Advertisement
ಶರೀಫ-ಬಿಶಪ್ಪ ಮತ್ತು ರಾಬಿನ್ ಹುಡ್: ಸುಕನ್ಯಾ ಕನಾರಳ್ಳಿ ಅಂಕಣ

ಶರೀಫ-ಬಿಶಪ್ಪ ಮತ್ತು ರಾಬಿನ್ ಹುಡ್: ಸುಕನ್ಯಾ ಕನಾರಳ್ಳಿ ಅಂಕಣ

ಬೆಳಕು ತೋರಿಸಿ, ಜ್ಞಾನವನ್ನು ಹೊಳೆಸಬೇಕಾದ ಆಧ್ಯಾತ್ಮ ಕೇಂದ್ರಗಳು ಶರೀಫನ ಜೊತೆ ಸೇರಿಕೊಂಡು ಸಮೂಹಸನ್ನಿ ಹಿಡಿಸುವಲ್ಲಿ ಯಶಸ್ವಿಯಾಗುತ್ತವೆ! ನಾನು ಹೈಸ್ಕೂಲ್ ಓದಿದ ಪಟ್ಟಣಕ್ಕೆ ಅಂದು ಇಂದಿರಾಗಾಂಧಿ ಬಂದಿದ್ದರು. ಭಾಷಣ ಕೇಳಲು ಉಸಿರು ಬಿಗಿ ಹಿಡಿದು ಓಡಿದ್ದೇ ಓಡಿದ್ದು. ಅಲ್ಲಿ ತಲುಪುವ ಹೊತ್ತಿಗೆ ಭಾಷಣ ಮುಗಿದು ಹೊಸದಾಗಿ ನಿರ್ಮಿತವಾಗಿದ್ದ ಹೆಲಿಪ್ಯಾಡಿನತ್ತ ಹೋದರು ಎಂದು ತಿಳಿದು ಹೊ ಎಂದು ಅತ್ತ ಕಡೆ ದೌಡಾಯಿಸಿದ್ದೆವು. ಇನ್ನೂ ಅರಿವು ಮೂಡಿರದ ವಯಸ್ಸು. ದಿನದ ಕೊನೆಯಲ್ಲಿ ಇದೆಂತಾ ಹುಚ್ಚಾಟ ಅಂತ ಅನ್ನಿಸಿದ್ದು ಮಾತ್ರ ನಿಜ. ಸದ್ಯ ಆಗ ಒಂದೋ ಎರಡು ಚಿತ್ರಗಳು ಸುದ್ದಿಪತ್ರಿಕೆಯಲ್ಲಿ ಬರುತ್ತಿದ್ದವು ಅಷ್ಟೆ. ಈಗ ಹಾಗಲ್ಲ.
ಸುಕನ್ಯಾ
ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತೈದನೆಯ ಬರಹ

ಹಲವಾರು ವರ್ಷಗಳ ಹಿಂದೆ ಪಿಯುಸಿಗೆ ನಾನು ಪಾಠ ಮಾಡುವ ಕಾಲದಲ್ಲಿ  ಬ್ರಿಟಿಷ್ ಸಾಹಿತ್ಯದ ರಾಬಿನ್ ಹುಡ್ ಕಥೆಯ ಪುಟಾಣಿರೂಪ ಪಠ್ಯಕ್ರಮದ ಒಂದು ಭಾಗವಾಗಿತ್ತು. ಅದರ ಮೊದಲ ಅಧ್ಯಾಯದಲ್ಲೇ ರಾಬಿನ್ ಹುಡ್ ಎಂಬಾತ ಶ್ರೀಮಂತರನ್ನು ದಾರಿಯಲ್ಲಿ ಅಡ್ಡಗಟ್ಟಿ ದೋಚಿ ಕಡುಕಷ್ಟದಲ್ಲಿರುವ ಬಡವರಿಗೆ ಹಂಚುತ್ತಿದ್ದ ಎಂಬ ವಿವರವಿತ್ತು. ಅಷ್ಟೇ ಅಲ್ಲ, ಬಿಶಪ್ ಮತ್ತು ಶರೀಫರು ಅವನಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು ಎನ್ನುವುದೂ ಇತ್ತು.

