್ತವ. ಒಮ್ಮೆ ನನ್ನ ಸಹೋದ್ಯೋಗಿ ತಮ್ಮ ಮಗನಿಗೆ ಸಿಕ್ಕ ಹೆಣ್ಣಿನ ಬಗ್ಗೆ ಹೇಳುತ್ತಾ, ‘ಸ್ವಲ್ಪ ಕಪ್ಪಿದಾಳೆ, ಆದರೂ ಪರವಾಗಿಲ್ಲ, ಲಕ್ಷಣವಿದೆ,’ ಎಂದಾಗ ವಿದ್ಯಾವಂತ, ಪ್ರಜ್ಞಾವಂತ ಹೆಣ್ಮಕ್ಕಳೂ ಸಹ ಅದೇ ಹಳಸಲು ಮಂತ್ರವನ್ನ ಪಠಿಸುತ್ತಾರಲ್ಲ ಅಂತ ಆಶ್ಚರ್ಯವಾಗಿತ್ತು. ಬೆಳ್ಳಗಿಲ್ಲದಿದ್ದರೆ ಕರಮಿ, ಸ್ವಲ್ಪ ದಪ್ಪಗಿದ್ದರೆ ಕಡುಬಿನ ತಪ್ಪಲೆ, ಎತ್ತರವಿದ್ದರೆ ಒಂಟೆ, ಸ್ವಲ್ಪ ಕಣ್ಣು ಆಚೀಚೆ ಇದ್ದರೂ ಮೆಳ್ಳಗಣ್ಣಿ, … ಒಂದೇ, ಎರಡೇ? ಮಾನಸಿಕ ಖಿನ್ನತೆಯಿಂದ ಬಳಲುವ ಹೆಚ್ಚಿನಂಶ ಹೆಣ್ಮಕ್ಕಳಲ್ಲಿ ಬಾಡಿ ಶೇಮಿಂಗ್ ಒಂದು ಬಹುಮುಖ್ಯ ಕಾರಣ ಎನ್ನುತ್ತವೆ ಹಲವಾರು ಅಧ್ಯಯನಗಳು.
*****
ಈಗ್ಗೆ ಒಂದೆರಡು ದಶಕಗಳ ಹಿಂದೆ ಬೆಂಗಳೂರಿನ ಜಯನಗರದ ಅಂಗಡಿಯಿಂದ ಹೊರಬಂದು ಕಾರು ತೆಗೆಯುತ್ತಿದ್ದಾಗ ಎದುರಾದ ಸನಾತನಿಯೊಬ್ಬ, ‘ಹಣೆಗೆ ಕುಂಕುಮವಿಟ್ಟುಕೊಳ್ಳುವುದನ್ನು ಕಲಿಯಿರಿ, ಅದು ನಮ್ಮ ಸಂಸ್ಕೃತಿಯ ಲಕ್ಷಣ,’ ಎಂದಾಗ ಕೋಪ ರೊಯ್ಯನೆ ತಲೆಗೇರಿತ್ತು. ಏಕವಚನದಲ್ಲಿ, ‘ಧೋತಿ ನಮ್ಮ ಸಂಸ್ಕೃತಿಯಲ್ಲವಾ? ನೀನ್ಯಾಕೆ ಪ್ಯಾಂಟ್ ಹಾಕಿಕೊಂಡಿದೀ?’ ಎಂದು ಕೇಳಿ ಆತನ ಮುಖ ಕೆಂಪಾಗಿತ್ತು. ನಾನು ಕಾರನ್ನು ಸ್ಟಾರ್ಟ್ ಮಾಡಿ, ಹೋಗಲೇ ತಿರುಬೋಕಿ! ಎಂಬ ದೃಷ್ಟಿಯನ್ನು ಬೀರಿ ರೊಯ್ಯನೆ ಸಾಗಿದ್ದೆ. ಇನ್ನೊಮ್ಮೆ ಚಾಮುಂಡಿ ಬೆಟ್ಟ ಹತ್ತುತ್ತಿದ್ದ ನನ್ನ ಸ್ನೇಹಿತೆಗೆ ಎದುರಾದ ಇಂಥದೇ ಪ್ರಾಣಿ, ‘ದುಪಟ್ಟಾ ಹಾಕಿಕೊಳ್ಳಲು ಆಗಲ್ಲವಾ?’ ಅಂತ ಕೇಳಿದನಂತೆ. ಅರೆನಿಮಿಷ ಕಕ್ಕಾಬಿಕ್ಕಿಯಾದ ಆಕೆ ಸಾವರಿಸಿಕೊಂಡು, ‘ನಾನು ಎರಡು ಮಕ್ಕಳನ್ನ ಹೆತ್ತಿದೀನಿ, ಹಾಲು ಕುಡಿಸಿ ಬೆಳೆಸಿದೇನಿ. ನೀನು ಲೈಫಲ್ಲಿ ಅಂತದ್ದೇನೂ ಮಾಡಿಲ್ಲ. ಆದರೂ ಈ ಮಟ್ಟಿಗೆ ಹೊಟ್ಟೆ ಬೆಳೆಸಿಕೊಂಡಿದೀಯಲ್ಲ? ನಾಚಿಕೆಯಾಗಲ್ವಾ ನಿಂಗೆ?’ ಅಂತ ತರಾಟೆಗೆ ತೆಗೆದುಕೊಂಡಿದ್ದಕ್ಕೆ ಮರುಗಳಿಗೆಯೇ ಆತ ಪರಾರಿ. ದಾರಿಯಲ್ಲಿ ಸಿಕ್ಕ ಹೆಂಗಸರನ್ನು ಸಹ ನಿಯಂತ್ರಿಸುವ ಹಕ್ಕು ತನಗಿದೆ ಎಂಬ ಈ ತಿರುಬೋಕಿತನ ಯಾವ ಸಾಮಾಜಿಕ ಬದಲಾವಣೆಗಳಿಂದ ಬಂದಿದ್ದು? ತೊಂಬತ್ತರ ದಶಕದಿಂದಲೆ? ಟಿವಿ ರಾಮಾಯಣದ ನಂತರವೆ? ಅಯೋಧ್ಯೆಯ ತರುವಾಯದಲ್ಲೆ?

