ಭದ್ರ ಬಂದವನೇ ಕೈಯ್ಯಲ್ಲಿದ್ದ ಪುಟ್ಟ ಬುಡುಬುಡಿಕೆಯನ್ನು ಚೆಡ್ಡಿ ಜೇಬೊಳಕ್ಕೆ ತುರುಕಿಕೊಂಡು `ಎದ್ದಾಳಿ ಮತ್ತೆ ಬೇಗ’ ಅಂತ ನಮ್ಮನ್ನು ಏಳಿಸಿಕೊಂಡು ಶೆಟ್ಟೀಕೆರೆಯ ಕೆರೆಯ ಅಂಗಳಕ್ಕೆ ಕರೆದೊಯ್ದು ಅಲ್ಲಿ ತಾವರೆ ಬೀಜಗಳನ್ನು ಹುಡುಕತೊಡಗಿದ. ಭದ್ರನೊಂದಿಗೆ ನಾವೂ ಕೈ ಜೋಡಿಸಿದೆವು. ಕೆರೆಯ ಅಂಗಳದಲ್ಲಿ ಬಿಟ್ಟಿದ್ದ ಬಿರಿಗಳ ನಡುವಲ್ಲಿ ಗೋಚರಿಸುತ್ತಿದ್ದ ತಾವರೆ ಬೀಜಗಳನ್ನು ಮೂವರೂ ಜೇಬಿಗಿಳಿಕೊಂಡು ಮತ್ತೆ ಮಂಚಿಗೆಯತ್ತ ಬಂದೆವು. ಭದ್ರ ಸುತ್ತಲೂ ಸಿಕ್ಕಿದ ಪುರಲೆಗಳನ್ನು ಒಂದೆಡೆ ಗುಪ್ಪೆ ಹಾಕಿ ಬೆಂಕಿ ಹಚ್ಚಿ ತಾವರೆ ಬೀಜಗಳನ್ನು ಆ ಬೆಂಕಿಗೆ ಹಾಕಿ ಸುಟ್ಟ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಮೂರನೆಯ ಕಂತು
ಚಿಕ್ಕಂದಿನ ನಮ್ಮ ಹಲವು ಬೆಳಗುಗಳು ದೊಂಬಿದಾಸರ ಸರ್ಕಸ್‌ನೊಂದಿಗೆ ಮೊದಲಾಗುತ್ತಿದ್ದವು. ಅದು ಸೂರ್ಯ ಆಗಿನ್ನೂ ಎದ್ದು ಪಿಸುರುಗಣ್ಣುಗಳನ್ನು ಉಜ್ಜಿಕೊಳ್ಳುತ್ತಿದ್ದಂಥ ಹೊತ್ತು. ಜನ ಹೊಲ, ತೋಟಗಳನ್ನು ಅಡ್ಡಾಡಿಕೊಂಡು ಬರುತ್ತಿದ್ದಂಥ ಹೊತ್ತು. ದನಕರುಗಳನ್ನು ಆಚೆ ಕಟ್ಟಿ ಕೊಟ್ಟಿಗೆಗಳನ್ನು ಗುಡಿಸುತ್ತಿದ್ದಂಥ ಹೊತ್ತು. ಇಲ್ಲಾ ಅಂದರೆ ರೊಪ್ಪಗಳಿಂದ ಕುರಿ, ಮೇಕೆಗಳನ್ನು ಮೇಯಲು ಬಿಡುವ ಮುಂಚೆ ಹಗಲಿನಲ್ಲಿ ಕೂಡುವ ತಡಿಕೆ ಗೂಡುಗಳಿಗೆ ಅಟ್ಟುತ್ತಿದ್ದಂಥ ಹೊತ್ತು. ಅಂಥ ಹೊತ್ತಲ್ಲಿ ದೊಂಬಿ ದಾಸರ `ತಂತಿ ಮೇಲೆ ನಡೆಯುವ ಸರ್ಕಸ್’ ಶುರುವಾಗಿಬಿಡುತ್ತಿತ್ತು. ಕೊಂಚ ತಡ ಮಾಡಿದರೆ ಹಳ್ಳಿಗರು ತಂತಮ್ಮ ರೈತಾಪಿ ಬದುಕಿನತ್ತ ಹೊರಟುಬಿಡುತ್ತಾರೆ ಅನ್ನುವ ಆತಂಕ ಸರ್ಕಸ್ ಆಟ ಹಾಕಲು ಬಂದವರಿಗೆ ಇರುತ್ತಿತ್ತು. ಅಲೆಮಾರಿಗಳು ನಮ್ಮೂರ ಹತ್ತಿರದಲ್ಲಿ ಇರುತ್ತಿದ್ದ ದಿನಗಳಲ್ಲಿ ತಿಂಗಳು ಎರಡು ತಿಂಗಳಿಗೊಮ್ಮೆ ಊರೊಳಗೆ ಇವರ ಆಟ ಇದ್ದೇ ಇರುತ್ತಿತ್ತು. ಅವರು ಬಂದದ್ದು ಗೊತ್ತಾಗಿದ್ದೇ ತಡ ಊರಂಥ ಊರ ಮಕ್ಕಳೆಲ್ಲಾ ಅತ್ತ ದೌಡಾಯಿಸುತ್ತಿದ್ದೆವು. ನಂತರ ದೊಡ್ಡವರೂ ಬಂದು ಕೂಡಿಕೊಳ್ಳುತ್ತಿದ್ದರು. ಬಹುಮಟ್ಟಿಗೆ ಊರ ನಡುವಿರುವ ನಮ್ಮೂರಿನ ಪ್ರೈಮರಿ ಸ್ಕೂಲಿನ ಪಕ್ಕದಲ್ಲಿದ್ದ ಬಯಲಿನಲ್ಲಿ ಈ ಆಟ ನಡೆಯುತ್ತಿತ್ತು. ಪುಟ್ಟ ಮಕ್ಕಳು ತಂತಿಯ ಮೇಲೆ ಎರಡೂ ಕೈಗಳನ್ನು ಬಿಟ್ಟುಕೊಂಡು ಕೆಲವು ಸಾರ್ತಿ ಓಡಾಡಿ, ಮತ್ತೆ ಕೆಲವು ಸಾರ್ತಿ ಅದೇ ತಂತಿಯ ಮೇಲೆ ಟ್ಯೂಬ್ ಇಲ್ಲದ ಸೈಕಲ್ ಚಕ್ರವೊಂದನ್ನು ತುಳುಕಂಡು ಓಡಾಡುತ್ತಿದ್ದರು. ಅದು ನೋಡುತ್ತಿದ್ದ ಮಕ್ಕಳ ಎದೆಗಳನ್ನು ಜಿಲ್ಲೆನಿಸುತ್ತಿತ್ತು. ಮಕ್ಕಳೆಲ್ಲಾ ಬಿಟ್ಟ ಬಾಯಿ ಬಿಟುಕಂಡು, ಕಣ್ಣುಗಳನ್ನು ಅಗಲಿಸಿಕೊಂಡು ಅವರನ್ನೇ ಕಣ್ತುಂಬಿಕೊಳ್ಳುತ್ತಿದ್ದರು. ಪುಟಾಣಿ ಮಕ್ಕಳುಗಳ ಜತೆಗೆ ಸರ್ಕಸ್ಸಿನಲ್ಲಿ ದೊಡ್ಡವರುಗಳೂ ಮಾಡುತ್ತಿದ್ದ ಇತರೆ ಚಮತ್ಕಾರದ ಆಟಗಳನ್ನು ನೋಡುತ್ತಾ ನಮ್ಮೆಲ್ಲಾ ಕೆಲಸಗಳನ್ನು ಮರೆತು ಅವರು ಆಟ ನಿಲ್ಲಿಸುವವರೆಗೂ ನಿಂತುಬಿಡುತ್ತಿದ್ದೆವು. ಮುಗಿಯುತ್ತಲೇ ಒಂದೇಟಿಗೇ ಮನೆಗಳತ್ತ ಪೇರಿ ಕೀಳುತ್ತಿದ್ದೆವು. ಆಟ ಮುಗಿಸಿ ಅಲೆಮಾರಿ ಮಕ್ಕಳು ಮನೆಮನೆಗಳ ಎದುರು ಹೋಗಿ ನಿಲ್ಲುತ್ತಿದ್ದರು. ಮನೆಯವರು ಆಟೋ ಈಟೋ ತಂಗಳನ್ನೋ, ಪಾವೋ ಅಚ್ಚೇರೋ ರಾಗಿ, ಜೋಳಗಳನ್ನೋ, ಇಲ್ಲಾ ಕುಲ್ಟಪಲ್ಟ ಹಲಸಿನ ಕಾಯಿಯನ್ನೋ, ತೆಂಗಿನ ಕಾಯನ್ನೋ ಕೊಡುತ್ತಿದ್ದರು. ಅವರ ಹಿಂದಿರುತ್ತಿದ್ದ ದೊಡ್ಡವರು ಅವುಗಳನ್ನೆಲ್ಲಾ ಚೀಲವೊಂದಕ್ಕೆ ತುಂಬಿಕೊಳ್ಳುತ್ತಿದ್ದರು. ಹಿಂಗೆ ಸರ್ಕಸ್ಸಿನವರು ಊರಾಡಿ ಸಿಕ್ಕಿದ್ದನ್ನೆಲ್ಲಾ ತ್ಯಾಪೆ ಬಟ್ಟೆ ಬ್ಯಾಗುಗಳಿಗೆ ಸುರುಕೊಂಡು ಹೊರಡುವ ಹೊತ್ತಿಗೆ ನಾವುಗಳು ಸ್ಕೂಲಿಗೆ ತಯಾರಾಗಿ ಹೋಗುತ್ತಿದ್ದೆವು. ಆ ಮಕ್ಕಳು ತಮ್ಮ ಅಪ್ಪ ಅವ್ವಂದಿರ ಜತೆಗೆ ತಲೆಗಳ ಮೇಲೆ ಪುಟಾಣಿ ಗಂಟುಗಳನ್ನಿಟ್ಟುಕೊಂಡು ನಮ್ಮ ಸ್ಕೂಲಿನ ಬ್ಯಾಗುಗಳನ್ನೇ ನೋಡಿಕೊಂಡು ತಮ್ಮ ಗುಡಾರಗಳತ್ತ ಹೋಗುತ್ತಿದ್ದರು.
ಅವರ ಗುಡಾರಗಳು ನಮ್ಮೂರಿನ ಪಕ್ಕದ ಎರೆನೆತ್ತಿಯಲ್ಲಿರುತ್ತಿದ್ದವು. ಅಲ್ಲಿ ದೊಂಬಿ ದಾಸರಷ್ಟೇ ಅಲ್ಲದೆ ಬುಡುಬುಡಿಕೆ, ಹಂದಿ ಜೋಗಿ, ಶಿಳ್ಳೆಕ್ಯಾತ, ಹಕ್ಕಿಪಿಕ್ಕಿ, ಸುಡುಗಾಡು ಸಿದ್ದರು ಮುಂತಾದ ಕುಲೆಂಟು ಜಾತಿ ಅಲೆಮಾರಿಗಳ ಗುಡಾರಗಳೂ ಇರುತ್ತಿದ್ದವು. ಅವರು ಒಮ್ಮೆ ಅಲ್ಲಿಗೆ ಬಂದರೆ ನಾಲ್ಕೈದು ತಿಂಗಳು ಠಿಕಾಣಿ ಅಲ್ಲೇ ಇರುತ್ತಿತ್ತು. ಸುತ್ತಲ ಹಳ್ಳಿಗಳಲ್ಲಿ ಸುತ್ತುತ್ತಾ ಸೀರಣಿಗೆ, ಬಾಚಣಿಗೆ, ಪಿನ್ನ, ಪೀಪಿ, ಚೌಲಿ, ಜೇನು ತುಪ್ಪ, ಉಡದ ತುಪ್ಪ ಮುಂತಾದವುಗಳನ್ನು ಮಾರುತ್ತಿದ್ದರು. ಜತೆಗೆ ಸರ್ಕಸ್ ಮಾಡುವುದು, ಜಾದು ವಿದ್ಯೆ ಮಾಡುವುದು, ಉಳುಕು ತಿಕ್ಕುವುದು, ಶಾಸ್ತ್ರ ಹೇಳುವುದು, ನಾಟಿ ಔಷಧಿ ಕೊಡುವುದು ಮುಂತಾದವುಗಳನ್ನು ಮಾಡುತ್ತಾ ಆಟೀಟು ಕಾಸನ್ನೂ ಮಾಡಿಕೊಳ್ಳುತ್ತಿದ್ದರು. ಸಂಜೆಯಾಗುತ್ತಲೇ ತಿರುಗಿ ತಮ್ಮ ಗುಡಾರಗಳತ್ತ ಸೇರಿಕೊಳ್ಳುತ್ತಿದ್ದರು. ಸಂಜೆಯ ಅಮಲಿನ ಲೋಕದಲ್ಲಿ ಅವರುಗಳು ಹಾಡುತ್ತಿದ್ದ ಹಾಡುಗಳು, ಜಗಳಗಳು ಎರೆನೆತ್ತಿ ಕಡೆಯಿಂದ ಬೀಸುವ ಗಾಳಿಯಲ್ಲಿ ಕೆಲವೊಮ್ಮೆ ನಮ್ಮೂರಿಗೂ ಕೇಳುತ್ತಿದ್ದವು.
ನಾನು ಮತ್ತು ನನ್ನ ವಯಸ್ಸಿನ ಮಕ್ಕಳು ರಜಾ ದಿನಗಳಲ್ಲಿ ಜೀರಿಂಬೆಗಳನ್ನು ಅದರಲ್ಲೂ ಕೆಮ್ಮಣ್ಣು ಜೀರಿಂಬೆಗಳನ್ನು ಹುಡುಕಿಕೊಂಡು, ಮಗ್ಗಲು ಸೊಪ್ಪಿಗಾಗಿ, ದನಕರುಗಳನ್ನು ಮೇಸುವ ಸಲುವಾಗಿ ಖಾಯಮ್ಮಾಗಿ ಎರೆನೆತ್ತಿಯನ್ನು ಎಡತಾಕುತ್ತಿದೆವು. ಈ ಅಲೆಮಾರಿಗಳ ಗುಡಾರಗಳು ಇದ್ದರಂತೂ ಎರೆನೆತ್ತಿಯನ್ನು ಹತ್ತುತ್ತಲೇ ನಾವು ಆ ಗುಡಾರಗಳತ್ತ ಓಡುತ್ತಿದ್ದೆವು. ಥರಾವರಿ ಬಣ್ಣಗಳ, ಥರಾವರಿ ಬಟ್ಟೆಗಳಿಂದ ತ್ಯಾಪೆ ಹಾಕಿ ಹೊಲಿದಿರುತ್ತಿದ್ದ ಆ ಬಟ್ಟೆ ಗುಡಾರಗಳು ಕಾಡ ನಡುವೆ ಕಾವಿಗೆ ಕೂತ ಪುರಲೆ ಹಕ್ಕಿಗಳಂತೆ ಕಾಣುತ್ತಿದ್ದವು. ಗುಡಾರಗಳ ಸುತ್ತಲೂ ಕೋಳಿ, ನಾಯಿ, ಕತ್ತೆಗಳ ಹಿಂಡೇ ಇರುತ್ತಿತ್ತು. ಇವುಗಳ ಸಖರಾಗಿ ಮೈ ಮೇಲೆ ಒಂಚೂರು ಬಟ್ಟೆ ಇಲ್ಲದೆ ಬುಳ್ಳಗೆ ಪುಟಾಣಿ ಮಕ್ಕಳೂ ಇರುತ್ತಿದ್ದವು. ಗುಡಾರಗಳ ಮುಂದೆ ಮೂರು ಕಲ್ಲು ಹೂಡಿ ಮಾಡಿಕೊಂಡಿದ್ದ ಒಲೆಗಳಲ್ಲಿ ಉರಿಯುತ್ತಿದ್ದ ಬೆಂಕಿಯಿಂದ ಏಳುತ್ತಿದ್ದ ಹೊಗೆ, ಒಲೆಯ ಮೇಲಿನ ಪಾತ್ರೆಗಳಿಂದ ಹೊಮ್ಮುತ್ತಿದ್ದ ಅಡಿಗೆಯ ಘಮ ದೂರದಿಂದಲೇ ನಮ್ಮನ್ನು ಎಟಕಿಸಿಕೊಳ್ಳುತ್ತಿತ್ತು. ಹತ್ತಿರ ಹೋದಂತೆ ಅವರುಗಳು ಆಡುತ್ತಿದ್ದ ನಮಗರಿಯದ ಭಾಷೆ, ದೊಡ್ಡವರ ವೇಷಭೂಷಣ ಮುಂತಾದವುಗಳು ನಮ್ಮನ್ನು ಅಚ್ಚರಿಗೆ ದೂಡುತ್ತಿದ್ದವು. ಕೆಲವೊಮ್ಮೆ ನಾವು ಬಂದಿದ್ದ ಕೆಲಸಗಳನ್ನು ಮರೆತು ಅಲ್ಲೇ ಆ ಮಕ್ಕಳ ಜತೆ ಆಟ ಆಡಿಕೊಂಡು ಸಂಜೆಯವರೆಗೂ ಕಾಲ ಕಳೆದುಬಿಡುತ್ತಿದ್ದೆವು. ಜೀರಿಂಬೆಗಳಿಗಾಗೋ ಇಲ್ಲಾ ಮಗ್ಗಲು ಸೊಪ್ಪಿಗಾಗಿ ಬಂದಿದ್ದರೆ ಅದು ಹೆಂಗೋ ನಡೆದು ಹೋಗುತ್ತಿತ್ತು. ಅವುಗಳ ಬದಲು ದನ ಎಮ್ಮೆಗಳಳ ಸಲುವಾಗಿ ಬಂದಿದ್ದರೆ ಪರಿಸ್ಥಿತಿ ಗಂಭೀರವಾಗಿಬಿಡುತ್ತಿತ್ತು. ಏಕೆಂದರೆ ಬಂದಾಗ ಮೇಯಲು ಬಿಟ್ಟ ದನಗಳ ದ್ಯಾಸವೇ ನಮಗೆ ಬಾರದೇ ಹೋಗುತ್ತಿತ್ತು. ಪರಿಣಾಮವಾಗಿ ಎರೆನೆತ್ತಿಯ ಆಸುಪಾಸಿನಲ್ಲಿದ್ದ ಹೊಲಗಳಿಗೆ ಅವು ಮುಗಿಬೀಳುತ್ತಿದ್ದವು. ಅದು ಮನೆಯವರಿಗೂ ತಲುಪಿ ಅವರುಗಳು ನಮ್ಮ ಬರುವಿಕೆಗಾಗಿಯೇ ಕಾದಿರುತ್ತಿದ್ದರು.
