“ಅಕ್ಕಾ, ಈ ಕವಾಟ ನಮ್ಮ ಹೃದಯದಲ್ಲೂ ಇರತ್ತೆ ಅಲ್ವಾ?” ಎಂದಳು ವಿಭಾ. ಆಗ ಕಾವ್ಯ ನೀರು ಕುಡಿಯುತ್ತಾ “ಹೌದು ವಿಭಾ, ಹೃದಯದಲ್ಲೂ ಹೀಗೆ ರಕ್ತವು ಸರಿಯಾದ ದಿಕ್ಕಿನಲ್ಲಿ ಮಾತ್ರ ಹರೀಬೇಕು ಅನ್ನೋ ಕಾರಣದಿಂದ ವಿವಿಧ ಬಗೆಯ ಕವಾಟಗಳು ಅಂದ್ರೆ ‘ವಾಲ್ವ್’ಗಳು ಇವೆ. ಅವು ರಕ್ತವು ವಾಪಸ್ ಬರದಂತೆ ರಪ್ಪನೆ ಮುಚ್ಚಿಕೊಳ್ಳುತ್ವೆ” ಎಂದು ಹೇಳ್ತಾ, ಕುಡಿಯುತ್ತಿದ್ದ ನೀರು ಗಂಟಲು ಹತ್ತಿ, ಕೆಮ್ಮುವುದಕ್ಕೆ ಶುರು ಮಾಡಿದಳು. ಆಗ ವಿಭಾ ಅಕ್ಕನ ಬೆನ್ನು ಸವರಿ, “ತಲೆ ಮೇಲೆತ್ತು” ಎಂದು ಉಪಚರಿಸುತ್ತಾ, “ಅದಕ್ಕೇ, ನೀರು ಕುಡಿಯುವಾಗ ಮಾತಾಡಬಾರದು ಕಾವ್ಯಕ್ಕಾ” ಎಂದಳು; ಅವಳ ಮಾತಿನಲ್ಲಿದ್ದ ಕೊಂಚ ಕಕ್ಕುಲಾತಿ, ಕೊಂಚ ತರಲೆತನವನ್ನು ಗಮನಿಸಿದ ಕಾವ್ಯಳಿಗೆ ವಿಭಾಳನ್ನು ನೋಡಿ ನಗೆಯುಕ್ಕಿತು.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ಮೂರನೆಯ ಕತೆ
ಹೊಲದಲ್ಲಿ ಕೆಲಸದವರಿಗೆ ಬೇಕಿದ್ದ ಗೊಬ್ಬರ ತಲುಪಿತೇ ಎಂದು ನೋಡೋಕೆ ಹೊರಟ ಕಾವ್ಯ, ರಜೆಗೆ ಮನೆಗೆ ಬಂದಿದ್ದ ತಂಗಿ ವಿಭಾಳನ್ನೂ ತನ್ನೊಂದಿಗೆ ಕರೆದೊಯ್ದಳು. ಎದುರಿಗೆ ಸಿಕ್ಕ ಕೆಲಸದವರಿಗೆ ಕಾವ್ಯ ಅಂದಿನ ದಿನದ ಕೆಲಸಗಳ ಬಗ್ಗೆ ಸೂಚನೆ ನೀಡುತ್ತಾ ನಿಂತಾಗ, ತರಕಾರಿ ಬೆಳೆಗಳ ಕಡೆಗೆ ನಡೆದಳು ವಿಭಾ. ಅಲ್ಲಿ ಮಾತಾಡುತ್ತಾ ಪೈಪಿನ ಮೇಲೆ ಕಾಲಿಟ್ಟು ನಿಂತಿದ್ದ ರಾಜೇಶ, ಪೈಪಿನ ಮೇಲೆ ಒತ್ತಡ ಬಿಟ್ಟು, ನೀರು ಸರಾಗವಾಗಿ ಹರಿಯದಂತೆ ಮಾಡಿದ್ದನ್ನು ನೋಡಿ, ಅವನಿಗೆ ಜೋರು ಮಾಡುತ್ತಿದ್ದ ಅಕ್ಕ ಕಾವ್ಯಳನ್ನು ನೋಡಿ ವಿಭಾಗೆ ಜೋರು ನಗೆಯುಕ್ಕಿತು. ಇವಳ ನಗುವನ್ನು ಕೇಳಿ ತಿರುಗಿದ ಕಾವ್ಯ, ಕೋಪವನ್ನು ಪಕ್ಕಕ್ಕಿಟ್ಟು “ಏನಾಯ್ತೋ ವಿಭಾ?” ಎಂದಳು ನಗುತ್ತಾ! ಆಗ ವಿಭಾ “ಮತ್ತೇನಕ್ಕಾ? ರಾಜೇಶ ಕೆಲಸ ಮಾಡೋ ರೀತಿ, ನೀನು ಬೈದದ್ದು ಎಲ್ಲಾ ನೋಡಿ ನಗದೇ ಇರೋಕೆ ಆಗತ್ತಾ?” ಎಂದಳು. ಹಾಗೇ ಮಾತಾಡುತ್ತಾ ಹೊಲದುದ್ದಕ್ಕೂ ನಡೆದ ಅಕ್ಕ ತಂಗಿಯ ಮಾತು, ಮತ್ತೆ ಪೈಪುಗಳು, ನರಗಳು, ರಕ್ತವಾಹಕಗಳ ಕಡೆಗೇ ಹೊರಳಿತು.
