ಮಣ್ಣು ಮುಚ್ಚಿದ್ದ ನಾಲ್ಕಾಣೆಯನ್ನು ಯಾರಿಗೂ ಕಾಣದಂತೆ ಅತಿ ವೇಗವಾಗಿ ತೆಗೆದುಕೊಳ್ಳುವಾಗ ಕೈ ತುಂಬಾ ಮಣ್ಣಿನ ಸಮೇತ ಜೇಬಿಗೆ ಹಾಕಿಕೊಂಡಿದ್ದರ ಪರಿವೆ ಅವನಿಗಿರಲಿಲ್ಲ. ತಕ್ಷಣವೇ ಎಚ್ಚೆತ್ತುಕೊಂಡು `ಏನಿಲ್ಲ ಕಣಣ್ಣೋ ಅಲ್ಲಿ ಬಿದ್ಬಿಟ್ಟೆ ನಿಕ್ಕರ್ ಮಣ್ಣಾಯ್ತು ಅಷ್ಟೆ’ ಅಂದ. ಆದ್ರೆ ಆ ಆಸಾಮಿ `ಲೇ ಕಳ್ ನನ್ಮಗ್ನೆ ಬಿದ್ರೆ ಬರೀ ಜೇಬ್ ಮಾತ್ರಾ ಮಣ್ಣಾಗುತೇನ್ಲಾ ಏನೋ ಕಳ್ಗರ ಬಿಟ್ಟಿಂಗೆ ಕಾಣುತ್ತೆ. ನಿಮ್ಮವ್ವ ಸಿಗ್ಲಿ ಹೇಳ್ತೀನಿ ತಡಿ’ ಅಂದು ಹೋದ. ಯಾವುದು ಯಾರಿಗೂ ಗೊತ್ತಾಗಬಾರ್ದು ಅಂತ ಅಂದ್ಕೊಂಡಿದ್ನೋ ಅದರ ಸುಳಿವೆ ಬೇರೆಯವರಿಗೆ ಸಿಕ್ಕಿದ್ದು ರವಿಯ ಜಂಘಾಬಲವನ್ನೇ ಕುಸಿಯುವಂತೆ ಮಾಡಿತ್ತು.
ಡಾ. ಮಂಜುನಾಥ್ ಮಾಗೋದಿ ನಿರೂಪಣೆಯಲ್ಲಿ ಜಿಮ್ ರವಿ ಅವರ ಜೀವನ ಚರಿತ್ರೆ ‘ರವಿ ನೀನು ಆಗಸದಲ್ಲಿ’ ಕೃತಿಯ ಒಂದು ಅಧ್ಯಾಯ
ಬಡತನದ ಬೇಗೆಯಲ್ಲಿ ಜನಿಸಿದ ಹಸಿವು ಅವಮಾನಗಳ ಅವಳಿ ಜವಳಿ ರವಿಯ ಬಾಲ್ಯದ ಬಳುವಳಿ. ಯಾವೊತ್ತೂ ತುಂಬದ ಹೊಟ್ಟೆ, ಹರಿದುಟ್ಟ ಬಟ್ಟೆ, ತಪ್ಪಿಲ್ಲದೆ ತಗ್ಗಿಸಿದ ತಲೆಯ ಮೇಲೆ ಮಾತ್ರ ಸ್ವಾಭಿಮಾನದ ಬಾವುಟ, ಬಾನೆತ್ತರಕ್ಕೆ ಮುಖ ಮಾಡಿ ತನ್ನ ಗುರಿಯತ್ತ ಹಾರುತ್ತಲೇ ಇತ್ತು. ರವಿಗೆ ತನ್ನ ಅಭ್ಯಾಸಕ್ಕೆ ಇಡೀ ದಿನವೂ ಸಾಕಾಗುತ್ತಿರಲಿಲ್ಲ. ಅವನಿಗೆ ಮನೆ ಮಠಗಳು ಒಂದು ನೆಪವಾಗಿ ಗರಡಿ ಮನೆ ಜಪವಾಗಿ ಕಸರತ್ತಿಗೆ ಸಮಯದ ಮಿತಿಯೇ ಇರುತ್ತಿರಲಿಲ್ಲ. ಕುಸ್ತಿಪಟುಗಳ ಜೊತೆ ಅಭ್ಯಾಸ ಮಾಡುತ್ತಿದ್ದರೂ ಅವನ ನಿಜವಾದ ಕಸರತ್ತು ಶುರುವಾಗುತ್ತಿದ್ದದ್ದು ಅವರೆಲ್ಲ ಅಭ್ಯಾಸ ಮುಗಿಸಿ ಮನೆಗೆ ಹೋದ ಮೇಲೆಯೇ. ರಾತ್ರಿ ಹಗಲು ವೇಳಾಪಟ್ಟಿ ಮೀರಿದ ಸ್ವಯಂ ತರಗತಿಗಳ ತಾಲೀಮು ಏಕಲವ್ಯನ ಏಕಾಗ್ರತೆಗೆ ಮಿಗಿಲೆನ್ನುವ ಶ್ರದ್ಧೆ, ಉದರದ ಹಸಿವಿಗಿಂತ ನೂರು ಪಟ್ಟು ಅವನ ಗುರಿಯ ಹಸಿವು ಭೀಕರವಾಗಿತ್ತು. ಬೇರೆಯವರು ಒಂದು ವಾರ ಮಾಡುವ ಅಭ್ಯಾಸ ಇವನಿಗೆ ಒಂದು ದಿನದ ಕಸರತ್ತು. ಹುಟ್ಟುತ್ತಲೇ ತಕ್ಕಮಟ್ಟಿನ ಕಟ್ಟುಮಸ್ತಿನ ದೇಹ ಅವನ ಸಮಯಾತೀತ ಅವಿರತ ತಾಲೀಮಿಗೆ ಸಹಕರಿಸುತ್ತಿದ್ದರೂ, ಹೊಟ್ಟೆ ಮಾತ್ರ ಸೆಟೆದು ನಿಲ್ಲುತ್ತಿತ್ತು. ಅದರ ಹಸಿವಿನ ಘೋರ ಆಕ್ರಂದನಕ್ಕೆ ರವಿ ಬಳಲಿದ ದಿನಗಳು ಅಗಣಿತವಾಗಿದ್ದವು. ಒಂದು ದಿನ ಅಭ್ಯಾಸ ಮಾಡುತ್ತಿದ್ದಾಗ, ಕರುಳು ಕೇಕೆ ಹಾಕುತ್ತಾ ಹೊಟ್ಟೆ ಕರತಾಡನ ಮಾಡುತ್ತಿದ್ದಾಗ ತಾಳಲಾಗಲಿಲ್ಲ.
