ದೊಡ್ಡಮ್ಮನ ಮಗನನ್ನು ನಮ್ಮ ಊರಿನವರಿಗೆ ಹೇಳಿ ಬೆಂಗಳೂರಿನಲ್ಲಿ ಕೆಲಸಕ್ಕೆಂದು ಕಳಿಸಲಾಯಿತು. ಅಲ್ಲಿ ಆತ ಬೇರೆ ಬೇರೆ ಕೆಲಸಗಳನ್ನು ಕಲಿತ ಚುರುಕಾದ. ಯಾವ ಅದೃಷ್ಟ ಆತನನ್ನು ಕೈ ಹಿಡಿಯಿತೊ ಮೂರ್ನಾಲ್ಕು ವರ್ಷಗಳಲ್ಲಿ ಆತ ಒಳ್ಳೆಯ ಹಣವಂತನಾದ. ಮದುವೆಯಾದ. ಅದಾದ ಮೇಲೆ ಒಂದಿಷ್ಟು ದಿನ ನಮ್ಮ ಕಷ್ಟಗಳಿಗೆ ಸ್ಪಂದಿಸಿದನಾದರೂ ಅದು ತೋರಿಕೆಯದಾಗಿತ್ತು. ಆಮೇಲೆ ಆತ ಅದನ್ನು ಮರೆತ. ಊರಿಗೆ ಬರುವುದನ್ನೆ ಮರೆತ. ನಮ್ಮ ಮನೆಯಲ್ಲಿ ಎಂಟ್ಹತ್ತು ವರ್ಷಗಳಿದ್ದು ಮಗನಂತೆ ಸಾಕಿದ ಆತ ಮತ್ತೆ ತಿರುಗಿಯೂ ನೋಡದವನಾದ. ನಿಧಾನವಾಗಿ ಅಂಗಡಿಯನ್ನು ಮುಚ್ಚುವ ಸ್ಥಿತಿ ಎದುರಾಯಿತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೇಳನೆಯ ಕಂತು

ಒಮ್ಮೊಮ್ಮೆ ಅನಿಸಿಬಿಡುತ್ತದೆ ಈ ಸಂಬಂಧಗಳಿಗೆ ಅರ್ಥವಿಲ್ಲ. ನಿಜವಾದ ಸಂಬಂಧ ಯಾವುದು. ಅಲ್ಲಿ ಭಾವನಾತ್ಮಕ ಸಂಬಂಧವಷ್ಟೆ ಇರುತ್ತದೆಯಾ. ನಿಜವಾದ ರಕ್ತಸಂಬಂಧ ಯಾವುದು. ಹೊಸದಾಗಿ ಹುಟ್ಟಿದ ಸಂಬಂಧ ಗಟ್ಟಿಯಾಗುತ್ತದ? ಅದು ಶಾಶ್ವತವಾಗಿರುತ್ತದೆಯಾ. ಹುಟ್ಟಿದ ಸಂಬಂಧಗಳೆಲ್ಲವೂ ಶಾಶ್ವತ ಸಂಬಂಧವ, ಹಾಗಾದರೆ ಸಂಬಂಧಗಳು ಹುಟ್ಟುತ್ತವೆಯಾ ಅಥವಾ ಬೆಳಸಿಕೊಂಡ ಸಂಬಂಧವ…. ಹೀಗೆ ಹತ್ತಾರು ಪ್ರಶ್ನೆಗಳು ನಮ್ಮ ಮನಸ್ಸನ್ನು ಆಗಾಗ ತಾಕುತ್ತವೆ. ನಮ್ಮೊಳಗೆ ಒಂದು ತಾರ್ಕಿಕ ಅತಾರ್ಕಿಕವಾದ ಯೋಚನೆಯನ್ನು ಉಂಟುಮಾಡಿರುತ್ತವೆ. ಸಂಬಂಧಗಳು ಹೆಚ್ಚಾಗಿ ಅನುಕೂಲ ಸಂಬಂಧವಾಗಿರುತ್ತವೆ ಎಂಬುದು ನನ್ನ ಅನುಭವದ ಭಾವನೆ. ಇದಕ್ಕೆ ಬಾಲ್ಯದಲ್ಲಿ ಅನುಭವಿಸಿದ ಕೆಲವು ಪ್ರಸಂಗಗಳು ಸಂಬಂಧಗಳ ಜೊತೆಗೊಂದು ತಾತ್ಸಾರವನ್ನುಂಟು ಮಾಡಿದ್ದು ಕಾರಣವಿರಬಹುದು.

