ಕೇವಲ ಡಾಕ್ಟರಷ್ಟೇ ಆಗದೆ ಅದರ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ಇಂಥ ಅಪರೂಪದ ವ್ಯಕ್ತಿತ್ವದ ತೋಪಯ್ಯನವರದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕತ್ರಿಘಟ್ಟದವರು. `ಎಲ್ಲದಕ್ಕೂ ಸರ್ಕಾರವನ್ನೇ ನಂಬಿ ಕೂರುವುದು ಮೂರ್ಖತನ. ನಾವು ನಮ್ಮ ನಮ್ಮ ಕೈಯ್ಯಿಂದ ಏನೇನು ಮಾಡೋಕೆ ಸಾಧ್ಯ ಆಗುತ್ತೋ ಅದನ್ನೆಲ್ಲಾ ಮಾಡುತ್ತಾ ಹೋಗಬೇಕು’ ಅನ್ನುತ್ತಿದ್ದ ತೋಪಯ್ಯನವರು`ಸಹಕಾರ ತತ್ವ’ದಲ್ಲಿ ಅಪಾರ ನಂಬಿಕೆ ಇಟ್ಟಿದ್ದರು. ಇವರ ಇಂಥ ನಂಬಿಕೆಯೇ ಶೆಟ್ಟೀಕೆರೆಯಂಥ ಹಳ್ಳಿಯಲ್ಲಿ ಆ ಕಾಲಕ್ಕೆ ಜನ ಒಂದಾದರೆ ಏನೆಲ್ಲಾ ಮಾಡಬಹುದು ಅನ್ನುವುದಕೆ ಬಲು ದೊಡ್ಡ ಸಾಕ್ಷಿಯಾಗಿದೆ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿನೈದನೆಯ ಕಂತು
`ಈ ಕೊನೆಕರ್ಕೆ ಐತಲ್ಲಾ ಇದ್ರಲ್ಲಿ ಒಂಚೂರು ಯಾಮಾರಿದ್ರೂ ನಮ್ಮ ಪ್ರಾಣ್ಕೇ ಸಂಚಕಾರ ತಂದ್ಕಂಡಂಗೆ. ಇದ್ರಲ್ಲಿ ಏನಿದ್ರೂ ಉಪಾಯ್ವಾಗಿ ಕೆಲ್ಸ ಮಾಡ್ಬೇಕು. ಹಂಗೇಯಾ ಈ ಜವುಣ್ಗೆ ಐತಲ್ಲಾ ಇದುನ್ನ ಆತು ಹಿಡ್ಯಾಕೆ ರಟ್ಟೆ ಗಟ್ಟಿ ಇರ್ಬೇಕು, ಕಣ್ಗುಳೂ ನೆಟ್ಟಗಿರ್ಬೇಕು. ಇಲ್ಲಾಂತ ಇಟ್ಕೋ ಕೀಳಾ ಕಾಯಿಗುಳ್ನೆಲ್ಲಾ ಮ್ಯಾಲೆ ಕೆಡಿವ್ಕಣಾದೇಯಾ! ಈಗಂತೂ ಈ ಕಸುಬ್ನ ಮಾಡ್ತೀನಿ ಅಂತ ಯಾರೊಬ್ರೂ ಮುಂದ್ಕೆ ಬರೊಲ್ರು! ಹಿಂಗೇ ಆತು ಅಂದ್ರೆ ಮುಂದ್ಮುಂದ್ಕೆ ಬಿದ್ದ ಕಾಯಿಗಳ್ನಷ್ಟೇ ಆಯ್ಕಂಡು ಅಟ್ಟಕ್ಕೆ ತುಂಬ್ಕಾಬೇಕು ಆಟೇಯಾ!’ ಅಂದಿದ್ದರು ನಮ್ಮೂರಿನ ಕೊನೆಕಾರರೊಬ್ಬರು ತೋಟದಲ್ಲಿ ಕಾಯಿ ಕೀಳಿಸುವ ಜವಾಬ್ದಾರಿ ನನ್ನ ಹೆಗಲಿಗೆ ಬಿದ್ದ ಹೊಸತರಲ್ಲಿ.
ಅವರು ಆಡಿದ್ದ ಮಾತುಗಳಲ್ಲಿ ಯಾವುದೇ ಉತ್ಪ್ರೇಕ್ಷೆ ಇರಲಿಲ್ಲ. ಏಕೆಂದರೆ ಆ ನಂತರ ಕಾಯಿಗಳನ್ನು ಕೀಳಿಸುವ ಸಲುವಾಗಿ ಕೊನೆಕಾರರಿಗಾಗಿ ತಿಂಗಳುಗಟ್ಟಲೆ ಕಾಯುವ ಸ್ಥಿತಿ ಬಂದಿತ್ತು. ಅಷ್ಟರಲ್ಲಿ ಕಾಯಿಗಳು ಹಣ್ಣಾಗಿ ತೊಟ್ಟು ಕಳಚಿ ಬಿದ್ದು ಅವುಗಳಲ್ಲಿ ಕೆಲವು ಕಂಡವರ ಪಾಲಾಗುತ್ತಿದ್ದವು. ನಮ್ಮೂರಿನವರೇ ಆಗಿದ್ದ ಈ ಕೊನೆಕಾರರು ಆ ಹೊತ್ತಿಗಾಗಲೇ ತಮ್ಮ ಶಕ್ತಿಗೂ ಮೀರಿ ಊರಿನ ತೋಟಗಳನ್ನು `ವಾರಕ್ಕೆ’ ಒಪ್ಪಿಕೊಂಡು ಬಿಡುತ್ತಿದ್ದರು. ಹಂಗಾಗಿ ಈ ಕಾಯಿ ಕೀಳಿಸುವ ಕೆಲಸವೇ ನನಗೊಂದು ರೀತಿಯಲ್ಲಿ ರೇಜಿಗೆಯ ಸಂಗತಿಯಾಗಿ ಹೋಗಿತ್ತು. ಬರುತ್ತೇನೆಂದು ಒಪ್ಪಿಕೊಂಡ ಕೊನೆಕಾರ ಅವತ್ತು ಬರುತ್ತಿರಲಿಲ್ಲ. ಒಂದೊಂದು ಸಲ ಅವರು ಬಂದರೆ ಕಾಯಿಗಳನ್ನು ಹೊರಲು ಬರುವುದಾಗಿ ಮಾತು ಕೊಟ್ಟಿದ್ದವರು ಕೈ ಕೊಟ್ಟು ಬಿಡುತ್ತಿದ್ದರು. ಅಂಥ ದಿನ ನಾನು ನನ್ನ ಕಾಲೇಜಿನ ಕೆಲಸಕ್ಕೆ ರಜೆ ಹಾಕಿ ಹೋಗಿರುತ್ತಿದ್ದೆ. ಅವರು ಬಾರದಿದ್ದರೆ ಒಂದು ರಜೆ ಸುಮ್ಮನೆ ಹೋಯಿತಲ್ಲಾ ಅಂತ ಬೇಸರವಾಗುತ್ತಿತ್ತು. ಈಗಲೂ ಈ ಇಂಥ ರೇಜಿಗೆಯಿಂದ ಮುಕ್ತಿ ಸಿಕ್ಕಿಲ್ಲ. ಕಾರಣ ಈ ಪೀಳಿಗೆಯಲ್ಲಿ ಕೊನೆಕಾರಿಕೆಯಂಥ ಅಪ್ಪಟ ಎಚ್ಚರಿಕೆಯ ಕಸುಬನ್ನು ಮಾಡಲು ಮುಂದೆ ಬರುತ್ತಿರುವವರ ಸಂಖ್ಯೆ ಸುತ್ತಲ ಹಳ್ಳಿಗಳಲ್ಲಿ ಹುಡುಕಿದರೂ ಹತ್ತು ಮಂದಿ ಸಿಕ್ಕುವುದಿಲ್ಲ. ಸಿಕ್ಕಿದರೂ ಅತ್ಯಂತ ಸೂಕ್ಷ್ಮ ಕಸುಬುಗಳಲ್ಲಿ ಒಂದಾಗಿರುವ ಇದನ್ನು ಅತ್ಯಂತ ನಾಜೂಕಾಗಿ ನಿಭಾಯಿಸುತ್ತಿರುವವರ ಸಂಖ್ಯೆ ಇನ್ನೂ ಕಡಿಮೆಯೇ. ಅದೇರೀತಿ, ಇದನ್ನು ಒರಟೊರಟಾಗಿ, ಉಡಾಫೆಯಿಂದ ಮಾಡಲು ಹೋದ ಅನೇಕ ಕೊನೆಕಾರರು ಇದರಿಂದ ಮಾರಣಾಂತಿಕ ಪೆಟ್ಟುಗಳನ್ನು ತಿಂದಿರುವುದೂ ಉಂಟು. ಜವಣಿಗೆ ಕಡ್ಡಿಯನ್ನು ಮೇಲೆತ್ತಿ ಅದನ್ನು ಆತು ಹಿಡಿದು, ಉಯಿಲು ಬಂದರೆ ಅದನ್ನು ಸರಿದೂಗಿಸಿಕೊಂಡು, ಒಮ್ಮೆ ಮೇಲೆತ್ತಿದ ಜವಣಿಗೆಯನ್ನು ಕೆಳಕ್ಕೆ ಬೀಳಿಸದಂತೆ ಮರದಿಂದ ಮರಕ್ಕೆ ಅದನ್ನು ಧ್ವಜದಂತೆ ಎತ್ತಿಕೊಂಡು ಹೋಗಿ ಕಾಯಿ ಕೀಳುವುದನ್ನು ನೋಡಿದ ಯಾರಿಗೇ ಆಗಲಿ ಅಚ್ಚರಿಯ ಜೊತೆಗೆ ಆ ಕೊನೆಕಾರನ ಕೌಶಲ್ಯದ ಬಗ್ಗೆ ಹೆಮ್ಮೆ ಅನಿಸದಿರದು.
ಚಿಕ್ಕಂದಿನಲ್ಲಿ ಇಂಥ ಮಹಾನ್ ಕೌಶಲ್ಯವನ್ನು ರೂಢಿಸಿಕೊಂಡ ಕೊನೆಕಾರರೊಬ್ಬರು ನಮ್ಮ ಪಕ್ಕದ ಹಳ್ಳಿಯಲ್ಲಿದ್ದರು. ಹೆಸರು ಚಿಕ್ಕಣ್ಣಜ್ಜ ಅಂತ. ಊರು ನಮ್ಮ ಹಳ್ಳಿಯ ಪಕ್ಕದ ಗೋಪಾಲನಹಳ್ಳಿ. ಅಬ್ಬಬ್ಬಾ ಅಂದರೆ ಐದು ಅಡಿ ಎತ್ತರ ಇದ್ದರು. ಇವರ ಬೊಚ್ಚು ಬಾಯಿ ಸದಾ ಎಲೆ ಅಡಿಕೆಯ ಕೆಂಪಿನಿಂದ ಕೆಂಪಾಗಿರುತ್ತಿತ್ತು. ದುಂಡು ಮುಖ. ಅದರಲ್ಲಿ ಸದಾ ನಗುವಿನ ತೇರು. ರವಷ್ಟೂ ಅಕ್ಷರ ಜ್ಞಾನವಿರಲಿಲ್ಲ. ಹಿಂಗಿದ್ದರೂ ಈ ಚಿಕ್ಕಣ್ಣಜ್ಜ ಚಿಕ್ಕಂದಿನಲ್ಲಿ ನನಗೊಂದು ಸೋಜಿಗವಾಗಿದ್ದರು. ಇವರು ನನ್ನ ಅಜ್ಜನ ಪರಮಾಪ್ತ ಗೆಳೆಯರಲ್ಲಿ ಒಬ್ಬರಾಗಿದ್ದರು. ಹಂಗಾಗಿ ಈ ಅಜ್ಜನ ಮೈಯ್ಯಲ್ಲಿ ಕೊನೆಗಾರಿಕೆ ಮಾಡುವ ಸತುವಿರುವವರೆಗೂ ನಮ್ಮ ತೋಟದ ತೆಂಗಿನ ಮರಗಳಿಗೆ ಬೇರೊಬ್ಬರು ಜವಣಿಗೆ ಎತ್ತಿರಲಿಲ್ಲ.
ನನಗೆ ಚಿಕ್ಕಣ್ಣಜ್ಜ ಇಷ್ಟವಾಗುವುದಕ್ಕೆ ಎರಡು ಕಾರಣಗಳಿದ್ದವು. ಒಂದು-ಅವರು ಪ್ರತೀ ತಿಂಗಳು ನಮ್ಮ ತೋಟಕ್ಕೆ ಕಾಯಿ ಕೀಳಲು ಬರುತ್ತಿದ್ದುದು. ಮತ್ತೊಂದು-ಇವರ ಮೊಮ್ಮಗ ಉಮೇಶ ಅನ್ನುವವನು ಮಿಡ್ಲ್ ಸ್ಕೂಲಿನಿಂದ ಹೈಸ್ಕೂಲಿನವರೆಗೆ ನನ್ನ ಸಹಪಾಠಿಯಾಗಿದ್ದದ್ದು. ಚಿಕ್ಕಣ್ಣಜ್ಜ ಕಾಯಿ ಕೀಳಲು ಬಂದ ಅದೆಷ್ಟೋ ದಿನ ಉಮೇಶನೂ ಸ್ಕೂಲಿಗೆ ಚಕ್ಕರ್ ಹೊಡೆದು ಅಜ್ಜನ ಜೊತೆ ಬರುತ್ತಿದ್ದ. ಅವತ್ತು ನಾನು ಸ್ಕೂಲಿಗೆ ತಪ್ಪಿಸಿಕೊಳ್ಳುತ್ತಿದ್ದೆ. ಇದಕ್ಕಾಗಿ ಮನೆಯಲ್ಲಿ ಏಟುಗಳನ್ನೂ ತಿನ್ನುತ್ತಿದ್ದೆ. ಅಜ್ಜ ಕಾಯಿ ಕೀಳುತ್ತಾ ಮರದಿಂದ ಮರಕ್ಕೆ ಹೋಗುತ್ತಿದ್ದರೆ ನಾನು ಮತ್ತು ಅವನು ಆ ಮರದಿಂದ ದೂರದಲ್ಲಿ ನಿಂತು ಕಾಯಿಗಳು ಬೀಳುವುದನ್ನೇ ನೋಡುತ್ತಾ ಹಂಗೆ ಬೀಳುತ್ತಿದ್ದ ಕಾಯಿಗಳು ಸಿಡಿದು ದೂರ ಹೋದರೆ ಒಂದು ಕಡೆ ಗುಡ್ಡೆ ಹಾಕುತ್ತಿದ್ದೆವು. ಆಗ ಚಿಕ್ಕಣ್ಣಜ್ಜ ಕಾಯಿಗಳನ್ನು ಕೀಳುತ್ತಲೇ ಅದೂ ಇದು ಮಾತನಾಡಿಸಿ ನಗಿಸುತ್ತಿದ್ದರು. ತೋಟದ ಕಾಯಿಗಳನ್ನೆಲ್ಲಾ ಕಿತ್ತು ಮುಗಿದ ಮೇಲೆ ಮಕ್ಕಳಿಗೆ, ಮನೆಯವರಿಗೆ ಹಾಗೂ ಕಾಯಿ ಹೊರಲು ಬಂದಿದ್ದವರಿಗೆ ಅಂತ ಚಿಕ್ಕಣ್ಣಜ್ಜ ಒಳ್ಳೆಯ ಹದದ ಕೆನ್ನಿಂಗ ಎಳ ನೀರುಗಳನ್ನು ಕಿತ್ತು ಹಾಕಿ ನಂತರ ಜವಣಿಗೆಯಿಂದ `ಗರಿ ಕುಡ್ಲನ್ನು’ ಬಿಚ್ಚಿ ತಾನೇ ಆ ಎಳನಿರುಗಳನ್ನು ಕೊಚ್ಚಿ ಕುಡಿಸುತ್ತಿದ್ದರು. ಅದೂ ಹೊಟ್ಟೆ ತುಂಬುವವರೆಗೆ. ಕಡಿಮೆ ಅಂದರೂ ನಾವು ಒಬ್ಬೊಬ್ಬರು ಎರಡೆರಡು ಎಳನೀರುಗಳನ್ನು ಕುಡಿಯುತ್ತಿದ್ದೆವು.
