ಗಣಪತಿ ಬಪ್ಪ ಮೋರೆಯಾ ಅಂತ ಹಬ್ಬದ ಸಂಜೆ ಊರಿನ ಹೈಕಳೆಲ್ಲಾ ಗುಂಪುಗೂಡಿ ಮನೆಮನೆಗೆ ಹೋಗಿ ಗಣೇಶ ದರ್ಶನ ಮಾಡಿಕೊಂಡು ಬರುತ್ತಿದ್ದೆವು. ಗಣೇಶನ ಮೇಲೆ ಕಣ್ಣು ಅಂತ ನೋಡುವವರಿಗೆ ಅನ್ನಿಸಿದರೂ, ವಾರೆಗಣ್ಣಿನಲ್ಲಿ ಅವರ ಮನೆಯ ಚರ್ಪನ್ನು ಅಳೆಯುತ್ತಿದ್ದೆವು. ಬರ್ಫಿಯೋ, ಮಿಠಾಯೋ ಇದ್ರೆ, ಅವ್ರು ಭಾಳಾ ಧಾರಾಳ. ಕಡಲೆ ಹುಸ್ಲಿಯೋ, ಕಡಲೆಹಿಟ್ಟೋ ಇದ್ರೆ ಥೋ ಬಿಕನಾಸಿಗಳು ಅಂತ ಬೈಕೊಳ್ಳೋದು. ಎಲ್ಲರ ಮನೆಗೆ ಎಡತಾಕಿದ್ದು ಮುಗಿದ ನಂತರ, ಮನೆಯಲ್ಲಿ ಉಳಿದ ಕಡುಬು, ಉಂಡೆಗಳ ನೈವೇದ್ಯ ನಮ್ಮ ಪಾಲಿಗೇ. ಪಾಪ! ರಾಶಿ ಅಡುಗೆ ಮಾಡಿದರೂ, ಗಂಡಸರ, ಮಕ್ಕಳ ಸಾಮ್ರಾಜ್ಯದಲ್ಲಿ ಮನೆ ಹೆಂಗಸರಿಗೆ ಸರಿಯಾಗಿ ಸಿಗುತ್ತಿತ್ತೋ ಇಲ್ಲವೋ ಗೌರಿಗೇ ಗೊತ್ತು.
ಗೌರಿ-ಗಣೇಶ ಹಬ್ಬಕ್ಕೆ ಸುಮಾ ಸತೀಶ್ ಬರಹ ನಿಮ್ಮ ಓದಿಗೆ
ಈಗೊಂದು ಮೂರು ದಶಕದ ಹಿಂದೆ ಗೌರಿ ಹಬ್ಬಕ್ಕೆ ತವರಿನ ಬಾಗಿನ ಕೊಡಲು ಅಣ್ಣ ತಮ್ಮಂದಿರು ಬರುತ್ತಾರೆಂದು ಅಕ್ಕ ತಂಗಿಯರು ಪ್ರತಿ ಬಸ್ಸಿನ ಸದ್ದಿಗೂ ಕತ್ತು ನೇರ ಮಾಡಿ, ಪಡಸಾಲೆ ದಾಟಿ, ಹೊಸ್ತಿಲಿನ ಚೌಕಟ್ಟಿಗೆ ಬೆನ್ನು ಆನಿಸಿ, ಕಾಯುತ್ತಾ ನಿಂತಿರುತ್ತಿದ್ದ ದೃಶ್ಯ ಪ್ರತಿ ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು. ಪಟ್ಟಣಗಳ ಭಿನ್ನ ಪರಿಸರದಲ್ಲಿಯೂ ಇದೇ ಮನಃಸ್ಥಿತಿಯಿತ್ತು. ಮೊಬೈಲ್ ಇನ್ನೂ ಮನೆಯೊಳಗೆ ಕಾಲಿಟ್ಟಿರಲಿಲ್ಲ. ಹಾಗಾಗಿ ಬಾಂಧವ್ಯಗಳು ಮನದಲ್ಲಿ ಬೇರು ಬಿಟ್ಟಿದ್ದವು.
ಆ ಕಾಯುವಿಕೆಯಲ್ಲಿ ಇದ್ದಂತಹ ಕಾತುರ, ಸಂಭ್ರಮಗಳು ಹೇಳತೀರದ್ದು. ನಾಗರ ಪಂಚಮಿಯಂದು ಹುತ್ತಕ್ಕೆ ಹೋಗಿ ಹಾಲೆರೆದು, ನಾಗಪ್ಪನನ್ನು ತವರನ್ನು ಕಾಯಲು ಕೇಳಿಕೊಂಡು, ಶ್ರದ್ಧೆಯಿಂದ ಪೂಜೆ ಮಾಡುತ್ತಿದ್ದರು. ಅಣ್ಣ ತಮ್ಮಂದಿರ ಆರೋಗ್ಯಕ್ಕಾಗಿ, ಹುತ್ತದ ಮೆದು ಮಣ್ಣು ತಂದು ದೇವರ ಫೋಟೋ ಮುಂದೆ ಇಟ್ಟು, ನಿತ್ಯ ಅದನ್ನೊಮ್ಮೆ ಮುಟ್ಟಿ ನೋಡುತ್ತಾ ಇಂದು ಬಂದಾನೇನೋ ಸಹೋದರ ಬೆನ್ನು ತೊಳೆಸಿಕೊಳ್ಳಲು ಅಂತ ಕಣ್ಣಲ್ಲಿ ಮಮತೆಯನ್ನೇ ಸುರಿಸುತ್ತಿದ್ದ ಕಾಲವನ್ನು ಬದಿಗೊತ್ತಿದ್ದೇವೆ.
ಇಂದು, ಪಂಚಮಿ ಹಬ್ಬ ಉಳಿದಾವ ದಿನ ನಾಕ. ಅಣ್ಣ ಬರಲಿಲ್ಲ ಯಾಕ ಕರಿಯಾಕ ಅನ್ನುವವರು ಎಲ್ಲೋ ಅಪರೂಪ. ದುಬಾರಿ ರಾಖಿ ತಂದು ಅಣ್ಣ ತಮ್ಮಂದಿರಿಗೆ ಫೋನ್ ಮಾಡಿಯೋ, ತಾವೇ ಹೋಗಿಯೋ, ರಾಖಿ ಕಟ್ಟಿ, ಊರಲ್ಲೇ ಪ್ರಸಿದ್ಧ ಸಿಹಿ ಅಂಗಡಿಯಿಂದ ತಂದ ವಿಶೇಷ ಸಿಹಿ ತಿನ್ನಿಸುವ ಕಾಲ. ದುಡಿಯುವ ಹೆಣ್ಣುಮಕ್ಕಳೂ ಒತ್ತಡದ ಬದುಕಿನಲ್ಲಿಯೇ ಸಿಲುಕಿರುವುದರಿಂದ ಇದು ಅನಿವಾರ್ಯವಾಗಿದೆ.
ಪಂಚಮಿಯಿಂದ ಗೌರಿಯ ತನಕ
ಪಂಚಮಿ ಹಬ್ಬಕ್ಕೂ ಗೌರಿಗೂ ಅವಿನಾಭಾವ ಸಂಬಂಧ. ಪಂಚಮಿಯಲ್ಲಿ ತವರಿನ ತಂಪಿಗಾಗಿ, ಸಮೃದ್ಧಿಗಾಗಿ ಹಾರೈಸಿ, ಹಾಲ ತೆನೆಯೆರೆಯುವ ಸಹೋದರಿಯ ಮನೆಗೆ ಪ್ರೀತಿಯಿಂದ ಗೌರಿ ಬಾಗಿನ ಹೊತ್ತು ತರುವ ಅಣ್ಣ ತಮ್ಮಂದಿರಿಗಾಗಿ ಆಗೆಲ್ಲಾ ಹೋಳಿಗೆ ಊಟವನ್ನೇ ಮಾಡಿ ಬಡಿಸುತ್ತಿದ್ದರು. ತವರಿಗೆ ಬುತ್ತಿಯನ್ನೂ ಕಟ್ಟಿಕೊಡುತ್ತಿದ್ದರು. ಬೆನ್ನು ತೊಳೆದು, ಹುತ್ತದ ಮಣ್ಣು ಕೊಟ್ಟು ಹಾರೈಸುತ್ತಿದ್ದರು. ರೈತಾಪಿ ಕುಟುಂಬಗಳ ಉಸಿರು ಮಣ್ಣು. ಹುತ್ತದ ಮಣ್ಣು ಅವರ ಬದುಕನ್ನೂ ಸಂಕೇತಿಸುತ್ತಿತ್ತು. ಬಾಂಧವ್ಯವನ್ನು ಬೆಸೆದು ಸಮೃದ್ಧವಾಗಿ ಚಿಗುರೊಡೆಸುತ್ತಿತ್ತು.
