ಕಿರಿಯ ಓದುಗರಿಂದ ಹಿಡಿದು ಹಿರಿಯ ಪುಸ್ತಕಪ್ರಿಯರ ತನಕ ಜನಪ್ರಿಯವಾದ “ಆಲಿವರ್ ಟ್ವಿಸ್ಟ್” ಹುಟ್ಟಿದ್ದು ಲಂಡನ್ ನ ಬೀದಿಗಳಿಂದಲೇ. ಲಂಡನ್ ನ ಬಡತನ ಕ್ರೌರ್ಯ ಅಪರಾಧಗಳೇ ಪ್ರಧಾನ ಭೂಮಿಕೆಯಲ್ಲಿರುವ ಕಥೆ. ಸಾಲವನ್ನು ತೀರಿಸಲಾಗದೇ ತಂದೆ ಜೈಲಿನಲ್ಲಿ ದಿನಕಳೆಯುವುದನ್ನು, ನಿರಾಶ್ರಿತ ವಸತಿಗಳಲ್ಲಿ ಅನಾಥ ಮಕ್ಕಳ ಹತಾಶೆಯನ್ನು ಬಾಲ್ಯದಲ್ಲಿ ಡಿಕನ್ಸ್ ಕಂಡವನು. ಅನಾಥಾಲಯಗಳಲ್ಲಿ ಆಶ್ರಯ ಪಡೆಯುವವರು ಕೆಲಸ ಮಾಡಿ ತಮ್ಮ ಊಟವನ್ನು ಗಳಿಸಬೇಕಿದ್ದ ಕಾಲ ಅದು. ಆದರೆ 1834ರಲ್ಲಿ “ಬಡತನ ಕಾಯಿದೆ”ಯ ಬದಲಾವಣೆಯೊಂದಿಗೆ ನಿರಾಶ್ರಿತರ ವಸತಿಗಳಲ್ಲಿ ಇರುವವರ ಬದುಕು ಹಿಂದಿಗಿಂತಲೂ ದುಸ್ತರ ಆಯಿತು.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಖ್ಯಾತ ಕಾದಂಬರಿಕಾರ ಡಿಕನ್ಸ್‌ನ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

ಇಪ್ಪತ್ತರ ವಯಸ್ಸಿನ ಆಂಗ್ಲ ಯುವಕನೊಬ್ಬ 1832 ರಲ್ಲಿ ಲಂಡನ್ ಅಲ್ಲಿ ಪತ್ರಿಕಾ ವರದಿಗಾರಿಕೆ ಶುರು ಮಾಡಿದ್ದ. ಸಂಸತ್ತಿನಲ್ಲಿ ನಡೆಯುವ ಚರ್ಚೆಗಳನ್ನು, ಬ್ರಿಟನ್ ಉದ್ದಗಲಕ್ಕೆ ತಿರುಗುತ್ತ ಚುನಾವಣಾ ಪ್ರಚಾರಗಳನ್ನು ರಿಪೋರ್ಟ್ ಮಾಡಿ “ಮಾರ್ನಿಂಗ್ ಕ್ರಾನಿಕಲ್” ಪತ್ರಿಕೆಗೆ ನೀಡುತ್ತಿದ್ದ. “ಸ್ಕೆಚಸ್” ಎನ್ನುವ ಹೆಸರಿನ ಅಂಕಣದಲ್ಲಿ ಬ್ರಿಟನ್ನಿನ ತಿರುಗಾಟದ ಅನುಭವಗಳ ಸರಣಿ ಬರೆಯುತ್ತಿದ್ದ. ಸರಣಿಯಿಂದ ಆಯ್ದ ಬರಹಗಳು 1836ರಲ್ಲಿ “ಸ್ಕೆಚಸ್ ಬೈ ಬೋಜ್ ” (Sketches by Boz) ಎನ್ನುವ ಶೀರ್ಷಿಕೆಯ ಪುಸ್ತಕ ರೂಪ ಪಡೆಯಿತು ಮತ್ತು ಆಂಗ್ಲ ಸಾಹಿತ್ಯದ ಸೂಕ್ಷ್ಮ ಗ್ರಹಿಕೆಯ ಹೊಸ ಚೇತೋಹಾರಿ ಧ್ವನಿಯ ಆಗಮನವನ್ನು ಸಾರಿತು. “ಬೋಜ್ “ಎನ್ನುವ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಪತ್ರಿಕಾ ವರದಿಗಾರ ವೈವಿಧ್ಯಮಯ ಗ್ರಹಿಕೆ, ಹಾಗು ಕಲ್ಪನೆಗಳ ಮೇಳೈಸುವಿಕೆಯಲ್ಲಿ ಲಂಡನ್ ನ ಶ್ರೇಷ್ಠ ಹಾಗು ನಿಕೃಷ್ಟ ದಿನಗಳನ್ನು, ಬೀದಿಗಳನ್ನು, ರಂಗಮಂದಿರಗಳನ್ನು, ಹೋಟೆಲುಗಳನ್ನು, ಗಿರವಿ ಅಂಗಡಿಗಳನ್ನು, ನ್ಯಾಯಾಲಯಗಳನ್ನು, ಜೈಲುಗಳನ್ನು, ಕುದುರೆಗಾಡಿಗಳನ್ನು, ಥೇಮ್ಸ್ ನದಿಯನ್ನು, ಜನಸಾಮಾನ್ಯರ ದೈನಿಕದ ಪ್ರಾಮಾಣಿಕ ದೂರದರ್ಶಿ ವಿವರಗಳನ್ನು ಸಶಕ್ತವಾಗಿ ಪ್ರತಿಬಿಂಬಿಸಿದ ಎಂದು ವಿಮರ್ಶಕರು ಹೇಳಿದರು. ಆ ಬರಹಗಳ ಸರಣಿಯಲ್ಲಿ ಮುಂದೆ ಅವನೇ ಬರೆಯಲಿದ್ದ ಕಾದಂಬರಿಯ ಕೆಲವು ಪಾತ್ರಗಳಾದ ಜೈಲಿನಲ್ಲಿರುವ ಅಪರಾಧಿ, ವಾಚಾಳಿ ಮಹಿಳೆ, ಅಸಭ್ಯ ಕಾರಕೂನ, ಜಿಪುಣ ಬ್ರಹ್ಮಚಾರಿಗಳು ಕೂಡ ಬಂದು ಹೋಗಿದ್ದವು ಎಂದು ನಂತರ ಓದುಗರಿಗೆ ತಿಳಿಯಿತು. ವಾಸ್ತವಕ್ಕೆ ಅತಿಹತ್ತಿರದ, ವಿಮರ್ಶಕ ನೋಟದ, ಸಮಾಜದ ಬಗ್ಗೆ ಲಘು ಹಾಸ್ಯ, ಅಣಕ, ಮರುಕಗಳ ಅಭಿವ್ಯಕ್ತಿಯ ಯುವ ಲೇಖಕನ ಬರಹಗಳನ್ನು 18 ಹಾಗು 19ನೆಯ ಶತಮಾನಗಳ ಲಂಡನ್ ನ ಸಾಮಾಜಿಕ ಟಿಪ್ಪಣಿ ಎಂದೂ ಕರೆದರು.

ಅಂದಿನ ಲಂಡನ್ ನಲ್ಲಿ ಏಳು ರಸ್ತೆಗಳು ಸಂಧಿಸುವ “ಸೆವೆನ್ ಡಯಲ್ಸ್” (Seven Dials) ಎನ್ನುವ ಹೆಸರಿನ ಒಂದು ಸ್ಥಳ ಇತ್ತು, ಈಗಿನ ಕೊವೆಂಟ್ ಗಾರ್ಡನ್ ಇರುವ ಜಾಗ. 1690ರಲ್ಲಿ ಲೋಕಸಭಾ ಪ್ರತಿನಿಧಿಯೊಬ್ಬ, ಸಣ್ಣ ಸ್ಥಳದಲ್ಲಿ ಹೆಚ್ಚು ಮನೆಗಳು ಅಂಗಡಿಗಳು ಇರುವಂತೆ ಮಾಡಿದ ವಿನ್ಯಾಸ ಅದಾಗಿತ್ತು. ಲಂಡನ್ ಅಲ್ಲಿ ವಾಸ್ತವ್ಯದ ಸ್ಥಳಕ್ಕೆ ಅಪಾರ ಬೇಡಿಕೆ ಇದ್ದು ಅಡಿಗಳ ಲೆಕ್ಕದಲ್ಲಿ ಮಾರುತ್ತಿದ್ದ ಕಾಲ ಅದು (ಚದರ ಅಡಿ ಅಲ್ಲ). ವ್ಯಾಪಾರ, ಮನೆ, ಹೋಟೆಲು ಎಲ್ಲವೂ ಇದ್ದ, ಲಂಡನ್ನಿಗರಿಂದ, ದೂರ ದೂರದಿಂದ ಕೆಲಸಕ್ಕೆಂದು ವಲಸೆ ಬಂದವರಿಂದ ಕಿಕ್ಕಿರಿಯುತ್ತಿದ್ದ ಆ ಸ್ಥಳಕ್ಕೆ ಯಾವುದೇ ಕಾರಣ ಇಲ್ಲದೆ ಭೇಟಿ ನೀಡುವವರೂ, ಬೇಕಿದ್ದರೆ ಬರೇ ಜನರನ್ನು, ಆಗುಹೋಗುಗಳನ್ನು ಗಮನಿಸುತ್ತ ಕಾಲಹರಣ ಮಾಡಬಹುದಾಗಿತ್ತು. ಬಳಸಿದ ಮತ್ತು ಕದ್ದ ವಸ್ತುಗಳನ್ನು ಮಾರುವ ಅಂಗಡಿಗಳು, ಗುರುತು ಪರಿಚಯ ಇಲ್ಲದ ಹಲವರು ಒಂದೇ ಮನೆಯಲ್ಲಿ ಬಿಡಿ ಒಂದೇ ಕೋಣೆಯಲ್ಲಿ ವಾಸಿಸುವಂತಹ ಬಾಡಿಗೆ ಮನೆಗಳು ಅಲ್ಲಿದ್ದವು. ಪಾರಿವಾಳ, ಮೊಲ, ಹದ್ದು ಮತ್ತು ಅಪರೂಪದ ಹಕ್ಕಿಗಳನ್ನು ಮಾರುವ ಅಂಗಡಿಗಳೂ ಇದ್ದವು.