ಆಗ ಈಗಿನಂತೆ ಮರಗಳ ಎತ್ತರ ಸುಮಾರಾಗಿರಲಿಲ್ಲ. ನಮ್ಮಂಥ ಹುಡುಗರು ಕತ್ತೆತ್ತಿ ನೋಡಿದರೆ ಕುತ್ತಿಗೆಯೇ ನೋವು ಬರುವಷ್ಟು ಎತ್ತರದಲ್ಲಿ ಅವುಗಳ ತುದಿಗಳು ಕಾಣುತ್ತಿದ್ದವು. ಅವುಗಳಲ್ಲಿ `ಅಳ್ಳು ಮರ’ಗಳು ಅಂತ ಕರೆಸಿಕೊಳ್ಳುತ್ತಿದ್ದ ಮರಗಳಂತೂ ಎಲ್ಲಾ ಮರಗಳಿಗಿಂತ ಮತ್ತೂ ಎತ್ತರಕ್ಕಿರುತ್ತಿದ್ದವು. ತೆಂಗಿನ ಸಸಿಗಳನ್ನು ಮಾಡಲು ಇಂಥ ಅಳ್ಳು ಮರಗಳ ಕಾಯಿಗಳನ್ನು ಮಾತ್ರ ಬಳಸುತ್ತಿದ್ದರು. ಅದೇ ರೀತಿ ಇಂಥ ಮರಗಳಿಂದ ಕಾಯಿಗಳನ್ನು ಕೀಳಲು ಮಾಮೂಲಿ ಜವಣಿಗೆಗೆ `ತಲುಪು’ ಹಾಕಿಕೊಳ್ಳಬೇಕಾಗುತ್ತಿತ್ತು. ಕೆಲವು ಸಾರ್ತಿ ಎರಡೆರಡು `ತಲುಪು’ ಹಾಕಿಕೊಳ್ಳಬೇಕಾಗುತ್ತಿತ್ತು. ಹೀಗೆ ತಲುಪು ಹಾಕಿಕೊಂಡ ಜವಣಿಗೆಯನ್ನು ಆ ಎತ್ತರದ ಮರದ ತುದಿಯವರೆಗೂ ತಲುಪಿಸಿ ಒಂಚೂರೂ ವ್ಯತ್ಯಾಸ ಆಗದ ಹಾಗೆ ಅದರಲ್ಲಿ `ಬಂದಿರುವ’ ಗೊನೆಗಳಿಗೆ ಕುಡ್ಲನ್ನು ಹಾಕಿ ಕಾಯಿಗಳನ್ನು ಕೀಳುತ್ತಿದ್ದ ಚಾಕಚಕ್ಯತೆಯನ್ನು ಈ ಅಜ್ಜನಲ್ಲಿ ಕಂಡಂತೆ ನಾನು ಇದುವರೆವಿಗೂ ಯಾರಲ್ಲೂ ಕಂಡಿಲ್ಲ. ಇವತ್ತಿನ ಬಹುತೇಕ ಕೊನೆಕಾರರು ಇಂದು ಅಪರೂಪವಾಗಿರುವ ಅಂಥ ಅಳ್ಳು ಮರಗಳ ಸಹವಾಸಕ್ಕೇ ಹೋಗುವುದಿಲ್ಲ. `ಅಯ್ಯೊ ಅವಾಗೇ ಬೀಳ್ತವೆ ಬಿಡಿ,’ ಅಂತ ಜಾರಿಕೊಂಡು ಬಿಡುತ್ತಾರೆ.
ಕೊನೆಕಾರಿಕೆ ಮಾಡಲು ಹೊರಟು ಬರುತ್ತಿದ್ದ ಚಿಕ್ಕಣ್ಣಜ್ಜನ ಹೆಗಲ ಮೇಲೆ ಉದ್ದನೆಯ ಜವಣಿಗಗಳ ಜೊತೆಗೆ ಹಲವು ಬೇರೆ ಬೇರೆ ಅಳತೆಯ ಜವಣಿಗೆಗಳೂ ಇರುತ್ತಿದ್ದವು. ಅವುಗಳಿಗೆ ಎರಡು ಕಡೆ ನಾರಿನ ಹಗ್ಗಗಳನ್ನು ಕಟ್ಟಿ, ಅವುಗಳು ಮೇಲಕ್ಕೆ ಕೆಳಕ್ಕೆ ಜಗ್ಗಾಡಿದರೂ ಯಾವುದೇ ಕಾರಣಕ್ಕೂ ನೆಲಕ್ಕೆ ತಗುಲದಂತೆ ಹೊತ್ತುಕೊಂಡು ಕೈಯ್ಯಲ್ಲಿ ಎರಡು `ಕೊನಕತ್ತಿ’ ಕುಡ್ಲುಗಳನ್ನು ಹಿಡುಕಂಡು ದಾರಿಯಲ್ಲಿ ಸಿಕ್ಕವರೊಂದಿಗೆ ಹರಟಿಕೊಂಡು ಊರಿಂದ ಊರಿಗೆ ಬರುತ್ತಿದ್ದ ಆ ನೋಟವೇ ಸೊಗಸಾಗಿರುತ್ತಿತ್ತು.
