Advertisement
ಒಂದು ಪದ್ಯ, ಹತ್ತು ಮುಖ, ಹತ್ತು ಬಾಯಿ ಮತ್ತು ಔಚಿತ್ಯ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಒಂದು ಪದ್ಯ, ಹತ್ತು ಮುಖ, ಹತ್ತು ಬಾಯಿ ಮತ್ತು ಔಚಿತ್ಯ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

‘ವದನ’ ಎನ್ನುವ ಪದಕ್ಕೆ ಮುಖ, ಬಾಯಿ ಎನ್ನುವ ಅರ್ಥವಿದ್ದು, ತಲೆ ಎನ್ನುವ ಅರ್ಥವಿಲ್ಲ. ಆತನಿಗೆ ನಿಜವಾಗಿಯೂ ತಲೆ ಇದ್ದಿದ್ದರೆ ಸೀತೆಯನ್ನು ಅಪಹರಿಸಿ, ಬಳಿಕ ತನ್ನ ಮನಸ್ಸನ್ನು ಸರಿಮಾಡಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ, ಎನ್ನುವ ಭಾವ ಈ ಪದಬಳಕೆಯಲ್ಲಿ ಇದ್ದಂತಿದೆ. ‘ರಾಮಚಂದ್ರ ಚರಿತ ಪುರಾಣ’ದ ಆಧಾರದಲ್ಲಿ ಹೇಳುವುದಾದರೆ, ರಾವಣ ಪರಸ್ತ್ರೀ ವ್ಯಾಮೋಹಿ ಅಲ್ಲವೇ ಅಲ್ಲ. ಹೆಣ್ಣುಮಕ್ಕಳನ್ನು ಗೌರವಪೂರ್ಣವಾಗಿ ಕಾಣುವುದೇ ಅವನ ಸ್ವ-ಭಾವ. ಆದರೆ ಸೀತೆಯ ವಿಚಾರಕ್ಕೆ ಬಂದಾಗ ತನ್ನ ಮೂಲಗುಣವನ್ನೇ ಅವಗಣಿಸಿ ನಡೆದುಕೊಳ್ಳುತ್ತಾನೆ. ಆ ಬಳಿಕ ಇದರ ಅರಿವಾದಾಗ ತನ್ನ ಮೂಲವ್ಯಕ್ತಿತ್ವದ ಪುನರ್‌ಪ್ರತಿಷ್ಠಾಪನೆ ಮಾಡಿಸಿಕೊಳ್ಳುತ್ತಾನೆ.
ಕವಿ ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ’ದಲ್ಲಿನ ಪದ್ಯವೊಂದರ ಕುರಿತು ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರಹ ನಿಮ್ಮ ಓದಿಗೆ

ಪೌರಾಣಿಕವಾದುದನ್ನು ಹೊಸ ರೀತಿಯಲ್ಲಿ ನಿರ್ವಚಿಸುವ ಕಾವ್ಯವಾಗಿ ‘ರಾಮಚಂದ್ರ ಚರಿತ ಪುರಾಣ’ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ. ‘ಪಂಪ ರಾಮಾಯಣ’ವೆಂಬ ಹೆಸರನ್ನು ಪಡೆದಿರುವ ಇದನ್ನು ರಚಿಸಿದವನು ಕವಿ ನಾಗಚಂದ್ರ. ತನ್ನ ಹಿಂದಿನ ಕವಿಗಳು ಅನುಸರಿಸಿದ್ದ ಕಾವ್ಯ ಸಂಪ್ರದಾಯವನ್ನು ತೊರೆದು ಅನನ್ಯನಾಗಿ ನಿಂತವ ಇವನು. ಲೌಕಿಕ- ಆಗಮಿಕ ಕಾವ್ಯಗಳನ್ನು ರಚಿಸುವ ಪರಂಪರೆಯೊಂದನ್ನು ಹುಟ್ಟುಹಾಕಿದ್ದ ಪಂಪ ತನ್ನ ನಂತರದ ಕವಿಗಳಿಗೆ ಮಾದರಿಯೆನಿಸಿಕೊಂಡಿದ್ದ. ಅವನ ನಂತರದ ಕವಿಗಳು ಈ ಸಂಪ್ರದಾಯವನ್ನೇ ಮುಂದುವರಿಸಿದರು. ಆದರೆ ನಾಗಚಂದ್ರ ಎರಡೂ ಆಗಮಿಕ ಕಾವ್ಯಗಳನ್ನೇ ರಚಿಸುವ ಮೂಲಕ ಕಾವ್ಯ ಸಂಪ್ರದಾಯವನ್ನು ಮುರಿದ. ಆತ ರಚಿಸಿದ ‘ಮಲ್ಲಿನಾಥ ಪುರಾಣ’ ಮತ್ತು ‘ರಾಮಚಂದ್ರ ಚರಿತ ಪುರಾಣ’ ಎರಡೂ ಸಹ ಧಾರ್ಮಿಕ ಕಾವ್ಯಗಳು. ಇವೆರಡರಲ್ಲಿ ‘ರಾಮಚಂದ್ರ ಚರಿತ ಪುರಾಣ’ವು ‘ವಾಲ್ಮೀಕಿ ರಾಮಾಯಣ’ಕ್ಕಿಂತ ಭಿನ್ನವಾಗಿ ರಾಮಾಯಣದ ಕಥೆಯನ್ನು ನಿರೂಪಿಸಿದೆ. ಈ ಕಾವ್ಯದಲ್ಲಿ ಬರುವ ಪದ್ಯವೊಂದು ಔಚಿತ್ಯದ ಕುರಿತಾದ ಕೆಲವು ಸಂಗತಿಗಳನ್ನು ನಮ್ಮಲ್ಲಿ ಹುಟ್ಟುಹಾಕುತ್ತದೆ. ಆ ಪದ್ಯ ಹೀಗಿದೆ-

