ಯಾವಾಗ ಒಬ್ಬ ಮನುಷ್ಯ ಬೇರೆಯವರ ಕಣ್ಣಿಗೆ ಬರೀ ಒಂದು ಬಾಡಿಯಾಗಿ ಬದಲಾಗುತ್ತಾನೋ ಯಾರಿಗೂ ಗೊತ್ತಿಲ್ಲ. ಆದರೂ ಎಲ್ಲರೂ ತಾವೇನೋ ಶಾಶ್ವತವಾಗಿ ಇಲ್ಲೇ ಮೊಳೆ ಹೊಡೆದುಕೊಂಡು ಕೂರೋರ ಹಾಗೇ ಇಡೀ ಪ್ರಪಂಚವೇ ನಂದು ಅನ್ನೋ ಹಾಗೆ ಹೇಗೆ ವರ್ತಿಸುತ್ತೀವಿ!? ನಾಲಕ್ಕೇ ನಾಲಕ್ಕು ಕಾಸು ಜಾಸ್ತಿ ದುಡಿದ ಕೂಡಲೆ ತಲೆ ಮೇಲೊಂದು ಕೊಂಬು ಬಂದಂತೆ ನಡೆದುಕೊಳ್ಳುವುದು, ಧಾಷ್ಟ್ಯ, ಅಹಂಕಾರ, ಅತಿರೇಕದ ಆಟಗಳೋ!? ಅಯ್ಯೋ ಮನುಷ್ಯ ಜನ್ಮವೇ! ಅನ್ನಿಸಿತು. ಆ ಕ್ಷಣದಲ್ಲೂ ಡಿವಿಜಿಯವರ ಮಂಕುತಿಮ್ಮನ ಕಗ್ಗವೊಂದು ನೆನಪಾಯಿತು.
ಮೋಹನ್ ಮಂಜಪ್ಪ ಬರೆದ ಕತೆ “ಬದುಕು ಜಟಕಾಬಂಡಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ರಾತ್ರಿ ಸುಮಾರು ಎಂಟು ಗಂಟೆ. ಮಳೆ ಬಂದು ಆಗಷ್ಟೇ ನಿಂತಿತ್ತು, ರಸ್ತೆಗಳು ಇನ್ನೂ ತೇವದಿಂದ ಹೊಳೆಯುತ್ತಿದವು.
ಹೆಡ್‌ಲೈಟ್‌ನ ಬೆಳಕು ನೀರಿನ ಹನಿಗಳ ಮೇಲೆ ಪ್ರತಿಫಲಿಸಿ, ಹೆದ್ದಾರಿಯನ್ನು ಒಂದು ಕನ್ನಡಿಯಂತೆ ಮಾಡಿತ್ತು.
ಒಂದು ಬಿಳಿ ಬಣ್ಣದ ಸೆಡಾನ್ ಕಾರು ಹೆದ್ದಾರಿಯಲ್ಲಿ ವೇಗವಾಗಿ ಬೆಂಗಳೂರಿನಿಂದ ಕೋಲಾರದ ಕಡೆಗೆ ಸಾಗುತ್ತಿತ್ತು.
ಮುಂಭಾಗದಲ್ಲಿ ಸ್ಟೀರಿಂಗ್ ಹಿಡಿದು ವಿಜಯ್ ರೋಡಿನತ್ತ ಪೋಕಸ್ ಮಾಡಿದ್ದರೂ ಅವನು ಅನ್ಯಮನಸ್ಕನಾಗಿರುವುದು ಗೊತ್ತಾಗುತ್ತಿತ್ತು.
ಅವನ ಪಕ್ಕದಲ್ಲಿ ಅವನ ಆಪ್ತ ಸ್ನೇಹಿತನಾದ ನಾನು. ಹಿಂಬದಿಯ ಸೀಟಿನಲ್ಲಿ ವಿಜಯ್‌ನ ತಂಗಿ ನಂದಿನಿ.
ಹಿಂದಿನ ಸೀಟಿನಲ್ಲಿ ನಂದಿನಿ ಯಾರೊಂದಿಗೋ ಫೋನಿನಲ್ಲಿ ಮಾತನಾಡುತ್ತಿರುವುದು ಕಿವಿಗೆ ಬಿತ್ತು. “ಏನೂ ಸೀರಿಯಸ್ ಇಲ್ಲ ಅಲ್ವಾ?”…
ಆ ಕಡೆಯಿಂದ ಯಾರೋ, “ಇಲ್ಲ, ಚೆಕ್ಕಪ್‌ಗೆ ಗವರ್ನಮೆಂಟ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ, ನೀವು ಬೇಗ ಬನ್ನಿ”. ಫೋನ್ disconnect ಆದ ಸದ್ದು. ಮತ್ತೆ ಕಾರಿನ ತುಂಬಾ ಹೆಪ್ಪುಗಟ್ಟಿದ ಮೌನ.
ನಾವಿನ್ನೂ ಅರ್ಧ ದಾರಿಯನ್ನೂ ಕ್ರಮಿಸಿರಲಿಲ್ಲ. ಅಷ್ಟರಲ್ಲಿ ನನ್ನ ಮೊಬೈಲ್ ಬೀಪ್ ಮಾಡಿತು.
ವಿಜಯ್‌ನ ಹೆಂಡತಿ ಕವಿತಾಳ ವಾಟ್ಸ್ಯಾಪ್ ಮೆಸೇಜ್.
“Karthik is no more. You have to manage both of them.”
ಆ ಮೆಸೇಜ್ ಓದಿದ ಕ್ಷಣ ನನ್ನ ಕೈ ಅಪ್ರಯತ್ನವಾಗಿ ನಡುಗಿತು. ಮೊಬೈಲ್ ಕೈಯಿಂದ ಜಾರಿ ಕೆಳಗೆ ಬಿತ್ತು.
