“ಈ ವೀವಿಲ್ ಆಗ್ಲೀ, ಅಥವಾ ಯಾವುದೇ ಪ್ರಭೇದದ ಕೀಟವಾಗ್ಲೀ, ಅದರ ಬಾಯನ್ನು ಎಲೆಗಳಿಗೋ, ಹಣ್ಣು-ಕಾಯಿಗಳಿಗೋ ಹಾಕಿದ ಕ್ಷಣವೇ, ಅದರ ಜೊಲ್ಲು ಅಥವಾ ಎಂಜಿಲಿರತ್ತಲ್ಲಾ? ಅದರ ರುಚಿಯನ್ನ ಗುರುತಿಸಿದ ಮರಗಳು, ಕರೆಕ್ಟಾಗಿ ಅದು ಯಾವ ಪ್ರಭೇದದ ಕೀಟ ಅಂತ ಕಂಡುಹಿಡಿದು ಬಿಡತ್ವೆ. ಪ್ರತೀ ಜೀವಿಯ ಜೊಲ್ಲೂ ಜೀವರಾಸಾಯನಿಕವಾಗಿ ವಿಶಿಷ್ಟವೇ. ಈ ಜೊಲ್ಲಿನ ರುಚಿಯನ್ನು ಗುರುತಿಸಿದ ಮರಗಳು, ಆ ಕೀಟವನ್ನ ಓಡಿಸಿ, ತಮ್ಮ ಎಲೆಗಳನ್ನ, ಕಾಯಿಗಳನ್ನ ಕಾಪಾಡಿಕೊಳ್ಳೊಕೆ ಒಂದು ಪ್ಲಾನ್ ಮಾಡತ್ವೆ. ಏನು ಪ್ಲಾನ್ ಇರ್ಬಹುದು ಹೇಳಿ ನೋಡೋಣ?” ಎಂದು ಪ್ರಶ್ನಿಸಿದಳು.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಒಂಭತ್ತನೆಯ ಕತೆ
ಮಿಂಚುಹುಳುಗಳ ಮಾಯೆಯಲ್ಲಿ ಮಿಂದೆದ್ದು, ಮುದಗೊಂಡ ಮನಸಿನೊಂದಿಗೆ ಮರಳಿ ಮನೆಗೆ ಬಂದ ಕಾವ್ಯಾಳ ಕುಟುಂಬಕ್ಕೆ, ದೇಹ ಇಲ್ಲೇ ಇದ್ದರೂ, ಮನಸ್ಸು ಕೊಡಗಿನಲ್ಲೇ ಕಳೆದುಹೋಗಿತ್ತು.
ಆದರೂ ಬೇಸರವೇನೂ ಇರಲಿಲ್ಲ, ಏಕೆಂದರೆ ತಂಗಿ ವಿಭಾ ಮನೆಗೆ ಬರುವ ಸಂದೇಶ ಬಂದಿತ್ತು. ಮಗ ಸಮುದ್ರನಿಗೂ ಶಾಲೆಗೆ ರಜೆ ಶುರುವಾಗಿತ್ತು, ಬೇಸಿಗೆ ರಜೆಗೆ ತಂಗಿ ವಿಭಾಳೂ ಪರೀಕ್ಷೆ ಮುಗಿದದ್ದೇ ಕಾವ್ಯಳ ಮನೆಗೆ ಬರುವ ಬಸ್ ಹತ್ತಿದ್ದಳು. ಇವರಿಗೆಲ್ಲಾ ರಜೆಯ ಮಜಾ ಎಂದರೆ ಕಾವ್ಯ-ಪ್ರಕಾಶ್ ಇಬ್ಬರಿಗೂ ತಮಗೇ ರಜೆ ಬಂದಷ್ಟು ಸಂಭ್ರಮ. ವಿಧವಿಧವಾದ ವಿಶೇಷ ತಿಂಡಿಗಳು, ಕಾಡು-ಮೇಡು ಅಲೆಯುವ ಯೋಜನೆಗಳು, ‘ಮ್ಯೂಸಿಯಮ್’ಗಳಿಗೆ ಭೇಟಿ ಇತ್ಯಾದಿ – ರಜೆಯಲ್ಲಿ ಮಾಡುವ ಆಸಕ್ತಿಕರ ಕೆಲಸಗಳ ಪಟ್ಟಿ ದೊಡ್ಡದೇ ಇರುತ್ತದೆ. ಜೊತೆಗೆ ಹೊಲದ ಕೆಲಸಗಳ ಉಸ್ತುವಾರಿಯಂತೂ ಇದ್ದೇ ಇದೆ.