‘ಕದಡಿದ ಸಲಿಲಂ ತಿಳಿವಂ
ದದೆ ತನ್ನಿಂ ತಾನೆ ತಿಳಿದ ದಶವದನಂಗಾ
ದುದು ವೈರಾಗ್ಯಂ ಸೀತೆಯೊಳ್
ಉದಾತ್ತನೊಳ್ ಪುಟ್ಟದಲ್ತೆ ನೀಲೀರಾಗಂ’

ಶ್ರೀರಾಮನ ಪತ್ನಿ ಸೀತೆಯನ್ನು ಅಪಹರಿಸಿದ ರಾವಣನಿಗೆ ವಿವೇಚನೆ ಮೂಡುವ ಸಂದರ್ಭವನ್ನು ಈ ಪದ್ಯ ತಿಳಿಸಿಕೊಡುತ್ತದೆ. ಇಲ್ಲಿ ‘ದಶವದನ’ ಎಂದರೆ ರಾವಣ. ಕದಡಿದ ಸಲಿಲ ತಿಳಿಯಾಗುವುದೆಂದರೆ ಕಲಕಿಹೋಗಿರುವ ನೀರು ತಿಳಿಯಾಗುವುದು. ತಾನು ಮಾಡಿರುವ ತಪ್ಪನ್ನು ಅರಿತುಕೊಂಡು ಮನಸ್ಸನ್ನು ಪರಿಶುದ್ಧವಾಗಿಸಿಕೊಂಡ ರಾವಣನಿಗೆ ಸೀತೆಯ ಕುರಿತಾಗಿ ವೈರಾಗ್ಯದ ಭಾವ ಮೂಡಲಾರಂಭಿಸಿತು. ಶ್ರೇಷ್ಠನಾಗಿರುವವನಲ್ಲಿ ವ್ಯಾಮೋಹ ಹುಟ್ಟುವುದು ಸಾಧ್ಯವಿಲ್ಲ ಎನ್ನುವುದು ಈ ಪದ್ಯದ ಭಾವಾರ್ಥ. ಈ ಪದ್ಯದಲ್ಲಿ ಬಳಕೆಯಾಗಿರುವ ‘ದಶವದನ’ ಎನ್ನುವ ಪದ ಒಟ್ಟು ಕಾವ್ಯಭಾಗಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿದ್ದು, ಔಚಿತ್ಯವನ್ನು ಒಳಗೊಂಡಿದೆ. ನಾಗಚಂದ್ರನ ಕಾವ್ಯದ ಈ ಪದ್ಯದಲ್ಲಿ ಔಚಿತ್ಯ ಬಂದಿರುವ ರೀತಿಯನ್ನು ಅವಲೋಕಿಸುವ ಮೊದಲು ಔಚಿತ್ಯ ಎಂದರೆ ಏನೆಂಬುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ.