ಹಿಂದಿನ ದಿನ ಮಾತಾಡುವಾಗ ರಕ್ತವಾಹಕ ಮತ್ತು ನರಗಳ ನಡುವೆ ಇರುವ ವ್ಯತ್ಯಾಸದ ಬಗ್ಗೆ ಮಾತಾಡಿದ್ದ ಇವರಿಬ್ಬರೂ, ನಮ್ಮ ದೇಹದ ಅಭಿಧಮನಿ, ಅಪಧಮನಿಗಳ ಬಗ್ಗೆ ಚರ್ಚಿಸುತ್ತಾ, ದಣಿವಾರಿಸಿಕೊಳ್ಳಲು ಗೋಣಿಮರದ ನೆರಳಿನಡಿ ಕುಳಿತರು. ಆಗ ವಿಭಾ “ಅಕ್ಕಾ, ಅಪಧಮನಿ ಅಂದ್ರೆ ಆರ್ಟರೀ, ಮತ್ತೆ ಅಭಿಧಮನಿ ಅಂದ್ರೆ ವೇನ್ – ಇವೆರಡೂ ರಕ್ತವಾಹಕಗಳೇ ಅಲ್ವಾ? ಆದ್ರೂ, ಅವುಗಳ ನಡುವೆ ಏನಾದ್ರೂ ವ್ಯತ್ಯಾಸವಿರತ್ತಾ ಅಥ್ವಾ ಎರಡೂ ಒಂದೇ ರೀತಿ ಇರತ್ವಾ?” ಎಂದಳು. ಆಗ ಕಾವ್ಯ “ಹೌದು ವಿಭಾ, ಎರಡರ ಮೂಲಭೂತ ಕೆಲಸ ರಕ್ತವನ್ನ ಒಂದು ಕಡೆಯಿಂದ ಮತ್ತೊಂದೆಡೆ ತೊಗೊಂಡು ಹೋಗೋದೇ ಇರ್ಬಹುದು, ಆದ್ರೆ, ಸೂಕ್ಷ್ಮವಾಗಿ ಗಮನಿಸಿದ್ರೆ, ಅವುಗಳ ಕೆಲಸದಲ್ಲಿ, ಜೊತೆಗೆ, ರಚನೆಯಲ್ಲಿ ವ್ಯತ್ಯಾಸ ಬಹಳಾ ಇದೆ.” ಎಂದಳು. ಸುಡು ಮಧ್ಯಾಹ್ನದ ಬಿಸಿಲಿನ ಬೇಗೆಯಿಂದ ರಕ್ಷಣೆ ಪಡೆಯೋಕೆ, ಅದೇ ಮರದ ನೆರಳಲ್ಲಿ ರಾಗಿಮುದ್ದೆ ಉಣ್ಣುತ್ತಿದ್ದ ಸರೋಜಮ್ಮ, ಇವರ ಮಾತನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಾ ಇದ್ದದ್ದು ಇವರಿಬ್ಬರ ಗಮನಕ್ಕೂ ಬಂದಿರಲಿಲ್ಲ. ಇವರ ಜೊತೆ ಸಲುಗೆಯಿದ್ದ ಸರೋಜಮ್ಮ ತಾನೂ ದನಿಗೂಡಿಸ್ತಾ, “ಹೌದಕ್ಕೋ, ಈಗಾ… ಮಾಡೋದು ಅಡ್ಗೇನೇ ಆದ್ರೂ, ಸಾರಿಗೊಂದು ಸೌಟು, ಮುದ್ದೆಗೊಂದು ಕೋಲು, ಪಲ್ಯಕ್ಕೊಂದು ಸೌಟು ಇರಲ್ವಾ? ಮಾಡೋದು ಅಡ್ಗೇನೇ, ಆದ್ರೆ ಬೇರೇ ಬೇರೇದಕ್ಕೆ ಬೇರ್ಬೇರೇದೇ ಪಾತ್ರೆ ಇರಲ್ವಾ? ಅಂಗೇಯಾ!” ಅಂದ್ಲು. ಸರೋಜಮ್ಮನ ಬುದ್ಧಿವಂತಿಕೆಗೆ ಅಕ್ಕ-ತಂಗಿ ಇಬ್ರೂ ತಲೆದೂಗುತ್ತಾ, “ಅದೂ ಸರೀನೇ!” ಅಂತಾ ನಗೆಯಾಡಿದ್ರು.
