ನಾವು ಮೊಟ್ಟ ಮೊದಲು ಬಂದಾಗ ನಮಗೆ ಆಶ್ರಯ ಕೊಟ್ಟ ಶಂಭುಲಿಂಗ ಹೆಗಡೆಯವರ ಜೊತೆಗಿನ ಒಡನಾಟದ ತರಹವೆ. ಅವರ ಮಕ್ಕಳ ತರಹವೆ ನಾವಿದ್ದೆವಲ್ಲ. ಮೊದಲು ಒಂದು ಒಪ್ಪಂದ ಅಂತ ಶುರುವಾದರೂ, ಮುಂದಿನ ದಿನಗಳಲ್ಲಿ ಅಲ್ಲೊಂದು ಬಾಂಧವ್ಯ ಏರ್ಪಡುವ ಸಾಧ್ಯತೆಗಳು ಜಾಸ್ತಿ ಇದ್ದವು. ಈಗಾಗಲೇ ವೃದ್ಧರಾಗಿರುವ ಮಾಲೀಕರ ಅವಶ್ಯಕತೆಗಳೂ ಕೂಡ ಅಷ್ಟೆಲ್ಲಾ ಇರುವುದಿಲ್ಲ. ಮುಂದೆ ಹೋದಂತೆ ಸಂಬಂಧದ ಗಾಢತೆಯ ಮೇಲೆ ಅವಲಂಬಸಿ, ತೋಟದ ಮಾಲೀಕರು ಮುಖ್ಯ ಬೆಳೆಯಾದ ಅಡಿಕೆಯಿಂದ ತಮಗೆ ಬರುವ ಲಾಭದ ಕೆಲ ಅಂಶವನ್ನು ಕೂಡ ತಮ್ಮ ಜೊತೆ ಇರುವವರೊಂದಿಗೆ ಹಚ್ಚಿಕೊಳ್ಳುವ ಸಾಧ್ಯತೆಯೂ ಇತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

ಮೊದಲೆಲ್ಲ ನನ್ನ ರೈತ ಬಳಗವನ್ನು ಒಟ್ಟಿಗೆ ಸೇರಿಸಬೇಕು ಅಂದರೆ ನನ್ನ ಬೆಂಗಳೂರಿನ ಬೆಳೆಸಿರಿ ಕಾರ್ಯಾಲಯವನ್ನೇ ಆಶ್ರಯಿಸುತ್ತಿದ್ದೆ. ಅಂತಹ ಮೀಟಿಂಗ್/ ಅಥವಾ get-to-gather ಗಳಿಗೆ ಎಲ್ಲರಿಗೂ ಖುದ್ದಾಗಿ ಬರಲು ಸಾಧ್ಯ ಆಗುತ್ತಿರಲಿಲ್ಲ. ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಸಂಚರಿಸುವುದು ಅಂದರೆ ತಮಾಷೆಯೇ? ಹೀಗಾಗಿ ಬಂದಷ್ಟು ಜನರೆಲ್ಲ ಸೇರಿ ಕೃಷಿಯ ಸಂಬಂಧಿತ ತಂತಮ್ಮ ಅನುಭವಗಳನ್ನು, ಯೋಜನೆಗಳನ್ನು ಹಂಚಿಕೊಳ್ಳುತ್ತಿದ್ದೆವು. ಅದು ಕೋರೋನಾ ಪೂರ್ವ ಕಾಲ! ಕೋರೋನಾ ಬಂದು ಹೋದ ಮೇಲೆ ಎಲ್ಲವೂ online ಆಗಿಬಿಟ್ಟಿತು! ಕೃಷಿಯ ಬಗ್ಗೆ ಪಾಠ ಮಾಡಲು online platform ಬಳಸಬಹುದು ಎಂಬ ಯೋಚನೆ ಕೂಡ ಮೊದಲು ನನಗೆ ಹೊಳೆದಿರಲಿಲ್ಲ. ಆದರೆ ಕೋರೋನಾ ನಂತರ online ಕೃಷಿ ಪಾಠ ಕೂಡ ಶುರು ಮಾಡಿದ್ದೆ. ಆಗ ದೇಶದ ಬೇರೆ ಬೇರೆ ಕಡೆಗಳಿಂದ ಜನರು ನನ್ನ ತರಬೇತಿ ಪಡೆಯತೊಡಗಿದ್ದರು. ಬೇರೆ ದೇಶಗಳಿಂದ ಕೂಡ ಜನರು ಭಾಗವಹಿಸುತ್ತಿದ್ದರು. ಹೀಗಾಗಿ ನಂತರದ ದಿನಗಳಲ್ಲಿ ನಮ್ಮ ಬಳಗದ meeting ಗಳನ್ನು ಕೂಡ online ನಲ್ಲೇ ಮಾಡುತ್ತಿದ್ದೆವು.

