ಒಂದು ಕಪ್ ಕಾಫಿ
ಕರಿ ಮೋಡ ಕರಗಿ
ಮಳೆ ಬರುವ ಹೊತ್ತು.
ಗಾಳಿಯ ವೇಗಕೆ
ಕಿಟಕಿಯ ಇಬ್ಬಾಗಿಲು
ಹವಣಿಸುತ್ತಿವೆ;
ಸದ್ದಿಲ್ಲದೆ ಮುಚ್ಚಲು
ನನಗನಿಸುತ್ತದೆ ಕಾಲವೇ..
ಒಂದು ಕಪ್ ಕಾಫಿ ಕುಡಿದು
ಅವಳನ್ನು ಹೀಗೆ
ತೇಲಿ ಬಿಡಲೆ
ಪುಟ್ಟ ದೋಣಿಯಂತೆ
ಜಿನುಗುವ ಹನಿಗಳೊಟ್ಟಿಗೆ
ಎಷ್ಟು ದಿನ ಅವಳ ನೆನಪ
ಹೊತ್ತು ಸಾಗಲಿ
ಮತ್ತೆ ಸಿಹಿ-ಕಹಿಗಳೆರಡನ್ನು
ಆಗೊಮ್ಮೆ- ಈಗೊಮ್ಮೆ
ಬಹುವಾಗಿ ಕಾಡಿದಾಗ
ಸಬೂಬು ನೀಡಿದ್ದಾಯ್ತು
ಆದರೂ..
ಬಂದು ಹೋಗುತ್ತಾಳೆ
ಕೋಲ್ಮಿಂಚಿನಂತೆ;
ದುಃಖದ ಕಟ್ಟೆ ಒಡೆದು
ಕಡಲ ಸೇರುವ ಮುನ್ನ
ಒದ್ದೆಯಾದ ಹನಿಗಳ
ಸೆರಗಂಚಿಗೆ ಕಟ್ಟಿ ಬಿಡಲೆ
ದಾರಿಯುದ್ದಕ್ಕೂ ಕಾಡಿದ
ನಿಶಬ್ಧ ಬಿಕ್ಕಳಿಕೆಗಳನ್ನು
ಮತ್ತೆ..!
ಆತ್ಮಕ್ಕಾದ ಗಾಯಗಳನ್ನು
ಮೈಗಂಟಿದ ಯಾತನೆಗಳನ್ನು..!!
ಶಿವರಾಜ ಅರಳಿ ಹುಟ್ಟಿದ್ದು ಹಾವೇರಿ ಜಿಲ್ಲೆಯ ಮೇಲ್ಮರಿ ಗ್ರಾಮದಲ್ಲಿ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಪ್ರವೃತ್ತಿಯಲ್ಲಿ ಸಾಹಿತ್ಯದ ವಿದ್ಯಾರ್ಥಿ.
ಬೆವರ ಹನಿಗಳು(೨೦೨೩), ಬರಡಾದ ಬಾನಂಗಳ(೨೦೨೪), ಕಣ್ಣ ಬಾನಲ್ಲಿ ಬೆಂಕಿಯ ಚಿತ್ರ(೨೦೨೫) ಹಾಗೂ ಪೋಲಿ ಚಿಟ್ಟೆಯ ಅಸಲಿ ಕಥೆ(೨೦೨೬) ಎಂಬ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಇವರಿಗೆ ಬೆಟಗೇರಿ ಕೃಷ್ಣಶರ್ಮ ಕಾವ್ಯ ಬಹುಮಾನ, ಡಿ ಎಸ್. ಕಕಿ೯ ಯುವ ಕಾವ್ಯ ಪ್ರಶಸ್ತಿ, ಆಜೂರ ಪುಸ್ತಕ ಪ್ರಶಸ್ತಿ ಹಾಗೂ ಶಿಭಾ ಕಾವ್ಯ ಪುರಸ್ಕಾರ ಲಭಿಸಿದೆ.
ಸದ್ಯ ಇವರು ಕನಾ೯ಟಕ ಸಾಹಿತ್ಯ ಅಕಾಡೆಮಿಯ ಚಕೋರದ ಬೆಳಗಾವಿ ಜಿಲ್ಲಾ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