ತನ್ನ ವಿವರಣೆಯನ್ನು ಹಾಗೇ ಮುಂದುವರೆಸಿದ ಕಾವ್ಯ, “ಈ ರಕ್ತನಾಳಗಳು ಹೃದಯದಿಂದ ರಕ್ತವನ್ನು ತೊಗೊಂಡು ಹೋಗ್ತಿದ್ಯಾ ಅಥ್ವಾ ಹೃದಯಕ್ಕೆ ರಕ್ತವನ್ನ ವಾಪಸ್ ತೊಗೊಂಡು ಬರ್ತಿದ್ಯಾ, ಅವು ಹೃದಯಕ್ಕೆ ಹತ್ತಿರದಲ್ಲಿದೆಯಾ ಅಥ್ವಾ ಕಾಲಿನಲ್ಲೋ, ಕೈಯಲ್ಲೋ ಹೃದಯದಿಂದ ದೂರವಿದ್ಯಾ ಅನ್ನೋದ್ರ ಮೇಲೆ, ಈ ರಕ್ತವಾಹಕಗಳ ರಚನೆ ಬದಲಾಗತ್ತೆ. ಅಪಧಮನಿ ಯಾವಾಗ್ಲೂ ಹೃದಯದಿಂದ ಹೊರಕ್ಕೆ ರಕ್ತವನ್ನು ಕೊಂಡೊಯ್ಯೋದಲ್ವಾ? ಹಾಗಾಗಿ, ಅಪಧಮನಿಯ ಗೋಡೆಗಳು ಬಹಳಾ ಶಕ್ತವಾಗಿ, ದಪ್ಪಗಿರಬೇಕು. ಜೊತೆಗೆ, ಅಪಧಮನಿಯ ಒಳಗಿನ ಖಾಲಿ ನಾಳವೂ ಕಿರಿದಾಗಿರಬೇಕು. ಇದ್ಯಾಕೆ ಹೀಗೆ, ಉತ್ತರ ಹೇಳ್ತೀಯಾ?” ಎಂದು ವಿಭಾಳನ್ನು ಉತ್ತರಿಸಲು, ಯೋಚಿಸಲು ಪ್ರಚೋದಿಸಿದಳು.
ಅರೆಕ್ಷಣ ಚಿಂತಿಸಿದ ವಿಭಾ, “ಹಾಂ, ನಿಜಾ, ಅರ್ಥಾಯ್ತು ನೋಡು. ಹೃದಯ ರಕ್ತವನ್ನ ಜೋರಾಗಿ ಪಂಪ್ ಮಾಡಿರತ್ತಲ್ವಾ? ಆ ಒತ್ತಡವನ್ನ ತಡೆದುಕೊಳ್ಳೋಕೆ ಅಪಧಮನಿಯ ಗೋಡೆಗಳು ಶಕ್ತವಾಗಿ, ದಪ್ಪನಾಗಿರ್ಬೇಕು. ಅದೇ ಒತ್ತಡದಲ್ಲಿ ರಕ್ತವು ಮುನ್ನುಗ್ತಾ ಇರೋ ಹಾಗೆ, ಒತ್ತಡ ಕಡಿಮೆಯಾಗದೇ ಇರೋ ಹಾಗೆ, ನಾಳವು ಕಿರಿದಾಗಿರ್ಬೇಕು. ಅಲ್ವಾ ಅಕ್ಕ?” ಎಂದಳು. ಆಗ ಕಾವ್ಯ, “ಪರ್ಫೆಕ್ಟ್! ಹಾಗೇ, ಅಭಿಧಮನಿ ಅಂದ್ರೆ ‘ವೇನ್’ಗಳು, ದೇಹದ ಇತರ ಭಾಗಗಳಿಂದ ರಕ್ತವನ್ನು ವಾಪಸ್ ಹೃದಯಕ್ಕೆ ತರೋದ್ರಿಂದ, ಕಡಿಮೆ ಒತ್ತಡದಲ್ಲಿರುವ ರಕ್ತ ನಿಧಾನವಾಗಿ ಹೃದಯವನ್ನು ತಲುಪುತ್ತದೆ; ಹಾಗಾಗಿ, ಅಭಿಧಮನಿಯಲ್ಲಿ ತೆಳುವಾದ ಗೋಡೆಗಳು, ಅಗಲವಾದ ನಾಳ ಇದ್ರೆ ಸಾಕು.” ಎಂದಳು.