ಶ್ರೀ. ನರಸಿಂಹ ಹೆಗಡೆ ಅವರ “ಉಚಿತ ಅಡಿಕೆ ತೋಟ ಬೇಕೆ?” ಕುರಿತ ವಿಚಾರವನ್ನು ಕೂಡ online ನಲ್ಲೇ ಎಲ್ಲರ ಜೊತೆಗೆ ಚರ್ಚೆ ಮಾಡೋಣ ಅಂತ ಈಗಾಗಲೇ ನಿರ್ಧರಿಸಿದ್ದೆನಲ್ಲ. ಅವತ್ತಿನ ಅದರ ಕುರಿತ ಕಾನ್ಫರೆನ್ಸ್ ಕರೆಗೆ ನನ್ನ ಹಲವಾರು ಶಿಷ್ಯರು ಭಾಗವಹಿಸಿದ್ದರು ಕೂಡ. ಎಲ್ಲರಿಗೂ ಒಂದು ಕುತೂಹಲ.

ಶ್ರೀಯುತ ನರಸಿಂಹ ಹೆಗಡೆ ಅವರನ್ನು ನನ್ನ ಬಳಗಕ್ಕೆ ಪರಿಚಯಿಸಿದೆ. ಅವರೊಬ್ಬ ಕೃಷಿಕರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು… ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿಗಳು. ಅವರ ಒಳ್ಳೆಯ ಕೆಲಸಗಳನ್ನು ಗುರುತಿಸಿ ಅವರಿಗೆ ಹಲವು ಪ್ರಶಸ್ತಿಗಳು ಕೂಡ ಸಂದಿವೆ. ಆ ಸಂದರ್ಶನವನ್ನು zoom ಎಂಬ ಒಂದು ತಂತ್ರಾಂಶ/ app ಬಳಸಿ ಮುದ್ರಿಸಿಕೊಂಡೆ.

ಹೆಗಡೆ ಅವರು ನನ್ನ ಶಿಷ್ಯ ಬಳಗವನ್ನು ಉದ್ದೇಶಿಸಿ ಹೀಗೆ ಹೇಳಿದರು..
“ನಮ್ಮ ದೇಶದಲ್ಲಿ ಗ್ರಾಮಗಳು ಇವೆ ಹಾಗೂ ಪಟ್ಟಣಗಳೂ ಇವೆ. ಈ ಎರಡರ ಮಧ್ಯ ಅಂತರ ದಿನೇ ದಿನೇ ಜಾಸ್ತಿ ಆಗುತ್ತಿದೆ. ಒಂದು ಕಾಲದಲ್ಲಿ ಸ್ವಾತಂತ್ರ್ಯದ ಬಳಿಕ ಎಲ್ಲೆಲ್ಲೂ ಬಡತನ ತಾಂಡವ ಆಡುತ್ತಿತ್ತು. 5 ಎಕರೆಗಿಂತ ಕಡಿಮೆ ಗದ್ದೆ ತೋಟ ಇದ್ದ ಎಷ್ಟೋ ಕುಟುಂಬಗಳು ಪರ್ಯಾಯ ಆದಾಯ ಇರಲಿ ಅಂತ ತಮ್ಮ ಮಕ್ಕಳನ್ನು ಪಟ್ಟಣಗಳಿಗೆ ಕಳಿಸಿದರು. ಇದರಿಂದ ಹಳ್ಳಿಯ ಕುಟುಂಬಗಳಿಗೆ ದುಡ್ಡು ಬರಲು ಶುರುವಾಯ್ತು. ಆದರೆ ಪಟ್ಟಣಕ್ಕೆ ಹೋದವರು ವಾಪಸ್ಸು ಬರಲಿಲ್ಲ. ಹಳ್ಳಿಗಳಿಂದ ಪಟ್ಟಣಗಳಿಗೆ ಕೆಲಸಕ್ಕೆ ಹೋಗುವವರ ಸಂಖೆಯೂ ಕೂಡ ಕ್ರಮೇಣ ಹೆಚ್ಚಾಯ್ತು. ಹಳ್ಳಿಗಳಲ್ಲಿ ಕೃಷಿ ಮಾಡಿಕೊಂಡು ಇದ್ದವರಿಗೆ ಕ್ರಮೇಣ ವಯಸ್ಸು ಆಯ್ತು. ಈಗ ಇಲ್ಲಿನ ತೋಟ ನೋಡಿಕೊಳ್ಳುವವರು ಯಾರು? ಅದಕ್ಕಾಗಿಯೇ ಪಟ್ಟಣಗಳಲ್ಲಿ ಇರುವವರನ್ನು ವಾಪಸ್ಸು ಕರೆಸುವುದೇ ಈ ಯೋಜನೆಯ ಉದ್ದೇಶ.”
ಅದನ್ನು ಕೇಳಿ ನನ್ನ ಬಳಗದಲ್ಲಿ ಒಬ್ಬೊಬ್ಬರೆ ಒಂದೊಂದು ಪ್ರಶ್ನೆ ಕೇಳಲು ಶುರು ಮಾಡಿದರು.