ಒಂದೆರಡು ದಿನ ಹೊಲದ ಕೆಲಸಗಳು, ಆಫೀಸ್ ಕೆಲಸ, ಬರವಣಿಗೆ ಇತ್ಯಾದಿಯಲ್ಲಿ ಬ್ಯುಸಿಯಾಗಿದ್ದ ಕಾವ್ಯಳ ಕುಟುಂಬಕ್ಕೆ ವಿಭಾ ಬಂದು ಕದ ತಟ್ಟಿದಾಗ ಅಚ್ಚರಿ! ಹೇಳಿದ್ದಕ್ಕಿಂತಲೂ ಎರಡು ದಿನ ಮುಂಚಿತವಾಗಿ ಬಂದು ಸರ್ಪ್ರೈಸ್ ಕೊಟ್ಟ ಮುದ್ದು ತಂಗಿಗೊಂದು ಅಪ್ಪುಗೆ ಕೊಟ್ಟು, ಒಳಗೆ ಕರೆದಳು ಕಾವ್ಯ. “ಏನಕ್ಕಾ? ಹೆಂಗೆ ಸರ್ಪ್ರೈಸು?” ಎಂದಳು ವಿಭಾ ನಗುತ್ತಾ. “ಸೂಪರ್ ಕಣೋ ವಿಭಾ! ನಿಜಕ್ಕೂ ಪ್ಲೆಸೆಂಟ್ ಸರ್ಪ್ರೈಸ್” ಎನ್ನುತ್ತಾ, “ಸರಿ, ನೀನು ಮುಖ ತೊಳೆದು ಫ್ರೆಶ್ ಆಗು ವಿಭಾ. ನಾನು ಬಾವ ಇಬ್ರೂ ಒಂಚೂರು ಅಡುಗೆ ತಯಾರಿ ಮಾಡ್ತೀವಿ; ಆಮೇಲೆ, ವಿಭಾ, ಸಮುದ್ರಾ – ನೀವಿಬ್ರೂ ತೋಟ ಸುತ್ತಾಡ್ತಾ ಇರಿ, ನಾವೂ ಅಲ್ಲೇ ಬರ್ತೀವಿ” ಎಂದಳು ಕಾವ್ಯ.
ವಿಭಾ, ಸಮುದ್ರ – ಇವರಿಬ್ಬರಿಗೂ ವಯಸ್ಸಿನಲ್ಲಿ ಬಹಳವೇನೂ ಅಂತರವಿಲ್ಲದಿದ್ದರೂ, ಅಕ್ಕನಂತಹ ಪುಟ್ಟ ವಿಭಾಳನ್ನು ‘ಚಿಕ್ಕಿ’ ಅಂತ ಕರೆಯೋಕೇ ಇಷ್ಟ ಅವನಿಗೆ. ತೋಟದಲ್ಲಿ ಆಲದ ಮರಕ್ಕೆ ಕಟ್ಟಿದ್ದ ಹೊಸ ಉಯ್ಯಾಲೆಯನ್ನು ವಿಭಾ ಚಿಕ್ಕಿಗೆ ತೋರಿಸುವುದಕ್ಕೆ ಸಮುದ್ರನಿಗೆ ಎಲ್ಲಿಲ್ಲದ ಹಿಗ್ಗು. “ಬನ್ನಿ, ಬನ್ನಿ, ಹೋಗೋಣ!” ಎನ್ನುತ್ತಾ ಕರ್ಕೊಂಡು ಹೊರಟ. ಹೊಲವನ್ನು ದಾಟಿ, ತೋಟಕ್ಕೆ ಹೋದ ಇಬ್ಬರೂ, ಮಾತಾಡದ ವಿಷಯವೇ ಇಲ್ಲ. ಬೃಹತ್ ಆಲದ ಮರದ ನೆರಳನ್ನು ತಲುಪಿದ ಈ ಇಬ್ಬರೂ ಪರಿಸರ-ಪ್ರಿಯ ಮಕ್ಕಳು, ಆಲದ ಮರದ ಬಿಳಲಿನ ಬಗ್ಗೆಯೇ – ಗೊತ್ತಿದ್ದದ್ದು, ಗೊತ್ತಿಲ್ಲದ್ದು ಮಾತಾಡುತ್ತಾ ಕೂತಿದ್ದಾಗ, ಅಲ್ಲಿಗೇ ಮಾವಿನಕಾಯಿ ಚಿತ್ರಾನ್ನ, ಮಾವಿನ ಹಣ್ಣಿನ ಸೀಕರಣೆ, ಮಜ್ಜಿಗೆಯ ಬುತ್ತಿ ಹೊತ್ತು ತಂದರು ಕಾವ್ಯ ಮತ್ತು ಪ್ರಕಾಶ್. ಮರದ ನೆರಳಿನಲ್ಲಿ ಬುತ್ತಿ ತಿನ್ನುತ್ತಾ, ಮಾತುಕತೆ ಮುಂದುವರೆಯಿತು.
