Advertisement
ಸಮಾಜದ ಸ್ವಾಸ್ಥ್ಯ ಮತ್ತು “ಇಮಾಮ್ ಸಾಹೇಬರ ಕುದುರೆ”: ವೈ.ಎಸ್.‌ ಹರಗಿ ಕಾದಂಬರಿಯ ಕುರಿತು ಸಂಗೀತ ರವಿರಾಜ್ ಬರಹ

ಸಮಾಜದ ಸ್ವಾಸ್ಥ್ಯ ಮತ್ತು “ಇಮಾಮ್ ಸಾಹೇಬರ ಕುದುರೆ”: ವೈ.ಎಸ್.‌ ಹರಗಿ ಕಾದಂಬರಿಯ ಕುರಿತು ಸಂಗೀತ ರವಿರಾಜ್ ಬರಹ

ಶಾಂತಿಪುರದಲ್ಲಿ ಒಂದಾನೊಂದು ಕಾಲದಲ್ಲಿ ಎರಡು ಧರ್ಮದವರ ಸಾಮರಸ್ಯ ಸಹಜವಾಗಿ ಇತ್ತು.  ಕ್ರಿಸ್ತ ಶಕ 1811 ರಲ್ಲಿ ಬದುಕಿದ್ದ ಇಮಾಮ್ ಸಾಹೇಬರೇ ಸ್ವತಃ ಕುದುರೆ ಏರಿ ಕಡುಬಿನ ಕಾಳಗದ ದಿವಸ ಹಿರೇಮಠದ ಗುರುಲಿಂಗೇಶ್ವರನ ಗದ್ದುಗೆಯವರೆಗೂ ಬಂದು, ಗದ್ದುಗೆಗೆ ಹೂಮಾಲೆ ಹಾಕಿ ಕೈಮುಗಿದು ಹೋಗುತ್ತಿದ್ದರಂತೆ. ಆ ಪ್ರತೀತಿ ಮುಂದುವರೆದುಕೊಂಡು ಬಂದು ತದನಂತರ ಊರಿನ ಜನರು ತಾವೇ ಕಟ್ಟಿಕೊಂಡ ಮತ ಧರ್ಮಗಳ ಗೋಡೆಗಳ ಆಚೆ ಈಚೆ ಪರಸ್ಪರ ಮೂಗು ಮುರಿಯುತ್ತಿದ್ದರೆ, ಹಿರೇಮಠದ ಗರ್ಭಗುಡಿ ಗೋಪುರ ಮತ್ತು ಇಮಾಮ್ ಸಾಹೇಬರ ದರ್ಗಾ ಕಟ್ಟೆಯ ಮೇಲೆ ಬೆಳೆದು ನಿಂತ ಆಕಾಶದೆತ್ತರದ ಬೇವಿನ ಮರಗಳು ಮಾತ್ರ ಅನ್ಯೋನ್ಯತೆಯಿಂದ ಪರಸ್ಪರ ಮುಖ ನೋಡಿ ನಿತ್ಯವು ಶಾಂತಿಪುರದ ಜನರ ಹುಚ್ಚುತನಕ್ಕೆ ನಗೆಯಾಡುವಂತೆ ಕಾಣುತ್ತದೆ.
ವೈ.ಎಸ್.‌ ಹರಗಿ ಕಾದಂಬರಿ “ಇಮಾಮ್ ಸಾಹೇಬರ ಕುದುರೆ” ಕುರಿತು ಸಂಗೀತ ರವಿರಾಜ್, ಚೆಂಬು ಬರಹ

ದಂಗುಬಡಿಸುವಂತಹ ಭಾಷಾ ಸಂಪತ್ತು, ನೂರಾರು ಗಾದೆಗಳು, ಲೋಕೋಕ್ತಿಗಳು, ಗ್ರಾಮ್ಯ ಭಾಷೆಯ ಸೊಗಡು ಇವೆಲ್ಲವೂ ಮೇಳೈಸಿದ ಒಂದು ವಿಶಿಷ್ಟವಾದ ನಿರೂಪಣೆಯ ಕಾದಂಬರಿ “ಇಮಾಮ್ ಸಾಹೇಬರ ಕುದುರೆ” ವೈ. ಎಸ್. ಹರಗಿ ವಿರಚಿತ, ಇಮಾಮ್ ಸಾಹೇಬರ ಕುದುರೆ ಕಾದಂಬರಿ ಇಪ್ಪಂತ್ತೊಂಭತ್ತು ಆಸಕ್ತಿದಾಯಕ ಶೀರ್ಷಿಕೆಗಳ ಅಧ್ಯಾಯಗಳನ್ನು ಹೊಂದಿ ಓದುಗರಿಗೆ ಹೊಸ ಅನುಭೂತಿಯನ್ನು ಕೊಡುತ್ತದೆ.

