Advertisement
ಪಾತ್ರಧಾರಿಯ ಗೈರು: ಜಯಶ್ರೀ ವಸಂತ್‌ ಲಲಿತ ಪ್ರಬಂಧ

ಪಾತ್ರಧಾರಿಯ ಗೈರು: ಜಯಶ್ರೀ ವಸಂತ್‌ ಲಲಿತ ಪ್ರಬಂಧ

ಅವರ ನೆನಪಾಯಿತು…. ಎರಡು ಪಾತ್ರೆಯಲ್ಲಿ ನೀರಿಟ್ಟು… ತೊಳೆದು … ಸಣ್ಣಗೆ …ನಾಜೂಕಾಗಿ ಹೆಚ್ಚಿ… ಮತ್ತೆ ಆ ನೀರು  ತೊಳೆದ ನೀರು… ‘ಗಿಡಕ್ಕೆ ಹಾಕ್ರಿ ಜಿ ಕೆ ಜೆ… ಹಾಕ್ತೀರಾ….ಹಾಕಿದ್ರಾ…’ ಇತ್ಯಾದಿ ಪ್ರಶ್ನೆಗಳು. ರೇಗಿ ಹೋಗುತ್ತೆ… ಇವತ್ತು ಏನು ಬೇಡ.. ನೀರಿಲ್ಲೇ ಚೆಲ್ತೀನಿ. ನಾಜೂಕಾಗಿಯೂ ಬೇಡ….ಎಲ್ಲಾ  ನಿಯಮಗಳಿಗೂ ರಜೆ… ಆರಾಮ್ ಮಾಡೋಣ ಅಂತ ಹರಡಿಕೊಂಡು ಮಾಡಿದೆ. ಇವತ್ತು ಹಿಟ್ಟು ಉಕ್ಕರಿಸಿದ ರೊಟ್ಟಿ.. ಕಾರಣ ಅದು ಮಾಡಬೇಡ್ರೀ.. ಸುಮ್ಮನೆ ಹಿಟ್ಟೆಲ್ಲಾ ಹರಡಿಕೊಂಡು ರಂಪ ಆಗುತ್ತೆ…. ನಿಮಗೂ ಕಷ್ಟ ಆಗುತ್ತೆ …ಅನ್ನೋ ಕಾಳಜಿ ಮಾಡುವ ಮನುಷ್ಯನ ಗೈರು…
ಜಯಶ್ರೀ ವಸಂತ್‌ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

ಯಜಮಾನರು ಊರಿಗೆ ಹೋಗಿದ್ದರು. ಬೆಳಗ್ಗೆ ನಾನೊಬ್ಬಳೇ ಅಲ್ವಾ.. ಕಾಫಿ ಬೇಡ ಬಿಡು.. ಅಂದುಕೊಂಡು ಸುಮ್ಮನಿದ್ದೆ. ಆದರೆ ಗಂಟಲು ಒಣಗಿದಂತಾಗಿ ಕೆಮ್ಮು ಬಂತು. ಸರಿ ಕಾಫಿ ಮಾಡಿಕೊಳ್ಳೋಣ ಅಂತ ರೆಡಿಯಾಗಿ ಲೋಟ ಹುಡುಕಿದೆ.. ಅರೆ ಲೋಟ ಯಾಕೆ ಇಲ್ಲ? ನಿನ್ನೆ ಯಾವ ವಾರ? ಲಕ್ಷ್ಮಿ ಪಾತ್ರೆ ತೊಳೆಯಲು ಬಂದಿರಲಿಲ್ವಾ? ಒಂದೂ ಲೋಟ ಇಲ್ವಲ್ಲ… ಅಂತ ಯೋಚಿಸಿದಾಗ… ಓಹೋ ಪಾತ್ರೆ ಎಲ್ಲಾ ತೊಳೆದಿದ್ದರಲ್ಲೇ ಇದೆ. ಜೋಡಿಸಿಲ್ಲ. ಓಹೋ ಇವರು ಎಷ್ಟು ಚೆನ್ನಾಗಿ ದಿನಾ ಈ ಕೆಲಸ ಮಾಡುತ್ತಿದ್ರಲ್ಲ… ಅನ್ನಿಸಿತು

ಸರಿ… ಆ ಕಡೆ ಈ ಕಡೆ ಓಡಾಡುವಾಗ ಸೊಳ್ಳೆ ಬತ್ತಿ ಪ್ಲಗ್‌ಗೆ ಹಾಕಿದ್ದು ಕಾಣಿಸ್ತು. ದಿನಾ ಇವರು ಇರೋ ಕಡೆ ಹಾಕೊಂಡು ಹಾಕೊಂಡು ಇರ್ತಾ ಇದ್ರು. ನೆನಪಾಗಿ “ನಿಮಗೆ ಮೂರು -ನಾಲ್ಕು ದಿನ ರಜೆ. ನಿಮಗೆ ಬತ್ತಿ ಹಾಕಲು ಅವರಿಂದು ಮನೇಲಿ ಇಲ್ಲ… ಬದುಕ್ಕೊಳ್ಳಿ ಹೋಗ್ರೋ… ಆರಾಮಾಗಿ” ಅಂತ ಹೇಳ್ತಾ ನಕ್ಕೆ.

ಮುಂಬಾಗಿಲು ತೆರೆದಿದೆ… ಓಹೋ ಬಾಗಿಲು ಹಾಕೇ ಇರಬೇಕು ಯಜಮಾನರಿಗೆ. ಇವತ್ತು ಆರಾಮಾಗಿ ಓಪನ್ ಮಾಡಿರಬಹುದು ಇರಲಿ ಬಿಡು ಹಾಗೆ ಒಂದಿಷ್ಟು ಹೊತ್ತು… ಅಂತ ಧಾರಾಳವಾಗಿ ತೆಗೆದಿಟ್ಟೆ.

ರೂಮ್‌ಗೆ ಹೋಗಿ ಸ್ನಾನಕ್ಕೆ ರೆಡಿ ಮಾಡ್ತಾ ಇದ್ರೆ ದಿನಾ ನೀಟಾದ ಮಂಚದ ಮೇಲೆ ಬಟ್ಟೆ ಇಡ್ತಾ ಇದ್ದೀನಲ್ಲ ಇವತ್ತು ಯಾಕೆ ಹೀಗೆ ಹರಡಿ ಕೆಟ್ಟದಾಗಿದೆ ಅನ್ನಿಸ್ತು. ನೆನಪಾಯ್ತು… ಮಲಗೆದ್ದ ನಂತರ ಬೆಡ್ ಶೀಟ್ ಮಡಿಚಿಲ್ಲ.. ನಾನೇ ಮಡಿಸಬೇಕಲ್ಲ ಇವತ್ತು ಅಂತ ಅರಿವಾಯಿತು.. ಸರಿಯಪ್ಪ ಅಂತಂದುಕೊಳ್ಳುತ್ತಲೇ ಅದನ್ನೂ ಮಡಿಸಿದೆ.

ಸ್ನಾನಕ್ಕೆ ಹೋಗೋಣ ಅಂತ ಟವೆಲ್.… ಎಲ್ಲೂ ಇಲ್ವಲ್ಲ…. ಹುಡುಕಿದರೆ ತಕ್ಷಣ ಗೊತ್ತಾಯ್ತು. ನಿನ್ನೆ ಸಂಜೆ ಟವಲ್ ಹೊರಗಿಂದ ತಂದೆ ಇಲ್ಲ… ಅಲ್ಲೇ ಇದೆ… ಅಬ್ಬ ದಿನಾ ಇವರು ತಂದಿಡ್ತಾ ಇದ್ರಲ್ಲ ಅಂತ ನೆನಪಾಗಿ ನಗು ಬಂತು.

ಆಗ ಹೋಗಿ ತರಬೇಕಾಯಿತು.