“ಸ್ಕೆಚಸ್” ನ ಪ್ರತಿ ಅಂಕಣದಲ್ಲಿ ಏಳು ರಸ್ತೆಗಳ ಸಂಧಿಸ್ಥಾನ, ಅಲ್ಲಿನ ಮೆಟ್ಟಿಲುಗಳಲ್ಲಿ ಗಿಜಿಗಿಜಿಗುಡುವ ಜನಸಂದೋಹ, ಕ್ರೌನ್ ಪಬ್ ನ ಹೊರಗೆ ಒರಟು ಮಂದಿಯ ನಗು ಕೇಕೆಗಳ ನಡುವೆ ಬೀಯರ್ ಚೆಲ್ಲುವುದು, ಅಂಗಡಿಗಳ ಮುಂದಿನ ಕಲ್ಲು ನೆಲದ ಮೇಲೆ ಗ್ರಾಹಕರ ಪಾದರಕ್ಷೆಯ ಬಗೆಬಗೆಯ ಸದ್ದುಗಳು, ಕೇಂಬ್ರಿಜ್ ರಂಗಮಂದಿರದ ಎದುರು ಸಂಗೀತ ಆಲಿಸಿ ದಿಗ್ಭ್ರಾಂತಿಯಲ್ಲಿ ಇರುವವರು ಇವೆಲ್ಲವನ್ನೂ ಎಲ್ಲೋ ಎಂದೋ ಕುಳಿತು ಓದುವವರು ಕೂಡ ಎವೆಯಿಕ್ಕದೇ ನೋಡುವುದು ಸಾಧ್ಯ ಆಗುವಂತೆ ದೃಶ್ಯಚಿತ್ರಗಳು ಅಂಕಣ ಬರಹದಲ್ಲಿ ಎದುರು ನಿಲ್ಲುತ್ತಿದ್ದವು. ಬೋಜ್ ಎನ್ನುವ ಕಾವ್ಯನಾಮದಲ್ಲಿ ಮೊದಲು ಬರೆಯಲು ಆರಂಭಿಸಿದ ಚಾಲ್ಸ್ ಡಿಕನ್ಸ್, ಸೆವೆನ್ ಡಯಲ್ಸ್ ಸ್ಥಳದಲ್ಲಿ ಲೀನವಾದವನು, ತನ್ನ ಗ್ರಹಿಕೆಗಳಲ್ಲಿ ಆ ಸ್ಥಳದ ಪ್ರತಿ ಚಲನೆ ಗೌಜು ಮೌನಗಳಲ್ಲಿ ಮುಳುಗಿ ಎದ್ದವನು, ಮತ್ತೆ ಯಾರಿಗೂ ಕಾಣದ್ದನ್ನು ಕಂಡವನು, ಇತರರಿಗೂ ಲಂಡನ್ ಹೀಗೂ ಇದೆ ಎಂದು ತೋರಿಸಿದವನು.

1835ರಲ್ಲಿ ಈ ಸ್ಥಳವನ್ನು ಹಾದುಹೋಗಿದ್ದ ಡಿಕನ್ಸ್, “ರಸ್ತೆಗಳು, ರಸ್ತೆ ಬದಿಯ ಮನೆಯಂಗಳಗಳು ಎಲ್ಲ ದಿಕ್ಕುಗಳಲ್ಲೂ, ಮನೆಗಳ ಮೇಲಿಂದ ಹೊಮ್ಮುವ ಕಲುಷಿತ ಹೊಗೆಗಳಲ್ಲಿ ಮುಳುಗಿ ಮರೆಯಾಗುವ ತನಕ ಓಡುತ್ತಿರುವ, ಅನಿಶ್ಚಿತ ಕಿರುನೋಟವನ್ನು ಕಂಡೆ” ಎಂದು ಬರೆದಿದ್ದ. ಅಲ್ಲಿ, ಕುಡಿದ ಅಮಲಿನಲ್ಲಿ ಗಯ್ಯಾಳಿ ಹೆಂಗಸರು ಜಗಳಾಡುವುದು, ಧೂಳಿನಲ್ಲಿ ಕೊಳೆಯಾದ ಹತ್ತಿಯ ಬಟ್ಟೆಗಳನ್ನು ಧರಿಸಿದ ಗಂಡಸರ ಹುಸಿಠೀವಿ, ರಸ್ತೆ ಬದಿಯ ಕಂಬಗಳಿಗೆ ಗಂಟೆಗಟ್ಟಲೆ ಒರಗಿ ನಿಂತವರ ವಿವಿಧ ಭಂಗಿಗಳನ್ನು ತನ್ನ ಅಂಕಣದಲ್ಲಿ ಚಿತ್ರಿಸಿದ್ದ. ಸೆವೆನ್ ಡಯಲ್ಸ್ ಸ್ಥಳ, ಬಡತನ ಹಾಗು ಅಪರಾಧಕ್ಕೆ ಪರ್ಯಾಯ ಹೆಸರಿನಂತಿತ್ತು. ಬಹುತೇಕ ಲಂಡನ್ ಜನರಿಗೆ ಗಳಿಸಿದ್ದನ್ನು ಕಳೆದುಕೊಳ್ಳುವ ಜಾಗವೂ ಅದಾಗಿತ್ತು. ಡಿಕನ್ಸ್ ಆ ಸ್ಥಳದಲ್ಲಿ ಕಾಗದ ಹಾಗು ಪೆನ್ನುಗಳಿಂದ ದಾಳಿ ಮಾಡಿದ.