ಹರಜಿತ ಎಂಬ ಹಿರಿಯರು, ಇಲ್ಲಿಂದ ಅಲ್ಲಿಗೆ ಅಷ್ಟು ದೂರ ಹೋಗಿ, ಚಿಕ್ಕ ತೋಟದಲ್ಲಿ ಬೆಳೆದು ಜೀವನ ನಡೆಸುವುದು ಅಷ್ಟು ಲಾಭದಾಯಕವೆ? ಅಂತ ಕೇಳಿದರು.

ಆಗ ಹೆಗಡೆಯವರು ನಕ್ಕು, ನೀವು ಮೊದಲು ಒಂದು ಸಲ ಇಲ್ಲಿಗೆ ಬನ್ನಿ. ತೋಟವನ್ನಾದರೂ ನೋಡಿ. ಇಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ನಿಮ್ಮದೊಂದು ಪ್ರಶ್ನೆಗಳ ಯಾದಿ ತಯಾರಿಸಿಕೊಳ್ಳಿ. ಅದು ಕೆಲಸಗಾರರ ಬಗ್ಗೆ ಇರಬಹುದು, ಬಂಡವಾಳದ ಕುರಿತು ಇರಬಹುದು .. ಆಮೇಲೆ ಉಳಿದ ವಿವರಗಳನ್ನು ಮಾತಾಡಬಹುದು ಅಂದರು.

ಇಂತಹ ಒಂದು ವಿಚಾರವನ್ನು ನಗರವಾಸಿಗಳ ಮುಂದೆ ಇಟ್ಟಾಗ, ಅವರ ಯೋಚನಾ ಲಹರಿ “ಇದರಿಂದ ಎಷ್ಟು ಲಾಭ ಬಂದೀತು” ಎಂಬುದೇ ಆಗಿರುತ್ತದೆ. ಬರಿಯ ಧನಲಾಭ ನೋಡುವುದಾದರೆ ಇಂತಹ ಯೋಜನೆಗಳು ಅವರಿಗೆ ಸರಿಹೊಂದಲಾರದು. ಅದಕ್ಕೆ ಉತ್ತರವಾಗಿ ಹೆಗಡೆ ಮುಂದುವರಿಸಿ ಹೇಳಿದರು.

ನೀವು ಪಟ್ಟಣಗಳಲ್ಲಿ ಎಷ್ಟೊಂದು ಕಷ್ಟ ಪಡುತ್ತಿದ್ದೀರಿ. ಎಷ್ಟೊಂದು ಸಮಸ್ಯೆಗಳು ಇವೆ ಅಲ್ಲಿ. ಕಸ ವಿಲೇವಾರಿ ಸಮಸ್ಯೆ, ವಾಹನ ದಟ್ಟಣೆ ಸಮಸ್ಯೆ, ಮಳೆ ಬಂದರೆ ಸಮಸ್ಯೆ.. ಒಂದೇ ಎರಡೇ? ಅಂತಹ ಪರಿಸ್ಥಿತಿಯಲ್ಲಿ ನೀವು ಹಳ್ಳಿಗೆ ಬಂದರೆ ಇಲ್ಲಿ ಎಷ್ಟೊಂದು ಒಳ್ಳೆಯ ವಾತಾವರಣ ಇದೆ, ಇನ್ನೂ ಆಹಾರದ ಗುಣಮಟ್ಟ ಅಷ್ಟು ಕೆಟ್ಟಿಲ್ಲ. ಒಳ್ಳೆಯ ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳಬಹುದು. ಅಂತಹ ಎಷ್ಟೋ ಲಾಭಗಳ ಮುಂದೆ ದುಡ್ಡಿನ ಲಾಭ ಗೌಣ ಅನಿಸುವುದಿಲ್ಲವೇ?

ಹಾಗಂತ ಇದು ಎಲ್ಲರಿಗೂ ಅಲ್ಲ. ಇದ್ದ ಕೆಲಸವನ್ನು ಬಿಟ್ಟು ಕೂಡಲೇ ಹಳ್ಳಿಯಲ್ಲಿ ಉಳಿಯಲು ಎಲ್ಲರಿಗೂ ಸಾಧ್ಯ ಆಗೋದಿಲ್ಲ. ಹಲವಾರು ಜವಾಬ್ದಾರಿಗಳು ಇರುತ್ತವೆ. ಮನೆಯ ಮೇಲೆ ಮಾಡಿದ ಸಾಲ ಇರುತ್ತದೆ, ಮಕ್ಕಳ ಶಿಕ್ಷಣವೂ ಒಂದು ಸವಾಲು ಆಗಿರುತ್ತದೆ. ಹಾಗಂತ ಹಳ್ಳಿಯಲ್ಲಿ ಪಟ್ಟಣಕ್ಕಿಂತ ಒಳ್ಳೆಯ ಶಿಕ್ಷಣ ದೊರೆಯುತ್ತದೆ, ಅದೂ ಕಡಿಮೆ ಖರ್ಚಿನಲ್ಲಿ! ಆದರೂ…