ನೂರು-ನೂರೈವತ್ತು ವರ್ಷ ಹಳೆಯದಾದ ಆ ಆಲದ ಮರದ ಬಿಳಲುಗಳು ಮತ್ತು ಬೇರುಗಳ ಬಗ್ಗೆ ವಿಭಾ ಮತ್ತು ಸಮುದ್ರರಿಗಿದ್ದ ಪ್ರಶ್ನೆಗಳನ್ನು ಕೇಳಿದಾಗ, ಪ್ರಕಾಶ್ “ಆಲದ ಮರಕ್ಕೆ ಎರಡು ಬಗೆಯ ಬೇರುಗಳಿವೆ; ಒಂದು ನೆಲದೊಳಗೆ ಇಳಿಯುವ ತಾಯಿಬೇರು; ಅದು ಮರಕ್ಕೆ ಬೇಕಾದ ನೀರು, ಪೋಷಕಾಂಶಗಳನ್ನ ಮಣ್ಣಿನಿಂದ ಹೀರಿ ಕೊಡತ್ತೆ. ಇನ್ನು, ಮೇಲೆ ಈ ಬಿಳಲುಗಳಿವೆ ನೋಡಿ? ಇದು ಏರಿಯಲ್ ರೂಟ್ಸ್ ಅಂತೀವಿ; ಮಣ್ಣಿಗಿಂತಾ ಮೇಲ್ಭಾಗದಲ್ಲಿ ಗಾಳಿಯಲ್ಲಿ ಬೀಳುಬಿದ್ದಿರೋ ಬೇರುಗಳು ಅಂತ ಅರ್ಥ. ಇವು ನಮ್ಮ ಈ ಬೃಹತ್ ಆಲದ ಮರಕ್ಕೆ ಎಕ್ಸ್ಟ್ರಾ ಶಕ್ತಿ, ಬಲ ಕೊಟ್ಟು, ಅದು ಮುರಿದು ಬೀಳದ ಹಾಗೆ ಸಪೋರ್ಟ್ ಮಾಡತ್ವೆ.” ಎಂದು ವಿವರಿಸಿದ. ಆಗ ವಿಭಾ “ಹೇಗೆ ಒಂದಕ್ಕೊಂದು ಮಾತಾಡ್ಕೊಂಡು ಕೆಲ್ಸ ಹಂಚಿಕೊಂಡ ಹಾಗಿದೆ ಅಲ್ವಾ ಇವೆರಡರದ್ದೂ? ನೀನು ಬಲ ಕೊಡು, ನಾನು ಪೋಷಕಾಂಶ ಕೊಡ್ತೀನಿ ಅಂತ!” ಎಂದಳು. ಈ ಮಾತನ್ನು ಕೇಳಿದ ಕಾವ್ಯ, “ಹೌದು ವಿಭಾ, ಹಾಗೆ ನೋಡಿದ್ರೆ, ಈ ಗಿಡಮರಗಳು ತಮ್ಮೊಳಗೆ ಮಾತ್ರ ಅಲ್ಲ, ಬೇರೆ ಬೇರೆ ಮರಗಳ ಜೊತೆ ಕೂಡ ನಮ್ಮ ಹಾಗೇ ಮಾತುಕತೆ ನಡೆಸತ್ವೆ ಗೊತ್ತಾ?” ಎಂದಳು.
ಆಗ ಸಮುದ್ರಾ, ಬಿಟ್ಟ ಬಾಯಿ ಬಿಟ್ಟಂತೆಯೇ ಅವಾಕ್ಕಾಗಿ ನೋಡುತ್ತಾ, “ಏನು? ಮರಗಳೂ ಮಾತಾಡತ್ವಾ?” ಎಂದ. ಆಗ ಕಾವ್ಯ ನಗುತ್ತಾ, “ಬರೀ ಮಾತೇನು ಕಂದಾ? ಮರಗಳು ನೋಡತ್ವೆ, ಕೇಳಿಸಿಕೊಳ್ಳತ್ವೆ, ರುಚಿ ನೋಡತ್ವೆ, ವಾಸನೆ ಅಥ್ವಾ ಪರಿಮಳವನ್ನೂ ಗುರುತಿಸತ್ವೆ” ಎಂದಳು. “ಅದು ಹೇಗೆ ಸಾಧ್ಯ ಅಕ್ಕಾ? ಅವಕ್ಕೆ ನಮ್ಮ ಹಾಗೆ ಕಣ್ಣು, ಕಿವಿ, ಮೂಗು, ಬಾಯಿ ಇಲ್ವಲ್ಲಾ?” ಎಂದು ಅಚ್ಚರಿಯಿಂದ ಕೇಳಿದಳು ವಿಭಾ. ಆಗ ಕಾವ್ಯ, “ಹೌದು ವಿಭಾ, ಅವಕ್ಕೆ ನಮ್ಮ ಹಾಗೆ ಕಣ್ಣು, ಕಿವಿಯಂತಹ ಅಂಗಗಳು ಇಲ್ಲ; ಆದ್ರೆ ಅವುಗಳದ್ದೇ ಆದ ಅಂಗ, ಅಂಗಾಂಶಗಳ ಮೂಲಕ ಅವು ಇಂತಹ ಪ್ರಕ್ರಿಯೆಗಳನ್ನ ನಡೆಸತ್ವೆ. ಈಗ ಮೊದ್ಲು ಇದ್ರಲ್ಲಿ ಯಾವುದು ಹೇಳ್ಲಿ? ಎಂದು ಕೇಳಿದಳು ಕಾವ್ಯ.
