ಇಲ್ಲಿಯವರೆಗೆ ನಿಸರ್ಗದ ಮಡಿಲಲ್ಲಿ ಮಗುವಿನಂತೆ ಲಾಸ್ಯವಾಡಿದ ಕವನ, ಬೆಳೆದು ಎದ್ದು ನಿಲ್ಲುತ್ತದೆ. ಆಧುನಿಕ ಯುಗದ ಪ್ರಗತಿಯ ಕಡೆಗೆ ಹೊರಳುವ ಸಂಕೇತವಾಗಿ ಗೂಡ್ಸ್ ಉಗಿಬಂಡಿ ಬರುತ್ತದೆ. ರೈಲು ಬರುವುದಕ್ಕೆ ಹೋಗುವುದಕ್ಕೆ ತನ್ನದೇ ಆದ ನಿಯಮವಿದೆ. ಆದರೆ ಇದನ್ನು ಅರಿಯದ ಬಾಲಕರು ಅದರತ್ತ ಓಡಿ ಕೈಯಿಂದ ಸಿಗ್ನಲ್ ಕೊಡುತ್ತಾರೆ. ತಮ್ಮ ಸಂಕೇತಕ್ಕನುಸಾರವಾಗಿ ರೈಲು ಚಲಿಸುತ್ತಿದೆಯೆಂದು ಭಾವಿಸಿ ಸಂಭ್ರಮಿಸುತ್ತಾರೆ. ಈ ಮುಗ್ಧತೆಯನ್ನು ಕಾಪಿಟ್ಟುಕೊಳ್ಳುವದು ಕೂಡ ಕವಿಯ ಲಕ್ಷಣ. ರೈಲು ಹಳಿಗಳನ್ನು ದಾಟಿ ಮುನ್ನಡೆದಾಗ ಸೋಮೇಶ್ವರ ಕಾಣುತ್ತದೆ. ಹೇಗೆ ಕಾಣುತ್ತದೆ?
ದ.ರಾ. ಬೇಂದ್ರೆ ರಚಿತ “ಸಣ್ಣ ಸೋಮವಾರ” ಕವಿತೆಯ ಕುರಿತು ಚನ್ನಪ್ಪ ಅಂಗಡಿ ಬರಹ ನಿಮ್ಮ ಓದಿಗೆ
ಸಣ್ಣ-ಸೋಮವಾರ
ಬಂತಣ್ಣ ಸಣ್ಣ ಸೋಮವಾರ
ಕಾಣಬೇಕಣ್ಣ ಸೋಮೇಶ್ವರ ||ಪಲ್ಲವಿ||
1
ಹಾದಿಗುಂಟ ಚೆಲ್ಲಾಟ
ದಾರಿ ಉದ್ದ ನೀರನೋಟ
ಹಸರಾಣಿ ಬನರಾಣಿ ತ್ವಾಟ;
ಅತ್ತ ಏರೀ ಇತ್ತ ವಾರಿ
ನಡುನಡುವೆ ಕೆರಿ, ಕೆರಿ
ಸುತ್ತುಮುತ್ತು ಪಯಿರಿನ ಮಾಟ.
2
ಮುಗಿಲಾಗ ಮೋಡದ ಹಡಗು
ಎಲ್ಲೆಲ್ಲೂ ಮಿಂಚೂ ಗುಡುಗು
ಚಳಿಗಾsಳಿ ತಂದsರು ನಡುಗು
ಹುಡುಗ ಪಾಳ್ಯಕ್ಕ ಎಲ್ಲಾನು ಬೆಡುಗು.
3
ನಾ ಮುಂದ ನೀ ಮುಂದ
ನಡಿಗೀಯು ತರತರದಿಂದ
ಸಾಲಿsಗೆ ಸೂಟಿ ಎಂಥ ಹ್ವಾರೆ?…
ಕಾಯಿಕಪುರ ಕಟ್ಟಿಕೊಂಡು
ಬೆಲಪತ್ರಿ ಹಿಡಕೊಂಡು
ಸಂಗಾಟ ಫರಾಳ ಬ್ಯಾರೇ.
4
ಧಾರವಾಡ ಸೀಮಿ ಛಂದ
ಏರು ಇಳಿವಿನ ಅಂದ
ಹಬ್ಬ! ಕುಣಿಕೋತ ಹೊರಟಾಂಗ ಕುದುರಿ,
ಮರದಿಂದ ಮರಕ ಹಾರಿ
ಟೊಂಗಿಯಿಂದ ಟೊಂಗಿಗೇರಿ
ಹುಬ್ಬ! ಹಾರsಸತಾವ ಮಂಗ ಬೆದರಿ,
ತಪತಪ ತೊಯ್ದ ಗಿಡ
ಅಲ್ಲಾಡಿ ಟಪಟsಪ
ಅಬ್ಬ! ಬೀಳ್ತಾವ ನೀರಲಹಣ್ಣು ಉದರಿ.
5
ಗುಡ್ಸು ದುಡು ದೂಡು ಬರುತಿತ್ತು ದೂಡಿ
ಸೀಟೀ ಹೊಡೆತಿತ್ತು ದೂರಿಂದ ಗಾಡಿ
ಗೇಟಿನ ಫಜಾರಗಟ್ಟಿಗೋಡಿ ಓಡಿ
ಕೈಯೆ ಸಿಗ್ನಲು ಮಾಡಿ
ಒಬ್ಬರೊಬ್ರ್ನ ನೋಡಿ
ನಾವು! ನಿಲ್ತಿದ್ವಿ ಠೀಕು ಜೋಡಿ ಜೋಡಿ.
6
ತಗ್ಗಿನ್ಯಾಗ ಗಿಡದ ಗುಂಪು
ಹೊಂಡsದ ನೀರ ತಂಪು
ದೂರಿಂದ ಕಂಡರೂ ಸೊಂಪು.
7
ಭಜನೀಯ ಮ್ಯಾಳದ ಧನಿ
ಅಲ್ಲಾ ದೂರಾ ಅಲ್ಲಾ ಸನಿ
ತುಳಕ್ಯಾಡತಾವ ದಿಕ್ಕು ದಿಕ್ಕು.
ತಪ್ಪಿ ಉಳಿದ ಕೋಗಿಲಾ
ನಡುವೇನs ಕೂಗ್ತದ
ಶ್ರಾವಣದ ಝಡಿಯೊಳಗ ಸಿಕ್ಕು.
ಹರಹರ ಮಹಾದೇವಾ
ಈಸಾಡತಾವ ಜೀವಾ.
ಮಾನಸ ಸರೋವರ ಹೊಕ್ಕು.
8
ಗರ್ಭ ಗುಡಿಯೊಳಗ ಲಿಂಗ
ನಿದ್ದಿಯೊಳಗs ನೋಡಿಧಾಂಗ
ಕಣ್ಣು ಮುಚ್ಚತಾವ ನಮೋ ಎಂದು.