“ಹೋಗಿ ಬರ್ತೀವಿ ಸರೋಜಮ್ಮ, ನಾಳೆ ನಾನು ಊರಿಗೆ ಹೊರಟೆ” ಎನ್ನುತ್ತಾ ವಿಭಾ, ಜೊತೆಗೆ ಅವಳ ಅಕ್ಕ, ಮನೆ ಕಡೆಗೆ ನಡೆದರು. ಹಾದಿಯಿನ್ನೂ ಉದ್ದವಿತ್ತು, ಇವರ ಮಾತಿಗಂತೂ ಬರವಿರಲಿಲ್ಲ. ಆಗ ಕಾವ್ಯ, ವಿಭಾಳಿಗೆ ಮತ್ತೊಂದು ಪ್ರಶ್ನೆಯನ್ನೆಸೆದಳು – “ನಿನಗೇ ಗೊತ್ತಿರೋ ಹಾಗೆ, ಗ್ರಾವಿಟಿ ಅಂದ್ರೆ ಗುರುತ್ವಾಕರ್ಷಣೆ, ಏನೇ ಮೇಲೆ ಹೋದ್ರೂ, ಅದನ್ನ ಕೆಳಗೆ ತರತ್ತೆ ಅಲ್ವಾ? ಹಾಗೇನೇ, ಕಾಲಿನಿಂದ ಅಥ್ವಾ ಹೃದಯದ ಕೆಳಭಾಗದಲ್ಲಿರೋ ಅಂಗಗಳಿಂದ ಹೊರಟ ರಕ್ತ, ಹೃದಯಕ್ಕೆ ತಲುಪದೇ ವಾಪಸ್ ಬರ್ಬಹುದಲ್ವಾ?”. ಆಗ ವಿಭಾ, “ಹೌದಲ್ವಾ ಕಾವ್ಯಕ್ಕಾ! ಹಾಗೆ ಕಾಲಿನಿಂದ ಮೇಲಕ್ಕೆ ಹೋಗ್ದೇ, ರಕ್ತ ಅಲ್ಲೇ ಉಳಿದುಬಿಟ್ರೆ ಏನು ಗತಿ?” ಎಂದು ಚಿಂತಾಕ್ರಾಂತಳಾಗಿ ಪ್ರಶ್ನಿಸಿದಳು; ಆಗ ಕಾವ್ಯ, “ಹೌದು ಕಣೋ! ನಮ್ಮ ದೇಹರಚನೆ ಅದೆಷ್ಟು ಅದ್ಭುತ ನೋಡು. ಪ್ರಕೃತಿ, ತನ್ನ ಪ್ರತಿಯೊಂದು ಜೀವಿಯನ್ನೂ ಅದೆಷ್ಟು ವಿಶೇಷವಾಗಿ, ಪರ್ಫೆಕ್ಟಾಗಿ ತಯಾರಿಸಿದೆಯೆಂದ್ರೆ, ಇಂತಹ ಪ್ರತಿಯೊಂದು ಸಮಸ್ಯೆಗೂ ಪರಿಹಾರವನ್ನು ಮೊದಲೇ ಕೊಟ್ಟುಬಿಟ್ಟಿದೆ. ನೇಚರ್ ಇಸ್ ದಿ ಬೆಸ್ಟ್ ಇಂಜಿನಿಯರ್! ನಮ್ಮ ದೇಹದ ಇತರ ಭಾಗಗಳಿಂದ ಹೃದಯದೆಡೆಗೆ ಬರುವ ರಕ್ತ, ನಿಧಾನವಾಗಿ ಚಲಿಸುತ್ತಲ್ವಾ? ಯಾಕಂದ್ರೆ ಈಗ ಅದು ‘ಹಾರ್ಟ್’ನಿಂದ ಪಂಪ್ ಆಗಿ ಹೊರಟದ್ದಲ್ಲ! ಹಾಗಾಗಿ, ಆ ರಕ್ತವನ್ನ ಮೇಲಕ್ಕೆ ಪುಶ್ ಮಾಡೋ ಸಲುವಾಗಿ, ನಮ್ಮ ಕಾಲಿನ ಮಾಂಸಖಂಡಗಳು ನಾವು ನಡೆಯುವಾಗ ಕುಗ್ಗುತ್ತಾ, ಹಿಗ್ಗುತ್ತಾ, ಈ ಮಲಿನ ರಕ್ತವನ್ನ ಮೇಲೆ ಹೃದಯದ ಕಡೆಗೆ ಪಂಪ್ ಮಾಡತ್ವೆ. ಆ ಕಾಲಿನ ಸ್ನಾಯುಗಳು ನಮ್ಮ ದೇಹದ ಎರಡನೆಯ ಹೃದಯವೇನೋ ಅನ್ನೋ ಹಾಗೆ!” ಎಂದು ಉತ್ಸಾಹದಿಂದ ವಿವರಿಸಿದಳು.