ಅದೊಂದು ನಾನ್-ಡಿಟೇಲ್ ಪಠ್ಯ. ಸರಳ ಇಂಗ್ಲಿಷಿನಲ್ಲಿದ್ದ ಅದನ್ನು ದೀರ್ಘವಾಗಿ ಬೋಧಿಸಲು ಹೋಗಬಾರದು. ಆದರೆ  ಕೆಲವು ವಿವರಗಳ ನೆಪದಲ್ಲಿ ಅವರ ತಲೆ ಕೊರೆಯುವ ಅವಕಾಶವಿತ್ತು. ಸಾಮಾನ್ಯವಾಗಿ ನಾನು ಬಿಶಪ್ಪನಂತ ಒಬ್ಬ ಧಾರ್ಮಿಕ ವ್ಯವಸ್ಥೆಯ ಮತ್ತು ಶರೀಫನಂಥ ಒಬ್ಬ ಸಾಮಾಜಿಕ ವ್ಯವಸ್ಥೆಯ ಅಧಿಕಾರ ಕೇಂದ್ರಗಳು ರಾಬಿನ್ ಹುಡ್ ಎಂಬ ಅನಕ್ಷರಸ್ಥನಿಗೆ ಬಹಿಷ್ಕಾರ ಹಾಕುವುದರಲ್ಲಿ ಯಾಕೆ ಒಟ್ಟಾಗುತ್ತಾರೆ ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಉಪನ್ಯಾಸೀಯ ಇಂಗ್ಲೀಷಿನಲ್ಲಿ ಅವರಿಗೆ ಕಾಲೇಜು ಮೆಟ್ಟಿಲು ಹತ್ತಿದೀರಾ, ಗಂಭೀರ ಚರ್ಚೆಗಳಿಗೆ ಸಿದ್ಧರಾಗಿ ಎಂಬ ಸೂಚನೆಯಿದ್ದ  ತೆಳುವಾದ ಶಾಕ್ ಟ್ರೀಟ್ಮೆಂಟ್ ಕೊಡುತ್ತಿದ್ದೆ.

ನಿಜವಾದ ಅರ್ಥದಲ್ಲಿ ಆ ವಿದ್ಯಾರ್ಥಿಗಳು ಈಗ ತಾನೇ ರಜೆ ಕಳೆದು ಬಂದಿರುವ ಹೈಸ್ಕೂಲ್ ಮಕ್ಕಳೇ. ಕಷ್ಟಪದಗಳಿಗೆ ಅರ್ಥ ಕೊಟ್ಟು ಪ್ರತಿಯೊಂದು ಸಾಲನ್ನು ವಿವರಿಸುವ ಇಂಗ್ಲಿಷ್ ಮೇಡಮ್ಮುಗಳ ಚಟಕ್ಕೆ ಒಗ್ಗಿಹೋಗಿದ್ದವರು. ಮೊದಲದಿನ ಎಂಬ ವಿನಾಯಿತಿಯನ್ನು ಕೊಡದೆ ನಾನು ಓತಪ್ರೋತ ಭಾಷಣ ಬಿಗಿದಾಗ ಕೆಲವರು ಕಕ್ಕಾಬಿಕ್ಕಿಯಾಗಿ ಆ ಮೇಡಮ್ಮು ತುಂಬ ಸೀರಿಯಸ್ ಎಂಬ ಪೂರ್ವಾಗ್ರಹವನ್ನು ಬೆಳೆಸಿಕೊಂಡರೆ ಜಾಣರ ಗುಂಪಿಗೆ ಸೇರಿದ  ಇನ್ನೂ ಕೆಲವರು ಹೊಳೆವ ಕಣ್ಣುಗಳಲ್ಲಿ ಕೇಳಿಸಿಕೊಂಡು ಪದವಿ ಮುಗಿಯುವವರೆಗೂ ನನ್ನ ಆಭಿಮಾನಿಗಳಾಗಿ ಉಳಿದುಬಿಡುತ್ತಿದ್ದರು. ಯಾರು ಯಾವ ಗುಂಪಿನವರು ಎಂದು ನನ್ನ ಟೀಚರಿನಿ ಕಣ್ಣುಗಳು ಮೊದಲನೇ ದಿನವೇ ಅಳೆದಿರುತ್ತಿದ್ದವು.