ಗವೀಯೊಳಗಿನ ದಾರಿ
ಹರದಾರಿ ಹರದಾರಿ
ಮಿಂಚಿತ್ತು ಚಂದ್ರಕ್ವಾರಿ ಒಂದು.
ನಿಂತs ಮೈಯಾಗಿ ಖಂಬ
ಸರ್ಯಾವ ಜಂಬಗಿಂಬ
ಹಿಡಿದಾನ ಕೈಯ್ಯ ಶಿವನೆ ಬಂದು
9
ಎಚ್ಚರsದಾಗ ಇದು
ಹುಚ್ಚುಚ್ಚಾರ ಅನಿಸಿ
ಎಲ್ಲಾರ ಕೂಡ ಕೈ ಮುಗಿದು
ಬೆಂಡೂ ಬೆತ್ತಾಸ ಅಂತ
ತಿಂತsನ ನುರಿಸಿಕೊಂತ
ಹೋಗತಿದ್ವಿ ಜಾತ್ರಿಗೆ ಜಿಗಿದು.
10
ಶಾಲ್ಮಲಿ ಸಣ್ಣ ಬಾಲಿ
ಕಿವಿಯಲ್ಲಿ ತಾಳೆವಾಲಿ
ಗರಿಗರಿ ಬನದಾಗ ಅಡಗಿ
ಗಂಗಾ ಹೊಳಿಯಾಗಿ
ಸಾಗರ ಬಿದ್ದು ಸಾಗರಕಾಗಿ
ಹೊರಟಾಳ ಗೋಕರ್ಣಕಡಿಗಿ.
ಬೂರಲ ದೀಪಮಾಲಿ
ನಂದಿಸಿ ಸೆಜ್ಜಿಸಾಲಿ
ಗತ್ತಿನ ಸಪ್ಪಳಿಲ್ಲದ ನಡಿಗಿ.
11
ಆ ರಾತ್ರಿ ಈ ರಾತ್ರಿ
ಯಾತರದು ಐತಿ ಖಾತ್ರಿ
ಶಿವರಾತ್ರಿ ಬೆಳಕೆ ಬೆಳ್ಳಬೆಳಗು.
ಒಟ್ಟಿತ್ತು ಏನೋ ಹಾಸ
ತಟ್ಟಿತ್ತು ಶಿವಭಾಸ
ಕೈಲಾಸಾನೆ ಹೊರಗೂ ಒಳಗು.
ಜೀವದ ಜಾಗರಣಿ
ಶ್ರಾವಣದ ಶರಣ ಸರಣಿ
ಓಂಕಾರ ಕಹಳೆಯ ಮೊಳಗು.
12
ಭಾsವಾs ಇದ್ದಾಂಗ ದೇವಾ
ಹೇಳಿದ್ರು ಹಿರಿಯರು
ಅಲ್ಲೇ! ಸುತ್ತಾಡತಾವ ನಮ್ಮ ಖ್ಯಾಲಾ.
ಎಣಿಸಿದರ ಏನೋ ಕನಸ
ಕಂಡ್ಹಾಂಗ ಅನಸ್ತದ
ಕಣ್ಣು! ಆಗ್ತಾವ ಹ್ಯಾಂಗೊ ತೇಲುಮೇಲಾ.
ನೆನಪಿನ ಓರಿಯೊಳಗ
ಮಿಣುಕ್ತಾವ ಎಣ್ಣೀ ದೀಪ
ಎಲ್ಲೆ! ಹೋದಾವೊ ಗೆಳೆಯಾ ಆ ಕಾಲ.
13
ಬಂತಣ್ಣ ಸಣ್ಣ ಸೋಮವಾರಾ
ಕಾಣಬೇಕಣ್ಣ ಸೋಮೇಶ್ವರಾ.
ಬೇಂದ್ರೆಯವರ ‘ಸಣ್ಣ-ಸೋಮವಾರ’ ಅಂದರೆ ಶ್ರಾವಣ ಸೋಮವಾರ ಅವರ ‘ಮುಗಿಲ ಮಲ್ಲಿಗೆ’ (1961) ಕವನ ಸಂಕಲನದಲ್ಲಿದೆ. ಶ್ರಾವಣ ಕುರಿತಾಗಿ ಅವರು ಒಂದು ಡಜನ್ ಕವನಗಳನ್ನು ರಚಿಸಿದ್ದಾರೆ.
ಚಿತ್ತಿ ಮಳೆಯ ಸಂಜೆ (ಸಖೀಗೀತ)
ಶ್ರಾವಣದ ವೈಭವ (ಸಖೀಗೀತ)
ಅಗೋ ಅಲ್ಲಿ ದೂರದಲ್ಲಿ (ನಾದಲೀಲೆ)
ಶ್ರಾವಣದ ಹಗಲು (ಉಯ್ಯಾಲೆ)
ಬಂದಿಕಾರಾ ಶ್ರಾವಣಾ (ಗಂಗಾವತರಣ)
ಶ್ರಾವಣಾ (ಕಾಮಕಸ್ತೂರಿ)
ಪ್ರತಿ ವರ್ಷದಂತೆ ಬಂತು ಶ್ರಾವಣಾ (ಸೂರ್ಯಪಾನ)
ಹುಬ್ಬಿ ಮಳೆ (ಸಂಚಯ)
ಮತ್ತೆ ಶ್ರಾವಣಾ (ನಾಕುತಂತಿ)
ಮತ್ತೆ ಶ್ರಾವಣಾ ಬಂದಾ (ನಾಕುತಂತಿ)
ನಮ್ಮ ಚಿತ್ತಾ (ಶತಮಾನ)
ಶ್ರಾವಣ ಬೇಂದ್ರೆಯವರನ್ನು ಹೇಗೆ ಅವರಿಸಿತ್ತು ಮತ್ತು ಹೇಗೆಲ್ಲಾ ಆವರಿಸುತ್ತೆಂಬುದನ್ನು ಮೇಲಿನ ಕವಿತೆಗಳ ಶೀರ್ಷಿಕೆಗಳೇ ಸೂಚಿಸುತ್ತವೆ. ‘ಶ್ರಾವಣಾ-ಮತ್ತೆ ಶ್ರಾವಣಾ-ಮತ್ತೆ ಶ್ರಾವಣಾ ಬಂದಾ’, ಎನ್ನುವ ಪದಗುಚ್ಛಗಳು, ಬೇಂದ್ರೆಯವರು ಮತ್ತೆ ಮತ್ತೆ ಶ್ರಾವಣದತ್ತ ಹೋಗುತ್ತಿದ್ದಾರೋ ಅಥವಾ ಶ್ರಾವಣವೇ ಮತ್ತೆ ಮತ್ತೆ ಬೇಂದ್ರೆಯವರನ್ನು ಹುಡುಕಿಕೊಂಡು ಬರುತ್ತಿದೆಯೇ ಎಂಬ ಭಾವನೆ ಮಿಂಚಿ ಮರೆಯಾಗುತ್ತದೆ. ಇದು ಉತ್ಪ್ರೇಕ್ಷೆಯ ಮಾತು ಆಗಲಿಕ್ಕಿಲ್ಲ ಎನ್ನುವುದರ ಜೊತೆಗೆ, ತೀರ ಆಶ್ಚರ್ಯಪಡುವ ಸಂಗತಿಯೂ ಅಲ್ಲ ಎನಿಸುತ್ತದೆ, ಬೇಂದ್ರೆಯವರ ವಿಷಯದಲ್ಲಿ.