ಗರಡಿ ಮನೆ ಬೀದಿಯಲ್ಲಿ ತಮಟೆಗಳ ಸದ್ದು ಕೇಳಿ ಹೊರ ಬಂದು ನೋಡಿದರೆ ಶವದ ಮೆರವಣಿಗೆ ಗರಡಿ ಮನೆ ಮುಂದೆ ಸಾಗುತ್ತಿದೆ. ಸತ್ತಿರುವ ವ್ಯಕ್ತಿ ಲಾರಿಗಳ ಮಾಲೀಕ, ಸ್ಥಿತಿವಂತ. ಹೆಣದ ಮುಂದೆ ತಮಟೆ ವಾದ್ಯಗಳ ದೊಡ್ಡ ಗುಂಪು, ಹಿಂದೆ ಜನವೊ ಜನ. ಬದುಕಿದ್ದಾಗ ಅಷ್ಟೇನೂ ಜನಾನುರಾಗಿಯಲ್ಲದ ವ್ಯಕ್ತಿಗೆ ಈ ಪಾಟಿ ಜನ ಸೇರಿರುವುದು ಅಚ್ಚರಿ ಎನಿಸಿದ್ದರೂ ಯಾವುದೋ ಅವ್ಯಕ್ತ ಫಲಾಫೇಕ್ಷೆಯ ಅಗೋಚರ ಶಕ್ತಿಯೇ ಕಾರಣವಾಗಿರಬೇಕೆಂದು ಆಲೋಚಿಸುತ್ತಿರುವಾಗಲೇ ಹಿಂಬಾಲಿಸಿ ಸಾಗುವವರ ಸಂಖ್ಯೆ ಜಾಸ್ತಿಯಾಗುತ್ತಿತ್ತು. ದುಃಖಕ್ಕಿಂತ ವಿಜೃಂಭಣೆಯೆ ಮೈದುಂಬಿದಂತೆ ಹೂವು, ಮಂಡಕ್ಕಿ ಜೊತೆಗೆ ಬಿಲ್ಲೆ ಕಾಸುಗಳನ್ನು ಶವದ ಮೇಲೆ ತೂರುತ್ತಿದ್ದದ್ದು ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚುಮಾಡಿತ್ತು. ಕೆಳಗೆ ಬಿದ್ದ ಚಿಲ್ಲರೆ ಕಾಸನ್ನು ಆಯ್ದುಕೊಳ್ಳಲು ಭಿಕ್ಷುಕರು, ಅವರ ಮಕ್ಕಳು ಜನರ ಕಾಲುಗಳನ್ನು ಲೆಕ್ಕಿಸದೆ ಭರ್ಜರಿ ಬೇಟೆಯಲ್ಲಿ ತೊಡಗಿದ್ದರು. ಹೆಣದ ಹಿಂದೆ ಸಾಗುತ್ತಿದ್ದ ಎಷ್ಟೋ ಜನರಿಗೆ ಆ ಚಿಲ್ಲರೆ ಕಾಸಿನ ಕನವರಿಕೆಯಲ್ಲಿ ಕೆಟ್ಟದೊಂದು ಪ್ರಯತ್ನ ಮಾಡಿ ಎಲ್ಲರ ಕಣ್ತಪ್ಪಿಸಿ ಎತ್ತಿಕೊಂಡು ಬಿಡೋಣ ಎನಿಸಿದರೂ ಯಾರಾದರೂ ನೋಡಿಯಾರು ಎಂಬ ಭಯಮಿಶ್ರಿತ ಮರ್ಯಾದೆ ಅಡ್ಡಿಪಡಿಸುತ್ತಿತ್ತು. ಇದರಿಂದ ಬಂದ ಸಿಟ್ಟನ್ನು ಕಾಸು ಆಯ್ದುಕೊಳ್ಳಲು ಚಿಂದಿ ಮಕ್ಕಳ ಮೇಲೆ ಗೊಣಗುವ ಮೂಲಕ ಹೊರಹಾಕುತ್ತಿದ್ದ.
ಮೆರವಣಿಗೆ ಗರಡಿ ಮನೆ ಮುಂದೆ ಹೋಗುತ್ತಿರುವಾಗ ತಮಟೆ ವಾದ್ಯದವರ ರಣಭೋಜಿಗೆ ಹೆಣದ ಮೇಲಿಂದ ಚಂಗನೆ ಚಿಮ್ಮಿದ ನಾಲ್ಕಾಣೆಯೊಂದು ಆರ್ಭಟಿಸುತ್ತಾ ವಿಕೃತ ನರ್ತನ ಮಾಡುತ್ತ ಎಗರಿ ಬಿದ್ದು ಹೊರಳಾಡುತ್ತಾ ಉರುಳುರುಳಿ ರವಿಯ ಕಾಲ ಬಳಿ ಬಂದು ಬಿದ್ದಿತ್ತು. ಅದನ್ನು ಬೆನ್ನಟ್ಟಿ ಬರುವ ಹುಡುಗರ ಹಿಂಡು ಜನರ ಕಾಲುಗಳ ಮಧ್ಯೆ ದಾರಿ ಕಾಣದೆ ತವಕಿಸುತ್ತಿತ್ತು. ತಕ್ಷಣವೇ ರವಿ ಆ ನಾಲ್ಕಾಣೆ ಮೇಲೆ ತನ್ನ ಕಾಲಿಟ್ಟು ಅಚಲವಾಗಿ ನಿಂತುಬಿಟ್ಟ. ಅದನ್ನೆ ಹಿಂಬಾಲಿಸಿಕೊಂಡು ಬಂದ ಹುಡುಗನೊಬ್ಬ ಕಣ್ಣಲ್ಲಿ ಕಣ್ಣಿಟ್ಟು ನೋಡಿಯೇ ಬಿಟ್ಟ. ಭಿಕ್ಷುಕರ ಮಕ್ಕಳಿಗೆ ಮಾತ್ರ ಹೆಣದ ಕಾಸನ್ನು ಆಯ್ದುಕೊಳ್ಳುವ ಹಕ್ಕಿರುವಾಗ ಅದನ್ನು ಯಾರಿಂದ ತಾನೆ ಕಿತ್ತುಕೊಳ್ಳಲು ಸಾಧ್ಯ ಎಂದುಕೊಂಡು ಕಾಲ್ಸಂದಿಗಳಲ್ಲಿ ತಡವರಿಸಿಕೊಂಡು ಬಂದು ರವಿಯ ಕಾಲ ಬಳಿ ನಿಂತು ಒಮ್ಮೆ ಆ ಶರೀರವನ್ನು ನೋಡಿ, ಕಾಲ ಕೆಳಗಿರುವ ಕಾಸಿನ ಆಸೆಯನ್ನೆ ಬಿಟ್ಟು ಬಿಟ್ಟ. ಆದರೆ ಮನಸು ಕಾಸಿನ ಆಸೆಯನ್ನು ಬಿಡಲೊಲ್ಲದು. ಹೇಳಿ ಕೇಳಿ ಅದು ನಾಲ್ಕಾಣೆ ಎರಡು ಪೈಸೆ ಐದು ಪೈಸೆ ತೂರುವಲ್ಲಿ ಅದು ಹೇಗೋ ನಾಲ್ಕಾಣೆ ತೂರಿ ಬಂದಿದೆ. ಒಂದಿಡಿ ಪೈಸೆ ಕಾಸು ಆಯ್ದುಕೊಳ್ಳುವ ಬದಲು ಈ ನಾಲ್ಕಾಣೆ ಸಿಕ್ಕರೆ ಸಾಕು ಎಂದು ಆ ಹುಡುಗ ಕಾದುಕುಳಿತ. ಮೆರವಣಿಗೆ ಮುಂದೆ ರಣಭೋಜಿಡಿದು ಬಡಿಯುತಿದ್ದ ತಮಟೆ ವಾದ್ಯದವರು ಮುಂದೆ ಸಾಗದೆ ತಮ್ಮ ಗತ್ತುಗಳಲ್ಲಿ ಗಾನಲೋಲರಾಗಿ ಮೈ ಮರೆತು ಕುಣಿಯುತ್ತಿರುವುದನ್ನು ಕಂಡ ರವಿಯ ಮನಸ್ಸು ಕುದಿಯುತಿತ್ತು. ಅತ್ತ ಬೇಗ ಜನರು ಸಾಗಿದರೆ ಇತ್ತ ಕಾಲ್ಕೆಳಗಿನ ನಾಲ್ಕಾಣೆಗೆ ನಾನೇ ಅಧಿಪತಿಯಾಗಬಹುದೆಂದು ತವಕಿಸುತ್ತಿದ್ದ. ಅತ್ತ ಆ ಹುಡುಗ ತನ್ನ ಬೇಟೆಗೆ ಅಡ್ಡಿಯಾಗಿದ್ದ ಕಾಲಿಗೆ ಏನಾದ್ರು ಕಚ್ಚಬಾರದ ಎಂದು ಶಪಿಸುತ್ತಾ ಕಾಯುತಿದ್ದ.