ಗೌರಿ ಹಬ್ಬಕ್ಕೆ ಮುನ್ನ ಬರುವ ಅಮಾವಾಸ್ಯೆ ಬಾಗಿನ ಹೊತ್ತು ತರಲು ಇರುತ್ತಿದ್ದ ಗಡಿರೇಖೆ(ಡೆಡ್ ಲೈನ್). ಅಮಾವಾಸ್ಯೆ ಮೊದಲು ಬಾಗಿನ ಕೊಡಲೇಬೇಕಿತ್ತು. ಹಾಗಾಗಿ ಪಂಚಮಿಯಿಂದ ಅಮಾವಾಸ್ಯೆ ಹೆಣ್ಣುಮಕ್ಕಳ ಕಾಯುವಿಕೆಯ ಕಾಲವಾಗಿತ್ತು. ಆಗೆಲ್ಲಾ ಉಡುಗೊರೆ ಅಂದರೆ ಸಾಧಾರಣ ಸೀರೆಯೋ, ರವಿಕೆ ಬಟ್ಟೆಯೋ ಅಥವಾ ಸಹೋದರಿಯ ಮನೆಯಲ್ಲಿ ಕಷ್ಟ ಇದ್ದರೆ ತಾನು ಹೊಟ್ಟೆ ಬಟ್ಟೆ ಕಟ್ಟಿ, ಗೌರಿ ಬಾಗಿನಕ್ಕಾಗಿ ಕೂಡಿಟ್ಟ ಪುಡಿಗಾಸೋ ಅಷ್ಟೇ. ಆದರೆ ಅದರಲ್ಲಿ ವರ್ಷದ ಬೆವರಿನ ಸುವಾಸನೆ ಇರುತ್ತಿತ್ತು. ಪ್ರೀತಿ ಜಿನುಗುತ್ತಿತ್ತು. ಅದನ್ನು ಜತನದಿಂದ ಕಾಪಿಟ್ಟುಕೊಳ್ಳುತ್ತಿದ್ದ ಎಷ್ಟೋ ಹೆಣ್ಣುಮಕ್ಕಳು ಸಂಕಷ್ಟದ ಸಮಯದಲ್ಲಿ ಆಪದ್ಧನವಾಗಿ ಬಳಸುತ್ತಿದ್ದುದೂ ಉಂಟು. ಗೌರಿ ಹಬ್ಬ ಕೇವಲ ಧಾರ್ಮಿಕ ಆಚರಣೆಯಾಗಿ ಮಾತ್ರ ಉಳಿದಿರಲಿಲ್ಲ. ಪರಸ್ಪರ ಕುಟುಂಬಗಳನ್ನು ಒಟ್ಟುಗೂಡಿಸುವ, ಆತುಕೊಳ್ಳುವ, ಜಡಗಟ್ಟಿದ ಬದುಕುಗಳಲ್ಲಿ ಸಂತಸ ಗಂಟು ಕಟ್ಟುವ ಸಾಮಾಜಿಕ- ಸಾಂಸ್ಕೃತಿಕ ಆಚರಣೆಯಾಗಿತ್ತು.
ಮನೆಮಗಳಾಗಿ
ಅಂದು ಭಕ್ತಿಗಿಂತ ಮಮತೆ ಮೇಲುಗೈ ಸಾಧಿಸುತ್ತಿತ್ತು.
ದೇವರ ಬಗ್ಗೆ ಭಯ ಇರಲಿಲ್ಲ. ಬಾಂಧವ್ಯಗಳ ಬಗ್ಗೆ ನಂಬಿಕೆ ಇತ್ತು. ಗೌರಿಯನ್ನು ಕೈಲಾಸದಿಂದ ತವರಿಗೆ ಕರೆತಂದು ಮೂರು ದಿನ ಆರೈಕೆ ಮಾಡಿ ವಾಪಸ್ ಮಡಿಲು ತುಂಬಿ ಕಳಿಸಲಾಗುತ್ತಿತ್ತು. ಅವಳೂ ಎಲ್ಲರಂತೆಯೇ ತವರಿಗಾಗಿ ಹಾತೊರೆಯುವ ಮನೆ ಹೆಣ್ಣುಮಗಳು. ಬಾರೇ ಗೌರಿ ಅಂತಲೇ ಆಪ್ತವಾಗಿ ಕರೆಯುವಷ್ಟು ಸಲಿಗೆ. ನಮ್ಮ ಆಸೆಗಳನ್ನೇ ಅವಳಿಗೂ ಆರೋಪಿಸುವ ಮುಗ್ಧತೆ. ಅವಳಿಗಿಷ್ಟದ ಹೂವುಗಳಿದ್ದವು. ಬಣ್ಣಗಳಿದ್ದವು. ತಿಂಡಿಗಳಿದ್ದವು. ಅವಳ ಮಗ ಗಣೇಶ ಮನೆಯ ಮೊಮ್ಮಗ. ಅವನಿಗಿಷ್ಟದ ತಿಂಡಿಯನ್ನೂ ಮಾಡುವ ಉಮೇದು. ಕುಟುಂಬದ ಭಾಗವಾಗಿದ್ದ ಗೌರಿ ಪೂಜೆ ಯಾರಿಗೂ ಹೊರೆಯಾಗಿರಲಿಲ್ಲ. ಕೈಗೆಟುಕುತ್ತಿದ್ದಷ್ಟೇ ಘನವಾಗಿ ಅವಳನ್ನು ಆದರಿಸಲಾಗುತ್ತಿತ್ತು. ಬಡವರ ಮನೆಯಲ್ಲಿ ಸೊಪ್ಪು ತಿನ್ನುತ್ತಿದ್ದಳು. ಸಿರಿವಂತರ ಮನೆಯಲ್ಲಿ ಭೂರಿ ಭೋಜನ ಉಣ್ಣುತ್ತಿದ್ದಳು. ಎಲ್ಲೂ ಒಲ್ಲೆ ಅನ್ನದ ಘನತೆ ಕಾಪಿಟ್ಟುಕೊಂಡಿದ್ದಳು. ಅನಕ್ಷರಸ್ಥರ ಓಣಿಯಲ್ಲಿ ಅವರಿವರ ಹೋಲಿಕೆ, ಓಲೈಕೆಗಳಿಗೆ ಆಸ್ಪದವೇ ಇರಲಿಲ್ಲ.
ಅಕ್ಷರಕ್ಕೆ ತೆರೆದುಕೊಂಡ ಇವತ್ತಿನ ಕಾಲದಲ್ಲಿ ಭಕ್ತಿಗಿಂತ ಭಯ ಮುನ್ನೆಲೆಗೆ ಬಂದಿದೆ. ಶ್ರದ್ಧೆಗಿಂತ ತೋರ್ಪಡಿಕೆ, ಅಂತರಂಗದ ಪ್ರೀತಿಗಿಂತ, ಆಡಂಬರದ ಮೆರವಣಿಗೆ ಮೊದಲುಗೊಂಡಿವೆ. ಹಬ್ಬ ಎಂದರೆ ಗಗನಕ್ಕೇರುವ ಹೂವು ಹಣ್ಣುಗಳು. ಮಾರಾಟಗಾರರ ಪಾಲಿಗೆ ಶುಭವಾದರೂ, ಜನರಿಗೆ ಹೊರೆಯೇ ಹೌದು. ಇತ್ತೀಚೆಗೆ ಗೌರಿ ಗಣೇಶ ಎಂದರೆ ರುದ್ರಾಕ್ಷಿ ಹೂಮಾಲೆ, ಎಕ್ಕದ ಹೂಮಾಲೆ, ಕೆಂಪು ಕಣಗಿಲೆ, ಮರುಗ, ಧವನ, ಡೇರೆ ಇತ್ಯಾದಿಗಳಿರಲೇಬೇಕು. ಮಲ್ಲಿಗೆ ಸಾವಿರವಾದರೂ, ಗೌರಿ ಮುಡಿಗೇರಲೇ ಬೇಕು. ಇಲ್ಲಾಂದ್ರೆ ಅವಳಿಗೆ ಕೋಪ ಬರುತ್ತೆ. ಅವಳಿಗೆ ಖುಷಿ ಆದ್ರೆ ಅಲ್ವೇ ನಮಗೆ ವರ ಕೊಡೋದು? ಈ ರೀತಿಯ ಮಿಥ್ಯಾ ಕಲ್ಪನೆಗಳು ಧಾಂಗುಡಿಯಿಟ್ಟಿರುವುದು ಅಚ್ಚರಿ. ಅಕ್ಕಪಕ್ಕದವರ ಹೋಲಿಕೆಯಲ್ಲಿ ಪ್ರತಿ ವರ್ಷ ದೊಡ್ಡದಾಗುವ ಗೌರಿ ಗಣೇಶ ಪ್ರತಿಮೆಗಳು, ವೈಭವದ ಆಚರಣೆಗಳು, ಕಣ್ಕುಕ್ಕುವ ಅಲಂಕಾರಗಳು. ಸಾಂಪ್ರದಾಯಿಕ ಆಚರಣೆಗಳಿಗೆ ತಿಲಾಂಜಲಿಯಿತ್ತು, ಆಡಂಬರಕ್ಕೆ ಜೋತು ಬೀಳುತ್ತಿವೆ. ಇಲ್ಲದ ಪದ್ಧತಿಗಳು ಹುಲುಸಾಗಿ ಪುಟಿಯುತ್ತಿವೆ. ಆದರೆ ಸಾಂಪ್ರದಾಯಿಕ ಆಹಾರ ಮಾತ್ರ ಇಲ್ಲವೇ ಇಲ್ಲ. ಆರೋಗ್ಯಕ್ಕೂ ಹಿತಕರವಾದ ಕಡುಬು, ಉಂಡೆ, ಹೋಳಿಗೆಗಳು ಕಣ್ಮರೆಯಾಗಿ, ಸುಲಭವಾಗಿ ಮಾಡಬಹುದಾದ, ಕೊಂಡು ತರಬಹುದಾದದ್ದು ಮಾತ್ರ ಪ್ರವೇಶ ಪಡೆದಿವೆ. ಪರಸ್ಪರರನ್ನು ಊಟಕ್ಕೆ ಕರೆಯುವ, ಆದರಿಸುವ, ಹರಟುವ, ಆ ಮೂಲಕ ಬಾಂಧವ್ಯ ಬಿಗಿಗೊಳಿಸುವ ಸಹೃದಯತೆ ಕಾಣೆಯಾಗಿದೆ.
ಒತ್ತಡದ ಬದುಕಿನಲ್ಲಿ ಕಷ್ಟ ಎಂಬುದು ಸತ್ಯವಾದರೂ, ನಮ್ಮ ಆದ್ಯತೆಗಳಿಗೆ ಅವಕಾಶ ಕಲ್ಪಿಸಿಕೊಳ್ಳುವಂತೆ, ಮನಸ್ಸಿದ್ದರೆ ಇವಕ್ಕೂ ಅವಕಾಶ ಕಲ್ಪಿಸುವುದು ಸಾಧ್ಯವಿದೆ. ಒಂದು ಕಾಲದಲ್ಲಿ ಹಬ್ಬಗಳು ರಕ್ತ ಸಂಬಂಧಗಳನ್ನು ಮಾತ್ರವಲ್ಲ, ಸಾಮಾಜಿಕ ಸಂಬಂಧಗಳನ್ನೂ ಕೂಡಿಸಿ, ಸೌಹಾರ್ದತೆಯನ್ನೂ ಕಟ್ಟುತ್ತಿದ್ದವು.

ನನ್ನೂರಲ್ಲಿ ಗೌರಿ ಗಣೇಶ ಹಬ್ಬ ಧರ್ಮ ಜಾತಿಗಳನ್ನೂ ಮೀರಿ, ಮನಸ್ಸುಗಳನ್ನು ಕೂಡಿಸುತ್ತಿತ್ತು. ಮನೆಮನೆಯಲ್ಲಿ ದೇವರನ್ನು ಕೂಡಿಸುತ್ತಿದ್ದರೂ, ಊರೊಗ್ಗೂಡಿ ದೇವಸ್ಥಾನದಲ್ಲೊಂದು ಗೌರಿ ಗಣೇಶರ ಪ್ರತಿಷ್ಟಾಪನೆ ಇರಲೇಬೇಕಿತ್ತು. ಕೆರೆ ಒಣಗಿದ ಮೇಲೆ ಅಲ್ಲಿಂದಲೇ ತಂದ ಜೇಡಿಮಣ್ಣಲ್ಲಿ ತಯಾರಾಗುತ್ತಿದ್ದ ಈ ಪ್ರತಿಮೆಗಳು ವಿಸರ್ಜನೆಯಾಗುತ್ತಿದ್ದುದೂ ಅಲ್ಲಿಯೇ. ಕೆರೆಯ ಮಣ್ಣನು ಕೆರೆಗೆ ಚೆಲ್ಲುವ ನಡುವಣ ಖುಷಿಗೆ ಎಲ್ಲೆಯೆಲ್ಲಿತ್ತು.