*****

ಔಚಿತ್ಯ ಎನ್ನುವುದೊಂದು ಪರಿಕಲ್ಪನೆ. ಕಾವ್ಯದ ವಿವಿಧ ಅಂಗಗಳಲ್ಲಿ ಕಂಡುಬರುವ ಸಾಮರಸ್ಯವನ್ನು ಔಚಿತ್ಯ ಎನ್ನಲಾಗುತ್ತದೆ. ‘ನಾಟ್ಯಶಾಸ್ತ್ರ’ ಕೃತಿಯ ರಚನೆ ಮಾಡಿರುವ ಭರತ ಔಚಿತ್ಯವನ್ನು ಬಹಳ ಸ್ವಾರಸ್ಯಪೂರ್ಣವಾಗಿ ವಿವರಿಸಿದ್ದಾನೆ. ಅವನ ಪ್ರಕಾರ,

ಆದೇಶ ಜೋ ಹೀ ವೇಷಸ್ತು ನ ಶೋಭಾಂ ಜನಯಿಷ್ಯತಿ|
ಮೇಖಲೋರಸಿ ಬಂಧೇ ಚ ಹಾಸ್ಯಾಯೈವೋಪಜಾಯತೇ||

ಅಂದರೆ, ನಿರ್ದಿಷ್ಟ ಕ್ರಮದಲ್ಲಿರುವ ವೇಷಭೂಷಣಗಳು ಶೋಭಿಸುತ್ತವೆ. ಹಾಗಿಲ್ಲದಿರುವುದು ತಮಾಷೆಗೆ ಎಡೆಮಾಡಿಕೊಡುತ್ತದೆ. ಸೊಂಟಕ್ಕೆ ಧರಿಸುವ ಆಭರಣವನ್ನು ಎದೆಯ ಮೇಲೆ ಹಾಕಿಕೊಂಡರೆ ಹಾಸ್ಯಾಸ್ಪದವಾಗುತ್ತದೆ. ಯಾವ ಯಾವ ಒಡವೆಗಳನ್ನು ದೇಹದ ಯಾವ ಯಾವ ಭಾಗಗಳಲ್ಲಿ ಧರಿಸಿಕೊಳ್ಳುತ್ತೇವೆಯೋ ಹಾಗೆಯೇ ಕಾವ್ಯದಲ್ಲಿ ಬರುವ ವರ್ಣನೆಗಳು ಸನ್ನಿವೇಶಕ್ಕೆ ಹೊಂದಿಕೊಳ್ಳುವಂತಿರಬೇಕು. ಅತ್ಯಂತ ಸರಳವಾಗಿ ವಿವರಿಸುವುದಾದರೆ, ಗಂಡನನ್ನು ಕಳೆದುಕೊಂಡು ಅಳುತ್ತಿರುವ ಹೆಣ್ಣನ್ನು ವರ್ಣಿಸುವಾಗ ಅವಳು ಚೆನ್ನಾಗಿ ಅಲಂಕಾರ ಮಾಡಿಕೊಂಡಂತೆ ವರ್ಣಿಸುವುದು ಸೂಕ್ತವಲ್ಲ. ಪತಿಯ ಅಗಲಿಕೆಯ ದುಃಖದಲ್ಲಿರುವವಳನ್ನು ನಿರಾಭರಣೆಯಾಗಿ ಗುರುತಿಸಿದರೆ ಅದು ಔಚಿತ್ಯಪೂರ್ಣವಾದುದು ಎನಿಸಿಕೊಳ್ಳುತ್ತದೆ.

(ಕವಿ ನಾಗಚಂದ್ರ)