ಶ್ರಾವಣ ಒಂದು ಮಾಸವಾದಂತೆ, ಕೇಳುವ ಕ್ರಮವೂ ಆಗಿದೆ. ಕವಿ ತನಗೆ ಕೇಳಿದ್ದನ್ನು ಶ್ರಾವಕನಿಗೂ ಕೇಳಿಸಬೇಕಾಗಿದೆ. ಬೇಂದ್ರೆ ಶ್ರಾವಣ ಕವಿತೆಗಳಲ್ಲಿ ಕುಳಿರ್ಗುಟ್ಟುವ ಗಾಳಿ, ಭೋರ್ಗರೆವ ಮಳೆ, ಮುಂತಾದವೆಲ್ಲ ಕೇಳುತ್ತವೆ. ಶ್ರಾವಣ ಬರುವುದು ಮುಂಗಾರು ಹಂಗಾಮಿನಲ್ಲಿ. ಸುತ್ತಣ ಪರಿಸರ ಜೀವಚೈತನ್ಯ ಪಡೆದು ಹಸಿರಾಗಿ ಹಬ್ಬುವ ಕಾಲದಲ್ಲಿ. ಬೇಂದ್ರೆಯಂತ ಪ್ರತಿಭೆಗೆ ಇದು ಕಾಣುತ್ತದೆ ಎನ್ನುವುದಕ್ಕಿಂತ ಆತ ‘ಕಾಣು’ತ್ತಾನೆ ಎಂಬುದು ಹೆಚ್ಚು ಸೂಕ್ತ. ‘ಸಣ್ಣ-ಸೋಮವಾರ’ ಇದಕ್ಕೊಂದು ನಿದರ್ಶನ. ಶಬ್ದವಾಗಿ ಕೇಳುವ ಕವಿತೆಯನ್ನು ದೃಶ್ಯವಾಗಿ ತೋರುವ ಚಿತ್ರಕ ಕಲೆಯಿಂದಾಗಿ ಅವರನ್ನು ‘ಶ್ರಾವಣ ಪ್ರತಿಭೆ’ ಎಂದು ಕರೆದಿರಬಹುದು. ಶ್ರಾವಣ ಪ್ರತಿಭೆ ಕೇವಲ ಶ್ರಾವಣ ಮಾಸದ ದೃಶ್ಯಾವಳಿಗಳನ್ನು ವರ್ಣಿಸುವ ವಿಷಯವಸ್ತುಗಳ ಸುತ್ತ ಗಿರಕಿ ಹೊಡೆಯುವ ಕವಿತ್ವವಲ್ಲ. ಅದು ಬಾಲ್ಯದಲ್ಲಿ ಕಂಡುಂಡ ಶ್ರಾವಣದ ವೈಭವವನ್ನು ಬದುಕಿನ ಸಂಧ್ಯಾ ಕಾಲದಲ್ಲಿ ಜೀವಂತ ಅನುಭವವನ್ನಾಗಿ ಕಟ್ಟಿಕೊಡುವ ಜೈವಿಕ ಪ್ರಕ್ರಿಯೆ. ಅದು ಪಂಚಾಂಗದಲ್ಲಿ ಬಂದು ಹೋಗುವ ಶ್ರಾವಣವಲ್ಲ. ಪಂಚೇಂದ್ರಿಯಗಳಲ್ಲಿ ಪ್ರವಹಿಸುವ ರಕ್ತಗತ ಶ್ರಾವಣ. ಅದಕ್ಕೇ ಸಣ್ಣ ಸೋಮವಾರ ಬದಲಾದ ಕಾಲಘಟ್ಟದಲ್ಲೂ, ಪಲ್ಲಟಗೊಂಡ ಜೀವನ ಕ್ರಮದಲ್ಲೂ ಆ ಶ್ರಾವಣವನ್ನು ತೋರಿಸುತ್ತದೆ. ಈ ಶ್ರಾವಣದ ಬಗ್ಗೆ ನಂಬಿಕೆ ಹುಟ್ಟಿಸುತ್ತದೆ.
‘ಬಂತಣ್ಣ ಸಣ್ಣ ಸೋಮವಾರಾ
ಕಾಣಬೇಕಣ್ಣ ಸೋಮೇಶ್ವರಾ’
ಎಂಬ ಸಾಲುಗಳೇ ರೂಪಕಾತ್ಮಕವಾಗಿವೆ. ಇಲ್ಲಿ ಸೋಮವಾರಾ ಕೇವಲ ವಾರದ ಒಂದು ದಿನವಲ್ಲ; ಅದು ಹತ್ತು ಹಲವು ಸಂಭ್ರಮಗಳನ್ನು ಹೊತ್ತು ತರುವ ಅವಸ್ಥೆ. ಅದೇ ರೀತಿ ಸೋಮೇಶ್ವರಾ ಕೇವಲ ಧಾರವಾಡದ ಒಂದು ಗುಡಿಯಲ್ಲ. ಅದು ಸಂಭ್ರಮವನ್ನು ಸಾರ್ಥಕತೆಯೆಡೆಗೆ ಕೊಂಡೊಯ್ಯುವ ವ್ಯವಸ್ಥೆ.
‘ಹರಹರ ಮಹಾದೇವಾ
ಈಸಾಡತಾವ ಜೀವಾ
ಮಾನಸ-ಸರೋವರ ಹೊಕ್ಕು’
ಎಂಬ ಸಾಲುಗಳಲ್ಲಿರುವ ತಾದಾತ್ಮಕತೆಯನ್ನು ಗಮನಿಸಬೇಕು. ಶ್ರಾವಣ ಸೋಮವಾರದ ಲೌಕಿಕ ಸಂಗತಿಗಳನ್ನು ಅನುಭವಿಸುತ್ತ ನಡೆದು, ಅಂತಿಮವಾಗಿ ಆತ್ಮ ಪರಮಾತ್ಮನಲ್ಲಿ ಒಂದಾಗುವ ಅಲೌಕಿಕತೆಯನ್ನು ಮುಟ್ಟಬೇಕೆನ್ನುವುದು ಕವಿಯ ಆಶಯ. ಅದಕ್ಕೆ ಪೂರಕವಾಗಿ ಪ್ರಕೃತಿಯೇ ಸಜೀವಗೊಂಡು ಉತ್ಸಾಹ ತುಂಬುತ್ತಿರುವ ಸನ್ನಿವೇಶವನ್ನು ವರ್ಣಿಸಿರುವ ರೀತಿ ಅನನ್ಯವಾಗಿದೆ.

