ವಿಭಾ, “ಅಲ್ಲಾ ಕಾವ್ಯಕ್ಕ, ಆಕ್ಸಿಜನ್ಗೂ, ಸಮುದ್ರಕ್ಕೂ ಏನು ಸಂಬಂಧ? ಮರಗಿಡಗಳು ತಾನೇ ಆಮ್ಲಜನಕ ನೀಡೋದು ನಮ್ಗೆ?” ಎಂದು ಮರು ಪ್ರಶ್ನಿಸಿದಳು. ಆಗ ಕಾವ್ಯ, “ಅಲ್ಲ, ಪ್ರತೀ ವರ್ಷ ‘ಪರಿಸರ ದಿನ’ ಬಂದಾಗ್ಲೂ, ಭಾಷಣಗಳಲ್ಲಿ ಕೇಳಿರ್ತೀವಿ, ಲೇಖನಗಳನ್ನ ಓದಿರ್ತೀವಿ, ಮರಗಳನ್ನ ಕಡೀಬಾರ್ದು. ಮರಗಳೇ ಇಲ್ದೇ ಇದ್ರೆ ನಮಗೆ ಉಸಿರಾಡೋಕೆ ಆಮ್ಲಜನಕ ಎಲ್ಲಿಂದ ಸಿಗತ್ತೆ ಅಂತ! ನಿಜಾ, ಮರಗಳನ್ನ ಕಡೀಬಾರ್ದು. ಪ್ರತೀ ಮರವೂ ತನ್ನದೇ ರೀತೀಲಿ ವಿಶಿಷ್ಟ ಮತ್ತು ಭೂಮಿಗೆ, ಭೂಮಿಯ ಸಣ್ಣ ಪುಟ್ಟ ಕಣ್ಣಿಗೆ ಕಾಣದ ಜೀವಿಗಳಿಂದಾ ಬೃಹತ್ ಜೀವಿಗಳವರೆಗೂ ಎಲ್ಲರಿಗೂ ನೂರಾರು ರೀತಿಯಲ್ಲಿ ಮರಗಳು ಮುಖ್ಯ. ಆದ್ರೆ, ಮರಗಿಡಗಳಿಗಿಂತ್ಲೂ ಹೆಚ್ಚು ಆಮ್ಲಜನಕವನ್ನ ಸಮುದ್ರವು ವಾತಾವರಣಕ್ಕೆ ಕೊಡುಗೆ ನೀಡತ್ತೆ. ಅದು ಹೇಗೆ ಗೊತ್ತಾ?
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನೇಳನೆಯ ಕತೆ
ಸಂಜೆಯ ತಂಗಾಳಿ ತಂಪಾಗಿ ಬೀಸುತ್ತಿದ್ದು, ಅಲೆಗಳ ಹಿಮ್ಮೇಳದಲ್ಲಿ ಸೂರ್ಯನ ತಂಪು ಚಹರೆ ಹೊಸದೇ ಲೋಕಕ್ಕೆ ಕೊಂಡೊಯ್ಯುತ್ತಿತ್ತು. ತಮ್ಮ ಪ್ರವಾಸದ ಭಾಗವಾಗಿ ಶಿರಸಿಯಿಂದ ಗೋಕರ್ಣಕ್ಕೆ ಬಂದ ಕಾವ್ಯಳ ಕುಟುಂಬ ‘ಯಾಣ’ದ ಪುರಾತನ ಶಿಲೆಗಳನ್ನು ಮನದುಂಬಿಸಿಕೊಂಡು, ಗೋಕರ್ಣದ ಸಮುದ್ರವನ್ನು ಭೇಟಿ ಮಾಡಲು ಬಂದಿದ್ದರು. ಮೊದಲೇ ಸಮುದ್ರವೆಂದರೆ ಹುಚ್ಚು ಕಾವ್ಯ, ವರ್ಣ ಮತ್ತು ಸಮುದ್ರರಿಗೆ. ಕಾರ್ ನಿಂತದ್ದೇ ಇಳಿದು ಸಮುದ್ರದ ತೀರಕ್ಕೆ ಓಡು ನಡಿಗೆಯಲ್ಲೇ ಮುಂದೆ ಹೋದರು. ವಿಭಾ ಮತ್ತು ಪ್ರಕಾಶ್ ಇಬ್ಬರೂ ಓಡಿದ ಮೂವರನ್ನೂ ಹಿಂಬಾಲಿಸುತ್ತಾ, ಇವರ ಹುಚ್ಚಾಟಕ್ಕೆ ನಗುತ್ತಾ ಮುಂದೆ ಸಾಗಿದರು.
ಸಮುದ್ರ ಮತ್ತು ವರ್ಣ ಇಬ್ಬರೂ ನೇರ ನೀರಿಗೇ ಧುಮುಕಿದರೆ, ಕಾವ್ಯಳಿಗೂ ಹಾಗೇ ಮಾಡಲು ಆಸೆಯಿದ್ದರೂ, ಸಮುದ್ರದ ತೀರದಲ್ಲಿ ಕಾಲನ್ನು ನೀರಿನ ಅಲೆಗಳಿಗೆ ಒಡ್ಡಿಕೊಳ್ಳುತ್ತಾ ನಿಂತಳು. ವಿಭಾ ಮತ್ತು ಪ್ರಕಾಶ್ ಕಡಲತೀರದಲ್ಲಿ ಕುಳಿತು ಆಗಸದಲ್ಲಿ ಅಸ್ತಮಾನಕ್ಕೆ ತಯಾರಾಗುತ್ತಿದ್ದ ಸೂರ್ಯನನ್ನು ಕಣ್ದುಂಬಿಕೊಂಡರು. ಆಗ ಪ್ರಕಾಶನ ಕಡೆಗೆ ತಿರುಗಿ ವಿಭಾ, “ಬಾವ, ನಮ್ಮ ಯಾಣದ ಶಿಲೆಗಳಿಗಿಂತಾ ತುಂಬಾ ಹಳೆಯದಲ್ವಾ ಈ ಸಮುದ್ರ? ಎಷ್ಟು ಹಳೇದಿರ್ಬಹುದು?” ಎಂದಳು. ಆಗ ಪ್ರಕಾಶ್, “ಇಲ್ಲ ವಿಭಾ, ಭೂಮಿಯು ಸೃಷ್ಟಿಯಾಗೋ ಪ್ರಕ್ರಿಯೆಯ ಭಾಗವಾಗಿ ಮತ್ತು ಫಲವಾಗಿ, ಭೂಮಿಯ ಒಳಗೆ ಮತ್ತು ಮೇಲ್ಭಾಗದಲ್ಲಿ ಆಗ್ತಾ ಇದ್ದ ಅನೇಕ ಬದಲಾವಣೆಗಳ ಫಲಿತಾಂಶವಾಗಿ ಬೆಟ್ಟಗಳೂ, ಶಿಲೆಗಳೂ, ನೀರಿನ ಪಾತ್ರಗಳೂ ಸೃಷ್ಟಿಯಾದ್ವು. ಹಾಗೆ, ಸುಮಾರು ೬ ಕೋಟಿ ವರ್ಷಗಳ ಹಿಂದೆ ಈ ಅರಬ್ಬೀ ಸಮುದ್ರ ಸೃಷ್ಟಿಯಾಯ್ತು. ಹಾಗಾಗಿ, ಈ ಸಮುದ್ರ ನಮ್ಮ ೨೫೦ ಕೋಟಿ ಹಳೇ ಶಿಲೆಗಳ ಮುಂದೆ ಇನ್ನೂ ಹಸುಗೂಸು.” ಎಂದ ನಗುತ್ತಾ. ಇದರಿಂದ ಅಚ್ಚರಿಗೊಳಗಾದ ವಿಭಾ, “ಅಲ್ಲಾ ಬಾವ, ನೀವು ಹೇಳ್ತಾ ಇರೋ ಮಾಹಿತಿ ಸರಿಯಾಗಿದ್ಯಾ ಅಂತ ಡೌಟಾಗ್ತಾ ಇದೆ. ಭೂಮಿಯ ಪ್ರಾರಂಭದ ದಿನಗಳಲ್ಲೇ ಸಮುದ್ರ ಇತ್ತಲ್ವಾ? ಯಾಣದ ಶಿಲೆಗಳು ರಚನೆಯಾದ ಮೇಲೆ, ಕೋಟ್ಯಂತರ ವರ್ಷಗಳ ಗ್ಯಾಪ್ ಆಗಿ, ಆಮೇಲೆ ಇಲ್ಲಿ ಕಾಣ್ತಾ ಇರೋ ಈ ಸಮುದ್ರ ರಚನೆಯಾಯ್ತಾ? ಅಬ್ಬ! ನಂಬೋಕೇ ಆಗ್ತಿಲ್ಲ” ಎಂದಳು.