ಈ ಕಾದಂಬರಿಯ ಕೊನೆಯ ಸಾಲುಗಳು “ನೀವು ಜಾತಿ, ಮತ, ಧರ್ಮಗಳ ಒಳಸುಳಿಯಲ್ಲಿ ಮನುಷ್ಯನ ಹುಟ್ಟನ್ನು ಹಿಡಿದಿಡಬಹುದು. ಆದರೆ ಸಾವನ್ನು ಮಾತ್ರ ಹಿಡಿದಿಡಲು ಸಾಧ್ಯವಿಲ್ಲ. ಮರಣದ ಮೂಲಕ ವ್ಯಕ್ತಿಯು ವಿಶ್ವಮಾನವತೆಯ ಪರಿಧಿಗೆ ಸೇರಿ ಪಂಚಮಹಾಭೂತಗಳಲ್ಲಿ ಲೀನವಾದಾಗ ಅವನನ್ನು ಹಿಂಬಾಲಿಸಿದ ನಿಮ್ಮ ಶ್ರೇಷ್ಠತೆಯ ಜಾತಿ, ಮತ ಧರ್ಮಗಳು ಸಾವಿನ ಎದುರು ಅನಾಥವಾಗುತ್ತವೆ. ಪ್ರಯೋಜನವಿಲ್ಲದ ನಿಷ್ಪ್ರಯೋಜಕ ಕೊರಡುಗಳಾಗುತ್ತದೆ!” ಈ ಮಾತುಗಳು ಸಂಪೂರ್ಣ ಕಾದಂಬರಿಗೆ ಹಿಡಿದ ಕೈಗನ್ನಡಿಯಾಗಿದೆ.

(ವೈ.ಎಸ್.‌ ಹರಗಿ)

ಮಹಾಮಡಿವಂತರಾದ ಗಣಾಚಾರರು ಹಳ್ಳದಲ್ಲಿ ಬಿದ್ದು ಸಾಯುವಾಗ ಹೆಣ ಬಾತು ಭಾರವಾಗಿ ಹೆಗಲು ಕೊಡಲು ಪ್ರಯಾಸಪಟ್ಟವರು ಜೀವಂತವಿದ್ದಾಗ ಅವರನ್ನು ಮುಟ್ಟಬಾರದ ಜನರು! ಇಂತಹ ವಿಪರ್ಯಾಸದ ನಿದರ್ಶನಗಳು ಕಾದಂಬರಿಯುದ್ದಕ್ಕೂ ನಮಗೆ ಸಿಗುತ್ತವೆ. ಹಾಗೂ ಇವೆಲ್ಲ ನಮ್ಮನ್ನು ನಾವು ಅರಿಯಲು ಇರುವಂತಹ ಓದುಗರು ಮೆಚ್ಚುವಂತಹ ಕಾದಂಬರಿಯ ಅಂಶಗಳು.