ನಿಸರ್ಗದ ನೇರ ಅನುಭವ ಕುವೆಂಪು ನಡೆಯಾದರೆ, ಅದರ ಅನುಭವವನ್ನು ಬೆಳಕಿನಂತೆ ಹಂಚುವುದು ಬೇಂದ್ರೆಮಾರ್ಗ. ಈ ಇಬ್ಬರು ಕವಿಗಳು ಒಡ್ಡಿಕೊಂಡ ಪರಿಸರಗಳು, ಬಾಳಿ ಬದುಕಿದ ರೀತಿ ನೀತಿಗಳು, ನಿಸರ್ಗಾನುಭವದ ಸೌಲಭ್ಯಗಳು ಅತ್ಯಂತ ಭಿನ್ನವಾಗಿವೆ. ಕುವೆಂಪು ಪ್ರಾಕೃತಿಕವಾದ ದಟ್ಟ ಅರಣ್ಯದಲ್ಲಿ ಹೊಕ್ಕರೆ ಬೇಂದ್ರೆ ಮಾನವನ ಮನಸ್ಸಿನ ಗೊಂಡಾರಣ್ಯದಲ್ಲಿ ಹೊಕ್ಕಿರುತ್ತಾರೆ. ಸಕಲ ಜೀವಿಗಳಿಗೂ ಸಮಾನ ಅವಕಾಶ ನೀಡುವಂತ ಜೈವಿಕ ಪ್ರಕ್ರಿಯೆಗಳು ಪರಿಸರದಲ್ಲಿ ನಿರಂತರವಾಗಿ ನಡೆದಿವೆಯೆಂಬ ವಿಶ್ವಾಸವನ್ನು ಕವಿಮನ ಇರಿಸಿಕೊಂಡಿದೆ. ಇಲ್ಲಿ ಮನುಷ್ಯನಿಗೆ ವಿಶೇಷವಾದ ಉಪಚಾರವೇನೂ ಇಲ್ಲ. ಮನುಷ್ಯ ಹೊರಗೆ ನಿಂತು ನಿಸರ್ಗವನ್ನು ನೋಡುವುದಕ್ಕಿಂತ, ಅದರ ಭಾಗವಾಗಿ ಅನುಭವಿಸುವುದರಲ್ಲಿ ಅತೀವ ಆನಂದವೂ, ಪಾಲುದಾರಿಕೆಯ ಜವಾಬ್ದಾರಿಯೂ ಇದೆ. ‘ಸಣ್ಣ ಸೋಮವಾರ’ದಲ್ಲಿ ಬೇಂದ್ರೆಯವರು ನಿಸರ್ಗಾನುಭವದ ರೂಪಕಗಳನ್ನು ಈ ಉದ್ದೇಶಗಳಿಂದಲೇ ಪ್ರಯೋಗಿಸಿದ್ದಾರೆಂದು ಎನಿಸುತ್ತಿದೆ.
ಹಾದಿಗುಂಟ ಚೆಲ್ಲಾಟ
ದಾರಿ ಉದ್ದ ನೀರನೋಟ
ಹಸರಾಣಿ ಬನರಾಣಿ ತ್ವಾಟ;
ಅತ್ತ ಏರಿ, ಇತ್ತ ವಾರಿ
ನಡುನಡುವೆ ಕೆರಿ, ಕೆರಿ
ಸುತ್ತಮುತ್ತು ಪಯಿರಿನ ಮಾಟ
ಈ ಪ್ರಕೃತಿಯನ್ನು ಬಣ್ಣಿಸುವ ಮನಸ್ಸು ಪ್ರೇಕ್ಷಕನಾಗಿ ಗ್ಯಾಲರಿಯಲ್ಲಿ ಕೂರದೇ, ಕ್ರೀಡಾಪಟುವಾಗಿ ಮೈದಾನಕ್ಕೆ ಇಳಿದು ‘ಹಾದಿಗುಂಟ ಚೆಲ್ಲಾಟ’ ದಲ್ಲಿ ನಿರತವಾಗಿದೆ. ನಿಸರ್ಗದ ಇಂತಹ ಹೊರನೋಟಗಳಿಂದ ಅಂತರಂಗದ ಧ್ಯಾನಕ್ಕೆ ಜಾರುವ ಕವಿತ್ವ, ಅವರ ಶ್ರಾವಣ ಕುರಿತಾದ ಕವಿತೆಗಳ ಉದ್ದಕ್ಕೂ ಹರಡಿಕೊಂಡಿದೆ. ಇದರಿಂದ ಅವರು ಸೌಂದರ್ಯ ಶೋಧದ ಜೊತೆಗೆ, ಸತ್ಯದ ಶೋಧವನ್ನು ಸಾಧಿಸುವ ಹಂತಕ್ಕೆ ತಲುಪುತ್ತಾರೆ. ಮಾನವಕೋಟಿ ಏನು ಮಾಡಿದರೂ, ಏನು ಬಿಟ್ಟರೂ ಅಂತಿಮವಾಗಿ ಪ್ರಕೃತಿ ನಿಯಮಕ್ಕೆ ತಲೆ ಬಾಗಲೇಬೇಕೆಂಬುದು ನಿತ್ಯಸತ್ಯವಾಗಿದೆ. ಬೇಂದ್ರೆ ತಮ್ಮ ಪ್ರಕೃತಿ ಗೀತೆಗಳಲ್ಲಿ ಸಹೃದಯನನ್ನು ಇಂತಹ ದರ್ಶನದೆಡೆಗೆ ಕರೆದೊಯ್ಯುತ್ತಾರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
‘ಅತ್ತ ಏರೀ ಇತ್ತ ವಾರಿ / ನಡುನಡುವೆ ಕೆರಿ, ಕೆರಿ / ಸುತ್ತಮುತ್ತು ಪಯಿರಿನ ಮಾಟ’ ಇದು ಕೇವಲ ಜನಪದಿಯ ಭಾಷೆಯಲ್ಲಿ ಗ್ರಾಮೀಣ ಪರಿಸರದ ಚಿತ್ರಕ ನೋಟ, ಹಸರಾಣಿ ಬನರಾಣಿ ತ್ವಾಟ’ ದುಡಿಯುವ ಜನಸಮುದಾಯವನ್ನು ಪೋಷಿಸುವ ಮಡಿಲು. ಕವಿ ಹುಟ್ಟಿದ ಪರಿಸರಕ್ಕೂ, ಇಲ್ಲಿ ವರ್ಣಿಸುತ್ತಿರುವ ಪರಿಸರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ ಬೇಂದ್ರೆ ಆ ಅಂತರವನ್ನು ದಾಟಿ ಎರಡನ್ನೂ ಒಂದಾಗಿಸುವಲ್ಲಿ ಯಶಸ್ವಿಯಾದರು. ಇದು ಯಾವುದೇ ಒಬ್ಬ ಕವಿಯು ತನ್ನ ಕಾವ್ಯ ಮಾರ್ಗದಲ್ಲಿ ಮಾಡಿದ ದೊಡ್ಡ ಸಾಧನೆ ಎನಿಸಿಕೊಳ್ಳುತ್ತದೆ.