ಆ ಗುಡಾರಗಳ ಲೋಕ ನನ್ನಂಥ ಮಕ್ಕಳ ಎದೆಗೆ ತುಂಬಾ ಹತ್ತಿರವಾಗುತ್ತಿದ್ದದ್ದು- ಅಲ್ಲಿನ ಯಾವ ಮಕ್ಕಳಿಗೂ ಸ್ಕೂಲಿಗೆ ಹೋಗುವ ತಗಾದೆ ಇರುತ್ತಿರಲಿಲ್ಲ. ಅಪ್ಪ ಅವ್ವಂದಿರ `ಓದಿಕೋ’ ಅನ್ನುವ ಒತ್ತಾಯ ಇರುತ್ತಿರಲಿಲ್ಲ. ಮಕ್ಕಳೆಲ್ಲಾ ಕೂಡಿ ತಮಗಿಷ್ಟ ಬಂದಂತೆ ಆಡುತ್ತಾ ಕಾಲಕಳೆಯುತ್ತಿದ್ದ ಪರಿ ನಮಗೆ ಈ ಸ್ಕೂಲು ಅನ್ನೋದು ಮಕ್ಕಳಿಗೆ ಕಾಟ ಕೊಡುವ ಸಲುವಾಗಿಯೇ ಇರುವ ಜೈಲಿನಂತೆ ಅನಿಸುತ್ತಿತ್ತು. ಅಲ್ಲಿನ ಗಿಡ ಮರಗಳು, ಹೂವಿನ ಕಾಲದಲ್ಲಿ ಅವುಗಳು ಬಿಡುತ್ತಿದ್ದ ಹೂಗಳ ಘಮಲು, ಅವುಗಳಲ್ಲಿ ಕೂತು ಕೂಗುತ್ತಿದ್ದ ಥರಾವರಿ ಹಕ್ಕಿಗಳು ಹಿಂಗೆ ಅಲ್ಲಿನ ಸಕಲವೂ ನಮಗೆ ಮುದ ಕೊಡುವ ಸಂಗತಿಗಳಾಗಿದ್ದವು. ಹಂಗಾಗಿ ಅಲ್ಲಿಗೆ ಹೋಗುವ ಯಾವುದೇ ಅವಕಾಶವನ್ನು ನಾನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಇಂಥ ಹೊತ್ತಲ್ಲಿ ಅಲ್ಲಿ ನನಗೆ ಭದ್ರಕಾಳ ಮತ್ತು ಮುನಿವೆಂಕಟ ಅನ್ನುವ ನನದೇ ಪ್ರಾಯದ ಇಬ್ಬರು ಹುಡುಗರ ಗೆಳೆತನವಾಯ್ತು. ಭದ್ರಕಾಳ ಯಾವಾಗಲೂ ಮುಂಗುಸಿಯೊಂದನ್ನು ಜತೆಗಾಕಿಕೊಂಡಿರುತ್ತಿದ್ದ. ಎಲ್ಲಿಗೇ ಹೋದರೂ ಅದವನ ಜತೆ ಇರುತ್ತಿತ್ತು. ಕೆಳಗೆ ಬಿಟ್ಟರೆ ಅವನ ಸನಿಹದಲ್ಲೇ ಸುಳಿದಾಡುತ್ತಿತ್ತು. ಹಂಗಾಗಿ ನಾವು ಅವನನ್ನ ಮುಂಗುಸಿ ಭದ್ರ ಅಂತ ಕರೆಯುತ್ತಿದ್ದೆವು.

ನನ್ನ ಈ ಇಬ್ಬರು ಗೆಳೆಯರು ಯಾವತ್ತೂ ಸ್ಕೂಲಿನ ಮುಖವನ್ನೇ ನೋಡಿರಲಿಲ್ಲ. ಇವರಷ್ಟೇ ಅಲ್ಲ ಅಲ್ಲಿದ್ದ ಯಾವ ಮಕ್ಕಳಿಗೂ ಅದೇನೆಂದು ಗೊತ್ತೇ ಇರಲಿಲ್ಲ. ಅವರ ಅಪ್ಪ ಅವ್ವಂದಿರುಗಳಿಗೂ ಆ ಬಗ್ಗೆ ನಿಗಾ ಇರಲಿಲ್ಲ. ಭದ್ರಕಾಳ ಈಜುವುದರಲ್ಲಿ ಎತ್ತಿದ ಕೈ. ನೀರಿಗೆ ಬಿದ್ದವನೇ ಗುಳುಮುಳು ಹಕ್ಕಿಯಂತೆ ಮುಳುಗುತ್ತಾ ತೇಲುತ್ತಾ ಈಜುತ್ತಿದ್ದ. ಇನ್ನು ಮುನಿವೆಂಕಟ ಜೇನು ಹುಡುಕುವುದರಲ್ಲಿ ಮತ್ತು ಮರ ಹತ್ತುವುದರಲ್ಲಿ ಬಲು ಚೂಟಿಯಾಗಿದ್ದ. ಅವನೇ ನನಗೆ ಮತ್ತು ನನ್ನ ಗೆಳೆಯರಿಗೆ ಜೇನು ಬಿಚ್ಚುವುದನ್ನು ಕಲಿಸಿಕೊಟ್ಟಿದ್ದು. ಅ ವಯಸ್ಸಿಗೇ ಅವರು ಅವರ ಸುತ್ತ ಮುತ್ತಲ ಮರ ಗಿಡಗಳ ನಡುವೆ ಇರುತ್ತಿದ್ದ ಗಿಡಮೂಲಿಕೆಗಳನ್ನು ಸಲೀಸಾಗಿ ಕಂಡುಕೊಳ್ಳುತ್ತಿದ್ದರು. ಮೊಲದಂಥ ಪ್ರಾಣಿಯನ್ನು ಬೇಟೆಯಾಡುತ್ತಿದ್ದರು. ಸಾಲದ್ದಕ್ಕೆ ತಮ್ಮ ಸುತ್ತಲೂ ಇದ್ದ ಮರಗಿಡಗಳನ್ನು ಇಂಥದ್ದೇ ಅಂತ ಹೇಳುತ್ತಿದ್ದರು. ಕೂಗಿನಿಂದಲೇ ಇಂಥದ್ದೇ ಹಕ್ಕಿ ಅಂತ ಗುರುತಿಸುತ್ತಿದ್ದರು. ಕ್ಷಣಾರ್ಧದಲ್ಲಿ ಎಂಥದೇ ಮರವನ್ನು ಸಲೀಸಾಗಿ ಹತ್ತಿಬಿಡುತ್ತಿದ್ದರು. ನಮಗೆ ಒಂದೆರಡು ಅಕ್ಷರಗಳು ಗೊತ್ತಿದ್ದವು ಅಷ್ಟೇ. ಇವೆಲ್ಲವನ್ನೂ ಕಲಿಸದ ಸ್ಕೂಲು ಅದ್ಯಾವ ಸೀಮೆಯ ಸ್ಕೂಲು ಅಂತ ನನಗೆ ಆವಾಗ ಅನ್ನಿಸುತ್ತಿದ್ದಂತೆ ಈಗಲೂ ಅನಿಸುತ್ತದೆ.
ಈ ಕಾರಣಕ್ಕೇ ಮುಂಗುಸಿ ಭದ್ರ ಮತ್ತು ಮುನಿವೆಂಕಟ ಬಲು ಬೇಗ ಹತ್ತಿರದ ಗೆಳೆರಾಗಿಬಿಟ್ಟಿದ್ದರು. ಅವರಿಗೆ ಬರಬೇಕು ಅನಿಸಿದಾಗಲೆಲ್ಲ ನನ್ನ ಮತ್ತು ನನ್ನ ಗೆಳೆಯರ ಮನೆಯತ್ತ ಬರುತ್ತಿದ್ದರು. ನಾನು ಹೊಲದಲ್ಲಿದ್ದರೆ ಅಲ್ಲಿಗೇ ಬರುತ್ತಿದ್ದರು. ಅವರು ಒಂದು ಕಣಗಾಲವನ್ನು ಮುಗಿಸಿ ಎರೆನೆತ್ತಿಯಿಂದ ಗುಡಾರಗಳನ್ನು ಬಿಚ್ಚಿದರೆ ಮತ್ತೆ ಬರುತ್ತಿದ್ದದ್ದು ಮುಂದಿನ ವರ್ಷದ ಕಣಗಾಲಕ್ಕೇ.