ಬಳಸಿದ ಮತ್ತು ಕದ್ದ ವಸ್ತುಗಳನ್ನು ಮಾರುವ ಅಂಗಡಿಗಳು, ಗುರುತು ಪರಿಚಯ ಇಲ್ಲದ ಹಲವರು ಒಂದೇ ಮನೆಯಲ್ಲಿ ಬಿಡಿ ಒಂದೇ ಕೋಣೆಯಲ್ಲಿ ವಾಸಿಸುವಂತಹ ಬಾಡಿಗೆ ಮನೆಗಳು ಅಲ್ಲಿದ್ದವು. ಪಾರಿವಾಳ, ಮೊಲ, ಹದ್ದು ಮತ್ತು ಅಪರೂಪದ ಹಕ್ಕಿಗಳನ್ನು ಮಾರುವ ಅಂಗಡಿಗಳೂ ಇದ್ದವು.

ಈ ಕಾಲದಲ್ಲಿ “ಸ್ಕೆಚಸ್” ಅನ್ನು ಓದಿದರೆ, ನಾವು ನೋಡಿರದ ಇನ್ನೊಂದು ಲಂಡನ್ ನಲ್ಲಿ ಸುತ್ತಿ ಅಲೆದಂತಾಗುತ್ತದೆ. ಡಿಕನ್ಸ್ ತನ್ನ ಗದ್ಯದಲ್ಲಿ ಚಿತ್ರಿಸಿದ್ದ ಲಂಡನ್, ಬದಲಾವಣೆ ಆಧುನೀಕರಣದ ಹೊರತಾಗಿಯೂ ಇಂದು ಕೂಡ ಇದೆ. “ಸ್ಕೆಚಸ್” ನ ಹಿಂದಿರುವ ಕಣ್ಣುಗಳನ್ನು ಎರವಲು ಪಡೆಯುವುದು ಸಾಧ್ಯ ಆದರೆ ಈಗಲೂ ಕಾಣಿಸುತ್ತದೆ. ಡಿಕನ್ಸ್ ಲಂಡನ್ ಅನ್ನು ಪುಸ್ತಕದಂತೆ ಓದಲು ಹೇಳಿಕೊಟ್ಟವನು. ಪರಿಚಯ ಇರುವುದನ್ನೇ ಹೊಸ ಬಗೆಯಲ್ಲಿ ಪರಿಚಯಿಸಿದವನು, ಲಂಡನ್ ನ ಬಡತನ ಶ್ರೀಮಂತಿಕೆಗಳ ಸದ್ದನ್ನು ಓದುಗರಿಗೆ ಸ್ಪಷ್ಟವಾಗಿ ಕೇಳಿಸುತ್ತ, ಕಲ್ಪನೆಗಳನ್ನು ಬೆಳೆಸಲು ಪ್ರೋತ್ಸಾಹಿಸಿದವನು. 1834ರಿಂದ 36ರ ನಡುವೆ ಡಿಕನ್ಸ್ ನ ಅಂಕಣಗಳು ನಿಯತಕಾಲಿಕಗಳಲ್ಲಿ ಪ್ರಕಟಗೊಂಡು ಹೊಸ ಅಲೆ ಎಬ್ಬಿಸಿದವು, ಜನಪ್ರಿಯ ಸಂಕಲನವಾಗಿ “ಸ್ಕೆಚಸ್ ಬೈ ಬೋಜ್” ನ ಪ್ರಕಟಣೆಗೆ ಕಾರಣ ಆದವು. ಈ ಜನಪ್ರಿಯತೆಯೇ ಮುಂದೆ “ಪಿಕ್ವಿಕ್ ಪೇಪರ್ಸ್” ಎನ್ನುವ ಕಾದಂಬರಿಗೆ ಹಾದಿಯಾಗಿ ಡಿಕನ್ಸ್ ನ ಸಾಹಿತ್ಯಸೃಷ್ಟಿಯ ಉದಯಕ್ಕೆ ಕಾರಣವಾಯಿತು. ಆಗಲೇ ಯಶಸ್ವಿ ಸಂಸದೀಯ ವರದಿಗಾರನಾಗಿದ್ದವನು, ತನ್ನ ಪ್ರಬಂಧಗಳಿಗೆ ಪತ್ರಿಕಾ ವರದಿಗಾರಿಕೆಯ ನೋಟವನ್ನು ತಂದನು. ತನ್ನ ಕಾದಂಬರಿಗಳಂತೆ ವರ್ಣರಂಜಿತ, ಸತ್ಯವನ್ನು ಆಧರಿಸಿದ, ವಿವರಗಳನ್ನು ಕೂಡಿದ, ಅಸಾಧಾರಣ ವಿಮರ್ಶಕ ನೋಟ ಇರುವ ವಾಸ್ತವಗಳಿಂದ ಕೂಡಿದ ಬರಹಗಳನ್ನು ಬರೆದನು. ಡಿಕನ್ಸ್ ಬರವಣಿಗೆಯಲ್ಲಿ ವಾಸ್ತವದ ಜೊತೆಗೆ ಕಲ್ಪನೆಗಳೂ ಇರುತ್ತಿದ್ದವು, ಮತ್ತೆ ಮೆಟ್ರೋಪಾಲಿಟನ್ ಜೀವನದ ತಿರುಳನ್ನು ಸಂಕೀರ್ಣತೆಯನ್ನು ಪ್ರತಿನಿಧಿಸುತ್ತಿದ್ದವು.