ಇದು ಯಾರಿಗೆ ಒಳ್ಳೆಯ ಯೋಜನೆ ಅಂದರೆ, ನೀವು ಕೆಲಸ ಬಿಟ್ಟಿದ್ದೀರಿ. ಸ್ವಂತದ್ದು ಅಂತ ಹೊಲ ಇಲ್ಲ. ನಿಮ್ಮ ಬಳಿ ಒಂದೈವತ್ತು ಲಕ್ಷ ರೂಪಾಯಿ ಉಳಿತಾಯ ಮಾಡಿದ ಹಣ ಇದೆ. ಅದರಲ್ಲಿ ಒಂದು ಹೊಲ ತೆಗೆದುಕೊಂಡು ಕೃಷಿ ಮಾಡುವ ಬಯಕೆ ಇದೆ. ಆದರೆ ಇದ್ದ ಹಣವನ್ನೆಲ್ಲ ಖಾಲಿ ಮಾಡಿ ಹೊಲ ತೆಗೆದುಕೊಂಡು ಕೃಷಿ ಮಾಡಲು ನಿಮ್ಮ ಬಳಿ ಏನು ಉಳಿಯುತ್ತದೆ? ಹೊಸದಾಗಿ ತೋಟ ಮಾಡುವಾಗ ಹಲವಾರು ಖರ್ಚುಗಳು ಇರುತ್ತವೆ. ಹೊಲದಲ್ಲಿ ಕೂಡ ಬೆಳೆದ ಕೂಡಲೇ ದುಡ್ಡು ಬರುತ್ತದೆ ಎಂಬ ಯಾವುದೇ ಖಾತ್ರಿ ಇಲ್ಲ. ಇದ್ದ ಹಣವೆಲ್ಲ ಹಾಕಿ ಕೈ ಸುಟ್ಟುಕೊಂಡರೆ? ಅದರ ಬದಲು ನಿಮ್ಮ ಬಳಿ ಇರುವ ಅದೇ ಐವತ್ತು ಲಕ್ಷಗಳನ್ನು ಯಾವುದೋ ಒಂದು ಒಳ್ಳೆಯ ಹೂಡಿಕೆ ಮಾಡಿ, ಇಂತಹ ಅಡಿಕೆ ತೋಟದಲ್ಲಿದ್ದು, ಒಂದಿಷ್ಟು ಬೆಳೆದು ಒಳ್ಳೆಯ ಉತ್ಪನ್ನ ತೆಗೆಯುವುದು ಒಳ್ಳೆಯದಲ್ಲವೇ? ನಿಮ್ಮ ದುಡ್ಡು ಉಳಿಯಿತು, ಜೊತೆಗೆ ಕೃಷಿ ಪಯಣವೂ ಶುರುವಾಯ್ತು. ಈಗಾಗಲೇ ಬೆಳೆದಿರುವ ತೋಟ ಆಗಿರುವುದರಿಂದ ತೋಟದ ಕೆಲಸಕ್ಕೆ ಅಷ್ಟೊಂದು ಖರ್ಚು ಮಾಡುವ ಅವಶ್ಯಕತೆಯೂ ಇರುವುದಿಲ್ಲ. ಅದೂ ಅಲ್ಲದೆ ಅಲ್ಲಿಗೆ ಬರುವವರ ಮೂಲ ಉದ್ದೇಶ ಹಣ ಸಂಪಾದನೆಗಿಂತಲೂ ಒಳ್ಳೆಯ ಬದುಕು ಕಟ್ಟಿಕೊಳ್ಳುವುದು ಆಗಿರಬೇಕು. ಇದು ಹೆಗಡೆಯವರ ಚಿಂತನೆ ಆಗಿತ್ತು.

ಉದ್ದೇಶವೇನೋ ಸರಿ ಇದೆ. ಯೋಜನೆ ಕೂಡ ಅದ್ಭುತವಾಗಿದೆ. ಆದರೆ ಎಷ್ಟು ಜನ ಹೀಗೆ ಇರುವ ಮನಸ್ಸು ಮಾಡಬಹುದು? ಇದು ಒಬ್ಬರ ನಿರ್ಧಾರ ಅಲ್ಲವಲ್ಲ. ಹೆಂಡತಿಯೂ ಬರಲು ಒಪ್ಪಿದರೆ ಸ್ವರ್ಗ. ಹಾಗಂತ ಯಾರಿಗೂ ಒತ್ತಡದ ಹೇರಲು ಆಗದು. ನೀನೊಬ್ಬನೆ ಹೋಗಿ ಅಲ್ಲಿರು ನಾನು ಆಮೇಲೆ ಬರುತ್ತೇನೆ ಅನ್ನಬಹುದು! ಹೀಗೆ ಹಲವು ತೊಡಕುಗಳು ಇದ್ದೇ ಇರುತ್ತವೆ.