ಕಾಯಿ ಕೀಳುವ ಕೆಲಸ ಮುಗಿದ ಮೇಲೆ ಕಾಸಿನ ಜತೆಗೆ ಈಗಿನ ಕೊನೆಕಾರರು ಮನೆಗೆ ತೆಗೆದುಕೊಂಡು ಹೋಗಲು ತೆಂಗಿನ ಕಾಯಿಯ ರಾಶಿಯಲ್ಲಿ ಒಳ್ಳೆಯ ಕಾಯಿಗಳನ್ನು ಜೊತೆಗೆ ಒಂದೆರಡು ಎಳ ನೀರುಗಳನ್ನು ಆರಿಸಿಕೊಳ್ಳುವುದು ವಾಡಿಕೆ. ಆದರೆ ಚಿಕ್ಕಣ್ಣಜ್ಜ ಯಾವತ್ತೂ ಕಾಯಿಗಳನ್ನು ಆರಿಸಿಕೊಳ್ಳುತ್ತಿರಲಿಲ್ಲ. ಬದಲಿಗೆ ಮೂರ್ನಾಲ್ಕು ಎಳ ನೀರುಗಳನ್ನು ಮಾತ್ರ ಆರಿಸಿ `ಜಿಡ್ಡಿ’ ಹಾಕಿಕೊಂಡು ಆ ಜಿಡ್ಡಿಯನ್ನು ಹೆಗಲಲ್ಲಿರುತ್ತಿದ್ದ ಜವಣಿಗೆಯ ಮೇಲೆ ಹಾಕಿಕೊಂಡು ಹೋಗುತ್ತಿದ್ದರು. ಆದರೆ ಹಾಗೆ ಹಾಕಿಕೊಂಡು ಹೋಗುತ್ತಿದ್ದ ಎಳ ನೀರುಗಳು ಯಾವತ್ತೂ ಅಜ್ಜನ ಮನೆ ತಲುಪುತ್ತಲೇ ಇರಲಿಲ್ಲ. ಎದುರಲ್ಲಿ ಸಿಕ್ಕ ಮಕ್ಕಳಿಗೆ ಅದರಲ್ಲೂ ತೋಟವಿರದಿದ್ದ ಮಕ್ಕಳಿಗೆ ಅವುಗಳನ್ನು ತಾವೇ ಕೊಚ್ಚಿ ಕುಡಿಸಿ ಹೋಗುತ್ತಿದ್ದರು. ಹಂಗಾಗಿ ಕೆಲವೊಮ್ಮೆ ಅವು ನಮ್ಮ ಊರಿನ ಗಡಿಯನ್ನೂ ದಾಟುತ್ತಿರಲಿಲ್ಲ.
ಒಂದು ದಿನವೂ ಬಿಡುವಿಲ್ಲದಂತೆ ಈ ಕಾಯಕವನ್ನು ಮಾಡುತ್ತಿದ್ದ ಚಿಕ್ಕಣ್ಣಜ್ಜನವರಿಗೆ ಅಸಾಧ್ಯ ನೆನಪಿನ ಶಕ್ತಿಯಿತ್ತು. ತಾವು ಕಾಯಕ ಮಾಡುತ್ತಿದ್ದ ಪ್ರತಿಯೊಂದು ತೋಟದ ಮರ ಮರದ ಗುರುತೂ ಅವರಿಗಿರುತ್ತಿತ್ತು. ಆ ಮರಗಳಲ್ಲಿ ಕಳೆದ ಸಾರ್ತಿ ಯಾವ ಕಡೆಯ ಗೊನೆಗಳನ್ನು ಕಿತ್ತಿದ್ದೆ, ಈ ಸಾರ್ತಿ ಯಾವ ಗೊನೆಗಳು ಬಂದಿವೆ ಅಂತ ನೋಡಿದದ ತಕ್ಷಣ ಅವರಿಗೆ ಗೊತ್ತಾಗುತ್ತಿತ್ತು. ಆವಣಿಗೆ ಎತ್ತುತ್ತಲೇ ಸೀದಾ ಆ ಗೊನೆಗೇ ಜವಣಿಗೆ ಹಾಕುತ್ತಿದ್ದರು. ಅಲ್ಲದೆ ಅಕಸ್ಮಾತ್ ತಾವು ಕೀಳಬೇಕಾಗಿದ್ದ ಗೊನೆಯಲ್ಲಿ ಒಂದು ಕಾಯಿ ಮುಕ್ಕಾಗಿದ್ದರೂ ಸಹ ಅದು ಅವರಿಗೆ ಗೊತ್ತಾಗಿಬಿಡುತ್ತಿತ್ತು. ಹಂಗಾಗಿಯೇ ಕೆಲವೊಮ್ಮೆ ತೋಟಗಳ ಮಾಲೀಕರಿಗೆ ತಮ್ಮ ತೋಟದಲ್ಲಿ ಕಾಯಿಗಳ ಕಳ್ಳತನವಾಗಿರುವುದನ್ನು ಚಿಕ್ಕಣ್ಣಜ್ಜನೇ ತಿಳಿಸುತ್ತಿತ್ತು. ಚಿಕ್ಕಣ್ಣಜ್ಜ ತೆಂಗಿನ ಕಾಯಿಗಳಿಗೆ `ಮುಕ್ಕಣ್ಣೇಶ್ವರ’ ಅಂತ ಕರೆಯುತ್ತಿದ್ದರು. `ಮುಕ್ಕಣ್ಣೇಶ್ವರನ್ನ ಕದ್ದೋರಿಗೆ ಒಳ್ಳೇದಾಗಲ್ಲ ಬಿಡಿ,’ ಅಂತ ಕಾಯಿಗಳನ್ನು ಕಳೆದುಕೊಂಡು ಸಂಕಟ ಪಡುತ್ತಿದ್ದ ತೋಟದ ಯಜಮಾನನಿಗೆ ಸಮಾಧಾನವನ್ನೂ ಹೇಳುತ್ತಿತ್ತು.
ಚಿಕ್ಕಣ್ಣಜ್ಜ ಹತ್ತಿರತ್ತಿರ ತೊಂಭತ್ತು ವರ್ಷ ಬದುಕಿದ್ದರು. ಕೈಲಾಗುವವರೆಗೂ ತಮ್ಮ ಕೊನೆಗಾರಿಕೆಯನ್ನು ಬಿಟ್ಟಿರಲಿಲ್ಲ. ಹಂಗೆಯೇ ಇವರು ತಮ್ಮ ಕಾಯಕ ನಿಷ್ಟೆ ಮತ್ತು ಅಚ್ಚುಕಟ್ಟುತನಕ್ಕೆ ನಮ್ಮ ಸುತ್ತಿನಲ್ಲಿ ತುಂಬಾ ಹೆಸರುವಾಸಿಯಾಗಿದ್ದರು. ಈ ಅಜ್ಜ ಏನಾದರೂ ಖಾಯಿಲೆ ಬಿದ್ದು ತಡವಾದರು ಸರಿ ಅವರೇ ಬರಬೇಕು ಅಂತ ಜನ ಕಾಯುತ್ತಿದ್ದರು. ಇವತ್ತಿಗೂ ಕೂಡಾ ಕೊನೆಕಾರಿಕೆಯ ವಿಷಯ ಬಂದರೆ ಸಾಕು ಹಿರಿ ತಲೆಗಳ ನಡುವೆ ಚಿಕ್ಕಣ್ಣಜ್ಜನ ಹೆಸರು ಪ್ರಸ್ತಾಪವಾಗುತ್ತದೆ. ಸಾಯುವುದಕ್ಕೆ ಒಂದೆರಡು ವರ್ಷಗಳಿಗೆ ಮುಂಚೆ ಚಿಕ್ಕಣ್ಣಜ್ಜನವರನ್ನು ನೋಡಲು ಗೋಪಾಲನಹಳ್ಳಿಯ ಆಚೆಯ ದಿಬ್ಬದಲ್ಲಿದ್ದ ಅವರ ಮನೆಗೆ ಹೋಗಿದ್ದೆ. ಆಗಲೇ ಕಣ್ಣುಗಳ ದೃಷ್ಠಿ ಮಂದವಾಗಿ ಹೋಗಿತ್ತು. ಅವರ ಕುಳ್ಳನೆಯ ದೇಹ ಮತ್ತೂ ಕುಗ್ಗಿತ್ತು. ಮೈ ಬಾಗಿತ್ತು. ಕಿವಿ ಪೂರಾ ಮಂದಾಗಿದ್ದವು. ನನ್ನ ಸಹಪಾಟಿಯಾಗಿದ್ದ ಅವರ ಮೊಮ್ಮಗ ಉಮೇಶನ ಸಾವಿನ ನೋವು ಅವರ ಸುಕ್ಕುಗಟ್ಟಿದ್ದ ಮುಖದಲ್ಲಿ ಇನ್ನೂ ಮಡುಗಟ್ಟಿತ್ತು. ನಾನೇ ಮಾತನಾಡಿಸಿ ಪರಿಚಯ ಹೇಳಿದೆ. ಆಗ ಅವರ ಕಣ್ಣುಗಳಲ್ಲಿ ಹರಿದಾಡಿದ ಅ ಮಿಂಚು, ಅವರ ಮುಖದಲ್ಲಿ ಮೂಡಿದ ಆ ಪ್ರಸನ್ನ ಭಾವ ಇದನ್ನು ಬರೆಯುತ್ತಿರುವ ಈ ಹೊತ್ತಿನಲ್ಲೂ ನನ್ನ ಕಣ್ಣ ಮುಂದೆ ಸುಳಿದಾಡುತ್ತಿದೆ. `ಲೇ ಮಗಾ, ಉಮೇಶ ಹೋಗ್ಬಿಟ್ಟ ಕಣಪ್ಪಾ,’ ಅಂತ ಅಂದು ಅವರು ಆಡಿದ ಆ ಮಾತುಗಳು ಈಗಲೂ ನನ್ನ ಕಿವಿಗಳಿಗೆ ಕೇಳಿಸುತ್ತಿವೆ.