ಬಹಳ ಹೊತ್ತಿನ ತನಕ ಒಂದೇ ಕಡೆ ನಿಂತಿರುವುದು ಯಾರಿಗಾದ್ರೂ ಅನುಮಾನ ಬರಬಹುದೆಂದು ಕಾಲು ಬದಲಿಸಿ ಆ ನಾಲ್ಕಾಣೆಯನ್ನು ಇನ್ನೊಂದು ಕಾಲಿನಿಂದ ತುಳಿದು ನಿಂತಿದ್ದನ್ನು ಕಂಡ ಆ ಹುಡುಗ ಆ ನಾಲ್ಕಾಣೆಯ ಆಸೆಯನ್ನು ಕೈಬಿಟ್ಟು ಆ ದಡೂತಿ ದೇಹವನ್ನು ಅಲುಗಾಡಿಸುವುದು ಅಸಾಧ್ಯವೆಂದು ತಿಳಿದು ಮನಸ್ಸಿನಲ್ಲಿಯೆ ಬೈದುಕೊಳ್ಳುತ್ತಾ ಮುಂದೆ ಸಿಗಬಹುದಾದ ಕಾಸಿಗೆ ಕಾರ್ಯಮಗ್ನನಾಗಲು ಹೊರಟುಹೋದ. ಮೆರವಣಿಗೆ ಮುಂದೆ ಸಾಗುತ್ತಿತ್ತು ಜನರೆಲ್ಲ ಅದರ ಹಿಂದೆ ಹೋಗುತ್ತಿದ್ದರು. ರವಿ ಮಾತ್ರ ಆ ಜಾಗದಿಂದ ಕದಲದೆ ಗರುಡಗಂಬದಂತೆ ನಿಂತಿದ್ದ. ತನ್ನನ್ನೂ ಯಾರಾದರೂ ಗಮನಿಸುತ್ತಿರಬಹುದೆಂದು ಸುತ್ತಲು ಒಮ್ಮೆ ನೋಡಿದ ಆ ಓಣಿಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರಂತೆ ಜನ ಇದ್ದರೂ ರವಿಗೆ ಮಾತ್ರ ತನ್ನ ಕಾಲಿನಿಂದ ಹಾವು ತುಳಿದು ಅದರ ಮೇಲೆ ನಿಂತಿರುವಂತೆ ಭಾಸವಾಗುತ್ತಿತ್ತು. ತಕ್ಷಣ ಬಗ್ಗಿ ತೆಗೆದುಕೊಳ್ಳಲಾರದೆ ನಿಂತಲ್ಲಿ ನಿಲ್ಲಲೂ ಆಗದೆ ವಿಲಿ ವಿಲಿ ಒದ್ದಾಡುತ್ತಾ ಅಂತಹ ದಡೂತಿ ದೇಹವು ಕೃಶವಾಗುತಿರುವಂತೆ ಅನಿಸತೊಡಗಿತು. ಯಾರಾದರೂ ನೋಡುತ್ತಿರಬಹುದೆಂದು ಆಲೋಚಿಸಿ ಅವರಿಗೆ ಅನುಮಾನ ಬರಬಾರದಂತೆ ನೋಡಿಕೊಳ್ಳಲು ಜಾಗ ಬದಲಿಸಬೇಕೆಂದು ತೀರ್ಮಾನಿಸಿ ಮೆಲ್ಲಗೆ ಕಾಲೆತ್ತಿ ಕಾಸಿನ ಮೇಲೆ ಮಣ್ಣು ಮುಚ್ಚಿ ಒಂದು ಮೊಳದಷ್ಟು ದೂರ ಸರಿದು ತನಗೆ ತಾನೆ ಏನು ಆಗಿಲ್ಲದಂತೆ ನಿಂತುಕೊಂಡರೂ ಮನಸ್ಸು ಮಾತ್ರ ಎಲ್ಲಾ ಕಡೆ ಕಳ್ಳ ಕಣ್ಣಿನಿಂದ ಗಮನಿಸುತ್ತಿತ್ತು. ತನ್ನ ಪೂರ್ವ ನಿರ್ಧರಿತ ತೀರ್ಮಾನದಂತೆ ತೀರ್ಪು ಕೊಟ್ಟುಕೊಂಡು ತನಗೆ ತಾನೆ ತನ್ನನ್ನು ಬಿಡುಗಡೆಗೊಳಿಸಿಕೊಳ್ಳುತ್ತಾ ಮುಂದಿನ ಕಾರ್ಯಕಲಾಪಗಳ ಬಗ್ಗೆ ಯೋಚಿಸತೊಡಗಿತು. ಆದರೆ ಒಳಮನಸ್ಸು ಮಾತ್ರ ತನ್ನ ಘನತೆ, ಮನೆತನದ ಮರ್ಯಾದೆ ಬಗ್ಗೆ ಚಿಂತಿಸುವಂತೆ ಸಲಹೆ ನೀಡಿದರೆ ಅವೆರಡರ ಹೊಯ್ದಾಟದಲ್ಲಿದ್ದರೂ ಹಸಿವು ಗೆಲುವು ಸಾಧಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದವು.