ಇರಲಿ, ನಮ್ಮಲ್ಲಿ ಗೋಕುಲಾಷ್ಟಮಿಗೂ ಇಮಾಂಸಾಬಿಗೂ ಏನು ಸಂಬಂಧ ಎಂಬ ನಾಣ್ನುಡಿಯನ್ನು ಉದುರಿಸಿ ವಿವೇಕ ಹೇಳಲು ಪ್ರಯತ್ನಿಸುವ ದುರಭ್ಯಾಸವಿದೆ. ಆದರೆ ಬಿಶಪ್ ಮತ್ತು ಶರೀಫರ ನಡುವಿನ ಅಪವಿತ್ರ ಸಂಬಂಧ ಈ ನಾಣ್ನುಡಿಯನ್ನು ಮೀರಿದ್ದು.  ಸಾಮಾಜಿಕ ಸುಸ್ಥಿತಿಯನ್ನು ಕಾಯುವುದು ಎಂದರೆ ಶ್ರೀಮಂತರ ಹಿತಾಸಕ್ತಿಗಳನ್ನು ಕಾಯುವುದೇ ಆಗಿರುತ್ತದೆ. ಅದರ ಹೊಣೆ ಹೊತ್ತ ಶರೀಫನಿಗೆ ಬಿಶಪ್ಪನ ಸಹಾಯದ ಅಗತ್ಯವಿರುತ್ತದೆ. ಯಾಕೆಂದರೆ ಪರರ ವಸ್ತುವನ್ನು (ಗೂಢಾರ್ಥದಲ್ಲಿ ಶ್ರೀಮಂತರ ಸ್ವತ್ತನ್ನು) ಕದಿಯಬಾರದು ಎಂದು ಸದಾ ನೀತಿಪಾಠ ಹೇಳುವವನು ಬಿಶಪ್ಪನೇ ಆಗಿರುತ್ತಾನೆ. ಜನ ಅವನ ಮಾತನ್ನು ಪಾಲಿಸುತ್ತಾರಲ್ಲ? ದಂಡ ಉಪಯೋಗಿಸಿ ಬುದ್ಧಿ ಕಲಿಸುವುದಕ್ಕಿಂತ ‘ನಾನು ಆ ಸಾಕ್ಷಾತ್ ಭಗವಂತನ ಮುಖವಾಣಿ, ನನ್ನ ಮಾತನ್ನು ಕೇಳದಿದ್ದರೆ ರೌರವ ನರಕದಲ್ಲಿ ಬೀಳುತ್ತೀರಾ!’ ಎಂದು ಬೆದರಿಸುವ ಬಿಶಪ್ಪನ ಅಧಿಕಾರ ಸೂಕ್ಷ್ಮಸ್ತರದ್ದು ಮತ್ತು ಹೆಚ್ಚು ಪ್ರಭಾವಶಾಲಿ. ಹಾಗೆ ಹೇಳುತ್ತಾ ತನ್ನ ಅಧಿಕಾರವನ್ನು ಚಲಾಯಿಸುವುದಷ್ಟೇ ಅಲ್ಲ, ತನಗೆ ಬೇಕಾದ ಎಲ್ಲ ಲೌಕಿಕ ಸವಲತ್ತುಗಳು ಶರೀಫನ ದಯೆಯಿಂದ ಮನೆ ಬಾಗಿಲಿಗೆ ಬಂದು ಬೀಳುವಂತೆ ನೋಡಿಕೊಳ್ಳುತ್ತಾನೆ. ಅದಕ್ಕೇ ಅವರಿಬ್ಬರಿಗೂ ಚಡ್ಡಿ ದೋಸ್ತಿ! ಆದ್ದರಿಂದಲೇ ಇಬ್ಬರೂ ಸೇರಿ, ‘ಭೂಮಿಯ ಸಂಪತ್ತು ಎಲ್ಲರಿಗೆ ಸೇರಿದ್ದು, ಒಬ್ಬ ವಾಕರಿಕೆ ಬರುವಷ್ಟು ತಿಂದು ಹೊಟ್ಟೆ ಉಬ್ಬರಿಸಿ ಹೊರಳಾಡಿದರೆ ಇನ್ನೆಲ್ಲೋ ಇನ್ನೊಬ್ಬ ಹಸಿವಿಂದ ಸಾಯುತ್ತಾನೆ,’ ಎಂಬ ತತ್ವದಲ್ಲಿ ನಂಬಿಕೆಯಿಟ್ಟ ರಾಬಿನ್ ಹುಡ್ ಎಂಬ ಅನಕ್ಷರಸ್ಥನನ್ನು ಸಾಮಾಜಿಕವಾಗಿ ಬಹಿಷ್ಕರಿಸಿ ಬೇಟೆಯಾಡುತ್ತಾರೆ.

ಹೀಗೆ ಹೇಳಿದ ತಕ್ಷಣ, ‘ಹೋ! ಇದು ಎಡಪಂಥೀಯ ಸಿದ್ಧಾಂತ!’ ಎಂದು ಬೊಬ್ಬೆ ಹೊಡೆಯುವುದೇನೂ ಬೇಕಿಲ್ಲ. ರಾಬಿನ್ ಹುಡ್ ಒಬ್ಬ ಜಾನಪದೀಯ ನಾಯಕ. ಅವನಿಗೆ ಆ ಪಂಥ ಈ ಪಂಥ ಎಂಬುದರ ಅರಿವಿರಲಿಲ್ಲ. ಅವನದ್ದು ಸಹಜ ವಿವೇಕ. ಇಂತಹ ಕಥಾನಕಗಳು ಕೆಲವು ಸಾರ್ವಕಾಲಿಕ ಸತ್ಯಗಳತ್ತ ಬೊಟ್ಟು ಮಾಡುತ್ತಿರುತ್ತವೆ ಎನ್ನುವುದಷ್ಟೇ ಮುಖ್ಯ. ಯಾರ ತಲೆಯನ್ನು ಎಷ್ಟೇ ಸವರಿದರೂ ಶ್ರೀಮಂತಿಕೆ ದೇವರು ಕೊಟ್ಟದ್ದಲ್ಲ, ಅದು ಸಾಮಾಜಿಕ ಅಸಮತೋಲನವನ್ನು ಕಾಯುವ ಕೆಲವು ಶಕ್ತಿಗಳ ಕೃಪೆಯಿಂದ ಬಂದದ್ದು ಎನ್ನುವುದನ್ನು ಬದುಕು ಇವತ್ತಲ್ಲ ನಾಳೆ ನೇರ ಅನುಭವದ ಮೂಲಕವೇ ಪ್ರತಿಯೊಬ್ಬರಿಗೂ ಕಲಿಸುತ್ತದೆ.

ಶರೀಫ್-ಬಿಶಪ್ ಸಂಬಂಧವನ್ನು ರೂಪಕವಾಗಿ ತೆಗೆದುಕೊಂಡರೆ ಬೇರೆ ಬೇರೆ ಸಮಾಜದ ಅಂತದ್ದೇ ರೀತಿಯ ಅಧಿಕಾರ ಕೇಂದ್ರಗಳ ನಡುವಿನ ನಂಟು ಅರ್ಥವಾಗುತ್ತದೆ. ಉದಾಹರಣೆಗೆ ರಾಜ್ಯವನ್ನು ಆಳಬೇಕಾದ ರಾಜ ದಕ್ಷಿಣೆ, ಜಾಗೀರು, ಇತ್ಯಾದಿಗಳನ್ನು ಕೊಟ್ಟು ಪುರೋಹಿತವರ್ಗವನ್ನು ಯಾಕೆ ಸದಾ ಮಸ್ಕಾ ಹೊಡೆದು ಇಟ್ಟುಕೊಂಡಿರುತ್ತಿದ್ದ ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟವೇನೂ ಅಲ್ಲ.

ದೊಂಬರಾಟ ಮತ್ತು ಗಿರಿಗಿಟ್ಲೆ!

ಕಳೆದವಾರ ಬಂದಿಳಿದಿದ್ದ ಅಕ್ಕನನ್ನ ನೋಡಲು ಕುವೆಂಪುನಗರದ ಅವಳ ಮಗಳ ಮನೆಗೆ ಹೋಗಬೇಕಿತ್ತು. ಮಾರುಮಾರಿಗೆ ಟ್ರಾಫಿಕ್ ಪೊಲೀಸರು ಸಿಕ್ಕಿ, ಎಡಕ್ಕೆ ಹೋಗಬೇಕಿದ್ದವಳನ್ನು ಬಲಕ್ಕೆ ತಿರುಗಿಸಿ, ಬಲದಿಂದ ಎಡಕ್ಕೆ ತಿರುಗಿಸಿ, ಗಿರಿಗಿಟ್ಲೆ ಆಟ ಆಡಿಸಿ, ಇಪ್ಪತ್ತು ನಿಮಿಷಕ್ಕೆ ತಲುಪಬೇಕಿದ್ದ ನನಗೆ ಎರಡು ಗಂಟೆ ಹಿಡಿಸಿದ್ದರು. ನನ್ನ ಸಹನೆ ಹಾರಿ ಹೋಗಿತ್ತು. ಅಕ್ಕನ ಮುಖವನ್ನ ಕಂಡ ತಕ್ಷಣ ‘ಇನ್ನು ಮೇಲೆ ಮೈಸೂರಿಗೆ ಬರುವುದಾದರೆ ಯಾರೋ ಜಗದ್ಗುರುವಿನ ಹುಟ್ಟಿದ ದಿನದ ಸಮಾರಂಭಕ್ಕೆ  ರಾಜಧಾನಿಯಿಂದ ರಾಜಕಾರಣಿಗಳು ಬಂದು, ಇಲ್ಲಿಯ ಪುಡಾರಿಗಳು ತಮ್ಮ ಚೇಲಾಗಳ ಗುಂಪು ಕಟ್ಟಿಕೊಂಡು ಅವರಿಗೆ ಹಾರ ತುರಾಯಿ ಅರ್ಪಿಸಿ ಕರೆತಂದು, ಆಮೇಲೆ ಎಲ್ಲರೂ ಸೇರಿಕೊಂಡು ಕಾವಿಗೆ ಸನ್ಮಾನ ಮಾಡಲು ಹೋಗುವ ತರಾತುರಿಗಳಿಲ್ಲದ ದಿನ ಮಾತ್ರ ಬಾ. ಇಲ್ಲದಿದ್ದರೆ ನೀನು ಬರುವ  ಸುದ್ದಿಯನ್ನ ನನಗೆ ತಿಳಿಸಲೇಬೇಡ’ ಎಂದು ಗುರ್ರೆಂದಾಗ ಅವಳು ಕಕ್ಕಾಬಿಕ್ಕಿಯಾಗಿದ್ದಳು.