ಧಾರವಾಡದ ಸೀಮಿ ಛಂದ
ಏರು ಇಳುವಿನ ಅಂದ
ಹಬ್ಬ! ಕುಣಕೋತ ಹೊರಟಾಂಗ ಕುದುರಿ,
ಮರದಿಂದ ಮರಕ ಹಾರಿ
ಟೊಂಗಿಯಿಂದ ಟೊಂಗೀಗೇರಿ
ಹುಬ್ಬ! ಹಾರಸತಾವ ಮಂಗ ಬೆದರಿ,
ಬೇಂದ್ರೆ ನೋಡಿದ ಧಾರವಾಡ ಹೆಸರಿಗಷ್ಟೇ ಶಹರ. ಆ ಕಾಲಕ್ಕೆ ಅದೊಂದು ದೊಡ್ಡ ಹಳ್ಳಿ. ಅದರಲ್ಲೂ ಪ್ರಸ್ತುತ ಕವಿತೆಯಲ್ಲಿ ಬರುವ ಸೋಮೇಶ್ವರದ ಸುತ್ತಮುತ್ತಲಿನ ಪರಿಸರಕ್ಕೆ ನಗರೀಕರಣ ಇಲ್ಲವೇ ಆಧುನಿಕತೆಯ ಸೋಂಕು ತಟ್ಟಿರಲಿಲ್ಲ. ಅದು ದಟ್ಟ ಹಸಿರಿನಿಂದ ಕಂಗೊಳಿಸುವ ನಿಸರ್ಗ ಶ್ರೀಮಂತಿಕೆ. ಎಂಥ ಅರಸಿಕನನ್ನೂ ಸೆಳೆಯುವ ಸೂಜಿಗಲ್ಲು. ಧಾರವಾಡದ ಭೂದೃಶ್ಯವನ್ನು ಕಣ್ಣಾರೆ ನೋಡಿದವರಿಗೆ ಇಲ್ಲಿನ ‘ಏರು ಇಳುವಿನ ಅಂದ’ ಗೊತ್ತಿರುತ್ತದೆ. ಅತ್ತಿಕೊಳ್ಳದ ಏರು ಇಳುವು, ಬೇಂದ್ರೆ ಬದುಕಿನ ಏಳು ಬೀಳಿಗೆ ಪ್ರತೀಕವಾಗಿದೆಯೆಂದರೆ ತಪ್ಪಾಗಲಿಕ್ಕಿಲ್ಲ.
‘ಸಂಸಾರ ಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ, ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ’
‘ಏನಿಹುದೋ ಎಂತಿಹುದೊ ಸಂಸಾರ ಸಾರ
ಕಂಡವರು ಯಾರದರ ಅಂತಪಾರ?’
ಎಂಬ ಅವರ ಸಾಲುಗಳು ಜೀವನ ಮಾರ್ಗದ ದುರ್ಗಮತೆಯನ್ನೂ, ಅನಿಶ್ಚಿತತೆಯನ್ನೂ ಸೂಚಿಸುತ್ತವೆ.
ಇವೆಲ್ಲದರ ನಡುವೆಯೂ ಶ್ರಾವಣದ ಸಂದರ್ಭದ ಹಸಿರು ಸಂಪತ್ತು, ಬದುಕಿನ ಸಂಪತ್ತಾಗುತ್ತದೆ. ಅದು ಕುಣಿಯುತ್ತ ಹೊರಡುವ ಕುದುರೆಯಾಗುತ್ತದೆ. ಅವಕಾಶಗಳ ಮರದಿಂದ ಮರಕ್ಕೆ ಹಾರುವ ಮಂಗವಾಗುತ್ತದೆ. ಹುಬ್ಬು ಹಾರಿಸುವ ಚೇಷ್ಟೆಯೂ ಆಗುತ್ತದೆ. ಧಾರವಾಡದ ಇಲ್ಲಿನ ದೇಸೀ ಭಾಷೆಯಲ್ಲಿ ವರ್ಣಿಸುವಾಗ ಸ್ವತಃ ಅವರು ಅನುಭವಿಸುವ ಭಾವತೀವ್ರತೆ ಅಚ್ಚರಿ ಹುಟ್ಟಿಸುತ್ತದೆ. ಇದರ ನಡುವೆ ಅವರು ಕಟ್ಟಿಕೊಡುವ ದರ್ಶನ ಸಹೃದಯನನ್ನು ತಟ್ಟನೇ ಹಿಡಿದು ನಿಲ್ಲಿಸಿಬಿಡುತ್ತದೆ.
ಪ್ರಸ್ತುತ ಕವಿತೆಯ ವಿಶೇಷವೆಂದರೆ, ಇದು ಬಾಲ್ಯದ ಅನುಭವವನ್ನು ಇಳಿವಯಸ್ಸಿನಲ್ಲಿ ನೆನಪಿಸಿಕೊಳ್ಳುವ ಸಂದರ್ಭ ಕುರಿತದ್ದು, ಆದರೆ ಇಲ್ಲಿ ನೆನಪಿನ ಹಳಹಳಿಕೆಯಿಲ್ಲ. ಕಳೆದುಹೋದ ಬದುಕಿನ ಹಳವಂಡವಿಲ್ಲ. ದಶಕಗಳ ಹಿಂದೆ ದಕ್ಕಿದ ಸೊಗಸು ಇಂದಿಗೂ ತನ್ನ ತಾಜಾತನವನ್ನು ಉಳಿಸಿಕೊಂಡಿದೆ. ಮಳೆಯಲ್ಲಿ ತೊಯ್ದ ಮಂಗಗಳು, ನೀರಲ ಗಿಡಗಳನ್ನು ಏರುವುದು, ಟೊಂಗೆಗಳನ್ನು ಅಲುಗಾಡಿಸಿದಾಗ ಟಪಟಪ ಸದ್ದು ಮಾಡುತ್ತ ನೀರಲ ಹಣ್ಣುಗಳು ಬೀಳುವುದು, ಇವೆಲ್ಲ ಕಣ್ಣಿಗೆ ಕಟ್ಟುವಂತೆ ಚಿತ್ರಿತಗೊಂಡಿವೆ.