*****
ಹಿಂಗೆ ಕೊನೆಕಾರಿಕೆಯನ್ನೇ ತನ್ನ ಬದುಕಿನ ಕಾಯಕವಾಗಿಸಿಕೊಂಡಿದ್ದ ಚಿಕ್ಕಣ್ಣಜ್ಜನಂತೆ ನನ್ನ ಸ್ಮೃತಿಯಲ್ಲಿ ಜೀವಂತವಾಗಿರುವ ಮತ್ತೊಬ್ಬರಿದ್ದಾರೆ. `ಅವ್ರು ಎಂಥಾ ಕೆಲಸಾನೆ ಮಾಡಿರ್ಲಿ, ಅದು ಒಳ್ಳೆಯದೋ ಕೆಟ್ಟದ್ದೋ, ಜನ ಅದನ್ನ ಬೇಗ ಮರೆತು ಬಿಡ್ತಾರೆ’ ಅನ್ನುವ ಮಾತು ಸರ್ವೇ ಸಾಮಾನ್ಯ. ಆದರೆ ಇಂಥ ಮಾತನ್ನು ಸುಳ್ಳಾಗಿಸುವಂತೆ ಕೆಲವರು ಜನರ ಎದೆಯಲ್ಲಿ ಶಾಶ್ವತವಾಗಿ ನಿಂತುಬಿಡುತ್ತಾರೆ. ಇದಕ್ಕೆ ಕಾರಣ ಇಂಥವರುಗಳ ದಣಿವರಿಯದ ಕಾಯಕ ಹಾಗೂ ಜನಪರ ಕಾಳಜಿಗಳು. ಇಂಥ ಗುಣದ ಡಾಕ್ಟರೊಬ್ಬರು ನನ್ನ ಚಿಕ್ಕಂದಿನಲ್ಲಿ ನಮ್ಮ ಪಕ್ಕದ ಊರು ಶೆಟ್ಟೀಕೆರೆಯಲ್ಲಿದ್ದರು. ಇವರ ಹೆಸರು ತೋಪಯ್ಯ. ಆದರೆ ಜನರಿಗೆ ಮಾತ್ರ ಯಾವತ್ತೂ ಡಾಕ್ಟರ್ ತೋಪಯ್ಯ ಆಗಿದ್ದವರು. ಇಂದಿಗೂ ನನ್ನ ಸುತ್ತಲ ಹಳ್ಳಿಗಳಲ್ಲಿ ಇವರನ್ನು ನೆನಪಿಸಿಕೊಳ್ಳುತ್ತಾರೆ. ಇದಕ್ಕೆ ಇವರು ಡಾಕ್ಟರ್ ಕೆಲಸವನ್ನು ಮಾಡುತ್ತಲೇ ಸಮಾಜದ ಒಳಿತಿಗಾಗಿ ಯೋಚಿಸಿದ್ದೂ ಹಾಗೂ ಅದಕ್ಕಾಗಿ ಪೂರಾ ತೆತ್ತುಕೊಂಡದ್ದು. ಆ ಕಾಲಕ್ಕೇ ಎಂ.ಬಿ.ಬಿ.ಎಸ್ ಓದಿ ಡಾಕ್ಟರಾಗಿದ್ದರೂ ತೋರಿಕೆಯ ಗುಣವಿರದ ಅವರ ನಡೆ ಅಕ್ಷರ ಜ್ಞಾನ ಮತ್ತು ಸಮಾಜದ ಸ್ಥಿತಿಗತಿಗಳ ಸಾಮಾನ್ಯ ಅರಿವು ಒಂದಾದೊಡೆ ಆಗಬಹುದಾದ ಪರಿಣಾಮ ಹಾಗೂ ಬದಲಾವಣೆಗೆ ಇವರು ಬಲು ದೊಡ್ಡ ಮಾದರಿಯಂತಿದೆ.
ನಮ್ಮ ಪಕ್ಕದ ಊರು ಶೆಟ್ಟೀಕೆರೆಯ ಪ್ರೈಮರಿ ಹೆಲ್ತ್ ಸೆಂಟರ್ಗೆ ತೋಪಯ್ಯನವರು ಡಾಕ್ಟರಾಗಿ ಬಂದಾಗ ಅದಕ್ಕೆ ಒಂದು ಕಟ್ಟಡವೇ ಇರಲಿಲ್ಲವಂತೆ. ಎಲ್ಲೋ ಯಾರದೋ ಮನೆಯಲ್ಲಿ ನಡೆಯುತ್ತಿದ್ದ ಸರ್ಕಾರಿ ಆಸ್ಪತ್ರೆಗೆ ಮೊಟ್ಟ ಮೊದಲು ಒಂದು ಸ್ವಂತ ಕಟ್ಟಡ ಆಗಬೇಕೆಂದು ಸರ್ಕಾರದ ಗಮನಕ್ಕೆ ತಂದು ಸರ್ಕಾರದ ಸಹಾಯದ ಜೊತೆಗೆ ಜನರನ್ನೆಲ್ಲಾ ಒಗ್ಗೂಡಿಸಿಕೊಂಡು ಖುದ್ದು ತಾವೇ ಮುಂದು ನಿಂತು ಕಟ್ಟಡದ ಉಸ್ತುವಾರಿಕೆ ಮಾಡಿ ಆಸ್ಪತ್ರೆಗೊಂದು ಸ್ವರೂಪ ಕೊಟ್ಟಿದ್ದಾರೆ. ನಂತರ ಅದು ಹೇಳಿ ಕೇಳಿ ಹಳ್ಳಿಗಾಡಾಗಿದ್ದರಿಂದ ಹಾಗೂ ಆಗ ಈಗಿನಂತೆ ವಾಹನಗಳ ಸೌಲಭ್ಯ ಇರದಿದ್ದುದರಿಂದ ಹೆಣ್ಣುಮಕ್ಕಳ ಹೆರಿಗೆಗೆ ಹಾಗೂ ಅಲ್ಲೇ ಉಳಿಸಿಕೊಂಡು ಉಪಚರಿಸಬೇಕಾದಂಥ ರೋಗಿಗಳಿಗಾಗಿ ಮತ್ತೊಂದೆರಡು ವಾರ್ಡ್ಗಳನ್ನು ಆ ಕಾಲಕ್ಕೇ ಸಾರ್ವಜನಿಕ ವಂತಿಗೆಯಿಂದ ಕಟ್ಟಿಸಿದ್ದಾರೆ.