ಇದರಿಂದ ಸ್ವಲ್ಪವೂ ವಿಚಲಿತನಾಗದ ಪ್ರಕಾಶ್, “ನನ್ನ ಮಾಹಿತಿಯ ಮೇಲೆ ಡೌಟ್ ಆದ್ರೆ ಒಳ್ಳೇದೇ! ವಿಜ್ಞಾನ ಯಾವುದನ್ನೂ ಪ್ರಶ್ನಿಸ್ದೇ ಒಪ್ಪಬೇಡ ಅಂತಲೇ ಹೇಳೋದು. ಕಣ್ಣಿಗೆ ಕಾಣುವ, ಕಾಣದ ಎಲ್ಲವನ್ನೂ ಪ್ರಶ್ನಿಸು, ಪರೀಕ್ಷಿಸು, ಪ್ರಯೋಗದ ಫಲಿತಾಂಶದ ಮೇಲೆ ಅರ್ಥಮಾಡಿಕೋ ಅನ್ನತ್ತೆ ವಿಜ್ಞಾನ. ಹಾಗೇ, ಸಮುದ್ರತಜ್ಞರು, ಇತಿಹಾಸ ತಜ್ಞರ ಪ್ರಕಾರ ಇದು ತೀರ ಇತ್ತೀಚಿನ ಅಂದ್ರೆ ಕೇವಲ ೬ ಕೋಟಿ ಹಳೇ ಸಮುದ್ರ. ಹಾಗೆ ನೋಡಿದ್ರೆ, ಅತ್ಯಂತ ಹಳೇ ಸಮುದ್ರ ಅಂತ ಈಗ ಲಭ್ಯ ಇರೋದು ನಮ್ಮ ‘ಪೆಸಿಫಿಕ್ ಓಶನ್’! ಅದು ಸುಮಾರು ೧೮-೨೦ ಕೋಟಿ ವರ್ಷಗಳಷ್ಟು ಹಳೇದು. ಅದಕ್ಕೂ ಮುಂಚೆ ಭೂಮಿಯ ರಚನೆಯಾಗ್ತಾ ಇದ್ದಾಗ ಮೊದಮೊದಲು ಇದ್ದ ಸಮುದ್ರಗಳು, ಭೂಮಿಯ ಮೇಲ್ಮೈಯ ‘ಟೆಕ್ಟಾನಿಕ್’ ಪದರಗಳ ನಿರಂತರ ಚಲನೆಯಿಂದ ಈಗ ಭೂಮಿಯ ಒಳಸೇರಿವೆ.” ಎಂದ. ಇದನ್ನು ಕೇಳಿ, ಬಿಟ್ಟ ಬಾಯಿ ಬಿಟ್ಟಂತೆಯೇ ಇದ್ದ ವಿಭಾಳನ್ನು ನೋಡಿ, “ಏನಾಯ್ತೋ ವಿಭಾ?” ಎಂದ ನಗುತ್ತಾ. ಆಗ ವಿಭಾ, “ಅಲ್ಲಾ ಬಾವ, ಹಂಗಾದ್ರೆ, ನಮ್ ಯಾಣದ ಕಡುಗಪ್ಪು ಶಿಲೆಗಳು ಕೇವಲ ಈ ಅರಬ್ಬೀ ಸಮುದ್ರಕ್ಕಿಂತಾ ಹಳೇದಲ್ಲಾ, ಭೂಮಿಯ ಮೇಲೆ ಈಗ ಇರೋ ಎಲ್ಲಾ ಸಮುದ್ರಗಳಿಗಿಂತಲೂ ಹಳೇದು! ಅಬ್ಬ! ಇದನ್ನ ಅರ್ಥ ಮಾಡ್ಕೊಳಕ್ಕೇ ಟೈಮ್ ಬೇಕಾಗ್ತಾ ಇದೆ!” ಎಂದಳು.
ಅಷ್ಟರಲ್ಲಿ, ಕಾವ್ಯಳೂ ಬಂದು ಇವರ ಬಳಿ ಕೂತು, ತನ್ನ ಪ್ರೀತಿಯ ಸಮುದ್ರದೆಡೆಗೆ ದೃಷ್ಟಿನೆಟ್ಟಳು. ಕಾವ್ಯಳಿಗಂತೂ ಸಮುದ್ರವೆಂದರೆ ಹುಚ್ಚುಪ್ರೀತಿ. ಮಗನಿಗೆ ಆ ಹೆಸರಿಡಲೂ ಅದೊಂದು ಮುಖ್ಯ ಕಾರಣವಾಗಿತ್ತು ಕೂಡ. ವಿಭಾ ಮತ್ತು ಪ್ರಕಾಶನ ಮಾತನ್ನು ಆಲಿಸಿದ್ದ ಕಾವ್ಯ, ವಿಭಾಳೆಡೆಗೆ ತಿರುಗಿ, “ವಿಭಚ್ಚು, ಈ ಸಮುದ್ರ ಎಷ್ಟು ಹಳೇದಂತ ಗೊತ್ತಾಯ್ತಲ್ಲ. ಸಮುದ್ರಗಳಿಲ್ದೇ ಇದ್ದಿದ್ರೆ, ಭೂಮಿಯ ಮೇಲೆ ಜೀವಿಗಳೂ ಇರ್ತಾ ಇರ್ಲಿಲ್ಲ, ಉಸಿರಾಡೋಕೆ ಆಕ್ಸಿಜನ್ ಕೂಡ ಇರ್ತಾ ಇರ್ಲಿಲ್ಲ” ಎಂದಳು.