ಗ್ರಾಮೀಣ ಬದುಕೆಂದರೆ ಅದೊಂದು ಅನುಭವಗಳ ಕಣಜ ಮತ್ತು ಜೀವನದ ವಿಶ್ವಕೋಶ. ಬಗೆದಷ್ಟು ಅನುಭವಗಳ ಮೂಟೆ, ಜೀವನ ಪಾಠ ನಮಗಿಲ್ಲಿ ಲಭ್ಯ. ಲೇಖಕರು ಹಳ್ಳಿಯಲ್ಲಿ ಬೆಳೆದಿದ್ದರ ಪರಿಣಾಮ ಮಾತ್ರವಲ್ಲದೆ, ಹಳ್ಳಿಯ ಜೀವನವನ್ನು ಅಪಾರವಾಗಿ ಪ್ರೀತಿಸಿದ್ದರಿಂದ ಇಂತಹ ಹಳ್ಳಿಯ ಚಿತ್ರಣದ, ಕನ್ನಡದ ಒಂದು ಉಪಭಾಷೆಯ ಶಬ್ದಗಳಿರುವ ಕಾದಂಬರಿ ಇವರಿಂದ ಮೂಡಿಬಂದಿದೆ ಎಂಬುದಾಗಿ ನಿಚ್ಚಳವಾಗಿ ಹೇಳಬಹುದು.  ಕಾದಂಬರಿಯ ನನ್ನ ಮಾತುವಿನಲ್ಲಿ ಅವರೇ ಹೇಳಿಕೊಂಡಂತೆ, “ಬಹುಶಃ ನಾನು ಹುಲ್ಲೂರಿನಂತಹ ಕುಗ್ರಾಮದಲ್ಲಿ ಹುಟ್ಟದೆ ಇದ್ದಿದ್ದರೆ ಅಥವಾ ಹಳ್ಳಿಯ ಸೂಕ್ಷ್ಮ ಬದುಕಿನ ಹಳವಂಡಗಳು, ಜೀವ ವಿರೋಧಿ ಸೈತಾನಿಗಳ ಶೋಷಣೆ, ಮನೋವಿಕಾರದ ಠೇಂಕಾರ, ಶೋಷಿತರ ಚೀತ್ಕಾರಗಳು, ಸಾಮಾಜಿಕ ಸ್ಥಿತಿ ಬಿಂಬಗಳು ನನ್ನ ಅರಿವಿಗೆ ಬಾರದೆ ಇದ್ದರೆ ಈ ಗ್ರಾಮೀಣ ಬದುಕಿನ ಕೃತಿಯನ್ನು ಬರೆಯಲು ಆಗುತ್ತಿರಲಿಲ್ಲವೇನೋ” ಎಂದಿದ್ದಾರೆ.

ಕಾದಂಬರಿಯಲ್ಲಿ ಹಳ್ಳಿಯ ವ್ಯಕ್ತಿ ಚಿತ್ರಣಗಳು ಮತ್ತು ಹಳ್ಳಿಯ ಬಹುತೇಕ ಅಕ್ಷರಸ್ಥರಲ್ಲದ ಕಾಲದ ಹಳ್ಳಿಯ ಸಮಾಜದ ಅನುಭವಗಳನ್ನು ಲೇಖಕರು ಗ್ರಹಿಸಿರುವುದು ಮಾತ್ರ ಅಭೂತಪೂರ್ವವಾಗಿದೆ. ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿಯ ಯಾವುದೇ ಕೆಲಸವನ್ನು ಮಾಡಲಾಗದೆ ಅತಂತ್ರ ಸ್ಥಿತಿಗೆ ಒಬ್ಬ ಉತ್ತಮ ಆಡಳಿತಗಾರನನ್ನು ತಳ್ಳುವಂತಹ ವ್ಯವಸ್ಥೆ ನಮ್ಮನ್ನೆಲ್ಲ ಇಲ್ಲಿ ಕಾಡುತ್ತದೆ. ಇಂತಹ ಮಹತ್ವದ ಕೃತಿ ಬರೆಯಲು ಇಂತಹ ರಾಜಕೀಯವು ಇವರಿಗೆ ಸ್ಫೂರ್ತಿ ಆಗಿದ್ದಿರಬಹುದು ಎಂದರು ತಪ್ಪಲ್ಲ.  ಸಂಸ್ಕೃತ ಕವಿ ವಿಶಾಖದತ್ತನು ಹೇಳುವಂತೆ, “ರಾಜಕಾರಣಿಯ ನೀತಿಗಳು ಅವನಲ್ಲಿ ತಲುಪುವ ಗುರಿಯಿಂದ ತಿಳಿಯುತ್ತದೆ ವಿನಃ ಅವನ ಮಾತಿನಿಂದಲ್ಲ”  ಎಂಬುದಕ್ಕೆ ಕಾದಂಬರಿಯ ರಾಜಕಾರಣಿ ದೇವರಾಯಪ್ಪನನ್ನು ಲೇಖಕರು ಚಿತ್ರಿಸಿರುವುದು ವಿಭಿನ್ನವಾಗಿ ಮೂಡಿಬಂದಿದೆ.