ಆಗ ಸಮುದ್ರಾ, “ಅಮ್ಮ, ಮರಗಳು ಸ್ಮೆಲ್ ಹೇಗೆ ಮಾಡತ್ವೆ ಹೇಳಿ?” ಎಂದ. “ಹೂಂ, ಸರಿ… ಈಗ ನಮ್ಮ ಹಸು ಗೌರಿ, ಮನೇಲಿ ಕೊಡೋ ಹುಲ್ಲು ಬಿಟ್ಟು, ನಮ್ಮ ತೋಟದ ಮಾವಿನ ಚಿಗುರಿಗೆ ಬಾಯಿ ಹಾಕ್ತಾ ಹೋದ್ಲು ಅಂತಿಟ್ಕೋ. ಆಗ ಅವ್ಳು ಒಂದು ಮಾವಿನ ಮರದ ಚಿಗುರು ಎಲೆಗಳನ್ನ ತಿಂದು ಮುಗ್ಸಿ, ಮತ್ತೊಂದಕ್ಕೆ ಬಾಯಿ ಹಾಕಿ, ನಂತರ ಮೂರನೆಯ ಮರದ ಕಡೆ ಹೆಜ್ಜೆ ಹಾಕ್ತಾ ಇರೋವಾಗ ಏನಾಗತ್ತೆ ಗೊತ್ತಾ? ಮೊದಲ ಮಾವಿನ ಮರ, ಉಳಿದ ಮಾವಿನಮರಗಳಿಗೆ ಮೆಸೇಜ್ ಕಳ್ಸಿಬಿಡತ್ತೆ. ಹೇಗೆ ಗೊತ್ತಾ? ವಿಶೇಷ ‘ಕೆಮಿಕಲ್’ಗಳನ್ನ ಹೊರಹಾಕೋ ಮೂಲಕ. ಈ ಕೆಮಿಕಲ್’ಗಳ ಗುಂಪಿಗೆ ‘ವೊಲಟೈಲ್ ಆರ್ಗ್ಯಾನಿಕ್ ಕಾಂಪೌಂಡ್ಸ್’ ಅಂತೀವಿ. ಗಾಳಿಯಲ್ಲಿ ತೇಲಿಬಂದ ಈ ರಾಸಾಯನಿಕಗಳನ್ನ ಗುರುತಿಸಿದ ಅಥವಾ ಸ್ಮೆಲ್ ಮಾಡಿದ ಇತರ ಮಾವಿನ ಮರಗಳು, ಅಲರ್ಟ್ ಆಗಿ, ತಮ್ಮ ಎಲೆಗಳಲ್ಲಿ ಕಹಿ ಅಂಶ ಹೆಚ್ಚಿಸತ್ವೆ. ಆಗ, ನಮ್ ಗೌರಿ ಹಸು, ಆ ಮರಗಳ ಕಹಿ ಎಲೆಗಳನ್ನ ತಿನ್ನದೇ ವಾಪಸ್ ಬರತ್ತೆ. ಈಗ ಅರ್ಥ ಆಯ್ತಾ, ನಮ್ ಮರಗಳು ಸ್ಮೆಲ್ ಹೇಗೆ ಮಾಡತ್ವೆ ಅಂತ?” ಎಂದಳು ಕಾವ್ಯ.

ಆಗ ವಿಭಾ, “ಅಬ್ಬ! ವೆರಿ ನೈಸ್! ಸರಿ ಈಗ, ಮರಗಳು ರುಚಿ ಹೇಗೆ ನೋಡತ್ವೆ ಹೇಳು ಅಕ್ಕಾ?” ಎಂದಳು. ಆಗ ಕಾವ್ಯ, “ಹೂಂ, ಇದೊಂಥರಾ ಮಜವಾಗಿದೆ. ನಮ್ ಮಾವಿನಮರದ ಎಲೆಗಳನ್ನೇ ನೋಡಿ? ಮಾವಿನ ಎಲೆಗಳನ್ನೇ ವಿಶೇಷವಾಗಿ ಅಟ್ಯಾಕ್ ಮಾಡೋ ಕೀಟವನ್ನ ಅಲ್ಲಿ ನೋಡ್ಬಹುದು ನಾವು. ಇಂಗ್ಲೀಷಲ್ಲಿ ಅದಕ್ಕೆ ‘ಮ್ಯಾಂಗೋ ಲೀಫ್ ಕಟಿಂಗ್ ವೀವಿಲ್’ ಅಂತಾರೆ. ಅದೊಂದು ಬಗೆಯ ಜೀರುಂಡೆ ಕುಟುಂಬಕ್ಕೆ ಸೇರಿದ ಕೀಟ. ಅದರ ಮೂತೀಲಿ ಕತ್ತರಿಯನ್ನ ಅಗಲ ಮಾಡಿ ಹಿಡಿದಿರೋ ಹಾಗೆ ವಿಶೇಷವಾದ ರಚನೆ ಇರತ್ತೆ. ಆ ಕೀಟ, ನೀಟಾಗಿ ಕತ್ತರಿಯಲ್ಲಿ ಕಟ್ ಮಾಡಿದೀವೇನೋ ಅನ್ನೋ ಹಾಗೆ, ಮಾವಿನ ಎಲೆಗಳನ್ನ ಕಟ್ ಮಾಡತ್ತೆ. ಇಂತಹ ಬಗೆಬಗೆಯ ಪ್ರಭೇದಗಳು, ಮಾವಿನ ಎಲೆಗಳನ್ನ ತಿನ್ನೋದು ಮಾತ್ರ ಅಲ್ಲ, ಆ ಎಲೆಗಳ ಹಿಂದೆ ಮೊಟ್ಟೆ ಇಟ್ಟು, ಎಲೆಗಳನ್ನ ಕಟ್ ಮಾಡಿ, ಮಣ್ಣಿನ ಮೇಲೆ ಉದುರಿಸತ್ವೆ. ಮಣ್ಣಿನ ತೇವಾಂಶ ಆ ಮೊಟ್ಟೆಗಳಿಗೆ ಬೇಕಾದಂತಹ ವಾತಾವರಣ ಕೊಡತ್ತೆ ಅಂತ ನಮ್ಮ ಬುದ್ದಿವಂತ ಕೀಟ ಹೀಗೆ ಮಾಡತ್ತೆ.” ಎಂದು ವಿವರಿಸುತ್ತಾ ಸಾಗಿದಾಗ, ಪ್ರಕಾಶ್, “ಹೇ ಕಾವ್ಯ, ಕಥೆಯೇನೂ ಇಂಟರೆಸ್ಟಿಂಗ್ ಆಗಿದೆ, ಆದ್ರೆ, ಮರದ ಕಥೆ ಹೋಗಿ ಕೀಟದ ಕಥೆಯಾಯ್ತಲ್ಲ?” ಎಂದನು ನಗುತ್ತಾ!
ಕಾವ್ಯಳೂ ನಗುತ್ತಾ, “ಅಯ್ಯೋ ಹೌದಲ್ವಾ? ಸರಿ! ಮತ್ತೆ, ಮರದ ಕಥೆಯನ್ನ ‘ಟ್ರ್ಯಾಕ್’ಗೆ ತರ್ತೀನಿ. ಈ ವೀವಿಲ್ ಆಗ್ಲೀ, ಅಥವಾ ಯಾವುದೇ ಪ್ರಭೇದದ ಕೀಟವಾಗ್ಲೀ, ಅದರ ಬಾಯನ್ನು ಎಲೆಗಳಿಗೋ, ಹಣ್ಣು-ಕಾಯಿಗಳಿಗೋ ಹಾಕಿದ ಕ್ಷಣವೇ, ಅದರ ಜೊಲ್ಲು ಅಥವಾ ಎಂಜಿಲಿರತ್ತಲ್ಲಾ? ಅದರ ರುಚಿಯನ್ನ ಗುರುತಿಸಿದ ಮರಗಳು, ಕರೆಕ್ಟಾಗಿ ಅದು ಯಾವ ಪ್ರಭೇದದ ಕೀಟ ಅಂತ ಕಂಡುಹಿಡಿದು ಬಿಡತ್ವೆ. ಪ್ರತೀ ಜೀವಿಯ ಜೊಲ್ಲೂ ಜೀವರಾಸಾಯನಿಕವಾಗಿ ವಿಶಿಷ್ಟವೇ. ಈ ಜೊಲ್ಲಿನ ರುಚಿಯನ್ನು ಗುರುತಿಸಿದ ಮರಗಳು, ಆ ಕೀಟವನ್ನ ಓಡಿಸಿ, ತಮ್ಮ ಎಲೆಗಳನ್ನ, ಕಾಯಿಗಳನ್ನ ಕಾಪಾಡಿಕೊಳ್ಳೊಕೆ ಒಂದು ಪ್ಲಾನ್ ಮಾಡತ್ವೆ. ಏನು ಪ್ಲಾನ್ ಇರ್ಬಹುದು ಹೇಳಿ ನೋಡೋಣ?” ಎಂದು ಪ್ರಶ್ನಿಸಿದಳು.