ಆಗ ವಿಭಾ, “ಅಲ್ಲಾ ಕಾವ್ಯಕ್ಕ, ಆಕ್ಸಿಜನ್ಗೂ, ಸಮುದ್ರಕ್ಕೂ ಏನು ಸಂಬಂಧ? ಮರಗಿಡಗಳು ತಾನೇ ಆಮ್ಲಜನಕ ನೀಡೋದು ನಮ್ಗೆ?” ಎಂದು ಮರು ಪ್ರಶ್ನಿಸಿದಳು. ಆಗ ಕಾವ್ಯ, “ಅಲ್ಲ, ಪ್ರತೀ ವರ್ಷ ‘ಪರಿಸರ ದಿನ’ ಬಂದಾಗ್ಲೂ, ಭಾಷಣಗಳಲ್ಲಿ ಕೇಳಿರ್ತೀವಿ, ಲೇಖನಗಳನ್ನ ಓದಿರ್ತೀವಿ, ಮರಗಳನ್ನ ಕಡೀಬಾರ್ದು. ಮರಗಳೇ ಇಲ್ದೇ ಇದ್ರೆ ನಮಗೆ ಉಸಿರಾಡೋಕೆ ಆಮ್ಲಜನಕ ಎಲ್ಲಿಂದ ಸಿಗತ್ತೆ ಅಂತ! ನಿಜಾ, ಮರಗಳನ್ನ ಕಡೀಬಾರ್ದು. ಪ್ರತೀ ಮರವೂ ತನ್ನದೇ ರೀತೀಲಿ ವಿಶಿಷ್ಟ ಮತ್ತು ಭೂಮಿಗೆ, ಭೂಮಿಯ ಸಣ್ಣ ಪುಟ್ಟ ಕಣ್ಣಿಗೆ ಕಾಣದ ಜೀವಿಗಳಿಂದಾ ಬೃಹತ್ ಜೀವಿಗಳವರೆಗೂ ಎಲ್ಲರಿಗೂ ನೂರಾರು ರೀತಿಯಲ್ಲಿ ಮರಗಳು ಮುಖ್ಯ. ಆದ್ರೆ, ಮರಗಿಡಗಳಿಗಿಂತ್ಲೂ ಹೆಚ್ಚು ಆಮ್ಲಜನಕವನ್ನ ಸಮುದ್ರವು ವಾತಾವರಣಕ್ಕೆ ಕೊಡುಗೆ ನೀಡತ್ತೆ. ಅದು ಹೇಗೆ ಗೊತ್ತಾ? ಸಮುದ್ರದ ಮೇಲ್ಮೈಯಲ್ಲಿ ಹಸಿರು ಜೀವಿಗಳು ತೇಲ್ತಾ ಇರತ್ವೆ. ‘ಫೈಟೋ ಪ್ಲಾಂಕ್ಟನ್’ ಅಂತೀವಿ ಅವುಗಳನ್ನ. ಅವುಗಳಲ್ಲಿ ಕೆಲವು ‘ಆಲ್ಗೆ’ ಅಂದ್ರೆ ಶೈವಲಗಳು ಕೂಡ ಇರತ್ವೆ. ಸಸ್ಯಸಮಾನವಾದ ಈ ಸೂಕ್ಷ್ಮಜೀವಿಗಳು ಸೂರ್ಯನ ಬೆಳಕನ್ನ ಉಪಯೋಗಿಸಿ, ಫೋಟೋಸಿಂಥೆಸಿಸ್ ಅಂದ್ರೆ ಬೆಳಕಡುಗೆ ಮಾಡಿ, ಆಮ್ಲಜನಕವನ್ನ ಗಾಳಿಗೆ ಬಿಡುಗಡೆ ಮಾಡತ್ವೆ. ನಮ್ಮ ವಾತಾವರಣದಲ್ಲಿ ಇರೋ ಆಮ್ಲಜನಕದಲ್ಲಿ ೫೦% ಕ್ಕೂ ಹೆಚ್ಚು ಆಮ್ಲಜನಕ ಬರೋದು ಇದೇ ಸೂಕ್ಷ್ಮಜೀವಿಗಳಿಂದ. ಇವು ಮರಗಳು ಸೃಷ್ಟಿಯಾಗೋಕೂ ಮೊದಲಿಂದ್ಲೂ ಭೂಮಿಯ ಮೇಲಿದ್ವು ಗೊತ್ತಾ? ಇವುಗಳಿಂದ್ಲೇ ‘ಆಮ್ಲಜನಕ’ ನಮ್ಮ ಗಾಳೀಲಿ ತುಂಬಿಕೊಳ್ತು. ಈ ಸೂಕ್ಷ್ಮಾಣುಜೀವಿ ‘ಫೈಟೋ ಪ್ಲಾಂಕ್ಟನ್’ ಇರ್ಲಿಲ್ಲ ಅಂದ್ರೆ, ಆಕ್ಸಿಜನ್ ಉಸಿರಾಡೋ ಯಾವ ಪ್ರಾಣಿ-ಪಕ್ಷಿಯೂ ಇರ್ತಾ ಇರ್ಲಿಲ್ಲ ಈ ಭೂಮಿ ಮೇಲೆ. ಅಂದ್ರೆ, ನಾವೆಲ್ರೂ ಈ ಫೈಟೋಪ್ಲಾಂಕ್ಟನ್ಗೆ, ಅದನ್ನ ಸಾಕಿ ಸಲಹೋ ಸಮುದ್ರಕ್ಕೆ ಅದೆಷ್ಟು ಋಣಿಯಾಗಿರ್ಬೇಕು ಅಲ್ವಾ?” ಎಂದಳು.

