ಈ ಕೃತಿಯಲ್ಲಿ ಎಲ್ಲರನ್ನೂ ಒಳಗೊಂಡು ಮುನ್ನಡೆಯುವ ಅಗಾಧವಾದ ತಾಳ್ಮೆ ಮತ್ತು ಇವೆಲ್ಲ ನೋವಿಗೆ ಕಾರಣವಾಗಿರುವ ತನ್ನಿನಿಯರನ್ನು ದೂರವೇ ಇಡುವ ಸಶಕ್ತ ಹೆಣ್ಣಾಗಿ ಕಾಣಿಸುತ್ತಾಳೆ. ನೂರು ಮಕ್ಕಳನ್ನು ಕಳೆದುಕೊಂಡ ಗಾಂಧಾರಿ, ಮಗನ ಸಾವಿನಿಂದ ನೊಂದ ಸುಭದ್ರೆ, ಯುದ್ಧದಿಂದ ದೂರವಿದ್ದರೂ ಪಂಚಪಾಂಡವರನ್ನು ನುಂಗಿದ ಯುದ್ಧದ ಭೀಕರತೆಗೆ ಸ್ವತಃ ಬಲಿಯಾದ ದ್ರೌಪದಿ, ಕುಂತಿ, ಭಾನುಮತಿ ಎಲ್ಲರೂ ಯುದ್ಧದಿಂದ ನೊಂದವರೇ. ಅವರನ್ನೆಲ್ಲ ಒಂದೆಡೆ ಇರುವಂತೆ ಮಾಡಿದ ದ್ರೌಪದಿ ಇಲ್ಲಿ ಮಾತಿಗಿಂತ ಕ್ರಿಯಶೀಲತೆಗೆ ಹೆಚ್ಚು ಆದ್ಯತೆ ನೀಡಿದ ಪಾತ್ರವಾಗಿ ಮೂಡಿದ್ದಾಳೆ. ಅವಳ ಕರ್ತೃತ್ವಶಕ್ತಿ ಅಸಾಧಾರಣವಾದುದು ಎನ್ನುವ ಭಾವ ನಮ್ಮನ್ನು ತಟ್ಟುತ್ತದೆ.
ಎಂ.ಎಸ್. ವೇದಾ ಕಾದಂಬರಿ ‘ಉತ್ತರ ಮಹಾಭಾರತ’ ಕೃತಿಯ ಕುರಿತು ಡಾ. ಚಂದ್ರಮತಿ ಸೋಂದಾ ಬರಹ
ಮಹಾಕಾವ್ಯ ಪರಂಪರೆಯಲ್ಲಿ ಚರಿತ್ರೆಯುದ್ದಕ್ಕೂ ಮಹಾಭಾರತ ಮತ್ತು ರಾಮಾಯಣಗಳು ಮರು ವ್ಯಾಖ್ಯಾನಗೊಳ್ಳುತ್ತಲೇ ಬಂದಿವೆ. ಆಯಾ ಕಾಲದ ಯುಗಧರ್ಮದ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಪುನಃಸೃಷ್ಟಿಗೊಂಡಿವೆ. ಕನ್ನಡದಲ್ಲಿ ಲಕ್ಷ್ಮೀಶ ಕವಿಯ ಹೊರತಾಗಿ ಉಳಿದವರು ಮಹಾಭಾರತದ ಅಶ್ವಮೇಧಪರ್ವ ಕುರಿತು ಬರೆದಿದ್ದು ಕಡಿಮೆ.
ಎಂ.ಎಸ್. ವೇದಾ ಅವರ ಕಾದಂಬರಿ ‘ಉತ್ತರ ಮಹಾಭಾರತ’ ಕೃತಿಯು ಮಹಾಭಾರತ ಯುದ್ಧವು ಸಮಾಜದ ಮೇಲೆ ಬೀರಿದ ಪರಿಣಾಮವನ್ನು ಹೆಣ್ಣಕಣ್ಣೋಟದಿಂದ ಕಂಡರಿಸಿದ ಕೃತಿ. ಪುರಾಣ ಕತೆಯನ್ನು ಮುರಿದುಕಟ್ಟುವ ಸಾಹಿತ್ಯಿಕ ಪರಂಪರೆಗೆ ಈಗಾಗಲೆ ಅವರ ಕೆಲವು ಕೃತಿಗಳು ಸೇರಿವೆ. ʻಕಪ್ಪು ಕಿವಿಯ ಬಿಳಿಯ ಕುದುರೆಗಳುʼ ಕಾದಂಬರಿ ಯಯಾತಿಯ ಮಗಳು ಮಾಧವಿಯ ಬದುಕನ್ನು ಸ್ತ್ರೀದೃಷ್ಟಿಕೋನದಿಂದ ಬಿಂಬಿಸಿದರೆ, ʻಜಯʼ ಕಾದಂಬರಿಯು ಮಹಾಭಾರತ ಯುದ್ಧವನ್ನು ಕುರು-ಪಾಂಡವ ರಾಣಿಯರು ಮತ್ತು ಸಾಮಾನ್ಯ ಮಹಿಳೆಯರು ಗ್ರಹಿಸಿದ ಪರಿಯನ್ನು ಅನಾವರಣಗೊಳಿಸುತ್ತದೆ. ಉತ್ತರ ಮಹಾಭಾರತ ಕಾದಂಬರಿಯು ಮಹಾಭಾರತದ ಯುದ್ಧದ ನಂತರದಲ್ಲಿನ ರಾಜ್ಯದ ಪರಿಸ್ಥಿತಿ ಮತ್ತು ಅದಕ್ಕಾಗಿ ಪಾಂಡವರು ಕೈಗೊಂಡ ಅಶ್ವಮೇಧ ಯಾತ್ರೆಯನ್ನು ಕೇಂದ್ರೀಕರಿಸಿದ ಕೃತಿ.

(ಎಂ.ಎಸ್. ವೇದಾ)
ಮಹಿಳೆಯರ ಯುದ್ಧವಿರೋಧೀ ನಿಲುವನ್ನು ಕೃತಿ ಪ್ರದಿಪಾದಿಸುತ್ತ ಹೋಗುತ್ತದೆ. ಕೌರವ ಪಾಂಡವರ ನಡುವೆ ಯುದ್ಧ ನಡೆದುದರ ಕಾರಣವನ್ನು ಅವರಿಗೆ ಆರೋಪಿಸದೆ, ʻಸುದರ್ಶನಚಕ್ರ ಕಡಿತು ಬ್ರಹ್ಮಕಪಾಲ ಕುಡಿತುʼ ಎನ್ನುವ ಪ್ರಚಲಿತ ಮಾತೊಂದಿದೆ. ಕಾರ್ಯಕಾರಣ ಸಂಬಂಧಕ್ಕಿಂತ ನಿಯತಿಕೃತ ನಿಯಮದಂತೆ ಲೋಕ ನಡೆಯುತ್ತದೆ ಎಂದು ನಂಬುತ್ತದೆ. ಉತ್ತರ ಮಹಾಭಾರತ ಕೃತಿಯು ಧರ್ಮಪರಿಪಾಲನೆಗಾಗಿ ಮಹಾಭಾರತ ಯುದ್ಧವಾಯಿತು ಎನ್ನುವ ಪರಂಪರಾಗತ ನಂಬಿಕೆಯನ್ನು ಅಲ್ಲಗಳೆಯುತ್ತದೆ. ಅರಮನೆಯ ಹೆಣ್ಣು ಮಕ್ಕಳು ಮತ್ತು ಜನಸಾಮಾನ್ಯರು ಆಡುವ ಮಾತುಗಳಲ್ಲಿ ಇದು ಬಿಂಬಿತವಾಗಿದೆ.
ಯುದ್ಧದಿಂದ ಜನಸಾಮಾನ್ಯರ ಬದುಕು ಹೇಗೆ ಅಸಹನೀಯವಾಯಿತು ಎನ್ನುವುದರಿಂದ ಪ್ರಾರಂಭವಾಗುವ ಕೃತಿ ನಿಧಾನವಾಗಿ ಯುದ್ಧ ಮತ್ತು ಹಿಂಸೆ ಕುರಿತಂತೆ ಹಲವು ಪ್ರಶ್ನೆಗಳನ್ನು ಎತ್ತುತ್ತದೆ.
ಕೃತಿಯ ಪ್ರಾರಂಭದಲ್ಲಿ ಬರುವ ರೋಹಿಣಿ ಮತ್ತು ಕಾಳಶಂಭುವಿನ ಪಾತ್ರದ ಮೂಲಕ ಯುದ್ಧದಿಂದ ತಮ್ಮವರನ್ನು ಕಳೆದುಕೊಂಡವರ ಪಾಡು ಏನಾಯಿತು ಎನ್ನುವುದನ್ನು ಹೇಳುತ್ತದೆ. ರೋಹಿಣಿ ಗಂಡನನ್ನು ಕಳೆದುಕೊಂಡರೆ, ಕಾಳಶಂಭು ದಂಪತಿಗಳು ತಮ್ಮ ಮಕ್ಕಳನ್ನು ಕಳೆದುಕೊಂಡು ಕಂಗಾಲಾದವರು. ರೋಹಿಣಿ ಮತ್ತು ಆ ದಂಪತಿಗಳು ಒಬ್ಬರಿಗೊಬ್ಬರು ಆಶ್ರಯವಾಗುತ್ತ ಬದುಕನ್ನು ಸಹನೀಯಗೊಳಿಸಿಕೊಳ್ಳುವ ದಾರಿಯನ್ನು ಕಂಡುಕೊಳ್ಳುತ್ತಾರೆ.
ಮಹಾಭಾರತ ಯುದ್ಧಕ್ಕೆ ಭೂಮಿಗಾಗಿ ದಾಯಾದಿಗಳ ನಡುವಿನ ಕಲಹ ಕಾರಣವಾಯಿತು ಎನ್ನುವ ತಾರ್ಕಿಕತೆಯನ್ನು ಮುಂದೊಡ್ಡಬಹುದು. ಆದರೆ ಅಶ್ವಮೇಧ ಯಾಗವನ್ನು ಕೈಗೊಳ್ಳುವುದಕ್ಕೆ ತಮ್ಮ ಪ್ರಭುತ್ವವನ್ನು ಸುತ್ತಲಿನ ರಾಜರು ಒಪ್ಪಬೇಕೆನ್ನುವುದು ಒಂದು ನೆಲೆಯಾದರೆ ಇನ್ನೊಂದು ಯುದ್ಧದಿಂದ ಬರಡಾದ ಬೊಕ್ಕಸವನ್ನು ತುಂಬುವುದೂ ಹೌದು. ಮಹಾಭಾರತ ಯುದ್ಧದಲ್ಲಿ ಪಾಂಡವರ ಅಥವಾ ಕೌರವರ ಪಕ್ಷವನ್ನು ವಹಿಸದಿರುವ ರಾಜರೂ ತಮ್ಮ ಸೈನಿಕರನ್ನು, ತಾವು ಸಂಗ್ರಹಿಸಿಟ್ಟಿರುವ ಹಣವನ್ನು ಕಳೆದುಕೊಳ್ಳುವಂತಹ ಒಂದು ಹುನ್ನಾರ ಅಶ್ವಮೇಧಯಾಗದ ಹಿಂದಿರುವುದನ್ನು ಕಾದಂಬರಿ ಕಾಣಿಸುತ್ತದೆ. ದ್ರೌಪದಿ ಮೂಲದಲ್ಲಿಯೂ ಇತರ ಹೆಣ್ಣುಮಕ್ಕಳಿಗಿಂತ ವಿಭಿನ್ನಳಾಗಿ ಚಿತ್ರಿತಳಾಗಿದ್ದಾಳೆ. ಈ ಕೃತಿಯಲ್ಲಿ ಎಲ್ಲರನ್ನೂ ಒಳಗೊಂಡು ಮುನ್ನಡೆಯುವ ಅಗಾಧವಾದ ತಾಳ್ಮೆ ಮತ್ತು ಇವೆಲ್ಲ ನೋವಿಗೆ ಕಾರಣವಾಗಿರುವ ತನ್ನಿನಿಯರನ್ನು ದೂರವೇ ಇಡುವ ಸಶಕ್ತ ಹೆಣ್ಣಾಗಿ ಕಾಣಿಸುತ್ತಾಳೆ. ನೂರು ಮಕ್ಕಳನ್ನು ಕಳೆದುಕೊಂಡ ಗಾಂಧಾರಿ, ಮಗನ ಸಾವಿನಿಂದ ನೊಂದ ಸುಭದ್ರೆ, ಯುದ್ಧದಿಂದ ದೂರವಿದ್ದರೂ ಪಂಚಪಾಂಡವರನ್ನು ನುಂಗಿದ ಯುದ್ಧದ ಭೀಕರತೆಗೆ ಸ್ವತಃ ಬಲಿಯಾದ ದ್ರೌಪದಿ, ಕುಂತಿ, ಭಾನುಮತಿ ಎಲ್ಲರೂ ಯುದ್ಧದಿಂದ ನೊಂದವರೇ. ಅವರನ್ನೆಲ್ಲ ಒಂದೆಡೆ ಇರುವಂತೆ ಮಾಡಿದ ದ್ರೌಪದಿ ಇಲ್ಲಿ ಮಾತಿಗಿಂತ ಕ್ರಿಯಶೀಲತೆಗೆ ಹೆಚ್ಚು ಆದ್ಯತೆ ನೀಡಿದ ಪಾತ್ರವಾಗಿ ಮೂಡಿದ್ದಾಳೆ. ಅವಳ ಕರ್ತೃತ್ವಶಕ್ತಿ ಅಸಾಧಾರಣವಾದುದು ಎನ್ನುವ ಭಾವ ನಮ್ಮನ್ನು ತಟ್ಟುತ್ತದೆ. ದ್ರೌಪದಿಯ ಇಂತಹ ನಿಲುವಿನೆದುರು ಧರ್ಮರಾಜ ಮತ್ತು ಅರ್ಜುನ ಅವಳನ್ನು ಎದುರಿಸಲಾರದೆ ಸೋಲುತ್ತಾರೆ. ಆದರೆ ಭೀಮನದು ವಿಭಿನ್ನ ನಡೆ. ಇಲ್ಲಿನ ಭೀಮ ಕುಮಾರವ್ಯಾಸ ಹೇಳುವಂತೆ ದ್ರೌಪದಿಯ ‘ಮಿಡುಕುಳ್ಳ ಗಂಡ’. ರಾಣಿವಾಸದ ನೋವನ್ನು ಕೆಲಮಟ್ಟಿಗೆ ಅರ್ಥೈಸಿಕೊಳ್ಳಬಲ್ಲ. ಪ್ರಭುತ್ವದ ನಡೆ ಏನೆನ್ನುವುದನ್ನು ತಿಳಿದೂ ಇಷ್ಟವಿಲ್ಲದಿದ್ದರೂ ಪ್ರತಿಕ್ರಿಯಿಸದೆ ಎರಡೂ ಕಡೆಗಳಲ್ಲಿಯೂ ಎಡತಾಗುತ್ತ ಸ್ವಲ್ಪಮಟ್ಟಿಗೆ ʻಹೆಣ್ತನʼವನ್ನು ಮೈಗೂಡಿಸಿಕೊಂಡವನಾಗಿ ಕಾಣುತ್ತಾನೆ.
ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟುವ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ ಪುರುಷ ಪ್ರಭುತ್ವವು ತಾಮ್ರಧ್ವಜನಂತೆ ಯುದ್ಧ ಮಾಡಿ ಎಲ್ಲವನ್ನು ಕಳೆದುಕೊಳ್ಳುತ್ತದೆ. ಸುಧನ್ವ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿದರೂ ರಾಜದ್ರೋಹದ ಕಾರಣದಿಂದ ಶಸ್ತ್ರ ಹಿಡಿದು ಹೋರಾಡಿ ಸಾಯುತ್ತಾನೆ. ಪುರುಷ ಪ್ರಭುತ್ವವು ಯುದ್ಧದಲ್ಲಿ ಸೋಲುವ ಮೂಲಕ ಎಲ್ಲವನ್ನು ಕಳೆದುಕೊಂಡರೆ, ಪ್ರಮೀಳೆ ಮಾತ್ರ ʻನಾವು ಕುದುರೆಯನ್ನು ಕಟ್ಟುವುದೂ ಇಲ್ಲ, ಕಪ್ಪವನ್ನೂ ನೀಡುವುದಿಲ್ಲ, ಯುದ್ಧವನ್ನೂ ಮಾಡುವುದಿಲ್ಲʼ ಎನ್ನುವ ಮೂಲಕ ಕುದುರೆ ಬೆಂಗಾವಲಿಗೆ ಬಂದ ಅರ್ಜುನನಿಗೆ ಸವಾಲಾಗುತ್ತಾಳೆ. ಪ್ರಮೀಳಾ ರಾಜ್ಯದ ಮಹಿಳೆಯರೆಲ್ಲ ಯುದ್ಧವಿದ್ಯೆಯಲ್ಲಿ ಪರಿಣತರಾದವರೇ. ಯುದ್ಧ ಕಲೆ ರಾಜ್ಯದ ರಕ್ಷಣೆಗೆ ವಿನಾ ವಿನಾಶಕ್ಕಲ್ಲ ಎನ್ನುವುದನ್ನು ಕೃತಿಯ ಮೂಲಕ ತೋರಿಸಿದ್ದಾರೆ. ಮೂರುಲೋಕದ ಗಂಡ ಅರ್ಜುನ ಏನೂ ಮಾಡಲಾರದೆ, ಹೆಣ್ಣಿನ ಮೇಲೆ ಆಯುಧ ಎತ್ತುವಂತಿಲ್ಲ ಎನ್ನುವ ನೆವದಿಂದ ಮುಂದುವರಿಯುತ್ತಾನೆ. ಗಂಡಿನ ಪೌರುಷಕ್ಕಿಂತ ಹೆಣ್ಣಿನ ಜಾಣ್ಮೆಯಿಂದಾಗಿ ಪ್ರಮೀಳಾ ರಾಜ್ಯ ಬಚಾವಾಗುತ್ತದೆ.
ಮಹಾಭಾರತ ಯುದ್ಧದಲ್ಲಿ ಕಪಟನಾಟಕ ಸೂತ್ರಧಾರಿಯಾಗಿ ಎಲ್ಲವನ್ನೂ ನಡೆಸಿದ ಕೃಷ್ಣ ತಾನೇ ನಿರ್ಮಿಸಿದ ದ್ವಾರಕೆಯನ್ನು ಉಳಿಸಿಕೊಳ್ಳಲಾರದೆ ತೊಳಲಾಡುವುದನ್ನು ಕೃತಿಯ ಎರಡನೆಯ ಭಾಗ ಕಂಡರಿಸುತ್ತದೆ. ಒಮ್ಮೆ ಓದಿದಾಗ ಈ ಭಾಗ ಅನುಬಂಧದಂತೆ ಅನಿಸುತ್ತದೆ. ಒಟ್ಟಾರೆ ಪ್ರಬಂಧ ಧ್ವನಿ ಬಿಟ್ಟು ಕೊಡುವ ಅರ್ಥವು ಅಧಿಕಾರ ಲಾಲಸೆ ಮತ್ತು ಪ್ರಭುತ್ವ ಎಷ್ಟು ಜೊಳ್ಳು ಎನ್ನುವುದನ್ನು ಸೂಚಿಸುತ್ತದೆ. ಆದರೆ ಮೇಲುನೋಟಕ್ಕೆ ಸಂಧಾನಮಾಡುವ ಕೃಷ್ಣನ ಚಹರೆ ಬೇರೆಯೇ ಆಗಿ ಇಲ್ಲಿ ಬಿಂಬಿತವಾಗಿದೆ. ಅವನು ಏನೇ ಪ್ರಯತ್ನ ಮಾಡಿದರೂ ದ್ವಾರಕೆಯನ್ನು ಉಳಿಸಿಕೊಳ್ಳಲಾರದೆ ಸೋಲುತ್ತಾನೆ. ಪಾಂಡವರನ್ನು ಉಳಿಸಲು ಹೋಗಿ ತನ್ನ ರಾಜ್ಯವನ್ನು ಸಂಕಷ್ಟಕ್ಕೆ ತಳ್ಳಿದ ಕೃಷ್ಣನ ನಡವಳಿಕೆ ಕುರಿತಂತೆ ಹಲವು ಪ್ರಶ್ನೆಗಳು ಏಳುತ್ತವೆ. ರಾಜ್ಯವನ್ನು ಮುನ್ನಡೆಸುವ ಸರಿಯಾದ ನಾಯಕತ್ವ ಇಲ್ಲದಿದ್ದರೆ ಹೇಗೆ ಅರಾಜಕತೆಯಿಂದ ರಾಜ್ಯ ಹಾಳಾಗುತ್ತದೆ, ಯುವ ಸಮೂಹ ದಾರಿ ತಪ್ಪುತ್ತದೆ ಎನ್ನುವುದನ್ನು ಇಲ್ಲಿ ನಿರೂಪಿಸಲಾಗಿದೆ. ಕೃಷ್ಣನ ಸಾವಿನೊಂದಿಗೆ ಕೃತಿ ಮುಗಿಯುತ್ತದೆ.