ನಂತರ ಏನೋ ಒಂಥರಾ, ಮನೆ-ಮನಸ್ಸೆಲ್ಲಾ ಮೌನವಾಗಿದೆಯಲ್ಲಾ… ಅಂದುಕೊಂಡು ನೋಡಿದ್ರೆ, ಮೊಬೈಲಲ್ಲಿ ದೇವರ ಹಾಡು ದಿನಾ ಹಾಕ್ತಾ ಇದ್ರಲ್ಲ… ಈ ದಿನ ಯಾರೂ ಹಾಕಿಲ್ಲ… ಯಾಕಂದ್ರೆ ನನ್ನ ಅಭ್ಯಾಸದ ಕೆಲಸ ಅಲ್ಲ. ದೇವರ ಕಡೆ ಹಾಗೆ ಕಣ್ಣು ಹಾಯಿಸಿದೆ. ಪಾಪ.. ಎಲ್ಲ ದೇವರುಗಳು ಗಪ್ ಆಗಿ ಕೂತಿದ್ರು. ಹಾಡೂ ಇಲ್ಲ… ಶ್ಲೋಕಗಳೂಲ್ಲ… ಅಷ್ಟೇ ಅಲ್ಲ… ಅವರ ಬಳಿ ಇಡ್ತಾ ಇದ್ದ ಬ್ರೈಟ್ ಲೈಟ್‌ಗಳೂ ಇಟ್ಟಿಲ್ಲ. ಅದಕ್ಕೆ ದೇವರುಗಳೆಲ್ಲ ಡಲ್ ಆಗ್ಬಿಟ್ಟಿದ್ದಾರೆ.

ಸರಿ ಎಲ್ಲಾ  ಮಾಡಿ ಮುಗಿಸಿದೆ.

ಆಗ ಮೊಮ್ಮಗ ಬಂದ.. ಅಮ್ಮಮ್ಮ ಸ್ವಲ್ಪೇ ಸ್ವಲ್ಪ ಮೊಬೈಲ್ ನೋಡ್ತೀನಿ ಅಂದ… ನಾನು ಅರೆ ಮನಸ್ಸಿನಿಂದ ಸುಮ್ಮನಿದ್ದಾಗ ಅವನು…. ಅಮ್ಮಮ್ಮ ಫೋನ್ ಚಾರ್ಜ್ ಆಗಿಲ್ಲ ಸ್ವಲ್ಪ ಮಾತ್ರ ಇದೆ ಅದಕ್ಕೆ ನಾನು ನೋಡಕ್ಕಾಗಲ್ಲ ಬಿಡಿ… ಅಂದಾಗ ಓಹೋ ನಾನೇ ಚಾರ್ಜ್‌ಗೂ ಹಾಕ್ಬೇಕಾ??

ಸರಿ… ಪೂಜೆಗೆ ಶುರು ಮಾಡಿ ನೋಡಿದಾಗ… ಹೂವಿನ ತಟ್ಟೆ ಖಾಲಿ… ದಿನಾ ದಾಸವಾಳ ಅರಳಿ ನಗುತ್ತಿದ್ದ ದೃಶ್ಯ ಇವತ್ತು ಇಲ್ಲ… ಯಾ…ಕೆ??? ಪ್ರಶ್ನೆಗೆ ಉತ್ತರ ಸಿಕ್ಕಿತು. ನಿನ್ನೆ ಮೊಗ್ಗು ಬಿಡಿಸಿ ತಂದು ಜೋಡಿಸಿಲ್ಲವಲ್ಲ ಅದೂ ಕೂಡ ಅವರ ಕೆಲಸ. ಹಾಗಾಗಿ ನನಗೆ ನೆನಪಾಗಿಲ್ಲ… ಏನಪ್ಪಾ ಈ ಮನೆಯ ಸೂತ್ರಧಾರಿ ಪಾತ್ರಧಾರಿಯು ಗೈರು ಹಾಜರಾಗಿದ್ದಕ್ಕೆ ನಿನಗೆ ಆ ಹೂವೆ ಇಲ್ಲವಲ್ಲ… ಅಂದುಕೊಂಡೆ. ಫ್ರಿಜ್ಜಿನಲ್ಲಿ ಇದ್ದ ಗುಲಾಬಿಗಳನ್ನು ತೆಗೆದು ಮುಡಿಸಿದೆ.