ಅದೆಷ್ಟೋ ಬರಹಗಾರರು ಲಂಡನ್ ನ ಇತಿಹಾಸ ಅಥವಾ ಲಂಡನ್ ಆಧಾರಿತ ಕತೆ ಕಾದಂಬರಿಗಳನ್ನು ಬರೆದಿದ್ದಾರೆ. ಆದರೆ ಲಂಡನ್ ಅನ್ನು ಡಿಕನ್ಸ್ ನಂತೆ ವಸ್ತುವಾಗಿಸಿದವರು ಇನ್ನೊಬ್ಬರಿಲ್ಲ. ಡಿಕನ್ಸ್ ನ ತುಡಿತ ಲಂಡನ್ನಿನ “ಇಲ್ಲಿ” ಮತ್ತು “ಈಗ” ದ ಬಗ್ಗೆ ಇತ್ತು. ಆತ ಲಂಡನ್ ಅನ್ನು ಸಹಜವಾಗಿ ಮತ್ತು ಅಸಲಿ ಸ್ವರೂಪದಲ್ಲಿ ನೋಡಿದವನು. ಡಿಕನ್ಸ್ ನ ಎಲ್ಲ ಬರಹಗಳಲ್ಲಿ ಸಾಹಿತ್ಯದಲ್ಲಿ ಹಲವು ಪಾತ್ರಗಳು, ಘಟನೆಗಳು, ವಿವರಗಳು ಬರುತ್ತವೆ. ಆದರೆ ಅವೆಲ್ಲದರಲ್ಲೂ ಅತ್ಯಂತ ಪ್ರಮುಖ ಪಾತ್ರ ಲಂಡನ್ ನದು. ಒಂದು ಜನಪ್ರಿಯ ಕಲ್ಪನೆಯಲ್ಲಿ ಲಂಡನ್ ಈಗಲೂ ಚಾರ್ಲ್ಸ್ ಡಿಕನ್ಸ್ ನ ಲೇಖನಿಯಲ್ಲಿ ಹಿತವಾಗಿ ಬಂಧಿಯಾಗಿದೆ. ಆತನ ಕಾದಂಬರಿಗಳಲ್ಲಿ ಅಪ್ರತಿಮವಾಗಿ ಅನಾವರಣಗೊಳ್ಳುವ ಲಂಡನ್ ನಗರದ ಮನೆಯನ್ನು, ನೀಲಿ ಫಲಕ ನೆಡುವ ಮೂಲಕ ಈಗಲೂ ಸ್ಮರಿಸಲಾಗುತ್ತದೆ. 1837ರಿಂದ 1839ರ ತನಕ ಲಂಡನ್ ನ ಬ್ಲೂಮ್ಸ್‌ಬರಿಯ ಡೌಟಿ ರಸ್ತೆಯ 48 ನಂಬ್ರದ ಮನೆಯಲ್ಲಿ ಇರುವಾಗಲೇ ಡಿಕನ್ಸ್ ನ ಮೊದಮೊದಲಿನ ಕಾದಂಬರಿಗಳನ್ನು ಬರೆದುದು.