ಭಾರತದ ಇತಿಹಾಸದಲ್ಲಿ ಕೆಲವು ಅದ್ಭುತ ಛಾಯಾಚಿತ್ರಗಳಿವೆ. ಗಾಂಧೀಜಿಯವರ  ದಂಡಿಯಾತ್ರೆ ನನ್ನ ಅಚ್ಚುಮೆಚ್ಚಿನದು. ಒಂದು ಹಿಡಿ ಉಪ್ಪನ್ನು ಕೈಯಲ್ಲಿ ಎತ್ತಿ ಹಿಡಿದು ಸಾಮ್ರಾಜ್ಯಶಕ್ತಿಗೆ ಸೆಡ್ಡು ಹೊಡೆದು ನಿಂತ ಆ ಚಿತ್ರ ಒಂದು ಮಹಾಕಾವ್ಯದಂತೆ ನನ್ನ ಕಣ್ಣಿಗೆ ತೋರಿದ್ದಿದೆ. ಇಂದಿರಾಗಾಂಧಿ ಒಮ್ಮೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಬಂದಾಗ ಗೇಟಿನಾಚೆ ನಿಲ್ಲಿಸಿ ಅಂದಿನ ವಿದ್ಯಾರ್ಥಿ ಸಂಘದ ನಾಯಕ ಸೀತಾರಾಂ ಯೆಚೂರಿ ಅವರ ವಿರುದ್ಧ ಆಪಾದನೆಗಳ ಪಟ್ಟಿ ಓದುತ್ತಿರುವುದು ಸಹ ನನ್ನಲ್ಲಿ ಮೆಚ್ಚಿಗೆಯನ್ನು ಮೂಡಿಸಿದ್ದ ಒಂದು ದೃಶ್ಯಕಾವ್ಯ.  ತನ್ಮಯಳಾಗಿ ಅದನ್ನು ಕೇಳಿಸಿಕೊಳ್ಳುತ್ತಿದ್ದ ಆಕೆಯ ಮುಖದ ಮೇಲೆ  ಮಗು ಬೆಳೆದು ನಿಂತು ತನ್ನನ್ನೇ ಪ್ರಶ್ನಿಸುತ್ತಿರುವ ತಾಯಿಯ ಹೆಮ್ಮೆಯ ಸುಳಿವಿತ್ತು ಅಂತ ನನಗೆ ಅನಿಸಿದ್ದಿದೆ. ಇಂತದ್ದು ಇವತ್ತೇನಾದರೂ ಆದರೆ  ಪಟ್ಟಿ ಓದಿ ಮುಗಿಸುವ ಮುಂಚೆಯೇ, ಮಾಧ್ಯಮದವರು ಫೋಟೋ ಹೊಡೆಯುವ ಮುನ್ನವೇ ಯೆಚೂರಿಗೆ ಗಲ್ಲುಗಂಬವೇ ಗತಿ!

ಇರಲಿ, ಛಾಯಾಚಿತ್ರದ ವಿಷಯಕ್ಕೆ ಮರಳಿ ಬರೋಣ. ಮೈಸೂರಿನಲ್ಲಿ ಕಳೆದ ಒಂದು ತಿಂಗಳಿಂದ ಕಣ್ಣುನೋವು ಬರಿಸುವಷ್ಟು ಕಾವಿ ಮತ್ತು ಟೋಪಿಗಳ ಜಂಟಿ ಸಂಭ್ರಮ ನಡೆದು ಹೋಗಿದೆ. ಇವರು ಮುಖ್ಯಮಂತ್ರಿಯನ್ನು ಆಹ್ವಾನಿಸಿದರೆ ಅವರು ಪ್ರಧಾನಮಂತ್ರಿಯನ್ನೇ ಆಹ್ವಾನಿಸುತ್ತಾರೆ. ಪರಿಣಾಮ? ವೇದಿಕೆಯ ಮೇಲೆ ಜಗಜಗಿಸುವ ಕಾವಿ, ಟೋಪಿ, ರುಮಾಲು, ಬಣ್ಣಬಣ್ಣದ ಚುನರಿಯ ಶೋಕಿ ಪೇಟಾಗಳು, ಇತ್ಯಾದಿಗಳ ಹಬ್ಬ!

