ಸಂಸ್ಕೃತಿಯ ರಕ್ಷಣೆ, ಆಚರಣೆಗಳ ಹೊಣೆಯನ್ನು ಹೆಣ್ಣಿನ ಕುತ್ತಿಗೆಗೆ ನೇತುಹಾಕಿ, ತಾವು ಮಾತ್ರ ಹಾಯಾಗಿ ಮೊಬೈಲ್, ಲ್ಯಾಪ್ ಟಾಪ್‌ಗಳಲ್ಲಿ ಕಾಡುಹರಟೆ, ಕಛೇರಿ ಕೆಲಸದಲ್ಲಿ ಕಳೆದುಹೋದರೆ, ಚಿಕ್ಕವರು ಮಾಡುವ ಕೆಲಸದಲ್ಲಿನ ಲೋಪ ಹುಡುಕುವುದರಲ್ಲೇ ಹಿರಿಯರು ನಿರತರಾದರೆ, ಓದು ಮಾತ್ರ ಸಾಕೆಂದು ಮಕ್ಕಳನ್ನು ಕೆಲಸಕ್ಕೆ ಹಚ್ಚದಿದ್ದರೆ, ಹಬ್ಬದ ಸೊಗಸು ಅರಿವಿಗೆ ಬರುವುದೇ ಇಲ್ಲ. ಒಂದು ಕಾಲಕ್ಕೆ ಮನೆಯ ಸುತ್ತಮುತ್ತ ಅನಾಯಾಸವಾಗಿ ದೊರೆಯುತ್ತಿದ್ದ ಪತ್ರೆ, ಪುಷ್ಪ, ಮಾವು, ಬೇವು, ಬಾಳೆಕಂದು, ಹೊಂಬಾಳೆ ಇವತ್ತಿಗೆ ಚಿನ್ನದ ಬೆಲೆ ಹೊತ್ತುಕೊಂಡು, ಮಾರ್ಕೆಟ್ ಸೇರಿವೆ. ಹೊಸಕಾಲದ ತಿನಿಸಿನ ರುಚಿಕಂಡ ಮಕ್ಕಳಿಗೆ ಪಾರಂಪರಿಕ ಆಹಾರ ತಮಾಷೆಯಾಗಿ ಕಾಣುತ್ತಿದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

“ಇವತ್ತಿಗೆ ನಿನ್ನ ಹಾಗೆ ಹಬ್ಬ, ಪೂಜೆ, ಮನೆಕೆಲಸ, ತೋಟ ಅಂತ ಆಸೆಪಟ್ಟು ಆಸ್ಥೆಯಿಂದ ಕೆಲಸ ಮಾಡುವವರು ಇದ್ದಾರೆ ಎನ್ನುವುದೇ ಆಶ್ಚರ್ಯ ಕಣೆ ಹುಡುಗಿ. ಇವಕ್ಕೆಲ್ಲ ಪುರುಸೊತ್ತು ಇದ್ದರೆ ಸಾಲಲ್ಲ. ಮಾಡಬೇಕೆನ್ನುವ ಆಸಕ್ತಿ, ಪರಂಪರೆಯನ್ನು ಬಿಡಬಾರದೆನ್ನುವ ಶ್ರದ್ಧೆ, ಮುಂದಿನ ತಲೆಮಾರಿಗೆ ಸ್ವಲ್ಪವಾದರೂ ದಾಟಿಸಬೇಕೆನ್ನುವ ಇಚ್ಚೆ… ಇವೆಲ್ಲಾ ಇದ್ದರಷ್ಟೇ ಹೀಗೆ ಅಚ್ಚುಕಟ್ಟಾಗಿ ಹಬ್ಬ ಮಾಡಿ, ಕಳೆಗಟ್ಟಿಸಲು ಆಗುವುದು.” ಅವರು ಮನಸ್ಸು ತುಂಬಿ ಮೆಚ್ಚುಗೆಯ ಮಾತನ್ನಾಡುತ್ತಿದ್ದರು.

