ಆದಿ ಅನಾದಿಯ ನೆನಪಿಸಲೊಮ್ಮೆ
ತಂಗಾಳಿಯಲಿ ಮಿಂದ
ನಿನ್ನಯ ಕಣ್ರೆಪ್ಪೆಗಳನ್ನ
ಹೇಗೆ
ತಾಕಲಿ
ಫಕೀರ
ಬಾಗಿಹ
ಮುಖಪರದೆಯ ಹುಣ್ಣುಗಳನ್ನ
ಮರೆಮಾಚಿ
ಕಡು ಪ್ರೇಮದ ನದಿಯ ತುಣುಕುಗಳನ್ನ
ಒಡಲಲ್ಲಿಟ್ಟುಕೊಂಡು
ಅದೇಗೆ
ಕಣ್ಣೀರ ಮಡಿಸಲಿ
ಫಕೀರ
ಕಾದ ಸರಪಳಿಯಂತಾದ
ನರತಂತುಗಳ
ಅದೇಗೆ
ಬಿಗಿದು ಕಟ್ಟಲಿ
ಫಕೀರ
ಸುರುಳಿ ಸುರುಳಿಯಲಿ ಕಳೆದುಹೋದ
ಆತ್ಮದ ಬೂದಿಯ ಅರಸುವ ಮುನ್ನವೇ
ಚಡಪಡಿಸುವ ತಂಗಾಳಿಯ
ಕೆನ್ನೆಯನ್ನಾದರೂ
ಚುಂಬಿಸುವೆಯಾ?
ತುಸು ಸಾಂತ್ವನದ
ನುಡಿಗಳನ್ನ
ಅರುಹಿ
ಆದಿ
ಅನಾದಿಯ
ನೆನಪಿಸಲೊಮ್ಮೆ
ಭಿಕ್ಷಾಪಾತ್ರೆಯ ಹೊತ್ತ
ನಿನಾದಿಸುವ ಕಾಲ್ಗೆಜ್ಜೆಗಳ
ನಾದವ ನಾದುತ್ತ
ಉಕ್ಕುವ ಕಣ್ಣೀರ
ಕುಡಿಯಲು ಬಾ
ಫಕೀರ
ಮುಸ್ಸಂಜೆಯ ರಂಗೇರುವ ಬಣ್ಣವ ಧರಿಸಿಹ
ತೀರದ ನೆನಹಿನೊಳು
ಮಿಂದೇಳಲು
ಶೂನ್ಯದ ಮೆಟ್ಟಿಲುಗಳ
ಬೆವರ ಹನಿಗಳ ಬೆಳಕಲಿ
ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