ಮೊದ ಮೊದಲು ಅಪ್ಪ ಪ್ರಾರಂಭ ಮಾಡಿದ ಕಿರಾಣಿ ಅಂಗಡಿಯ ವ್ಯಾಪಾರ ಬಲು ಜೋರಾಗಿಯೆ ನಡೆದಿತ್ತು. ಅದರಿಂದ ಒಂದಿಷ್ಟು ಸಮಾಧಾನದ ಬದುಕು ದೊರೆತಿದ್ದು ನಿಜ. ಅಪ್ಪನಿಗೆ ಸಾಮಾಜಿಕವಾಗಿ ಗೌರವವು ಸಿಗುತ್ತಿತ್ತು. ಅನ್ನಕ್ಕಾಗಿ ಕೂಲಿ ಹೋಗುತ್ತಿದ್ದ ದಿನಗಳು. ಧಣಿಗಳು ಬಡಿಸುವ ಅನ್ನಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದ ದೃಶ್ಯಗಳು ಆಗಾಗ ನೆನಪಾಗುತ್ತಿದ್ದವು. ಇಂತಹ ದಿನಗಳಲ್ಲಿ ನಮ್ಮ ಎಳೆಯ ಮನಸ್ಸಿಗೆ ಸಮಾಜದಲ್ಲಿ ಏಕಿಷ್ಟು ಅಂತರ ಎಂಬ ಪ್ರಶ್ನೆ ಮೂಡುತ್ತಿದ್ದದ್ದು ದೇವರು ಇದ್ದಾನೆಯೆ ದೇವರಿದ್ದರೆ ಯಾಕಷ್ಟು ಅಂತರವನ್ನು ತಂದಿಟ್ಟ? ಉಳ್ಳವರು ಇಲ್ಲದವರು ಎಂಬುದು ಸಾಮಾಜಿಕ ಸ್ತರವಾಗಿ ಕಾಣಿಸಿದ್ದಾದರೂ, ದೇವರಿಗೂ ಕಣ್ಣಿಲ್ಲವೆ ಎಂದು ಅನ್ನಕ್ಕಾಗಿ ಸರದಿ ಸಾಲಿನಲ್ಲಿ ನಿಂತಾಗ ಅದೂ ನಮ್ಮ ಓರಗೆಯ ಸ್ನೇಹಿತರ ಮನೆಗಳ ಮುಂದೆ ನಿಂತಾಗ ಮನಸ್ಸು ಮುದುಡಿ ಜಗತ್ತಿನ ಕೀಳರಿಮೆಯೆಲ್ಲಾ ನಮ್ಮನ್ನೆ ಆವರಿಸಿತು ಎಂಬಂತೆ ಚಡಪಡಿಸಿದ್ದು ವಿಪರೀತ ಕೀಳರಿಮೆಯಿಂದ ನರಳಿದ್ದು ಮನಸ್ಸು ಅರಳುವ ಬಾಲ್ಯವೆಲ್ಲ ಕೊರಗಿ ಕೊರಗಿ ದೇವರ ಮೇಲೆ ಕೋಪ ಬರುವಷ್ಟು ವಿಪರೀತ ಅಸಮಧಾನದ ಮನಸ್ಸು ನಮ್ಮನ್ನು ಕಾಡಿದ್ದು ನೆನಪಿದೆ. ಅವಾಗೆಲ್ಲಾ ನಮ್ಮ ಬದುಕೆಂದರೆ ಇಷ್ಟೆನಾ ಎಂದು ಚಿಂತಿಸಿದ್ದು ಇದೆ.