ಮನಸ್ಸು ತಾನಾಗಿಯೇ ಬಾಲ್ಯಕಾಲದೆಡೆಗೆ ಓಡಿತ್ತು. ಶ್ರಾವಣ ಶುರುವಾಯಿತೆಂದರೆ ನಮಗೆ ರಜೆಗಳ ಸಾಲು ಶುರುವಾದಂತೆ. ಬೇಸಿಗೆಯ ರಜೆಯಲ್ಲಿ, ಯಾವ ಅಂಕೆಶಂಕೆಯಿಲ್ಲದೆ ಮೈಸೂರಿನ ಬಿಸಿಲು ವ್ಯರ್ಥವಾಗದಂತೆ, ಗಸಗಸೆ ಮರದ ಹೀಚುಕಾಯಿ, ದೋರಹಣ್ಣುಗಳು ಸಹಿತ ಉಳಿಯದಂತೆ, ಗಣೇಶ ದೇವಸ್ಥಾನದ ಪ್ರಾಂಗಣ ಬಿಕೋ ಎನ್ನದಂತೆ ಸತತ ಎರಡು ತಿಂಗಳು ಆಡಿ, ಕುಣಿದು, ಕುಪ್ಪಳಿಸಿದ ಮೇಲೆ ಶಾಲೆ ಶುರುವಾದರೆ ಅಕ್ಷರಶಃ ಜೈಲು. ಬೆಳಿಗ್ಗೆ ಎದ್ದರೆ ಪಾಠ ಕೇಳುವ, ಹೋಂ ವರ್ಕ್ ಬರೆಯುವ, ಮಾತನಾಡದೆ ಗಪ್ ಚುಪ್ ಕುಳಿತು ಜಾಣಮಕ್ಕಳಾಗಬೇಕಾದ ಅನಿವಾರ್ಯತೆ. ಸಿಗುವುದೊಂದು ಭಾನುವಾರ ಹೇಗೆ ಕಳೆದುಹೋಗುತ್ತಿತ್ತೋ ಬಲ್ಲವರಾರು? ಅಂತಹ ಬೇಸರದ ದಿನಗಳಲ್ಲಿ ಮತ್ತೆ ನಮ್ಮ ಬಾಲಹೃದಯಕ್ಕೆ ತಂಪನ್ನೆರೆಯುತ್ತಿದ್ದುದೇ ಈ ಹಬ್ಬಗಳು. ವರ್ಷಾವಧಿ ಹಬ್ಬ ಎಂದು ಮನೆಯ ಮೂಲೆಮೂಲೆಗಳನ್ನು ಸ್ವಚ್ಛಗೊಳಿಸುತ್ತಾ, ಹಬ್ಬದ ಬಾಗಿನ, ತೆಂಗಿನಕಾಯಿ, ಸೀರೆ, ಅಲಂಕಾರ, ನೈವೇದ್ಯಕ್ಕೆ ಭಕ್ಷ್ಯಗಳು ಎಂದು ಸರಭರ ಓಡಾಡುತ್ತಾ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದ ಅಮ್ಮ ನಮ್ಮನ್ನು ‘ಓದು’ ಎನ್ನುವ ಗೋಜಿಗೆ ಹೋಗುತ್ತಿರಲಿಲ್ಲ. ಅವಳ ಮನೆಪಾಠದ ಶಿಸ್ತಿನ ಅಂಕೆಯೂ ಇಲ್ಲದೆ, ಹೆಚ್ಚುವರಿ ರಜೆಗಳನ್ನು ಮಜವಾಗಿ ಕಳೆಯುತ್ತಾ, ಹೊಸಬಟ್ಟೆ, ಸಿಹಿತಿಂಡಿಯ ಸುಖದಲ್ಲಿ ಹಬ್ಬದ ಸಾಲು ಕಳೆಯುತ್ತಿತ್ತು.

ದೊಡ್ಡ ದೊಡ್ಡ ರಂಗೋಲಿ ಬಿಡಿಸುವುದು, ಹೂವಿನ ದಿಂಡು ಕಟ್ಟುವುದು, ಬಗೆಬಗೆಯ ಪತ್ರೆ, ಪುಷ್ಪಗಳನ್ನು ಆಯ್ದು ತರುವುದು, ದೀಪಗಳಿಗೆ ಬತ್ತಿ ಹಾಕುವುದು, ದಾರಗಳಿಗೆ ಗಂಟು ಹಾಕುವುದು, ತೋರಣ ಕಟ್ಟುವುದು, ಕಿಟಕಿ ಬಾಗಿಲುಗಳನ್ನು ಫಳಫಳ ಹೊಳೆಯುವಂತೆ ಒರೆಸುವುದರಲ್ಲಿ ನಮ್ಮ ಪಾತ್ರ ಪ್ರಸ್ತುತವಾಗುತ್ತಿತ್ತು. ಕೈಗೆ ಕಟ್ಟಿಕೊಂಡ ಅರಿಷಿಣ ದಾರ, ಹಬ್ಬಕ್ಕೆಂದು ತೊಟ್ಟ ಜುಮುಕಿ, ಮಾರನೆಯ ದಿನಕ್ಕೂ ಬಾಡದೆ ನಗುತ್ತಿದ್ದ ಕಾಕಡ ಹೂ ಮುಡಿದು ಶಾಲೆಗೆ ಹೊರಟರೆ, ಆ ದಿನವೆಲ್ಲ ಕನಸಿನ ಲೋಕದ್ದೇ ರಾಯಭಾರ. ಆ ವಯಸ್ಸಿಗೆ ಹಬ್ಬವೆಂದರೆ ಸಂಭ್ರಮದ ಪಾಲು ಹಿರಿದು.