ಇಲ್ಲಿಯವರೆಗೆ ನಿಸರ್ಗದ ಮಡಿಲಲ್ಲಿ ಮಗುವಿನಂತೆ ಲಾಸ್ಯವಾಡಿದ ಕವನ, ಬೆಳೆದು ಎದ್ದು ನಿಲ್ಲುತ್ತದೆ. ಆಧುನಿಕ ಯುಗದ ಪ್ರಗತಿಯ ಕಡೆಗೆ ಹೊರಳುವ ಸಂಕೇತವಾಗಿ ಗೂಡ್ಸ್ ಉಗಿಬಂಡಿ ಬರುತ್ತದೆ. ರೈಲು ಬರುವುದಕ್ಕೆ ಹೋಗುವುದಕ್ಕೆ ತನ್ನದೇ ಆದ ನಿಯಮವಿದೆ. ಆದರೆ ಇದನ್ನು ಅರಿಯದ ಬಾಲಕರು ಅದರತ್ತ ಓಡಿ ಕೈಯಿಂದ ಸಿಗ್ನಲ್ ಕೊಡುತ್ತಾರೆ. ತಮ್ಮ ಸಂಕೇತಕ್ಕನುಸಾರವಾಗಿ ರೈಲು ಚಲಿಸುತ್ತಿದೆಯೆಂದು ಭಾವಿಸಿ ಸಂಭ್ರಮಿಸುತ್ತಾರೆ. ಈ ಮುಗ್ಧತೆಯನ್ನು ಕಾಪಿಟ್ಟುಕೊಳ್ಳುವದು ಕೂಡ ಕವಿಯ ಲಕ್ಷಣ. ರೈಲು ಹಳಿಗಳನ್ನು ದಾಟಿ ಮುನ್ನಡೆದಾಗ ಸೋಮೇಶ್ವರ ಕಾಣುತ್ತದೆ. ಹೇಗೆ ಕಾಣುತ್ತದೆ?
ತಗ್ಗಿನ್ಯಾಗ ಗಿಡದ ಗುಂಪು
ಹೊಂಡದ ನೀರ ತಂಪು
ದೂರಿಂದ ಕಂಡರೂ ಸೊಂಪು.
ಅಷ್ಟು ದೂರದಿಂದ ನಡೆದು ಬಂದವರಿಗೆ ಸೋಮೇಶ್ವರದ ಸುತ್ತಲಿರುವ ಗಿಡಮರಗಳು, ಹೊಂಡದ ನೀರು ತಂಪಿನನುಭವ ನೀಡುವುದು ಸ್ವಾಭಾವಿಕವಾಗಿದೆ. ಮನದ ನಿರೀಕ್ಷೆ, ಮಾನವನ ಪ್ರತೀಕ್ಷೆ, ಎರಡೂ ಕೈಗೂಡಿದಾಗ ಸಿಗುವ ಆನಂದದ ಅನುಭವ ‘ದೂರಿಂದ ಕಂಡರೂ ಸೊಂಪು’ ಎಂಬ ಮಾತಿನಲ್ಲಿ ಪ್ರತಿಫಲಿಸಿದೆ.
ಇಲ್ಲಿಂದ ಮುಂದೆ ಕವಿತೆಯ ಸ್ವರೂಪದಲ್ಲಿ ಇನ್ನೊಂದು ರೀತಿಯ ಬದಲಾವಣೆಯಾಗುತ್ತದೆ. ದೂರವೂ ಅಲ್ಲದ, ಹತ್ತಿರವೂ ಅಲ್ಲದ ಭಜನೆ ಮೇಳದ ಧ್ವನಿ ದಶದಿಕ್ಕುಗಳಲ್ಲಿ ತುಳುಕಾಡುತ್ತದೆ. ಯಾವುದೋ ದಿಕ್ಕಿನಿಂದ ಕಾಣದ ಕೋಗಿಲೆಯ ಸ್ವರವೂ ಕೇಳಿಬರುತ್ತದೆ. ಆದರೆ ಮನುಷ್ಯನ ಮನಸ್ಸು ಅಷ್ಟೊತ್ತಿಗಾಗಲೇ ದೈವತ್ವದ ಕಡೆಗೆ ವಾಲುತ್ತಾ ದೇವರ ನಾಮಸ್ಮರಣೆಗೆ ತೊಡಗಿಕೊಳ್ಳುತ್ತದೆ. ಪ್ರಾಪಂಚಿಕ ಬದುಕಿನ ಹೊಯ್ದಾಟ, ಜಂಜಾಟಗಳಿಂದ ಬಿಡುಗಡೆ ಪಡೆಯಲು ಜೀವನು ನಂಬಿಕೆಯನ್ನು ಆಶ್ರಯಿಸುತ್ತಾನೆ.
ಈ ಕವಿತೆಯಲ್ಲಿನ ಭಾವಗೀತಾತ್ಮಕತೆ ಮತ್ತೆಮತ್ತೆ ಸೆಳೆಯುವಂಥದ್ದು. ಇಲ್ಲಿ ಜೀವಭಾವ ಮತ್ತು ಕಾವ್ಯಭಾವ ಬೆರೆತುಕೊಂಡು ಕವಿತೆಯ ನಡಿಗೆ ಕೇವಲ ಶಬ್ದಗಳಿಂದ ಕೂಡಿದ ಸಾಲಿನಲ್ಲಿ ಉಳಿಯದೇ ಕಣ್ಣಿಗೆ ಕಾಣುವ, ಕಿವಿಗೆ ಕೇಳುವ ಅನುಭವವಾಗುತ್ತದೆ. ಕೆಳಗಿನ ಸಾಲುಗಳನ್ನು ಗಮನಿಸಬಹುದು.
ಭಾವಾ ಇದ್ಧಾಂಗ ದೇವಾ
ಹೇಳಿದ್ರು ಹಿರಿಯರು
ಅಲ್ಲೇ! ಸುತ್ತಾಡತಾವ ನಮ್ಮ ಖ್ಯಾಲಾ
ಕವಿತೆಯನ್ನು ಮತ್ತೆ ಮತ್ತೆ ಅವಲೋಕಿಸಿದಾಗ ಈ ಸಾಲುಗಳು ಹೆಚ್ಚು ಅರ್ಥಪೂರ್ಣವೆನಿಸುತ್ತವೆ.
ಸೋಮೇಶ್ವರದ ತಪ್ಪಲಲ್ಲಿ ಹುಟ್ಟುತ್ತದೆ ಎಂದು ನಂಬಲಾಗಿರುವ ಶಾಲ್ಮಲೆ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ. ಮುಂದೆಲ್ಲೊ ಪ್ರಕಟಗೊಂಡು, ಬೆಳೆದು ಗಂಗಾವಳಿಯಾಗಿ ಗೋಕರ್ಣದ ಹತ್ತಿರ ಸಮುದ್ರ ಸೇರುವ ಪರಿಯನ್ನು ಹಂತಃಂತವಾಗಿ ಕವಿತೆ ಹೇಳುತ್ತದೆ.
