ಕಣ್ಣ ಹೊಸಿಲ ದಾಟಿ ಹನಿಯೊಂದು ಮತ್ತೆ ಉಪ್ಪು ಕಡಲನ್ನು ಸೇರಿತು. ಅವನ ಜೊತೆ ಹಾಕಿದ ಹೆಜ್ಜೆಗಳು, ಮಾತು, ನಗು, ಮುದ್ದು, ಎದೆಬಡಿತ, ಆಣೆ, ಪ್ರಮಾಣ, ಕಣ್ಣೀರು, ನೋವು… ಯಾವುದೂ ಸುಳ್ಳಲ್ಲ. ಅವನು ಅಷ್ಟೊಂದು ದ್ರೋಹಿಯಾಗಿರಲು ಸಾಧ್ಯವಿಲ್ಲ. ಅದರ ಸತ್ಯ ನನಗೆ ಗೊತ್ತು. ತೀವ್ರ ಭಾವಗಳು ಹೃದಯದಿಂದಲೇ ಹುಟ್ಟುತ್ತವೆ. ಆದರೆ ಮನುಷ್ಯನಾದವನಿಗೆ ಅವನ್ನು ತನ್ನ ಸಮಯಸಾಧಕತನಕ್ಕೆ ಬಳಸಿಕೊಳ್ಳುವುದು ಗೊತ್ತು, ಸತ್ಯವಾಗುಳಿವ ಅವಕಾಶವಿದ್ದಾಗಲೂ. ಆದರೆ ಇವನು ಈಗ ನನ್ನ ಪಾಲಿಗೆ ಉಳಿದಿರುವ ಏಕೈಕ ಸತ್ಯ.
ಆಶಾ ಜಗದೀಶ್ ಬರೆದ ಈ ಭಾನುವಾರದ ಕತೆ “ನೆನಪುಗಳು”
ಅರಬ್ಬೀ….
ನೆಲದ ಮೇಲಿನ ಕಣ್ಣ ಸಣ್ಣ ಕಣದಷ್ಟು ಪುಟ್ಟ ಹಳದಿ ಬಣ್ಣದ ಹೂವೊಂದು ಯಾವ ನಿರೀಕ್ಷೆಯೂ ಇಲ್ಲದೆ ಅರಳಿ ಸಂಜೆಗೆ ಬಾಡಿಬಿಡುತ್ತದಲ್ಲ ಹಾಗೆ ಸಾವು ಹುಟ್ಟಿನ ನೆರಳಾಗಿ ನಡೆಯುತ್ತಿರುತ್ತದೆ. ಆದರೆ ನಿನ್ನ ತೆರೆಗಳ ನಗಣ್ಯ ಸಾವಿನಷ್ಟೇ ಕ್ಷುಲ್ಲಕ ಸಾವಿಗೆ ತೆರವಾಗಿ ನಾನಿಲ್ಲಿ ನಿನ್ನ ಉಪ್ಪು ನೀರಿಗೆ ನನ್ನ ಒಂದೆರೆಡು ಕಣ್ಣ ಹನಿಗಳನ್ನು ಬೆರೆಸುತ್ತಾ ತೆರೆ ಏರಲು ಬಯಸುತ್ತಿರುವುದು ಮಾತ್ರ ಪರಮ ಯಾತನಾಮಯ ಎಷ್ಟೋ ಅಷ್ಟೇ ತೀರದ ಸುಖ. ಹೊಡೆದುಕೊಳ್ಳುವ ಈ ನೋವಿನ ಡಬ್ಬಿ ಪದೇ ಪದೇ ನಿಟ್ಟುಸಿರನ್ನು ಹೊರದಬ್ಬುತ್ತಿದೆ. ಕೆಲವೊಮ್ಮೆ ಸುಖದ ತುತ್ತ ತುದಿಯ ಚೀತ್ಕಾರವೂ ಹೊರಬಂದಿದೆ ಅದರಿಂದ. ಈ ಸಾವಿನ ಬಯಕೆ ನೈಸರ್ಗಿಕವಲ್ಲ. ಆದರೆ ಹಾಗೆ ಭಾವಿಸುವುದಾದರೆ ಜಗತ್ತಿನ ಅದೆಷ್ಟೋ ಭಕ್ತರು, ಪ್ರೇಮಿಗಳು ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ನಿನ್ನನ್ನು ಸೇರುವುದೋ ಲೀನವಾಗುವುದೋ ವಿಲೀನವಾಗುವುದೋ… ಆಶ್ರಯಿಸುವ ಯಾವ ಪದವೇ ಆಗಿರಲಿ ಅದು ಜನರಲ್ಲಿ ಒಂದೇ ಅರ್ಥ ಹುಟ್ಟಿಸುತ್ತದೆ. ಮತ್ತದು ಆತ್ಮಹತ್ಯೆ. ಆದರೆ ನನ್ನ ಪಾಲಿಗದು ಬಿಡುಗಡೆ ಅರಬ್ಬೀ. ಸಾವಿನ ಪಲ್ಲಟದಲ್ಲಿ ಮತ್ತೊಂದು ಹುಟ್ಟನ್ನು ನಿರೀಕ್ಷೆಯೆಂಬ ನಂಬಿಕೆಯಲ್ಲಿ ಒಪ್ಪಿಕೊಳ್ಳುವ ನಾವು ಹುಟ್ಟಿನ ಪಲ್ಲಟದಲ್ಲಿ ಎರಗುವ ಸಾವನ್ನು ಸ್ವೀಕರಿಸಲಾರೆವು. ನಾವು ಯಯಾತಿಯ ಕುಲದವರು. ನಮಗೆ ಯೌವ್ವನ ಮತ್ತು ಚಿರಂತನತೆ ಮಾತ್ರ ಬೇಕು. ಆದರೆ ಏಕತಾನತೆಗಿಂತ ದೊಡ್ಡ ಸಾವು ಮತ್ತೊಂದಿಲ್ಲ ಅರಬ್ಬೀ. ಈಗ ನನಗಾಗಿರುವುದೂ ಅದೇ. ಅದು ಶಿಕ್ಷೆ. ಬಿಡುಗಡೆಯನ್ನು ಹಪಹಪಿಸುತ್ತಿರುವ ಶಿಕ್ಷೆ.
ಅಲೆಗಳು ನಿರಂತರ ಮೊರೆಯುತ್ತಿದ್ದವು. ಮಮತೆ ಮತ್ತು ಅಂತಃಕರಣದಿಂದ ಕರೆಯುತ್ತಿದ್ದವು. ಇಲ್ಲಿ ಯಾವುದರ ಆಯುಷ್ಯವೂ ಅರೆಕ್ಷಣಕ್ಕಿಂತ ಹೆಚ್ಚಿಲ್ಲ ಎನ್ನುವ ದನಿಯಲ್ಲಿ. ಗಿಜಿಗುಡುವ ಗದ್ದಲದ ನಡುವಿದ್ದರೂ ನನ್ನ ಸುತ್ತ ಒಂದು ನೀರವ ನಿಶ್ಯಬ್ಧ ಕವಿದಿತ್ತು. ನನಗೆ ಯಾವುದರ ಕಡೆಗೂ ಗಮನವಿರಲಿಲ್ಲ ಮತ್ತು ಹೊರಗಿನ ಗದ್ದಲಕ್ಕೆ ನನ್ನ ಗಮನ ಬೇಕೇ ಬೇಕು ಎನ್ನುವ ಅನಿವಾರ್ಯತೆಯೂ ಇರಲಿಲ್ಲ. ಆದರೆ ಕಣ್ಣುಗಳು ಎದುರಿನ ಚಿತ್ರಣವನ್ನು ಯಾಂತ್ರಿಕವಾಗಿ ನೋಡುತ್ತಿದ್ದವು. ಕಡಲ ನೀರಿನಲ್ಲಿ ಆಡುತ್ತಾ ಬಟ್ಟೆಗಳನ್ನೆಲ್ಲಾ ಪೂರಾ ಒದ್ದೆ ಮಾಡಿಕೊಂಡಿದ್ದ ಮಕ್ಕಳಿಬ್ಬರನ್ನು ತಾಯಿಯೊಬ್ಬಳು ಗದರುತ್ತಿದ್ದಳು. ಆದರೆ ಅವಳ ಮಾತುಗಳನ್ನು ಅವರು ಕೇಳಿಸಿಕೊಳ್ಳದೆ ಮತ್ತೆ ಮತ್ತೆ ದಡಕ್ಕಪ್ಪಳಿಸುತ್ತಿದ್ದ ತೆರೆಗಳ ಮೇಲೆ ಕುಣಿದು ಕುಪ್ಪಳಿಸುತ್ತಿದ್ದರು. ನಂತರ ಹಾಗೆ ತೀರದುದ್ದಕ್ಕೂ ಬಣ್ಣ ಬಣ್ಣದ ಚಂದ ಚಂದದ ಶಂಕುಗಳನ್ನು, ಕಪ್ಪೆ ಚಿಪ್ಪುಗಳನ್ನು, ಸತ್ತ ನಕ್ಷತ್ರ ಮೀನುಗಳನ್ನು, ಹುಡುಕಿಕೊಂಡು ಹೊರಟರು. ನನ್ನೊಂದಿಗೆ ಯಾರೂ ಇರಲಿಲ್ಲ. ಆ ಇಬ್ಬರ ನೆನಪುಗಳ ಹೊರತು. ಆದರೆ ಮರಳಿ ಹೋಗಬೇಕೆನ್ನುವುದಾದರೆ ಅವರಲ್ಲಿ ಒಬ್ಬರ ನೆನಪುಗಳ ಕುರುಹುಗಳೂ ಉಳಿಯದಂತೆ ಕೊಂದು ಇಲ್ಲಿಯೇ ಸಮಾಧಿ ಮಾಡಿ ಹೊರಡಬೇಕಿತ್ತು ನಾನೀಗ. ಆದರೆ ಯಾರ ನೆನಪ ಕೊಲ್ಲಲಿ… ಹೇಗೆ ಕೊಲ್ಲಲಿ… ಎರೆಡೂ ನನ್ನವೇ ಆಗಿರುವಾಗ. ಹಠಾತ್ತನೆ ತೂರಿಬಂದ ದನಿಯ ಕಡೆಗೆ ಕತ್ತು ತಿರುಗಿಸಿದೆ. ಆ ಮಕ್ಕಳು ಅದ್ಭುತ ಕಂಡವರಂತೆ ಜೋರಾಗಿ ಕೂಗುತ್ತಿದ್ದರು. ತಾಯಿಯನ್ನು ಕರೆಯುತ್ತಿದ್ದರು. “ಅಮ್ಮಾ ಇಲ್ಲಿ ನೋಡು, ಜೀವ ಇರುವ ನಕ್ಷತ್ರ ಮೀನು, ಮರಳಿನ ಮೇಲೆ ಹೇಗೆ ನಡೆಯುತ್ತಿದೆ…” ಅವರಿಗೆ ಬಹಳ ಆಶ್ಚರ್ಯವಾಗಿತ್ತೆಂಬುದು ಅವರ ಅರಚಾಟದಿಂದಲೇ ತಿಳಿಯುತ್ತಿತ್ತು. ಅವರ ಅಮ್ಮ ತಾನೂ ಮಗುವಿನಂತೇ ಅವರಿದ್ದಲ್ಲಿಗೆ ಓಡಿದಳು. ಅವರೆಲ್ಲ ಒಂದಷ್ಟು ಹೊತ್ತು ಕೋಲಾಹಲ ಎಬ್ಬಿಸಿದರು. ಇದನ್ನೆಲ್ಲ ನೋಡುತ್ತಿದ್ದ ನನಗೆ ಏನೂ ಅನಿಸಲಿಲ್ಲ. ಆದರೆ ಸಣ್ಣ ಮುಗುಳ್ನಗೆಯೊಂದು ತುಟಿ ಮೇಲೆ ಕಾಣಿಸಿಕೊಂಡು ಸಾಯುವುದರೊಳಗೆ ಮಗ ನೆನಪಾದ. ಅವನನ್ನು ಒಮ್ಮೆ ಇಲ್ಲಿಗೆ ಕರೆತಂದಿದ್ದೆ. ಆಗ ಅವನಿಗೆ ಮೂರು ವರ್ಷ. ಹುಚ್ಚೆದ್ದು ಕುಣಿದಿದ್ದ. ಅವನ ಹಿಂದೆ ಅಲೆದಲೆದು ಸಾಕಾಗಿ ಹೋಗಿತ್ತು ನನಗೆ. ಬಲವಂತವಾಗಿ ಮರಳಿ ಕರೆದುಕೊಂಡು ಹೋಗುವಾಗ ನನ್ನ ಕೈಯಿಂದ ತಪ್ಪಿಸಿಕೊಂಡು ಸಮುದ್ರವೇ ಕರೆಯಿತೆನ್ನುವ ಹಾಗೆ ಅತ್ತ ಓಡಿಬಿಟ್ಟಿದ್ದ. ನಾ ಸಹ ಭಯದಿಂದ ಅವನ ಹಿಂದೆಯೇ ಓಡಿ ಅವನನ್ನು ಹಿಡಿದು ತಂದಿದ್ದೆ. ಈ ಎಲ್ಲ ನೆನಪುಗಳೂ ಅದೊಂದು ಕ್ಷಣಿಕ ಮುಗುಳ್ನಗೆಯಲ್ಲಿತ್ತು ಬಹುಶಃ. ಮತ್ತು ಹಿಂದೆಯೇ ಸಾಗಿ ಬಂದ ಕಡು ವಿಷಾದವೂ. ಆ ಮಕ್ಕಳು ತಾಯಿಯ ಕೈಹಿಡಿದು ನಡೆಯುತ್ತಾ ಬೀಚಿನಿಂದ ಮಾಯವಾದರು. ಬೀಚ್ ನಿಧಾನವಾಗಿ ಖಾಲಿಯಾಗುತ್ತಲಿತ್ತು. ಕತ್ತಲ ಸೆರಗಲ್ಲಿ ಹೂತು ಹೋಗುತ್ತಿದ್ದ ಸಂಜೆ ನಿತ್ರಾಣವಾಗಿ ತೀರವನ್ನು ಬೆಳಗಲು ಹೋರಾಡುತ್ತಿತ್ತು. ಕಾದು ಕೆಂಡವಾಗಿದ್ದ ಸೂರ್ಯ ಇನ್ನು ನನ್ನಿಂದ ಸಾಧ್ಯವಿಲ್ಲ ಎನ್ನುವ ಹಾಗೆ ಅರಬ್ಬಿಯೊಳಕ್ಕೆ ಥುಪುಕ್ಕನೆ ಬಿದ್ದ ಮತ್ತು ಆ ಹೊಡೆತಕ್ಕೆ ಮತ್ತಷ್ಟು ಜೋರಾಗಿ ಎದ್ದ ಅಲೆಗಳು ದಡವನ್ನು ಅಪ್ಪಳಿಸಿ ಸಿಟ್ಟಿಳಿಸಿಕೊಂಡವು.
ನನ್ನ ಕಣ್ಣುಗಳು ಅಗಾಧ ಜಲರಾಶಿಯನ್ನು ತನ್ನ ದೃಷ್ಟಿಯಲ್ಲಿ ತುಂಬಿಕೊಳ್ಳಲಾಗದೆ ಅಸಹಾಯಕವಾಗಿ ಕಷ್ಟ ಪಡುತ್ತಿದ್ದವು. ನಾನೀಗ ಅಲ್ಲಿಂದ ಎದ್ದು ಹೊರಡಬೇಕಿತ್ತು. ಮನೆಯಿಂದ ಹೊರಡಲು ಕಾರಣವಾದ ಅಂದಿನ ಘಟನೆಗಳು ಅನಾಯಾಚಿತವಾಗಿ ದೃಷ್ಟಿ ಪಟಲದ ಮೇಲೆ ಕಾಣಿಸಿಕೊಳ್ಳತೊಡಗಿದವು. ಆ ಸ್ಥಿರ ಚಿತ್ರಗಳಲ್ಲಿ ನಾನು ಅಕ್ಷರಶಃ ಕಳೆದೇ ಹೋಗಿದ್ದೆ. ಕತ್ತಲಿಗಿರುವ ಕೊರೆ ಹಿಂಡುವ ಶಕ್ತಿ ತನ್ನ ಪರಿಣಾಮ ಬೀರತೊಡಗಿತ್ತು. ಅಂದು ನಿಜಕ್ಕೂ ನನಗೆ ಮಾತನಾಡುವುದು ಬೇಕಿರಲಿಲ್ಲ. ಅದೂ ನಮ್ಮಿಬ್ಬರನ್ನು ಈ ಸ್ಥಿತಿಗೆ ತಂದು ನಿಲ್ಲಿಸುವ ಮಾತನ್ನಂತೂ ಆಡುವುದೇ ಬೇಡವಿತ್ತು ನನಗೆ. ಆದರೆ ಅದನ್ನು ಆಡಿಸಿಯೇ ತೀರುವ ಹಟ ಹಿಡಿದವನಂತೆ ಇವನು ಮಾತನಾಡಿದ್ದ. ಇವನ ಪ್ರತಿ ಶಬ್ದವೂ ವಾರ ಒಣಗಿಸಿದ ಕಟಕಲು ರೊಟ್ಟಿಗಿಂತಲೂ ಕಟಕಲಾಗಿದ್ದವು. ಕೊನೆಗೂ ತನ್ನಿಚ್ಛೆಯಂತೇ ಮಾತನಾಡುವ ಹಾಗೆ ಮಾಡಿದ್ದ. ಎಲ್ಲರಿಗೂ ಒಂದು ಇತಿಹಾಸ ಇರಬೇಕಂತೇನೂ ಇಲ್ಲ. ಆದರೆ ಬೇಡದ ಇತಿಹಾಸವೊಂದನ್ನು ಯಾರೂ ಬೇಕಾಗಿ ಸೃಷ್ಟಿಸಿಕೊಂಡಿರುವುದಿಲ್ಲ. ಅವನ ಜೊತೆಗಿನ ನೆನಪುಗಳು, ಬರಿ ಇತಿಹಾಸದ ಒಂದು ಪುಟವಾಗಿರುವ ಅವನ ನೆನಪುಗಳು, ಇವತ್ತಿಗೆ ನನ್ನ ಪಾಲಿಗೆ ಏನೆಂದರೆ ಏನೂ ಅಲ್ಲದ ಅವನ ನೆನಪುಗಳು ನನ್ನ ಇನ್ನುಳಿದ ನೆನಪುಗಳಿಗಿಂತ ಕಡೆಯಾಗಿ ಹೋಗಿವೆ. ಅವುಗಳ ಅಳಿವು ಉಳಿವಿನ ಪ್ರಶ್ನೆಯೇ ಅಪ್ರಸ್ತುತ. ಹೀಗಿರುವಾಗ ಇವ ನನ್ನ ಅನುಮಾನಿಸಿದ್ದು ಹೇಗೆ? ಉರಿ ಹಚ್ಚು ಅವನ ನೆನಪುಗಳಿಗೆ ಎಂದು ಸಾರಾಸಗಟಾಗಿ ನನ್ನ ಒಂದು ಸಣ್ಣ ಮಾರುತ್ತರಕ್ಕೂ ಅವಕಾಶ ಕೊಡದೆ ಮುಖ ಮುರಿದು ಕೂತನಲ್ಲ… ಅವನ ತರ್ಕದ ಮುಂದೆ ನನ್ನ ಅಭಿಮಾನ ಮಂಡಿಯೂರಿತ್ತು. ಆಗಲೇ ನಾನಲ್ಲಿಂದ ಹೊರಬೀಳುವ ನಿರ್ಧಾರ ಮಾಡಿದ್ದು. ಎಲ್ಲವನ್ನೂ ನೆನೆದು ಕಣ್ಣು ಕಿರಿದಾಗಿ ಚೂಪು ಈಟಿಯಂತಾಗಿತ್ತು. ಸಾಗರಾಕಾಶ ಕೂಡುವ ಕ್ಷಿತಿಜದಂಚಿಗೆ ದೃಷ್ಟಿ ನೆಟ್ಟು ನೋಡುತ್ತಿರುವಾಗ ಅದರ ಆಚೆಗೆ ಏನಿರಬಹುದು ಎಂದು ಕೇಳಿತು ಮನಸ್ಸು. ಇಂತಹ ಕುತೂಹಲಗಳಿಂದಲೇ ಬದುಕು ಮುನ್ನಡೆಯುತ್ತಿರಬಹುದು. ಅಷ್ಟಕ್ಕೂ ಅದರಾಚೆ ಒಂದೋ ಮತ್ತೊಂದು ಪ್ರಪಂಚವಿರಬಹುದು, ಅದು ಇಲ್ಲಿರುವ ಪ್ರಪಂಚಕ್ಕಿಂತ ಸುಂದರವಾಗಿರಬಹುದು ಇಲ್ಲಾ ಕುರೂಪವಾಗಿಯೂ ಇರಬಹುದು. ಇನ್ನೊಂದು ಆಯ್ಕೆಯೂ ಇದೆ. ಅಲ್ಲಿ ಪ್ರಪಂಚವೆನ್ನುವುದೇ ಇಲ್ಲದಿರಬಹುದು ಮತ್ತು ದಿಕ್ಕು ಕಾಣದ ಜಲರಾಶಿಯಷ್ಟೇ ಇದ್ದಿರಬಹುದು. ಏನೇ ಇರಲಿ ಈ ಕ್ಷಣ ಇಲ್ಲಿಂದ ಕಾಣಿಸುತ್ತಿರುವ ಸಮುದ್ರಾಕಾಶಗಳ ಸಂಗಮ ಯಾವುದೋ ಅವ್ಯಕ್ತ ಆಪ್ಯಾಯತೆಯನ್ನು ತುಂಬಿಕೊಂಡು ಮನಸನ್ನು ಆರ್ದ್ರ ಗೊಳಿಸುತ್ತಿದೆ. ಆದರೆ ಅವರಿಬ್ಬರ ನೆನಪುಗಳಿಗೆ ಒಂಚೂರೂ ಕರುಣೆಯಿರಲಿಲ್ಲ. ಒಂದರ ಸಾವೆಂದರೆ ಇನ್ನೊಂದರ ಉಳಿವು ಎಂದುಕೊಂಡಿದ್ದವು. ನಿಜ ಎಂದರೆ ಯಾವೇ ನೆನಪುಗಳು ಸತ್ತರೂ ಅದು ನನ್ನ ಸಾವು! ನನ್ನ ಸಾವಿಗೆ ನಾನೇ ಕೂತು ಅಳಬೇಕಿದೆ ಈಗ… ಹಿಸ್ಟೀರಿಕಲ್ ಆಗಿ ನಕ್ಕೆ. ಅಣತಿ ದೂರದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಫಕ್ಕನೆ ನನ್ನತ್ತ ತಿರುಗಿ ನೋಡಿ,
“ದೇಖಿಯೇ ಮ್ಯಾಡಮ್ ಜಿ… ಏ ಜಗಹ್ ಇತ್ನಿ ರಾತ್ ಮೇ ಸೇಫ್ ನಹೀ ಹೈ, ಯಹಾ ಔರ್ ರುಕನೆಕೇ ಲಿಯೆ..” ಎಂದ. ಮನುಷ್ಯರಿಗಿರುವ ಈ ಪ್ರಪಂಚವಾದರೂ ಹೆಂಗಸರಿಗೊಂದು ಥರ, ಗಂಡಸರಿಗೊಂದು ಥರ. ಇಂಥಾ ಮೂರಾ ಮುಸ್ಸಂಜೆಯಲ್ಲಿ ನನ್ನನ್ನು ಎಚ್ಚರಿಸುತ್ತಿರುವ ಈತನಿಗೆ ಯಾವ ಅವಸರವಿಲ್ಲ. ಕಾರಣ ಅವನಿಗಿರುವ ಭಯದ ಪ್ರಮಾಣ. ಅದು ಅವನನ್ನು ಹೆದರಿಸಲು ಶಕ್ತವಾಗಿಲ್ಲ. ಆದರೆ ನಾನು ಹೊರಡಬೇಕಿತ್ತು.
“ಶುಕ್ರಿಯಾ..” ಎನ್ನುತ್ತಾ ಮತ್ತೆ ಸಮುದ್ರವನ್ನು ನೋಡುತ್ತಾ ಕೂತೆ. ಎಂಥದೋ ಉತ್ಕಟ ಪ್ರೀತಿಯಿಂದ. ಈ ಪ್ರೀತಿ ಇಂದು ನೆನ್ನೆಯದಲ್ಲ. ಬಾಲ್ಯದಿಂದಲೂ ನನಗೀ ಅರಬ್ಬಿಯ ಮೇಲೆ ಎಂಥದೋ ಪ್ರೀತಿ. ಮೀರಾ ಮಾಧವನ ಪ್ರೀತಿಸಿದ ಹಾಗೆ. ಅದಕ್ಕೆ ಇರಬಹುದು ಬಹುಶಃ ಬದುಕಿನ ಅತ್ಯಂತ ಕ್ಲಿಷ್ಟ ಪ್ರಶ್ನೆ ಎದುರು ನಿಂತಾಗ ಇವನ ಮಡಿಲಿಗೆ ಬಂದಿದ್ದೇನೆ ಬಿಡಿಸಿಕೊಳ್ಳಲು. ಸದಾ ಉಕ್ಕುವ ಇವನನ್ನು ಬಿಟ್ಟರೆ ನನ್ನ ನೆನಪುಗಳೇ ನನ್ನನ್ನು ಪೊರೆದಿವೆ. ಎಷ್ಟೆಲ್ಲಾ ಸುಂದರ ನೆನಪುಗಳಿವೆ ನನ್ನ ಸ್ಮೃತಿಯಲ್ಲಿ. ಬಾಲ್ಯ, ತವರು, ತವರೂರು, ಹುಟ್ಟಿದ ಮನೆ, ನಾಯಿಗಳು, ಹೆದರಿಸಿದ ಹಾವುಗಳು, ದೆವ್ವದ ಕನಸುಗಳು, ನಗಿಸಿದ ಗೆಳೆಯರು ಮತ್ತು ಅವನ ಗುಳಿ ಕೆನ್ನೆ, ತುಟಿಯ ಮೇಲಿನ ಮಚ್ಚೆ, ಅಪ್ಪಟ ಸ್ನೇಹ, ಮುಚ್ಚಟೆ, ಕಾಳಜಿ, ನಿರ್ವ್ಯಾಜ್ಯ ಮಮತೆ ಮತ್ತು ಇವನ ಶುದ್ಧಾತಿ ಶುದ್ಧ ಪ್ರೇಮ…. ಓಹ್ ಯಾವೊಂದು ನೆನಪನ್ನೂ ಅಳಿಸಲಾರೆ. ಅವು ನನ್ನ ಅಸ್ತಿತ್ವ. ನೆನಪುಗಳ ಆಯ್ಕೆ ನಮ್ಮ ಕೈಲೆಷ್ಟಿದೆ?! ಈ ಹಾಳಾದ ನೆನಪುಗಳ ಅಳಿಸುವ ಮತ್ತು ನಮಗೆ ಬೇಕಾದಂತೆ ಬರೆದುಕೊಳ್ಳುವ ಎರೇಜ಼ರ್ ಒಂದು ಇದ್ದಿದ್ದರೆ ಎಷ್ಟು ಚಂದ ಇರುತ್ತಿತ್ತು. ನಾನು ಅಲುಗಾಡದೆ ಕೂತಿರುವುದನ್ನು ನೋಡಿದ ಆ ವ್ಯಕ್ತಿ ನನ್ನ ಪಕ್ಕದಲ್ಲಿ ಬಂದು ಕೂತ. ನಾನು ಬೇಕಾಗೇ ಗಮನಿಸಲಿಲ್ಲ. ನನ್ನ ತೆರೆ ಬಿಟ್ಟ ಕೂದಲು ಗಾಳಿಗೆ ಹಾರಾಡುತ್ತಾ ನನ್ನ ಚೆಹರೆಯನ್ನು ಮುಚ್ಚಲು ಯತ್ನಿಸುತ್ತಿದ್ದವು. ಆ ವ್ಯಕ್ತಿಗೆ ನನ್ನ ಮುಖ ನೋಡುವ ಆಸಕ್ತಿ ಇದ್ದಂತಿರಲಿಲ್ಲ. ನನಗೆ ಅವನಿಂದ ತೊಂದರೆಯಿರಲಿಲ್ಲ. ಅವನೇ ಅಲ್ಲ ಸುತ್ತಲ ಯಾವ ವ್ಯವಹಾರಗಳೂ ನನ್ನನ್ನು ತಲುಪುತ್ತಿರಲಿಲ್ಲ. ಹಾಗಾಗಿ ನಾನವನನ್ನು ವಿರೋಧಿಸಲಿಲ್ಲ. ಗಾಢ ಕತ್ತಲು ಆವರಿಸತೊಡಗಿತೆನ್ನಿಸಿದಾಗ ಅಲ್ಲಿಂದ ಎದ್ದು ಹೊರಟೆ. ಸ್ವಲ್ಪ ಮುಂದೆ ಬಂದಾಗ ಒಂದು ಕುಡುಕರ ಗುಂಪು ಎದುರಾಯಿತು. ನನ್ನನ್ನು ಕಂಡ ಕೂಡಲೇ ಅವರ ನಡಿಗೆ ನನ್ನತ್ತ ತಿರುಗಿತು. ಆ ಕ್ಷಣ ಭಯವಲ್ಲದಿದ್ದರೂ ನನ್ನ ಸಾವು ಹೇಗೇಗೋ ಬರುವುದು ಬೇಡ ಎನಿಸಿತಷ್ಟೇ. ಅಷ್ಟರೊಳಗೆ ಅವರು ದಿಕ್ಕು ಬದಲಿಸಿ ಅಲ್ಲಿಂದ ಹೊರಟರು. ಆಗ ಪಕ್ಕದಿಂದ “ಮ್ಯಾಡಮ್ ಜೀ…” ಅಂದದ್ದು ಕೇಳಿಸಿತು. ನಾ ತಿರುಗಿ ನೋಡಿದೆ. ಮತ್ತೆ ನಾವಿಬ್ಬರು ಸುಮಾರು ದೂರ ನಡೆಯುತ್ತಾ ಒಂದು ಜನಸಂದಣಿ ಇದ್ದ ಬ್ಯುಸಿ ರೋಡಿಗೆ ಬಂದು ತಲುಪಿದೆವು. ಆ ವ್ಯಕ್ತಿ ನನ್ನನ್ನೊಮ್ಮೆ ನೋಡಿ ವೇಗವಾಗಿ ಆ ಜನಸಂದಣಿಯಲ್ಲಿ ಕಳೆದುಹೋದ.
ರೂಮ್ ನಂಬರ್ 301. ಸ್ಲಿಂಗ್ ಬ್ಯಾಗಿನಿಂದ ಕೀ ತೆಗೆದು ತಿರುಗಿಸಿದೆ. ಕೋಣೆಯ ತುಂಬಿಕೊಂಡಿದ್ದ ಮಂದ ಬೆಳಕೂ ಬೇಡವೆನಿಸಿ ಲೈಟ್ ಆಫ್ ಮಾಡಿದೆ. ಕೋಣೆಯಲ್ಲಿ ಕತ್ತಲು ತುಂಬಿಕೊಂಡಿತು. ಹೊರಗಿನ ಹೈಬ್ರಿಡ್ ಬೆಳಕೊಂದಿಷ್ಟು ಎತ್ತಲಿಂದಲೋ ಕಿಟಕಿಯಿಂದ ತೂರಿ ಒಳ ನುಗ್ಗುತ್ತಿತ್ತು. ಅದು ಮೂಡಿಸಿದ ಕಿಟಕಿಯ ಚಿತ್ರ ಗೋಡೆಯ ಮೇಲೆ ಬಿದ್ದು ನನ್ನ ಏಕಾಂತವನ್ನು ಹಾಳು ಮಾಡುತ್ತಲಿತ್ತು. ಬಾಗಿಲು ಮುಚ್ಚಿ ಕಿಟಕಿಯಲ್ಲಿ ಒಂದು ಕೂತೆ. ಹೊರಗಿನ ಪೇಟೆಯಿನ್ನೂ ಮಲಗಿರಲಿಲ್ಲ. ಜನ ದಿನಾಂತ್ಯದ ತರಾತುರಿಯಲ್ಲಿದ್ದಂತೆ ತೋರುತ್ತಿತ್ತು. ಮರಳಿ ಗೂಡು ಸೇರಿಕೊಳ್ಳುವ ಧಾವಂತವನ್ನು ಕಟ್ಟಿಕೊಂಡ ಅವರ ಕಾಲುಗಳು ಅವಸರ ಮಾಡುತ್ತಿದ್ದವು. ನಾನಾ ವ್ಯವಹಾರಗಳು ನಾನಾ ಉನ್ಮಾದ. ಆದರೆ ಈ ಸಂತೆಯಲ್ಲೂ ನಾನು ಒಂಟಿ! ಸಮುದ್ರದ ತೆರೆಗಳಂತೆ ಉಕ್ಕಿ ಬಂತು ನಗು. ಒಬ್ಬಳೇ ನಕ್ಕೂ ನಕ್ಕೂ ಸುಸ್ತಾದೆ. ನಂತರ ಕಾರ್ಮೋಡ ಕವಿದು ದಟ್ಟವಾದಂತೆ ಅಳು ಹೆಪ್ಪುಗಟ್ಟತೊಡಗಿತು. ಎದ್ದು ಗಟಗಟ ನೀರು ಕುಡಿದೆ. ಬಟ್ಟೆ ಬದಲಿಸಿ ಊಟ ಮಾಡಿ ಬಂದೆ. ಸ್ವಿಚ್ ಆಫ್ ಮಾಡಿದ್ದ ಫೋನ್ ಕಣ್ಣಿಗೆ ಬಿತ್ತು. ನಾನವನಿಗೆ ಹೇಳದೇ ಬಂದಿದ್ದೆ. ಸಣ್ಣದೊಂದು ಪತ್ರದಲ್ಲಿ “ಹೋಗುತ್ತಿದ್ದೇನೆ, ಸಾಧ್ಯವಾದರೆ ಬರುವೆ..” ಎಂದಷ್ಟೇ ಬರೆದಿಟ್ಟು. ಬಹುಶಃ ಅವನಿಗೆ ನನ್ನ ಮೇಲೆ ಅಸಾಧ್ಯ ಕೋಪ ಬಂದಿರುತ್ತದೆ. ಸಿಕ್ಕರೆ ಎರೆಡು ತೆಗೆದು ಬಾರಿಸುವಷ್ಟು ಕೋಪ. ಕೋಪದಲ್ಲಿ ಕೈಗೆ ಸಿಕ್ಕ ಏನನ್ನಾದರೂ ತೆಗೆದು ಬಿಸಾಡಿರುತ್ತಾನೆ. ಕಾಲ್ ಮಾಡಿ ಮಾತಾಡಲು ಮನಸು ಬರಲಿಲ್ಲ. ಫೋನ್ ತೆಗೆದು ಬ್ಯಾಗಿಗೆ ಹಾಕಿಟ್ಟೆ. ನಾನಿವತ್ತು ಇಲ್ಲಿ ಯಾವ ನೆನಪುಗಳ ಅಳಿವು ಉಳಿವಿನ ಪ್ರಶ್ನೆ ಹೊತ್ತು ಓಡಿ ಬಂದಿದ್ದೇನೋ ಆ ನೆನಪುಗಳ ಕೊಟ್ಟ ಆ ಇಬ್ಬರೂ ಈಗ ಅಂದಿನ ಆ ಅವರಾಗಿ ಉಳಿದಿಲ್ಲ. ಬದಲಾವಣೆ ಜಗದ ನಿಯಮ ನಿಜ. ಇಷ್ಟೊಂದು ಬದಲಾಗಿಬಿಡುವುದು ಎಂತಹ ನಿಜ?! ಆದರೆ ಇಂದು ತಾವೇ ಕೊಟ್ಟ ಆ ನೆನಪುಗಳ ಮುಂದಿಟ್ಟುಕೊಂಡು ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ಹಾವು ಕಚ್ಚುತ್ತದೆ, ಚೇಳು ಕುಟುಕುತ್ತದೆ. ಯಾರಾದರೂ ಅವುಗಳಿಗೆ ನೀವು ಹಾಗೆ ಮಾಡಬೇಡಿ ಎಂದು ತಿಳಿ ಹೇಳುತ್ತಾರಾ! ಯಾವುದು ನಮ್ಮ ಸಹಜ ಸ್ವಭಾವವೋ ಅದನ್ನು ಬದಲಿಸಲು ಏಕೆ ಬಲ ಪ್ರಯೋಗಿಸಬೇಕು. ನೆನಪುಗಳಿಗೆ ಬದುಕಿಗೊಂದು ಸಾಂಗತ್ಯ ಕೊಡುವ ಶಕ್ತಿ ಇದ್ದುಬಿಟ್ಟಿದ್ದರೆ ನಾನಿವತ್ತು ಅವುಗಳ ಕೊಲ್ಲುವ ಬದಲು ಆ ಇಬ್ಬರನ್ನೂ ನಿರಾಕರಿಸುತ್ತಿದ್ದೆ. ಈಗಲೂ ಒಂದು ಅವಕಾಶವಿದೆ. ಇಬ್ಬರ ಹೊರತಾಗಿ ಎಂದೆಂದಿಗೂ ಬದಲಾಗದ ಅದೇ ಅರಬ್ಬಿಯಾಗುಳಿದಿರುವ ಇವನಿರುವನಲ್ಲಾ… ನಲ್ಲ… ಅಲ್ಲವಾ ಅರಬ್ಬೀ… ನನಗೆ ನಾನೇ ಕೇಳಿಕೊಂಡಾಗ ಮೋಡಗಳು ಚದುರಿ ಆಕಾಶ ಶುಭ್ರವಾಯಿತು. ಕನಿಷ್ಟ ಇವನು ಅವರಿಬ್ಬರ ನೆನಪುಗಳ ಕೊಂದು ಬರುವಂತೆ ಖಂಡಿತಾ ಹೇಳಲಾರ ಎನಿಸಿ ದೇಹ ಹಗುರಾಯಿತು. ನಿದ್ರೆಗೆ ಜಾರಿದೆ.