ಇದನ್ನು ಕೇಳಿದ ವಿಭಾ ಕಣ್ಣರಳಿಸುತ್ತಾ ‘ಆಮೇಲೆ?’ ಎಂದು ತಮ್ಮ ಈ ಮಾತುಕತೆಯನ್ನು ಪಂಚತಂತ್ರದ ಕಥೆಯೇನೋ ಎಂಬಷ್ಟೇ ಆಸಕ್ತಿಯಿಂದ ಮುಂದುವರೆಸಲು ಕೇಳಿದಳು. ಅದನ್ನರಿತು ಮುಂದುವರೆಸಿದ ಕಾವ್ಯ “ಅಷ್ಟೇ ಅಲ್ಲದೇ, ನಾವು ಉಸಿರನ್ನು ಒಳಗೆ ಎಳೆದುಕೊಳ್ಳೋವಾಗ ನಮ್ಮೊಳಗೆ ಏನೇನೆಲ್ಲ ಬದಲಾವಣೆ ನಡೆಯುತ್ತೆ ಗೊತ್ತಾ? ನಮ್ಮ ಹೊಟ್ಟೆ ಉಬ್ಬಿ, ನಮ್ಮ ಶ್ವಾಸಕೋಶ ಮತ್ತು ಹೊಟ್ಟೆಯ ನಡುವಿನ ವಪೆ ಅಥ್ವಾ ಡಯಾಫ್ರಮ್ ಕೆಳಗಿಳಿದು, ಹೊಟ್ಟೆ ಮೇಲೆ ಒತ್ತಡ ಹೆಚ್ಚಾಗಿ, ಎದೆಯಲ್ಲಿ ಒತ್ತಡ ಕಡಿಮೆಯಾಗಿ, ರಕ್ತವನ್ನು ಮೇಲೆ ಎಳೆದುಕೊಳ್ಳುತ್ತದೆ. ಇದೂ ಕೂಡ ಗುರುತ್ವಾಕರ್ಷಣೆಯ ವಿರುದ್ಧವಾಗಿ ರಕ್ತವು ಮೇಲೆ ಚಲಿಸೋಕೆ ಸಹಾಯ ಮಾಡತ್ತೆ” ಎಂದಳು.
ಆಗ ವಿಭಾ, “ಅಲ್ಲ ಕಾವ್ಯಕ್ಕಾ, ಇಷ್ಟೆಲ್ಲಾ ಇದ್ರೂನೂ, ಈ ಮಲಿನ ರಕ್ತ, ಹೃದಯ ತಲುಪೋಕೂ ಮುಂಚೆ ಬಹಳ ಕಡಿಮೆ ಒತ್ತಡದಲ್ಲಿರತ್ತೆ ಅಲ್ವಾ? ಅಪ್ಪಿ ತಪ್ಪಿ ವಾಪಸ್ ಬಂದುಬಿಡಲ್ವಾ?” ಎಂದಳು; ಆಗ ಕಾವ್ಯಾ ತನ್ನ ನಡಿಗೆ ನಿಧಾನವಾಗಿಸ್ತಾ, “ಒಳ್ಳೆ ಪ್ರಶ್ನೆ ಕಣೋ ವಿಭಾ! ಹೀಗೆ ಮೇಲೆ ಹೋಗ್ತಾ ಇರೋ ರಕ್ತ ಕೆಳಗೆ ವಾಪಸ್ ಬಂದುಬಿಡಬಾರ್ದು ಅಂತಾನೇ, ಈ ಅಭಿಧಮನಿ ಅಂದ್ರೆ ‘ವೇನ್’ಗಳಲ್ಲಿ ಅಲ್ಲಲ್ಲಿ ಕವಾಟಗಳಿರತ್ತೆ! ನೀನು ಹಳೇ ಕಾಲದ ಸಿನೆಮಾಗಳಲ್ಲಿ ಪೋಲೀಸ್ ಸ್ಟೇಶನ್ ಅಥ್ವಾ ಗವರ್ನ್ಮೆಂಟ್ ಆಫೀಸ್ ನೋಡಿರ್ತ್ಯಾ ಅಲ್ವಾ? ಅಲ್ಲಿ ಕೆಳಗೂ, ಮೇಲೂ ಓಪನ್ ಇದ್ದು, ಮಧ್ಯೆ ಮಾತ್ರ ಬಾಗಿಲು ಇರತ್ತೆ ನೋಡು? ನಮ್ ಮುಖಕ್ಕೆ ಅಡ್ಡಲಾಗಿ ಮಾತ್ರ ಇರುವ, ತಳ್ಳಿಕೊಂಡು ಒಳಗೆ ಹೋದ್ರೆ, ರಪ್ ಅಂತ ವಾಪಸ್ ಮುಚ್ಚಿಕೊಳ್ಳೋ ಬಾಗಿಲು; ಒಂಥರಾ ಅಗಲವಾದ ಬೀಸಣಿಗೆಯ ಥರದ್ದು! ಅಂತಹ ಬಾಗಿಲಿನ ರೀತಿ ಕೆಲಸ ಮಾಡತ್ತೆ ಈ ಕವಾಟ. ಒಂದೇ ನಿರ್ದಿಷ್ಟ ದಿಕ್ಕಿನಲ್ಲಿ ರಕ್ತ ಹರೀಬೇಕು ಮತ್ತು ವಾಪಸ್ ವಿರುದ್ಧ ದಿಕ್ಕಿನಲ್ಲಿ ಹರಿದು ಬಂದ್ರೆ ಅದನ್ನ ತಡೀಬೇಕು – ಇದೇ ಅದರ ಕೆಲ್ಸ” ಎಂದು ವಿವರಿಸಿದಳು. ಅಷ್ಟರಲ್ಲಿ ಮನೆ ತಲುಪಿದ ಅಕ್ಕ-ತಂಗಿ ಇಬ್ಬರೂ ಅಂಗಳದ ನೆರಳಿನಲ್ಲಿ ಕುಳಿತು ಮಾತು ಮುಂದುವರೆಸಿದರು.