ಬೇಂದ್ರೆಯವರಿಗೆ ಈ ರೂಪಕ ಶಕ್ತಿ ಗ್ರಾಹ್ಯವಾದ ಬಗೆಯನ್ನು ತಮ್ಮ ಸಖೀಗೀತದ ಒಂದು ಭಾಗದಲ್ಲಿ ಅವರೇ ಹೇಳಿಕೊಂಡಿದ್ದಾರೆ. ಅದೂ ಕೂಡ ಶ್ರಾವಣದ ಸಂದರ್ಭವನ್ನಿಟ್ಟುಕೊಂಡು ಕಟ್ಟಿಕೊಂಡ ಕವಿತೆ.
ಶಿವನ ಕುದುರೆಯನೇರಿ ಶ್ರಾವಣದ ಹಸರಾಣಿ
ಹೂಗಣ್ಣ ತೆರೆದಾಡಿ ಕುಣಿಯುವೊಲು
ನನ್ನ ಚಿತ್ರಕಶಕ್ತಿ ಉತ್ಪ್ರೇಕ್ಷೆಯನ್ನೇರಿ
ಬಣ್ಣ ಬಣ್ಣದ ಬಣ್ಣನೆಗೆ ಒಲಿದಿತು.
ಧಾರವಾಡದ ನೆಲದಲ್ಲಿ ಅದರಲ್ಲೂ ಸಾಧನಕೇರಿಯ ಸುಂದರ ಪರಿಸರದಲ್ಲಿ ತಮ್ಮ ಸೃಜನಶೀಲತೆ ಏರಿದ ಎತ್ತರದ ಹಿಂದಿರುವ ಸಂಗತಿಗಳನ್ನು ಹೀಗೆ ಹೇಳಿದ್ದಾರೆ.
‘ಕೊಟ್ಟಿದ್ದೆ ರೂಪವು, ಇಟ್ಟಿದ್ದೆ ನಾಮವು / ಕಟ್ಟಿದ್ದೇ ಹುರುಳೆಂಬ ಮದದೊಳಿರೆ / ಬ್ರಹ್ಮ ಪಟ್ಟವನೇರಿ ರೂಪಕಶಕ್ತಿಯು / ಸೃಷ್ಟಿಯನಳೆದಿತು ದೃಷ್ಟಿಯೊಳೆ’. ಎಂಬಂತಹ ಸಾಲುಗಳು ಅವರ ಕಾವ್ಯದ ಪ್ರತಿಮಾ ವ್ಯಾಪಾರವನ್ನು ಸೂಚಿಸುತ್ತವೆ. ಆದರೆ ‘ಸಣ್ಣ-ಸೋಮವಾರ’ ರಚನೆಯಲ್ಲಿನ ತಾತ್ವಿಕತೆ, ರೂಪಕಾತ್ಮಕತೆಗಳು ಜೀವಂತಿಕೆಯಿಂದ ಕೂಡಿವೆ. ಅದರೊಳಗಿನ ಲಯಬದ್ಧ ನಡಿಗೆ ಇಡೀ ಕವಿತೆಗೆ ವಿಶಿಷ್ಟ ಭಾವಗೀತಾತ್ಮಕತೆಯನ್ನು ತಂದಿದೆ.
ಗರ್ಭ ಗುಡಿಯೊಳಗ ಲಿಂಗ
ನಿದ್ದಿಯೊಳಗ ನೋಡಿಧಾಂಗ
ಕಣ್ಣು ಮುಚ್ಚತಾವ ನಮೋ ಎಂದು.
ಗವೀಯೊಳಗಿನ ದಾರಿ
ಹರದಾರಿ ಹರದಾರಿ
ಮಿಂಚಿತ್ತು ಚಂದ್ರಕ್ವಾರಿ ಒಂದು
ನಿಂತ ಮೈಯಾಗಿ ಖಂಬ
ಸರ್ಯಾವ ಜಂಬಗಿಂಬ
ಹಿಡಿದಾನ ಕೈಯ್ಯ ಶಿವನೆ ಬಂದು
ಮನುಷ್ಯನ ಮನಸ್ಸು ದೇವರನ್ನು ಕಾಣುವುದಕ್ಕೆ ತನ್ನದೇ ಆದ ರೀತಿಯಲ್ಲಿ ಸಿದ್ಧತೆಯನ್ನು ಮಾಡಿಕೊಂಡಿರುತ್ತದೆ. ಗರ್ಭಗುಡಿಯಲ್ಲಿನ ಲಿಂಗವನ್ನು ನೋಡುವಾಗ ವ್ಯವಹಾರಿಕ ಬದುಕಿನ ಎಚ್ಚರದಲ್ಲಿರಲು ಸಾಧ್ಯವಿಲ್ಲ. ಹಾಗೆ ಇರಲು ಇಚ್ಛಿಸುವುದೂ ಇಲ್ಲ. ದೇವರು ದೂರದಲ್ಲಿದ್ದಾನೆ ಎಂಬುದು ಸಾಮಾನ್ಯ ಮನುಷ್ಯನ ಮನಸ್ಸಿನಾಳದ ನಂಬಿಕೆ. ಕವಿಯ ಬಾಲ್ಯದ ಅನುಭವದಲ್ಲಿ ಕೂಡ ಗರ್ಭಗುಡಿಯ ಲಿಂಗ ದೂರದಲ್ಲಿರುವ ಅಸ್ಪಷ್ಟ ಬಿಂಬದಂತೆ ಕಂಡಿದೆ. ಅದೂ ನಿದ್ರಾವಸ್ಥೆಯಲ್ಲಿ ನೋಡಿದಂತ ಅನುಭವ. ಅಂತಹ ಸಂದರ್ಭದಲ್ಲಿ ಕಣ್ಣುಗಳು ತಂತಾನೇ ಮುಚ್ಚಿಕೊಳ್ಳುವುದು ಸ್ವಾಭಾವಿಕ. ಭಕ್ತಿಯಿಂದ ದೇವರನ್ನು ಸ್ಮರಿಸುವುದು ಮುಂದಿನ ನಡೆ. ಕ್ರಮೇಣ ವ್ಯಕ್ತಿ ತನ್ನ ಅಸ್ತಿತ್ವವನ್ನು ಬರಿದಾಗಿಸಿಕೊಳ್ಳುತ್ತ ಕಂಬವಾಗಬೇಕು. ಜಂಭ ಜಾರಬೇಕು. ಆಗ ಸ್ವತಃ ದೇವರೇ ಎದ್ದು ಬಂದು ಭಕ್ತನ ಕೈಹಿಡಿಯುತ್ತಾನೆ. ಈ ಭಾವ ಆಸ್ತಿಕತೆ ತಳೆಯುವ ಮುಂದಿನ ಹಂತವಾಗಿದೆ. ಆದರೆ ಬಹಿರ್ಮುಖ ಸ್ಥಿತಿಯಲ್ಲಿ ಇದೆಲ್ಲ ಹುಚ್ಚುಚ್ಚು ನಡಾವಳಿ ಎನಿಸುತ್ತದೆ. ಇಲ್ಲಿಯವರೆಗಿನ ವ್ಯಷ್ಟಿ ಪ್ರಜ್ಞೆ ಬದಿಗೆ ಸರಿದು, ‘ಎಲ್ಲರ ಕೂಡ ಕೈ ಮುಗಿದು…. ಹೋಗತಿದ್ವಿ ಜಾತ್ರಿಗೆ ಜಿಗಿದು’ ಎಂಬಲ್ಲಿಗೆ ಸಮಷ್ಟಿ ಪ್ರಜ್ಞೆಯನ್ನು ತಳೆಯುತ್ತದೆ. ಒಂದು ರೀತಿಯಲ್ಲಿ ಇದು ಅಂತರಂಗ-ಬಹಿರಂಗ ಶುದ್ಧಿಯ ಮಾರ್ಗವಾಗಿದೆಯೆಂದು ಹೇಳಬಹುದು.