ಇಂತಹ ದಿನಗಳಲ್ಲಿ ಯಾವ ಸಂಬಂಧಗಳು ನಮಗೆ ಸಹಾಯಕ್ಕೆ ಬಂದದ್ದು ನೆನಪಿಲ್ಲ. ಇದ್ದುದರಲ್ಲಿಯೆ ಬದುಕುವುದನ್ನು ಪರಿಸ್ಥಿತಿಯೆ ನಮಗೆ ಕಲಿಸಿತ್ತು. ಅಂತೂ ಇವುಗಳನ್ನೆಲ್ಲ ದಾಟಿ ಅಪ್ಪ ಮೇಲೆದಿದ್ದ ನಿಧಾನವಾಗಿ ಅನ್ನಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪಿತ್ತು. ಒಂದೊಂದೆ ಕಷ್ಟಗಳನ್ನು ಗೆಲ್ಲುತ್ತ ಬದುಕನ್ನು ಚಂದಗೊಳಿಸಿಕೊಂಡಿದ್ದ. ಯಾರ ಹಂಗಿಲ್ಲದೆ ಉಣ್ಣುವಷ್ಟು ಸಂಪಾದನೆ ಮಾಡುತ್ತಿದ್ದ. ಆಗಿನ ಕಾಲಕ್ಕೆ ಹತ್ತನೆ ಕ್ಲಾಸ್ ಪೂರೈಸಿದ್ದ. ಬಹಳ ಸ್ವಾಭಿಮಾನದ ಬದುಕು ಆತನದು. ಕಿರಾಣಿ ಅಂಗಡಿಯ ವ್ಯಾಪಾರ ಒಂದಿಷ್ಟು ಹೆಚ್ಚಿದಂತೆ. ಚಿಕ್ಕದಾಗಿ ಹೋಟೆಲನ್ನು ಪ್ರಾರಂಭ ಮಾಡಿದ್ದೆವು. ಬೆಳಗಿನ ಸಮಯದಲ್ಲಿ ತಿಂಡಿ ದೊರೆಯುತ್ತಿತ್ತು. ಅದಕ್ಕಾಗಿ ಅಮ್ಮ ತುಂಬಾ ಶ್ರಮ ಪಡುತ್ತಿದ್ದಳು. ಬೆಳಿಗ್ಗೆ ನಾಲ್ಕಕ್ಕೆಲ್ಲ ಎದ್ದು ತಯಾರಿ ಮಾಡುತ್ತಿದ್ದಳು. ನಾವಿನ್ನು ಬಹಳ ಚಿಕ್ಕವರು ಸಣ್ಣ ಪುಟ್ಟ ಕೆಲಸಗಳಲ್ಲಿ ಸಹಾಯವಷ್ಟೆ ನಮ್ಮಿಂದ ಆಗುತ್ತಿತ್ತು. ದುಡಿದ ದುಡಿದ ದುಡಿಯುತ್ತಲೆ ಇದ್ದ ಅಪ್ಪ. ಇಂತಹ ದಿನಗಳಲ್ಲೆ ಅಪ್ಪನಿಗೆ ಒಂದು ಎನ್ ಜಿ ಓ ದಲ್ಲಿ ಸ್ಥಳೀಯವಾಗಿ ಕೆಲಸ ಮಾಡಲು ಅವಕಾಶವೂ ಬಂದಿತು. ಸಾರ್ವಜನಿಕವಾಗಿ ಸಂಪರ್ಕವಿದ್ದುದು ಅದಕ್ಕೆ ಕಾರಣವಾಗಿತ್ತು. ಅಪ್ಪ ಅಂಗಡಿ ನೋಡಿಕೊಳ್ಳುತ್ತಲೆ ಆ ಕೆಲಸವನ್ನು ನಿರ್ವಹಿಸುತ್ತಿದ್ದ. ಅದು ಯಾವುದೆ ಸಂಭಾವನೆ ಇಲ್ಲದೆ ಮಾಡುವ ಕೆಲಸವಾಗಿತ್ತು. ಅಪ್ಪ ಬಹುಬೇಗ ಎನ್ ಜಿ ಒ ನಿರ್ದೇಶಕರ ಮನ ಗೆದ್ದಿದ್ದ. ಅಷ್ಟೇ ಕರಾರುವಕ್ಕಾಗಿ ಕೆಲಸವನ್ನು ಮಾಡುತ್ತಿದ್ದ ಅಪ್ಪನಿಗೆ ಆ ಕೆಲಸದ ಮೇಲೆ ಆಸಕ್ತಿ ಹೆಚ್ಚಾಗಿತ್ತು. ಅಮ್ಮನಿಗೆ ಇದ್ಯಾವುದರ ಬಗ್ಗೆಯೂ ತಿಳಿಯದೆ ಹೇಳಿದ ಕೆಲಸವನ್ನಷ್ಟೆ ಮಾಡುವ ಮುಗ್ಧ ಸ್ವಭಾವ ಆಕೆಯದು. ಆದರೆ ಅಂಗಡಿ ನೋಡಿಕೊಳ್ಳುವವರು ಯಾರು. ನಾವಿನ್ನು ಚಿಕ್ಕವರು. ಪೂರ್ಣ ಪ್ರಮಾಣದಲ್ಲಿ ಅಂಗಡಿ ನೋಡಿಕೊಳ್ಳುವುದು ನಮ್ಮಿಂದ ಸಾಧ್ಯವೂ ಇರಲಿಲ್ಲ. ಶಾಲೆಗೆ ಹೋಗಬೇಕಾಗಿತ್ತು.