ಸಮುದ್ರ ಮತ್ತು ವಿಭಾಗೆ ಇಂತಹ ಇಂಟರೆಸ್ಟಿಂಗ್ ಕಥೆಯಲ್ಲಿ ಹೀಗೆ ಬ್ರೇಕ್ ನೀಡಿದ್ದು ಇಷ್ಟವಾಗ್ಲಿಲ್ಲ. “ರುಚಿ ಬೇರೆ ನೋಡುತ್ವಾ ನಮ್ ಮರಗಳು. ಕೀಟ ಯಾವ್ದೂ ಅಂತ ಕೂಡ ಕಂಡುಹಿಡಿಯತ್ತಾ? ಆಮೇಲೆ ಏನು ಮಾಡತ್ತೆ ನಮಗೆ ಗೊತ್ತಿಲ್ಲ, ನೀನೇ ಹೇಳಕ್ಕ ಬೇಗ!” ಎಂದಳು ವಿಭಾ. ಆಗ ಪ್ರಕಾಶ್, “ಇರು ವಿಭಾ, ನಿಮ್ ಅಕ್ಕ ಬ್ರೇಕ್ ಮೇಲೆ ಬ್ರೇಕ್ ಕೊಡ್ತಾಳೆ. ನಾನೇ ಹೇಳ್ತೀನಿ; ನಮ್ಮ ಮರಗಳಿಗೆ ಅಟ್ಯಾಕ್ ಮಾಡಿರೋ ಕೀಟಗಳಿವೆಯಲ್ಲಾ? ಅವುಗಳಿಗೂ ನಮ್ಮ ಮರಗಳಿಗೂ ಯುದ್ಧ ಶುರುವಾಗತ್ತೆ. ಯುದ್ಧದಲ್ಲಿ ನೇರವಾಗಿ ತಮ್ಮ ಶಸ್ತ್ರಾಸ್ತ್ರಗಳಿಂದ ಹೋರಾಟ ಮಾಡೋದು ಒಂದು ಬಗೆಯಾದ್ರೆ, ತಮ್ಮ ಫ್ರೆಂಡ್ ದೇಶಗಳ ಸಪೋರ್ಟ್ ತೊಗೊಂಡು ಯುದ್ಧ ಮಾಡೋದು ಮತ್ತೊಂದು ತಂತ್ರ ಅಲ್ವಾ. ಇಲ್ಲಿ ಕೂಡ ಹಾಗೇ ಆಗತ್ತೆ! ಈ ಮೊದ್ಲು, ನಮ್ ಗೌರಿ ಹಸೂನ ವಾಪಸ್ ಕಳ್ಸೋಕೆ ಎಲೆಗಳನ್ನ ಕಹಿ ಮಾಡ್ತಲ್ವ ಮರಗಳು? ಹಾಗೇ ಇಲ್ಲಿ ಕೂಡ ಎಲೆಗಳಲ್ಲಿ ವಿಷವನ್ನ ತುಂಬಿಸಿ ಕೀಟಗಳನ್ನ ದೂರ ಓಡಿಸ್ಬಹುದು ಅಥವಾ ಕೀಟಗಳನ್ನ ಮರಗಳು ಕೊಲ್ಲಬಹುದು ಕೂಡ. ಅಥ್ವಾ, ತಮ್ಮ ಮಿತ್ರಪಡೆಯನ್ನ ಆಹ್ವಾನಿಸ್ಬಹುದು.” ಎಂದು ವಿವರಿಸಿದ.
“ಹಾಗಂದ್ರೆ?” ಎಂದು ಪ್ರಶ್ನಿಸಿದ ಸಮುದ್ರ. ಅದಕ್ಕೆ ಪ್ರಕಾಶ್ “ಅಂದ್ರೆ, ಜೊಲ್ಲಿನ ರುಚಿಯನ್ನು ತಿಳಿದುಕೊಂಡ ಮರಗಳು, ಯಾವ ಪ್ರಭೇದದ ಕೀಟ ಅಟ್ಯಾಕ್ ಮಾಡಿವೆ ಅಂತ ತಿಳ್ಕೊಂಡಿವೆ ಅಲ್ವಾ? ಅದೇ ನಿರ್ದಿಷ್ಟ ಕೀಟವನ್ನ ಬೇಟೆಯಾಡೋ ಪಕ್ಷಿಯೋ, ಪ್ರಾಣಿಯೋ, ಮತ್ತೊಂದು ಕೀಟವೋ ಯಾವ್ದು ಅಂತ ನಮ್ ಬುದ್ಧಿವಂತ ಮರಗಳಿಗೆ ಚೆನ್ನಾಗಿ ಗೊತ್ತಿರತ್ತೆ. ‘ಶತೃವಿನ ಶತೃ ಮಿತ್ರ’ ಅಂತ ನಮ್ಗೆಲ್ಲಾ ಗೊತ್ತೇ ಇದ್ಯಲ್ವಾ? ಅದು ನಮ್ಮ ಮರಗಳಿಗೂ ಗೊತ್ತು. ಹಾಗಾಗಿ, ಈ ಕೀಟಗಳ ಶತೃ ಯಾರೋ, ಆ ಪ್ರಭೇದದ ಜೀವಿಗೇ ವಿಶೇಷವಾಗಿ ಗಾಳಿಯ ಮೂಲಕ ಕೆಮಿಕಲ್ ಸಂದೇಶ ಕಳಿಸತ್ವೆ ನಮ್ ಮರಗಳು. ಕೆಲವೇ ಘಂಟೆಗಳಲ್ಲಿ ಮರಗಳ ಮಿತ್ರವೃಂದ ಬಂದು, ಅಟ್ಯಾಕ್ ಮಾಡಿದ ಕೀಟಗಳ ಮೇಲೇ ಅಟ್ಯಾಕ್ ಮಾಡಿ, ನಮ್ಮ ಮರಗಳಿಗೆ ಹೆಲ್ಪ್ ಮಾಡತ್ವೆ, ಅವಕ್ಕೂ ಊಟ ಸಿಕ್ಕ ಖುಷಿ – ಹೀಗೆ ಸ್ವಾಮಿ ಕಾರ್ಯ, ಸ್ವಕಾರ್ಯ ಮಾಡಿಕೊಂಡು, ವಾಪಸ್ ಹೋಗತ್ವೆ. ಇದು ನಮ್ಮ ಮರಗಳು ಟೇಸ್ಟ್ ಮಾಡುವ ಮೂಲಕ ಯುದ್ಧ ಮಾಡಿದ ಸಾಹಸದ ಕಥೆ!” ಎಂದು ವಿವರಿಸಿದ.