ತಡಬಡಾಯಿಸಿ ಬಗ್ಗಿ ಫೋನ್ ಎತ್ತಿಕೊಂಡೆ. ವಿಜಯ್ ಮತ್ತು ನಂದಿನಿ ಯಾರೂ ಅದನ್ನು ಗಮನಿಸಿಲ್ಲವೆಂಬುದನ್ನು ಖಚಿತಪಡಿಸಿಕೊಂಡೆ. ಏಸಿ ಚಾಲ್ತಿಯಲ್ಲಿತ್ತು. ಹೊರಗೆ ಮಳೆಯಿಂದ ವಾತಾವರಣ ಮತ್ತಷ್ಟು ತಂಪಾಗಿತ್ತು. ಆದರೂ ನನ್ನ ಹಣೆಯ ಮೇಲೆ ಬೆವರಿನ ಸಾಲು!
ಶನಿವಾರ ಸಂಜೆ. ವೀಕೆಂಡ್‌ಗೆ ಪ್ಲಾನ್ ಮಾಡಿಕೊಂಡಿದ್ದ ಎಲ್ಲಾ ಕೆಲಸಗಳನ್ನೂ ಮುಗಿಸಿದ ಮೇಲೆ, ವಿಜಯ್‌ನ ತಂಗಿ ನಂದಿನಿಯ ಮದುವೆಗೆ ಇನ್ನೆರಡು ವಾರಗಳಷ್ಟೇ ಉಳಿದಿರುವುದು ನೆನಪಾಯಿತು. ಮದುವೆಯ ಸಿದ್ಧತೆಗಳಲ್ಲಿ ಏನಾದರೂ ಸಹಾಯ ಬೇಕಿರಬಹುದೆಂದು ವಿಚಾರಿಸಲು ಅವನ ಮನೆ ಕಡೆಗೆ ಬೈಕ್ ತಿರುಗಿಸಿದೆ. ಮನೆ ತಲುಪಿದಾಗ ವಾಚ್ ಸರಿಯಾಗಿ ಆರು ಗಂಟೆ ತೋರಿಸುತ್ತಿತ್ತು. ವಿಜಯ್‌ನ ತಾಯಿ ಕೊಟ್ಟ ಕಾಫಿ ಮತ್ತು ಬಿಸ್ಕತ್ತು ಮುಗಿಸಿ, ಗ್ಲಾಸ್‌ನ್ನು ಕೆಳಗಿಟ್ಟೆ. ಮಾತು ಮದುವೆಯ ಸಿದ್ಧತೆಗಳ ಬಗ್ಗೆಯೇ ಸಾಗುತ್ತಿತ್ತು.
ಅಷ್ಟರಲ್ಲಿ ಮೊದಲನೇ ಮಹಡಿಯಿಂದ ಯಾರೋ ದಡಬಡಾಯಿಸುತ್ತಾ ಮೆಟ್ಟಿಲಿಳಿದು ಬರುತ್ತಿರುವ ಸದ್ದು ಕೇಳಿಸಿತು.
ವಿಜಯ್‌ನ ತಂಗಿ, ಮದುವೆಯ ಹುಡುಗಿ ನಂದಿನಿ. ಅವಳು ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಾ ಮೆಟ್ಟಿಲಿಳಿದು ಬಂದಳು. ಹಾಲ್‌ನಲ್ಲಿ ಕುಳಿತಿದ್ದ ನಮ್ಮೆದುರಿಗೆ ಬಂದು ನೇರವಾಗಿ ವಿಜಯ್‌ನ ಕಡೆಗೆ ತಿರುಗಿದಳು.
“ಅಣ್ಣ… ಕಾರ್ತೀಕ್‌ಗೆ ಕೋಲಾರ್ ಹತ್ತಿರ ಆಕ್ಸಿಡೆಂಟ್ ಆಗಿದೆಯಂತೆ. ಅವನ ಫ್ರೆಂಡ್ ರಮೇಶ್ ಈಗಷ್ಟೇ ಫೋನ್ ಮಾಡಿ ಹೇಳಿದ. ಬೆಳಿಗ್ಗೆ ಇನ್ವಿಟೇಷನ್ ಹಂಚೋಕೆ ಅಂತ ಊರಿಗೆ ಹೋಗಿದ್ದನಂತೆ…”
ಒಂದು ಕ್ಷಣ ಅವಳು ಮಾತು ನಿಲ್ಲಿಸಿದಳು.
“ನನಗೆ ಯಾಕೋ ತುಂಬಾ ಭಯ ಆಗ್ತಾ ಇದೆ ಅಣ್ಣ.”
ಅವಳ ಧ್ವನಿ ನಡುಗುತ್ತಿತ್ತು. ಕಣ್ಣಂಚಿನಲ್ಲಿ ತುಂಬಿದ್ದ ನೀರು ಕೆನ್ನೆಯ ಮೇಲೆ ಜಾರಿತು. ಅಪ್ರಯತ್ನವಾಗಿ ಅದನ್ನು ಒರೆಸಿಕೊಂಡಳು. ವಿಜಯ್ ಏನನ್ನೂ ಮಾತನಾಡಲಿಲ್ಲ.
ಬೈಕ್‌ನ್ನು ಅವರ ಮನೆಯ ಬಳಿಯೇ ಬಿಟ್ಟು, ಅವರಿಬ್ಬರ ಜೊತೆ ಕಾರಿನಲ್ಲಿ ಹೊರಟೆ. ಕಾರು ಹೊರಡುವ ಮುನ್ನ ವಿಜಯ್ ಮತ್ತೆ ರಮೇಶ್‌ಗೆ ಫೋನ್ ಮಾಡಿ, ನಡೆದ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಕೇಳಿದ.
“ಚೆಕ್‌ಅಪ್‌ಗೆ ಗವರ್ನಮೆಂಟ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ನೀವು ಬೇಗ ಬನ್ನಿ,” ಎಂದು ಆ ಕಡೆಯಿಂದ ರಮೇಶ್ ಹೇಳುವುದು ನನಗೆ ಸ್ಪಷ್ಟವಾಗಿ ಕೇಳಿಸಿತು.
“ಗಾಯವಾಗಿದ್ದರೆ ಸಾಮಾನ್ಯವಾಗಿ ಯಾರಾದರೂ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರಾ?” ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿತು. ಏನೋ ಸರಿಯಿಲ್ಲ ಎಂಬ ಭಾವನೆ ನಿಧಾನವಾಗಿ ನನ್ನೊಳಗೆ ಬೇರೂರತೊಡಗಿತು.
ಅದು ಕೇವಲ ಆತಂಕವಾಗಿರಲಿಲ್ಲ. ಯಾವುದೋ ಅಪಶಕುನ ಹತ್ತಿರದಲ್ಲೇ ಕಾಯುತ್ತಿರುವಂತೆ ಅನಿಸತೊಡಗಿತ್ತು.
“ಅಣ್ಣಾ…” ನಂದಿನಿ ಹಿಂಬದಿಯಿಂದ ಕೂಗಿದಳು, “ನಿನಗೆ ಗೊತ್ತಾ, ಕಾರ್ತಿಕ್ ಮೊದಲ ಬಾರಿ ನನ್ನನ್ನು ನೋಡಿದಾಗಲೇ ಹೇಳಿದ್ದ ‘ನೀನು ತುಂಬಾ ಲೈವ್ಲೀಯಾಗಿ ನಗ್ತೀಯ’ ಅಂತ.”
ಅವಳು ನಕ್ಕಳು. ಆ ನಗು ಸಣ್ಣದಾದರೂ ಜೀವಂತವಾಗಿತ್ತು.
“ನನ್ನ ನಗುವನ್ನು ಅವನು ತುಂಬಾ ಇಷ್ಟ ಪಡ್ತಾನೆ,” ಅವಳು ಮುಂದುವರಿಸಿದಳು. “ಅವನು ಹೇಳ್ತಿದ್ದ, ನಿನ್ನ ನಗು ನನ್ನ ಮನಸ್ಸನ್ನು ಲೈಟ್ ಮಾಡುತ್ತೆ, ಈ ನಗು ಯಾವತ್ತೂ ಮಾಸೋಕೆ ಬಿಡಲ್ಲ ಅಂತಾ”.
ವಿಜಯ್ ಏನೂ ಮಾತನಾಡಲಿಲ್ಲ. ನಾನು ಕಿಟಕಿಯಾಚೆ ನೋಡಿದೆ.
ನಂದಿನಿ ಮತ್ತು ಕಾರ್ತೀಕರದು ಪ್ರೇಮ ವಿವಾಹ – ಅದೂ ಅಂತರ್ಜಾತಿ. ಇಬ್ಬರೂ ಮನೆಯವರನ್ನು ಒಪ್ಪಿಸಿ, ತಮ್ಮ ಏಳು ವರ್ಷದ ಪ್ರೀತಿಗೆ ಮದುವೆಯ ಅಂಕಿತ ಹಾಕಿಸಿಕೊಳ್ಳುವುದು ಸುಲಭದ ಕೆಲಸವೇನು ಆಗಿರಲಿಲ್ಲ.
ಯುದ್ಧವೊಂದನ್ನು ಗೆದ್ದಂತೆಂದರೂ ಸರಿಯೇ. ಎರಡು ವಾರ ಮುಂಚೆ ನಡೆದ ಎಂಗೇಜ್ಮೆಂಟಿಗೆ ನಾನು ಸಹಾ ಹೋಗಿದ್ದೆ. ಎಲ್ಲಾ ಸರಿಯಾಯಿತು ಅನ್ನುವಾಗ ಈಗ ವಿಧಿಯೇ ಅವರ ಜೀವನದಲ್ಲಿ ವಿಲನ್ ಆಯಿತೇ ಅಂತಾ
ಮರುಕವಾಯಿತು.
ನಂದಿನಿ ಅವಳ ಹಾಗೂ ಕಾರ್ತೀಕ್ ಮೊದಲ ಭೇಟಿಯ ಬಗ್ಗೆ ಮಾತು ಮುಂದುವರಿಸಿದಳು.
“ನಾವು first time ಕಾಲೇಜ್ ಫೆಸ್ಟಿವಲ್‌ನಲ್ಲಿ ಭೇಟಿಯಾದ್ವಿ ಗೊತ್ತಾ? ನಾನು stage ಮೇಲೆ drama ಮಾಡ್ತಿದ್ದೆ. ಅವನು audienceನಲ್ಲಿ ಕುಳಿತಿದ್ದ.”
ಅವಳು ಸ್ವಲ್ಪ ನಾಚಿಕೊಂಡಂತೆ ನಕ್ಕಳು. “ನಂತರ ಅವನು ಹೇಳಿದ dramaದಲ್ಲಿ character ನಿನಗೆ ತುಂಬಾ ಹೊಂದಿಕೆ ಆಗಿತ್ತು ಅಂತ.”
ವಿಜಯ್ ಹಗುರವಾಗಿ ನಕ್ಕ. ನನ್ನ ಕೈಗಳು ನಿಧಾನವಾಗಿ ಮಡಚಿಕೊಂಡವು. ಆ ಸಮಯದಲ್ಲಿ ಮೊಬೈಲ್ ಮತ್ತೊಮ್ಮೆ ಕಂಪಿಸಿತು. ರಸ್ತೆಯ ಮೇಲೆ ಮತ್ತೊಮ್ಮೆ ಹಗುರ ಮಳೆ ಶುರುವಾಗಿತ್ತು. ವೈಪರ್‌ಗಳ ಶಬ್ದದ ನಡುವೆ ನಂದಿನಿಯ ಧ್ವನಿ ಮುಂದುವರಿದಿತ್ತು.