ರವಿಯ ಗರಡಿ ಮನೆ ಕಸರತ್ತು ಅವನನ್ನು ತಪಸ್ಸಿನಂತೆ ಆವರಿಸಿತ್ತು. ದಿನದ ಮುಕ್ಕಾಲು ಭಾಗ ಅವನು ಅಭ್ಯಾಸದಲ್ಲಿಯೇ ಕಳೆಯುತ್ತಿದ್ದ. ಆದರೆ ಅದಕ್ಕೆ ತಕ್ಕಂತೆ ದೇಹಕ್ಕೆ ಆಹಾರ ಸಿಗುತ್ತಿರಲಿಲ್ಲ. ಬಾಳೆಹಣ್ಣು ಮತ್ತು ಕೋಳಿಮೊಟ್ಟೆ ಕಡ್ಡಾಯವಾಗಿ ತಿನ್ನಬೇಕು. ಆದರೆ ಅವೆರಡಕ್ಕೂ ಹಣ ಬೇಕು. ಅದು ರವಿಯ ಜೇಬಿಗೆ ನಿಲುಕದ ವಿಷಯ. ಕಷ್ಟಪಟ್ಟು ಕಸರತ್ತು ಮಾಡಿದಾಗ ಅದರಿಂದ ದೇಹದಲ್ಲಿ ಉಂಟಾಗುತ್ತಿದ್ದ ಹಸಿವು ರಾಕ್ಷಸ ರೂಪವಾಗಿರುತ್ತಿತ್ತು. ಪೆಟ್ಟಿಗೆ ಅಂಗಡಿಯವನ ಬಳಿ ಹೋಗಿ ದಮ್ಮಯ್ಯ ದತ್ತಯ್ಯ ಎಂದು ಸಾಲ ಕೇಳಿದರೆ ಆತ ಬಯ್ಯುತ್ತಾ ಗಡುವು ನಿಗದಿ ಮಾಡಿ ಕೊಡುತ್ತಿದ್ದ ಬಾಳೆಹಣ್ಣು ಯಾರೂ ಕೊಳ್ಳಲಾರದೆ ಗೊನೆಯಿಂದ ಬಿದ್ದು ಕೆಟ್ಟು ಹೋಗಿರುವ ಮತ್ತು ನಾಳೆಯೋ ನಾಡಿದ್ದೊ ಬಿಸಾಕಬೇಕಾಗಿರುವುದನ್ನು ಕೊಡುತ್ತಿದ್ದ. ಸಾಲ ಅಲ್ಲವೆ ತಿರುಗಿ ಮಾತಾಡುವ ಪ್ರಶ್ನೆಯೇ ಇಲ್ಲ. ಅದನ್ನು ತೆಗೆದುಕೊಂಡು ಸಿಪ್ಪೆ ಸಮೇತ ತಿಂದು ತನಗೆ ತಾನೆ ತನ್ನ ಹಸಿವಿಗೆ ಸಾಂತ್ವನ ಹೇಳಿಕೊಂಡು ಸಮಾಧಾನಪಡುತ್ತಿದ್ದ ದಿನಗಳು ಅದೆಷ್ಟೊ. ಸಿಪ್ಪೆಯ ವಿಷಯವೇ ಹೀಗಿರುವಾಗ ಇನ್ನು ಮೊಟ್ಟೆ ತಿನ್ನುವ ಭಾಗ್ಯ ಅದೆಲ್ಲಿಂದ ಬರಬೇಕು. ಆದರೆ ಈ ನಾಲ್ಕಾಣೆ ಮೊಟ್ಟೆಯ ಮೇಲಿನ ಸೇಡು ತೀರಿಸಿಕೊಳ್ಳಲು ದೇವರು ಕೊಟ್ಟ ವರಪ್ರಸಾದವೆಂದೇ ತಿಳಿದುಕೊಂಡ. ರವಿ ತಟ್ಟನೆ ಆ ಮಣ್ಣು ಮುಚ್ಚಿದ್ದ ನಾಲ್ಕಾಣೆಗೆ ಕೈ ಹಾಕಿ ತೆಗೆದುಕೊಂಡು ತನ್ನ ನಿಕ್ಕರಿನ ಜೇಬಿಗೆ ಹಾಕಿಕೊಂಡ ತನ್ನನ್ನು ಯಾರು ಗಮನಿಸುತ್ತಿಲ್ಲವೆಂದು ಒಮ್ಮೆ ಎಲ್ಲಾ ಕಡೆ ನೋಡಿ ಖಾತ್ರಿ ಮಾಡಿಕೊಂಡು ರಾಜಗಾಂಭೀರ್ಯದಿಂದ ಮೊಟ್ಟೆ ಖರೀದಿಸುವ ದೃಢನಿರ್ಧಾರ ಮಾಡಿ ಅಂಗಡಿ ಕಡೆ ಹೆಜ್ಜೆ ಹಾಕಿದ.

ಪ್ರತಿ ಬಾರಿಯೂ ಕಾಸಿಲ್ಲದ ಕಿಸೆಯಿಂದ ಸಾಲ ಬೇಡುವ ದೀನನಾಗಿ ಹೋಗುತಿದ್ದವನಿಗೆ ಇಂದು ಮಾತ್ರ ಸಾಹುಕಾರಿಕೆಯ ದರ್ಪ ಮೈದುಂಬಿಕೊಂಡಿತ್ತು. ಅಂಗಡಿಯವನ ಮುಂದೆ ಯಾವ ಭಂಗಿಯಲ್ಲಿ ನಿಲ್ಲಬೇಕು. ಯಾವ ಭಾಷೆಯಲ್ಲಿ ಸಂಭಾಷಣೆ ನಡೆಸಬೇಕು. ತನ್ನ ಟೀಕು ಟಾಕು ಹೇಗಿರಬೇಕೆಂದು ಯೋಚಿಸುತ್ತಾ ಅವನಿಂದ ಎಷ್ಟು ಮೊಟ್ಟೆಗಳನ್ನು ತೆಗೆದುಕೊಂಡು ಹೇಗೆ ಬೇಯಿಸಿ ತಿನ್ನಬೇಕು? ಎಷ್ಟು ಮೊಟ್ಟೆಗಳನ್ನು ಒಮ್ಮೆಲೆ ತಿನ್ನಬೇಕು, ಮುಂತಾಗಿ ಕಲ್ಪನಾಲೋಕದಲ್ಲಿ ತೇಲುತ್ತಾ ನಡೆಯುತ್ತಿರುವಾಗ ಎದುರಿಗೆ ಬಂದ ಆಸಾಮಿ, `ಹೇ ರವಿ ಯಾಕ್ಲ ನಿಕ್ಕರ್ ಜೇಬೆಲ್ಲ ಮಣ್ಣಾಗೈತೆ’ ಎಂದು ಕೂಗಿದ.. ಕನಸಿನಿಂದ ಚಿಟಾರನೆ ಚೀರಿ ಎಚ್ಚರಗೊಂಡವನಂತಾಗಿ ರವಿ ತನ್ನ ಜೇಬನ್ನು ನೋಡಿಕೊಳ್ಳುತ್ತಾನೆ. ಅದು ಮಣ್ಣಿನಿಂದ ತುಂಬಿಹೋಗಿದೆ. ಮಣ್ಣು ಮುಚ್ಚಿದ್ದ ನಾಲ್ಕಾಣೆಯನ್ನು ಯಾರಿಗೂ ಕಾಣದಂತೆ ಅತಿ ವೇಗವಾಗಿ ತೆಗೆದುಕೊಳ್ಳುವಾಗ ಕೈ ತುಂಬಾ ಮಣ್ಣಿನ ಸಮೇತ ಜೇಬಿಗೆ ಹಾಕಿಕೊಂಡಿದ್ದರ ಪರಿವೆ ಅವನಿಗಿರಲಿಲ್ಲ. ತಕ್ಷಣವೇ ಎಚ್ಚೆತ್ತುಕೊಂಡು `ಏನಿಲ್ಲ ಕಣಣ್ಣೋ ಅಲ್ಲಿ ಬಿದ್ಬಿಟ್ಟೆ ನಿಕ್ಕರ್ ಮಣ್ಣಾಯ್ತು ಅಷ್ಟೆ’ ಅಂದ. ಆದ್ರೆ ಆ ಆಸಾಮಿ `ಲೇ ಕಳ್ ನನ್ಮಗ್ನೆ ಬಿದ್ರೆ ಬರೀ ಜೇಬ್ ಮಾತ್ರಾ ಮಣ್ಣಾಗುತೇನ್ಲಾ ಏನೋ ಕಳ್ಗರ ಬಿಟ್ಟಿಂಗೆ ಕಾಣುತ್ತೆ. ನಿಮ್ಮವ್ವ ಸಿಗ್ಲಿ ಹೇಳ್ತೀನಿ ತಡಿ’ ಅಂದು ಹೋದ. ಯಾವುದು ಯಾರಿಗೂ ಗೊತ್ತಾಗಬಾರ್ದು ಅಂತ ಅಂದ್ಕೊಂಡಿದ್ನೋ ಅದರ ಸುಳಿವೆ ಬೇರೆಯವರಿಗೆ ಸಿಕ್ಕಿದ್ದು ರವಿಯ ಜಂಘಾಬಲವನ್ನೇ ಕುಸಿಯುವಂತೆ ಮಾಡಿತ್ತು.