ಇದೆ ಸಮಯದಲ್ಲಿ ನಮ್ಮ ದೊಡ್ಡಮ್ಮ ಆಗಾಗ ಮನೆಗೆ ಬರುತ್ತಿದ್ದಳು. ನಮಗೆ ಗೊತ್ತಿಲ್ಲದ ಅನೇಕ ಸಂಬಂಧಗಳು ನಮ್ಮಮ್ಮನ ಕಡೆಯಿಂದ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು ಎಂದು ಹಬ್ಬ ಹರಿದಿನಗಳಲ್ಲಿ ಬರುವುದಕ್ಕೆ ಪ್ರಾರಂಭಿಸಿದ್ದರು. ಆಗ ನಮಗೆ ಇಷ್ಟೊಂದು ಸಂಬಂಧಗಳಿವೆಯಾ ಅನಿಸಿದ್ದು ಹೌದು. ಬಂದಾಗ ಮನೆಯಲ್ಲಿ ಸಂಭ್ರಮವಿರುತ್ತಿತ್ತು. ನಾವು ಯಾರು ಯಾರನ್ನು ಮಾವ ಅತ್ತೆ ಹೀಗೆ ಕರೆಯಬೇಕೆಂದು ಅಮ್ಮ ಹೇಳಿಕೊಡುತ್ತಿದ್ದಳು. ಆ ದಿನಗಳಲ್ಲಿ ಅಮ್ಮನ ಮುಖದಲ್ಲಿ ಸಂತೋಷ ಕಾಣುತ್ತಿತ್ತು. ಅದು ತವರಿನ ಕಡೆಯ ಬಾಂಧವ್ಯದ ಸೆಳೆತವಿರಬಹುದು. ಒಂದಿಬ್ಬರು ಆರ್ಥಿಕವಾಗಿ ಸಹಾಯ ಪಡೆದಿದ್ದು ನೆನಪಿದೆ.

ಇಂತಹ ಸಂದರ್ಭದಲ್ಲಿ ಘಟನೆಯೊಂದು ನಡೆದು ಬಿಟ್ಟಿತು. ಈಗಾಗಲೆ ಹಣದ ವಿಷಯಕ್ಕೆ ದೂರಾಗಿದ್ದ ಮಾವ ಬಹುತೇಕ ನಮ್ಮ ಸಂಬಂಧವನ್ನು ಕಡಿದುಕೊಂಡಿದ್ದ. ನಮ್ಮ ದೊಡ್ಡಮ್ಮ ಮಾತ್ರ ನಮ್ಮ ಮಾವನ ಮನೆಗೆ ಹೋಗುತ್ತಿದ್ದಳು. ಅಮ್ಮ ಮಾತ್ರ ಈ ಸಂಬಂಧದಿಂದ ವಂಚಿತಳಾಗಿ ಒಂಟಿಯಾಗಿದ್ದಳು. ಆದರೆ ಇನ್ನೊಬ್ಬ ಮಾವ ಮನೆಗೆ ಬರುತ್ತಿದ್ದ. ನಾವು ಆಗಾಗ ಅವರ ಮನೆಗೆ ಹೋಗುತ್ತಿದ್ದೆವು. ಆತನಿಗಂತೂ ಅಪ್ಪ ಶಕ್ತಿಮೀರಿ ಸಹಾಯ ಮಾಡಿದ್ದ. ಹೀಗಿರುವಾಗಲೆ ಒಂದು ದಿನ ದೊಡ್ಡಮ್ಮ ಬಂದಳು. ಮಾವನ ಜೊತೆ ಗಲಾಟೆ ಮಾಡಿಕೊಂಡು ಬಂದೆ ಎಂದಳು. ನಮಗೆ ನೀವೆ ಸಹಾಯ ಮಾಡಬೇಕು ಎಂದಳು. ನಾನು ಯಾವ ಸಹಾಯ ಮಾಡಲಿ ಎಂದು ಅಪ್ಪ ಹೇಳಿದರೂ ನಮಗೆ ಊರಿನಲ್ಲಿ ಮನೆಯಿಲ್ಲ ಒಂದು ಮನೆ ಕಟ್ಟಿಸಿ ಕೊಡಿ ನನ್ನ ಹತ್ತಿರವೂ ಒಂದಿಷ್ಟು ಹಣವಿದೆ ಎಂದಳು. ಅಪ್ಪ ಯಾವುದೋ ವ್ಯವಹಾರಕ್ಕೆಂದು ಹಣವನ್ನು ಪಡೆದ. ಹೀಗೆ ದೊಡ್ಡಮ್ಮನ ಊರಿಗೆ ನಾವು ಹೋಗುವುದು ಅವರು ಬರುವುದು ಹೆಚ್ಚಾಗುತ್ತ ಬಂದಿತು. ಇಲ್ಲಿ ಅಪ್ಪನ ವ್ಯವಹಾರವು ಹೆಚ್ಚಾಯಿತು. ಒಂದಿಷ್ಟು ಹಣವನ್ನು ಕಂಡಾಯಿತು. ಇದ್ದಕ್ಕಿದ್ದಂತೆ ದೊಡ್ಡಮ್ಮನ ಊರಿನಲ್ಲಿ ಗಲಾಟೆಯೊಂದು ನಡೆದು ಅವರು ಊರು ಬಿಡುವ ಸ್ಥಿತಿ ನಿರ್ಮಾಣವಾಯಿತು. ದೊಡ್ಡಮ್ಮನ ಮಕ್ಕಳ ಮೇಲೆ ಕೇಸು ಬಿದ್ದಿತ್ತು. ಅವರನ್ನು ಉಳಿಸುವ ಸಲುವಾಗಿ ಅಪ್ಪ ಅವರ ಸಹಾಯಕ್ಕೆ ನಿಂತ. ತನ್ನ ಅಕ್ಕಳ ಮಕ್ಕಳಾದ್ದರಿಂದ ದೊಡ್ಡಮ್ಮನ ಮಕ್ಕಳ ರಕ್ಷಣೆಯಲ್ಲಿ ಅಮ್ಮ ಏನು ಮಾತನಾಡಲಿಲ್ಲ. ಅವರನ್ನು ನಮ್ಮ ಮನೆಯಲ್ಲಿ ಇರಿಸಿಕೊಂಡೆವು. ನಾಲ್ಕಾರು ತಿಂಗಳಲ್ಲಿ ಕೇಸು ಖುಲಾಸೆಯಾಯಿತು.

ಇಷ್ಟೊತ್ತಿಗೆ ದೊಡ್ಡಮ್ಮನ ಮಗ ಅಣ್ಣ ನಮ್ಮ ಅಂಗಡಿಯನ್ನು ನೋಡಿಕೊಳ್ಳುವುದಕ್ಕೆ ಶುರು ಮಾಡಿದ್ದ. ಅಪ್ಪ ಎನ್ ಜಿ ಒ ದಲ್ಲಿ ಇಂತಿಷ್ಟು ಸಂಬಳಕ್ಕೆ ಎಂದು ಗೊತ್ತಾಗಿ ಕೆಲಸ ಮಾಡುತ್ತಿದ್ದ. ಅಣ್ಣ ಅಂಗಡಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆತನನ್ನು ಮನೆಯಲ್ಲಿಯೆ ಇಟ್ಟುಕೊಂಡಿದ್ದರಿಂದ ಊರಿನಲ್ಲಿ ಅವರಿಗೆ ಮನೆಯನ್ನು ಅಪ್ಪನೆ ಕಟ್ಟಿಸಿಕೊಟ್ಟಿದ್ದಾಯಿತು. ನಂತರ ಅವರು ಇಷ್ಟಿಷ್ಟು ಹಣವನ್ನು ಕೊಟ್ಟರು ಎಂದು ನಮಗೆ ಬಹಳ ವರ್ಷದ ನಂತರವಷ್ಟೇ ತಿಳಿಯಿತು. ಅದಾದ ಮೇಲೂ ನಮ್ಮ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಯೇ ನಡೆಯುತ್ತಿತ್ತು. ಅಪ್ಪ ಆಗಾಗ ಕಷ್ಟದಲ್ಲಿರುವವರಿಗೆ ಧಾರಾಳವಾಗಿ ಸಹಾಯ ಮಾಡುತ್ತಿದ್ದ. ಇದನ್ನೆ ಬಳಸಿಕೊಂಡ ಎನ್ ಜಿ ಒ ದ ನೌಕರನೊಬ್ಬ ಅಪ್ಪನ ಗೌರವ ಸಂಭಾವನೆಯನ್ನು ಕಷ್ಟಕ್ಕೆಂದು ಪಡೆದ. ಅನೇಕ ವ್ವವಹಾರಗಳಲ್ಲಿ ಬಂದ ಲಾಭಾಂಶವನ್ನೂ ಪಡೆದ. ಅದನ್ನು ಆತ ವಾಪಸ್ ಕೊಡಲಿಲ್ಲ. ಅಪ್ಪ ಕೇಳಿ ಕೇಳಿ ಸುಮ್ಮನಾದ. ಇಲ್ಲಿ ಅಂಗಡಿ ಸರಿಯಾಗಿ ನೋಡಿಕೊಳ್ಳದೆ ಒಂದಷ್ಟು ಸಾಲವೂ ಜಾಸ್ತಿಯಾಗಿ ಸಣ್ಣ ಪುಟ್ಟ ತಿಂಡಿಗಳನ್ನಷ್ಟೆ ಮಾರುವ ಸೀಮಿತ ವ್ಯಾಪಾರಕ್ಕೆ ತಲುಪಿತು. ಅಂಗಡಿಯಲ್ಲಿ ಸಾಲ ತೆಗೆದುಕೊಂಡವರು ಒಬ್ಬರು ಕೊಡಲಿಲ್ಲ. ಅಪ್ಪನಿಗೆ ಈ ಕಾಲಕ್ಕೆ ಒಂದಿಷ್ಟು ಕುಡಿತದ ಚಟವೂ ಅಂಟಿಕೊಂಡಿತು. ಅಷ್ಟೊತ್ತಿಗೆ ನಮ್ಮಿಂದ ಸಹಾಯ ಪಡೆದವರು ದೂರಾಗಿದ್ದರು. ನಿಧಾನವಾಗಿ ಅಪ್ಪ ಸಣ್ಣ ಪುಟ್ಟ ವಿಷಯಕ್ಕೆಲ್ಲ ಎಗರಾಡುವುದಕ್ಕೆ ಪ್ರಾರಂಭಿಸಿದ. ದೊಡ್ಡಮ್ಮನ ಮಗ ಅಷ್ಟಿಷ್ಟು ವ್ಯಾಪಾರನ್ನು ಮಾಡಿಕೊಂಡು ಇರುತ್ತಿದ್ದ. ಅಪ್ಪ ಇಟ್ಟಿಗೆ ಸುಟ್ಟು ಮಾರುವ ವ್ಯಾಪಾರವನ್ನು ಮಾಡುವುದಕ್ಕೆ ಪ್ರಾರಂಭಿಸಿದ. ಯಾವುದರಲ್ಲಿಯೂ ಲಾಭ ಕಾಣಲಿಲ್ಲ.