“ಒಮ್ಮೆ ನಾವು ಮಳೆಗಾಲದಲ್ಲಿ ಬೈಕ್ ಮೇಲೆ ಹೋಗ್ತಿದ್ದೆವು. ನಾನು full wet ಆಗಿಬಿಟ್ಟೆ. ಅವನು ತನ್ನ jacket ಕೊಟ್ಟ.”
ಅವಳು ನಗುತ್ತಾ ಹೇಳಿದಳು. “ತಾನು ಸಂಪೂರ್ಣ ನೆನೆದಿದ್ದ.”
ಅವಳು ಸ್ವಲ್ಪ ಮೌನವಾಗಿ ಸೇರಿಸಿದಳು: “ಆದರೂ ಅವನು ಹೇಳಿದ ನೀನು ಒದ್ದೆ ಆಗಲಿಲ್ಲವಲ್ಲ ಅಷ್ಟೇ ಸಾಕು ಅಂತ.”
ನನ್ನ ಮನಸ್ಸಿನಲ್ಲಿ ಒಂದು ಯುದ್ಧ ನಡೆಯುತ್ತಿತ್ತು. ‘ಹೇಳಿಬಿಡು. ಇಲ್ಲ… ಇನ್ನೂ ಸ್ವಲ್ಪ ದೂರ.’
‘ಅವಳಿಗೆ ಈ ಕ್ಷಣವನ್ನು ಕೊನೆಗೆ ಬದುಕಲು ಬಿಡು!?’
ನಾನು ಕಣ್ಣು ಮುಚ್ಚಿಕೊಂಡೆ. ಸತ್ಯವು ಕೆಲವೊಮ್ಮೆ ಕತ್ತಲಿಗಿಂತ ಭಾರವಾಗಿರುತ್ತದೆ.
ಕಾರು ಶರವೇಗದಿಂದ ಕೋಲಾರದ ಗವರ್ನಮೆಂಟ್ ಆಸ್ಪತ್ರೆಯ ಕಡೆಗೆ ಧಾವಿಸುತ್ತಿತ್ತು. ಕಾರಿನೊಳಗೆ ಒಂದು ಭಾರವಾದ ಮೌನ ಹಾಜರಾತಿಯಾಗಿ ಕುಳಿತಿತ್ತು. ನನ್ನ ಎದೆ ಮೇಲೊಂದು ಅತಿ ಭಾರವಾದ ಬಂಡೆ ಕೂತಂತಾಗಿ, ಗಂಟಲು ಕಟ್ಟಿದಂತಾಗಿತ್ತು. ಹೇಗೆ ಹೇಳಲಿ? ಏನೆಂದು ಹೇಳಲಿ?
ನಂದಿನಿ ಮತ್ತೆ ರಮೇಶನಿಗೆ ಫೋನ್ ಮಾಡಿ, ಕಾರ್ತೀಕ್ ಈಗ ಹೇಗಿದ್ದಾನೆ ಎಂದು ಹಿಂದಿನ ಸೀಟಿನಿಂದ ಕೇಳುತ್ತಿರುವುದನ್ನು ಗಮನಿಸಿ ಕರುಳು ಚುರುಕ್ ಎಂದಿತು.

ಅತ್ತ ಕಡೆಯಿಂದ ಅದೇ ಸಿದ್ಧ ನುಡಿ. “ಇನ್ನೂ ಚೆಕ್ಕಪ್ ಮಾಡ್ತಾ ಇದ್ದಾರೆ, ನೀವು ಬೇಗ ಬನ್ನಿ”. ಈಗ ಕನ್ಫರ್ಮ್ ಆಯಿತು. ರಮೇಶ ಮೊದಲ ಬಾರಿ ಕಾಲ್ ಮಾಡಿದಾಗಲೇ ಎಲ್ಲಾ ಮುಗಿದು ಹೋಗಿದೆ.
ಅದಕ್ಕೆ ಸಂಜೆಯಿಂದಲೆ ‘ಬಾಡಿ’ಯನ್ನು ಗವರ್ನಮೆಂಟ್ ಆಸ್ಪತ್ರೆಯಲ್ಲಿ ಇಟ್ಟಿದ್ದಾರೆ. ದೇವರೇ ಇದೆಂಥ ಪರೀಕ್ಷೆಗೆ ಒಡ್ಡಿದೆಯಪ್ಪಾ? ಆ ಆತಂಕದ ಕ್ಷಣಗಳಲ್ಲೂ ನನ್ನ ಮನಸ್ಸಿನಲ್ಲಿ ಕಾರ್ತೀಕ್ ಹೆಸರು ಬಾಡಿಯಾಗಿ ಬದಲಾಗಿದ್ದುದನ್ನು ಗಮನಿಸಿದೆ. ಜೀವನ ಇಷ್ಟೇನೆ !? ಯಾವಾಗ ಒಬ್ಬ ಮನುಷ್ಯ ಬೇರೆಯವರ ಕಣ್ಣಿಗೆ ಬರೀ ಒಂದು ಬಾಡಿಯಾಗಿ ಬದಲಾಗುತ್ತಾನೋ ಯಾರಿಗೂ ಗೊತ್ತಿಲ್ಲ. ಆದರೂ ಎಲ್ಲರೂ ತಾವೇನೋ ಶಾಶ್ವತವಾಗಿ ಇಲ್ಲೇ ಮೊಳೆ ಹೊಡೆದುಕೊಂಡು ಕೂರೋರ ಹಾಗೇ ಇಡೀ ಪ್ರಪಂಚವೇ ನಂದು ಅನ್ನೋ ಹಾಗೆ ಹೇಗೆ ವರ್ತಿಸುತ್ತೀವಿ!? ನಾಲಕ್ಕೇ ನಾಲಕ್ಕು ಕಾಸು ಜಾಸ್ತಿ ದುಡಿದ ಕೂಡಲೆ ತಲೆ ಮೇಲೊಂದು ಕೊಂಬು ಬಂದಂತೆ ನಡೆದುಕೊಳ್ಳುವುದು, ಧಾಷ್ಟ್ಯ, ಅಹಂಕಾರ, ಅತಿರೇಕದ ಆಟಗಳೋ!? ಅಯ್ಯೋ ಮನುಷ್ಯ ಜನ್ಮವೇ! ಅನ್ನಿಸಿತು. ಆ ಕ್ಷಣದಲ್ಲೂ ಡಿವಿಜಿಯವರ ಮಂಕುತಿಮ್ಮನ ಕಗ್ಗವೊಂದು ನೆನಪಾಯಿತು.