ಅಲ್ಲಿ ಮನೆಯ ಹಿಂಬದಿಯಲ್ಲಿದ್ದ ನೀರಿನ ಪೈಪುಗಳ ಮೇಲಿನ ‘ವಾಲ್ವ್’ಗಳನ್ನು ನೋಡಿದ ಕಾವ್ಯ, “ಹೀಗೇ ನೋಡು ವಿಭಾ! ನೀರು ಒಂದೇ ದಿಕ್ಕಿನಲ್ಲಿ ಹೋಗಬೇಕೆಂದಾಗ ತಿರುಗಿಸುವ ವಾಲ್ವ್ ನಂತೆಯೇ ಅಭಿಧಮನಿಯಲ್ಲಿನ ವಾಲ್ವ್ ಕೂಡ ಕೆಲ್ಸ ಮಾಡತ್ತೆ; ಅದಕ್ಕೇ ಹಾಗೇ ಹೆಸರಿಟ್ಟಿರೋದು.” ಎಂದಳು.
“ಅಕ್ಕಾ, ಈ ಕವಾಟ ನಮ್ಮ ಹೃದಯದಲ್ಲೂ ಇರತ್ತೆ ಅಲ್ವಾ?” ಎಂದಳು ವಿಭಾ. ಆಗ ಕಾವ್ಯ ನೀರು ಕುಡಿಯುತ್ತಾ “ಹೌದು ವಿಭಾ, ಹೃದಯದಲ್ಲೂ ಹೀಗೆ ರಕ್ತವು ಸರಿಯಾದ ದಿಕ್ಕಿನಲ್ಲಿ ಮಾತ್ರ ಹರೀಬೇಕು ಅನ್ನೋ ಕಾರಣದಿಂದ ವಿವಿಧ ಬಗೆಯ ಕವಾಟಗಳು ಅಂದ್ರೆ ‘ವಾಲ್ವ್’ಗಳು ಇವೆ. ಅವು ರಕ್ತವು ವಾಪಸ್ ಬರದಂತೆ ರಪ್ಪನೆ ಮುಚ್ಚಿಕೊಳ್ಳುತ್ವೆ” ಎಂದು ಹೇಳ್ತಾ, ಕುಡಿಯುತ್ತಿದ್ದ ನೀರು ಗಂಟಲು ಹತ್ತಿ, ಕೆಮ್ಮುವುದಕ್ಕೆ ಶುರು ಮಾಡಿದಳು. ಆಗ ವಿಭಾ ಅಕ್ಕನ ಬೆನ್ನು ಸವರಿ, “ತಲೆ ಮೇಲೆತ್ತು” ಎಂದು ಉಪಚರಿಸುತ್ತಾ, “ಅದಕ್ಕೇ, ನೀರು ಕುಡಿಯುವಾಗ ಮಾತಾಡಬಾರದು ಕಾವ್ಯಕ್ಕಾ” ಎಂದಳು; ಅವಳ ಮಾತಿನಲ್ಲಿದ್ದ ಕೊಂಚ ಕಕ್ಕುಲಾತಿ, ಕೊಂಚ ತರಲೆತನವನ್ನು ಗಮನಿಸಿದ ಕಾವ್ಯಳಿಗೆ ವಿಭಾಳನ್ನು ನೋಡಿ ನಗೆಯುಕ್ಕಿತು.