ಆ ವರ್ಷ ನೆನಪಿಲ್ಲ. ಬರಗಾಲ ಬಂದಿತ್ತು. ನಮ್ಮ ತೋಟದ ಪಕ್ಕದ ಅಜ್ಜನ ಕೆರೆಯಲ್ಲಿ ನೀರುಬಿಡತೊಡಗಿತ್ತು. ಅಲ್ಲಲ್ಲಿ ಕೆಲವು ಗುಂಡಿಗಳಲ್ಲಿ ಮಾತ್ರ ನೀರಿತ್ತು. ಆ ಜಾಗ ಬಿಟ್ಟು ಮಿಕ್ಕ ಜಾಗದಲ್ಲಿ ನನ್ನೂರಿನವರೂ ಸೇರಿದಂತೆ ಅಕ್ಕಪಕ್ಕದವರು ತಮ್ಮ ಶಕ್ತಾನುಸಾರ ಜಾಗವನ್ನು ಹಿಡಿದುಕೊಂಡು, ಅದನ್ನು ಉತ್ತು, ಆ ಉತ್ತ ಜಾಗಕ್ಕೆ ಜೋಳ ಮತ್ತು ಬುಡ್ಡುಗಡಲೆಯನ್ನು ಹಾಕಿದ್ದರು. ನನ್ನ ಮನೆಯಲ್ಲೂ ಒಂದಷ್ಟು ಜಾಗ ಹಿಡಿದು ಒಂದಷ್ಟು ಜೋಳ ಮತ್ತು ಬುಡ್ಡುಗಡಲೆಯನ್ನು ಹಾಕಿದ್ದರು. ದಿನೊಪ್ಪತ್ತು ಅನ್ನುವುದರೊಳಗೆ ಜೋಳ ಮತ್ತು ಬುಡ್ಡುಗಡಲೆಗಳು ಮೊಳಕೆಯೊಡೆದು ಕೆರೆಯ ಬಯಲಲ್ಲಿ ಹಸಿರಿನ ಹಾಸು ಹಾಸಿದ್ದವು. ತಿಂಗಳೊಪ್ಪತ್ತಿಗೆಲ್ಲಾ ಜೋಳ ಆಳೆತ್ತರಕ್ಕೆ ಬೆಳೆದಿತ್ತು. ಮತ್ತಷ್ಟು ದಿನಕ್ಕೆ ದುಂಡಾಡತೊಡಗಿತ್ತು. ಬುಡ್ಡುಗಡಲೆ ಗೇಣುದ್ದಕ್ಕೆ ಬೆಳೆದು ಸೊಗಡು ಬೀರತೊಡಗಿತ್ತು. ಯಾವಾಗ ಜೋಳ ತೆನೆಯೊಡೆದು ಹಾಲುಗಾಯಿ ಹಿಡಿಯಿತೋ, ಬುಡ್ಡುಗಡಲೆ ಚೊಟ್ಟು ಹಿಡಿದವೋ ಹಕ್ಕಿಗಳು ಅವುಗಳಿಗೆ ಮುಗಿಬಿದ್ದು ಬಕ್ಕಾಬಾರಿಸತೊಡಗಿದ್ದವು. ಹಂಗಾಗಿ ಬೆಳಗು ಬೈಗುಗಳಲ್ಲಿ ಹಕ್ಕಿಗಳನ್ನು ಓಡಿಸುವ ಕಾಯಕ ಶುರುವಾಗಿತ್ತು. ` ಹಾ ಹೋ, ಹಾ ಹೋ’ಅನ್ನುತ್ತಾ ಹಳೆಯ ಡಬ್ಬಗಳನ್ನು ಜೋರಾಗಿ ಬಡಿದು ಸದ್ದು ಮಾಡುತ್ತಾ ಹೆದರಿಸಿ ಓಡಿಸುತ್ತಿದ್ದ ಕೂಗುಗಳು ಕೆರೆಯ ಅಂಗಳದ ತುಂಬೆಲ್ಲಾ ಮರುದನಿಗೈಯ್ಯುತ್ತಿದ್ದವು. ಇದಕ್ಕಾಗಿ ಮಕ್ಕಳನ್ನು ಎದ್ದ ಕೂಡಲೇ `ಹೋಗು ಹಕ್ಕಿ ಓಡಿಸಿ ಬಾ’ ಅಂತ ಸ್ಕೂಲಿಗೆ ಹೋಗೋಗಂಟ ಕೆರೆಯೊಳಕ್ಕೆ ಕಳಿಸುತ್ತಿದ್ದರು. ಮಕ್ಕಳಿಗೋ ಇದೊಂದು ತುಂಬಾ ಖುಷಿಯ ಸಂಗತಿಯಾಗಿದ್ದರಿಂದ ಮನೆಯವರು ಹೇಳುವುದಕ್ಕೆ ಮುನ್ನವೇ ಕೆರೆಯ ಅಂಗಳಕ್ಕೆ ಓಟ ಕೀಳುತ್ತಿದ್ದೆವು. ಹಂಗೂ ಕೆಲವು ಹಕ್ಕಿಗಳು ಮಂಡಬಿದ್ದು, ಎಷ್ಟು ಬಡಿದುಕೊಂಡರೂ ಎಷ್ಟು ಕೂಗಿಕೊಂಡರೂ ಕ್ಯಾರೆ ಅನ್ನದೆ ಮರೆಯಲ್ಲಿ ಕೂತು ತಮ್ಮ ತಿನ್ನುವ ಕಾಯಕವನ್ನು ಸಲೀಸುಗೊಳಿಸಿಕೊಳ್ಳುತ್ತಿದ್ದವು. ಈ ನೆಪದಲ್ಲಿ ಕೆರೆಯ ಅಗಲಕೂ ಅಲ್ಲಲ್ಲಿ ಮಂಚಿಗೆಗಳು ಎದ್ದವು. ಮಂಚಿಗೆಯ ಮೇಲೆ ಹತ್ತಿ ನೋಡಿದರೆ ಹಕ್ಕಿಗಳು ಸಿಕ್ಕಿ ಬೀಳುತ್ತಿದ್ದವು. ಜೋಳದ ತೆನೆಗಳು ಬಲಿಯತೊಡಗಿದಂತೆ ರಾತ್ರಿಯ ಕಾವಲೂ ಶುರುವಾಗಿತ್ತು.
ನಾನು ಮತ್ತು ನಮ್ಮ ಮನೆಯಲ್ಲಿ ಓದಿಕೊಂಡಿದ್ದ ನೆಂಟರ ಹುಡುಗ ಮೂರ್ತಿ ಇಬ್ಬರೂ ಕೂಡಿ ತಕ್ಕ ಮಟ್ಟಿನ ಒಂದು ಮಂಚಿಗೆಯನ್ನು ಕಟ್ಟಿಕೊಂಡಿದ್ದೆವು. ಸ್ಕೂಲಿಗೆ ಹೋಗೋಕೂ ಮುನ್ನ ಸ್ಕೂಲಿನಿಂದ ಬಂದ ಮೇಲೆ ನಾವಿಬ್ಬರೂ ಊರೊಳಕ್ಕೆ ಆಟ ಆಡಲು ಹೋಗುವುದನ್ನೂ ಬಿಟ್ಟು ಮಂಚಿಗೆಯತ್ತ ಹೋಗುತ್ತಿದ್ದೆವು. ಯಾವಾಗ ರಾತ್ರಿ ವೇಳೆ ಜೋಳ ಮತ್ತು ಬುಡ್ಡುಗಡಲೆಯನ್ನು ಕಾಯಲು ಶುರು ಮಾಡಿದರೋ ಮನೆಯಲ್ಲಿ ನಾವೂ ಕಾಡಿಬೇಡಿ ರಾತ್ರಿ ಪಾಳಯಕ್ಕೆ ಒಪ್ಪಿಸಿದ್ದೆವು. ನಮ್ಮಂತೆ ನನ್ನ ವಾರಿಗೆಯವರೂ ಕಾವಲಿಗೆ ಬರುತ್ತಿದ್ದರು. ನಿದ್ದೆ ಹತ್ತುವವರೆಗೂ ಅವರೊಡಗೂಡಿ ನಂತರ ಮಂಚಿಗೆಯನ್ನು ಹತ್ತಿದರೆ ಮತ್ತೆ ಎಚ್ಚರ ಆಗುತ್ತಿದ್ದದ್ದು ಬೆಳಕರಿದ ಮೇಲೆಯೇ.