ಆಗ ನನ್ನ ಇನ್ನೊಬ್ಬ ಶಿಷ್ಯ ಒಂದು ಪ್ರಶ್ನೆ ಒಗೆದರು.
ಸರ್ ನಮಗೂ ಬರೋ ಮನಸ್ಸಿದೆ. ಆದರೆ ಲೇಬರ್ ಸಮಸ್ಯೆ ಇದೆಯಲ್ಲ? ಕೆಲಸಕ್ಕೆ ಕರೆದಾಗ ಯಾರೂ ಬರೋದಿಲ್ಲ. ಹೆಚ್ಚು ದುಡ್ಡು ಕೊಟ್ಟು ಕರೆಸಿದರೂ ಕೆಲಸ ಮಾಡೋದಿಲ್ಲ!

ಆಗ ಹೆಗಡೆಯವರು ಹೇಳಿದ ಉತ್ತರ ತುಂಬಾ ಮಾರ್ಮಿಕವಾಗಿತ್ತು.

ಕೆಲಸಗಾರರು ಇದ್ದಾರೆ. ನಾವು ಅವರನ್ನು ಸರಿಯಾಗಿ involve ಮಾಡಿಲ್ಲ. ಅವರನ್ನು stake holders / ಪಾಲುದಾರ ಅಂತ ನೋಡಬೇಕೆ ವಿನಃ ಬರಿ ಕೆಲಸದ ಆಳು ಅಂತಲ್ಲ. ಮೊದಲೆಲ್ಲ ಅವರು ನಮ್ಮ ಕುಟುಂಬದ ಸದಸ್ಯರಂತೆಯೇ ಇದ್ದರು. ಈಗಲೂ ಯಾಕೆ ಹಾಗೆ ಮಾಡಬಾರದು? ನಮ್ಮ ಉತ್ಪನ್ನದಲ್ಲಿ ಇಂತಿಷ್ಟು ಪಾಲು ಯಾಕೆ ಕೊಡಬಾರದು? ಹಾಗಾದಾಗ ನಮ್ಮ ಸಹಾಯಕ್ಕೆ ತುಂಬಾ ಜನರು ಸಿಕ್ಕೆ ಸಿಗುತ್ತಾರೆ.

ಹೌದಲ್ಲವೇ? ನಮ್ಮ software ಕಂಪೆನಿಗಳಲ್ಲಿ ಎಷ್ಟೋ ಕಡೆ ಕಂಪೆನಿಯ ಉದ್ಯೋಗಿಗಳಿಗೆ shares ಅಂತ ಕೊಡುತ್ತಾರೆ. ಹಾಗೆಯೇ ಇಲ್ಲೂ ಮಾಡಬಹುದಲ್ಲವೇ? ಇದೊಂದು “ಕೆಲಸಗಾರರು ಸಿಗೋದಿಲ್ಲ” ಎಂಬ ದೊಡ್ಡ ಸಮಸ್ಯೆಗೆ ಪರಿಹಾರ ಆದೀತು ಅನಿಸಿತು. ಆದರೆ ಹಾಗೆ ಆಳುಗಳನ್ನು involve ಮಾಡಿ, ಮನೆಯ ಸದಸ್ಯನಂತೆಯೇ ನೋಡಿಕೊಂಡು, ಲಾಭದಲ್ಲಿ 100% ಅವನಿಗೇ ಕೊಟ್ಟೂ ಕೂಡ ಹಿಂದೊಮ್ಮೆ ನಾನು ಕಷ್ಟ ನಷ್ಟ ಅನುಭವಿಸಿದ್ದೆನಲ್ಲ? ಹಾಗಂತ ಅದು ಯಾವಾಗಲೂ ಆದೀತು ಅನ್ನಲಾಗದು. ಈ ನಿಟ್ಟಿನಲ್ಲಿ ರಚನಾತ್ಮಕ ಪ್ರಯತ್ನ ಮಾಡಬೇಕು ಅನಿಸಿತು.
ಮತ್ತೊಬ್ಬರು, ಅಲ್ಲಿ ಇರುವ ವ್ಯವಸ್ಥೆ ಹೇಗೆ ಅಂತ ಕೇಳಿದರು.