ಫೋನ್ ಬಂತು. ತಂಗಿ ಫ್ಯಾಮಿಲಿ ಇನ್ನೊಂದು ಫಂಕ್ಷನ್‌ಗೆ ಹೋಗ್ಬೇಕಾದ್ರೆ ಹಾಗೆ ಒಂದು ವಿಸಿಟ್ ಇಲ್ಲಿಗೆ ಬರ್ತಾರೆ ಅಂತ… ಖುಷಿಯಾಯಿತು. ಆದರೆ ಅಡುಗೆಗೆ ತರಕಾರಿ ಹುಡುಕಿದೆ. ಗುಂಡು ಬದನೆ, ಹಸಿರು ಬದನೆ ಇತ್ತು. ಅವರಿದ್ದರೆ ಎರಡೂ ಒಂದೇ ದಿನ… ನೋ ಚಾನ್ಸ್… ಪರವಾಗಿಲ್ಲ ಮಾಡೋಣ ಅಂತ ಹೆಚ್ಚಿಕೊಂಡೆ.

ಅವರ ನೆನಪಾಯಿತು…. ಎರಡು ಪಾತ್ರೆಯಲ್ಲಿ ನೀರಿಟ್ಟು… ತೊಳೆದು … ಸಣ್ಣಗೆ …ನಾಜೂಕಾಗಿ ಹೆಚ್ಚಿ… ಮತ್ತೆ ಆ ನೀರು  ತೊಳೆದ ನೀರು… ‘ಗಿಡಕ್ಕೆ ಹಾಕ್ರಿ ಜಿ ಕೆ ಜೆ… ಹಾಕ್ತೀರಾ….ಹಾಕಿದ್ರಾ…’ ಇತ್ಯಾದಿ ಪ್ರಶ್ನೆಗಳು. ರೇಗಿ ಹೋಗುತ್ತೆ… ಇವತ್ತು ಏನು ಬೇಡ.. ನೀರಿಲ್ಲೇ ಚೆಲ್ತೀನಿ. ನಾಜೂಕಾಗಿಯೂ ಬೇಡ….ಎಲ್ಲಾ  ನಿಯಮಗಳಿಗೂ ರಜೆ… ಆರಾಮ್ ಮಾಡೋಣ ಅಂತ ಹರಡಿಕೊಂಡು ಮಾಡಿದೆ. ಇವತ್ತು ಹಿಟ್ಟು ಉಕ್ಕರಿಸಿದ ರೊಟ್ಟಿ.. ಕಾರಣ ಅದು ಮಾಡಬೇಡ್ರೀ.. ಸುಮ್ಮನೆ ಹಿಟ್ಟೆಲ್ಲಾ ಹರಡಿಕೊಂಡು ರಂಪ ಆಗುತ್ತೆ…. ನಿಮಗೂ ಕಷ್ಟ ಆಗುತ್ತೆ … ಅನ್ನೋ ಕಾಳಜಿ ಮಾಡುವ ಮನುಷ್ಯನ ಗೈರು…

ಬೆಳಗ್ಗೆ ಇನ್ನು 11 ಕೂಡ ಆಗಿರಲ್ಲ ಮಲ್ಕೊಳಿ…. ರೆಸ್ಟ್ ತಗೋಳಿ ಅಂತಾ ಇರೋದು. ಯಾಕೆ ಹಾಗೆ ಹೇಳ್ತೀರಿ ಅಂದ್ರೆ… ಮಧ್ಯಾಹ್ನ ತಾವು ಮಲಗುವಾಗ ತಮಗೆ  ಗಿಲ್ಟ್ ಇರಬಾರದಂತೆ.! ಅದಕ್ಕೆ ಇವತ್ತು ಸುಮ್ಮನೆ ಇರಬೇಕು. ನಿದ್ದೆನೇ ಮಾಡಬಾರದು ಅನ್ನಿಸ್ತು.

ಸಂಜೆ ಹೊತ್ತಿಗೆ ಒಂಥರಾ ಸುಸ್ತು. ಯಾಕೆ ಹೀಗೆ ಅಂದ್ರೆ ಹೋ ಹೋ ಬಿಪಿ ಮಾತ್ರ ತಗೊಂಡಿಲ್ಲ… ಪಾಪ… ದಿನಾ ಅವರು ‘ತಗೋ’ ಅಂತ ಹೇಳಿ ಕೈಗೆ ತಂದು ಕೊಡ್ತಿದ್ರಲ್ಲ ಅಂತ ಅವರ ಬೆಲೆ ಸ್ವಲ್ಪ ಅರ್ಥ ಆದಂತೆ ಆಯ್ತು.