ಅದಕ್ಕೂ ಮುಂಚೆ ಪಾಸ್ ದಕ್ಕಿಸಿಕೊಳ್ಳಲು ಗುದ್ದಾಟ. ಕಾವಿ ಕಂಡರೆ ಕಾಲಿಗೆ ಬೀಳುವ ಮಂದಿ ಪಾಸ್ ಸಿಕ್ಕಲಿಲ್ಲ ಎಂದ ತಕ್ಷಣ ಬಾಯಿಗೆ ಬಂದಂತೆ ಬೈಯ್ಯುವ ಅಸಹ್ಯ ಸಂಸ್ಕೃತಿಗೆ ಸಾಕ್ಷಿಯಾಗಿದ್ದನ್ನು ನನ್ನ ಗೆಳತಿಯೊಬ್ಬಳು ನಿರೂಪಿಸಿದಳು. ಹೇಗೋ ಪಾಸ್ ದಕ್ಕಿಸಿಕೊಂಡು ಆ ದಿನದಂದು ಹೋದರೆ ಪೊಲೀಸರು ಹೆಜ್ಜೆಹೆಜ್ಜೆಗೆ ಬೇಟೆಯಾಡಿದರಂತೆ. ನೀರಿನ ಬಾಟಲ್ ಸಹ ಒಯ್ಯುವ ಹಾಗಿಲ್ಲ (ಈಗ ಬಾಟಲಿನ ನೀರಿನೊಳಗೂ ಬಾಂಬ್ ಇರಬಹುದಂತೆ!) ಹನ್ನೆರಡು ಗಂಟೆಗೆ ಒಳಗೆ ಹೋದರೂ ಮುಖ್ಯ ಅತಿಥಿಗಳು ಆಗಮಿಸಿದ್ದು ಸಮಾ ಐದು ಗಂಟೆಗಳ ನಂತರವೇ. ಹತ್ತು ಸಾವಿರ ಮಂದಿಯ ನಡುವೆ ಮುಖ್ಯ ಅತಿಥಿಗಳು ಸರಿಯಾಗಿ ಕಾಣಿಸಲೇ ಇಲ್ಲವಂತೆ. ಶೋಕಿ ಮಾತುಗಳ ಸಂಭ್ರಮ ಮಾತ್ರ ಕೇಳಿಸಿತಂತೆ!

ಇದು ನಮ್ಮ ಸ್ಥಿತಿಗತಿ! ಬೆಳಕು ತೋರಿಸಿ, ಜ್ಞಾನವನ್ನು ಹೊಳೆಸಬೇಕಾದ ಆಧ್ಯಾತ್ಮ ಕೇಂದ್ರಗಳು ಶರೀಫನ ಜೊತೆ ಸೇರಿಕೊಂಡು ಸಮೂಹಸನ್ನಿ ಹಿಡಿಸುವಲ್ಲಿ ಯಶಸ್ವಿಯಾಗುತ್ತವೆ! ನಾನು ಹೈಸ್ಕೂಲ್ ಓದಿದ ಪಟ್ಟಣಕ್ಕೆ ಅಂದು ಇಂದಿರಾಗಾಂಧಿ ಬಂದಿದ್ದರು. ಭಾಷಣ ಕೇಳಲು ಉಸಿರು ಬಿಗಿ ಹಿಡಿದು ಓಡಿದ್ದೇ ಓಡಿದ್ದು. ಅಲ್ಲಿ ತಲುಪುವ ಹೊತ್ತಿಗೆ ಭಾಷಣ ಮುಗಿದು ಹೊಸದಾಗಿ ನಿರ್ಮಿತವಾಗಿದ್ದ ಹೆಲಿಪ್ಯಾಡಿನತ್ತ ಹೋದರು ಎಂದು ತಿಳಿದು ಹೊ ಎಂದು ಅತ್ತ ಕಡೆ ದೌಡಾಯಿಸಿದ್ದೆವು. ಇನ್ನೂ ಅರಿವು ಮೂಡಿರದ ವಯಸ್ಸು. ದಿನದ ಕೊನೆಯಲ್ಲಿ ಇದೆಂತಾ ಹುಚ್ಚಾಟ ಅಂತ ಅನ್ನಿಸಿದ್ದು ಮಾತ್ರ ನಿಜ. ಸದ್ಯ ಆಗ ಒಂದೋ ಎರಡು ಚಿತ್ರಗಳು ಸುದ್ದಿಪತ್ರಿಕೆಯಲ್ಲಿ ಬರುತ್ತಿದ್ದವು ಅಷ್ಟೆ. ಈಗ ಹಾಗಲ್ಲ. ದೊಂಬರಾಟದ ಛಾಯಾಚಿತ್ರಗಳು ಕಣ್ಣುನೋವು ಬರಿಸುವಲ್ಲಿ ಯಶಸ್ವಿಯಾಗುತ್ತವೆ. ಯಾವುದೇ  ಚಾನೆಲ್ ತಿರುಗಿಸಿ, ಯಾವುದೇ ಪತ್ರಿಕೆಯ ಪುಟ ತಿರುಗಿಸಿ, ಬರೀ ಇದೇ ಗೋಳು!