ಮದುವೆಯಾಗಿ ಐದಾರು ವರ್ಷ ಕಳೆಯುತ್ತಲೇ, ಹಬ್ಬವೆಂದರೆ ಜವಾಬ್ದಾರಿ ಜಗ್ಗುವ ಅನಿವಾರ್ಯ ಕಾರ್ಯ. ಮನೆಯ ಒಳಗೆ, ಹೊರಗೆ ಕೆಲಸ ತೂಗಿಸುವುದೇ ಸಾಹಸವಾಗಿರುವಾಗ, ಹಬ್ಬದ ಕೆಲಸ ಹೆಚ್ಚುವರಿ ಆತಂಕ ಸೃಷ್ಟಿಸುತ್ತದೆ. ಮನೆಯಲ್ಲಿನ ಹಿರಿಯರು ಅವರ ಕಾಲದ ಮಡಿ, ನೂರೈವತ್ತು ಬಗೆಯ ಭಕ್ಷ್ಯ, ದೀರ್ಘ ಆಚರಣೆಗಳ ಬಗ್ಗೆ ಮೆಲುಕು ಹಾಕುತ್ತಾ, ಸೂಕ್ಷ್ಮವಾಗಿ ಇಂದಿನ ಹ್ರಸ್ವಗೊಂಡ ವಿಧಿವಿಧಾನಗಳ ಬಗ್ಗೆ ಚುಚ್ಚುತ್ತಾ ಕುಳಿತರೆಂದರೆ, ಸಂಭ್ರಮದ ಮಾತು ಹಾಗಿರಲಿ. ಶಾಂತಿ, ಸಮಾಧಾನವೇ ಮರೀಚಿಕೆಯಾಗಿರುತ್ತದೆ. ಮಾಡಿದರೂ ಮಾತು ಕೇಳಬೇಕು. ಮಾಡದೆ ಸುಮ್ಮನಿದ್ದರೂ ಮಾತು ಕೇಳಲೇಬೇಕು. ಅದರ ಬದಲು ಹಬ್ಬದ ರಜೆಯನ್ನು ಹಾಯಾಗಿ ಕಳೆದ ಸುಖವಾದರೂ ದಕ್ಕಲಿ ಎಂಬಂತೆ, ಹೋಟೆಲ್ ರೆಸಾರ್ಟ್‌ಗಳಲ್ಲಿ ದಿನಕಳೆದು ಬರುವವರಿದ್ದಾರೆ. ಮನೆಮಟ್ಟಿಗೆ ಸಾಧ್ಯವಾದದ್ದನ್ನು ಸರಳವಾಗಿ ಆಚರಿಸಿ, ಸಮಾಧಾನಪಡುವವರೂ ಇದ್ದಾರೆ. ಮನೆಮಂದಿಯೆಲ್ಲ ಕೆಲಸ ಹಂಚಿಕೊಂಡು, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ತಮಾಷೆಯಿಂದ ಕಾಲೆಳೆಯುತ್ತಾ, ಪೈಪೋಟಿ ನಡೆಸುತ್ತಾ, ಪೂಜೆಯ ಸಮಯದಲ್ಲಿ ಭಯಭಕ್ತಿಯಿಂದ ನಡೆದುಕೊಂಡು, ಹಬ್ಬದಡುಗೆಯುಂಡು, ಮಧ್ಯಾಹ್ನದ ಜೊಂಪು ಕಳೆಯುತ್ತಲೇ, ಮನೆಮನೆಗೆ ಕುಂಕುಮಕ್ಕೆ ಕರೆ ಕಳಿಸುತ್ತಾ ಕಳೆಯುತ್ತಿದ್ದ ಸಂಜೆ, ಸಂಪನ್ನಗೊಳ್ಳುತ್ತಿದ್ದ ಹಬ್ಬ ಇಂದಿಗೆ ಕನಸಿನಂತೆ ಭಾಸವಾಗಬೇಕಿಲ್ಲ.