“ಅರಬರ ವೀರ… ಅರಬರ ವೀರ… ಅರಬರ ವೀರ….” ಮಗ ಹಾಡುತ್ತಲೇ ಇದ್ದ. ಅಲೆಗಳ ತಾಳಕ್ಕೆ ಸರಿಯಾಗಿ ತನ್ನ ಶೃತಿ ಹೊಂದಿಸಿಕೊಂಡು ಕೊನೆ ಮೊದಲಿಲ್ಲದಂತೆ ಹಾಡತೊಡಗಿದ್ದ. “ಅದೇನ್ ಹಾಡು ಅಂತ ಹೇಳ್ತಿದೀಯೋ ಮಗನೇ… ಸಾಕುಮಾಡು ಪುಟ್ಟಾ..” ಎಂದು ಹೇಳುತ್ತಲೇ ಇದ್ದೆ. ಅವ ಒಂಚೂರೂ ಕೇಳಿಸಿಕೊಳ್ಳದೆ, “ಅರಬರ ವೀರ… ಅರಬರ ವೀರ… ಅರಬರ ವೀರ….” ಅಂತ ಹಾಡುತ್ತಲೇ ಮುಂದೆ ಸಾಗಿ ಸಮುದ್ರದೊಳಕ್ಕೆ ಹೆಜ್ಜೆ ಇಟ್ಟುಬಿಟ್ಟ. ಮಾಡೆತ್ತರದ ತೆರೆಯೊಂದು ಶತ್ರುಪಡೆಯ ಮೇಲೆ ದಂಡೆತ್ತಿ ಬರುವಂತೆ ಆಕ್ರಮಿಸಿ ಬರತೊಡಗಿತ್ತು. ಗಾಬರಿಯಿಂದ “ಪುಟ್ಟಾ..” ಎಂದು ಕಿಟಾರನೆ ಕಿರುಚಿಬಿಟ್ಟೆ. ಕಣ್ಬಿಟ್ಟಾಗ ಹಾಸಿಗೆಯ ಮೇಲೆ ನನ್ನೊಬ್ಬಳ ಹೊರತು ಮತ್ಯಾರೂ ಇರಲಿಲ್ಲ. ಕನಸಿಂದ ಆಚೆ ಬರಲು ಸುಮಾರು ಹೊತ್ತೇ ಬೇಕಾಯಿತು. ಮಗನ ನೆನಪಾಗಿ ಕಣ್ತುಂಬಿತು. ಯಾಕೆ ವಾಸ್ತವ ನನಗಿಷ್ಟು ದೂರ? ಯಾಕೆ ನನ್ನ ಹಸಿ ಹಸಿ ಬದುಕು ನೆನಪುಗಳಿಂದಲೇ ನೋಯಬೇಕಿದೆ? ಮತ್ತೆ ಯಾಕೆ ನನ್ನ ವಾಸ್ತವ ಮತ್ತು ನೆನಪುಗಳು ಒಂದಾಗಲಾರವು? ಪ್ರಶ್ನೆಗಳಷ್ಟೇ ಆದ ಪ್ರಶ್ನೆಗಳಿವು. ಇವಕ್ಕೆ ಉತ್ತರ ಬಹುಶಃ ವಿಶ್ವದ ರಚನೆಯಲ್ಲಿಯೇ ಇಲ್ಲ.

ಹಗಲು ರಾತ್ರಿಯನ್ನು ಗಡದ್ದಾಗಿ ಉಂಡು ಮುಗಿಸಿತ್ತು. ಹೊಟ್ಟೆ ಚುರುಗುಟ್ಟುತ್ತಿತ್ತು. ಸ್ನಾನ ಮಾಡಿ ಕೆಳ ಬಂದು ತಿಂಡಿ ಮುಗಿಸಿ ತೀರ ಸೇರಿದಾಗ ಎಂಥದೋ ನೆಮ್ಮದಿ ಆಯ್ತು. ಇನ್ನೂ ಹೆಚ್ಚು ಜನ ಸೇರಿರಲಿಲ್ಲ. ನನಗೂ ಏಕಾಂತ ಬೇಕಿತ್ತು. ಸುಮ್ಮನೇ ಖಾಲಿ ಮನಸಿಂದ ಉಕ್ಕುವ ಕಡಲನ್ನು ನೋಡುತ್ತಾ ಕಾಲು ಚಾಚಿಕೊಂಡು ಕುಳಿತೆ. ತೆರೆಗಳು ಒಂದೊಂದಾಗಿ ಬಂದು ನನ್ನ ಅಂಗಾಲನ್ನು ಚುಂಬಿಸುತ್ತಿದ್ದವು. ಬಹಳಷ್ಟು ಹೊತ್ತಿನ ಈ ಸರಸದ ನಂತರ ನನಗೆ ಏನೇನೋ ಅನಿಸತೊಡಗಿತು. ಅಂದು ಇವನು ಅವನ ನೆನಪುಗಳನ್ನು ತಡವಿಕೊಂಡಿದ್ದ. ಸಾಧ್ಯವಿದ್ದಿದ್ದರೆ ಎದೆ ಬಗೆದು ತೋರಿಸಬೇಕಿತ್ತು. ಕಣ್ಣುಗಳಲ್ಲಿ ಧಾರಾಕಾರ ನೀರು. ಇವನು ತಪ್ಪಿತಸ್ಥ ಭಾವದಿಂದ ಅಂದುಕೊಂಡನೇ ಹೊರತು ಅನುಮಾನಕ್ಕಿಂತ ದೊಡ್ಡ ಅವಮಾನ ಇಲ್ಲ ಎಂದು ಅವನಿಗೆ ಅರ್ಥವಾಗಲಿಲ್ಲ. ಆ ದಿನ ರಾತ್ರಿ ಪೂರಾ ಬಯ್ಯುತ್ತಲೇ ಇದ್ದ, ಎಂದೋ ಇಲ್ಲವಾದವನ ನೆನಪುಗಳ ಹೊತ್ತು ತಿರುಗುತ್ತಿರುವವಳು ಎಂದು. ಆದರೆ ಎದುರಿಗೇ ಇದ್ದ ಇವನ ಎದೆಯೊಳಗಿನ ನನ್ನ ಚಿತ್ರ ಎಂದೋ ಬಣ್ಣ ಕಳೆದುಕೊಳ್ಳತೊಡಗಿತ್ತು. ಹೆಣ್ಣಿನ ಸೂಕ್ಷ್ಮತೆ ಗಂಡಿಗೆ ಅರ್ಥವಾಗುವುದಿಲ್ಲ ಎನ್ನುವುದಕ್ಕಿಂತಲೂ ಅವನದನ್ನು ಹಾಸ್ಯಾಸ್ಪದವಾಗಿ ಕಂಡಾಗ ಆಗುವ ನೋವು ಅಳದ ಗಾಯ ಉಂಟುಮಾಡುತ್ತದೆ. ಅಂದು ಆದ ಹಸಿಗಾಯ ರಸಿಯಾಡುತ್ತಲೇ ಇದೆ. ಕೂತಾಗಲೂ ನಿಂತಾಗಲೂ ಹಸಿವು ನಿದ್ರೆ ಕಸಿದು ನಕ್ಷತ್ರಿಕನಂತೆ ಕಾಡಿಸುತ್ತಿದೆ. ಅಷ್ಟೆಲ್ಲಾ ಆದ ನಂತರ ಹೋಗಿ ಅವನ ಮಗ್ಗುಲಲ್ಲಿ ಮಲಗಲು ಸಾಧ್ಯವಾಗದೆ ಹಿತ್ತಲ ಕತ್ತಲಲ್ಲಿ ಕೂತಿದ್ದೆ. ಅದು ಅವನಿಗೆ ತಿಳಿದಿತ್ತು. ಆದರೆ ಅವನು ತನ್ನ ಪ್ರತಿಷ್ಠೆಯ ಪತಾಕೆ ಬಾಗದಂತೆ ಹಿಡಿದು ಕೂತಿದ್ದ. ಕೊನೆಗೊಮ್ಮೆ ಹೋಗಲಿ ಮಗುವಿನಂತೆ ಹಟ ಹಿಡಿದಿದ್ದಾನೆ, ಎಲ್ಲ ಸರಿ ಹೋಗುತ್ತದೆ ಎಂದುಕೊಳ್ಳುತ್ತಾ ಒಳ ಬಂದು ಅವನ ಬೆನ್ನ ಅಪ್ಪಿ ಮಲಗಲು ಹೋದಾಗ ಕೈಯನ್ನು ಕಿತ್ತೊಗೆದು, ದೂರ ಸರಿದು ಮಲಗಿದ್ದ. ಆಗಲೇ ಉಟ್ಟ ಬಟ್ಟೆಯಲ್ಲಿಯೇ ಕೈಗೆ ಸಿಕ್ಕಷ್ಟು ದುಡ್ಡು ಒಂದೆರೆಡು ಜೊತೆ ಬಟ್ಟೆ ತೆಗೆದುಕೊಂಡು ಗೊತ್ತುಗುರಿಯಿಲ್ಲದೆ ಮನೆಯಿಂದ ಹೊರ ಬಿದ್ದದ್ದು. ಅವನು ವಿಫಲ ಪ್ರೀತಿ, ಇವನು ಸಫಲ ಪ್ರೀತಿ. ಇಬ್ಬರ ಆ ತೀವ್ರ ಒಲವೂ ತೀಕ್ಷ್ಣ ನೆನಪುಗಳಲ್ಲಿ ಇಂದಿಗೂ ಜೀವಂತವಾಗಿವೆ. ಪ್ರೇಮದ ಪರಾಕಾಷ್ಟೆಯಲ್ಲಿಯಷ್ಟೇ ಸ್ಖಲಿಸುವ ಸುಖವನ್ನು ಕಂಡುಕೊಂಡ ನನಗೆ ದೈಹಿಕ ವಾಂಛೆಯಷ್ಟೇ ಪ್ರೇಮವೆಂದುಕೊಂಡವರ ಸಣ್ಣತನವನ್ನು ಸಹಿಸಲಾಗಲಿಲ್ಲ. ಇಬ್ಬರೂ ಹುಸಿ ಹೋದರು. ಪ್ರೇಮದ ಟೊಳ್ಳು ನನ್ನ ಗಮನಕ್ಕೆ ಬರಬಾರದಿತ್ತೆಂದು ಈಗಲೂ ಪರಿತಪಿಸುತ್ತೇನೆ. ಅವನು ಈಗಲೂ ಪ್ರೇಮವನ್ನು ಪ್ರವಹಿಸಲು ಮಾಧ್ಯಮವನ್ನು ಹುಡುಕುತ್ತಿದ್ದಾನೆ. ಒಪ್ಪಿಕೊಂಡ ಪ್ರೀತಿಯ ನಿರರ್ಥಕತೆಯಲ್ಲಿ ತನ್ನ ನೆನಪುಗಳ ಸಫಲತೆಯನ್ನು ಕಾಣಲು ಬಯಸುತ್ತಿದ್ದಾನೆ. ಮತ್ತಿವನು ಪ್ರೇಮದಿಂದ ಗಳಿಸಿದ್ದನ್ನು ಹಕ್ಕು ಅಧಿಕಾರದ ಮೂಗುದಾರಕ್ಕೆ ಹೊಸೆಯುತ್ತಿದ್ದಾನೆ. ತುಟಿ ಕೊಂಕಿತು. ಕುಸ್ಸಿತ ನಿಟ್ಟುಸಿರೊಂದು ದೀರ್ಘವಾಗಿ ಚಿಮ್ಮಿತು.
“ಮ್ಯಾಡಮ್ ಜೀ”
ಎಂದು ಮಾತಾಡಿಸಿದ ಹಿಂದಿನ ದಿನ ಸಿಕ್ಕಿದ್ದ ಆ ಅದೇ ವ್ಯಕ್ತಿ ಬಂದು ಪಕ್ಕದಲ್ಲಿ ಕುಳಿತ. ನನಗೆ ಅವನನ್ನು ಮಾತಾಡಿಸಬೇಕೆನಿಸಲಿಲ್ಲ. ಅವನೂ ಸ್ವಲ್ಪ ಹೊತ್ತು ಏನೊಂದೂ ಚಕಾರವೆತ್ತಲಿಲ್ಲ. ವಿನಾಕಾರಣ ಅವನನ್ನೊಮ್ಮೆ ನೋಡಿದೆ. ಲಕ್ಷಣವಾಗಿದ್ದ ಅವನ ಮುಖ ಬಿಗುವಾಗಿತ್ತು. ಗುಲಾಬಿ ತುಟಿಗಳ ಮೇಲಿನ ಕಪ್ಪು ಮೀಸೆ ಮತ್ತು ಹೊಂಬಣ್ಣದ ಚರ್ಮದ ಮೇಲಿನ ಕುರುಚಲು ಗಡ್ಡದಿಂದಾಗಿ ಅಂದವಾಗಿಯೇ ಕಂಡ. ನನ್ನಷ್ಟೇ ಅಲೆಮಾರಿಯಂತೆನಿಸಿದ ಅವನ ತೊಂದರೆಯೇನಿತ್ತೋ. ಕೇಳುವ ಉತ್ಸಾಹವಾಗಲೀ ಶಕ್ತಿಯಾಗಲೀ ಖಂಡಿತ ನನ್ನಲ್ಲಿ ಉಳಿದಿರಲಿಲ್ಲ. ಅವನು ಕ್ಷಣ ಗಣನೆ ಮಾಡುತ್ತಿರುವವನಂತೆ ಕಂಡ. ಅವನ ಹಿಂದಿ ಭಾಷೆ ಸ್ಪಷ್ಟವಾಗಿತ್ತು. ಬಹುಶಃ ಉತ್ತರಭಾರತದವನಿರಬೇಕು. ನೆನ್ನೆಯ ಅವೇ ಕೊಳಕು ಬಟ್ಟೆಯಲ್ಲಿಯೇ ಇದ್ದ. ನಾ ಸಹ. ನಗು ಬಂತು ನನಗೆ. ಇಷ್ಟನ್ನು ಹೀಗೆ ಅದೂ ಈ ಮನಸ್ಥಿತಿಯಲ್ಲಿ ಗಮನಿಸಿದ ನನ್ನ ಬಗ್ಗೆ ನನಗೇ ಸೋಜಿಗವಾಯಿತು. ಆದರೆ ಅವ ನಿರ್ಲಿಪ್ತನಾಗಿ ಕೂತಿದ್ದ. ಅವನಿಗೆ ಮಾತು ಬೇಕಿರಲಿಲ್ಲವೇನೋ. ಆದರೆ ಇದ್ದಕ್ಕಿದ್ದಂತೆ,
“ಆಪ್ಕೊ ಐಸೆ ಅಕೇಲೇ ಮೇ ನಹೀ ಘೂಮ್ನಾ ಚಾಹೀಯೇ… ಐಸೀ ಜಗೋ ಮೇ…” ಅಂದ.