ಬದುಕು ಜಟಕಾಬಂಡಿ, ವಿಧಿಯು ಅದರ ಸಾಹೇಬ ।
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ॥
ಮದುವೆಗೋ ಮಸಣಕೋ ಹೋಗಂದ ಕಡೆಗೆ ಓಡು ।
ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ॥
ಓ, ಅರೆ! ಬರೀ ಈ ನಾಲ್ಕೇ ನಾಲ್ಕು ಸಾಲಿನಲ್ಲಿ ಗುಂಡಪ್ಪನವರು ಅದೇಗೆ ಇಡೀ ಜೀವನಪಾಠವನ್ನು ಎಷ್ಟೊಂದು ಅಚ್ಚುಕಟ್ಟಾಗಿ ಹೇಳಿದ್ದಾರಲ್ಲ!!
ಈಗಿದ್ದ ಪರಿಸ್ಥಿತಿಯಲ್ಲಿ ಆ ಕಗ್ಗ ಸಂಪೂರ್ಣವಾಗಿ ಅರ್ಥವಾದಂತೆನಿಸಿತು. ಮತ್ತೊಮ್ಮೆ ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಪೂರ್ತಿಯಾಗಿ ಓದಬೇಕೆಂದುಕೊಡೆ.
ಇಂಡಿಕೇಟರ್ ಹಾಕದೆ ಲೈನ್ ಬದಲಾಯಿಸಿದ ಕಾರೊಂದನ್ನು ತಪ್ಪಿಸಲು ವಿಜಯ್ ಹಾಕಿದ ಬ್ರೇಕ್ ತಲೆಯಲ್ಲಿ ಓಡುತ್ತಿದ್ದ ಲಹರಿಯಿಂದ ನನ್ನನ್ನು ಮತ್ತೆ ವಾಸ್ತವಕ್ಕೆ ಕರೆ ತಂದಿತು.
ದೇವರೇ, ಇದೊಂದು ಕನಸಾಗಿರಬಾರದೆ, ಒಂದು ಸಲ ಎಡಗೈನ್ನು ಚಿವುಟಿಕೊಂಡೆ. ಚುರುಕ್ಕೆನಿಸಿ, ಇದು ಖಂಡಿತವಾಗಿ ವಾಸ್ತವವೆಂಬುದು ಅರಿವಾಗಿ ಈ ಕ್ಷಣದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲವೆಂಬ ಅರಿವಾಯ್ತು.
ಈಗ ತಲೆಯಲ್ಲಿ ಮುಂದಿನ ಯೋಜನೆಗಳು ಹೇಗೆಂಬುದರ ಬಗ್ಗೆ ಯೋಚನೆ ಬಂತು. ಮತ್ತೆ ರಮೇಶನಿಗೆ ಕಾಲ್ ಮಾಡಿದ್ದ ನಂದಿನಿಗೆ, ವಿಜಯ್ ಫೋನಿಗೆ ಲೈವ್ ಲೊಕೇಷನ್ ಕಳುಹಿಸುವಂತೆ ಹೇಳಿದೆ.
ರಮೇಶ ಕೊಡುವ ಬೇರೆ ಮಾಹಿತಿಯ ಬಗ್ಗೆ ಯಾವುದೇ ಕುತೂಹಲ ಉಳಿದಿರಲಿಲ್ಲ. ಅವನ ಸಿದ್ಧ ಉತ್ತರ ಏನೆಂಬುದು ತಿಳಿದಿತ್ತು. ವಿಜಯ್ ಫೋನಿಗೆ ಬಂದ ಲೈವ್ ಲೊಕೇಷನ್ನನ್ನು ಓಪನ್ ಮಾಡಿ ಫೋನ್ ಹೋಲ್ಡರ್‌ನಲ್ಲಿ
ಕೂರಿಸಿದೆ. ತಗ್ಗಿದ ಕಾರಿನ ವೇಗ ಸಿಟಿ ಹತ್ತಿರ ಬಂತೆಂಬುದನ್ನು ಸೂಚಿಸುತ್ತಿತ್ತು. ರಮೇಶ ವಾಹನಗಳ ಮಧ್ಯದಲ್ಲಿ ಕಾರನ್ನು ತೂರಿಸಿಕೊಂಡು ಆದಷ್ಟು ಬೇಗ ತಲುಪಲು ಪ್ರಯತ್ನಿಸುತ್ತಿದ್ದ.