ಗೌರಿ ಮಳೆಗಾಲದಲ್ಲಿ ಬರುತ್ತಿದ್ದುದರಿಂದ, ತುಂಬಿ ತುಳುಕುತ್ತಿದ್ದ ಕೆರೆಯಲ್ಲಿ ಊರೆಲ್ಲಾ ಜಾತ್ರೆ ನೆರೆದು, ಮುಳುಗಿಸುತ್ತಿದ್ದ ಸಂಭ್ರಮ. ಹೊತ್ತೊಯ್ಯುವ ಮೊದಲು ಊರ ಹೆಂಗಸರೆಲ್ಲಾ ಗೌರಿಗೆ ಮಡಿಲು ತುಂಬಿ, ಆರತಿ ಬೆಳಗಿ, ಗಂಡನ ಮನೆಗೆ ಸಾಗಾಕುವ ಹಾಡುಗಳನ್ನು ಕೋರಸ್ ಹಾಡುತ್ತಲೇ ಕೆರೆ ಏರಿ ತಲುಪುತ್ತಿದ್ದರು. ಅಲ್ಲಿ ಗಂಡಸರ ಭಜನೆ ಕಾರ್ಯಕ್ರಮ. ಹೈಕಳ ಕುಣಿತ. ಪೆಟ್ಲಂಗೋವಿಯ ಢಂ ಢಂ ಸದ್ದು. ಊರೆಲ್ಲಾ ಚಂದ ಹಾಕಿದ ದುಡ್ಡಿನಲ್ಲಿ ಸೇರುಗಟ್ಟಲೇ ಚಿತ್ರಾನ್ನ ಮೊಸರನ್ನಗಳ ಕೊಳಗಗಳನ್ನು ಹೊತ್ತು ತರುತ್ತಿದ್ದ ಪಡ್ಡೆ ಹುಡುಗರ ಗುಂಪು. ಅದನ್ನು ಮುತ್ತುಗದೆಲೆ ಮೇಲೆ ಎಲ್ಲರಿಗೂ ಹಂಚುತ್ತಿದ್ದ ಹೆಣ್ಣೈಕಳು. ಯುಗಾದಿಯ ನಂತರ ಗೌರಿಗಷ್ಟೇ, ಅದೂ ಸಾಧ್ಯವಾದರೆ ಮಾತ್ರ ಸಿಗುವ ಹೊಸಲಂಗದ ನಿರಿಗೆ ಎಗರಿಸುತ್ತಾ ಕೆರೆ ಏರಿಯ ಕಡಿದಾದ ಕಟ್ಟೆ ಮೇಲೆ ಅಡ್ಡಾಡುವ ಚೆಂದಕ್ಕೆ ಸೋಲದ ಮನಸ್ಸುಗಳಾದರೂ ಎಲ್ಲಿದ್ದವು.
ಬಾಲ ಜಗತ್ತಿನ ಭಾಗವಾಗಿ
ನಮಗೆ ಗೌರಿ ಗಣೇಶ ಹಬ್ಬ ಬಂದರೆ, ಹೊಟ್ಟೆಗೂ ತಂಪು. ಕಣ್ಣಿಗೂ ತಂಪು. ಜೇಡಿಮಣ್ಣು ತರುವುದರಿಂದ ಹಿಡಿದು, ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡುವವರೆಗೆ ಚೇಷ್ಟೆಗಳಿಗೆ ಎಗ್ಗಿಲ್ಲದ ಜಾಗವಿತ್ತು. ಅವರಿವರ ತೋಟ ತುಡಿಕೆಗಳ ಬೇಲಿ ಹಾರಿ, ಬೇಕಾದ ಹೂ ಪತ್ರೆ ತರುವವರೆಗೆ ಕಾರ್ಯವ್ಯಾಪ್ತಿ ವಿಸ್ತರಿಸುತ್ತಿತ್ತು. ಮನೆಗೆ ಬರುವ ನಂಟರು ಮಕ್ಕಳನ್ನೆಲ್ಲಾ ಕೂಡಿಸಿದ ನಮ್ಮ ಕಪಿಸೈನ್ಯ ಪೆಟ್ಲಂಗೋವಿ ಮಾಡಿಕೊಳ್ಳುವುದರಲ್ಲಿ, ಮರ ಹತ್ತಿ, ಬುಗುರಿ ಗೊಂಚಲು ಗುಡ್ಡೆ ಹಾಕುವ ರಾಜಕಾರ್ಯಗಳಲ್ಲಿ ಮುಳುಗುತ್ತಿದ್ದೆವು.