ಡಿಕನ್ಸ್ ನ ಲಂಡನ್ ಮನೆಯ ಬಾಡಿಗೆ ವರುಷಕ್ಕೆ ಎಂಬತ್ತು ಪೌಂಡ್. ಆ ಕಾಲಕ್ಕೆ ದುಬಾರಿ ಮನೆಯನ್ನು ಬಾಡಿಗೆಗೆ ಹಿಡಿಯುವುದು ಸಾಧ್ಯ ಆದದ್ದು ಮೊದಲ ಕಾದಂಬರಿ “ದಿ ಪಿಕ್ವಿಕ್ ಪೇಪರ್ಸ್”ನ ಯಶಸ್ಸಿನಿಂದ. “ದಿ ಪಿಕ್ವಿಕ್ ಪೇಪರ್ಸ್” ಕೂಡ ಸರಣಿಯಾಗಿ ಪತ್ರಿಕೆಯಲ್ಲಿ ಬರುತ್ತಿತ್ತು, ಮೊದಲ ಕಂತು 1836ರ ಮಾರ್ಚ್ ಅಲ್ಲಿ ಪ್ರಕಟಗೊಂಡಿತು. ಡಿಕ್ಸನ್ ನ ಧಾರಾವಾಹಿ ರೇಖಾಚಿತ್ರಗಳ ಮೂಲಕ ಪ್ರಸ್ತುತಗೊಳ್ಳುತ್ತಿತ್ತು. ಹೆಬ್ಲೋಟ್ ನೈಟ್ ಎನ್ನುವ ಪ್ರಸಿದ್ಧ ಆಂಗ್ಲ ಚಿತ್ರಕಾರ 23 ವರ್ಷ ಡಿಕನ್ಸ್ ನ ಸರಣಿಗಳಿಗೆ, ಪುಸ್ತಕಗಳಿಗೆ ಚಿತ್ರಕಲೆಯ ಸ್ಪರ್ಶ ನೀಡಿದ. ಡೌಟಿ ರಸ್ತೆಯ ಮನೆಯಲ್ಲಿ ಇರುವಾಗಲೇ “ಆಲಿವರ್ ಟ್ವಿಸ್ಟ್” ಹಾಗು “ನಿಕೊಲಸ್ ನಿಕಲ್ಬಿ” ಕಾದಂಬರಿಗಳು ಬರೆಯಲ್ಪಟ್ಟವು. “ಬಾರ್ನಬಿ ರಜ್” ಬರವಣಿಗೆ ಮುಂದುವರಿದಿತ್ತು. ಆ ಕಾಲದ ಕಲಾವಿದರ, ನಟರ ಹಲವು ಪ್ರಮುಖ ವ್ಯಕ್ತಿಗಳ ಸಂಪರ್ಕ ಡಿಕನ್ಸ್ ಗೆ ಇತ್ತು. ಡಿಕನ್ಸ್ ಲಂಡನ್ ಮನೆಯಲ್ಲಿ ಹೆಂಡತಿ ಹಾಗು ಆಕೆಯ ತಂಗಿಯ ಜೊತೆ ವಾಸಿಸುತ್ತಿದ್ದ. ಆ ಮನೆಗೆ ಬಂದ ಒಂದೇ ವರ್ಷದಲ್ಲಿ ಹೆಂಡತಿಯ ಹದಿನೇಳು ವರ್ಷದ ತಂಗಿ ಕಣ್ಣೆದುರೇ ಸಾವನ್ನಪ್ಪಿದಳು. ಈ ಸಾವು ಆತನನ್ನು ಎಷ್ಟು ಕಾಡಿತು ಎಂದರೆ ಕೆಲಕಾಲ ಬರೆಯುವುದನ್ನು ನಿಲ್ಲಿಸಿದ. ಸುದೀರ್ಘ ಬರವಣಿಗೆಯ ಅಭಿಯಾನದಲ್ಲಿ ಇದ್ದ ಒಂದೇ ಒಂದು ನಿಲುಗಡೆ ಅದಾಗಿತ್ತು. ಡಿಕನ್ಸ್ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು ಇದೇ ಮನೆಯಲ್ಲಿ ಹುಟ್ಟಿದರು. “ನಿಕೊಲಸ್ ನಿಕಲ್ಬಿ” ಪುಸ್ತಕ ಚೆನ್ನಾಗಿ ಮಾರಾಟಗೊಂಡು ಸಂಪಾದಿಸಿದ ಹಣದಿಂದ 1839ರಲ್ಲಿ ವಾಸ್ತವ್ಯವನ್ನು ದೊಡ್ಡ ಮನೆಗೆ ಬದಲಾಯಿಸಿದ.