ಇಬ್ಬರೂ ಮತ್ತೆ ಹಾಗೇ ಮಾತಾಡುತ್ತಾ ಗೋಡೆಗೆ ಒರಗಿದಾಗ, “ಈಗ ನನಗೆ ಕೈಕೊಟ್ಟಿದ್ದೂ ಕೂಡ ಒಂಥರಾ ‘ವಾಲ್ವ್’ ಅನ್ನಬಹುದು ವಿಭಾ! ನಮ್ಮ ಗಂಟಲಿನಲ್ಲಿ ಅನ್ನನಾಳ ಮತ್ತು ಶ್ವಾಸನಾಳದ ಮೇಲೆ ಮುಚ್ಚಳದಂತೆ ಒಂದು ಪುಟಾಣಿ ತುಂಡಿರುತ್ತದೆ. ಅದೇ ‘ಅಪನಾಲಿಕೆ’ ಅಥ್ವಾ ‘ಎಪಿಗ್ಲಾಟಿಸ್’. ನಾವು ನೀರು, ಆಹಾರವನ್ನೆಲ್ಲಾ ನುಂಗುವಾಗ, ಅವು ಶ್ವಾಸನಾಳದ ಮೂಲಕ ಶ್ವಾಸಕೋಶಕ್ಕೆ ಹೊಗ್ಬಾರ್ದು ಅಲ್ವಾ? ಹಾಗಾಗಿ ಆ ಕ್ಷಣ ಈ ಎಪಿಗ್ಲಾಟಿಸ್, ಶ್ವಾಸನಾಳದ ಬಾಗಿಲು ಮುಚ್ಚುತ್ತೆ; ಆದ್ರೆ ನಾವು ಉಸಿರಾಡುವಾಗ, ಅದು ಶ್ವಾಸನಾಳದ ಬಾಗಿಲು ತೆರೆದು ನೇತಾಡುತ್ತದೆ. ನಾನೀಗ ಅವಸರದಲ್ಲಿ ಮಾತಾಡುತ್ತಾ ನೀರು ಕುಡಿಯಲು ಹೋಗಿ, ನಮ್ಮ ಅಪನಾಲಿಕೆಗೆ ಇಬ್ಬಂದಿಯಾಗಿ, ಅದು ನೀರನ್ನ ಶ್ವಾಸನಾಳದೊಳಗೆ ಬಿಡೋದ್ರಲ್ಲಿತ್ತು; ಸಧ್ಯ! ಆಗ ನನ್ನ ದೇಹ ಅಂತಹ ಅನಾಹುತವಾಗಲು ಬಿಡದೇ, ನೀರನ್ನು ಕೆಮ್ಮಿನ ಮೂಲಕ ಶ್ವಾಸನಾಳದಿಂದ ಹೊರಹಾಕ್ತು!” ಎಂದಳು ಕಾವ್ಯ.
ಇದನ್ನೇ ಕೇಳುತ್ತಾ ವಿಭಾಳಿಗೆ ಅಮ್ಮ ಕಿರುನಾಲಗೆಯ ಬಗ್ಗೆ ಹೇಳಿದ್ದು ನೆನಪಾಯ್ತು. ಆಗ ವಿಭಾ “ಈ ಎಪಿಗ್ಲಾಟಿಸ್ ಅಂದ್ರೆ ಕಿರುನಾಲಿಗೆ ಅಲ್ವಾ? ನಾವು ಅಗಲವಾಗಿ ಬಾಯಿ ತೆರೆದ್ರೆ ಒಳಗೆ ನೇತಾಡ್ತಾ ಇರೋದು ಕಾಣತ್ತಲ್ಲಾ? ಅದೇ ತಾನೇ?” ಎಂದಳು. ಆಗ ಕಾವ್ಯ, “ಇಲ್ಲಾ ಕಣೋ, ಸಾಮಾನ್ಯವಾಗಿ ಎಲ್ರೂ ಹಾಗೇ ಅಂದುಕೊಳ್ತೀವಿ. ಕಿರುನಾಲಗೆಗೆ ಇಂಗ್ಲೀಶ್ನಲ್ಲಿ ‘ಉವುಲಾ’ ಅಂತಾರೆ. ಅದು ನಾವು ತಿನ್ನುವ ಊಟ, ತಿಂಡಿ, ಕುಡಿಯುವ ನೀರು ಬಾಯಿಯ ಒಳಗಿಂದ ಮೂಗಿಗೆ ಹೋಗದಂತೆ ತಡೆಯುತ್ತೆ. ಆದ್ರೆ, ಎಪಿಗ್ಲಾಟಿಸ್ ಅಂದ್ರೆ ಅಪನಾಲಿಕೆ, ಆಹಾರವು ಶ್ವಾಸನಾಳ ಅಂದ್ರೆ ವಿಂಡ್ ಪೈಪಿನೊಳಗೆ ಹೋಗದಂತೆ ತಡೆಯುತ್ತೆ.” ಎಂದಳು.