ಆ ತೋಟದಲ್ಲಿಯೇ ಇರುವ ವ್ಯವಸ್ಥೆಯನ್ನು ತೋಟದ ಮಾಲೀಕರೆ ಮಾಡಿಕೊಡುತ್ತಾರೆ. ಅದೂ ಬೇಡ ಅನಿಸಿದರೆ ಅಲ್ಲಿಂದ ಆರು ಕಿಲೋಮೀಟರು ದೂರದಲ್ಲಿ ಶಿರಸಿಯಲ್ಲಿ ಕೂಡ ಇರಬಹುದು. ಆದಷ್ಟು ತೋಟದಲ್ಲಿ ಇದ್ದರೆ ಉತ್ತಮ. ಯಾಕಂದರೆ ಈ ಯೋಜನೆಯ ಮೂಲ ಉದ್ದೇಶ ವಯಸ್ಸಾದ ತೋಟದ ಮಾಲೀಕರಿಗೆ ಆಸರೆಯೂ ಆಗಿ ಇರುವುದು. ಹಾಗಂತ ಅವರ ಮನೆಯಲ್ಲಿಯೇ ಇರುವುದಲ್ಲ. ಹತ್ತಿರದಲ್ಲಿಯೇ ಬೇರೆ ಮನೆ ವ್ಯವಸ್ಥೆ ಇರುತ್ತದೆ. ಆಗ ನನಗೆ ನನ್ನ ಶಿಷ್ಯ ರಾಮ ನೆನಪಾದ. ಹಳ್ಳಿಯಲ್ಲಿ ಎಂದೂ ಇರದ ಆತ ಹಲ್ಲಿಯನ್ನೇ ನೋಡಿ ಬೆಚ್ಚಿ ಈ ಹಳ್ಳಿ ಸಹವಾಸವೆ ಬೇಡ ಅಂತ ಓಡಿ ಹೋಗಿದ್ದು ಮತ್ತೆ ನೆನಪಾಯ್ತು.

ಒಂದು ಕಾಲದಲ್ಲಿ ಸ್ವಾತಂತ್ರ್ಯದ ಬಳಿಕ ಎಲ್ಲೆಲ್ಲೂ ಬಡತನ ತಾಂಡವ ಆಡುತ್ತಿತ್ತು. 5 ಎಕರೆಗಿಂತ ಕಡಿಮೆ ಗದ್ದೆ ತೋಟ ಇದ್ದ ಎಷ್ಟೋ ಕುಟುಂಬಗಳು ಪರ್ಯಾಯ ಆದಾಯ ಇರಲಿ ಅಂತ ತಮ್ಮ ಮಕ್ಕಳನ್ನು ಪಟ್ಟಣಗಳಿಗೆ ಕಳಿಸಿದರು. ಇದರಿಂದ ಹಳ್ಳಿಯ ಕುಟುಂಬಗಳಿಗೆ ದುಡ್ಡು ಬರಲು ಶುರುವಾಯ್ತು. ಆದರೆ ಪಟ್ಟಣಕ್ಕೆ ಹೋದವರು ವಾಪಸ್ಸು ಬರಲಿಲ್ಲ. ಹಳ್ಳಿಗಳಿಂದ ಪಟ್ಟಣಗಳಿಗೆ ಕೆಲಸಕ್ಕೆ ಹೋಗುವವರ ಸಂಖೆಯೂ ಕೂಡ ಕ್ರಮೇಣ ಹೆಚ್ಚಾಯ್ತು.

ಆಮೇಲೆ ಈ ತೋಟದಲ್ಲಿ ಅಡಿಕೆ ಮರಗಳ ಮಧ್ಯೆ ಬೆಳೆಯುವುದರ ಜೊತೆಗೆ ಸರಕಾರದವರು ತೋಟದ ಜೊತೆಗೆ ಅಂತ ಕೊಡುವ ಬೇಣದಲ್ಲಿ ಕೂಡ ಹಲವಾರು ಹಣ್ಣಿನ ಮರಗಳನ್ನು ಬೆಳೆಸಬಹುದು. ಒಬ್ಬರೇ ಇರಲು ಆಗೋದಿಲ್ಲ ಅಂದರೆ ಮೂರು ನಾಲ್ಕು ಜನ ಉತ್ಸಾಹಿ ತರುಣರು ಕೂಡ ಒಟ್ಟಿಗೆ ಇದ್ದು ಮಾಡಬಹುದು. ಈ ತರಹದ ಸಹಕಾರ ಕೊಡಲು ಅವರು ತಯಾರಿದ್ದರು. ಆದರೆ ಹೋಗಲು ತಯಾರಿರುವ ತರುಣರು ಬೇಕಲ್ಲ!

ಸಾರ್ ಏನಾದರೂ ಕಾನೂನು ಬದ್ಧವಾದ agreement ಇರುತ್ತೆಯೇ? ನಾವು ಖರ್ಚು ಮಾಡಿದ ಮೇಲೆ ಮಾಲೀಕರು ಒದ್ದು ಓಡಿಸಿದರೆ ಏನು ಮಾಡೋದು? ಅಂತ ರಘು ಕೇಳಿದ ಪ್ರಶ್ನೆ ಎಲ್ಲರಿಗೂ ನಗು ತರಿಸಿತು.