ಪೌರುಷ, ಸಾಹಸ, ಶೌರ್ಯ, ಪ್ರಭುತ್ವಗಳನ್ನು ಕುರಿತಂತೆ ಕೆಲವು ಪ್ರಶ್ನೆಗಳು ಮೂಡುತ್ತವೆ. ಸುದನ್ವನ ತಾಯಿ, ಪತ್ನಿ ಪ್ರಭಾವತಿ, ಅರ್ಜುನ ವಿವಾಹವಾಗಿ ಬಿಟ್ಟುಬಂದ ಚಿತ್ರಾಂಗದೆ, ಉಲೂಪಿ ಯಾರೂ ಯುದ್ಧಾಕಾಂಕ್ಷಿಗಳಲ್ಲ. ಭೂಮಿಯ ಒಡೆತನಕ್ಕಾಗಿ ಹೋರಾಡುವ ಗಂಡಾಳ್ವಿಕೆಯಿಂದ ರೋಸಿಹೋದ ದ್ರೌಪದಿಯಾಗಲಿ, ಉಳಿದ ಅರಮನೆಯ ಹೆಣ್ಣುಮಕ್ಕಳಿರಲಿ ಹಿಂಸಾವಿರೋಧಿಗಳೆ. ರೋಹಿಣಿಯಂತಹ, ಜನಸಾಮಾನ್ಯರನ್ನ ಪ್ರತಿನಿಧಿಸುವ ಹೆಣ್ಣುಮಕ್ಕಳಿಗೂ ಯುದ್ಧ ಭಯಾನಕವೇ. ಹಸಿದ ಹೊಟ್ಟೆಯನ್ನು ತುಂಬುವುದಕೋಸ್ಕರ ರೋಹಿಣಿಯಂತೆ ಅದೆಷ್ಟೋ ಹೆಣ್ಣುಮಕ್ಕಳು ಅಶ್ವಮೇಧಯಾಗದ ಕುದುರೆಯೊಂದಿಗೆ ಹೊರಟ ಸೇನೆಗೆ ಊಟ ತಯಾರಿಸುವುದಕ್ಕಾಗಿ ಅವರೊಂದಿಗೆ ಹೋಗುತ್ತಾರೆ. ಇಲ್ಲಿ ಅವರು ತಮ್ಮ ಮೇಲಾಗುವ ದೌರ್ಜನ್ಯವನ್ನು ತಪ್ಪಿಸಿಕೊಳ್ಳಲಿಕ್ಕಾಗಿ ತಾವು ಅಡುಗೆಗೆ ಬಳಸುವ ಪಾತ್ರೆ ಪಗಡಗಳನ್ನೇ ತಮ್ಮ ಸುತ್ತಲೂ ಕೋಟೆಯನ್ನಾಗಿ ಮಾಡಿಕೊಂಡು ರಾತ್ರಿ ನಿದ್ರಿಸುವ ಪರಿ ಅವರ ಬುದ್ಧಿವಂತಿಕೆಗೆ ಹಿಡಿದ ಕನ್ನಡಿ. ಅಧಿಕಾರ ರಾಜಕಾರಣಕ್ಕಿಂತ ನೆಮ್ಮದಿಯ ಬದುಕನ್ನು ಬಯಸುವ ಹೆಣ್ಣುಮಕ್ಕಳ ಮನೋಧರ್ಮವನ್ನು ಕೃತಿ ಬಹಳ ಅಚ್ಚುಕಟ್ಟಾಗಿ ಅನಾವರಣಗೊಳಿಸುತ್ತದೆ.

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.