ಇದನ್ನು ಕೇಳಿದ ವಿಭಾಗೆ ಸಮುದ್ರದ ಮೇಲೆ ಮತ್ತಷ್ಟು ಪ್ರೀತಿ, ಗೌರವ ಹೆಚ್ಚಾಯ್ತು. ಆಗ ವಿಭಾ, “ಹೌದಲ್ವಾ ಕಾವ್ಯಕ್ಕಾ, ಮೊದಮೊದಲು ಈ ಭೂಮಿಯ ಮೇಲೆ ‘ಜೀವಿ’ ಅಂತ ಹುಟ್ಟಿದ್ದು ಸಮುದ್ರದಲ್ಲೇ, ಅಲ್ವಾ?” ಎಂದಳು. ಇದಕ್ಕೆ ಉತ್ತರ ನೀಡೋಕೆ ಕಾವ್ಯ ವಿಭಾಳೆಡೆಗೆ ತಿರುಗುವಷ್ಟರಲ್ಲಿ, ಸಮುದ್ರ ಮತ್ತು ವರ್ಣ ಓಡಿ ಬಂದು, “ಸನ್ ಸೆಟ್ ಆಗ್ತಾ ಇದೆ, ಹೊಸ ಥರಾ ಒಂದು ಪೋಸ್ ಇದೆ, ಹಾಗೆ ಮಾಡೀ ಫೋಟೋ ತೆಕ್ಕೊಳೋಣ ಬನ್ನಿ, ಬನ್ನಿ” ಎಂದು ಇವರೆಲ್ಲರನ್ನೂ ಎಬ್ಬಿಸಿಕೊಂಡು ಅಲೆಗಳ ಕಡೆ ಹೊರಟರು.
ಗಾಡ ಕಿತ್ತಳೆ ಬಣ್ಣಕ್ಕೆ ತಿರುಗಿದ್ದ ಆಗಸವನ್ನು ನೋಡೋಕೆ ಎರಡು ಕಣ್ಣು ಸಾಲದು. ಮಿತಿಯಿಲ್ಲದಂತೆ ಕಾಣುವ, ಕಣ್ಣೊಗೆದಷ್ಟೂ ವಿಶಾಲವಾದ ಸಮುದ್ರದ ಒಡಲೊಳಗೆ ನೋಡನೋಡುತ್ತಾ ಬಿಸಿಯಾದ ಸೂರ್ಯ ಇಳಿಯುತ್ತಿದ್ದ. ಕಮ್ಮಾರರು ಕೆಂಪಗೆ ಕಾಯಿಸಿದ್ದ ಲೋಹವನ್ನು ನೀರಿನಲ್ಲಿ ಅದ್ದಿದಾಗ ‘ಚುಸ್’ ಎಂದು ಬರುವ ಸದ್ದಿನಂತೆ, ಸಮುದ್ರದೊಳಗೆ ಇಳಿಯುತ್ತಿರುವ ಬಿಸಿಗೋಲವೂ ಸದ್ದು ಮಾಡಬೇಕಲ್ಲಾ ಎನಿಸುವಂತಿತ್ತು ಸೂರ್ಯಾಸ್ತದ ಕ್ಷಣ. ಜೀವನದಲ್ಲಿ ಅದೆಷ್ಟು ಜಿಗುಪ್ಸೆಯಿದ್ದವರೂ ಒಂದು ಕ್ಷಣ ತಮ್ಮ ದುಮ್ಮಾನವನ್ನು ಮರೆಯಬೇಕು ಎನಿಸುವಷ್ಟು ಸುಂದರ ಸೂರ್ಯಾಸ್ತವದಾಗಿತ್ತು. ಹಾಗೆ ನೋಡಿದರೆ, ಪ್ರತಿ ಸೂರ್ಯಾಸ್ತವೂ ಹೊಸತೇ. ಹೇಗೆ ಒಂದು ಬೆರಳಚ್ಚಿನಂತೆ ಮತ್ತೊಂದಿರುವುದಿಲ್ಲವೋ, ಒಂದು ಸೂರ್ಯಾಸ್ತದಂತೆ ಮತ್ತೊಂದಿರುವುದಿಲ್ಲ. ಯಾರು ನೋಡಲಿ ಬಿಡಲಿ, ತನ್ನ ಪಾಡಿಗೆ ತಾನು ನಡೆಯುವ ಈ ಅದ್ಭುತ ವಿದ್ಯಮಾನ ಎಂತಹ ದುರ್ಭರ ಬದುಕನ್ನೂ ಕಾವ್ಯಮಯವನ್ನಾಗಿಸಬಹುದು. ಇಂತಹ ಸುಂದರ ಸೂರ್ಯಾಸ್ತಕ್ಕೆ ಸಾಕ್ಷಿಯಾಗುತ್ತಾ, ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾ, ಮತ್ತೆ ದಡಕ್ಕೆ ಬಂದು ಕೂತರು ಎಲ್ಲರೂ.