ಸಂಸ್ಕೃತಿಯ ರಕ್ಷಣೆ, ಆಚರಣೆಗಳ ಹೊಣೆಯನ್ನು ಹೆಣ್ಣಿನ ಕುತ್ತಿಗೆಗೆ ನೇತುಹಾಕಿ, ತಾವು ಮಾತ್ರ ಹಾಯಾಗಿ ಮೊಬೈಲ್, ಲ್ಯಾಪ್ ಟಾಪ್‌ಗಳಲ್ಲಿ ಕಾಡುಹರಟೆ, ಕಛೇರಿ ಕೆಲಸದಲ್ಲಿ ಕಳೆದುಹೋದರೆ, ಚಿಕ್ಕವರು ಮಾಡುವ ಕೆಲಸದಲ್ಲಿನ ಲೋಪ ಹುಡುಕುವುದರಲ್ಲೇ ಹಿರಿಯರು ನಿರತರಾದರೆ, ಓದು ಮಾತ್ರ ಸಾಕೆಂದು ಮಕ್ಕಳನ್ನು ಕೆಲಸಕ್ಕೆ ಹಚ್ಚದಿದ್ದರೆ, ಹಬ್ಬದ ಸೊಗಸು ಅರಿವಿಗೆ ಬರುವುದೇ ಇಲ್ಲ. ಒಂದು ಕಾಲಕ್ಕೆ ಮನೆಯ ಸುತ್ತಮುತ್ತ ಅನಾಯಾಸವಾಗಿ ದೊರೆಯುತ್ತಿದ್ದ ಪತ್ರೆ, ಪುಷ್ಪ, ಮಾವು, ಬೇವು, ಬಾಳೆಕಂದು, ಹೊಂಬಾಳೆ ಇವತ್ತಿಗೆ ಚಿನ್ನದ ಬೆಲೆ ಹೊತ್ತುಕೊಂಡು, ಮಾರ್ಕೆಟ್ ಸೇರಿವೆ. ಹೊಸಕಾಲದ ತಿನಿಸಿನ ರುಚಿಕಂಡ ಮಕ್ಕಳಿಗೆ ಪಾರಂಪರಿಕ ಆಹಾರ ತಮಾಷೆಯಾಗಿ ಕಾಣುತ್ತಿದೆ. ಹಾಗೆಯೇ, ರಂಗೋಲಿ ಹಾಕುವುದು, ಹೂ ಕಟ್ಟುವುದು, ತೋರಣ ಕಟ್ಟುವುದು, ದೇವರ ಕಲಶಕ್ಕೆ ಸೀರೆಯುಡಿಸುವುದು, ಒಬ್ಬಟ್ಟು ಚಕ್ಕುಲಿ ಮಾಡುವುದು ಆಧುನಿಕತೆಯ ಗಾಳಿ ಸೋಕಿಸಿಕೊಂಡ ಹೆಣ್ಣುಮಕ್ಕಳಿಗೆ ಅಷ್ಟು ಸುಲಭಕ್ಕೆ ಒಲಿಯದಿರಬಹುದು. ಆದರೆ ಒಲಿಸಿಕೊಳ್ಳುವ ಹಂಬಲ ತೋರಿದರೆ, ಕಲಿಸುವ ಮಮತೆ ತೋರಬೇಕಿದೆ. ನಮ್ಮ ಅಹಮ್ಮಿನ ಕೋಟೆಗಳನ್ನು ದಾಟಿ, ಎಲ್ಲರೂ ಕೆಲಸವನ್ನು ಹಂಚಿಕೊಂಡಾಗ, ಮುಕ್ತ ಮನಸ್ಸಿನಿಂದ ಕಲಿಯುವ, ಕಲಿಸುವ ಉತ್ಸಾಹ ತೋರಿದಾಗ, ಸಂಭ್ರಮದ ಹಬ್ಬಗಳು ಹೊರೆಯಾಗದೆ, ಹಿತವೆನಿಸುತ್ತವೆ.

ಎಲ್ಲರನ್ನೂ ಒಳಗೊಳ್ಳುವ, ಎಲ್ಲರಿಗೂ ಒಳಿತನ್ನು ಹಾರೈಸುವ, ದೇವಾನುದೇವತೆಗಳನ್ನು ಮನೆಮಕ್ಕಳಂತೆ ಕಂಡು, ಕರೆದು, ಉಪಚರಿಸಿ ಸಂತೋಷಿಸುವ ಈ ಪರಂಪರೆ, ಸಣ್ಣಪುಟ್ಟ ಸಿಟ್ಟು ಮನಸ್ತಾಪಗಳಿಂದ ಮುಂದುವರೆಯದೆ, ಮುಂದಿನ ತಲೆಮಾರಿಗೆ ದಾಟದೆ, ಮರೆಯಾಗಬಾರದಲ್ಲವೇ? ಹಿರಿಯರು, ಕಿರಿಯರು ಮತ್ತು ಈಗಿನವರನ್ನು ಬೆಸೆಯುವ, ಹಬ್ಬಗಳ ಮೂಲ ಆಶಯ ಅರಿಯೋಣ. ಸರಳವಾದರೂ ಸಹೃದಯತೆಗೆ ಕೊರತೆಯಿಲ್ಲದಂತೆ, ನಲಿವನ್ನು ಹಂಚುತ್ತಾ ಸಂಭ್ರಮಿಸೋಣ. ಹಬ್ಬ ಚೆಂದಗಾಣುವುದೇ ಆಗ. ಏನಂತೀರಿ?