ಇದಕ್ಕೆ ಉತ್ತರಿಸುತ್ತಾ, “ವಾವ್! ನಿಜಕ್ಕೂ ನಮ್ ಸುತ್ತಾ ಇರೋ ಮರಗಳ ಒಳಗಿನ ಲೋಕ ಅದ್ಭುತಾನೇ ಅಲ್ವಾ?” ಎಂದಳು ವಿಭಾ. ಆಗ ಕಾವ್ಯ “ಹೌದು ಕಣೋ ವಿಭಾ! ಗಿಡ ಮರಗಳ ಅದ್ಭುತ ಲೋಕದ ಬಗ್ಗೆ ಇಷ್ಟೆಲ್ಲಾ ತಿಳ್ಕೊಳೋಕೆ ಎಷ್ಟು ಚೆಂದ ಅನ್ಸತ್ತೆ. ಗಿಡ ಮರಗಳು ಕೂಡ ಜೀವಿಗಳು ಅಂತ ಮೊದಲ ಬಾರಿಗೆ ವೈಜ್ಞಾನಿಕವಾಗಿ ಪ್ರೂವ್ ಮಾಡಿದ್ದು ನಮ್ಮ ಭಾರತೀಯ ವಿಜ್ಞಾನಿಯೇ! ಅವ್ರೇ ಜಗದೀಶ್ ಚಂದ್ರ ಬೋಸ್. ‘ಕ್ರೆಸ್ಕೋಗ್ರಾಫ್’ ಅನ್ನೋ ಒಂದು ಸಾಧನವನ್ನ ತಯಾರಿಸಿದ ಜೆ.ಸಿ ಬೋಸ್, ಅದರ ಮೂಲಕ ಗಿಡಗಳ ಒಳಗೆ ನಮ್ಮ ಹಾಗೇ ನಾಡಿಮಿಡಿತದಂತಹ ‘ಪಲ್ಸ್’ ಇದೆ, ಅವುಗಳ ಒಳಗೂ ನಮ್ಮ ನರಗಳಲ್ಲಿ ಓಡಾಡಿದ ಹಾಗೇ ವಿದ್ಯುತ್ ಸಂಕೇತಗಳು ಓಡಾಡತ್ವೆ ಅಂತೆಲ್ಲಾ ಕಂಡುಹಿಡಿದು, ಜಗತ್ತನ್ನೇ ನಿಬ್ಬೆರಗಾಗೋ ಹಾಗೆ ಮಾಡಿದ್ರು. ಅಲ್ಲಿಂದ ಮುಂದಕ್ಕೆ ಅನೇಕ ಸಸ್ಯವಿಜ್ಞಾನಿಗಳು ಈ ಪ್ರಯೋಗದ ಫಲಿತಾಂಶದ ಆಧಾರದ ಮೇಲೆ, ಅನೇಕ ಆಶ್ಚರ್ಯಕರ ವಿಷಯಗಳನ್ನ ಕಂಡುಹಿಡೀತಾ ಸಾಗಿದ್ರು. ಹಾಗೇ ಅನೇಕ ಪ್ರಯೋಗಗಳ ಮೂಲಕ ಗೊತ್ತಾಗಿದ್ದೇ ಇವೆಲ್ಲಾ – ಮರಗಳು ಸ್ಮೆಲ್ ಮಾಡತ್ವೆ, ರುಚಿ ನೋಡತ್ವೆ ಅಂತ.” ಎಂದಳು.