‘ಔಚಿತ್ಯ’ದ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟವನು ಕ್ಷೇಮೆಂದ್ರ. ಅವನ ‘ಔಚಿತ್ಯ ವಿಚಾರ ಚರ್ಚಾ’ ಎನ್ನುವ ಕೃತಿ ಔಚಿತ್ಯವನ್ನೇ ಪ್ರಧಾನವಾಗಿ ಚರ್ಚಿಸಿದ ಮೊದಲ ಕೃತಿ. ಇಪ್ಪತ್ತೇಳು ಬಗೆಯ ಔಚಿತ್ಯಗಳನ್ನು ಹೇಳಿರುವ ಕ್ಷೇಮೆಂದ್ರನ ಪ್ರಕಾರ, ಪದ, ವಾಕ್ಯ, ಪ್ರಬಂಧಾರ್ಥ, ಗುಣ, ಅಲಂಕಾರ ಎಲ್ಲದರಲ್ಲಿಯೂ ಔಚಿತ್ಯ ಎನ್ನುವುದು ಇರುತ್ತದೆ. ಸನ್ನಿವೇಶವನ್ನು ಅನುಲಕ್ಷಿಸಿಕೊಂಡು ಔಚಿತ್ಯಪೂರ್ಣವಾಗಿ ಬಳಸಿದ ಪದದಿಂದಾಗಿ ಕಾವ್ಯದ ಸೌಂದರ್ಯ ಅಧಿಕವಾಗುತ್ತದೆ ಎನ್ನುವುದು ಕ್ಷೇಮೆಂದ್ರನ ಅನಿಸಿಕೆ. ‘ಕದಡಿದ ಸಲಿಲಂ ತಿಳಿವಂದದೆ…’ ಪದ್ಯದಲ್ಲಿ ಬಳಕೆಯಾಗಿರುವ ‘ದಶವದನ’ ಪದದ ಮೂಲಕ ಪದೌಚಿತ್ಯದ ಸಾಧ್ಯತೆಯನ್ನು ಮನಗಾಣಬಹುದೇ? ಎನ್ನುವುದು ಚಿಂತನಾಶೀಲವಾದ ಪ್ರಶ್ನೆಯೆನಿಸಿಕೊಳ್ಳುತ್ತದೆ.

*****

ರಾವಣನ ಬಾಹ್ಯರೂಪವನ್ನು ವಿವರಿಸುವಾಗ ಆತನ ಹತ್ತು ತಲೆಗಳು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಹತ್ತು ತಲೆಗಳನ್ನು ವೇದಾಗಮಗಳ ಸಂಕೇತವಾಗಿ ಪರಿಭಾವಿಸಿ, ಆತನ ಬೌದ್ಧಿಕ ಹಿರಿಮೆಗೆ ಸೂಚಕವಾಗಿಸಿದ್ದಿದೆ. ಆದರೆ ನಾಗಚಂದ್ರನ ಪದ್ಯದಲ್ಲಿ ಬಳಕೆಯಾಗಿರುವ ‘ದಶವದನ’ ಪದವು ಹತ್ತು ತಲೆಗಳನ್ನು ಸೂಚಿಸುವುದಿಲ್ಲ. ‘ವದನ’ ಎನ್ನುವ ಪದಕ್ಕೆ ಮುಖ, ಬಾಯಿ ಎನ್ನುವ ಅರ್ಥವಿದ್ದು, ತಲೆ ಎನ್ನುವ ಅರ್ಥವಿಲ್ಲ. ಆತನಿಗೆ ನಿಜವಾಗಿಯೂ ತಲೆ ಇದ್ದಿದ್ದರೆ ಸೀತೆಯನ್ನು ಅಪಹರಿಸಿ, ಬಳಿಕ ತನ್ನ ಮನಸ್ಸನ್ನು ಸರಿಮಾಡಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ, ಎನ್ನುವ ಭಾವ ಈ ಪದಬಳಕೆಯಲ್ಲಿ ಇದ್ದಂತಿದೆ. ‘ರಾಮಚಂದ್ರ ಚರಿತ ಪುರಾಣ’ದ ಆಧಾರದಲ್ಲಿ ಹೇಳುವುದಾದರೆ, ರಾವಣ ಪರಸ್ತ್ರೀ ವ್ಯಾಮೋಹಿ ಅಲ್ಲವೇ ಅಲ್ಲ. ಹೆಣ್ಣುಮಕ್ಕಳನ್ನು ಗೌರವಪೂರ್ಣವಾಗಿ ಕಾಣುವುದೇ ಅವನ ಸ್ವ-ಭಾವ. ಆದರೆ ಸೀತೆಯ ವಿಚಾರಕ್ಕೆ ಬಂದಾಗ ತನ್ನ ಮೂಲಗುಣವನ್ನೇ ಅವಗಣಿಸಿ ನಡೆದುಕೊಳ್ಳುತ್ತಾನೆ. ಆ ಬಳಿಕ ಇದರ ಅರಿವಾದಾಗ ತನ್ನ ಮೂಲವ್ಯಕ್ತಿತ್ವದ ಪುನರ್‌ಪ್ರತಿಷ್ಠಾಪನೆ ಮಾಡಿಸಿಕೊಳ್ಳುತ್ತಾನೆ. ತನ್ನತನವನ್ನು ಕಳೆದುಕೊಂಡು ಮತ್ತೆ ಅದರ ಗಳಿಕೆಗಾಗಿ ಒದ್ದಾಡುವ ಸ್ಥಿತಿ ನಿರ್ಮಾಣವಾಗುವುದು ತಲೆ ಇಲ್ಲದವರಿಗೆ, ಅರ್ಥಾತ್ ತಿಳುವಳಿಕೆ ಇಲ್ಲದವರಿಗೆ. ಇಂತಹ ಸ್ಥಿತಿ ರಾವಣನಿಗೆ ಬರಬೇಕಾದರೆ ಆತನಿಗೂ ತಲೆ ಇರಲಿಲ್ಲ ಎಂಬ ಭಾವವನ್ನು ‘ದಶವದನ’ ಪದ ದಾಟಿಸುತ್ತಿದೆಯೇ? ಎನ್ನುವುದು ಗಮನಿಸತಕ್ಕ ವಿಚಾರ.