ನೀರಿನಲ್ಲಿ ಆಡಿ, ನೆಂದು ತೊಪ್ಪೆಯಾಗಿದ್ದ ಸಮುದ್ರ ಮತ್ತು ವರ್ಣ, ನಡುಗುತ್ತಾ, ನಗುತ್ತಾ ಮಾತಿಗೆ ಜೊತೆಯಾದರು. “ಅಲ್ಲ ಕಣ್ರೋ, ಈಗ ನೀರಿಗೆ ಇಳಿಯೋ ಪ್ಲ್ಯಾನ್ ಇರ್ಲಿಲ್ಲ ತಾನೆ? ಏನೋ ಸಮುದ್ರವನ್ನ ನೋಡಿದ ಖುಷಿಗೆ, ಒಮ್ಮೆ ಕಾರು ನಿಲ್ಸಿದ್ದೇ ತಡ, ಇಳಿದು ಓಡೇ ಬಿಡೋದಾ ಸಮುದ್ರಕ್ಕೆ? ಇನ್ನೂ ಎರಡು ದಿನ ಇಲ್ಲೇ ಇರ್ತೀವಿ. ನಾಳೆ ಬೆಳಿಗ್ಗೆ, ಸಂಜೆ ಎಲ್ಲಾ ಇಲ್ಲೇ ಬರ್ತೀವಲ್ಲ, ಆಗ ಆಡಬಹುದಿತ್ತು. ಇವತ್ತು ಸುಮ್ನೆ ಸಮುದ್ರತೀರದಲ್ಲಿ ಕೂತು, ನೋಡಿ ಹೋಗ್ಬಹುದಿತ್ತಲ್ವಾ? ಟವೆಲ್, ಛೇಂಜ್ ಮಾಡೋಕೆ ಬಟ್ಟೆ ಎಲ್ಲಾ ತಂದೇ ಇಲ್ಲ. ಹೋಗಿ, ಕಾರಲ್ಲಿರತ್ತೆ, ತಂದು ಛೇಂಜ್ ಮಾಡ್ತೀರಾ?” ಎಂದು ಕೇಳಿದ ಪ್ರಕಾಶ್. ಆಗ ಸಮುದ್ರ ಮತ್ತು ವರ್ಣ, ನಡುಗುತ್ತಲಿದ್ದರೂ, ತಮಗೇನೂ ಆಗೇ ಇಲ್ಲವೆಂಬಂತೆ, “ನೋ ಪ್ರಾಬ್ಲೆಮ್, ನೋ ಪ್ರಾಬ್ಲೆಮ್. ಇನ್ನೂ ಸ್ವಲ್ಪ ಹೊತ್ತು ಕೂತು ಹೋಗೋಣ ಪರ್ವಾಗಿಲ್ಲ” ಎಂದರು.