ಅವತ್ತು ಒಂದಿನ. ಹಿಂಗೆ ಜೋಳ ಕಾಯುವ ಸಲುವಾಗಿ ನಾನು ಮೂರ್ತಿ ಹೊರಡಲು ತಯಾರಾಗುತ್ತಿದ್ದೆವು. ಅಷ್ಟೊತ್ತಿಗೆ ಸರಿಯಾಗಿ ಮುಂಗುಸಿ ಭದ್ರ ಮತ್ತು ಮುನಿವೆಂಕಟ ನಮ್ಮ ತೋಟದ ಮನೆಯತ್ತ ಬಂದರು. ಮುಂಗುಸಿ ಭದ್ರನ ಕೈಯ್ಯಲ್ಲಿದ್ದ ಮುಂಗುಸಿ ಮುಂದಕ್ಕೆ ಮೂತಿ ಹಾಕಿಕೊಂಡು ಸುತ್ತಲೂ ದಿಟ್ಟಿಸುತ್ತಿತ್ತು. ಮುನಿವೆಂಕಟನ ಕೈಯ್ಯಲ್ಲಿ ಚಿಟ್ಟು ಜೇನಿನ ಹುಟ್ಟಿಯೊಂದಿತ್ತು. ಅದರಿಂದ ಒಂದೊಂದೇ ಹನಿ ಜೇನು ತುಪ್ಪ ತೊಟ್ಟಿಕ್ಕುತ್ತಿತ್ತು. ಅದನ್ನು ಕಾಣುತ್ತಲೇ ಮೂರ್ತಿ ಒಳ ಓಡಿದವನೇ ಕಾಯಿ ತುರಿದುಕೊಂಡು ಒಂದು ಪುಟ್ಟ ತಟ್ಟೆಗೆ ಹಾಕಿಕೊಂಡು, ಒಂದೆರಡು ಉಂಡೆ ಬೆಲ್ಲವನ್ನು ಕಾಣದಂತೆ ಜೇಬಿಗಿಳಿಸಿಕೊಂಡು ಬಂದ. ನಾನು ಅವರಿಬ್ಬರನ್ನೂ ನಮ್ಮ ಜೊತೆ ಕೆರೆಯೊಳಕ್ಕೆ ಜೋಳ ಕಾಯಲು ಬರ್ತೀರಾ ಅಂತ ಕೇಳಿದೆ. ಇಬ್ಬರೂ ಸಲೀಸಾಗಿ ಒಪ್ಪಿಕೊಂಡರು. ಅವತ್ತು ನಾವು ನಾಲ್ವರು ಮಂಚಿಗೆಯನ್ನು ತಲುಪುವ ಹೊತ್ತಿಗೆ ಮೂಡಲಲ್ಲಿ ಚಂದ್ರ ಮುಖ ತೋರಿಸುತ್ತಿದ್ದ. ಇಬ್ಬರು ಮಲಗುವಂತಿದ್ದ ಮಂಚಿಗೆಗೆ ನಾಲ್ವರೂ ಹತ್ತಿ, ಮುನಿವೆಂಕಟನ ಕೈಲಿದ್ದ ಜೇನಿಗೆ ಬೆಲ್ಲ ಕಾಯಿ ತುರಿಯನ್ನು ಹಾಕಿ ತಿಂದ ಆ ಚಣ ಈ ಚಣಕ್ಕೂ ಬಾಯಲ್ಲಿ ನೀರೂರಿಸುತ್ತದೆ.
ಮುನಿವೆಂಕಟ ಮತ್ತು ಮುಂಗುಸಿ ಭದ್ರನಿಗೆ ಇಂಥ ಇರುಳುಗಳು ಹೊಸದೇನೂ ಅಲ್ಲದಿದ್ದರೂ ನಮಗೆ ಅವರಿಬ್ಬರೂ ನಮ್ಮ ಜತೆ ಇದ್ದದ್ದು ತುಂಬಾ ಪುಳಕ ಹುಟ್ಟಿಸಿತ್ತು. ನಾವು ಅದೂ ಇದೂ ಮಾತಾಡಿ ಮುಗಿಸಿ ನಮ್ಮನ್ನು ನಿದ್ದೆ ಅಮುಕಿಕೊಳ್ಳುವ ಹೊತ್ತಿಗೆ ಮೇಲೇರಿ ಬಂದಿದ್ದ ಚಂದ್ರನಿಗೆ ಪ್ರಾಯ ಬಂದಿತ್ತು. ಕೆರೆಯೊಳಗಣ ಜೋಳದ ಹೊಲಗಳ ನಡುವಿನ ಕಾಲು ದಾರಿಗಳು, ತೂಗಿ ತೊನೆಯುತ್ತಿದ್ದ ಜೋಳದ ತೆನೆಗಳು ಚಂದಿರನ ಬೆಳಕಲ್ಲಿ ಬೆಳಗುತ್ತಿದ್ದವು. ಬುಡ್ಡುಗಡಲೆಯ ಸೊಗಡು ತಂಗಾಳಿಯಲ್ಲಿ ಹಿತವಾಗಿ ತೀಡುತ್ತಿತ್ತು. ನಮ್ಮ ಪಕ್ಕದ ಹಾಳಿನಲ್ಲಿ ಸೀಬಿಗಿಡದ ಕೆಳಗೆ ಮಲಗಿ ನಮ್ಮನ್ನು ಹಿಡಿದುಕೊಟ್ಟಿದ್ದ ಮುದುಕನ ಮಂಚಿಗೆಯಿತ್ತು. ಆ ಮುದುಕನ ಮನೆಯವರು ಊಟ ತಿಂಡಿಗಳನ್ನು ಅಲ್ಲಿಗೆ ತಂದು ಕೊಡುತ್ತಿದ್ದರು. ಮುದುಕ ಕಾಟಾಚಾರಕ್ಕೆ `ಹಾ ಹೋ’ ಅಂತ ಕೂಗುತ್ತಿದ್ದ. ಅದು ಅವನಿಗೆ ಬಿಟ್ಟರೆ ಹಕ್ಕಿಗಳಿರಲಿ ಪಕ್ಕದಲ್ಲಿದ್ದ ನಮಗೇ ಕೇಳುತ್ತಿರಲಿಲ್ಲ. ನಮಗೆ ಕೇಳುತ್ತಿದ್ದದ್ದು ಅವನ ದಡಿ ಗೊರಕೆಗಳು ಮಾತ್ರ. ಇಬ್ಬರು ಮಲಗುವ ಮಂಚಿಗೆಯಲ್ಲಿ ಮುಂಗುಸಿ ಭದ್ರನ ಮುಂಗುಸಿಯೂ ಸೇರಿ ಐವರು ಮಲಗಿದೆವು. ಗಾಢ ನಿದ್ರೆ. ಯಾವುದೋ ಚಂದದ ಕನಸು. ಇದ್ದಕ್ಕಿದ್ದಂತೆ ಬುಡುಬುಡಿಕೆಯ ಸದ್ದು ನಿದಿರೆ ಮತ್ತು ಕನಸಿಗೆ ಒಮ್ಮೆಗೇ ಕಲ್ಲಾಕಿತು. ಬುಡುಬುಡಿಕೆಯ ಸದ್ದಿನ ಜತೆಗೆ `ಹಾಲಕ್ಕಿ ನುಡಿತೈತೆ ಸ್ವಾಮಿ’ ಅನ್ನುವ ಮಾತುಗಳು. ಚಕ್ಕನೆ ಎಚ್ಚರವಾಯ್ತು. ಮೈ ನಡುಗಿಹೋಯ್ತು. ಮುಖದ ತುಂಬಾ ಹೊದ್ದಿದ್ದ ರಗ್ಗನ್ನು ಕೊಂಚ ವಾರಾಸೆ ಮಾಡಿ ನೋಡಿದರೆ ಮೂವರೇ ಇದ್ದೆವು. ಕೊನೆಯಲ್ಲಿ ಮಲಗಿದ್ದ ಮುಂಗುಸಿ ಭದ್ರ ನಾಪತ್ತೆಯಾಗಿದ್ದ. ಮುಂಗುಸಿಯೂ ಇರಲಿಲ್ಲ. ಆ ಸದ್ದು