ಅದಕ್ಕೆ ಹೆಗಡೆಯವರು, ನೀವು ಅಲ್ಲಿಗೆ ಬಂದು ಮಾಲೀಕರಿಗೆ ಹಾಗೂ ನಿಮ್ಮ ಮಧ್ಯೆ ಎಲ್ಲವೂ ಸರಿ ಅನಿಸಿದರೆ ವಕೀಲರ ಹತ್ತಿರ ಕಾನೂನು ಬದ್ಧವಾಗಿ ಒಂದು agreement ಮಾಡಿಯೇ ತೀರುತ್ತೇವೆ. ಮುಂದೆ ಯಾರಿಗೂ ಸಮಸ್ಯೆ ಆಗಬಾರದು. ಅದಕ್ಕಾಗಿ ಏನೇನು ದಾಖಲೆಗಳು ಪತ್ರಗಳು ಬೇಕೋ ಅದನ್ನೆಲ್ಲ ಮಾಡುತ್ತೇವೆ, ಅಂದರು.

ಅವರದು ಒಂದು ತರಹದ ಅಪ್ಪ ಮಗನ ಸಂಬಂಧ ಬೆಳೆಸುವ ಪ್ರಯತ್ನವಾಗಿತ್ತು. ನಾವು ಮೊಟ್ಟ ಮೊದಲು ಬಂದಾಗ ನಮಗೆ ಆಶ್ರಯ ಕೊಟ್ಟ ಶಂಭುಲಿಂಗ ಹೆಗಡೆಯವರ ಜೊತೆಗಿನ ಒಡನಾಟದ ತರಹವೆ. ಅವರ ಮಕ್ಕಳ ತರಹವೆ ನಾವಿದ್ದೆವಲ್ಲ. ಮೊದಲು ಒಂದು ಒಪ್ಪಂದ ಅಂತ ಶುರುವಾದರೂ, ಮುಂದಿನ ದಿನಗಳಲ್ಲಿ ಅಲ್ಲೊಂದು ಬಾಂಧವ್ಯ ಏರ್ಪಡುವ ಸಾಧ್ಯತೆಗಳು ಜಾಸ್ತಿ ಇದ್ದವು. ಈಗಾಗಲೇ ವೃದ್ಧರಾಗಿರುವ ಮಾಲೀಕರ ಅವಶ್ಯಕತೆಗಳೂ ಕೂಡ ಅಷ್ಟೆಲ್ಲಾ ಇರುವುದಿಲ್ಲ. ಮುಂದೆ ಹೋದಂತೆ ಸಂಬಂಧದ ಗಾಢತೆಯ ಮೇಲೆ ಅವಲಂಬಸಿ, ತೋಟದ ಮಾಲೀಕರು ಮುಖ್ಯ ಬೆಳೆಯಾದ ಅಡಿಕೆಯಿಂದ ತಮಗೆ ಬರುವ ಲಾಭದ ಕೆಲ ಅಂಶವನ್ನು ಕೂಡ ತಮ್ಮ ಜೊತೆ ಇರುವವರೊಂದಿಗೆ ಹಚ್ಚಿಕೊಳ್ಳುವ ಸಾಧ್ಯತೆಯೂ ಇತ್ತು.

ಇವೆಲ್ಲದರ ಜೊತೆಗೆ ಅಲ್ಲಿ ಇರುವ ಇತರ ಪ್ರಗತಿಪರ ರೈತರ ತೋಟಗಳಿಗೆ ಆಗಾಗ ಭೇಟಿ ಕೊಟ್ಟು ಹೊಸದೇನನ್ನೋ ಕಲಿಯುವ ಅವಕಾಶ ಕೂಡ ಕಲ್ಪಿಸಿಕೊಡುವ ವಿಚಾರವನ್ನು ಅವರು ಹೇಳಿದರು. ಹಳ್ಳಿಯಲ್ಲಿ ಈಗ ಎಲ್ಲವೂ ಇದೆ. ಯುವಕರಿಗೆ ಬೇಕಾದ network ಕೂಡ! ಅಂತೆಲ್ಲ ಅವರು ವಿವರಿಸುತ್ತಿದ್ದಾಗ ನನ್ನ ಇನ್ನೊಬ್ಬ ಶಿಷ್ಯ “ಕೆಲವು ದಿನಗಳು ಇದ್ದು trail ನೋಡಿ ಆಮೇಲೆ ಮುಂದುವರಿಯಬಹುದೆ?” ಎಂಬ ಪ್ರಶ್ನೆ ಕೇಳಿದರು. Trail ನೋಡಲು ಅದೇನು software app ಅಂದುಕೊಂಡರೆ? ಆದರೂ ಆ ಕ್ಷಣಕ್ಕೆ ನಗರವಾಸಿಯಾದ ಅವರಿಗೆ ಹಾಗೆ ಅನಿಸಿರುವುದರಲ್ಲಿ ತಪ್ಪಿಲ್ಲ. ಆದಕ್ಕೆ ಹೆಗಡೆಯವರು, ಮೊದಲು ಇಲ್ಲಿಗೆ ಒಂದು ದಿನಕ್ಕಾದರೂ ಬನ್ನಿ ಆಮೇಲೆ ಮಾತಾಡೋಣ ಅಂತ ನಕ್ಕರು.