`ಯಾರು ಎಲ್ಲಿ ಉಳಿಯುತಾರೋ ಗೊತ್ತಿಲ್ಲ, ಆದ್ರೆ ಡಾಕ್ಟರ್ಗಳಾದ ನಾವು ಎಲ್ಲಿ ಕೆಲಸ ಮಾಡ್ತೇವೋ ಅಲ್ಲೇ ಉಳಿಯಬೇಕು. ಡಾಕ್ಟರು ಅನಿಸಿಕೊಂಡವರು ಯಾವಾಗ ಅಂದ್ರೆ ಆವಾಗ ಜನರ ಕೈಗೆ ಸಿಗುವಂತಿರಬೇಕು,’ ಅಂತ ಹೇಳುತ್ತಿದ್ದ ತೋಪಯ್ಯನವರಿಗೆ ಡಾಕ್ಟರಿಗಾಗಿ ಒಂದು ಕ್ವಾರ್ಟರ್ಸ್ ಬೇಕೇಬೇಕು ಅನಿಸಿದ್ದೇ ತಡ ಮತ್ತೆ ಅದೇ ಜನರನ್ನ ಜೊತೆಗಾಕಿಕೊಂಡು ಸುತ್ತಲ ಹಳ್ಳಿಗಳಲ್ಲೆಲ್ಲಾ ಓಡಾಡಿ ಮತ್ತೊಂದಿಷ್ಟು ಹಣವನ್ನು ಎತ್ತಿ ಕ್ವಾರ್ಟರ್ಸ್ ಕಟ್ಟಿಸಿದ್ದಾರೆ. ಆಗ ಕೊಡಲು ಕಾಸಿಲ್ಲದವರು ತಮ್ಮ ಮನೆಗಳಲ್ಲಿದ್ದ ಮರ ಮುಟ್ಟುಗಳನ್ನೋ ಅದೂ ಇಲ್ಲದವರು ಕಟ್ಟಡದ ಕೆಲಸದಲ್ಲಿ ಭಾಗಿಯಾಗುವ ಮೂಲಕವೋ ತೊಡಗಿಸಿಕೊಂಡಿದ್ದಾರೆ. ಅದು ರೆಡಿಯಾಗುತ್ತಿದ್ದಂತೆಯೇ ತಮ್ಮ ಸಂಸಾರವನ್ನು ಅಲ್ಲಿಗೆ ಕರೆ ತಂದ ತೋಪಯ್ಯನವರು ನಂತರ ತಮ್ಮ ಡಾಕ್ಟರಿಕೆ ಜೊತೆಗೆ ಅಲ್ಲಿನ ಇತರ ಸಮಸ್ಯೆಗಳತ್ತ ಗಮನ ಹರಿಸ ತೊಡಗಿದ್ದಾರೆ.
ಇಂಥ ಇವರ ಕಾಳಜಿಯ ಫಲವಾಗಿ ಶೆಟ್ಟೀಕೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಶಿಕ್ಷಣ ಸಂಸ್ಥೆಯೊಂದನ್ನು ಹುಟ್ಟಿಕೊಂಡಿದೆ. ಅದುವರೆವಿಗೂ ಶೆಟ್ಟೀಕೆರೆಯಲ್ಲಿ ಇದ್ದುದು ಏಳನೆಯ ತರಗತಿಯವರೆಗಿನ ಮಿಡ್ಲ್ ಸ್ಕೂಲು ಮಾತ್ರ. ಏಳನೆಯ ಕ್ಲಾಸು ಪಾಸಾದವರಲ್ಲಿ ಕೆಲವರು ಅದರಲ್ಲೂ ಸ್ಥಿತಿವಂತರು ಮಾತ್ರ ತಾಲ್ಲೂಕು ಕೇಂದ್ರದ ಚಿಕ್ಕನಾಯಕನಹಳ್ಳಿಯಲ್ಲಿದ್ದ ಹೈಸ್ಕೂಲಿಗೆ ಹೋಗುತ್ತಿದ್ದರು. ಉಳಿದವರು ಅಷ್ಟಕ್ಕೇ ಓದುವುದನ್ನು ನಿಲ್ಲಿಸಿಬಿಡುತ್ತಿದ್ದರು. ಆಗ ಇಡೀ ತಾಲ್ಲೂಕಿಗೆ ಇದ್ದದ್ದು ಒಂದೇ ಒಂದು ಹೈಸ್ಕೂಲು. ಹೀಗೆ ಬಡವರ ಮಕ್ಕಳು ಅರ್ಧಕ್ಕೇ ಓದು ನಿಲ್ಲಿಸುವುದನ್ನು ಕಂಡ ತೋಪಯ್ಯನವರು ಒಂದು ದಿನ ಸುತ್ತಮುತ್ತಲ ಗ್ರಾಮಸ್ಥರನ್ನೆಲ್ಲಾ ಒಂದೆಡೆ ಸೇರಿಸಿ ಅವರುಗಳಿಗೆಲ್ಲಾ ವಿದ್ಯಾಭ್ಯಾಸದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟು ಅದೇ ಜನರಿಂದ ಲೋಕಲ್ ಕಮಿಟಿಯೊಂದನ್ನು ರಚಿಸಿ ಆ ಮೂಲಕ 1962ರಲ್ಲಿ `ಜನತಾ ಶಿಕ್ಷಣ ಸಂಘ’ಎಂಬ ಶಿಕ್ಷಣ ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದಾರೆ. ನಂತರ ಅದರ ಮರು ವರ್ಷವೇ ಅಂದರೆ 1963ರಲ್ಲಿ `ಜನತಾ ಪ್ರೌಢಶಾಲೆ’ಯನ್ನು ಪ್ರಾರಂಭಿಸಿದ್ದಾರೆ. ಹೆಸರೇ ಹೇಳುವಂತೆ ಇಡೀ ಸ್ಕೂಲಿನ ಕಟ್ಟಡವನ್ನು ಜನರಿಂದಲೇ ಕಟ್ಟಿಸಿ ಜನರಿಗಾಗಿಯೇ ಪ್ರಾರಂಭಗೊಂಡ ಈ ಸ್ಕೂಲು ಹಳ್ಳಿ ಮಕ್ಕಳಿಗೆ ಅದರಲ್ಲೂ ಬಡವರ ಮಕ್ಕಳಿಗೆ ಒಂದು ವರದಾನವಾಗಿ ಹೋಯ್ತು. ಇದರಲ್ಲಿ ಓದಿದ ಅದೆಷ್ಟೋ ಬಡವಿದ್ಯಾರ್ಥಿಗಳು ಇಂದು ದೊಡ್ಡ ದೊಡ್ಡ ಉದ್ಯೋಗ ಮಾಡುತ್ತಿದ್ದಾರೆ. ನಿವೃತ್ತರಾಗಿದ್ದಾರೆ. `ಇಲ್ಲಿ ಓದಿದ ವಿದ್ಯಾರ್ಥಿಗಳು ತಾವು ಸ್ಕೂಲು ಬಿಟ್ಟು ಹೋಗುವುದರೊಳಗೆ ಇದನ್ನು ಯಾವತ್ತೂ ಪ್ರೀತಿಸುವಂತಿರಬೇಕು. ಅದೇ ರೀತಿ ಮುಂದೊಂದು ದಿನ ಇಲ್ಲಿ ಓದಿದ ಮಕ್ಕಳೇ ಈ ಸ್ಕೂಲನ್ನು ನಡೆಸುವಂತಾಗಬೇಕು. ಅದಕ್ಕಾಗಿ ಮೇಸ್ಟ್ರುಗಳಾದವರು ಓದಿನ ಜೊತೆಗೆ ಅಂಥದ್ದೊಂದು ವಾತಾವರಣವನ್ನು ಮಕ್ಕಳಿಗೆ ಒದಗಿಸಬೇಕು’ಅಂತ ಹೇಳುತ್ತಿದ್ದರಂತೆ ತೋಪಯ್ಯನವರು.