ಗಣಪತಿ ಬಪ್ಪ ಮೋರೆಯಾ ಅಂತ ಹಬ್ಬದ ಸಂಜೆ ಊರಿನ ಹೈಕಳೆಲ್ಲಾ ಗುಂಪುಗೂಡಿ ಮನೆಮನೆಗೆ ಹೋಗಿ ಗಣೇಶ ದರ್ಶನ ಮಾಡಿಕೊಂಡು ಬರುತ್ತಿದ್ದೆವು. ಗಣೇಶನ ಮೇಲೆ ಕಣ್ಣು ಅಂತ ನೋಡುವವರಿಗೆ ಅನ್ನಿಸಿದರೂ, ವಾರೆಗಣ್ಣಿನಲ್ಲಿ ಅವರ ಮನೆಯ ಚರ್ಪನ್ನು ಅಳೆಯುತ್ತಿದ್ದೆವು. ಬರ್ಫಿಯೋ, ಮಿಠಾಯೋ ಇದ್ರೆ, ಅವ್ರು ಭಾಳಾ ಧಾರಾಳ. ಕಡಲೆ ಹುಸ್ಲಿಯೋ, ಕಡಲೆಹಿಟ್ಟೋ ಇದ್ರೆ ಥೋ ಬಿಕನಾಸಿಗಳು ಅಂತ ಬೈಕೊಳ್ಳೋದು. ಎಲ್ಲರ ಮನೆಗೆ ಎಡತಾಕಿದ್ದು ಮುಗಿದ ನಂತರ, ಮನೆಯಲ್ಲಿ ಉಳಿದ ಕಡುಬು, ಉಂಡೆಗಳ ನೈವೇದ್ಯ ನಮ್ಮ ಪಾಲಿಗೇ. ಪಾಪ! ರಾಶಿ ಅಡುಗೆ ಮಾಡಿದರೂ, ಗಂಡಸರ, ಮಕ್ಕಳ ಸಾಮ್ರಾಜ್ಯದಲ್ಲಿ ಮನೆ ಹೆಂಗಸರಿಗೆ ಸರಿಯಾಗಿ ಸಿಗುತ್ತಿತ್ತೋ ಇಲ್ಲವೋ ಗೌರಿಗೇ ಗೊತ್ತು.
ತುಂಟತನದ ನಡುವೆಯೂ ಅಪ್ಪಂದಿರು ಮಕ್ಕಳಿಗೆ ಬದುಕಿನ ಪಾಠ ಹೇಳುವುದನ್ನು ಮರೆಯುತ್ತಿರಲಿಲ್ಲ. ಅಕ್ಕ ತಂಗೀರಿಗೆ ಗೌರಿ ಬಾಗಿನ ಕೊಡಲು ಮಕ್ಕಳನ್ನೂ ಕರೆದೊಯ್ಯುತ್ತಿದ್ದರು. ಹಬ್ಬಕ್ಕೆ ಅವರು ತವರಿಗೆ ಬಂದರೆ, ಅವರನ್ನೂ ಮಕ್ಕಳನ್ನೂ ತಮ್ಮ ಮಕ್ಕಳಿಗಿಂತ ದಿವಿನಾಗಿ ನೋಡಿಕೊಳ್ಳುತ್ತಿದ್ದ ಬಗೆ, ಹೇಳದೆಯೇ ಹೃದಯದಲ್ಲಿ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿತ್ತು.
ಸ್ವಾರ್ಥಕ್ಕಿಂತ, ವಿಶಾಲ ಬಾವುಣಿಕೆಗೆ ಮನೆಯಲ್ಲಿ ಜಾಗವಿತ್ತು. ಚಿಕ್ಕ ಮನೆಯಲ್ಲಿ ಹತ್ತಾರು ಜನಕ್ಕೆ ಜಾಗವಿತ್ತು. ಕೋಣೆಗಳಿಲ್ಲದ ಮನೆಗಳು ಜಮಖಾನದ ಮೇಲೆ, ಗೋಣೀತಾಟಿನ ಮೇಲೇ ಪರಸ್ಪರ ತಲೆಗಳ ಹೇನುಗಳಿಗೂ ಸ್ಥಳಾಂತರಕ್ಕೂ ಜಾಗ ಕೊಡುತ್ತಿದ್ದವು. ಇವತ್ತು ಕೋಣೆಗಳು ಮನವನ್ನು ಭಾಗಿಸಿವೆ. ಮೆತ್ತನೆ ಹಾಸಿಗೆಗಳು ಎರಡಕ್ಕಿಂತ ಹೆಚ್ಚನ್ನು ಸಹಿಸುತ್ತಿಲ್ಲ.