ಕಿರಿಯ ಓದುಗರಿಂದ ಹಿಡಿದು ಹಿರಿಯ ಪುಸ್ತಕಪ್ರಿಯರ ತನಕ ಜನಪ್ರಿಯವಾದ “ಆಲಿವರ್ ಟ್ವಿಸ್ಟ್” ಹುಟ್ಟಿದ್ದು ಲಂಡನ್ ನ ಬೀದಿಗಳಿಂದಲೇ. ಲಂಡನ್ ನ ಬಡತನ ಕ್ರೌರ್ಯ ಅಪರಾಧಗಳೇ ಪ್ರಧಾನ ಭೂಮಿಕೆಯಲ್ಲಿರುವ ಕಥೆ. ಸಾಲವನ್ನು ತೀರಿಸಲಾಗದೇ ತಂದೆ ಜೈಲಿನಲ್ಲಿ ದಿನಕಳೆಯುವುದನ್ನು, ನಿರಾಶ್ರಿತ ವಸತಿಗಳಲ್ಲಿ ಅನಾಥ ಮಕ್ಕಳ ಹತಾಶೆಯನ್ನು ಬಾಲ್ಯದಲ್ಲಿ ಡಿಕನ್ಸ್ ಕಂಡವನು. ಅನಾಥಾಲಯಗಳಲ್ಲಿ ಆಶ್ರಯ ಪಡೆಯುವವರು ಕೆಲಸ ಮಾಡಿ ತಮ್ಮ ಊಟವನ್ನು ಗಳಿಸಬೇಕಿದ್ದ ಕಾಲ ಅದು. ಆದರೆ 1834ರಲ್ಲಿ “ಬಡತನ ಕಾಯಿದೆ”ಯ ಬದಲಾವಣೆಯೊಂದಿಗೆ ನಿರಾಶ್ರಿತರ ವಸತಿಗಳಲ್ಲಿ ಇರುವವರ ಬದುಕು ಹಿಂದಿಗಿಂತಲೂ ದುಸ್ತರ ಆಯಿತು. ಕಡುಬಡವರಿಗೆ ಉಚಿತವಾಗಿ ದೊರಕುತ್ತಿದ್ದ ಸೌಲಭ್ಯಗಳು ನಿಲ್ಲಿಸಲ್ಪಟ್ಟವು. ಆಶ್ರಯ ಇಲ್ಲದವರು, ಬಡವರು ಅನಾಥಾಲಯಗಳಲ್ಲಿ ನೋಂದಣಿ ಮಾಡಿಸಿ ಅಲ್ಲಿಯೇ ಇದ್ದು ಮೈಬಗ್ಗಿಸಿ ದುಡಿದರೆ ಮಾತ್ರ ಆಹಾರ ದೊರೆಯುವಂತಾಯಿತು. ಅನಾಥಾಲಯಗಳ ಕಾನೂನು ಪರಿಸ್ಥಿತಿಗಳು ಜೈಲಿನಂತಿದ್ದು ಅತ್ಯಂತ ದಾರುಣ ಸ್ಥಿತಿಯಲ್ಲಿರುವವರು ಮಾತ್ರ ಅಲ್ಲಿ ಹೋಗುತ್ತಿದ್ದರು. ಅಲ್ಲಿ ವಸತಿ ಪಡೆಯುವವರು ಸಮವಸ್ತ್ರ ಧರಿಸಬೇಕಿತ್ತು, ಮಕ್ಕಳು ಹೆತ್ತವರಿಂದ ದೂರವಾಗಬೇಕಿತ್ತು. ಇಂತಹ ಸ್ಥಿತಿಗೆ ಪ್ರತಿಭಟನೆಯಾಗಿ ಡಿಕನ್ಸ್ “ಆಲಿವರ್ ಟ್ವಿಸ್ಟ್” ಬರೆದದ್ದು. ಒಂದು ನಿರಾಶ್ರಿತ ವಸತಿಯಲ್ಲಿ ಆಲಿವರ್ ಅನುಭವಿಸುವ ತೀವ್ರ ಶಿಕ್ಷೆ, ಆನಂತರ, “ದಯವಿಟ್ಟು ಇನ್ನೂ ಶಿಕ್ಷಿಸಬಹುದೇ?” ಎಂದು ಆಲಿವರ್ ನಿಂದ ಹೇಳಿಸುವುದು ಕಾಲ್ಪನಿಕ, ನಾಟಕೀಯ ಎನಿಸಿದರೂ ಆಗಿನ ಅನಾಥರ ವಸತಿ ವ್ಯವಸ್ಥೆ, ಬಡಮಕ್ಕಳನ್ನು ಪೋಷಿಸುವುದನ್ನು ಬಿಟ್ಟು ಶಿಕ್ಷಿಸುವುದಕ್ಕೆ ರೂಪುಗೊಂಡತ್ತಿದ್ದುದು ಕೂಡ ಸತ್ಯ. ಕಡುಬಡತನ ಅಪರಾಧಿಗಳನ್ನು ಹುಟ್ಟುಹಾಕುವುದನ್ನು “ಆಲಿವರ್ ಟ್ವಿಸ್ಟ್” ಚಿತ್ರಿಸುತ್ತದೆ. ಲಂಡನ್ ಅನ್ನು ಸೂಕ್ಷ್ಮವಾಗಿ ಗಮನಿಸಿದ, ಅನಾಥಾಲಯಗಳ ಹತ್ತಿರದ ಅನುಭವವಿದ್ದ ಡಿಕನ್ಸ್ ನ ನಂಬಿಕೆಯೂ ಅದೇ ಆಗಿತ್ತು.