ಮೂರ್ತಿಯನ್ನೂ ಎಚ್ಚರಗೊಳಿಸಿತ್ತು. ಆದರೆ ಅವನು ನನಗಿಂತ ರವಷ್ಟು ಧೈರ್ಯವಂತನಾಗಿದ್ದ. ಮುನಿವೆಂಕಟ ಮಾತ್ರ ಮಲಗೇ ಇದ್ದ. ಹಿಂಗೆ ಬುಡುಬುಡಿಕೆಯ ಸದ್ದು ಮಾಡುತ್ತಾ ಕೆರೆಯ ಕಾಲು ದಾರಿಗಳಲ್ಲಿ ಒಂದಷ್ಟೊತ್ತು ಅಡ್ಡಾಡಿದ ಮುಂಗುಸಿ ಭದ್ರ ಮಂಚಿಗೆಯ ಹತ್ತಿರಕ್ಕೆ ಬಂದ. ಅಷ್ಟೊತ್ತಿಗೇ ಮುನಿವೆಂಕಟನೂ ಎದ್ದು ಕೂತಿದ್ದ. ನಾನು ಮತ್ತು ಮೂರ್ತಿಯೊಳಗೆ ನೆಟುಗಂಡಿದ್ದ ಭಯ ಮತ್ತು ಅಚ್ಚರಿಗಳನ್ನು ಕಾಣುತ್ತಲೇ `ಆ ಭದ್ರ ಒಂದೊಂದು ದಿಸ ಆಟೋತ್ಗೆಯ ಎದ್ದು ಜಾವ ಕಟ್ಟೋದ ಕಲಿಯಾಕೆ, ಶಕುನ ಹೇಳಾದ ಕಲಿಯಾಕೆ ಹಕ್ಕಿಗಳ ಮಾತುಗಳ್ನ ಕೆಳಿಸ್ಕಣಾಕೆ ಅಂತ ಬುಡುಬಡಿಕೆ ಆಡಿಸ್ಕಂಡು ಹೋಗ್ತಾನೆ ಆಟೇಯಾ’ ಅಂದ. ನಮಗೇನೂ ಅರ್ಥವಾಗಲಿಲ್ಲ. ಇದಕ್ಕೂ ಮುಂಚೆ, ಒಂದಿನ. ಕೇವಲ ನಾನು ಮತ್ತು ಮೂರ್ತಿ ಮಂಚಿಗೆಯಲ್ಲಿ ಮಲಗಿದ್ದೆವು. ಸರೊತ್ತಿನಲ್ಲಿ ಇದ್ದಕ್ಕಿದ್ದಂತೆ ಕೆರೆಯ ಮಧ್ಯದ ಮಂಚಿಗೆಯೊಂದರೆಡೆಯಿಂದ ಜೋರು ಜಗಳ. ಗಲಾಟೆ ಕೇಳಿಸಿತ್ತು. ಇದರ ನಡುವೆ ಹೆಂಗಸೊಬ್ಬಳ ಜೋರು ಅಳುವಿನ ದನಿ. ಇಬ್ಬರೂ ಮಲಗಿದ್ದಲ್ಲೇ ನಡುಗಿದ್ದೆವು. ಕೊಂಚ ಹೊತ್ತಿಗೆಲ್ಲಾ ಆ ಸದ್ದು ನಿಂತುಹೋಗಿತ್ತು. ಎದ್ದು ಹೋಗಿ ಕೇಳಲು ಇರಲಿ, ಮಲಗಿದ್ದಲ್ಲಿಂದಲೇ ಕೂಗಿಕೊಳ್ಳಲೂ ಬಾಯಿ ಬಂದಿರಲಿಲ್ಲ. ಬೆಳಗ್ಗೆ ಎದ್ದ ಕೂಡಲೇ ನಮ್ಮ ಪಕ್ಕದ ಮಂಚಿಗೆಯ ದೊಡ್ಡವರೊಬ್ಬರನ್ನು ಕೇಳಿದೆ. `ಯಾವನೋ ಅಡ್ನಾಡಿ ನನ್ ಮಗ ಯಾವಳ್ನೋ ಕರ್ಕೊಂಡು ಬಂದಿದ್ನಂತೆ’ ಅಂದಿದ್ದರು ಆ ವ್ಯಕ್ತಿ. ನನಗೆ ತಳಬುಡ ತಿಳಿದಿರಲಿಲ್ಲ. ಹಂಗಂತ ಬೇರೊಬ್ಬರನ್ನು ಕೇಳುವ ಧೈರ್ಯವೂ ಬಂದಿರಲಿಲ್ಲ.
ಭದ್ರ ಬಂದವನೇ ಕೈಯ್ಯಲ್ಲಿದ್ದ ಪುಟ್ಟ ಬುಡುಬುಡಿಕೆಯನ್ನು ಚೆಡ್ಡಿ ಜೇಬೊಳಕ್ಕೆ ತುರುಕಿಕೊಂಡು `ಎದ್ದಾಳಿ ಮತ್ತೆ ಬೇಗ’ ಅಂತ ನಮ್ಮನ್ನು ಏಳಿಸಿಕೊಂಡು ಶೆಟ್ಟೀಕೆರೆಯ ಕೆರೆಯ ಅಂಗಳಕ್ಕೆ ಕರೆದೊಯ್ದು ಅಲ್ಲಿ ತಾವರೆ ಬೀಜಗಳನ್ನು ಹುಡುಕತೊಡಗಿದ. ಭದ್ರನೊಂದಿಗೆ ನಾವೂ ಕೈ ಜೋಡಿಸಿದೆವು. ಕೆರೆಯ ಅಂಗಳದಲ್ಲಿ ಬಿಟ್ಟಿದ್ದ ಬಿರಿಗಳ ನಡುವಲ್ಲಿ ಗೋಚರಿಸುತ್ತಿದ್ದ ತಾವರೆ ಬೀಜಗಳನ್ನು ಮೂವರೂ ಜೇಬಿಗಿಳಿಕೊಂಡು ಮತ್ತೆ ಮಂಚಿಗೆಯತ್ತ ಬಂದೆವು. ಭದ್ರ ಸುತ್ತಲೂ ಸಿಕ್ಕಿದ ಪುರಲೆಗಳನ್ನು ಒಂದೆಡೆ ಗುಪ್ಪೆ ಹಾಕಿ ಬೆಂಕಿ ಹಚ್ಚಿ ತಾವರೆ ಬೀಜಗಳನ್ನು ಆ ಬೆಂಕಿಗೆ ಹಾಕಿ ಸುಟ್ಟ. ಸುಟ್ಟ ನಂತರ ತಾವರೆ ಬೀಜಗಳ ದಪ್ಪ ಸಿಪ್ಪೆಯನ್ನು ಒಡೆದು ಅದರೊಳಗಿನ ತಿರುಳನ್ನು ತಿನ್ನಲು ಕೊಟ್ಟ. ಆ ತಿರುಳು ತುಂಬ ಕಮ್ಮಗಿತ್ತು. ಇವತ್ತೂ ಕೂಡಾ ಎಲ್ಲಿಯೇ ತಾವರೆ ಹೂಗಳನ್ನು ಕಂಡರೂ ಅದರ ಬುಡದಲ್ಲಿ ಇರಬಹುದಾದ ಬೀಜಗಳು ಹಾಗೂ ಅವತ್ತು ಭದ್ರಕಾಳ ಸುಟ್ಟುಕೊಟ್ಟಿದ್ದ ಅವುಗಳ ಕಮ್ಮನೆಯ ರುಚಿ ನಾಲಿಗೆಯ ಮೇಲಾಡುತ್ತದೆ. ಅದಾದ ಮೇಲೆ ಸುಮಾರು ಸಾರ್ತಿ ಅವನ ಜೊತೆ ತಾವರೆ ಬೀಜಗಳನ್ನು ಅರಸಿಕೊಂಡು ಆ ಕೆರೆಯಲ್ಲಿ ಅಡ್ಡಾಡಿದ್ದೆವು. ಅಂಥ ಹೊತ್ತಲ್ಲಿ ಆ ಕೆರೆಯ ಒಂದು ಭಾಗದಲ್ಲಿ ದುಂಡಗೆ ಕೂರಿಸಿದ್ದ ನೂರಾ ಒಂದು ಲಿಂಗಗಳನ್ನು ಅವನು ತೋರಿಸಿದ್ದ.