ಇನ್ನೊಂದು ಹದಿನೈದು ನಿಮಿಷದ ದಾರಿ – ಈಗಲೇ ಏನು ಹೇಳೋದು ಬೇಡವೆಂದು ನಿರ್ಧರಿಸಿದೆ. ಅದನ್ನು ಪುಷ್ಟೀಕರಿಸುವಂತೆ ರಮೇಶ ಮ್ಯಾಪ್ ನೋಡಿಕೊಂಡು “ಇನ್ನೈದು ಕಿಲೋಮೀಟರ್” ಅಂತೇನೋ ಗೊಣಗಿದ.
ಇದನ್ನು ಹ್ಯಾಂಡಲ್ ಮಾಡಲು ನನಗೆ ಶಕ್ತಿ ಕೊಡು ಅಂತಾ ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸಿದೆ.
ಕಾರು ಆಸ್ಪತ್ರೆಯ ಆವರಣದೊಳಗೆ ತಲುಪಿ ಖಾಲಿ ಜಾಗದಲ್ಲಿ ಪಾರ್ಕ್ ಮಾಡಿ ಕೆಳಗಿಳಿದಾಗ ಸರಿಯಾಗಿ ಒಂಭತ್ತೂವರೆ ಗಂಟೆ. ಆಸ್ಪತ್ರೆಯ ತುಂಬೆಲ್ಲಾ ಬಿಳಿ ಬೆಳಕು – ಗಂಭೀರ ಮುಖಗಳು.
ನರ್ಸ್ ನಮ್ಮನ್ನು ನೋಡಿದಳು. “accident case… ಕಾರ್ತಿಕ್…” ಅಂತಾ ವಿಜಯ್ ತಡವರಿಸಿದ.
ಒಬ್ಬ ಡ್ಯೂಟಿ ಡಾಕ್ಟರ್ ಮುಂದೆ ಬಂದ. “Are you family?” ವಿಜಯ್ ತಲೆ ಆಡಿಸಿದ.
ಡಾಕ್ಟರ್ ಆಳವಾಗಿ ಉಸಿರೆಳೆದ. “He was brought here dead. He had been thrown out of the car and suffered severe head injuries. There were a total of four casualties.”
ಆ ಕ್ಷಣದಲ್ಲಿ ನಂದಿನಿ ಹಿಂಬದಿಗೆ ತಿರುಗಿದಳು. “ಇಲ್ಲ…” ಅವಳ ಧ್ವನಿ ಮುರಿಯಿತು. “ನೀವು ಸುಳ್ಳು ಹೇಳ್ತಿದ್ದೀರ…”
ಅವಳು ಕುಸಿದು ಬಿದ್ದಳು. ನೆಲಕ್ಕೆ ಕುಸಿಯುತ್ತಿದ್ದ ಅವಳನ್ನು ನಾನು ಭುಜ ಹಿಡಿದು ಎತ್ತಿ ನಿಲ್ಲಿಸಿದೆ.
ನಿಧಾನವಾಗಿ ನಡೆಸಿಕೊಂಡು ಹೋಗಿ ವೆರಾಂಡದಲ್ಲಿದ್ದ ಕಬ್ಬಿಣದ ಬೆಂಚ್ ಮೇಲೆ ಕೂರಿಸಿದೆ.
ಅವಳು ಬಿಕ್ಕಳಿಸಿ ಅಳುವ ಸದ್ದು ಆಸ್ಪತ್ರೆಯ ನೀರವ ಮೌನದಲ್ಲಿ ಎಂಥವರ ಎದೆಯನ್ನು ಬಿರಿಯುವಂತಿತ್ತು.
ಬಿಳಿ ಚಾದರ. ನಿಶ್ಚಲ ದೇಹ.ನಂದಿನಿ ನಿಧಾನವಾಗಿ ಹತ್ತಿರ ಹೋದಳು. ಕೈ ನಡುಗುತ್ತಿತ್ತು.
ಆಸ್ಪತ್ರೆಯ ಸಿಬ್ಬಂದಿ ಚಾದರ ಎತ್ತಿ ತೋರಿಸಿದ.
ಕಾರ್ತಿಕ್. ಅವನ ಮುಖ ಶಾಂತವಾಗಿತ್ತು.
“ಕಾರ್ತಿಕ್…” ಅವಳು ಕುಸಿದುಬಿದ್ದಳು. “ನೀನು ಹೀಗೆ ಮಾಡ್ಬಾರ್ದಿತ್ತು…” ಅವಳು ಅವನ ಕೈ ಹಿಡಿದಳು.
“ಕೊನೆವರೆಗೂ ನೀನು ನನ್ನ ಜೊತೆ ಇರ್ತೀಯಾ ಅಂದಿದ್ದೆ…”
ಅಳುವ ಶಬ್ದ ಕೊಠಡಿಯನ್ನು ಮುರಿಯಿತು. ವಿಜಯ್ ಗೋಡೆಯ ಬಳಿ ನಿಂತಿದ್ದ. ಅವನ ಕೈಗಳೆರಡು ಮುಖವನ್ನು ಮುಚ್ಚಿಕೊಂಡಿದ್ದವು.
“ಏನೋ ಹೀಗಾಗೋಯ್ತು…” ಅವನು ಬಿಕ್ಕಳಿಸಿ ಹೇಳಿದ. “ಇದು ಯಾರ ತಪ್ಪೂ ಅಲ್ಲ. ಯಾವುದು ನಮ್ಮ ಕೈನಲ್ಲಿ ಇಲ್ಲ ಕಣೋ” ಅನ್ನೋ ಮಾತು ಬಾಯಿಗೆ ಬಂತು, ಆದರೆ ಗಂಟಲಿನಿಂದ ಆಚೆ ಬರಲಿಲ್ಲ.
ಅವನ ಹೆಗಲ ಮೇಲೆ ಕೈ ಇಟ್ಟು ನಿಧಾನವಾಗಿ ತಟ್ಟಲಾರಂಭಿಸಿದೆ.