ದೊಡ್ಡಮ್ಮನ ಮಗನನ್ನು ನಮ್ಮ ಊರಿನವರಿಗೆ ಹೇಳಿ ಬೆಂಗಳೂರಿನಲ್ಲಿ ಕೆಲಸಕ್ಕೆಂದು ಕಳಿಸಲಾಯಿತು. ಅಲ್ಲಿ ಆತ ಬೇರೆ ಬೇರೆ ಕೆಲಸಗಳನ್ನು ಕಲಿತ ಚುರುಕಾದ. ಯಾವ ಅದೃಷ್ಟ ಆತನನ್ನು ಕೈ ಹಿಡಿಯಿತೊ ಮೂರ್ನಾಲ್ಕು ವರ್ಷಗಳಲ್ಲಿ ಆತ ಒಳ್ಳೆಯ ಹಣವಂತನಾದ. ಮದುವೆಯಾದ. ಅದಾದ ಮೇಲೆ ಒಂದಿಷ್ಟು ದಿನ ನಮ್ಮ ಕಷ್ಟಗಳಿಗೆ ಸ್ಪಂದಿಸಿದನಾದರೂ ಅದು ತೋರಿಕೆಯದಾಗಿತ್ತು. ಆಮೇಲೆ ಆತ ಅದನ್ನು ಮರೆತ. ಊರಿಗೆ ಬರುವುದನ್ನೆ ಮರೆತ. ನಮ್ಮ ಮನೆಯಲ್ಲಿ ಎಂಟ್ಹತ್ತು ವರ್ಷಗಳಿದ್ದು ಮಗನಂತೆ ಸಾಕಿದ ಆತ ಮತ್ತೆ ತಿರುಗಿಯೂ ನೋಡದವನಾದ. ನಿಧಾನವಾಗಿ ಅಂಗಡಿಯನ್ನು ಮುಚ್ಚುವ ಸ್ಥಿತಿ ಎದುರಾಯಿತು. ಅಪ್ಪನ ಕುಡಿತ ಇನ್ನೊಂದಿಷ್ಟು ಹೆಚ್ಚಾಯಿತು. ಮತ್ತೆ ಅಮ್ಮ ಬೀಡಿ ಸುತ್ತಿಯೆ ಬದುಕನ್ನು ನಡೆಸಿದಳು. ಕಷ್ಟಗಳಿಗೆಲ್ಲಾ ಕಲ್ಲಾಗಿ ಯಾರಿಂದಲೂ ಸಹಾಯವನ್ನು ಕೇಳದೆ ಬದುಕು ಬಂದಂತೆ ನಡೆಸಿದಳು. ನಮ್ಮಿಂದ ಸಹಾಯ ಪಡೆದವರಾರು ನಮ್ಮತ್ತ ತಿರುಗಿಯೂ ನೋಡಲಿಲ್ಲ. ಎಲ್ಲರೂ ನಮ್ಮ ಮನೆಗೆ ಬರುವುದನ್ನೆ ನಿಲ್ಲಿಸಿ ಬಿಟ್ಟರು. ನಂತರದ ಬದುಕಿನ ತುಂಬೆಲ್ಲ ಅವಮಾನದ ಬೇಗೆಯಲ್ಲಿ ಬೆಂದು ಸವಕಲಾಗಿ ಉರಳುರುಳುತ್ತ ಸಾಗಿದ ಬದುಕು ನಮ್ಮಲ್ಲೊಂದು ಸಂಬಂಧಗಳ ಬಗೆಗೆ ನಿಷ್ಟುರವಾದ ಅಭಾವುಕತೆಯನ್ನು ಮೂಡಿಸಿತು. ಆದರೆ ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ ಅಂತಹವರ ಹೊಟ್ಟೆ ತಣ್ಣಗಿರಲಿ. ಇವೆಲ್ಲವುಗಳನ್ನು ದಾಟಿಬಂದು ಬದುಕಿಗೊಂದು ನೆಲೆಕಂಡುಕೊಂಡ ಇವತ್ತು ಅಂದಿನ ದಿನಗಳನ್ನು ನೆನೆದರೆ ನಾವು ಅವುಗಳನ್ನೆಲ್ಲ ಹೇಗೆ ದಾಟಿಬಂದೆವು ಎನಿಸಿ ಕಣ್ಣಂಚಲ್ಲಿ ನೀರು ಜಿನುಗುತ್ತದೆ. ಆದರೆ ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲಿಗೆ ದಾಟಿಸುವ ಶಕ್ತಿ ಬದುಕಿಗೆ ಮಾತ್ರ ಇದೆ ಅನಿಸುತ್ತದೆ. ಬದುಕೆಂದರೆ ಅಷ್ಟೇ ಸುಮ್ಮನೆ ನಡೆಯುತ್ತಿರಬೇಕು. ಇಟ್ಟಹೆಜ್ಜೆಯೆ ದಾರಿಯಾಗುವಂತೆ ಸವೆದ ಜೀವನ ಬದುಕಾಗುತ್ತದೆ. ನೆನಪಾಗುತ್ತದೆ, ಗೆಲುವಾಗುತ್ತದೆ, ಪಾಠವಾಗುತ್ತದೆ, ಅನುಭವವಾಗುತ್ತದೆ. ಏನಂತೀರಿ…..

(ಮುಂದುವರಿಯುವುದು)