ನಮ್ಮಜ್ಜಿಯ ಕಥೆಯಲ್ಲಿ, ಜನಪದ ಶಿವ ಪುಟ್ಟ ಹುಡುಗಿಯೊಬ್ಬಳಿಗೆ ಹೇಳುವ ಪೂಜಾ ವಿಧಾನ, ಮಗಳೆ ಪೂಜೆಗೆ ಸಾಮಾನಿಲ್ಲ ಅಂತಾ ಯಾಕಳ್ತಿ. ನೋಡು, ನಿನ್ಮುಂದೆ ಇರಾ ಮಣ್ಣು ಅರಿಸಿನ ಕುಂಕುಮ ಅಂದುಕೋ. ರಾಗೀ (ಅರಳೀಮರ) ಮರದ ಕಾಯಿ ಅಡಿಕೆ. ಆ ಎಲೇನೇ ಇಳೇದೆಲೆ. ಕಾಲುವೇನಾಗೆ ಹರೀತಿರಾ ನೀರೇ ಹಾಲು. ಮನಸಾಗೆ ಅಂಗೇ ಧ್ಯಾಸ ಮಡಿಕ್ಕಂಡು ಪೂಜೇ ಮಾಡೀರೇ ಸಾಕು ಅಂದ ಶಿವ ನೀಡಿದ ಪೂಜೆಯ ವ್ಯಾಖ್ಯಾನವನ್ನು ಬದುಕು ಕಟ್ಟಲು ರಹದಾರಿಯಾಗಿಸಿದರೆ ಬಾಳು ಬಂಗಾರವಾದೀತು.
ಶಿವ ಏನ್ ಕೊಟ್ಟೋನೆ ಅವುಂಗೇ ಗೊತ್ತಿಲ್ವೇ. ಅವ ಕೊಟ್ಟಿದ್ದ ನಾವ್ ಕೊಡಬೇಕಲ್ದೇ, ಇಲ್ದಿರಾದು ಎಲ್ಲಿಂದ ತಂದು ಕೊಡಾದು ಅನ್ನೋ ಅಜ್ಜಿ ಮಾತು ಇವತ್ತೂ ಎದೆಯಲ್ಲಿ ಕೂತಿದೆ.
ಬೇಕಾದ ವರ
ಇವತ್ತಿನ ಗೌರಿ ಭಾಳಾ ದುಬಾರಿಯಾಗಿದ್ದಾಳೆ. ಶಿವ ಕೊಡದಿದ್ದರೂ, ಸಾಲಾ ಸೋಲಾ ಮಾಡಿಯಾದರೂ ಗಡಿಗೆ ತುಪ್ಪಾ ಅರ್ಪಿಸಲೇಬೇಕು ಅನ್ನೋ ಹಪಹಪಿಕೆ. ಇನ್ನು ಸಾಮಾಜಿಕ ಸಂಬಂಧಗಳನ್ನು ಬೆಸೆಯುವ ಮಾತು ಒತ್ತಟ್ಟಿಗಿರಲಿ, ರಕ್ತ ಸಂಬಂಧಗಳೂ ಕಳಚಿಕೊಳ್ಳುತ್ತಿವೆ.
ತಿಲಕರು ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾರ್ವಜನಿಕ ಗಣಪತಿ ಉತ್ಸವಗಳನ್ನು ಆರಂಭಿಸಿದರು. ಇಂದು ಮತ್ತೆ ಗೌರಿ ಗಣೇಶ ಹಬ್ಬಗಳು ಮಾನವೀಯ ಮೌಲ್ಯಗಳಿಗೆ ಮರುಜೀವ ನೀಡಲು ನಾಂದಿಯಾದರೆ ಚೆಂದ. ಮನಗಳಲ್ಲಿ ಜಡ್ಡುಗಟ್ಟಿದ ಸಂಕುಚಿತ ಲೋಕವನ್ನು ಬಡಿದೋಡಿಸಲು ಮಾನಸಿಕ ಹೋರಾಟಕ್ಕೆ ಸಜ್ಜಾಗಲು ಗೌರಿ ವರ ಕೊಡಬೇಕಿದೆ.

ಮುಷ್ಟಿಯಷ್ಟಿದ್ದ ನಿರೀಕ್ಷೆಗಳು ಇಂದು ಆಗಸದಷ್ಟಾಗಿವೆ. ಬದುಕು ಸಂಕೀರ್ಣಗೊಳ್ಳುತ್ತಿರುವ ಹೊತ್ತಿನಲ್ಲಿ ಮತ್ತೆ ಮತ್ತೆ ಗೌರಿಯನ್ನು ಬೇಡುವುದು ಒಂದೇ ನಿನ್ನ ಆ ಜನಪದ ಶಿವನನ್ನು ಮತ್ತೆ ಕಳಿಸು. ಬದುಕುವ ಪಾಠವನ್ನು ಮತ್ತೆ ಕೇಳಿಸು ಅಂತ.

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.