ಮಲ ಹೊರುವಂತಹ ಪದ್ಧತಿಯ ಆಯಗಾರರ ಕಥಾಹಂದರ ಹೊಂದಿರುವ ಈ ಕಾದಂಬರಿ ಎಷ್ಟೋ ದಶಕಗಳ ಹಿಂದಿನ ವಿಚಾರವಾದರೂ, ಲೇಖಕರ ಸೃಜನಶೀಲ ಚಿಂತಿಸುವಿಕೆಯ ಕಾರಣದಿಂದ ಹೊಸತನದಿಂದ ಮೂಡಿ ಬಂದಿದೆ.  ಆಯಗಾರರ ಜನರ ತಲ್ಲಣಗಳನ್ನು ಅರ್ಥೈಸಿಕೊಂಡ ಲೇಖಕರು ಈ ಪದ್ಧತಿಯನ್ನು ಹೋಗಲಾಡಿಸುವ ಸಲುವಾಗಿ ಕಾದಂಬರಿಯಲ್ಲಿ ಬಹಳ ಹೆಣಗಾಡಿದ್ದಾರೆ ಅಂದರೆ, ಆ ಕಾಲದಲ್ಲಿ ಸಮಾಜದ ದುಃಸ್ಥಿತಿ ಹೇಗಿರಬಹುದೆಂದು ನಾವು ಊಹಿಸಿಕೊಳ್ಳಬಹುದು.  ಕೊನೆಗೂ ಅಂತಹ ಜಾತಿಗೊಂದು ಇದ್ದ ಕೆಟ್ಟ ಕಸುಬನ್ನು ಹೋಗಲಾಡಿಸುವಲ್ಲಿ ಮಾತ್ರ ಲೇಖಕರು ಗೆದ್ದಿದ್ದಾರೆ ಎನ್ನಬಹುದು. ಉಳಿದಂತೆ ಧರ್ಮ, ಜಾತಿಗಳ ಕೆಟ್ಟ ರಾಜಕೀಯದ ವ್ಯವಸ್ಥೆಗೆ ಜನಸಾಮಾನ್ಯರು ಶರಣಾಗುವ, ಬಲಿಯಾಗುವ ಹುಂಬತನವನ್ನು ಗೆಲ್ಲಲು ಆ ಕಾಲದಲ್ಲೂ, ಈ ಕಾಲದಲ್ಲೂ ಸಾಧ್ಯವಿಲ್ಲ ಎಂಬುದನ್ನು ಮನಗಾಣಿಸಿದ್ದಾರೆ. ಪರಸ್ಪರ ಮಾನವೀಯತೆ, ಪ್ರೀತಿ ಇಲ್ಲದೆ ಎರಡು ಧರ್ಮದವರು ವಿನಾಕಾರಣ ಸತ್ತಿರುವುದು ಕಾದಂಬರಿಯ ವಿಪರ್ಯಾಸವಾದರೂ ಧರ್ಮ, ಜಾತಿಗಳ ಜಗಳದ ವಿರುದ್ಧ ಹೋರಾಟ ಬೇಕು ಎನ್ನುವ ಸಂದೇಶ ಕಾದಂಬರಿಯಲ್ಲಿದೆ.