ಅವರಿಬ್ಬರನ್ನು ವಾಪಾಸ್ ಕರೆದುಕೊಂಡು ಬಂದು ಕಾರಿನಲ್ಲಿ ಕೂರಿಸಿದೆ.
ನಂದಿನಿ ಮತ್ತೆ ಅಳುತ್ತಾ ಮಾತನಾಡತೊಡಗಿದಳು. “ಅವನು wedding ನಂತರ ಮನೆ change ಮಾಡೋಣ ಅಂದಿದ್ದ…”
“ನಮ್ಮ future full plan ಮಾಡಿದ್ದ… ಸಂಜೆ 5 ಗಂಟೆಗೆ ಕೂಡಾ ಫೋನ್ ಮಾಡಿದ್ದ. ಈಗ ನೋಡಿದ್ರೆ ಎಲ್ಲ ಮುಗಿದುಹೋಗಿದೆ”
ಮತ್ತೆ ಬಿಕ್ಕಳಿಸಿ ಅಳಲಾರಂಭಿಸಿದಳು. “ಅವನು ಒಂದು ವರ್ಷ ನನ್ನ birthday miss ಮಾಡಿದ್ದ. ನಾನು ತುಂಬಾ ಬೇಜಾರು ಮಾಡಿಕೊಂಡಿದ್ದೆ.”
“ಆಮೇಲಿಂದ ಪ್ರತಿ ಬರ್ತಡೇ ಹಿಂದಿನ ರಾತ್ರಿಯೇ cake ತಂದು surprise ಕೊಡ್ತಿದ್ದ.” ಅವಳ ಕಣ್ಣುಗಳಿಂದ ನೀರು ಹರಿಯುತ್ತಿತ್ತು. ನನ್ನ ಕಣ್ಣುಗಳು ತುಂಬಿ ಬಂದವು. ಏನೂ ಮಾತಾಡದೆ, ಅವರ ಜೊತೆ ಕಾರೊಳಗೆ ಸುಮ್ಮನೆ ಕೂತಿದ್ದೆ. ಮನಸ್ಸಿನ ದುಃಖ, ದುಗುಡ ಕಣ್ಣೀರಾಗೆ ಹೊರಗೆ ಹರಿಯಬೇಕೆಂದು ನನಗೆ ಅರ್ಥವಾಗಿತ್ತು.
ಸ್ವಲ್ಪ ಹೊತ್ತಾದ ಮೇಲೆ, ಅವರನ್ನು ಅತ್ತು ಹಗುರವಾಗುವುದಕ್ಕೆ ಕಾರಿನಲ್ಲೇ ಬಿಟ್ಟು ಕಾರ್ತೀಕನ ಸ್ನೇಹಿತ ರಮೇಶನನ್ನು ಹುಡುಕಿ ಹೊರಟೆ. ಹೊರಗೆ ಕಾಂಪೌಂಡ್ ಹತ್ತಿರ ರಮೇಶ ಸಿಗರೇಟ್ ಎಳೆಯುತ್ತಾ ಸಿಕ್ಕಿದ. ಕಣ್ಣುಗಳೆರಡು ಕೆಂಪಾಗಿ ಊದಿಕೊಂಡಿದ್ದವು.
“ನಾನು ಮತ್ತೊಂದು ಐದು ಜನ ಫ್ರೆಂಡ್ಸ್ ಹಿಂದಿನ ಕಾರಿನಲ್ಲಿ ರಮೇಶನ ಕಾರು ಫಾಲೋ ಮಾಡ್ತಾ ಇದ್ದೆವು.
ರಾತ್ರಿಗೆ ಫ್ರೆಂಡ್ಸ್ ಎಲ್ಲಾ ಸೇರಿ ಬ್ಯಾಚೆಲರ್ ಪಾರ್ಟಿ ಫಾರ್ಮ್ ಹೌಸಲ್ಲಿ ಆರೆಂಜ್ ಮಾಡಿದ್ದೆವು. ಫಾರ್ಮ್ ಹೌಸ್‌ಗೆ ಹೋಗೋ ದಾರಿಯಲ್ಲಿ ಸಂಜೆ ಐದೂವರೆ ಸುಮಾರಿಗೆ ಬೇಡ ಅಂದ್ರೂ ಅವನೇ ಡ್ರೈವ್ ಮಾಡುತ್ತಿದ್ದ.
ಫಾರ್ಮ್ ಹೌಸಗೆ ಇನ್ನೆರಡು ಕಿಲೋಮೀಟರ್ ಇತ್ತು, ಸ್ಪೀಡ್ ಸ್ಪಲ್ಪ ಜಾಸ್ತಿನೇ ಇತ್ತು – ಯಾವುದೋ ಬೆಂಡ್‌ನಲ್ಲಿ ಕಾರು ಕಂಟ್ರೋಲ್ ಸಿಗದೆ ಆಫ್ ರೋಡ್ ಆಗಿ ಎರಡು ಮೂರು ಸಲ topple ಅಯ್ತು ” ಅಂದು ಒಂದು ಕ್ಷಣ
ಸುಮ್ಮನಾದ. ಕಾಂಪೌಂಡ್ ಹತ್ತಿರ ಯಾರೋ ಬಂದಿದ್ದನ್ನು ಕಂಡು, ಸ್ವಲ್ಪ ಅವನ ಹತ್ತಿರ ಸರಿದು ಕೇಳಿದೆ “ಆಗಲೇ ಎಲ್ಲರೂ ಒಂದು ರೌಂಡು ಕುಡಿದು ಬಿಟ್ಟಿದ್ರಾ?”