ಮೊನ್ನೆ ಒಬ್ಬ ‘ಭಕ್ತೆ’ಯನ್ನು ಬೆಳಗಿನ ಉಪಾಹಾರಕ್ಕೆಂದು ಜೊತೆಯಲ್ಲಿ ಕರೆದೊಯ್ದಿದ್ದೆ. ಬಿಶಪ್-ಶರೀಫರ ಜಂಟಿನೃತ್ಯದ ಬಗ್ಗೆ ಮಾತಾಡುತ್ತಾ,  ‘ನೀವು ಹೋಗಲಿಲ್ಲವಾ? ಅಯ್ಯೋ ಪಾಸ್ ಕೊಡಲಿಲ್ಲ ಅಂತ ಜನ ಗುರುಮನೆಯ ಅಧ್ಯಕ್ಷರನ್ನು ಸಹ ಹಿಗ್ಗಾಮುಗ್ಗಾ ಬೈದುಕೊಂಡು ಹೋದರಂತೆ… ‘ಅಂತೆಲ್ಲ ಕೊರೆಯಹತ್ತಿದಾಗ ನಡುವಿನಲ್ಲೇ ಕತ್ತರಿಸಿದ್ದೆ.   ‘ನೋಡಮ್ಮ ತಾಯಿ, ವ್ಯವಸ್ಥೆಯಲ್ಲಿ ಸಿಕ್ಕಿಬಿದ್ದವರು ಮತ್ತು ಭಕ್ತರು ಬೇಕಿದ್ದರೆ ಆ ಮಹಾಜಾತ್ರೆಯಲ್ಲಿ  ನಕ್ಕುನಲಿಯಲಿ. ನನಗೆ ಅದರ ವರದಿಯ ಉಸಾಬರಿಯೂ ಬೇಡ.’ ಅದಕ್ಕೂ ಮುಂಚೆ ಇನ್ನೊಬ್ಬ ಪರಮಭಕ್ತೆ ಫೋನ್ ಮಾಡಿ ಅದರ ಬಗ್ಗೆ ತಲೆ ತಿಂದಿದ್ದಳು. ‘ಅಯ್ಯೋ, ಯಾಕಾದ್ರೂ ಹೋದೆನೋ ಅಂತನ್ನಿಸಿತ್ತು ಕಣ್ರೀ…’

ವರದಿಯ ಉಸಾಬರಿ ಬೇಡ ಎಂದಿದ್ದೇನೋ ಸರಿಯೇ. ಆದರೆ ಈ ದೊಂಬರಾಟದ  ದಿನಗಳಂದು ನಗರದ ರಸ್ತೆಗಳೆಂಬ ನರಕದಲ್ಲಿ ಟ್ರಾಫಿಕ್ ಪೊಲೀಸರು ಜನಸಾಮಾನ್ಯರನ್ನು ಗಿರಿಗಿಟ್ಲೆ ಆಡಿಸುವ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಹೀಗೆ ಯೋಚಿಸುತ್ತಿದ್ದಾಗಲೇ ಬದುಕಿನಲ್ಲಿ ನಾನು ಕಂಡಿದ್ದ ಇನ್ನೊಬ್ಬ ಪ್ರಧಾನಿಯ ನೆನಪಾಯಿತು.

ಸುಮಾರು ಎರಡು ದಶಕಗಳ ಹಿಂದೆ ಆಗ ತಾನೇ ಕಿವಿನಾಡಿಗೆ ಹೋಗಿದ್ದೆ. ಹೊಸ ಹವಾಮಾನ ಮತ್ತು ಹೊಸಜನಗಳ ನಡುವೆ ದೇಹಮನಸ್ಸುಗಳು ತತ್ತರಬತ್ತರ ಸ್ಥಿತಿಯಲ್ಲಿದ್ದವು. ನಿದ್ದೆಯಲ್ಲಿ ನಡೆಯುತ್ತಿದ್ದವಳಂತೆ ಲೈಬ್ರರಿಯಿಂದ ನಡೆದುಬರುತ್ತಿದ್ದಾಗ ಪಾರ್ಲಿಮೆಂಟಿನ ಗೇಟು ತೆರೆದು ಹೆಣ್ಣೊಬ್ಬಳು ಬೀದಿಗಿಳಿದದ್ದನ್ನು ಕಣ್ಣುಗಳು ನಿರಾಸಕ್ತಿಯಿಂದ ಗಮನಿಸಿದ್ದವು. ನೇರವಾಗಿ ಎದುರಾದ ಆಕೆ ಯಾವ ಬಿಂಕವೂ ಇಲ್ಲದೆ ತೆಳುವಾಗಿ ನಕ್ಕಾಗ ‘ಈಕೆ ಯಾರು?’ ಎಂದು  ತಲೆ ಕೆರೆದುಕೊಂಡಿದ್ದೆ. ಎಂದೂ ಟಿವಿ ಹಾಕದ ಹರಿ ಸಂಜೆ ಏನಕ್ಕೊ ಅದರ ಕಿವಿ ಹಿಂಡಿ ಆನ್ ಮಾಡಿದ್ದ. ಅರೆ! ನಾನು ಮಧ್ಯಾಹ್ನ ಎದುರಾಗಿದ್ದ ಮುಖ! ಪ್ರಧಾನಿ ಹೆಲನ್ ಕ್ಲಾರ್ಕ್! ಆಗ ಮೂರನೆಯ ಬಾರಿ ಪ್ರಧಾನಿಯಾಗಿ ನಂತರ ವಿಶ್ವಸಂಸ್ಥೆಯ ಪದವಿಯನ್ನು ಅಲಂಕರಿಸಿದಾಕೆ. ಇನ್ನೊಮ್ಮೆ, ಜೇಬಿನಲ್ಲಿ ಕೈ ಹಾಕಿಕೊಂಡು ರಸ್ತೆಯಲ್ಲಿ ಎಲ್ಲೋ ನೋಡುತ್ತಾ ಅಲೆಯುತ್ತಿದ್ದ ಸಚಿನ್ ತೆಂಡೂಲ್ಕರ್ ಕಣ್ಣಿಗೆ ಬಿದ್ದು ತನಗೆ ಕಿವಿನಾಡು ತುಂಬ ಇಷ್ಟವಾಗುತ್ತದೆ ಎಂದು ಸಂದರ್ಶನದಲ್ಲಿ ಹೇಳಿದ್ದ ಮಾತು ನೆನಪಾಗಿತ್ತು.