ಆಗ ವಿಭಾ, “ಹೂಂ ಎಲ್ಲೋ ಓದಿದ್ದ ನೆನಪು; ನಾವು ಮಾತಾಡೋಕೂ, ವಿವಿಧ ಧ್ವನಿ ಹೊರಡಿಸೋಕೂ ಕಿರುನಾಲಿಗೆ ಸಹಾಯ ಮಾಡತ್ತೆ ಅಲ್ವಾ?” ಎಂದಳು; ಆಗ ಕಾವ್ಯ, “ನಿಜಾ ವಿಭಾ! ಇಂತಹ ಮುಚ್ಚಳಗಳಂತಹ ಸಣ್ಣ ಸಣ್ಣ ಅಂಗಗಳು ಎಷ್ಟೆಲ್ಲಾ ಕೆಲ್ಸ ಮಾಡತ್ವೆ. ಇಂತಹ ಮುಚ್ಚಳಗಳು ನಮ್ಮಲ್ಲಿ ಮಾತ್ರ ಅಲ್ಲ! ಗಿಡಗಳಲ್ಲೂ ಇರತ್ತೆ ಗೊತ್ತಾ?” ಎಂದಳು!

ಇದನ್ನು ಕೇಳಿ ಅಚ್ಚರಿಗೊಳಗಾದ ವಿಭಾ, “ಹೌದಾ! ಗಿಡಗಳಲ್ಲಿ ಏನ್ ಮಾಡತ್ವೆ ಇವು?” ಎಂದಳು. ಆಗ ಕಾವ್ಯ ನಗುತ್ತಾ, “ಸಾಮಾನ್ಯ ಗಿಡಗಳಲ್ಲಿ ಮಾತ್ರವಲ್ಲ, ಕೀಟಗಳನ್ನು ತಿನ್ನೋ ಗಿಡಗಳಿರತ್ತಲ್ವಾ? ಅವುಗಳಲ್ಲಿ ವಿಶೇಷ ಕವಾಟಗಳು, ಮುಚ್ಚಳಗಳು ಇರತ್ವೆ” ಎಂದಳು. ಆಗ ವಿಭಾ, “ಕೀಟಗಳನ್ನು ತಿನ್ನೋ ಗಿಡಗಳಾ? ಏನ್ ಹೇಳ್ತಿದ್ಯಾ ಕಾವ್ಯಕ್ಕಾ?” ಎಂದಳು ಆಶ್ಚರ್ಯದಿಂದ. ಆಗ ಕಾವ್ಯ “ನಮ್ಮ ಜೀವ ಜಗತ್ತಲ್ಲಿ ಅದೆಷ್ಟು ಅಚ್ಚರಿಗಳಿವೆಯೆಂದ್ರೆ, ಅವುಗಳ ಬಗ್ಗೆ ತಿಳಿದುಕೊಳ್ಳೋಕೆ ಅದೆಷ್ಟು ಸಮಯವಿದ್ರೂ ಸಾಲ್ದು ನೋಡು. ಕೀಟಗಳನ್ನು ತಿನ್ನೋ ಸಸ್ಯಗಳ ಬಗ್ಗೆ ನಾಳೆ ಬಸ್ಸಲ್ಲಿ ಹೋಗ್ತಾ ಮಾತಾಡೋಣ; ನನಗೀಗ ಎಷ್ಟೊಂದು ಇ-ಮೇಲ್ ಕಳ್ಸೋದಿದೆ, ಲೇಖನ ಬರೆಯೋಕಿದೆ, ನಡೀ ಮಾರಾಯ್ತಿ ಒಳಗೆ ಹೋಗೋಣ” ಎಂದು ಮುದ್ದು ತಂಗಿಯನ್ನೆಬ್ಬಿಸಿಕೊಂಡು ಒಳನಡೆದಳು.
(ಹಿಂದಿನ ಕಂತು: ಧಮನಿ-ಧಮನಿಯೊಳಗೇನಿದು ಮಾಯೆ!)
ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಕ್ಷಮಾ ಭಾನುಪ್ರಕಾಶ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಎಂಟು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಇವರ ‘ಜೀವಿಜ್ಞಾನ’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ೨೦೨೫-೨೬ನೆ ಸಾಲಿನ ‘ಶ್ರೇಷ್ಠ ಪುಸ್ತಕ’ ಪ್ರಶಸ್ತಿ ಲಭಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.



ತುಂಬಾ ಚೆನ್ನಾಗಿ, ಸರಳವಾಗಿ ರಕ್ತಪರಿಚಲನೆಯ ಬಗ್ಗೆ ವಿವರಿಸಿದ್ದೀರಿ.
ಓದಿ ಮೆಚ್ಚಿ ಪ್ರತಿಕ್ರಯಿಸಿದ್ದಕ್ಕಾಗಿ ಧನ್ಯವಾದ🙏
nice effort to educate chilldren
ಓದಿ ಮೆಚ್ಚಿ ಪ್ರತಿಕ್ರಯಿಸಿದ್ದಕ್ಕಾಗಿ ಧನ್ಯವಾದ🙏