*****

ಇಲ್ಲಿ ಬಳಸಿದ ‘ವದನ’ ಪದವನ್ನು ‘ಮುಖ’ ಎಂಬರ್ಥದಲ್ಲಿಯೇ ಸ್ವೀಕರಿಸಿದಾಗ ಪದದ ಔಚಿತ್ಯವನ್ನು ಅರ್ಥೈಸಿಕೊಳ್ಳುವ ಇನ್ನೊಂದು ಸಾಧ್ಯತೆ ತೆರೆದುಕೊಳ್ಳುತ್ತದೆ. ಒಬ್ಬ ವ್ಯಕ್ತಿ ಸಮಾಜಕ್ಕೆ ಮುಖ ತೋರಿಸಲು ಹೆದರಿಕೊಳ್ಳುತ್ತಿದ್ದಾನೆಂದರೆ ಆತ ಏನೋ ತಪ್ಪು ಮಾಡಿದ್ದಾನೆ ಎಂದರ್ಥ. ಇಲ್ಲಿ ರಾವಣನ ಕಷ್ಟ ಇನ್ನೂ ಹೆಚ್ಚಿನದು. ಆತನಿಗಿರುವುದು ಹತ್ತು ಮುಖ. ಅವುಗಳಷ್ಟನ್ನೂ ತೋರಿಸಲಾಗದ ಅನಿವಾರ್ಯತೆ ಅವನದ್ದು. ಆದರೆ ತಪ್ಪನ್ನು ತಿದ್ದಿಕೊಂಡರೆ ಹತ್ತು ಮುಖಗಳನ್ನೂ ತೋರಿಸುವ ಗೌರವವನ್ನು ಮತ್ತೆ ಗಳಿಸಿಕೊಳ್ಳಬಹುದು. ಇಲ್ಲಿ ರಾವಣ ಆ ಬಗೆಯ ನಡೆವಳಿಕೆಗೆ ನಿದರ್ಶನವಾಗಿದ್ದಾನೆ. ಕಾಲವಶದಿಂದಾಗಿ ಗೌರವದ ಎಲ್ಲೆಯನ್ನು ಮೀರಿದ ರಾವಣನಲ್ಲಿ ವಿವೇಚನೆ ಮೂಡಿದ್ದು ಕಾಲಾಂತರದಲ್ಲಿ. ಬಹುರೂಪಿಣಿ ವಿದ್ಯೆಯನ್ನು ಸಾಧಿಸಿ ಬಂದ ರಾವಣ ತನ್ನ ವಶದಲ್ಲಿದ್ದ ಸೀತೆಯನ್ನು ನೋಡಲು ಹೋಗುತ್ತಾನೆ. ಆಗ ಸೀತೆ ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ರಾವಣನಲ್ಲಿ ಮೂಡುವ ಅನುಕಂಪದ ಭಾವನೆ ಆತನ ಮನಸ್ಸು ತಿಳಿಯಾಗುವುದಕ್ಕೂ ಕಾರಣವಾಗುತ್ತದೆ. ಈ ಬಗೆಯ ತಿಳುವಳಿಕೆ ಮೂಡಿದ ಕಾರಣದಿಂದಲೇ ಆತ ತನ್ನ ಹತ್ತು ಮುಖಗಳನ್ನು ತೋರಗೊಡುವ ಮರ್ಯಾದೆಯನ್ನು ಆ ಬಳಿಕವಾದರೂ ಉಳಿಸಿಕೊಂಡ ಎಂಬ ಭಾವ ‘ದಶವದನ’ ಪದಬಳಕೆಯ ಹಿನ್ನೆಲೆಯಲ್ಲಿರಬಹುದು.