ಈ ಭದ್ರನಿಗೆ ಒಂಚೂರು ಓದುವ ಆಸೆ ಇದ್ದಂತೆ ಕಾಣುತ್ತಿತ್ತು. ನಾನು ನನ್ನ ವಾರಿಗೆಯವರು ಸ್ಕೂಲಿನ ಬ್ಯಾಗುಗಳನ್ನು ನೇತಾಕಿಕೊಂಡು ಹೋಗುತ್ತಿರುವುದನ್ನು ಕಂಡರೆ ತುಂಬಾ ಹೊತ್ತು ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದ. ಅದೊಂದು ದಿನ. ನಾನು ಓದುತ್ತಿದ್ದ ಮಿಡ್ಲ್ ಸ್ಕೂಲಿಗೇ ಬಂದುಬಿಟ್ಟಿದ್ದ. ಬಂದವನೇ ಸೀದಾ ನಾನು ಕೂತಿದ್ದ ರೂಮಿನ ಕಿಟಕಿಯಲ್ಲಿ ಕೈಯ್ಯಲ್ಲಿದ್ದ ಮುಂಗುಸಿಯೊಂದಿಗೆ ಇಣುಕಾಕುತ್ತಾ ನಿಂತುಬಿಟ್ಟಿದ್ದ. ಅದು ಇನ್ನೇನು ಸ್ಕೂಲನ್ನು ಬಿಡುವ ಹೊತ್ತು. ಹಿಂಗೆ ಕಿಟಕಿಯಿಂದ ಇಣುಕಾಕುತ್ತಾ ನಿಂತಿದ್ದ ಭದ್ರನನ್ನು ನೋಡುತ್ತಲೇ ಮೇಷ್ಟ್ರು` ಲೇ ಯಾರ ಅವ್ನು?’ ಅಂತ ಗದರಿಸಿದರು. ಆಗಲೂ ಅವನು ಹಂಗೇ ನಿಂತು ಇಡೀ ರೂಮನ್ನು ಕಣ್ತುಂಬಿಕೊಳ್ಳುತ್ತಿದ್ದ. ಯಾವಾಗ ತಾನು ಕೂಗಿದರೂ ಕ್ಯಾರೆ ಅನ್ನಲಿಲ್ಲವೋ ಮೇಷ್ಟ್ರಿಗೆ ಸಿಟ್ಟು ಬಂದು ಅವನು ನಿಂತಿದ್ದ ಕಿಟಕಿಯತ್ತ ಹೋದರು. ಆಗವನು ಕಿಟಕಿಯ ಕಂಬಿಗಳನ್ನು ಕೈ ಬಿಟ್ಟು, ಕಿಟಕಿಯ ಕಟ್ಟೆಯಿಂದ ಕೆಳ ನೆಗೆದುಬಿಟ್ಟ. ಆದರೆ ಅವನ ಕೈಯ್ಯಲ್ಲಿದ್ದ ಮುಂಗುಸಿ ಆಯ ತಪ್ಪಿ ಸೀದಾ ರೂಮೊಳಕ್ಕೆ ಬಿದ್ದುಬಿಟ್ಟಿತ್ತು. ಕ್ಲಾಸಂಥ ಕ್ಲಾಸಿನ ಹುಡುಗರೆಲ್ಲಾ ಕೂಗುತ್ತಾ ದಿಕ್ಕಾಪಾಲಾಗಿ ರೂಮಿನಗಲಕೂ ಓಡಾಡತೊಡಗಿದರು. ಅದು ಭದ್ರನ ಮುಂಗುಸಿ ಅಂತ ತಿಳಿಯುತ್ತಲೇ ಮತ್ತು ಮುಂಗುಸಿ ಮಾಡುತ್ತಿದ್ದ ಅವಾಂತರದಿಂದ ಜೀವ ಬಾಯಿಗೆ ಬಂದಿತ್ತು. ಯವಾಗ ತನ್ನ ಜೀವದ ಮುಂಗುಸಿ ರೂಮೊಳಕ್ಕೆ ಬಿದ್ದುಬಿಟ್ಟಿತೋ ಭದ್ರ ಕಣ್ಣುಮುಚ್ಚಿ ಬಿಡುವುದರಲ್ಲಿ ಸ್ಕೂಲಿನ ಬೇಲಿಯನ್ನು ನೆಗೆದು ರೂಮಿನೊಳಕ್ಕೆ ಬಂದುಬಿಟ್ಟಿದ್ದ. ಅವನನ್ನು ಕಾಣುತ್ತಲೇ ಮುಂಗುಸಿ ಅವನತ್ತ ಓಡಿತು. ಭಯದಿಂದಲೇ ಭದ್ರ ಮುಂಗುಸಿಯನ್ನು ಅವುಚಕೊಂಡು ಬೆಪ್ಪಾಗಿ ನೀಂತುಬಿಟ್ಟಿದ್ದ. ` ಹೇಯ್ ಯಾವೂರೋ ನಿಂದು? ಯಾಕೆ ಬಂದಿದ್ದೆ ಇಲ್ಲಿಗೆ ಅದೂ ಮುಂಗ್ಸಿ ಹಿಡ್ಕಂಡು?’ ಅಂತ ಮೇಷ್ಟ್ರು ರೇಗಿದರು. `ನಂದು ಎರೆನೆತ್ತಿ’ ಅಂದಿದ್ದ ತಡವರಿಸಿಕೊಂಡು.
ಎರೆನೆತ್ತಿ ಅಂಬೋದು ಒಂದು ಕಡಿದಾದ ಇಳುಕಲಿನ ಒಂದು ದಿಬ್ಬ. ನಮ್ಮೂರಿನಿಂದ ಪಡುವಣ ದಿಕ್ಕಿಗೆ ಒಂದು ಮೈಲಿಯಷ್ಟು ದೂರದಲ್ಲಿದೆ. ಇದರ ನೆತ್ತಿ ಪೂರಾ ಫಲವತ್ತಾದ ಎರೆಮಣ್ಣಿನಿಂದ ಕೂಡಿರುವ ಕಾರಣಕ್ಕೋ ಇಲ್ಲಾ ದೂರದಿಂದ ನೋಡಿದರೆ ಹುಲ್ಲೆಯ ಮಂಡುಬಿದ್ದ ಕೊಂಬೊಂದರಂತೆ ಕಾಣುವ ಕಾರಣಕ್ಕೋ ಏನೋ ಇದನ್ನು ಎರೆನೆತ್ತಿ ಅಂತ ಕರೆದಿರಬಹುದು. ಇದರ ಮೂಡಣ ದಿಕ್ಕಿನಲ್ಲಿ ಚಿಕ್ಕೆರೆ ಅಂತ ಕರೆಯುತ್ತಿದ್ದ ಕೆರೆಯೊಂದಿತ್ತು. ಈಗದು ಇಲ್ಲ. ಅದರ ಅಂಗಳವೀಗ ಗದ್ದೆ ಬಯಲಾಗಿದೆ. ಪಡುವಣದಲ್ಲಿ ಒಂದು ಕಾಲದಲ್ಲಿ ಸುವರ್ಣಮುಖಿ ಅನ್ನುವ ನದಿಯೊಂದು ಹುಟ್ಟಿ ಹರಿಯುತ್ತಿದ್ದ ಬಯಲು. ಅಲ್ಲಿ ಹೇರಳವಾಗಿ ಅಪರೂಪದ ಕಮರದ ಮರಗಳು ಬೆಳೆಯುತ್ತಿದ್ದವಂತೆ. ಆ ಬಯಲಿನಾಚೆಗೆ ಸಿದ್ದಪ್ಪನ ಕೆರೆ. ಅದರ ತಡಿಯಲ್ಲಿ ಕೆರೆಯ ಸಿದ್ದಪ್ಪನ ಗುಡಿ. ಅಲ್ಲಿ ವಚನಕಾರ ಸಿದ್ದರಾಮ ಸಂಗಡಿಗರೊಂದಿಗೆ ಒಂದಷ್ಟು ಕಾಲ ತಂಗಿದ್ದ ಅನ್ನುವ ಪ್ರತೀತಿ ಇದೆ. ಆ ಕಾರಣಕ್ಕೇ ಆ ಗುಡಿ ಮತ್ತು ಕೆರೆಗೆ ಆ ಹೆಸರು ಬಂದಿರಬಹುದು ಅನ್ನುವ ನಂಬಿಕೆ.
ನನ್ನ ಅಜ್ಜ ಹೇಳುತ್ತಿತ್ತು- ಈ ಎರೆನೆತ್ತಿಯವರೆಗೆ ಹೋಗಲು ಹೆದರುತ್ತಿದ್ದ ಕಾಲವೊಂದಿತ್ತು. ಅಲ್ಲಿ ಕಾಡಿತ್ತಂತೆ. ಅಲ್ಲಿ ಕಮರದ ಜತೆಗೆ ಶ್ರೀಗಂಧದ ಮರಗಳು ಬೆಳೆಯುತ್ತಿದ್ದವಂತೆ. ಹಗಲಿನಲ್ಲೇ ರಾಜಾರಸ್ಟಾಗಿ ಚಿರತೆಗಳು ಅಡಾಡುತ್ತಿದ್ದವಂತೆ. ಆಗಾಗ ಕುರಿ ಗೂಡುಗಳ ಹತ್ತಿರ ಕೂಡಾ ಠಳಾಯಿಸುತ್ತಿದ್ದವಂತೆ. ಏನೂ ಸಿಗದಿದ್ದಾಗ ಊರೊಳಕ್ಕೂ ನುಗ್ಗಿ ಸಿಕ್ಕ ನಾಯಿಗಳನ್ನು ಎತ್ತಾಕಿಕೊಂಡು ಹೋಗುತ್ತಿದ್ದವಂತೆ. ಹಬ್ಬ ಹರಿದಿನಗಳಲ್ಲಿ ಕೆರೆಯ ಸಿದ್ದಪ್ಪನಿಗೆ ಎಡೆ ಕೊಡಲು ಒಬ್ಬೊಬ್ಬರೇ ಹೋಗಲಾಗದೆ ಗುಂಪು ಗುಂಪಾಗಿ ಹೋಗುತ್ತಿದ್ದರಂತೆ. ಈ ಕಾರಣಕ್ಕೆ ಚಿಕ್ಕಂದಿನಲ್ಲಿ ನನ್ನೊಳಗೆ ಈ ಎರೆನೆತ್ತಿ ಒಂದು ನಿಗೂಢ ಲೋಕವಾಗಿ ನೆಲೆಸಿತ್ತು. ನಾನು ಬೆಳೆದು ದೊಡ್ಡವನಾಗುವ ಹೊತ್ತಿಗೆ ಎರೆನೆತ್ತಿಯ ಈ ನಿಗೂಢ ಲೋಕ ಮಾಯವಾಗಿತ್ತು. ಕಮರದ ಮರಗಳು ಕಮರಿ ಹೋಗಿದ್ದವು. ಶ್ರೀಗಂಧದ ಮರಗಳು ಮೋಟುಗಳಾಗಿ ಎರೆನೆತ್ತಿಯಲ್ಲಿ ಮಣ್ಣಿನಲ್ಲಿ ಹೂತುಹೋಗಿದ್ದವು.