ತೋಪಯ್ಯನವರು ಎಲ್ಲೆಲ್ಲಿ ಡಾಕ್ಟರಾಗಿ ಕೆಲಸ ಮಾಡಿದ್ದಾರೋ ಅಲ್ಲೆಲ್ಲಾ ತಮ್ಮ ಡಾಕ್ಟರ್ ಕೆಲಸದ ಜೊತೆಗೆ ಹೀಗೆ ಹತ್ತು ಹಲವು ಸಮಾಜದ ಕೆಲಸಗಳನ್ನು ಮಾಡಿದ್ದಾರೆ. ಕೇವಲ ಡಾಕ್ಟರಷ್ಟೇ ಆಗದೆ ಅದರ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ಇಂಥ ಅಪರೂಪದ ವ್ಯಕ್ತಿತ್ವದ ತೋಪಯ್ಯನವರದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕತ್ರಿಘಟ್ಟದವರು. `ಎಲ್ಲದಕ್ಕೂ ಸರ್ಕಾರವನ್ನೇ ನಂಬಿ ಕೂರುವುದು ಮೂರ್ಖತನ. ನಾವು ನಮ್ಮ ನಮ್ಮ ಕೈಯ್ಯಿಂದ ಏನೇನು ಮಾಡೋಕೆ ಸಾಧ್ಯ ಆಗುತ್ತೋ ಅದನ್ನೆಲ್ಲಾ ಮಾಡುತ್ತಾ ಹೋಗಬೇಕು’ ಅನ್ನುತ್ತಿದ್ದ ತೋಪಯ್ಯನವರು`ಸಹಕಾರ ತತ್ವ’ದಲ್ಲಿ ಅಪಾರ ನಂಬಿಕೆ ಇಟ್ಟಿದ್ದರು. ಇವರ ಇಂಥ ನಂಬಿಕೆಯೇ ಶೆಟ್ಟೀಕೆರೆಯಂಥ ಹಳ್ಳಿಯಲ್ಲಿ ಆ ಕಾಲಕ್ಕೆ ಜನ ಒಂದಾದರೆ ಏನೆಲ್ಲಾ ಮಾಡಬಹುದು ಅನ್ನುವುದಕೆ ಬಲು ದೊಡ್ಡ ಸಾಕ್ಷಿಯಾಗಿದೆ.
ಜನರಿಗೆ ಇವರ `ಕೈಗುಣ’ದ ಬಗೆಗಿನ ನಂಬಿಕೆ ಎಷ್ಟರ ಮಟ್ಟಿಗಿತ್ತೆಂದರೆ ಅವರು ಶೆಟ್ಟೀಕೆರೆಯಿಂದ ವರ್ಗವಾಗಿ ಹೋದ ಮೇಲೆಯೂ ಕೆಲವರು ಏನೇ ತೊಂದರೆ ಆದರೂ ಅವರಿರುವಲ್ಲಿಗೇ ಹೋಗಿ ತೋರಿಸಿಕೊಂಡು ಬರುತ್ತಿದ್ದರು. ಅಲ್ಲಿಗೆ ಹೋಗಲಾರದ ವಯಸ್ಸಾದವರು ತಮ್ಮ ಮಕ್ಕಳಿಗೋ, ಮೊಮ್ಮಕ್ಕಳಿಗೋ ಡಾಕ್ಟರನ್ನು ಹೋಗಿ ಕಂಡು ಔಷಧಿಗಳನ್ನು ತಂದು ಕೊಡುವಂತೆ ಗೋಗರೆಯುತ್ತಿದ್ದರು. ಕೆಲವರು ಹೋಗಿ ತಂದರೆ ಮತ್ತೆ ಕೆಲವರು ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅವರು `ಇದು ತೋಪೇಗೌಡ್ರು ಕೊಟ್ಟ ಔಷಧೀನೇ ತಗಾ,’ ಅಂತ ಸುಳ್ಳು ಹೇಳಿ ನಂಬಿಸಿ ತಪ್ಪಿಸಿಕೊಳ್ಳುತ್ತಿದ್ದರು. ಹಂಗಾಗಿ ತೋಪಯ್ಯನವರು ಎಲ್ಲಿಗೇ ಹೋದರೂ ತಾವು ಹಿಂದೆ ಕೆಲಸ ಮಾಡಿದ ಊರುಗಳಿಂದಲೂ ಜನ ಅವರನ್ನು ಕಾಣಲು ಹೋಗುತ್ತಿದ್ದರು. ಅವರೂ ಅಷ್ಟೇ ಆ ಜನರ ಒಡನಾಟವನ್ನು ಯಾವತ್ತೂ ಕಡಿದುಕೊಂಡಿರಲಿಲ್ಲ. ಅವರುಗಳ ಪ್ರೀತಿ, ವಿಶ್ವಾಸಗಳಿಗೆ ಯಾವತ್ತೂ ಧಕ್ಕೆ ತಂದುಕೊಂಡಿರಲಿಲ್ಲ. `ಹಳ್ಳಿಗಳಿಗೆ ಡಾಕ್ಟರುಗಳ ಅಗತ್ಯ ತುಂಬಾ ಇದೆ. ಎಲ್ಲಾ ನಗರದಲ್ಲೇ ಕೆಲಸ ಮಾಡ್ತಿವಿ ಅಂದ್ರೆ ಹೆಂಗೆ,’ ಅಂತ ಹಳ್ಳಿಗಳನ್ನು ಕಂಡರೆ ಮೂಗು ಮುರಿಯುತ್ತಿದ್ದವರಿಗೆ ಆ ಕಾಲಕ್ಕೇ ಹೇಳುತ್ತಿದ್ದರಂತೆ ತೋಪಯ್ಯನವರು. ಅದೇ ರೀತಿ, ತಾವು ಆಡಿದ ಮಾತಿನಂತೆ ತಮ್ಮ ಬಹುತೇಕೆ ಸೇವೆಯನ್ನು ಹಳ್ಳಿಗಾಡಿನಲ್ಲೇ ಕಳೆದಿದ್ದಾರೆ.