ಮನೆಯ ಅಡಿಗೆಮನೆಗಿಂತ ಹೆಚ್ಚು ಸ್ವಚ್ಛವಿರುವ ಮೈಸೂರಿನ ಒಂದು ಹೋಟೆಲ್ ನನ್ನ ಇಷ್ಟದ್ದು. ಕಳೆದ ವಾರ ಉಪಹಾರಕ್ಕೆಂದು ಹೋಗಿದ್ದೆ. ಕೌಂಟರಿನಲ್ಲಿದ್ದ ನನ್ನ ಪರಿಚಯಸ್ಥ ಕಿರಿಯನ ಜೊತೆ ಹರಟೆ ಹೊಡೆಯುತ್ತಾ ನಿಂತಿದ್ದು ಏನಕ್ಕೊ ಅಹಹಾ ಅಂತ ನಗುತ್ತಿದ್ದಾಗ ಹಿಂದೆಯಿಂದ ‘you are so beautiful!’ ಅಂತ ಹೇಳಿದ್ದು ಕೇಳಿಸಿತ್ತು. ತಿರುಗಿದರೆ ಒಬ್ಬ ಬಿಳಿಕೂದಲಿನ ಚೆಂದದ ಹೆಂಗಸು. ‘ಯಾಕೆ ಹಾಗೆ ಹೇಳಿದ್ರಿ?’ ಅಂತ ಸ್ವಲ್ಪ ವಿಸ್ಮಯದಿಂದಲೇ ಕೇಳಿದೆ. ಸೌಂದರ್ಯಕ್ಕೂ ಯೌವ್ವನಕ್ಕೂ ತಳುಕು ಹಾಕುವ ಮಂದಿ ತಾನೇ ನಾವು? ‘ಸುಮ್ಮನೆ!’ ಅಂತ ನಕ್ಕರು. ಸುಮ್ಮನೆಯಾ ಅಂತ ಪೆಕರು ಪೆಕರಾಗಿ ನೋಡಿದರೆ ಮತ್ತೊಮ್ಮೆ ನಕ್ಕರು. ‘ಇಲ್ಲ, ಆಗಿಂದ ಗಮನಿಸುತ್ತಿದ್ದೆ. ನಿಮ್ಮ ಆತ್ಮವಿಶ್ವಾಸ, ಸ್ಪಷ್ಟ ಭಾಷೆ, ಎಲ್ಲ ತುಂಬ ಚೆಂದವೆನ್ನಿಸಿತು,’ ಅಂತ ಅಂದಾಗ ಖುಷಿಯೆನ್ನಿಸಿತು. ತೆಳ್ಳಗೆ ಬೆಳ್ಳಗೆ ಬಳುಕುವ ಯೌವ್ವನ, ಲೈಂಗಿಕ ಆಕರ್ಷಣೆಯನ್ನು ಹುಟ್ಟಿಸುವ ರತಿಮೌಲ್ಯ, ಇತ್ಯಾದಿಗಳು ಇದ್ದರೆ ಮಾತ್ರ ಬದುಕಿನಲ್ಲಿ ಥ್ರಿಲ್ ಇರುತ್ತದೆ ಎಂಬ ಸಿಲ್ಲಿಗಳನ್ನು ಅತ್ತ ತಳ್ಳಿ ಹೆಣ್ಣು ತನ್ನ ಸೌಂದರ್ಯ, ಸಂತೋಷಗಳನ್ನು ಹೊಸದಾಗಿ ಪರಿಕಲ್ಪಿಸಿಕೊಳ್ಳಬೇಕಿದೆ. ನಾನು ನಗುತ್ತಾ ಆಕೆಗೆ ‘We both are beautiful women, indeed!’ ಎಂದಾಗ ಬಾಂಧವ್ಯವೊಂದು ಬೆಸೆದುಕೊಂಡಂತೆ ಅನ್ನಿಸಿತ್ತು!
*****
ಬೌದ್ಧಿಕ ಋಣ
Fay Weldon. The Fat Woman’s Joke. 1967. Available on archive.org



Thank you for writing this. It will move any woman or any sensible man to tears, for sure.