ಇಮಾಮ್ ಸಾಹೇಬರಿಗೂ ಗೋಕುಲಾಷ್ಟಮಿಗು ಏನು ಸಂಬಂಧ? ಎನ್ನುವ ಗಾದೆಯನ್ನು  ಹಲವಾರು ಸಂದರ್ಭದಲ್ಲಿ ನಾವು ಕೇಳಿಕೊಂಡು ಬಂದಿದ್ದೇವೆ. ಈ ಗಾದೆಯ ಹುಟ್ಟು ಮತ್ತು ತಾತ್ಪರ್ಯ ನಮಗಿಲ್ಲಿ ಗೋಚರಿಸುತ್ತದೆ. ನೂರು ವರ್ಷಗಳ ಕಾಲ ಬಾಳಿ ಬದುಕಿದ ಸಾಮರಸ್ಯದ ಕೊಂಡಿಯಾಗಿದ್ದ ಪವಾಡ ಪುರುಷನೆಂದು ಹೆಸರುವಾಸಿಯಾಗಿದ್ದ ಇಮಾಮ್ ಸಾಹೇಬರ ಸಮಾಧಿ ಸರ್ವ ಜನಾಂಗದ ಪೂಜನೀಯ ದರ್ಗಾ ಆಗಿ ಉಳಿದುಕೊಂಡಿದೆ. ಅದಕ್ಕೆ ಕಾರಣ ಹಿರೇಮಠದ ಗುರುಲಿಂಗೇಶ್ವರ ದೇವರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಆಗಿ ದೇವರ ಮೆರವಣಿಗೆ ಮಾಡುತ್ತಾ ಊರಿನ ರಾಜಬೀದಿಯಲ್ಲಿ ಬಂದು ಇಮಾಮ್ ಸಾಹೇಬರ ಸಮಾಧಿ ಸ್ಥಳಕ್ಕೆ ಬರುತ್ತಾರೆ.  ಸ್ವತಃ ಇಮಾಮ ಸಾಹೇಬರು ಕ್ರಿಸ್ತ ಶಕ 1811ರಲ್ಲಿ ಪೈಗಂಬರ ವಾಸಿಯಾದ ನಂತರ ಇದು ಹೀಗೆ ಮುಂದುವರೆದುಕೊಂಡು ಬಂದಿದೆ. ಇಮಾಮ್ ಸಾಹೇಬರಿಗೆ ಬ್ರಿಟಿಷ್ ಅಧಿಕಾರಿ ಹರಕೆ ರೂಪದಲ್ಲಿ ಕುದುರೆಯನ್ನು ನೀಡಿರುವುದೇ ಗ್ರಾಮದಲ್ಲಿ ದರ್ಗಾಕ್ಕೆ ಕುದುರೆ ಬಿಡುವ ರೂಡಿಗೆ ಬಂದಿರುವ ಹಿನ್ನೆಲೆಯಾಗಿದೆ. ಕಾದಂಬರಿಯ ಹಳ್ಳಿ ಶಾಂತಿಪುರದಲ್ಲಿ ಒಂದಾನೊಂದು ಕಾಲದಲ್ಲಿ ಎರಡು ಧರ್ಮದವರ ಸಾಮರಸ್ಯ ಸಹಜವಾಗಿ ಇತ್ತು.  ಕ್ರಿಸ್ತ ಶಕ 1811 ರಲ್ಲಿ ಬದುಕಿದ್ದ ಇಮಾಮ್ ಸಾಹೇಬರೇ ಸ್ವತಃ ಕುದುರೆ ಏರಿ ಕಡುಬಿನ ಕಾಳಗದ ದಿವಸ ಹಿರೇಮಠದ ಗುರುಲಿಂಗೇಶ್ವರನ ಗದ್ದುಗೆಯವರೆಗೂ ಬಂದು, ಗದ್ದುಗೆಗೆ ಹೂಮಾಲೆ ಹಾಕಿ ಕೈಮುಗಿದು ಹೋಗುತ್ತಿದ್ದರಂತೆ. ಆ ಪ್ರತೀತಿ ಮುಂದುವರೆದುಕೊಂಡು ಬಂದು ತದನಂತರ ಊರಿನ ಜನರು ತಾವೇ ಕಟ್ಟಿಕೊಂಡ ಮತ ಧರ್ಮಗಳ ಗೋಡೆಗಳ ಆಚೆ ಈಚೆ ಪರಸ್ಪರ ಮೂಗು ಮುರಿಯುತ್ತಿದ್ದರೆ, ಹಿರೇಮಠದ ಗರ್ಭಗುಡಿ ಗೋಪುರ ಮತ್ತು ಇಮಾಮ್ ಸಾಹೇಬರ ದರ್ಗಾ ಕಟ್ಟೆಯ ಮೇಲೆ ಬೆಳೆದು ನಿಂತ ಆಕಾಶದೆತ್ತರದ ಬೇವಿನ ಮರಗಳು ಮಾತ್ರ ಅನ್ಯೋನ್ಯತೆಯಿಂದ ಪರಸ್ಪರ ಮುಖ ನೋಡಿ ನಿತ್ಯವು ಶಾಂತಿಪುರದ ಜನರ ಹುಚ್ಚುತನಕ್ಕೆ ನಗೆಯಾಡುವಂತೆ ಕಾಣುತ್ತದೆ. ಇಂತಹ ವಿಪರ್ಯಾಸಗಳ ವೈರುಧ್ಯಗಳು ಪ್ರಾರಂಭವಾದ ಹಂತದ ಜನರ ಮನಸ್ಥಿತಿ ಕಾದಂಬರಿಯಲ್ಲಿ ಕಾಣಸಿಗುತ್ತದೆ.