ದೊಂಬರಾಟದ ಗಿರಿಗಿಟ್ಲೆಯಲ್ಲಿ ಅಧ್ಯಕ್ಷ ಒಬಾಮಾ ಎಂಬ ನೆನಪು ಸಹ ತೇಲಿ ಬಂದಿತ್ತು. ಒಬಾಮಾ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ನ್ಯೂಜರ್ಸಿಯ ರಟ್ಗರ್ಸ್ ವಿಶ್ವವಿದ್ಯಾಲಯದಲ್ಲಿದ್ದು ಬದುಕಿನಲ್ಲಿ ಮೊದಲ ಬಾರಿ ಚುನಾವಣೆ ಪ್ರಚಾರ ಎಂಬ ವಿದ್ಯಮಾನದಲ್ಲಿ ಭಾಗವಹಿಸಿದ್ದೆ. ಜೊತೆಯಲ್ಲಿ ಹರಿ ಇದ್ದ. ಆರೂವರೆ ಅಡಿ ಎತ್ತರದ ಒಬ್ಬ ರೆಡ್ ನೆಕ್ ‘ನಿನ್ನನ್ನೂ ಒಬಾಮಾನನ್ನೂ ಒಂದೇ ಗನ್ನಿನಲ್ಲಿ ಸುಟ್ಟು ಬಿಡುತ್ತೇನೆ’ ಎಂದು ಮಾಲ್‌ನ ಮುಂದೆ ಹೆದರಿಸಿದಾಗ  ಸುತ್ತ ಜನ ಜಮಾಯಿಸಿದ್ದರು. ‘ಸುಡು ನೋಡೋಣ!’ ಎನ್ನುವಂತೆ  ಅವನೆದುರು ತಲೆಯೆತ್ತಿ ನಿಂತ ನನ್ನ ಗುಬ್ಬಚ್ಚಿ ಆಕೃತಿ  ವರದಿಯ ಸಮೇತ ಸ್ಥಳೀಯ ಪತ್ರಿಕೆಯಲ್ಲಿ ಮೂಡಿತ್ತು  ಎಂದು ಕೇಳ್ಪಟ್ಟೆ. ಆ ಚುನಾವಣೆ ಮಹಾ ಬಿರುಸಿನಲ್ಲಿ ನಡೆದಿತ್ತು, ನಿಜ. ಆದರೆ ಕಣ್ಣಿಗೆ ಯಾವ ಬ್ಯಾನರುಗಳೂ ಬಿದ್ದಿರಲಿಲ್ಲ. ಯಾವತ್ತೂ ರಸ್ತೆಯಲ್ಲಿ ಗಿರಿಗಿಟ್ಲೆಯ ಅನುಭವವಾಗಿರಲಿಲ್ಲ. ನಾವು ಭಾರತೀಯರು ಮಹಾ ಗದ್ದಲಪ್ರಿಯರಲ್ಲವೇ? ಭಗವಂತ ಧರೆಗಿಳಿದು ಬಂದರೂ  ಬಾಜಾಬಜಂತ್ರಿ ಸಮೇತವೇ!

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ಮೌಲಾನಾ ಜಲಾಲುದ್ದೀನ್ ರೂಮಿಯ ಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು ಇತ್ತೀಚೆಗೆ ಬಿಡುಗಡೆಯಾದ ಕೃತಿ. 'ಕನ್ನಡ-ಕಾಸರವಳ್ಳಿಯವರ ಸಿನಿಮಾಗಳಲ್ಲಿ ರಾಷ್ಟ್ರ ಮತ್ತು ಹೆಣ್ಣು' ಎರಡು ಪುಸ್ತಕಗಳಾಗಿ ಸದ್ಯದಲ್ಲೇ ಬೆಳಕು ಕಾಣಲಿದೆ. 

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