ಅದಿರಲಿ… ಬೆಳಗ್ಗೆ ಏನಾಗಿತ್ತು ಗೊತ್ತಾ? ಅಳಿಯ ಬರ್ತಾನೇನೋ ಅಂತ… ಕಾಫಿಗೆ ರೆಡಿ ಮಾಡಲು ನೋಡಿದೆ. ಆಗ ಬೆಳಗ್ಗೆ 8:00 ಗಂಟೆ. ಫ್ರಿಡ್ಜ್‌ನಲ್ಲಿ ಹಾಲಿಲ್ಲ. ಅರೆ… ಅಂದುಕೊಂಡು ನೋಡಿದ್ರೆ… ನಾನು ಹೊರಗಿನಿಂದ ಹಾಲು ಒಳಗೆ ತಂದೇ ಇಲ್ಲ… ಅಂದರೆ ಎಂಟು ಗಂಟೆ ಆದ್ರೂ ಹಾಲು ಪಾಪ ಹೊರಗೆ ಬ್ಯಾಗಲ್ಲಿ.. ಬಾಗಿಲಲ್ಲಿ.. ನೇತಾಡ್ತಾ ಇವರಿಗೆ ಕಾಯ್ತಾ ಇದೆ. ದಿನ ಕಣ್ಣು ಬಿಟ್ಟ ತಕ್ಷಣ ಒಳಗೆ ತಂದು ತಣ್ಣಗೆ ಕೂರಿಸುತ್ತಿದ್ದ ಪಾತ್ರದಾರಿಯ ಗೈರು. ಹಾಲು, ಮೊಸರು, ಪೇಪರ್‌ಗಳು ನನ್ನನ್ನು ನೋಡಿ ‘ಗುರ್’ ಅಂತ ಗುರಾಯಿಸಿದವು .

ಸದ್ಯ ಮಗಳು ಬರುವ ಮೊದಲು ನೋಡಿದೆನಲ್ಲ… ಬದುಕಿದೆ… ಇಲ್ಲದಿದ್ದರೆ “ನೋಡಿದ್ರಾ… ನಮ್ಮಪ್ಪ ಒಂದೆರಡು ದಿನ ಊರಿಗೆ ಹೋದರೆ ಹೇಗಿರುತ್ತೆ ನಿಮ್ಮ ದಿನಚರಿ” ಅಂತ ಅಂತಿದ್ಲು.

ಹೀಗೆ… ಅಂತೂ ಅವರಿದ್ದರೆ ಇದು “ಮನೆ” ಅವರಿಲ್ಲದಿದ್ದರೆ ‘ವರ್ಕ್ ಶಾಪ್’ ತರ ಅಂತ ಅನಿಸಿತು.

ಫೋನ್ ತೆಗೆದುಕೊಂಡೆ ಯಾವಾಗ ಬರ್ತೀರಾ ಅಂತ ಕೇಳಕ್ಕೆ… ‘ಅವರಿದ್ರೆ ಸರಿಯಪ್ಪʼ ಅನ್ನಿಸ್ತು ಹಾಗೆ ಹೇಳಿಬಿಡೋಣ ಅಂದ್ರೆ.. ಕೋಡು ಮೂಡುತ್ತಲ್ಲ… ಅನ್ನಿಸಿತು. ಕೋಡಾದರೆ ಮುರಿಯಬಹುದು… ಮುಖದಲ್ಲಿ ಮಂದಹಾಸ ಮೂಡಲಿ  ಪಾಪ… ಅಂತ ರಿಂಗಾಯಿಸಿದೆ.

About The Author

ಜಯಶ್ರೀ ವಸಂತ್

ಜಯಶ್ರೀ ವಸಂತ್ ನಿವೃತ್ತ ಕನ್ನಡ ಉಪನ್ಯಾಸಕಿ. ಓದು, ಬರಹ, ನಾಟಕ, ಹಾಡು, ಹಸೆಗಳಲ್ಲಿ ಆಸಕ್ತಿ. ಕನ್ನಡ ವ್ಯಾಕರಣದ ಮತ್ತು ವಿಜ್ಞಾನ ಕ್ಷೇತ್ರದ ಮಹಿಳಾ ಸಾಧಕಿಯರ ಕುರಿತಾದ ಸುಮಾರು 60 ವಿಡಿಯೋಗಳನ್ನು ಮಾಡಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