1860-61ರಲ್ಲಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ 1861 ಪುಸ್ತಕವಾದ “ದಿ ಗ್ರೇಟ್ ಎಕ್ಸ್ಪೆಕ್ಟೇಶನ್” ಹಳ್ಳಿಗಳಿಂದ ಕನಸು ನಿರೀಕ್ಷೆ ಹೊತ್ತು ಲಂಡನ್ ಪಟ್ಟಣಕ್ಕೆ ಬರುವುದು ಸಾಮಾನ್ಯವಾಗುತ್ತಿದ್ದ ಕಾಲದ ವಿಕ್ಟೋರಿಯನ್ ಸಮಾಜದ ಒಳನೋಟವನ್ನು ಚಿತ್ರಿಸಿತು. ಮನುಷ್ಯನ ನಿಜವಾದ ಗುರುತು, ಮೌಲ್ಯವನ್ನು ಹುಡುಕುವ ಮಹತ್ವದ ಕೃತಿ ಎಂದು ವಿಮರ್ಶಕರಿಂದ ಅಪಾರ ಮೆಚ್ಚುಗೆಯನ್ನು ಪಡೆಯಿತು. ಸಾಮಾಜಿಕ ಸ್ಥಾನ ಹಾಗು ಸಿರಿವಂತಿಕೆಗಳು ನಿಷ್ಠೆ ಹಾಗು ಸಹಾನುಭೂತಿಗಳಷ್ಟು ಮುಖ್ಯವಲ್ಲ ಎನ್ನುವ ಸಂದೇಶ ನೀಡಿತು. ಕಥಾ ನಾಯಕ ನಾಯಕಿಯರ ಅಗಲುವಿಕೆಯಲ್ಲಿ ದುಃಖಾಂತ್ಯ ಆಗಿದ್ದ ಮೂಲ ಕಥೆಯನ್ನು, ಒತ್ತಡದಲ್ಲಿ ಪುನರ್ಮಿಲನದ ಮೂಲಕ ಸುಖಾಂತ್ಯಕ್ಕೆ ಡಿಕನ್ಸ್ ಬದಲಾಯಿಸಿದ್ದ. ಓದುಗರಿಂದ ಕಾದಂಬರಿಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಪ್ರಸಿದ್ಧ ಐರಿಶ್ ನಾಟಕಕಾರ ಬರ್ನಾಡ್ ಷಾ ” ಅಚ್ಚುಕಟ್ಟಾದ ಪರಿಪೂರ್ಣ ಪುಸ್ತಕ” ಎಂದು ಆಭಿಪ್ರಾಯ ಪಟ್ಟಿದ್ದ.

ಡಜನ್ ಗಿಂತ ಹೆಚ್ಚು ಕಾದಂಬರಿಗಳ ಜೊತೆಗೆ ಹಲವು ಸಣ್ಣ ಕಥೆ, ನೀಳ್ಗಥೆಗಳನ್ನು ಕೆಲವು ಸಣ್ಣ ನಾಟಕಗಳನ್ನು ಡಿಕನ್ಸ್ ಬರೆದಿದ್ದಾನೆ. 1853ರ ನಂತರ ಡಿಕನ್ಸ್ ತನ್ನ ಸಾಹಿತ್ಯವನ್ನು ತಾನೇ ಓದಿ ಹೇಳುವ ಕಾರ್ಯಕ್ರಮಗಳನ್ನು ನೀಡುತ್ತಿದ್ದ. ಮೊದಲಿಗೆ ಉಚಿತವಾಗಿ ನಡೆಯುತ್ತಿದ್ದ ಈ ಸಾಹಿತ್ಯದ ಓದು, ಮುಂದೆ ಟಿಕೇಟು ಪ್ರದರ್ಶನದ ರೂಪ ಪಡೆಯಿತು, ಹೇರಳ ಹಣವನ್ನೂ ತಂದಿತು, ಜೊತೆಗೆ ಅನಾರೋಗ್ಯವನ್ನೂ. ಓದಿನ ತಿರುಗಾಟದಲ್ಲಿ ಅತಿಯಾಗಿ ತೊಡಗಿಸಿಕೊಂಡು ಅಸ್ವಸ್ಥನಾಗಿ 1870ರಲ್ಲಿ ಮಡಿದ ಡಿಕನ್ಸ್ ಬದುಕಿನ ಕೊನೆಯ ನಾಲ್ಕು ವರ್ಷಗಳಲ್ಲಿ ನಿರಂತರವಾಗಿ ಬ್ರಿಟನ್ನಿನ ಬೇರೆಬೇರೆ ಭಾಗಗಳನ್ನು ಅಮೆರಿಕವನ್ನು ಸುತ್ತಿದ್ದ. “ವಿದಾಯದ ಓದು” ಎಂದು ಕರೆಯಲ್ಪಡುತ್ತಿದ್ದ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಕೃತಿಗಳಿಂದ ಆಯ್ದ ಭಾಗಗಳನ್ನು ಓದುತ್ತಿದ್ದ. ಅಂತಹ ಒಂದು ವಿದಾಯ ಯಾತ್ರೆಯ ಕೆಲವು ಸಾಲುಗಳು ಹೀಗೆ ಕೊನೆಗೊಂಡಿದ್ದವು; “ನಿಮ್ಮನ್ನು ನಾನೆಂದೂ ಸಾರ್ವಜನಿಕ ಪ್ರೇಕ್ಷಕರು ಎಂದು ತಿಳಿದೇ ಇಲ್ಲ, ಬದಲಾಗಿ ಖಾಸಗಿ ಮಿತ್ರರಾಗಿ ಮತ್ತು ಯಾವತ್ತೂ ಅತ್ಯಂತ ಕೃತಜ್ಞತೆಯಿಂದ ಸ್ಮರಿಸುವ ಆತ್ಮೀಯರಂತೆ ಸ್ವೀಕರಿಸಿದ್ದೇನೆ. ಮಹನೀಯರೇ ಮತ್ತು ಮಹಿಳೆಯರೇ, ನಿಮ್ಮೆಲ್ಲರಿಂದ ವಿದಾಯ ಕೋರುತ್ತಿದ್ದೇನೆ, ಬಿಟ್ಟುಹೋಗುತ್ತಿರುವ ಈ ನಾಡಿಗೆ ದೇವರು ಆಶೀರ್ವದಿಸಲಿ”.