ಹಿಂಗೆ ತಮ್ಮ ಕಾಯಕದ ಮೂಲಕ ಅಪಾರ ಕಾಳಜಿಯ ಮೂಲಕ ಡಾಕ್ಟರಿಕೆಗೇ ಒಂದು ಅತ್ಯುನ್ನತ ಮಾದರಿಯಾಗಿದ್ದ ತೋಪಯ್ಯನವರನ್ನು ನಾನು ನೋಡಿರಲಿಲ್ಲ. ನನಗೆ ಬುದ್ಧಿ ಬರುವ ಹೊತ್ತಿಗೆ ಅವರಾಗಲೇ ಶೆಟ್ಟೀಕೆರೆಯನ್ನು ಬಿಟ್ಟು ತುಂಬಾ ವರ್ಷಗಳೇ ಕಳೆದಿದ್ದವು. ಇಂಥ ತೋಪಯ್ಯನವರು ಕಟ್ಟಿ, ಬೆಳಸಿ ಕೆಲಸ ಮಾಡಿ ಹೋಗಿದ್ದ ಜಾಗದಲ್ಲಿ ಮತ್ತೊಬ್ಬರು ಡಾಕ್ಟರ್ ಇದ್ದರು. ಅವರ ಹೆಸರು ಮರೆತು ಹೋಗಿದೆ. ನಾನಾಗ ಮೈಸೂರಿನಲ್ಲಿ ಎರಡನೇ ವರ್ಷದ ಡಿಗ್ರಿ ಓದುತ್ತಿದ್ದೆ. ಆ ಸಲದ ದಸರಾ ರಜೆಗೆಂದು ಊರಿಗೆ ಬಂದಿದ್ದವನಿಗೆ ಚಳಿ, ಜ್ವರ ಬಂದಿತ್ತು. ಒಂದೆರಡು ದಿನವಾದರೂ ಜ್ವರ ಬಿಟ್ಟಿರಲಿಲ್ಲ. ಆ ಕಾರಣಕ್ಕೆ ಶೆಟ್ಟೀಕೆರೆಯ ಈ ಆಸ್ಪತ್ರೆಗೆ ತೋರಿಸಲೆಂದು ಹೋಗಿದ್ದೆ. ಆಗ ಇದ್ದ ಈ ಡಾಕ್ಟರ್ ಪರೀಕ್ಷಿಸಿ ಆದ ಮೇಲೆ ಒಂದು ಇಂಜೆಕ್ಷನ್ ಕೊಟ್ಟು `ಬಿಡದಿದ್ರೆ ನಾಳಿಕಿಲ್ಲ ನಾಡಿದ್ದು ಬಾ’ ಅಂತ ಹೇಳಿ ತಾನು ಕೊಟ್ಟಿದ್ದ ಇಂಜೆಕ್ಷನ್ನಿನ ಬಾಬ್ತು ಎರಡೂವರೆ ರೂಪಾಯಿಯನ್ನು ಕೊಡುವಂತೆ ಕೇಳಿದ್ದರು. ಚಿಲ್ಲರೆ ಇಲ್ಲದ ಕಾರಣಕ್ಕೆ ಐದು ರೂಪಾಯಿಯ ನೋಟು ಕೊಟ್ಟಿದ್ದೆ. ಅವರೂ ಜೇಬಲ್ಲೆಲ್ಲಾ ತಡಕಾಡಿದರು. ಚಿಲ್ಲರೆ ಸಿಗಲಿಲ್ಲ. ಮತ್ತೆ ಬಂದಾಗ ಕೊಡ್ತೀನಿ ಅಂತ ಹೇಳಿದ್ದರಾಗಿತ್ತು ಆ ಪುಣ್ಯಾತ್ಮ. ಅದರ ಬದಲಿಗೆ `ಒಂದು ಕೆಲ್ಸ ಮಾಡು. ಇನ್ನೊಂದು ಇಂಜೆಕ್ಷನ್ ಕೊಡ್ತೀನಿ ತಗಂಡುಬಿಡು. ಅಲ್ಲಿಗೆ ಐದು ರೂಪಾಯಿ ಸರಿಯಾಗುತ್ತೆ’ ಅಂದುಬಿಟ್ಟಿದ್ದರು. ನನಗೆ ಗಾಬರಿಯಾಗಿಹೋಗಿತ್ತು. `ಹಂಗಾದ್ರೆ ಈ ಮನುಷ್ಯ ಮುಂಚೆ ಕೊಟ್ಟಿದ್ದು ಏನು?’ ಅನ್ನುವ ಅನುಮಾನ ಶುರುವಾಗಿ, ಮತ್ತೊಮ್ಮೆ ಅವರಿಂದ ಇಂಜೆಕ್ಷನ್ ತಗಳ್ಳಲು ಭಯವಾಗಿ `ಪರ್ವಾಗಿಲ್ಲ ಬಿಡಿ ಸಾರ್’ ಅಂತ ಹೇಳಿ ಅಲ್ಲಿಂದ ಹೊರಟು ಬಂದಿದ್ದೆ. ಮತ್ತೆ ಇನ್ಯಾವತ್ತು ಅವರು ಇರುವವರೆಗೂ ಅತ್ತ ನಾನು ಮಾತ್ರ ಹೋಗಲಿಲ್ಲ. ಅಲ್ಲಿಗೆ ಹೋಗುವವರನ್ನು ಎಚ್ಚರಿಸಿದ್ದೆ. ಇಂದಿಗೂ ಶೆಟ್ಟೀಕೆರೆಯಲ್ಲಿ ಈ ಆಸ್ಪತ್ರೆಯನ್ನು ನೋಡಿದಾಗಲೆಲ್ಲಾ ತೋಪಯ್ಯನವರ ಜತೆ ಈ ಎರಡೂವರೆ ರೂಪಾಯಿಯ ಚಿಲ್ಲರೆ ಡಾಕ್ಟರೂ ನೆನಪಾಗುತ್ತಾರೆ!
****
ಜವಣಿಗೆ: ಕಾಯಿ ಕೀಳಲು ಬಳಸುವ ರೋಟಿಕಡ್ಡಿ ಅಥವಾ ಗಳ.
ಕೊನಕತ್ತಿ ಕುಡ್ಲು: ರೋಟಿ ಕುಡ್ಲು, ಗರಿ ಕುಡ್ಲು, ಕಾಯಿ ಕೀಳಲು ರೋಟಿಕಡ್ಡಿಯ ತುದಿಗೆ ಕಟ್ಟುವ ಕುಡ್ಲು.
ತಲುಪು ಹಾಕು: ಎತ್ತರದ ಮರದ ಕಾಯಿಗಳನ್ನು ಎಟಕಿಸಿಕೊಳ್ಳುವ ಸಲುವಾಗಿ ಒಂದು ರೋಟಿ ಕಡ್ಡಿಗೆ ಮತ್ತೊಂದು ರೋಟಿ ಕಡ್ಡಿಯನ್ನು ಕಟ್ಟುವಿಕೆ.
ಅಳ್ಳು ಮರ: ತುಂಬಾ ಎತ್ತರವಾದ ಹಳೆಯ ಮರ. ಇದರ ಕಾಯಿಗಳನ್ನು ಸಾಮಾನ್ಯವಾಗಿ ತೆಂಗಿನ ಸಸಿಗಳನ್ನು ಮಾಡುವ ಬೀಜಗಳಿಗಾಗಿ ಬಳಸಲಾಗುತ್ತೆ.
ಬಂದಿರುವ: ಬಲಿತಿರುವ.
ಜಿಡ್ಡಿ: ಹಿಡಿದುಕೊಳ್ಳಲು ಅನುವಾಗುವಂತೆ ತೆಂಗಿನ ನಾರಿನಿಂದಲೇ ಗಂಟು ಹಾಕುವ ಕಾಯಿಗಳು.
(ಹಿಂದಿನ ಕಂತು: ಚೊಟ್ಟೆ ರಮ್ಮು ಮತ್ತು ದೇವಿ ಪಾತ್ರಧಾರಿ)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