ಹೆಣದ ಹಿಂದಿದ್ದ ಸೈನ್ಯವನ್ನೆಲ್ಲ ಎದುರಿಸಿ ತನ್ನ ಕಾಲಿನ ಚಳಕದಿಂದಲೇ ಜಯಶಾಲಿಯಾಗಿ ನಾಲ್ಕಾಣೆ ಎಗರಿಸಿದಾಗ ಇದ್ದ ಜೋಶ್ ಪುಸ್ ಅಂತ ಪಂಚರ್ ಆಗಿ ಮುಂದೆ ಒದಗಬಹುದಾದ ಕೇಡುಗಳ ಬಗ್ಗೆ ತಲೆಯಲ್ಲಿ ಸುಳಿಗಳು ಏಳಲಾರಂಭಿಸಿದವು. ಆದರೆ ಭಂಡಧೈರ್ಯವೊಂದು ಎದೆಯಲ್ಲಿ ಅಪ್ರತಿಮ ವೀರತ್ವವನ್ನು ತಂದುಕೊಟ್ಟಿತ್ತು. ಇನ್ನೇನು ಮೊಟ್ಟೆ ಅಂಗಡಿ ಸಮೀಪಿಸಿ ಮತ್ತದೆ ದರ್ಪ ಕೃತಕವಾಗಿ ಮೈತುಂಬಿಕೊಂಡು ಮಣ್ಣಲ್ಲಿ ಮಣ್ಣಾಗಿದ್ದ ನಾಲ್ಕಾಣೆಯನ್ನು ಜೇಬಿನೊಳಗಿನ ಮಣ್ಣೊಳಗಿಂದ ಹೆಕ್ಕಿ ತೆಗೆದು ತಕ್ಷಣವೆ ಅಂಗಿ ತುದಿಯಿಂದ ಸ್ವಚ್ಛ ಮಾಡಿ ಅಂಗಡಿಯವನ ಗಲ್ಲಾ ಪೆಟ್ಟಿಗೆ ಮೇಲೆ ಪಟ್ಟಂತ ಬಡಿದು, `ತಗೋ ಇದಕ್ಕೆ ಪೂರ್ತಿ ಎಷ್ಟು ಬರ್ತವೋ ಅಷ್ಟು ಬೇಯಿಸಿದ ಮೊಟ್ಟೆ ಕೊಡು’ ಎಂದು ಕ್ಯಾಶ್ ಅಂಡ್ ಕ್ಯಾರಿ ಗಿರಾಕಿಯಂತೆ ಜೋರು ದನಿಯಲ್ಲಿ ಕೇಳಿದ್ದನ್ನು ಕಂಡ ಅಂಗಡಿಯವ ಗಾಬರಿಯಾದ, ಯಾವಾಗಲೂ ಐದು ಪೈಸೆ ತಂದು ಅರ್ಧಂಬರ್ಧ ಬೆಂದ ಒಡಕಲು ಮೊಟ್ಟೆಗಳಿಗೆ ಅಂಗಲಾಚಿ ಕೇಳುತಿದ್ದವ ಈವತ್ತಿನ ಗತ್ತು ಭಾರಿ ಆಶ್ಚರ್ಯ ತರಿಸಿತ್ತು. ಅದೂ ಅಲ್ಲದೆ ಬರೋಬ್ಬರಿ ನಾಲ್ಕಾಣೆ ನಗದಿನೊಂದಿಗೆ, ಇದರಲ್ಲೇನೋ ಕರಾಮತ್ತಿದೆ ಎಂದುಕೊಂಡು `ಏನ್ಲಾ ತಮ್ಮ ಹೊಸ ಅವತಾರ ಅಂದೇ ಬಿಟ್ಟಾ!’ `ಏನಾದ್ರೂ ಆಗ್ಲಿ ಅಷ್ಟಕ್ಕೂ ಎಷ್ಟು ಮೊಟ್ಟೆ ಬರ್ತವೊ ಅಷ್ಟು ಕೊಡು’ ಎಂದ ಅದಕ್ಕವನು, `ಚೆನ್ನಾಗಿರದಾದ್ರೆ ಐದು ಬರುತ್ತೆ ಒಡೆದು ಚೂರು ಪಾರು ಬಿಂಡ್ಕೊಡಿರೋದಾದ್ರೆ ಹತ್ತ ಬರುತ್ತೆ. ಯಾವುದ್ಕೊಡ್ಲಿ’ ಅಂದ. ತಲೆಯಲ್ಲಿ ಹತ್ತು ಮೊಟ್ಟೆಗಳ ದಿವ್ಯ ರೂಪ ಒಮ್ಮೆಲೆ ಜ್ವಲಿಸಿದಂತಾಗಿ `ಹತ್ತೇ ಕೊಡು’ ಅಂದ. `ಐದ್ ಪೈಸೆಗೆ ಎರಡ್ ಅರಕಲು ಮೊಟ್ಟೆ ತಿಂತಿದ್ದ ತಗಡ ಗಿರಾಕಿ ಕತೆ ನಮಿಗೊತ್ತಿಲ್ವೆ’ ಅಂತ ಮನ್ಸಿನಾಗೆ ಅಂದ್ಕಂಡ ಅಂಗಡಿ ಆಸಾಮಿ ಹತ್ತು ಅರಕಲು ಮುರುಕಲು ಮೊಟ್ಟೆ ಕೊಟ್ಟ. ಹತ್ತು ಮೊಟ್ಟೆ ಒಮ್ಮೆಲೆ ನೋಡಿ ಮಿಸ್ಟರ್ ಇಂಡಿಯಾ ಪ್ರಶಸ್ತಿನ ಯಾವುದೇ ಕಾಂಪಿಟೇಷನ್ ಇಲ್ದೆ ಗೆದ್ದಂತಾಗಿ ಪರಮಾನಂದದಲ್ಲಿ ತೇಲಿ ಯಾರೂ ಕಾಣದಂತಹ ಜಾಗದಲ್ಲಿ ಕೂತು ಅತ್ಯಂತ ಸಂಭ್ರಮಾಚರಣೆಯಿಂದ ಪ್ರತಿಯೊಂದು ಮೊಟ್ಟೆಯನ್ನು ಇಂಚಿಂಚು ಮುಟ್ಟುತ್ತಾ ನೇತ್ರಾನಂದ ಪಡೆಯುತ್ತಾ, ಆತ್ಮಾನಂದ ಹೊಂದುತ್ತಾ ಸಂತೃಪ್ತಿಯ ಪರಮಾನಂದದಲ್ಲಿ ತೇಲಿ ಅದುವರೆಗೂ ಅನುಭವಿಸಲಾಗದೆ ಉಳಿದಿದ್ದ ಸುಖವನ್ನು ಅನುಭವಿಸಿದ ವಿಜಯದ ಸಂಭ್ರಮದಲ್ಲಿ ಎಲ್ಲಾ ಮೊಟ್ಟೆಗಳನ್ನು ತಿಂದು ತೇಗಿಬಿಟ್ಟಿದ್ದ.
