ಏಸು ಋತುಗಳು ಉರುಳಿದವು ಇಲ್ಲಿ ಮರುಳೆ ನಿನ್ನ ನೆನಪಲ್ಲಿ
ಏಸು ಮನದಿ ತೊರೆಗಳು ಬತ್ತಿದವು ಇಲ್ಲಿ ಮರುಳೆ ನಿನ್ನ ನೆನಪಲ್ಲಿ
ಕಣ್ಣಲ್ಲಿ ಕುಳಿತು ಎದೆಯೊಳಗೆ ಇಳಿದ ಮೇಲೆನಿತ್ತು ಇಲ್ಲಿ?
ಏಸು ಇರುಳುಗಳು ಸರಿದವು ಇಲ್ಲಿ ಮರುಳೆ ನಿನ್ನ ನೆನಪಲ್ಲಿ
ಆ ರಸ್ತೆ ಆ ತಿರುವು ಆ ನೆರಳು ಆ ಬಿಸಿಲು ಈಗಿಲ್ಲ ಆ… ಸವಿ
ಏಸು ಕನಸುಗಳು ಸುಟ್ಟು ಕರಕಲಾದವು ಇಲ್ಲಿ ಮರುಳೆ ನಿನ್ನ ನೆನಪಲ್ಲಿ
ಆ ನಗು, ಆ ನೋಟ, ಆ ಮೌನ, ಆ ಹಿಡಿಯಷ್ಟು ಹುಂ ಹಾಂ ಅಷ್ಟೇ
ಏಸು ಉಸಿರುಗಳು ಅಸುನೀಗಿದವು ಇಲ್ಲಿ ಮರುಳೆ ನಿನ್ನ ನೆನಪಲ್ಲಿ
“ದೇವ”ನ ಜೀವ ಚೇತನವೇ ಬತ್ತಿದೆಯೆಂದು ಹೇಳುವುದುಂಟೆ ಗೆಳೆಯಾ
ಏಸು ಚಿತಾಗಾರಗಳು ದಹಿಸಿದವು ಇಲ್ಲಿ ಮರುಳೆ ನಿನ್ನ ನೆನಪಲ್ಲಿ