‘ವದನ’ ಪದಕ್ಕಿರುವ ‘ಬಾಯಿ’ ಎನ್ನುವ ಅರ್ಥವನ್ನು ಲಕ್ಷ್ಯಕ್ಕೆ ತಂದುಕೊಂಡರೆ ಇನ್ನೊಂದು ಬಗೆಯ ವಿವರಣೆ ಗೋಚರವಾಗುತ್ತದೆ. ಮನುಷ್ಯನಲ್ಲಿ ವಿವೇಚನೆ ಮೂಡಬೇಕಾದರೆ ಅವನ ಬಾಯಿ ಸುಮ್ಮನಿರಬೇಕು. ಮೌನದ ಸ್ಥಿತಿ ತಾಳ್ಮೆಯನ್ನು ಮೂಡಿಸುತ್ತದೆ. ಯೋಚನೆಯನ್ನು ಹುಟ್ಟಿಸುತ್ತದೆ. ಆತ್ಮವಿಮರ್ಶೆ ಸಾಕಾರಗೊಳ್ಳುವುದು ಬಾಯಿ ಸುಮ್ಮನಿದ್ದಾಗ. ಇಲ್ಲಿ ರಾವಣನಲ್ಲಿ ವಿವೇಚನೆ ಮೂಡಿದ್ದು, ಆತ ತನ್ನನ್ನು ತಾನು ಅರ್ಥ ಮಾಡಿಕೊಂಡದ್ದು ಅಂತಹ ಮೌನದ ಪರಿಸ್ಥಿತಿಯಲ್ಲಿ. ಮೂರ್ಛಿತಳಾದ ಸೀತೆಯನ್ನು ಕಂಡ ಅವನು ಒಂದು ಕ್ಷಣಕ್ಕಾದರೂ ಮಾತು ಮರೆತಿರಬಹುದು. ಅವನ ಹತ್ತು ಬಾಯಿಗಳೂ ಏಕಕಾಲಕ್ಕೆ ಸುಮ್ಮನಾದವೆಂದರೆ ಅದು ಮಹಾಮೌನದ ಅತ್ಯುತ್ಕೃಷ್ಟ ಸೂಚನೆ. ಇಂತಹ ಸಂದರ್ಭದಲ್ಲೇ ಆತನಲ್ಲೊಂದು ವಿಶಿಷ್ಟ ಪ್ರಜ್ಞೆ ಜಾಗೃತವಾದದ್ದು. ಅಂದರೆ ಆತ ‘ತನ್ನಿಂ ತಾನೆ ತಿಳಿದು’ದಕ್ಕೂ ಆತನ ‘ದಶವದನ’ಕ್ಕೂ ಸಂಬಂಧ ಇದೆ. ಸುಮ್ಮನಾದ ಬಾಯಿ ಚುರುಕಾಗಿಸಿದ್ದು ತಲೆಯನ್ನು. ಚುರುಕಾದ ತಲೆ ಆತನೆದೆಯಲ್ಲಿ ಮೂಡಿಸಿದ್ದು ಸೀತೆಯ ಕುರಿತಾದ ವೈರಾಗ್ಯ. ಇದರಿಂದಾಗಿ ಆತನ ತಿಳುವಳಿಕೆಗೆ ಮೂಲಕಾರಣವಾದ ‘ದಶವದನ’ ಅಂದರೆ ಹತ್ತು ಬಾಯಿಗಳ ಮೂಲಕವೇ ಆತನನ್ನು ಗುರುತಿಸಿರುವುದು ಉಚಿತ ಎನಿಸಿಕೊಳ್ಳುತ್ತದೆ.

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