ಇಲ್ಲಿ ದೈವದ ದರುಶನಕ್ಕಿಂತ ಮೊದಲು ಸೃಷ್ಟಿಯನ್ನು ಕಾಣುವ ಮನೋಧರ್ಮ ಅಂತರ್ಗತವಾಗಿದೆ. ಶ್ರಾವಣದ ಉನ್ಮತ್ತತೆಯನ್ನು ಪ್ರಕೃತಿಯ ವಿಲಾಸಗಳ ಮೂಲಕ ಹೇಳುವ ಪ್ರಯತ್ನವಿದೆ.
‘ಹೂವ ಹಡಲಿಗೆಯನು ಹೊತ್ತ ಭೂಮಿ ತಾಯಿ ಜೋಗತಿ’
(ಶ್ರಾವಣದ ವೈಭವ) ಎಂದು ಶ್ರಾವಣ ಮಾಸದ ಸೊಬಗನ್ನು, ಅದರ ಹುಚ್ಚು ಉನ್ಮಾದದ ಹಿನ್ನೆಲೆಯಲ್ಲಿ ವರ್ಣಿಸಿರುವದನ್ನು ನಾವು ಗಮನಿಸಬೇಕು.

‘ಸಣ್ಣ-ಸೋಮವಾರ’ ಕವಿತೆಯ ಕೊನೆಯ ಭಾಗವು ಸಾರ್ವಕಾಲಿಕ ಅನುಭವವನ್ನು ಜೀವಂತಿಕೆಯಿAದ ನುಡಿಯುತ್ತದೆ. ಇದರಲ್ಲಿ ವರ್ತಮಾನದೊಂದಿಗೆ ಭವಿಷ್ಯವೂ ಇದೆ.
ಎಣಿಸಿದರ ಏನೋ ಕನಸ
ಕಂಡ್ಹಾಂಗ ಅನಸ್ತದ
ಕಣ್ಣು! ಆಗ್ತಾವ ಹ್ಯಾಂಗೊ ತೇಲುಮೇಲಾ.
ನೆನಪಿನ ಓರಿಯೊಳಗ
ಮಿಣುಕ್ತಾವ ಎಣ್ಣೀ ದೀಪ
ಎಲ್ಲೆ! ಹೋದಾವೊ ಗೆಳೆಯಾ ಆ ಕಾಲಾ.
ಆಕರಗಳು : –
1) ಬೇಂದ್ರೆ ಕಾವ್ಯ ವಿಮರ್ಶೆ [ಕೀರ್ತಿನಾಥ ಕುರ್ತಕೋಟಿ ಸಮಗ್ರ ಸಾಹಿತ್ಯ, ಸಂಪುಟ 4] – ಸಂ. ಗಿರಡ್ಡಿ ಗೋವಿಂದರಾಜ, ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. 2012 ಪು.684 ರೂ.140/-
2) ಅಭಿಮುಖ – ಸಿದ್ಧಲಿಂಗ ಪಟ್ಟಣಶೆಟ್ಟಿ, ಪ್ರ: ಅನನ್ಯ ಪ್ರಕಾಶನ, ಧಾರವಾಡ 2013, ಪು:204 ರೂ.150/-
3) ಬೇಂದ್ರೆ ಕಾವ್ಯದ ಪ್ರತಿಮಾ ಲೋಕ – ಜಿ.ಎಸ್.ಆಮೂರ, ಪ್ರ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ 2000, ಪು. 41, ರೂ.30/-
4) ಸಖ್ಯದ ಆಖ್ಯಾನ… (ಬೇಂದ್ರೆ ಕಾವ್ಯಾನುಸಂಧಾನ)-ಬಸವರಾಜ ಸಾದರ ಪ್ರ: ಯಾಜಿ ಪ್ರಕಾಶನ, ಹೊಸಪೇಟೆ 2023 ಪು. 114 ರೂ.160/-
5) ಒಳಗಿನ ಬೆಳಕು (ಡಾ.ಜಿ.ಎಸ್.ಆಮೂರರ ‘ಭುವನದ ಭಾಗ್ಯ’ದ ನಂತರದ ಬೇಂದ್ರೆ ಸಾಹಿತ್ಯ ವಿಮರ್ಶೆಯ ಲೇಖನಗಳು) ಸಂ. ಜಿ.ಎಂ.ಹೆಗಡೆ, ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ 2022, ಪು: 312, ರೂ.300/-

ಚನ್ನಪ್ಪ ಅಂಗಡಿ ಧಾರವಾಡದಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂದ ಬೆಳಕಿನ ಸಾಂತ್ವನ (ಕವಿತೆಗಳು), ಭೂಮಿ ತಿರುಗುವ ಶಬ್ದ (ಕವಿತೆಗಳು), ಇನ್ನು ಕೊಟ್ಟೆನಾದೊಡೆ (ಕವಿತೆಗಳು), ಮಣ್ಣಿನೊಳಗಿನ ಮರ್ಮ (ಕತೆಗಳು), ಕಿಬ್ಬದಿಯ ಕೀಲುಳುಕಿ (ಕತೆಗಳು), ಸ್ತೋಮ (ಕತೆಗಳು), ಚತುರಂಗ (ವಿಮರ್ಶಾ ಲೇಖನಗಳು), ನೆಲದ ತೇವ (ವಿಮರ್ಶಾ ಲೇಖನಗಳು), ಎದೆಯ ಒಕ್ಕಲಿಗ (ವಚನ ಸಾಹಿತ್ಯ), ಕೃಷಿ ಕಾರಣ (ಕೃಷಿ ಲೇಖನಗಳು), ನಾ.ಸು. ಹರ್ಡೀಕರ್ (ಜೀವನ ಚರಿತ್ರೆ) ಹಾಗೂ ಹಲವು ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ.