ಹತ್ತು ಮೊಟ್ಟೆಗಳು ಒಮ್ಮೆಲೆ ಹೊಟ್ಟೆ ಸೇರಿ ಕ್ಷಣಾರ್ಧದಲ್ಲಿಯೇ ಅವುಗಳಿಂದ ಶಕ್ತಿ ವೃದ್ಧಿಸಿ ಅಮಲೇರಿಸಿಕೊಂಡ ಮದಗಜದಂತೆ ಗರಡಿ ಮನೆಯನ್ನಿಂದು ಗಡಗಡ ನಡುಗಿಸಬೇಕೆಂದು ಬರುತ್ತಿರುವಾಗ ಮುದುಕಪ್ಪನೊಬ್ಬ ಅಡ್ಡ ನಿಂತಿದ್ದ. ಸೊಂಟ ಬಾಗಿ ಊರುಗೋಲಿನ ಬಡಕಲು ದೇಹದ ಮುದುಕಪ್ಪನ ಕಣ್ಣೋಟ ಹತ್ತು ಮೊಟ್ಟೆಯ ತಿಂದು ಊದಿ ಕೊಂಡಿದ್ದ ಜಟ್ಟಿ ಹೊಟ್ಟೆಗೆ ಗಾಳಿ ತುಂಬಿದ ಬಲೂನಿಗೆ ಸೂಜಿ ಚುಚ್ಚಿದಂತಿತ್ತು. ಈ ಮುದುಕಪ್ಪನ ವಕ್ರದೃಷ್ಟಿಗೆ ಕೊಂಚ ವಿಚಲಿತನಾದ ರವಿ ಅದನ್ನು ತೋರಿಸಿಕೊಳ್ಳದೆ `ಏನ್ ಮುದ್ಕಪ್ಪ ಎಲ್ಲಾದ್ರು ಕಟ್ಟೆ ಮೇಲೆ ಕೂತ್ಕಂಡು ಬೀಡಿ ಸೇತ್ಕಂಡು ಆರಾಮಗಿರದ್ ಬಿಟ್ಟು ಯಾಕಿಂಗ್ ಅಡ್ಡಾಡ್ತಿಯಾ’ ಅಂತ ತುಸು ಕೀಟ್ಲೆ ದನಿಯಲ್ಲೆ ಛೇಡಿಸಿದ. ಅದ್ಕೆ ಆ ಮುದ್ಕಪ್ಪ, `ಏನ್ಲಾ ಮಗ ಬಾಳ ಖುಷಿಯಾಗಿದ್ದಿಯಾ, ಏನ್ ಸಮಾಚಾರ, ಹೊಟ್ಟೆ ಬೇರೆ ಗುಡಾಣಾಗೈತೆ’ ಅಂದ. ಯಾಕೊ ಮುದಕಪ್ಪನ ವಾರೆನೋಟ, ವಕ್ರಮಾತು ರವಿಯ ಮನಸ್ಸನ್ನು ಗಲಿಬಿಲಿಗೊಳಿಸಿದರೂ, ಅದನ್ನು ತೋರ್ಪಡಿಸದೆ ಮರೆಮಾಚಿ ತನ್ನ ಶಕ್ತಿ ಮೀರಿ ಮುದುಕಪ್ಪನನ್ನು ಎದುರಿಸಲು ಎಷ್ಟೇ ಪ್ರಯತ್ನಿಸಿದರೂ ಸ್ವಲ್ಪವೂ ಬದಲಾಗದ ಮುದುಕಪ್ಪನ ವಾರೆನೋಟದ ಮುಂದೆ ರವಿ ಮಂಕಾಗುತ್ತಿದ್ದರೂ `ಜಟ್ಟಿ ಮಣ್ಣಾದರೂ ಮೀಸೆ ಮಣ್ಣಾಗಿಲ್ಲ’ವೆಂಬಂತೆ ವರ್ತಿಸುತ್ತಿದ್ದ ರವಿಯನ್ನು ಕಂಡು `ಲೇ ಯಾಕ್ಲ ಮಗ ಆವಾಗ್ಲೆ ಆ ಹೆಣದ ಮೆರವಣಿಗೆ ಹೋಗಬೇಕಾದ್ರೆ ನೀನು ಒಂದೇ ಜಾಗದಲ್ಲಿ ಒಂಟಿ ಕಾಲ್ಮೇಲೆ ನಿಂತ್ಕಂಡು ಮೂಕಾಭಿನಯ… ಏಕಪಾತ್ರಾಭಿನಯ ಮಾಡ್ತಿದ್ದಲ್ಲ. ಅದು ಚಿಂದೋಡಿ ಲೀಲಾ ನಾಟಕ ಕಂಪನಿಯ ಕಲಾವಿದ್ರನ್ನೆ ಮೀರಸಂಗಿತ್ತು. ಲೇ ನಾ ನೋಡ್ದೆ ಕಣ್ಳಾ ನೀ ಹೆಣದ ಮೇಲಿಂದ ಬಿದ್ದ ನಾಲ್ಕಾಣೆ ಎತ್ಕಂಡಿದ್ದ. ತೂ ನಿನ್ನ, ನಿಮ್ಮ ಅಜ್ಜ ಎಂತವನು ನಿಮ್ಮ ಮನೆ ಎಂಥಾದ್ದು, ಇನ್ನೊಂದ್ಸಾರಿ ಹಿಂಗೆ ಮಾಡಬ್ಯಾಡ. ನಾನು ಯಾರಿಗೂ ಹೇಳಲ್ಲ’ ಅಂತ ಹೇಳಿ ಹೊರಟೋದ.
