ಹೊರಗೆ ಸುತ್ತಾಡಿ ಬನ್ನಿ

ಅರ್ಥವನ್ನು ಅರಸಿ
ಬೇರ್ಪಡಿಸಿ ಖೇದವನ್ನು
ಬೇಜಾರಿನಿಂದ

ಹೊರಗೆ ಸುತ್ತಾಡಿ ಬನ್ನಿ

ಅದಾಗಿರಬೇಕಿಲ್ಲ
ಉದ್ಯಾನದ ಆಹ್ಲಾದದ ನಡಿಗೆ,
ತುಂಬು ವಸಂತದ ಸುಂದರ ಘಳಿಗೆ,
ಹೂವ ಪರಿಮಳದ
ಕಾವ್ಯಾತ್ಮಕ ರೂಪಕ ಲೋಕ,
ಸರಾಗವಾಗಿ ಹೊಕ್ಕಂತೆ ನಾಕ.

ಸುತ್ತಾಟದಲ್ಲಿ ನೀವೆತ್ತಬೇಕಿಲ್ಲ
ವಿಧ ವಿಧ ಅಸ್ತಿತ್ವದ ಅವತಾರ
ಮತ್ತು ಹೊಳೆಯಬೇಕಿಲ್ಲ
ನಿಮಗೆ ಯಾರ ಮೆದುಳಿಗೂ
ಸಿಗದ ಬದುಕಿನ ಹೊಳಹು.

ಹೊರಗೆ ಸುತ್ತಾಡಿ ಬನ್ನಿ
ಭಯ, ಹಿಂಜರಿಕೆ ಸಲ್ಲ
ನಿಮ್ಮೊಡನೆ ನೀವು ಕಳೆಯಲು ಕಾಲ.

ಅರ್ಥ ಸಿಗಲಿ
ಅಥವಾ ಸಿಗದಿರಲಿ
ಆದರೆ
ಕದಿಯಿರಿ ಕೊಂಚ ಸಮಯ
ಕೊಟ್ಟುಕೊಳ್ಳಿರಿ ಅದನು
ಉಚಿತವಾಗಿ, ಕೇವಲ ನಿಮಗೆ.

ಆಯ್ದುಕೊಳ್ಳಿ ಖಾಸಗಿ ಮತ್ತು
ಏಕಾಂತದ ಬದುಕು
ಅದರಿಂದ ನೀವಾಗುವುದಿಲ್ಲ
ಲೋಕವಿರೋಧಿ,
ಇಹಕೆ ಹೆದರೋಡಿದ
ಪಲಾಯನವಾದಿ.

ಆದರೆ ನೀವು ಉಸಿರಾಡಬೇಕು
ಮತ್ತು ನೀವು ‘ಇರ’ಬೇಕು.

ಹೊರಗೆ ಸುತ್ತಾಡಿ ಬನ್ನಿ.

ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.