ತನ್ನ ಚಡ್ಡಿ ಜೇಬಿನಲ್ಲಿ ಅಡಗಿದ್ದ ಮರಳನ್ನು ಉದುರಿಸುತ್ತಾ, ಸಮುದ್ರ ನೆಗೆದಾಡುತ್ತಿದ್ದ. “ಅಮ್ಮ, ನಿಮಗ್ಗೊತ್ತಾ ಇಲ್ಲಿ ಎಷ್ಟು ಮರಳಿದೆ ಅಂತ? ಅಂದ್ರೆ, ನನ್ ಜೇಬಲ್ಲಿ ಅಲ್ಲಾ, ಸಮುದ್ರ ತೀರದಲ್ಲಿ.” ಎಂದ. ಆಗ ಕಾವ್ಯ, “ಕೋಟಿ ಕೋಟಿ ಮರಳ ಕಣಗಳಿರತ್ವೆ ಸಮುದ್ರ. ಹೇಗೆ ಎಣಿಸೋದು ಅಲ್ವಾ?” ಎಂದಳು. ಅಲ್ಲಿಂದ ಮುಂದಕ್ಕೆ ತನ್ನ ಉತ್ತರವನ್ನ ಒಂದಷ್ಟು ಮೆಲೋಡ್ರಾಮಾಟಿಕ್ ಮಾಡುವ ಉದ್ದೇಶವಿತ್ತು ಅವಳಿಗೆ ಅಷ್ಟರಲ್ಲಿ ಸಮುದ್ರ, “ಅಮ್ಮ, ಒಬ್ಬ ಸೈಂಟಿಸ್ಟ್ ಹೇಳ್ತಾ ಇದ್ರು ಒಂದು ಇಂಟರ್ವ್ಯೂ ಅಲ್ಲಿ, ನಾವು ಟೆಲಿಸ್ಕೋಪ್ ಮೂಲಕ ಈ ಯೂನಿವರ್ಸಿನ ಅದೆಷ್ಟು ನಕ್ಷತ್ರಗಳನ್ನ ನೋಡ್ಬಹುದೋ, ಅದಕ್ಕಿಂತಲೂ ಹೆಚ್ಚು ಕಣಗಳು ಈ ಸಮುದ್ರ ತೀರದ ಮರಳಲ್ಲಿ ಇದೆ ಅಂತಾ.” ಎಂದ. ಅಷ್ಟರಲ್ಲಿ, ಫೈಟೋಪ್ಲಾಂಕ್ಟನ್ ಬಗ್ಗೆ ಮತ್ತಷ್ಟು ವಿವರಕ್ಕಾಗಿ ಫೋನಿನಲ್ಲಿ ಅಂತರ್ಜಾಲ ಎಡತಾಕುತ್ತಿದ್ದ ವಿಭಾ, “ಇಲ್ಲಿ ಮರಳ ಕಣಗಳು ಎಷ್ಟಿವೆಯೋ, ಅದಕ್ಕಿಂತ್ಲೂ ಜಾಸ್ತಿ ‘ಫೈಟೋಪ್ಲಾಂಕ್ಟನ್’ ಜೀವಕೋಶಗಳಿರತ್ವಂತೆ ಸಮುದ್ರದಲ್ಲಿ. ಮರಳ ಕಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಾ ಇರಲ್ಲ ಅಲ್ವಾ? ಆದ್ರೆ ಫೈಟೋಪ್ಲಾಂಕ್ಟನ್ ಸೂಕ್ಷ್ಮಾಣುಜೀವಿಗಳು ಕ್ಷಣಕ್ಷಣಕ್ಕೂ ತನ್ನ ಜೀವಕೋಶ ಅಂದ್ರೆ ‘ಸೆಲ್’ಗಳನ್ನ ಡಿವೈಡ್ ಮಾಡ್ತಾ, ಹೊಸ ಹೊಸ ಕೋಶಗಳು ಉತ್ಪಾದನೆ ಆಗ್ತಾ, ತನ್ನ ಸಂಖ್ಯೆಯನ್ನ ಹೆಚ್ಚಿಸಿಕೊಳ್ತಾ ಇರತ್ವಂತೆ” ಎಂದಳು. ಒಂದಕ್ಕಿಂತಲೂ ಒಂದು ಅಚ್ಚರಿದಾಯಕ ಮಾಹಿತಿಯನ್ನ ಮೆಲುಕು ಹಾಕುತ್ತಾ ಕುಳಿತ ಇವರಿಗೆ, ಅಲ್ಲೇ ಮಾರುತ್ತಿದ್ದ ಚುರುಮುರಿ ಮೆಲ್ಲುವ ಆಸೆಯಾಯಿತು. ಇವರ ಕಣ್ಣುಗಳು ಆ ಕಡೆ ತಿರುಗಿದ್ದನ್ನು ನೋಡಿ, ವರ್ಣ, “ವಿಭಕ್ಕಾ, ಕಾವ್ಯಕ್ಕನ ಫೋನ್ ಕೊಡು” ಎಂದು ಅರೆಕ್ಷಣದಲ್ಲೇ ಫೋನ್ ತೆಗೆದುಕೊಂಡು, ಚುರುಮುರಿ ಅಂಗಡಿಯವನ ಬಳಿಗೆ ಛಂಗನೆ ಹಾರಿ, “ಗೂಗಲ್ ಪೇ ನಡ್ಯತ್ತಾ ಅಣ್ಣಾ?” ಎಂದು ಮಾತಿಗೆ ಮೊದಲಿಟ್ಟಳು. ಸಮುದ್ರದ ಅಲೆಯ ಉಬ್ಬರವೇರೋಕೂ, ಇವರ ನಗುವಿನ ಅಲೆ ಏಳೋಕೂ ಸರಿಯಾಯ್ತು. ಆಗ ಪ್ರಕಾಶ್, “ಇವತ್ತು ಹುಣ್ಣಿಮೆಯಲ್ವಾ? ಅಲೆಗಳು ಹೆಚ್ಚೆಚ್ಚು ಎತ್ತರ ಏರ್ತಾ ಇವೆ. ಇನ್ನು ಸಮುದ್ರದಲ್ಲಿ ಆಡಿದ್ದು ಸಾಕು; ಈಗ ಮತ್ತೆ ಇಳೀಬೇಡಿ ನೀರಿಗೆ. ಚುರುಮುರಿ ತಿಂದು, ರೂಮಿಗೆ ಹೊರಡೋಣ.” ಎಂದ. ಆಗ ಸಮುದ್ರ, “ಇಷ್ಟು ಬೇಗ ಹೊರಡ್ಬೇಕಾ?” ಎಂದ ಬೇಸರದಿಂದ.