ಅವನು “ಇಲ್ಲ, ಇನ್ನೂ ಶುರು ಮಾಡಿರಲಿಲ್ಲ” ಅಂದಾಗ ಬಾಯಿಂದ ಗಪ್ಪನೆ ವಿಸ್ಕಿಯ ವಾಸನೆ ಒಂದು ಮಾರು ದೂರದಿಂದಲೇ ಮೂಗಿಗೆ ಬಡಿಯಿತು. ಉಳಿದದ್ದೆಲ್ಲ ಅರ್ಥವಾಗಿ ಇನ್ನೇನು ಕೇಳಬೇಕೆನಿಸಲಿಲ್ಲ.
ಕಾರ್ತೀಕನ ತಂದೆ ತಾಯಿ ಇನ್ನೂ ತಲುಪಿರಲಿಲ್ಲ. ಅವರ ಭಾವನಿಗೆ ಫೋನ್ ಮಾಡಿ ಅವರು ಜೊತೆಗೆ ಬರುತ್ತಾ ಇರುವುದನ್ನು ಕನ್ಫರ್ಮ್ ಮಾಡಿಕೊಂಡೆ.
ಕೈಕಾಲು ಶಕ್ತಿ ಕುಂದಿದಂತೆನಿಸಿ, ಆಸ್ಪತ್ರೆಯ ಕಾಂಪೌಂಡಿನ ಒಳಗೆ ಒಂದು ಮೂಲೆಯಲ್ಲಿದ್ದ ಧ್ವಜಕಂಬದ ಕಟ್ಟೆಯ ಮೇಲೆ ಹೋಗಿ ಕುಳಿತೆ.
ಆಸ್ಪತ್ರೆಯ ಆವರಣದ ಕಾರಿನಲ್ಲಿ ಅವರಿಬ್ಬರು ಕೂತು ಇನ್ನೂ ಅಳುತ್ತಿದ್ದರು.
ಒಬ್ಬರು ಕಳೆದುಕೊಂಡಿದ್ದರು. ಎಲ್ಲರ ಹೃದಯಗಳು ಒಡೆದಿದ್ದವು. ಮಳೆ ನಿಂತಿತ್ತು. ಆದರೆ ನಮ್ಮೊಳಗಿನ ಮಳೆ ಸದ್ಯಕ್ಕೆ ನಿಲ್ಲುವ ಸೂಚನೆ ಕಾಣಲಿಲ್ಲ.
ಇದಲ್ಲಾ ಆಗಿ ಐದಾರು ವರ್ಷವೇ ಕಳೆದಿದೆ. ಮೊನ್ನೆ ಯಾವುದೋ ಮಾಲಿನಲ್ಲಿ “ಅರವಿಂದಣ್ಣ” ಎಂದು ಯಾರೋ ಕರೆದಂತಾಗಿ ತಿರುಗಿ ನೋಡಿದೆ.ನಂದಿನಿ ನಿಂತಿದ್ದಳು, ಜೊತೆಗೆ ತೋಳಿನಲ್ಲಿ ಸುಮಾರು ಒಂದು ವರ್ಷದ ಮಗುವನ್ನು ಎತ್ತಿಕೊಂಡಿದ್ದ ಯುವಕ ಇದ್ದ. ನನ್ನ ಹಸ್ಬೆಂಡ್ ರಾಕೇಶ್ ಅಂತ ಪರಿಚಯ ಮಾಡಿಸಿದಳು.
ನಾನು “ಸಾರಿ, ನಿಮ್ಮ ಮದುವೆಗೆ ನಾನು ಬರಲಾಗಲಿಲ್ಲ. out of station ಇದ್ದೆ” ಅಂತಾ ಅವನ ಕೈ ಕುಲುಕಿದೆ.
ಅವರಿಬ್ಬರನ್ನೂ ಮತ್ತೊಮ್ಮೆ ನೋಡಿದೆ. ನಂದಿನಿ ಸ್ವಲ್ಪ ದಪ್ಪಗಾದಂತೆ ಕಾಣಿಸಿತು. ಕಾಲಕ್ಕಿಂತ ದೊಡ್ಡ ಔಷಧ ಮತ್ತೊಂದಿಲ್ಲ. ಈ ಜೋಡಿ ನೂರ್ಕಾಲ ಬಾಳಲಿ ಅಂತ ಮನಸ್ಸಿನಲ್ಲೇ ಹರಸಿದೆ.

ಈಗಲೂ ನಿದ್ದೆ ಬರದ ಕೆಲವು ರಾತ್ರಿಗಳಲ್ಲಿ, ಜೀವನದ ನಶ್ವರತೆ ಬಗ್ಗೆ ಯೋಚನೆ ಬಂದಾಗಲೆಲ್ಲಾ, ಆಸ್ಪತ್ರೆಯ ಕಂಪೌಂಡಿನ ಧ್ವಜಕಂಬದ ಕಟ್ಟೆಯ ಮೇಲೆ ಕುಳಿತಿದ್ದಾಗ ಮಾರ್ಚುರಿಯ ಹಿಂದಿನ ಕತ್ತಲೆಯಿಂದ
ರಕ್ತಸಿಕ್ತ ಶರಟಿನ ಚೂರೊಂದನ್ನು ಬಾಯಲ್ಲಿ ಕಚ್ಚಿಕೊಂಡು ನನ್ನೆದುರು ಓಡಿಹೋದ ನಾಯಿಯನ್ನು ಯಾಕೋ ಮರೆಯಲು ಸಾಧ್ಯವಾಗುತ್ತಿಲ್ಲ.

ಮೋಹನ್ ಮಂಜಪ್ಪ ಮೂಲತಃ ಚಿಕ್ಕಮಗಳೂರಿನವರು. ಬದುಕಿನ ಬಂಡಿ ಎಳೆಯುತ್ತಿರುವುದು ಬೆಂಗಳೂರಿನಲ್ಲಿ. ವೃತ್ತಿಯಿಂದ IBM ನಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