ಒಂದು ಕ್ಷಣ ರವಿಯ ತಲೆ ಗರ್ರಂತ ತಿರುಗಿ ರಪ್ಪನೆ ನೆಲದ ಮೇಲೆ ಬಿದ್ದಂತಾಗಿ ನೆಲವನ್ನೆ ಭದ್ರವಾಗಿ ಹಿಡಿದುಕೊಂಡು ಕುಳಿತಂತೆ ಭಾಸವಾಯಿತು. ಯಾವುದು ಯಾರಿಗೂ ತಿಳಿಯಬಾರದು ಎಂದುಕೊಂಡು ತುಂಬಾ ಜಾಗರೂಕತೆ ವಹಿಸಿದ್ದನೋ ಅದು ಅಷ್ಟು ಬೇಗನೆ ಮುದುಕಪ್ಪನ ಕಣ್ಣಿಗೆ ಬಿದ್ದದ್ದು ಕಂಡು ತನ್ನ ಮನಸ್ಸಿನಲ್ಲಿ ತನ್ನ ಬಗ್ಗೆಯೆ ಮೂಡಿದ ಅಸಹ್ಯ ಭಾವನೆಯಿಂದ ಬೆಂದುಹೋಗಿದ್ದ. ಅಲ್ಲದೆ ಮತ್ಯಾರಾದರೂ ನೋಡಿರಬಹುದೆಂದು ಅನಿಸತೊಡಗಿತು. ಅಲ್ಲಿಂದ ಬಹಳ ಕಷ್ಟಪಟ್ಟು ತನ್ನನ್ನು ತಾನೇ ಸಂತೈಸಿಕೊಂಡು ನಿಧಾನವಾಗಿ ಮನೆ ಕಡೆಗೆ ಹೆಜ್ಜೆ ಹಾಕಿದ. ನೀನು ಎಷ್ಟೇ ಕಸರತ್ತು ಮಾಡಿದರೂ ಅಷ್ಟೆ ಅದಕ್ಕೆ ತಕ್ಕಂತೆ ಮೊಟ್ಟೆ ಬಾಳೆ ಹಣ್ಣುಗಳನ್ನು ಪ್ರತಿದಿನವೂ ತಿನ್ನದೆ ಹೋದರೆ ಸಾಧನೆ ಮಾಡಲಾಗದು ಎಂದು ಹೇಳಿದ್ದ ತನ್ನ ಗರಡಿ ಮನೆಯ ಹಿರಿಯನೊಬ್ಬನ ಮಾತನ್ನು ನೆನೆದು ಅವನನ್ನು ಮನಸ್ಸಿನಲ್ಲಿ ಬೈದುಕೊಳ್ಳುತ್ತಾ ತನ್ನ ತಾಯಿಯ ನೆನಪಾಗಿ ಮನೆಗೆ ಹೋಗಿ ಹೇಗೆ ಮುಖ ತೋರಿಸಲಿ ಎಂದು ತೊಳಲಾಟದಿಂದಲೆ ಮನೆ ತಲುಪಿದ. ಎಷ್ಟೆ ಹಸಿವು ಬಂದರೂ ಸ್ವಾಭಿಮಾನ ಬಿಟ್ಟು ನಡೆಯಬಾರದೆಂದು ಅಮ್ಮ ಹೇಳಿಕೊಟ್ಟಿದ್ದ ಮಾತುಗಳ ತಲೆಯಲ್ಲಿ ಗುಂಗಿ ಹುಳುವಿನಂತೆ ಕೊರೆಯುತ್ತಿದ್ದವು. ಎಂತಹದೆ ಸಂದರ್ಭದಲ್ಲೂ ಅವಳ ಮಾತುಗಳನ್ನು ಮೀರಿರಲಿಲ್ಲ. ಈಗ ಹೇಗೆ ಮುಖ ತೋರಿಸಲಿ ಅಥವಾ ಅವಳಿಗೆ ಎಲ್ಲಾ ನಿಜ ಹೇಳಿ ಬಿಟ್ಟರೆ ಅವಳು ಈಗಾಗಲೆ ದುಃಖದ ಮಡುವಿನಲ್ಲಿ ಮುಳುಗಿ ಹೋಗಿದ್ದಾಳೆ ಮತ್ತಷ್ಟು ಘೋರಸ್ಥಿತಿಗೆ ತಳ್ಳಿದಂತಾಗುತ್ತದೆ. ಮುಂತಾಗಿ ಯೋಚಿಸುತ್ತಾ ಪ್ರಜ್ಞಾಶೂನ್ಯನಾಗಿ ದಾರಿಯಲ್ಲಿ ಸಾಗಿ ಮನೆ ತಲುಪಿದ, ಅವನ ಅಸಹಜ ಆಗಮನದಿಂದಲೆ ಯಾವುದೋ ತಪ್ಪು ಮಾಡಿರಬಹುದೆಂದು ಅನುಮಾನಿಸಿದ ತಾಯಿ ನೋಟವನ್ನು ನೋಡಲಾರದಷ್ಟು ನಿತ್ರಾಣನಾಗಿದ್ದ ಮಗನನ್ನು ದಿಟ್ಟಿಸಿ ಅವನ ಬಾಯಿಯಲ್ಲಿ ಅಳಿದುಳಿದ ಮೊಟ್ಟೆಯ ಕುರುಹುಗಳು ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದವು. ಆದರೂ ಅದಾವುದನ್ನು ತೋರ್ಪಡಿಸಿಕೊಳ್ಳದೆ ಸಹಜವಾಗಿಯೇ ವರ್ತಿಸಲೆತ್ನಿಸುತ್ತಿದ್ದ ತಾಯಿಯ ವರ್ತನೆ ಅವನಿಗೆ ಮತ್ತಷ್ಟು ಸಂಕಟವನ್ನು ತಂದಿತ್ತು. ತನ್ನ ತಾಯಿ ಯಾವುದೇ ತಪ್ಪು ಮಾಡಿದ್ದರೂ ಸಹಿಸುತ್ತಾಳೆ ಆದರೆ ಸ್ವಾಭಿಮಾನ ಮತ್ತು ಮರ್ಯಾದೆ ಹೋಗುವಂತಹ ಕೆಲಸವನ್ನು ಯಾರೆ ಮಾಡಿದ್ದರೂ ಆಕೆ ಕ್ಷಣಾರ್ಧದಲ್ಲಿ ದುರ್ಗಿಯಾಗಿಬಿಡುತ್ತಿದ್ದಳು.