ಮಗನ ಬೇಸರಿಸಿದ ಮುಖ ನೋಡಿದ ಕಾವ್ಯಳಿಗೆ, ತನ್ನದೇ ಪ್ರತಿರೂಪ ಇದು ಎನಿಸಿ, “ಸಮುದ್ರ ಅಂದ್ರೆ ಅದೆಷ್ಟು ಆಸೆ ನಮ್ ಸಮುದ್ರಂಗೆ? ಈ ಹೆಸರಿಟ್ಟಿದ್ದೂ ಸಾರ್ಥಕ ಆಯ್ತು ನೋಡು ನಿಂಗೆ! ಬೇಜಾರ್ ಮಾಡ್ಕೋಬೇಡ್ವೋ ಕಂದ, ಬೆಳಿಗ್ಗೆನೂ ಇಲ್ಲಿಗೆ ಬರೋಣ, ಬೇಕಾದಷ್ಟು ಆಟ ಆಡಿಕೊಳ್ವಿಯಂತೆ” ಎಂದು ಸಮಾಧಾನ ಮಾಡಿದಳು. ಅಷ್ಟರಲ್ಲಿ ಎರಡು ಕೈಯಲ್ಲಿ ನಾಲ್ಕು ಪೊಟ್ಟಣ ಚುರುಮುರಿ ತಂದ ವರ್ಣ, ಎಲ್ಲರಿಗೂ ಹಂಚಿ, ತಾನೂ ಪೊಟ್ಟಣ ತೆರೆದು ಕೂತಳು. ಖಾರಖಾರವಾದ ಚುರುಮುರಿಯ ಮಂಡಕ್ಕಿಯು ಮೆತ್ತಗಾಗದಂತೆ ಚೂರೇ ಚಿಮುಕಿಸಿದ್ದ ತೆಂಗಿನೆಣ್ಣೆಯ ಘಮ, ಹದವಾಗಿ ಮಿಶ್ರಣವಾದ ತುರಿದ ತರಕಾರಿ ಮತ್ತು ಹುರಿದ ಕಡಲೆಬೀಜದ ರುಚಿ ಇವರೆಲ್ಲರ ನಾಲಗೆಗೆ ಮಜಾ ಕೊಡುತ್ತಿತ್ತು ಕುಳಿರ್ಗಾಳಿ, ಸುಂದರ ಸಮುದ್ರ ಮತ್ತು ಚೆಂದದ ಚುರುಮುರಿ – ಸ್ವರ್ಗಕ್ಕೇ ಕಿಚ್ಚು ಹಚ್ಚಲು ತಯಾರಾಗಿದ್ದ ಕಾವ್ಯಳ ಕುಟುಂಬ ಮರುದಿನ ಸಮುದ್ರಕ್ಕೆ ಭೇಟಿ ನೀಡಿದಾಗ ಏನೇನು ಮಾಡಿದರು ಎಂದು ತಿಳಿದುಕೊಳ್ಳಲು ಮುಂದಿನ ಸಂಚಿಕೆಗೆ ಕಾಯಬೇಕಿದೆ! ಅಲ್ಲಿಯವರೆಗೂ ನೀವೂ ಒಮ್ಮೆ ಚುರುಮುರಿ ಮಾಡಿಕೊಳ್ಳಲು ಮನೆಯಲ್ಲಿ ಸಾಮಗ್ರಿ ಉಂಟೇ ನೋಡಿ, ಇದ್ದರೆ ಮಾಡಿ, ತಿಂದು, ಮುಂದಿನ ಸಂಚಿಕೆಗೆ ತಯಾರಾಗಿ. ಏನಂತೀರಿ?
(ಹಿಂದಿನ ಕಂತು: ಬೀಜಾವೃತ ಅಪಘಾತ ವೃತ್ತಾಂತ!)
ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಕ್ಷಮಾ ಭಾನುಪ್ರಕಾಶ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಎಂಟು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಇವರ ‘ಜೀವಿಜ್ಞಾನ’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ೨೦೨೫-೨೬ನೆ ಸಾಲಿನ ‘ಶ್ರೇಷ್ಠ ಪುಸ್ತಕ’ ಪ್ರಶಸ್ತಿ ಲಭಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.