ಹಿಂದಿನ ತಲೆಮಾರಿನಲ್ಲಿ ಇದ್ದಂತಹ ಧರ್ಮ, ಜಾತಿಯ ಅನ್ಯೋನತೆ ಹಂತ ಹಂತವಾಗಿ ಮುಂದಿನ ತಲೆಮಾರಿನವರಲ್ಲಿ ಹೇಗೆ ಮತ್ತು ಏಕೆ ಬದಲಾಗುತ್ತಾ ಹೋಯಿತು ಎನ್ನುವ ಚಿತ್ರಣವಿದೆ. ಶಾಂತಿಪುರದ ನೂರು ವರ್ಷದ ಮುಗ್ಧ ಮನಸ್ಸಿನ ಗಡ್ಡಜ್ಜನ ಪಾತ್ರ ಮಾತ್ರ ಮಾರ್ಮಿಕವಾಗಿ ಮೂಡಿಬಂದಿದೆ. ಶಾಂತಿಪುರದ ಕಪ್ಪು ಬೆಳಕಿನ ಇತಿಹಾಸ ಪೂರ್ಣ ಪ್ರಮಾಣದಲ್ಲಿ ಗೊತ್ತಿದ್ದರೂ ಸಾಮರಸ್ಯ ಮರೆತ ಊರಿನ ಜನರಿಂದ ಆತನ ಮನಸ್ಸು ಘಾಸಿಯಾಗಿತ್ತು. ಹೊಲೆ ಮಾದಿಗರು ಇನ್ನಾದರೂ ಆಯಗಾರಕಿ ಬಿಡಬೇಕೆಂದು ಸರಕಾರ ಹೊಸ ಕಾಯಿದೆ ಮಾಡಿದರು, ಊರು ಅವರನ್ನು ಬಿಡಿಸಲು ಒಪ್ಪುತ್ತಿಲ್ಲ.  ಪ್ರಕಾಶನಂತಹ ಕ್ರಾಂತಿಕಾರಿಯ ಹುಟ್ಟು ಕೇರಿಯಿಂದ ಹೊರಬಂದಿರುವುದು ಒಂದು ವಿಶೇಷವಾದರೂ ಆತನ ಹಿರಿಯರೇ ವ್ಯವಸ್ಥೆಯ ಪರವಾಗಿದ್ದರು. ಹೀಗೆ ಊರಿನ ಪಟ್ಟಭದ್ರ ಹಿತಾಸಕ್ತಿಗಳ ಕೈ ಗೊಂಬೆಗಳಾಗಿರುವ ಜನರು ಒಳಿತು ಕೆಡುಕುಗಳ ಮಾನಸಿಕ ತುಮುಲಗಳಲ್ಲಿ ತೊಯ್ದಾಡುವುದನ್ನು ನಿಬ್ಬೆರಗಾಗುವಂತೆ ಲೇಖಕರು ಚಿತ್ರಿಸಿದ್ದಾರೆ.  ಕಾದಂಬರಿಯಲ್ಲಿ ವಿಭಿನ್ನವಾಗಿ ನಿಲ್ಲುವ ಗುರಯ್ಯ ಗಾಂಧಿ ಅಜ್ಜ ಅವರು ಮಾನವೀಯ ಮೌಲ್ಯಗಳ ಮಾರಣ ಹೋಮ ನೋಡಿ ಹೊರಗಿನ ಕಾಡಿನ ಗುಡಿಗೆ ಹೋಗಿ ವಾಸ ಮಾಡಲು ಪ್ರಾರಂಭ ಮಾಡಿರುವುದು ನೋಡಿದರೆ ನ್ಯಾಯ ಎಲ್ಲಿದೆ ಎಂಬ ಪ್ರಶ್ನೆ ನಮ್ಮೆಲ್ಲರಿಗೂ ಮೂಡುವುದು ಸಹಜ.