ಆ ವರ್ಷ ಭದ್ರ ಮತ್ತು ಮುನಿವೆಂಕಟ ನಮ್ಮ ಜೊತೆ ಜೋಳ ಕಾಯಲು ಬಂದಿದ್ದ ವರ್ಷ. ಅದೇ ಅವರಿಗೆ ಅಲ್ಲಿ ಕಟ್ಟ ಕಡೆಯ ವರ್ಷವಾಗಿತ್ತು. ಅವರ ಪಾಡಿಗವರು ಯಾರೊಬ್ಬರಿಗೂ ಕೇಡು ಬಯಸದೇ ತಂತಮ್ಮ ಕಾಯಕ ಮಾಡಿಕೊಂಡು ಆಟೋಇಟೋ ದುಡುಕೊಂಡು ಹೊಟ್ಟೆ ಹೊರೆಯುತ್ತಿದ್ದ ಅಲೆಮಾರಿಗಳ ಮೇಲೆ ದಿನ ಕಳೆದಂತೆ ಸುತ್ತಲ ಹಳ್ಳಿಗರ ಅನುಮಾನದ ಕಣ್ಣುಗಳು ಬೀಳತೊಡಗಿದವು. ಸುತ್ತೇಳು ಹಳ್ಳಿಗಳಲ್ಲಿ ಎಲ್ಲೇ ಕಳ್ಳತನಗಳಾದರೂ ಅದು ಇವರುಗಳ ಮೇಲೇ ಬರುತ್ತಿತ್ತು. ಮೇಯಲು ಹೋದ ದನ, ಕುರಿ ಅಥವಾ ಮೇಕೆ ಯಾವುದೇ ಕಾಣದಾದರೂ ಈ ಕೆಲಸ ಕುರ್ತೇಟು ಅಲೆಮಾರಿಗಳದ್ದೇ ಅಂತ ಅನುಮಾನಿಸಿದರು. ಸಾಲದ್ದಕ್ಕೆ ಅಲೆಮಾರಿಗಳು ದಿನವೂ ಮಾಂಸ ಮಡ್ಡಿ ಮಾಡುತ್ತಾ ಸಿದ್ದಪ್ಪ ದೇವರಿಗೆ ಮೈಲಿಗೆ ಮಾಡುತ್ತಾರೆ ಅನ್ನುವ ಪುಕಾರು ಹಬ್ಬಿಸಿದರು. ಇವರನ್ನು ಹಿಂಗೇ ಬಿಟ್ಟರೆ ತಮ್ಮ ಮನೆಗಳ ಹೆಂಗಸರು ಮಕ್ಕಳಿಗೆಲ್ಲಾ ಮಂಕುಬೂದಿ ಎರಚಿ ವಶೀಕರಣ ಮಾಡಿಕೊಂಡು ಅವರುಗಳ ಹಿಂದೆ ಹೋಗುವಂತೆ ಮಾಡಿಕೊಂಡುಬಿಡುತ್ತಾರೆ ಅಂತ ಯಾವನೋ ಅಡ್ನಾಡಿ ಶಾಸ್ತ್ರಿ ಮಾತುಗಳು ಕೆಲ ಹಳ್ಳಿಗರ ಎದೆಗಳಲ್ಲಿ ರ‍್ವಾತೆ ತೆಗೆದಿದ್ದವು. ಪರಿಣಾಮ- ಅದೊಂದು ದಿನ. ಸೂರ್ಯ ಇನ್ನೂ ಹುಟ್ಟಿ ಅಗಷ್ಟೇ ಮೈಮುರಿಯುತ್ತಿದ್ದ. ಎರೆನೆತ್ತಿಯ ಕಡೆಯಿಂದ ಜೋರಾದ ಬೊಬ್ಬೆ, ಆರ್ತನಾದಗಳನ್ನು ಅತ್ತಲಿಂದ ಬೀಸುತ್ತಿದ್ದ ಗಾಳಿ ಹೊತ್ತು ತಂದು ನನ್ನೂರ ಮೇಲೆ ಕುಕ್ಕಿತ್ತು.

ಅದಾದ ಕೊಂಚ ಹೊತ್ತಿಗೆ ತಿಳಿಯಿತು-ಎರೆನೆತ್ತಿಯಲ್ಲಿದ್ದ ಅಲೆಮಾರಿಗಳನ್ನು ಮನಬಂದಂತೆ ಹೊಡೆದು ಅವರ ಗುಡಾರಗಳಿಗೆ ಬೆಂಕಿ ಹಚ್ಚಿದ್ದಾರೆ. ಅವರ ಬಟ್ಟೆ ಬರೆ, ಧವಸ ಧಾನ್ಯ ಎಲ್ಲಾ ಸುಟ್ಟು ಕರುಕಲಾಗಿ ಹೋಗಿವೆ ಅಂತ. ನಾನು ಸೀದಾ ಶಂಕರನ ಮನೆಯತ್ತ ಓಡಿದ್ದೆ. ನಾವಿಬ್ಬರೂ ಅಲ್ಲಿಗೆ ಹೋಗುವ ಹೊತ್ತಿಗೆ ಸುಟ್ಟು ಹೋಗಿದ್ದ ಗುಡಾರಗಳ ಕಡೆಯಿಂದ ಬೂದಿ ಏಳುತ್ತಿತ್ತು. ಅಲೆಮಾರಿಗಳೆಲ್ಲಾ ಎಲ್ಲಿಗೋ ಹೊರಟು ಹೋಗಿದ್ದರು. ಸುತ್ತಲ ಹಳ್ಳಿಯ ಸುಮಾರು ಜನ ಅಲ್ಲಿ ಜಮಾಯಿಸಿದ್ದರು. ಅವರೆಲ್ಲರ ಮಾತು ಒಂದೇ ಆಗಿತ್ತು. ಅದು `ಕಳ್ಳ ಬಡ್ಡೀಮಕ್ಳು! ಅವ್ರು ಇನ್ಮೇಕೆ ಸತ್ರೂ ಇತ್ಲಾಗೆ ಮಕಾ ಹಾಕಿ ಮಲಗಲ್ಲ.’ ಅದು ನಿಜ ಕೂಡಾ ಆಯ್ತು. ಅವತ್ತು ಕಣ್ಮರೆಯಾದ ನನ್ನ ಇಬ್ಬರು ಗೆಳೆಯರು ಮತ್ತೆ ಇವತ್ತಿಗೂ ನನಗೆ ಸಿಕ್ಕಿಲ್ಲ. ನಾನು, ಶಂಕರ ಮತ್ತಿತರ ಹುಡುಗರು ಹತ್ತಿರಕ್ಕೆ ಹೋದೆವು. ವಿಚಿತ್ರ ಸಂಕಟವೊಂದು ನಮ್ಮೊಳಗಾಡುತ್ತಿತ್ತು. ಭದ್ರ ಮತ್ತು ಮುನಿವೆಂಕಟ ನಮಗೆ ಸಿಗುತ್ತಿದ್ದ ಆ ಗುಡಾರಗಳ ಎದೂರಿಗಿದ್ದ ಬ್ಯಾಟೆ ಗಿಡದ ಹತ್ತಿರ ಹೋದೆವು. ಮುನಿ ವೆಂಕಟ ಜೋಳ ಕಾಯುವಾಗ ಹಕ್ಕಿಗಳಿಗೆ ಕಲ್ಲು ಬೀಸಲು ನನಗೆ ಮಾಡಿಕೊಡುತ್ತೇನೆಂದು ಹೇಳಿದ್ದ ಕವಣೆ ಬ್ಯಾಟೆ ಗಿಡದ ಗೆಣ್ಣೊಂದರಲ್ಲಿ ನೇತಾಡುತ್ತಿತ್ತು. ಆ ಕವಣೆಯನ್ನು ತೆಗೆದುಕೊಂಡು ಮುಂದೆ ನೋಡಿದರೆ ತುಂಬಿ ಬರುತ್ತಿದ್ದ ಕಣ್ಣುಗಳಿಗೆ ತರಾದ ಮುಳ್ಳಿನ ಗಿಡದ ಬುಡದಲ್ಲಿ ಇಣುಕಾಕುತ್ತಿದ್ದ ಭದ್ರನ ಮುಂಗುಸಿ ಅಸ್ಪಷ್ಟವಾಗಿ ಕಾಣುತ್ತಿತ್ತು.
*****
ಕೆಲವು ಅರ್ಥಗಳು:
ಒಂದೇಟಿಗೇ: ಒಂದೇ ಸಲಕ್ಕೆ.
ಅಚ್ಚೇರು: ಅರ್ಧ ಸೇರು.
ಆಟೋ ಈಟೋ: ಅಲ್ಪಸ್ವಲ್ಪ.
ಕುಲ್ಟಪಲ್ಟ: ಚೆನ್ನಾಗಿಲ್ಲದೇ ಇರುವಂಥದ್ದು.
ದುಂಡಾಡುವುದು: ತೆನೆಯೊಡೆಯುವುದು.
(ಹಿಂದಿನ ಕಂತು: ರಾತ್ರಿ ಸ್ಕೂಲು, ಶನಿ ಮಹಾತ್ಮೆ ಮತ್ತು ಚಳ್ಳೆ ಹಣ್ಣಿನ ಮೇಷ್ಟ್ರು)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