ತಣ್ಣನೆಯ ಗಾಳಿಯನ್ನು ಸೀಳಿ ಬಂದಂತಿತ್ತು ಆ ಮಾತು. “ಅಯ್ಯೋ ಹುಚ್ಚ… ಪ್ರೀತಿಯೇ ಸುಳ್ಳಾದಾಗ ಸಾವೂ ಹೆದರಿಸಲಾರದು ಗೊತ್ತಾ…” ಎಂದು ಅವನ ಕಾಲರಿಗೆ ಕೈ ಹಾಕಿ ಚೀರಬೇಕೆನಿಸಿತು ನನಗೆ. ಅಷ್ಟಿಲ್ಲದೇ ಇಷ್ಟು ದೂರ ಏನಕ್ಕೆ ಬರುತ್ತಿದ್ದೆ. ನಾನು ಕೊಂಚವೂ ಅಲುಗಾಡಲಿಲ್ಲ. ಹಿಮಗಟ್ಟಿದ ಕಲ್ಲಿನಂತೆ ಕೂತಿದ್ದೆ. ಅವ ಮತ್ತೆ ಮಾತಾಡಲಿಲ್ಲ. ಮಾತಾಡಲೇ ಇಲ್ಲ. ನಾನು ಅರಬ್ಬಿಯನ್ನು ತದೇಕಚಿತ್ತದಿಂದ ನೋಡುತ್ತಿದ್ದೆ.
ಅರಬ್ಬೀ…
ನನಗೀಗ ನೆನಪುಗಳ ಆಯ್ಕೆ ಕಷ್ಟವಾಗುತ್ತಿದೆ. ಯಾವುದು ನಿಸ್ಪೃಹವಲ್ಲವೋ ಯಾವುದು ನಿಸ್ವಾರ್ಥವಲ್ಲವೋ ಅಂತಹ ಪ್ರಾಮಾಣಿಕತೆಯ ಅಳತೆಯಲ್ಲಿ ಶೂನ್ಯ ಸಾಧನೆ ಮಾಡಿರುವ ನೆನಪುಗಳ, ಬರೀ ನನ್ನ ಅಸ್ತಿತ್ವದ ಸಲುವಾಗಿ ಆಯ್ದು ಬದುಕಿಸಿಕೊಳ್ಳುವುದಕ್ಕಿಂತ ನಿನ್ನೊಡಲಿಗೆ ನನ್ನನ್ನು ಚೆಲ್ಲಿಕೊಳ್ಳುವುದೇ ಒಳ್ಳೆಯ ಆಯ್ಕೆ ಅನಿಸುತ್ತಿದೆ ನನಗೀಗ…
ಕಣ್ಣ ಹೊಸಿಲ ದಾಟಿ ಹನಿಯೊಂದು ಮತ್ತೆ ಉಪ್ಪು ಕಡಲನ್ನು ಸೇರಿತು. ಅವನ ಜೊತೆ ಹಾಕಿದ ಹೆಜ್ಜೆಗಳು, ಮಾತು, ನಗು, ಮುದ್ದು, ಎದೆಬಡಿತ, ಆಣೆ, ಪ್ರಮಾಣ, ಕಣ್ಣೀರು, ನೋವು… ಯಾವುದೂ ಸುಳ್ಳಲ್ಲ. ಅವನು ಅಷ್ಟೊಂದು ದ್ರೋಹಿಯಾಗಿರಲು ಸಾಧ್ಯವಿಲ್ಲ. ಅದರ ಸತ್ಯ ನನಗೆ ಗೊತ್ತು. ತೀವ್ರ ಭಾವಗಳು ಹೃದಯದಿಂದಲೇ ಹುಟ್ಟುತ್ತವೆ. ಆದರೆ ಮನುಷ್ಯನಾದವನಿಗೆ ಅವನ್ನು ತನ್ನ ಸಮಯಸಾಧಕತನಕ್ಕೆ ಬಳಸಿಕೊಳ್ಳುವುದು ಗೊತ್ತು, ಸತ್ಯವಾಗುಳಿವ ಅವಕಾಶವಿದ್ದಾಗಲೂ. ಆದರೆ ಇವನು ಈಗ ನನ್ನ ಪಾಲಿಗೆ ಉಳಿದಿರುವ ಏಕೈಕ ಸತ್ಯ. ಸತ್ಯವನ್ನು ಮೀರಿದ ಕಟು ವಾಸ್ತವ. ಆದರೆ ಇವನಿಗೀಗ ನನ್ನ ಮೇಲಿನ ಹಕ್ಕು ಸ್ವಾಮ್ಯ ಪತ್ರ ಮಾತ್ರ ಬೇಕಾಗಿದೆ. ಇನ್ನಾವುದರ ಕಾಳಜಿಯೂ ಉಳಿದಿಲ್ಲ. ನನ್ನ ಕಾಳಜಿಯೂ…
ಇಲ್ಲಿಗೆ ಬರುವಾಗ ಎಲ್ಲಿಂದ ಬಂದೆ ಎಲ್ಲಿಗೆ ಹೋಗಬೇಕು ಏನು ಮಾಡಬೇಕು ಎನ್ನುವ ಆಲೋಚನೆಯನ್ನು ತೊರೆದು ಇಲ್ಲಿಗೆ ಬಂದಿದ್ದೆ. ಮರಳಿ ಹೋಗುವ ಯೋಚನೆ ಯೋಜನೆ ಇರಲಿಲ್ಲ. ಅವನವತ್ತು “ಒಂದೇ ಒಂದು ಬಾರಿ ನಿನ್ನನ್ನು ನೋಡಬೇಕು” ಎಂದು ಮೆಸೇಜಿಸಿದ್ದ. ಅದು ಇವನ ಕಣ್ಣಿಗೆ ಬಿದ್ದು ಯಾ ಪರಿ ಕೂಗಾಡಿದ್ದನೆಂದರೆ ಮನಸಿನ ಅಷ್ಟೂ ಕಹಿಯನ್ನೂ ಉಗುಳಿಬಿಟ್ಟಿದ್ದ. ಅವನಿಗೆ ಹಾಗೆ ಅನಿಸಬಾರದಿತ್ತು. ಆದರೆ ಅನಿಸಿದ ಮಾತ್ರಕ್ಕೆ ಏನು ಸಾಧ್ಯವಿಲ್ಲವಲ್ಲ. ಅವನೊಂದು ಜೀವವಿಲ್ಲದ ನೆನಪು ಮಾತ್ರ. ಗೋಡೆಯ ಮೇಲಿನ ನಿರ್ಜೀವ ಭಾವಚಿತ್ರದಷ್ಟೇ ಅಚನಶೀಲ. ಅವನ ಯಾವ ಮೆಸೇಜಿಗೂ ನಾನು ಉತ್ತರಿಸುತ್ತಲೂ ಇರಲಿಲ್ಲ. ಆದರೆ ಇವನಿಗೆ!? ಅಷ್ಟೇ ಸಾಕಿತ್ತು, ನನ್ನ ಉತ್ತರ ಬೇಕೇ ಇರಲಿಲ್ಲ!
ತೀರಕ್ಕೆ ನಿಧಾನವಾಗಿ ಜನ ಬಂದು ಸೇರತೊಡಗಿದ್ದರು. ಒಬ್ಬೊಬ್ಬರದು ಒಂದೊಂದು ಬಗೆಯ ಆಟ. ಸಮುದ್ರದೊಳಗೆ ದೋಣಿಯಲ್ಲಿ ತೇಲಾಡಿ ಬಂದು ಅವೇಶಕ್ಕೊಳಗಾದವರ ಎಕ್ಸೈಟ್ಮೆಂಟ್ ಅಂತೂ ವರ್ಣಿಸಲಸದಳ. ಸುಮ್ಮನೇ ಬ್ಯಾಗಿಗೆ ಕೈ ಹಾಕಿದವಳಿಗೆ ಮೊಬೈಲ್ ಸಿಕ್ಕಿತು. ಅಪ್ರಜ್ಞಾಪೂರ್ವಕವಾಗಿ ಮೊಬೈಲ್ ತೆಗೆದು ಆನ್ ಮಾಡಿದೆ. ತಕ್ಷಣ ಅದು ರಿಂಗಣಿಸಿತು. ಇಷ್ಟವಿಲ್ಲದೇ ರಿಸೀವ್ ಮಾಡಿದೆ. “ಎಲ್ ಹಾಳಾಗ್ ಹೋಗಿದೀಯಾ? ಹೇಳ್ ಹೋಗೋಕೇನು ಕಷ್ಟ ನಿಂಗೆ? ನಾನೇನ್ ಮಾಡ್ದೆ ಅಂತ ಇಷ್ಟೆಲ್ಲ ತೋರ್ಸ್ಕೊತಾ ಇದೀಯಾ ನೀನು?…….” ಆರೋಪಗಳ ಬಿರುಮಳೆ ಸುರಿಯತೊಡಗಿತು. ಕಟ್ ಮಾಡಿದೆ. ಮತ್ತೆ ಮತ್ತೆ ಕಾಲ್ ಬರತೊಡಗಿತು. ನಾನಿನ್ನೂ ಯಾವ ಉತ್ತರಕ್ಕೂ ಸಿದ್ಧಳಾಗಿರಲಿಲ್ಲ. ಮೊಬೈಲ್ ತೆಗೆದು ಬ್ಯಾಗಿಗೆ ಹಾಕಿಟ್ಟೆ.
“ಭಾಗ್ನೇ ಸೆ ಕುಚ್ ನಹೀ ಹೋತಾ ಹೈ ಮ್ಯಾಡಮ್ ಜೀ… ಕಿಸೀ ಏಕ್ ಕಾ ಸಾಮ್ನಾ ಜರೂರ್ ಕರ್ನಾ ಚಾಹೀಯೇ…”
ಅಂದ ಆ ವ್ಯಕ್ತಿ ಅದೇ ತಣ್ಣಗಿನ ದನಿಯಲ್ಲಿ. ನಾ ಕನಿಷ್ಟ ಹ್ಞೂಗುಟ್ಟಲೂ ಇಲ್ಲ. ಅವ ಎದ್ದು ಜೋರಾಗಿ ನಡೆಯತೊಡಗಿದ. ಕೊನೆಕೊನೆಗೆ ಓಡತೊಡಗಿದ. ನೋಡನೋಡುತ್ತಿದ್ದಂತೆಯೇ ಸಮುದ್ರದ ನೀರು ಅವನ ಎದೆಯ ಮಟ್ಟಕ್ಕೆ ಬಂತು. ಕೊನೆಗೆ ಅವನ ತಲೆಯೂ ಕಾಣದಾಯಿತು. ಕಲ್ಲು ಬಿದ್ದ ಇರುವೆ ಗೂಡಿನಂತೆ ಬೀಚಿನಲ್ಲಿದ್ದ ಜನರೆಲ್ಲರೂ ಹುಯ್ಲೆದ್ದು ಕೂಗಾಡತೊಡಗಿದರು. ನನಗೆ ಒಂದಷ್ಟು ಹೊತ್ತು ಈ ಅನಿರೀಕ್ಷಿತ ಬರಸಿಡಿಲಿನಿಂದ ಹೊರಬರಲಿಕ್ಕೆ ಸಾಧ್ಯವಾಗಲಿಲ್ಲ. ಒಂದಷ್ಟು ಜನ ನನ್ನ ಸುತ್ತಲೂ ನಿಂತು ಗಾಬರಿ ವ್ಯಕ್ತ ಪಡಿಸತೊಡಗಿದರು. ಮತ್ತೊಂದಿಷ್ಟು ಜನ “ಪಾಪ ಇವರ ಗಂಡನೇ ಇರಬೇಕು… ಏನು ಜಗಳವೋ ಏನೋ…” ಎಂದುಕೊಳ್ಳುತ್ತಾ ಮಾತಾಡುತ್ತಲೇ ಇದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಪೋಲೀಸರು ಅಲ್ಲಿಗೆ ಬಂದರು. ನನ್ನ ಬಳಿ ಬಂದು “ಅವರು ಯಾರು?” ಎಂದು ಕೇಳಿದರು. “ನನಗೆ ಗೊತ್ತಿಲ್ಲ” ಎಂದೆ. ಮತ್ತೆ ಏನೇನೋ ಕೇಳಿದರು. ಎಲ್ಲಕ್ಕೂ “ನನಗೆ ಗೊತ್ತಿಲ್ಲ ಗೊತ್ತಿಲ್ಲ” ಎಂದೇ ಹೇಳುತ್ತಾ ಹೋದೆ. ಪೋಲೀಸರಿಗೆ ಅಲ್ಲಿಯೇ ಅವನ ಬ್ಯಾಗೊಂದು ಸಿಕ್ಕಿತು. ಅದರಲ್ಲಿದ್ದ ಐಡಿ ಮತ್ತಿತರೆ ದಾಖಲೆಗಳ ಪ್ರಕಾರ ಅವ ಇಲ್ಲಿಯವನಾಗಿರಲಿಲ್ಲ. ದಿಲ್ಲಿಯಿಂದ ಬಂದಿದ್ದ. ಮತ್ತೇನೂ ಪೂರಕ ಪುರಾವೆಗಳು ಸಿಕ್ಕಿರಲಿಲ್ಲ. ಸಾಯಲಿಕ್ಕೇ ಬಂದಿದ್ದನಾ ಅಥವಾ ಬೇರೇನಾದರೂ ಕೆಲಸದ ಮೇಲೆ ಬಂದಿದ್ದನಾ ಎನ್ನುವ ಅನುಮಾನಗಳು ಹುಟ್ಟಿದವಷ್ಟೇ. ಆದರೆ ನಿಜವಾದ ಕಾರಣ ಸಧ್ಯಕ್ಕೆ ಅವರಿಗೂ ತಿಳಿಯಲಿಲ್ಲ. ಆದರೆ ಸಾಯಲಿಕ್ಕೇ ಬಂದಿದ್ದನಾ ಎನ್ನುವ ಪ್ರಶ್ನೆ ಮಾತ್ರ ಅರೆಕ್ಷಣ ನನ್ನನ್ನು ಬೇಟೆಯಾಡಿತು. ಪೋಲೀಸರು ಒಂದಷ್ಟು ಹೊತ್ತು ಹಿಂತಳ್ಳುತ್ತಿದ್ದ ಭೀಮಬಲದ ತೆರೆಗಳ ನಡುವೆ ಅವನ ಹುಡುಕಾಟ ನಡೆಸಿದರು.
“ಅರಬ್ಬೀ ಅವನನ್ನು ಕಳಿಸಿಬಿಡು ಹೊರಕ್ಕೆ ಪಾಪ…” ಎಂದಿತು ನನ್ನ ಒಳಮನಸ್ಸು. ಎಷ್ಟು ಹುಡುಕಿದರೂ ಕನಿಷ್ಟ ಅವನ ಹೆಣವೂ ಸಿಗಲಿಲ್ಲ. ನಾ ನಿಂತಲ್ಲಿಯೇ ಮರಗಟ್ಟಿ ಹೋಗಿದ್ದೆ. ಮತ್ತೆ ನನ್ನ ಫೋನ್ ರಿಂಗಣಿಸಿತು. ಥಟ್ಟನೆ ಆ ವ್ಯಕ್ತಿ ಹೇಳಿದ್ದ ಮಾತೂ ನೆನಪಾಯಿತು. “ಯಾವುದಾದರೊಂದನ್ನು ಎದುರಿಸಲೇಬೇಕು…” ಎಂಬುದು. ಹೌದು ಅನಿಸಿದ್ದೇ ಕಾಲ್ ಪಿಕ್ ಮಾಡಿದೆ. ಇವ ಮಾತಾಡಿದ. “ಸರಿ ಬಿಡು ಮಾರಾಯ್ತೀ… ನಂದೆ ತಪ್ಪು… ಕ್ಷಮಿಸು ಆಯ್ತಾ.. ಬಾ ಮನೆಗೆ…” ಅಂದ. “ನನ್ನಿಂದ ನೆನಪುಗಳನ್ನು ಕೊಲ್ಲುವುದು ಸಾಧ್ಯವಿಲ್ಲ….” ಎಂದೆ ದೃಢವಾಗಿ. “ಸರಿ” ಅಂತಷ್ಟೇ ಹೇಳಿದ ಹೆಡೆ ಸತ್ತ ಹಾವಿನಂತೆ. ನಂತರ ಒಂದಷ್ಟು ಹೊತ್ತು ಮೌನ ಆವರಿಸಿತು. “ಯಾವಾಗ ಬರ್ತೀಯಾ…” ಕೇಳಿದ. ನಾನೇನೂ ಮಾತಾಡಲಿಲ್ಲ. ನಂತರ “ಅಮ್ಮಾ… ಎಲ್ಲಿದೀಯಮ್ಮಾ… ನಂಗೆ ಭಯ ಆಗ್ತಿದೆ ಅಮ್ಮಾ… ನಂಗೆ ನೀನು ಬೇಕಮ್ಮಾ… ಬೇಗ ಬಾ ಅಮ್ಮಾ…” ಎನ್ನುವ ಅಳುವ ಸ್ವರ ಕೇಳಿಸಿತು. ಕಣ್ಣು ತುಂಬಿಬಿಟ್ಟವು. ಕೊರಳು ಉಬ್ಬಿ “ಕಂದಾ…” ಎಂದೆನಷ್ಟೇ. ಜೋರಾಗಿ ಲಾಡ್ಜಿದ್ದ ದಿಕ್ಕಿನೆಡೆಗೆ ಓಡತೊಡಗಿದೆ.
ಅರಬ್ಬೀ
ನಮ್ಮಿಬ್ಬರ ಮಿಲನಕ್ಕೆ ಸಮಯ ಇನ್ನೂ ಪಕ್ವವಾಗಿಲ್ಲ… ಸಮಯ ಹಣ್ಣಾಗಲಿ… ಬರುವೆ…
ಅಂತಷ್ಟೇ ಮನದಲ್ಲಿ ಹೇಳಿಕೊಂಡೆ. ಅವನು ವಿಶಾಲ ಹೃದಯದವನು, ಫ್ರಿಜ್ಜಿನಲ್ಲಿ ಅರ್ಧ ತಿಂದಿಟ್ಟು ಬಂದ ಡೈರಿಮಿಲ್ಕನ್ನು ನೆನೆದು ಓಡುವ ತುಂಟ ಮಗುವನ್ನು ಕಂಡಂತೆ ನಿರುಮ್ಮಳವಾಗಿ ನಕ್ಕ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”