ಕಾದಂಬರಿಯುದ್ದಕ್ಕೂ ನಮಗೆ ಲೇಖಕರ ಸೂಕ್ಷ್ಮ ಗ್ರಹಿಕೆಯ ಗುಣ ಪರಿಣಾಮಕಾರಿಯಾಗಿ ಮೂಡಿ ಬಂದಿರುವುದು ಸ್ಪಷ್ಟವಾಗುತ್ತದೆ. ತನ್ನ ಸುತ್ತಲೂ ನಡೆಯುತ್ತಿರುವ ಅಸ್ಪೃಶ್ಯತೆ, ಅನ್ಯಾಯ, ಗಾಳಿ ಸುದ್ದಿಗಳನ್ನು ಹಬ್ಬಿಸುವುದು, ಹೆಣ್ಣನ್ನು ಕೀಳಾಗಿ ನೋಡುವುದು, ರಾಜಕಾರಣಿಗಳ ಭ್ರಷ್ಟಾಚಾರ ಇವುಗಳನೆಲ್ಲ ನೋಡಿ ಲೇಖಕರು ಖಂಡಿತ ಕಣ್ಣು ಮುಚ್ಚಿ ಕುಳಿತಿಲ್ಲ. ಎಷ್ಟೋ ಹಳೆಯ ರಾಜಕೀಯ ಚಿತ್ರಣವನ್ನು ಕಾದಂಬರಿಯಲ್ಲಿ ಚಿತ್ರಿಸಿದರೂ ಈಗಲೂ ನಮ್ಮ ರಾಜಕೀಯ ಹಾಗೆ ಇರುವುದು ವಿಪರ್ಯಾಸ.  ಎಲ್ಲಾ ಕೆಟ್ಟ ವ್ಯವಸ್ಥೆಗಳನ್ನು ಹಂತ ಹಂತವಾಗಿ ಕಾದಂಬರಿಯಲ್ಲಿ ಸರಿ ಮಾಡುತ್ತಾ ಹೋಗಲು ಪ್ರಯತ್ನಿಸಿರುವುದು ಕಾದಂಬರಿಯ ಹೆಚ್ಚುಗಾರಿಕೆ.  ಆದರೆ ಪ್ರಮುಖವಾಗಿ ಗುರಯ್ಯ ಗಾಂಧಿ ಒಬ್ಬರೇ ಜಾತ್ಯಾತೀತ ನಿಲುವಿನ ಆದರ್ಶನಾಗಿ ಸಮಾಜವನ್ನು ಬದಲಾಯಿಸಲು ನೋಡುತ್ತಾ ಹೋಗುತ್ತಾರೆ. ಆದರೆ ಒಬ್ಬರಿಂದ ಏನು ಸಾಧ್ಯ? ಈಗಲೂ ಕೆಲವು ಹಳ್ಳಿಗಳಲ್ಲಿ ಧಾರ್ಮಿಕ ಭೇದವಿಲ್ಲದೆ ಜನರು ಬದುಕುತ್ತಿರುವ ಉದಾಹರಣೆಗಳು ನಮಗೆ ಸಿಗುತ್ತವೆ. ಒಟ್ಟಿನಲ್ಲಿ ಕಾದಂಬರಿ ಓದುವಾಗ ಮಾನವೀಯತೆ ಮಾತ್ರ ಮುಖ್ಯ ಉಳಿದದ್ದೆಲ್ಲ ನಗಣ್ಯ ಎನ್ನುವ ವಿಷಯ ನಮಗೂ ಮನವರಿಕೆಯಾಗುತ್ತದೆ. ಇದುವೇ ಕಾದಂಬರಿಯ ಉತ್ತಮ ಸಂದೇಶವು ಆಗಿದೆ.