ಚಿಕ್ಕಂದಿನಿಂದಲೂ ಮನೆ ಮಂದಿಗೆಲ್ಲ ಅದನ್ನು ಕಟ್ಟುನಿಟ್ಟಾಗಿ ಹೇಳಿಕೊಟ್ಟಿದ್ದಲ್ಲದೆ ಎಲ್ಲರೂ ಪಾಲಿಸಿಕೊಂಡು ಬರುವಂತೆ ಎಚ್ಚರವಹಿಸಿದ್ದಳು. ಅದೇಕೋ ಏನೋ ಅದು ಅವಳಿಗೆ ತಮ್ಮ ಬಡತನಕ್ಕಿಂತ ಘೋರವಾಗಿ ಕಂಡಿತ್ತು. ಇದೆಲ್ಲವನ್ನು ಮನಸ್ಸಿಗೆ ತಂದುಕೊಂಡ ರವಿ ನಿಜ ಹೇಳದೆ ಬೇರೆ ದಾರಿ ಕಾಣದೆ ತಾಯಿಯನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡು ಜೋರಾಗಿ ಅಳುತ್ತಾ ನಡೆದ ಸಂಗತಿಯನ್ನೆಲ್ಲ ಹೇಳಿದ. ತುಂಬ ಹೊತ್ತು ಮೌನ ಆವರಿಸಿತು. ಎಲ್ಲವೂ ಸ್ತಬ್ಧ, ಯಾವುದೋ ಒಂದು ಮೃದು ಆಲಿಂಗನ ರವಿಯನ್ನು ಸ್ಪರ್ಶಿಸಿ ತಲೆಸವರಿ ಕತ್ತನೆತ್ತಿ ಮುತ್ತಿಕ್ಕಿದ್ದ ತುಟಿಗಳು ದುಃಖಭರಿತವಾಗಿ ಗದ್ಗದಿತವಾಗಿರುವುದನ್ನು ಕಂಡು ಮತ್ತಷ್ಟು ದುಃಖ, ಯಾವುದೇ ಶಿಕ್ಷೆಗೆ ಸಿದ್ಧನಾಗಿ ಕಾಯುತ್ತಿದ್ದ ಮಗನ ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಂಡ ಜೀವ ಸಾಂತ್ವನದ ಮಾತುಗಳ ಮೆಲುಧ್ವನಿ ತಂಪೆಲರ ತಂದಿತ್ತು. ಮೌನ ಎಲ್ಲವನ್ನು ಅರ್ಥೈಸಿದಂತೆ ಭಾವನೆಗಳು ಅಮೂರ್ತ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದವು. ಅಳತೆಗೆ ಸಿಗಲಾರದಷ್ಟು ಅಂತರಾಳದ ಅನುಸಂಧಾನ ಎರಡು ಜೀವಗಳ ಮಧ್ಯೆ ಮತ್ತಷ್ಟು ಪ್ರೀತಿ ಬೆಸುಗೆ ಬೆಸೆಯುತ್ತಿತ್ತು. ನಿಧಾನವಾಗಿ ತಿಳಿಯಾದ ಸನ್ನಿವೇಶಕ್ಕೆ ನವಿರಾದ ತಂಗಾಳಿ ಬೀಸಿದಂತೆ ಆ ತಾಯಿ ತೀರ್ಪೋಂದನ್ನು ಪ್ರಕಟಿಸಿದ್ದಳು. `ನೀನು ಇಂದಿನಿಂದ ಯಾವುದೇ ಸಾವಿನ ಸುದ್ದಿ ನಿನಗೆ ತಿಳಿದ ತಕ್ಷಣ ನೀನು ಅಲ್ಲಿಗೆ ಹಾಜರಿದ್ದು ಅವರ ದುಃಖದಲ್ಲಿ ಭಾಗಿಯಾಗಿ ಶವ ಸಂಸ್ಕಾರದಲ್ಲಿ ತೊಡಗಿ ಪೂರ್ಣ ಕ್ರಿಯೆ ಮುಗಿಯುವವರೆಗೆ ಇದ್ದು ಬರಬೇಕು’ ಎಂದು ರವಿಗೆ ಹೇಳಿದ ಮಾತೇ ಇಂದಿಗೂ ರವಿ ತನಗೆ ಸಂಬಂಧವೇ ಇಲ್ಲದ, ಪರಿಚಯಸ್ಥರೂ ಅಲ್ಲದ ಅನೇಕ ಅನಾಥ ಶವಗಳನ್ನು ಒಳಗೊಂಡಂತೆ ತನ್ನ ಅರಿವಿಗೆ ಬಂದ ಅಸಂಖ್ಯ ಶವಗಳ ಸಂಸ್ಕಾರಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಅದೊಂದು ನಿರಂತರ ಸೇವೆಯಾಗಿ ರೂಢಿಸಿಕೊಂಡು ನಡೆಸಿಕೊಂಡು ಬರುತ್ತಿರುವುದೇ ಅಂದು ಅವರ ತಾಯಿ ವಿಧಿಸಿದ ಮಾತಾಜ್ಞೆಯೆ ಕಾರಣ, ಅಂದಿನಿಂದ ಇಂದಿನವರೆಗೂ ರವಿ ಅದೆಷ್ಟು ಸಾವಿರಾರು ಶವಗಳ ಸಂಸ್ಕಾರ ಮಾಡಿದ್ದಾರೆಂಬುದು ಜಗಜ್ಜನಿತ. ವಿಶೇಷವೆಂದರೆ ಕೋವಿಡ್ ಸಂದರ್ಭದಲ್ಲಿ ರಕ್ತ ಸಂಬಂಧಿಕರೆ ಹೆಣ ನೋಡಲಾರದಂಥ ಸ್ಥಿತಿಯಲ್ಲಿ ರವಿ ಸಾವಿರಾರು ಹೆಣಗಳನ್ನು ಸಂಸ್ಕಾರ ಮಾಡಿ ತನ್ನ ತಾಯಿಯ ಆಜ್ಞೆಯನ್ನು ಚಾಚು ತಪ್ಪದೆ ಪಾಲಿಸಿದ್ದೂ ನಿಜಕ್ಕೂ ಅವಿಸ್ಮರಣೀಯ.

`ವ್ಯಾಧನೊಂದು ಮೊಲನ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ. ನೆಲನಾಳ್ವನ ಹೆಣನೆಂದಡೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ..’ ಎನ್ನುವ ಬಸವಣ್ಣನ ವಚನ ಸಾಲುಗಳಿಗೆ ಹೆಣದ ಮೇಲಿನ ಹಣ ಅನ್ನ ಕೊಂಬಿತಲ್ಲ ಎಂದು ಅಶರೀರವಾಣಿ ನುಡಿಯುತ್ತಿತ್ತು.
(ಶೀರ್ಷಿಕೆ: ‘ರವಿ ನೀನು ಆಗಸದಲ್ಲಿ’ (ಜಿಮ್ ರವಿ ಅವರ ಜೀವನ ಚರಿತ್ರೆ), ಲೇಖಕರು: ಮಂಜುನಾಥ ಮಾಗೋದಿ, ಬೆಲೆ: 350/-, ಪ್ರಕಾಶನ: ಅಮೂಲ್ಯ ಪುಸ್ತಕ, ವಿಜಯನಗರ, ಬೆಂಗಳೂರು -40 (ಮೊ: 09448676770)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