ಆಗ ನನ್ನ ಮತ್ತೊಬ್ಬ ಶಿಷ್ಯ ವಿವೇಕ “ಸರ್ ನಮ್ಮದೂ ಹಳ್ಳಿಯಲ್ಲಿ ತೋಟ ಇದೆ. ಅಪ್ಪ ಅಮ್ಮನಿಗೆ ವಯಸ್ಸಾಗಿದೆ. ನಮಗೂ ಬೆಂಗಳೂರು ಸಾಕಾಗಿದೆ. ವಾಪಸ್ಸು ಹೋಗಬೇಕು ಅನಿಸುತ್ತದೆ. ಆದರೆ ಅಲ್ಲಿ ಮಂಗನ ಕಾಟ ತುಂಬಾ ಇದೆ. ನಾವು ಬೆಳೆದದ್ದು ಏನೂ ನಮ್ಮ ಕೈಗೆ ಸಿಗುತ್ತಿಲ್ಲ. ಏನು ಮಾಡೋದು, ಭಯ ಆಗುತ್ತೆ ಅಂದರು.

ಆಗ ಅವರು, ನೀವೆಲ್ಲ ಹೋಗಿ ಅಲ್ಲಿನ ಸಮಸ್ಯೆಗಳಿಗೆ ಉತ್ತರ ಕಂಡು ಹಿಡಿಯಬೇಕು. ನೀವು ಅಲ್ಲಿಯೇ ಇದ್ದು ಸಮಸ್ಯೆಗಳು ಇವೆ ಎಂದರೆ ಯಾವುದೂ ಪರಿಹಾರ ಆಗೋದಿಲ್ಲ. ಮಂಗಗಳನ್ನು ಓಡಿಸಲು ಏನು ಮಾಡಬೇಕು ಅಂತ ಬಂದು ನಮಗೂ ಹೇಳಿ. ಬೆಂಗಳೂರಿನಲ್ಲಿ ನಾಯಿಗಳ ಸಂತತಿ ಕಡಿಮೆ ಮಾಡಲು ಹಲವು ವಿಧಾನಗಳು ಇವೆಯಲ್ಲ ಹಾಗೆಯೇ ಮಂಗಗಳಿಗೂ ಯಾಕೆ ಮಾಡಬಾರದು? ಮೀನಿನ ಎಣ್ಣೆಯನ್ನೂ ಕೂಡ ಬಳಸಿ ಮಂಗನನ್ನು ಓಡಿಸಬಹುದಂತೆ. ನೀವು ಇಲ್ಲಿಗೆ ಬಂದರೆ ನಿಮ್ಮಂತಹ ಸಮಾನ ಮನಸ್ಕರು ಇಲ್ಲಿ ಸಿಕ್ಕೆ ಸಿಗುತ್ತಾರೆ. ನೀವೆಲ್ಲ ಸೇರಿ ಏನಾದರೂ ಪರಿಹಾರ ಕಂಡುಕೊಳ್ಳಬಹುದು ಅಲ್ಲವೇ?

ಹೌದು, ಅದು ನನ್ನ ಅನುಭವಕ್ಕೂ ಬಂದಿತ್ತು. ನಮ್ಮಂತೆಯೇ ಯೋಚಿಸುವವರು ಹಳ್ಳಿಯಲ್ಲಿ ಇದ್ದೇ ಇದ್ದಾರೆ. ಆದರೆ ನಮಗೆ ಬರಿಯ ಋಣಾತ್ಮಕ ಅಂಶಗಳೆ ಕಾಣುತ್ತಿರುತ್ತವೆ. ಅಷ್ಟೊತ್ತಿಗೆ ನಮ್ಮ meeting ಶುರುವಾಗಿ ಹೆಚ್ಚು ಹೊತ್ತಾಗಿತ್ತು. ಅವರ ಜೊತೆ ಮಾತಾಡಿದ್ದು ಹೊಸ ಹುರುಪು ತಂದಿತ್ತು. ಹೀಗೂ ಒಂದು ಆಯ್ಕೆ ಇದೆಯೇ ಅಂತ ನಮಗೆಲ್ಲ ಅಚ್ಚರಿಯೂ ಆಗಿತ್ತು. ಒಂದಿಷ್ಟು ಆಸಕ್ತರನ್ನು ಕರೆದುಕೊಂಡು ಅಲ್ಲಿಗೆ ಹೋಗಿ ಬರೋಣ ಎಂಬ ನಿರ್ಧಾರದೊಂದಿಗೆ ಅವತ್ತಿನ meeting ಮುಗಿಸಿದೆ.

(ಮುಂದುವರಿಯುವುದು..)