ಲೇಖಕರು ಕಾದಂಬರಿಯಲ್ಲಿ ಬಳಸಿರುವ ಕನ್ನಡದ ಉಪಭಾಷೆಗಳ ಶಬ್ದಗಳು ಇಸಿ, ಚಿಟಬಿಲ್ಲಿ, ಹಸೇ ತಂಬಾಕ, ಹರಗುಣೀ, ಕೊರಿ ಚುಟ್ಟ, ಚಿಟ ಬುರಸಿ, ವತ್ತೊಟ್ಟಿಗೆ, ಕಪ್ಪೂ ಬಸಿ, ಜುಲ್ಮಾನೆ, ಈಚೀ ಕಡಸೆ, ಒದರು ಇತ್ಯಾದಿ ಶಬ್ದಗಳು ತೇಜೋಹಾರಿಯಾಗಿದ್ದು ಓದುಗರನ್ನು ಆಕರ್ಷಕವಾಗಿ  ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಇದರೊಂದಿಗೆ ಅಪರೂಪದ ಗಾದೆ ಮಾತುಗಳು ನಮ್ಮೆಲ್ಲರ ಮನಸ್ಸನ್ನು ಪ್ರಮುಖವಾಗಿ ಗೆಲ್ಲುತ್ತವೆ.  ಹಳ್ಳಿಯಲ್ಲಿ ಆಗಿಂದಾಗೆ ಹುಟ್ಟಿದೆಯೇನೋ  ಎನಿಸುವಂತಹ ಗಾದೆ ಮಾತುಗಳು ಬಲು ಚೆನ್ನಾಗಿವೆ. “ಖರ್ಜೂರ ಗಿಡದಾಗ ಹಣ್ಣು ಆದಾಗ ಕಾಗಿ ಬಾಯಿಗೆ ಹುಣ್ಣು”, “ಚೆಲುವು ಚರ್ಮ ಇರುವ ತನಕ, ಗುಣ ಜೀವ ಇರೋ ತನಕ”, “ಅಡೂರಾಗ  ಒಂದು ಗುಡೂರು ಅಂದಂಗ”, “ಬೆಕ್ಕಿಲ್ಲದ ಮನೆಯಾಗ ಇಲಿ ಲಗಾಟ ಹೊಡಿತಂತ”, “ಇಸ  ಕುಡಿದೇನಂದ್ರ ಕೈಯಾಗ ನಯಾ ಪೈಸೆ ಇಲ್ಲ” ಇತ್ಯಾದಿಗಳು ತೇಜೋಹರಿಯಾಗಿದ್ದು ನಮ್ಮನ್ನು ಓದಲು ಪ್ರೇರೇಪಿಸುತ್ತವೆ.

ಕಾದಂಬರಿಯಲ್ಲಿ ತನ್ನದೇ ಆದ ಒಂದು ಸತ್ವ ಇದೆ. ಅಂದರೆ ಲೇಖಕರು ತನ್ನದೇ ನೆಲವನ್ನು ಧನ್ಯತಾ ಭಾವದಿಂದ ಸ್ಮರಿಸಿಕೊಂಡಿದ್ದಾರೇನೋ ಎನ್ನುವ ಒಳದನಿ ನಮ್ಮನ್ನು ಇಲ್ಲಿ ತಟ್ಟುತ್ತದೆ.  ಹಿಂದಿನ ಹಳ್ಳಿಯೊಂದರ ಚಿತ್ರಣಕ್ಕೆ ಸಾಕ್ಷಿ ಪ್ರಜ್ಞೆಯಾದ ಲೇಖಕರ ಧೋರಣೆಯನ್ನು ಇನ್ನು ಮುಂದೆಯೂ ಸಮಾಜ ಅಳವಡಿಸಿಕೊಂಡು ಹೋದರೆ ಇಮಾಮ್ ಸಾಹೇಬರ ಕುದುರೆ ಕೃತಿ ಸಾರ್ಥಕತೆ ಪಡೆದುಕೊಳ್ಳುತ್ತದೆ.

About The Author

ಸಂಗೀತ ರವಿರಾಜ್‌ ಚೆಂಬು

ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