ಹುಡುಕಾಟ

ಅವನು ಸುಖವನ್ನರಸಿ ಬಂದಿದ್ದ
ಮನೆ ಕುಟುಂಬ ಕರುಳಬಳ್ಳಿ
ಬೆರಳುಂಗುರದ ಪ್ರೀತಿ
ಭೂಮಿತೂಕದ ಸಂಪತ್ತು
ಎಲ್ಲವನ್ನೂ ತೊರೆದು ಬಂದಿದ್ದ

ಸುಖವನ್ನು ಬಯಸಿ ಅವನು
ಅಡಿಯಿಡದ ಸ್ಥಳವೇ ಇರಲಿಲ್ಲ
ಅನೂಹ್ಯ ಕ್ಷಿತಿಜವನು ಕಣ್ಣಂಚಲ್ಲಿ
ಸ್ಪರ್ಶಿಸಿ ಬಂದಿದ್ದ
ಅನ್ಯಗ್ರಹದ ಪರಿಧಿಯಾಚೆಗೂ
ತಲೆಹಾಕಿ ತಿರುಗಿದ್ದ
ಗೋಷ್ಠಿ ಗಾಯನ ನೃತ್ಯ ಸಮ್ಮಿಲನ
ಬಾರು ಕ್ಲಬ್ಬು ಮಬ್ಬು ಸೂಳೆಗೇರಿ
ಕೊನೆಯಿರದ ಕಡಲು
ಚಣಕ್ಕೊಮ್ಮೆ ಹೊಸದಾಗುವ ಉಡುಪು
ಹಿಮಾಲಯದ ತುತ್ತತುದಿ
ಬುವಿಯಾಳದ ನೀರಸೆಲೆ
ಅರೆನಿಮಿಷಕ್ಕೊಮ್ಮೆ ಜಿಗಿಜಿಗಿಯುವ
ಎದೆಯಾಳದ ಕನವರಿಕೆಗಳು
ಮುಂಜಾನೆ ಬಿದ್ದ ಕನಸು
ಯಾವುದೂ ಖುಷಿ ಕೊಡಲೇ ಇಲ್ಲ

ಅತಿ ಅತೃಪ್ತ ಆತ್ಮನಾಗಿ
ಹೊಸ ಊರಿಗೆ ಬಂದವನಿಗೆ
ಕಟ್ಟಡವೊಂದರ ಮುಂದೆ ಕಂಡದ್ದು
ಅದೊಂದು ಫಲಕ-
‘ಇಲ್ಲಿ ಸುಖ ಸಿಗುತ್ತದೆ’

ದುಮ್ಮನೆ ಬಾಗಿಲನ್ನು ದೂಡಿಕೊಂಡು
ಒಳಹೋದವನು ಎದುರಾದ
ಇನ್ನೊಂದು ಫಲಕಕ್ಕೆ-
‘ದಯವಿಟ್ಟು ಮೆದುಳನ್ನು
ಕಳಚಿಟ್ಟು ಒಳಬನ್ನಿ’