ಆಗ ವಿಭಾ, “ಹೌದಾ ಕಾವ್ಯಕ್ಕಾ? ಹಾಗಿದ್ರೆ, ಈಗ ಮರಗಳು ಹೇಗೆ ನೋಡತ್ವೆ? ಕೇಳತ್ವೇ? ಮಾತಾಡತ್ವೇ? ಅದನ್ನೂ ಹೇಳು.” ಎಂದು ಪ್ರಶ್ನೆ ಹಾಕಿದಳು. ಆಗ ಕಾವ್ಯಾ, “ಮರಗಳು ನೋಡೋದು ಅಂದ್ರೆ, ನಮ್ಮ ಹಾಗೆ, ಕಣ್ಣಿನ ಮೂಲಕ ಸುಂದರ ದೃಶ್ಯಗಳ ನೋಟ ಕಾಣೋದು ಅಂತ ಅಲ್ಲ. ಆದ್ರೆ ಮರಗಿಡಗಳಲ್ಲಿ ಇರೋ ವಿಶೇಷ ಕೋಶಗಳ ಮೂಲಕ ಅವು ಬೆಳಕೆಲ್ಲಿದೆ, ಕತ್ತಲೆಲ್ಲಿದೆ, ನೆರಳೆಲ್ಲಿದೆ ಅಂತ ನೋಡತ್ವೆ, ಗುರುತಿಸತ್ವೆ; ಅದಕ್ಕೆ ತಕ್ಕ ಹಾಗೆ ತಮ್ಮ ‘ಫೋಟೊಸಿಂಥೆಸಿಸ್’ ಅಂದ್ರೆ ಬೆಳಕಡುಗೆಗೆ ಬೇಕಾದ ಬದಲಾವಣೆ, ತಮ್ಮ ಬೆಳವಣಿಗೆಯ ದಿಕ್ಕಿನ ಬದಲಾವಣೆ ಮಾಡಿಕೊಳ್ಳತ್ವೆ. ಜೊತೆಗೆ ಹಗಲು ರಾತ್ರಿಯಲ್ಲಾದ ಬದಲಾವಣೆಗೆ ತಕ್ಕ ಹಾಗೆ, ನಾವು ನಮ್ಮ ದಿನಚರಿಯಲ್ಲಿ ಬದಲಾವಣೆ ಮಾಡ್ಕೋತೀವಲ್ವಾ? ಅವೂ ಹಾಗೇ ಬೆಳಕು ಕಂಡ ಕ್ಷಣವೇ ಬೇರೆ ಪ್ರಕ್ರಿಯೆ, ಬೆಳಕು ಮರೆಯಾದ ತಕ್ಷಣವೇ ಬೇರೆ ಪ್ರಕ್ರಿಯೆ – ಹೀಗೆ ಬದಲಾಯಿಸಿಕೊಳ್ಳತ್ವೆ. ಜೊತೆಗೆ ಅವುಗಳಿಗೆ ಬೆಳಕಿನಲ್ಲಿರೋ ಬಗೆಬಗೆಯ ಬಣ್ಣಗಳ ನಡುವಿನ ವ್ಯತ್ಯಾಸವೂ ಚೆನ್ನಾಗಿಯೇ ಗೊತ್ತು.” ಎಂದು ಆಸಕ್ತಿಯಿಂದ ಉತ್ತರಿಸಿದಳು. ಆಗ ಪ್ರಕಾಶ್, “ನಿಜಕ್ಕೂ ಎಷ್ಟೆಲ್ಲಾ ಮಾತಾಡೋಕಿದೆ ಇದರ ಬಗ್ಗೆ. ಆದ್ರೆ, ಮರಗಳು ಹೇಗೆ ಕೇಳಿಸಿಕೊಳ್ಳತ್ವೆ, ಮತ್ತೆ, ಹೇಗೆ ಮಾತಾಡತ್ವೆ ಅನ್ನೋದನ್ನ ಆಮೇಲೆ ಮಾತಾಡೋಣ. ಈಗ ಮಾತು ನಿಲ್ಸಿ ಹೊರಡದೇ ಇದ್ರೇ, ಸಮುದ್ರನ ಫುಟ್ಬಾಲ್ ಕೋಚಿಂಗ್ಗೆ ತಡ ಆಗತ್ತೆ. ನಡೀರಿ, ನೀವಿಬ್ರೂ ಸ್ವಲ್ಪ ರೆಸ್ಟ್ ಮಾಡಿ ಮನೇಲಿ. ಬಿಸಿಲು ಜೋರಿದೆ” ಎಂದು ಎಲ್ಲರನ್ನೂ ಎಬ್ಬಿಸಿಕೊಂಡು ನಡೆದ. ಸಾಲು ಮರಗಳ ಅಡಿಯಲ್ಲೇ ನೆರಳಿನಲ್ಲಿ ನಡೆಯುತ್ತಾ ಮನೆಗೆ ತೆರಳಿದ ಇವರನ್ನೆಲ್ಲಾ ನೋಡುತ್ತಾ, ಮೌನವಾಗಿದ್ದ ಹಾಗೆ ಕಂಡ ಮರಗಳು, ಏನು ಮಾತಾಡಿಕೊಂಡವೋ, ಅಲ್ವಾ?
(ಹಿಂದಿನ ಕಂತು: ಬಿಸಿಬೆಳಕು -ತಂಪುಬೆಳಕಿನ ಸಂಗಮ, ಸಂಭ್ರಮ!)
ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.

